ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ. ತಾಕತ್ ಇದ್ರೆ…. ಪಿ.ಯು.ಸಿ. ಫೈಲ್ ಆದವರೂ ಸೀಟು ಗಿಟ್ಟಿಸಿಕೊಳ್ಬಹುದು ಅನ್ನುವಷ್ಟು ಧಾರಾಳಿ ಈ ಕಾಲೇಜು!!
ಮೈಸೂರಿನ ಮಹಾರಾಜಾ ಕಾಲೇಜು ದಿನಗಳ ಕುರಿತು ಮೂರ್ತಿ ದೇರಾಜೆ ಬರಹ ನಿಮ್ಮ ಓದಿಗೆ
೧೯೬೯ ರಲ್ಲಿ ಪಿ.ಯು.ಸಿ ಮುಗಿಯುವಾಗ… ನನಗೆ ತ್ರಿವೇಣಿಯವರ ಕಾದಂಬರಿ ಓದಿ, ಸೈಕಾಲಜಿಯ ಹುಚ್ಚು ಹಿಡಿದಿತ್ತು. ಆಗ ಇಡೀ ದ.ಕ.ದಲ್ಲಿ ಮಂಗಳೂರಿನ ಸೈಂಟ್ ಆಗ್ನೆಸ್ ಮಹಿಳಾ ಕಾಲೇಜಿನಲ್ಲಿ ಮಾತ್ರ ಆ ಸಬ್ಜೆಕ್ಟ್ ಇದ್ದದ್ದು. ಆದರೆ… ಅವರು ಖಂಡ ತುಂಡವಾಗಿ ನನಗೆ ಪ್ರವೇಶ ನಿರಾಕರಿಸಿದ್ದರು….(!!)
ದೂರದ ಮೈಸೂರಿಗೆ ನನ್ನೊಬ್ಬನನ್ನೇ ಕಳಿಸಲು ಅಪ್ಪ-ಅಮ್ಮನಿಗೆ ಅಳುಕು. “ಶಂಕರನೂ ಜತೆಗಿದ್ದರೆ ಅಡ್ಡಿ ಇಲ್ಲ….” ಎನ್ನುವ ಶರತ್ತು…. ಶಂಕರ ಹೈಸ್ಕೂಲಿನಲ್ಲಿದ್ದಾಗಲೇ.. ಒಬ್ಬನೇ ಕಾಡು-ಗುಡ್ಡ ಸುತ್ತುತ್ತಿದ್ದ, ರಾತ್ರಿ ಅವರದೇ ತೋಟದ ಕಾವಲನ್ನೂ ನಡೆಸುತ್ತಿದ್ದ, ಪತ್ತೇದಾರ ಪುರುಷೋತ್ತಮ ನಮ್ಮಿಬ್ಬರಿಗೂ ಆರಾಧ್ಯಪುರುಷನಾಗಿದ್ದರೂ…. ಕತ್ತಲಾದ ಮೇಲೆ ಅಂಗಳಕ್ಕಿಳಿಯದ ನಾನು….. ಮನದಲ್ಲೇ ಮಂಡಿಗೆ ತಿನ್ನುತ್ತಿದ್ದೆ ಅಷ್ಟೆ…. ಆದರೆ ಶಂಕರ ಅದನ್ನು ಕಾರ್ಯರೂಪಕ್ಕಿಳಿಸಿದ್ದ…… ಶಾಲೆಯಲ್ಲಿ… ಶೌಚಾಲಯ ಗೋಡೆ ಸಾಹಿತಿಗಳ ನಿಗೂಢ ಚಟುವಟಿಕೆಯನ್ನು…. ಅನಾಮಧೇಯ ಪ್ರೇಮ ನಿವೇದನೆಗಳ ಕಿಂಕರರನ್ನೂ ಪತ್ತೇಮಾಡುವುದಕ್ಕಾಗಿ….. ಮಾರುವೇಷ ಧರಿಸಿ, ರಾತ್ರಿಯಿಡೀ ನಿದ್ದೆಗೆಟ್ಟು ಯಶಸ್ವಿಯಾಗಿದ್ದ. ಆಗಲೇ ಬೆನ್ನು ಬಿಡದ ಬೇತಾಳ ಎನ್ನುವ ಪತ್ತೇದಾರಿ ಕಾದಂಬರಿ ಬರೆದು….. ಅದು ಪುಸ್ತಕವಾಗಿ ಪ್ರಕಟವಾಗಿತ್ತು. ಎನ್.ಸಿ.ಸಿ.ಯಿಂದ ಮೊದಲ್ಗೊಂಡು ಎಲ್ಲಾ ಸಾಹಸ ಚಟುವಟಿಕೆಗಳಲ್ಲಿ… ತನ್ನನ್ನು ತೊಡಗಿಸಿಕೊಳ್ಳುತ್ತಿದ್ದ. ಹಾಗಾಗಿ ಹಿರಿಯರಿಗೆ…. ಶಂಕರ ಪ್ರಪಂಚವನ್ನೇ ಸುತ್ತಿ ಬಂದಾನು ಎನ್ನುವ ವಿಶ್ವಾಸ.
ಬೇರೆಲ್ಲಾ ಚಟುವಟಿಕೆಗಳೂ ಬದಿಗೆ ಸರಿದು…. ಮ್ಯಾಜಿಕ್ ಒಂದೇ ಮಂತ್ರವಾಗಿದ್ದ ಶಂಕರನಿಗೆ, ಸೈಕಾಲಜಿಯ “ಪ್ರಾಮುಖ್ಯತೆ”ಯನ್ನು ಬಣ್ಣಿಸಿ…. ಈ ಮ್ಯಾಜಿಕ್ ಕಲೆಯ ಮುಂದುವರಿಕೆಗೆ ಊರು ಬಿಡುವುದು ಎಷ್ಟು ಅಗತ್ಯ….(!!) ಎಂಬುದನ್ನು ಅವನಿಗೆ ಮನದಟ್ಟು ಮಾಡಿಸಿ…..(!!) ಅವನನ್ನು ಹಿಪ್ನೊಟೈಸ್ ಮಾಡಿ (.!!) ಒಪ್ಪಿಸಿದೆ.
ಮೈಸೂರಿಗೆ ಬಂದು ಮಹಾರಾಜಾ ಕಾಲೇಜು ನೋಡಿ ನಾವು ಮಾತ್ರ ಅಲ್ಲ…. ನನ್ನ ಅಪ್ಪನೂ ಕಂಗಾಲು. ಕಾಲೇಜು ಕಛೇರಿಯಲ್ಲಿ, “ಮಾರ್ಕ್ಸ್ ಎಷ್ಟಿದೆ…? ಬೇಕಾದ ಸಬ್ಜೆಕ್ಟ್ ಅಷ್ಟು ಸುಲಭದಲ್ಲೆಲ್ಲಾ ಸಿಗಲ್ಲ….” ಅಂತೆಲ್ಲ ಸ್ವಲ್ಪ ಹೆಚ್ಚೇ ಹೆದರಿಸಿದರೂ…… ಸೀಟಂತೂ ಸಿಕ್ಕಿತು. ನಮ್ಮ ಪೂರ್ವಜನ್ಮದ ಪುಣ್ಯ ಅಂತ ಭಾವಿಸಿದ್ದೆವು…… ಆಗ ನಮಗೇನು ಗೊತ್ತು….!! ವರ್ಷ ಕಳೆಯುವಾಗ ಗೊತ್ತಾಯ್ತು, ಇಲ್ಲಿ ಮಾರ್ಕ್ಸ್ ವಿಷಯ ಬಿಡಿ…. ! ೪-೫ ಭಾರಿ ಫೈಲ್ ಆದವರಿಗೂ ಎಡ್ಮಿಶನ್ ಕಷ್ಟವಿಲ್ಲ ಅಂತ. ತಾಕತ್ ಇದ್ರೆ…. ಪಿ.ಯು.ಸಿ. ಫೈಲ್ ಆದವರೂ ಸೀಟು ಗಿಟ್ಟಿಸಿಕೊಳ್ಬಹುದು ಅನ್ನುವಷ್ಟು ಧಾರಾಳಿ ಈ ಕಾಲೇಜು!!
ಹಾಸ್ಟೆಲ್ ಸೀಟು ಸಿಕ್ಲಿಲ್ಲ ಅಂತ ನನ್ನ ಅಪ್ಪಯ್ಯನಿಗೆ ಟೆನ್ಷನ್. ಅದೃಷ್ಟವಶಾತ್…… ಆ ದಿನ ಮದ್ರಾಸ್ ಮರಿಯಪ್ಪಜ್ಜ
(ಪ್ರೊಫೆಸರ್ ಮುಂಗ್ಲಿಮನೆ ಮರಿಯಪ್ಪ ಭಟ್ಟರು) ಏನೊ ಮೀಟಿಂಗಿಗೆ ಬಂದವರು ಸಿಕ್ಕಿದರು. ಹತ್ತಿರದ ಸಂಬಂಧ. ಅಲ್ಲದೇ ನನ್ನ ಅಪ್ಪಯ್ಯ ಅವರಿಗೆ ಅಚ್ಚುಮೆಚ್ಚು……. ನನಗೀಗಲೂ ನೆನಪಿದೆ….. ಪ್ರಿನ್ಸಿಪಾಲರಾದಿಯಾಗಿ ಎಲ್ಲರೂ ಎದ್ದುನಿಂತು ಗೌರವ ಕೊಡುವ ವ್ಯಕ್ತಿ – ಅಷ್ಟು ದೊಡ್ಡ ಪ್ರೊಫೆಸರ್ ಮರಿಯಪ್ಪ ಭಟ್ಟರು….. ಪ್ರಿನ್ಸಿಪಾಲರ ಎರಡೂ ಕೈ ಹಿಡಿದು… “ಇವರು ನಮ್ಮ ಹುಡುಗರು. ಅಷ್ಟು ದೂರದಿಂದ ವಿದ್ಯೆ ಕಲಿಬೇಕೂಂತ ಬಂದಿದ್ದಾರೆ….. ಸರಿಯಾದ ವಸತಿ ಇಲ್ಲವಾದ್ರೆ ಕಷ್ಟ ಆಗುತ್ತೆ…. ನನಗೋಸ್ಕರ ಇವ್ರಿಗೆ ಹಾಸ್ಟೆಲ್‌ನಲ್ಲಿ ಸೀಟು ಕೊಡಬೇಕು” ಅಂತ ವಿನಂತಿ ಮಾಡಿಕೊಂಡಿದ್ರು. ಪ್ರಿನ್ಸಿಪಾಲರಿಗೆ ಸಂಕೋಚ ಆಗಿ, ಕೂಡಲೇ ವಾರ್ಡನ್‌ರನ್ನು ಕರೆಸಿ… ವಿಚಾರಿಸಿ … ಕೋಣೆಗಳೆಲ್ಲಾ ಆಗಲೇ ಭರ್ತಿಯಾದ್ದರಿಂದ.. ಹಾಸ್ಟೆಲಿನ “ರಿಕ್ರಿಯೇಶನ್‌ಹಾಲ್”ನಲ್ಲೇ ವ್ಯವಸ್ಥೆ ಮಾಡಿಸಿದ್ರು….. ನಂತರ ಆ ರೂಮು ನನ್ನಿಂದ “ಪ್ರಿನ್ಸ್‌ಹಾಲ್” ಎಂಬ ಹೊಸ ನಾಮಧೇಯವನ್ನು ಪಡೆಯಿತು. ಈಗಲೂ ಅದೇ ಹೆಸರಿದೆ ಅಂತ ೨೫ ವರ್ಷಗಳ ನಂತರ ಯಾರೋ ಹೇಳಿದ್ದರು… ಈಗ ಹೇಗೋ ಗೊತ್ತಿಲ್ಲ.
ಇತಿಹಾಸ ಪ್ರಸಿದ್ದ ಮಹಾರಾಜ ಕಾಲೇಜು. ಭಾರೀ ಚಂದದ ವಿಸ್ತಾರವಾದ ಕಾಲೇಜು ಪರಿಸರ. ಪ್ರಥಮ ಬಾರಿ ಈ ಕಾಲೇಜನ್ನು ನೋಡಿದಾಗ… ನನಗೇನು ಕಂಡಿತ್ತು ಅಂದರೆ…. “ನಿಜವಾಗಿ ಈ ಕಾಲೇಜಿನಲ್ಲಿ ಕಲಿಯಲು ಪುಣ್ಯ ಬೇಕು… ಅವಕಾಶ ಸಿಕ್ಕಿದವರು ನಿಜಕ್ಕೂ ಭಾಗ್ಯವಂತರು….. ಈ ಪರಿಸರದಲ್ಲಿ ಐದು ನಿಮಿಷ ಸುಮ್ಮನೆ ನಿಂತರೆ ಸಾಕು…. ಓದುವ, ಅಧ್ಯಯನದ ಮನಸ್ಸು ತನ್ನಿಂದ ತಾನೇ ಬಂದು ಬಿಟ್ಟೀತು…..” ಅಂತ. ನಾನಂತೂ ದಿನಾ ಇಲ್ಲೇ ಓದಲು ಬರುವವ… ಅಂತ ತೀರ್ಮಾನ ತೆಗೆದುಕೊಂಡೂ ಆಗಿತ್ತು….. ದೇವ್ರಾಣೆಯಾಗಿಯೂ ಅಂದು ನನಗೆ ಹಾಗೆ ಕಂಡದ್ದು ಹೌದು! ಆದರೆ, ಮೂರು ವರ್ಷದಲ್ಲಿ ಒಮ್ಮೆಯೂ…. ಆ ಕಡೆಗೆ ತಲೆಯೇ ಹಾಕಲಿಲ್ಲ ಎನ್ನುವುದೂ ನಿಜ .!! (ಅಲ್ಲಿ ಹೋಗಿ ನಿಂತರೆ, ಎಲ್ಲಿಯಾದರೂ ನಿಜವಾಗಿಯೂ ಓದುವ ಅಂತ ಅನ್ನಿಸಿಬಿಟ್ಟರೆ…!!)
ಏನ್ ಮಾಡೋದು !! ನಾನಿದ್ದ ಹಾಸ್ಟೆಲ್ ಹಾಗಿತ್ತು; ಅದು ನಿಜವಾದ “ಮಹಾರಾಜ”ನೇ … !! ಟೊಮೆಟೊ ಸಾಂಬಾರ್, ಸೊಪ್ಪಿನ ಹುಳಿ, ಬೂದು ಕುಂಬಳ ಮಜ್ಜಿಗೆ ಹುಳಿ, ಮೆಣಸಿನ ಸಾರು, ಕೂಟು, ಬೀಟ್ರೂಟ್ ಪಲ್ಯ, ತುಪ್ಪ, ಮೊಸರು…. ಇಡ್ಲಿ, ದೋಸೆ, ಅಕ್ಕಿರೊಟ್ಟಿ, ಚಪಾತಿ-ಬಾಳೆಹಣ್ಣು ರಸಾಯನ……. ವಾರಕ್ಕೊಂದು ಫೀಸ್ಟ್… ತಿಂಗಳ ಕೊನೆಯ ಮೇಜರ್ ಫೀಸ್ಟ್….. ಜಾಮೂನು, ಜಿಲೇಬಿ, ಜಾಂಗೀರ್, ಚಂಪಾಕಲಿ, ಸೇಬು, ಕಿತ್ತಳೆ, ಮುಸುಂಬಿ…….. ಬೇಕಾದರೆ ಪ್ರತಿದಿನವೂ ಹೇರ್ ಕಟ್ಟಿಂಗ್, ಶೇವಿಂಗು ಎಲ್ಲಾ ಫ್ರೀ……
ಸ್ನಾನಕ್ಕೆ ಬಿಸಿ ಬಿಸಿ ಬಿಸಿನೀರು…. ಕೊಳೆಬಟ್ಟೆಯನ್ನು ೧೦ ಪೈಸೆಗೆ ತೊಳೆದು, ಇಸ್ತ್ರಿ ಹಾಕಿ ಕೊಡುವ ಡೋಬಿ… ಇನ್ನೇನ್ ಬೇಕು…???
ಸಾಯಂಕಾಲ ೪.೩೦ ಕ್ಕೆ ಸಿಟಿಗೆ ಹೋಗಿ…. ರಾಘವೇಂದ್ರ ಭವನದ… ಈರುಳ್ಳಿದೋಸೆ-ಹಸಿ ತೆಂಗಿನ ಕಾಯಿ ಚಟ್ನಿಯೋ….. ಮಧುನಿವಾಸದ… ರವಾದೋಸೆ-ಕೂರ್ಮಾವೋ (!)…. ದಾಸಪ್ರಕಾಶದ ಮಸಾಲೆದೋಸೆಯೋ….!! ಯಾವುದಾದರೂ ಸರಿ….!! ನಂತರ ಸಯ್ಯಾಜಿ ರಾವ್ ರಸ್ತೆಯಲ್ಲಿ “ಡೈಲೀ ರೌಂಡ್ಸ್”……. ನಮ್ಮ `ಡ್ಯೂಟಿ’ ಮುಗಿದು…. ಹಾಸ್ಟೆಲ್ ತಲುಪುವಾಗ…. ಕೊನೆಯ ಬ್ಯಾಚಿನ ಊಟದ ಹೊತ್ತು. ಊಟ ಮಾಡಿ ಹಾಸ್ಟೆಲಿನ ಪ್ರಸಿದ್ಧ “ಸೋಮಾರಿ ಕಟ್ಟೆ”ಯಲ್ಲಿ ಕುಳಿತು…. ಅಲ್ಲಿನ ಕರ್ತವ್ಯವನ್ನೂ ಮುಗಿಸಿ ಕೋಣೆ ಸೇರಿದಾಗ…. “ಪುಸ್ತಕ ಇವತ್ತು ಬೇಡ, ನಾಳೆ….” ಎಂದು ಕಂಡರೆ…. ಅದು ನನ್ನ ತಪ್ಪಾಗುವುದು ಹೇಗೇ….!!!
ಮತ್ತೆ…. ಆರ್ಕೆಸ್ಟ್ರಾಗಳು, ಭಾವ ಗೀತೆ, ಜನಪದ ಗೀತೆಗಳು, ಸಂಗೀತ ಸ್ಪರ್ಧೆ.. ಮಿಮಿಕ್ರಿ, ನಾಟಕ…. ಇತ್ಯಾದಿ ಮೈಸೂರಿನಲ್ಲಿ ಎಲ್ಲಿ ನಡೆದರೂ ನಾವಲ್ಲಿ ಇರಲೇಬೇಕು… (ಪ್ರೇಕ್ಷಕರಾಗಿ ಮಾತ್ರಾ…!!) ಆ ಮೇಲೆ, ಥಿಯೇಟರ್‌ಗೆ ಬಂದ ಹಿಂದಿ, ಇಂಗ್ಲಿಷ್ ಸಿನೇಮಾಗಳ ಮೊದಲ ಪ್ರದರ್ಶನದ ಉದ್ಘಾಟನೆ ನನ್ನಿಂದಲೇ….!!! (ಶಂಕರನಿಗೆ ಕೆಲವು ಕನ್ನಡ ಸಿನಿಮಾ ಬಿಟ್ಟರೆ ಉಳಿದಂತೆ ಅನಾಸಕ್ತಿ ಯೋಗ….)
“ಮೂರ್ತಿ… ಊರಿಂದ ಬಂದ ಅಂತೆ…!! ಎಲ್ಲಿ ಹೋದ…?? ಅಂತ ಯಾರಾದರೂ ಕೇಳಿದ್ರೆ…..
“ಸೂಟ್ಕೇಸ್ ಹಿಡ್ಕೊಂಡು ಪ್ರಭಾ ಟಾಕೀಸ್ ಎದ್ರು ಕ್ಯೂ ನಲ್ಲಿ ನಿಂತಿದ್ದ” ಅಂತಲೇ ಉತ್ತರ ಇರ್ತಿತ್ತಂತೆ…..
ಈಗ ನೀವೇ ಹೇಳಿ “ಓದುವುದು ಯಾವಾಗ …… ????”
ಇದು “ಮಹಾರಾಜಾ ಕಾಲೇಜ್”ನ “ವಿದ್ಯಾರ್ಥಿ”ಯೊಬ್ಬನ ಕತೆ-ವ್ಯಥೆ.
(ಶಂಕರ ಮಾತ್ರ… ನನ್ನ ಹಾಗೇ ಅಂತ ತಿಳಿಬೇಡಿ. ಇಷ್ಟೆಲ್ಲದರ ಜೊತೆ, ತನ್ನ ಮ್ಯಾಜಿಕ್ ಅನ್ನು ಬೆಳೆಸುತ್ತಾ, ಹಿಪ್ನೋತೆರಪಿಗಳನ್ನು ಮಾಡುತ್ತಾ, ….. ತರಗತಿಯ ಪಾಠಗಳನ್ನೂ ಗಟ್ಟಿ ಮಾಡಿಕೊಂಡಿದ್ದ!!)
ಶಂಕರನೂ ನಾನೂ ಸದಾ ಜೊತೆಗಿರುತ್ತಿದ್ದುದರಿಂದ ‘ಮ್ಯಾಜೀಶಿಯನ್ ಅಂಡ್ ಮ್ಯುಸೀಶಿಯನ್’ ಅಂತ ನಮ್ಮನ್ನ ಕರಿತಿದ್ರು. ಆದರೆ ಎಷ್ಟೊ ಜನರಿಗೆ ನನ್ನನ್ನೂ ಶಂಕರನನ್ನೂ ಪ್ರತ್ಯೇಕಿಸಿ ನೋಡಲು ಸಾಧ್ಯವೇ ಆಗುತ್ತಿರಲಿಲ್ಲ. ನಾವಿಬ್ಬರು ಅವಳಿಜವಳಿ ಅಂತ ತಿಳಿದವರು ಕೆಲವರು ಎಷ್ಟೋ ಜನರಿಗೆ ನಾನು ಶಂಕರ… ಅವನು ಮೂರ್ತಿ ಆಗಿ ಅದಲು ಬದಲು ಆದದ್ದೂ ಇದೆ. ಇನ್ನು ಕೆಲವರಿಗೆ ಅವನು ಶಂಕರ್, ನಾನು ಶಂಕರ್ ಮೂರ್ತಿ… ಹೀಗೆಲ್ಲಾ ಅವ್ಯವಸ್ಥೆ.
ಮಹಾರಾಜಾ ಕಾಲೇಜು….. ಸುಮಾರು ೩೦೦೦ ವಿದ್ಯಾರ್ಥಿಗಳು, ೨೦೦-೩೦೦ ರಷ್ಟು ಪ್ರಾಧ್ಯಾಪಕರಿಂದ ತುಂಬಿ ತುಳುಕಾಡುತ್ತಿದ್ದ ಕಾಲೇಜು……. ೪೦ಕ್ಕೂ ಮಿಕ್ಕಿ ವಯಸ್ಸಿನ ಸೂಟು ಬೂಟಿನ ವಿದ್ಯಾರ್ಥಿಗಳು, ತುಂಡು ಕೈಯ ಸಾದಾ ಬುಶ್ ಶರ್ಟಿನ ೨೨-೨೩ ರ ಪ್ರಾಧ್ಯಾಪಕರು…. ನನಗಂತು ಒಟ್ಟೂ ಗೊಂದಲ. ನನ್ನ ಸಹಪಾಠಿಯನ್ನೇ ಪ್ರಾಧ್ಯಾಪಕರೆಂದು ತಿಳಿದು ಭಯ ಭಕ್ತಿಯಿಂದ ನಮಸ್ಕರಿಸಿದ್ದೆ. ಸೋಮವಾರ ಪೇಟೆಯ ಪ್ರಕಾಶ್, ಶೃಂಗೇರಿಯ ಮಂಜಪ್ಪ ನಾಯಕ್ ರೂಂ ಮೇಟ್ ಮತ್ತು ಕಂಪೆನಿ. ಹಾಗೆ ಹಾಸ್ಟೇಲಿನ ಹೊರತಾದ ನಮ್ಮ ಇನ್ನೊಂದು ಗ್ಯಾಂಗೂ ಇತ್ತು. ಸಾಗರದ ಮೃತ್ಯುಂಜಯ, ಆರ್.ಎಸ್.ಗಿರಿ, ಕೊಪ್ಪದ ಸುರೇಶ, ಮಾಯಾಸಂದ್ರದ ಸುಬ್ಬಣ್ಣ, ಮೈಸೂರಿನ ಅರುಣ ಹೀಗೆ … ಉಮರಬ್ಬ, ದೇವನೂರ್, ಕ್ಷೀರ ಸಾಗರ ಇನ್ನೂ ಕೆಲವರು ಇದ್ದ ಒಂದು ಗುಂಪಿಗೆ ಸೇರಿಕೊಂಡರೂ.. ಗಂಭೀರ ವಿಷಯ ನಮಗೆ ತಲೆಯೊಳಗೆ ಇಳಿಯದೇ… ಮೆಲ್ಲ ಜಾರಿಕೊಂಡೆವು.
ವಿದ್ಯಾರ್ಥಿದೆಸೆಯಲ್ಲೇ ಶಂಕರ್ “ಪ್ರೊಫೆಸರ್” ಆಗಿದ್ದ”. (ಕಲ್ಕತ್ತಾದ ಮ್ಯಾಜಿಕ್ ಸರ್ಕಲ್ ನೀಡಿದ ಗೌರವ) ಕೆಲವು ಜನ ಪ್ರಾಧ್ಯಾಪಕರೂ ಶಂಕರನನ್ನು ಪ್ರೊಫೆಸರ್ ಅಂತಲೇ ಕರಿತಿದ್ರು. ಆ ವರ್ಷ ಕಾಲೇಜಿನ ಪ್ರಿನ್ಸಿಪಾಲರು… ಪ್ರೊ.ಕೆ.ಬಿ.ವೈ. ತೋಟಪ್ಪನವರು. ಸೂಟು ಬೂಟಿನ ಅವರ ವ್ಯಕ್ತಿತ್ವಕ್ಕೆ… ಈ ಹೆಸರು ಯಾಕೋ… ಹೊಂದುವುದಿಲ್ಲ… ಅಂತ ನಮಗನಿಸಿ…. ಆ ನಂತರ ಅವರಿಗೆ ‘ಕೆ.ಬಿ.ವೈ. ಗಾರ್ಡನ್ ಫಾದರ್’ ಅಂತ ಗುಟ್ಟಿನಲ್ಲಿ ನಾಮಕರಣ ಮಾಡಿದ್ದೆವು.
ಕಾಲೇಜಿನ ಪ್ರಥಮ ದರ್ಶನದ ದಿನವೇ, ಈಶ್ವರ ದೈತೋಟ ತಾನಾಗಿ ಬಂದು… ನಮ್ಮ ಪರಿಚಯ ಮಾಡಿಕೊಂಡಾಗ… ಖುಶಿಯಾಗಿತ್ತು. ಊರು ಬಿಟ್ಟು ಅಭ್ಯಾಸ ಇಲ್ಲದ ನಮಗೆ…. ‘ನಮ್ಮ ಊರಿನ ಜನ ಒಂದು ಉಂಟು…’ ಅಂತ ಧೈರ್ಯ ಬಂದಿತ್ತು. (‘ಚಿರ ಯುವಕ’ಈಶ್ವರ ದೈತೋಟ ನಂತರ ನಮ್ಮನ್ನು ತನ್ನ ‘ರಶ್ಯಾ ಮೇಡಂ’ ಮನೆಗೂ ಕರೆದುಕೊಂಡು ಹೋಗಿದ್ದ. ‘ರಶ್ಯನ್ ಲೆಮನ್ ಟೀ’ಯ ಸತ್ಕಾರವೂ ಸಿಕ್ಕಿತ್ತು.)
ಮಹಾರಾಜಾದಲ್ಲಿ ಎಲ್ಲವೂ `ಮಹಾ’…… ವಿದ್ಯಾರ್ಥಿ-ಅಧ್ಯಾಪಕರಂತೆ…. ಐಚ್ಛಿಕ ವಿಷಯಗಳು ಕೂಡಾ. ಬಿ.ಎ. ತರಗತಿಗೇ ಸುಮಾರು ಅರ್ವತ್ತೈದರಷ್ಟು ಕಲಿಕಾ ಸಬ್ಜೆಕ್ಟ್‌ಗಳು. ಸೈಕಾಲಜಿ ಕಲೀಬೇಕೆಂದೇ ಮೈಸೂರಿಗೆ ಹೋದದ್ದು ನಿಜ…….. ಆದರೆ… ಕಾಲೇಜಿನಲ್ಲಿ ಕಲಿತದ್ದೆಷ್ಟು….?? ಯಾರಿಗ್ ಗೊತ್ತು….?? ೩ ವರ್ಷ ಕಲಿತರೂ ಸೈಕಾಲಜಿಯ “ಡೆಫಿನೆಶನ್” ಕೂಡಾ ತಲೆಗೆ ಹೋಗಿರ್ಲಿಲ್ಲ.
`ಖಾನ್’ ಅಂತ ಒಬ್ಬರು ಪ್ರೊಫೆಸರ್. ನಮಗೆ ಮೊದಲ ವರ್ಷಕ್ಕೆ ಇರಲಿಲ್ಲ. ತುಂಬಾ ಅದ್ಭುತವಾದ ಪಾಠ ಅಂತೆ. ಆದರೆ ದ್ವಿತೀಯ ವರ್ಷಕ್ಕೆ ನಾವು ಬಂದಾಗ ಅವರು ಕ್ಯಾನ್ಸರ್‌ನಿಂದ ತೀರಿಕೊಂಡರು. ಅವರ ಪಾಠ ಕೇಳುವ ಭಾಗ್ಯ ನನಗಂತೂ ಸಿಕ್ಕಿಲ್ಲ. ವಸಂತರಾಜಯ್ಯ ಅಂತಾ ಸೂಟು ಬೂಟಿನ ಮೇಸ್ಟ್ರು. ಒಳ್ಳೆ ಮನುಷ್ಯ … ಆದ್ರೆ ಪಾಠ ….!!! ಅವರು ದೊಡ್ಡ “ಡಿಕ್ಟೇಟರ್” – ಅಂದರೆ…… ನೋಟ್ಸ್ ಡಿಕ್ಟೇಟರ್. ತರಗತಿಗೆ ಬಂದು ಕುರ್ಚಿಯಲ್ಲಿ ಕುಳಿತು, ನೋಟ್ಸ್ ಓದಲು ಪ್ರಾರಂಬಿಸಿದರೆ…. ಬೆಲ್ ಹೊಡೆಯುವ ತನಕ ಅವರ ಏಕಾಗ್ರತೆಗೆ ಯಾವ ಭಂಗವೂ ಬರ್ತಿರ್ಲಿಲ್ಲ. ಅವರಲ್ಲಿ ವಿಭಿನ್ನ ರೀತಿಯ ಮೂರು ಸೆಟ್ ನೋಟ್ಸ್ ಇವೆ ಅಂತ ಪ್ರತೀತಿ ಇತ್ತು. ಈ ವರ್ಷದವರಿಗೆ ಕೊಟ್ಟ ನೋಟ್ಸ್ ಮುಂದಿನ ಎರಡು ವರ್ಷದವರಿಗೆ ಇಲ್ಲ. ಮಕ್ಕಳು… ಹಿರಿಯ ವಿದ್ಯಾರ್ಥಿಯಲ್ಲಿದ್ದುದನ್ನು ಕಾಪಿ ಮಾಡಿಬಿಟ್ರೆ…. ಅನ್ನುವ ದೂ~ರಾಲೋಚನೆ ಇರಬಹುದು!!!
ನಮ್ಮ ಕ್ಲಾಸಿನಲ್ಲಿ ಒಬ್ಬ ಹುಡುಗ ಗುಟ್ಟಾಗಿ ಬಾಯಲ್ಲಿ ಹೆಸರುಕಾಳು ಹಾಕಿಕೊಂಡು ಮೊಣಕೈ ಡೆಸ್ಕಿಗೆ ಊರಿ, ಮುಷ್ಟಿ ಬಾಯಿಗಡ್ಡವಿಟ್ಟು ಸಭ್ಯಸ್ಥನಂತೆ ಕೂತಿರುತ್ತಿದ್ದ. ಅವನು ಮುಷ್ಟಿಯೊಳಗೆ ಒಂದು ಸಣ್ಣ ಗಾಜಿನ ಪೈಪ್ (ಲ್ಯಾಬೊರೇಟರಿಯಿಂದ ಕದ್ದದ್ದು) ಹಿಡಿದು, ಪೈಪಿನ ತುದಿ ಬಾಯಿಯೊಳಗೆ ಬರುವಂತೆ ಹೊಂದಿಸಿಕೊಂಡು, ನಾಲಿಗೆಯಿಂದ ಒಂದು ಹೆಸರುಕಾಳನ್ನು ಪೈಪಿನ ಬಾಯಿಯೊಳಗೆ ತಳ್ಳಿ, ಉಫ್… ಅಂತ ಎದುರು ಕುಳಿತ ಮಕ್ಕಳ ಮೈಗೆ ಊದಿಬಿಡುತ್ತಿದ್ದ. ಪಿಸ್ತೂಲಿನಿಂದ ಹೊರಟ ಗುಂಡಿನಂತೆ ಕಾಳು ಸಿಡಿಯುತ್ತಿತ್ತು. ಎಷ್ಟೊ ಕಾಳುಗಳು ಗುರಿತಲುಪದೇ ವ್ಯರ್ಥವಾದರೂ ಒಂದೊಂದು ಬೆನ್ನಿಗೋ ತಲೆಗೋ ಕಿವಿಗೋ ಬಿದ್ದು “ಛಳಕ್” ಆಗ್ತಿತ್ತು. ಒಂದಿನ ಈ ಗುಂಡು ನೇರ ಮೇಷ್ಟ್ರ ಮೂಗಿಗೇ ಬಡಿಯಬೇಕೇ!!! ಪಾಪ ಅವರಿಗೆ ಏನೂ ಅಂತಾನೇ ಗೊತ್ತಾಗ್ಲಿಲ್ಲ. ಅವರು ಪಕ್ಕನೆ ಮೂಗನ್ನೊಮ್ಮೆ ಒರೆಸಿಕೊಂಡಾಗ, ಈ ಗುಪ್ತಕಾರ್ಯಾಚರಣೆಯ ಅರಿವಿದ್ದ ನಮಗೆ ನಗು ತಡೆದುಕೊಳ್ಳಲು ಸಾಧ್ಯವಾಗದೇ …. ಅಶಿಸ್ತಿಗಾಗಿ ಬೈಸಿಕೊಂಡೆವು.
ಸರೋಜಾ ಬಾಯಿ ಮೇಡಂ – ತುಂಬಾ ಒಳ್ಳೆಯವರು, ಒಬ್ಬರು ಅಮ್ಮನಂತಾ ಮೇಡಂ. ಆದರೇನು …. ಪಾಠ ಆಕರ್ಶಕವಾಗೇನೂ ಇರಲಿಲ್ಲ. ಸೈಕಾಲಜಿ ಪ್ರಾಕ್ಟಿಕಲ್ ಕ್ಲಾಸುಗಳು ಬೇಜಾರಾಗ್ತಿರಲಿಲ್ಲ. ಹನುಮಂತಯ್ಯ ಮೇಷ್ಟ್ರು ಮಕ್ಕಳಿಗೆಲ್ಲ ಇಷ್ಟವಾಗಿದ್ದರು. ‘ಆಪ್ಟಿಟ್ಯೂಡ್’ ಪಾಠದ ಸಂದರ್ಭ……. ಆಗಾಗ ಜಾಣ್ಮೆಲೆಕ್ಕ ಇತ್ಯಾದಿ ಇರ್ತಾ ಇತ್ತು. ಒಂದೆರಡು ಜಾಣ್ಮೆಯ ಆಟಗಳಲ್ಲಿ ಅವರನ್ನು ಯಾರೂ ಸೋಲಿಸಲಾಗದೇ ಇದ್ದಾಗ……… ಅನಿರೀಕ್ಷಿತವಾಗಿ ನನ್ನಿಂದ ಸೋತು…… ನನ್ನ “ಐಕ್ಯೂ” ಶ್ರೇಷ್ಟ ಮಟ್ಟದ್ದು ಅಂತ ನಂಬಿದ್ದರಿಂದ……. ನಾನು ಸ್ವಲ್ಪ ಮೆಚ್ಚಿನವನಾದೆನೋ ಏನೋ…!!
ಎಚ್.ಒ.ಡಿ.- ನಾರಾಯಣ ರಾವ್ ಪವಾರ್, ನೋಡುವಾಗಲೇ ಸೈಕಾಲಜಿ ಪ್ರೊಫೆಸರ್ ಅಂತ ಗೊತ್ತಾಗುವ ಹಾಗೇ ಇದ್ರು. ನೋಡುವಾಗ ಯಾಕೋ ಹಳೆ ಹಿಂದಿ ಸಿನೇಮಾದ “ಕೆ.ಎನ್.ಸಿಂಘ್” ನೆನಪಾಗ್ತಾ ಇತ್ತು. ಅವರ ಪಾಠ ನಮಗೆ ಕಡಿಮೆ ಸಿಕ್ಕಿದ್ದು. ಒಂದೆರಡು ಅದ್ಭುತವಾದ ಪಾಠ ಸಿಕ್ಕಿತ್ತು. ಆದರೆ ಅದು ನಮ್ಮ ಸಿಲೆಬಸ್ಸಿಗೆ ಹೊರತಾದದ್ದು! …..
ನಮ್ಮ ಸಿಲೆಬಸ್ ಅಂದ್ರೇ ಹಾಗೆ….. `ಯಾರ್ಯಾರೋ ಮಾಡಿದ ಪ್ರಯೋಗಗಳ ಪಟ್ಟಿ ಮಾತ್ರಾ……’ ಅಂತ ಕಾಣ್ತಾ ಇತ್ತು. ಅವರು… ಕೆಲವೊಂದು ಅದ್ಭುತ ಸಂಗತಿ ಹೇಳಿ…. ದಿಸ್ ಈಸ್… ರಿಯಲ್ ಸೈಕಾಲಜಿ…. ಅಂತಿದ್ರು. ಅಂತೂ…. ಸೈಕಾಲಜಿ ಕಲಿಯಲೆಂದು ಬಂದವನು……. ಮೂರು ವರ್ಷ ಕಳೆದು…. ಪದವಿಯ ಕೊನೇ ಪರೀಕ್ಷೆ ಸಮೀಪಿಸಿದಾಗ….. “ಬರೆಯುವುದೇನನ್ನೂ…..!!!” ಅನ್ನುವ ಪ್ರಶ್ನೆ ಗಂಭೀರವಾಗಿ ಕಾಡಿದ್ದರಿಂದ…. ಪರೀಕ್ಷೆಗೆ ಹಾಜರಾಗಲಿಲ್ಲ. ಎಲ್ಲರ ಸಹಾನುಭೂತಿ ಗಳಿಸಿಕೊಳ್ಳಲು, ನನ್ನ ಆಜನ್ಮ ಮಿತ್ರ “ತಲೆ ನೋವು” ನೆರವಾದ.
ಹೇಗೂ ಕಾಲೇಜಿಗೆ ಹೋಗುವ ಲಕ್ಷಣ ಕಾಣದೇ ಮಗ ಮದುವೆ ಆದರೂ ಮಾಡಿಕೊಳ್ಳಲ್ಲಿ ಅಂತ ಅಪ್ಪಯ್ಯನಿಗೆ ಕಂಡಿತು. ನಂತರ, ಮೇಯಲ್ಲಿ ಮದುವೆ ಆದರೂ….. ಅರ್ಧಾಂಗಿಯ ಅಪ್ಪಣೆ ಪಡೆದು….. ಜುಲಾಯಿಯಲ್ಲಿ ಒಬ್ಬನೇ ಮೈಸೂರಿಗೆ ಬಂದು, ಪವಾರ್ ಮೇಷ್ಟ್ರಿಂದ ಪಾಠ ಹೇಳಿಸಿಕೊಂಡು, ಸೆಪ್ಟೆಂಬರ್‌ನಲ್ಲಿ ಪರೀಕ್ಷೆ ಬರೆದು, ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣನಾದುದರಿಂದ…… ನನ್ನ ಪತ್ನಿಯು ‘ತನ್ನ ತ್ಯಾಗಕ್ಕೆ ಸಿಕ್ಕಿದ ಫಲ’ ಎಂದು ಆನಂದಭಾಷ್ಪಗಳನ್ನು ಉದುರಿಸುವಂತಾಯ್ತು.
ಉತ್ತೀರ್ಣನಾದುದಕ್ಕಿಂತಲೂ ನನಗೆ ಸೈಕಾಲಜಿಯ ಬಗ್ಗೆ ಸ್ವಲ್ಪವಾದರೂ ಜ್ಞಾನ ಸಿಕ್ಕಿತಲ್ಲಾ ಎನ್ನುವುದೇ ಹೆಚ್ಚು ಖುಶಿ. ಪವಾರ್ ಮೇಷ್ಟ್ರು ಹರಸಿ ಹೇಳಿದ್ದರು, “ನಿಜವಾಗಿ ಸೈಕಾಲಜಿಯ ಜ್ಞಾನ ಉಂಟಾಗುವುದು – ಜೀವನಾನುಭವದಲ್ಲಿ. ಅದು ನಿನಗೆ ದೊರಕಲಿ” ಅಂತ ಹಾರೈಸಿದ್ದರು. ನನಗೆಷ್ಟು ದಕ್ಕಿದೆಯೋ ಗೊತ್ತಿಲ್ಲ.
ಪದವಿ ಪಡೆದು ಊರಿಗೆ ಬಂದ ಮೇಲೆ…… `ಫ್ರಾಯ್ಡ್ ನ ಥಿಯರಿ’ಗಳ ಬಗ್ಗೆ…. `ಇಡ್’, ‘ಈಗೋ’, `ಸುಪರ್ ಈಗೋ’ ಬಗ್ಗೆ…… ಕೆಲವರಲ್ಲಿ ಕೊರೆಯುತ್ತಿದ್ದೆ……
ಒಮ್ಮೆ, ನನ್ನ ಅಪ್ಪಯ್ಯ ಎಲ್ಲೋ ಒಂದು ಕಡೆ – (ಹರೇಕಳ ಎಂದು ನೆನಪು) ಪುರಾಣ ಪ್ರವಚನದಲ್ಲಿ, ‘ಮಂದ’, ‘ಮಾನವ’, ‘ಮಹಾತ್ಮ’…. ಅಂತ ವಿವರಿಸಿದ್ದು ಕೇಳಿ ದಂಗಾದೆ…..!! ಇವರ್ಯಾವಾಗ ಸೈಕಾಲಜಿ ಓದಿದ್ದರು ಅಂತ..!! (ಅವರ ಕೃತಿ ಶ್ರೀಮನ್ಮಹಾಭಾರತದ ಕೊನೆಗೆ ಒಂದು ಪದ್ಯರೂಪದಲ್ಲಿ ಅದರ ವಿವರ ಇದೆ) ಶೇಣಿಯವರೂ ಒಮ್ಮೆ ತಮ್ಮ ಹರಿಕತೆಯ ಪೀಠಿಕೆಯಲ್ಲಿ ಹೇಳಿದ್ದೂ ನಾನು ಕಲಿತ ಸೈಕಾಲಜಿಯೇ….!! `ಈಡಿಪಸ್ ಕಾಂಪ್ಲೆಕ್ಸ್’ ವಿಷಯ ಹೇಳಿದಾಗ ದೊಡ್ಡ ಸಾಮಗರು, ನಮ್ಮ ವೇದ ಕಾಲದ ಪುರಾಣದಿಂದಲೇ ಉದಾಹರಣೆ ಕೊಟ್ಟಿದ್ದರು……. ಪವಾರ್ ಮೇಷ್ಟ್ರ ಮಾತು ಅರ್ಥ ಆಗಿತ್ತು…….. ಏನೇ ಇರಲಿ, ಸೈಕಾಲಜಿ ಚಿರಾಯುವಾಗಲಿ……..
“ಸೈಕಾಲಜಿ ಮತ್ತು ಕನ್ನಡ” ಮೇಜರ್ ಸಬ್ಜೆಕ್ಟ್‌ಗಳಿಗೆ ಮೈನರ್ ಆಗಿ….. ಯಾವುದಾದರೂ ಭಾಷಾ ವಿಷಯಕ್ಕೆ ಮಾತ್ರ ಅವಕಾಶ. ಇದ್ದುದರಲ್ಲಿ ಹಿಂದಿ ಉತ್ತಮ ಅಂತ ಆರಿಸಿಕೊಂಡಿದ್ದೆವು. ಮಿತ್ತೂರು ಗೋವಿಂದನ ‘ಮೇಜರ್’ಗಳಿಗೂ ಇದು ಅನಿವಾರ್ಯವಾಗಿತ್ತು.
ಹಿಂದಿಯ ಮೊದಲ ತರಗತಿಯಲ್ಲಿ ಪ್ರಾಧ್ಯಾಪಕರು……. ಹಿಂದಿ ಭಾಷೆಯಲ್ಲಿ ಯಾರ್ಯಾರಿಗೆ ಎಷ್ಟೆಷ್ಟು ಪರಿಣತಿ ಅಂತ ವಿಚಾರ್ಸಿದ್ರು. ಇದ್ದ ೮-೧೦ ಮಂದಿಯಲ್ಲಿ…. ಎಲ್ಲರೂ ‘ವಿಷಾರದ’…. ‘ಸಾಹಿತ್ಯ ರತ್ನ’… ಬಿರುದಾಂಕಿತರು… ನಾನು, ಶಂಕರ, ಗೋವಿಂದರನ್ನು ಬಿಟ್ಟು. ನನ್ನಲ್ಲಿ ಕೇಳಿದಾಗ, ಎದ್ದು ನಿಂತು….. “ನನ್ನದು ಎಸ್.ಎಸ್.ಎಲ್.ಸಿ. ಕಂಪಲ್ಸರಿ ಹಿಂದಿ.” ಅಂತ ಹೆಮ್ಮೆಯಿಂದ ಹೇಳಿಕೊಂಡೆ, ಉಳಿದಿಬ್ಬರೂ ನನ್ನನ್ನು ಅನುಮೋದಿಸಿದರು….. ಹಿಂದಿ ಆಚಾರ್ಯರಿಗೆ ಗಾಬರಿ……!!!! “ಅಯ್ಯೋ .. ಹಾಗಾದ್ರೆ ಕಷ್ಟ ..!!” ಅಂತ ಹೇಳಿ, ನಮ್ಮೆಡೆಗೆ ಕರುಣಾ ಕಟಾಕ್ಷವನ್ನು ಬೀರಿ….. ಹಿಂದಿ ಭಾಷೆಯ ಮಹತ್ವ, ಅದಕ್ಕೆ ಬೇಕಾದ ಕಠಿಣ ಸಾಧನೆ, ಅರ್ಹತೆ ಎಲ್ಲವನ್ನೂ ೧೦ ನಿಮಿಷ ಕೂಲಂಕಷವಾಗಿ ವಿವರಿಸಿದರು. ಪಕ್ಕದ ಬೆಂಚಿನಲ್ಲೇ ಕುಳಿತಿದ್ದ ಒಬ್ಬಳು `ಸಾಹಿತ್ಯ ರತ್ನ’……. ಕೆಲವರು ಹಿಂದಿ ಸಿನೇಮಾ ನೋಡಿ…. ಹಿಂದಿ ಸುಲಭ ಅಂತ ಬಂದ್ ಬಿಡ್ತಾರೆ” ಅಂತ ಒಗ್ಗರಣೆ ಹಾಕಿದಳು……. ನನ್ನ ಮಟ್ಟಿಗೆ ಅದು ಸ್ವಲ್ಪ ಸತ್ಯ ಆದ್ದರಿಂದ…. ನನ್ನ ಪ್ರತ್ಯುತ್ಪನ್ನಮತಿ ಗಂಟಲಲ್ಲೇ ಬಾಕಿ……. ಗೋವಿಂದ ಬಿಡ್ಲಿಲ್ಲ…. “ಆದ್ರೂ ಕೆಲವು ಹಿಂದಿ ‘ಸಾಹಿತ್ಯ ರತ್ನ’ಗಳಿಗೆ ಹಿಂದಿ ಸಿನೇಮಾ ಅರ್ಥ ಆಗೋದಿಲ್ಲವಲ್ಲ… ಅಂದೇ ಬಿಟ್ಟ!!
ನಾವು ಈ ನಮ್ಮ ಮೇಜರ್ ಸಬ್ಜೆಕ್ಟ್‌ಗೆ ಬೇಕಾಗಿ ಹಿಂದಿ ಆರಿಸಿಕೊಂಡ ಅನಿವಾರ್ಯತೆಯನ್ನು ಬಿನ್ನವಿಸಿಕೊಂಡೆವು. ಗುರುಗಳು ಪಾಪ ಬಾಳ ಒಳ್ಳೇವ್ರು…. ಸಚ್ಚಿದಾನಂದ ಅಂತೇನೋ ಹೆಸರು ನಿವೃತ್ತಿಯ ಅಂಚಿನಲ್ಲಿದ್ದರು “ಈ ಒಂದು ಕ್ಲಾಸ್ ನೋಡಿ. ಇವತ್ತಿನ ಪಾಠ … ನಿಮಗೆ ಅರ್ಥ ಆದ್ರೆ ಅಡ್ಡಿ ಇಲ್ಲ….. ಸ್ವಲ್ಪ ಕಷ್ಟಪಟ್ಟಾದ್ರೂ ಕಲಿಬಹುದು. ಅರ್ಥ ಆಗಿಲ್ಲ ಅಂತಾದ್ರೆ ಹೇಳಿ……. ಕೆಂಪೇಗೌಡರ ಹತ್ರ ಹೇಳಿ ನಿಮ್ಗೆ ಲಿಂಗ್ವಿಸ್ಟಿಕ್ಸ್ ಕೊಡ್ಸೋಣ” ಅಂದ್ರು. (“ಬೆಂಗಳೂರಿನ ಕೆಂಪೇಗೌಡ್ರಲ್ಲ ” ನಮ್ಮಕಾಲೇಜಿನ ಪ್ರಾಧ್ಯಾಪಕರು) ನಮಗೆ ಲಿಂಗ್ವಿಸ್ಟಿಕ್ಸ್ ಬಗ್ಗೆ ಕುತೂಹಲ ಇದ್ದು, ಮೊದಲೇ ಕಛೇರಿಯಲ್ಲಿ ಆ ಬಗ್ಗೆ ವಿಚಾರಿಸಿ, ನಿರಾಸೆ ಆಗಿತ್ತು. ಈಗ ಆಸೆ ಚಿಗುರಿತು.
ಒಂದು ಗಂಟೆ ಪಾಠ ಕೇಳಿದಾಗ…. ಅರ್ಥವಾಗದೇ ಇರುವಂಥಾದ್ದು ಅಲ್ಲಿ ಏನೂ ಇರ್ಲಿಲ್ಲ.. !!! ಆದರೂ… “ಅಯ್ಯೋ…. ಒಂಚೂರೂ ಅರ್ಥ ಆಗಿಲ್ಲ ಸಾರ್….” ಕಾಪಾಡಿ…. ಅಂದೆವು. ಹಿಂದಿ ಆಚಾರ್ಯರ ದಯೆ, ಲಿಂಗ್ವಿಸ್ಟಿಕ್ಸ್ ಎಚ್.ಒ.ಡಿ. ಕೆಂಪೇಗೌಡರ ಕೃಪೆ. ಹಿಂದಿ ಬಾಣಲೆಯಿಂದ ಲಿಂಗ್ವಿಸ್ಟಿಕ್ಸ್ ಕಾವಲಿಗೆ ಬಿದ್ದೆವು. ಹಾಗೆ… ಮಹಾರಾಜಾ ಕಾಲೇಜಿನಲ್ಲಿ ಈ ಹೊಸ ಕಾಂಬಿನೇಶನ್ ಸೃಷ್ಟಿ ಆಯ್ತು. ಇದಕ್ಕೆ ನಾವು ಕಾರಣರಾದರೂ… ಇತಿಹಾಸದಲ್ಲಿ ದಾಖಲೆಯಾಗದಿದ್ದುದು ಮಾತ್ರ, ಶೋಚನೀಯವೋ ಅಲ್ಲ ವಿಷಾದನೀಯವೋ….?? (ಯಾವುದೋ ಒಂದು, ಬೇಕಾದ್ದನ್ನು ಜೋಡಿಸಿಕೊಳ್ಳಿ!!!)
ಆದರೆ…. ಶಂಕರನಿಗೆ ಹಿಂದಿ ಡಿಪಾರ್ಟ್‌ಮೆಂಟಿನ ನಂಟು ಬಿಡ್ಲಿಲ್ಲ. ನಂಜರಾಜ ಅರಸು ಅವರು, “ಸಂಕಲ್ಪ” ಸಿನೀಮಾ ಮಾಡಿದಾಗ ಒಂದು ಪಾತ್ರ ಹಾಗೂ ಸಿನೀಮಾದ ಭಾಗವಾಗಿದ್ದ…. ‘ಹಿಪ್ನೋಟಿಸಂ ಮಾರ್ಗದರ್ಶನಕ್ಕಾಗಿ. ಶಂಕರನನ್ನು ಎಳಕೊಂಡ್ರು…..
ಅನಂತ ನಾಗ್ ಆಗ “ನಾಗರಕಟ್ಟಿ”ಯಾಗಿಯೇ ಇದ್ದರು. “ಸಂಕಲ್ಪ” ಅವರ ಮೊದಲ ಸಿನೇಮ ಸಿ.ಆರ್.ಸಿಂಹ ಡೋಂಗಿ ಸನ್ಯಾಸಿಯ ಪಾತ್ರ. ಶಂಕರ ಆ ಸನ್ಯಾಸಿಯ ಶಿಷ್ಯ. ನಿರ್ದೇಶಕರು ಜಿ.ವಿ.ಅಯ್ಯರ್.
ಶಂಕರ ದ.ಕ. ಜಿಲ್ಲೆಯವನಾದದ್ದು ನಿರ್ದೇಶಕರಿಗೆ ಖುಶಿಯಾಯ್ತೋ ಏನೋ… ಡಿಫಾಲ್ಟ್ ಆಗಿರುವ ವಿಚಿತ್ರ “ದ.ಕ.ಶೈಲಿಯ ಸಿನೇಮ ಸಂಭಾಷಣೆ ಶಂಕರನಿಂದ ಮಾತಾಡಿಸಿ ಲಗಾಡಿ ಕೊಟ್ಟಿದ್ದರು. ಸಿನೇಮಕ್ಕೆ ಮಾತ್ರ ರಾಷ್ಟ್ರಪ್ರಶಸ್ತಿ ದೊರಕಿತ್ತು.
ಲಿಂಗ್ವಿಸ್ಟಿಕ್ಸ್ ಕೆಂಪೇಗೌಡ ಮೇಷ್ಟ್ರ ಪಾಠ ಒಳ್ಳೆಯದೇ..!! ಆದರೆ ಕ್ಲಾಸಿನ, ವಿದ್ಯಾರ್ಥಿಗಳ ಬಗೆಗೆ ಇರಬೇಕಾದ ಮೋಹವನ್ನು ಮೀರಿದವರು… (!!) ಶ್ರೀನಿವಾಸ್ ಮೇಷ್ಟ್ರು ಮಕ್ಕಳಿಗೆ ಆಪ್ತರು. ಉತ್ಸಾಹಿ, ಒಳ್ಳೆಯ ಪಾಠ. ಭಾಷಾ ವಿಜ್ಞಾನ ಶಾಸ್ತ್ರ ಹೇಳಿದ ರೀತಿಯಲ್ಲೇ ಉಚ್ಛಾರಣೆ…. ಆದ್ರೆ.. ಇವ್ರು ಯಾಕೆ ಇಷ್ಟು ಕಷ್ಟ ಪಡ್ತಾರಪ್ಪಾ…. ಎಂಬುದು ನಮ್ಮ ಚಿಂತೆ.
ಅಶೋಕ ವರ್ಧನ… ‘ಅತ್ರಿ ಬುಕ್ ಸೆಂಟರ್’ ಬ್ಲಾಗ್‌ನ ತನ್ನ ಲೇಖನದಲ್ಲಿ “ಮಹಾ ರಜ” ಕಾಲೇಜು ಅಂತ ಬರೆದಿದ್ರು…. ಪ್ರಾಯಷಃ ಅದು…. ನನ್ನನ್ನು ನೆನಪಾದ ಕಾರಣವೇ ಇರಬೇಕು….. ಯಾಕೆಂದರೆ…. ನನ್ನಷ್ಟು ರಜೆ ಪಡೆದವರು ಬೇರೆ ಯಾರೂ ಇದ್ದಿರಲಿಕ್ಕಿಲ್ಲ. ನಾನು… ಸತತ ಮೂರು ವರ್ಷ…. “ಅಟೆಂಡೆನ್ಸ್ ಶಾರ್ಟೇಜ್”ಗಾಗಿ ಹೆಸರು ಪಡೆದವನು. ಕಾಲೇಜಿನ “ಸ್ಪೋರ್ಟ್ಸ್ ಕೋಟಾ”ದಲ್ಲಿ ಅಟೆಂಡೆನ್ಸ್ ಪಡೆದುಕೊಂಡವನು….. (ಆ ಕಾಲದಲ್ಲಿ ಪ್ರತಿಭೆಗೆ ಬೆಲೆ ಇತ್ತು ನೋಡಿ….!!!!) ಮತ್ತೂ ಅಟೆಂಡೆನ್ಸ್ ಸಾಲದೇ ….. ಹೆಡ್ ಆಫ್ ದಿ ಡಿಪಾರ್ಟ್‌ಮೆಂಟ್‌ರ ಕಾಲಬುಡದಲ್ಲಿ ಹ್ಯಾಪ್ ಮೋರೆ ಹಾಕಿಕೊಂಡು ನಿಂತವನು….. ತಲೆನೋವಿನ ಚೆಕ್‌ಅಪ್‌ಗಾಗಿ ಆಸ್ಪತ್ರೆಯಲ್ಲಿ ನಿಂತಿದ್ದ ನನ್ನನ್ನು ಸೈಕಾಲಜಿ ಪ್ರಾಧ್ಯಾಪಕರಾದ ಹನುಮಂತಯ್ಯ ನೋಡಿದ್ದರಿಂದ…. ನನ್ನ ವಕಾಲತ್ತು ಅವರೇ ವಹಿಸಿಕೊಂಡಿದ್ದರು.
ಕೆಲವು ತರಗತಿಗಳಲ್ಲಿ ನನ್ನ ಪರವಾಗಿ ಹಾಜರಿ “ಯೆಸ್” ಹೇಳಲು ದೊಡ್ಡ ಪಡೆಯೇ ಇತ್ತು! ಇನ್ನು ಕೆಲವು ಜನ… ಗುರುವರ್ಯರು, ಧಾರಾಳಿಗಳು.. ಸ್ಪೋರ್ಟ್ಸ್ ಕೋಟಾದಲ್ಲಿ ಅಂದರೆ…. ಕೊಂಕು ತೆಗೀಬೇಕಾಗಿಲ್ಲ….. ಊರಲ್ಲಿ ಕ್ರಿಕೆಟ್ ಚಾಂಪಿಯನ್ ಆಗಿದ್ದ ನಾನು…. ಇಲ್ಲಿಯೂ ಕ್ರಿಕೆಟ್ ಆಟದ ತರಬೇತಿಗೆ ಸೇರಿಕೊಂಡಿದ್ದೆ. ಕೋಚ್, ನನ್ನ ತಪ್ಪು ಹೊಡೆತಗಳನ್ನು ತಿದ್ದುವುದಕ್ಕಾಗಿ… ಮೊದಲಿಂದ ಸುರು ಮಾಡಿದರು…. ನನ್ನ ಅಭಿಮಾನದ ಪ್ರಶ್ನೆ…!!! ಇಲ್ಲಿ ಕಷ್ಟ ಪಡುವುದಕ್ಕಿಂತ ಸಯ್ಯಾಜಿ ರಾವ್ ರೋಡ್‌ನಲ್ಲೇ… ಬ್ಯಾಟಿಂಗ್ ನಡೆಸುವುದು ಸೂಕ್ತವೆಂದು ಕಂಡು…. ಕ್ರಿಕೆಟ್ ಬಿಟ್ಟೆ……
ಗೆಳೆಯ, ‘ಸೊರಬ’ದ ಚಂದ್ರಶೇಖರ…. ಕಾಲೇಜಿನ ‘ಬಾಲ್ ಬ್ಯಾಡ್ ಮಿಂಟನ್’ ತಂಡಕ್ಕೆ ನನ್ನನ್ನು ಸೇರಿಸಿದ…. ಆರನೇ ಆಟಗಾರನಾಗಿ. ಪಂದ್ಯಗಳಲ್ಲಿ ‘ಬೆಂಚು ಬಿಸಿ’ ಮಾಡಿದ್ದೇ ಹೌದಾದರೂ…. ಏನೀಗ…. ನನ್ನಲ್ಲಿ ಚಾಂಪಿಯನ್ ಪಟ್ಟದ ಸರ್ಟಿಫಿಕೆಟ್ ಈಗಲೂ ಇದೆಯಲ್ಲ….!!!
ದಕ್ಷಿಣ ಕನ್ನಡದಲ್ಲಿ ಕಲಿತ ನನಗೆ ಮಹಾರಾಜಾ ಕಾಲೇಜಿಗೆ ಬಂದಾಗ ಜ್ಞಾನೋದಯವಾದದ್ದು ಏನು ಅಂದರೆ…. ಇಲ್ಲಿ ಏನಿದ್ದರೂ ನಮ್ಮ ತಲೆಗೆ ನಮ್ಮದೇ ಕೈ ಅಂತ…. ದಕ್ಷಿಣ ಕನ್ನಡದ ಕಾಲೇಜುಗಳಲ್ಲಿದ್ದಂತೆ….. `ಅರೆದು ಕುಡಿಸುವ ಗುರುಗಳು’ ಸ್ವಲ್ಪ ಕಷ್ಟ ಅಂತ. `ನಾನ್ ಡಿಟೈಲ್ಡ್’ ವಿಷಯಗಳಿದ್ದರೆ ಕ್ಲಾಸಿನಲ್ಲಿ ಪಾಠವೂ ಇಲ್ಲ…. ನೋಟ್ಸೂ ಇಲ್ಲ.
ನಮಗೆ `ಸೆಕೆಂಡ್ ಲ್ಯಾಂಗ್ವೇಜ್’ ಕನ್ನಡದಲ್ಲಿ ಶರಶ್ಚಂದ್ರ ಚಟರ್ಜಿಯವರ `ಚರಿತ್ರಹೀನ’…….. ಪಾಠ ಇಲ್ಲ, ಪರೀಕ್ಷೆ ಮಾತ್ರ………. ಏನ್ ಮಾಡೋದೂ….?? ಊರಲ್ಲಿದ್ದಾಗ ಅಪ್ಪ ಹೇಳಿಕೊಟ್ಟು…. ಬರೆದು, ಭಾಷಣ ಮಾಡಿ ಬೇಕಾದಷ್ಟು ಬಹುಮಾನ ಪಡೆದವನು. ನನ್ನ ಈ `ಸಾಮರ್ಥ್ಯ’ದ ಮೇಲಿನ…… ಅಪಾರ ನಂಬಿಕೆಯಿಂದ, ಸಣ್ಣ ಪರೀಕ್ಷೆಗೆ ಕೆಲವು ದಿನ ಮೊದಲು ಊರಿಗೆ ಬಂದೆ. ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಓದುತ್ತಿದ್ದ, ನನ್ನ ಮಾವನ ಮಗಳಲ್ಲಿದ್ದ, ಕಾಲೇಜಿನಲ್ಲಿ ಬರೆಸಿದ ನೋಟ್ಸ್ ಸಿಕ್ಕಿತು. ನೋಡಿದ ನನಗೆ “ಥ್ರಿಲ್”!!!! ಎಂತಾ ಶೈಲಿ!! ಏನು ನಿರೂಪಣೆ, ವಿಮರ್ಶೆ!!………. ಅದನ್ನೇ ಉರು ಹೊಡೆದು, ಪರೀಕ್ಷೆಯಲ್ಲಿ ಬರೆದೆ.
ಪರೀಕ್ಷೆ ಮುಗಿದು ಒಂದು ದಿನ, ಕ್ಲಾಸಿನಲ್ಲಿ…(ಪ್ರಾಯಶಃ ‘ಸುಜನಾ’ ಇರ್ಬೇಕು) ಮಕ್ಕಳೇ, ಇವತ್ತು ನಿಮ್ಮ ಉತ್ತರ ಪತ್ರಿಕೆ ಕೆಲವನ್ನು ಓದಿ ಹೇಳ್ತೇನೆ….” ಅಂತ ಓದತೊಡಗಿದರು. ಓದುತ್ತಿದ್ದಂತೆ ಗೊತ್ತಾಯ್ತು, ಅದು ನನ್ನದೇ. ಮನಸ್ಸಲ್ಲೇ ಬೀಗುತ್ತಾ ಸುತ್ತಲೂ ನೋಡಿದೆ. ಅನೇಕರ ಕಣ್ಣಲ್ಲಿ ವಿಸ್ಮಯ, ಮೆಚ್ಚುಗೆ…. ಪ್ರಾಯಶಃ …… ಎಲ್ಲಾ ಓದಿ ಆದಮೇಲೆ ನನ್ನನ್ನು ಕರೆದು ಬೆನ್ನು ತಟ್ಟುತ್ತಾರೆ ಎನ್ನುವ ನಿರೀಕ್ಷೆಯಲ್ಲಿದ್ದೆ.
ಓದಿ ಮುಗಿಸಿ, ಪೇಪರನ್ನು ನಿರ್ಲಕ್ಷದಿಂದ ಮೇಜಿನ ಮೇಲೆಸೆದು…. ಒಂದು ಸಾರಿ ಎಲ್ಲರನ್ನೂ ನೋಡಿ, ಈ ಹುಡುಗ ಬಾರೀ ಬುದ್ಧಿವಂತ….. ಇನ್ನೊಬ್ಬರದ್ದನ್ನು ನಕಲು ಹೊಡೆಯುವುದರಲ್ಲಿ…. ಅಂದು ಬಿಟ್ರು!!! ನನ್ನ ಶಿರಶ್ಛೇದನವೇ ಆದಂತೆ ಭಾಸವಾಯ್ತು. ಈ ಹುಡುಗ ಪುಸ್ತಕವನ್ನು ಓದುವ ಗೋಜಿಗೇ ಹೋಗಿಲ್ಲ… ಮುನ್ನುಡಿಯನ್ನೇ ಕಾಪಿ ಹೊಡ್ದ್ ಬಿಟ್ಟಿದ್ದಾನೆ ಅಂದಾಗ, ಈ ನಾಚಿಕೆಯ ನಡುವೆಯೂ ನನಗೆ ದಿಗ್ಭ್ರಮೆಯಾಯ್ತು. ಅವರು ನನ್ನ ಹೆಸರು ಹೇಳಲಿಲ್ಲ, ಬದುಕಿಬಿಟ್ಟೆ. ಕ್ಲಾಸ್ ಮುಗಿಸಿ….. ತೀರಾ ಅವಸರದಿಂದ ರೂಮಿಗೆ ಬಂದು ಪುಸ್ತಕ ಬಿಡಿಸಿದೆ. (ಪುಸ್ತಕ ಕೊಂಡು ಓದದೇ ಕಪಾಟಲ್ಲಿಡುವ ಹುಚ್ಚು ಆಗಲೇ ಇತ್ತು….!!!) ನೋಡಿದ್ರೆ….. ಈ ವಿವೇಕಾನಂದ ಕಾಲೇಜಿನ `ಮಹಾ ವಿಧ್ವಂಸ’ ಮುನ್ನುಡಿಯನ್ನೇ ನೋಟ್ಸ್ ಮಾಡಿ ಮಕ್ಕಳಲ್ಲಿ ಬರೆಸಿದ್ದ……!!!
ಊರಿನ ಶಾಲೆಗಳಲ್ಲಿ ಹೊಗಳಿಸಿಕೊಂಡದ್ದು…… ಈಗ ವಾಕರಿಕೆ ಪ್ರಾರಂಭವಾಯ್ತು. ಎರಡು ತಿಂಗಳು ತೊಳಲಾಡಿದ್ದೆ…… `ಶಿಕ್ಷಣ’ ಅನ್ನುವುದರ ಅರ್ಥ ಬೇರೆಯೇ ಆಗಿ ಕಾಣ್ಲಿಕ್ಕೆ ಸುರುವಾಯ್ತು. ಪ್ರಾಯಶಃ ಇದು ಮಹಾರಾಜಾ ಕಾಲೇಜಿನಲ್ಲಿ ಕಲಿತ ಪಾಠ. ಊರಲ್ಲೇ ಇದ್ದಿದ್ದರೆ ಅರ್ಥ ಆಗುವುದು ಕಷ್ಟ ಇತ್ತು. (‘ನನ್ನ ಅಪಮಾನ, ತೊಳಲಾಟಕ್ಕೆ ತಾನು ನೋಟ್ಸ್ ಕೊಟ್ಟುದೇ ಕಾರಣ’ವೆಂದು, ಮನನೊಂದು, ಮಾವನ ಮಗಳು, ಮುಂದೆ ನನ್ನ ‘ಕೈ ಹಿಡಿದು’ ಸಾಂತ್ವನ ಪಡಿಸಿದಳು…!!)
‘ಕನ್ನಡ ವಿಭಾಗದ ಶಿರಸ್ಸು’- ಶ್ವೇತ ವಸ್ತ್ರಧಾರಿ `ಸುಜನಾ’ ಕಾವ್ಯನಾಮದ ಎಸ್.ನಾರಾಯಣ ಶೆಟ್ಟರು. (ನಾರಾಯಣ ಶೆಟ್ಟಿ ಅನ್ನುವ ಹೆಸರು ನೋಡಿ, ಓ..! ಊರವ್ರೇ..!! ಅಂತ ಒಮ್ಮೆ ಅವರಲ್ಲಿ ತುಳು ಮಾತಾಡಿ, ಮಂಗ ಆಗಿದ್ದೆ)
ಅವರು ಕುವೆಂಪು ಅವರ ಚಿತ್ರಾಂಗದ ಕಾವ್ಯವನ್ನು ಪಾಠ ಮಾಡ್ತಿದ್ರು……. ಅಪ್ಪಟ ಕುವೆಂಪು ಶಿಷ್ಯ, ಕುವೆಂಪು ಅಭಿಮಾನಿ, ಕುವೆಂಪು ಅವರಿಗೆ ಸರ್ವಸ್ವ. “ಹೇ…. ಬ್ರಹ್ಮಮಾನಸ ಮಹತ್ಗರ್ಭ ಸಂಭವೇ…. ವಿರಾಟ್ ಪ್ರಭವೇ… ಭವ್ಯಾನಂದ ವಿಭವೇ….. ಅದೇ ಪುಟ್ಟಪ್ಪನವರು…. ಮೊನ್ನೆ ಮಾತಾಡ್ತಾ…….” ಅಂತ ಕುವೆಂಪು ಕನಸಿಗೆ ಜಾರಿ ಬಿಡ್ತಿದ್ರು.
೨೦೦೩ರಲ್ಲಿ, ಮೈಸೂರು ರಂಗಾಯಣ ಚಿಣ್ಣರ ಮೇಳದ ನಾಟಕೋತ್ಸವದ ಉದ್ಘಾಟನೆಗೆ ಬಂದಿದ್ರು. ನಾನು ೩೦ ವರ್ಷದ ಹಿಂದೆ ನಿಮ್ಮ ಶಿಷ್ಯ ಅಂತ ಹೇಳಿಕೊಂಡೆ. ಹೌದಾ….!!! ಸರೀ ಜ್ಞಾಪಕ ಆಗ್ತಾ ಇಲ್ಲ ನೋಡಪ್ಪಾ…..” ಅಂದ್ರು. ಆ ದಿನ ಪುಟ್ಟ ಮಕ್ಕಳಿಂದ ನಾನು ಆಡಿಸಿದ `ಗುಡುಗುಡು ಗುಮ್ಮಟ ದೇವರು’ ನಾಟಕ… ಪೂರ್ತಿ ನೋಡಿ….. ಆನಂದಾಶ್ಚರ್ಯದಿಂದ.. ಈ ನಾಟಕ ನೀನ್ ಆಡಿಸಿದ್ದಾ….!! ಅಂತ ಉದ್ಘರಿಸಿ, ಬೇರೇನೂ ಹೇಳದೇ ಸುಮ್ಮನೆ ನನ್ನ ತಲೆಯನ್ನೊಮ್ಮೆ ಸವರಿದ್ರು… ಅಷ್ಟೆ.
`ಕನ್ನಡ ಮೇಸ್ಟ್ರ’ ವ್ಯಕ್ತಿತ್ವಕ್ಕೆ ಸ್ವಲ್ಪ ಭಿನ್ನವಾದ, ಸದಾ ಸೂಟು-ಬೂಟುಗಳ ಮಾನ್ಯ ನಂಜುಂಡಯ್ಯನವರು… ಕನ್ನಡ ಸಾಹಿತ್ಯ ಚರಿತ್ರೆಯು, ಎರಡು ಸಹಸ್ರ ಸಂವತ್ಸರಗಳ ಹಳೆಯದೂ….. ಅಂತ ಪಾಠ ಮಾಡ್ತಿದ್ದ ನೆನಪು ಈಗಲೂ ಇದೆ. ಮಾನ್ಯ ಬೀ.ನಂ. ಚಂದ್ರಯ್ಯ ಒಂದು ರೀತಿಯ ಲಹರಿಯ ಮನುಷ್ಯ ಅಂತ ನೆನಪು. ಇಂಗ್ಲಿಷ್ ಸಿನೀಮಾ ಒಂದನ್ನು ಅವರು ಕ್ಲಾಸಲ್ಲಿ ಉಲ್ಲೇಖಿಸಿ, ಅದನ್ನೊಮ್ಮೆ ನೋಡ್ರಯ್ಯ ಅಂದಾಗ ನನಗೆ ಆಶ್ಚರ್ಯವಾಗಿತ್ತು. ಅವರು ಹೇಳಿ ನೋಡಿದ `ಟು ಸರ್ ವಿದ್ ಲವ್’ ಅನ್ನುವ ಸಿನಿಮಾ ಮಾತ್ರ ಸಾರ್ವಕಾಲಿಕ ಶ್ರೇಷ್ಟ ಸಿನೇಮಾ. ಆ ಕಾಲಕ್ಕೆ ಅತ್ಯಂತ ಹೆಚ್ಚು ಸಂಭಾವನೆ ಪಡೀತಾ ಇದ್ದ, ನಟ `ಸಿಡ್ನಿ ಪೊಯೆಟಿಯರ್’ನ ಅದ್ಭುತ ಪಾತ್ರ – ಶಿಕ್ಷಕನದ್ದು….. ಆ ಸಿನೇಮಾ ಇಂದಿಗೂ ಪ್ರಸ್ತುತ. ಎಲ್ಲಾ ಶಿಕ್ಷಕರೂ ನೋಡಲೇಬೇಕಾದದ್ದು.
ಮಾನ್ಯ ಆಲನಹಳ್ಳಿ ಕೃಷ್ಣ ಅವರ ಪಾಠ ತುಂಬಾ ಆಕರ್ಷಕವಾಗಿತ್ತು. ಆದರೆ ಅವರ ರೋಷ ಯಾಕೋ ಇಷ್ಟ ಆಗ್ತಿರ್ಲಿಲ್ಲ. ಒಂದಿನ ಅವರು….. ನೋಡಿ…. ಈ `ಸ್ವಲ್ಪ’ ಅನ್ನುವ ಪದ ಚೆನ್ನಾಗಿಲ್ಲ. ಅದ್ರಲ್ಲಿ ಆಪ್ತತೆಯೇ ಇಲ್ಲಾ… `ವಸಿ’ ಎನ್ನೋದು ಎಷ್ಟು ಚೆನ್ನಾಗಿದೆ ನೋಡಿ…. ಅಂದಾಗ, ‘ವಸಿ ಯಾವ ಭಾಷೆ ಶಬ್ಧ ಸಾ~ರ್…’ ಅಂತ ತಮಾಷೆ ಮಾಡಿದ್ದು ನೆನಪಿದೆ.
ಕೃಷ್ಣ ಸರ್ ನಮ್ಮ ಹಾಸ್ಟೆಲ್‌ಗೆ ಬರ್ತಿದ್ರು. ಅವರ ಸ್ನೇಹಿತ, ಎನ್.ಡಿ.ಪ್ರಭಾಕರ್ ಅವರು ನಮ್ಮ ರೂಂಮೇಟ್. (ಕುವೆಂಪು ಅವರ ಷಡ್ಡಕರಾದ ಎನ್.ಡಿ.ವೆಂಕಟೇಶ್, ಅವರ ತಮ್ಮ) ….. ಕೃಷ್ಣ ಸರ್ ರಸ್ತೆಯಲ್ಲಿ ಹೋಗ್ತಾ ಇದ್ರೆ… ಈ ಪ್ರಭಾಕರ್- ಲೇ….!! ಗಲ್ಲಿ ಕೃಷ್ಣ…!! ಬಾರೋ ಇಲ್ಲಿ ಬೋಳೀ ಮಗನೇ…. ಅಂತ…. ಗಟ್ಟಿಯಾಗಿ ಕರಿಯೋದು….. ಕೃಷ್ಣ ಸರ್ ನಮ್ಮ ರೂಮಿಗೆ ಬಂದು …. ಏ..!! ಸ್ಟುಡೆಂಟ್ಸ್ ಮುಂದೆ, ನನ್ ಮರ್ಯಾದಿ ತೆಗೀಬೇಡ್ವೋ… ಅಂತ ಕೈ ಮುಗಿಯೋದು…. ‘ಏ…!! ಸುಮ್ನಿರೊ …. ಎಲ್ಲಾ ಗೊತ್ತು, ದೊಡ್ ಮಾರಾಜ ನೀನು….’ ಅಂತ ಪ್ರಭಾಕರ್ ಉಸುರೋದು. ಇದು ಆಗಾಗ ನಡಿತಾ ಇದ್ದ ಪ್ರಸಂಗ. (ಆಶು ಸಂಭಾಷಣೆ ಆದ್ದರಿಂದ ಕೊಂಡಾಟದ ಬೈಗುಳ, ಮತ್ತು ವಾಕ್ಯ ಬೇರೆ ಬೇರೆ ಇರ್ತಿತ್ತು,) ಕೃಷ್ಣ ಅವರ ಬಗ್ಗೆ ಯಾರೋ ಮಾತಾಡೋದನ್ನ ಕೇಳಿದ್ದೆ, ನಿಜವೋ ಸುಳ್ಳೋ ಗೊತ್ತಿಲ್ಲ. ಕೃಷ್ಣ ಅವರ `ಕಾಡು’ ನಿಜವಾಗಿ ಅವರದ್ದಲ್ಲ, ತೇಜಸ್ವಿಯವರದ್ದು….!! ಅಂತ. ‘ಹಸ್ತಪ್ರತಿ ಕದ್ದುಕೊಂಡು ಹೋಗ್ಬಿಟ್ಟ. ಹಾಳಾಗೋಗ್ಲಿ…’ ಅಂತ ತೇಜಸ್ವಿ ಹೇಳ್ತಾ ಇದ್ರು….. ಅನ್ನುವ ಸುದ್ದಿಯಂತೂ ನಾನು ಕೇಳಿದ್ದು ಹೌದು.
ಮಾನ್ಯ ಅನಂತರಾಂ, ಎಂ.ಎ.ಯಲ್ಲಿ ಗೋಲ್ಡ್ ಮೆಡಲಿಸ್ಟ್. `ಟೆಂಪರರಿ’ ನೆಲೆಯಲ್ಲಿ ಬಂದವರು. ಒಳ್ಳೆ ಚಟುವಟಿಕೆಯ ಉತ್ಸಾಹಿ, ಸಜ್ಜನ, ಪಾಠವೂ ಚಂದ. ಒಂದು ಸಾರಿ ಮದ್ರಾಸ್ ಮರಿಯಪ್ಪಜ್ಜ ಮೈಸೂರಿಗೆ ಬಂದು ಮೋಡರ್ನ್ ಹಿಂದೂ ಹೋಟೆಲ್‌ನಲ್ಲಿದ್ದದ್ದು ಗೊತ್ತಾಗಿ, ನಾನೂ ಶಂಕರನೂ ಅವರ ಭೇಟಿಗೆ ಹೋಗಿದ್ದೆವು. ನಮ್ಮ ವಿದ್ಯಾಭ್ಯಾಸ, ಹಾಸ್ಟೆಲಿನ ಊಟ ಇತ್ಯಾದಿಗಳ ಬಗ್ಗೆ ವಿಚಾರಿಸ್ತಾ…. ತೀರಾ ಸಹಜವಾಗಿ ಪ್ರಾಧ್ಯಾಪಕರ ಪಾಠದ ಬಗ್ಗೆಯೂ ವಿಚಾರಿಸಿದರು. ಟೆಂಪರರಿ ಪ್ರಾಧ್ಯಾಪಕರ ಬಗ್ಗೆಯೂ ವಿಚಾರಿಸುತ್ತಾ ಪಾಠದ ಜೊತೆಗೆ,… ಅವರ ಸ್ವಭಾವ, ನಡತೆಯ ಕುರಿತೂ ವಿಚಾರಿಸಿದರು….. ನಾವು ಮನೇ ಅಜ್ಜನಲ್ಲಿ ಮಾತಾಡಿದಂತೆ ಸಲಿಗೆಯಲ್ಲಿ ಎಲ್ಲಾ ಗುರುಗಳ `ಪ್ಲಸ್… ಮೈನಸ್’ ಎಲ್ಲಾ ಹೇಳ್ತಾ ಹೋದೆವು. ಆ ವರ್ಷ, ಅನಂತರಾಂ ಮೇಷ್ಟ್ರು `ಪರ್ಮನೆಂಟ್’ ಆದ್ರು. ನಮಗೆಲ್ಲ ಭಾರೀ ಖುಷಿ. ಆದರೆ ಅವರಿಗಿಂತ `ಸೀನಿಯರ್ಸ್’- ಪರ್ಮನೆಂಟ್ ಆಗಿರ್ಲಿಲ್ಲ…….. ಆ ಸಮಯದಲ್ಲೇ ಸೆಲೆಕ್ಷನ್ ಕಮಿಟಿಯ ಮುಖ್ಯಸ್ಥರು ಮರಿಯಪ್ಪಜ್ಜ ಅಂತ ಗೊತ್ತಾಗಿ, ನಮ್ಮಲ್ಲಿ ಅವರು ಅಷ್ಟು ವಿಚಾರಿಸಿದ್ದರ ಅರ್ಥ ಹೊಳೆದದ್ದು.
ಈಗ `ಸಾಹಿತಿಯಾಗಿ, ಸಂಶೋಧಕರಾಗಿ ಪ್ರಸಿದ್ಧರಾಗಿರುವ ಅನಂತರಾಂ’.. ನಮ್ಮ ಮೇಷ್ಟ್ರೇ ಎಂದು ಗೊತ್ತಾದದ್ದು. ಎಷ್ಟೋ ವರ್ಷಗಳ ನಂತರವೇ. `ದೊಡ್ಡ ಮನುಷ್ಯ’ರೊಬ್ಬರು `ಮಹಾಕವಿ’ ಅನ್ನಿಸಿಕೊಂಡದ್ದು ಇವರು ಮಹಾಕಾವ್ಯವೊಂದನ್ನು ಬರೆದುಕೊಟ್ಟದ್ದರಿಂದ ….. ಎನ್ನುವ `ಗುಸುಗುಸು’ವೂ ಕಿವಿಗೆ ಬಿದ್ದಿತ್ತು………..!! ಏನೀಗ….!! ನನಗೂ … ಭಾಷಣಕಾರ, ಪ್ರಬಂಧಕಾರ ಅಂತ ಹೆಸರು ಬಂದದ್ದು ಹೀಗೇ ಅಲ್ಲವೇ…?
ಮಾನ್ಯ ಜಿ.ಎಚ್.ನಾಯಕ್ ಎಂದರೆ ಎಲ್ಲರಿಗೂ ತುಂಬಾ ಗೌರವ, ಅಚ್ಚುಮೆಚ್ಚು. ಪಾಠ ತುಂಬಾ ಚಂದ, ಆಕರ್ಷಕ. ಸಮಕಾಲೀನತೆಗೆ ಸದಾ ಸ್ಪಂದಿಸುತ್ತಿದ್ದವರು. ಮಕ್ಕಳು ಕೇಳುವ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ಕೊಡಲು ಸಾಧ್ಯವಾಗದಿದ್ದರೆ, ಗೊತ್ತಿಲ್ಲಪ್ಪಾ. ರೆಫರ್ ಮಾಡಿ ನಾಳೆ ಹೇಳ್ತೀನಿ ಅಂತ ಹೇಳಿ, ಪ್ರಶ್ನೆ ಕೇಳಿದವ ಮರೆತರೂ ಇವರು ನೆನಪಿಟ್ಟುಕೊಂಡು ಮರುದಿನ…. ಉತ್ತರ ಹೇಳ್ತಿದ್ರು.
ತಲವಾಟದ ಎಚ್. ಮೃತ್ಯುಂಜಯನನ್ನು ಮೊದಲ ವರ್ಷದಿಂದಲೇ ಅವರು ತುಂಬಾ ಮೆಚ್ಚಿಕೊಂಡಿದ್ದರು. ಜಯಂತ ಕಾಯ್ಕಿಣಿ ಮುಂದೆ ಒಬ್ಬ ಒಳ್ಳೆ ಕವಿಯಾಗ್ತಾನೆ…… ಈ ಮೃತ್ಯುಂಜಯ ಒಬ್ಬ ಒಳ್ಳೆ ವಿಮರ್ಶಕ ಆಗ್ತಾನೆ….. ಅಂತ ೧೯೭೦ ರಲ್ಲೇ ಹೇಳಿದ್ದು ನನಗೀಗಲೂ ನೆನಪಿದೆ. ಜಯಂತ ಕಾಯ್ಕಿಣಿ ವಿಷಯ ಎಲ್ರಿಗೂ ಗೊತ್ತಿದೆ. ಈ ಮೃತ್ಯುಂಜಯ ಮಾತ್ರ…. ಬ್ಯಾಂಕಿಗೆ ಸೇರಿ, ಎಲ್ಲೋ ಕಳೆದು ಹೋಗಿದ್ದ !! ಅಲ್ಲ, ಹಾಗೆ ಹೇಳುವುದೂ ತಪ್ಪಾದೀತೇನೋ….!! ಸ್ವಯಂ ನಿವೃತ್ತಿಯ ನಂತರ ಈಗ ಸಾಗರದಲ್ಲಿದ್ದಾನೆ, ಒಳ್ಳೆಯ ಕತೆ ಕವನ ಬರೆಯುತ್ತಿದ್ದಾನೆ, ಪ್ರಕಟವೂ ಆಗಿದೆ.
ಶಬ್ಧಮಣಿ ದರ್ಪಣಕ್ಕೆ ಇನ್ನೊಂದು ಹೆಸರಾದ ಕೆ.ರಾಘವೇಂದ್ರ ರಾಯರ (ಕೆ.ಆರ್.) ತರಗತಿಯಲ್ಲಿ…. ಮೃತ್ಯುಂಜಯ ತಲವಾಟ, “ಸಾರ್, ಕೃಷ್ಣಮೂರ್ತಿಯ ಅಟೆಂಡೆನ್ಸ್ ಕೊಡಿ ….” ಅಂತ ಪ್ರತೀ ಸಾರಿ ಕೇಳ್ತಿದ್ದ. ರಾಘವೇಂದ್ರ ರಾಯರ ಹೆಸರು ನೆನಪಾದರೆ… ಯಾಕೋ ಕರಗಿ ಹೋಗುತ್ತೇನೆ….. ಕೇಳಿ, ಹೇಗಿತ್ತು ಅಂದರೆ….
ಒಂದು ದಿನ ಪಾಪ ಅವರು ಏನು ತಲೆಬಿಸಿಯಲ್ಲಿದ್ದರೋ ಏನೋ…… “ಯಾರಯ್ಯ ಆ ಕೃಷ್ಣಮೂರ್ತಿ?… ಅವನನ್ನ ಒಂದು ದಿನ ಈ ಕ್ಲಾಸಲ್ಲಿ ತೋರ್ಸಿಕೊಡು…. ಅವನಿಗೆ ಇಡೀ ವರ್ಷದ್ದು ಅಟೆಂಡೆನ್ಸ್ ಕೊಟ್ಟುಬಿಡ್ತೇನೆ” ಅಂತ ಬೈದರಂತೆ…. (….ಕೊನೆಗೂ ಒಂದು ದಿನಾನೂ ಈ ಮೂರ್ತಿಯನ್ನ ಕ್ಲಾಸಿಗೆ ಕರ್ಕೊಂಡು ಹೋಗ್ಲಿಕೆ ನನ್ ಕೈಯಲ್ಲಿ ಸಾಧ್ಯ ಆಗಿಲ್ಲಾ…. ಅಂತ ಆತ – ಮೃತ್ಯುಂಜಯ, ನಮ್ಮ ಮನೆಯಲ್ಲಿ… ನಮ್ಮ ಮಾವನ ಮನೆಯಲ್ಲಿ ಎಲ್ಲ ಹೇಳಿ, ತಾನು ಹೀರೋ ಆಗಿದ್ದ….)
ಕೆ.ಆರ್. ದಾರಿಲಿ ಎಲ್ಲಾದರೂ ಸಿಕ್ಕಿದರೆ, ನಮಸ್ಕಾರ ಸಾರ್ ಅಂತಿದ್ದೆ. “ನೋಡಯ್ಯ ಶಬ್ಧಮಣಿದರ್ಪಣ ಅನ್ನೋದು ಬಾಳ ದೊಡ್ಡ್ ವಿಷಯ….. ಕ್ಲಾಸಿಗೆ ತಪ್ಪಿಸ್ ಕೊಳ್ಬೇಡ, ಅಂತಿಂತಾ ನಷ್ಟ ಅಲ್ಲ…. ಅಂತಿದ್ರು. ಆಯ್ತು ಸಾರ್ ಅಂತ ಪ್ರಾಮಾಣಿಕವಾಗಿಯೇ ಹೇಳ್ತಿದ್ದೆ. ಆದರೆ….. ಯಾಕೋ… ತಪ್ಪಿಸಿಕೊಳ್ಳುವುದು ಕಡಿಮೆ ಆಗಲೇ ಇಲ್ಲ.
ಮಹಾರಾಜನ ಹಿರಿಯ ವಿದ್ಯಾರ್ಥಿಯೂ, ನನ್ನ ಸಂಬಂಧಿಯೂ ಆತ್ಮೀಯರೂ ಆದ ಚಂದ್ರಶೇಖರ ಸಂಕಪಿತ್ಲು ಅವರು ನಮ್ಮ ಕಾಲೇಜಿಗೆ ಪ್ರಾಧ್ಯಾಪಕರಾಗಿ ಸೇರಿಕೊಂಡರು…. ಅವ್ರು…. ಕೆ.ಆರ್.ರವರ ಪೆಟ್ ಶಿಷ್ಯ ಕೂಡಾ. ಒಂದು ದಿನ ನಾವು ಮಾತಾಡ್ತಾ ಇದ್ದಾಗ, ಕೆ.ಆರ್. ಅಲ್ಲಿ ಬಂದರು. ಇಬ್ಬರೂ ಅವರಿಗೆ ವಂದಿಸಿದೆವು. ಚಂದ್ರಶೇಖರ್, “ಸಾರ್ ಈತ ಕೃಷ್ಣಮೂರ್ತಿ ಅಂತ….. ನನ್ನ ಬಾವ… ಅಂತ ಹೇಳಿದರು. ಕೆ.ಆರ್.ಅವರು… ಓ…. ಗೊತ್ತಿದೆ ಬಿಡಿ… ನಂ ಕಾಲೇಜೇ ಅಲ್ವೇ….? ಆದ್ರೆ ನಿಮ್ಮ ಬಾವ ಅಂತ ಮಾತ್ರ ಗೊತ್ತಿರ್ಲಿಲ್ಲ….. ಒಳ್ಳೆ ಹುಡುಗ…. ಆದ್ರೆ ಶಬ್ಧಮಣಿದರ್ಪಣ ಕ್ಲಾಸಿಗೆ ಮಾತ್ರ ಬರೋದೇ ಇಲ್ಲ ನೋಡಿ… ಅಂದುಬಿಟ್ರು. (ಅಪ್ಪಟ ವಿದ್ಯಾರ್ಥಿ ಎನಿಸಿಕೊಂಡ ‘ಭಾವ’ನಿಂದಲೂ ಒಂದಷ್ಟು ಉಪದೇಶ ಲಭಿಸಿತು.)
ಪರೀಕ್ಷೆಗೆ ಓದೋ ತಯಾರಿ…. ಮೃತ್ಯುಂಜಯ… ಆರ್.ಎಸ್.ಗಿರಿ…. ಹೀಗೆ ಒಂದೈದಾರು ಜನ…. ಹೂ ತೋಟದಲ್ಲಿ ಕಂಬೈನ್ಡ್ ಸ್ಟಡಿ….. ಎಲ್ಲರಿಗಾಗಿ ಫ್ಲಾಸ್ಕಿನಲ್ಲಿ ಚಾ ತುಂಬಿಸಿಕೊಂಡು ನಾನೂ ಹೋಗ್ತಿದ್ದೆ… “ಕುಮಾರವ್ಯಾಸನ ಮೈ ಒಣಗಿದಾಗ ಲೇಖನಿ ನಿಂತಂತೆ….” ಚಾ ಮುಗಿದಾಗ… ನನ್ನ ಸ್ಟಡಿಗೂ ವಿರಾಮ…. ಹಿರಿಯರು ಮಾಡಿದ ಪುಣ್ಯದ ಬಲ..!! ನಾನಲ್ಲಿದ್ದಷ್ಟು ಹೊತ್ತು ಚರ್ಚೆ ಮಾಡಿದ್ದಕ್ಕೆ ಸಂಬಂಧ ಪಟ್ಟದ್ದೇ ಪರೀಕ್ಷೆಯಲ್ಲಿ ಬರಬೇಕೇ….!!
ಪರೀಕ್ಷೆ ಮುಗಿದಮೇಲೆ “ಮೃತ್ಯುಂಜಯ ಗ್ಯಾಂಗು” ಕೆ.ಆರ್. ಮನೆಗೆ ಹೋಗಿಯೇ ಊರಿಗೆ ಹೊರಟದ್ದು. ಸಂತೋಷಪಟ್ಟರು. ಮೃತ್ಯುಂಜಯನಿಗೆ ರ್ಯಾಂಕ್ ಬರಬಹುದೆನ್ನುವ ಆಶಯ ವ್ಯಕ್ತಪಡಿಸಿದರು. ರಿಸಲ್ಟ್ ಬಂದಮೇಲೆ…. ಅವರೆಲ್ಲಾ… ಮೊದಲು ಕೆ.ಆರ್.ರನ್ನು ಕಾಣಲು ಹೊರಟಾಗ ನಾನೂ ಸೇರಿಕೊಂಡೆ. ಕೆ.ಆರ್.ತುಂಬಾ ಖುಷಿಪಟ್ಟರು…… ಮೃತ್ಯುಂಜಯನಿಗೆ ಗೋಲ್ಡ್ ಮೆಡಲೂ ಬಂದಿತ್ತು. ನನ್ನನ್ನು ಕಂಡು … ‘ಓ ನೀನೂ ಬಂದಿದ್ದಿಯಾ…. ನೀನು ಎಗ್ಸಾಮ್ ಎಟೆಂಡ್ ಮಾಡಿಲ್ಲ ಅಂತ ಕಾಣುತ್ತೆ ಅಲ್ವಾ….’ ಅಂದರು. ನಾನು ಮಾತಾಡುವ ಮೊದಲೇ ಮೃತ್ಯುಂಜಯ “ಇಲ್ಲಾ ಸಾರ್ ಎಟೆಂಡ್ ಮಾಡಿದಾನೆ, ಸೆಕೆಂಡ್ ಕ್ಲಾಸ್‌ನಲ್ಲಿ ಪಾಸೂ ಮಾಡಿದ್ದಾನೆ.” ಅಂದ. ಕೂಡಲೇ ಕೆ.ಆರ್. ನನ್ನ ಬೆನ್ನು ತಟ್ಟಿ… “ಹೌದಾ ಪರ್ವಾಗಿಲ್ಲ ಕಣಯ್ಯ ನೀನೂ..!! ಆದ್ರೆ ನೋಡು… ಶಬ್ಧಮಣಿ ದರ್ಪಣ ಕ್ಲಾಸಿಗೆ ಬರ್ತಿದ್ರೆ…… ನೀನು ಫಸ್ಟ್ ಕ್ಲಾಸ್ ಬರ್ತಿದ್ಯಲ್ಲ….!!” ಅನ್ಬೇಕೇ!!!
ಆ ಮೇಲೆ…. ಮೇ ತಿಂಗಳಲ್ಲಿ ನನ್ನ ಮದುವೆ…. ಮದುವೆ ಕಾಗದ ಗೆಳೆಯರಿಗೆ, ಮೇಸ್ಟ್ರುಗಳಿಗೆ ಎಲ್ಲಾ ಕಳಿಸಿದ್ದೆ. ಮದುವೆ ಆಗಿ ಹೆಂಡತಿಯೊಂದಿಗೆ ಮೈಸೂರಿಗೆ ಹೋಗಿ….. ಕಾಲೇಜಿನ ಕ್ಯಾಂಪಸ್ ಎಲ್ಲಾ ತೋರಿಸ್ತಿದ್ದಾಗ…. ಅಕಸ್ಮಾತ್ ಕೆ.ಆರ್ ಸಿಕ್ಕಿ ನನಗೆ ಬಾರೀ ಖುಷಿ ಆಯ್ತು. ಹೆಂಡತಿಯ ಜೊತೆ ನಾನೂ ಅವರ ಕಾಲು ಮುಟ್ಟಿ ನಮಸ್ಕಾರ ಮಾಡಿದೆ. ಆಶ್ಚರ್ಯದಿಂದ ನೋಡಿ….!! ಅಯ್ಯೋ… ಎಂತಾ ಕೆಲ್ಸ ಆಗೋಯ್ತು…!!! ಮದುವೆ ಕಾಗದ ಬಂದಿತ್ತು…… ನಿಂದೂ ಅಂತ ಗೊತ್ತಾಗ್ಲಿಲ್ಲ ನೋಡು…. ಒಂದು ಗ್ರೀಟಿಂಗ್ಸ್ ಆದ್ರೂ ಕಳ್ಸ್ ಬಹುದಾಗಿತ್ತು… ಅಂತ ಪೇಚಾಡಿಕೊಂಡ್ರು. ನನ್ನ ಹೆಂಡತಿಯಲ್ಲಿ, ಒಳ್ಳೆ ಹುಡುಗ ಕಣಮ್ಮ ನಿನ್ ಪತಿರಾಯ… ಆದ್ರೆ… ಶಬ್ಧಮಣಿ ದರ್ಪಣ ಕ್ಲಾಸಿಗೆ ಮಾತ್ರ ಬರ್ತಿರ್ಲಿಲ್ಲ ನೋಡು… ಅಂತ ಸಣ್ಣ ನೋವನ್ನೂ ತೋಡಿಕೊಂಡು……… ಇರ್ಲಿ ತುಂಬಾ ಸಂತೋಷ ಆಯ್ತು…. ನೂರ್ಕಾಲ ಸುಖವಾಗಿರಿ….. ಅಂತ ಹರಸಿ ನಮ್ಮನ್ನು ಬೀಳ್ಕೊಟ್ಟರು.
ಉಸ್ಮಾನಿಯಾ ಯುನಿವರ್ಸಿಟಿಯಲ್ಲಿ ಕಲಿತದ್ದರಿಂದಲೋ ಏನೋ ಅವರ ಉಚ್ಚಾರ ಸ್ವಲ್ಪ ಉರ್ದು ಶೈಲಿ. ಕಬ್ಬಿಣದ ಕಡಲೆ ಶಬ್ಧಮಣಿ ದರ್ಪಣ ಎನ್ನುವಂಥಾದ್ದು….. ಅವರ ಪಾಠ ಕೂಡಾ ಆಕರ್ಷಕ ಅಲ್ಲ…… ಆದರೆ….. ಪಾಠದ ಮೇಲಿನ ಶ್ರದ್ಧೆ, ಮಕ್ಕಳ ಮೇಲಿನ ಪ್ರೀತಿ, ಆ ಮನಸ್ಸು, ಇದನ್ನೆಲ್ಲಾ ಹೇಗೆ ವಿವರಿಸಲಿ…!! ಪ್ರತೀ ವರ್ಷ ಯಾರಾದರೊಬ್ಬ ಅನಾಥ ಹುಡುಗನ್ನನ್ನು ಮನೆಯಲ್ಲಿಟ್ಟುಕೊಂಡು…… ಊಟ, ಬಟ್ಟೆ, ವಸತಿ, ವಿದ್ಯೆ ಎಲ್ಲ ಕೊಡ್ತಿದ್ರಂತೆ….. ಯಾರಿಗೂ ಗೊತ್ತಾಗ್ತಿರ್ಲಿಲ್ಲ….!!!
ಎಷ್ಟೊ ಸಾರೀ ಅವರನ್ನೊಮ್ಮೆ ಭೇಟಿಯಾಗ್ಬೇಕು…. ಅಂದುಕೊಂಡದ್ದು ಮಾತ್ರ….. ಸಾಧ್ಯವಾಗಲೇ ಇಲ್ಲ…. ಅವರ ಹರಕೆ ನಮ್ಮ ಮೇಲಿರಲಿ. “ಮಹಾ ರಜಾ” ಕಾಲೇಜು ಅನ್ನುವಾಗ….. ರಜೆಗೆ ಸಂಬಂಧ ಪಟ್ಟಂತೆ ನನಗೆ…… ಕೆ.ಆರ್. ಜೊತೆಗೆ ….. ಮೈಲಾರಿ ರಾವ್ ಕೂಡಾ ನೆನಪಾಗದೇ ಇಲ್ಲ. ಯಾವ ಕ್ಲಾಸಿಗೆ ರಜ ಹಾಕಿದರೂ ನಾನು ಸಾಮಾನ್ಯವಾಗಿ ರಜ ಹಾಕದೇ ಇದ್ದ ಕ್ಲಾಸು ಮೈಲಾರಿ ರಾವ್ ಅವರದ್ದು. ಮಹಾರಾಜಾ ಕಾಲೇಜು ನನ್ನಲ್ಲಿ ಉಳಿಸಿದ ಬಹಳ ಮುಖ್ಯ ಮತ್ತು ಒಳ್ಳೆಯ ನೆನಪು ಮೈಲಾರಿ ರಾವ್ ಅವರದ್ದು.
ಅವರ ಮೊದಲ ತರಗತಿಯನ್ನು ಕಂಡಾಗ….. ಹೀಗೂ ಉಂಟೇ…. ! ಎನ್ನುವ ಆಶ್ಚರ್ಯ……. !! ತಡೆದುಕೊಳ್ಳಲು ಸಾಧ್ಯವಾಗದ ನಗು…! ನಕ್ಕರೆ…. ಪೆಟ್ಟೇ ಬಿದ್ದೀತೋ ಏನೋ ಎನ್ನುವ ಅಳುಕು…..! ಹೀಗಿದ್ದರೂ….. ಅಷ್ಟರವರೆಗಿನ ಶಾಲಾ ತರಗತಿಗಳಿಗಿಂತ….. ಅಲ್ಲಿ ಹೆಚ್ಚು ಖುಷಿ ಇತ್ತು ಎನ್ನುವುದು ಸತ್ಯ.
ಇಂಗ್ಲಿಷ್ ಲ್ಯಾಂಗ್ವೇಜ್ ಪಾಠಕ್ಕೆ… ನನ್ನದು “ಸಿ” ಸೆಕ್ಷನ್….. ದೇವನೂರು ಮಹಾದೇವ, ಮೃತ್ಯುಂಜಯ, ಕ್ಷೀರಸಾಗರ ಎಲ್ಲಾ ನನ್ನದೇ ಸೆಕ್ಷನ್. ಶಂಕರ… ಆರ್.ಎಸ್.ಗಿರಿ, ಅಶೋಕವರ್ಧನ… ಶ್ರೀಕಂಠದತ್ತ ನರಸಿಂಹರಾಜ ಒಡೆಯರ್…. ಎಲ್ಲಾ ಬೇರೆ ಸೆಕ್ಷನ್. ಕಂಬೈಂಡ್ ಕ್ಲಾಸ್ ಇದ್ದಾಗ ಮಾತ್ರ ಜ್ಯೂನಿಯರ್ ಅಥವಾ ಸೀನಿಯರ್ ಬಿ.ಎ. ಹಾಲ್ ನಲ್ಲಿ ಇರ್ತಿತ್ತು. ಇಲ್ಲದಿದ್ರೆ ಮಹಡಿಯ ಮೇಲಿನ ಒಂದು ಕೋಣೆ…!
‘ಸರಳುಗಳಿಲ್ಲದ ಕಿಟಿಕಿ’ಯ ಕೋಣೆ….! ಆ ಕೋಣೆಯಲ್ಲಿ ಮೊದಲಿದ್ದ ತರಗತಿ ಮುಗಿದು…. ವಿದ್ಯಾರ್ಥಿಗಳೆಲ್ಲಾ ಹೊರ ಹೋಗುವ ಮೊದಲೇ … ಕಿಟಿಕಿ ಹತ್ತಿ ಮೈಲಾರಿ ರಾವ್ ಒಳಗೆ ಬಂದಾಗ್ತಿತ್ತು…… ಒಳ ಬಂದು ಮೇಜಿನ ಬಳಿ ಬಂದೊಡನೆ, ಏ…. ಹಾಕ್ರೋ… ಕಿಟಕಿ ಬಾಗ್ಲು ಮುಚ್ರೊ…. ಎಲ್ಲಾ ಅಲ್ಲೇ ಒಳಗ್ ಬರ್ತಾರೆ…. ಅಂತ ಕಿಟಿಕಿ ಬಾಗಿಲು ಮುಚ್ಚಿಸಿಯೇ ಬಿಡ್ತಿದ್ರು…. ಮಕ್ಕಳು ಅಲ್ಲೇ ನುಗ್ಗಿದರೆ, ಹಿಂದಕ್ಕೋಡಿಸಿ ಬಾಗಿಲಿನಿಂದಲೇ ಬರಲು ಹೇಳುತ್ತಿದ್ದರು. ಹಾಗೆಂದು… ಯಾರೂ… ಅದೇನು ನಿಮಗೊಂದು ಬೇರೆ ರೂಲ್ಸೋ…. ? ನಾವು ಬಂದ್ರೆ ಏನಾಗುತ್ತೆ? ಅಂತ ಕೇಳ್ತಿರ್ಲಿಲ್ಲ. ಅವರನ್ನು ಕೆಣಕಲೆಂದೇ ಕಿಟಿಕಿಯೊಳಗಿಂದ ಬರುವವರು ಕೆಲವರಿದ್ರು …
ಒಳಗೆ ಬಂದು ಒಮ್ಮೆ ಹೀಗೆ ಕಣ್ಣಾಡಿಸಿದಾಗ… ಆಸಕ್ತಿಯಿಂದ ಬಂದ ಬೇರೆ ಸೆಕ್ಷನ್‌ನವರು ಕಣ್ಣಿಗೆ ಬಿದ್ದರೆ… “ಲೇ… ಲೇ… ಲೇ…ಲೇ…..!!! ಇವ್ನು ನಮ್ ಸೆಕ್ಸನ್ (!!) ಅಲ್ಲಾ…. ನಡಿ ನಡಿ ….” ಅಂತ ಅವನ ಪುಸ್ತಕ, ಪೆನ್ನು ಎಲ್ಲ ಎತ್ತಿ ಅವರೇ ಹೊರಗಿಟ್ಟು….. ಅವನನ್ನೂ ಮೆತ್ತಗೆ ಹೊರದಬ್ಬಿ ಬಾಗಿಲು ಹಾಕಿ ಬಿಡುತ್ತಿದ್ದರು.
ನಂತರ “ಹಾಜರಿ ಕರೆಯುವ ಪ್ರಸಂಗ. ವರ್ಷವಿಡೀ ಅವರು….. ಹಾಜರಿಗೆ ೧೦ ನಿಮಿಷ ತೆಕ್ಕೊಳ್ತಿದ್ರು…. ಅದೇ ಒಂದು ಚಂದ…. “ಅಣ್ಣಪ್ಪ.. ಬಸವಣ್ಣ… ಬಸವರಾಜು…. ಲೇ ನಂ ಮಳ್ಳ ಎಲ್ಲೋ….?? …. ಓ ಬಂದವ್ನೆ. ಕೃಷ್ಣಮೂರ್ತಿ ಅರೂ…. ಮಾದೇವಾ……” ಹೀಗೆ…… ಮುಖ ನೋಡಿಯೇ ಹಾಜರಿ. ಪ್ರಾಕ್ಸಿ… ಸುತರಾಂ ಸಾಧ್ಯ ಇಲ್ಲ. ಹಾಜರಿ ಮುಗಿಸಿ…. ಎಲ್ಲರನ್ನೂ ಒಮ್ಮೆ ನೋಡಿ… ಆರಾಮವಾಗಿ…
“ಲೇ… ನೀವೆಲ್ಲಾ ಬಡ್ಡಿಮಕ್ಳು ಕಣ್ರೋ… ಹೂಂ…!! ಯಾರೆಲ್ಲ ಪುಸ್ತಕ ತಂದೀರಿ… ತೆಗೀರಿ… ತಾರ್‌ದವ್ರೆಲ್ಲಾ ನನ್ ಕಡೆ ನೋಡಿ….
ಪ್ರೋಸ್, ಪೋಯೆಟ್ರಿ, ಡ್ರಾಮಗಳಲ್ಲಿ ಅವರು ನಮ್ಮ ಸೆಕ್ಷನ್ನಿಗೆ ಪ್ರೋಸ್ ತೆಕ್ಕೊಳ್ತಿದ್ರು (ಪ್ರಬಂಧ). “ಡ್ರೀಂ… ಚಿಲ್ಡ್ರನ್…!! ಹಾಂ… ನೋಡ್ದಿಯಾ ಹೆಂಗಿದೆ…!!” ಅಂತ ಎರಡು ವಾಕ್ಯ ಹೇಳಿ… ಏ ಎಲ್ಲಾ ಪುಸ್ತಕ ಮುಚ್ರೋ… ಎಲ್ಲಾ ನನ್‌ಕಡೆ ನೋಡಿ…. ಅಂದು ಬಿಡ್ತಿದ್ರು….. ಅವರು ಹೇಳ್ಬೇಕೂಂತ್ಲೇ ಇರ್ಲಿಲ್ಲ…. ಕಣ್ಣೆದುರೇ ಅದ್ಭುತ ನಾಟಕ ಇರುವಾಗ ಪುಸ್ತಕ ಯಾರು ನೋಡ್ತಾರೆ……!!!
ಕ್ಲಾಸ್ ರೂಂ ಇಡೀ ಓಡಾಡ್ತಿದ್ರು…. ಜ್ಯೂ.ಬಿ.ಎ. ಹಾಲಿನ ಗ್ಯಾಲರಿ ಕ್ಲಾಸಲ್ಲೂ ಹೀಗೆಯೇ… ಮೇಜಿನ ಎದುರು ನಿಂತು ಚಾರ್ಲ್ಸ್ ಲ್ಯಾ~~~~~~~~~~~~~~~ಮ್ಬ್ – ಅಂದರೆ….. ಮೊದಲನೇ ಅಕ್ಷರ ಹೇಳಿದಾಗ…. ಮೇಲೆ ಎತ್ತರದಲ್ಲಿ ಹಿಂದಿನ ಸಾಲಿನ ಯಾರೋ ಒಬ್ಬ… ತಲೆ ತಗ್ಗಿಸಿ ಏನೋ ಕೀಟಲೆ ಮಾಡಿದ್ದು ಕಣ್ಣಿಗೆ ಬಿದ್ದು…. ಇವರ ಸವಾರಿ ಮೆಟ್ಟಿಲು ಹತ್ತುತ್ತಾ ಹಾಲ್‌ನ ತುದಿಗೆ…… ಬಾಯಲ್ಲಿ ಸುರುವಾದ ವಾಕ್ಯದ ಕೊನೆಯ ಅಕ್ಷರ ಅಲ್ಲಿ…… ಆ ಹುಡುಗ ಇವರು ಬಳಿ ಬಂದಾಗ ಬಹಳ ಸುಭಗನಂತೆ ಕುಳಿತ…. ಅಲ್ಲಿ ಬಂದು ಅವನ ಬೆನ್ನು ತಟ್ಟುತ್ತಾ….. ತಡಿಲೇ… ತಡಿಲೇ …! ವಾಸ್ ಎ ಕ್ಲರ್ಕ್ ಇನ್ ಈಸ್ಟ್ ಇಂಡಿಯಾ ಕಂಪೆನಿ…..!! ಹಾಂ… ನೋಡ್ದಿಯಾ….. !! ಬರೇ ಗುಮಾಸ್ತ ಕಣ್ಲೇ ಆತ….. ಆದ್ರೆ ಹೇಂಗ್ ಬರ್ದವ್ನೇ ನೋಡು….. ನೀನೂ ಅಂಗೇ ಬುದ್ವಂತ ಆಗ್ಬೇಕೂ… ಕಣೋ ಬಡ್ಡಿಮಗ್ನೇ…..” ಕೂಡ್ಲೇ ಮಳ್ಳನ ನೆನಪಾಗ್ತದೆ….. (ಮಳ್ಳ ಅಂದರೆ ಮರುಳಪ್ಪ ಅಂತ ಒಬ್ಬ ವಿದ್ಯಾರ್ಥಿ…..) ಯಕ್ಷಗಾನದಲ್ಲಿ…. ಶಂಭು ಹೆಗ್ಡೆಯವರು…. “ವಿಜಯಾ….!!!” ಅಂತ ವಿದೂಷಕನನ್ನು ಆಗಾಗ ಕರಿತಿದ್ರಲ್ಲ ಹಾಗೆ…. (ನಡು ನಡುವೆ…ಮಳ್ಳ)
“ಲೇ ನಂ ಮಳ್ಳ ಎಲ್ಲೋ…?? ಹಾಂ….ಇಲ್ಲವ್ನೆ…….. ಏ~~ ಕೇಳ್ರೋ ಇಲ್ಲಿ…. ಈ ಮಳ್ಳ ಬೆಳಿಗ್ಗೆ…… ಹಂಡ್ರಡ್ ಪೀಟ್ ರೋಡಲ್ಲಿ ಓಯ್ತಾ~ಇದ್ದ…. ಎಲ್‌ಗೊಂಟಿಯೋ ಮಳ್ಳ ಅಂತ ಕೇಳ್ದೆ….. ನಾಷ್ಟಕ್ಕೋಯ್ತಾ ಇದೀನಿ ಸಾ… ಅಂದ. ಥೂ ಇವ್ನ…. ಮಾರಾಜ ಕಾಲೇಜು ಸೆಕೆಂಡ್ ಯಿಯರ್ ಬಿ.ಎ.ಸ್ಟುಡೆಂಟೂ….. ನಾಷ್ಟ ಅಂತಾನೆ….!!! ಲೇ ಮಳ್ಳ ಅಂಗನ್ಬಾರ್ದು… ಬ್ರೇಕ್ ಫಾಸ್ಟ್‌ಅನ್ಬೇಕು ತಿಳಿತಾ….!! ಲೇ…!! ನೀವೆಲ್ಲಾ ಬಡ್ಡೀ ಮಕ್ಳು ಕಣ್ರೋ… ತಪ್ ತಪ್ಪೇ ಮಾತಾಡ್ತೀರಿ…. ನಮ್ಮನೆನಲ್ಲಿ ಅಡಿಗೆ ಮಾಡೋಕೆ ‘ಕುಕ್ಕರ್’ ಇದಾನೆ ಸಾರ್ ಅಂತೀರಿ…ಅದೂ ಕುಕ್ಕರ್ ಅಲ್ಲ ‘ಕುಕ್’ ಗೊತ್ತಾಯ್ತಾ…. ?? ಸ್ವಿಮ್ಮಿಂಗ್ ಫೂಲ್’ ಅಂತೀರಿ…… ಅದೂ ‘ಫೂಲ್’ ಅಲ್ಲ … ‘ಪೂಲ್’… ತಿಳೀತಾ… ಅಂತ ಹೇಳೋದು.
ಆಮೇಲೆ ಕೂಡ್ಲೇ ಪಾಠ….. “ಪಾಪಾ …..!! ಚಾರ್ಲ್ಸ್ ಲ್ಯಾಂಬ್‌ಗೆ ಚಿಕ್ಕಂದ್‌ನಲ್ಲೆ ಒಂದುಕಾಲ್ ಸರೀ ಇರ್ಲಿಲ್ಲಾ~~.. ಪೋಲಿಯೋ ಆಗಿತ್ತೂ… ಅವನಣ್ಣ ಜಾನ್ ಲ್ಯಾಂಬು… ಎಂಗಿದ್ದಾ ಗೊತ್ತಾ… ನಮ್ ಧರ್ಮೇಂದ್ರ ಇದ್ದಾಂಗೆ….. ತಮ್ಮ ಅಂದ್ರೆ ಅವನ್‌ಗೆ… ಬೋ ಪ್ರೀತಿ……. ಲೇ ಮಳ್ಳಾ…. ನೀನೂ ಪ್ರೀತಿ ಮಾಡ್ತಿಯೇನ್ಲೇ ನಿನ್ ತಮ್ಮನ್ನ…..?? ಜಾನ್ ಲ್ಯಾಂಬು… ತನ್ ತಮ್ಮನ್ನ ಎ~ತ್ತಿ… ಹೀಂಗೆ ಹೆಗ್ ಲ್ ಮೇಲೆ ಹಾಕೊಳ್ತಿದ್ದಾ….!!!” ಅಂತ ಎದುರು ಕುಳಿತ ಯಾರಾದರೂ ಒಬ್ಬ ಚಿಕ್ಕ ಹುಡುಗನ್ನ ಎತ್ತಿಕೊಳ್ಳೋದಿಕ್ಕೆ ನೋಡ್ತಿದ್ರು……. “ಜಾನ್ ಲ್ಯಾಂಬು ಕುದುರೆ ಮೇಲೆ ಹೀಂಗ್ ಕೂತ್ಕೋತಿದ್ದ…” ಅಂತ ಯಾರಾದರೊಬ್ಬನ ಹೆಗಲ್ ಮೇಲೆ…. ಕಾಲು ಇಡ್ತಾ ಇದ್ರು…..
“ಕ್ಯಾಟ್ ಬೈ ದ ಫಯರ್” ಪಾಠ ಮಾಡುವಾಗ… “ಲೇ ಮಳ್ಳಾ…. ತಾಯಿ ಬೆಕ್ಕು ನೋಡಿದ್ದಿ ಏನ್ಲಾ….??” ಅಂತ ಮೇಜಿಗೆ ಹತ್ತಿ… ಬೆಕ್ಕು ಕುಳಿತಂತೆ ಕಣ್ಣು ಮುಚ್ಚಿ ಕುಳಿತು….. ಒಂದು ಕ್ಷಣದ ನಂತರ ಇಳಿದು ಬಾಗಿಲ ಬಳಿಗೆ ಹೋಗಿ…. “ಮರಿ ಬೆಕ್ಕು ನೋಡಿದ್ದೀ ಏನ್ಲಾ….?? ” ಅಂತ ಮೇಜಿನ ಕಡೆಗೆ ಮರಿ ಬೆಕ್ಕಿನಂತೆ ಹಾರೋದು.
ನಾನು ಇದನ್ನೆಲ್ಲಾ ಹೇಳಿದಾಗ ಯಾರೂ ನಂಬಲೇ ಇಲ್ಲ. ಬೈದರು. ಛೀ… ಅದೆಂತ ಪಾಠ…!! ಅದೂ… ಕಾಲೇಜ್‌ನಲ್ಲಿ ..!! ತಲೆ ಸರಿ ಇಲ್ಲ…!! ಅಂದ್ ಬಿಟ್ರು… ಹೌದು…. ಮೈಲಾರಿ ರಾವ್ ಅವರನ್ನ ನೋಡದೇ ಇದ್ದವರು ಖಂಡಿತಾ ಇದನ್ನೆಲ್ಲಾ ನಂಬ್ಲಿಕ್ಕಿಲ್ಲ… ಗೊತ್ತಿಲ್ಲ … ಅವರ ಪಾಠ ಒಳ್ಳೆದೋ… ಹಾಳೋ….!! ಆದ್ರೆ…. ಅವರು ಮಾಡಿದ ಪಾಠವನ್ನ ನಾನು ಪರೀಕ್ಷೆಗೆ ಓದ್ಲೇ ಇಲ್ಲ…. ಡಿಗ್ರಿ ಮುಗಿಸಿ…. ೧೦-೧೫ ವರ್ಷಗಳ ನಂತರವೂ…. ಆ ಪಾಠಗಳ ಬಗ್ಗೆ ಪ್ರಬಂಧ ಬರೀಬಲ್ಲೆ ಅಂತ ಕಾಣ್ತಾ ಇತ್ತು.
ಹೀಗೆ ಪಾಠ ಮಾಡಿದರೆ…. ಪೋರ್ಶನ್ ಹೇಗೆ ಮುಗ್ದೀತು….!! ಎಷ್ಟು ಪಾಠ ಮಾಡ್ಬಹುದು….!! ಅಂತ ಯಾರಾದ್ರೂ ಕೇಳ್ಬಹುದು…. ಆದರೆ…. ಬೇರೆಯವರೆಲ್ಲಾ ಪೋರ್ಶನ್ ಮುಗಿಸ್ಲಿಕ್ಕಾಗದೇ ಸ್ಪೆಶಲ್ ಕ್ಲಾಸ್ ಅಂತ ಒದ್ದಾಡ್ತಾ ಇದ್ದಾಗ… ಇವರು ಫೆಬ್ರವರಿ ೧೫ರ ಮೊದಲು… ಮುಗಿಸಿಯಾಗಿರುತ್ತಿತ್ತು…. ಮಕ್ಕಳಿಗೆ ಮನದಟ್ಟು ಮಾಡಿಸಿ….. !! …… ಏನ್ ಹೇಳ್ತೀರಿ ಈಗ….!!
ನಮ್ಮ ಕಾಲದಲ್ಲಿ ಮಹಾರಾಜ ಕಾಲೇಜಿಗೆ ಹೆಣ್ಣುಮಕ್ಕಳ ಪ್ರವೇಶ ಆಗಿತ್ತು, ತರಗತಿಗೆ ಒಬ್ರೋ ಇಬ್ರೋ ಅಷ್ಟೆ. ಆದ್ರೆ…. ಮೈಲಾರಿ ರಾಯರು ಸಾಮಾನ್ಯವಾಗಿ ಹೆಣ್ಣುಮಕ್ಕಳಿದ್ದ ಕ್ಲಾಸ್ ತೆಕ್ಕೊಳ್ತಿರ್ಲಿಲ್ಲ… ಪಾಪ ಹೆಣ್ಣುಮಕ್ಕಳಿಗೆ ಮುಜುಗರ ಆಗ್ಬಾರ್ದು…. ಅಂತ ಇದ್ದಿರಬಹುದು. ಮಾತಾಡುವಾಗ (..!!) ಜಾಗ್ರತೆ ವಹಿಸ್ಬೇಕಾಗಿತ್ತು…. ಅದು ಅವ್ರನ್ನು ಕಟ್ಟಿ ಹಾಕಿದಂತೆ ಆಗ್ತಿತ್ತು…… ಆಗೆಲ್ಲಾ ಅವ್ರು ಒರಿಜಿನಲ್ ಮೈಲಾರಿ ರಾಯರಾಗಿ ಉಳಿತಿರ್ಲಿಲ್ಲ…. ಸಪ್ಪೆ…
ಹೌದೋ ಅಲ್ವೋ ಗೊತ್ತಿಲ್ಲ…. ಅವರು ಮೊದಲು ಪೋಲೀಸ್ ಇನ್ಸ್‌ಪೆಕ್ಟರ್ ಆಗಿದ್ದು…. ಆಮೇಲೆ ಎಂ.ಎ.ಎಲ್.ಎಲ್.ಬಿ ಮಾಡಿ ಲಾಯರ್ ಆಗಿ…. ಎರಡೂ ಬೇಡಾ ಅಂತ ಲೆಕ್ಚರರ್ ಆದ್ರೂ ಅಂತ ಅವರ ಬಗ್ಗೆ ಪ್ರತೀತಿ ಇತ್ತು……. ನೋಡಲು ಹಾಗೆ… ಭರ್ತಿ ಗಟ್ಟಿ ಜೀವ.
ಒಂದು ದಿನ…. ‘ಇವತ್ತು ಮೈಲಾರಿ ರಾವ್ ರಜೆ’ ಅಂತ ಯಾರೋ ಹೇಳಿದರು…. ಪ್ರಾಯಶಃ ಮಾನಿಪ್ಪಾಡಿ ಇರ್ಬೇಕು…. (ನಮ್ಮ ಅನ್ವರ್ ಮಾನಿಪ್ಪಾಡಿ…. ದಿನಕ್ಕೊಂದು ವಿಚಿತ್ರವಾದ ಡ್ರೆಸ್…. ಸ್ವಲ್ಪ ಕೀಟಲೆ ಸ್ವಭಾವ) ನಾನು ಕೂಡಲೇ ಹಾಸ್ಟೆಲಿಗೆ……
ಆದ್ರೆ ಆದಿನ ಅವರ ಕ್ಲಾಸು ಇತ್ತು…. ಸುಮಾರು ನೂರಿನ್ನೂರು ಜನ ಮಕ್ಕಳು ತುಂಬಿರುವ…. ಜ್ಯೂನಿಯರ್ ಬಿ.ಎ.ಹಾಲ್….. ಗ್ಯಾಲರಿ…. ಹಿಂದಿನ ಸಾಲಿನ ವಿದ್ಯಾರ್ಥಿಗಳು, ಗುರುಗಳಿಂದ ಹತ್ತು ಅಡಿಗೂ ಮಿಕ್ಕಿ ಎತ್ತರದಲ್ಲಿ…. ಅಟೆಂಡೆನ್ಸ್ ಸಂದರ್ಭ.. ನನ್ನ ರೂಂ ಮೇಟ್ ಶೃಂಗೇರಿಯ ಮಂಜಪ್ಪನಾಯ್ಕ… “ಯಸ್ ಸಾರ್….” ಅಂದಾಗ.. ಕತ್ತೆತ್ತಿ ನೋಡಿದ ಗುರುಗಳು….
“ಏ…ಶೃಂಗೇರಿ… ಎಲ್ಲೋ… ನಿನ್ ಫ್ರೆಂಡೂ… ಕೃಷ್ಣ ಮೂರ್ತಿ ಎಮ್ಮೂ~” ಅಂದರಂತೆ.
ಈತ ತನ್ನ ಗೆಳೆಯನ ಗೈರುಹಾಜರಿಗೆ ಒಂದು ಗಂಭೀರ ಸ್ವರೂಪ ಕೊಡುವ ಉದ್ದೇಶದಿಂದ…. “ಅವ್ನಿಗೆ ಡೀಸೆಂಟ್ರಿ ಸಾರ್…” ಅಂದ….. ರೂಮಿಗೆ ಬಂದು…. ‘ಇವತ್ತು ನಿನ್ ಮರ್ಯಾದೆ ಉಳ್ಸಿದೆ…. ಐಸ್ ಕ್ರೀಮು ಕೊಡ್ಸು……’ ಅಂತ ವಿಷಯ ಹೇಳಿದ……..
ಸರಿ…. ಆಮೇಲೆ…. ಎಕ್ಸ್‌ಪೊ-೭೦ ಗಲಾಟೆ……. ಹತ್ತು ಹದಿನೈದು ದಿನ ಕ್ಲಾಸು ನಡಿಲಿಲ್ಲ…. ಮತ್ತೆ ಗಲಾಟೆ ಪ್ರಕೋಪಕ್ಕೆ ತಲುಪಿ…. ಮಹಾರಾಜ ಕಾಲೇಜಿಗೇ “ಮಹಾ ರಜ”… ದಸರಾ ರಜೆಯ ತನಕ… ಮತ್ತೆ ಒಂದು ತಿಂಗಳ ದಸರಾ ರಜ. ಊರಿಗೆ ಹೋದ ನಾನು ಯಥಾಪ್ರಕಾರ ನನ್ನ ಹಕ್ಕಿನ ರಜವನ್ನೂ ತೆಗೆದು….. ಕಾಲೇಜಿಗೆ ಬಂದಾಗ…. ೮೦ – ೯೦ ದಿನ ಕಳೆದಿತ್ತು. ಹಾಜರಿಯ ಸಂದರ್ಭ… ಎಂದಿನಂತೆ ನಾನು “ಯಸ್ ಸಾರ್…” ಎಂದಾಗ ತಲೆ ಎತ್ತಿ ನೋಡಿ….. “ಓ ಮುಗೀತೇನೋ… ಭೇದಿ ಎಲ್ಲ…” ಅಂದು ಬಿಡಬೇಕೇ ಈ ಮೈಲಾರಿ ರಾವ್ ಎನ್ನುವ ಮಹಾನುಭಾವ……!!
ಅವರ ಬಳಿ ನಮ್ಮ ಹಾಸ್ಟೆಲ್ ಹುಡುಗ ಒಬ್ಬ ಟ್ಯೂಶನ್‌ಗೆ ಹೋಗ್ತಾ ಇದ್ದ….. ಪಾಠ ಮಾಡುವಾಗ…. ಅವರ ಮಗಳೋ… ಯಾರೋ…!! ೧೦-೧೨ ವರ್ಷದ ಚಿಕ್ಕ ಹುಡುಗಿ…. ಬಾಗಿಲಿನ ಆಚೆ ಓಡಾಡ್ತಾ ಇತ್ತು….. ನಮ್ಮ ಈ ಗೆಳೆಯನಿಗೆ ಕಣ್ಣು ಪಕ್ಕನೆ ಅತ್ತ ಕಡೆ ಚಲಿಸುತ್ತಿತ್ತು. ಮೈಲಾರಿ ರಾಯರು…… ಮಗಳೇ.. ಅಂತ ಕರೆದ್ರು…. ಬಂದ ಅವಳಲ್ಲಿ … “ಏನಮ್ಮಾ ತಿಂಡಿ ತಿಂದಿಯಾ…. ಹೋಮ್ ವರ್ಕ್ ಎಲ್ಲಾ ಆಯ್ತಾ…. ಹೋಗ್ ಆಡ್ಕೊ ಹೋಗ್….” ಅಂತ ಹೇಳಿ, ಇವನ ಕಡೆ ತಿರುಗಿ…. “ಏನಯ್ಯಾ… ನೋಡ್ಕೊಂಡ್ಯೋ ಸರಿಯಾಗಿ….!!” ಅಂದದ್ದು ಕೇಳಿ… ಈತ ಕಂಗಾಲು…. ಮತ್ತೆ ತಲೆಯೇ ಎತ್ಲಿಲ್ಲ ……
ಅವರ ಪಾಠವನ್ನ ನಾನು ಎಷ್ಟೋ ನಮ್ಮ ನಾಟಕದ ಶಿಬಿರಗಳಲ್ಲಿ ಅಭಿನಯಿಸಿದ್ದು ಉಂಟು…. ಎಷ್ಟೊ ಜನ ಮತ್ತೆ ಮತ್ತೆ ನನ್ನಿಂದ ಅದನ್ನು ಬಯಸುತ್ತಿದ್ದರು…. ಅವರ ಡ್ರಾಮ ಕ್ಲಾಸ್… ಹ್ಯಾಮ್ಲೆಟ್…. ಕೇಳಬೇಕೆಂದು ಬಹಳ ಪ್ರಯತ್ನ ಪಟ್ಟಿದ್ದೆ…. ನಮ್ಮ ಕ್ಲಾಸಿಗೆ ಚಕ್ಕರ್ ಹಾಕಿ ಅವರು ಹ್ಯಾಮ್ಲೆಟ್ ಪಾಠ ಮಾಡುತ್ತಿದ್ದ ಇನ್ನೊಂದು ಸೆಕ್ಷನ್‌ನ ಒಳಗೆ ಹೋಗಲು ಸಾಧ್ಯವಾಗದೇ… ಹೊರಗೇ ನಿಂತು ಕೇಳ ಹೊರಟರೆ…. ಅದು ಪ್ರಯೋಜನವಾಗಲೇ ಇಲ್ಲ….. ಮುಖ ನೋಡದೇ ಎಂತ ನಾಟಕ….!!!
ಅವರ ಪ್ರಬಂಧದ ಪಾಠವೇ….. ನನ್ನ ಈ ನಾಟಕದ ಹವ್ಯಾಸಕ್ಕೆ ತುಂಬಾ ಸಹಕಾರಿಯಾಗಿದೆ…. ಇನ್ನು ಹ್ಯಾಮ್ಲೆಟ್ ಪಾಠ ಸಿಗ್ತಿದ್ರೆ, ನಾನು ದೊಡ್ಡ ನಟ ಸಾರ್ವಭೌಮನೇ ಆಗ್ತಿದ್ನೋ ಏನೋ….!!! ಈ ಪುಣ್ಯಾತ್ಮನಿಗೊಂದು ದೀರ್ಘ ದಂಡ ಪ್ರಣಾಮ……
ಇಂಗ್ಲಿಷ್ ಮೇಷ್ಟ್ರುಗಳಲ್ಲಿ ಮೈಲಾರಿ ರಾವ್ ಅಲ್ಲದೇ ಇನ್ನಿಬ್ಬರಿದ್ದರು. ಪೋಯೆಟ್ರಿಗೆ – ಎಂ.ಎನ್.ರಾಮಸ್ವಾಮಿಯವರು. ಸಿ.ಡಿ. ಗೋವಿಂದಯ್ಯನವರದ್ದು… ಡ್ರಾಮ – ಶೇಕ್ಸ್ ಪಿಯರ್‌ನ ಹ್ಯಾಮ್ಲೆಟ್ ಪಾಠ…… ಕವಿ-ಕಾವ್ಯದ ಪ್ರಭಾವಕ್ಕೆ ಒಳಗಾಗ್ತಿದ್ರು…… ಅವರಿಗೆ ಇಂಗ್ಲಿಷ್ ಸಾಹಿತ್ಯ ಅಂದರೆ ತುಂಬಾ ಅಭಿಮಾನ. ಒಂದುಸಾರಿ ಹ್ಯಾಮ್ಲೆಟ್‌ನ “ಟು ಬೀ ಆರ್ ನಾಟ್ ಟು ಬೀ….” ಸಂದರ್ಭ. ಒಳ್ಳೆ ಲಹರಿಯಲ್ಲಿದ್ರು…… ನನ್ನ ಪಕ್ಕದ ಬೆಂಚಿನಲ್ಲಿ ಕುಳಿತಿದ್ದ ದೇವನೂರ ಮಹಾದೇವ ಎದ್ದು ನಿಂತು, ತೀರಾ ಸಹಜವಾಗಿ “ಹೌದ್ ಸಾರ್…. ಕುವೆಂಪು ಅವರೂ ಇದನ್ನೇ ಹೇಳಿದ್ದಾರೆ ತಮ್ಮ `ರಕ್ತಾಕ್ಷಿ’ಯಲ್ಲಿ…..” ಅಂದ್ರು. ಈ ಗೋವಿಂದಯ್ಯ ಮೇಷ್ಟ್ರಿಗೆ ಏನಾಯ್ತೋ…!! (ಸಿಟ್ಟು ಬಂದ ಹಾಗಿತ್ತು….) “ಹೌದಪ್ಪಾ..!! ನಿಮ್ಮ ಕುವೆಂಪು ಸಾವಿರ ಬರ್ದಿದ್ದಾರೆ ಇಂತಾದ್ದು…. ಇಂಗ್ಲಿಷ್‌ನಿಂದ ಕಾಪಿ ಹೊಡೆದದ್ದು ಅಂತ ಮಾತ್ರ ನಾವು ಹೇಳುವ ಹಾಗಿಲ್ಲಾ…” ಅಂದು ಬಿಟ್ರು. (ಹೌದೋ ಅಲ್ವೋ ಗೊತ್ತಿಲ್ಲ, ಆಗ `ಕುವೆಂಪು ಗುಂಪು’ ಮತ್ತು `ಕುವೆಂಪು ವಿರೋಧಿಗಳ ಗುಂಪು’ ಅಂತ ಇತ್ತೂ. ಅವರ ನಡುವಿನ ತಿಕ್ಕಾಟ ಜೋರಾಗಿತ್ತೂ ಅಂತ ಸುದ್ದಿ ಇತ್ತು….. ಬಾತ್ಮೀಧಾರರ ಅಭಿಪ್ರಾಯಕ್ಕೆ ನಾನು ಜವಾಬ್ಧಾರನಲ್ಲ…!!)
“ಜಪಾನಿನ ಎಕ್ಸ್‌ಪೊ-೭೦ ಮೇಳಕ್ಕಾಗಿ ಸರಕಾರ ಆಯ್ಕೆ ಮಾಡಿದ ವಿಧ್ಯಾರ್ಥಿಗಳಲ್ಲಿ ಅನರ್ಹರೇ ಹೆಚ್ಚು ಇದ್ದರು. ಅರ್ಹರನ್ನು ಆಯ್ಕೆ ಮಾಡಿಲ್ಲ…. ಎಂದು ಗಲಾಟೆ ಮೈಸೂರಿನ ಉಳಿದೆಲ್ಲಾ ಕಾಲೇಜುಗಳಲ್ಲಿ ಪ್ರಾರಂಭವಾಗಿ… ಅವರೆಲ್ಲ… ನಮ್ಮಕಾಲೇಜು ಆವರಣಕ್ಕೆ ಬಂದು ಘೋಷಣೆ ಕೂಗ್ತಿದ್ರು….. ನಮ್ಮವರಿಗೆ ಒಂದು ಹತ್ತು ದಿನ ಯಾಕೋ ಸ್ಪೂರ್ತಿ ಬರಲೇ ಇಲ್ಲ. ತರಗತಿಗಳಿಗೆ ರಜೆ ಸಿಗುವಷ್ಟರ ಮಟ್ಟಿಗೆ ಘೋಷಣೆ ಕೂಗಿ… ನಗಾಡ್ತಾ ತಮ್ಮತಮ್ಮ ಮನೆಗೆ ಹೋಗ್ತಿದ್ರೇ ಹೊರತು, ಸ್ಟ್ರೈಕ್ ನಲ್ಲಿ ಸೇರಿಕೊಂಡಿರಲಿಲ್ಲ. ಅಲ್ಲದೇ ನಮ್ಮ ಕಾಲೇಜಿನಿಂದ ನಿಜವಾದ ಅರ್ಹತೆಯುಳ್ಳ ವಾಗ್ಮಿ, ಚರ್ಚಾಪಟು, ಉಮರಬ್ಬ ಆಯ್ಕೆಯಾಗಿದ್ದರಲ್ಲ…..!! ಮತ್ತೆ ನಾವ್ಯಾಕೆ ಸ್ಟ್ರೈಕು ಮಾಡ್ಬೇಕು ಅಂತ ಒಂದು ವಾದ…..
ಆದರೆ…. ಹತ್ತು ದಿನ ಕಳೆದಾಗ ನಮ್ಮವರಿಗೆ, ಇದರಲ್ಲಿ ರಸ ಇಲ್ಲ ಅಂತ ಗೊತ್ತಾಗಿ ಹಾಳಾಗೋಗ್ಲಿ ಕಣೊ…. ನಾವೂ ಯಾಕೆ ಸುಮ್ಕಿರ್ಬೇಕು…. ಇಳ್ದ್ ಬಿಡೋಣಾ….!! ಅಂತ ಇಳ್ದ್ ಬಿಟ್ರು ನೋಡಿ…. ಮೈಸೂರು ಹೊತ್ತಿ ಉರಿಯಿತು. ಮಹಾರಾಜ ಕಾಲೇಜು ಅಲ್ವಾ…. ಏನೇ ಮಾಡ್ಲಿ… ಅದು `ಏ ವನ್’. ಅದನ್ನು ಮೀರಿಸುವಂಥಾದ್ದು ಇನ್ನೊಂದು ಇರಲಾರದು ಹಾಗೆ…!!
ಬರೀ ಕಾಲೇಜ್ ಸ್ಟುಡೆಂಟ್ಸ್ ಆದ್ರೆ ಏನೂ ಆಗಲ್ಲ….. `ಕೊಪ್ಪಲ್’ನವರು ಇಳ್‌ದ್ರೆ ಮಾತ್ರ ಕಿಕ್ ಸಿಗೋದು…. ಅಂತ ಮಾತಾಡಿಕೊಳ್ತಿದ್ರು. ಅದು ಯಾರು ಆ ‘ಕೊಪ್ಪಲ್’ ನವ್ರೋ..! ನನಗೆ ಒಂದೂ ಗೊತ್ತಾಗ್ತಾ ಇರ್ಲಿಲ್ಲ. ಎಲ್ಲಿ ನೋಡಿದ್ರೂ ಕಲ್ಲು ತೂರಾಟ, ಬೆಂಕಿ. ಪೋಲೀಸ್‌ನವರು ಸಿಕ್ಕ ಸಿಕ್ಕವರನ್ನೆಲ್ಲಾ ಹೊಡಿತಿದ್ರು. ನಮ್ಮ ಕಾಲೇಜ್ ಹಾಸ್ಟೆಲ್‌ನವರು ದೊಂಬಿಯಲ್ಲಿ ಸೇರಿಕೊಂಡಿರಲಿಲ್ಲ. `ಸಾಕ್ಷೀಪ್ರಜ್ಞೆ’ಯಾಗಿದ್ದವರು ಕೆಲವು ಮಂದಿ…. `ಮಜಾ ತೆಕ್ಕೊಳ್ಳುವ’ ಕೆಲವು ಮಂದಿ. ಜೀವವನ್ನು ಆ ಕೈಯಿಂದ ಈ ಕೈಗೆ ಬದಲಾಯಿಸುತ್ತಾ… ಪೋಲೀಸ್ ರೈಡ್ ಆದ್ರೆ ನಾವು ಏಟು ತಿನ್ಬೇಕಲ್ಲಾ ಅನ್ನುವ ನಮ್ಮಂತಹ ‘ಭಯಂʼಕರರು ಕೆಲವು ಮಂದಿ…….
ಏ ಯಾಕ್ ಎದ್ರ್ ತೀರಾ…. ಇಲ್ಲಿಗೆ ಪೋಲೀಸ್‌ನೋರು ಬರೋ ಅಂಗಿಲ್ಲ…. ವೈಸ್ ಚಾನ್ಸಲರ್ ಪರ್ಮಿಸನ್ ಬೇಕು…. ಎದ್ರ್ ಬೇಡೀ…. ಅನ್ನುವವರು ಕೆಲವು ಮಂದಿ. ಇದು ಗೊತ್ತಿದ್ದೇ ಏನೋ… ಕಲ್ಲು ಬಿಸಾಡಿ, ಬೆಂಕಿ ಹಚ್ಚಿದ `ರೌಡಿ’ಗಳು ಹಾಸ್ಟೆಲ್ ಒಳಗೆ ಸೇರಿಕೊಳ್ತಿದ್ರು…. (ಪೋಲೀಸ್‌ನವರು ಹಾಸ್ಟೇಲ್ ಒಳಗೆ ಬರುವಂತಿಲ್ಲವಲ್ಲಾ…..!!) ಆದ್ರೆ…. ರಾಂಗ್ ಹೆಚ್ಚಾದಾಗ ಪೋಲೀಸ್‌ನವರು ಏನ್ ಮಾಡೋದು ಪಾಪ…..!! ಪರ್ಮಿಶನ್ ವಿಷ್ಯಾ… ಆಮೇಲೆ ನೋಡ್ಕೊಳ್ಳೋಣ…. ಅಂತ ಹಾಸ್ಟೆಲ್ಗೆ ನುಗ್ಗಿ ಸಿಕ್ಕಿದವರಿಗೆಲ್ಲಾ ತಾರಾಮಾರ ಹೊಡೆದರು. ಗಲಾಟೆ ಮಾಡಿದವರೆಲ್ಲಾ ತಪ್ಪಿಸಿಕೊಂಡಾಗಿತ್ತು. ಬಡಪಾಯಿಗಳು ಮಾತ್ರ ಏಟು ತಿಂದ್ರು.
ನಮ್ಮ ಶಂಕರನ ಆರನೇ ಇಂದ್ರಿಯಕ್ಕೆ ಏನೋ ಸೂಚನೆ ಸಿಕ್ಕಿ, ನಾವಿಬ್ಬರೂ… ಸಾಧ್ಯವಾದವರಿಗೆಲ್ಲಾ ಸೂಚನೆ ನೀಡಿ, ಮಧ್ಯಾಹ್ನದ ಅಕ್ಕಿ ರೊಟ್ಟಿ ಬಿಡಲು ಮನಸ್ಸಾಗದೇ…. ಬೇಗ ಬೇಗ ಮುಕ್ಕಿ…. ಯಾವ್ಯಾವ್ದೋ ದಾರಿಯಲ್ಲಿ ಓಡಿ… ಯಾದವಗಿರಿಯ ನನ್ನ ಭಾವ – ಡಾ| ಕೀಲಾರು ಗೋಪಾಲಕೃಷ್ಣಯ್ಯನವರ ಮನೆ ಸೇರಿ ಆಗಿತ್ತು.
ಆದರೆ ಹಾಸ್ಟೆಲಿನ ಅನೇಕ ಜನ ಪಾಪ…! ಸರಿಯಾಗಿ ಪೆಟ್ಟು ತಿಂದಿದ್ದರು. ಬಾಡೀ ಬಿಲ್ಡ್ ಮಾಡುತ್ತಾ….. ತನ್ನಷ್ಟಕ್ಕೇ ತಾನಿದ್ದ ಅಶೋಕ…… ಮೀಸೆ ಬಿಲ್ಡ್ ಮಾಡುತ್ತಿದ್ದ ನಮ್ಮ “ಅತ್ರಿ-ಅಶೋಕ” ಅಲ್ಲ….. ಇನ್ನೊಬ್ಬ ಸಾಗರದ ಅಶೋಕ. ಆತ ತಪ್ಪಿಸಿಕೊಳ್ಳುವ ಭರದಲ್ಲಿ ಮಾಳಿಗೆಯಿಂದ ಹಾರಿ, ಪಕ್ಕನೆ ಮೇಲೇಳಲಾಗದೇ ಹೋದಾಗ… ಇದ್ದಲ್ಲಿಗೇ ಪೋಲೀಸ್ನವರು ಬಂದು ಹೊಡೆದು – ಅಶೋಕ, ಆಸ್ಪತ್ರೆ ಸೇರಬೇಕಾಯ್ತಂತೆ….. ಜಯಪ್ರಕಾಶ ಮಾವಿನಕುಳಿ ಕೂಡಾ ಹಾಸ್ಟೇಲಿನಲ್ಲಿ ಇದ್ರು. ಏಟು ತಿಂದ್ರೋ.. ಬಚಾವ್ ಆದ್ರೋ ಗೊತ್ತಿಲ್ಲ.
ನಾವು ಎರಡು ದಿನ ಯಾದವಗಿರಿಯ ಮನೆಯೊಳಗೆ ಇದ್ದು, ನಂತರ ನಮ್ಮನ್ನು ಕೀಲಾರು ಡಾಕ್ಟ್ರು ತಮ್ಮ ಕಾರಿನಲ್ಲಿ, ಸಂಪಾಜೆ ದಾಟಿಸಿ ಬಿಟ್ಟದ್ದು. ಗಲಾಟೆ ಎಲ್ಲಾ ಮುಗಿದು ಕಾಲೇಜು ಸುರುವಾಗಿ, ನಾವು ಊರಿಂದ ಬಂದ ಮೇಲೆಯೇ ನಮಗೆ ವಿಷಯ ಎಲ್ಲಾ ಗೊತ್ತಾದದ್ದು .
ಈ `ಮಹಾರಜಾ’ ಕಾಲೇಜಿನಲ್ಲಿ ನನ್ನ ಪ್ರತ್ಯೇಕ ಹಕ್ಕಿನ ರಜೆ……. ಪರೀಕ್ಷೆಗಳನ್ನೂ ಬಿಟ್ಟಿಲ್ಲ….. ಎರಡನೇ ವರ್ಷದ ಮಾರ್ಚ್ ಪರೀಕ್ಷೆಯಲ್ಲಿ ಯಾವುದೋ ಒಂದು ಪೇಪರ್, ಒಂದು ಸಾಲೂ ಬರೆಯಲು ಸಾಧ್ಯವಾಗ್ಲಿಲ್ಲ. ಅರ್ಧ ಗಂಟೆ ಕಡ್ಡಾಯವಾಗಿ ಪರೀಕ್ಷಾ ಕೊಠಡಿಯಲ್ಲಿ ಇರ್ಲೇ ಬೇಕಲ್ಲ…!! ಅರ್ಧ ಗಂಟೆ ಆದ ಕೂಡ್ಲೇ ಎದ್ದೆ….. ಆ ದಿನ ಮೇಲ್ವಿಚಾರಕರಾಗಿದ್ದವರು ಒಬ್ರು ಮೇಡಂ – ಕಾವೇರಿ ಮುತ್ತಣ್ಣ ಅಂತೇನೋ ಹೆಸರು, ಸರೀ ನೆನಪಿಲ್ಲ. ಖಾಲೀ ಆನ್ಸರ್ ಪೇಪರ್ ಕೊಟ್ಟೆ. “ವಾಟ್…!! ಯು ಹ್ಯಾವ್ ಆಲ್ ರೆಡಿ ಕಂಪ್ಲೀಟೆಡ್…?” ಅಂತ ಕೇಳಿದ್ರು.
ಅವರು ನನಗೆ ಪಾಠಕ್ಕಿರಲಿಲ್ಲ ಎನ್ನುವ ಧೈರ್ಯದಲ್ಲಿ, “ಮೇಡಂ…. ಆಫ್ಟರ್ ಲಾಂಗ್ ಲಾಂಗ್ ಕನ್ಸಿಡರೇಶನ್ ಆರ್ ಇಮೇಜಿನೇಶನ್, ಮೈ ವಿಷನ್ ಈಸ್ …. ದ ಪ್ರೆಸೆಂಟ್ ಡೇ ಎಗ್ಸಾಮಿನೇಶನ್ ಈಸ್ ರಾದರ್ ಬಾದರೇಶನ್ ಟು ದ ಇಂಡಿಯನ್ ಜನರೇಶನ್ ಹೂಸ್ ಚೀಫ್ ಆಕ್ಯುಪೇಶನ್ ಈಸ್ ಕಲ್ಟಿವೇಶನ್. ಸೊ ಐ ಕೇಮ್ ಟು ದ ಕನ್ ಕ್ಲೂಶನ್….. ದಾಟ್ ಇಟ್ ಈಸ್ ಬೆಟರ್ ಟು ಅಪಿಯರ್ ಫಾರ್ ಸೆಪ್ಟೆಂಬರ್ ಎಗ್ಸಾಮಿನೇಶನ್” ಅಂತ ಒಂದೇ ಉಸುರಲ್ಲಿ ಹೇಳಿ ಹೊರಗೋಡಿದೆ. ಅವರು “ವಾಟ್ ವಾಟ್ …??” ಅನ್ನುವಾಗ ನಾನು ಮೆಟ್ಟಲು ಇಳಿದಾಗಿತ್ತು. ಆ ಮೇಲೆ ಅವರು ಸಿಕ್ಕಿದಾಗಲೆಲ್ಲ, ನನ್ನನ್ನು “ಹೆಲೋ… ಕಂ ಸೆಪ್ಟೆಂಬರ್…!!” ಅಂತ ಕರೀತಿದ್ರು. ಅವರ ಕಣ್ಣು ಸ್ವಲ್ಪ ಹೆಚ್ಚುಕಮ್ಮಿ ಇದ್ದುದರಿಂದ ಕೆಲವರು ಅವರನ್ನು ಗುಟ್ಟಿನಲ್ಲಿ ಎಲ್.ಟಿ.ಟಿ.ಇ. ಅಂತಿದ್ರು. (ಲುಕ್ಕಿಂಗ್ ಟು ಟೋಕಿಯೋ… ಟಾಕಿಂಗ್ ಟು ಇಂಗ್ಲೇಂಡ್….!!!). ಅವರು ಲ್ಯಾಂಬ್ರೆಟ್ಟ ಸ್ಕೂಟರಲ್ಲಿ ಬರ್ತಿದ್ರು. ಅವರಿಗೆ “ಮೇಯರ್ ಮುತ್ತಣ್ಣ “(ಒಂದು ಕನ್ನಡ ಸಿನೀಮಾ) ಎನ್ನುವ ಹೆಸರೂ ಗುಟ್ಟಿನಲ್ಲಿ ಚಾಲ್ತಿಯಲ್ಲಿತ್ತು.
ಈ ‘ಮಹಾರಜಾ’ ಕ್ಕೆ ನನ್ನನ್ನು ಬಿಟ್ರೆ ಯಾರೂ ಇಲ್ಲ… ಎಂದು ಬಹಿರಂಗವಾಗಿ ಕೊಚ್ಚಿಕೊಂಡರೂ…. ಪ್ರಚಾರ ಬಯಸದೇ… ‘ಕರ್ಮಸಿದ್ದಾಂತ’ವನ್ನೇ ಗಟ್ಟಿಯಾಗಿ ನಂಬಿ….. ತಮ್ಮ ಕಾಯಕವನ್ನು ಮುಂದುವರಿಸುತ್ತಿದ್ದ… ಅನೇಕ, ‘ಮಹಾರಜಾ’ ಕುಶಲಿಗರ ಮುಂದೆ ನಾನು ಎಳೇ ನಿಂಬೆಕಾಯಿ ಆಗಿದ್ದೆ, ಎನ್ನುವುದು ಗುಟ್ಟಿನಲ್ಲಿಯಾದರೂ ಒಪ್ಪಲೇಬೇಕಾದ ಸತ್ಯ. ಅಂತಹ ಅನೇಕ ‘ಕರ್ಮಾಚಾರಿ’ಗಳ ಪೈಕಿ…. ಶ್ರೇಷ್ಠರಾದವರು… ಕಾಲೇಜು ಹಾಸ್ಟೆಲ್‌ನಲ್ಲಿದ್ದ ಲಿಂಗೇಗೌಡರು. (ಅಥವಾ… ನಿಂಗೇ ಗೌಡರೋ.. ಹೆಸರು ಸರೀ ನೆನಪಿಲ್ಲ… ಕಾಲೇಜಿಗೆ ಸೇರಿದ ಹೊಸದರಲ್ಲಿ… ಪ್ರಾಧ್ಯಾಪಕರೆಂದು ತಿಳಿದು… ನಾನು ನಮಸ್ಕರಿಸಿದ ನನ್ನ ಸಹಪಾಠಿ….ಮಹಾಶಯ…… ನಮ್ಮ ಲಿಂಗ್ವಿಸ್ಟಿಕ್ ಮೇಷ್ಟ್ರ ಸಹಪಾಠಿಯೂ ಆಗಿದ್ದರಂತೆ….!!!)
ನಮ್ಮ ‘ರಾಂಪಣ್ಣ’ನಂತೆ…. ಅವರ ಕುರಿತಾದ…. ಅನೇಕ ಕತೆಗಳು ನಾಡಿನಾದ್ಯಂತ ಪ್ರಚಾರದಲ್ಲಿತ್ತು. ಅವೆಲ್ಲಾ ಸತ್ಯವೋ…! ಸುಳ್ಳೋ…! ಅಥವಾ… ಎರಡೂ ಸೇರಿದ ಮಿಥ್ಯವೋ…!! ಬ್ರಹ್ಮನೇ ಬಲ್ಲ. ಅವರು ಪ್ರತಿದಿನ ಒಂದು ಗಂಟೆ ಬಿಸಿ ಬಿಸಿ ನೀರಿನ ಸ್ನಾನದಿಂದ ಕೆಂಪು ಕೆಂಪಾಗಿ…. ರೂಮಿಗೆ ಬಂದು, ಅವರಷ್ಟೇ ಉದ್ದದ ‘ಟರ್ಕಿಟವೆಲ’ನ್ನು ಹಾಸಿಗೆಯ ಮೇಲೆ ಹಾಸಿ… ಅದರ ಮೇಲೆ ಅರ್ದ ಡಬ್ಬ ಪಾಂಡ್ಸ್ ಪೌಡರನ್ನು ಚಿಮುಕಿಸಿ…. ಅದರಮೇಲೆ ಕವುಚಿ, ಮಗುಚಿ ಶವಾಸನ. ಆಮೇಲೆ… ಅವರ ಬಳಿಯಿದ್ದ ಐವತ್ತೋ… ಅರವತ್ತೋ ಸೂಟುಗಳ ಪೈಕಿ ಒಂದನ್ನು ಧರಿಸಿ, ಊಟದ ಕೋಣೆಗೆ…. ಸೂಟು ಧರಿಸಿದರೂ ಶೂಸ್ ಬದಲಿಗೆ ಹವಾಯಿ ಚಪ್ಪಲ್. ಒಂದೊಂದು ಸಾರಿ ಶುಭ್ರ ಪೈಜಾಮ -ಜುಬ್ಬಾ ಧರಿಸಿ… ಆಗ ಶೂಸ್ ತೊಟ್ಟುಕೊಳ್ಳುವ ಅವರದೇ ಆದ ಡಿಸಿಪ್ಲಿನ್…!!
ಅವರು ‘ಶೇಕ್ಸ್ ಪಿಯರ್ ತಜ್ಞ’….!!! ಅಂದರೆ…. ನಮ್ಮ ಇಂಗ್ಲಿಷ್ ಲ್ಯಾಂಗ್ವೇಜ್ ಪಠ್ಯದಲ್ಲಿ… ಶೇಕ್ಸ್ ಪಿಯರ್‌ನ ಡ್ರಾಮ ಎರಡು ವರ್ಷಕ್ಕೊಮ್ಮೆ ಬದಲಾಗುತ್ತಿತ್ತು. ‘ಕಿಂಗ್ ಲಿಯರ್’… ‘ಒಥೆಲ್ಲೋ’… ‘ಮ್ಯಾಕ್ ಬೆತ್’ ಮತ್ತು ‘ಹ್ಯಾಮ್ಲೆಟ್’ ಈ ಗೌಡರಿಗೆ ಮೊದಲಿನ ಮೂರೂ ಆಗಿ ಈಗ ನಮ್ಮ ಜೊತೆ ಹ್ಯಾಮ್ಲೆಟ್‌ನ ದ್ವಿತೀಯ ವರ್ಷದ ಅನುಭವ….??
ಅವರು ಒಂದುಸಾರಿ…. ರಜಾ ಹಾಕಿ ತನ್ನೂರಿಗೆ ಹೋದವರು …. ಮತ್ತೆ ಹಾಸ್ಟೆಲಿಗೆ ಬರ್ತಾ ಇದ್ರು…. ಗೆಳೆಯ ಚಂದ್ರು, ‘ಹಾಕಿ’ ಆಡುವುದಕ್ಕಾಗಿ… ಹಾಕಿ ಸ್ಟಿಕ್ ಹಿಡಿದು… ಆಟದ ಬಯಲಿಗೆ ಹೊರಟವರು…. ಈ ಗೌಡರನ್ನು ನೋಡಿ…. ‘ಹಲೋ… ಮಿಸ್ಟರ್ ಗೌಡ್… ವೆನ್ ಡಿಡ್ ಯು ಕಮ್ …..’ ಅಂತ ಕೇಳಿದರು …. ಇವ್ರಿಗೆ ‘ಕಮ್’ ಅನ್ನೋ ಶಬ್ಧ… ಚಿರಪರಿಚಿತ. ಆದ್ರಿಂದ ಕೂಡಲೇ…. ‘ಏ… ಓಗಲೇ … ಯಾವ್ನ್ ಬತ್ತಾನೆ ಆ ದರಿದ್ರ ಆಟಕ್ಕೆ…. ನಾ ಬರಾಕಿಲ್ಲ … ಓಗ್…’ ಅಂದಿದ್ದು ಕೇಳಿ, ಚಂದ್ರು ಕಕ್ಕಾಬಿಕ್ಕಿ.
ವರ್ಷದ ಕೊನೆಗೆ… ಅವರಲ್ಲಿ ಯಾರಾದ್ರೂ….. ‘ಎಗ್ಸಾಮ್ ಹೇಗಾಯ್ತು ಗೌಡ್ರೆ’ ಅಂತ ಕೇಳಿದ್ರೆ…. ‘ಓ…ಪರ್ವಾಯಿಲ್ಲ.. ಚೆನ್ನಾಗಿತ್ತು… ಕಣ್ರಿ ‘ ಅಂತ ಹೇಳ್ತಿದ್ರು…. ರಿಸಲ್ಟ್ ಬಂದ ಮೇಲೆ…. ‘ಏನಾಯ್ತು ಗೌಡ್ರೆ ನಿಮ್ದು’ ಅಂದ್ರೆ…. ‘ಥೂ… ಇಲ್ಲಾರಿ ಎಗ್ಸಾಮ್ಗೆ ಓಗಾಕೇ ಆಗ್ಲಿಲ್ಲ…. ಊರಾಗೆ ಏನೋ ಕೆಲ್ಸಾ ಇತ್ತು’ ಅನ್ನುವ ಉತ್ತರ……… ಇಂತಿಪ್ಪ ನಿಷ್ಕಾಮ ಕರ್ಮಿ…… ಆದರೆ… ಒಳ್ಳೆಯ ಹೃದಯವಂತ… ಉಪಕಾರಿ… ಯಾರೊಂದಿಗೂ ಜಗಳವಿಲ್ಲ… ನಗ್ ನಗ್ತಾ ಎಲ್ಲರನ್ನೂ ಮಾತಾಡ್ಸ್ತಾ ಇದ್ದವರು…….. ಎಲ್ಲಿದ್ದಾರೋ…?? ಸುಖವಾಗಿರ್ಲಿ…..
ಕಾಲೇಜಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ… ವಿದ್ಯಾರ್ಥಿ-ವಿದ್ಯಾರ್ಥಿನಿಯರ ರಂಗು ರಂಗಿನ ಡ್ರೆಸ್ ತೀರಾ ಸಾಮಾನ್ಯ. ಎಲ್ಲರ ಕಣ್ಣು ತಮ್ಮನ್ನು ಗಮನಿಸಲಿ ಎನ್ನುವ ಹಂಬಲ. ಹಾಗೇ… ರಾಜೇಶ್ ಖನ್ನನ ಜುಬ್ಬ… ಧರ್ಮೇಂದ್ರನ ಶರ್ಟು… ಸಂಜೀವ ಕುಮಾರನ ಸೂಟು…. ಹೇಮಮಾಲಿನಿಯ ಸೀರೆ… ಇತ್ಯಾದಿಗಳ ನಡುವೆ… ನಮ್ಮನ್ನು ಯಾರು ಗಮನಿಸಿಯಾರು…!! ಎನ್ನುವ ಚಿಂತನೆಯಲ್ಲಿ… ಹೊಳೆದ ಐಡಿಯಾದಂತೆ ಸ್ವಲ್ಪ ಬೇರೆಯೇ ರೀತಿಯಲ್ಲಿ ಮಾಡಿದ ಡ್ರೆಸ್ ನಮ್ಮನ್ನು ಗೆಲ್ಲಿಸಿತ್ತು.
ಪ್ರಿನ್ಸಿಪಾಲ್ ಶಂಕರಲಿಂಗೇ ಗೌಡರು- ‘ಸೌತ್ ಕೆನರಾದವರೇನ್ರಿ ನೀವು…??’ ಅಂತಾ ನಗ್ತಾ ಕೇಳಿದ್ದು ನೆನಪಿದೆ…. ಯಾಕೋ…..!! (ಪ್ರಾಯಷಃ ಇಂತಹ ‘ಪಿರ್ಕಿ’ಗಳು…. ಅಲ್ಲಿಂದಲೇ ಬಂದಾವಷ್ಟೇ….. ಅಂದುಕೊಂಡಿರಬಹುದೋ ಏನೋ…!!)
ಹಾಗೆ….. ಕಲಿಯುವುದಕ್ಕೆಂದು ಮೈಸೂರಿಗೆ ಬಂದು, ಬೇಕಾದಷ್ಟು ಕಲಿತದ್ದಾಗಿದೆ. ಸಿನೀಮಾ ನೋಡುವುದು ಬಿಟ್ರೆ ಬೀಡಿ, ಸಿಗರೇಟು, ಕುಡಿತ, ಇಸ್ಪೇಟು, `…ಕ್ಲಾಸಿ’ಗೆ ಹೋಗೋದು……. ಇತ್ಯಾದಿ ಬೇರೆ ಯಾವ ಕೆಟ್ಟ ಚಟಗಳೂ ನನಗಿರ್ಲಿಲ್ಲ ಬಿಡಿ.
ಒಟ್ಟೂ ಸಿನೀಮಾ ನೋಡುವ ಹುಚ್ಚಿನಲ್ಲೇ ಆದರೂ….. ದೇಶ ವಿದೇಶದ ಅನೇಕ ಒಳ್ಳೆಯ ಸಿನೀಮಾಗಳೂ ನನಗೆ ದಕ್ಕಿದ್ದು… ನನ್ನ ಭಾಗ್ಯ. ಅದಕ್ಕೆ ಕಾರಣ ಸುಜಯಕುಮಾರ್ ಎಂಬ ಒಬ್ಬ ಸುಸಂಸ್ಕೃತ ಆಪ್ತ ಗೆಳೆಯ. ಸಿ.ಎಫ್.ಟಿ.ಆರ್.ಐ. ನಲ್ಲಿದ್ದ ಸಿನೀಮಾ ಕ್ಲಬ್‌ನ ಪ್ರದರ್ಶನಗಳಿಗೆ ನನ್ನನ್ನು ತನ್ನ ಅತಿಥಿಯಾಗಿ ಕರಕೊಂಡು ಹೋಗುತ್ತಿದ್ದುದರಿಂದ…. ಸಿನೀಮಾ… ಆ ನಂತರದ ಸಂವಾದ ಎಲ್ಲಾ…. ನನಗೆ ಸಿಕ್ಕಿತ್ತು. ಒಳ್ಳೆಯ ಸಿನೀಮಾ ಅಂದ್ರೆ ಏನು…! ಅನ್ನೋದು ಸ್ವಲ್ಪ ಸ್ವಲ್ಪ ಗೊತ್ತಾಗಿತ್ತು. ‘ಸಿನೀಮಾ ರಸಗ್ರಹಣ’ದ ‘ದಾರಿ’ ಕಂಡಿತ್ತು.
ಶ್ರೀರಂಗಪಟ್ಟಣದ ಬಹುದೊಡ್ಡ ವೈದ್ಯರೂ, ಅಪ್ಪಟ ಗಾಂಧೀವಾದೀ ರಾಜಕಾರಣಿಯೂ, ಜನಸಾಮಾನ್ಯರ ಪಾಲಿಗೇ ದೇವರೇ ಆಗಿದ್ದ ಡಾ. ಬಂದೀಗೌಡರ ಮಗ…. ಈ ಸುಜಯಕುಮಾರ್, ಯುವರಾಜಾ ಕಾಲೇಜಿನಲ್ಲಿ ಕಲಿಯುತ್ತಿದ್ದಾಗಲೇ ಖಾದಿ ಧರಿಸುತ್ತಿದ್ದು, ಮನಸ್ಸನ್ನೂ ಹಾಗೇ ಇಟ್ಟುಕೊಂಡವರು.
ಈಗ ತನ್ನ ತೀರ್ಥರೂಪರಂತೆ ಜನಾನುರಾಗಿ ವೈದ್ಯರಾಗಿ ಶ್ರೀರಂಗಪಟ್ಟಣದಲ್ಲಿ ನಿಜ ಅರ್ಥದ ಸೇವೆ ಸಲ್ಲಿಸುತ್ತಿದ್ದಾರೆ. ‘ಆಧುನಿಕತೆ’ ಎನ್ನುವಂಥಾದ್ದು… ತನ್ನ ಹಳ್ಳಿಯ ಜನರ ಆತ್ಮೀಯತೆಗೆ ತೊಂದರೆ ಕೊಡಬಾರದು ಎನ್ನುವ ಕಾರಣಕ್ಕಾಗಿ…. ತನ್ನ ತೀರ್ಥರೂಪರ ಅದೇ ಹಳೆಯ ಕ್ಲಿನಿಕ್ ಅನ್ನು ಹಾಗೆಯೇ ಉಳಿಸಿಕೊಂಡಿದ್ದಾರೆ. ಹಳ್ಳಿಯ ಜನ ಚಿಕಿತ್ಸೆಗಾಗಿ ತಂಡೋಪತಂಡವಾಗಿ ಇವರ ಆ ಹಳೇ ಕ್ಲಿನಿಕ್ಕಿಗೆ ಬಂದು…. ಜಗಲಿಯಲ್ಲಿ ತಮ್ಮ ಸ್ವಂತ ಮನೆಯೆಂಬಂತೆ ಕಾಲು ಚಾಚಿ ಕುಳಿತಿರುವುದನ್ನು ನೋಡಿದರೆ… ಮನಸ್ಸು ತುಂಬಿ ಬರುವಂತಾದ್ದು….. ಇಂದಿಗೂ ಅವರ ಗೆಳೆತನದ ಪ್ರೀತಿ ನಮಗೆ ಸಿಗುತ್ತಾ ಇದೆ.
ಇನ್ನೂ ಒಂದು ವಿಷಯ ಹೇಳಲೇ ಬೇಕು. ಬಟ್ಟೆ ತೊಳೆಯುವ ಡೋಬಿ, ಬೋಗಯ್ಯ…. ತನ್ನ ಸಾಬೂನನ್ನು ನಮ್ಮ ಮನಸ್ಸಿಗೂ ಸ್ವಲ್ಪ ಮುಟ್ಟಿಸುತ್ತಿದ್ದ ಮಹಾನುಭಾವ…….!! ಯಾಕೋ…!! ತನ್ನ ಸುಖ-ದುಃಖ ಗಳನ್ನು ಹಂಚಿಕೊಳ್ಳಲು ನಮ್ಮನ್ನು ಆರಿಸಿಕೊಂಡಿದ್ದ….. ನಮ್ಮಲ್ಲಿ ಏನೋ ಒಂದು ವಾತ್ಸಲ್ಯ. ಮನೆಯಲ್ಲಿ ಅಮ್ಮ ಹೇಳುವಂತಾ ಮಾತುಗಳನ್ನು ಆತ ಹೇಳುತ್ತಿದ್ದ. ನನಗೂ ಅಮ್ಮನ ಮಾತಿನಂತೆ ಅದು ಸ್ವಲ್ಪ ಸಸಾರವಾದದ್ದು ಸುಳ್ಳಲ್ಲ. ಅವನ ಮಗ ಶ್ರೀಕಂಠನನ್ನು ಶಂಕರ ತನ್ನ ಮ್ಯಾಜಿಕ್ ಸಹಾಯಕನಾಗಿ ಸ್ವೀಕರಿಸಿದ್ದ. ನಾವು ಮೈಸೂರು ಬಿಟ್ಟ ಮೇಲೂ ಕೆಲವು ಕಾಲ, ಶ್ರೀಕಂಠ ನಮ್ಮ ಮ್ಯಾಜಿಕ್ ಪ್ರವಾಸಕ್ಕೆ ಬರ್ತಾ ಇದ್ದ.
ಏನೇ ಆದರೂ ನನ್ನ ಕಾಲೇಜು ಜೀವನ… “ಸಿಲ್ಲಿ”ಯಾಗಿತ್ತು ಅಂತ ಇವತ್ತಿಗೂ ಕಾಣ್ತಾ ಇಲ್ಲ. ಅದೂ ಕೂಡಾ….. ಒಂದು ಕಾಲಘಟ್ಟದ ಅನುಭವ ಅಂದುಕೊಂಡಿದ್ದೇನೆ…… ಹೇಳಬಹುದಾದ್ದು ಇನ್ನೂ ಇದೆ……… ನೆನಪಿನ ಕೊಂಡಿ ಬೆಳಿತಾ ಇದೆ…… ಆದರೆ… ಸದ್ಯಕ್ಕೆ ಕೊರೆತಕ್ಕೊಂದು ವಿರಾಮ…. ಎಂತೆಂತವರನ್ನೆಲ್ಲ ನೋಡುತ್ತಾ.. ತನ್ನ ಪಾಡಿಗೆ ತಾನು ಗಟ್ಟಿಯಾಗಿ ನಿಂತಿರುವ.. ‘ಮಹಾ ರಜಾ’ ಕಾಲೇಜಿಗೆ.. ಸಾಷ್ಟಾಂಗ ಪ್ರಣಾಮ….
ಮೂರ್ತಿ ದೇರಾಜೆ ಕಳೆದ ೪೦ ವರ್ಷಗಳಿಂದ ಮಕ್ಕಳ ರಂಗಭೂಮಿಯಲ್ಲೇ ತನ್ನನ್ನು ತೊಡಗಿಸಿಕೊಂಡಿದ್ದಾರೆ. ನಂದ ಗೋಪಾಲ, ಪುಣ್ಯಕೋಟಿ ಗೋವಿನ ಹಾಡು, ಪೂರ್ವರಂಗದ ಕೊನೆಗೆ….., ಬೌಬೌ ಟ್ರ್ ಟ್ರ್, ಕಪ್ಪು ಕಾಗೆಯ ಹಾಡು, ಗುಡುಗುಡು ಗುಮ್ಮಟ ದೇವರು, ನಕ್ಷತ್ರಗಳಾಚೆ…, ಬಾ…ಕೃಷ್ಣ..ಒಮ್ಮೆ….ಕೊಳಲನೂದು…, ರಾಮಧಾನ್ಯ ಚರಿತೆ, ಮೌನದ ಮಾತು, ಸೋಮಾರಿ ಕಟ್ಟೆ, ಹುಣ್ಣಿಮೆ ಅಜ್ಜ ಬಂದಾ….., ಮತ್ತೆ ಹುಣ್ಣಿಮೆ ಬಂತು…, ಕೊಟ್ಟ ಮಾತಿನ ಸುತ್ತ ಮುತ್ತ…., ತಿಂಗಳ ಬೆಳಕು, ನರಿಯ ಗರ್ವಭಂಗ, ರಂಗಪ್ಪನ ಕತೆ, ಅಕ್ಷಯಪಾತ್ರೆ, ಮೂರು ಕೊಡಲಿಗಳು, ಬುದ್ದಿವಂತ ಮಂಗ, ಬುದ್ಧಿಹೀನ ಮೊಸಳೆ, ಬಕಾಸುರ ಬೆಟ್ಟ, ಅಜ್ಜ ಹೇಳಿದ ಕತೆ, ಕೃಷ್ಣನ ಕೊಳಲು, ಬೆಳೆದವರೆಂದರೆ.. ಸೇರಿದಂತೆ ಹಲವು ಇವರ ವಿನ್ಯಾಸ/ನಿರ್ದೇಶನ ದ ನಾಟಕಗಳು. ಕಪ್ಪು ಕಾಗೆಯ ಹಾಡು , ಗುಡು ಗುಡು ಗುಮ್ಮಟ ದೇವರು, ಮೌನದ ಮಾತು (ಮೈಸೂರು ರಂಗಾಯಣ ಪ್ರಕಟಿಸಿದ “ಕಲರವ” ಸಂಪುಟದಲ್ಲಿ), ಹವಿಗನ್ನಡ ನಾಟಕಗಳು (೫ ನಾಟಕಗಳ ಸಂಕಲನ), ಸೋಮಾರಿಕಟ್ಟೆ (ಹವಿಗನ್ನಡ ನಾಟಕ ಸಂಕಲನದಲ್ಲಿ), ಬರಿಯಕ್ಕಿ ದೋಸೆಯ ನೆವ್ನಲ್ಲಿ … (ಕತೆ – ಹವಿಗನ್ನಡ ಕಥಾಸಂಕಲನ “ಸುರಗಿ” ಯಲ್ಲಿ), ಬುದ್ಧಿವಂತ ಮಂಗ … ಬುದ್ಧಿಹೀನ ಮೊಸಳೆ (ಅಚ್ಚಿನಲ್ಲಿ -ನವಕರ್ಣಾಟಕ ಪ್ರಕಾಶನದ ಮಕ್ಕಳನಾಟಕ ಸಂಕಲನದಲ್ಲಿ) ಇವರ ಪ್ರಕಟಿತ ಕೃತಿಗಳು.