ನನ್ನಣ್ಣನ ಉದ್ದೇಶ ಅರ್ಥವಾಗಲಿಲ್ಲ. ಇಷ್ಟು ಭಯಂಕರವಾಗಿರುವುದನ್ನು ನೋಡಲು ಬಲವಂತ ಮಾಡುತ್ತಿದ್ದಾನಲ್ಲ ಅಂತ ಅವನ ಮೇಲೆ ಕೋಪ ಬಂತು. ಕೆಂಪಾಗಿದ್ದ ಸುಮಿಡಗಾವ ನದಿ ದಂಡೆಯ ಮೇಲೆ ನಿಂತಾಗ ಕಂಡ ದೃಶ್ಯ ಅತ್ಯಂತ ಭೀಕರವಾಗಿತ್ತು. ಹೆಣಗಳ ರಾಶಿ ದಂಡೆಯನ್ನೆಲ್ಲ ತುಂಬಿತ್ತು. ಅದನ್ನು ನೋಡುತ್ತಿದ್ದಂತೆ ಕಾಲುಗಳು ಸೋತಂತಾಗಿ ಕುಸಿದು ಬೀಳುವಂತಾಯಿತು. ನನ್ನಣ್ಣ ನನ್ನ ಕೊರಳ ಪಟ್ಟಿ ಹಿಡಿದು ಮತ್ತೆ ನಿಲ್ಲಿಸಿ “ಅಕಿರ ಗಮನವಿಟ್ಟು ನೋಡು” ಎಂದು ಹೇಳಿದ. ಭಯದಿಂದ ನಡುಗುತ್ತಲೇ ಅತ್ತ ನೋಡಿದೆ. ಕಣ್ಣೊಳಗೆ ಆ ದೃಶ್ಯಗಳು ಅಚ್ಚೊತ್ತಿಬಿಟ್ಟವು. ಕಣ್ಣು ಮುಚ್ಚಿದರೂ ಅವೇ ಕಾಣುತ್ತಿದ್ದವು. ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಸಮಾಧಾನ ಮಾಡಿಕೊಂಡೆ.
ಹೇಮಾ ಎಸ್. ಅನುವಾದಿಸಿದ ಅಕಿರ ಕುರೊಸಾವ ಆತ್ಮಕಥೆಯ ಮತ್ತೊಂದು ಪುಟ
ಆ ಭಯಾನಕ ಭೂಕಂಪದ ದುರಂತವು ತಣ್ಣಗಾಗುತ್ತಿದ್ದಂತೆ ನನ್ನಣ್ಣ ಅಸಹನೆಯಿಂದ “ಅಕಿರ ನಡಿ, ಏನೇನು ಹಾಳಾಗಿದೆ ನೋಡಿಬರೋಣ” ಅಂದ. ಶಾಲೆಯಿಂದ ಪ್ರವಾಸ ಕರೆದುಕೊಂಡು ಹೋಗುವಾಗ ಖುಷಿಯಾಗಿ ಹೊರಡುತ್ತೇವಲ್ಲ ಅದೇ ತರಹ ಅಣ್ಣನೊಟ್ಟಿಗೆ ಖುಷಿಯಾಗಿ ಹೋದೆ. ಈ ಸುತ್ತಾಟ ಎಷ್ಟು ಭಯಾನಕವಾದದ್ದು ಅಂತ ಅರಿವಾಗಿ ಹಿಂದಕ್ಕೆ ಹೊರಟುಹೋಗೋಣ ಅಂದುಕೊಳ್ಳುವಷ್ಟರಲ್ಲಿ ತಡವಾಗಿತ್ತು. ಹಿಂಜರಿಕೆಯಿಂದ ಹಿಂದೆ ಸರಿಯುತ್ತಿದ್ದವನನ್ನು ನನ್ನಣ್ಣ ಜೊತೆಯಲ್ಲೇ ಎಳೆದುಕೊಂಡು ಹೊರಟ. ಇಡೀ ದಿನ ಬೆಂಕಿಗೆ ಆಹುತಿಯಾಗಿದ್ದ ಪ್ರದೇಶಗಳನ್ನೆಲ್ಲ ಸುತ್ತಿಸಿದ. ರಾಶಿ ರಾಶಿ ಹೆಣಗಳನ್ನು ತೋರಿಸಿದಾಗ ಭಯದಿಂದ ತತ್ತರಿಸಿ ಹೋದೆ.
ಮೊದಮೊದಲು ಎಲ್ಲೋ ಒಂದು ಸುಟ್ಟುಹೋದ ಹೆಣ ಕಾಣುತ್ತಿತ್ತು. ಆ ಕೆಳಗಿನ ಪ್ರದೇಶದ ಹತ್ತಿರ ಹೋಗುತ್ತಿದ್ದಂತೆ ಹೆಚ್ಚೆಚ್ಚು ಹೆಣಗಳು ಕಾಣಿಸಿದವು. ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದ ಅಣ್ಣ ಧೃಡವಾಗಿ ನಡೆಯುತ್ತಲೇ ಇದ್ದ. ಕಣ್ಣಿಗೆ ಕಾಣಿಸುವಷ್ಟು ದೂರದವರೆಗೂ ಸುಟ್ಟುಕರಕಲಾಗಿದ್ದ ಭೂಮಿಯ ಕಂದುಕೆಂಪುಮಿಶ್ರಿತ ಬಣ್ಣ ಕಣ್ಣಿಗೆ ರಾಚುತ್ತಿತ್ತು. ಮರದಲ್ಲಿ ಮಾಡಿದ್ದೆಲ್ಲವೂ ಸುಟ್ಟು ಬೂದಿಯಾಗಿತ್ತು. ಗಾಳಿಗೆ ಆ ಬೂದಿ ಆಗೀಗ ತೇಲುತ್ತಿತ್ತು. ಕೆಂಪು ಮರಭೂಮಿಯಂತೆ ಕಾಣುತ್ತಿತ್ತು.
ಈ ಕೆಂಪು ಭೂಮಿಯಲ್ಲಿ ಊಹಿಸಲಸಾಧ್ಯವಾದ ರೀತಿಯ ಹೆಣಗಳು ಬಿದ್ದಿದ್ದವು. ಪೂರ ಸುಟ್ಟು ಕರಕಲಾಗಿದ್ದ ಹೆಣಗಳು, ಅರ್ಧ ಸುಟ್ಟ ಹೆಣಗಳು, ಗಟಾರಗಳಲ್ಲಿ ಬಿದ್ದಿದ್ದ ಹೆಣಗಳು, ನದಿಯಲ್ಲಿ ತೇಲುತ್ತಿದ್ದ ಹೆಣಗಳು, ಸೇತುವೆಗಳ ಮೇಲೆ ಬಿದ್ದಿದ್ದ ಹೆಣದ ರಾಶಿ, ಕವಲುದಾರಿಯಲ್ಲಿ ರಸ್ತೆಗೆ ಅಡ್ಡಲಾಗಿ ಹೆಣಗಳು ಬಿದ್ದಿದ್ದವು. ಮನುಷ್ಯನಿಗೆ ಎಷ್ಟು ರೀತಿಯಲ್ಲಿ ಸಾವು ಬರಬಹುದೋ ಅಷ್ಟು ಬಗೆಗಳನ್ನು ಆ ಹೆಣಗಳಲ್ಲಿ ಕಾಣಬಹುದಿತ್ತು. ಅವುಗಳನ್ನು ನೋಡಲಾಗದೆ ಬೇರೆಡೆಗೆ ದೃಷ್ಟಿ ಹೊರಳಿಸಿದೆ. “ಅಕಿರ ಇಲ್ಲಿ ನೋಡು” ಎಂದು ಅಣ್ಣ ಗದರಿದ.
ನನ್ನಣ್ಣನ ಉದ್ದೇಶ ಅರ್ಥವಾಗಲಿಲ್ಲ. ಇಷ್ಟು ಭಯಂಕರವಾಗಿರುವುದನ್ನು ನೋಡಲು ಬಲವಂತ ಮಾಡುತ್ತಿದ್ದಾನಲ್ಲ ಅಂತ ಅವನ ಮೇಲೆ ಕೋಪ ಬಂತು. ಕೆಂಪಾಗಿದ್ದ ಸುಮಿಡಗಾವ ನದಿ ದಂಡೆಯ ಮೇಲೆ ನಿಂತಾಗ ಕಂಡ ದೃಶ್ಯ ಅತ್ಯಂತ ಭೀಕರವಾಗಿತ್ತು. ಹೆಣಗಳ ರಾಶಿ ದಂಡೆಯನ್ನೆಲ್ಲ ತುಂಬಿತ್ತು. ಅದನ್ನು ನೋಡುತ್ತಿದ್ದಂತೆ ಕಾಲುಗಳು ಸೋತಂತಾಗಿ ಕುಸಿದು ಬೀಳುವಂತಾಯಿತು. ನನ್ನಣ್ಣ ನನ್ನ ಕೊರಳ ಪಟ್ಟಿ ಹಿಡಿದು ಮತ್ತೆ ನಿಲ್ಲಿಸಿ “ಅಕಿರ ಗಮನವಿಟ್ಟು ನೋಡು” ಎಂದು ಹೇಳಿದ. ಭಯದಿಂದ ನಡುಗುತ್ತಲೇ ಅತ್ತ ನೋಡಿದೆ. ಕಣ್ಣೊಳಗೆ ಆ ದೃಶ್ಯಗಳು ಅಚ್ಚೊತ್ತಿಬಿಟ್ಟವು. ಕಣ್ಣು ಮುಚ್ಚಿದರೂ ಅವೇ ಕಾಣುತ್ತಿದ್ದವು. ಇದರಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲ ಎಂದು ಸಮಾಧಾನ ಮಾಡಿಕೊಂಡೆ.
ಮೊದಮೊದಲು ಎಲ್ಲೋ ಒಂದು ಸುಟ್ಟುಹೋದ ಹೆಣ ಕಾಣುತ್ತಿತ್ತು. ಆ ಕೆಳಗಿನ ಪ್ರದೇಶದ ಹತ್ತಿರ ಹೋಗುತ್ತಿದ್ದಂತೆ ಹೆಚ್ಚೆಚ್ಚು ಹೆಣಗಳು ಕಾಣಿಸಿದವು. ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದ ಅಣ್ಣ ಧೃಡವಾಗಿ ನಡೆಯುತ್ತಲೇ ಇದ್ದ. ಕಣ್ಣಿಗೆ ಕಾಣಿಸುವಷ್ಟು ದೂರದವರೆಗೂ ಸುಟ್ಟುಕರಕಲಾಗಿದ್ದ ಭೂಮಿಯ ಕಂದುಕೆಂಪುಮಿಶ್ರಿತ ಬಣ್ಣ ಕಣ್ಣಿಗೆ ರಾಚುತ್ತಿತ್ತು.
ಅಲ್ಲಿ ಕಂಡ ಘೋರ ದೃಶ್ಯಗಳನ್ನು ವರ್ಣಿಸಲು ನನ್ನಿಂದಾಗುತ್ತಿಲ್ಲ. ಬೌದ್ಧರ ನಂಬಿಕೆಯಂತೆ ನರಕದಲ್ಲಿ ರಕ್ತದ ಸರೋವರ ಇರುತ್ತದೆಯಂತೆ. ಆ ಸರೋವರ ಕೂಡ ಇಷ್ಟು ಭಯಂಕರವಾಗಿರಲಿಕ್ಕಿಲ್ಲ ಎನ್ನುವ ಆಲೋಚನೆ ಸುಳಿಯಿತು. ಸುಮಿಡಗಾವ ನದಿ ಕೆಂಪಾಗಿತ್ತು ಎಂದೆ. ಅದು ರಕ್ತಗೆಂಪಲ್ಲ ಸುತ್ತಲ ಭೂಮಿಯಂತೆ ಅದು ಕೂಡ ಕಂದುಮಿಶ್ರಿತ ಕೆಂಪು ಬಣ್ಣದಲ್ಲಿತ್ತು. ಕೊಳೆತ ಮೀನಿನ ಕಣ್ಣಿನ ಬಣ್ಣದಂತಿತ್ತು. ನದಿಯಲ್ಲಿ ತೇಲುತ್ತಿದ್ದ ಹೆಣಗಳು ಊದಿಕೊಂಡು ಈಗಲೂ ಆಗಲೋ ಒಡೆದು ಹೋಗುವಂತಿತ್ತು. ದೊಡ್ಡ ಮೀನಿನ ತೆರೆದ ಬಾಯಂತೆ ಅವುಗಳ ಗುದದ್ವಾರಗಳು ತೆರೆದುಕೊಂಡಿತ್ತು. ಬೆನ್ನಿಗೆ ಕಟ್ಟಿಕೊಂಡ ಮಗುವಿನ ಸಮೇತ ತಾಯಂದಿರ ಹೆಣಗಳು ತೇಲುತ್ತಿದ್ದವು. ನದಿಯ ಅಲೆಗಳು ಈ ಹೆಣಗಳು ಮೆದುವಾಗಿ ದಡದತ್ತ ತಳ್ಳುತ್ತಿದ್ದವು.
ಕಣ್ಣು ಹಾಯಿಸಿದಷ್ಟು ದೂರಕ್ಕೂ ಒಂದೇ ಒಂದು ಜೀವಂತ ನರಪಿಳ್ಳೆ ಇರಲಿಲ್ಲ. ಆ ಪ್ರದೇಶದಲ್ಲಿ ಜೀವಂತವಾಗಿ ಇದ್ದವರು ನಾನು ಮತ್ತು ನನ್ನಣ್ಣ ಮಾತ್ರ. ಈ ವಿಸ್ತಾರ ಪ್ರದೇಶದಲ್ಲಿ ನಾವಿಬ್ಬರೂ ಸಾಸಿವೆ ಕಾಳಿನಂತಿದ್ದೇವೆ ಅಥವ ನಾವಿಬ್ಬರೂ ಸತ್ತು ನರಕದ ಬಾಗಿಲಲ್ಲಿ ನಿಂತಿದ್ದೇವೆ ಅನ್ನಿಸಿತು.
ಆಮೇಲೆ ನನ್ನಣ್ಣ ಆ ಊರಿನ ಮಾರುಕಟ್ಟೆಯ ಮೈದಾನದತ್ತ ಕರೆದುಕೊಂಡು ಹೋದ. ಕಾಂಟೊ ಭೂಕಂಪದಲ್ಲಿ ಈ ಪ್ರದೇಶದಲ್ಲಿ ಅತಿ ಹೆಚ್ಚು ಜೀವಹಾನಿಯಾಗಿತ್ತು. ಹೆಣಗಳಿಲ್ಲದ ಒಂದೇ ಒಂದು ಪ್ರದೇಶವಿರಲಿಲ್ಲ. ಕೆಲವೆಡೆ ಹೆಣಗಳ ರಾಶಿ ಪರ್ವತದಂತೆ ಬಿದ್ದಿತ್ತು. ಅಂತಹದ್ದೊಂದು ಹೆಣಗಳ ರಾಶಿಯ ಮೇಲೆ ಕಪ್ಪಾಗಿದ್ದ ದೇಹವೊಂದು ಪದ್ಮಾಸನದಲ್ಲಿ ಕೂತಿತ್ತು. ಝೆನ್ ಧ್ಯಾನ ಪದ್ಧತಿಯ ಭಂಗಿಯದು. ಆ ಹೆಣ ಬುದ್ಧ ಪ್ರತಿಮೆಯಂತೆ ಕಾಣುತ್ತಿತ್ತು. ನನ್ನಣ್ಣ ಮತ್ತು ನಾನು ಸುಮಾರು ಹೊತ್ತು ಅದನ್ನೇ ನೋಡುತ್ತ ನಿಂತಿದ್ದೆವು. ನನ್ನಣ್ಣ ತನ್ನಷ್ಟಕ್ಕೆ ತಾನೇ ಮಾತಾಡಿಕೊಳ್ಳುವವನಂತೆ “ಅದ್ಭುತ ಅಲ್ಲವಾ?” ಎಂದ. ನನಗೂ ಹಾಗೇ ಅನ್ನಿಸಿತು.
ಅಷ್ಟು ಹೊತ್ತಿಗೆ ಸಾಕಷ್ಟು ಹೆಣಗಳನ್ನು ನೋಡಿದ್ದೆನಲ್ಲ ಹಾಗಾಗಿ ಸುಟ್ಟ ಮಾಡಿನ ಹೆಂಚುಗಳು, ಕಲ್ಲುಗಳು ಮತ್ತು ಹೆಣಗಳ ನಡುವೆ ವ್ಯತ್ಯಾಸವೇ ಕಾಣುತ್ತಿರಲಿಲ್ಲ. ಒಂದು ಬಗೆಯ ವಿಚಿತ್ರ ನಿರಾಸಕ್ತಿ ಆವರಿಸಿತ್ತು. ನನ್ನಣ್ಣ ನನ್ನತ್ತ ತಿರುಗಿ “ನಾವಿನ್ನು ಮನೆಗೆ ಹೋಗೋಣ” ಎಂದ. ಮತ್ತೆ ಸುಮಿಡಗಾವ ನದಿಯನ್ನು ದಾಟಿ ಯುನೊ ಹಿರೋಕಾಜಿ ಜಿಲ್ಲೆಯತ್ತ ಹೆಜ್ಜೆ ಹಾಕಿದೆವು. ಹಿರೋಕಾಜಿಯ ರಸ್ತೆಯಲ್ಲಿ ಹೆಜ್ಜೆ ಹಾಕುತ್ತಿದ್ದಾಗ ಅಲ್ಲೊಂದು ಸುಟ್ಟ ಅವಶೇಷಗಳ ದೊಡ್ಡ ಪ್ರದೇಶವಿತ್ತು. ಅಲ್ಲಿ ಸಾಕಷ್ಟು ಜನ ಸೇರಿದ್ದರು. ಅವರೆಲ್ಲ ಅವಶೇಷಗಳ ನಡುವೆ ಏನನ್ನೋ ಹುಡುಕುತ್ತಿದ್ದರು. “ಅಕಿರ ಇದು ಖಜಾನೆಯ ಅವಶೇಷಗಳು. ಬಂಗಾರದ ಉಂಗುರ ಸಿಕ್ಕರೆ ನೆನಪಿಗೆ ಇಟ್ಟುಕೊಳ್ಳಬಹುದು. ಹುಡುಕೋಣವೇನು?” ಎಂದು ನನ್ನಣ್ಣ ತುಂಟನಗೆ ಬೀರುತ್ತ ಕೇಳಿದ. ನಾನಾಗ ದೂರದ ಯುನೊ ಬೆಟ್ಟದ ಮೇಲಿನ ಹಸಿರನ್ನೇ ನೋಡುತ್ತಿದ್ದೆ. ಅಲ್ಲಿಂದ ಕಣ್ಣು ಕೀಳಲಾಗಲೇ ಇಲ್ಲ. “ಹಸಿರು ಮರವನ್ನು ನೋಡಿ ಎಷ್ಟು ವರ್ಷವಾಯಿತೋ?” ಎಂದನಿಸುತ್ತಿತ್ತು. ಎಷ್ಟೋ ವರ್ಷಗಳ ನಂತರ ಕಡೆಗೂ ಸ್ವಚ್ಛಂದ ಗಾಳಿ ಬೀಸುತ್ತಿರುವ ಊರಿಗೆ ಬಂದೆ ಅನ್ನಿಸಿ ಸುದೀರ್ಘವಾಗಿ ಉಸಿರೆಳೆದುಕೊಂಡೆ. ಬೆಂಕಿಯಲ್ಲಿ ಸುಟ್ಟುಕರಕಲಾಗಿದ್ದ ಪ್ರದೇಶದಲ್ಲೆಲ್ಲೂ ಹಸಿರಿನ ಕುರುಹು ಇರಲಿಲ್ಲ. ಆ ಕ್ಷಣದಲ್ಲಿ ಮೊದಲ ಬಾರಿಗೆ ಹಸಿರಿನ ಮಹತ್ವ ಅರಿವಾಯಿತು.
ಅಷ್ಟು ಭಯಾನಕ ಸುತ್ತಾಟ ಮುಗಿಸಿ ರಾತ್ರಿ ಮನೆಗೆ ಬರೋ ಹೊತ್ತಿಗೆ ಇವತ್ತು ನಿದ್ದೆ ಬರಲ್ಲ ಅಥವಾ ಬಂದರೂ ಕೆಟ್ಟ ಕನಸುಗಳು ಬಂದೇ ಬರುತ್ತವೆ ಎಂದುಕೊಂಡಿದ್ದೆ. ದಿಂಬಿನ ಮೇಲೆ ತಲೆ ಇಟ್ಟಿದ್ದಷ್ಟೇ ಗೊತ್ತು. ಇಡೀ ರಾತ್ರಿ ಕೊರಡಿನಂತೆ ಬಿದ್ದುಕೊಂಡಿದ್ದೆ. ಕೆಟ್ಟಕನಸುಗಳ ನೆನಪು ಕೂಡ ಇಲ್ಲ. ಇದು ಹೇಗೆ ಸಾಧ್ಯವಾಯಿತು ಅಂತ ಅಣ್ಣನನ್ನು ಕೇಳಿದೆ. “ಭಯ ಅಂತ ಹೇಳಿ ಹೆದರಿಕೆ ಹುಟ್ಟಿಸುತ್ತಿರುವುದನ್ನು ನೋಡದೆ ಕಣ್ಣುಮುಚ್ಚಿಕೊಂಡರೆ ನಿನ್ನ ಹೆದರಿಕೆ ಹಾಗೇ ಉಳಿಯುತ್ತದೆ. ಹೆದರಿಕೆ ಹುಟ್ಟಿಸುವುದರ ಕಣ್ಣಲ್ಲಿ ಕಣ್ಣಿಟ್ಟು ನೋಡಿದರೆ ಯಾವುದು ಹೆದರಿಕೆ ಹುಟ್ಟಿಸುವುದಿಲ್ಲ.” ಈಗ ಅದನ್ನೆಲ್ಲ ನೆನಪಿಸಿಕೊಂಡಾಗ ಅಣ್ಣನಿಗೆ ಆ ಸುತ್ತಾಟ ಹೆದರಿಕೆ ಹುಟ್ಟಿಸಿತ್ತು ಅನ್ನಿಸುತ್ತದೆ. ಅದೊಂದು ರೀತಿಯಲ್ಲಿ ನಮ್ಮ ಭಯವನ್ನು ಮೆಟ್ಟಿ ನಿಂತ ಪ್ರವಾಸದಂತಾಯಿತು.
ಕನ್ನಡ ಉಪನ್ಯಾಸಕಿ.ಇಂಗ್ಲೀಷ್ ಹಾಗೂ ಹಿಂದಿಯಿಂದ ಲೇಖನ, ಕತೆ ಹಾಗೂ ಕವನಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ. ಇವರ ಅನುವಾದಗಳು ಹಲವು ಪತ್ರಿಕೆಯಲ್ಲಿ ಪ್ರಕಟಗೊಂಡಿವೆ. ಇರಾನಿನ ಚಲನಚಿತ್ರ ನಿರ್ದೇಶಕ ಅಬ್ಬಾಸ್ ಕಿರಸ್ತೋಮಿಯ ಕಿರುಪದ್ಯಗಳ ಅನುವಾದ ‘ಹೆಸರಿಲ್ಲದ ಹೂ’ ಪ್ರಕಟಿತ ಸಂಕಲನ..