ಕ್ಯಾಲಿಫೋರ್ನಿಯಾದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಸುಪಾರಿ ಕೊಲೆ, ಸುಲಿಗೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಮೇಲಿನವರ ಪ್ರಶಂಸೆಗೆ ಪಾತ್ರನಾದ. ಹಾಲಿವುಡ್ ತಾರೆಯರ ತೋಳಿನಲ್ಲಿ ತೋಳು ಬೆರೆಸಿ ಓಡಾಡಿದ. ಅಷ್ಟೊತ್ತಿಗಾಗಲೇ ನೆವಾಡಾ ತನ್ನ ರಾಜ್ಯಾದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂಜು ಅಡ್ಡೆಗಳನ್ನು ಸಂವಿಧಾನಾತ್ಮಕವಾಗಿ ಅಂಗೀಕರಿಸಿತ್ತು. ದೂರದೃಷ್ಟಿ ಉಳ್ಳ ಈ ಖದೀಮ ಕಳ್ಳನಿಗೆ ಲಾಸ್ ವೇಗಸ್ಸಿನಲ್ಲಿ ಅತ್ಯಂತ ವೈಭವಪೂರ್ಣವಾದ ಕಸಿನೋಗಳನ್ನೂ ತೆರೆದು ಹಣದ ಹೊಳೆ ಹರಿಸುವ ಮಾರ್ಗ ಹೊಳೆದುಹೋಯಿತು.
ಅಮೆರಿಕಾದ ಲಾಸ್ ವೇಗಸ್ ನಗರದ ಇತಿಹಾಸದ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ
ಐಷಾರಾಮಿ ಕೆಸಿನೋಗಳ ಮೂಲಕ ಲಕ್ಷಾಂತರ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಲಾಸ್ ವೇಗಸ್ ನಗರಿ ಪ್ರವರ್ಧಮಾನಕ್ಕೆ ಬಂದ ಕತೆ ಸಿಂಡಿರೆಲ್ಲ ಕತೆಯಂತೆ ರೋಚಕವಾಗಿದೆ. ಬೂದಿ ಮೆತ್ತಿಕೊಂಡಿರುತ್ತಿದ್ದ ಪಾಪದ ಹುಡುಗಿಯನ್ನು ಸಿಂಗಾರ ಸಿರಿಯನ್ನಾಗಿಸಲು ಕಿನ್ನರ ಲೋಕದ ಗಾಡ್ ಮದರ್ ತನ್ನ ಕೃಪಾ ಕಟಾಕ್ಷ ತೋರಿದಂತೆ ಮೊಹಾವೇ ಮರುಭೂಮಿಯ ಮೇಲೆ ಕುಳಿತು ಯಾರಿಂದಲೂ ಕ್ಯಾರೇ ಅನ್ನಿಸಿಕೊಳ್ಳದೆ ಬಣಗುಟ್ಟುತ್ತಿದ್ದ ಈ ಪುಟ್ಟ ಹಳ್ಳಿಯು ಝಗಮಗಾಯಿಸುವಂತಾಗಲು ಭೂಗತ ಲೋಕದ ಗಾಡ್ ಫಾದರ್‌ಗಳ ಕೈವಾಡವಿದೆ.
ಮೊದಲ ಹೆಜ್ಜೆಗಳು
ಕಳೆದ ಶತಮಾನದ ಮೂವತ್ತರ ದಶಕದಲ್ಲಿ, ಕೇಂದ್ರ ಸರ್ಕಾರವು, ಕೊಲೊರಾಡೊ ನದಿಯ ಹುಚ್ಚು ನೆರೆಯನ್ನು ಹದ್ದುಬಸ್ತಿನಲ್ಲಿರಿಸಿ ಲಕ್ಷಾಂತರ ಎಕರೆಗಳಿಗೆ ನೀರುಣಿಸುವ ಸಲುವಾಗಿ ಲಾಸ್ ವೇಗಸ್ ಹತ್ತಿರದಲ್ಲಿ ಬೃಹತ್ತಾದ ಹೂವರ್ ಒಡ್ಡು ಕಟ್ಟುವ ನಿರ್ಧಾರ ತೆಗೆದುಕೊಂಡಿತು. ಮಹಾನ್ ಆರ್ಥಿಕ ಕುಸಿತದ ಕಾಲವದು. ಹೊಟ್ಟೆಪಾಡಿಗಾಗಿ ಹಪಹಪಿಸುವ ಸಾವಿರಾರು ಕೂಲಿ ಕಾರ್ಮಿಕರು ನಾಮುಂದೆ ತಾಮುಂದೆ ಎಂದು ಅಣೆಕಟ್ಟಿನ ಕೆಲಸಕ್ಕೆ ಬಂದು ಇಲ್ಲೇ ನೆಲೆ ನಿಂತರು. ಅದುವರೆಗೆ, ಅತಿ ಕಡಿಮೆ ಜನಸಂಖ್ಯೆಯನ್ನು ಹೊಂದಿದ್ದ ಲಾಸ್ ವೇಗಸ್ ನಗರಿಯು ಅಕ್ಕ ಪಕ್ಕದ ರಾಜ್ಯಗಳ ಮಧ್ಯೆ ಓಡಾಡುವ ರೈಲುಗಳಿಗೆ ಉರುವಲು ತುಂಬಿಕೊಡುವ ತಂಗುದಾಣವಾಗಿತ್ತಷ್ಟೆ. ಒಡ್ಡಿನ ದಸೆಯಿಂದಾಗಿ ಬಂಜರು ಭೂಮಿಯಲ್ಲಿ ಜೀವಕಳೆ ಮೂಡಿತು. ಹೂವರ್ ಅಣೆಕಟ್ಟಿನ ನಿರ್ಮಾಣದ ಸಮಯದಲ್ಲಿಅಮೇರಿಕಾ ಸಂವಿಧಾನದ ಇಪ್ಪತ್ತೊಂದನೆಯ ತಿದ್ದುಪಡಿಯ ಮೂಲಕ ಸುಮಾರು ಹತ್ತು ವರುಷಗಳ ಕಾಲ ಜಾರಿಯಲ್ಲಿದ್ದ ಪಾನ ನಿಷೇಧದ ನಿರ್ಬಂಧ ತೆರೆಯಲಾಯಿತು ಮತ್ತು ನೆವಡಾ ರಾಜ್ಯವು ಕಸಿನೊ ಜೂಜಿನ ವಹಿವಾಟನ್ನು ಸಂವಿಧಾನ ಬದ್ಧವಾಗಿ ಅಪ್ಪಿಕೊಂಡಂತಹ ಮೊದಲ ರಾಜ್ಯವಾಯಿತು. ಕದ್ದು ಮುಚ್ಚಿ ಮಾಡುತ್ತಿದ್ದ ಕಳಪೆ ದರ್ಜೆಯ ಕಳ್ಳು ಸೇಂದಿಗಳಿಂದ ಬಾಯಾರಿಕೆ ನೀಗಿಸಿಕೊಳ್ಳುವ ಅನಿವಾರ್ಯತೆ ಇಲ್ಲವಾಗಲು, ನದಿಯ ನೀರಿಗೆ ಶಿಸ್ತು ಕಲಿಸಲು ಬಂದ ಕೂಲಿಕಾರರ ಸಂಯಮದ ಕಟ್ಟೆ ಒಡೆಯಿತು. ಸಂಜೆಯಾದರೆ ಸಾಕು ಲಂಗು ಲಗಾಮಿಲ್ಲದ ಕುಡಿತ ಹಾಗು ಜೂಜಿನಲ್ಲಿ ಕಾಲಹರಣ ಮಾಡುವವರ ಸಂಖ್ಯೆ ಮಿತಿಮೀರಿತು. ವಾತಾವರಣಕ್ಕೆ ತಕ್ಕಂತೆ ಸಣ್ಣ ಪುಟ್ಟ ಜೂಜು ಕೇಂದ್ರಗಳು ಹಾಗು ಬಾರುಗಳ ಕಾರುಬಾರು ಶುರುವಾದವು.
ಬಗ್ಸಿ ಸೀಗಲ್
ಕೊಲೆ ದರೋಡೆ ಸುಲಿಗೆಗಳನ್ನು ಅತ್ಯಂತ ವ್ಯವಸ್ಥಿತವಾಗಿ ಮಾಡುವ ಅನೇಕ ಸಂಘಟಿತ ಅಪರಾಧಿಗಳ ಗುಂಪು ಅಮೆರಿಕೆಯ ಪೂರ್ವ ಕರಾವಳಿಯ ಪಟ್ಟಣಗಳಲ್ಲಿ ಹರಡಿ ಹೋಗಿದ್ದವು. ಬೋರ್ಡ್ ಆಫ್ ಡೈರೆಕ್ಟರ್ಸ್, ಬಾಸ್, ಸೋಲ್ಜರ್, ಅಸೋಸಿಯೇಟ್ ಎಂದೆಲ್ಲ ಅಧಿಕಾರ ಶ್ರೇಣಿಗಳನ್ನೂ ಹೊಂದಿ ಕಾರ್ಪೊರೇಟ್ ಶೈಲಿಯಲ್ಲಿ ತಮ್ಮ ವ್ಯವಹಾರಗಳನ್ನು ನಡೆಸುತ್ತಿದ್ದ ಈ ಪ್ರಭಾವೀ ಗುಂಪುಗಳ ಕರಾಳ ಹಸ್ತಗಳು ಸಮಾಜದ ವಿವಿಧ ಸ್ತರಗಳಲ್ಲಿರುವವರ ಕುತ್ತಿಗೆಯನ್ನು ತಮ್ಮ ಕಪಿ ಮುಷ್ಟಿಯಲ್ಲಿ ಭದ್ರವಾಗಿ ಹಿಡಿದು, ತಮಗೆ ಬೇಕೆಂದಾಗ, ಸಾಂಕೇತಿಕವಾಗಿ ಮತ್ತು ಅಕ್ಷರಶಃವಾಗಿ ಹಿಸುಕುತ್ತಿದ್ದವು. ಭೂಗತ ಲೋಕದ ಸಿಂಡಿಕೇಟ್ ಮುಖಂಡರು ತಮ್ಮ ವ್ಯವಹಾರವನ್ನು ಪಶ್ಚಿಮದ ಕ್ಯಾಲಿಫೋರ್ನಿಯಾ ರಾಜ್ಯದಲ್ಲಿ ಹರಡಲು ಬಗ್ಸಿ ಸೀಗಲ್ ಎಂಬ ಆಕರ್ಷಕ ವ್ಯಕ್ತಿತ್ವದ ಕಾಳ ದಂಧೆಯಲ್ಲಿ ಪಳಗಿದ ಯುವಕನನ್ನು ನಿಯೋಜಿಸಿದರು. ಅವರ ಅಪೇಕ್ಷೆಗೆ ತಕ್ಕಂತೆ ಬಗ್ಸಿ ಬೆನ್ನು ಬಗ್ಗಿಸಿ ಕೆಲಸ ಮಾಡಿದ.
ಕ್ಯಾಲಿಫೋರ್ನಿಯಾದಲ್ಲಿ ಮಾದಕ ಪದಾರ್ಥಗಳ ಕಳ್ಳ ಸಾಗಾಣಿಕೆ, ಸುಪಾರಿ ಕೊಲೆ, ಸುಲಿಗೆಗಳನ್ನು ಯಶಸ್ವಿಯಾಗಿ ನಿಭಾಯಿಸುತ್ತಾ ಮೇಲಿನವರ ಪ್ರಶಂಸೆಗೆ ಪಾತ್ರನಾದ. ಹಾಲಿವುಡ್ ತಾರೆಯರ ತೋಳಿನಲ್ಲಿ ತೋಳು ಬೆರೆಸಿ ಓಡಾಡಿದ. ಅಷ್ಟೊತ್ತಿಗಾಗಲೇ ನೆವಾಡಾ ತನ್ನ ರಾಜ್ಯಾದಾಯ ಹೆಚ್ಚಿಸಿಕೊಳ್ಳುವ ಸಲುವಾಗಿ ಜೂಜು ಅಡ್ಡೆಗಳನ್ನು ಸಂವಿಧಾನಾತ್ಮಕವಾಗಿ ಅಂಗೀಕರಿಸಿತ್ತು. ದೂರದೃಷ್ಟಿ ಉಳ್ಳ ಈ ಖದೀಮ ಕಳ್ಳನಿಗೆ ಲಾಸ್ ವೇಗಸ್ಸಿನಲ್ಲಿ ಅತ್ಯಂತ ವೈಭವಪೂರ್ಣವಾದ ಕಸಿನೋಗಳನ್ನೂ ತೆರೆದು ಹಣದ ಹೊಳೆ ಹರಿಸುವ ಮಾರ್ಗ ಹೊಳೆದುಹೋಯಿತು. ತನ್ನ ಪ್ರೇಯಸಿ ಹಾಗು ಹಾಲಿವುಡ್ ತಾರೆ ವರ್ಜೀನಿಯ ಹಿಲ್ ಜೊತೆ ಸೇರಿ ಫ್ಲೆಮಿಂಗೋ ಎಂಬ ಹೆಸರಿನ ಅತ್ಯಂತ ಅದ್ಧೂರಿಯಾದ ಕಸಿನೊ ರಚನೆಯಲ್ಲಿ ಕೈ ಹಾಕಿದ. ಸುತ್ತಲೂ ದೀಪಾಲಂಕೃತವಾದ ತಾಳೆ ಮರಗಳಿಂದ ತೂಗುವ ಉದ್ಯಾನವನ, ರಾಜ ಮಹಾರಾಜರ ಮಹಲಿನಂತೆ ಕಾಣುವ ಒಳಾಂಗಣ ವಿನ್ಯಾಸ, ನಗುನಗುತ್ತಾ ಗ್ರಾಹಕರ ಬೇಕು ಬೇಡಗಳನ್ನು ಗಮನಿಸುವ ನೌಕರ ವರ್ಗ, ಇವೆಲ್ಲ ಜೂಜಿನ ಅಡ್ಡೆಗಳಲ್ಲಿ ಅದುವರೆಗೂ ಯಾರು ಕಂಡು ಕೇಳಿರದಂತಹ ವಿಷಯವಾಗಿತ್ತು. ಹಣ ತೊಡಗಿಸಿ ದೂರದಿಂದ ದುರ್ಬಿನು ಹಿಡಿದು ನೋಡುತ್ತಿದ್ದ ಸಿಂಡಿಕೇಟ್ ಧುರೀಣರಿಗೆ ಬಗ್ಸಿಯ ದೂರದೃಷ್ಟಿಯ ಬೆಲೆ ತಿಳಿಯಲಿಲ್ಲ. ಮಿಲಿಯನ್‌ಗಟ್ಟಲೆ ಡಾಲರ್ ಸುರಿದರೂ ಮುಗಿಯದ ಕಸಿನೋ ಬಗ್ಗೆ ಅಸಹನೆ ಶುರುವಾಯಿತು. ಐಷಾರಾಮಿ ಸಲವತ್ತುಗಳಿಗಾಗಿ ಇನ್ನು ಹೆಚ್ಚಿನ ಹಣ ದುಂದು ಮಾಡದಂತೆ ಖಡಾಖಂಡಿತವಾಗಿ ಆದೇಶ ನೀಡಲಾಯಿತು. ತನ್ನ ಕನಸಿನ ಕೆಸಿನೋ ಕಟ್ಟುವ ಯೋಜನೆಯನ್ನು ಕೈಬಿಡಲಾಗದೆ ಬಗ್ಸಿ ಸುಳ್ಳಿನ ಸರಮಾಲೆ ಪೋಣಿಸಿದ, ಧಗ ಮೋಸಗಳಿಗೆ ಶರಣಾದ. ೧೯೪೬ರಲ್ಲಿ ಕ್ಯೂಬಾ ರಾಜಧಾನಿಯಲ್ಲಿ ಕ್ರೈಂ ಸಿಂಡಿಕೇಟಿನ ಘಟಾನುಘಟಿ ಮುಖಂಡರ “ಹವಾನಾ ಕಾನ್ಫರೆನ್ಸ್” ಜರುಗಿತು. ಕಳ್ಳ ವ್ಯಾಪಾರ ವಹಿವಾಟುಗಳ ವಿಸ್ತರಣೆಗೆ ಪೂರಕ ಹಾಗು ಮಾರಕವಾದ ವಿಷಯಗಳನ್ನು ಚರ್ಚಿಸಿ ಇತ್ಯರ್ಥಮಾಡಿಕೊಳ್ಳುವುದೇ ಈ ಶೃಂಗ ಸಭೆಯ ಮುಖ್ಯ ಉದ್ದೇಶ. ದುಂದು ವೆಚ್ಚ ಮಾಡುತ್ತಾ ಮುಖಂಡರನ್ನು ಏಮಾರಿಸುವ ಪ್ರಯತ್ನ ಪಟ್ಟಿದ್ದ ಬಗ್ಸಿ ಸೀಗಲ್ ತಲೆ ತೆಗೆಯಬೇಕೆನ್ನುವ ನಿರ್ಣಯ ಒಮ್ಮತದಿಂದ ಹೊರಹೊಮ್ಮಿತು. ಮುಂದಿನ ದಿನಗಳಲ್ಲಿ, ಪ್ರೇಯಸಿ ವರ್ಜೀನಿಯ ಹಿಲ್ ಮನೆಯಲ್ಲಿಯೇ ಬಗ್ಸಿ ಬರ್ಬರವಾಗಿ ಕೊಲೆಯಾಗಿಹೋದ. ವೇಗಸ್ಸಿನಲ್ಲಿ ಒಂದಾದಮೇಲೊಂದರಂತೆ ತಲೆ ಎತ್ತಿದ ವೈಭವೋಪೇತ ಕಸಿನೋಗಳ ಸಂಪ್ರದಾಯಕ್ಕೆ ನಾಂದಿ ಹಾಡಿದ.
ಫ್ರಾಂಕ್ ರೊಸಂಥಾಲ್
ಸ್ಪೋರ್ಟ್ಸ್ ಇಲಸ್ಟ್ರೇಟೆಡ್ ಪತ್ರಿಕೆಯ ಮುಖಪುಟ ಲೇಖನದಲ್ಲಿ ಕ್ರೀಡಾ ಬೆಟ್ಟಿಂಗ್ ಪ್ರವೀಣ ಎಂದು ಹಾಡಿ ಹೊಗಳಿಸಿಕೊಂಡ ಫ್ರಾಂಕ್ ರೊಸಂಥಾಲ್ ಚಿಕಾಗೊ ಮಾಫಿಯಾ ತಂಡದ ಕಾರ್ಯಕರ್ತ. ಕ್ರೀಡಾ ಬೆಟ್ಟಿಂಗನ್ನು ಲಾಸ್ ವೇಗಸ್ಸಿನ ಕಸಿನೋಗಳಲ್ಲಿ ಮೊತ್ತ ಮೊದಲ ಬಾರಿಗೆ ಪರಿಚಯಿಸಿದ ಕೀರ್ತಿ/ಅಪಕೀರ್ತಿ ಇವನಿಗೆ ಸಲ್ಲುತ್ತದೆ. ಅಂಕಿ ಅಂಶಗಳ ಲೆಕ್ಕಾಚಾರದಲ್ಲಿ ನಿಪುಣ. ದಿನಂಪ್ರತಿ ಮುಂಜಾನೆ ನಲವತ್ತಕ್ಕೂ ಹೆಚ್ಚು ಕ್ರೀಡಾ ಪತ್ರಿಕೆಗಳನ್ನು ತಿರುವಿ ಹಾಕಿ ವಿವಿಧ ಆಟ ಹಾಗು ತಂಡಗಳ ಸೋಲು ಗೆಲವುಗಳ ಸಂಭಾವ್ಯತೆಯ ಬಗ್ಗೆ ನಿಖರವಾದ ಅಂದಾಜು ಇಟ್ಟುಕೊಂಡು ದಂಧೆಗೆ ಹೊರಡುವವ. ಲಂಚ, ಬೆದರಿಕೆಗಳಿಂದ ಮ್ಯಾಚ್ ಫಿಕ್ಸಿಂಗ್ ಮಾಡುವ ಖದೀಮ. ಸ್ಟಾರ್‌ಡಸ್ಟ್, ಫ್ರೀಮೊಂಟ್, ಮರೀನಾ ಕೆಸಿನೋಗಳ ಆದಾಯದಲ್ಲಿ ರಾಮನ ಲೆಕ್ಕ ಕೃಷ್ಣನ ಲೆಕ್ಕ ಇಟ್ಟು ಸೊಲ್ಲೆತ್ತಿದವರಿಗೆ ಭೀಮನ ಲೆಕ್ಕ ಕಲಿಸಿದವ. ಪ್ರಖ್ಯಾತ ಲೇಖಕ ನಿಕಲಸ್ ಪಿಲೆಡ್ಜೀ, ರೊಸಂಥಾಲನ ರೋಚಕ ಬದುಕಿನಿಂದ ಪ್ರಭಾವಗೊಂಡು ಕೆಸಿನೋ ಎಂಬ ಪುಸ್ತಕ ಬರೆದ. ರಾಬರ್ಟ್ ಡಿ ನಿರೋ ನಟಿಸುವ ಅದೇ ಹೆಸರಿನ ಚಿತ್ರ ಕೂಡ ಬಿಡುಗಡೆಯಾಯಿತು. ಫುಟ್‌ಬಾಲ್ ಆಟವೊಂದರ ಮ್ಯಾಚ್ ಫಿಕ್ಸಿಂಗ್ ಕೇಸಿನಲ್ಲಿ ಪೋಲೀಸಿನವರ ಕೈಗೆ ರೊಸಂಥಾಲ್ ಸಿಕ್ಕಿಬಿದ್ದ. ಸಂಘಟಿತ ಅಪರಾಧಿಗಳ ಗುಂಪಿನವರು ಮತ್ತು ಜೂಜಾಟದ ತೀವ್ರ ತೆವಲಿರುವ ಕೆಲವರ ಹೆಸರುಗಳನ್ನೂ ನೆವಡಾ ಗೇಮಿಂಗ್ ಕಂಟ್ರೋಲ್ ಬೋರ್ಡ್ ತನ್ನ ‘ಕಪ್ಪು ಪುಸ್ತಕ’ ದಡಿ ದಾಖಲಾತಿ ಮಾಡಿಕೊಂಡು ಯಾವುದೇ ಕ್ಯಾಸಿನೊ ಆವರಣದೊಳಗೆ ಬರದಂತೆ ನಿಷೇಧಿಸುತ್ತದೆ. ಹೀಗೆ ಹೆಸರಿಗೆ ಮಸಿ ಬರೆಸಿಕೊಂಡ ರೊಸಂಥಾಲ್ ಮತ್ತೆಂದೂ ಇಲ್ಲಿಗೆ ಕಾಲಿಡದೆ ಬೇರೆಲ್ಲೋ ರವಾನೆಯಾದ.
ಜಾನ್ ರೊಸೆಲ್ಲಿ
ಚಿಕಾಗೊ ಭೂಗತ ಸಿಂಡಿಕೇಟ್ ಸದಸ್ಯತ್ವ ಹೊಂದಿದ್ದ ಜಾನ್ ರೊಸೆಲ್ಲಿ ವೇಗಸ್ ಕೆಸಿನೋಗಳಲ್ಲಿ ನಡೆಯಿವ ಗಾನಗೋಷ್ಠಿ ಹಾಗು ಮನರಂಜನಾ ಪ್ರದರ್ಶನಗಳ ಮೇಲೆ ಬಿಗಿಯಾದ ಹತೋಟಿ ಇಟ್ಟಿದ್ದ. ಯಾರಿಗೂ ಸುಳಿವು ಕೊಡದಂತೆ ತನ್ನ ದಾರಿಗಡ್ಡ ಬಂದವರ ಕತೆ ಮುಗಿಸುವ ತಣ್ಣನೆಯ ಕೊಲೆಪಾತಕಿ. ನಾಲ್ಕು ದಶಕಗಳ ಕಾಲ ಕೆಸಿನೋಗಳಲ್ಲಿ ಅವಿರತವಾಗಿ ಪ್ರದರ್ಶನ ನೀಡಿ ಸಂಗೀತ ವಲಯಗಳಲ್ಲಿ ದಂತಕತೆಯಾಗಿರುವ ಗಾಯಕ ಫ್ರಾಂಕ್ ಸನಾಟ್ರನ ಏಳ್ಗೆಯ ಹಿಂದೆ ರೊಸೆಲ್ಲಿ ಹಾಗು ಇನ್ನಿತರ ಭೂಗತ ದೊರೆಗಳ ಕೈವಾಡವಿದೆ. ಅಷ್ಟೊತ್ತಿಗಾಗಲೇ, ಕಾಲ ಬುಡದಲ್ಲೇ ಸೇರಿಕೊಂಡು ಕಚ್ಚುವ ಕಟ್ಟಿರುವೆಯಂತೆ ಕ್ಯೂಬಾದ ಸಮತಾವಾದಿ ಫಿಡೆಲ್ ಕ್ಯಾಸ್ಟ್ರೊ ರಶಿಯಾ ಜೊತೆ ಸೇರಿಕೊಂಡು ಅಮೆರಿಕೆಗೆ ನಿಂತಲ್ಲಿ ನಿಲ್ಲಲಾರದೆ ಚಟಪಟಿಸುವಂತೆ ಮಾಡಿದ್ದ. ಅಮೆರಿಕಾದ ಸೆಂಟ್ರಲ್ ಇಂಟೆಲಿಜೆನ್ಸ್ ಏಜನ್ಸಿ (ಸಿ.ಐ.ಎ) ಗುಪ್ತಾಚಾರಣೆಯ ಮೂಲಕ ಕ್ಯಾಸ್ಟ್ರೊ ಹತ್ಯೆ ಮಾಡಲು ಜಾನಿ ರೊಸೆಲ್ಲಿ ಯನ್ನು ಬಾಡಿಗೆ ಹಂತಕನಾಗಿ ಗೊತ್ತುಮಾಡಿತ್ತು. ಕ್ಯಾಸ್ಟ್ರೊ ಆಯಸ್ಸು ಗಟ್ಟಿ. ಗುಪ್ತಾಚರಣೆ ಫಲಕಾರಿಯಾಗಲಿಲ್ಲ. ಸುಮಾರು ವರುಷಗಳ ನಂತರ ಈ ವಿಷಯ ಅವರ್ಗಿಕೃತವಾಗಿ ದೇಶಾದ್ಯಂತ ಗುಲ್ಲಾಯಿತು. ಫಿಡೆಲ್ ಕ್ಯಾಸ್ಟ್ರೊ ಹತ್ಯೆ ಮಾಡಲು ಸಿ.ಐ.ಎ ತನ್ನನ್ನು ನಿಯೋಜಿಸಿಕೊಂಡಿತ್ತು ಎಂದು ಸಂಸತ್ತಿನ ಕಮಿಟಿಯ ಮುಂದೆ ಸಾಕ್ಷ್ಯ ಹೇಳಿದ ಸ್ವಲ್ಪ ದಿನಗಳಲ್ಲೇ ರೊಸೆಲ್ಲಿಯ ಶವ ಮಯಾಮಿ ನಗರದ ಕಾಲುವೆಯೊಂದರ ಮೇಲೆ ತೇಲುತ್ತಿತ್ತು.
ಮೋರಿಸ್ ಡಾಲಿಟ್ಜ್
ಹೆಸರಾಂತ ರಿಯಲ್ ಎಸ್ಟೇಟ್ ಉದ್ಯಮಿ ಮತ್ತು ಸಂಘಟಿತ ಅಪರಾಧಿ ವಲಯದ ಸದಸ್ಯನಾಗಿದ್ದ ಮೋರಿಸ್ ಡಾಲಿಟ್ಜ್ ತನ್ನ ದಾನ ಶೂರತ್ವದಿಂದ ಮಿಸ್ಟರ್ ಲಾಸ್ ವೇಗಸ್ ಎಂದು ಹೆಸರಾಗಿದ್ದ. ಸ್ಥಳೀಯ ಶಾಲಾ, ಕಾಲೇಜು, ಆಸ್ಪತ್ರೆ ಹಾಗೂ ಬಡಾವಣೆಗಳ ಬೆಳವಣಿಗೆಗಾಗಿ ಅಪಾರ ದೇಣಿಗೆ ನೀಡಿದವ. ಅಮೆರಿಕಾದ ಪಾನ ನಿಷೇಧದ ಸಮಯದಲ್ಲಿ (೧೯೨೦-೧೯೩೩), ಹದಿಹರೆಯದ ಮೋರಿಸ್ ಭೂಗತ ಲೋಕದ ಪಾತಕಿಗಳ ಜೊತೆ ಕೈಗೂಡಿಸಿ ಕಳ್ಳ ಭಟ್ಟಿ ಸಾರಾಯಿ ದಂಧೆಗಿಳಿದಿದ್ದ. ಕಾಲ ಕ್ರಮೇಣ, ಅವ್ಯವಹಾರಗಳಿಂದ ಗಳಿಸಿದ ಕಪ್ಪು ಹಣವನ್ನು ಕಾನೂನು ಸಮ್ಮತವಾದ ರೀತಿಯಲ್ಲಿ ತೊಡಗಿಸಿ ಸಮಾಜದಲ್ಲಿ ಗಣ್ಯ ವ್ಯಕ್ತಿಯೆಂದು ಗುರುತಿಸಿಕೊಂಡ. ಬಹಿರಂಗವಾಗದಿದ್ದರೂ ಗುಪ್ತಗಾಮಿನಿಯಂತೆ ಅವನ ಸಂಬಂಧ ಭೂಗತಲೋಕದ ಪಾತಕಿಗಳ ಜೊತೆ ಇದ್ದೆಇತ್ತು. ಕಳ್ಳತನದ ಝಾಡಿನಲ್ಲೇ ನಡೆದರೂ ತನ್ನ ಊರು ಕೇರಿಯ ಏಳ್ಗೆಯ ಬಗ್ಗೆ ಗಮನ ಹರಿಸಿದ ಮೋರಿಸ್ಸಿಗೆ ಶ್ರೀ ೪೨೦ ಎಂಬ ಬಿರುದು ಹೆಚ್ಚು ಸೂಕ್ತವಾಗಿತ್ತೇನೋ.
ದಶಕಗಳು ಉರುಳಿದಂತೆ, ಕಸಿನೋ ವ್ಯವಹಾರಗಳೆಲ್ಲ ಸರಕಾರದ ಕಟ್ಟು ನಿಟ್ಟಿನ ನಿಯಮಾವಳಿಗಳ ವ್ಯಾಪ್ತಿಗೆ ಒಳಪಟ್ಟವು ಹಾಗು ಸಾವಿರದ ಒಂಭೈನೂರ ಎಪ್ಪತ್ತರಲ್ಲಿ ಜಾರಿಗೆ ಬಂದ ರಾಕೆಟಿಯರ್ influenced ಅಂಡ್ ಕರಪ್ಟ್ organization ಆಕ್ಟ್, ಸಂಘಟಿತ ಅಪರಾಧಿಗಳ ಸೊಲ್ಲನ್ನು ಬಹುಮಟ್ಟಿಗೆ ಅಡಗಿಸಿತು. ಆದರೇನು? ಕಾಳ ಕರಾಳ ದಂಧೆಯ ಪಾತಕಿಗಳನ್ನು ಎಲ್ಲಿಯಾದರೂ ಯಾರಾದರೂ ಸಂಪೂರ್ಣವಾಗಿ ಬಲಿಹಾಕಲು ಸಾಧ್ಯವೇ? ನಮಗೆ ಕಾಣಲಿ ಬಿಡಲಿ, ರಕ್ತ ಬೀಜಾಸುರನ ತಳಿಗಳು ಮತ್ತೆ ಮತ್ತೆ ತಲೆ ಎತ್ತುತ್ತಲೇ ಇರುತ್ತವೆ.
ಸ್ವಧರ್ಮೋ ಶ್ರೇಯೋದಕಂ ಎಂದು ತಮ್ಮ ವೃತ್ತಿ ಪ್ರವೃತ್ತಿಗಳ ಝಾಡಿನಲ್ಲೇ ನಡೆಯುತ್ತಾ ಸಂಘಟಿತ ಅಪರಾಧಿ ಗುಂಪಿನ ಅನೇಕಾನೇಕ ಖಳನಾಯಕರು ವೇಗಸ್ ನಗರಿಯ ಅದ್ಭುತ ರೂಪಾಂತರಕ್ಕೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಕಾರಣರಾಗಿದ್ದಾರೆ. ಕೆಲ ವರುಷಗಳ ಹಿಂದೆ ಇಲ್ಲಿನ ಡೌನ್ ಟೌನ್‌ನಲ್ಲಿ ಭೂಗತ ಲೋಕದ ಅಪರಾಧ ಚರಿತ್ರೆ ಮತ್ತು ಅದರ ಪರಿಣಾಮಗಳನ್ನು ವಿಸ್ತೃತವಾಗಿ ಪರಿಚಯಿಸುವ ಸಂಘಟಿತ ಅಪರಾಧ ಮತ್ತು ಕಾನೂನು ಅನುಷ್ಠಾನ ಎಂಬ ರಾಷ್ಟ್ರೀಯ ಸಂಗ್ರಹಾಲಯವನ್ನು ತೆರೆಯಲಾಯಿತು. ಮೂರು ಮಳೆಗೆಯ ಕಟ್ಟಡದ ತುಂಬಾ ಭೂಗತ ಪಾತಕಿಗಳ ಕರಾಮತ್ತು ಮತ್ತು ಅವರನ್ನು ಹಿಡಿಯಲು ಪೊಲೀಸರು ಮಾಡಿದ ಕಸರತ್ತುಗಳನ್ನು ದೃಶ್ಯ ಹಾಗು ಧ್ವನಿ ಮಾಧ್ಯಮದ ಮೂಲಕ ಎಳೆ ಎಳೆಯಾಗಿ ಬಿಡಿಸಿ ಹೇಳುವ ಉತ್ತಮವಾದ ಪ್ರಯತ್ನವಿದೆ.
ಕಡಲಾಚೆಗಿನ ಕನ್ನಡದ ಬರಹಗಾರ್ತಿ..