ಬರಗೂರು ತಲುಪುವಷ್ಟರಲ್ಲಿಯೆ ಧಾರಾಕಾರವಾಗಿ ಮಳೆಸುರಿಯಲಾರಂಭಿಸಿತು. ರಾತ್ರಿಯ ಭಯಂಕರವಾದ ಕತ್ತಲೆ ಬಸ್ಸು ಇಳಿಯುವಷ್ಟರಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಸ್ವಲ್ಪ ದೂರಹೋಗುವಷ್ಟರಲ್ಲಿ ಇನ್ನಷ್ಟು ಮಳೆ ಕಡಿಮೆಯಾಯಿತು. ಎಲೆಯು ನೆನೆಯುವಂತಿರಲಿಲ್ಲ. ಬರಗೂರನ್ನು ಬಿಟ್ಟು ಸ್ವಲ್ಪ ಹತ್ತಾರು ಮಾರು ದೂರ ಹೋಗಿದ್ದೆವು. ಪಶ್ಚಿಮದ ದಿಕ್ಕಿನಿಂದ ಗಾಳಿಯ ಮೋಡಗಳು ದಟ್ಟವಾಗಿ ಬರುತ್ತಿವೆ. ಒಂದಕ್ಕಿಂತ ಒಂದು ಪದರು ಪದರಾಗಿ ಬರುತ್ತಿವೆ. ಈ ರೀತಿಯ ಮೋಡಗಳ ಬಗ್ಗೆ ಏನೋ ಕುತೂಹಲ. ಅವೆಲ್ಲ ಮಳೆ ತರುವ ಮೋಡಗಳು. ಒಂದಕ್ಕೊಂದು ಬಿಡಿಬಿಡಿಯಾಗಿ ಚಲಿಸುತ್ತಿರುತ್ತವೆ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

ಕೂಲಿ ಮಾಡಿ ಬದುಕುತ್ತಿದ್ದ ನಮ್ಮ ಕುಟುಂಬಕ್ಕೆ ಆಸರೆಯಾದುದು ಬೀಡಿಸುತ್ತುವ ಗೃಹ ಕೈಗಾರಿಕೆ. ಅವಿದ್ಯಾವಂತೆಯಾದ ಅಮ್ಮ ಅದನ್ನು ಕಲಿತವರ ಮನೆಗೆ ಹೋಗಿ ಬೆಳಿಗ್ಗೆಯಿಂದ ಸಂಜೆಯವರೆಗೂ ಅವರು ಹೇಳಿದಂತೆ ಕೇಳಿಕೊಂಡು ನಾಲ್ಕೈದು ತಿಂಗಳು ಕಲಿತಳು. ಅದೇನು ಅಷ್ಟು ದಿನಗಳವರೆಗೆ ಕಲಿಯಬೇಕಾದ ಕೆಲಸವಲ್ಲ. ಆದರೆ ಈ ರೀತಿ ಕಲಿಯಲು ಹೋದವರು ಸುತ್ತುವ ಬೀಡಿ ಕೆಲಸದಿಂದಲೆ ಅವರಿಗೆ ಹಣ ಬರುತ್ತಿತ್ತು. ಅದು ಇನ್ನಷ್ಟು ದಿನ ಸಿಗಲಿ ಅನ್ನೊ ಕಾರಣಕ್ಕೆ ನಿಮಗಿನ್ನು ಸರಿಯಾಗಿ ಬರುವುದಿಲ್ಲವೆಂದು ಹೇಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಇದು ಒಂದು ರೀತಿಯ ಶೋಷಣೆ ಎನಿಸಿದರೂ ಬದುಕಿನ ಅನಿವಾರ್ಯತೆಗೆ ಸ್ವೀಕಾರದಿಂದಲೆ ಬದುಕಬೇಕಾಗಿತ್ತು.

ಅಂತೂ ಅಮ್ಮನಿಗೂ ಕೆಲಸ ಬಂತು. ಆಮೇಲೆ ತಿಂಗಳಿಗೆ ಆಗಿನ ಕಾಲಕ್ಕೆ ಐದುನೂರರಿಂದ ಐದುಸಾವಿರದವರೆಗೂ ಸಂಪಾದಿಸಿದ್ದಿದೆ. ಮನೆಯಲ್ಲಿ ಕೂತು ಮಾಡುವ ಕೆಲಸವಾದ್ದರಿಂದ ನನ್ನನ್ನು ಒಳಗೊಂಡು ಮನೆಯ ಎಲ್ಲರೂ ಕೆಲಸದಲ್ಲಿ ಭಾಗಿಯಾಗುತ್ತಿದ್ದೆವು. ಶಾಲೆಗೆ ಹೋಗುವ ಮುನ್ನ ಶಾಲೆಯಿಂದ ಬಂದ ನಂತರ ಕೆಲಸ ಮಾಡಬೇಕಾಗಿತ್ತು. ಜೊತೆಗೆ ಮನೆಯ ಎಲ್ಲಾ ಖರ್ಚುಗಳನ್ನು ಆ ಕೆಲಸದಿಂದಷ್ಟೆ ಪೂರೈಸಿಕೊಳ್ಳುತ್ತಿದ್ದರಿಂದ ಮನೆಯಲ್ಲಿ ಕುಳಿತು ಮಾಡುವ ಒಂದು ಗೌರವದ ಕೆಲಸವೆಂದೇ ನನ್ನ ಭಾವನೆ. ಗೌರವದ ಬದುಕು ಅದರಿಂದ ಸಿಕ್ಕಿದ್ದು ಸುಳ್ಳಲ್ಲ.

ತಾಲ್ಲೂಕು ಕೇಂದ್ರದಲ್ಲಿ ಬೀಡಿ ಸುತ್ತುವ ಕೆಲಸಕ್ಕೆ ಅಗತ್ಯವಾದ ಪರಿಕರಗಳು ಸಿಗುತ್ತಿದ್ದರಿಂದ ತಿಂಗಳಿಗೊಮ್ಮೆ ಸಿರಾಕ್ಕೆ ಹೋಗಿ ತೆಗೆದುಕೊಂಡು ಬರುವುದು ಕೊಡುವುದು ವಾಡಿಕೆ ಇತ್ತು. ನಾನಿನ್ನು ಚಿಕ್ಕವನಾದ್ದರಿಂದ ಯಾವಾಗಲಾದರೊಮ್ಮೆ ಅಪರೂಪಕ್ಕೆ ನನ್ನನ್ನು ಅಪ್ಪ ಕರೆದುಕೊಂಡು ಹೋಗುತ್ತಿದ್ದ. ಅದು ನಾವೆ ಹಠ ಮಾಡಿದರೆ ಮಾತ್ರ ಆ ಭಾಗ್ಯ ನನ್ನದಾಗುತ್ತಿತ್ತು. ನಾಳೆ ಹೋಗುತ್ತಾರೆ ಎನ್ನುವಾಗಲೆ ರಚ್ಚೆ ಹಿಡಿದು ಗೋಳಾಡಿ ಹೋಗುವುದಕ್ಕೆ ಒಪ್ಪಿಗೆ ಪಡೆದುಕೊಳ್ಳುತ್ತಿದ್ದೆವು. ಬೆಳಿಗ್ಗೆ ಮುಂಜಾನೆಯ ಬಸ್ಸಿಗೆ ಹೋದರೆ ಬರುವುದು ರಾತ್ರಿ 8ರ ಸುಮಾರಿಗೆ. ನಮ್ಮ ಹಳ್ಳಿಯಿಂದ ಎರಡು ಕಿ ಮೀ ದೂರ ಇರುವ ಬರಗೂರಿಗೆ ಬರಬೇಕಾಗಿತ್ತು. ಅಲ್ಲಿಂದ ಕತ್ತಲಲ್ಲಿ ನಡೆದುಕೊಂಡು ಇಪ್ಪತ್ತೈದು ಕೆ ಜಿ ತೂಕವಿರುವ ಎಲೆಯ ಚೀಲದ ಜೊತೆಗೆ ಅದಕ್ಕೆ ತುಂಬುವ ಹೊಗೆ ಸೊಪ್ಪು ಎರಡನ್ನು ಹೊತ್ತುಕೊಂಡೆ ಬರಬೇಕಾಗಿತ್ತು.

ಮಳೆಗಾಲದ ಒಂದುದಿನ ನಾನು ಕಾಡಿಬೇಡಿ ಹೋಗುವುದಕ್ಕೆ ಒಪ್ಪಿಗೆ ತೆಗೆದುಕೊಂಡು ನಾಳೆ ಹೋಗುವುದೆಂದು ತೀರ್ಮಾನವಾಗಿತ್ತು. ಅದೆ ಮೊದಲು ಹೋಗುತ್ತಿದ್ದೆನಾದ್ದರಿಂದ ಸಿರಾ ಪಟ್ಟಣ ಹೇಗಿರಬೇಕೆಂದು ಅಜ್ಜಿ ಹೇಳಿದ ಕತೆಯಲ್ಲಿ ಬರುವ ಪಟ್ಟಣದ ವರ್ಣನೆಯ ರೂಪ ಮನಸ್ಸಿನಲ್ಲಿ ಮೂಡಿಸಿಕೊಂಡೆ ಅಲ್ಲಿಗೆ ಹೋದಾಗ ಏನೆಲ್ಲ ತೆಗೆದುಕೊಳ್ಳಬಹುದು. ಹೋಟೆಲ್‌ನಲ್ಲಿ ಇಡ್ಲಿ ಸಿಗಬಹುದೆ ಅಪ್ಪ ಕೊಡಿಸುತ್ತಾನೊ ಇಲ್ಲವೊ, ಬೀಡಿ ಕೊಂಡೊಯ್ಯುವ ಸಾಹುಕಾರ ಸಾಹೇಬನೆ ಕೊಡಿಸುತ್ತಾನೊ ಹೇಗೆ? ಹೀಗೆ ಏನೇನೊ ಕಲ್ಪನೆಗಳು ನನ್ನ ಮನಸ್ಸಿಗೆ ನಾಟಿ ನಿದ್ರೆಯ ಸುಳಿವೆ ಇಲ್ಲದಂತಾಗಿ ಹೊರಳಾಡಿ ಹೊರಳಾಡಿ ನಿದ್ರೆ ಬಂದಿದ್ದೆ ತಿಳಿಯಲಿಲ್ಲ. ಬೆಳಿಗ್ಗೆ ಅಪ್ಪ ಜೋರಾಗಿ ಕೂಗಿ ಎಬ್ಬಿಸಿದಾಗಲೆ ಗಾಬರಿಯಾದವನಂತೆ ಎದ್ದು ಕುಳಿತಿದ್ದೆ. ರಾತ್ರಿಯ ಕನಸಿಗೆ ನಿಜದ ರೂಪ ಸಿಗುವುದು ತಡವೇನಿರಲಿಲ್ಲ. ಮಧ್ಯಮ ವರ್ಗದ ಅಥವಾ ಕೆಳಹಂತದ ಬದುಕಿನ ಕ್ಯಾನ್ವಾಸಿನಲ್ಲಿ ಕನಸುಗಳದೆ ಕಾರುಬಾರು. ಕನಸುಕೊಡುವ ಆನಂದವನ್ನೆ ವರ್ತಮಾನದ ಬದುಕಿನಲ್ಲಿ ಕಾಣದೆ ಕನಸುಗಳಲ್ಲೆ ಬದುಕುತ್ತ ಕನಸುಗಳ ಒಡನಾಡಿಯಾಗಿ ಬದುಕು ಸವೆಸುವ ನಮ್ಮಂಥವರಿಗೆ ಕನಸಿಗಿಂತ ಜೊತೆಗಾರ ಯಾರಿದ್ದಾರೆ ಎನಿಸದಿರದು.

ಮಳೆಗಾಲದ ದಿನವಾದ್ದರಿಂದ ಮೋಡ ಮುಚ್ಚಿಕೊಂಡಿತ್ತು. ಆದರೂ ಹೋಗಲೆಬೇಕಾದ್ದರಿಂದ ನಾನು ಲಗುಬಗೆಯಿಂದ ಎದ್ದು ಮುಖವನ್ನು ತೊಳೆದುಕೊಂಡಂತೆ ಮಾಡಿ ಶಾಲೆಯ ನೀಲಿಯ ನಿಕ್ಕರ್ ಜೊತೆಗೆ ಕರಿನೀಲಿ ಮಿಶ್ರಿತ ಶರ್ಟ್ ತೊಟ್ಟುಕೊಂಡು ಅಪ್ಪನ ಜೊತೆ ಹೊರಟಿದ್ದಾಯಿತು. ನನಗೆ ಬಸ್ ಜಾರ್ಜ್ ಇರಲಿಲ್ಲವಾದ್ದರಿಂದ ನನ್ನನ್ನು ಕರೆದುಕೊಂಡು ಹೋಗಲು ಅಪ್ಪ ಹೆಚ್ಚು ತಕರಾರು ಮಾಡುತ್ತಿರಲಿಲ್ಲ. ನಾನು ಹೋಗುತ್ತಿದ್ದದ್ದೆ ಹೋಟೆಲ್‌ನಲ್ಲಿ ಸಿಗುವ ಇಡ್ಲಿಯ ಮೇಲಿನ ಆಸೆಯಿಂದ. ಅದೂ ಒಂದ್ಹೊತ್ತು ಅಷ್ಟೆ ಕೊಡಿಸುತ್ತಿದ್ದದ್ದು. ಮಧ್ಯಾಹ್ನಕ್ಕೆ ಹಣವಿರುತ್ತಿರಲಿಲ್ಲ. ಬಸ್ಸಿಗೇನೊ ಹೋದೆವು. ಆದರೆ ಆ ದಿನ ವಿಪರೀತ ಜನ. ಎಲ್ಲ ಬೀಡಿಯನ್ನು ವಿಲೇವಾರಿ ಮಾಡುವವರೆ. ನಮ್ಮ ಸರದಿ ಮಧ್ಯಾಹ್ನದ ಮೇಲೆ ಎಂದು ಗೊತ್ತಾಯಿತು. ಅಪ್ಪ ಹೊರಗಡೆ ಕರೆದುಕೊಂಡು ಬಂದು ಯಾವುದೊ ಗುಡಿಸಲಿನ ಹೋಟೆಲ್, ಅದೂ ಕಡಿಮೆ ರೇಟಿಗೆ ಇಡ್ಲಿ ತಿಂದು ಬೆಳಗಿನ ಉಪಾಹಾರ ಮುಗಿಸಿದ್ದಾಯಿತು. ಮಧ್ಯಾಹ್ನವಾದರೂ ನಮ್ಮ ಸರದಿ ಬರಲಿಲ್ಲ. ಕೊನೆಗೆ ನಮ್ಮಪ್ಪನು ಬೀಡಿ ಚೆಕ್ ಮಾಡುವುದಕ್ಕೆ ಕುಳಿತುಕೊಂಡ. ನಾನೇನು ಮಾಡಲಿ? ಬೀಡಿ ಒಣಗಿಸುವುದಕ್ಕೆ ಕಬ್ಬಿಣದ ಟ್ರೇಯಲ್ಲಿ ಬೀಡಿಯ ಕಟ್ಟುಗಳನ್ನು ಜೋಡಿಸಿ ಅದನ್ನು ಒಣಗಿಸಲು ಟೆರೇಸ್ ಮೇಲಕ್ಕೆ ಒಂದೊಂದೆ ತೆಗೆದುಕೊಂಡು ಹೋಗಲು ನನಗೆ ಹೇಳಿದರು. ಅದು ಅಷ್ಟೇನು ಭಾರವಿರಲಿಲ್ಲ.

ಅದೆ ಮೊದಲು ಹೋಗುತ್ತಿದ್ದೆನಾದ್ದರಿಂದ ಸಿರಾ ಪಟ್ಟಣ ಹೇಗಿರಬೇಕೆಂದು ಅಜ್ಜಿ ಹೇಳಿದ ಕತೆಯಲ್ಲಿ ಬರುವ ಪಟ್ಟಣದ ವರ್ಣನೆಯ ರೂಪ ಮನಸ್ಸಿನಲ್ಲಿ ಮೂಡಿಸಿಕೊಂಡೆ ಅಲ್ಲಿಗೆ ಹೋದಾಗ ಏನೆಲ್ಲ ತೆಗೆದುಕೊಳ್ಳಬಹುದು. ಹೋಟೆಲ್‌ನಲ್ಲಿ ಇಡ್ಲಿ ಸಿಗಬಹುದೆ ಅಪ್ಪ ಕೊಡಿಸುತ್ತಾನೊ ಇಲ್ಲವೊ, ಬೀಡಿ ಕೊಂಡೊಯ್ಯುವ ಸಾಹುಕಾರ ಸಾಹೇಬನೆ ಕೊಡಿಸುತ್ತಾನೊ ಹೇಗೆ? 

ಸಂಜೆ ಐದು ಗಂಟೆಯಾಯಿತು ನಾವು ಊರಿಗೆ ಹೋಗಲು ಕತ್ತಲಾಗುತ್ತದೆ. ಆಕಾಶದ ತುಂಬ ದಟ್ಟವಾದ ಕಾರ್ಮೋಡಗಳು ತುಂಬಿದ್ದವು. ಮಳೆ ಇನ್ನೇನು ಸುರಿದೇ ಬಿಡುತ್ತದೆಂಬಂತೆ ರಭಸದಲ್ಲಿ ಮೋಡಗಳು ಚಲಿಸುತ್ತಿದ್ದವು. ಆದ್ದರಿಂದ ನಮ್ಮನ್ನು ಕಳಿಸಿಕೊಡಿ ಎಂದು ಅಪ್ಪ ಅವರನ್ನು ಕೇಳಿಕೊಂಡ. ಕೊನೆಗೂ ಬೀಡಿ ಚೆಕ್ ಮಾಡಿ ನಮಗೆ ಕೊಡಬೇಕಾದ ಹಣಕೊಟ್ಟು ಒಂದು ಚೀಲ ಎಲೆಯನ್ನು ಅರ್ಧದಷ್ಟು ಚೀಲ ಹೊಗೆಪುಡಿಯನ್ನು ಕೊಟ್ಟು ಕಳಿಸಿದರು. ಅಪ್ಪ ಅದನ್ನು ತಲೆಯ ಮೇಲೆ ಹೊತ್ತುಕೊಂಡು ಒಂದಷ್ಟು ಹೊಗೆಪುಡಿಯನ್ನು ಎಲೆಚೀಲದ ಜೊತೆಗೆ ಸೇರಿಸಿ ಕಟ್ಟಿದ್ದರು. ಉಳಿಕೆ ಒಂದು ಸಣ್ಣ ಚೀಲದಷ್ಟನ್ನು ನಾನು ತಲೆಯ ಮೇಲೆ ಇಟ್ಟುಕೊಂಡೆ. ಅಪ್ಪ ಅದನ್ನ ವಾಪಸ್ ಪಡೆದು ಕೈಯಲ್ಲಿ ಹಿಡಿದುಕೊಂಡ. ಬಸ್ಟಾಪಿಗೆ ಬಂದು ಬಾಳೆಹಣ್ಣನ್ನು ತೆಗೆದುಕೊಳ್ಳುವ ಹೊತ್ತಿಗೆ ಕೊನೆಯ ಬಸ್ಸು ರೆಡಿಯಾಗಿತ್ತು. ಎಲೆಯ ಲಗೇಜನ್ನು ಬಸ್ಸಿನ ಮೇಲೆ ಹಾಕದೆ ಕಂಡಕ್ಟರ್‌ಗೆ ಅದರ ಜಾರ್ಜನ್ನು ಕೊಡುತ್ತೇನೆಂದು ಹೇಳಿ ಬಸ್ಸಿನ ಹಿಂಬದಿಯ ಸೀಟಿನ ಅಡಿಯಲ್ಲಿ ಇಟ್ಟನು. ಮಳೆ ಬರುವ ಮುನ್ಸೂಚನೆ ಇದ್ದಿದ್ದರಿಂದ ಇದು ಅಗತ್ಯವಾಗಿತ್ತು. ಅಲ್ಲಿಂದ ಒಂದು ಗಂಟೆಯ ಪ್ರಯಾಣ. ಅಂದು ಮಂಗಳವಾರದ್ದರಿಂದ ಸಿರಾದ ಸಂತೆ ನಡೆಯುತ್ತದೆ. ಮಾರ್ಕೆಟ್‌ಗೆ ಬರುವವರು ಬಹಳ ಜನ ಹಾಗಾಗಿ ಕೊನೆಯ ಬಸ್ಸು ತಡವಾಗಿ ಹೋಗುತ್ತಿತ್ತು. ವಿಪರೀತ ಜನ ಬಸ್ಸಿನ ತುಂಬ ಘಾಟು ಘಾಟು ವಾಸನೆ. ಕುರಿ ವ್ಯಾಪಾರಕ್ಕೆ ಬಂದವರು, ದಲ್ಲಾಳಿಗಳು, ಕಾಳುಕಡಿ ತಂದವರು, ದಿನಸಿ ತೆಗೆದುಕೊಂಡು ಹೋಗುವವರು. ಬೇಸರಕ್ಕೊ ಕಲಿತ ಚಟಕ್ಕೊ ಮನಸ್ಸಿನ ನೋವನ್ನು ಮರೆಯುವುದಕ್ಕೊ ಪಟ್ಟಣಕ್ಕೆ ಬಂದಿದೀವಿ ಅನ್ನೊ ಉಮೇದಿಗೊ ಅಂತು ಮದ್ಯಪಾನ ಸೇವಿಸಿದವರು ಅವರ ಉಸಿರಾಟದ ದುರ್ಘಮ ಇಡಿ ಬಸ್ಸಿನ ತುಂಬ ತುಂಬಿರುತ್ತಿತ್ತು. ಎಷ್ಟೊತ್ತಿಗೆ ಊರು ತಲುಪುತ್ತೇವೆಯೋ, ಇನ್ನೆಂದೂ ಅಪ್ಪನ ಜೊತೆ ಬರುವ ಸಾಹಸ ಮಾಡಬಾರದು ಎಂದುಕೊಂಡೆ. ಊರು ಬಂದರೆ ಸಾಕಪ್ಪ ಎಂದು ಜಪಿಸುವಾಗಲೆ, ಇಳಿಸಂಜೆಯ ಮಳೆ ಪ್ರಾರಂಭವಾಗಿತ್ತು. ಹತ್ತಿ ಇಳಿಯುವವರ ಮಧ್ಯೆ ಇನ್ನೊಂದಿಷ್ಟು ಬಸ್ಸು ಗಲೀಜಾಯಿತು. ತುಳಿದು ಇಳಿಯುವವರು, ತುಳಿದುಕೊಂಡೆ ಓಡಾಡುವವರು, ಎಲ್ಲವೂ ಶ್ರಮಿಕರ ಮಧ್ಯಮ ವರ್ಗದ ಜನರ ಬದುಕಿನ ಚಿತ್ರಣಗಳೆ ಆಗಿದ್ದವು.

ಬರಗೂರು ತಲುಪುವಷ್ಟರಲ್ಲಿಯೆ ಧಾರಾಕಾರವಾಗಿ ಮಳೆಸುರಿಯಲಾರಂಭಿಸಿತು. ರಾತ್ರಿಯ ಭಯಂಕರವಾದ ಕತ್ತಲೆ ಬಸ್ಸು ಇಳಿಯುವಷ್ಟರಲ್ಲಿ ಸ್ವಲ್ಪ ಮಳೆ ಕಡಿಮೆಯಾಗಿತ್ತು. ಸ್ವಲ್ಪ ದೂರಹೋಗುವಷ್ಟರಲ್ಲಿ ಇನ್ನಷ್ಟು ಮಳೆ ಕಡಿಮೆಯಾಯಿತು. ಎಲೆಯು ನೆನೆಯುವಂತಿರಲಿಲ್ಲ. ಬರಗೂರನ್ನು ಬಿಟ್ಟು ಸ್ವಲ್ಪ ಹತ್ತಾರು ಮಾರು ದೂರ ಹೋಗಿದ್ದೆವು. ಪಶ್ಚಿಮದ ದಿಕ್ಕಿನಿಂದ ಗಾಳಿಯ ಮೋಡಗಳು ದಟ್ಟವಾಗಿ ಬರುತ್ತಿವೆ. ಒಂದಕ್ಕಿಂತ ಒಂದು ಪದರು ಪದರಾಗಿ ಬರುತ್ತಿವೆ. ಈ ರೀತಿಯ ಮೋಡಗಳ ಬಗ್ಗೆ ಏನೋ ಕುತೂಹಲ. ಅವೆಲ್ಲ ಮಳೆ ತರುವ ಮೋಡಗಳು. ಒಂದಕ್ಕೊಂದು ಬಿಡಿಬಿಡಿಯಾಗಿ ಚಲಿಸುತ್ತಿರುತ್ತವೆ. ಅವುಗಳ ನಡುವೆ ಘರ್ಷಣೆಯಾದಾಗಲೆ ನಮಗೆ ಗುಡುಗು ಮಿಂಚು ಉಂಟಾಗುವ ಅನುಭವವಾಗುತ್ತದೆ. ಘನ ಮೋಡಗಳು ಚದುರಿ ನೀರಾಗಿ ಮಳೆಯಾಗುತ್ತದೆ. ಅವು ಬೃಹತ್ ವ್ಯಾಸವುಳ್ಳ ಮೋಡಗಳು ಎಂಬುದು ನಮ್ಮ ಓದು ಮುಂದುವರಿದಂತೆ ತಿಳಿಯುತ್ತಾ ಬಂದಿತು. ಚಿಕ್ಕವಯಸ್ಸಿನಲ್ಲಿ ಕಪ್ಪಾದ ಮೋಡಗಳನ್ನು ನೋಡಿದರೆ ಹೆದರಿಕೆಯಾಗುತ್ತಿತ್ತು.

ಅಂದು ಅಂಥ ಮೋಡಗಳನ್ನು ಕಂಡು ನಾನು ಮತ್ತು ಅಪ್ಪ ಬಿರಬಿರನೆ ಮನೆಯತ್ತ ಹೆಜ್ಜೆ ಹಾಕಿದೆವು. ಅಪ್ಪ ಎಲೆಯ ಹೊತ್ತುಕೊಂಡು ಏದುಸಿರು ಬಿಡುತ್ತಾ ನಡೆಯುತ್ತಿದ್ದ ನನ್ನ ತಲೆಯ ಮೇಲೆಯೂ ಚಿಕ್ಕದೊಂದು ಚೀಲ ಕತ್ತಲಲ್ಲಿ ಎಲ್ಲಿ ಹೆಜ್ಜೆ ಇಡುತ್ತೇವೆ ಎಂಬುದು ಸಹ ತಿಳಿಯದೆ ನಡೆಯುತ್ತಿದ್ದೆವು. ಇದ್ದಕ್ಕಿದ್ದಂತೆ ಬಿರುಗಾಳಿಯೂ ಪ್ರಾರಂಭವಾಯಿತು. ಎಲೆಯ ಭಾರದ ಜೊತೆಗೆ ಗಾಳಿಗೆ ಎದುರಾಗಿ ನಡೆಯುತ್ತಿರುವ ಅಪ್ಪ ಭೂಮಿಯಿಂದ ಹೆಜ್ಜೆಗಳನ್ನು ಬಿಗುವಿನಿಂದಲೆ ಎತ್ತಿಡುತ್ತಿದ್ದ. ನಾನು ಅವರ ಮರೆಯಲ್ಲಿ ಗುಬ್ಬಿಮರಿಯಂತೆ ಹಿಂಬಾಲಿಸುತ್ತಿದ್ದೆ. ಇದ್ದಕ್ಕಿದ್ದಂತೆ ಸಿಡಿಲೊಂದು ನಮ್ಮ ಕಣ್ಣ ಮುಂದೆಯೇ ಹಾದುಹೋದಂತೆ ಆಗಿ ಇಬ್ಬರೂ ಅಲ್ಲೇ ಸ್ಥಂಭೀಭೂತರಾಗಿ ನಿಂತೆವು. ಹಿಂದೆಯೆ ಭಯಂಕರ ಕರ್ಕಶ ಶಬ್ದದೊಂದಿಗೆ ಗುಡುಗಿನ ಆರ್ಭಟ ಕಿವಿಗೆ ಬಂದು ಮುಟ್ಟಿತು. ಇಬ್ಬರೂ ಎಲ್ಲಿದ್ದೇವೆ ಎಂದು ನೋಡಿಕೊಳ್ಳಲು ಇನ್ನೊಂದು ಮಿಂಚು ಸುಳಿದಾಗಲೆ ತಿಳಿದದ್ದು. ಹೀಗೆ ನಡೆದು ಒಂದು ಮೈಲಿ ನಡೆದಿದ್ದೆವು. ರಸ್ತೆಯ ಪಕ್ಕದಲ್ಲಿ ಒಂದು ಹುಣಸೇಮರವಿತ್ತು. ಇಲ್ಲಿಯೇ ನಿಲ್ಲೋಣ ಎಂದು ಅಪ್ಪನಿಗೆ ಹೇಳಿದೆ. ಅಪ್ಪ ಓದಿಕೊಂಡಿದ್ದವ. ಬೇಡ ಅದು ದೊಡ್ಡ ಅಪಾಯ ನಿಲ್ಲದೆ ಸುಮ್ಮನೆ ನಡೆದುಕೊಂಡು ಹೋಗುವುದೇ ಒಳ್ಳೆಯದು ಎಂದನು. ನಮಗೀಗ ಉಳಿದ್ದದ್ದು ಬರೀ ನಡೆಯುವುದಷ್ಟೆ ದಾರಿ. ನಡೆದೆವು ಮಿಂಚು ಗುಡುಗುಗಳ ಮಧ್ಯೆ ಒಂದೇ ಸಮನೆ ಮನೆ ತಲುಪುವವರೆಗೂ ನಡೆದೆವು… ಮನೆಗೆ ಬಂದವರೆ ನಾವು ಉಳಿದದ್ದೆ ಹೆಚ್ಚು ಎಂದುಕೊಂಡೆವು. ಮುಂದೆಂದೂ ಅಪ್ಪನೊಂದಿಗೆ ಹೋಗುವ ಸಾಹಸವನ್ನು ನಾನು ಮಾಡಲಿಲ್ಲ. ಇವತ್ತು ಸಹ ಆ ಗುಡುಗು ಮಿಂಚು ಕಣ್ಣ ಮುಂದೆ ಕಟ್ಟಿದಂತಿದೆ. ಶ್ರಮಿಕರ ಕೂಲಿಯವರ ಬದುಕು ಚಿಂತಿಸುವಂತೆ ಮಾಡುತ್ತದೆ. ಏಕೆಂದರೆ ವಾಸ್ತವ ಮತ್ತು ನೆನಪು ಎಂದೂ ಸಾಯುವುದಿಲ್ಲ.

(ಮುಂದುವರಿಯುವುದು)