ಶಿಕ್ಷಣದ ಮೂಲಕವೇ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುದು ಅವರ ದೃಢನಿರ್ಧಾರವಾಗಿತ್ತು. ಸಂಚಾರ ಕಾಲದಲ್ಲಿ ಭಕ್ತರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ವಿದ್ಯಾಪ್ರಸಾರಕ್ಕೆ ವಿನಿಯೋಗಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದರು. ಈ ಶಿಕ್ಷಣದ ಸೌಲಭ್ಯವನ್ನು ಬೇರೆ ಧರ್ಮಗಳ ಬಡವರಿಗೂ ದೊರೆಯುವಂತೆ ನೋಡಿಕೊಂಡರು. ನಾಡಿನ ಬೇರೆ ಬೇರೆ ಕಡೆಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು.
ತಮ್ಮ ಬದುಕಿನುದ್ದಕ್ಕೂ ‘ಅರಿವನ್ನು ಪಸರಿಸುವುದೇ ಸ್ವಾಮಿಗಳ ಕಾಯಕ’ ಎನ್ನುತ್ತ ಶಿಕ್ಷಣಕ್ಕೆ ಆದ್ಯತೆ ಕೊಟ್ಟ ಜಯದೇವ ಜಗದ್ಗುರುಗಳ ೬೮ನೇ ವರ್ಷದ ಸ್ಮರಣೋತ್ಸವದ (ಅಕ್ಟೋಬರ್‌ ೨) ಸಂದರ್ಭದಲ್ಲಿ ಅವರ ಕುರಿತು ರಂಜಾನ್‌ ದರ್ಗಾ ಬರಹ ನಿಮ್ಮ ಓದಿಗೆ

“ಒಂದು ಮಠದ ಸ್ವಾಮಿ ಎಂದರೆ ಭಕ್ತ ಮಂಡಲಿಯಿಂದ ಚುನಾಯಿಸಲ್ಪಟ್ಟ ಅವರ ಒಬ್ಬ ಅಧ್ಯಕ್ಷ. ಹಾಗೆ ಚುನಾಯಿಸಲ್ಪಟ್ಟ ಆ ಸ್ವಾಮಿಗೆ ಸಮಾಜದ ಹಿತ ಸಾಧನೆಯಲ್ಲದೆ ಬೇರೆ ಉದ್ಯೋಗವಿಲ್ಲ. ಸ್ವಾಮಿಗಳಿಗೆ ದಕ್ಷಿಣೆ ಕೊಡುವುದೊಂದು ಧರ್ಮಕಾರ್ಯವೆಂಬ ನಂಬಿಕೆ ಇದೆ. ಸ್ವಾಮಿಗಳು ವೈರಾಗ್ಯಶೀಲರು. ಆದುದರಿಂದಲೇ ಭಕ್ತರಿಂದ ಸಂದಾಯವಾಗಿ, ತಮಗೆ ಬೇಡವಾದ ಆ ದಕ್ಷಿಣೆಯ ಹಣವನ್ನು ಸ್ವಾಮಿಗಳು ಬಡಬಗ್ಗರಿಗೆ ಹಂಚುತ್ತಾರೆ. ಅವರಿಂದ ಸಮಾಜದಲ್ಲಿ ಸೌಖ್ಯ ಉಂಟಾಗುತ್ತದೆ. ಇದೇ ಶಿವಶರಣರ ತತ್ತ್ವ. ಸಮತಾವಾದದ ತತ್ತ್ವ. ಈಗ ಅರ್ಪಿಸಿರುವ ಬಿನ್ನವತ್ತಳೆಯಲ್ಲಿ ನಮ್ಮ ಔದಾರ್ಯವನ್ನು ಕೊಂಡಾಡಿದ್ದೀರಿ. ಉದಾರವಾಗಿರುವುದು ನಮ್ಮ ಕರ್ತವ್ಯ. ಮನುಷ್ಯನು ದಯಾಶೀಲನಾದಾಗಲೇ ಪರಿಪೂರ್ಣ ಮಾನವನಾಗುವನು. ನಾವು ಮಾಡಿರುವ ಈ ಅತ್ಯಲ್ಪ ಸೇವೆಯನ್ನು ನೀವು ಅಧಿಕವಾಗಿ ವರ್ಣಿಸಿದ್ದೀರಿ ಅದರಿಂದ ನಮಗೆ ಚಿನ್ನದ ಶೂಲಕ್ಕೇರಿದಂತಾಗಿದೆ.”

1937ನೇ ಸಪ್ಟೆಂಬರ್ 14ರಂದು ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಜಯದೇವ ಜಗದ್ಗುರುಗಳ ದರ್ಶನಕ್ಕೆಂದು ಚಿತ್ರದುರ್ಗ ಬೃಹನ್ಮಠಕ್ಕೆ ಆಗಮಿಸಿದ್ದರು. ಆಗ ಮೈಸೂರಲ್ಲಿ ಪೆಥಾಲಾಜಿ ಲ್ಯಾಬರೋಟರಿ ಕಟ್ಟಡ ಕಟ್ಟಲು ಜಗದ್ಗುರುಗಳು 40 ಸಾವಿರ ರೂಪಾಯಿ ದೇಣಿಗೆ ಕೊಟ್ಟರು. ತದನಂತರ 1938ನೇ ಫೆಬ್ರುವರಿ 24ರಂದು ಪ್ರಯೋಗಾಲಯದ ಶಂಕುಸ್ಥಾಪನೆಯ ಸಂದರ್ಭದಲ್ಲಿ ಗುರುಗಳಿಗೆ ಬಿನ್ನವತ್ತಳೆ ಅರ್ಪಿಸಿದ ಸಂದರ್ಭದಲ್ಲಿ ಅದಕ್ಕೆ ಉತ್ತರವಾಗಿ ಅವರು ಹೇಳಿದ ಮೇಲಿನ ಮಾತುಗಳು ಸುವರ್ಣಾಕ್ಷರಗಳಲ್ಲಿ ಬರೆದಿಡುವಂಥವುಗಳಾಗಿದ್ದು ಅವರ ವ್ಯಕ್ತಿತ್ವಕ್ಕೆ ಕನ್ನಡಿ ಹಿಡಿಯುತ್ತವೆ.
“ಪ್ರಾಚೀನ ಮಠಗಳಲ್ಲೊಂದರ ಪೀಠಾಧಿಪತಿಗಳಾದ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮಿಗಳವರು . .. ಧನಸಾಹಾಯ ಮಾಡಿರುವುದು ಯುಕ್ತವೇ ಆಗಿದೆ. ಶ್ರೀಮಠದಿಂದ (ಮೈಸೂರು ಸಂಸ್ಥಾನದಲ್ಲಿ) ಧರ್ಮಾರ್ಥವಾಗಿ ಸ್ಥಾಪಿತವಾಗಿರುವ ಸಂಸ್ಥೆಗಳು ಅನೇಕ. ಈ ಕಾರ್ಯಗಳಿಗಾಗಿ ಶ್ರೀಮಠದಿಂದ ವಿನಿಯೋಗವಾಗಿರುವ ಧನವು ಹದಿನೆಂಟು ಲಕ್ಷ ರೂಪಾಯಿಗಳೆಂದು ನಮ್ಮ ಅವಗಾಹನೆಗೆ ಬಂದಿದೆ” ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಶಂಕುಸ್ಥಾಪನಾ ಸಮಾರಂಭದಲ್ಲಿ ತಿಳಿಸಿದರು.

ಆ ಕಟ್ಟಡದ ಶಂಕುಸ್ಥಾಪನಾ ಸಮಾರಂಭಕ್ಕೆ ಬರುವ ಶ್ರೀಗಳ ಮತ್ತು ಅವರ ಪರಿವಾರದವರಿಗಾಗಿ ಮೈಸೂರಲ್ಲಿ ವಾಸದ ವ್ಯವಸ್ಥೆ ಮಾಡಲಾಗಿತ್ತು. ಸಮಾರಂಭದ ಹಿಂದಿನ ದಿನ ಮೆರವಣಿಗೆಯ ಭರ್ಜರಿ ವ್ಯವಸ್ಥೆ ನಡೆಯಿತು. ಶಂಕುಸ್ಥಾಪನೆಯ ಸ್ಥಳಕ್ಕೆ ಶ್ರೀಗಳು ಅಡ್ಡಪಲ್ಲಕ್ಕಿ ಮೆರವಣಿಗೆಯೊಂದಿಗೆ ಹೋಗಬೇಕಿತ್ತು. ಆದರೆ ಮಠದ ಆನೆಗಳು ಬರಲೇ ಇಲ್ಲ. ಆನೆ ಇಲ್ಲದೆ ಉತ್ಸವಕ್ಕೆ ಮೆರಗು ಬರದು. ಇದು ಬೃಹನ್ಮಠದ ಘನತೆಗೆ ಚ್ಯುತಿ ಎಂದು ಭಕ್ತರು ಮತ್ತು ಉಸ್ತುವಾರಿ ವಹಿಸಿಕೊಂಡಿದ್ದ ಹಿರಿಯರು ಚಿಂತೆಗೀಡಾದರು. ಬೇರೆ ಕಡೆಯಿಂದ ಆನೆಗಳನ್ನು ತರಿಸುವ ವ್ಯವಸ್ಥೆ ಮಾಡಲು ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ಈ ವಿಚಾರ ಮಹಾರಾಜರ ಕಿವಿಗೂ ಬಿತ್ತು. ಉತ್ಸವದ ಹೊತ್ತಿಗೆ ಸರಿಯಾಗಿ ಮೈಸೂರು ಸಂಸ್ಥಾನದ ಆನೆ, ಕುದುರೆ, ಒಂಟೆಗಳನ್ನು ಕಳುಹಿಸಿಕೊಟ್ಟರು. ಭಕ್ತರು ಅಷ್ಟೊತ್ತಿಗಾಗಲೇ ಆನೆಗಳ ಬದಲಿಗೆ ನೂರು ನಂದೀಧ್ವಜಗಳ ವ್ಯವಸ್ಥೆ ಮಾಡಿದ್ದರಿಂದ ಎಲ್ಲ ಸೇರಿ ಹಿಂದೆಂದಿಗಿಂತಲೂ ವೈಭದಿಂದ ಶ್ರೀಗಳ ಮೆರವಣಿಗೆ ನಡೆಯಿತು.

ಸಾಂಪ್ರದಾಯಿಕವಾಗಿ ಬಂದ ರೀತಿರಿವಾಜುಗಳು ‘ಧರ್ಮಕ್ಕೆ ಸಂಬಂಧಿಸಿದವುಗಳು’ ಎಂಬುದರ ಬಗ್ಗೆ ಶ್ರೀಗಳಿಗೆ ಅಪಾರವಾದ ನಂಬಿಕೆ ಇತ್ತು. ಅದನ್ನು ಉಳಿಸಿಕೊಳ್ಳುವುದಷ್ಟೇ ತಮ್ಮ ಕರ್ತವ್ಯ ಎಂದು ಅವರು ಭಾವಿಸಿದ್ದರು. ಆದರೆ ಅವರು ಜಾತಿ ಮತ್ತು ವರ್ಣವ್ಯವಸ್ಥೆಗೆ ವಿರುದ್ಧವಾಗಿದ್ದರು.

ಆ ಭವ್ಯ ಕಟ್ಟಡ ನಿರ್ಮಾಣವಾದನಂತರ ಮಹಾರಾಜರು ಸ್ವಾಮಿಗಳ ಗೌರವಾರ್ಥವಾಗಿ ಅದಕ್ಕೆ “ಜಯದೇವ ಮುರುಘರಾಜೇಂದ್ರ ಪೆಥಾಲಾಜಿ ಲ್ಯಾಬರೋಟರೀಸ್” ಎಂದು ಹೆಸರಿಟ್ಟರು.

(1937ನೇ ಸಪ್ಟೆಂಬರ್ 14ರಂದು ಮೈಸೂರು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ ಅವರು ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳ ದರ್ಶನಕ್ಕೆಂದು ಚಿತ್ರದುರ್ಗ ಬೃಹನ್ಮಠಕ್ಕೆ ಆಗಮಿಸಿದಾಗ ತೆಗೆದ ಚಿತ್ರ.)

“ಮಹಾ ಸ್ವಾಮಿಗಳವರು ಮಾಡಿರತಕ್ಕ ಕಾರ್ಯಗಳು ಮೈಸೂರು ಸಂಸ್ಥಾನಕ್ಕೆ ಕೀರ್ತಿಯನ್ನು ತರತಕ್ಕವುಗಳಾಗಿವೆ” ಎಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕೊಂಡಾಡಿದ್ದಾರೆ.

ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು 1937ನೇ ಸೆಪ್ಟೆಂಬರ್ 14ರಂದು ದಿವಾನ್ ಮಿರ್ಜಾ ಇಸ್ಮಾಯಿಲ್ ಅವರ ಜೊತೆ ಬೃಹನ್ಮಠಕ್ಕೆ ಆಗಮಿಸಿದಾಗ ಆ ವೈಭವವನ್ನು ನೋಡಲು 30 ಸಾವಿರಕ್ಕೂ ಹೆಚ್ಚಿನ ಭಕ್ತ ಸಮೂಹ ಸೇರಿತ್ತು. ಮಹಾರಾಜರ ಭೇಟಿಯ ಸಂದರ್ಭದಲ್ಲಿ ಅವರ ಜೊತೆ ಕುಳಿತುಕೊಳ್ಳುವ ಶ್ರೀಗಳು ರೇಷ್ಮೆಯ ಜರತಾರಿ ಕಪನಿ ಧರಿಸಬೇಕೆಂಬ ಬಯಕೆಯಿಂದ ಶ್ರೀಮಂತ ಭಕ್ತ ಚಿಗಟೇರಿ ಮುರಿಗೆಪ್ಪನವರು ಆ ಬೆಲೆಯುಳ್ಳ ವಸ್ತು ಮುಂತಾದವುಗಳನ್ನು ತಂದಿದ್ದರು. ಆದರೆ ಶ್ರೀಗಳು ಅವೆಲ್ಲವುಗಳನ್ನು ನಯವಾಗಿ ನಿರಾಕರಿಸಿದರು. ಅವರು ದಿನನಿತ್ಯದ ಖಾದಿ ಬಟ್ಟೆಯ ಕಾವಿ ಕಪನಿಯನ್ನೇ ಧರಿಸಿ ಮಹಾರಾಜರ ಜೊತೆ ಕುಳಿತರು. ಸರಳತೆಯೆ ಅವರ ದಿವ್ಯಾಭರಣವಾಗಿತ್ತು. ಆದರೆ ಬೃಹನ್ಮಠದ ವೈಭವಕ್ಕೆ ಮತ್ತು ಘನತೆಗೆ ಯಾವುದೇ ಚ್ಯುತಿ ಬರಬಾರದು ಎಂಬುದು ಅವರ ದೃಢ ನಿಲುವಾಗಿತ್ತು.

ಶ್ರೀಮನ್ಮಹಾರಾಜ ನಿರಂಜನ ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು (1874-1956) 82 ವರ್ಷಗಳವರೆಗೆ ಜೀವಿಸಿದ್ದರು. ಬಾಲ್ಯದಿಂದ ಅಂತ್ಯದವರೆಗೆ ಆದಂಥ ಅವರ ವ್ಯಕ್ತಿತ್ವ ವಿಕಸನ ಅನನ್ಯವಾಗಿದೆ. 19ನೇ ಶತಮಾನದ ಉತ್ತರಾರ್ಧ ಮತ್ತು 20ನೇ ಶತಮಾನದ ಪೂರ್ವಾರ್ಧದಲ್ಲಿ ಬದುಕಿದ್ದ ಅವರು ಆ ಕಾಲದ ಸಾಮಾಜಿಕ ಮತ್ತು ಧಾರ್ಮಿಕ ಪರಿಧಿಯೊಳಗೆ ತಮ್ಮ ಪ್ರಭಾವಲಯವನ್ನು ಸೃಷ್ಟಿಸಿ ಲೋಕಕಲ್ಯಾಣಕ್ಕಾಗಿ ಸಾಧಿಸಿದ್ದು ಇತರ ಸ್ವಾಮಿಗಳಿಗೆ ಆದರ್ಶವಾಗಿದೆ.

ಅವರೆಂದೂ ತಮ್ಮ ಸಾಧನೆ ಬಗ್ಗೆ ಹೇಳಿಕೊಳ್ಳಲಿಲ್ಲ. ತಮ್ಮ ಕಾಲದ ಮಾಧ್ಯಮಗಳ ಮೂಲಕ ಡಂಗುರ ಸಾರಲಿಲ್ಲ. ಯಾರ ಮೇಲೂ ಪ್ರಭಾವ ಬೀರಲು ಪ್ರಯತ್ನಿಸಲಿಲ್ಲ. ಬಾಹ್ಯ ವ್ಯಕ್ತಿತ್ವಕ್ಕೆ ಮೆರುಗು ನೀಡುವ ಪ್ರಯತ್ನವನ್ನೂ ಮಾಡಲಿಲ್ಲ. ‘ಅರಿವನ್ನು ಪಸರಿಸುವುದೇ ಸ್ವಾಮಿಗಳ ಕಾಯಕ’ ಎಂಬುದು ಅವರ ದೃಢ ನಿರ್ಧಾರವಾಗಿತ್ತು. ಸರಳ ಸಹಜ ವ್ಯಕ್ತಿತ್ವದ ಅವರ ಸೌಂದರ್ಯ ನಿಸರ್ಗದತ್ತವಾಗಿತ್ತು. ತಮ್ಮ ಉದಾತ್ತ ವ್ಯಕ್ತಿತ್ವದಿಂದಾಗಿ ಅವರು ತೇಜಃಪುಂಜವಾಗಿ ಕಾಣುತ್ತಿದ್ದರು.

ಕೊಪ್ಪಳದ ಬಳಿಯ ಬಿನ್ನಾಳ ಗ್ರಾಮದಲ್ಲಿನ ಹಿರೇಮಠದ ಚನ್ನಬಸವಯ್ಯ ಮತ್ತು ಬೋರಾಂಬೆಯ ಮಗನಾಗಿ 1874ನೇ ಆಗಸ್ಟ್ 27ರಂದು ಜನಿಸಿದ ಅವರ ಮೊದಲ ಹೆಸರು ಚನ್ನವೀರದೇವರು. ಗದುಗಿನಲ್ಲಿ ಅವರು ಪ್ರಾಥಮಿಕ ವಿದ್ಯಾಭ್ಯಾಸ ಮುಗಿಸಿದ ನಂತರ ಸಂಕಷ್ಟಗಳ ಮಧ್ಯೆಯೆ ಕಾಶಿಯ ಕ್ವೀನ್ಸ್ ಸಂಸ್ಕೃತ ವಿದ್ಯಾಪೀಠ ಸೇರಿ ವೇದಾಗಮಗಳ ಜ್ಞಾನ ಸಂಪಾದನೆ ಮಾಡಿ “ಜಯದೇವ ಪ್ರಶಸ್ತಿ”ಯೊಂದಿಗೆ ಹಿಂದಿರುಗಿದಾಗ ವಾರದ ಮಲ್ಲಪ್ಪನವರ ಮತ್ತು ಅಥಣಿ ಶಿವಯೋಗಿಗಳ ಪ್ರೀತಿಗೆ ಪಾತ್ರರಾದರು.

ಚಿತ್ರದುರ್ಗ ಬೃಹನ್ಮಠದ ಜಗದ್ಗುರು ಮುಪ್ಪಿನೇಂದ್ರ ಮಹಾಸ್ವಾಮಿಗಳು ಲಿಂಗೈಕ್ಯವಾದ ನಂತರ ಆ ಜಗದ್ಗುರು ಪೀಠಕ್ಕೆ ಹಾನಗಲ್ ಕುಮಾರಸ್ವಾಮಿಗಳು ಮತ್ತು ಚನ್ನವೀರದೇವರ ಮಧ್ಯೆ ಚುನಾವಣೆ ನಡೆಯುವ ಪ್ರಸಂಗ ಎದುರಾಯಿತು. ಚನ್ನವೀರದೇವರು ಜಯಶಾಲಿಗಳಾದರು. ಆ ಚುನಾವಣೆ ನಡೆದ ಸಂದರ್ಭದಲ್ಲಿ ಅವರು ಬ್ಯಾಡಗಿಯಲ್ಲಿದ್ದರು. ವಾರದ ಮಲ್ಲಪ್ಪನವರು ಅವರ ಹೆಸರನ್ನು ಸೂಚಿಸಿದ್ದರು!

ಅವರಿಗೆ ಯಾವುದೇ ಸ್ಥಾನದ ಬಗ್ಗೆ ಮಮಕಾರವಿರಲಿಲ್ಲ. ಆದರೆ ಬಂದದ್ದನ್ನು ನಿಭಾಯಿಸುವ ಸಾಮರ್ಥ್ಯವಿತ್ತು. ಹೀಗೆ ಚನ್ನವೀರದೇವರು ಪೀಠಾಧ್ಯಕ್ಷರಾಗಿ ಜಯದೇವ ಮಹಾಸ್ವಾಮಿಗಳಾದ ನಂತರ ಪ್ರಾರಂಭವಾದ ಧರ್ಮಸೇವೆ ಮತ್ತು ಸಮಾಜಸೇವೆ 1956ರಲ್ಲಿ ಲಿಂಗೈಕ್ಯವಾಗುವವರೆಗೂ ಮುಂದುವರಿಯಿತು.

1903ನೇ ನವೆಂಬರ್ 3 ರಂದು ಶ್ರೀಗಳಿಗೆ ಚಿತ್ರದುರ್ಗ ಬೃಹನ್ಮಠದ ನಿರಾಭಾರಿ ಚರಪಟ್ಟಾಧಿಕಾರ ದೀಕ್ಷೆಯಾಯಿತು. ನಂತರ ಅವರು ನವೆಂಬರ್ 5ರಂದು ಪೀಠದ ಪರಂಪರೆಯ ಸಂಕೇತಗಳಾದ ಶಿಖಾ ಶೈಲಗಳನ್ನು ಧರಿಸಿ ‘ಶ್ರೀ ಮನ್ಮಮಹಾರಾಜ ನಿರಂಜನ ಜಗದ್ಗುರು ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳು’ ಎಂಬ ಹೆಸರು ವಿಶೇಷಣಗಳೊಂದಿಗೆ 24ನೇ ಮಠಾಧೀಶರಾಗಿ ಶೂನ್ಯಸಿಂಹಾಸನಾರೋಹಣ ಮಾಡಿದರು.

ಶಿಕ್ಷಣವೇ ಎಲ್ಲ ಸಾಮಾಜಿಕ ಸಮಸ್ಯೆಗಳನ್ನು ನಿವಾರಿಸುವ ತಾಯಿಬೇರು. ಆ ಮೂಲಕವೇ ಮನುಷ್ಯ ತನ್ನ ಸಾಮಾಜಿಕ ವ್ಯಕ್ತಿತ್ವ ರೂಪಿಸಿಕೊಂಡು ಕಾಲದ ಸಮಸ್ಯೆಗಳನ್ನು ಎದುರಿಸುವ ಸಾಮರ್ಥ್ಯ ಹೊಂದುತ್ತಾನೆ ಎಂಬುದು ಅವರ ಚಿಂತನಾಕ್ರಮವಾಗಿತ್ತು. ಆರ್ಥಿಕ ಪ್ರಾಬಲ್ಯ, ವ್ಯವಹಾರ ಜ್ಞಾನ ಮತ್ತು ಹಕ್ಕುಗಳ ಪ್ರತಿಪಾದನೆಗೆ ಬೇಕಾದ ಕಾನೂನನ್ನು ಅರ್ಥೈಸಿಕೊಳ್ಳಲು ಆಧುನಿಕ ಶಿಕ್ಷಣ ಅವಶ್ಯ ಎಂಬುದನ್ನು ಅವರು ಮನಗಂಡು, ಅವುಗಳ ಸಾಧನೆಯಲ್ಲಿ ಮಠಗಳ ಪಾತ್ರವೇನು ಎಂಬುದನ್ನು ಬಾಯಿಮಾತಿನಿಂದ ತಿಳಿಸದೆ ಕೃತಿಯಲ್ಲಿ ಸಾಧಿಸಿ ತೋರಿಸಿದರು.

ಶ್ರೀಗಳು ಸಂಸ್ಕೃತ ಪಂಡಿತರಾಗಿದ್ದೂ ಕನ್ನಡದ ನೆಲ, ಭಾಷೆ ಮತ್ತು ಸಂಸ್ಕೃತಿಗಳ ಬಗ್ಗೆ ಅಪಾರವಾದ ಕಾಳಜಿ ಹೊಂದಿದ್ದರು. 1938ನೇ ಮೇ 24ರಂದು ಕರ್ನಾಟಕ ಏಕೀಕರಣ ಪರಿಷತ್ತಿನ ಏಳನೆಯ ಸಮ್ಮೇಳನದ ಉದ್ಘಾಟನೆ ಮಾಡುವ ಸಂದರ್ಭದಲ್ಲಿ ಅವರು ಆಡಿದ ಮಾತುಗಳು ಇಂದಿಗೂ ಸ್ಫೂರ್ತಿದಾಯಕವಾಗಿವೆ. “ನಮ್ಮ ಕುಲ ಕನ್ನಡ, ನಮ್ಮ ಸಂಸ್ಕೃತಿ ಕನ್ನಡ” ಎಂದು ಅವರು ಹೇಳಿದ್ದು ರೋಮಾಂಚನಕಾರಿಯಾಗಿದೆ. “ಕರ್ನಾಟಕ ಏಕೀಕರಣವು ಕನ್ನಡಿಗರ ಜೀವಾಳವಾಗಿರುವುದರಿಂದ ಅದನ್ನು ಸಾಧಿಸಲೇಬೇಕು” ಎಂದು ಕನ್ನಡಿಗರಿಗೆ ಸ್ಫೂರ್ತಿ ತುಂಬಿದ ಅವರು ಕರ್ನಾಟಕ ಏಕೀಕರಣಕ್ಕೆ ಬೆಂಬಲ ವ್ಯಕ್ತಪಡಿಸಿದರು..

ಕನ್ನಡ ಸಾಹಿತ್ಯ ಪರಿಷತ್ತಿನ ಬೆಳ್ಳಿಹಬ್ಬದ ಸಮಾರಂಭದಲ್ಲಿ ಅವರು ಮಾತನಾಡುತ್ತ “ಜಾತಿ ಮತ ಪಂಥ ಪಕ್ಷ ಪ್ರಾಂತಗಳ ಭಿನ್ನ ಭೇದಗಳಿಲ್ಲದೆ ಕನ್ನಡ ಕುಲದವರೆಲ್ಲರೂ ಒಟ್ಟುಗೂಡಿ ಕನ್ನಡ ದೇವಿಯ ಸೇವೆಯನ್ನು ಹೆಚ್ಚು ಹೆಚ್ಚಾಗಿ ನಡೆಸಿರಿ” ಎಂದು ಕರೆ ನೀಡಿದರು.

(ಜಗದ್ಗುರು ಜಯದೇವ ಮುರುಘರಾಜೇಂದ್ರ ಸ್ವಾಮಿಗಳ ಜೋಡಾನೆ ಅಂಬಾರಿ ಉತ್ಸವ ಬ್ಯಾಡಗಿ)

ಮಹಾರಾಜರ ಭೇಟಿಯ ಸಂದರ್ಭದಲ್ಲಿ ಅವರ ಜೊತೆ ಕುಳಿತುಕೊಳ್ಳುವ ಶ್ರೀಗಳು ರೇಷ್ಮೆಯ ಜರತಾರಿ ಕಪನಿ ಧರಿಸಬೇಕೆಂಬ ಬಯಕೆಯಿಂದ ಶ್ರೀಮಂತ ಭಕ್ತ ಚಿಗಟೇರಿ ಮುರಿಗೆಪ್ಪನವರು ಆ ಬೆಲೆಯುಳ್ಳ ವಸ್ತು ಮುಂತಾದವುಗಳನ್ನು ತಂದಿದ್ದರು. ಆದರೆ ಶ್ರೀಗಳು ಅವೆಲ್ಲವುಗಳನ್ನು ನಯವಾಗಿ ನಿರಾಕರಿಸಿದರು. ಅವರು ದಿನನಿತ್ಯದ ಖಾದಿ ಬಟ್ಟೆಯ ಕಾವಿ ಕಪನಿಯನ್ನೇ ಧರಿಸಿ ಮಹಾರಾಜರ ಜೊತೆ ಕುಳಿತರು. ಸರಳತೆಯೆ ಅವರ ದಿವ್ಯಾಭರಣವಾಗಿತ್ತು.

ಧರ್ಮರಕ್ಷಣೆ ಮತ್ತು ಧರ್ಮದ ಅನುಯಾಯಿಗಳ ಹಿತರಕ್ಷಣೆಗಾಗಿ ಇಂಥ ಸಾಧನೆ ಮಾಡಲು ಆದರ್ಶ ವ್ಯಕ್ತಿತ್ವ ಮತ್ತು ಸಾಮಾಜಿಕ ನ್ಯಾಯದ ಪರಿಜ್ಞಾನದೊಂದಿಗೆ ವ್ಯಹಾರಜ್ಞಾನವೂ ಅವಶ್ಯವಾಗಿ ಬೇಕು. ಇಂಥ ವ್ಯಕ್ತಿತ್ವವನ್ನು ಅವರು ಪಡೆದಿದ್ದರು. ಅದು ತೋರಿಕೆಯ ವ್ಯಕ್ತಿತ್ವವಾಗಿರಲಿಲ್ಲ. ದೇವರು, ಧರ್ಮ ಮತ್ತು ಸುಸಂಸ್ಕೃತ ಸಮಾಜಕ್ಕೆ ಹೇಳಿ ಮಾಡಿಸಿದಂಥ ಸಹಜ ವ್ಯಕ್ತಿತ್ವ ಅವರದಾಗಿತ್ತು. ಇಂಥ ಅವರ ನಿರ್ಮಲ ವ್ಯಕ್ತಿತ್ವಕ್ಕೆ ಮಾರುಹೋಗಿ ಬೇರೆ ಸಮಾಜ ಮತ್ತು ಧರ್ಮಗಳವರೂ ಬೃಹನ್ಮಠದ ಭಕ್ತರಾಗತೊಡಗಿದರು.

ಅವರು ಉತ್ತರ ಮತ್ತು ದಕ್ಷಿಣ ಕರ್ನಾಟಕದ ಸಂಗಮದಂತೆ ಇದ್ದರು. ಸಮಾಜದರ್ಶನಕ್ಕಾಗಿ ಹೊಸ ಹೊಸ ಊರುಗಳನ್ನು ಪ್ರವೇಶಿಸುವಾಗ ಮಹಾಸಂಸ್ಥಾನದ ಬಿರುದಾವಳಿಗಳೊಂದಿಗೆ ಅಡ್ಡಪಲ್ಲಕ್ಕಿ ಉತ್ಸವವು ವಿಜೃಂಭಣೆಯಿಂದ ನಡೆಯುತ್ತಿತ್ತು. ಮಕರತೋರಣ, ವ್ಯಾಸ ತೋಳಿನಿಂದ ಕೂಡಿದ ನಂದೀಧ್ವಜ, ಪಂಚದೀವಟಿಗೆ, ಚಂದ್ರವಾದ್ಯ, ಸೂರ್ಯವಾದ್ಯ ಮುಂತಾದ 72 ಬಿರುದುಗಳ ಸಮೇತ ಈ ಮೆರವಣಿಗೆ ನಡೆಯುತ್ತಿತ್ತು. ಈ ವೈಭವದ ಮಧ್ಯೆ ಕೂಡ ಅವರ ಸರಳ ವೇಷಭೂಷಣದಲ್ಲಿ ಯಾವುದೇ ಬದಲಾವಣೆಯಾಗುತ್ತಿರಲಿಲ್ಲ. ಈ ಛತ್ರ ಚಾಮರ ಬಿರುದು ಬಾವುಲಿ ಖಿಲ್ಲತ್ತು ಮುಂತಾದ ಮೆರವಣೆಗೆ ವೈಭವಗಳೆಲ್ಲ ಚಿನ್ಮೂಲಾದ್ರಿಯ ಬೃಹನ್ಮಠಕ್ಕೆ ಸಂಬಂಧಿಸಿದವುಗಳು, ತಾವು ನಿಮಿತ್ತ ಮಾತ್ರ ಎಂಬ ಭಾವನೆ ಅವರದಾಗಿತ್ತು.

ಎಲ್ಲ ವೈಭವಗಳ ಮಧ್ಯೆಯೂ ಅವರು ನೀರಿನಲ್ಲಿರುವ ಕಮಲದ ಎಲೆಯ ಹಾಗೆ, ಐಹಿಕ ಜಗತ್ತಿನಲ್ಲಿ ಪವಿತ್ರವಾಗಿ ಇದ್ದರು ಎಂಬುದೇ ಅವರ ಘನವ್ಯಕ್ತಿತ್ವದ ಮಹತ್ವ. ಅವರು ಯಾವುದೇ ಕ್ರಾಂತಿಕಾರಿ ನಿಲುವುಗಳನ್ನು ಘೋಷಿಸದೆ ಶಿಕ್ಷಣಕ್ರಾಂತಿ ಮಾಡುತ್ತ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಭಾವೈಕ್ಯದ ಕ್ರಿಯೆಯಲ್ಲಿ ಕೊನೆಯವರೆಗೂ ತಲ್ಲೀನರಾಗಿದ್ದರು.

ಅವರ ಜೀವಕಾರುಣ್ಯ ಧರ್ಮಾತೀತವಾಗಿತ್ತು. ಸರ್ವಧರ್ಮ ಸಮಭಾವ ಅವರ ಮನದಲ್ಲಿ ಹಾಸುಹೊಕ್ಕಾಗಿತ್ತು. ಅವರು ದಲಿತೋದ್ಧಾರದ ಬಗ್ಗೆ ದೊಡ್ಡ ದೊಡ್ಡ ಮಾತುಗಳನ್ನಾಡಲಿಲ್ಲ. ಆದರೆ 1934ರಲ್ಲಿ ಹಾವೇರಿಯಲ್ಲಿದ್ದ ಅವರನ್ನು ಗಾಂಧೀಜಿಯವರು ಭೇಟಿಯಾದಾಗ, ದಲಿತರು ಹೇಗೆ ಮುಂದೆ ಬರಬೇಕು ಎಂಬುದರ ಬಗ್ಗೆ ತಮ್ಮ ಖಚಿತವಾದ ನಿಲುವನ್ನು ತಿಳಿಸಿದರು. ದಲಿತರಿಗೆ ಶ್ರೀಗಳು ಚಿತ್ರದುರ್ಗ ಬೃಹನ್ಮಠದ ಬಾಗಿಲನ್ನು ತೆರೆದಿದ್ದರ ಬಗ್ಗೆ ಗಾಂಧೀಜಿ ಅವರಿಗೆ ಈ ಭೇಟಿಯ ಮೊದಲೇ ಗೊತ್ತಿತ್ತು. ಆ ಕುರಿತು 1933ನೇ ಏಪ್ರಿಲ್ 6 ರಂದು ದಾವಣಗೆರೆಯ ‘ಆದಿ ಕರ್ನಾಟಕ ಸಹಾಯ ಸಂಘ’ದ ಕಾರ್ಯದರ್ಶಿಗಳಿಗೆ ಬರೆದ ಪತ್ರದಲ್ಲಿ ಗಾಂಧೀಜಿಯವರು ತಿಳಿಸಿದ್ದರು.

ಶಿಕ್ಷಣ ಮತ್ತು ಸ್ವಾವಲಂಬನೆಯ ಮೂಲಕ ಅಂಧಶ್ರದ್ಧೆಯ ವಿರುದ್ಧದ ಅರಿವಿನಿಂದ ಬರುವ ಸಂಸ್ಕಾರಗಳೇ ದಲಿತರನ್ನು ಮತ್ತು ಇತರೆ ತುಳಿತಕ್ಕೊಳಗಾದವರನ್ನು ಮೇಲಕ್ಕೆತ್ತುವವು ಎಂಬುದರ ಬಗ್ಗೆ ಶ್ರೀಗಳಿಗೆ ಅಚಲ ವಿಶ್ವಾಸವಿತ್ತು.

“ವೀರಶೈವರಲ್ಲಿ (ಲಿಂಗಾಯತರಲ್ಲಿ) ನಾಲ್ಕು ವರ್ಣಗಳಾಗಲೀ ಒಳಪಂಗಡಗಳ ಮೇಲು ಕೀಳುಗಳಾಗಲಿ ಇಲ್ಲವೆ ಇಲ್ಲ” ಎಂದು ಶ್ರೀಗಳು 1937ನೇ ಸೆಪ್ಟೆಂಬರ್ 3ರಂದು ಕೊಲ್ಲಾಪುರದಲ್ಲಿ ನಡೆದ ಇಷ್ಟಲಿಂಗ ದೀಕ್ಷಾ ಸಮಾರಂಭದಲ್ಲಿ ಘೋಷಿಸಿದರು. ಅಲ್ಲಿ ನಾಲ್ಕು ಜನ ಹಿಂದುಳಿದವರಿಗೆ ಇಷ್ಟಲಿಂಗ ದೀಕ್ಷಾ ಸಮಾರಂಭವೂ ನಡೆಯಿತು.

ಶಿಕ್ಷಣದ ಮೂಲಕವೇ ಸಮಾಜದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂಬುದು ಅವರ ದೃಢನಿರ್ಧಾರವಾಗಿತ್ತು. ಸಂಚಾರ ಕಾಲದಲ್ಲಿ ಭಕ್ತರು ನೀಡಿದ ಕಾಣಿಕೆಗಳನ್ನು ಸಂಗ್ರಹಿಸಿ ವಿದ್ಯಾಪ್ರಸಾರಕ್ಕೆ ವಿನಿಯೋಗಿಸುವ ಮೂಲಕ ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದರು. ಈ ಶಿಕ್ಷಣದ ಸೌಲಭ್ಯವನ್ನು ಬೇರೆ ಧರ್ಮಗಳ ಬಡವರಿಗೂ ದೊರೆಯುವಂತೆ ನೋಡಿಕೊಂಡರು. ನಾಡಿನ ಬೇರೆ ಬೇರೆ ಕಡೆಗಳಲ್ಲಿ ಪ್ರಸಾದ ನಿಲಯಗಳನ್ನು ಸ್ಥಾಪಿಸಿದರು. ಊಟ ವಸತಿಗಳ ಅನುಕೂಲದಿಂದಾಗಿ ವಿದ್ಯಾರ್ಥಿಗಳು ಸರ್ಕಾರಿ ಶಾಲೆಗಳಲ್ಲಿ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಅವಶ್ಯವಿದ್ದ ಕಡೆಗಳಲ್ಲಿ ಶಾಲೆಗಳನ್ನೂ ಪ್ರಾರಂಭಿಸಿದರು. ಚಿತ್ರದುರ್ಗ, ದಾವಣಗೆರೆ, ಬೆಂಗಳೂರು, ಕಾಶಿ, ಸಾಂಗಲಿಗಳಲ್ಲಿ ಜಯದೇವ ವಿದ್ಯಾರ್ಥಿ ನಿಲಯಗಳನ್ನು ಪ್ರಾರಂಭಿಸಲಾಯಿತು. ವಿದ್ಯಾಪ್ರಸಾರದಲ್ಲಿ ತೊಡಗಿದವರಿಗೆ ಅವರು ಸಹಾಯ ಮಾಡಲು ಮುಂದಾದ ಅನೇಕ ಘಟನೆಗಳಿವೆ. ಒಂದು ಘಟನೆಯ ಬಗ್ಗೆ ಹೇಳಬೇಕೆಂದರೆ ಎಸ್. ನಿಜಲಿಂಗಪ್ಪನವರು ಪೂನಾದಲ್ಲಿ ಕಾನೂನು ವಿದ್ಯಾರ್ಥಿಯಾಗಿದ್ದಾಗ ಕಾಲೇಜಿಗೆ ಶುಲ್ಕ ಕಟ್ಟಲು 48 ರೂಪಾಯಿಗಳ ಕೊರತೆಯಾಗಿತ್ತು. ಶುಲ್ಕ ಕಟ್ಟದೆ ಪರೀಕ್ಷೆಗೆ ಕೂಡುವ ಹಾಗಿರಲಿಲ್ಲ. ಆದ್ದರಿಂದ ಅವರು 1924ನೇ ಡಿಸೆಂಬರ್ 3 ರಂದು ಶ್ರೀಗಳಿಗೆ ಪತ್ರ ಬರೆದು ಕೂಡಲೆ 48 ರೂಪಾಯಿ ಕಳಿಸಲು ವಿನಂತಿಸಿದರು. ನಂತರ ಕಾನೂನು ಪದವೀಧರರಾದ ಅವರು ವಕೀಲರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ರಾಜ್ಯದ ಮುಖ್ಯಂತ್ರಿಗಳಾಗಿ ಮತ್ತು ಎ.ಐ.ಸಿ.ಸಿ. ಅಧ್ಯಕ್ಷರಾಗಿ ರಾಷ್ಟ್ರನಾಯಕರಾದರು! ವಿದ್ಯಾ ಪ್ರಸಾರಕ್ಕಾಗಿ ಧನ ಸಂಗ್ರಹ ಮಾಡುವುದು ಮತ್ತು ವಿತರಿಸುವುದು ಶ್ರೀಗಳ ಮುಖ್ಯ ಕಾಳಜಿಯಾಗಿತ್ತು.

ಸೊಲ್ಲಾಪುರದ ಸಂಸ್ಕೃತ ಪಾಠಶಾಲೆ, ಧಾರವಾಡದ ಕರ್ನಾಟಕ ಕಾಲೇಜು, ಸಾತಾರಾ ಅಂಜುಮನ್ ಇಸ್ಲಾಂ ಸಂಸ್ಥೆ, ಚಿತ್ರದುರ್ಗದ ಕೃಷ್ಣರಾಜೇಂದ್ರ ಗ್ರಂಥಾಲಯ, ತಿಪಟೂರಿನ ವೀರಶೈವಾನಂದಾಶ್ರಮ ಮುಂತಾದ 25ಕ್ಕೂ ಹೆಚ್ಚು ಸಂಸ್ಥೆಗಳಿಗೆ ಅವರು ಸಹಾಯ ಹಸ್ತ ಚಾಚಿದ್ದಾರೆ. ಅವುಗಳಲ್ಲಿ ಜೈನ, ಮರಾಠಾ ಮತ್ತು ಅನೇಕ ಮುಸ್ಲಿಂ ಸಂಸ್ಥೆಗಳು ಕೂಡ ಸೇರಿವೆ. ವಿದ್ಯಾ ಪ್ರಸಾರಕ್ಕಾಗಿ 50 ಲಕ್ಷ ಸಂಗ್ರಹಿಸಿ ಇಟ್ಟಿದ್ದು ಶಿಕ್ಷಣದ ಬಗೆಗಿನ ಅವರ ಕಾಳಜಿಯ ಪ್ರತೀಕವಾಗಿದೆ.

ಪೀಠಾಧಿಪತಿಗಳಾದ ನಂತರ ಸಮಾಜದ ಏಳ್ಗೆಯ ಉದ್ದೇಶದಿಂದ ಧರ್ಮ ಪ್ರಸಾರ ಮತ್ತು ಶಿಕ್ಷಣ ಮುಂತಾದ ಅಭಿವೃದ್ಧಿ ಕಾರ್ಯಗಳಿಗಾಗಿ ದೇಶ ಸಂಚಾರ ಮಾಡಿದರು. 1904ರಲ್ಲಿ ಪ್ರಾರಂಭವಾದ ವೀರಶೈವ ಮಹಾಸಭೆಯ ಕಾರ್ಯಚಟುವಟಿಕೆಗಳು ಅದಾಗಲೆ ನಿಂತುಹೋಗಿದ್ದವು. ಶ್ರೀಗಳ ಪ್ರಯತ್ನದಿಂದ ನಾಲ್ಕುವರ್ಷಗಳ ನಂತರ 1917ರಲ್ಲಿ 8ನೇ ವೀರಶೈವ ಮಹಾಸಭೆ ದಾವಣಗೆರೆಯಲ್ಲಿ ಸಮಾವೇಶಗೊಂಡಿತು. ಆ ಸಂದರ್ಭದಲ್ಲಿ ಮಹಾಸಭೆಗಾಗಿ ನಿಧಿ ಸ್ಥಾಪಿಸಲಾಯಿತು.

ಶಾಖಾ ಮಠಗಳು ಮತ್ತು ನಿಷ್ಕ್ರಿಯವಾಗುತ್ತಿರುವ ಇತರ ಮಠಗಳ ಅಭಿವೃದ್ಧಿಯ ಬಗ್ಗೆಯೂ ಅವರು ಗಮನ ಹರಿಸಿದರು. ದಾವಣಗೆರೆ ಶಾಖಾ ಮಠ, ಧಾರವಾಡ ಮುರುಘಾಮಠ, ಬೆಂಗಳೂರಿನ ಸರ್ಪಭೂಷಣಮಠ, ಅಥಣಿ ಗಚ್ಚಿನಮಠ, ಕೊಲ್ಲಾಪುರದ ಖಾಸಾಮಠ ಮುಂತಾದ ವಿರಕ್ತಮಠಗಳ ಅಭಿವೃದ್ಧಿಯ ಹಿಂದೆ ಇವರ ಸಹಾಯಹಸ್ತವಿದೆ.

ಬೆಂಗಳೂರಿನ ಹೃದಯಭಾಗದಲ್ಲಿರುವ ಜಯದೇವ ವಿದ್ಯಾರ್ಥಿ ನಿಲಯದ ನಿವೇಶನಕ್ಕಾಗಿ ಶ್ರೀಗಳಿಗೆ ಹರಸಾಹಸ ಮಾಡಬೇಕಾಯಿತು. ಮಂಜೂರಾದ ನಿವೇಶನವನ್ನು ಕೊಡದೆ ಬೇರೆ ಕಡೆ ನೋಡಿ ಮಂಜೂರು ಮಾಡಿಸಿಕೊಳ್ಳಲು ಜಿಲ್ಲಾಧಿಕಾರಿಗಳಿಂದ ಪತ್ರ ಬಂದಿತು. ಆದರೆ ಜಯದೇವ ಜಗದ್ಗುರುಗಳು ಪಟ್ಟುಹಿಡಿದು ಅದೇ ನಿವೇಶನವನ್ನು ಮಂಜೂರು ಮಾಡಿಸಿಕೊಂಡರು. ಎಂಥದೇ ಪ್ರಸಂಗದಲ್ಲಿ ಅವರು ನಿಯಮ ಮೀರಿ ಹೋಗುತ್ತಿದ್ದಿಲ್ಲ. ಉದ್ವೇಗಕ್ಕೆ ಒಳಗಾಗುತ್ತಿರಲಿಲ್ಲ. ಎಲ್ಲವೂ ನ್ಯಾಯಬದ್ಧವಾಗೇ ಇರಬೇಕು ಎಂಬುದು ಅವರ ನಿಲುವಾಗಿತ್ತು. ಯಾವುದಾದರೂ ವ್ಯಾಜ್ಯ ಉಂಟಾದರೆ ನ್ಯಾಯ ಸಿಗುವವರೆಗೆ ಸಮಾಧಾನ ಚಿತ್ತದಿಂದ ಕಾಯುತ್ತಿದ್ದರು.

ಈ ನಿವೇಶನ ಪಡೆಯುವಲ್ಲಿ ಎಂ. ಬಸವಯ್ಯನವರ ಪಾತ್ರ ಹಿರಿದಾಗಿದೆ. ಅವರು ಅದಾಗಲೆ ಮೈಸೂರಿನಲ್ಲಿ ಬ್ರಾಹ್ಮಣೇತರ ಹಿಂದುಳಿದ ವರ್ಗಗಳ ಚಳವಳಿಯನ್ನು ಪ್ರಾರಂಭಿಸಿ ಅಂದಿನ ಯುವರಾಜರ ಮತ್ತು ಮೈಸೂರು ದಿವಾನ್ ಅಲ್ಬಿಯನ್ ಬ್ಯಾನರ್ಜಿಯವರ ವಿಶ್ವಾಸ ಗಳಿಸಿದ್ದರು.

ಯುವರಾಜ ಕಂಠೀರವ ನರಸಿಂಹರಾಜ ಒಡೆಯರ ಅವರು ಬೆಂಗಳೂರಿನ ಜಯದೇವ ವಿದ್ಯಾರ್ಥಿ ನಿಲಯದ ಶಂಕುಸ್ಥಾಪನೆ ಮಾಡುವಾಗ ಜಯದೇವ ಮಹಾಸ್ವಾಮಿಗಳನ್ನು “ಜಗದ್ಗುರುಗಳು” ಎಂದು ಕರೆದರು. ಅಲ್ಲಿಯವರೆಗೆ ರಾಜಮನೆತನದವರಾರೂ ಚಿತ್ರದುರ್ಗ ಮುರುಘಾಮಠದ ಸ್ವಾಮಿಗಳಿಗೆ “ಜಗದ್ಗುರು” ಎಂದು ಕರೆದಿರಲಿಲ್ಲ. ಇದು ಜಯದೇವ ಜಗದ್ಗುರುಗಳ ವ್ಯಕ್ತಿತ್ವವನ್ನು ಸೂಚಿಸುತ್ತದೆ.

ಜಗದೇವ ಜಗದ್ಗುರುಗಳು 1942ರಲ್ಲಿ ಮುಳಗುಂದದ ಶಿವಲಿಂಗದೇವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿದರು. ಶಿವಲಿಂಗದೇವರು ಕಾಶಿಯಲ್ಲಿ ವೇದಾಧ್ಯಯನ ಮಾಡಿ ಮರಳಿ ಬಂದ ನಂತರ 1949ರಲ್ಲಿ ಜಯವಿಭವ ಮುರುಘರಾಜೇಂದ್ರ ಮಹಾಸ್ವಾಮಿಗಳಾಗಿ ಬೃಹನ್ಮಠದ ಪೀಠಾಧ್ಯಕ್ಷರಾದರು.


ಜಯದೇವ ಜಗದ್ಗುರುಗಳು 1956ನೇ ಅಕ್ಟೋಬರ್ 2ರಂದು ಲಿಂಗೈಕ್ಯರಾದರು. ಅವರ ಇಚ್ಛೆಯಂತೆ ದಾವಣಗೆರೆಯ ಶಿವಯೋಗಾಶ್ರಮದಲ್ಲಿ ಅವರ ಅಂತ್ಯಸಂಸ್ಕಾರ ನೆರವೇರಿಸಲಾಯಿತು. 53 ವರ್ಷಗಳವರೆಗೆ ಪೀಠಾಧಿಪತಿಗಳಾಗಿ ಅವರು ಮಾಡಿದ ಮಹಾಕಾರ್ಯಗಳಿಂದಾಗಿ ‘ಅವರು ಯುಗಪುರುಷರು’ ಎಂದು ಗಣ್ಯವ್ಯಕ್ತಿಗಳ ಸಮೇತ ಭಕ್ತಾದಿಗಳೆಲ್ಲ ಕೊಂಡಾಡಿದ್ದು ಸಮಾಜದ ಉದ್ಧಾರದಲ್ಲಿ ಅವರ ಪಾತ್ರದ ಮಹತ್ವವನ್ನು ಸಾರುತ್ತದೆ.