ಅವರು ಬಹಳ ಕಷ್ಟಪಟ್ಟು ಮಠವನ್ನು ಬೆಳೆಸಿದರು. ಅವರು ಶ್ರಮಜೀವಿಗಳಂತೆ ಕಾರ್ಯ ಮಾಡಿದರು. ಯಾವುದೇ ಆರ್ಥಿಕ ಸೌಲಭ್ಯಗಳಿಲ್ಲದ ವೇಳೆ ಡಂಬಳದಿಂದ ಗದಗಿಗೆ ಮತ್ತು ಗದಗದಿಂದ ಡಂಬಳದ ವರೆಗೆ ಕಾಲ್ನಡಿಗೆಯಲ್ಲಿ ಸುತ್ತುತ್ತ, ಬಾವಿ ತೋಡುವಂಥ ಕಠಿಣ ಕಾಯಕ ಮಾಡಿದರು. ಜೊತೆಗಿದ್ದ ಭಕ್ತರ ಮತ್ತು ಆಳುಗಳು ಬಾವಿ ತೋಡಿ, ರಾತ್ರಿ ಸುಸ್ತಾಗಿ ಮಲಗಿದ್ದಾಗ ಅವರ ಅರವಿಗೆ ಬಾರದಂತೆ ಪಾದಗಳಿಗೆ ಔಷಧಿ ಹಚ್ಚುವುದನ್ನೂ ಮಾಡಿದರು! ಅವರು ನನ್ನ ದೃಷ್ಟಿಯಲ್ಲಿ ಕನ್ನಡದ ವಿವೇಕಾನಂದರೂ ಆಗಿದ್ದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 87ನೇ ಕಂತು ನಿಮ್ಮ ಓದಿಗೆ

ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳು (21.02.1949-20.10.2018) ಜ್ವಾಲಾಮುಖಿಯನ್ನು ಇಂಬಿಟ್ಟುಕೊಂಡ ಶಾಂತಸಾಗರದಂತಿದ್ದರು. ಅವರು ಜನರೊಳಗಿನ ಸದ್ಗುಣಕ್ಕೆ, ಪ್ರತಿಭೆಗೆ, ಕ್ರಿಯಾಶೀಲತೆಗೆ ಮತ್ತು ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಗುಣಕ್ಕೆ ಬಹುಬೇಗ ಮಾರುಹೋಗುತ್ತಿದ್ದರು. ಇದು ಅವರ ತಾಯಿಗುಣವಾಗಿತ್ತು. ಮಗು ಒಂದು ಪುಟ್ಟ ಹೆಜ್ಜೆ ಹಾಕುವುದನ್ನು ನೋಡಿ ಸಂಭ್ರಮಿಸುವ ತಾಯಿಯ ಹಾಗೆ ಅವರು ಜನಸಮುದಾಯದಲ್ಲಿನ ಒಳ್ಳೆಯವರನ್ನು ಕಂಡರೆ ಬಹಳ ಖುಷಿ ಪಡುತ್ತಿದ್ದರು. ಹೃದಯಾಂತರಾಳದಿಂದ ಹೊಗಳುತ್ತಿದ್ದರು. ಅನೇಕ ಸಲ ಹೊಗಳಿಕೆಗೆ ಒಳಗಾಗುವವರಿಗೆ ಮುಜುಗರವಾಗುತ್ತಿತ್ತು. ಅವರು ಹೊಗಳುವ ಯೋಗ್ಯತೆಗೆ ನಾವಿದ್ದೇವೆಯೆ? ಎಂಬ ಪ್ರಶ್ನೆ ಅವರಲ್ಲಿ ಮೂಡುವುದು ಸ್ವಾಭಾವಿಕವಾಗಿತ್ತು. ನಾವು ಬೀಜರೂಪದಲ್ಲಿದ್ದಾಗ ಅವರು ಅದರೊಳಗಿನ ಮರವನ್ನೂ ಅದರ ಫಲವನ್ನೂ ಕಾಣುತ್ತಿದ್ದರು. ಇದೇ ಅವರ ವೈಶಿಷ್ಟ್ಯ. ಇದು ಅವರು ಜನರನ್ನು ಪ್ರೀತಿಸುವ ಕ್ರಮವಾಗಿತ್ತು.

ವಿಜಯಪುರ ಜಿಲ್ಲೆಯ ಸಿಂದಗಿಯಲ್ಲಿ ಜನಿಸಿದ ಅವರು 1974ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಎಂ.ಎ. ಮುಗಿಸಿದ ವರ್ಷವೇ ಜುಲೈ 29ರಂದು ಡಂಬಳ-ಗದಗ ತೋಂಟದಾರ್ಯ ಮಠದ 19ನೇ ಪೀಠಾಧಿಪತಿಗಳಾದ ಜಗದ್ಗುರು ಸಿದ್ಧಲಿಂಗ ಮಹಾಸ್ವಾಮಿಗಳು ವೈಚಾರಿಕತೆಗೆ ಹೆಚ್ಚಿನ ಮಹತ್ವ ಕೊಟ್ಟರು. ಮೂಢನಂಬಿಕೆ ಮತ್ತು ಗೋಮುಖವ್ಯಾಘ್ರಿಗಳಿಂದ ಕೂಡಿದ ಸಮಾಜದ ಕಟು ಟೀಕಾಕಾರರಾಗಿದ್ದ ಅವರ ನಿಷ್ಠುರ ನುಡಿಗಳು ಸರಳ ಸಹಜವಾಗಿದ್ದವು. ಅವರ ನುಡಿಗಳ ಹಿಂದಿನ ಅಂತಃಕರಣಕ್ಕೆ ಭಕ್ತರು ತಲೆಬಾಗುತ್ತಿದ್ದರು. ಪಲ್ಲಕ್ಕಿಯ ಕಡೆ ಹೊರಳಿ ಕೂಡ ನೋಡದ ಅವರು ಪಾದಪೂಜೆಯನ್ನು ಇಷ್ಟಪಡುತ್ತಿರಲಿಲ್ಲ. ಆ ಕುರಿತು ಹುಬ್ಬಳ್ಳಿಯ ಸಾರ್ವಜನಿಕ ಸಭೆಯೊಂದರಲ್ಲಿ ಬೇಸರ ವ್ಯಕ್ತಪಡಿಸಿದ್ದರು.

ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರ ಬಗ್ಗೆ ಅವರ ಕಾಳಜಿ ಪ್ರಶ್ನಾತೀತವಾಗಿತ್ತು. ಅವರ ನಡವಳಿಕೆಯಲ್ಲಿ ಬೇರೆ ಸ್ವಾಮಿಗಳಿಗೂ ಪಾಠವಿರುತ್ತಿತ್ತು. ಕನ್ನಡ ನಾಡು ನುಡಿಗಳ ಸೇವೆ ಮತ್ತು ಭಾವೈಕ್ಯದ ಬದುಕು ಅವರ ಆದ್ಯತೆಗಳಾಗಿದ್ದವು. ರೈತರ ಬದುಕು ಹಸನಾಗಲು ಅವರ ಭೂಮಿ ಅವರಿಗೇ ಉಳಿದು ಅವರ ಬೆಳೆಗೆ ಯೋಗ್ಯ ಬೆಲೆ ಬರಬೇಕು ಎಂದು ಅವರು ಪ್ರತಿಪಾದಿಸುತ್ತಿದ್ದರು. ಘನತೆಯ ಬದುಕಿಗೆ ಶಿಕ್ಷಣ ಅವಶ್ಯ ಎಂದು ಸಾರಿದ ಅವರು ವಿವಿಧ ಪ್ರಕಾರಗಳ 80 ಶಿಕ್ಷಣ ಮುಂತಾದ ಸಂಸ್ಥೆಗಳನ್ನು ಪ್ರಾರಂಭಿಸಿ ಸಹಸ್ರಾರು ಯುವಕರ ಭವಿಷ್ಯ ನಿರ್ಮಾಣದಲ್ಲಿ ಯಶಸ್ಸನ್ನು ಸಾಧಿಸಿದರು. 37 ವರ್ಷಗಳವರೆಗೆ ಪ್ರತಿ ಸೋಮವಾರ ಗದಗ ಮಠದಲ್ಲಿ ಶಿವಾನುಭವ ಕಾರ್ಯಕ್ರಮ ನಡೆಸಿದರು. ಎಲ್ಲ ಧರ್ಮಗಳ ಚಿಂತಕರು ಈ ವೇದಿಕೆಯಲ್ಲಿ ಧರ್ಮ, ದರ್ಶನ, ಸಾಹಿತ್ಯ, ಸಂಸ್ಕೃತಿ, ಕಲೆ, ಕೃಷಿ, ಸಹಬಾಳ್ವೆ ಮುಂತಾದ ವಿಷಯಗಳ ಕುರಿತು ಅನುಭಾವ ನೀಡಿದ್ದಾರೆ.

ಪಲ್ಲಕ್ಕಿಯನ್ನು ತ್ಯಜಿಸಿದ ಸ್ವಾಮಿಗಳು ತೋಂಟದಾರ್ಯ ಮಠದ ಜಾತ್ರೆಯನ್ನು ಭಾವೈಕ್ಯದ ಜಾತ್ರೆಯಾಗಿಸಿದರು. ಅದು ಸರ್ವಜನಾಂಗಗಳ ಉತ್ಸವವಾಗಿ ಪರಿಣಮಿಸಿತು. ಅವರ ಸರ್ಮಧರ್ಮ ಸಮಭಾವ ಇಡೀ ದೇಶಕ್ಕೆ ಮಾದರಿಯಾಗಿದೆ. ಅವರಲ್ಲಿ ದಲಿತರು ಮತ್ತು ಅಲ್ಪಸಂಖ್ಯಾತರಿಗೆ ಕೂಡ ಭೂಮಿ ಕೊಟ್ಟು, ಅವರೆಲ್ಲ ಸಾಹಿತ್ಯ, ಸಂಸ್ಕೃತಿ ಮತ್ತು ಶೈಕ್ಷಣಿಕವಾಗಿ ಬೆಳೆಯುವಂತೆ ನೋಡಿಕೊಂಡಿದ್ದಾರೆ. ಶಿಕ್ಷಣಕ್ಕಾಗಿ ಸರ್ಕಾರಕ್ಕೂ ಭೂಮಿ ಕೊಟ್ಟಿದ್ದಾರೆ. ಇಂದು ನಮಗೆ ಬೇಕಾಗಿರುವುದು ಮಾನವೀಯತೆ ಎಂದು ಅವರು ಒತ್ತಿ ಹೇಳುತ್ತಿದ್ದರು.

ಬಾಬರಿ ಮಸೀದಿ ಧ್ವಂಸ ಶೌರ್ಯದ ಕಾರ್ಯವಲ್ಲ. ಜೈನರ, ಬೌದ್ಧರ ದೇವಾಲಯಗಳನ್ನು ಹಿಂದೂ ದೇವಾಲಯಗಳಾಗಿ ಪರಿವರ್ತಿಸಲಾಗಿದೆ ಎಲ್ಲವನೂ ನಾಶಗೊಳಿಸುತ್ತ ಹೋದರೆ ಎಲ್ಲಿ ಮುಟ್ಟುವೆವು ಎಂದು ಅವರು ಎಚ್ಚರಿಸಿದ್ದಾರೆ. ಕೋಮುಗಲಭೆಗಳು ನಡೆದ ಸ್ಥಳಗಳಿಗೆ ಹೋಗಿ ಶಾಂತಿಯಾತ್ರೆ ಕೈಗೊಂಡು ಜನರಿಗೆ ಸಾಮರಸ್ಯದ ಪಾಠ ಹೇಳುವುದು ತಮ್ಮ ಆದ್ಯ ಕರ್ತವ್ಯವೆಂದು ಅವರು ಭಾವಿಸಿದ್ದರು.

2001ರಲ್ಲಿ ಭಾರತ ಸರ್ಕಾರ ಅವರಿಗೆ ರಾಷ್ಟ್ರೀಯ ಕೋಮು ಸೌಹಾರ್ದ ಪ್ರಶಸ್ತಿ ನೀಡಿ ಗೌರವಿಸಿತು. ಗುಲಬರ್ಗಾ ವಿಶ್ವವಿದ್ಯಾಲಯ 1994ರಲ್ಲಿ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತ್ತು. ಕರ್ನಾಟಕ ಸರ್ಕಾರ 2009ರಲ್ಲಿ ರಾಷ್ಟ್ರೀಯ ಬಸವ ಪುರಸ್ಕಾರ ನೀಡಿ ಗೌರವಿಸಿತು.

ಲಿಂಗಾಯತ ಸಮಾಜ ಬೆಳೆದುಬಂದ ಬಗೆ, ಲಿಂಗಾಯತ ಸಮಾಜಕ್ಕಾಗಿ ಜೀವಸವೆಸಿದವರ ಮತ್ತು ಅದಕ್ಕಾಗಿ ಎಲ್ಲ ರೀತಿಯ ಕಷ್ಟನಷ್ಟಗಳನ್ನು ಅನುಭವಿಸಿದಂಥ ದೊಡ್ಡ ಮನುಷ್ಯರ ವಿವರಗಳನ್ನು ಅವರು ಮನಂಬುಗುವಂತೆ ವಿವರಿಸುತ್ತಿದ್ದರು. ಶರಣರ ತ್ಯಾಗದ ಕುರಿತು ಮತ್ತು ನಂತರ ಬಂದ ಮಹಾನ್ ವ್ಯಕ್ತಿಗಳ ಬಗ್ಗೆ ಕೂಡ ನಮ್ಮ ಯುವಕರಿಗೆ ತಿಳಿಸುವ ಮೂಲಕ ಸಮಸಮಾಜದ ಕನಸು ಕಂಡವರಲ್ಲಿ ಅವರು ಪ್ರಮುಖರಾಗಿದ್ದಾರೆ.

ದಲಿತ ಸಮಾಜ ಮೊದಲು ಮಾಡಿ ಲಿಂಗಾಯತ ಒಳಪಂಗಡಗಳನ್ನು ಒಂದಾಗಿಸಿ ಒಂದು ಮಾದರಿ ಲಿಂಗಾಯತ ಸಮಾಜವನ್ನು ನೋಡುವ ಬಯಕೆ ಅವರದಾಗಿತ್ತು. ಆದರೆ ಅವರಿದ್ದ ಕಾಲ ಇನ್ನೂ ಪಕ್ವವಾಗದೆ ಇದ್ದುದು ಅವರಲ್ಲಿ ಕಸಿವಿಸಿಯನ್ನುಂಟು ಮಾಡುತ್ತಿತ್ತು. 30 ವರ್ಷಗಳವರೆಗೆ ಅವರು ಸಾಮೂಹಿಕ ವಿವಾಹ ನೆರವೇರಿಸಿದ್ದರು. ಪ್ರತಿ ಸಲ ಯಾವುದೇ ಖರ್ಚಿಲ್ಲದೆ ನೂರಾರು ಜೋಡಿಗಳ ಮದುವೆಯಾಗುತ್ತಿತ್ತು. ಅಲ್ಲಿ ಯಾವುದೇ ಜಾತಿ ಉಪಜಾತಿಗಳ ಹಂಗು ಇರುತ್ತಿರಲಿಲ್ಲ. ಹೀಗೆ ಅವರು ಮಾಡಿದ ಸಮಾಜ ಸುಧಾರಣೆಯ ಕಾರ್ಯಗಳು ಬಹಳಷ್ಟಿವೆ.

ಕನ್ನಡ ಚಳವಳಿ, ರೈತರ ಭೂಮಿ ಬಂಡವಾಳಶಾಹಿಗಳ ಪಾಲಾಗದಂತೆ ನೋಡಿಕೊಳ್ಳುವ ಚಳವಳಿ, ಜೀವವೈವಿಧ್ಯದಿಂದ ಕೂಡಿದ ಕಪ್ಪತಗುಡ್ಡ ರಕ್ಷಣಾ ಚಳವಳಿ, ಭ್ರಷ್ಟಾಚಾರ ವಿರೋಧಿ ಚಳವಳಿ, ಲಿಂಗಾಯತ ಸಮಾಜವನ್ನು ಪುರೋಹಿತಶಾಹಿ ವ್ಯವಸ್ಥೆಯಿಂದ ಹೊರತರುವ ಚಳವಳಿ, ಲಿಂಗಾಯತ ಸ್ವತಂತ್ರಧರ್ಮ ಎಂಬುದನ್ನು ಸಾಬೀತುಪಡಿಸುವ ಚಳವಳಿ ಹೀಗೆ ಮುಂತಾದ ಚಳವಳಿಗಳ ಮುಂಚೂಣಿಯಲ್ಲಿ ಅವರು ಇರುತ್ತಿದ್ದರು. ಜಾತಿ ಮತ್ತು ವರ್ಗ ವ್ಯವಸ್ಥೆಯ ಅನಾಹುತಗಳ ಬಗ್ಗೆ ಅವರು ತಿಳಿದುಕೊಂಡಿದ್ದರು. ಹಿಂದೂ ಮುಸ್ಲಿಂ ಭಾವೈಕ್ಯಕ್ಕೆ ಧಕ್ಕೆ ಬಂದರೆ ದೇಶ ವಿನಾಶದ ದಾರಿ ಹಿಡಿಯುವುದು ಎಂಬುದರ ಬಗ್ಗೆ ಅವರಿಗೆ ಸ್ಪಷ್ಟ ಕಲ್ಪನೆ ಇತ್ತು. ಹೀಗಾಗಿ ದಲಿತರ ಕಷ್ಟಗಳ ಬಗ್ಗೆ ನೊಂದುಕೊಂಡಂತೆ ಬಡಮುಸ್ಲಿಮರ ಕಷ್ಟಗಳ ಬಗ್ಗೆಯೂ ನೊಂದುಕೊಂಡಿದ್ದರು. ತಮ್ಮ ಮಠದ ಪೂರ್ವಜರು ಮುಸ್ಲಿಮರಿಗೆ ಮಸೀದಿ ಕಟ್ಟಿಕೊಳ್ಳಲು ನಿವೇಶನ ನೀಡಿದ್ದು ಅವರಿಗೆ ಬಹಳ ಖುಷಿ ಕೊಡುತ್ತಿತ್ತು. ಅವರು ಅಂಥ ಕಾರ್ಯಕ್ರಮಗಳನ್ನೇ ಮುಂದುವರಿಸಿಕೊಂಡು ಬಂದರು. ಕನ್ನಡದ ಜಗದ್ಗುರು ಆದಂತೆ ಭಾವೈಕ್ಯದ ಜಗದ್ಗುರುಗಳೂ ಆದರು. ಎಲ್ಲ ಜಾತಿ ಜನಾಂಗಗಳ ಜೊತೆ ಅವರ ಸ್ಪಂದನ ಇತರ ಧರ್ಮಗಳ ಗುರುಗಳಿಗೆ ಮಾದರಿಯಾಗಿತ್ತು. ಅವರ ಈ ವಿಶಾಲ ಮನೋಭಾವದಿಂದಾಗಿ ಗದಗ ತೋಂಟದಾರ್ಯ ಮಠ ಸರ್ವಜನಾಂಗಗಳ ಶಾಂತಿಯ ಬೀಡಾಯಿತು.

ವಿಮೋಚನಾ ಸಂಸ್ಥೆಯ ಬಿ.ಎಲ್. ಪಾಟೀಲರು ಅಥಣಿಯ ಬಳಿ ದೇವದಾಸಿ ಮಕ್ಕಳಿಗಾಗಿ ವಸತಿಶಾಲೆ ಪ್ರಾರಂಭಿಸಲು ಇಳಕಲ್ ಅಪ್ಪಗಳ ಮತ್ತು ಸಿದ್ಧಲಿಂಗಸ್ವಾಮಿಗಳ ಪ್ರೋತ್ಸಾಹ ಮತ್ತು ಸಹಕಾರ ಮೂಲ ಪ್ರೇರಣೆಯಾಗಿದೆ.

ಇಳಕಲ್ ಮಹಾಂತಪ್ಪಗಳ ಬಗ್ಗೆ ಸಿದ್ಧಲಿಂಗ ಸ್ವಾಮಿಗಳಿಗೆ ಅಪಾರ ಗೌರವವಿತ್ತು. ‘ಮಹಾಂತಪ್ಪಗಳು ನಮ್ಮ ಕಮಾಂಡರ್ ಇನ್ ಚೀಫ್’ ಎಂದು ಅವರು ಸಭೆಯನ್ನುದ್ದೇಶಿಸಿ ಮಾತನಾಡುವುದಾಗ ಹೇಳುವುದನ್ನು ಮರೆಯುತ್ತಿರಲಿಲ್ಲ.

ಪೋಸ್ಕೊ ಉಕ್ಕಿನ ಕಾರ್ಖಾನೆ ಕಂಪನಿಗೆ ತಮ್ಮ ಪರಿಸರದ ರೈತರ ಜಮೀನು ಮಾರಾಟವಾಗುವುದನ್ನು ತಡೆಯುವಲ್ಲಿ ಈ ಜಗದ್ಗುರುಗಳು ಯಶಸ್ಸನ್ನು ಸಾಧಿಸಿದರು. ಕೆಲ ರೈತರು ಭೂಮಿ ಮಾರಿ ಶ್ರೀಮಂತರಾಗುವ ಕನಸು ಕಂಡಿದ್ದರು. ಭೂಮಿ ಮಾರಿದ ರೈತರ ಕೈಗೆ ಬಂಗಾರದ ತಟ್ಟೆ ಬರಬಹುದು, ಆದರೆ ಅವರ ಮಕ್ಕಳ ಕೈಯಲ್ಲಿ ಭಿಕ್ಷಾಪಾತ್ರೆ ಗ್ಯಾರಂಟಿ ಎಂಬ ಸತ್ಯವನ್ನು ಅರಿತಿದ್ದರಿಂದಲೇ ಅವರು ರೈತರ ಮತ್ತು ಭೂಮಿಯ ನಂಟನ್ನು ಗಟ್ಟಿಗೊಳಿಸಿದರು.

ಅವರ ಮತ್ತು ನನ್ನ ಸಂಬಂಧದ ನೆನಪುಗಳು ಜೀವನದುದ್ದಕ್ಕೂ ಅಚ್ಚಳಿಯದೆ ಉಳಿಯುವಂಥವು. ಅವರು ನನ್ನ ಬಗ್ಗೆ ತೋರಿಸಿದ ಮಾತೃಪ್ರೇಮ ಅಗಾಧವಾದುದು. ಎಡಪಂಥೀಯ ಧೋರಣೆಗಳೊಂದಿಗೆ ನನ್ನ ಸರ್ವಧರ್ಮಸಮಭಾವದ ನಿಲುವು ಅವರಿಗೆ ಹಿಡಿಸಿತ್ತು. ಇವೆಲ್ಲವನ್ನೂ ಮೇಳವಿಸಿಕೊಂಡು ಬಸವಮಾರ್ಗದಲ್ಲಿ ಮುನ್ನಡೆಯುವ ಪ್ರಯತ್ನ ಅವರಿಗೆ ಇನ್ನೂ ಹಿಡಿಸಿತ್ತು. ‘ನಿಮಗೆ ಬಸವಣ್ಣನ ಹುಚ್ಚು ಹಿಡಿದಿದೆ’ ಎಂದು ತಮಾಷೆ ಮಾಡುತ್ತಿದ್ದರು.

‘ಲಿಂಗಾಯತ ಸ್ವತಂತ್ರ ಧರ್ಮ ರ‍್ಯಾಲಿ’ಗಳು ನಡೆದಾಗ ನನ್ನನ್ನು ಲಿಂಗಾಯತರ ಮ್ಯಾಕ್ಸ್ ಮುಲ್ಲರ್ ಎಂದು ಸಂಬೋಧಿಸುವಾಗ ಮತ್ತು ಅನೇಕ ಕಡೆ ಸಭೆಗಳಲ್ಲಿ ಅವರ ಜೊತೆ ಭಾಗವಹಿಸಿದ ಸಂದರ್ಭದಲ್ಲಿ “ನಮ್ಮ ರಂಜಾನ್ ದರ್ಗಾ ವಿಶ್ವಮಾನವ” ಎಂದು ಪ್ರೀತಿಯಿಂದ ಹೇಳುವಾಗ, ಅಂಥ ಯೋಗ್ಯತೆ ಇಲ್ಲದ ನನಗೆ ಕಸಿವಿಸಿಯಾಗುತ್ತಿತ್ತು. ಅವರು ಮಾನವೀಯ ಸಮಾಜದ ಬಹುದೊಡ್ಡ ಕನಸುಗಾರರಾಗಿದ್ದರಿಂದ ಅಷ್ಟು ಇಷ್ಟು ಮುಂದುವರಿದಿದ್ದ ಜನರನ್ನು ಹೀಗೆ ಹುರಿದುಂಬಿಸುತ್ತಿದ್ದರು.

ನಾನು ಬಸವಪ್ರಣೀತ ಸಭೆಗಳಲ್ಲಿ ಭಾಗವಹಿಸುವುದಕ್ಕಾಗಿ ಧಾರವಾಡದಿಂದ ಗದಗ ದಾಟಿ ಹೋಗುವಾಗ ಅಥವಾ ಗದಗಿನ ಮೂಲಕ ಧಾರವಾಡಕ್ಕೆ ಬರುವಾಗ ಮಠಕ್ಕೆ ಹೋಗಿ ಅವರನ್ನು ಭೇಟಿಯಾಗುವುದು ವಾಡಿಕೆಯಾಗಿತ್ತು. ಒಂದು ಸಲ ಟ್ಯಾಕ್ಸಿ ಚಾಲಕ ಯಲ್ಲಪ್ಪನನ್ನು ಕರೆದುಕೊಂಡು ಹೋಗಿ ಭೇಟಿ ಮಾಡಿಸಿದೆ. ‘ನಾನು ಯಾವುದೇ ಕಾರ್ಯಕ್ರಮಕ್ಕೆ ಹೋದರೂ ಇವನನ್ನೇ ಕರೆದುಕೊಂಡು ಹೋಗುವೆ, ಬಹಳ ಕಾಳಜಿಯಿಂದ ಕಾರು ಓಡಿಸುತ್ತಾನೆ’ ಎಂದು ತಿಳಿಸಿದೆ. ಅವರು ಖುಷಿ ಪಟ್ಟರು. ತಮ್ಮ ಮುಂದಿದ್ದ ಭಕ್ತರು ಕೊಟ್ಟ ನೋಟಗಳನ್ನು ಕೂಡಿಸಿ ಅವನಿಗೆ ಕೊಟ್ಟರು. ‘ಯಲ್ಲಪ್ಪಾ ಇದು ಬಸವಸೇವೆ. ನೀನು ಪವಿತ್ರ ಕಾರ್ಯಮಾಡುತ್ತಿರುವಿ. ನಿನಗೆ ಒಳ್ಳೆಯದಾಗಲಿ’ ಎಂದು ಹರಸಿದರು. ಅವರು ತಮ್ಮ ಮುಂದಿರುವ ಹಣ, ಹಣ್ಣು ಹಂಪಲು ಮುಂತಾದವುಗಳನ್ನು ದರ್ಶನಕ್ಕೆ ಬಂದ ಮಕ್ಕಳಿಗೆ ಮತ್ತು ಬಡಜನರಿಗೆ ಕೊಡುತ್ತಿದ್ದರು. ಅವರು ಹಣವನ್ನು ಎಂದೂ ಮುಂದಿಟ್ಟುಕೊಂಡು ಕೂಡುತ್ತಿರಲಿಲ್ಲ.

ಅವರು ಬಹಳ ಕಷ್ಟಪಟ್ಟು ಮಠವನ್ನು ಬೆಳೆಸಿದರು. ಅವರು ಶ್ರಮಜೀವಿಗಳಂತೆ ಕಾರ್ಯ ಮಾಡಿದರು. ಯಾವುದೇ ಆರ್ಥಿಕ ಸೌಲಭ್ಯಗಳಿಲ್ಲದ ವೇಳೆ ಡಂಬಳದಿಂದ ಗದಗಿಗೆ ಮತ್ತು ಗದಗದಿಂದ ಡಂಬಳದ ವರೆಗೆ ಕಾಲ್ನಡಿಗೆಯಲ್ಲಿ ಸುತ್ತುತ್ತ, ಬಾವಿ ತೋಡುವಂಥ ಕಠಿಣ ಕಾಯಕ ಮಾಡಿದರು. ಜೊತೆಗಿದ್ದ ಭಕ್ತರ ಮತ್ತು ಆಳುಗಳು ಬಾವಿ ತೋಡಿ, ರಾತ್ರಿ ಸುಸ್ತಾಗಿ ಮಲಗಿದ್ದಾಗ ಅವರ ಅರವಿಗೆ ಬಾರದಂತೆ ಪಾದಗಳಿಗೆ ಔಷಧಿ ಹಚ್ಚುವುದನ್ನೂ ಮಾಡಿದರು! ಅವರು ನನ್ನ ದೃಷ್ಟಿಯಲ್ಲಿ ಕನ್ನಡದ ವಿವೇಕಾನಂದರೂ ಆಗಿದ್ದರು.

ನಾನು ಧಾರವಾಡದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಅಶೋಕ ಬರಗುಂಡಿ ಅವರು ಈ ವಿಚಾರವನ್ನು ಸ್ವಾಮೀಜಿಯವರ ಗಮನಕ್ಕೆ ತಂದರು. ಒಂದು ಲಕ್ಷ ರೂ. ಕಳುಹಿಸಲು ಶಿವಾನಂದ ಪಟ್ಟಣಶೆಟ್ಟರಿಗೆ ಸ್ವಾಮೀಜಿ ತಿಳಿಸಿದರು. ಶೆಟ್ಟರು ಒಂದು ಸಲ 50 ಸಾವಿರ ಮತ್ತು ಇನ್ನೊಂದು ಸಲ 25 ಸಾವಿರ ಕಳುಹಿಸಿದರು. ತದನಂತರ ರಾಷ್ಟ್ರೀಯ ಬಸವ ಪುರಸ್ಕಾರದಿಂದಾಗಿ 10 ಲಕ್ಷ ಬಂದದ್ದರಿಂದ ಸಮಸ್ಯೆ ಬಗೆಹರಿಯಿತು.

ನಾನು ವಿಧಾನ ಪರಿಷತ್ ಸದಸ್ಯನಾಗಿ ವಿಧಾನ ಸೌಧದ ಮೇಲ್ಮನೆಯಲ್ಲಿ ಬಸವಾದಿ ಶರಣರ ಕುರಿತು ಮಾತನಾಡಬೇಕು ಎಂಬ ಬಯಕೆ ಅವರದಾಗಿತ್ತು. ದೇವೇಗೌಡರಿಗೆ ಒಂದು ದೀರ್ಘ ಪತ್ರ ಬರೆದರು. ‘ನಿಮ್ಮದು ಜಾತ್ಯತೀತ ಪಕ್ಷ ನಮ್ಮದು ಜಾತ್ಯತೀತ ಧರ್ಮ. ಅದಕ್ಕಾಗಿ ಜಾತ್ಯತೀತ ವ್ಯಕ್ತಿ ರಂಜಾನ್ ದರ್ಗಾ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡುವುದು ಒಳ್ಳೆಯದು’ ಎಂದು ಮುಂತಾಗಿ ಬರೆದು, ಆ ಪತ್ರಕ್ಕೆ ಏಳು ಜನ ಪ್ರಮುಖ ಸ್ವಾಮಿಗಳ ಸಹಿ ಕೂಡ ಮಾಡಿಸಿದ್ದರು. ಚಿತ್ರದುರ್ಗದ ಶರಣರು, ನಾಗನೂರು ರುದ್ರಾಕ್ಷಿ ಮಠದ ಸ್ವಾಮೀಜಿ (ಈಗಿನ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು) ಮುಂತಾದವರು ಸ್ವಾಮಿಗಳು ಆ ಪತ್ರಕ್ಕೆ ಸಹಿ ಮಾಡಿದ್ದರು. ನನ್ನ ಆತ್ಮೀಯ ಮಿತ್ರ ಚಂದ್ರಶೇಖರ ವಸ್ತ್ರದ ಅವರಿಗೆ ಕಾರಿನ ವ್ಯವಸ್ಥೆ ಮಾಡಿ ಕಳುಹಿಸಿ ಕರ್ನಾಟಕದ ಮೂಲೆ ಮೂಲೆಗಳಲ್ಲಿರುವ ಸ್ವಾಮೀಜಿಗಳಿಂದ ಸಹಿ ಮಾಡಿಸಿದ್ದರು. ನಂತರ ವಸ್ತ್ರದ ಅವರು ಆ ಪತ್ರದೊಂದಿಗೆ ಬೆಂಗಳೂರಿಗೆ ಬಂದು ನನ್ನನ್ನು ಕರೆದುಕೊಂಡು ದೇವೇಗೌಡರ ಮನೆಗೆ ಹೋದರು. (ಮೊದಲೇ ತಿಳಿಸಿದ್ದರಿಂದ ನಾನು ಕಲಬುರಗಿಯಿಂದ ಬೆಂಗಳೂರಿಗೆ ಬಂದಿದ್ದೆ.) ಆಗ ಮೂರು ಎಂ.ಎಲ್.ಸಿ. ಸ್ಥಾನಗಳು ಖಾಲಿ ಇದ್ದವು. ಧರ್ಮಸಿಂಗ್ ಅವರು ಮುಖ್ಯಮಂತ್ರಿಗಳಾಗಿದ್ದರು. ಕುಮಾರಸ್ವಾಮಿ ಅವರು ಉಪ ಮುಖ್ಯಮಂತ್ರಿಗಳಾಗಿದ್ದರು. ಒಂದು ಸ್ಥಾನ ಕಾಂಗ್ರೆಸ್‌ಗೆ, ಇನ್ನೊಂದು ಸ್ಥಾನ ಜಾತ್ಯತೀತ ಜನತಾದಳಕ್ಕೆ, ಮೂರನೆಯ ಸ್ಥಾನ ಎರಡೂ ಪಕ್ಷಗಳು ಒಪ್ಪಿಕೊಳ್ಳುವ ಅಭ್ಯರ್ಥಿಗೆ ಎಂಬ ವಾತಾವರಣವಿತ್ತು. ಧರ್ಮಸಿಂಗ್ ಅವರು ನನ್ನ ಪರ ಇದ್ದರು. ದೇವೇಗೌಡರು ಸಮ್ಮತಿಸಿದರೆ ಸಮಸ್ಯೆ ಬಗೆಹರಿಯುವುದು ಎಂಬ ತರ್ಕದಿಂದ ಸ್ವಾಮೀಜಿ ಈ ಸಾಮೂಹಿಕ ಸಹಿಯ ಪತ್ರವನ್ನು ದೇವೇಗೌಡರಿಗೆ ತಲುಪಿಸುವ ವ್ಯವಸ್ಥೆ ಮಾಡಿದ್ದರು.

ಅವರು ಯೋಚಿಸಿದಂತೆಯೆ ಕ್ರಿಯೆಗಳು ಪ್ರಾರಂಭವಾದವು. ದೇವೇಗೌಡರ ಲಿಸ್ಟ್‌ನಲ್ಲಿ ಆರು ಜನರ ಹೆಸರುಗಳಿದ್ದವು. ನನ್ನ ಹೆಸರನ್ನು ಎಲ್ಲರಿಗಿಂತ ಮೇಲೆ ಬರೆದರು. ಆಮೇಲೆ ಶಕ್ತಿರಾಜಕೀಯ ಶುರುವಾಯಿತು. ಕುಮಾರಸ್ವಾಮಿ ಬಿಜೆಪಿ ಜೊತೆ ಸೇರಿ ಮುಖ್ಯಮಂತ್ರಿಯಾದರು. ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾದರು. ಮೂರನೆಯ ಸ್ಥಾನ ಇನ್ನೊಬ್ಬರ ಪಾಲಾಯಿತು. ಇದು ನನಗೆ ಮಹತ್ವದ್ದಲ್ಲ. ಆದರೆ ಸ್ವಾಮೀಜಿಯವರ ಆತ್ಮೀಯತೆ ಎಲ್ಲಕ್ಕಿಂತ ದೊಡ್ಡದಾಗಿತ್ತು.

ತೋಂಟದ ಸಿದ್ಧಲಿಂಗ ಮಹಾಸ್ವಾಮಿಗಳ ಅಂತಃಕರಣ ಮತ್ತು ಸಮಾಜಿಕ ನ್ಯಾಯದ ಪ್ರಜ್ಞೆ ಖಂಡಿತವಾಗಿಯೂ ನವಸಮಾಜದ ನಿರ್ಮಾಣಕ್ಕೆ ದಾರಿದೀಪವಾಗಿವೆ.