ಭಾರತೀಯ ರಿಸರ್ವ್ ಬ್ಯಾಂಕ್ ನ 21ನೇ ಗವರ್ನರ್ ಆಗಿ ಕಾರ್ಯನಿರ್ವಹಿಸಿರುವ ವೈ. ವಿ. ರೆಡ್ಡಿ ಅವರು ಆರ್ಥ ಶಾಸ್ತ್ರಜ್ಞ ಮತ್ತು ಶಿಕ್ಷಣ ತಜ್ಞರು. ಆಡಳಿತ ವ್ಯವಸ್ಥೆಯ ವಿವಿಧ ಹಂತಗಳಲ್ಲಿ ಸಕ್ರಿಯರಾಗಿದ್ದುದಷ್ಟೇ ಅಲ್ಲದೆ, ದೂರದೃಷ್ಟಿಯೊಂದಿಗೆ ವ್ಯವಸ್ಥೆಯನ್ನು ರೂಪಿಸಬಲ್ಲವರೂ ಹೌದು. ತಮ್ಮ ಆತ್ಮಚರಿತ್ರೆಯನ್ನು ತೆಲುಗಿನಲ್ಲಿಯೂ, ಇಂಗ್ಲಿಷ್ ನಲ್ಲಿಯೂ ಬರೆದರು. ಎರಡು ಪುಸ್ತಕಗಳನ್ನು ಗ್ರಹಿಸಿ, ಕಥೆಗಾರ ಎಂ.ಎಸ್ . ಶ್ರೀರಾಮ್ ಅವರು ಅನುವಾದಿಸಿದ್ದಾರೆ. ‘ಭಿನ್ನ ಅಭಿಪ್ರಾಯ’ ಎಂಬ ಅನುವಾದಿತ ಕೃತಿಯ ಕುರಿತು ಶ್ರೀರಾಮ್ ಮಾತುಗಳು ಮತ್ತು ಪುಸ್ತಕದ ಒಂದು ಅಧ್ಯಾಯ ಇಲ್ಲಿವೆ..

 

ಜನವರಿ 2017ರಲ್ಲಿ ಡಾ.ವೈವಿ ರೆಡ್ಡಿಯವರು ತೆಲುಗಿನಲ್ಲಿ ತಮ್ಮ ಆತ್ಮಕಥೆಯನ್ನು ‘ನಾ ಜ್ಞಾಪಕಾಲು’ (ನನ್ನ ನೆನಪುಗಳು) ಎನ್ನುವ ಹೆಸರಿನಲ್ಲಿ ಪ್ರಕಟಿಸಿದರು. ತಮ್ಮ ಬಾಲ್ಯಕಾಲದ ನೆನಪುಗಳು, ಬೆಳೆದ ರೀತಿ ಮತ್ತು ತಮ್ಮ ವೃತ್ತಿಜೀವನದ ಬಗೆಗಿನ ಈ ಪುಸ್ತಕ ಹಲವು ಮಜಲುಗಳಲ್ಲಿ ಮುಖ್ಯವೆಂದು ನನಗೆ ಅನ್ನಿಸಿತ್ತು. ಮೊದಲ ಹಂತದಲ್ಲಿ ಪುಟ್ಟ ಪಟ್ಟಣದ ಮಧ್ಯಮವರ್ಗದಲ್ಲಿ ಬಳೆದವರೊಬ್ಬರ ಆಶಯ, ಒಂದು ಉತ್ತಮ ವೃತ್ತಿಜೀವನದ ಆಕಾಂಕ್ಷೆ, ವಿದ್ಯೆಯ ಮಹತ್ವ ಮತ್ತು ಅದಕ್ಕೆ ಬೇಕಾದ ತಯಾರಿಯ ಬಗೆಗಿನ ಅನುಭವಗಳಿದ್ದುವು.

ಜುಲೈ 2017ರ ವೇಳೆಗೆ ಡಾ.ರೆಡ್ಡಿಯವರ ಮತ್ತೊಂದು ಪುಸ್ತಕ “Advice and Dissent” (ಸಲಹೆ ಮತ್ತು ಭಿನ್ನಮತ) ಇಂಗ್ಲೀಷಿನಲ್ಲಿ ಪ್ರಕಟವಾಯಿತು. ಅವರ ತೆಲುಗು ಪುಸ್ತಕದಲ್ಲಿದ್ದ ಮಹತ್ವದ ಭಾಗಗಳು ಈ ಪುಸ್ತಕದಲ್ಲಿದ್ದುವು. ಆದರೆ ತೆಲುಗು ಪುಸ್ತಕವನ್ನು ಹಣಕಾಸಿನ ವಿಷಯದಲ್ಲಿ ತಾಂತ್ರಿಕ ಪರಿಣಿತಿ ಇಲ್ಲದವರನ್ನೂ ಗಮನದಲ್ಲಿಟ್ಟುಕೊಂಡು ಬರೆಯಲಾಗಿತ್ತು. ಇಂಗ್ಲೀಷ್ ಪುಸ್ತಕದಲ್ಲಿ ಇನ್ನಷ್ಟು ಒಳನೋಟಗಳಿದ್ದುವು. ಇದರಲ್ಲಿ ತಾಂತ್ರಿಕವಾದ ಸಂಕೀರ್ಣ ವಿಷಯಗಳೂ ಇದ್ದುವು. ಮುಖ್ಯವಾಗಿ ಅಂತಾರಾಷ್ಟ್ರೀಯ ಮಟ್ಟದ ಅರ್ಥವ್ಯವಸ್ಥೆ ಮತ್ತು 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ವಿವರಗಳೂ, ಹಾಗೂ ಹದಿನಾಲ್ಕನೇ ಹಣಕಾಸು ಆಯೋಗದ ಪ್ರಕ್ರಿಯೆಯ ಬಗೆಗಿನ ಒಂದು ಅಧ್ಯಾಯವೂ ಆ ಪುಸ್ತಕದಲ್ಲಿತ್ತು. ಅದನ್ನು ಓದಿದಾಗ ಅಷ್ಟೇನೂ ಸುಲಲಿತವಲ್ಲದ ಆದರೆ ಒಳನೋಟಗಳನ್ನು ಕೊಡುವ, ತಾಂತ್ರಿಕ ಹಾಗೂ ಸಂಕೀರ್ಣ ವಿವರಗಳು ಕನ್ನಡದಲ್ಲೂ ಲಭ್ಯವಿರಬೇಕೆಂದು ನನಗೆ ಅನ್ನಿಸಿತು. ಹೀಗಾಗಿ ನಾನು ತೆಲುಗಿನಿಂದ ತಂದಿದ್ದ ಕನ್ನಡಾವತರಣದಲ್ಲಿ ಇಂಗ್ಲೀಷಿನ ಕೆಲವು ಭಾಗಗಳನ್ನು ಸೇರಿಸುತ್ತಾ ಹೋದೆ.

ಇದು ಕಷ್ಟದ ಕೆಲಸವೇ ಆಗಿತ್ತು. ಎರಡೂ ಪುಸ್ತಕಗಳನ್ನು ಡಾ.ರೆಡ್ಡಿ ಭಿನ್ನ ಶೈಲಿಯಲ್ಲಿ ಭಿನ್ನ ಓದುಗರಿಗಾಗಿ ಬರೆದಿದ್ದರು. ಕೆಲವು ಘಟನೆಗಳ ವಿವರಗಳು ಪ್ರಾಸಂಗಿಕವಾಗಿ ಒಂದೆಡೆ ಹೆಚ್ಚೂ, ಮತ್ತೊಂದೆಡೆ ಕಮ್ಮಿಯೂ ಇತ್ತು. ಎರಡೂ ಪುಸ್ತಕಗಳನ್ನು ಸೇರಿಸಿ ಘಟನೆಗಳೂ ವಿಚಾರಗಳೂ ಪುನರಾವರ್ತನೆಯಾಗದಂತೆ ಜೋಡಿಸುವುದು ನನ್ನ ಮುಂದೆ ಸವಾಲಾಗಿ ನಿಂತಿತು. ಅದನ್ನೂ ನಿಭಾಯಿಸಿದೆ ಎಂದುಕೊಳ್ಳುವ ಹೊತ್ತಿಗೆ ಪುಸ್ತಕದ ಗಾತ್ರ ಸುಮಾರು 600 ಪುಟಗಳದ್ದಾಗಿತ್ತು. ಈ ಗಾತ್ರದ ಬರವಣಿಗೆಯನ್ನು ಅದರ ಹೂರಣ ತಪ್ಪದಂತೆ ಸಣ್ಣ ಪುಸ್ತಕದ ಗಾತ್ರಕ್ಕೆ ಇಳಿಸುವುದು ಸರಳವಾದ ಕೆಲಸವೇನೂ ಅಲ್ಲ.  ಎರಡೂ ಪುಸ್ತಕಗಳಲ್ಲಿದ್ದ ಖಾಸಗಿ ಮತ್ತು ವ್ಯಕ್ತಿಗತ ಟಿಪ್ಪಣಿಗಳನ್ನು, ಘಟನೆಗಳನ್ನು ಕತ್ತರಿಸಿ ಕೇವಲ ಅವರ ವೃತ್ತಿಜೀವನದ ವೈವಿಧ್ಯವನ್ನು ಗ್ರಹಿಸಲು ಪ್ರಯತ್ನಿಸಿದ್ದೇನೆ. ಇದು ಕನ್ನಡ ಓದುಗರಿಗೆ ದಕ್ಕಬೇಕಾದ ಮುಖ್ಯ ಪುಸ್ತಕವೆಂದು ನಾನು ನಂಬಿದ್ದೇನೆ.

ರಿಜರ್ವ್ ಬ್ಯಾಂಕು ಕಂಡ ಅತ್ಯಂತ ಪ್ರತಿಭಾಶಾಲಿ ಮತ್ತು ಸ್ವತಂತ್ರ ಚಿಂತನೆಯ ಗವರ್ನರ್ ಎನ್ನುವ ಹೆಸರು ಡಾ.ರೆಡ್ಡಿ ಅವರಿಗಿದೆ. ಸ್ವತಂತ್ರ ಎಂದಾಗ ಬಂಡೇಳುವ ಎನ್ನುವ ಅರ್ಥ ಬರಬಹುದು. ಆದರೆ ಸರಕಾರದ ಯಂತ್ರಾಂಗದಲ್ಲಿಯೇ ಇದ್ದು ತಮ್ಮ ತರ್ಕದ ಮತ್ತು ವಿಚಾರದ ಬಲದಿಂದ, ವ್ಯವಸ್ಥೆಯ ಒಳಗಿನಿಂದಲೇ ಸುಧಾರಣೆಗಳನ್ನು ತಂದ ವ್ಯಕ್ತಿ ಎನ್ನುವ ಕೀರ್ತಿ ಅವರಿಗೆ ಸಲ್ಲುತ್ತದೆ. ಆಡಳಿತ ಮತ್ತು ಆರ್ಥಿಕರಂಗದಲ್ಲಿ ಡಾ.ರೆಡ್ಡಿಯವರಿಗೆ ದೊಡ್ಡ ಹೆಸರು ಮತ್ತು ಗೌರವಗಳಿವೆ. ದೇಶದ ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ಮೊದಲಿಗೆ ಸರಕಾರದ ವಿತ್ತವಿಭಾಗದ ಅಧಿಕಾರಿಯಾಗಿ, ರಿಜರ್ವ್ ಬ್ಯಾಂಕಿನ ಉಪಗವರ್ನರ್ ಮತ್ತು ಗವರ್ನರ್ ಆಗಿ, ಹದಿನಾಲ್ಕನೇ ಹಣಕಾಸು ಆಯೋಗದ ಅಧ್ಯಕ್ಷರಾಗಿ ಡಾ.ರೆಡ್ಡಿ, ಮಹತ್ವದ ಪಾತ್ರವನ್ನು ವಹಿಸಿದ್ದಾರೆ. ಅದಲ್ಲದೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯಲ್ಲಿ ಭಾರತದ ಪ್ರತಿನಿಧಿಯಾಗಿಯೂ ಕೆಲಸ ಮಾಡಿದ್ದರೆ. ಈ ಪುಸ್ತಕವನ್ನು ಓದಿದಾಗ ಆರ್ಥಿಕ ಜಗತ್ತಿನ ನಿರ್ವಹಣೆ ಅತ್ಯಂತ ಸಂಕೀರ್ಣ ಹಾಗೂ ಗೋಜಲಿನ ವಿಚಾರವೆಂದು ಮನವರಿಕೆಯಾಗುವುದರ ಜೊತೆಗೆ ಅದನ್ನು ಅರ್ಥಮಾಡಿಕೊಂಡು ಒಂದು ನಿಖರ ಮತ್ತು ಸ್ಪಷ್ಟ ನಿಲುವಿನೊಂದಿಗೆ ಹೇಗೆ ನಿಭಾಯಿಸಬಹುದೆನ್ನುವುದೂ ಗೋಚರಿಸುತ್ತದೆ. ಡಾ.ರೆಡ್ಡಿಯವರ ಮಹತ್ವ ಇರುವುದು ಇಲ್ಲಿ. ಹೀಗಾಗಿಯೇ ಇದೊಂದು ಮಹತ್ವದ ಪುಸ್ತಕ ಮತ್ತು ಕನ್ನಡಕ್ಕೆ ಬರಲೇಬೇಕಾದ ಪುಸ್ತಕ ಎನ್ನುವುದು ನನ್ನ ನಂಬಿಕೆ.

ಈ ಪುಸ್ತಕ ಪ್ರಕಟವಾದ ಬಳಿಕ ನಮ್ಮ ಅರ್ಥಜಗತ್ತಿನಲ್ಲಿ ಅನೇಕ ಮಹತ್ವದ ವಿಷಯಗಳು ಘಟಿಸಿವೆ. ನೋಟು ಬಂದಿಯಿಂದ ನಮ್ಮ ಅರ್ಥವ್ಯವಸ್ಥೆ ಕೆಲದಿನಗಳ ಮಟ್ಟಿಗೆ ನಿಂತೇ ಹೋಗಿ ಅದರ ಪ್ರಭಾವದಿಂದ ನಾವು ಇನ್ನೂ ಚೇತರಿಸಿಕೊಳ್ಳತ್ತಲೇ ಇದ್ದೇವೆ. ಜಿಎಸ್‌ಟಿ ತೆರಿಗೆಯ ಆಡಳಿತದ ಚೌಕಟ್ಟಿನಲ್ಲಿ ಒಂದು ಪ್ರಗತಿಪರ ಹೆಜ್ಜೆಯಾದರೂ, ಅದರ ಜಾರಿಯಲ್ಲಿನ ಕಷ್ಟಗಳನ್ನು ಅನುಭವಿಸುತ್ತಲೇ ಇದ್ದೇವೆ. ಸಾಲದ್ದಕ್ಕೆ ಆರ್ಥಿಕ ಪ್ರಗತಿ ಮಂದಗತಿಯಲ್ಲಿದೆ. ಈ ಘಟ್ಟದಲ್ಲಿ ಡಾ. ರೆಡ್ಡಿಯವರಂತಹ ವ್ಯಕ್ತಿಗಳ ಮಹತ್ವವನ್ನು ನಾವು ಗುರುತಿಸಬೇಕು. 1991ರ ಆರ್ಥಿಕ ಬಿಕ್ಕಟ್ಟನ್ನು ನಿಭಾಯಿಸುವಲ್ಲಿ ಸರಕಾರಿ ಅಧಿಕಾರಿಯಾಗಿ ಡಾ.ರೆಡ್ಡಿಯವರ ಪಾತ್ರ ಮಹತ್ವದ್ದು. ಹಾಗೇ 2008ರ ಜಾಗತಿಕ ಆರ್ಥಿಕ ಬಿಕ್ಕಟ್ಟು ನಮ್ಮನ್ನ ತಟ್ಟದಂತೆ ಕಾಪಾಡಿದವರೂ ಇವರೇ.

ಈ ಪುಸ್ತಕವನ್ನು ಕನ್ನಡಕ್ಕೆ ತರುವ ಪ್ರಕ್ರಿಯೆಯಲ್ಲಿ ನಾನು ನಿರಂತರವಾಗಿ ಡಾ.ರೆಡ್ಡಿಯವರೊಂದಿಗೆ ಸಂಭಾಷಣೆಯಲ್ಲಿದ್ದೆ. ನನಗೆ ಆಗುತ್ತಿರುವ ಕಷ್ಟಗಳನ್ನು ತೋಡಿಕೊಳ್ಳುತ್ತಿದ್ದೆ. ಈ ಪುಸ್ತಕವನ್ನು ಪುನರ್ರಚನೆ ಮಾಡಲು, ಮರುನಿರೂಪಿಸಲು ಡಾ. ರೆಡ್ಡಿ ಖುಷಿಯಿಂದ ಅನುಮತಿ ನೀಡಿದ್ದಲ್ಲದೇ, ನನ್ನ ಮೇಲೆ ನಂಬಿಕೆಯಿಟ್ಟರು. ಅದು ದೊಡ್ಡ ಮಾತು. ಅನುವಾದವೆಂದು ಪ್ರಾರಂಭವಾದ ಈ ಕೆಲಸ ಈಗ ಸಂಪೂರ್ಣವಾಗಿ ಎರಡು ಭಿನ್ನ ಪುಸ್ತಕಗಳಿಂದ ಮರುನಿರೂಪಣೆಗೊಂಡ ಸ್ವತಂತ್ರ ಪುಸ್ತಕವಾಗಿದೆ.

*****

ತಂದೆಯ ನಂಬಿಕೆಯೇ ದಾರಿದೀಪ!

1962 ಅಕ್ಟೋಬರಿನಲ್ಲಿ ಭಾರತ-ಚೀನಾ ಯುದ್ಧ ಶುರುವಾಯಿತು. ಆಗ ರಾಷ್ಟ್ರಭಕ್ತಿ ಉಕ್ಕಿ ಹರಿಯುತ್ತಿತ್ತು. ಹೆಂಗಸರು ತಮ್ಮ ಚಿನ್ನಾಭರಣಗಳನ್ನು ದೇಣಿಗೆಯಾಗಿ ಕೊಟ್ಟರು. ಯುವಕರು ಸೈನ್ಯ ಸೇರಿದರು. ಚೀನೀ ಸೈನ್ಯ ತಮಗೆ ಬೇಕಾದ ಹಾಗೆ ಸರಹದ್ದನ್ನು ಪ್ರವೇಶಿಸಿತ್ತು. ಭಾರತೀಯ ಸೈನ್ಯ ಕುಸಿದಿತ್ತು. ನಮ್ಮ ಪ್ರಧಾನಿ ನೆಹರೂ ಅಲ್ಲಿಯವರೆಗೂ ಹೇಳುತ್ತಿದ್ದ ‘ಹಿಂದಿ–ಚೀನೀ ಭಾಯಿಭಾಯಿ’ ಅನ್ನುವ ನಂಬಿಕೆ, ಯುವಕರ ಆತ್ಮವಿಶ್ವಾಸ ಎರಡೂ ಕುಸಿಯಿತು. ಒಂದು ತಿಂಗಳಲ್ಲಿ ಚೀನೀಯರೇ ಯುದ್ಧವಿರಾಮವನ್ನು ಘೋಷಿಸಿ ಯುದ್ಧ ನಿಂತಿತು. ಚೀನೀಯರ ಉದ್ದೇಶ ನಮ್ಮ ಆತ್ಮಬಲಕ್ಕೆ ಪೆಟ್ಟು ಕೊಡುವುದಾಗಿತ್ತು, ಅದನ್ನು ಸುಲಭವಾಗಿ ಸಾಧಿಸಿದರು. ಸ್ವಾತಂತ್ರ ಸಂಗ್ರಾಮದ ಸೇನಾನಿ, ಮಹಾಮಾನವನಂತೆ ಕಾಣುತ್ತಿದ್ದ ನಮ್ಮ ಪ್ರೀತಿಯ ಪಂಡಿತ್ ನೆಹರೂ ಇದ್ದಕ್ಕಿದ್ದ ಹಾಗೆ, ದುರ್ಬಲರಾಗಿ, ವಯಸ್ಸಾದವರಂತೆ ಕಂಡರು. ಅವರ ಆತ್ಮವಿಶ್ವಾಸವೂ ಕುಗ್ಗಿತ್ತು. ಕೆಲವೇ ವರ್ಷಗಳ ಹಿಂದೆ ನಾವು ಹೆಮ್ಮೆಯಿಂದ ಸ್ವಾತಂತ್ರ್ಯ ಪಡೆದಿದ್ದೆವು; ಈ ಯುದ್ಧದಲ್ಲಿ ಕೆಟ್ಟ ಸೋಲನ್ನು ಕಂಡಿದ್ದೆವು. ಅನೇಕ ಯುವಕರಂತೆ ನನಗೂ ಇದರಿಂದ ಬೇಜಾರಾಗಿ, ಚೂರಾಗಿ ಹೋಗಿದ್ದೆ. ಭಾರತ-ಚೀನಾ ಯುದ್ಧದ ಆರ್ಥಿಕತೆಯನ್ನು ವಿಶ್ಲೇಷಿಸುವ ಒಂದೂ ಪ್ರಬಂಧ ಆ ದಿನಗಳಲ್ಲಿ ಬರಲಿಲ್ಲ. ಆರ್ಥಿಕ ನೀತಿ ರಾಜಕೀಯ ಬೆಳವಣಿಗೆಗಳಿಗೆ ಹೊರತಾಗಿಯೇ ಮುಂದುವರೆಯುತ್ತಿತ್ತೇನೋ. ಯುದ್ಧವಾದ ಮೇಲೆ ಸರಕಾರ ನಮ್ಮ ಸೈನ್ಯವನ್ನು ಇನ್ನಷ್ಟು ಬಲಪಡಿಸಬೇಕೆಂದು ಯೋಚಿಸಿತು. ಅದಕ್ಕೆ ಮೊದಲ ಹೆಜ್ಜೆಯಾಗಿ ಎನ್.ಸಿ.ಸಿ.ಯನ್ನು ಬಲಪಡಿಸುವ ಕೆಲಸ ಶುರುವಾಯಿತು. ರೈಫಲ್ ವಿಭಾಗದಲ್ಲಿ ಸೆಕೆಂಡ್ ಲೆಫ್ಟಿನೆಂಟಾಗಿ ಸೇರಿದೆ. ನಾನು ಪಥಸಂಚಲನವನ್ನು ನಿಭಾಯಿಸಬೇಕಿತ್ತು, ತರಬೇತಿ ನೀಡುವುದಲ್ಲದೇ ಆಡಳಿತವನ್ನೂ ಮಾಡಬೇಕಿತ್ತು. ಇದು ನನಗೆ ತೃಪ್ತಿಯನ್ನು ಕೊಟ್ಟಿತ್ತು. ನಾನು ಕ್ಷಣ ಯೋಚಿಸದೆಯೇ ಅದರಲ್ಲಿ ಸೇರಿದ್ದೆ. ಜೀವನದಲ್ಲಿ ಮೊದಲ ಬಾರಿಗೆ ನನ್ನ ಹೆಸರನ್ನ ಸರಕಾರದ ಗೆಜೆಟ್ಟಿನಲ್ಲಿ ನೋಡಿ ಖುಷಿಪಟ್ಟೆ.

ತಂದೆಗಾಗಿಯೇ…

ಅಯ್ಯನ ಗೆಳೆಯರಿಗೆ ಅನಾರೋಗ್ಯವಾದಾಗ, ಅಯ್ಯನ ಜೊತೆ ಉಸ್ಮಾನಿಯಾ ಆಸ್ಪತ್ರೆಗೆ ಹೋದೆ. ಹಿಂದಿರುಗುವಾಗ ಅಯ್ಯ ವಾಂತಿ ಮಾಡಿಕೊಳ್ಳುತ್ತಾ ಎದೆ ಹಿಡಿದು ಕುಸಿದರು. ಆಸ್ಪತ್ರೆಯ ಆವರಣದಲ್ಲೇ ಹೀಗಾದ್ದರಿಂದ ತಕ್ಷಣವೇ ಡಾಕ್ಟರನ್ನು ಕರೆತಂದೆ. ‘ಹೃದಯಾಘಾತ’ ಅನ್ನುತ್ತಾ ಆಸ್ಪತ್ರೆಯಲ್ಲಿ ಸೇರಿಸಿದರು. ನಂತರ ಅಯ್ಯ ಹೆಚ್ಚೇನೂ ಸುಧಾರಿಸಿಕೊಳ್ಳಲಿಲ್ಲ. ಐದು ವರ್ಷಗಳ ಹಿಂದೆಯೇ ಅಯ್ಯನಿಗೆ ಮೂತ್ರಕೋಶದ ಕ್ಯಾನ್ಸರ್ ಆಗಿತ್ತು. ವೆಲ್ಲೂರಿಗೆ ಒಯ್ದು ಶಸ್ತ್ರಚಿಕಿತ್ಸೆ ಮಾಡಿಸಿದ್ದೆವು. ಆ ವಯಸ್ಸಿನಲ್ಲಿ ಹೃದಯದ ಹಿಗ್ಗುವಿಕೆ, ನಂತರ ಸರಣಿ ಅನಾರೋಗ್ಯದಿಂದ 63ರ ವಯಸ್ಸಿಗೆಲ್ಲಾ ಅಯ್ಯ ಕ್ಷೀಣಿಸಿದರು. ಬಿ.ಎ ಓದುತ್ತಿದ್ದ ನನ್ನ ತಂಗಿಗೆ ತಕ್ಷಣವೇ ಮದುವೆ ಮಾಡಬೇಕೆಂದುಕೊಂಡರು. ಸಂಬಂಧಗಳನ್ನು ಹುಡುಕಿ ನನ್ನ ತಂಗಿ ಪ್ರಮೀಳಾಗೆ 1963ರ ಮೇ ತಿಂಗಳಲ್ಲಿ ಮದುವೆ ಮಾಡಿದೆವು. ಅಯ್ಯನ ಅನಾರೋಗ್ಯ ಮದುವೆಯ ಕೆಲಸಗಳು ಮನೆ ಕಟ್ಟುವುದರ ಉಸ್ತುವಾರಿ…. ಈ ಎಲ್ಲದರ ನಡುವೆ ನನಗೆ ಉಸಿರಾಡಲೂ ಸಮಯವಿರಲಿಲ್ಲ!

ಉಸ್ಮಾನಿಯಾದಲ್ಲಿದ್ದಾಗ, ಲೋಕಸೇವಾ ಆಯೋಗದ ಪರೀಕ್ಷೆಯನ್ನು ಬರೆಯಬೇಕೆಂದು ಅಯ್ಯ ಆಶಿಸಿದರು. ಆ ಬಗ್ಗೆ ನನಗೆ ಹೆಚ್ಚೇನೂ ಆಸಕ್ತಿಯಿರಲಿಲ್ಲ. ಆದರೆ ಅಯ್ಯ ಹಿಡಿದ ಪಟ್ಟನ್ನು ಬಿಡಲಿಲ್ಲ. ಈ ಮಾತನ್ನು ಪ್ರೊಫೆಸರ್ ರಾಮನಾಥಂ ಜೊತೆ ಚರ್ಚಿಸಿದೆ. ಅವರು ಸಿಟ್ಟಾದರು.

‘ನಿಮ್ಮವನು ಅರ್ಥಶಾಸ್ತ್ರದಲ್ಲಿ ಮಿಂಚುತ್ತಿದ್ದಾನೆ… ಅದರಲ್ಲೇ ಮುಂದುವರೆಯಲಿ ಬಿಡಿ…’ ಎಂದು ಅವರು ಮನೆಗೆ ಬಂದು ಅಯ್ಯನಿಗೆ ಹೇಳಿದರು. ಆದರೆ ಅಯ್ಯನ ಮನಸ್ಸು ಬದಲಾಗಲಿಲ್ಲ.

‘ಐಎಎಸ್ ಸಿಕ್ಕರೆ ಸೇರು. ಅದು ಬಿಟ್ಟು ಬೇರೇನು ಬಂದರೂ ನಿನ್ನಿಷ್ಟ…’ ಅಂತ ಸ್ವಲ್ಪ ಸಡಿಲ ಬಿಟ್ಟರು.

ಆಗ ಉಸ್ಮಾನಿಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಆಗಿ ಐಎಎಸ್ ಅಧಿಕಾರಿ ಬಿ.ಪಿ.ಆರ್.ವಿಠಲ್ ಇದ್ದರು. ಅವರೂ ಸಿವಿಲ್ಸ್ ಬೇಡ, ಸಂಶೋಧನಾ ರಂಗದಲ್ಲೇ ಮುಂದುವರೆಯುವಂತೆ ಸಲಹೆ ಕೊಟ್ಟಿದ್ದರು. ಉಪಕುಲಪತಿ ವಿ.ಸಿ.ರೆಡ್ಡಿಯವರ ಅಭಿಪ್ರಾಯವೂ ಇದೇ ಆಗಿತ್ತು.

‘ನನ್ನ ತಂದೆಯ ಬಯಕೆಯಂತೆ ಪರೀಕ್ಷೆ ಬರೆಯಬೇಕೆಂದಿದ್ದೇನೆ’ ಅಂದೆ.

‘ನಿನಗೆ ಸ್ವಂತ ನಿರ್ಧಾರ ತೆಗೊಳ್ಳೋಷ್ಟು ವಯಸ್ಸಾಗಿದೆ..’ ಎಂದರಾತ.

‘ನಮ್ಮ ತಂದೆಯ ಇಷ್ಟವನ್ನು ಪೂರೈಸಲು ಪ್ರಯತ್ನಿಸುತ್ತೇನೆ. ಹಾಗಾಗಿ ಪರೀಕ್ಷೆಗೆ ಹೋಗುತ್ತೇನೆ…’ ಅಂತ ಖಂಡಿತವಾಗಿ ಹೇಳಿದೆ.
ಪರೀಕ್ಷೆಗಳಿಗೆ ಒಂದು ತಿಂಗಳಿರುವಾಗ ಅಯ್ಯನ ಆರೋಗ್ಯ ತೀರಾ ಹದಗೆಟ್ಟಿತು. ಮನೆಯಲ್ಲಿ ಇದ್ದರೆ ಓದು ಸಾಗೋದಿಲ್ಲವೆಂದು ನ್ಯೂ ಎಂ.ಎಲ್.ಎ. ಕ್ವಾರ್ಟರ್ಸ್ ನಲ್ಲಿ ಒಂದು ಕೋಣೆಯನ್ನು ಬಾಡಿಗೆಗೆ ಹಿಡಿದೆ. ಪ್ರತಿದಿನ ಬೆಳಿಗ್ಗೆ ಮತ್ತು ಸಾಯಂಕಾಲ ಮನೆಗೆ ಹೋಗಿ ಅಯ್ಯನನ್ನು ನೋಡಿಬರುತ್ತಿದ್ದೆ. ದಿನವೆಲ್ಲಾ ಓದು, ತಯಾರಿ. ಪರೀಕ್ಷೆಯ ಸಮಯಕ್ಕೆ ಅಯ್ಯನ ಆರೋಗ್ಯ ಪೂರ್ತಿ ಹದಗೆಟ್ಟಿತ್ತು. ಅಯ್ಯ ಸಾವಿನಂಚಿಗೆ ಬಂದಿದ್ದರು. ಪರೀಕ್ಷೆಯಲ್ಲಿ ಬ್ರಿಟಿಷ್ ಇತಿಹಾಸವನ್ನು ಸರಿಯಾಗಿ ಬರೆಯಲಿಲ್ಲವೆಂದು ಅಸಮಾಧಾನವಿತ್ತು.

ಕಡೆಯದಿನ ಪರೀಕ್ಷೆ ಬರೆದು ಮನೆಗೆ ಬಂದೆ. ಅಯ್ಯ ‘ಸಿನೇಮಾ ನೋಡಿಬಾರೋ’ ಅಂದರು. ನೋಡಿಬಂದೆ. ಮಾರನೆಯ ದಿನ ಕೋಣೆ ಖಾಲಿ ಮಾಡಿ, ಮನೆಗೆ ಬಂದೆ. ಅಯ್ಯನನ್ನು ಆಸ್ಪತ್ರೆಗೆ ಸೇರಿಸಿದೆ. ಅಯ್ಯ ಕೊನೆಯುಸಿರೆಳೆಯುವುದಕ್ಕೆ ಒಂದರ್ಧಗಂಟೆ ಮುಂಚೆ…
‘ಪರೀಕ್ಷೆ ಚೆನ್ನಾಗಿ ಬರೆದಿದ್ದೀ ತಾನೇ?’ ಅಂತ ಕೇಳಿದರು.

‘ಚೆನ್ನಾಗಿ ಬರೆದಿದ್ದೀನಿ. ಸಂದರ್ಶನಕ್ಕೆ ಖಂಡಿತವಾಗಿಯೂ ಕರೆ ಬರುತ್ತೆ’ ಧೈರ್ಯದಿಂದ ಹೇಳಿದೆ. ‘ನಮಗೆ ಯಾರಿದ್ದಾರೋ?’ ಅಂತ ಕೇಳಿ, ‘ದೇವರಿದ್ದಾರೆ ಬಿಡು…’ ಅಂದರು. ನಂತರ ಹದಿನೈದು ನಿಮಿಷ ಏನೂ ಮಾತಾಡಲಿಲ್ಲ. ಅಷ್ಟರಲ್ಲಿ ಅಮ್ಮ, ತಂಗಿ, ತಮ್ಮಂದಿರು ಬಂದರು. ಎಲ್ಲರ ಕಡೆಗೂ ಒಮ್ಮೆ ನೋಡಿದರು. ‘ಸ್ವಲ್ಪ ವಿಭೂತಿ ಕೊಡೋ’ ಅಂದರು. ಸ್ವಲ್ಪ ತೆಗೆದು ಹಣೆಗಿಟ್ಟೆ, ಸ್ವಲ್ಪ ಬಾಯಿಗೆ ಹಾಕಿದೆ. ಕೆಲವು ಕ್ಷಣಗಳಲ್ಲಿ ಅಯ್ಯ ತೀರಿಕೊಂಡರು!

ತಾನು ಮೃತ್ಯುಮುಖದಲ್ಲಿದ್ದುದು ಅಯ್ಯನಿಗೆ ಮುಂಚಿನಿಂದಲೇ ಗೊತ್ತಿತ್ತು. ಮಕ್ಕಳು ಚಿಕ್ಕವರು ಅನ್ನುವ ವಿಷಯ ಕಡೆ ದಿನಗಳಲ್ಲಿ ಅವರನ್ನು ಕಲಕಿಬಿಟ್ಟಿತ್ತು. ಇಪ್ಪತ್ತೆರಡರ ವಯಸ್ಸಿನಲ್ಲಿ ನಾನು ಕುಟುಂಬದ ಜವಾಬ್ದಾರಿಯನ್ನು ಹೊರಬೇಕಾಗಿ ಬಂದದ್ದರಿಂದ ಅಯ್ಯ ಬೇಸರ ಪಟ್ಟುಕೊಂಡಿದ್ದರು. ಅನಾರೋಗ್ಯದಿಂದಾಗಿ ಅಯ್ಯ ಸಾವಿನತ್ತ ಪಯಣಿಸುತ್ತಿದ್ದಾರೆಂದು ನಮಗೂ ಗೊತ್ತಿತ್ತು. ಕುಟುಂಬದ ಹಿರಿಯನನ್ನು ಕಳೆದುಕೊಳ್ಳುವುದು ಕಷ್ಟವೇ. ಲೆಕ್ಕಹಾಕಿ ನೋಡಿದೆ. ಅಯ್ಯನಿಗೆ ಸಮೀಪವಾಗಿ ಹತ್ತು ವರ್ಷವೂ ಇರಲಿಲ್ಲ. ಆದರೆ ಆ ವ್ಯಕ್ತಿತ್ವ, ಅವರ ಜೀವನ ನನ್ನ ಮೇಲೆ ಹಾಕಿದ ಮುದ್ರೆಯನ್ನು ಅಳಿಸಲು ಸಾಧ್ಯವೇ ಇಲ್ಲ.

ಅದೇ ದೊಡ್ಡ ಪಾಠ..

ಲೋಕಸೇವಾ ಆಯೋಗದ ಸಂದರ್ಶನ ಚೆನ್ನಾಗಿ ಆಗದಿದ್ದರೂ, ಲಿಖಿತ ಪರಿಕ್ಷೆಯಲ್ಲಿ ಹೆಚ್ಚಿನ ಅಂಕಿಗಳನ್ನು ಸಂಪಾದಿಸಬೇಕೆನ್ನುವುದು ನನ್ನ ಯೋಚನೆಯಾಗಿತ್ತು. ಅದನ್ನು ಜಾರಿಗೊಳಿಸಿದ್ದೆ. 1964 ಫೆಬ್ರವರಿಯಲ್ಲಿ ಸಂದರ್ಶನಕ್ಕೆ ಕರೆ ಬಂತು! ಮೇಷ್ಟರಾಗಿ ಕೆಲಸ ಮಾಡುತ್ತಲೇ ಸಂದರ್ಶನಕ್ಕೆ ಸನ್ನದ್ಧನಾದೆ. ಇಪ್ಪತ್ತು ನಿಮಿಷಗಳ ಕಾಲ ಸಂದರ್ಶನ ನಡೆಯಿತು. ಶ್ರಮ ಹಾಳಾಗಲಿಲ್ಲ. ಒಟ್ಟಾರೆ ಹನ್ನೆರಡನೆಯ ಸ್ಥಾನ ಸಿಕ್ಕಿತು. ಪರೀಕ್ಷೆಯ ಫಲಿತಾಂಶಗಳು ಬಂದಾಗ ತಿರುಪತಿಯಲ್ಲಿದ್ದೆ. 1964ರಲ್ಲಿ ಸಿವಿಲ್ ಸರ್ವೀಸಿಗೆ ಸೇರಿದೆ. ತಂದೆಯ ಸಾವು ಒಂದಾದರೆ, ಪರೀಕ್ಷೆಯಲ್ಲಿ ಗೆದ್ದದ್ದು ಮತ್ತೊಂದು – ಇಪ್ಪತ್ತೆರಡರ ವಯಸ್ಸಿನಲ್ಲಿ ಆದ ಈ ಅನುಭವ ನನಗೆ ಮಾನವ ಸ್ವಭಾವಗಳ ಬಗೆಗಿನ ಒಳನೋಟಗಳನ್ನು ಕೊಟ್ಟಿತು. ಜೀವನದ ಪಾಠಗಳನ್ನು ಕಲಿಸಿತು.