ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು. ಬಿಡದೆ ಒಂದಾದಮೇಲೊಂದರಂತೆ ತಮ್ಮ ಮುಂದೆ ನಿಲ್ಲುತ್ತಿದ್ದ ಜೋಡಿಗಳಿಗೆ ಸತಿ ಪತಿಗಳಾದಿರಿ ಎಂದು ಹೇಳುತ್ತಾ ಹರಸುತ್ತಾ ಪಾದ್ರಿಗಳ ಗಂಟಲೊಣಗಿತು.
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ

ಸುಮಾರು ಎಂಟು ಲಕ್ಷಕ್ಕೂ ಹೆಚ್ಚು ಜೋಡಿಗಳನ್ನು ವಿವಾಹ ಬಂಧನದದ ಬೆಸುಗೆಯಲ್ಲಿ ಬೆಸೆದಿರುವ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಲಾಸ್ ವೇಗಸ್ ಡೌನ್ ಟೌನಿನಲ್ಲಿದೆ. ಮೈಕಲ್ ಜೋರ್ಡನ್, ಬ್ರಿಟ್ನಿ ಸ್ಪಿಯರ್ಸ್, ಬ್ರೂಸ್ ವಿಲ್ಲಿಸ್, ನಮ್ಮ ಪ್ರಿಯಾಂಕಾ ಚೋಪ್ರಳ ಭಾವಮೈದುನ ಜೋ ಜೋನಸ್ ಮತ್ತಿತರ ಅನೇಕ ಖ್ಯಾತ ನಾಮರು ತಮ್ಮ ತಮ್ಮ ಸಂಗಾತಿಯ ಕಣ್ಣಲ್ಲಿ ಕಣ್ಣಿಟ್ಟು ಜೀವನ ಪೂರ್ತಿ ಜೊತೆ ನಿಭಾಯಿಸುವ ಆಣೆ ಪ್ರಮಾಣಗಳನ್ನು ಹೇಳಿಕೊಂಡಂತಹ ಹೆಸರಾಂತ ಪ್ರಾರ್ಥನಾ ಮಂದಿರ ಇದು. ಕಾಲ ಚಕ್ರದ ಜೊತೆ ಬಹುತೇಕ ‘ಐ ಡು’ ಗಳು ‘ಐ ಡು ನಾಟ್ ’ ಆಗಿ ಮಾರ್ಪಟ್ಟು, ಸತಿ ಪತಿಯರು ಜೊತೆಗಿಲ್ಲದಿರುವುದು ಬೇರೆಯ ವಿಷಯ.

ಸುಣ್ಣ ಬಣ್ಣ ಕಾಣದ ಟ್ಯಾಟೂ ಪಾರ್ಲರ್, ಗಿರವಿ ಅಂಗಡಿ, ಅಗ್ಗವಾಗಿ ಕಾಣುವ ಮೋಟೆಲ್ ಇವುಗಳ ಮಧ್ಯೆ ಹುದುಗಿರುವ ‘ಲಿಟಲ್ ವೈಟ್ ಚಾಪೆಲ್’ ಮುಂದೆ ನಿಂತು ಸೋಜಿಗ ಪಟ್ಟುಕೊಳ್ಳುತ್ತಿದ್ದೆ. ಕಣ್ಣಿಗೆ ರಾಚುವ ಹಸಿರು ಹಾಸಿನ ಮೇಲೆ ಬಾರ್ಬಿ ಗೊಂಬೆಯ ಮನೆಯೊಳಗಿಡುವಂತಹ ಅಗ್ಗದ ಬಿಳೀ ಪೀಠೋಪಕರಣಗಳು, ಇಕ್ಕಟ್ಟಾದ ಸಭಾಗೃಹ, ಮರಿ ಮನ್ಮಥನಂತಹ ಕ್ಯುಪಿಡ್ ಹಾಗು ಅವನ ಪುಷ್ಪಧನ್ವಗಳ ಚಿತ್ತಾರಗಳಿಂದ ಅಲಂಕರಿಸಿಕೊಂಡ ‘ಟನಲ್ ಆಫ್ ಲವ್’ ಎಂಬ ಚಿಕ್ಕ ಡ್ರೈವ್ ತ್ರು ಸುರಂಗ ಮಾರ್ಗ ಇವು ಯಾವುವು ಖ್ಯಾತ ನಾಮಧೇಯರನ್ನು ಕೈ ಬೀಸಿ ಕರೆಯುವಂಥದ್ದಲ್ಲ. ಇದೇ ಬೀದಿಯಲ್ಲಿ ಸ್ವಲ್ಪ ದೂರ ನಡೆದರೆ, ವಧು ವರರ ಕಲ್ಪನಾ ವಿಲಾಸಗಳನ್ನೆಲ್ಲ ಸಾಕಾರ ಮಾಡುವಂತಹ ಅನೇಕ ಅದ್ಧೂರಿ ಕೆಸಿನೋಗಳಿವೆ. ಕೆಲ ವರುಷಗಳ ಹಿಂದೆ ಭಾರತೀಯ ಮೂಲದ ಶ್ರೀಮಂತ ಜೋಡಿ ಪಂಕಜ್ ಮತ್ತು ಅವನಿ ಮಲಾನಿಯ ಮದುವೆಯ ಆಡಂಬರ ಇಲ್ಲಿಯವರನ್ನು ದಂಗು ಬಡಿಸಿತ್ತು. ಯಾವ ಅಂಬಾನಿಗೂ ಕಡಿಮೆಯಿಲ್ಲದ ಮದುಮಗ ಆನೆ ಅಂಬಾರಿಯಲ್ಲಿ ಬಂದು ಬೆಲ್ಲಾಜಿಯೋ ಕೆಸಿನೋ ಮುಂದೆ ಇಳಿದಿದ್ದ. ತನ್ನ ಅತಿಥಿಗಳನ್ನು ಚಾರ್ಟರ್ ಪ್ಲೇನ್‌ನಲ್ಲಿ ಕರೆತಂದು ಲಾಸ್ ವೇಗಸ್ ಸ್ಟ್ರಿಪ್ಪಿನಲ್ಲಿ(ಮೂವತ್ತಕ್ಕೂ ಹೆಚ್ಚು ದೊಡ್ಡ ದೊಡ್ಡ ಕೆಸಿನೋಗಳಿರುವ ಬೀದಿ) ಶಾಂಪೇನ್ ಹೊಳೆ ಹರಿಸಿದ್ದ.

ಲಕ್ಷಾಂತರ ಡಾಲರ್ ನುಂಗುವ ಡೆಸ್ಟಿನೇಷನ್ ಮದುವೆಗಳ ತವರೂರಿನಲ್ಲಿ ನೂರು ಡಾಲರಿಗೂ ಕಡಿಮೆ ಹಣ ಖರ್ಚು ಮಾಡಿ ಮಕ್ಕಳ ಆಟದ ಮನೆಯಂತಹ ಪ್ರಾಂಗಣದಲ್ಲಿ ಮದುವೆಯಾಗ ಬಯಸುವ ‘ಉಳ್ಳವರ’ ತರ್ಕ ನನಗೆ ತಲೆ ಕೆರೆಯುವಂತೆ ಮಾಡಿತು. ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ ಎಂದು ಅಡಿಗರು ಹೇಳಿದ್ದು ಇಂತಹದ್ದನ್ನು ನೋಡಿಯೇ ಏನೋ. ಲಾಸ್ ವೇಗಸ್ ಸ್ಟ್ರಿಪ್ಪಿನಲ್ಲಿ ಲಿಟಲ್ ವೈಟ್ ಚಾಪೆಲ್ ಮಾದರಿಯ ಐವತ್ತಕ್ಕೂ ಹೆಚ್ಚು ಮದುವೆ ಮಂದಿರಗಳಿವೆ.

ಪೌರೋಹಿತ್ಯ ನಡೆಸುವ ಪ್ರೆಸ್ಲೀ

ರಾಕ್ ಅಂಡ್ ರೋಲ್ ರಾಜ ಎಂದೇ ಹೆಸರುವಾಸಿಯಾಗಿದ್ದ ಎಲ್ವಿಸ್ ಪ್ರೆಸ್ಲಿ ತನ್ನ ಸಂಗೀತ ಜೀವನದ ಸರಿಗಮವನ್ನು ಶುರು ಮಾಡಿದ್ದು ಲಾಸ್ ವೇಗಸ್ಸಿನಲ್ಲಿ. ಮೂಲತಃ ಇಲ್ಲಿಯವನಲ್ಲ. ತನ್ನ ಗಾನಗೋಷ್ಠಿಯ ಸಲುವಾಗಿ ಎಲ್ಲೆಡೆ ಓಡಾಡುವಂತೆ ಇಲ್ಲಿಗೂ ಬಂದು ಹೋಗುತ್ತಿದ್ದ. ಆದರೂ ಅದು ಹೇಗೋ ವೇಗಸ್ ನಗರಿಯಲ್ಲಿ ಅವನ ಛಾಪು ಅಚ್ಚಳಿಯದಂತೆ ಉಳಿದುಹೋಯಿತು. ಕೆಸಿನೋ , ಸಂಗ್ರಹಾಲಯ, ಉಪಹಾರ ಮಂದಿರಗಳಲ್ಲಿ ‌ಅವನ ಪ್ರತಿಮೆ ಪುತ್ಥಳಿಗಳು, ಅವನ ಹಾಡುಗಾರಿಕೆಯನ್ನೇ ಹಾಡಿ ಹೊಗಳುವ ಗಾನಗೋಷ್ಠಿಗಳು, ಅವನಂತೆಯೇ ಮಿರು ಮಿರುಗುವ ಬಿಳಿಯ ಪೋಷಾಕು ಧರಿಸಿ ಗಿಟಾರ್ ಹಿಡಿದು ಓಡಾಡುವ ವೇಷಧಾರಿಗಳು. ‘ಕಿಂಗ್ ಈಸ್ ಡೆಡ್ ಲಾಂಗ್ ಲಿವ್ ದಿ ಕಿಂಗ್’ ಎಂದು ಎಲ್ವಿಸ್ ಮಯವಾದ ಲಾಸ್ ವೇಗಸ್ ಸ್ಟ್ರಿಪ್ಪಿನಲ್ಲಿ ಯಾರಾದರೂ ಉದ್ಗರಿಸಿದರೆ ಆ ಹೇಳಿಕೆಯ ಅರ್ಥ ಹಾಗಲ್ಲ ಎಂದು ಯಾರೂ ತಗಾದೆ ತೆಗೆಯರು. ಪ್ರೆಸ್ಲಿಯ ಗೀಳಿನ ಸಮೂಹ ಸನ್ನಿ ಹೀಗೆ ಮುಂದುವರೆಯುತ್ತಲೇ ಹೋಗಿ ಇಲ್ಲಿ ನಡೆಯುವ ಮದುವೆಗಳು ಕೂಡ ಎಲ್ವಿಸ್ ವೇಷಧಾರಿಗಳ ಮಧ್ಯಸ್ಥಿಕೆಯೊಂದಿಗೆ ನಡೆಯತೊಡಗಿದವು. ಕಂಬಳಿ ಹುಳಗಳಂತಹ ಸೈಡ್ಬರ್ನ್ ಬಿಟ್ಟುಕೊಂಡು, ಅಡಿಯಿಂದ ಮುಡಿವರೆಗೆ ತದ್ರೂಪು ಎಲ್ವಿಸ್‌ನಂತೆ ಕಾಣುವ ವೇಷಧಾರಿ, ಮದುಮಕ್ಕಳು ಹಾಗು ದಿಬ್ಬಣಿಗರನ್ನು ಮದುವೆ ಮಂದಿರದ ಪುಟ್ಟ ಸಭಾಗೃಹದೊಳಗೆ ಸ್ವಾಗತಿಸುತ್ತಾನೆ. ‘ಫಾಲಿಂಗ್ ಇನ್ ಲವ್’, ‘ಲವ್ ಮೀ ಟೆಂಡರ್’ ಮುಂತಾದ ಸೂಪರ್ ಹಿಟ್ ಹಾಡುಗಳನ್ನು ಹಾಡಿ ಪ್ರೇಮದ ಬಗ್ಗೆ ಒಂದು ಪುಟ್ಟ ಭಾಷಣ ಬಿಗಿಯುತ್ತಾನೆ. ಉಂಗುರ ತೊಡಿಸಿ ತುಟಿಗಳ ಮೇಲೆ ಚುಂಬನದ ಮುದ್ರೆ ಒತ್ತಿಕೊಂಡ ಜೋಡಿಗಳಿಗೆ ಸತಿ ಪತಿಗಳಾದಿರಿ ಎಂದು ಹರ್ಷೋದ್ಗಾರದಿಂದ ಎಲ್ವಿಸ್ ಘೋಷಿಸುತ್ತಾನೆ. ಅಲ್ಲಿಗೆ ಮದುವೆಯ ಪ್ರತಾಚರಣೆಗಳೆಲ್ಲ ಮುಗಿದು ದಿಬ್ಬಣಿಗರ ವಿನೋದ ಕೂಟ ಮೊದಲಾಗುತ್ತದೆ. ಎಲ್ವಿಸ್ ಮಧ್ಯಸ್ಥಿಕೆಯೊಂದಿಗೆ ನಡೆಯುವ ಟಿಪಿಕಲ್ ಮದುವೆಯ ರೂಪರೇಷೆ ಇದು. ಲಾಸ್ ವೇಗಸ್ಸಿನ ಬಹುತೇಕ ವೆಡ್ಡಿಂಗ್ ಚಾಪೆಲ್‌ಗಳ ನಾಮಧೇಯಗಳು ಕೂಡ ಎಲ್ವಿಸ್ ನಟಿಸಿದ ಸಿನಿಮಾ, ಹಾಡಿದ ಹಾಡು, ಟೆನ್ನಿಸ್ಸಿಯ ಮೆಂಫಿಸ್ಸಿನಲ್ಲಿದ್ದ ಅವನ ಬಂಗಲೆಯ ಹೆಸರನ್ನು ಆಧರಿಸಿವೆ.

ಸುಲಭದ ಎಂಟ್ರಿ ಹಾಗು ಎಕ್ಸಿಟ್

ವಿವಾಹ ಸಂಬಂಧಿ ಪ್ರವಾಸೋದ್ಯಮದಿಂದ ಲಾಸ್ ವೇಗಸ್ಸಿಗೆ ಪ್ರತಿ ವರುಷವು ಸುಮಾರು ಎರಡು ಶತಕೋಟಿಗಳಷ್ಟು ಆದಾಯವಿದೆಯಂತೆ! ಕೋಟಿಗಟ್ಟಲೆ ಆದಾಯ ತರುವ ಉದ್ದಿಮೆಯ ಮೊದಲ ಹೆಜ್ಜೆ ಶುರುವಾಗಿದ್ದು ಸಾವಿದರ ಒಂಭೈನೂರ ಮೂವತ್ತರ ದಶಕದಲ್ಲಿ, ನೆವಡಾ ರಾಜ್ಯವು ಹೆಣ್ಣು ಹೊನ್ನು ಮಣ್ಣುಗಳ ಮೂಲಕ ರಾಜ್ಯ‌ ಆದಾಯವನ್ನು ಹೆಚ್ಚಿಸಿಕೊಳ್ಳುವ ಪಣ ತೊಟ್ಟು ನಿಂತಾಗ. ವೇಗಸ್ ಮಣ್ಣಿನಲ್ಲಿ ಸರಸರನೆ ಏಳಲು ಶುರುವಾಗಿದ್ದ ಜೂಜಿನ ಅಡ್ಡೆಗಳಲ್ಲಿ ನಡೆಯುವ ಕುರುಡು ಕಾಂಚಣದ ಕುಣಿತಕ್ಕೆ ಸಹಜವಾಗಿಯೇ ಮದಿರೆ ಹಾಗು ನೀರೆಯರ ಸಾಂಗತ್ಯ ಸೇರಿಕೊಂಡಿತ್ತು. ಇನ್ನೂ ಹೆಚ್ಚು ಹೆಚ್ಚು ಜನರನ್ನು ಆಕರ್ಷಿಸಿ, ಪ್ರವಾಸೋದ್ಯಮವನ್ನು ಮೇಲೇರಿಸಿಕೊಳ್ಳಲು, ನೆವಾಡಾ ರಾಜ್ಯವು ಇಲ್ಲಿ ವಿವಾಹವಾಗ ಬಯಸುವ ವಧು ವರರಿಗೆ ಯಾವುದೇ ಜಂಜಾಟವಿಲ್ಲದೆ ಒಂದೇ ದಿನದಲ್ಲಿ ಮದುವೆ ಪರವಾನಗಿ ನೀಡುವಂತಹ ಮೊದಲ ರಾಜ್ಯವಾಯಿತು. ಅದುವರೆಗೆ, ವಿವಾಹ ಬಂಧನದಲ್ಲಿ ಒಂದಾಗಬಯಸುವ ಜೋಡಿಗಳು ವಿವಾಹದ ಅರ್ಜಿ ಗುಜರಾಯಿಸಿಕೊಂಡು, ರಕ್ತ ಪರೀಕ್ಷೆಯ ಹಾಗು ಮತ್ತಿತರ ಕಾಗದ ಪತ್ರಗಳ ದಾಖಲಾತಿ ಮಾಡಿಸಿಕೊಂಡು ನಿಗದಿತ ವಾರಗಳ ಕಾಲ ಕಾಯಬೇಕಿತ್ತು. ಸಾಕ್ಷ್ಯಾಧಾರಗಳ ವಿಪರೀತ ಹಾವಳಿಗಳಿಲ್ಲದೆ ಬಹು ಸುಲಭವಾಗಿ ಒಂದೇ ದಿನದಲ್ಲಿ ದೊರಕುವ ಮದುವೆ ಪರವಾನಗಿಯ ಆಮಿಷ ದೇಶಾದ್ಯಂತದಿಂದ ಹೆಚ್ಚು ಹೆಚ್ಚು ಜೋಡಿಗಳನ್ನು ಇಲ್ಲಿಗೆ ಸೆಳೆಯತೊಡಗಿತು.

ಚಿತ್ರ ತಾರೆಯರು ಬೀರುವ ಸಮಷ್ಟಿ ಪ್ರಭಾವಳಿಯಿಂದ ಝಗಮಗಿಸುವ ನಮ್ಮ ಬಾಲಿವುಡ್ಡಿನ ದೊಡ್ಡಕ್ಕನಂತಹ ಹಾಲಿವುಡ್ ಲಾಸ್ ವೇಗಸ್ಸಿನಿಂದ ಕೆಲವೇ ಘಂಟೆಗಳ ದೂರದಲ್ಲಿದೆ.

ತಮ್ಮೆಲ್ಲ ಚಲನವಲನಗಳನ್ನು ಕ್ಯಾಮರಾ ಕಣ್ಣಿಂದ ನೋಡಬಯಸುವ ಪಾಪರಾಟ್ಸಿಗಳ ಕಣ್ತಪ್ಪಿಸಿ, ಹೆಚ್ಚು ಜನಸಂಖ್ಯೆಯಿರದ ಈ ಪುಟ್ಟ ಊರಿಗೆ ಬಂದು, ಸದ್ದುಗದ್ದಲವಿಲ್ಲದೆ ಮದುವೆಯಾಗುವ ಪ್ರಲೋಭನೆಯು ಹತ್ತಿರದ ಹಾಲಿವುಡ್ ತಾರೆಯರ ಮನ ಗೆದ್ದಿತು. ಏವ ಗಾರ್ಡ್ನರ್, ಮಿಕಿ ರೂನಿ, ಜೂಡಿ ಗಾರ್ಲಂಡ್ ಮೊದಲಾದ ಸಿನಿಮಾ ತಾರೆಯರು ಇಲ್ಲಿನ ವೆಡ್ಡಿಂಗ್ ಚಾಪೆಲ್ಲುಗಳಿಗೆ ದಿಢೀರನೆ ಬಂದು ಮದುವೆಯಾಗುವ ಫ್ಯಾಶನ್ ಶುರು ಮಾಡಿದರು. ಗ್ಲಾಮರ್ ಲೋಕದ ಬಣ್ಣದ ಚಿಟ್ಟೆಗಳನ್ನು ಆರಾಧಿಸಿ ಅನುಕರಿಸ ಬಯಸುವ ಕುರಿಮಂದೆಯ ಪಾಡಿನ್ನೇನು? ಮನಸ್ಸು ಬಂದ ತಕ್ಷಣ ಅಧಿಕೃತ ಸತಿ ಪತಿಗಳಾಗಿ ಅಪ್ಪ-ಅಮ್ಮ‌ ಆಟ ಆಡಬಯಸುವ ಯುವ ಜೋಡಿಗಳು ಲಾಸ್ ವೇಗಸ್ಸಿನಲ್ಲಿ ನೆರೆಯಲಾರಂಭಿಸಿದವು. ಎಷ್ಟಾದರೂ ಆತುರಗಾರರಿಗೆ ಬುದ್ಧಿ ಮಟ್ಟ ಅಲ್ಲವೇ! ಆ ಕ್ಷಣದ ಮಧುರ ಭಾವನೆಗಳಿಗೆ ಓಗೊಟ್ಟು ವಿವಾಹ ಬಂಧನದಲ್ಲಿ ಸಿಲುಕಿ, ಏಗಲಾರದೆ ಒದ್ದಾಡಿ ವಿಚ್ಛೇದನ ಬಯಸುವರ ಸಂಖ್ಯೆಯು ಸರಿಸಮಾನವಾಗಿ ಹೆಚ್ಚಾಗತೊಡಗಿತು. ಸರಿ, ಬೇಡಿಕೆ ಮತ್ತು ಪೂರೈಕೆಗಳ ವಿತ್ತ ನೀತಿಯನ್ನು ನಿರ್ದಾಕ್ಷಿಣ್ಯವಾಗಿ ಅನುಸರಿಸುವ ನೆವಾಡಾ ರಾಜ್ಯವು ದಂಪತಿಗಳಿಗೆ ಒಂದೇ ದಿನದಲ್ಲಿ ವಿಚ್ಛೇದನ ಪಡೆಯುವ ಸವಲತ್ತನ್ನು ಒದಗಿಸಿದಂತಹ ಮೊದಲ ರಾಜ್ಯವಾಯಿತು.

ವಿಯೆಟ್ನಾಂ ಕರಡು ತಪ್ಪಿಸಲು ವೇಗಸ್‌ಗೆ ಹೊರಡು

ಆಗಸ್ಟ್ ಇಪ್ಪತ್ತಾರು ೧೯೬೫ ರ ಸಂಜೆ ಲಾಸ್ ವೇಗಸ್ಸಿನ ಮದುವೆ ಮಂದಿರಗಳಲ್ಲಿ ಇದ್ದಕ್ಕಿದ್ದಂತೆ ವಿಚಿತ್ರವಾದ ಸನ್ನಿವೇಶವೊಂದು ಏರ್ಪಟ್ಟಿತು. ಅಡುಗೆಮನೆಯ ಸಿಹಿತಿಂಡಿಯ ಡಬ್ಬಕ್ಕೆ ಮುತ್ತಿಗೆ ಹಾಕುವ ಇರುವೆಗಳ ಹಾಗೆ ಮದುವೆಯಾಗಬಯಸುವ ಸಾಲು ಸಾಲು ಮದುಮಕ್ಕಳ ಸಂತೆ ನೆರೆಯಿತು. ರಾತ್ರಿ ಹನ್ನೆರಡು ಗಂಟೆಯೊಳಗೆ ತಮಗೆ ಮದುವೆ ಪರವಾನಗಿ ದೊರಕಬೇಕು ಎಂದು ಕೂಗುತ್ತ ಒಳ ನುಗ್ಗಲು ತಳ್ಳಾಡುತ್ತಿದ್ದ ವಧುವರರ ವರ್ತನೆ ವಿಚಿತ್ರವಾಗಿತ್ತು. ಬಿಡದೆ ಒಂದಾದಮೇಲೊಂದರಂತೆ ತಮ್ಮ ಮುಂದೆ ನಿಲ್ಲುತ್ತಿದ್ದ ಜೋಡಿಗಳಿಗೆ ಸತಿ ಪತಿಗಳಾದಿರಿ ಎಂದು ಹೇಳುತ್ತಾ ಹರಸುತ್ತಾ ಪಾದ್ರಿಗಳ ಗಂಟಲೊಣಗಿತು.


ಆದದ್ದು ಇಷ್ಟು. ಅದು ವಿಯೆಟ್ನಾಂ ಜೊತೆ ಅಮೆರಿಕೆಯ ಯುದ್ಧ ನಡೆಯುತ್ತಿದ್ದ ಸಮಯ. ಹೆಚ್ಚು ಹೆಚ್ಚು ಸಿಬ್ಬಂದಿಗಳನ್ನು ತುರ್ತಾಗಿ ವಿಯೆಟ್ನಾಮಿಗೆ ಕಳಿಸುವ ಒತ್ತಡ ಆಗಿನ ಪ್ರೆಸಿಡೆಂಟ್ ಲಿಂಡನ್ ಜಾನ್ಸನ್ ಮೇಲಿತ್ತು. ಅಷ್ಟೊತ್ತಿಗಾಗಲೇ, ಸರ್ಕಾರ ತೋರುತ್ತಿದ್ದ ಕುತಂತ್ರದ ಯುದ್ಧ ಕಾರ್ಯನೀತಿಗಳ ಬಗ್ಗೆ ಜನಮಾನಸದಲ್ಲಿ ಹೇವರಿಕೆ ಹೆಚ್ಚಾಗುತ್ತಿತ್ತು. ಇಂತಹ ಪರಿಸ್ಥಿತಿಯಲ್ಲಿ ಹೆಚ್ಚು ಗಂಡಸರನ್ನು ಕಡ್ಡಾಯವಾಗಿ ಯುದ್ಧಕ್ಕೆ ನೇಮಕಾತಿ ಮಾಡುವ ಸಲುವಾಗಿ ಪ್ರೆಸಿಡೆಂಟ್ ಸ್ವಲ್ಪ ಕಿಲಾಡಿತನವನ್ನು ತೋರಬೇಕಾಯಿತು. ನಾಡಿನ ಜನತೆಗೆ ಯಾವುದೇ ರೀತಿಯ ಮುನ್ಸೂಚನೆ ಕೊಡದೆ, ಅದುವರಗೆ ಜಾರಿಯಲ್ಲಿದ್ದ ಯುದ್ಧದ ಕರಡಿಗೆ ತಿದ್ದುಪಡಿ ಮಾಡಿ, ಕಾರ್ಯನಿರ್ವಾಹಕ ಆದೇಶವನ್ನು ಜಾರಿಗೊಳಿಸಲಾಯಿತು. ಯುದ್ಧದ ಕರಡು ಸಿಕ್ಕ ಮದುವೆಯಾದ ಗಂಡಸರು ಕಡ್ಡಾಯವಾಗಿ ವಿಯೆಟ್ನಾಂಗೆ ಹೊರಡಬೇನ್ನುವ ಅಣತಿಯದು. ಅದುವರೆಗೆ ಸಂಸಾರವಂದಿಗರಾದ ಪುರುಷರಿಗೆ ಡ್ರಾಫ್ಟ್ ಕಳಿಸುತ್ತಿರಲಿಲ್ಲ. ಹೊಸ ಆದೇಶ ಮಧ್ಯರಾತ್ರಿ ಹನ್ನೆರಡರ ಸಮಯದಿಂದ ಜಾರಿಯಾಗುವುದರಲ್ಲಿತ್ತು. ಅಷ್ಟರೊಳಗೆ, ಲಾಸ್ ವೇಗಸ್ಸಿನಲ್ಲಿ ಸುಲಭವಾಗಿ ದೊರೆಯುವ ಮದುವೆ ಪರವಾನಗಿ ಗಿಟ್ಟಿಸಿಕೊಂಡು ಕರಡು ವಿನಾಯಿತಿ ಪಡೆಯುವ ಸಲುವಾಗಿ ಯುವಕರು ತಮ್ಮ ಸಂಗಾತಿಗಳೊಂದಿಗೆ ಲಾಸ್ ವೇಗಸ್ಸಿಗೆ ಬಂದಿಳಿದಿದ್ದರು.

ಚತುರ್ವಿಧವಾದ ಪುರುಷಾರ್ಥದ ಸಾಧನೆಗೆ ಇಂಬು ಕೊಡುವ ಸಾಧನ ಹಾಗು ಬಾಧಕವಾಗಬಲ್ಲ ಮದುವೆ ಬೇವು ಬೆಲ್ಲಗಳ ಮಿಶ್ರಣ. ಕಾಲ್ನಡಿಗೆಯಿಂದಲೋ, ಕಾರ್ನಡಿಗೆಯಿಂದಲೋ, ಸರಳವಾಗಿ ದೇವಸ್ಥಾನದಲ್ಲೋ ಅಥವಾ ಐಷಾರಾಮಿ ಮಹಲಿನಲ್ಲೋ, ದಾಂಪತ್ಯ ಜೀವನದ ಮೊದಲ ಹೆಜ್ಜೆಗಳು ಎಲ್ಲಿಂದಲೇ ಶುರುವಾಗಲಿ ಮುಂದಿನ ಪಯಣ ಸುಖ ಶಾಂತಿ ನೆಮ್ಮದಿಗಳಿಂದ ತುಂಬಿರಲಿ ಎಂಬುದು ತಾನೇ ಎಲ್ಲರ ಅರಿಕೆ ಮತ್ತು ಹಾರೈಕೆ.