ಅಮ್ಮ ಪೌಲಾಳ ವಿಷಯದಲ್ಲಿ ವ್ಯತ್ಯಾಸವಿಲ್ಲ. ಅವಳು ಇನ್ನಷ್ಟು ಅತಿರೇಕದಿಂದ ವರ್ತಿಸುತ್ತಾಳೆ. ಹೀಗಾಗಿ ಅವನ ಅಂತರಂಗದಲ್ಲಿ ಒತ್ತಡಗಳು ಒಗ್ಗೂಡಲು ಪ್ರಾರಂಭಿಸುತ್ತವೆ. ಜೊತೆಗೆ ಸ್ಕೂಲಿನಲ್ಲಿ ಉಳಿದವರು ರೇಗಿಸುವುದು ಮುಂದುವರಿಯುತ್ತದೆ. ಇದರಿಂದ ಅವನಿಗೆ ತಾನು ಯಾವ ರೀತಿಯಲ್ಲಿಯೂ ಪ್ರತಿಕ್ರಿಯಿಸದೆ ನಿಷ್ಕ್ರಿಯನಾಗುತ್ತಿರುವುದಕ್ಕೆ ನಾಚಿಕೆಯ ಜೊತೆ ಬೇಸರವೂ ಅವನನ್ನು ಮುತ್ತುತ್ತದೆ. ತಡೆಯಲಾಗದೆ ರೋಷದಿಂದ ಸ್ಕೂಲಿಗೆ ಹೋಗಿ ಒಬ್ಬನೆ ಅಬ್ಬರಿಸಿ ಗಲಾಟೆ ಮಾಡುತ್ತಾನೆ. ಪರಿಣಾಮವಾಗಿ ಪೋಲೀಸರು ಬಂದು ಕರೆದುಕೊಂಡು ಹೋಗುತ್ತಾರೆ.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್’ನಲ್ಲಿ ಅಮೆರಿಕದ ʻಮೂನ್‌ಲೈಟ್ʼ ಸಿನಿಮಾದ ವಿಶ್ಲೇಷಣೆ
ವ್ಯಕ್ತಿಯೊಬ್ಬ ತನ್ನತನವನ್ನು ಕಂಡುಕೊಳ್ಳುವುದರ ಮೂಲಕ ತನಗೊಂದು ಅಸ್ಮಿತೆ ಇದೆ ಎಂದು ಸಾಧಿಸುವುದಕ್ಕೆ ಪರಿಶ್ರಮ, ಹೋರಾಟ ಅತ್ಯಂತ ಅಗತ್ಯವಾಗಿರುವುದು ಎಲ್ಲ ದೇಶ – ಕಾಲದಲ್ಲಿಯೂ ಸಹಜವಾದ ಸಂಗತಿ. ಈ ಬಗೆಯ ವಿಸ್ತಾರವುಳ್ಳ ವಿಷಯವನ್ನು ಕಥಾವಸ್ತುವಾಗಿ ಪರಿಗಣಿಸಿದರೆ ಹೇಗೆ? ಹೀಗಿರುವುದಕ್ಕೆ ಕಥನದ ವಿಸ್ತರಣೆ ಕೊಟ್ಟು ಸಮರ್ಥವಾಗಿ ದೃಶ್ಯ ರೂಪದಲ್ಲಿ ಪ್ರಸ್ತುತ ಪಡಿಸುವುದರಲ್ಲಿ ಯಶಸ್ವಿಯಾಗಿದ್ದಾನೆ 2016ರ ʻಮೂನ್‌ಲೈಟ್ʼ ಚಿತ್ರದ ಕಪ್ಪು ಜನಾಂಗದ ನಿರ್ದೇಶಕ ಬ್ಯಾರಿ ಜೆಂಕಿನ್ಸ್. ಅವನ ಪ್ರಯತ್ನ ಉನ್ನತ ಮಟ್ಟದ ಮೆಚ್ಚುಗೆ ಪಡೆದಿದೆ ಎನ್ನುವುದಕ್ಕೆ ಚಿತ್ರ ಗಳಿಸಿರುವ ಮೂರು ಆಸ್ಕರ್ ಪ್ರಶಸ್ತಿಗಳೇ ಸಾಕ್ಷಿ. ಬಿಳಿ ವರ್ಣೀಯರ ಚಿತ್ರಗಳೊಂದಿಗೆ ಪ್ರಶಸ್ತಿಯ ವಿಷಯದಲ್ಲಿ ಸೆಣೆಸಿ ಗೆಲ್ಲುವುದೆಂದರೆ ನಿಜಕ್ಕೂ ಅಸಾಮಾನ್ಯವಾದ ಸಂಗತಿ ಎನ್ನುವುದರಲ್ಲಿ ಸಂಶಯವಿಲ್ಲ.
ಬ್ಯಾರಿ ಜೆಂಕಿನ್ಸ್ ತನ್ನ ಆಶಯ ಪೂರೈಕೆಗೆ ವ್ಯಕ್ತಿಯೊಬ್ಬನ ಬಾಲ್ಯ, ಯೌವನ ಮತ್ತು ವಯಸ್ಕ ಸ್ಥಿತಿಯನ್ನು ಪರಿಕಲ್ಪಿಸಿದ್ದಾನೆ. ತನ್ನ ಜನಾಂಗದವರಲ್ಲಿ ಮಿಳಿತವಾಗಿರಬಹುದಾದ ಅನುಭವಗಳನ್ನು ಅಗತ್ಯ ರೂಪದಲ್ಲಿ ಹೆಣೆದು ನಿರೂಪಿಸಿದ್ದಾನೆ.
ಅವನೊಬ್ಬ ಆರೇಳು ವರ್ಷದ ಕಪ್ಪು ಜನಾಂಗ ಹುಡುಗ(ಅಲೆಕ್ಸ್ ಆರ್ ಹಿಬ್ಬರ್ಟ್). ಎಲ್ಲರೂ ಅವನನ್ನು ʻಪುಟ್ಟʼ ಎನ್ನುತ್ತಾರೆ. ಅವನಿಗಿರುವುದು ಕಾಣದೂರಿಗೆ ಹೋದ ತಂದೆ. ಅಮ್ಮ ಪೌಲಾ(ನವೋಮಿ ಹೇರ್ಸ್)ಳೊಂದಿಗೆ ಮಿಯಾಮಿ ಊರಿನಲ್ಲಿರುವ ಅವನದು ಅತಿ ಸಂಕೋಚದ ಪ್ರವೃತ್ತಿ. ಈ ಪ್ರವೃತ್ತಿ ಅವನಿಗೆ ಸಹಜವಾಗಿರುವುದು ಎನ್ನುವುದಕ್ಕಿಂತ ಅವನ ಒಟ್ಟಾರೆ ಇರುವಿನಿಂದ ಉಂಟಾದದ್ದು ಎಂದು ಕ್ರಮೇಣ ನಮಗೆ ತಿಳಿಯುತ್ತದೆ. ಹೀಗಾಗಿರುವುದನ್ನು ನಿರ್ದೇಶಕ ಸಣ್ಣ ಘಟನೆಗಳ ಮೂಲಕ ನಮಗೆ ತಿಳಿಪಡಿಸುತ್ತಾನೆ. ಆದರೆ ಮುಖ್ಯವಾಗಿ ಅವನ ತಾಯಿ ಪೌಲಾಳೊಂದಿಗಿನ ತೀವ್ರ ಸ್ವರೂಪದ ಸಂಬಂಧದಿಂದ ಅವನು ಹಿಂಸೆಗೊಳಗಾಗುವುದೇ ಹೆಚ್ಚು. ಚಿಕ್ಕ ವಯಸ್ಸಿನವನಾದ ಅವನಿಗೆ ಮನೆಯಲ್ಲಿ ಅತ್ಯಂತ ಅವಶ್ಯಕವಾಗಿ ಬೇಕಾದ ಪ್ರೀತಿಯ ಅಭಾವ. ಇದರಿಂದಾಗಿ ಅವನು ಓರಗೆಯವರ ಜೊತೆಯಾಗಲಿ ಪೌಲಾಳ ಜೊತೆಯಾಗಲಿ ಮಾತನಾಡುತ್ತಿದ್ದದ್ದು ಬಾಯಿಂದಲ್ಲ, ಮುಖದಲ್ಲಿ; ಎದ್ದು ಕಾಣುವ ದೊಡ್ಡ ಕಣ್ಣುಗಳಿಂದ. ಅವನ ವಯಸ್ಸಿನ ಹುಡುಗರ ಜೊತೆ ಒಡನಾಟವಿರದ ಪುಟ್ಟನನ್ನು ಕಂಡರೆ ಉಳಿದವರಿಗೆಲ್ಲ ತಮಾಷೆ ಮಾಡುವುದು, ರೇಗಿಸುವುದು ಅಭ್ಯಾಸ. ಅಷ್ಟೇ ಏಕೆ ಹೊಡೆಯುವುದು ಕೂಡ. ಅವನು ಅದೆಲ್ಲವನ್ನೂ ತುಟಿಪಿಟಕ್ಕೆನ್ನದೆ ಸಹಿಕೊಳ್ಳುತ್ತಾನೆ. ಹೀಗಾಗಲು ಅವನಿಗೆ ಇಷ್ಟವಿದೆ ಎಂದಲ್ಲ. ಯಾವಾಗಲೂ ತಾನಿರುವ ರೀತಿಯ ಬಗ್ಗೆ ಆಲೋಚನೆಗಳೇ ಅವನ ತಲೆ ತುಂಬ. ಮುಖ್ಯವಾಗಿ ಅವನನ್ನು ಕಾಡುವುದು ಸ್ವಂತ ವಿಷಯಕ್ಕಿಂತ ಅಮ್ಮನ ಚಟುವಟಿಗಳ ಬಗ್ಗೆ. ತನ್ನ ಬಗ್ಗೆ ಕೊಂಚವೂ ಪ್ರೀತಿಯಿಂದ ವರ್ತಿಸದ ಅವಳನ್ನು ಕಂಡರೆ ದ್ವೇಷ ಎನ್ನುವಷ್ಟು ಅವಳನ್ನು ಸಹಿಸುವುದಿಲ್ಲ. ಅದನ್ನವನು ಮಾತಿಲ್ಲದೆ ಇರಿಯುವಂತೆ ನೋಡುತ್ತ ತಿಳಿಸುತ್ತಾನೆ. ಅವಳಿಗದು ಅರ್ಥವಾಗುವುದಿಲ್ಲ. ಅವಳದೇನಿದ್ದರೂ ತನ್ನ ಸ್ವಾರ್ಥದ ಕಡೆ ಗಮನ. ಜೊತೆಗೆ ಜುವನ್(ಮಹೆರ್ಶಾಲಾ ಅಲಿ) ಜೊತೆಗೆ ಮಾದಕ ವಸ್ತು ಪಡೆಯುವ ಸಂಬಂಧ ಹೊಂದಿರುತ್ತಾಳೆ. ಪುಟ್ಟನ ಅಂತರಂಗದಲ್ಲಿ ಪುಟಿದೇಳುವ ಭಾವದುಬ್ಬರಗಳನ್ನು ದೃಶ್ಯರೂಪದಲ್ಲಿ ನಿರೂಪಿಸುವುದಕ್ಕೆ, ಕತ್ತು ಕೆಳಗೆ ಹಾಕಿ, ಆಗೀಗ ವೇದನೆಯನ್ನು ಮುಖ ಬಿಗಿದು, ಕತ್ತೆತ್ತಿ, ಮಿಟುಕಿಸದ ಕಣ್ಣುಗಳ ಪುಟ್ಟನ ಭಾವಾಭಿನಯವನ್ನು ಅತಿಸಮೀಪ ಚಿತ್ರಿಕೆಗಳಿಂದ ಮೂಲಕ ನಿರ್ದೇಶಕ ನಿರೂಪಿಸುತ್ತಾನೆ. ಇದರ ಜೊತೆ ಯಾರೊಬ್ಬರೂ ಜೊತೆಗಿರದೆ ಒಂಟಿಯಾಗಿ ಹೆಜ್ಜೆ ಹಾಕುವುದನ್ನೂ ಕಾಣುತ್ತೇವೆ.
ಪುಟ್ಟ ಮನೆಯಲ್ಲಿರುವುದು ಅಥವಾ ಜತೆಗಾರರೊಂದಿಗೆ ಒಡನಾಟ ಕಡಿಮೆ. ಜುವನ್ ಪುಟ್ಟನನ್ನು ಸಹಾನುಭೂತಿಯಿಂದ ಮಾತನಾಡಿಸುತ್ತಾನೆ. ಜೊತೆಗೆ ಅವನ ಬಗ್ಗೆ ಪ್ರೀತಿಯ ಭಾವನೆ ಹೊಂದಿರುವುದಲ್ಲದೆ ತಾನೇ ಅವನ ತಂದೆ ಎನಿಸುವ ಮಟ್ಟಿಗೆ ಅವನೊಂದಿಗೆ ವರ್ತಿಸುತ್ತಾನೆ. ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ ಮತ್ತು ಪ್ರಿಯತಮೆ ತೆರೇಸಾಳಿ(ಜನೆಲ್ಲಾ ಮೋನಾ)ಗೂ ಅವನನ್ನು ಪ್ರೀತಿಯಿಂದ ನೋಡಿಕೊಳ್ಳಲು ಹೇಳುತ್ತಾನೆ. ಜುವನ್ ಪ್ರಕಟಿಸುವ ಈ ಕಾಳಜಿ ಪುಟ್ಟನಿಗೆ ಅರ್ಥವಾಗುತ್ತದೆ. ಚಿತ್ರದಲ್ಲಿ ಮೊದಲ ಬಾರಿಗೆ ಅವನೊಂದಿಗೆ ಹಿಂಜರಿಕೆಯಿಂದ ಅತ್ಯಂತ ಮೃದುವಾಗಿ ಮಾತನಾಡುತ್ತಾನೆ. ಸಾಕಷ್ಟು ಸೂಕ್ಷ್ಮವೆನಿಸುವ ಈ ದೃಶ್ಯದಲ್ಲಿ ಪುಟ್ಟ ಮತ್ತು ಜುವನ್ ಆಡುವ ಮಾತುಗಳ ನಡುವೆ ಮೌನ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಇಷ್ಟಲ್ಲದೆ ಪುಟ್ಟನಿಗೆ ತನ್ನ ಮನೆಯಲ್ಲಿಯೇ ಇರುವಂತೆ ಹೇಳುತ್ತಾನೆ.
ತನ್ನೊಳಗೆ ತಾನು ಐಕ್ಯನಾಗಿ ಹೇಳಬೇಕಾದದ್ದನ್ನು ತನ್ನಷ್ಟಕ್ಕೆ ಹೇಳಿಕೊಳ್ಳುತ್ತಿದ್ದ ಪುಟ್ಟನಿಗೆ ಇನ್ನೊಂದು ಜೀವ ದೊರಕಿದಂತಾಗುತ್ತದೆ. ಹಾಗೆಯೇ ಜುವನ್‌ಗೆ ಪುಟ್ಟನ ಬಗ್ಗೆ ತನಗೆ ಜವಾಬ್ದಾರಿ ಇದೆ ಎನ್ನುವುದೂ ವ್ಯಕ್ತವಾಗುತ್ತದೆ. ಅನಂತರ ಅವರಿಬ್ಬರೂ ಸಲಿಗೆಯಿಂದಿರುವುದು ಸಹಜವಾದ ಬೆಳವಣಿಗೆ. ಚಿತ್ರದ ಮೂರನೆ ಒಂದು ಭಾಗವಾದ ಕಥನದ ನಿರೂಪಣೆಯ ಅವಧಿಯಲ್ಲಿ ಪುಟ್ಟ ಕೇವಲ ಒಂದು ಬಾರಿ ನಸುನಗುವುದನ್ನು ಕಾಣುತ್ತೇವೆ. ಇದು ತನ್ನಿಂದ ತಾನು ತಕ್ಕಮಟ್ಟಿನ ಆಂತರಿಕ ಒತ್ತಡಗಳಿಂದ ಬಿಡುಗಡೆ ಪಡೆದಿದ್ದೇನೆ ಎನ್ನುವುದರ ಸೂಚನೆಯೆಂದು ತೋರುತ್ತದೆ. ಈ ಭಾಗದಲ್ಲಿ ಚಿತ್ರೀಕರಣ ಒಳಾಂಗಣದಲ್ಲಿಯೇ ಹೆಚ್ಚಾಗಿದ್ದು ನಿರೂಪಣೆಯಲ್ಲಿ ಸಮೀಪ ಚಿತ್ರಿಕೆಗಳಿಗೆ ಹೆಚ್ಚಿನ ಮಹತ್ವವಿದೆ.
ಚಿತ್ರದ ಎಡನೆಯ ಭಾಗದಲ್ಲಿ ಪುಟ್ಟ ಬೆಳೆದು ಚಿರೋಮ್(ಈಗ ಆಶ್ಟನ್ ಸ್ಯಾಂಡರ್ಸ್) ಎಂಬ ಯುವಕನಾಗಿರುತ್ತಾನೆ. ಈಗವನು ಸ್ಕೂಲಿಗೆ ಹೋಗುವ ಹುಡುಗ. ತನ್ನ ವಯಸ್ಸಿನವರ ಜೊತೆ ಸಣ್ಣ ಪುಟ್ಟ ವಿಷಯಗಳಿಗೆ ಜಟಾಪಟಿ. ಅವನೊಂದಿಗೆ ವಿಶ್ವಾಸದಿಂದ ನಡೆದುಕೊಳ್ಳುವವರ ಅಭಾವ. ಅಲ್ಲಿ ಸ್ಕೂಲಿನಲ್ಲಿ ಸಲಿಗೆಯ ಕೆವಿನ್ ಇರುವನಾದರೂ ಅವನ ಸಂಗವೆಲ್ಲ ಹೆಚ್ಚಾಗಿ ಇತರರೊಂದಿಗೆ. ಹೀಗಾಗಿ ಸ್ಕೂಲಿನಲ್ಲಿಯೂ ಅವನಿಗೆ ಹಿತವೆನಿಸದ ವಾತಾವರಣ.
ಕ್ಲಾಸ್ ರೂಮಿನಲ್ಲಿ ಇತರ ಹುಡುಗ, ಹುಡುಗಿಯರ ಜೊತೆ ಮುಕ್ತನಾಗಿ ಒಡನಾಡುವಂತಿಲ್ಲ. ಕಪ್ಪು, ಬಿಳಿಯರೆನ್ನದೆ ಎಲ್ಲರನ್ನೂ ಎದುರಿಸಬೇಕಾಗುತ್ತದೆ. ಇಲ್ಲಿಯೂ ಅವನಿಗೆ ಹೊಸದೆನಿಸುವ ಅನುಭವಗಳು. ಮೊಟ್ಟ ಮೊದಲ ಬಾರಿಗೆ ತನ್ನ ಬಗ್ಗೆ ವಿಶ್ವಾಸ ತೋರಿಸುವ ಕೆವಿನ್(ಜೆ಼ರೆಲ್ ಜ಼ರೋಮೆ) ಜೊತೆ ಸ್ವಲ್ಪ ಮಟ್ಟಿಗೆ ಸಮಾಧಾನ ಪಡೆಯುತ್ತಾನೆ. ಜುವನ್ ಎಂದಿನಂತೆ ವಿಶ್ವಾಸದಿಂದಿದ್ದು ಉತ್ತಮ ಬದುಕಿನ ಅಗತ್ಯಗಳನ್ನು ಪೂರೈಸಿಕೊಳ್ಳುವುದರ ಬಗ್ಗೆ ಹಿತಮಿತವಾದ ಸಲಹೆಗಳನ್ನು ಕೊಡುತ್ತಾನೆ.
ಅವನು ಅದೆಲ್ಲವನ್ನೂ ತುಟಿಪಿಟಕ್ಕೆನ್ನದೆ ಸಹಿಕೊಳ್ಳುತ್ತಾನೆ. ಹೀಗಾಗಲು ಅವನಿಗೆ ಇಷ್ಟವಿದೆ ಎಂದಲ್ಲ. ಯಾವಾಗಲೂ ತಾನಿರುವ ರೀತಿಯ ಬಗ್ಗೆ ಆಲೋಚನೆಗಳೇ ಅವನ ತಲೆ ತುಂಬ. ಮುಖ್ಯವಾಗಿ ಅವನನ್ನು ಕಾಡುವುದು ಸ್ವಂತ ವಿಷಯಕ್ಕಿಂತ ಅಮ್ಮನ ಚಟುವಟಿಗಳ ಬಗ್ಗೆ. ತನ್ನ ಬಗ್ಗೆ ಕೊಂಚವೂ ಪ್ರೀತಿಯಿಂದ ವರ್ತಿಸದ ಅವಳನ್ನು ಕಂಡರೆ ದ್ವೇಷ ಎನ್ನುವಷ್ಟು ಅವಳನ್ನು ಸಹಿಸುವುದಿಲ್ಲ.
ಇವೆಲ್ಲ ಒಂದು ಬಗೆಯಾದರೆ ಅಮ್ಮ ಪೌಲಾಳ ವಿಷಯದಲ್ಲಿ ವ್ಯತ್ಯಾಸವಿಲ್ಲ. ಅವಳು ಇನ್ನಷ್ಟು ಅತಿರೇಕದಿಂದ ವರ್ತಿಸುತ್ತಾಳೆ. ಹೀಗಾಗಿ ಅವನ ಅಂತರಂಗದಲ್ಲಿ ಒತ್ತಡಗಳು ಒಗ್ಗೂಡಲು ಪ್ರಾರಂಭಿಸುತ್ತವೆ. ಜೊತೆಗೆ ಸ್ಕೂಲಿನಲ್ಲಿ ಉಳಿದವರು ರೇಗಿಸುವುದು ಮುಂದುವರಿಯುತ್ತದೆ. ಇದರಿಂದ ಅವನಿಗೆ ತಾನು ಯಾವ ರೀತಿಯಲ್ಲಿಯೂ ಪ್ರತಿಕ್ರಿಯಿಸದೆ ನಿಷ್ಕ್ರಿಯನಾಗುತ್ತಿರುವುದಕ್ಕೆ ನಾಚಿಕೆಯ ಜೊತೆ ಬೇಸರವೂ ಅವನನ್ನು ಮುತ್ತುತ್ತದೆ. ತಡೆಯಲಾಗದೆ ರೋಷದಿಂದ ಸ್ಕೂಲಿಗೆ ಹೋಗಿ ಒಬ್ಬನೆ ಅಬ್ಬರಿಸಿ ಗಲಾಟೆ ಮಾಡುತ್ತಾನೆ. ಪರಿಣಾಮವಾಗಿ ಪೋಲೀಸರು ಬಂದು ಕರೆದುಕೊಂಡು ಹೋಗುತ್ತಾರೆ.
ಅವರು ಹೀಗೆ ಮಾಡುವಾಗ ಕೆವಿವ್ ಮತ್ತು ಚಿರೋನ್ ಪರಸ್ಪರ ದೃಷ್ಟಿಸುವ ದೃಶ್ಯದಲ್ಲಿ ಕೆವಿನ್ ಮುಖದಲ್ಲಿ ಅಪರಾಧಿ ಭಾವ ವ್ಯಕ್ತವಾದರೆ ಚಿರೋನ್‌ನಲ್ಲಿ ಬಲಿಯಾದವನ ಛಾಯೆ ತೋರುತ್ತದೆ. ಇದರೊಂದಿಗೆ ಎರಡನೆ ಭಾಗ ಮುಗಿಯುತ್ತದೆ. ಆದರೆ ಮುಖ್ಯ ಪಾತ್ರದ ಮಾನಸಿಕ ಒಳತೋಟಿ, ತನ್ನ ಮೇಲೆ ತಾನು ಹಿಡಿತ ಸಾಧಿಸದಿರುವುದು, ತನ್ನಂತರಂಗಕ್ಕೆ ಮುಸುಕಿದ ಎಂದಿನ ಒತ್ತಡಗಳನ್ನು ಕಳಚಿಕೊಳ್ಳಲು ಒಂದಷ್ಟು ಹೊಡೆದಾಡುತ್ತಾನಾದರೂ ಸಂಪೂರ್ಣ ಅದರಿಂದ ಹೊರಬರಲು ಶಕ್ತನಾಗದೆ ಸರಿಸುಮಾರು ಅದೇ ತೊಳಲಾಟದಲ್ಲಿ ಮುಳುಗಿದ ವ್ಯಕ್ತಿಯನ್ನು ಸ್ವಲ್ಪ ಭಿನ್ನ ವಾತಾವರಣದಲ್ಲಿ ಕಾಣುತ್ತೇವೆ. ಇವೆರಡೂ ಭಾಗಗಳಲ್ಲಿ ಮುಖ್ಯ ಪಾತ್ರವನ್ನು ಒಂದಿಲ್ಲೊಂದು ಬಗೆಯಲ್ಲಿ ಪ್ರತಿಫಲಿಸುವಂತೆ ದೃಶ್ಯಗಳನ್ನು ಬೆಳಕಿನ ಅಂಶ ಕಡಿಮೆ ಇರುವ ಸಮಯದಲ್ಲಿ ಅಥವ ಕಡಿಮೆ ಇರುವಂತೆ ನಿಯೋಜಿಸಿ ಚಿತ್ರೀಕರಣ ಮಾಡಿರುವುದು ವಿಶೇಷವೆನಿಸುತ್ತದೆ.
ಎರಡನೆ ಭಾಗ ಹಾಗೂ ಮೂರನೆ ಭಾಗ ಪ್ರಾರಂಭವಾಗುವ ನಡುವಿನ ಅವಧಿಯಲ್ಲಿ ಮುಖ್ಯ ಪಾತ್ರದಲ್ಲಿ ನಡೆದಿರಬಹುದಾದ ಬದಲಾವಣೆ ಅಥವ ಬೆಳವಣಿಗೆಯನ್ನು ನಮ್ಮ ಊಹೆಗೆ ಬಿಡುತ್ತಾನೆ ನಿರ್ದೇಶಕ. ಹಾಗೆಯೇ ಮುಖ್ಯ ಪಾತ್ರಕ್ಕೆ ತನ್ನತನವನ್ನು ರೂಪಿಸಿಕೊಳ್ಳುವ ಪ್ರಕ್ರಿಯೆಯಲ್ಲಿ ಉಂಟಾದ ಅನುಭವದ ಬಗ್ಗೆ ವಿವರಗಳು ದೊರಕುವುದಿಲ್ಲ. ಆದರೆ ಈಗ ಅವನನ್ನು ʻಬ್ಲಾಕ್ʼ ಎಂದು ಕರೆಯಲಾಗುವ ಚಿರೋಮ್(ಟ್ರೆವಾಂಟೆ ರೋಡ್ಸ್)ನ ಪಾತ್ರದಲ್ಲಿ ಕಾಣುತ್ತೇವೆ. ಬದಲಾದ ಮುಖಚಹರೆ, ವರ್ತನೆ, ಮಾತಿನಲ್ಲಿರುವ ದೃಢತೆಯ ಜೊತೆ ಮಿಳಿತಗೊಂಡ ವಿನಮ್ರತೆ ಇವುಗಳು ವಿಶದವಾಗಿ ತಕ್ಕ ಸೂಚನೆ ಕೊಡುತ್ತವೆ. ಇದರೊಂದಿಗೆ ತನ್ನದೇ ಆದ ಅಸ್ಮಿತೆಯನ್ನು ಪಡೆದ, ಅದಕ್ಕೆ ಸಹಜವೆನ್ನಿಸುವ ಘನತೆ ಎಲ್ಲವನ್ನೂ ಪಡೆದುಕೊಂಡದ್ದನ್ನು ತೆರೆದಿಡುತ್ತದೆ. ಹೀಗಿದ್ದರೂ ಮೊದಲೆರಡು ಭಾಗಗಳಲ್ಲಿ ಇದ್ದಂತೆ ಅಂದರೆ, ಸಾಕಷ್ಟು ವರ್ಷಗಳಾದರೂ ಮುಖದಲ್ಲಿ ಹಿಂದಿನ ಸಂಕೋಚ, ಹಿಂಜರಿಕೆಯ ಅಂಶ ಅಲ್ಪ ಪ್ರಮಾಣದಲ್ಲಿ ಕಾಣಿಸಿಕೊಳ್ಳದೇ ಇರುವುದಿಲ್ಲ.
ಈಗವನು ಜಾರ್ಜಿಯಾದಲ್ಲಿದ್ದಾನೆ. ಸಮಾಜದಲ್ಲಿ ತನ್ನ ನೆಲೆಯನ್ನು ಗಳಿಸಿದ ದೃಢತೆಯ ಲಕ್ಷಣಗಳು ಅವನ ನೋಟದಲ್ಲಿ ಕಾಣುತ್ತದೆ. ಹಿಂದಿನಂತೆ ಯಾವಾಗಲೂ ತಲೆ ತಗ್ಗಿಸಿದ ಭಂಗಿ ಇರುವುದಿಲ್ಲ. ತನ್ನ ಜೀವನದ ಭೂತ ಕಾಲವನ್ನು ಆದಷ್ಟೂ ಮರೆಯಲೆತ್ನಿಸುವ ಛಾಯೆ ಕಣ್ಣುಗಳಲ್ಲಿ. ಇವೆಲ್ಲ ನಮಗೆ ದೊರಕುವುದು ಅರೆಗತ್ತಲಲ್ಲಿ ಅವನು ಕಾರು ಓಡಿಸುವಾಗ. ಇಲ್ಲಿ ಅರೆಗತ್ತಲು ಅವನು ತನ್ನ ಭೂತ ಕಾಲದಲ್ಲಿ ವಿಹರಿಸುತ್ತಿರುವನೆಂದು ತಿಳಿಸುತ್ತದೆ. ಇದಕ್ಕೆ ಪೂರಕವಾಗಿ ಅವನಿಗೆ ಕೆವಿನ್‌ನ ನೆನಪಾಗುತ್ತದೆ. ಅವನು ಅದೇ ಊರಿನಲ್ಲಿರುವುದು ತಿಳಿದು ಭೇಟಿ ಮಾಡುತ್ತೇನೆಂದು ತಿಳಿಸಿ ಅವನಿದ್ದಲ್ಲಿಗೆ ಹೋಗುತ್ತಾನೆ. ಅವನಿಗಲ್ಲಿ ಆಶ್ಚರ್ಯ ಕಾದಿರುತ್ತದೆ.
ಪಾತ್ರವರ್ಗದಲ್ಲಿ ಬದಲಾದ ಕೆವಿನ್(ಆಂಡ್ರೆ ಹಾಲೆಂಡ್) ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿರುತ್ತಾನೆ. ಹಿಂದಿನಂತೆ ಈಗಿನ ದೃಶ್ಯ ಅರೆ ಬೆಳಕಿನಲ್ಲಿ ಅಲ್ಲ. ಹೊಟೇಲಿನ ವಿದ್ಯುದ್ದೀಪಗಳ ವರ್ತಮಾನದ ಬೆಳಕಿನಲ್ಲಿ. ಭೇಟಿಯಾದ ಕೂಡಲೆ ಇಬ್ಬರಿಂದಲೂ ಮಾತಿಲ್ಲ, ಮೌನ. ಅರೆಕ್ಷಣ ಇಬ್ಬರ ಮುಖದಲ್ಲಿಯೂ ಮಂದಹಾಸ. ಅದು ಹೆಚ್ಚಿನ ಕ್ಷಣಗಳು ಕೆವಿನ್ ಮುಖದಲ್ಲಿ ನೆಲೆಸುತ್ತದೆ. ಹೊಟೇಲಿನಲ್ಲಿ ಅಡುಗೆ ಮಾಡುವುದೂ ತಾನೇ ಎಂದು ಹೇಳಿ ಅವನಿಗಾಗಿಯೇ ವಿಶೇಷವಾಗಿ ತಯಾರಿಸಿ ಕೊಡುತ್ತಾನೆ. ಬಹಳ ವರ್ಷಗಳ ನಂತರ ಭೇಟಿಯಾಗಿದ್ದರೂ ಇಬ್ಬರ ನಡುವೆ ಕಾಣದ ಸಂಕೋಚ. ಮಾತನಾಡಬೇಕೆಂದಿದ್ದರೂ ಏನನ್ನು, ಹೇಗೆ ಎನ್ನುವ ಆಲೋಚನೆಯಲ್ಲಿ ಕೆವಿನ್ ಹೆಚ್ಚು ಮುಳುಗಿರುತ್ತಾನೆ. ಅವನು ಕೊನೆಗೆ ತಾನು ಹೆಚ್ಚಿಗೆ ಏನನ್ನೂ ಸಾಧಿಸಲಾರದೇ ಹೋದೆ ಎನ್ನುತ್ತಾನೆ. ಹೀಗನ್ನುವಾಗ ಅವನಲ್ಲಿ ಕೀಳರಿಮೆ ಇಣುಕಿದ ಭಾವವೂ ಕಣ್ಣಂಚಿನಲ್ಲಿ ಹಾದು ಹೋಗುತ್ತದೆ. ಅವನು ಆಗಾಗ ನಗುತ್ತಿದ್ದರೂ ಸಹಜವೆನಿಸುವುದಿಲ್ಲ. ಇವೆಲ್ಲ ಭಾವಗಳ ಹಿಂದೆ ಅವನು ಬಿಳಿಯನಾಗಿರುವ ಅಂಶವೂ ಕೆಲಸ ಮಾಡುತ್ತಿರುತ್ತದೆ.
ಬ್ಲಾಕ್‌ಗೆ ಅವನ ತಾಯಿ ಪೌಲಾಳನ್ನು ಕಾಣಬೇಕಾಗುತ್ತದೆ. ಈಗವಳು ವಯಸ್ಸಾಗಿರುವಾಕೆ. ಅವಳಿಗೆ ತಾನು ಅವನ ಜೊತೆ ನಡೆದುಕೊಳ್ಳುತ್ತಿದ್ದ ಸಂಗತಿ ಕಾಡುತ್ತಿದ್ದರೂ, ಮತ್ತೆ ಮತ್ತೆ ನಿನ್ನನ್ನು ಪ್ರೀತಿಸುತ್ತೇನೆ ಎಂದು ಹೇಳುತ್ತಾಳೆ. ಅವಳ ಮಾತಿಗೆ ಮಿಶ್ರಣ ಭಾವಗಳ ಒತ್ತಡಕ್ಕೆ ಸಿಲುಕಿದ ಬ್ಲಾಕ್ ಏನೂ ಮಾತನಾಡುವುದಿಲ್ಲ. ಆಲಂಗಿಸಲು ಹವಣಿಸುವ ತಾಯಿಗೆ ಅವಕಾಶ ಮಾಡಿಕೊಡುತ್ತಾನೆ. ಉದ್ವೇಗಕ್ಕೆ ಒಳಗಾದ ಅವನ ಕಣ್ಣುಗಳಲ್ಲಿ ಹೊರಬೀಳಲಾಗದೆ ತುಂಬಿಕೊಂಡ ಹನಿಗಳು. ಕಳಚಿದಂತೆ ಭಾಸವಾದರೂ ಕಳಚದ ಕೊಂಡಿ.
ಇನ್ನೊಮ್ಮೆ ಬ್ಲಾಕ್ ಕೆವಿನ್‌ನ ಭೇಟಿ ಮಾಡುತ್ತಾನೆ. ಹೊಟೇಲಿನಿಂದ ಕೆವಿನ್ ಅವನನ್ನು ತನ್ನ ಮನೆಗೆ ಕರೆದುಕೊಂಡು ಹೋಗುತ್ತಾನೆ. ಈಗ ಅವನಲ್ಲಿ ಮುಂಚಿಗಿಂತಲೂ ಹಗುರಾದ ಮುಖಭಾವವಿರುತ್ತದೆ. ತನ್ನ ಹೆಂಡತಿ ಮಗುವಿನ ಫೋಟೋ ತೋರಿಸುತ್ತಾನೆ. ಅವಳು ಬ್ಲಾಕ್‌ಗೂ ಪರಿಚಯದವಳು. ಈ ಸುಖಮಯವೆನ್ನಿಸುವ ಸಂದರ್ಭದಲ್ಲಿ ಬ್ಲಾಕ್ ತಾನು ವಿಷಯವೊಂದನ್ನು ತಿಳಿಸಬೇಕೆಂದು ಹೇಳುತ್ತಾನೆ. ಕೆವಿನ್‌ಗೆ ಮೈಯೆಲ್ಲ ಕಿವಿ. ಈಗ ಕ್ಯಾಮೆರಾ ಬ್ಲಾಕ್ ಮುಖದ ಮೇಲಷ್ಟೇ ಇರುತ್ತದೆ. ತಾನು ಈ ತನಕ ಯಾವುದೇ ವ್ಯಕ್ತಿಯನ್ನು ಸ್ಪರ್ಶಿಸಿಲ್ಲ ಎಂದು ಮೆಲು ಮಾತುಗಳಲ್ಲಿ ತಿಳಿಸುತ್ತಾನೆ. ಈ ಮಾತಿಗೆ ಕೆವಿನ್‌ನಂತೆ ಹೆಣ್ಣೊಬ್ಬಳನ್ನು ಒಲಿಸಿಕೊಳ್ಳದೆ ಏಕಾಂಗಿಯಾಗಿರುವುದನ್ನು ಸೂಚಿಸುತ್ತದೆ. ಅವನಿಗೆ ಪೂರ್ಣ ಗಮನವೆಲ್ಲ ತನ್ನತನದ ಅರಿವು ಮತ್ತು ತನ್ನ ಅಸ್ಮಿತೆಯ ಸ್ಥಾಪನೆಯ ಬಗ್ಗೆ ಇರುವುದು ವ್ಯಕ್ತವಾಗುತ್ತದೆ.
ನಿರ್ದೇಶಕ ಬ್ಯಾರಿ ಜೆಂಕಿನ್ಸ್ ಅತ್ಯಂತ ಪ್ರಮುಖವಾದ ವಿಷಯವನ್ನು ಎಲ್ಲಿಯೂ ವಾಚ್ಯವಾಗಿಸದೆ, ಅದರ ಎಲ್ಲ ಸೂಕ್ಷ್ಮತೆಗಳನ್ನು ಪಾತ್ರಗಳ ಸಮರ್ಪಕವಾದ, ನಿಯಂತ್ರಿತ ಅಭಿನಯದ ಮೂಲಕ ನಿರೂಪಿಸಿದ್ದಾನೆ. ಚಿತ್ರದಲ್ಲಿ ಮಾತುಗಳಿಗಿಂತ ಮೌನವೇ ಪ್ರಧಾನ. ಅಷ್ಟೇ ಸೂಕ್ಷ್ಮ ಹಿನ್ನೆಲೆ ಸಂಗೀತವೂ ಕೂಡ. ಇವರಿಗೆ ಸಂಕಲನದ ಉಪಯುಕ್ತವಾದ ಸಹಕಾರವಿದೆ.
ದಾವಣಗೆರೆಯಲ್ಲಿ ಎಂಜಿನಿಯರಿಂಗ್ ಪದವಿಯ ನಂತರ ಕೆ. ಪಿ. ಟಿ. ಸಿ. ಎಲ್.ನಲ್ಲಿ ಕಾರ್ಯ ನಿರ್ವಹಿಸಿ ನಿವೃತ್ತ. ಸಾಹಿತ್ಯ, ನಾಟಕ ಮತ್ತು ದೃಶ್ಯಮಾಧ್ಯಮದಲ್ಲಿ ಆಸಕ್ತಿ. ಅದರಲ್ಲಿಯೂ ಸಣ್ಣ ಕಥೆ, ಅನುವಾದ, ಚಲನಚಿತ್ರ ವಿಮರ್ಶೆ ಮುಂತಾದವುಗಳ ಬಗ್ಗೆ ಹೆಚ್ಚಿನ ಗಮನ. ಹಾರು ಹಕ್ಕಿಯನೇರಿ(ಚಲನಚಿತ್ರ) ನಿರ್ದೇಶನವೂ ಇದರಲ್ಲಿ ಸೇರಿದೆ. ಚಿತ್ರಕಥೆಯ ಸ್ವರೂಪ ಮತ್ತು ಪ್ರತಿಫಲನ, ಬಿಡುಗಡೆ(ಕಥಾ ಸಂಕಲನ) ಅವರ ಇತ್ತೀಚಿನ ಪ್ರಕಟಣೆಗಳು.