ನಾವಿರುವ ನೆವಾಡಾ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಮಸ್ಟಾಂಗ್ ಕುದುರೆಗಳನ್ನು ಹೊಂದಿರುವ ರಾಜ್ಯವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಕಾಡು ಕುದುರೆಗಳು ಅತ್ಯಂತ ವಿಸ್ತಾರವಾದ ‘ಹಿಂಡು ನಿರ್ವಹಣ ಪ್ರದೇಶ’ ಗಳಲ್ಲಿ ತಮ್ಮ ಪಾಡಿಗೆ ತಾವು ಇತರ ಕಾಡು ಪ್ರಾಣಿಗಳಂತೆ ಓಡಾಡಿಕೊಂಡಿವೆ. ಇವುಗಳನ್ನು ಹಿಡಿಯುವುದು ಹಾಗು ಕೊಲ್ಲುವುದು ಕಾನೂನುಬಾಹಿರ. ಪಶ್ಚಿಮ ಅಮೆರಿಕದ ಹತ್ತು ರಾಜ್ಯದಲ್ಲಿ ಕಾಣಸಿಗುವ ಮಸ್ಟಾಂಗ್ ಕುದುರೆಗಳ ಎಲ್ಲ ಜವಾಬ್ದಾರಿಯು ಭೂ ನಿರ್ವಹಣಾ ಸಂಸ್ಥೆಗೆ ಸೇರಿದ್ದು.
ಕುದುರೆಗಳ ಕುರಿತು ಅಚಲ ಸೇತು ಬರಹ ನಿಮ್ಮ ಓದಿಗೆ

ಪ್ರತಿ ಭಾನುವಾರ ಮೈಸೂರಿಗೆ ಕರೆ ಮಾಡಿ ಅತ್ತೆ ಮಾವನೊಡನೆ ಮಾತನಾಡುವ ಅಭ್ಯಾಸ. ಹಾಗೆ ಮಾತನಾಡುವಾಗ ನಮ್ಮ ಪುಟ್ಟಿ ಕುದುರೆ ಸವಾರಿ ಕಲಿಯಲು ಶುರು ಮಾಡಿರುವ ವಿಚಾರ ಹೇಳಿದೆ. ಅತ್ತೆಮ್ಮನವರ ಪಿತ್ತ ಸ್ವಲ್ಪ ನೆತ್ತಿಗೇರಿತು.

ಲಕ್ಷಣವಾಗಿ ಹಾಡು ಹಸೆ ಕಲಿಸೋದು ಬಿಟ್ಟು ಇದೇನೇ ಇದು? ಹೊಸ ಅವಾಂತರ! ಹೆಣ್ಮಗು ಬೇರೆ… ಬಿದ್ದು ಗಿದ್ದು ಕೈ ಕಾಲು ಊನ ಮಾಡ್ಕೊಂಡ್ರೆ ಮುಂದೆ ಮದುವೆ ಹೇಗ್ಮಾಡೋದು? ನಿನ್ನ ಮಗನಿಗಾದ್ರು ಕಲಿಸಿದ್ದಿದ್ರೆ ಪರವಾಗಿರಲಿಲ್ಲ. ಹೆಣ್ಣು ಹುಡುಗಿಗಂತೂ ಇವೆಲ್ಲ ಬೇಡವೇ ಬೇಡ.

ಪುರಾತನ ವಿಚಾರದ ಅತ್ತೆಮ್ಮನ ಬೇಧಭಾವದ ಮಾತುಗಳನ್ನು ಕೇಳಿ ನನ್ನೊಳಗಿನ ನಾರಿ ಆಂಧೋಲನದ ಕಿಚ್ಚು ಭುಗಿಲೆದ್ದಿತ್ತು. ಅತ್ತೆ ಸೊಸೆಯರ ಮೂರನೇ ಮಹಾಯುದ್ಧದ ನೂರನೇ ಆವೃತ್ತಿ ಬಿಡುಗಡೆ ಆಗುವುದರಲ್ಲಿತ್ತು.

ಅಷ್ಟರಲ್ಲಿ ಮಾವ ಮಧ್ಯ ತಲೆ ಹಾಕಿ “ಲೇ ಇವಳೇ, ಪುಟ್ಟೀದು ಅಶ್ವಿನಿ ನಕ್ಷತ್ರ ಅಲ್ಲವೇನೆ? ನೀನು ಅವಳ ಜಾತಕ ಗುರುಗಳ ಹತ್ತಿರ ಬರೆಸಿದಾಗ ಅವರು ಹೇಳಿರಲಿಲ್ಲವೇ ಅಶ್ವಿನಿ ಕುಮಾರರು ಈ ನಕ್ಷತ್ರದ ಅಧಿಪತಿಗಳು ಅಂತ?”

“ಹೌದು ಹೇಳಿದ್ದರು. ಅದಕ್ಕೂ ನಾವು ಮಾತಾಡ್ತಾ ಇರೋದಿಕ್ಕೂ ಏನು ಸಂಬಂಧ?” ಅತ್ತೆಯ ಧ್ವನಿಯಲ್ಲಿ ಅಸಹನೆ ಇಣುಕುತ್ತಿತ್ತು.

“ಅಶ್ವಿನಿ ಕುಮಾರರಿಗೆ ಇರೋದು ಕುದುರೆ ಮುಖ ಅಲ್ವೇ? ಅದಕ್ಕೆ ನಮ್ಮ ಪುಟ್ಟಿಗೆ ಕುದುರೆಗಳ ಆಕರ್ಷಣೆ ಆಗಿದೆ. ಈ ರೀತಿಯ ಆಸೆಗಳು ಸೆಳೆತಗಳು ಎಲ್ಲ ಜನಿತವಾದ ಜನ್ಮ ನಕ್ಷತ್ರದಿಂದ ಬರೋದು ತಿಳ್ಕೊ. ಅದನ್ನ ತಪ್ಪಿಸಕ್ಕೆ ಹೋಗೋದು ತಪ್ಪಾಗುತ್ತೆ”. ಅತ್ತೆಮ್ಮನಿಗೆ ಪ್ರಿಯವಾದ ಧರ್ಮ ಕರ್ಮಗಳ ಮರ್ಮವನ್ನು ಚನ್ನಾಗಿ ಅರಿತ ಮಾವನವರು ಜಾಣತನದ ಮಾತನಾಡಿ ಅವರ ಬಾಯಿ ಕಟ್ಟಿದ್ದರು.

*****

♪ ಒರತಿ ನೀರು ಭರ್ತಿಯಾಗಿ
ಹರಿಯೋಹಂಗ ಹೆಜ್ಜೆ ಹಾಕಿ
ಹತ್ತಿದವರ ಎತ್ತಿಕೊಂಡು
ಏಳ ಕೊಳ್ಳ ತಿಳ್ಳಿ ಹಾಡಿ
ಕಳ್ಳೇ ಮಳ್ಳೇ ಆಡಿಸಿ ಕೆಡವಿತ್ತಾ
ಕಾಡು ಕುದುರೆ ಓಡಿ ಬಂದಿತ್ತಾ…… ♪

ಮೊಟ್ಟ ಮೊದಲ ಬಾರಿ ಮಾನವ ಕಾಡು ಕುದುರೆಯ ಬೆನ್ನೇರಿ ಸುತ್ತಲಿನ ಪ್ರಪಂಚವನ್ನು ಠೀವಿಯಿಂದ ವೀಕ್ಷಿಸುವುದನ್ನು ಕಲಿತಾಗ ಅದೆಷ್ಟು ನಿರುಮ್ಮಳನಾಗಿರಬೇಕು? ಧುತ್ತನೆ ಎದುರಾಗಿ ಅಸ್ತಿತ್ವವನ್ನು ಹೊಸಕಿ ಹಾಕುವ ಕರಾಳ ಛಾಯೆಗಳನ್ನು ಎದುರಿಸುವ ವಿಷಯದಲ್ಲಿ ಅವನ ಆತ್ಮವಿಶ್ವಾಸ ಇಮ್ಮಡಿಯಾಗಿರಲೇಬೇಕು. ಇತಿಮಿತಿಗಳ ವಲಸೆ, ವ್ಯಾಪಾರ, ಸಂವಹನಗಳ ವ್ಯಾಪ್ತಿಯನ್ನು ವಿಸ್ತರಿಸಿಕೊಳ್ಳುತ್ತ, ಅನಾಗರಿಕತೆಯಿಂದ ನಾಗರಿಕತೆವರೆಗಿನ ನಡೆಯಲ್ಲಿ ಮಾನವನ ಹೆಜ್ಜೆಯ ಗುರುತುಗಳೊಡನೆ ಕುದುರೆಯ ಗೊರಸಿನ ಗುರುತುಗಳು ತಾಳೆ ಹಾಕಿಕೊಂಡಿವೆ ಎನ್ನುವುದಂತೂ ಖಂಡಿತ ಸತ್ಯ.

ಸಾಹಸ ಹಾಗು ಸ್ವಾತಂತ್ರ್ಯದ ಸಂಕೇತವೆನಿಸಿದ ಮಸ್ಟಾಂಗ್

ಐರೋಪ್ಯರ ನೂರೆಂಟು ಜಲಪರ್ಯಟನೆಗಳ ಪರಿಣಾಮವಾಗಿ ಅಮೆರಿಕೆಯ ಸ್ವಚ್ಚಂದ ಹುಲ್ಲುಗಾವಲುಗಳಲ್ಲಿ ತುರಗ ವಂಶಾವಳಿಗಳು ನಳನಳಿಸಿದವಂತೆ. ಅಲ್ಲಿಯವರೆಗೆ ಇಲ್ಲಿನ ನೆಲಕ್ಕೆ ಕುದುರೆಗಳ ಪರಿಚಯವಿರಲಿಲ್ಲ. ಸ್ಪ್ಯಾನಿಷ್ ವಸಾಹತುಗಳಿಂದ ತಪ್ಪಿಸಿಕೊಂಡು ಓಡಿಹೋದ ಕೆಲ ಕುದುರೆಗಳು ಇಲ್ಲಿನ ವಿಶಾಲವಾದ ಜಾಗದಲ್ಲಿ ಯಾವುದೇ ಅಂಕೆ ಅಂಕುಶಗಳಿಲ್ಲದೆ ಸ್ವಚ್ಚಂದವಾಗಿ ತಿರುಗುತ್ತ ತಮ್ಮ ಸಂತತಿಯನ್ನು ವರ್ಧಿಸಿಕೊಳ್ಳುತ್ತಾ ಹೋದವು. ನಾಡ ಕುದುರೆಗಳಾದರೂ ಕಾಡು ಕುದುರೆಗಳಂತಾದವು. ಮಸ್ಟಾಂಗ್ (ಸ್ಪ್ಯಾನಿಷ್ -ಸ್ವಾಮಿತ್ವವಿಲ್ಲದ) ಎಂದು ಕರೆಯಲ್ಪಡುವ ಈ ಕುದುರೆಗಳನ್ನು ಸಾಹಸ ಹಾಗು ಸ್ವಾತಂತ್ರ್ಯದ ಸಂಕೇತಗಳಂತೆ ನೋಡಲಾಗುತ್ತದೆ. ನಾವಿರುವ ನೆವಾಡಾ ರಾಜ್ಯವು ದೇಶದಲ್ಲೇ ಅತಿ ಹೆಚ್ಚು ಮಸ್ಟಾಂಗ್ ಕುದುರೆಗಳನ್ನು ಹೊಂದಿರುವ ರಾಜ್ಯವಾಗಿದೆ. ಐವತ್ತು ಸಾವಿರಕ್ಕೂ ಹೆಚ್ಚು ಕಾಡು ಕುದುರೆಗಳು ಅತ್ಯಂತ ವಿಸ್ತಾರವಾದ ‘ಹಿಂಡು ನಿರ್ವಹಣ ಪ್ರದೇಶ’ ಗಳಲ್ಲಿ ತಮ್ಮ ಪಾಡಿಗೆ ತಾವು ಇತರ ಕಾಡು ಪ್ರಾಣಿಗಳಂತೆ ಓಡಾಡಿಕೊಂಡಿವೆ. ಇವುಗಳನ್ನು ಹಿಡಿಯುವುದು ಹಾಗು ಕೊಲ್ಲುವುದು ಕಾನೂನುಬಾಹಿರ. ಪಶ್ಚಿಮ ಅಮೆರಿಕದ ಹತ್ತು ರಾಜ್ಯದಲ್ಲಿ ಕಾಣಸಿಗುವ ಮಸ್ಟಾಂಗ್ ಕುದುರೆಗಳ ಎಲ್ಲ ಜವಾಬ್ದಾರಿಯು ಭೂ ನಿರ್ವಹಣಾ ಸಂಸ್ಥೆಗೆ ಸೇರಿದ್ದು.

ಕಾಲಕ್ರಮೇಣ, ಇಂಗ್ಲೆಂಡ್, ಐರ್ಲೆಂಡ್‌ಗಳಿಂದ, ಯೂರೋಪಿನ ಬೇರೆ ಬೇರೆ ಜಾಗಗಳಿಂದ ಈ ನೆಲಕ್ಕೆ ಬಂದು ಕಲೆತು ಬೆರೆವ ತುರಗ ತಳಿಗಳ ಸಂಖ್ಯೆ ಏರುತ್ತಲೇ ಹೋಯಿತು. ಸ್ಥಳೀಯರ ಜಮೀನು ಗದ್ದೆಗಳಲ್ಲಿ, ವಿದೇಶೀಯರ ವಸಾಹತುಶಾಹಿ ಚಟುವಟಿಕೆಗಳಲ್ಲಿ, ಯುದ್ಧಗಳಲ್ಲಿ ಅಶ್ವ ಪಡೆಗಳು ಅವಿಭಾಜ್ಯ ಅಂಗವಾಗಿ ಬೆರೆತುಹೋದವು. ವಿಶ್ವಾದ್ಯಂತ, ಇಂದು ನಾನೂರಕ್ಕೂ ಹೆಚ್ಚು ಕುದುರೆ ತಳಿಗಳಿವೆಯಂತೆ. ಅಮೆರಿಕನ್ ಕ್ವಾರ್ಟರ್ ಹಾರ್ಸ್, ಅಪಲೂಸಾ, ಮಾರ್ಗನ್, ವರ್ಜೀನಿಯ ಹೈಲ್ಯಾಂಡರ್ ತಳಿಗಳು ಅಮೆರಿಕೆಯಲ್ಲಿ ಅತ್ಯಂತ ಜನಪ್ರಿಯವಾಗಿವೆ.

ಯು ಎಸ್ ಎಕ್ವೆಸ್ಟ್ರಿಯನ್ ಸಂಸ್ಥೆ

ಉಗ್ರ ರಾಷ್ಟ್ರೀಯತೆಯ ಕಿಚ್ಚು ಹಚ್ಚಿಕೊಂಡ ಬಲಾಢ್ಯ ರಾಷ್ಟ್ರಗಳಲ್ಲಿ ಆಧುನಿಕ ಶಸ್ತ್ರಾಸ್ತ್ರಗಳ ಆವಿಷ್ಕಾರ ಅವಿರತವಾಗಿ ನಡೆಯತೊಡಗಿತ್ತು. ಎರಡನೆಯ ಮಹಾಯುದ್ಧ ಮುಗಿವ ಹೊತ್ತಿಗೆ ಸೈನ್ಯದಲ್ಲಿ ರಾವುತ ದಳಗಳ ಜಮಾನ ಅಧಿಕೃತವಾಗಿ ಕೊನೆಗೊಂಡಿತು. ಅಷ್ಟೊತ್ತಿಗಾಗಲೆ, ಎಕ್ವೆಸ್ಟ್ರಿಯನ್ ಸಮುದಾಯದ ಸಮಗ್ರ ಚಟುವಟಿಕೆಗಳ ಮೇಲುಸ್ತುವಾರಿ ವಹಿಸುವ ಯು‌ಎಸ್ ಎಕ್ವೆಸ್ಟ್ರಿಯನ್ ಫೆಡರೇಷನ್ ಎಂಬ ರಾಷ್ಟ್ರೀಯ ಸಂಘಸಂಸ್ಥೆಯ ರಚನೆಯಾಗಿತ್ತು. ರಣರಂಗದ ಭೀಭತ್ಸದಿಂದ ದೂರವಾಗಿ ಅಖಾಡಗಳ ವರ್ತುಲಗಳಲ್ಲಿ ಪ್ರತಿಧ್ವನಿಸುವ ಕರಪುಟಗಳಿಗೆ ಕರತನಾಡದ ಸದ್ದು ಹೆಚ್ಚುತ್ತಲೇ ಹೋಯಿತು. ಸುವ್ಯವಸ್ಥಿತವಾದ ಕಾನೂನು ಕಾಯಿದೆಗನ್ನೊಳಗೊಂಡ ಪಂದ್ಯಾವಳಿಗಳ ಮೂಲಕ ಅಶ್ವಾರೋಹಿಗಳು ತಮ್ಮ ಕುಶಲತೆಯನ್ನು ಮೆರೆಯುವಂತಾಯಿತು.

ವೈವಿಧ್ಯಮಯ ಆಟೋಟಗಳು

ಕುದುರೆ ಪಂದ್ಯಾವಳಿಗಳಲ್ಲಿ ಹಲವಾರು ಬಗೆಗಳಿವೆ. ಡ್ರಸ್ಸಾಜ್, ಹಂಟ್ ಸೀಟ್, ರೇನಿಂಗ್ ಪಂದ್ಯಗಳು, ಸವಾರ ತನ್ನ ಕುದುರೆಯಿಂದ ಮೆಲ್ನಡಿಗೆ, ಕುಕ್ಕುಲೋಟ ಹಾಗು ನಾಗಾಲೋಟಗಳನ್ನು ಮಾಡಿಸುವ ಕೌಶಲ್ಯವನ್ನು ಅಳೆದರೆ, ವಾಲ್ಟಿಂಗ್ ಪಂದ್ಯದಲ್ಲಿ ಸವಾರ ಮೆಲ್ನಡಿಗೆ ಮಾಡುತ್ತಿರುವ ಕುದುರೆ ಮೇಲೆ ತನ್ನ ಸಮತೋಲನ ಕಾಪಿಟ್ಟುಕೊಂಡು ಗರಡಿಯಾಟವಾಡಬೇಕು! ಎರಡು ತಂಡಗಳು ಮೈದಾನದಲ್ಲಿ ಮರದ ಮೆಲ್ಲೆಟ್ ಹಾಗು ಚಂಡಿನಿಂದ ಆಡುವ ಆಟ, ಪೋಲೊ.

ಯಾವುದೇ ಬಗೆಯ ರಾವುತ ವಿದ್ಯೆಯಲ್ಲಿ ಪಾರಂಗತಿ ಪಡೆಯಲು ಕುದುರೆ ಮತ್ತು ರಾವುತನ ಸಮೀಕರಣ ಅತ್ಯಂತ ಮುಖ್ಯವಾಗುತ್ತದೆ. ಕುದುರೆ ಅತ್ಯಂತ ಬುದ್ಧಿವಂತ ಪ್ರಾಣಿ. ತನ್ನ ಸವಾರನ ಸೂಕ್ಷ್ಮಾತಿ ಸೂಕ್ಷ್ಮ ಸಂವೇದನೆಗಳನ್ನು ಗ್ರಹಿಸುವ ಕುಶಾಗ್ರಮತಿ. ತಲ್ಲಣ ತಳಮಳಗಳಿಂದ ಜೀನು ಹಗ್ಗ ಜೀಕುವ ಸವಾರನ ಸ್ವಾಮಿತ್ವವನ್ನು ಕುದುರೆ ಒಪ್ಪುವುದಿಲ್ಲ. ಆತ್ಮವಿಶ್ವಾಸದ ಕೊರತೆಯನ್ನು ಗ್ರಹಿಸಿ ಮೊಂಡಾಟ ಮಾಡುತ್ತದೆ ಅಥವಾ ಸವಾರನ ಮನಸ್ಥಿಯನ್ನು ಅನುಕರಿಸುತ್ತಾ ಉದ್ವಿಗ್ನತೆಯನ್ನು ತೋರಿಸುತ್ತದೆ. ಈ ಪಂದ್ಯಾವಳಿಗಳ ಜೊತೆ ಲೋಕಪ್ರಿಯವಾದ ಕುದುರೆ ರೇಸನ್ನು ಕ್ರೀಡೆ ಮತ್ತು ಜೂಜು ಈ ಎರಡು ವಿಭಾಗಗಳಲ್ಲಿ ಪರಿಗಣಿಸಬಹುದಾಗಿದೆ. ಅಮೇರಿಕಾದಲ್ಲಿ ಸುಮಾರು ೩೦೦ ಕುದುರೆ ರೇಸ್ ಟ್ರ್ಯಾಕ್‌ಗಳಿವೆಯಂತೆ. ಈ ವರ್ಷದ ಮೇ ತಿಂಗಳಲ್ಲಿ ನಡೆದ ನೂರೈವತ್ತನೆಯ ಕೆಂಟಕಿ ಡರ್ಬಿ ರೇಸಿನಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಸಮೂಹ ಜೂಜಿನ ಮೋಜಿಗೆ ಬಿದ್ದು‌ ಅವರವರ ಅದೃಷ್ಟಕ್ಕೆ ತಕ್ಕಂತೆ ಕತ್ತೆ ಬಾಲ, ಹಾಗು ಕುದುರೆ ಜುಟ್ಟನ್ನು ಹಿಡಿದರಂತೆ.

ಅಶ್ವಾಧಾರವಾದ ಪೀಟ

ಮೂಕ ಪ್ರಾಣಿಗಳ ಹಕ್ಕು ಪರ ಹೋರಾಡುವ ಪೀಟ ಸಂಘಟನೆ (ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್ಮೆಂಟ್ ಆಫ್ ಅನಿಮಲ್ಸ್) ಕ್ರೀಡೆ ಹಾಗು ರೇಸು ಕುದುರೆಗಳ ಮೇಲೆ ನಡೆಯುವ ದೌರ್ಜನ್ಯದ ವಿರುದ್ಧ ದನಿ ಎತ್ತುತ್ತಲೇ ಇರುತ್ತದೆ. ಸಹಸ್ರಾರು ಪ್ರಾಣಿಪ್ರಿಯರ ಹೋರಾಟದ ಫಲವಾಗಿ ‘ಹಾರ್ಸ್ ರೇಸಿಂಗ್ ಇಂಟೆಗ್ರಿಟಿ ಅಂಡ್ ಸೇಫ್ಟಿ ಆಕ್ಟ್’ ಹೆಸರಿನ ಕಾಯ್ದೆ ಜಾರಿಗೆ ಬಂದಿದೆ. ನಿರ್ದಯವಾಗಿ ಚಾಬುಕದಿಂದ ಹೊಡೆಯುವುದು, ಗಾಯಗಳ ನೋವು ಮುಚ್ಚುವ ಔಷಧಿಗಳನ್ನು ತಿನ್ನಿಸಿ ರೇಸುಗಳಲ್ಲಿ ಓಡಿಸುವುದು ಇತ್ಯಾದಿ ಅನಾಚಾರಗಳು ದಂಡನಾರ್ಹ ಅಪರಾಧಗಳೆಂದು ಪರಿಗಣಿತವಾಗಿದೆ. ಪರಿಸರದ ಆಕರಗಳಾದ ಭೂಮಿ, ಆಕಾಶ, ಹಾಗು ಇನ್ನಿತರ ಜೀವ ಜಂತುಗಳನ್ನೆಲ್ಲ ಉಪಭೋಗಗಳಾಗಿ ಮಾತ್ರ ನೋಡುವ ಧೋರಣೆಯ ಮಧ್ಯೆ ಚರಾಚರ ಜೀವ ಜಗತ್ತಿನ ಹಕ್ಕು ಬಾಧ್ಯತೆಗಳಿಗಾಗಿ ಹೋರಾಡುವವರ ಧೃಢಪ್ರಯತ್ನ, ಸಣ್ಣ ಪುಟ್ಟ ರೀತಿಯಲ್ಲಾದರೂ ಸರಿ, ಪ್ರಾಣಿ ಸಂಕುಲದ ಒಳಿತಿಗಾಗಿ ಶ್ರಮಿಸಲು ಎಲ್ಲರಿಗೂ ಪ್ರೇರಣೆ ನೀಡುತ್ತದೆ.

ನಮ್ಮೂರಿನಲ್ಲಿ ರಾವುತ ವಿದ್ಯೆ ಕಲಿಸುವ ಕೇಂದ್ರದ ಒಡತಿ ಟ್ರೇಸಿ ಮಾರ್ಟಿನ್. ಅವಳ ಬಳಿ ರಾಕಿ, ಮಾಲಿ, ಬಿಲ್ಲಿ ಎಂದೆಲ್ಲ ಹೆಸರಿರುವ ಕುದುರೆಗಳ ಜೊತೆಗೆ ‘ಪೆಗಸಸ್’ ಅನ್ನೋ ಹೆಸರಿನ ಚಂದದ ಬಿಳಿ ಕುದುರೆಯಿದೆ. “ಯುನೋ ಅಕಾಲ (ಅಚಲ ಹೆಸರಿನ ಅಪಭ್ರಂಶ) ಪೆಗಸಸ್ ವಾಸ್ ಅ ಗ್ರೀಕ್ ಮಿಥಿಕಲ್ ಹಾರ್ಸ್. ಇಟ್ಸ್ ಪ್ರೊನೌನ್ಸಡ್ ಪೆ-ಗ-ಸ-ಸ್” ಎಂದು ಬೇಕಿಲ್ಲದಿದ್ದರೂ ಬಿಡಿಸಿ ಬಿಡಿಸಿ ನನ್ನ ಕಂದು ಕಿವಿಗಳಿಗೆ ಸರಿಯಾಗಿ ಅರ್ಥವಾಗುವಂತೆ ಕರುಣಾಪೂರ್ಣವಾಗಿ ಒಮ್ಮೆ ಹೇಳಿದಳು. ನಾನು ಕಾಲವಾಗುವವರೆಗೂ ‘ಅಕಾಲ’ ಎಂದೇ ಇವಳಿಂದ ಕರೆಸಿಕೊಳ್ಳಬೇಕಾದ ಪರಿಸ್ಥಿತಿಯನ್ನು ಒಪ್ಪಿಕೊಂಡಿದ್ದ ನನಗೆ ಕಿರಿಕಿರಿಯಾಯಿತು. “ಯುನೋ ಟ್ರೇಸಿ ದೇರ್ ಈಸ್ ಅ ಸಿಮಿಲರ್ ಹಾರ್ಸ್ ಇನ್ ಇಂಡಿಯನ್ ಮಿಥಾಲಜಿ. ಉಚ್ಚಯ್ಹ್ ಶ್ರವಸ್, ಸೇ ಇಟ್” ಎಂದು ತುಂಟ ನಗೆ ನಕ್ಕೆ. ಅಕಾಲಳನ್ನು ಅಕೇಲವಾಗಿ ಬಿಟ್ಟು ಟ್ರೇಸಿ ಬೇರೆಡೆ ಗಮನ ಹರಿಸಿದಳು.

******

ಗ್ರೀಕರ ಪೆಗಸಸ್, ಟ್ರೋಜನ್, ಬ್ಯುಸೆಫಾಲಸ್ ಕುದುರೆಗಳು, ಪುಟ್ಟ ಮಕ್ಕಳ ಅಚ್ಚುಮೆಚ್ಚಿನ ಯುನಿಕಾರ್ನ್ ಕುದುರೆಗಳು ಇವುಗಳ ಜೊತೆಗೆ ನಮ್ಮ ಭಾರತದ ಪುರಾಣ ಇತಿಹಾಸಗಳಲ್ಲಿ ಬರುವ ಅಶ್ವಸಂಬಂಧೀ ವಿಷಯಗಳ ಬಗ್ಗೆ ಮನಸ್ಸು ಯೋಚಿಸತೊಡಗಿತು.

ದೇವ ದಾನವರು ಅಮೃತ ಪ್ರಾಪ್ತಿಗಾಗಿ ಸಮುದ್ರಮಂಥನ ಮಾಡಿದಾಗ ಉದ್ಭವಿಸಿದ ಅಚ್ಚ ಬಿಳುಪಿನ ಉಚ್ಚಯ್ಹ್ ಶ್ರವಸ್ ಕುದುರೆ, ಸಿದ್ಧಾರ್ಥನ ಜೊತೆಜೊತೆಗೂ ಇದ್ದು ಕಡೆಗೆ ಅಗಲಿಕೆಯನ್ನು ಸಹಿಸದೆ ಪ್ರಾಣಬಿಟ್ಟ ಕುದುರೆ ಕಂಥಕ, ರಾಣಾ ಪ್ರತಾಪನ ಚೇತಕ್, ವಿಷ್ಣುವಿನ ಅವತಾರವೆನ್ನುವ ಹಯವದನನಾದ ಹಯಗ್ರೀವ ದೇವ, ಚಕ್ರವರ್ತಿಗಳ ಅಶ್ವಮೇಧಯಾಗ, ಮಾಘ ಮಾಸದ ಶುಕ್ಲ ಪಕ್ಷದ ರಥಸಪ್ತಮಿಯಂದು ತನ್ನ ಏಳು ಕುದುರೆಗಳ ರಥದ ದಿಕ್ಕು ಬದಲಿಸುವ ಸೂರ್ಯದೇವ. ಅರೆ, ಎಷ್ಟೊಂದಿದೆ! ನನ್ನ ಪಟ್ಟಿ ಬೆಳೆಯುತ್ತಲೇ ಇತ್ತು.

ಚಾಟ್ ಜಿಪಿಟಿ ತರ ಟಕಟಕಾಂತ ಕುದುರೆಗಳ ಪಟ್ಟಿ ವದರುತ್ತಿದ್ದ ನನ್ನ ಮೆದುಳಿಗೊಂದು ಬ್ರೇಕ್ ಬಿತ್ತು. ಕ್ಯಾಲಿಫೋರ್ನಿಯಾ ತಂಡವನ್ನು ಹಿಮ್ಮೆಟ್ಟಿಸಿ ಪುಟ್ಟಿಯ ತಂಡ ಅಖಾಡದಿಂದ ಕುದುರೆ ನಡಿಗೆ ನಡೆದು ಬರುತ್ತಿತ್ತು.