ಲೀಪ್ಸ್‌ಕರವರು ವಿಸ್ತಾರವಾದ ರೂಪಕಗಳು ಹಾಗೂ ಕಾವ್ಯಾತ್ಮಕವಾದ ಪರಿಕಲ್ಪನೆಗಳನ್ನು ಮುಕ್ತವಾಗಿ ಬಳಸತೊಡಗಿದರು, ಹಾಗೇ ಅವುಗಳ ಅರ್ಥಗಳನ್ನು ಕೂಡ ಸಂಕೀರ್ಣಗೊಳಿಸುತ್ತಾ ಹೋದರು. ಅವರ ಕವನಗಳಲ್ಲಿನ ಆಗುಹೋಗುಗಳು ಒಂದು ತರಹದ ಅತಿವಾಸ್ತವಿಕವಾದ ಸ್ವಪ್ನವ್ಯೋಮದಲ್ಲಿ ನಡೆಯುತ್ತದೆ. ಆದ್ದರಿಂದ ಕವನಗಳಲ್ಲಿ ಬರುವ ಪಾತ್ರಗಳಿಗೆ ಕಲ್ಪನೆಯೊಂದೇ ಬಿಡುಗಡೆಯ ಮಾರ್ಗವಾಗುತ್ತದೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಪೋಲೆಂಡ್ ದೇಶದ ಕವಿ ಏವಾ ಲೀಪ್ಸ್‌ಕ-ರವರ
(Ewa Lipska) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ

ಏವಾ ಲೀಪ್ಸ್‌ಕ ಅವರು ಪೋಲಿಷ್ ಸಾಹಿತ್ಯದ ‘ಹೊಸ ಅಲೆ’ಯ ಸಮಕಾಲೀನರಾಗಿದ್ದರೂ ತಮ್ಮನ್ನು ಯಾವುದೇ ಸಾಹಿತ್ಯಿಕ ‘ತಲೆಮಾರು’ ಅಥವಾ ‘ಗುಂಪಿನ’ ಸದಸ್ಯರಾಗಿ ಕಂಡುಕೊಳ್ಳುವುದಿಲ್ಲ. ಅವರು ‘ಹೊಸ ಅಲೆ’ಯ ತಾತ್ವಿಕ, ರಾಜಕೀಯ ನಿಲುವುಗಳಿಂದ ದೂರವಿದ್ದರೂ ಅವರ ಕೆಲವು ಕವನಗಳಲ್ಲಾದರೂ ರಾಜಕೀಯದ ಉಲ್ಲೇಖಗಳಿವೆ. ಹೀಗೆ ಅವರು ಹಲವಾರು ವರ್ಷಗಳಿಂದ ವ್ಯವಸ್ಥಿತವಾಗಿ ತಮ್ಮ ಕಲಾತ್ಮಕ ಪ್ರತ್ಯೇಕತೆಯನ್ನು ಉಳಿಸಿಕೊಂಡು ಬಂದಿದ್ದಾರೆ ಮತ್ತು ತಮ್ಮ ಕವನಗಳಲ್ಲಿ ನಿರ್ದಿಷ್ಟವಾದ ವೈಯಕ್ತಿಕ ಅನುಭವಗಳನ್ನು ದಾಖಲಿಸುತ್ತಾ ಬಂದಿದ್ದಾರೆ.

ಅಕ್ಟೋಬರ್ 1945-ರಲ್ಲಿ ಪೋಲೆಂಡಿನ ಕ್ರಾಕೋವ್ ನಗರದಲ್ಲಿ ಜನಿಸಿದ ಏವಾ ಲೀಪ್ಸ್‌ಕ ಕ್ರಾಕೋವ್ ಅಕಾಡೆಮಿ ಆಫ್ ಫೈನ್ ಆರ್ಟ್ಸ್‌-ನಲ್ಲಿ ಕಲಾ ಇತಿಹಾಸ ಮತ್ತು ಚಿತ್ರಕಲೆ ವಿಷಯಗಳ ಅಧ್ಯಯನ ಮಾಡಿದರು. 1970-80-ರಲ್ಲಿ ಅವರು Wydawnictwo Literackie ಎಂಬ ಪ್ರಕಾಶನ ಸಂಸ್ಥೆಯಲ್ಲಿ ಸಂಪಾದಕರಾಗಿ ಕೆಲಸ ಮಾಡಿದರು ಹಾಗೂ 1990-ರ ದಶಕದಲ್ಲಿ ಅವರು ವಿಯೆನ್ನಾ-ದಲ್ಲಿನ ಪೋಲಿಷ್ ರಾಯಭಾರ ಕಛೇರಿಯ ಮೊದಲ ಕಾರ್ಯದರ್ಶಿಯಾಗಿ ಪೋಲೆಂಡ್ ಮತ್ತು ಆಸ್ಟ್ರಿಯಾ ದೇಶದ ನಡುವೆ ಸಾಂಸ್ಕೃತಿಕ ಸಂಪರ್ಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದರು.

ಅವರು 1967-ರಲ್ಲಿ Wiersze (ಕವನಗಳು) ಎಂಬ ಹೆಸರಿನ ಸಂಗ್ರಹದೊಂದಿಗೆ ಕವಿಯಾಗಿ ಪೋಲೆಂಡಿನ ಸಾಹಿತ್ಯಲೋಕದೊಳಗೆ ಪಾದಾರ್ಪಣೆ ಮಾಡಿದರು ಮತ್ತು ಅಲ್ಲಿಂದ 1978-ರವರೆಗೆ ನಾಲ್ಕು ಸಂಗ್ರಹಗಳನ್ನು ಪ್ರಕಟಿಸಿದರು. ಅವರ ಇತ್ತೀಚಿನ ಸಂಗ್ರಹವಾದ Czytnik Linii Papilarnych (Fingerprint Reader) 2015-ರಲ್ಲಿ ಹೊರಬಂದಿತು. ಈಗಲೂ ಸಕ್ರಿಯವಾಗಿರುವ ಏವಾ ಲೀಪ್ಸ್‌ಕರವರು ಇಪ್ಪತ್ತಕ್ಕೂ ಹೆಚ್ಚು ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಕವನಗಳನ್ನು ಇಂಗ್ಲಿಷ್, ಫ಼್ರೆಂಚ್, ಜರ್ಮನ್, ಡೇನಿಷ್, ಸ್ಪಾನಿಷ್, ಡಚ್, ಇಟಾಲಿಯನ್, ಹಾಗೂ ಇಲ್ಲಿ, ಕನ್ನಡ ಭಾಷೆಗಳಿಗೆ ಅನುವಾದಿಸಲಾಗಿವೆ.

ಏವಾ ಲೀಪ್ಸ್‌ಕ ಅವರು ತಮ್ಮ ಕವನಗಳಲ್ಲಿ ಪ್ರಚಾರ ಭಾಷೆಯ ಮುಖವಾಡಗಳನ್ನು ಬಿಚ್ಚುಡುತ್ತಾ ಹೋಗುತ್ತಾರೆ, ಹಾಗೆಯೇ ಮಾನವ ಗ್ರಹಿಕೆ ಹಾಗೂ ಸಂವಹನದ ಸಾಧನವಾದ ಸಾಮಾನ್ಯ ಭಾಷೆಯ ದೌರ್ಬಲ್ಯಗಳನ್ನು ಕೂಡ ಎತ್ತಿ ತೋರಿಸುತ್ತಾರೆ. ಇವರ ಆರಂಭದ ಕವನಗಳಲ್ಲಿ ಬೌದ್ಧಿಕತೆ, ಸಿನಿಕತನ, ಹಾಗೂ ವಿರೋಧಾಭಾಸಗಳನ್ನು ಗಮನಿಸಿದ ವಿಮರ್ಶಕರು ಏವಾ ಲೀಪ್ಸ್‌ಕರ ಈ ಹಂತದ ಕವನಗಳಲ್ಲಿ ವಿಸ್ಲಾವಾ ಶಿಂಬೋರ್ಸ್ಕಾರವರ ಕಾವ್ಯಾತ್ಮಕ ಶೈಲಿಯನ್ನು ಗುರುತಿಸಿದ್ದಾರೆ.

ಮುಂದೆ ಹೋಗುತ್ತಾ, ಲೀಪ್ಸ್‌ಕರವರು ವಿಸ್ತಾರವಾದ ರೂಪಕಗಳು ಹಾಗೂ ಕಾವ್ಯಾತ್ಮಕವಾದ ಪರಿಕಲ್ಪನೆಗಳನ್ನು ಮುಕ್ತವಾಗಿ ಬಳಸತೊಡಗಿದರು, ಹಾಗೇ ಅವುಗಳ ಅರ್ಥಗಳನ್ನು ಕೂಡ ಸಂಕೀರ್ಣಗೊಳಿಸುತ್ತಾ ಹೋದರು. ಅವರ ಕವನಗಳಲ್ಲಿನ ಆಗುಹೋಗುಗಳು ಒಂದು ತರಹದ ಅತಿವಾಸ್ತವಿಕವಾದ ಸ್ವಪ್ನವ್ಯೋಮದಲ್ಲಿ ನಡೆಯುತ್ತದೆ. ಆದ್ದರಿಂದ ಕವನಗಳಲ್ಲಿ ಬರುವ ಪಾತ್ರಗಳಿಗೆ ಕಲ್ಪನೆಯೊಂದೇ ಬಿಡುಗಡೆಯ ಮಾರ್ಗವಾಗುತ್ತದೆ ಹಾಗೂ ಈ ಅಪಾಯಕಾರಿ ವಾಸ್ತವ ಜಗತ್ತಿನಿಂದ ತಪ್ಪಿಸಿಕೊಳ್ಳಲು ಭರವಸೆ ನೀಡುತ್ತದೆ.

1973-ರಲ್ಲಿ ಜೆನೇವಾ-ದ Kościelski Fund Award, 1979-ರಲ್ಲಿ ರಾಬರ್ಟ್ ಗ್ರೇವ್ಸ್ PEN ಕ್ಲಬ್ ಪ್ರಶಸ್ತಿ, 1995-ರಲ್ಲಿ ನ್ಯೂ ಯಾರ್ಕ-ನ Alfred Jurzykowski Foundation ಪ್ರಶಸ್ತಿ, 2009-ರಲ್ಲಿ ಸರ್ಬಿಯಾ-ದ ಸ್ಮೆದೆರೆವೋ ನಗರದ “ಹೊನ್ನಕೀಲಿ” (Gold Key), 2010-ರಲ್ಲಿ ಮ್ಯಾಸೆಡೋನಿಯಾದ ನಯೀಮ್ ಫ‌್ರಶೇರಿ ಪ್ರಶಸ್ತಿ, 2011-ರಲ್ಲಿ ಪೋಲೆಂಡಿನ ಗ್ಡಿನಿಯಾ ಸಾಹಿತ್ಯ ಪ್ರಶಸ್ತಿ, ಹಾಗೂ 2014-ರಲ್ಲಿ ಇಟಲಿಯ ಇಂಟರ್ನ್ಯಾಷನಲ್ ಇಪಾಜಿಯಾ ಪ್ರಶಸ್ತಿ ಸೇರಿದಂತೆ ಏವಾ ಲೀಪ್ಸ್‌ಕ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ಏವಾ ಲೀಪ್ಸ್‌ಕ-ರ ಒಂಬತ್ತು ಕವನಗಳಲ್ಲಿ ಮೊದಲ ಮೂರು ಕವನಗಳನ್ನು ರಾಬಿನ ಡೇವಿಡ್ಸನ್ ಹಾಗೂ ಏವಾ ಎಲ್‌ಜ಼್ಬೆಯೆಟಾ (Robin Davidson & Ewa Elzbieta), ನಾಲ್ಕನೆಯ ಮತ್ತು ಐದನೆಯ ಕವನಗಳನ್ನು ರಿಶಾರ್ಡ್ ರೈಜ಼್ನರ್ (Ryszard Reisner), ನಂತರದ ಮೂರು ಕವನಗಳನ್ನು ಆ್ಯನಾ ಸ್ಟಾನಿಜ಼್-ಲುಬೊವಿಯೆಸ್ಕಾ (Anna Stanisz-Lubowiecka), ಹಾಗೂ ಕೊನೆಯ ಕವನವನ್ನು ಸ್ತಾನಿಸ್ಲಾವ್ ಬರನ್‌ಚಕ್ ಹಾಗೂ ಕ್ಲೇರ್ ಕಾವನಾ (Stanizław Barańczak & Clare Cavanagh) ರವರು ಮೂಲ ಪೋಲಿಷ್ ಭಾಷೆಯಿಂದ ಇಂಗ್ಲಿಷ್‌-ಗೆ ಅನುವಾದಿಸಿರುವರು.


ಒಂದು ಸಿಬುರು
ಮೂಲ: A Splinter

‘ನಾ ನಿನ್ನ ಇಷ್ಟಪಡುತ್ತೇನೆ‘ ಇಪ್ಪತ್ತು ವರ್ಷದ ಕವಿಯೊಬ್ಬ ನನಗೆ ಬರೆಯುತ್ತಾನೆ.
ಕಸುಬು ಕಲಿಯಲಾರಂಭಿಸಿದ ಪದಗಳ ಬಡಗಿ.

ಅವನ ಪತ್ರದಲ್ಲಿ ನಾಟದ ಕಂಪಿದೆ.
ಅವನ ಸ್ಫೂರ್ತಿದೇವತೆ ಈಗಲೂ ಗುಲಾಬಿ ಮರದಲ್ಲಿ ಮಲಗುತ್ತಾಳೆ.

ಸಾಹಿತ್ಯದ ಸಾಮಿಲ್ಲೋಂದರಲ್ಲಿ ಹೇರಾಸೆಯ ಸದ್ದು.
ಹೊಸಗಸುಬಿಗಳು ಬೆಪ್ಪುನಾಲಿಗೆಗೆ ಮೆರಗುಲೇಪವ ಹಚ್ಚುತ್ತಾರೆ.

ವಾಕ್ಯಪಟ್ಟಿಗಳ ನಾಚಿದ ಪ್ಲೈವುಡ್ಡನ್ನು ಆಕಾರಕ್ಕೆ ಕೆತ್ತುತ್ತಾರೆ.
ಹಾಯ್ಕುವೊಂದನ್ನು ಕೀಸುಳಿಯಿಂದ ಕೆತ್ತಿದ ಹಾಗೆ.

ಸ್ಮೃತಿಯಲ್ಲಿ ಸಿಬುರೊಂದು ನಾಟಿ ಕೂತಾಗ
ಪ್ರಾರಂಭವಾಗುವುದು ಸಮಸ್ಯೆಗಳು.

ಅದನ್ನು ಹೊರತೆಗೆಯುವುದು ಕಷ್ಟ
ವರ್ಣಿಸುವುದು ಮತ್ತೂ ಕಷ್ಟ.

ಮರದ ಸಿಪ್ಪೆಗಳು ಹಾರುತ್ತಿವೆ. ದೇವಾನುಚರರನ್ನು ಪದರಂಟುತ್ತವೆ.
ಸ್ವರ್ಗದೆತ್ತರದವರೆಗೂ ಧೂಳು.


ಬೇರೆಲ್ಲೋ
ಮೂಲ: Elsewhere

ನಾನು ಬೇರೆಲ್ಲೋ ಇರಲು ಬಯಸುವೆ.
ಕೈ-ಕಸೂತಿ ಹಾಕಿದ ಊರುಗಳಲ್ಲಿ.

ಈ ಪ್ರಪಂಚದಲ್ಲಿ ಹುಟ್ಟದೇ ಇದ್ದವರನ್ನು
ಭೇಟಿಯಾಗಲು ಬಯಸುವೆ.

ಕೊನೆಯಲ್ಲಿ ನಾವು ಸಂತೋಷವಾಗಿ ಏಕಾಂತದಲ್ಲಿ ಇರುವೆವು.
ಯಾವ ನಿಲ್ದಾಣವೂ ಕಾಯುತ್ತಿರುವುದಿಲ್ಲ ನಮಗಾಗಿ.

ಆಗಮನವಿಲ್ಲ. ನಿರ್ಗಮನವಿಲ್ಲ.
ಮ್ಯೂಜ಼್ಯಮ್‌ನಲ್ಲಿ ಕ್ಷಣಭಂಗುರತೆ.

ಯಾವ ಕದನವೂ ಕಾದಾಡುತ್ತಿಲ್ಲ ನಮಗಾಗಿ.
ಮಾನವಜಾತಿ ಇಲ್ಲ. ಸೈನ್ಯವಿಲ್ಲ. ಅಸ್ತ್ರವಿಲ್ಲ.

ಅಮಲೇರಿದಾಗಿನ ಮೃತ್ಯು. ಅದರ ಮೋಜೇ ಬೇರೆ.
ಲೈಬ್ರರಿಯಲ್ಲಿ ಬಹು-ಸಂಪುಟಗಳಷ್ಟು ಸಮಯ.

ಪ್ರೇಮ. ಒಂದು ಹುಚ್ಚು ಅಧ್ಯಾಯ.
ಹೃದಯದ ಪುಟಗಳನ್ನ ಪಿಸುಮಾತಿನಲ್ಲಿ ತಿರುಗಿಸುವುದು.


ಅಸಹಾಯಕತೆ
ಮೂಲ: Helplessness

ಅವನಿಗೆ ಆಸ್ತಿಯಾಗಿ ಬಂದ ಈ ಜೀವನ
ನನ್ನ ಅಜ್ಜಿಯ ಹೇಳುವ ಬಗೆ ಇದು
ಯಾವ ತರಹದ ಪಿತ್ರಾರ್ಜಿತವಾಗಿತ್ತು ಅದು ಕೊನೆಗೆ?

ಅರಿಯದೇ ಇದ್ದಿದ್ದರೆ ಚೆನ್ನಾಗಿರುತ್ತಿತ್ತು
ಎಂಬ ದಿನಗಳನ್ನು ಅವನು ತನ್ನ ಹಿಂದೆ
ಎಳೆದುಕೊಂಡು ಹೋಗುತ್ತಿರುತ್ತಾನೆ.
ಕಾನ್ಸೆಂಟ್ರೇಶನ್ ಕ್ಯಾಂಪಿನಲ್ಲಿ ಕಳೆದ ಬಾಲ್ಯ.
ಮುಳ್ಳು ತಂತಿಗಳಿಂದ ಮಾಡಿದ ಆಟಿಕೆಗಳು.

ಆ ದಿನಗಳಲ್ಲಿ ಬಳಸಿದ ಸೂಟ್‌ಕೇಸು
ವಾಯು-ಅಂಚೆಯಿಂದ ಬಂದಿತ್ತು
ಈಗಲೂ ತಾನೊಂದು ಹಕ್ಕಿಯೆಂದು ನಟಿಸುತ್ತಿತ್ತು.

ಅವನು ಎರವಲು ಪಡೆದ ಸಮಯದಲ್ಲಿ
ಬದುಕುತ್ತಿದ್ದಾನೆಂದು ಹೇಳಬಹುದು ಕೆಲವರು.
ಆದರೆ ಅವನು ಹೇಗೋ ಬದುಕುಳಿದಿದ್ದಾನೆ.

ಕೊನೆಯವರೆಗೂ ಅವನು ತನ್ನದೇ
ಅಲ್ಪಸಂಖ್ಯಾತ ಲೋಕದಲ್ಲಿ ಉಳಿವನು.

ಇದು ಹೇಗೆ ಅರ್ಥವಾಗುವುದು ಯಾರಿಗಾದರೂ.
ಪಾರ್ಕಿನ ಅಡವಿಟ್ಟ ಕತ್ತಲೆಯಲ್ಲಿ ಸಿಗರೇಟು ಹೊತ್ತಿಸಲಿಕ್ಕೆ
ಬೆಂಕಿಪೆಟ್ಟಿಗೆ ಕೇಳುತ್ತಿರುವ ದೇವರು ಕೂಡ ಬರೀ
ಬೂದಿಯಾಗುವ ಅಸಹಾಯಕತೆಯ ಸಂಕೇತ ಅಷ್ಟೇ.


ದಿಕ್ಕಿಲ್ಲದ ಕವನ
ಮೂಲ: Homeless Poem

ದಿಕ್ಕಿಲ್ಲದ ಕವನವೊಂದು ಗೊತ್ತುಗುರಿಯಿಲ್ಲದೇ
ಚಲಿಸುತ್ತಿದೆ ಕತ್ತಲು ಕಾಗದದ ಮೇಲೆ ಅಡ್ಡಡ್ಡಲಾಗಿ.
ಯಾರದ್ದೂ ಆಗದೇ. ಕವಿ ಬಿಟ್ಟುಬಿಟ್ಟಿದ್ದಾಳೆ ಅದನ್ನು
ವಿಧಿಯ ಖಯಾಲಿಗೆ. ಪದಗಳಲ್ಲಿ ಅನಾಥವಾಗಿ.

ಕೆಲವೊಮ್ಮೆ
ಕವನಗಳು
ಕಾವ್ಯದ ಕಡೆ ನೋಡಿ ಬೊಗಳುವ
ಯಾರಿಗೂ ಬೇಡವಾದ ನಾಯಿಗಳ ಹಾಗೆ.


ಪ್ರಪಾತ
ಮೂಲ: Precipice

ಮೃತರು ಯಾವಾಗಲೂ
ತಪ್ಪು ಸಮಯಕ್ಕೆ
ಭೇಟಿ ಕೊಡುತ್ತಾರೆ.

ನಾವು ಸಿನಿಮಾ ನೋಡಲು ಹೊರಡುತ್ತಿರಬೇಕಾದರೆ.
ಡಿಸ್ಕೋತೆಕ್‌ಗೆ ಹೊರಡುತ್ತಿರಬೇಕಾದರೆ.
ಸೂಪರ್‌ಮಾರ್ಕೆಟ್‌ಗೆ ಹೊರಡುತ್ತಿರಬೇಕಾದರೆ.

ಮತ್ತೆ ಅವರು ತಮ್ಮ ಜತೆ ತರುತ್ತಾರೆ
ಗೋಡೆಗಳ ತುಂಡುಗಳನ್ನು.
ತಗಡಿನ ತುಣುಕುಗಳನ್ನು.
ಇವೆಲ್ಲವನ್ನೂ ನೋವುತರಿಸುವ
ಮುಳ್ಳು ತಂತಿಯಲ್ಲಿ ಸುತ್ತಿ ತರುತ್ತಾರೆ.
ಮತ್ತೆ ಅವರು ಚಿಂತಿತ ದನಿಯಲ್ಲಿ ಹೇಳುತ್ತಾರೆ:
“ಮೃತ್ಯುವೆಂಬುದು ಜೀವನವೇ ಅಲ್ವಾ… “

ಆದರೆ ಏನು ಮಾಡಲಿಕ್ಕಾಗುತ್ತೆ?
ನಾವು ನಮ್ಮ ಕೋಟುಗಳನ್ನು ಕಳಚಿ ನೇತುಹಾಕುತ್ತೇವೆ.
ಕಾಫಿ ಮಾಡುತ್ತೇವೆ.

ಬೋರ್ಬನ್ ವಿಸ್ಕಿಯ ಬಾಟಲೊಂದನ್ನು
ತೆರೆದು ಇಬ್ಬರೂ ನೋಡುತ್ತೇವೆ
ನೇರ
ಪ್ರಪಾತದೊಳಕ್ಕೆ.


ಅಂತಿಮ ಉಯಿಲು
ಮೂಲ: Last Will

ದೇವರ ನಿಧನದ ನಂತರ
ನಾವು ಅವನ ಅಂತಿಮ ಉಯಿಲನ್ನು ಓದುವೆವು
ಈ ಲೋಕವನ್ನು ಯಾರಿಗೆ ಬಿಟ್ಟು ಹೋಗಿದ್ದಾರೆ
ಎಂದು ತಿಳಿದುಕೊಳ್ಳಲು
ಮತ್ತೆ
ಈ ವಿಶಾಲವಾದ
ಇಲಿಬೋನನ್ನು ಕೂಡ.


ಸಂಶಯ
ಮೂಲ: Doubt

ನನಗೆ ಸಂಶಯದ ಮೇಲೆ ನಂಬಿಕೆ ಇದೆ.
ಆಸ್ಥೆಯ ವ್ಯಸನದಿಂದ ಮುಕ್ತ ಅದು.
ಜೀವದ ಗೈರುಹಾಜರಿಯಲ್ಲಿ
ನಾನು ಪ್ರಾಣಾಂತಿಕವಾಗಿ ಸಂಶಯಾಸ್ಪದನಾಗುವೆನು.


ಒಬ್ಬ ವಿಚಾರವಾದಿಯ ತಪ್ಪೊಪ್ಪಿಗೆ
ಮೂಲ: Confession of a Rationalist

ನಾನು ಚರ್ಚಿಗೆ ಹೋಗಲ್ಲ.
ನಾನು ದರ್ಜಿಯ ಅಂಗಡಿಯಲ್ಲಿ
ದೇವರನ್ನು ಅಕಸ್ಮಾತ್ ಸಂಧಿಸುವೆನು.
ನಾವು ಅದೇ ಒಂದೇ ಗೋರಿಯನ್ನು
ಹೊಲಿಸಿಕೊಳ್ಳುತ್ತಿದ್ದೇವೆ.


ಪ್ರವಾಹಗಳು ನನ್ನನ್ನು ಕಾಪಾಡಲಿಲ್ಲ
ಮೂಲ: Floods Didn’t Save Me

ಪ್ರವಾಹಗಳು ನನ್ನನ್ನು ಕಾಪಾಡಲಿಲ್ಲ
ನಾನಾಗಲೇ ತಳಕ್ಕೆ ಹೋಗಿರುವೆ.

ಬೆಂಕಿ ನನ್ನನ್ನು ಕಾಪಾಡಲಿಲ್ಲ
ನಾನು ವರುಷಗಳಿಂದ ಉರಿಯುತ್ತಿರುವೆ.

ಅಪಘಾತಗಳು ನನ್ನನ್ನು ಕಾಪಾಡಲಿಲ್ಲ
ಕಾರುಗಳು ಟ್ರೈನುಗಳು ನನ್ನ ಮೇಲೆ ಹರಿದುಹೋಗಿವೆ.

ಆಕಾಶದಲ್ಲಿ ನನ್ನೊಂದಿಗೆ ಸ್ಫೋಟಗೊಂಡ
ಏರೋಪ್ಲೇನುಗಳು ನನ್ನನ್ನು ಕಾಪಾಡಲಿಲ್ಲ.

ಮಹಾನಗರಗಳ ಗೋಡೆಗಳು
ನನ್ನ ಮೇಲೆ ಕುಸಿದುಬಿದ್ದವು.

ವಿಷಕಾರಿ ಅಣಬೆಗಳು ಯಾ ಬಂದೂಕು ಪಡೆಗಳ
ಗುರಿತಪ್ಪದ ಗುಂಡೇಟುಗಳು ನನ್ನನ್ನು ಕಾಪಾಡಲಿಲ್ಲ.

ಲೋಕದ ಅಂತ್ಯ ನನ್ನನ್ನು ಕಾಪಾಡಲಿಲ್ಲ;
ಅದಕ್ಕೆ ಸಮಯವಿರಲಿಲ್ಲ.

ಯಾವುದೂ ನನ್ನನ್ನು ಕಾಪಾಡಲಿಲ್ಲ.

ನಾನು ಬದುಕಿರುವೆ.