ಒಕಾರ-ರು ಮೂಲಭೂತವಾಗಿ ಒಬ್ಬ ಭಾವಗೀತಾತ್ಮಕ ಕವಿಯಾಗಿದ್ದರು. ಭಾಷೆಯ ಸಂಗೀತ ಹಾಗೂ ಲಯಬದ್ಧ ಸಾಮರ್ಥ್ಯಗಳಿಗೆ ಹಾಗೂ ತಮ್ಮ ಕಾವ್ಯಕ್ಕೆ ಸೂಕ್ತವಾದ ಭಾಷೆಯನ್ನು ಹುಡುಕಲು ಅವರು ವಿಶೇಷವಾಗಿ ಬದ್ಧರಾಗಿದ್ದರು. ಅವರ ಕಾವ್ಯ ಮತ್ತು ಗದ್ಯದಲ್ಲಿ ಧ್ವನಿ, ಸ್ವರ, ಮತ್ತು ವಿಭಕ್ತಿಯ ಏಕತೆಯನ್ನು ಕಾಣಬಹುದು.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ನೈಜೀರಿಯಾ ದೇಶದ ಕವಿ ಗೇಬ್ರಿಯಲ್ ಒಕಾರಾ-ರವರ (Gabriel Okara, 1921-2019) ಕಾವ್ಯದ ಕುರಿತ ಬರಹ ಹಾಗೂ ಅವರ ಕೆಲವು ಅನುವಾದಿತ ಕವಿತೆಗಳು ನಿಮ್ಮ ಓದಿಗೆ
ಗೇಬ್ರಿಯಲ್ ಒಕಾರಾ-ರನ್ನು ಆ್ಯಂಗ್ಲೊಫೋನ್ ಆಫ್ರಿಕಾದ (ಇಂಗ್ಲಿಷ್ ಭಾಷೆ ಮಾತನಾಡುವ ಆಫ್ರಿಕಾ ಖಂಡದ ದೇಶಗಳ ಸಮೂಹ) ಮೊದಲ ‘ಮಾಡರ್ನಿಸ್ಟ್’ ಕವಿ ಎಂದು ಪರಿಗಣಿಸಲಾಗಿದೆ. ಅವರು ತಮ್ಮ ಆರಂಭಿಕ ಪ್ರಾಯೋಗಿಕ ಕಾದಂಬರಿ, ದ ವಾಯ್ಸ್ (The Voice, 1964) ಮತ್ತು ದಿ ಫಿಶರ್‌ಮ್ಯಾನ್ಸ್ ಇನ್ವೊಕೇಶನ್ (The Fisherman’s Invocation, 1978) ಹಾಗೂ ದಿ ಡ್ರೀಮರ್, ಹಿಸ್ ವಿಷನ್ (The Dreamer, His Vision, 2005) ಸಂಕಲನಗಳಲ್ಲಿ ಪ್ರಕಟವಾದ ಪ್ರಶಸ್ತಿ ವಿಜೇತ ಕವನಗಳಿಗೆ ಹೆಸರುವಾಸಿಯಾಗಿದ್ದಾರೆ. ಒಕಾರಾ-ರವರು ತಮ್ಮ ಸಾಹಿತ್ಯ ಪಯಣದಲ್ಲಿ ಆಫ್ರಿಕನ್ ಚಿಂತನೆ, ಧರ್ಮ, ಜಾನಪದ ಮತ್ತು ಪ್ರತಿಮೆಗಳಿಂದ ಸ್ಪೂರ್ತಿ ಪಡೆದರು, ಮಾತ್ರವಲ್ಲ ತಮ್ಮ ಕಾವ್ಯದಲ್ಲಿ ಮತ್ತು ಗದ್ಯ ಬರಹಗಳಲ್ಲಿ ಈ ಎಲ್ಲದರ ಪ್ರಭಾವಗಳನ್ನು ಸೂಕ್ಷ್ಮವಾಗಿ, ಅರ್ಥವತ್ತಾಗಿ ಬಳಸಿಕೊಂಡರು. ಅವರ ಸಮಗ್ರ ಕವನಗಳ ಸಂಪುಟದ (Gabriel Okara: Collected Poems, 2016) ಸಂಪಾದಕರಾದ ಬ್ರೆಂಡಾ ಮಾರಿ ಓಸ್ಬೆ (Brenda Marie Osbey) ಅವರ ಪ್ರಕಾರ, “ಗೇಬ್ರಿಯಲ್ ಒಕಾರಾ ಅವರ ಮೊದಲ ಕವಿತೆಯ ಪ್ರಕಟಣೆಯೊಂದಿಗೆ ಇಂಗ್ಲಿಷ್‌ನಲ್ಲಿ ನೈಜೀರಿಯನ್ ಸಾಹಿತ್ಯ ಮತ್ತು ಇಂಗ್ಲಿಷ್‌ನಲ್ಲಿ ಆಧುನಿಕ ಆಫ್ರಿಕನ್ ಕಾವ್ಯ ನಿಜವಾಗಿಯೂ ಪ್ರಾರಂಭವಾದವು ಎಂದು ಹೇಳಬಹುದು.”
ನೈಜೀರಿಯಾದ ಬಯೆಲ್ಸಾ ರಾಜ್ಯದ ಬುಮೌಂಡಿ ಎಂಬ ಊರಿನಲ್ಲಿ 1921-ರಲ್ಲಿ ಜನಿಸಿದ ಒಕಾರಾರವರು, ಉಮುವಾಹಿಯಾದ ಸರಕಾರಿ ಕಾಲೇಜಿನಲ್ಲಿ ಹಾಗೂ ಯಾಬಾ ಉನ್ನತ ಕಾಲೇಜಿನಲ್ಲಿ ಓದಿದರು. ಎರಡನೆಯ ವಿಶ್ವಯುದ್ಧದ ಸಮಯದಲ್ಲಿ ಬ್ರಿಟಿಷ್ ರಾಯಲ್ ಏಯರ್ ಫೋರ್ಸ್-ನಲ್ಲಿ ಸೇರಿಕೊಳ್ಳಲು ಪ್ರಯತ್ನಿಸಿದರು, ಆದರೆ ಅವರಿಂದ ಪೈಲಟ್ ತರಬೇತಿಯನ್ನು ಮುಗಿಸಲಾಗಲಿಲ್ಲ. ಬದಲಾಗಿ ಅವರು ಕೆಲವು ಸಮಯ ಬ್ರಿಟಿಷ್ ಓವರ್ಸೀಸ್ ಏಯರ್ವೇಸ್ ಕಾರ್ಪೊರೇಶನ್-ನಲ್ಲಿ ಕೆಲಸ ಮಾಡಿದರು.
1945-ರಲ್ಲಿ ಒಕಾರಾ-ರವರು ವಸಾಹತುಶಾಹಿ ನೈಜೀರಿಯಾದ ಸರಕಾರಿ ಸ್ವಾಮ್ಯದ ಪ್ರಕಾಶನ ಕಂಪನಿಯಲ್ಲಿ ಪ್ರಿಂಟರ್ ಮತ್ತು ಬುಕ್‌ಬೈಂಡರ್ ಆಗಿ ಕೆಲಸವನ್ನು ಕಂಡುಕೊಂಡರು. ಒಂಬತ್ತು ವರ್ಷಗಳ ಕಾಲ ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಾ, ಆ ಸಮಯದಲ್ಲಿ ಅವರು ಬರೆಯಲು ಪ್ರಾರಂಭಿಸಿದರು. ಮೊದಲಿಗೆ ಅವರು ತಮ್ಮ ಪಂಗಡದ ‘ಇಜಾವ್’ (Ijaw) ಭಾಷೆಯಿಂದ ಇಂಗ್ಲಿಷ್‌ಗೆ ಕವನಗಳನ್ನು ಅನುವಾದಿಸಿದರು ಮತ್ತು ಸರಕಾರಿ ರೇಡಿಯೊಗಾಗಿ ಲೇಖನಗಳನ್ನು ಬರೆದರು. 1949-ರಲ್ಲಿ ಅವರು ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾನಿಲಯದಲ್ಲಿ (Northwestern University) ಪತ್ರಿಕೋದ್ಯಮದ ಅಧ್ಯಯನ ಮಾಡಿದರು ಮತ್ತು ನೈಜೀರಿಯಾದ ಅಂತರ್ಯುದ್ಧ (1967-70) ಪ್ರಾರಂಭವಾಗುವ ಮೊದಲು ಪೂರ್ವ ನೈಜೀರಿಯಾದ ಸರಕಾರದಲ್ಲಿ ಮಾಹಿತಿ ಅಧಿಕಾರಿಯಾಗಿ ಕೆಲಸ ಮಾಡಿದರು. ಚಿನುವಾ ಅಚಿಬೆ-ಯವರ ಜೊತೆಯಲ್ಲಿ, ಒಕಾರ-ರವರು 1969-ರ ಬಹುಭಾಗ ಸ್ವತಂತ್ರ ಬಯಾಫ್ರಾ ರಾಷ್ಟ್ರಕ್ಕಾಗಿ ಸಂಚಾರಿ ರಾಯಭಾರಿಯಾಗಿದ್ದರು. 1972-ರಿಂದ 1980-ರವರೆಗೆ ಅವರು ಪೋರ್ಟ್ ಹಾರ್ಕೋರ್ಟ್‌ನಲ್ಲಿರುವ ರಿವರ್ಸ್ ಸ್ಟೇಟ್ ಪಬ್ಲಿಷಿಂಗ್ ಹೌಸ್‌ನ ನಿರ್ದೇಶಕರಾಗಿದ್ದರು.
ಒಕಾರಾ ಅವರ ಕಾವ್ಯವು ವೈರುಧ್ಯಗಳ ಸರಣಿಯನ್ನು ಆಧರಿಸಿದೆ; ಈ ಸರಣಿಯಲ್ಲಿ ಸಂಕೇತಗಳು ಪರಸ್ಪರ ವಿರುದ್ಧವಾಗಿದ್ದುಕೊಂಡು ಸಮತೋಲನವನ್ನು ಕಾಪಾಡಿಕೊಂಡು ಬರುತ್ತವೆ. ಜೀವನ ಮತ್ತು ಮೃತ್ಯುಗಳಂತಹ ಸಾಮಾನ್ಯ ಅನುಭವದ ವಿಪರೀತಗಳನ್ನು ಸಮನ್ವಯಗೊಳಿಸುವ ಅಗತ್ಯ ಅವರ ಕಾವ್ಯದ ಮುಖ್ಯ ಧ್ಯೇಯವಾಗಿದೆ. ದೈನಂದಿನ ವಾಸ್ತವದಿಂದ ಸಂತೋಷದ ಕ್ಷಣಕ್ಕೆ ತಲುಪಿ ಮತ್ತೆ ವಾಸ್ತವಕ್ಕೆ ಹಿಂತಿರುಗುವಂತಹ ಒಂದು ವೃತ್ತಾಕಾರದ ಚಲನೆಯನ್ನು ಅವರ ಪ್ರಾತಿನಿಧಿಕ ಕವನಗಳು ಹೊಂದಿದೆ.
ಅವರ ಮೊದಲ ಕಾದಂಬರಿ, The Voice (1964), ಒಂದು ಗಮನಾರ್ಹವಾದ ಭಾಷಾ ಪ್ರಯೋಗವಾಗಿದೆ. ಇದರಲ್ಲಿ ಒಕಾರಾ-ರವರು ಅವರ ಪಂಗಡದ ಇಜಾವ್ (Ijaw) ಭಾಷೆಯಿಂದ ನೇರವಾಗಿ ಇಂಗ್ಲಿಷ್-ಗೆ ಭಾಷಾಂತರಿಸಿದರು. ಆಫ್ರಿಕನ್ ಕಲ್ಪನೆಗಳು ಮತ್ತು ರೂಪಕಗಳಿಗೆ ಅಕ್ಷರಶಃ ಅಭಿವ್ಯಕ್ತಿ ನೀಡಲು ಇಜಾವ್ ವಾಕ್ಯರಚನೆ ಮತ್ತು ಪದವಿನ್ಯಾಸವನ್ನು ಇಂಗ್ಲಿಷ್ ಭಾಷೆಗೆ ಹೊರಿಸಿದರು. ಈ ಕಾದಂಬರಿಯು ಸಾಂಪ್ರದಾಯಿಕ ಆಫ್ರಿಕನ್ ಸಂಸ್ಕೃತಿ ಮತ್ತು ಪಾಶ್ಚಿಮಾತ್ಯ ಭೌತವಾದದ ಶಕ್ತಿಗಳು ಸ್ಪರ್ಧಿಸುವಂತಹ ಒಂದು ಸಾಂಕೇತಿಕ ಭೂದೃಶ್ಯವನ್ನು ಸೃಷ್ಟಿಸುತ್ತದೆ. ಈ ಕಾದಂಬರಿಯ ದುರಂತ ನಾಯಕ, ಒಕೊಲೊ, ಒಬ್ಬ ಸ್ವತಂತ್ರ ವ್ಯಕ್ತಿ ಹಾಗೂ ಒಬ್ಬ ಸಾರ್ವತ್ರಿಕ ವ್ಯಕ್ತಿ ಕೂಡ, ಮತ್ತು ಅವನು ಹುಡುಕುತ್ತಿರುವ ಅಲ್ಪಕಾಲಿಕ “ಇದು” ಅಸಂಖ್ಯ ಅತೀಂದ್ರಿಯ ನೈತಿಕ ಮೌಲ್ಯಗಳನ್ನು ಪ್ರತಿನಿಧಿಸಬಹುದು. ಈ ನಾಯಕನ ಆಂತರಿಕ ಉದ್ವೇಗಗಳ ನುರಿತ ಚಿತ್ರಣವು ಒಕಾರಾರನ್ನು ಅನೇಕ ನೈಜೀರಿಯನ್ ಕಾದಂಬರಿಕಾರರಿಂದ ಪ್ರತ್ಯೇಕಿಸಿತು.
ಒಕಾರ-ರು ಮೂಲಭೂತವಾಗಿ ಒಬ್ಬ ಭಾವಗೀತಾತ್ಮಕ ಕವಿಯಾಗಿದ್ದರು. ಭಾಷೆಯ ಸಂಗೀತ ಹಾಗೂ ಲಯಬದ್ಧ ಸಾಮರ್ಥ್ಯಗಳಿಗೆ ಹಾಗೂ ತಮ್ಮ ಕಾವ್ಯಕ್ಕೆ ಸೂಕ್ತವಾದ ಭಾಷೆಯನ್ನು ಹುಡುಕಲು ಅವರು ವಿಶೇಷವಾಗಿ ಬದ್ಧರಾಗಿದ್ದರು. ಅವರ ಕಾವ್ಯ ಮತ್ತು ಗದ್ಯದಲ್ಲಿ ಧ್ವನಿ, ಸ್ವರ, ಮತ್ತು ವಿಭಕ್ತಿಯ ಏಕತೆಯನ್ನು ಕಾಣಬಹುದು. ಅವರ ದೀರ್ಘವಾದ, ನಿರೂಪಣೆಯ ಕವನಗಳು ಕೂಡ ಭಾಷೆಯ ಪರಿವರ್ತಕ ಶಕ್ತಿಗಳಿಗೆ ಸೂಕ್ಷ್ಮವಾಗಿ ಹೊಂದಿಕೊಳ್ಳುತ್ತವೆ ಮತ್ತು ನಿರ್ದಿಷ್ಟವಾದ ಭಾವಗೀತಾತ್ಮಕ ಉಚ್ಚಾರಣೆಯಿಂದ ಗುರುತಿಸಲ್ಪಡುತ್ತವೆ. ಈ ಪರಿಣಾಮವನ್ನು ಪಡೆಯಲಿಕ್ಕೆ ಅವರ ಕವನಗಳು ಅನೇಕ ಸಲ ತಮ್ಮ ಧ್ವನಿಗಳ ಹಾಗೂ ಸಾಲುಗಳ ಘಟಕಗಳಲ್ಲಿ ಆದಿಪ್ರಾಸ ಹಾಗೂ ಲಯಬದ್ಧವಾದ ಪಠನಗಳ ಪುನರಾವರ್ತನೆಗಳನ್ನು ಬಳಸಿವೆ.
ಅವರ ವೃತ್ತಿಜೀವನದುದ್ದಕ್ಕೂ, ನೈಜರ್ ಡೆಲ್ಟಾದ ಇಜಾವ್ ಪಂಗಡದ ಜನರ ದಂತಕಥೆಗಳು, ಲಯಗಳು ಮತ್ತು ಸಂಪ್ರದಾಯಗಳು ಒಕಾರಾ-ರ ಸಾಹಿತ್ಯಕ್ಕೆ ಗಾಢವಾದ ಸ್ಪೂರ್ತಿ ನೀಡಿದೆ. ವಾಸ್ತವವಾಗಿ, ಅವರ ಸುತ್ತಲೂ ಅಪ್ಪಳಿಸುತ್ತಿದ್ದ ಇತಿಹಾಸದ ಅಲೆಗಳು ಕೂಡ ಅವರ ಕಾವ್ಯಕ್ಕೆ ತಮ್ಮ ಪ್ರಾಥಮಿಕ ವಿಷಯಗಳು ನೀಡಿದವು. ಆಧುನಿಕತೆ, ಪುರಾಣ ಮತ್ತು ನೈಸರ್ಗಿಕ ಪ್ರಪಂಚದೊಂದಿಗಿನ ಅವರ ಆಳವಾದ ಸಂಬಂಧಗಳ ಸಂಧಿಸ್ಥಾನದಲ್ಲಿ ಅವರ ಕಾವ್ಯದ ಮಹತ್ವ ಹುಟ್ಟಿಕೊಂಡಿತು. 1953-ರಲ್ಲಿ, ಅವರು ತಮ್ಮ ಕವಿತೆ ‘ದ ಕಾಲ್ ಆಫ್ ದ ರಿವರ್ ನೂನ್’-ಗಾಗಿ ನೈಜೀರಿಯನ್ ಫೆಸ್ಟಿವಲ್ ಆಫ್ ಆರ್ಟ್ಸ್‌ನಲ್ಲಿ ಅತ್ಯುತ್ತಮ ಆಲ್-ರೌಂಡ್ ಕವನ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದರು. ಈ ಕವನವನ್ನು ಬ್ರೆಂಡಾ ಮಾರಿ ಓಸ್ಬೆ ಅವರು, “ನೈಜರ್ ನದಿ ಮುಖಜ ಭೂಮಿಯ ಏಕೀಕೃತ ನೈಸರ್ಗಿಕ ಮತ್ತು ಮಾನವ ಆವಾಸಸ್ಥಾನದ ಮರುಸ್ಥಾಪನೆ ಮತ್ತು ರಕ್ಷಣೆಗಾಗಿರುವ ಒರೆಗಲ್ಲು, ಪ್ರಾರ್ಥನೆ, ಪ್ರತಿಭಟನೆ ಮತ್ತು ಭಾವಗೀತೆ,” ಎಂದು ವಿವರಿಸಿದ್ದಾರೆ. ತಮ್ಮ ಸಾಹಿತ್ಯಜೀವನದ ಆರಂಭದಲ್ಲೇ ರಾಷ್ಟ್ರೀಯ ಪ್ರಶಸ್ತಿ ಗಳಿಸಿದ ಒಕಾರಾ, ಮುಂದೆ ಹೋಗುತ್ತಾ 1979-ರಲ್ಲಿ The Fisherman’s Invocation ಕವನ ಸಂಕಲನಕ್ಕಾಗಿ Commonwealth Poetry Prize, 2005-ನಲ್ಲಿ The Dreamer, His Vision ಕವನ ಸಂಕಲನಕ್ಕಾಗಿ NLNG Nigeria Prize for Literature, ಹಾಗೂ ಹಲವಾರು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಗೌರವಗಳಿಂದ ಸನ್ಮಾನಿತರಾಗಿದ್ದಾರೆ. 2017-ರಲ್ಲಿ ನೈಜೀರಿಯಾದ ಯೂನಿವರ್ಸಿಟಿ ಆಫ಼್ ಪೋರ್ಟ್ ಹಾರ್ಕೋರ್ಟ್-ನಲ್ಲಿ ಒಕಾರಾ-ರವರ ಗೌರವಾರ್ಥ Gabriel Okara Literary Festival ಆಯೋಜಿಸಲಾಯಿತು. ಗೇಬ್ರಿಯಲ್ ಒಕಾರಾ-ರವರ ಸಮಗ್ರ ಕವನಗಳ ಸಂಪುಟ (Gabriel Okara: Collected Poems, University of Nebraska Press) 2016-ರಲ್ಲಿ ಪ್ರಕಟಿಸಲಾಯಿತು.
ಗೇಬ್ರಿಯಲ್ ಒಕಾರ-ರವರ ಪ್ರಖ್ಯಾತ ಹಾಗೂ ಹಲವು ಸಂಗ್ರಹಗಳಲ್ಲಿ ಕಂಡು ಬರುವ Piano and Drums, Once Upon a Time, ಹಾಗೂ The Mystic Drum ಕವನಗಳ ಜತಗೆ ಇನ್ನೂ ಐದು ಕವನಗಳನ್ನು ನಾನು ಇಲ್ಲಿ ಕನ್ನಡ ಭಾಷೆಗೆ ಅನುವಾದಿಸಿರುವೆ.
೧
ಬಕೆಟಿನಲ್ಲಿ ಚಂದ್ರಮ
ಮೂಲ: Moon in the Bucket
ನೋಡಿರಿ!
ನೋಡಿರಲ್ಲಿ
ಆ ಬಕೆಟಿನಲ್ಲಿ
ತುಕ್ಕು ಹಿಡಿದ ಬಕೆಟಿನಲ್ಲಿ
ಕೊಳೆ ನೀರು ತುಂಬಿದ ಬಕೆಟಿನಲ್ಲಿ
ನೋಡಿರಿ!
ಒಂದು ಹೊಳೆಯುವ ತಟ್ಟೆ ತೇಲುತಿದೆ —
ಚಂದ್ರಮ, ನಲಿಯುತ್ತಿದ್ದಾನೆ ರಾತ್ರಿಯ ಮಂದ ಗಾಳಿಯಲಿ
ನೋಡಿರಿ! ಗೋಡೆಯಾಚೆಯಿಂದ ಲಕ್ಷ ಲಕ್ಷ ದ್ವೇಷಗಳ
ಹೊತ್ತು ಬೊಬ್ಬೆ ಹೊಡೆಯುವವರೇ,
ನೋಡಿರೀ ನಲಿಯುವ ಚಂದ್ರಮನನು,
ಈ ಬಕೆಟ್-ಕಾಳಗದ ಕೊಳೆಯ ಮಬ್ಬಿನಲಿ ಕೂಡ
ಅಕಳಂಕವಾಗಿರುವ ಶಾಂತತೆ ಅದು.
೨
ಪಿಯಾನೋ ಮತ್ತು ಡೋಲು
ಮೂಲ: Piano and Drums
ನದಿತೀರವೊಂದರಲ್ಲಿ ನಸುಕು ಬಿರಿದಾಗ,
ಅಡವಿಯಲ್ಲಿ ಅತೀಂದ್ರಿಯ ತಾಳಗಳ ಮೂಲಕ
ತಂತಿಸಂದೇಶ ಕಳಿಸುತ್ತಿರುವ ಡೋಲಿನ ಸದ್ದು ಕೇಳಿಸುತ್ತೆ,
ಒತ್ತಾಯಿಸುವ ಅವಸರದ ತಾಳ,
ನೆತ್ತರುಸೂಸುವ ಮಾಂಸದಂತೆ ಹಸಿಯಾದ ತಾಳ,
ಪ್ರಾಕ್ತನ ಯೌವನದ ಬಗ್ಗೆ,
ಆರಂಭದ ಬಗ್ಗೆ ಮಾತನಾಡುತ್ತೆ,
ಎರಗಲು ಸನ್ನದ್ಧವಾದ ಪ್ಯಾಂಥರನ್ನು ನೋಡುವೆ,
ಇನ್ನೇನು ನೆಗೆದೇಬಿಡುತ್ತೆ ಸಿಡಿಗುಟ್ಟುವ ಚಿರತೆ,
ಮುದುರಿ ಕೂತಿರುವರು ಬಚ್ಚಿಕೊಂಡು
ಬೇಟೆಗಾರರು ಈಟಿಗಳನ್ನು ಏರಿಸಿ;
ನನ್ನ ನೆತ್ತರು ಅಲೆಯೇಳುತ್ತೆ, ಪ್ರವಾಹವಾಗುತ್ತೆ,
ವರುಷಗಳನ್ನು ಕೆಡವಿಹಾಕುತ್ತೆ, ಮತ್ತೆ
ಹಠಾತ್ತನೆ ನಾನು ನನ್ನಮ್ಮನ
ಮಡಿಲ ಹಸಿಗೂಸಾಗುತ್ತೇನೆ;
ಹಠಾತ್ತನೆ ನಾನು ಮಾಟವಿಲ್ಲದ
ಸಾದಾ ರಸ್ತೆಗಳಲ್ಲಿ ನಡೆದಾಡುತ್ತಿದ್ದೇನೆ,
ಒರಟಾದ, ಓಡಾಡುವ ಪಾದಗಳ ನಗ್ನ ಶಾಖದಿಂದ,
ಹಸಿರೆಲೆಗಳಲ್ಲಿ ತಡಕಾಡುವ ಹೃದಯಗಳಿಂದ,
ಕಾಡುಕುಸುಮಗಳ ಮಿಡಿತಗಳಿಂದ
ತಯಾರಾದ ರಸ್ತೆಗಳು.
ಆಗ ನನಗೆ ಪಿಯಾನೋದ ತನಿ ವಿಲಾಪವೊಂದು ಕೇಳಿಸುತ್ತೆ,
ಕಣ್ಣೀರಿನಿಂದ ಉತ್ತಗೆರೆಯೆಳೆದ *ಕನ್ಚೇರ್ಟೋದಲ್ಲಿ
ಸಂಕೀರ್ಣ ವಿಧಾನಗಳ ಬಗ್ಗೆ ಮಾತನಾಡುತ್ತೆ;
ಮನವೊಲಿಸುವ ಅವರೋಹಣದಲ್ಲಿ,
ಸಂವಾದಿಸ್ವರದಲ್ಲಿ, ಆರೋಹಣದಲ್ಲಿ,
ದೂರ ದೂರದ ನಾಡುಗಳ ಬಗ್ಗೆ,
ಹೊಸ ಕ್ಷಿತಿಜಗಳ ಬಗ್ಗೆ ಮಾತನಾಡುತ್ತೆ.
ಆದರೆ, ತನ್ನದೇ ಸಂಕೀರ್ಣತೆಯ ಚಕ್ರವ್ಯೂಹದಲ್ಲಿ
ದಾರಿತಪ್ಪಿ ಅದು ಗೀತಾಂಗವೊಂದರ ಮಧ್ಯದಲ್ಲಿ
ಕಠಾರಿಯ ತುದಿಯೆದುರಿಗೆ ನಿಂತುಬಿಡುತ್ತೆ.
ಮತ್ತೆ ನಾನು ಆ ನದಿತೀರದಲ್ಲಿ ಗತಕಾಲದ
ಮುಂಜಾನೆಯ ಮಂಜಿನೊಳಗೆ
ದಾರಿತಪ್ಪಿ ಅಲೆದಾಡುತ್ತಿರುವೆನು,
ಅಡವಿಯ ಡೋಲಿನ ಅತೀಂದ್ರಿಯ ತಾಳದೊಳಗೆ,
ಪಿಯಾನೋದ ಕನ್ಚೇರ್ಟೋದೊಳಗೆ.
* Concerto (ಕನ್ಚೇರ್ಟೋ): Western Classical Music – ಪಾಶ್ಚಿಮಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಕಂಡುಬರುವ ಏಕವಾದ್ಯಗೀತಬಂಧ; ವಾದ್ಯಮೇಳದೊಡನೆ ಬಾರಿಸುವ, ಒಂದು ತನಿವಾದ್ಯಕ್ಕೆ ಅನುಕೂಲಿಸುವ, ಸಾಮಾನ್ಯವಾಗಿ ಮೂರು ಗತಿಗಳ, ಸಂಗೀತ ರಚನೆ.
೩
ಜೂಜುಗಾರ
ಮೂಲ: The Gambler
ಅಗಲವಾಗಿ ತೆರೆದೆ ನನ್ನ ಅಂಗೈಯನ್ನು,
ತೋರಿದವು ಐದು ದಿಕ್ಕುಗಳ ಕಡೆ
ನನ್ನೈದು ಬೆರಳುಗಳು,
ಇಟ್ಟು ದಾಳವನ್ನ
ಆ ಆಕಾರದ ಮಧ್ಯದಲ್ಲಿ
ಮುಚ್ಚಿದೆ ನನ್ನ ಅಂಗೈಯನ್ನ,
ಐದು ದಿಕ್ಕುಗಳಿಂದ ಬೇಡಿದೆ ನಾನು
ಅದೃಷ್ಟವ ಕರೆಯುತ್ತಾ ಆರಿಗಾಗಿ!
ತುಟಿಗಳ ಹತ್ತಿರ ಅಂಗೈ ಏರಿಸಿ
ಉಸುರಿದೆ ಅದಕ್ಕೆ ಮಂತ್ರದ ಪದಗಳ;
ತುಟಿಗಳ ಹತ್ತಿರ ಅಂಗೈ ಏರಿಸಿ
ಊದಿದೆ ಉಸಿರನ್ನು ಅಂಗೈ ಮೇಲೆ;
ತುಟಿಗಳ ಹತ್ತಿರ ಅಂಗೈ ಏರಿಸಿ
ಅದೃಷ್ಟವ ಬೇಡಿದೆ ಆರಿಗಾಗಿ!
ಬೆವರುತ್ತಿರುವ ನನ್ನ ನೆರಳು,
ಭಾವರಸಗಳ ತೊಟ್ಟಿಕ್ಕುತ್ತಾ
ಕಂಪಿಸುತ್ತಿರುವ ನನ್ನ ಒಳಲು,
ತಲೆಯ ಮೇಲೆ ದಾಳವ ಕುಲುಕಿದೆ ಏಳು ಸಲ
ಕಣ್ಣುಮುಚ್ಚಿ ಬೀಳಲು ಬಿಟ್ಟೆ ನನ್ನ ಅಂಗೈಯಿಂದ!
ಮೆಲ್ಲನೆ ಕಣ್ಣುಗಳ ತೆರೆದು
ನೋಡಿದೆ ನಾನು,
ನೇತಾಡುತ್ತಿದೆ ದಾಳ
ಭೂಮಿ ಆಕಾಶಗಳ ನಡುವೆ,
ನಲಿಯುತಿದೆ,
ನನ್ನ ಕಣ್ಣೆದುರು ಆಗ
ಆಕಾಶದಿಂದ ಇಳಿದು ಬಂತು ಕೈಯೊಂದು
ಕಸಿದುಕೊಂಡು ಹೋಯಿತು ದಾಳವನ್ನು.
೪
ಅಡ್ಹಿಯಾಂಬೊ
ಮೂಲ: Adhiambo
ಹಲವಾರು ದನಿಗಳು ಕೇಳಿಬರುತ್ತಿವೆ ನನಗೆ
ತಲೆಕೆಟ್ಟವನಿಗೆ ಕೇಳಿಬರುತ್ತವೆ ಅಂತಾರಲ್ಲ ಹಾಗೆ;
ಮರಗಳು ಮಾತನಾಡುವುದು ಕೇಳಿಬರುತ್ತಿದೆ ನನಗೆ
ಮಂತ್ರವೈದ್ಯನಿಗೆ ಕೇಳಿಬರುತ್ತದೆ ಅಂತಾರಲ್ಲ ಹಾಗೆ.
ಇರಬಹುದೇನೊ
ನಾನೊಬ್ಬ ತಲೆಕೆಟ್ಟಂವ
ನಾನೊಬ್ಬ ಮಂತ್ರವೈದ್ಯ.
ನಾನೊಬ್ಬ ಹುಚ್ಚನೇ
ಇರಬಹುದೇನೊ, ಏಕೆಂದರೆ
ಆ ದನಿಗಳು ನನ್ನನ್ನು ಕರೆಯುತ್ತಿವೆ,
ಅರ್ಧರಾತ್ರಿಯ ಚಂದ್ರನೋಟದಿಂದ,
ನನ್ನ ಮೇಜಿನ ಮೌನದಿಂದ
ನನ್ನನ್ನು ಏಳೆನ್ನುತ್ತಿವೆ,
ಅಲೆತಲೆಗಳ ಮೇಲೆ ನಡೆಯುತ್ತಾ
ಸಮುದ್ರವ ದಾಟೆನ್ನುತ್ತಿವೆ.
ಇರಬಹುದೇನೊ
ನಾನೊಬ್ಬ ಮಂತ್ರವೈದ್ಯ
ಜೀವರಸಗಳ ಮಾತು ಕೇಳಿಸಿಕೊಳ್ಳುವಂವ,
ಮರಗಳ ಒಳಗೆ ನೋಡುವಂವ;
ಆದರೆ ಬಿನ್ನವಿಸುವ ಶಕ್ತಿ ಕಳಕೊಂಡಂವ.
ಆದರೆ ಆ ದನಿಗಳು ಆ ಮರಗಳು
ಈಗ ಹೆಸರಕ್ಷರಗಳಾಗಿವೆ,
ಚಂದ್ರಮುಖದ ಮೇಲೆ ಅಡ್ಡಲಾಗಿ
ಮೌನಕಡೆದ ಆಕಾರವೊಂದು
ನಡೆಯುತ್ತಿದೆ, ಭೂಖಂಡಗಳ,
ಸಮುದ್ರಗಳ ಮೇಲೆ ಕಾಲಿಡುತ್ತಾ.
ಮತ್ತೆ ನಾನು ಕೈಯೆತ್ತಿದೆ –
ನನ್ನ ನಡುಗುವ ಕೈಯನ್ನು, ಕರವಸ್ತ್ರದಂತೆ,
ಹೃದಯವನ್ನು ಬಿಗಿಹಿಡಿದು
ನಾನು ಕೈಬೀಸಿದೆ
ಮತ್ತೂ ಮತ್ತೂ ಕೈಬೀಸಿದೆ
ಆದರೆ ಅವಳು
ಮುಖ ತಿರುಗಿಸಿಬಿಟ್ಟಳು
ಆಚೆಕಡೆಗೆ.
‘ಅಡ್ಹಿಯಾಂಬೊ’ ಗೇಬರ್ರಿಯಲ್ ಒಕಾರ-ರ ಮೂರನೆಯ ಹಾಗೂ ಕೊನೆಯ ಮಡದಿಯ ಹೆಸರಾಗಿತ್ತು. ಅವರ ಪೂರ್ಣ ಹೆಸರು ‘ಅಡ್ಹಿಯಾಂಬೊ ಕಾರ್ಮೈಕಲ್ ಒಕಾರ.’ ಇವರು ಆಫ಼್ರಿಕನ್-ಅಮೇರಿಕನ್ ಹಾಗೂ ಜಮೈಕಾದ ಆಫ಼್ರಿಕನ್ ಮೂಲದವರಾಗಿದ್ದರು. 1983-ರಲ್ಲಿ ಇವರು ನೈಜೀರಿಯಾದಲ್ಲಿ ನಿಧನರಾದರು.
‘ಅಡ್ಹಿಯಾಂಬೊ’ ಪದದ ಅರ್ಥವೇನು ಅಂತ ಹುಡುಕಿದಾಗ ‘ಸುರ್ಯಾಸ್ತದ ನಂತರ ಹುಟ್ಟಿದ; ಸಾಯಂಕಾಲ ಹುಟ್ಟಿದ’ ಅಂತ ತಿಳಿದು ಬಂತು. ಈ ಪದವನ್ನು ಆಫ್ರಿಕಾದಲ್ಲಿ ಹೆಣ್ಣುಮಕ್ಕಳಿಗೆ ಹೆಸರಾಗಿ ಇಡುತ್ತಾರೆ.
೫
ಒಂದಾನೊಂದು ಕಾಲದಲ್ಲಿ
ಮೂಲ: Once Upon a Time
ಒಂದಾನೊಂದು ಕಾಲದಲ್ಲಿ, ಕಂದಾ,
ಜನರ ನಗು ಅವರ ಹೃದಯಗಳಿಂದ ಹೊಮ್ಮುತ್ತಿತ್ತು,
ಅವರ ನಗು ಅವರ ಕಣ್ಣುಗಳಿಂದ ಹೊಮ್ಮುತ್ತಿತ್ತು;
ಆದರೆ ಈಗ ಬರೀ ಹಲ್ಲುಗಳಿಂದ ನಗುತ್ತಾರೆ,
ನಗುವಾಗ ಅವರ ಹಿಮಗಡ್ಡೆಯಂತಹ ತಣ್ಣನೆಯ
ಭಾವಹೀನ ಕಣ್ಣುಗಳು ಹುಡುಕಾಡುತ್ತವೆ ನನ್ನ ನೆರಳ ಹಿಂದೆ.
ಹಿಂದೊಂದು ಕಾಲವಿತ್ತು, ನಿಜಕ್ಕೂ,
ಜನರು ಹೃತ್ಪೂರ್ವಕವಾಗಿ ಕೈಕುಲುಕುತ್ತಿದ್ದರು;
ಆ ಕಾಲ ಹೋಗಿಬಿಟ್ಟಿದೆ, ಕಂದಾ.
ಈಗ ಹೃದಯವಿಲ್ಲದೇನೇ ಕೈಕುಲುಕುತ್ತಾರೆ,
ಕೈಕುಲುಕುವಾಗ ಅವರ ಎಡಗೈಗಳು
ತಡಕಾಡುತ್ತವೆ ನನ್ನ ಖಾಲಿ ಕಿಸೆಗಳ ಒಳಗೆ.
“ನಿಮ್ಮ ಮನೆಯೆಂದೇ ತಿಳಿದುಕೊಳ್ಳಿ!” “ಮತ್ತೊಮ್ಮೆ ಖಂಡಿತ ಬನ್ನಿ;”
ಅಂತ ಹೇಳುವರು, ಮತ್ತೆ ನಾನು ಮತ್ತೊಮ್ಮೆ ಹೋದಾಗ,
ನನ್ನ ಮನೆಯೆಂದೇ ತಿಳಿದುಕೊಂಡಾಗ,
ಒಂದು ಸಲ, ಎರಡು ಸಲ,
ಇರುವುದಿಲ್ಲ ಮೂರನೆಯ ಸಲ –
ಅಷ್ಟರಲ್ಲಿ ನನ್ನ ಮುಖಕ್ಕೆ ಬಾಗಿಲುಗಳು
ಬಡಿಯುವುದನ್ನು ಕಾಣುವೆ.
ಹೀಗೆ, ನಾನು ಬಹಳಷ್ಟು ವಿಷಯಗಳ ಕಲಿತಿರುವೆ, ಕಂದಾ.
ನಾನು ಹಲವು ಮುಖಗಳನ್ನು ಧರಿಸಲು ಕಲಿತಿರುವೆ,
ಅರಿವೆಗಳ ಹಾಗೆ – ಮನೆಯ ಮುಖ, ಆಫೀಸಿನ ಮುಖ,
ಬೀದಿಯ ಮುಖ, ಆತಿಥೇಯನ ಮುಖ, ವಿನೋದಕೂಟದ ಮುಖ,
ಆಯಾ ಮುಖಕ್ಕೆ ಸರಿಹೊಂದುವ ನಗೆಗಳೊಂದಿಗೆ,
ಭಾವಚಿತ್ರಕ್ಕೆ ಕೊಡುವ ಸಿದ್ಧ ನಗೆಗಳ ಹಾಗೆ.
ಮತ್ತೆ ನಾನು ಇದನ್ನೂ ಕಲಿತಿರುವೆ,
ನನ್ನ ಹಲ್ಲುಗಳಿಂದ ಮಾತ್ರ ನಗಲು,
ಮನಸ್ಸಿಲ್ಲದೆ ಕೈಕುಲುಕಲು.
ನಾನು ‘ಹೋಗಿಬನ್ನಿ’ ಅಂತ ಹೇಳಲು ಕಲಿತಿರುವೆ,
ಮನಸ್ಸಿನಲ್ಲಿ ‘ಹೋದರೆ ಸಾಕಪ್ಪ’ ಅಂತ ಅನಿಸಿದಾಗಲೂ;
‘ನಿಮ್ಮನ್ನು ಕಂಡು ಖುಷಿಯಾಯಿತು’ ಅಂತ ಹೇಳಲು ಕಲಿತಿರುವೆ,
ನನಗೆ ಖುಷಿಯೇನೂ ಆಗದೇನೇ;
‘ನೀವು ಸೊಗಸಾಗಿ ಮಾತಾಡುತ್ತೀರಿ’ ಅಂತ ಹೇಳಲು ಕಲಿತಿರುವೆ,
ಅವರ ಮಾತುಗಳು ಚಿಟ್ಟುಹಿಡಿಸಿದಾಗಲೂ.
ಆದರೆ, ಈ ಮಾತಂತೂ ನಿಜ, ಕಂದಾ,
ನಾನು ಹಿಂದಿದ್ದವನಂತೆ ಆಗಲು ಬಯಸುವೆ,
ನಾನು ನಿನ್ನ ಹಾಗೆ ಇದ್ದಂತೆ.
ನಾನು ಕಲಿತ ಈ ಎಲ್ಲಾ ಮಾತಡಗಿಸುವ
ವಿಷಯಗಳನ್ನು ಮರೆಯಲು ಬಯಸುವೆ.
ಎಲ್ಲಕಿಂತ ಹೆಚ್ಚಾಗಿ, ನಾನು ನಗುವುದು
ಹೇಗೆಂದು ಮತ್ತೆ ಕಲಿಯಲು ಬಯಸುವೆ,
ಏಕೆಂದರೆ, ಕನ್ನಡಿಯಲ್ಲಿ ಕಾಣಿಸುವ ನನ್ನ ನಗು
ನನ್ನ ಹಲ್ಲುಗಳನ್ನು ಮಾತ್ರ ತೋರಿಸುತ್ತೆ,
ಹಾವಿನ ಬಿಚ್ಚಿದ ವಿಷ ಹಲ್ಲುಗಳ ಹಾಗೆ.
ಹೇಳಿಕೊಡು ನನಗೆ, ಕಂದಾ,
ನಗುವುದು ಹೇಗೆಂದು; ತೋರಿಸು ನನಗೆ
ನಾನು ಹೇಗೆ ನಗುತ್ತಿದ್ದೆ, ನಸುನಗುತ್ತಿದ್ದೆ
ನಿನ್ನ ಹಾಗೆ ಇದ್ದಾಗ ನಾನು,
ಒಂದಾನೊಂದು ಕಾಲದಲ್ಲಿ.
೬
ಮಾಂತ್ರಿಕ ದುಡಿ
ಮೂಲ: The Mystic Drum
ಬಡಿಯುತ್ತಿತ್ತು ನನ್ನೊಳಗೆ ಮಾಂತ್ರಿಕ ದುಡಿಯೊಂದು
ಕುಣಿಯುತ್ತಿದ್ದವು ಮೀನುಗಳು ನದಿಗಳಲ್ಲಿ
ನಲಿಯುತ್ತಿದ್ದರು ಗಂಡಸರು ಹೆಂಗಸರು ದಡದಲ್ಲಿ
ನನ್ನ ದುಡಿಯ ಲಯಕ್ಕೆ
ಆದರೆ ಮರದ ಹಿಂದೆ ನಿಂತಿದ್ದ ಅವಳು
ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು
ತಲೆಯಾಡಿಸಿ ನಕ್ಕಳಷ್ಡೇ ಅವಳು
ನನ್ನ ದುಡಿ ಬಡಿಯುತ್ತಲೇ ಇತ್ತು
ತಾಳದ ಗತಿ ಹೆಚ್ಚಿಸುತ್ತಾ
ಗಾಳಿಯಲ್ಲಿ ಅಲೆಗಳನ್ನೆಬ್ಬಿಸುತ್ತಾ
ಬದುಕಿರುವವರನ್ನು ಸತ್ತವರನ್ನು
ಅವರವರ ನೆರಳುಗಳ ಜತೆ
ಹಾಡಲು ಕುಣಿಯಲು ಒತ್ತಾಯಿಸುತ್ತಾ –
ಆದರೆ ಮರದ ಹಿಂದೆ ನಿಂತಿದ್ದ ಅವಳು
ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು
ತಲೆಯಾಡಿಸಿ ನಕ್ಕಳಷ್ಟೇ ಅವಳು
ನೆಲದ ವಸ್ತುಗಳ ಲಯಕ್ಕೆ
ದುಡಿಯು ಬಡಿಯತೊಡಗಿತು
ಆಕಾಶದ ಅಕ್ಷವನ್ನು, ಸೂರ್ಯ,
ಚಂದ್ರ, ನದಿ ದೇವತೆಗಳನ್ನು ಆವಾಹಿಸಿತು –
ಮರಗಳು ಕುಣಿಯತೊಡಗಿದವು
ಮೀನುಗಳು ಮನುಜರಾದರು
ಮನುಜರು ಮೀನುಗಳಾದರು
ಎಲ್ಲವೂ ಬೆಳೆಯುವುದ ನಿಂತಿತು –
ಆದರೆ ಮರದ ಹಿಂದೆ ನಿಂತಿದ್ದ ಅವಳು
ಸೊಂಟದ ಸುತ್ತ ಎಲೆಗಳ ಸುತ್ತಿಕೊಂಡು
ತಲೆಯಾಡಿಸಿ ನಕ್ಕಳಷ್ಟೇ ಅವಳು
ಆಗ ನನ್ನೊಳಗಿನ ಮಾಂತ್ರಿಕ ದುಡಿ
ಬಡಿಯುವುದ ನಿಲ್ಲಿಸಿತು –
ಮನುಜರು ಮನುಜರಾದರು
ಮೀನುಗಳು ಮೀನುಗಳಾದವು
ಮರಗಳು, ಸೂರ್ಯ, ಚಂದ್ರ
ಅವರವರ ಜಾಗ ಸೇರಿದವು,
ಸತ್ತವರು ನೆಲ ಸೇರಿದರು
ಎಲ್ಲವೂ ಮತ್ತೆ ಬೆಳೆಯತೊಡಗಿದವು
ಮತ್ತೆ ಮರದ ಹಿಂದೆ ನಿಂತಿದ್ದ ಅವಳು
ಬೇರುಗಳು ಮೊಳೆತವು ಅವಳ ಪಾದಗಳಿಂದ
ಎಲೆಗಳು ಚಿಗುರಿದವು ಅವಳ ತಲೆಯಿಂದ
ಹೊಗೆ ಹೊಮ್ಮಿತು ಅವಳ ಮೂಗಿನಿಂದ
ಅವಳ ತುಟಿಗಳು ಬಿರಿದವು
ಅವಳ ನಗೆ ಮಾರ್ಪಟ್ಟಿತ್ತು
ಒಂದು ಕತ್ತಲೆ ಕಾರುವ ಕುಳಿಯಾಗಿ.
ಆಗ, ಆಗ ನಾನು ನನ್ನ ಮಾಂತ್ರಿಕ ದುಡಿಯನ್ನ
ಚಿಲದಲ್ಲಿಟ್ಟು ತಿರುಗಿ ನಡೆದೆ;
ಮತ್ತೆಂದೂ ಬಾರಿಸಲಿಲ್ಲ ಇಷ್ಟೊಂದು ಜೋರಾಗಿ ದುಡಿಯನ್ನು.
೭
ಮೌನದ ಸ್ತುತಿಗೀತೆ
ಮೂಲ: Anthem of Silence
ಮಧ್ಯರಾತ್ರಿ-ಮೌನದ ಮೌನದಲ್ಲಿ
ಮೌನದ ಸ್ತುತಿಗೀತೆ ಕೇಳಿಬಂತು –
ಅದು ಕಪ್ಪೆಗಳ ಸದ್ದಡಗಿಸಿತು;
ಸೊಳ್ಳೆಗಳು ಸದ್ದಿಲ್ಲದೆ ತಮ್ಮ
ಅಂತರವನ್ನು ಕಾಯ್ದುಕೊಂಡವು!
ಅದು ರಾತ್ರಿಯ ಸದ್ದಡಗಿಸಿತು!
ಮತ್ತೆ ನಾನು, ನನ್ನ ರಾಷ್ಟ್ರಗೀತೆಯನ್ನು ಅಚಾನಕ್ಕಾಗಿ
ಕೇಳಿಸಿಕೊಂಡವನಂತೆ, ಹಠಾತ್ತನೆ ಎದ್ದು ನಿಂತೆ ಅಲ್ಲಾಡದೆ,
ಈ ಮೌನದ ಸ್ತುತಿಗೀತೆ ನನ್ನನ್ನು ಆವರಿಸಿತು
ಮಧ್ಯರಾತ್ರಿಯಲಿ.
೮
ಸಂಕೀರ್ಣ ವಿಷಯ
ಮೂಲ: Complex Matter
ನಾನು ಏಕ ವ್ಯಕ್ತಿಯಲ್ಲ, ನಾನು ಅನೇಕ ವಿಷಯಗಳು, ಅನೇಕ ವ್ಯಕ್ತಿಗಳು
ನಿನಗೆ ಕಂಡದ್ದು ಮತ್ತೆ ನಿನಗೆ ಗೊತ್ತೆಂದು ನೀನು ಭಾವಿಸಿದವನು ನಾನು;
ನನಗೆ ಕಂಡದ್ದು ಮತ್ತೆ ನನ್ನ ಬಗ್ಗೆ ನನಗೆ ಗೊತ್ತೆಂದು ಭಾವಿಸಿದವನು ನಾನು –
ನಾನು ಅನೇಕ ವಿಷಯಗಳು, ಅನೇಕ ವ್ಯಕ್ತಿಗಳು,
ಗೊತ್ತಿದ್ದವರು ಹಾಗೂ ಗೊತ್ತಿಲ್ಲದವರು
ಅಥವಾ ಹೆಚ್ಚುಕಮ್ಮಿ ಗೊತ್ತಿದ್ದವರು.
ಹಾಡುವ ಮುಂಜಾನೆಯೊಂದಿಗೆ ಹಾಡುವೆ ನಾನು
ಹಾಡುವ ಹಕ್ಕಿಗಳ ಜತೆ ಎದ್ದೇಳುವೆ ನಾನು –
ಚರಮಗೀತೆ ಹಾಡುವವನೂ ಹೀಗೇ ಏಳುವನು
ಹೊಸ ದಿನದ ಮಂದಹಾಸ
ಮೊದಲ ಹುಟ್ಟುಹಬ್ಬದ ಹಾಗೆ!
ನಾನೊಂದು ಮೃದುವಾಗಿ ಹೆಜ್ಜೆಯಿಡುವ ಮುಂಜಾನೆ – ಕ್ಷಿತಿಜಗಳನ್ನು
ಬೂರುಗದ ಎಳೆಗಳ ಕಸಬರಿಕೆಯಿಂದ ನಿರ್ಮಲಗೊಳಿಸುವೆ;
ಅಸ್ಫುಟವಾದವುಗಳಿಗೆ, ಅಮೂರ್ತವಾದವುಗಳಿಗೆ ರೂಪ ಕೊಡುವೆ,
ನಿನ್ನೆಯ ಆಶಯಗಳನ್ನು ನೆರವೇರಿಸುವ ಮಾತು ಕೊಡುವೆ.
ನಿನಗೆ ಗೊತ್ತೆಂದು ಭಾವಿಸಿರುವೆ, ಅದಲ್ಲ ನಾನು;
ನಾನು ಹಗಲಲ್ಲಿ ಸೂರ್ಯ ಹಾಗೂ ರಾತ್ರಿಯಲ್ಲಿ ಚಂದಿರ
ತಡಕಾಡುವ ಕಾಲುಗಳಿಗೆ ದಾರಿಯಿಲ್ಲದ ಕತ್ತಲನ್ನು ಬೆಳಗುವೆ.
ನನ್ನ ಬಗ್ಗೆ ನನಗೆ ಬಹಳ ಇಷ್ಟವಾದುದು ಇದು —
ನಾನೊಂದು ಇರೊಕೊ* ಮರ, ಗಟ್ಟಿಯಾಗಿರುವೆ, ಸಶಕ್ತವಾಗಿರುವೆ
ಬಿರುಗಾಳಿಗಳನ್ನು, ಕೃಪಾಣ-ಹರಿತ ಪದಗಳನ್ನು ಎದುರಿಸುತ್ತಾ –
ಬಿರುಗಾಳಿಗಳನ್ನು ಮೀರಿ ಪ್ರಶಾಂತವಾಗಿ ನಿಂತಿರುವೆ!
ನಾನು ಹೀಗೆಯೇ ಸದಾ ಇರುವುದಾದರೆ ಎಷ್ಟು ಒಳ್ಳೆಯದು …
*ಇರೊಕೊ ಮರವು ಆಫ್ರಿಕಾದ ಉಷ್ಣವಲಯದಲ್ಲಿ ಬೆಳೆಯುವ ದೊಡ್ಡ ಗಟ್ಟಿದಾರು ಮರ. ಆಫ್ರಿಕಾದಲ್ಲಿ ಜನರು ಮರಗಳು ಮತ್ತು ಕಾಡುಗಳನ್ನು ಪೂಜಿಸುತ್ತಾರೆ ಹಾಗೂ ಅವರ ಪೂರ್ವಜರ ಆತ್ಮಗಳು ಅವುಗಳಲ್ಲಿ ವಾಸಿಸುತ್ತವೆ ಎಂದು ನಂಬುತ್ತಾರೆ. ಮರಗಳನ್ನು ಪೂಜಿಸುವ ಮೂರು ಗಮನಾರ್ಹ ಆಫ್ರಿಕನ್ ಗುಂಪುಗಳೆಂದರೆ ಯೊರುಬಾ, ಒಲುಕೋಮಿ ಮತ್ತು ವೂಡನ್ (Yoruba, the Olukomi and the Voodun). ಯೊರುಬಾ ಜನರಿಗೆ ಇರೊಕೊ ಮರವು ಕೇವಲ ಒಂದು ಭೌತಿಕ ಅಭಿವ್ಯಕ್ತಿ ಮಾತ್ರವಲ್ಲ; ಇರೊಕೊ ಮರ ಅವರ ಪೂರ್ವಜರು ಮತ್ತು ದೈವಿಕರೊಂದಿಗೆ ಆಧ್ಯಾತ್ಮಿಕ ಸಂಪರ್ಕವನ್ನು ಸಾಕಾರಗೊಳಿಸುತ್ತದೆ. ಈ ಮರವು ತನ್ನ ಕಿರೀಟದಲ್ಲಿ ಇರೊಕೊ-ಮನುಷ್ಯನ (Iroko-man) ಚೈತನ್ಯವನ್ನು ಹೊಂದಿದೆ ಎಂದು ಯೊರುಬಾ ಪಂಗಡದ ಜನರು ನಂಬುತ್ತಾರೆ; ಈ ಮರ ಆಕಾಶದ ಎಷ್ಟೊಂದು ಎತ್ತರಕ್ಕೆ ತಲುಪುತ್ತದೆಯೆಂದರೆ, ಯೋರುಬಾ ಜನರು ಇರೊಕೊ ಮರವನ್ನು ದೇವರ ಸಿಂಹಾಸನವೆಂದು ಪರಿಗಣಿಸುತ್ತಾರೆ.
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.