ಒಬ್ಬರನ್ನೊಬ್ಬರು ನೋಡಿ ಅರೆಗಳಿಗೆ ಹೌದೋ ಅಲ್ಲವೋ, ಮಾತಾಡಬಹುದೋ ಬೇಡವೋ, ಗುರುತಿದೆಯೋ ಇಲ್ಲವೋ ಎಂದು ಗಾಳಿಗಾಡದ ಮರದ ಹಾಗೆ ನಿಂತುಬಿಟ್ಟರು. ಅರೆಗಳಿಗೆ ಅಷ್ಟೆ. ಒಟ್ಟಿಗೇ ಇಬ್ಬರ ಮುಖದಲ್ಲೂ ನಗು ಅರಳಿತು. ಒಬ್ಬರ ಮುಖದಲ್ಲಿ ಆ ನಗು ಮೂಡದೇ ಹೋಗಿದ್ದರೆ ನಕ್ಕವರು ಮುಖ ತಗ್ಗಿಸಿಯೋ ಮುಖ ತಿರುಗಿಸಿಯೋ ಹೋಗಿ ಬಿಡುವ ಸಂಭವವಿತ್ತು. ಆದರೆ ಹಾಗಾಗಲಿಲ್ಲ. ಆ ಗಳಿಗೆಯಲ್ಲಿ ಭವಿಷ್ಯದ ಏನೇನೋ ಹತ್ತು ಹಲವಾರು ಘಟನೆಗಳ ಬೀಜವಿದ್ದುದರಿಂದಲೇ ಇರಬೇಕು. ಇಲ್ಲದಿದ್ದರೆ ಅದೊಂದು ಸಾಮಾನ್ಯ ನೋಟವಾಗಿ ಬಿಡುತ್ತಿತ್ತು. ಕಾಲದ ಅನಂತ ಪ್ರವಾಹದಲ್ಲಿ ಆ ನೋಟ ಲೀನವಾಗಿ ಬಿಡುತ್ತಿತ್ತು. ಹಾಗಾಗದೇ ಇದ್ದುದು ಏನೇನಕ್ಕೆ ಕಾರಣವಾಯಿತು ಎಂಬುದನ್ನು ಸಾವಧಾನವಾಗಿ ಹೇಳ್ತೀನಿ. ಸಮಾಧಾನದಿಂದ ಕೇಳಿ.
ಅವರಿಬ್ಬರೂ ಒಂದೇ ವಯಸ್ಸಿನವರು. ಇಬ್ಬರ ಮೀಸೆಗಳೂ ಅಲ್ಲಲ್ಲಿ ಬೆಳ್ಳಗಾಗುತ್ತಿದೆ. ಅವರಲ್ಲಿ ಒಬ್ಬ ಅದರ ಬಗ್ಗೆ ತಲೆ ಕೆಡೆಸಿಕೊಂಡಿಲ್ಲ. ಮತ್ತೊಬ್ಬ ಸದಾ ಕಪ್ಪು ಬಳಿದುಕೊಂಡೇ ಇರುವಾತ. ಹಾಗಾಗಿಯೂ ಅವನೇನೂ ವಯಸ್ಸಿನಲ್ಲಿ ಸಣ್ಣವನಂತೆ ಕಾಣುತ್ತಿರಲಿಲ್ಲ. ಹಾಗೆ ಕಾಣುವುದು ಈ ಕತೆಗೇನೂ ಮುಖ್ಯವಲ್ಲ ಬಿಡಿ. ಮೀಸೆ ಬೆಳ್ಳಗಿದ್ದರೂ ಅಷ್ಟೆ, ಕಪ್ಪಗಿದ್ದರೂ ಅಷ್ಟೆ. ಮುಂದೆ ನಡೆದ ಘಟನೆಗೆ ಸಂಬಂಧವಿಲ್ಲ. ಆದರೂ ಯಾಕೆ ಹೇಳಿದೆ ಎಂದು ದಯವಿಟ್ಟು ತಕರಾರು ಮಾಡಬೇಡಿ. ಅದೊಂದು ವಿಚಿತ್ರ ಅಂಶ ಅನಿಸಿತು ಅದಕ್ಕೆ ಹೇಳಿದೆ. ಹೋಗಲಿ, ಮೀಸೆಯ ವಿಷಯ ಬಿಡಿ. ಆಮೇಲೆ ಏನಾಯಿತು ಅಂತ ಕೇಳುವ ಕುತೂಹಲವಿದೆ ತಾನೆ? ಕೇಳಿ.
ಎಷ್ಟೋ ವರ್ಷದ ಮೇಲೆ ಒಬ್ಬರಿಗೊಬ್ಬರು ಸಿಕ್ಕರೂ ನಗುವನ್ನು ಮೀರಿ ಮುಂದೆ ಇಬ್ಬರಿಗೂ ಮಾತು ಹೊರಡಲೇ ಇಲ್ಲ. ಹೇಗೆಂದು ಮಾತಾಡಿಸಬೇಕು. ಏಕವಚನವೋ, ಬಹುವಚನವೋ? ಇಬ್ಬರೂ ನಗುತ್ತಲೇ ಒಬ್ಬರನ್ನೊಬ್ಬರು ತುಲನೆ ಮಾಡುತ್ತಿದ್ದರು. ಇಬ್ಬರ ಬಾಯಲ್ಲೂ ತಮಗೆ ಅರಿವಿಲ್ಲದಂತೇ “ಏನೋ… ಹೇಗಿದ್ದೀಯ?” ಎಂದು ಅರ್ಥ ಬರುವಂತಹ ಧ್ವನಿಯೋ, ಉದ್ಗಾರವೋ ಹೊರಟಿತು. ಸ್ಪಷ್ಟವಾದ ಮಾತುಗಳೇನೂ ಆಗಿರಲಿಲ್ಲ. ಆದರೆ ಒಬ್ಬ ಪ್ಯಾಂಟು ಸರಿ ಮಾಡಿಕೊಂಡರೆ, ಮತ್ತೊಬ್ಬ ತನ್ನ ಪ್ಯಾಂಟನ್ನು ಮೇಲೆಳೆದುಕೊಂಡ. ಒಬ್ಬ ಕಾಲರ್ ಸರಿ ಮಾಡಿಕೊಂಡರೆ, ಮತ್ತೊಬ್ಬ ತನಗೇ ಗೊತ್ತಾಗದಂತೆ ತನ್ನ ಕತ್ತಿಗೆ ಕೈ ಹಚ್ಚಿದ. ಎಷ್ಟೋ ಕ್ಷಣಗಳು ತಾವು ಮಾತು ಆಡಿಯೇ ಇರದದ್ದು ಇಬ್ಬರಿಗೂ ಗಮನಕ್ಕೆ ಬಂದಂತೆ “ಆಮೇಲೆ?” ಎಂಬಂತ ಪದಗಳನ್ನು ಹೊರಬಿದ್ದವು. ಇಬ್ಬರೂ ಉತ್ತರ ಕೊಡದೆ ಒಬ್ಬರನ್ನೊಬ್ಬರು ನೋಡುತ್ತಾ ನಗುತ್ತಾ ನಿಂತರು.
ಪಕ್ಕದ ಹೊಟೇಲಲ್ಲಿ ಬೈಟು ಕಾಫಿಗೆ ಕಾಯುತ್ತಾ ಕನ್ನಡಿಯ ಮುಂದೆ ಕೂತವರಂತೆ ಕೂತರು. ಮೀಸೆಗೆ ತಪ್ಪದೆ ಬಣ್ಣ ಹಚ್ಚಿಕೊಳ್ಳುವ ಇವನು ಅವನನ್ನು ಕುಣಿಯುವ ಕಣ್ಣುಗಳಿಂದ ನೋಡುತ್ತಿದ್ದ. ಅವನಿಗೇನೋ ದುಗುಡವಿದ್ದಂತೆ, ಆಗಾಗ ಗಡಿಯಾರ ನೋಡಿಕೊಳ್ಳುತ್ತಿದ್ದ.. ಇಷ್ಟು ವರ್ಷದ ಮೇಲೆ ಸಿಕ್ಕ ಖುಷಿಯ ಆಚೆ ಮತ್ತೇನೋ ಹುಡುಕುತ್ತಿರಬಹುದು ಎಂದು ಇವನಿಗೆ ಅನಿಸಿತು. ಸಣ್ಣ ವಯಸ್ಸಿನ ತಮ್ಮ ಹುಚ್ಚುಗಳು ಮಾತಿನಲ್ಲಿ ಬಂದು ಹೋಗುತ್ತಿದ್ದರೂ ತಾವಿಬ್ಬರೂ ದೊಡ್ಡವರಾಗಿ ಬಿಟ್ಟಿರುವುದು ಅರಿವಿಗೆ ಬಂದಂತಿತ್ತು. ಕೃತಕ ಬಣ್ಣದ ಇವನ ಮೀಸೆ ಅವನಿಗೆ ಕಂಬಳಿ ಹುಳುವಿನಂತೆ ಕಂಡಿತು. ಆ ಮೀಸೆಯಡಿ ಮಿಂಚಿ ಮಾಯವಾಗುತ್ತಿದ್ದ ನಗು ಅವನ ಸಣ್ಣ ಹುಡುಗನ ನಗುವನ್ನು ಇವನಿಗೆ ನೆನಪಿಸಿತು. ವಾಚ್ ನೋಡಿಕೊಳ್ಳುತ್ತಿದ್ದ ಅವನಿಗೆ ಏನೋ ನೆನಪಾದವನಂತೆ “ಹೊತ್ತಾಯಿತು, ಹೋಗಬೇಕು!” ಎಂದು ಧಡಕ್ಕನೆ ಎದ್ದು ನಿಂತ. ಹೊರ ಬಂದಾಗ ಇದ್ದಕ್ಕಿದ್ದ ಹಾಗೆ ಬಿಸಿಲು ಮಾಯವಾಗಿ ಮೋಡ ಮುಚ್ಚಿಕೊಂಡಿತ್ತು. ಅರೆ ಎಂಬಂತೆ ಇಬ್ಬರೂ ಮೋಡವನ್ನು ದಿಟ್ಟಿಸಿ ಸಿಗೋಣ, ಬೈ ಎಂಬಂತ ಮಾತುಗಳನ್ನು ಪರಸ್ಪರ ಎಸೆದು ಜನ ಜಂಗುಳಿಯಲ್ಲಿ ಮಾಯವಾದರು. ಇಬ್ಬರೂ ತಿರುಗಿ ನೋಡಲಿಲ್ಲ. ದೈನಂದಿಕಗಳು ಮತ್ತೆ ಅವರನ್ನು ಸೆಳೆದು ಬಿಟ್ಟಿತೋ ಎಂಬಂತಿತ್ತು.
ಇದಾಗಿ ಎಷ್ಟೋ ದಿನಗಳು ಕಳೆದಿದ್ದರೂ, ಕಪ್ಪು ಮೀಸೆಯವನಿಗೆ ಗೆಳೆಯ ಸಿಕ್ಕಿದ್ದು ಒಂದು ಬಗೆಯ ರೋಮಾಂಚನವಾಗಿತ್ತು. ಎಷ್ಟೋ ವರ್ಷಗಳ ಹಿಂದೆ ಒಟ್ಟೊಟ್ಟಿಗೇ ಓಡಾಡಿದ್ದು, ಆಟವಾಡಿದ್ದು, ಕನಸು ಹಂಚಿಕೊಂಡಿದ್ದು ಎಲ್ಲಾ ಮರುಕಳಿಸಿ ಹೇಗೇಗೋ ಆಗಿತ್ತು. ಅರೇ ಅವೆಲ್ಲಾ ಮರೆತೇ ಹೋಗಿರುವಂತಿದ್ದು ಈಗ ಹೇಗೆ ಮತ್ತೆ ನೆನಪಾಗುತ್ತಿದೆ ಎಂದು ಅಚ್ಚರಿಪಟ್ಟ. ಇಷ್ಟು ದಿನ ಅವೆಲ್ಲಾ ಮೆದುಳಿನ ಯಾವ ಪದರದಲ್ಲಿ ಅಲುಗಾಡದೆ, ಅಕ್ಕಪಕ್ಕದಲ್ಲಿ ಸುತ್ತಿಕೊಂಡಿರುವ ನರಕ್ಕೇ ಗೊತ್ತಾಗದಂತೆ ಕೂತಿದ್ದವು ಎಂದು ತನ್ನನ್ನೇ ಕೇಳಿಕೊಂಡ. ಆ ವಿಜ್ಞಾನವೆಲ್ಲಾ ಅವನ ಕೈಗೆಟುಕುವಂತಹುದಲ್ಲ. ಆದರೂ ಅಂತಹ ಯೋಚನೆಗಳಲ್ಲಿ ಖುಷಿಪಡುವಾತ. ಅವರಿಬ್ಬರನ್ನೂ ಚಿಕ್ಕ ವಯಸ್ಸಲ್ಲಿ ಹತ್ತಿರ ಸೆಳೆದದ್ದು ಮಾತ್ರ ಒಂದಿಷ್ಟು ಸಮಾನ ಕನಸು ಮತ್ತು ಸಮಾನ ಆದರ್ಶ. ಅದು ಇವನಿಗೆ ಅರಿವಿಗೆ ಬಂದಿದ್ದು ಈಗಷ್ಟೇ. ಅದರಿಂದ ಮತ್ತಷ್ಟು ಕುಣಿಯುವಂತಾಯಿತು. ದಿನದ ಕೆಲಸಗಳಲ್ಲಿ ಏನೋ ಹೊಸ ಹುರುಪು ಬಂದಂತಾಯಿತು.
ಅವನ ಅಡ್ರೆಸ್ ಆಗಲಿ, ಫೋನ್ ನಂಬರ್ ಆಗಲಿ ಏನೂ ಕೇಳಿಕೊಳ್ಳಲಿಲ್ಲವಲ್ಲ ಎಂದು ಇವನಿಗೆ ಅರಿವಿಗೆ ಬರುವಷ್ಟರಲ್ಲಿ ಎರಡು ದಿನ ಕಳೆದಿತ್ತು. ಅವನ ಭೇಟಿಯಿಂದ ಅಷ್ಟು ಮತ್ತನಾಗಿ ಹೋಗಿದ್ದ. ಹೀಗೆಲ್ಲಾ ಮತ್ತೇರಿ ತುಂಬಾ ದಿನವೇ ಕಳೆದು ಹೋಗಿದ್ದವು. ಇವನ ಜೀವನದಲ್ಲಿ ಕೆಲಸ, ಹೆಂಡತಿ, ಮಕ್ಕಳು ಎಂಬುದೆಲ್ಲಾ ಗಡಿಯಾರದ ಗಂಟೆಯಂತೆ ನಡೆದು ಹೋಗಿತ್ತು. ಅವುಗಳಲ್ಲಿ ಖುಷಿಗಳೂ ಇದ್ದವು. ಆದರೆ ಇದ್ದಕಿದ್ದಂತೆ ಒದಗಿ ಬಂದಿರುವ ಇದು ಎಂತಹಾ ಮತ್ತು! ಹುಡುಗುತನದಲ್ಲಿ ಹೀಗೆ ಮತ್ತೇರುತ್ತಿತ್ತು ಎಂಬುದೇ ಮರೆತುಹೋಗಿತ್ತು. ಅವೆಲ್ಲಾ ನೆನಪಿಸುವಂತ ಮತ್ತು ಈಗ ಪುನಃ ಆವರಿಸಿತ್ತು. ಮನೆಯ ಮೇಲಿನ ಸಾಲ ತೀರಿಸುವುದಕ್ಕಾಗಿಯೇ ಕೆಲಸ ಮಾಡುತ್ತಿರುವಂತೆ, ಕೆಲಸದಲ್ಲಿ ಮೋಜೆಲ್ಲಾ ಮಾಯವಾಗಿ ಹೋಗಿತ್ತು. ಆದರೆ ಈಗ ಮತ್ತೆ ಅದಕ್ಕೆಲ್ಲಾ ಹೊಸ ಅರ್ಥ, ಹೊಸ ಹುರುಪು ಕಾಣತೊಡಗಿತು. ಅವನ ಸುತ್ತಮುತ್ತಲಿನವರೆಲ್ಲಾ ಹುಬ್ಬೇರಿಸುವಷ್ಟು ಅವನು ಬದಲಾಗಿ ಹೋದ.
ಇದು ನೋಡಿ ವಿಚಿತ್ರ. ಈ ರೀತಿಯ ಅಮಲು ಹೆಚ್ಚು ದಿನ ಇರಲು ಬಾರದು. ಎಲ್ಲಾ ಒಳ್ಳೆಯವೂ ಕೊನೆಗೊಳ್ಳುತ್ತವೆ ಎನ್ನುತ್ತಾರಲ್ಲ ಹಾಗೆ. ಆದರೆ ಇಲ್ಲಿ ಆದದ್ದೇ ಇನ್ನೊಂದು ಬಗೆ. ಅದು ಕೊನೆಯಾಗುವ ಬದಲು ಇನ್ನೊಂದು ರೀತಿಯಲ್ಲಿ ತಿರುಚಿಕೊಂಡು ಅವನನ್ನೇ ಕಿತ್ತು ತಿನ್ನಲು ತೊಡಗಿತು. ಅದೂ ಕನಸು ಮನಸ್ಸಲ್ಲೂ ಅವನು ಅಂದುಕೊಳ್ಳದ ಹಾಗೆ.
ಭೇಟಿಯಾಗಿ ಮಾತಾಡಿದ ಒಂದೆರಡು ತಿಂಗಳಷ್ಟೇ ಆಗಿತ್ತು. ಕಪ್ಪು ಮೀಸೆಯವನು ಯಾವುದೋ ಅಂಗಡಿಯಲ್ಲಿ ನಿಂತಿದ್ದ. ಒಂದು ಬಗೆಯ ಶೂನ್ಯ ಅವನನ್ನು ಆವರಿಸಿದಂತಿತ್ತು. ಏಕೆ ಹೇಗೆ ಗೊತ್ತಿಲ್ಲ. ಆದರೆ ಅಂಗಡಿಗೆ ಏನಕ್ಕೆ ಬಂದಿದ್ದೇನೆ ಎಂಬುದೇ ಮರೆತಂತಾಗಿತ್ತು. ಅಂಗಡಿಯವನು ಎರಡೆರಡು ಬಾರಿ ಏನು ಬೇಕೆಂದು ಕೇಳಿದ್ದ. ಇವನು “ಒಂದು ನಿಮಿಷ” ಎಂಬಂತೆ ಏನೋ ಹೇಳಿ ಅಂಗಡಿಯಲ್ಲಿ ಜೋಡಿಸಿಟ್ಟಿದ್ದ, ನೇತಾಕ್ಕಿದ್ದ, ಪೇರಿಸಿಟ್ಟಿದ್ದ ವಸ್ತುಗಳನ್ನೆಲ್ಲಾ ನೋಡುತ್ತಾ ನಿಂತುಬಿಟ್ಟಿದ್ದ. ಒಂದು ಪಕ್ಕದಲ್ಲಿ ಪಾನ್‌ಪುಡಿಯ ಹೊಳೆಹೊಳೆವ ಪೊಟ್ಟಣಗಳ ಜರತಾರಿಯಂತ ಸಾಲು. ಇನ್ನೊಂದು ಕಡೆ, ಯಾವುಯಾವುದೋ ಚಾಕಲೇಟು ಪ್ಯಾಕೆಟ್‌ಗಳ ಸಾಲು. ಮೊತ್ತೊಂದು ಕಡೆ ತರಾವರಿ ಬಣ್ಣಬಣ್ಣದ ಸೋಪು ಪ್ಯಾಕೆಟ್‌ಗಳ ಸಾಲು. ತನಗೆ ಮರೆತದ್ದು ಅವನ್ನೆಲ್ಲಾ ನೋಡಿ ನೆನಪಾಗಬಹುದು ಎಂಬಂತಿತ್ತು ಅವನ ಮುಖಭಾವ. ಆದರೆ ನಿಜದಲ್ಲಿ ಅವನು ನೆನಪಿಸಿಕೊಳ್ಳುವ ಯಾವುದೇ ಪ್ರಯತ್ನ ಮಾಡುತ್ತಿರಲಿಲ್ಲ. ಅದಕ್ಕೇ ಹೇಳಿದ್ದು ಶೂನ್ಯ ಆವರಿಸಿದಂತೆ ಅಂತ. ನೋಡಿಯೇ ನೋಡಿದ ತನ್ನದೇ ಲೋಕದಲ್ಲಿ ಮುಳುಗಿರುವಂತೆ. ಅಷ್ಟರಲ್ಲಿ ಪಕ್ಕದಲ್ಲೇ ಪರಿಚಿತ ದನಿ ಕೇಳಿತು. ಥಟ್ಟನೆ ತಿರುಗಿ ನೋಡಿದರೆ ಮತ್ತೆ ಅದೇ ಗೆಳೆಯ. ಅವನ ಮೀಸೆಯ ಬಿಳಿ ಈಗೇಕೋ ಎದ್ದು ಕಾಣುತ್ತಿತ್ತು. ಆದರೆ ಈ ಬಾರಿ ತನ್ನ ಹೆಂಡತಿಯ ಜತೆ. ಏನೋ ಕೊಳ್ಳಲು ಆಕೆ ಒತ್ತಾಯಿಸುತ್ತಿರುವಂತೆ, ಇವನು ಬೇಡ ಎಂದು ಸಮಜಾಯಿಷಿ ಹೇಳುತ್ತಿರುವಂತಿತ್ತು.
ಇವನು ತನ್ನ ಕಣ್ಣನ್ನೇ ನಂಬಲಾಗದಂತೆ ನೋಡುತ್ತಾ ನಿಂತು ಬಿಟ್ಟ. ಎಷ್ಟೋ ವರ್ಷಗಳ ನಂತರ ಒಮ್ಮೆ ಸಿಕ್ಕು ಫೋನು ಅಡ್ರೆಸ್ ಕೊಡದೆ ಕಾಣೆಯಾಗಿ ನೆನಪುಗಳನ್ನು ಕೆದಕಿ ಹೋಗಿದ್ದ. ಈಗ ಏನೂ ಆಗದವನಂತೆ ತನ್ನ ಹೆಂಡತಿಯ ಜತೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಾ ಇದ್ದಾನೆ ಬಡವ ಎಂದು ತನಗೆ ತಾನೇ ಹೇಳಿಕೊಂಡು ನಕ್ಕ. ಹತ್ತಿರ ಹೋಗಿ ಬೆನ್ನು ತಟ್ಟಿದ. ಇವನನ್ನು ಹೊಸದಾಗಿ ಭೇಟಿಯಾದವನಂತೆ ಕಣ್ಣರಳಿಸಿ ನಾಟಕೀಯವಾಗಿ ನೋಡಿದ. ಇವನು ಎರಡು ತಿಂಗಳ ಹಿಂದಿಗಿಂತ ಈಗ ಅವನ ಮೀಸೆಯ ಬಿಳಿ ಹೆಚ್ಚೇಕೆ ಕಾಣುತ್ತಿದೆ ಅಂದುಕೊಂಡ. ಅಷ್ಟರಲ್ಲಿ ಅವನೇ “ಏನೋ ಬಡವಾ…” ಎಂದು ಅಂಗಡಿಯಲ್ಲಿರುವವರೆಲ್ಲಾ ತಿರುಗಿ ನೋಡುವಂತೆ ಕೂಗಿದ. ಈಗಷ್ಟೇ ತಾನೂ ಬಡವ ಅಂದುಕೊಂಡಿದ್ದು ಇವನ ಅರಿವಿಗೆ ಬಂತು. ಆದರೆ ಸ್ವಲ್ಪ ಕಕ್ಕಾವಿಕ್ಕಿಯೂ ಆಯಿತು. ಎಷ್ಟೋ ವರ್ಷಗಳ ಮೇಲೆ ಕಂಡವನಂತೆ ಯಾಕೆ ಆಡುತ್ತಿದ್ದಾನೆ ಅನಿಸಿತು. ಎರಡು ತಿಂಗಳ ಹಿಂದಷ್ಟೆ ಸಿಕ್ಕಾಗ ಫೋನು ನಂಬರ್ ಅಡ್ರೆಸ್ಸು ಕೇಳಿರಲಿಲ್ಲ. ಕೇಳಿದ್ದರೆ ಇಷ್ಟು ಹೊತ್ತಿಗೆ ಹಳೆಯದು ನೆನಪಾದಗಲೆಲ್ಲಾ ಫೋನ್ ಮಾಡಿಬಿಡುತ್ತಿದ್ದ. ಫೋನಿನಲ್ಲಿ ಸಿಕ್ಕದಿದ್ದರೆ ಮನೆಗೇ ಹೋಗಿ ಬಾಗಿಲು ತಟ್ಟುತ್ತಿದ್ದ. ಈಗ ನೋಡಿದರೆ ಇವನು ಹೀಗಾಡುತ್ತಿದ್ದಾನೆ ಅಂತ ಒಂದು ಸಲ ಪಿಚ್ಚೆನಿಸಿತು. ಅಷ್ಟು ಬೇಗ ಎರಡು ತಿಂಗಳ ಹಿಂದೆ ಸಿಕ್ಕಿದ್ದು ಮರೆತೇ ಬಿಟ್ಟಿದ್ದಾನಾ ಎಂದು ಅನುಮಾನವಾಯಿತು. ಯೋಚಿಸುತ್ತಿರುವಾಗಲೇ ಅವನು ತನ್ನ ಹೆಂಡತಿಯನ್ನು ಪರಿಚಯಿಸಿಬಿಟ್ಟಿದ್ದ. ಆಕೆಗೆ ಇವನ ಬಗ್ಗೆ ಹೆಚ್ಚೇನೂ ಆಸಕ್ತಿ ಇದ್ದಂತಿರಲಿಲ್ಲ. ಅಥವಾ ಅಂಗಡಿಯ ಸಾಮಾನುಗಳ ಗೂಡಿನಲ್ಲಿ ಯಾವುದೋ ಸಾಮಾನು ಆಕೆಯ ಗಮನವನ್ನು ಭದ್ರವಾಗಿ ಹಿಡಿದಿತ್ತು. ಅತ್ತಲೇ ತಿರುತಿರುಗಿ ನೋಡುತ್ತಿದ್ದಳು. ನಂತರ ಇವರನ್ನು ತಮ್ಮ ಪಾಡಿಗೆ ಬಿಟ್ಟು ಸಾಮಾನನ್ನೇ ನೋಡುತ್ತಾ ದೂರ ಸರಿದು ನಿಂತಳು.
ಅವನು ತೋರಿಸುತ್ತಿದ್ದ ಅರ್ಥವಾಗದ ಈ ಹೊಸ ಭೇಟಿಯ ಉತ್ಸಾಹ ಇವನಿಗೆ ಅರಗಿಸಿಕೊಳ್ಳುವುದು ಹೇಗೆ ಎಂದೇ ತಿಳಿಯಲಿಲ್ಲ. ಆ ದಿನ ಕಾಫಿ ಹೀರುತ್ತಾ ಹೇಳಿದ್ದನ್ನೇ ಮತ್ತೆ ತಿರುಗಿ ಹೇಳ ತೊಡಗಿದ. ಅವನ ತಲೆ ಕೆಟ್ಟಿರಬಹುದೇ ಎಂದು ಅವನ ಮುಖದಲ್ಲಿ ಸೂಚನೆಗಳಿಗಾಗಿ ಹುಡುಕಾಡಿದ. ಅವನೋ ಇವನ ಭುಜ ತಡವಿ “ಏನೋ ಭೂತ ನೋಡಿದವನ ತರಹ ನೋಡ್ತಾ ಇದ್ಯ” ಎಂದು ಜೋರಾಗಿ ನಕ್ಕ. ಅಂದು ಹೇಳಿದ ಜೀವನದ ವಿವರಗಳನ್ನೇ ಮತ್ತೆ ಗೊತ್ತಿಲ್ಲದವನಂತೆ ಕೇಳತೊಡಗಿದ. ಇವನೂ ಚುಟುಕಾಗಿ ಆವತ್ತು ಹೇಳಿದ್ದೇನಲ್ಲಾ ಎಂಬಂತೆ ಉತ್ತರಿಸಿದ. ಅವನ ಮುಖದಲ್ಲಿ ಯಾವುದೇ ಅನಾರೋಗ್ಯದ ಲಕ್ಷಣವೂ ಕಾಣದೇ ಮತ್ತಷ್ಟು ವಿಚಲಿತನಾದ. ಒಳಗೊಳಗೇ ಭಯವಾಗ ತೊಡಗಿತು. ಕೂಡಲೆ, ತನ್ನ ಹೆಂಡತಿಯಿಂದ ಏನೋ ಮುಚ್ಚಿಡಲು ಹೀಗೆ ಮಾಡುತ್ತಿರಬಹುದು ಎಂದು ಹೊಳೆಯಿತು. ಅದನ್ನು ಪರೀಕ್ಷೆ ಮಾಡಿಯೇ ಬಿಡುವ ಎಂದು ಮೆಲ್ಲಗೆ “ಆವತ್ತು ಸಿಕ್ಕಾಗ ನಿನ್ನ ಅಡ್ರೆಸ್ಸು ಫೋನ್ ನಂಬರ್ ಏನೂ ತಗೊಳ್ಳಲಿಲ್ಲ” ಎಂದ. ಅವನು ಯಾವುದೇ ಕೃತ್ರಿಮತೆ ಇಲ್ಲದೆ “ಯಾವಾಗ?” ಎಂದದ್ದು ಕೇಳಿ ಇವನಿಗೆ ಆಳದ ಬಾವಿಗೆ ತಳ್ಳಿದಂತೆ ಆಯಿತು. ಹೇಗೆ ಏನು ಎಲ್ಲಿ ಎಂದು ಹೇಳಿದರೆ ಅವನಿಗೆ ನೆನಪಾಗಬಹುದು ಎಂದು ತಡವರಿಸಿದ. ಇವನಿಗೇನೋ ತಪ್ಪು ಅರಿಕೆಯಾಗಿದೆ ಎಂಬಂತೆ ಅವನು “ಯಾವಾಗಲೋ ಸಿಕ್ಕಿದವಿ? ನಿನಗೆ ಯಾರೋ ಸಿಕ್ಕಿರಬೇಕು – ನಾನೂ ಅಂತಿದ್ದೀಯ… ಮೊದಲಿಂದಲೂ ನೀನು ಸ್ವಲ್ಪ ಹಿಂಗೆ. ಆಬ್ಸಂಟ್ ಮೈಂಡೆಡ್ ಫೂಲ್…” ಎಂದು ಇವನನ್ನು ಗೇಲಿ ಮಾಡತೊಡಗಿದ. ಇವರ ಮಾತುಗಳು ಅವನ ಹೆಂಡತಿಯ ಕಿವಿಗೆ ಬಿದ್ದು ಆಕೆ ಕೊಂಚ ಇವರತ್ತ ಗಮನ ಹರಿಸಿ ಇಬ್ಬರೂ ಮಾತಿನಲ್ಲಿ ಮಗ್ನರಾದಂತಿರುವುದು ನೋಡಿ ಮತ್ತೆ ಬೇರತ್ತ ತಿರುಗಿಬಿಟ್ಟಳು.
“ಆವತ್ತು ಸುನಂದ ಹೋಟಲ್ ಮುಂದೆ ಸಿಕ್ಕಿದ್ಯಲ್ಲೋ. ಯಾಕೆ ಇಷ್ಟು ಬೇಗ ಮರೆತುಬಿಟ್ಯ? ಇಬ್ಬರೂ ಕಾಫಿ ಕುಡಿದು ಏನೆಲ್ಲಾ ಮಾತಾಡಿದಿವಿ. ಒಂದು ಗಂಟೆ ಹರಟೆ ಹೊಡದಿವಿ. ಆಮೇಲೆ ಮಳೆ ಬರೋ ತರ ಮೋಡ ಮುಚ್ಚಿಕೊಂಡಿತು. ನೀನು ಬೇಗ ಹೋಗಬೇಕು ಅಂತ ಹೊರಟೆ…” ಇವನಿಗೆ ತಲೆ ಸರಿಯಿಲ್ಲವೇ ಎಂಬಂತೆ ಅವನು ಇವನನ್ನು ನೋಡ ತೊಡಗಿದ. “ಅಲ್ಲವೋ – ಎಷ್ಟೋ ವರ್ಷದ ಮೇಲೆ ಸಿಕ್ಕಿದ್ಯ. ಹೋದ ತಿಂಗಳು ಸಿಕ್ಕಿದ್ದೆ ಅಂತ್ಯಲ್ಲ. ಯಾಕೋ ಮನೇಲಿ ಎಲ್ಲ ಸರಿಯಾಗಿದೆಯ? ಏನಾದರೂ ಚಿಂತೆಯಿಂದ ತಲೆಕೆಡಿಸಿಕೊಂಡಿದ್ಯ?” ಅಂತ ತುಂಬಾ ಆತ್ಮೀಯವಾಗಿ ಕೇಳಿದ. ಇವನಿಗೆ ನಿಜವಾಗಿಯೂ ದಿಗಿಲಾಯಿತು. ಅವನ ಮನೆಗೂ ಸಣ್ಣದರಲ್ಲಿ ಹೋಗಿಬಂದಿದ್ದ ಇವನಿಗೆ ಅವನು ಅವಳಿ-ಜವಳಿ ಅಲ್ಲ ಅಂತ ಖಾತ್ರಿಯಿತ್ತು. ಹಾಗಾದರೆ ಇವನು ಹೇಳ್ತಿರೋದು ಏನು? ನನಗೇ ತಿಕ್ಕಲು ಅಂತಿದ್ದಾನಲ್ಲ ಎಂಬ ಸಿಟ್ಟು ಅಸಹನೆಯಿಂದ. “ಯಾಕೋ ಹೀಗ್ಮಾತಾಡ್ತಾ ಇದ್ಯ? ನೀನೂ… ನೀನೂ…” ಪದಗಳು ಸಿಕ್ಕದೆ, ವಾಕ್ಯವಾಗದೇ ಅತೀವ ಗೊಂದಲದಿಂದ ದಡಬಡಿಸಿದ.
ಅವನ ಹೆಂಡತಿ ಅಷ್ಟು ಹೊತ್ತಿಗೆ ಇವರ ಮಾತುಕತೆ ಕೇಳಿಸಿಕೊಂಡು ಹತ್ತಿರ ಬಂದು “ನಾವು ಆರು ತಿಂಗಳಿಂದ ಈ ಊರಲ್ಲೇ ಇಲ್ಲವಲ್ಲ. ಅದು ಹೇಗೆ ಇವರು ನಿಮಗೆ ಸಿಗೋಕೆ ಸಾಧ್ಯ” ಎಂದೊಡನೆ ಅಲ್ಲಲ್ಲಿ ಬಿಳಿಯಿದ್ದ ಮೀಸೆಯ ಗೆಳೆಯ ಜೋರಾಗಿ ನಕ್ಕ. ಅದೇ ಹಳೆ ನಗು. ಸಣ್ಣ ವಯಸ್ಸಿಗಿಂತ ಸ್ವರ ಕೊಂಚವಷ್ಟೇ ಗಡಸು. ಆದರೆ ಹೋದ ಸಲ ಸಿಕ್ಕಾಗ ಹೀಗೆ ನಕ್ಕಿರಲಿಲ್ಲ. ಯಾವುದೋ ತಹತಹದಲ್ಲಿ ಇದ್ದಂತೆ ಇದ್ದ. ಭೇಟಿಯೇ ಅಗಿಲ್ಲ ಎನ್ನುವಾಗಿನ ಇಂದಿನ ನಿರಾಳ ಅಂದು ಸಿಕ್ಕಾಗ ಇರಲಿಲ್ಲ.
ಮೀಸೆಗೆ ಕಪ್ಪು ಬಳಿಯುವ ಇವನು ಅವನನ್ನು ತೀಕ್ಷ್ಣವಾಗಿ ನೋಡಿದ. ಆ ನೋಟದಲ್ಲಿ ಗೊಂದಲ, ಅಸಹನೆಯ ಜತೆ ಒಂದಿಷ್ಟು ಸಿಟ್ಟು ಕಸಿವಿಸಿಯೂ ಇತ್ತು. ಅವನ ಮುಖದಲ್ಲಿನ್ನೂ ತೆಳು ನಗು ತೇಲುತ್ತಲೇ ಇತ್ತು. ಆ ದೀರ್ಘ ನೋಟದ ಕಡೆಯಲ್ಲಿ ಏನು ಇದ್ದೀತು ಎಂದು ಹೇಳಲು ಬ್ರಹ್ಮನೇ ಹುಟ್ಟಿಬಂದರೂ ಸಾಧ್ಯವಿರಲಿಲ್ಲ. ಆ ನೋಟದ ಕೊನೆಯಲ್ಲಿ ಇವನು “ಹೋಗಲಿ ಬಿಡು” ಎಂದು ಮುಖ ತಗ್ಗಿಸಿ ಹೊರಟುಬಿಟ್ಟ. ಹೇಳುವುದೂ ಕೇಳುವುದೂ ಏನೂ ಉಳಿದಿರಲಿಲ್ಲ ಎಂಬಂತೆ. ದೂರಕ್ಕೆ ಹೋಗಿ ಇಲ್ಲದ ಕುತೂಹಲದಲ್ಲೂ ಹಿಂದೆ ತಿರುಗಿ ನೋಡಿದ. ಗಂಡ ಹೆಂಡತಿ ಇಬ್ಬರೂ ಇವನತ್ತಲೇ ನೋಡುತ್ತಾ ಏನೋ ಮಾತಾಡಿಕೊಳ್ಳುತ್ತಿದ್ದರು. ನೋಡಬಾರದಿತ್ತು ಎಂಬಂತೆ ತಟ್ಟನೆ ಮುಖ ತಿರುಗಿಸಿದ. ಮತ್ತೆ ತಿರುಗಿ ನೋಡುವ ಸಾಹಸ ಮಾಡಲಿಲ್ಲ.
ಈ ಬಾರಿಯೂ ಅಡ್ರೆಸ್ ಆಗಲಿ, ಫೋನ್ ನಂಬರ್ ಆಗಲೀ ಕೇಳಿಕೊಳ್ಳಲಿಲ್ಲ ಎಂದುಕೊಂಡ. ಆದರೆ ಹಾಗಂದುಕೊಂಡದ್ದು ಎರಡನೇ ಬಾರಿ ಸಿಕ್ಕ ಒಂದು ವಾರದ ನಂತರ. ಆ ಒಂದು ವಾರ ಸಿಕ್ಕಾಪಟ್ಟೆ ತಲೆ ಕೆಡಿಸಿಕೊಂಡಿದ್ದ. ಹಾಲು ತರಲು ಹೋಗಿ ಮರೆತು ತರಕಾರಿ ಅಂಗಡಿಯಿಂದ ಬೇಡದಷ್ಟು ಹಾಗಲಕಾಯಿಯೋ, ಸೀಮೇ ಬದನೆಕಾಯಿಯೋ ತಂದುಬಿಡುತ್ತಿದ್ದ. ಕೆಲಸ ಮುಗಿಸಿ ಮನೆಗೆ ಬರುವಾಗ ಇದ್ದಕಿದ್ದ ಹಾಗೆ ಸುನಂದ ಹೋಟೆಲ್ ಮುಂದೆ ಕತ್ತಲಾಗುವವರೆಗೂ ನಿಂತುಬಿಡುತ್ತಿದ್ದ. ಮನೆಗೆ ಬಂದು ಸುಸ್ತಾಗಿದೆ ಎಂದು ಸಂಜೆಯೇ ಮಲಗಿಬಿಡುತ್ತಿದ್ದ. ರಾತ್ರಿ ಎರಡು ಗಂಟೆಗೆ ಎದ್ದು ದೀಪ ಹಾಕಿಕೊಳ್ಳದೇ ಬೆಳಗಾಗುವವರೆಗೂ ಕೂತು ಬಿಡುತ್ತಿದ್ದ. ಇಂತವು ಇನ್ನೂ ಏನೇನೋ ಮಾಡುತ್ತಿದ್ದ. ಹೆಂಡತಿಗೆ ಚಿಂತೆ ಹತ್ತಿಕೊಂಡಿತು. ಮಕ್ಕಳು ಇವನ ಬಳಿ ಬರಲು ಹೆದರುತ್ತಿರುವಂತಿತ್ತು. ವಿಧಿವತ್ತಾಗಿ ಮೀಸೆಗೆ ಕಪ್ಪು ಹಚ್ಚುತ್ತಿದ್ದವನು ಈಗೀಗ ಬಿಳಿ ಇಣುಕುತ್ತಿದ್ದರೂ ಹಾಗೇ ಬಿಟ್ಟಿದ್ದ. ಏನೂ ಬೇಡವಾದವನಂತೆ ತೋರತೊಡಗಿದ.
ಇವೆಲ್ಲಾ ತನಗೆ ಹೀಗೇಕೆ ಆಗುತ್ತಿದೆ ಎಂದು ಅವನಿಗೇ ಅನಿಸತೊಡಗಿದಾಗ ಮತ್ತೆ ಎಲ್ಲ ಸರಿಯಾಗ ತೊಡಗಿತು. ತನ್ನ ಆತ್ಮೀಯನಾಗಿದ್ದ ಗೆಳೆಯ ಅದೇಕೆ ಅಷ್ಟು ಹಸಿ ಸುಳ್ಳು ಹೇಳಿದ ಎಂದು ಅರ್ಥವಾಗಿರಲಿಲ್ಲ. ಅವನು ಹಾಗೆ ಹೇಳಿದಾಗ ನನಗೇಕೆ ನನ್ನ ಮನಸ್ಥಿತಿಯ ಬಗ್ಗೆಯೇ ಅನುಮಾನ ಹತ್ತಿಕೊಂಡಿತು ಎಂದು ಮತ್ತೆ ಮತ್ತೆ ಕೇಳಿಕೊಂಡ. ಹೀಗೆಲ್ಲಾ ಅಂದುಕೊಳ್ಳುವುದೇ ಒಂದು ಬಗೆಯ ಚಿಕಿತ್ಸೆಯಾಗಿ ಪರಿಣಮಿಸತೊಡಗಿತು. ಮತ್ತೆ ಹಾಲು ಸರಿಯಾಗಿಯೇ ತರತೊಡಗಿದ. ತರಕಾರಿ ಕೂಡ. ಮಕ್ಕಳ ಜತೆ ಎಂದಿನಂತೆ ಆಟ ಆಡುವುದು, ಜಗಳ ಆಡುವುದು ಎಲ್ಲವೂ ಹದಕ್ಕೆ ಬರತೊಡಗಿತು. ಅವನ ಚಿಕ್ಕ ಮಗು ಅಪ್ಪನ ಚಿತ್ರ ಬರೆದು, ಅದಕ್ಕೊಂದು ಕಪ್ಪನೆಯ ಮೀಸೆ ಬರೆದು, ಪಕ್ಕದಲ್ಲಿ ಚಿಟ್ಟೆ ಬರೆದು, ಅಕ್ಕಪಕ್ಕದ ಮನೆಯವರಿಗೆಲ್ಲಾ ತೋರಿಸಿದ್ದು ನೋಡಿ ಹೇಗೇಗೋ ಆಗಿ ಗದರಿಬಿಟ್ಟಿದ್ದ. ಕನ್ನಡಿ ನೋಡಿಕೊಂಡು ಮುಂದಿನ ವಾರ ಮೀಸೆಗೆ ಕಪ್ಪು ಬಳಿದಕೊಳ್ಳಬೇಕು ಎಂದು ನಿಗದಿ ಮಾಡಿಕೊಂಡ. ಮುಂದಿನ ವಾರ ಅದು ಮರೆತು ಮುಂದೂಡವಂತಾದರೂ, ಅದರ ಬಗ್ಗೆ ಎಚ್ಚರವಂತೂ ಇದ್ದೇ ಇತ್ತು. ಇಷ್ಟಾಗಿಯೂ ಒಮ್ಮೊಮ್ಮೆ ಇದ್ದಕ್ಕಿದ್ದ ಹಾಗೆ ಒಳಮುಖಿಯಾಗುತ್ತಿದ್ದ. ಕಿಟಕಿಯ ಬಳಿ ಯಾರನ್ನೋ ಕಾಯುತ್ತಿರುವಂತೆ ಬೀದಿಯನ್ನೇ ನೋಡುತ್ತಾ ನಿಂತುಬಿಡುತ್ತಿದ್ದ. ನಂತರ ಸರಕ್ಕನೆ ನಡುಕ ಬಂದಂತೆ ಮೈಝಾಡಿಸಿ ಮತ್ತೆ ಸರಿಯಾಗಿಬಿಡುತ್ತಿದ್ದ.
ಒಂದು ಸಂಜೆ ಹಳೆಯ ಉತ್ಸಾಹದಲ್ಲಿ ದಡದಡನೆ ಮನೆಗೆ ಬಂದ. ಬಂದವನೇ ನೇರ ಅಡುಗೆಮನೆಗೇ ಹೋದ. ಜಾಡಿಯಿಂದ ತೆಗೆದ ಉಪ್ಪಿನಕಾಯಿ ಮಿಡಿಯನ್ನು ಚಾಕಲ್ಲಿ ಹೆಚ್ಚುತ್ತ ಕೈಯೆಲ್ಲಾ ಕೆಂಪಗೆ ಮಾಡಿಕೊಂಡಿದ್ದ ಹೆಂಡತಿಗೆ ಅಂದಿನ ಪೇಪರ್ ತೋರಿಸಿದ. “ನನ್ನ ತಲೆ ಕೆಟ್ಟು ಹೋಗಿತ್ತು. ನೋಡು ಇವನು ನನ್ನ ಪ್ರೈಮರಿ ಸ್ಕೂಲ್ ಫ್ರೆಂಡು… ಯಾವುದೋ ಹೆಂಗಸನ್ನು ಚೂರಿಯಿಂದ ಇರಿದು ಕೊಲೆ ಮಾಡಿದ್ದಾನಂತೆ. ತಾನು ಊರಲ್ಲೇ ಇರಲಿಲ್ಲ ಅಂತ ಸುಳ್ಳು ಹೇಳಿದನಂತೆ. ಅವನ ಹೆಂಡತೀನೂ ಶಾಮೀಲಂತೆ… ಎಲ್ಲಾ ಸಿಕ್ಕಿಬಿದ್ದಿದ್ದಾರೆ…” ಎನ್ನುತ್ತಾ ಗೆಳೆಯನ ಫೋಟೋದ ಮೇಲೆ ಬೆರಳಲ್ಲಿ ಪಟಪಟ ಎಂದು ಏನೋ ಸಾಬೀತಾದಂತೆ ಕುಟ್ಟಿದ. ತನ್ನ ಗೆಳೆಯ ಕೊಲೆಗಡುಕ ಅನ್ನುವುದು ಇವನಿಗೆ ಇಷ್ಟೊಂದು ಖುಷಿಯ ಸಮಾಚಾರವಾದದ್ದು ಹೆಂಡತಿಗೆ ಅರ್ಥವಾಗಲಿಲ್ಲ.
ಪೇಪರಿನ ಫೋಟೋದಲ್ಲಿ ಗಂಡನ ಗೆಳೆಯನ ಮೀಸೆ ಬಿಳಿಬಿಳಿಯಾಗಿರುವುದನ್ನು ನೋಡಿದಳು. ತನ್ನ ಗಂಡ ಮೀಸೆಗೆ ಕಪ್ಪು ಹಚ್ಚಿಕೊಳ್ಳದಿದ್ದರೆ ಹೀಗೇ ಕಾಣುತ್ತದೆ ಅಂದುಕೊಂಡಳು. ಮಿಡಿ ಕತ್ತರಿಸುತ್ತಾ ಕೆಂಪಗಾಗಿದ್ದ ಕೈಯಲ್ಲಿ ಚಾಕು ಹಿಡಿದೇ ತನ್ನ ಮುಂದಲೆಯನ್ನು ಸರಿಸಿಕೊಂಡು ಇವನ ಮುಖವನ್ನು ಹೊಸದಾಗಿ ಎಂಬಂತೆ ನೋಡಿದಳು. ಅವಳ ಮುಖದಲ್ಲಿ ಸಣ್ಣಗೆ ನಗು ಹರಡಿಕೊಂಡಿತು.
ಆಸ್ಟ್ರೇಲಿಯಾದ ನಿವಾಸಿಯಾಗಿರುವ ಅನಿವಾಸಿ ಕನ್ನಡ ಬರಹಗಾರ, ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ.ನಾಟಕ, ಕಿರುಚಿತ್ರ, ಸಾಕ್ಷ್ಯ ಚಿತ್ರ ಹಾಗು ಚಲನಚಿತ್ರ ಕ್ಷೇತ್ರಗಳಲ್ಲಿ ಅತೀವ ಆಸಕ್ತಿ ಉಳ್ಳವರು. ‘ಮುಖಾಮುಖಿ’ ಹಾಗೂ ‘ತಲ್ಲಣ’ ಇವರಿಗೆ ಹೆಸರು ತಂದುಕೊಟ್ಟ ಚಲನಚಿತ್ರಗಳು.