ಇಂದಿನ ತಲೆಮಾರಿನ ಪ್ರಸಂಗಕರ್ತರು ಮಾಡಬೇಕಾದದ್ದೇನು? ಯಕ್ಷಗಾನ ಪ್ರಸಂಗಕರ್ತನಾಗಲು ಬಯಸುವ ಪ್ರತಿಯೊಬ್ಬನೂ ಶೆಟ್ಟರು ಕೊಟ್ಟ ಲಕ್ಷಣಗಳಿಗೆ ಅನುಗುಣವಾಗಿ ಪದ್ಯವನ್ನು ರಚಿಸುವುದರ ಮೂಲಕ ಪ್ರಸಂಗ ಸಾಹಿತ್ಯ ವಿಭಾಗಕ್ಕೆ ಅಗತ್ಯವಾದ ಶಿಸ್ತನ್ನು ಒದಗಿಸಬೇಕಾಗಿದೆ. ಯಕ್ಷಗಾನ ತರಬೇತಿ ಕೇಂದ್ರಗಳು ಛಂದಸ್ಸಿನ ಪ್ರಾಥಮಿಕ ಜ್ಞಾನವನ್ನಾದರೂ ವಿದ್ಯಾರ್ಥಿಗಳಿಗೆ ಕೊಡಿಸಲು ಇನ್ನಾದರೂ ಮುಂದಾಗಬೇಕಿದೆ. ಯಕ್ಷಗಾನ ಪ್ರಸಂಗ ಪದ್ಯಗಳ ಸ್ವರೂಪದ ಕುರಿತು ಇರುವ ಗೊಂದಲವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅದನ್ನು ಮುದ್ರಿಸುವ ಪ್ರಕಾಶಕರು ಪರಿಷ್ಕೃತ ಮುದ್ರಣದಲ್ಲಿ ನಾರಾಯಣ ಶೆಟ್ಟರು ಕೊಟ್ಟ ಹೆಸರನ್ನೇ ಆಯಾ ಬಂಧಗಳಿಗೆ ಕೊಡುವುದು ಕೂಡ ಅಗತ್ಯ.
ಡಾ. ಎನ್. ನಾರಾಯಣ ಶೆಟ್ಟಿಯವರ ಕುರಿತು ಕಡತೋಕಾ ಗೋಪಾಲಕೃಷ್ಣ ಭಾಗವತ ಬರೆದ ಲೇಖನ
ಯಕ್ಷಗಾನ ಕ್ಷೇತ್ರದಲ್ಲಿ ಸಾಧಕರನ್ನು ಗುರುತಿಸುವಾಗ-ಮುಖ್ಯವಾಗಿ ಕಲಾವಿದರಿಗೆ ಬಿರುದು ಬಾವಲಿಗಳನ್ನು ಕೊಡುವುದರಲ್ಲಿ ನಮಗೆ ಯಾರೂ ಸರಿಸಾಟಿಯಲ್ಲ. ಯಲ್ಲಾಪುರದಿಂದ ಕುಂಬಳಕಾಸರಗೋಡಿನವರೆಗೆ ‘ಗಾನಸಾರಥಿಗಳ’ ಸಾರಥ್ಯದಲ್ಲಿ ‘ನಾಟ್ಯಮಯೂರ’ರು ಕುಣಿಯವುದನ್ನು ನೋಡಿ ನಲಿಯುವ ‘ನಡೆದಾಡುವ ಶಬ್ದಕೋಶ’ಗಳು ನಾವು ಎಂದು ಈಗಾಗಲೇ ನಿರೂಪಿಸಿದ್ದೇವೆ. ಆದರೆ ನಮ್ಮನ್ನಗಲಿದ ನಾರಾಯಣ ಶೆಟ್ಟರಿಗೆ ಸಂದ ‘ಅಭಿನವ ನಾಗವರ್ಮ’ ಎಂಬ ಬಿರುದು ಮಾತ್ರ, ಇಲ್ಲಿಯವರೆಗೆ ತಲೆಮಾರುಗಳ ಸಾಧಕರಿಗೆ ಯಕ್ಷಗಾನದ ಅಭಿಮಾನಿಗಳಾದ ನಾವು ನಾವೇ ಕೊಟ್ಟುಕೊಂಡ ಇಂತಹ ಬಿರುದುಗಳಲ್ಲಿಯೇ ಅತ್ಯಂತ ಸಾರ್ಥಕವಾದುದು. ಹಾಗೆಂದು ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ನಾಗವರ್ಮನ ‘ಛಂದೋಂಬುಧಿ’ಗಿರುವ ಮಹತ್ವ ಹಾಗೂ ಅದರ ಒಟ್ಟಾರೆ ಸ್ವರೂಪ ಮತ್ತು ನಾರಾಯಣ ಶೆಟ್ಟರು ಯಕ್ಷಗಾನ ಛಂದಸ್ಸಿನ ಮೇಲೆ ಕೈಗೊಂಡ ಅನೌಪಚಾರಿಕ ಸಂಶೋಧನೆಯ ಫಲಶ್ರುತಿಯಾದ ‘ಯಕ್ಷಗಾನ ಛಂದೋಂಬುಧಿ’ ನಮಗೆ ಕೊಡುವ ಅತ್ಯಮೂಲ್ಯವಾದ ಮಾಹಿತಿಗಳನ್ನು ನೋಡಿದ ಯಾರಿಗಾದರೂ ಅರ್ಥವಾದೀತು.
ಯಕ್ಷಗಾನ ಶಾಸ್ತ್ರೀಯವೂ ಜಾನಪದವೋ ಎಂಬ ಚರ್ಚೆ ಇತ್ಯರ್ಥವಾಗದಿರುವುದಕ್ಕೆ ಯಕ್ಷಗಾನದ ಸ್ವರೂಪವು ನಿಗೂಢವಾಗಿರುವುದಕ್ಕಿಂತಲೂ ಶಾಸ್ತ್ರೀಯ ಮತ್ತು ಜಾನಪದ ಈ ಎರಡು ಶಬ್ದಗಳ ವ್ಯಾಪ್ತಿ-ಇತಿ-ಮಿತಿಗಳ ಕುರಿತು ಇರುವ ಗೊಂದಲವೇ ಮುಖ್ಯ ಕಾರಣವಾಗಿದೆ ಎನ್ನಬಹುದು. ಯಕ್ಷಗಾನ ಕ್ಷೇತ್ರದ ಆಧುನಿಕ ಇತಿಹಾಸದಲ್ಲಿ ಡಾ.ಶಿವರಾಮ ಕಾರಂತರಿಂದ ಮೊದಲುಗೊಂಡು ಡಾ.ಅಮೃತ ಸೋಮೇಶ್ವರ ಅವರವರೆಗೆ, ಕುಕ್ಕಿಲ ಕೃಷ್ಣ ಭಟ್ಟರಿಂದ ಡಾ.ರಾಘವ ನಂಬಿಯಾರ್, ಡಾ.ಎಂ.ಪ್ರಭಾಕರ ಜೋಶಿಯವರವರೆಗೆ ಹಲವು ಮೂರ್ಧನ್ಯ ವಿದ್ವಾಂಸರು ಕೆಲವರು ಇದನ್ನು ಅಭಿಜಾತ ಅಂದರೆ ಶಾಸ್ತ್ರೀಯ ಕಲೆಯೆಂದೂ ಕೆಲವರು ಇದನ್ನು ಶಾಸ್ತ್ರೀಯವೆಂದು ಪರಿಗಣಿಸುವ ವ್ಯರ್ಥ ಪ್ರಯತ್ನವೇಕೆಂಬ ಅರ್ಥದಲ್ಲಿ ಜಾನಪದವೆಂದೂ ಸುದೀರ್ಘವಾಗಿಯೂ, ಪ್ರೌಢವಾಗಿಯೂ ಪ್ರತಿಪಾದಿಸಿದ್ದು ಈ ಎಲ್ಲ ತಜ್ಞರ ವಿಚಾರಧಾರೆಗಳು ವ್ಯವಸ್ಥಿತವಾಗಿ ಈವರೆಗೆ ದಾಖಲಾಗಿರುವುದು ಯಕ್ಷಗಾನದ ಹೆಮ್ಮೆ.
ಸೈದ್ಧಾಂತಿಕವಾಗಿ ಈ ಎರಡೂ ಥಟ್ಟುಗಳ ನಡುವೆ ಈ ವಿಷಯದಲ್ಲಿ ಭಿನ್ನಾಭಿಪ್ರಾಯವಿದ್ದರೂ ಯಾವುದೋ ಕಾಲಘಟ್ಟದಲ್ಲಿ ಶಿಸ್ತುಬದ್ಧವಾದ ವ್ಯವಸ್ಥೆಗೆ ಒಳಪಟ್ಟು ಸಾಮಾಜಿಕ, ಆರ್ಥಿಕ, ಧಾರ್ಮಿಕ ಪಲ್ಲಟಗಳ ಪ್ರಭಾವದಿಂದ ಕಾಲಾನುಕ್ರಮದಲ್ಲಿ ಶಿಥಿಲಗೊಂಡು ಅದೇ ಅಧೋಗತಿಯತ್ತ ಸಾಗುತ್ತಿರುವ ಈ ರಂಗಕಲೆ ತನ್ನ ಅಸ್ಮಿತೆಯನ್ನು ಕಂಡುಕೊಂಡು ಆ ಕಾಣ್ಕೆಯ ಬೆಳಕಿನಲ್ಲಿ ತನ್ನದೇ ಆದ ಶಿಸ್ತಿಗೆ ಒಳಪಟ್ಟು ಬೆಳಗಬೇಕೆಂಬ ನಿಟ್ಟಿನಲ್ಲಿ ವಿದ್ವದ್ವಲಯದಲ್ಲಿ ಯಾವ ಅಭಿಪ್ರಾಯ ಭೇದವೂ ಇದ್ದಂತೆ ಕಂಡುಬರುವುದಿಲ್ಲ.
ಸಾಹಿತ್ಯ, ಸಂಗೀತ, ನೃತ್ಯ, ಅಭಿನಯ, ವಾದ್ಯ, ಗೀತ, ಚಿತ್ರ-ಶಿಲ್ಪ ಕಲೆಗಳ ಹೂರಣವಾಗಿರುವ ಯಕ್ಷಗಾನದ ಹಲವು ಅಂಗೋಪಾಂಗಗಳ ಕುರಿತು ಮೈಲಿಗಲ್ಲುಗಳೆಂದು ಪರಿಗಣಿಸಬಹುದಾದ ಸಂಶೋಧನೆಗಳನ್ನು ಅನೇಕರು ಕೈಗೊಂಡಿದ್ದಾರೆ. ಯಕ್ಷಗಾನ ಸಾಹಿತ್ಯ ಕನ್ನಡ ಕಾವ್ಯ ಪರಂಪರೆಯ ಒಂದು ವಿಶಿಷ್ಟ ಕೊಂಡಿಯಾಗಿದ್ದು ಇಂದಿಗೂ ಜೀವಂತವಾಗಿರುವ ಸಾಹಿತ್ಯ ವಾಹಿನಿ. ಜಾಗತಿಕ ಮಟ್ಟದಲ್ಲಿ ಗುರುತಿಸಲ್ಪಡಬಹುದಾದ ಭಾರತದ ಛಂದಃಪರಂಪರೆ ವೈಜ್ಞಾನಿಕವಾಗಿ ಬೆಳೆದುಬಂದ ಒಂದು ಶಾಸ್ತ್ರೀಯ ಪರಂಪರೆ. ಆಧುನಿಕ ಕಾಲಘಟ್ಟದಲ್ಲಿ ಭಾರತೀಯ ಭಾಷೆಗಳ ಕಾವ್ಯಪರಂಪರೆಗಳು ಆಧುನಿಕ ಸಂವೇದನೆಗಳನ್ನು ಅಭಿವ್ಯಕ್ತಿಪಡಿಸಲು ತೊಡಕೆಂಬ ನೆವದಿಂದ ಸ್ವಚ್ಛಂದದ ಚಂದದ ಹಾದಿ ಹಿಡಿದರೂ ಯಕ್ಷಗಾನ ಕವಿಗಳು ಮಾತ್ರ ತಮಗರಿವಿಲ್ಲದಂತೆ ಈ ಛಂದಃಪರಂಪರೆಯನ್ನು ಕಾಪಿಟ್ಟುಕೊಂಡು ಬಂದರು. ಈ ಛಂದಃಪ್ರಕಾರಗಳ ಕುರಿತು ದಶಕಗಳ ಪರ್ಯಂತ ಶೋಧಿಸಿ ಯಕ್ಷಗಾನದ ಹಿರಿಮೆ ಗರಿಮೆಯನ್ನು ಈ ನಿಟ್ಟಿನಲ್ಲಿ ಇದಮಿತ್ಥಂ ಆಗಿ ನಿರೂಪಿಸಿದವರು ಡಾ.ಎನ್.ನಾರಾಯಣ ಶೆಟ್ಟರು. ಹಾಗಾಗಿಯೇ ಯಕ್ಷಗಾನದ ಛಂದಸ್ಸುಗಳ ವಿಷಯ ಬಂದಾಗಲೆಲ್ಲ ವಿದ್ವಾಂಸರುಗಳ ನಾಲಿಗೆಯಲ್ಲಿ ಮೊದಲು ಬರುವ ಹೆಸರು ನಾರಾಯಣ ಶೆಟ್ಟರದ್ದು.
ನಾರಾಯಣ ಶೆಟ್ಟರು ಶಾಲಾ ಅಧ್ಯಾಪಕರಾಗಿದ್ದವರು. ಬೇರೆ ಯಾವ ಹೆಚ್ಚಿನ ಆದಾಯದ ಮೂಲವಿಲ್ಲದಿದ್ದರೂ ತಮ್ಮ ಶಾಲಾ ಅಧ್ಯಾಪಕರ ಸಣ್ಣ ಸಂಬಳದಲ್ಲಿಯೇ ಜೀವನ ದೂಡುತ್ತಾ ದಕ್ಷಿಣ ಕನ್ನಡ ಜಿಲ್ಲೆಯ ದೂರದ ಹಳ್ಳಿಯಲ್ಲಿದ್ದುಕೊಂಡೇ ಯಕ್ಷಗಾನದ ತಲೆಮಾರುಗಳ ಭಾಗವತರು, ಪ್ರಸಂಗಕರ್ತರು, ವೇಷಧಾರಿಗಳು, ಸಂಶೋಧಕರು, ಅರ್ಥಧಾರಿಗಳನೇಕರ ಒಡನಾಟದಲ್ಲಿ ಬುದ್ಧಿಯನ್ನು ಬೆಳೆಸಿಕೊಂಡವರು ಮತ್ತು ಕುತೂಹಲವನ್ನು ಕೆರಳಿಸಿಕೊಂಡವರು. ಯಕ್ಷಗಾನ ಪ್ರಸಂಗಗಳ ಪದ್ಯಗಳ ಛಂದೋಬದ್ಧತೆಯ ಜಾಡಿನಲ್ಲಿ ಸಾಗಿದ ನಾರಾಯಣ ಶೆಟ್ಟರು ತಮ್ಮ ಕುತೂಹಲವನ್ನು ತಣಿಸಲು ಓದದೇ ಬಿಟ್ಟ ಪ್ರಸಂಗ ಇರಲಿಕ್ಕಿಲ್ಲ ಎನ್ನುವುದನ್ನು ಅವರ ಉದ್ಘ್ರಂಥ ಛಂದೋಂಬುಧಿಯಲ್ಲಿ ಅವರು ಉಲ್ಲೇಖಿಸುವ ಅಪರೂಪದ ಪ್ರಸಂಗದ ವಿಶಿಷ್ಟ ಪದ್ಯಗಳೇ ನಿರೂಪಿಸುತ್ತವೆ. ತಮ್ಮ ಸಂಶೋಧನೆಗಾಗಿ ಭಾರತೀಯ ಛಂದಃಶಾಸ್ತ್ರದ ಮೇಲೆ ಪ್ರಾಚೀನ ಕಾಲದಿಂದ ಆದುನಿಕ ಕಾಲಘಟ್ಟದವರೆಗೆ ಬಂದ ಗ್ರಂಥಗಳಲ್ಲಿ ಅವರು ಜಾಲಾಡದೇ ಬಿಟ್ಟ ಗ್ರಂಥಗಳಿಲ್ಲ ಎನ್ನಬಹುದು. ಈ ಎಲ್ಲ ಮಾಹಿತಿಗಳ ಬೆಳಕಿನಲ್ಲಿ ನಾರಾಯಣ ಶೆಟ್ಟರು ನಡೆಸಿದ ಸಂಶೋಧನೆಯ ಫಲಶ್ರುತಿಯಾದ ‘ಯಕ್ಷಗಾನ ಛಂದೋಂಬುಧಿ’ ಈ ಕೆಳಗಿನ ಹಲವು ಅಂಶಗಳ ಜೊತೆಗೆ ಹಲವು ಸೈದ್ಧಾಂತಿಕ ಗೊಂದಲಗಳನ್ನು ಪರಿಹರಿಸುತ್ತದೆ:
1. ಪ್ರಸಂಗದಲ್ಲಿ ಪದ್ಯದ ಮೇಲುಗಡೆ ಉಲ್ಲೇಖಿಸುವ ರಾಗ ಮತ್ತು ತಾಳದ ಹೆಸರು ರಾಗತಾಳಗಳ ಸೂಚಿಯಲ್ಲ ಬದಲಿಗೆ ವಿಶಿಷ್ಠ ಛಂದಸ್ಸಿನ ಪದ್ಯಗಳಿಗೆ ಅನುಕೂಲಕ್ಕಾಗಿ ಕೊಟ್ಟುಕೊಂಡ ಹೆಸರುಗಳು ಮಾತ್ರ.
2. ಪ್ರಸಂಗಗಳಲ್ಲಿ ಬೇರೆ ಬೇರೆ ರಾಗತಾಳಗಳ ಹೆಸರಿನಿಂದ ಉಲ್ಲೇಖಿಸಲ್ಪಟ್ಟ ಪದ್ಯಗಳು ಒಂದೇ ಪ್ರಕಾರದ ಛಂದೋಬಂಧವೆಂದೂ; ಹಾಗೂ ಒಂದೇ ರಾಗತಾಳದ ಹೆಸರಿನಿಂದ ಕರೆಯಲ್ಪಡುವ ಕೆಲವು ಪದ್ಯಗಳು ಬೇರೆ ಬೇರೆ ರೀತಿಯ ರಚನೆಗಳೆಂದು ಕೂಡ ಈ ಗ್ರಂಥ ನಿರೂಪಿಸುತ್ತದೆ.
3. ಯಕ್ಷಗಾನದ ಪದ್ಯಗಳು ಕನ್ನಡದ ಶಾಸ್ತ್ರೀಯ ಛಂದಃಪರಂಪರೆಯಲ್ಲಿ ಬೆಳೆದುಬಂದ, ಸಾಂಗತ್ಯ, ಷಟ್ಪದಿ, ಏಳೆಯೇ ಮೊದಲಾದವುಗಳಿಗೆ ಯಕ್ಷಗಾನದ ಕವಿಗಳು ಕೊಟ್ಟ ವೈವಿಧ್ಯಮಯವಾದ ರೂಪಗಳು.
4. ಯಕ್ಷಗಾನದ ತಾಳಗಳಿಗೂ ಪದ್ಯಗಳಿಗೂ ಇರುವ ಮತ್ತು ನಾವು ಯಕ್ಷಗಾನ ಕಲಿಕೆಯಲ್ಲಿ ಸಂಪೂರ್ಣ ನಿರ್ಲಕ್ಷಿಸಿರುವ ಸೂಕ್ಷ್ಮ ಸಂಬಂಧವನ್ನು ಸ್ವೋಪಜ್ಞತೆಯಿಂದ ವರ್ಣಿಸುವುದರ ಜೊತೆ ಜೊತೆಗೆ ಪದ್ಯ ಹೇಳುವಿಕೆ ಮತ್ತು ವಾದ್ಯ ನುಡಿಸುವ ನಿಟ್ಟಿನಲ್ಲಿ ಪರಂಪರೆಯ ಚೌಕಟ್ಟಿನಲ್ಲಿ ನಡೆಸಬಹುದಾದ ಹೊಸ ಪ್ರಯೋಗಗಳಿಗೆ ತಾತ್ವಿಕ ತಳಹದಿಯನ್ನೂ ಒದಗಿಸುತ್ತದೆ.
5. ನೂರೈವತ್ತಕ್ಕಿಂತಲೂ ಹೆಚ್ಚು ಯಕ್ಷಗಾನದ ಬಂಧಗಳ ಪಾದ ಪ್ರಮಾಣ, ಪ್ರಾಸ, ಗಣ, ವರಣವೇ ಮೊದಲಾದ ವಿಶಿಷ್ಟತೆಯನ್ನು ಲಾಕ್ಷಣಿಸುವ ಪ್ರತಿಯೊಂದು ಬಂಧದ ಲಕ್ಷಣವನ್ನೂ ಅದೇ ಬಂಧದಲ್ಲಿ ಪದ್ಯರೂಪದಲ್ಲಿ ಲಕ್ಷಣಿಸಿದ್ದಾರೆ. ಜೊತೆಗೆ ಪ್ರತ್ಯೇಕ ಯಾದಿಯಲ್ಲಿ ಲಕ್ಷಣಗಳನ್ನೂ ವ್ಯವಸ್ಥಿತವಾಗಿ ಒಳಗೊಂಡಿದೆ.
6. ಕೊನೆಯಲ್ಲಿ ಮುಂದಿನ ತಲೆಮಾರಿನ ಯಕ್ಷಗಾನ ಪ್ರಸಂಗಕರ್ತರು ಅನುಸರಿಸಬೇಕಾದ ಮಾರ್ಗವನ್ನೂ ವಿನಯಪೂರ್ವಕವಾಗಿ ವಿವರಿಸಿದ್ದಾರೆ ಕೂಡ.
ಹಂಪಿಯ ಕನ್ನಡ ವಿಶ್ವವಿದ್ಯಾಲಯ ಶೆಟ್ಟರ ಈ ಗ್ರಂಥಕ್ಕೆ ಡಿ.ಲಿಟ್.ಪ್ರದಾನ ಮಾಡಿ ಕೃತಾರ್ಥವಾಗಿದೆ. ಇಂತಹ ಮೌಲಿಕ ಗ್ರಂಥವನ್ನು ಪ್ರಕಟಿಸುವುದಕ್ಕೆ ಯಾವ ಪ್ರಕಾಶಕರೂ ಮುಂದೆ ಬರಲಿಲ್ಲವೆಂಬುದು ನೋವಿನ ಸಂಗತಿ. ನಮ್ಮ ತಂದೆಯವರ ಸ್ನೇಹಿತರಾಗಿದ್ದ ನಾರಾಯಣ ಶೆಟ್ಟರು 2005ರಲ್ಲಿ ನಮ್ಮ ಮನೆಗೆ ಬಂದು ದಿನ ತಂಗಿದ್ದರು. ಆ ದಿನಗಳು ಅವಿಸ್ಮರಣೀಯ. ಯಾವುದೋ ಒಂದು ಪ್ರಸಂಗದ ಪುಸ್ತಕವನ್ನು ತೆರೆದು ಅದರಲ್ಲಿರುವ ಸಾಮಾನ್ಯ ಪದ್ಯವೊಂದನ್ನು ಎತ್ತಿಕೊಂಡು ಜಾದೂ ರೀತಿಯಲ್ಲಿ ಅದನ್ನು ಹಿಂದೆ ಮುಂದೆ ಮಾಡಿ ಕೈತಟ್ಟಿ ತಾಳ ಹಾಕಿ ಅದರ ಮರ್ಮವನ್ನು ಅವರು ವಿವರಿಸಿದ ರೀತಿ ಮರೆಯುವಂತಿಲ್ಲ. ಕೊನೆಗೆ ಹೊರಡುವಾಗ ‘ಯಕ್ಷಗಾನ ಛಂದೋಂಬುಧಿ’ಯ ಗೌರವ ಪ್ರತಿಯನ್ನು ನಮ್ಮ ತಂದೆಯವರ ಕೈಯಲ್ಲಿಟ್ಟು ‘ಕಡತೋಕರೆ ಏನು ಮಾಡೋಣ ನನ್ನ ಈ ಪುಸ್ತಕ ಯಾರೂ ಪ್ರಕಾಶಿಸುವುದಕ್ಕೆ ತಯಾರಿಲ್ಲ.. ನಾನೇ ಅಚ್ಚು ಹಾಕಿಸಿದ್ದೇನೆ.. ಈ ಪ್ರತಿ ತಮಗೆ ಗೌರವಪೂರ್ವಕ’ ಎಂದು ಸಮರ್ಪಿಸಿದ ಚಿತ್ರ ಇನ್ನೂ ಕಣ್ಣಮುಂದಿದೆ.
ಈ ಸಂದರ್ಭದಲ್ಲಿ ಹಿಂದೂಸ್ಥಾನೀ ಸಂಗೀತದ ರಚನೆಗಳನ್ನು ಸಂಗ್ರಹಿಸಿ ಹಲವು ಸಂಪುಟಗಳಲ್ಲಿ ಕಳೆದ ಶತಮಾನದ ಆದಿಯಲ್ಲಿ ಆಗಿ ಹೋದ ಪಂ.ಭಾತ್ಖಂಡೆಯವರ ನೆನಪಾಗದಿರದು. ಅಸಂಖ್ಯಾತ ಕಲಾಕಾರರನ್ನು ಸಂದರ್ಶಿಸಿ ಅವರಿಂದ ನೂರಾರು ರಾಗಗಳ ಸಾವಿರಾರು ರಚನೆಗಳ(ಛೀಜು)ನ್ನು ಸಂಗ್ರಹಿಸಿ ಅವುಗಳನ್ನು ಸಾಹಿತ್ಯ ದೃಷ್ಟಿಯಿಂದ ಪರಿಷ್ಕರಿಸಿ ಹಾಗೂ ರಾಗ ಸಂಯೋಜನೆಯನ್ನು ಸ್ವರ ಲಿಪಿಯಲ್ಲಿ ಬರೆದು ಹಲವು ಸಂಪುಟದಲ್ಲಿ ಪಂ.ಭಾತ್ಖಂಡೆ ಪ್ರಕಟಿಸಿದರು. ಆ ನಂತರದಲ್ಲಿ ಹಿಂದೂಸ್ಥಾನೀ ಸಂಗೀತ ಹೆಚ್ಚು ವ್ಯವಸ್ಥಿತವಾಗಿ ಬೆಳೆದುಬಂತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಆ ಕಾಲದಲ್ಲಿ ಭಾತ್ಖಂಡೆಜಿ ಅವುಗಳನ್ನು ಸಂಗ್ರಹಿಸಲು ಪಟ್ಟಪಾಡುಗಳ ದಂತ ಕಥೆಗಳೇ ಇವೆ. ಯಾವ ಕಲೆಗಳೂ ಹುಟ್ಟಿನಿಂದ ಶಾಸ್ತ್ರೀಯ ಶಿಸ್ತಿಗೆ ಒಳಪಡಲಾರವು, ಇಂತಹವರ ಪ್ರಯತ್ನದ ಫಲವಾಗಿಯೇ ಕಲೆಯು ಸರಿಯಾದ ವಿಕಾಸದ ಮಾರ್ಗವನ್ನು ಹೊಂದಲು ಸಾಧ್ಯ.
ಹಿಂದೂಸ್ಥಾನೀ ಸಂಗೀತ ಕ್ಷೇತ್ರದಲ್ಲಿ ತಾನಸೇನನಿಂದ ಭೀಮಸೇನ ಜೋಶಿಯವರವರೆಗೆ ಜನಮಾನಸದಲ್ಲಿ ಅಜರಾಮರವಾಗಿ ನೆಲೆನಿಂತ ಸಹಸ್ರಮಾನದ ಕಲಾಕಾರರು ಆಗಿ ಹೋಗಿದ್ದಾರೆ. ಆದರೆ ಪಂ.ಭಾತ್ಖಂಡೆಯಂತಹ ಸಾಧಕರು ಅವರೊಬ್ಬರು ಮಾತ್ರ. ಇಂತಹದೇ ಚಾರಿತ್ರಿಕ ಕಾಯಕದಲ್ಲಿ ಜೀವಮಾನವನ್ನು ಸವೆಸಿದ ನಾರಾಯಣ ಶೆಟ್ಟರು ಇದೀಗ ಯಶಃಕಾಯರಾಗಿದ್ದಾರೆ.
ಹಾಗಾದರೆ ಇಂದಿನ ತಲೆಮಾರಿನ ಪ್ರಸಂಗಕರ್ತರು ಮಾಡಬೇಕಾದದ್ದೇನು? ಯಕ್ಷಗಾನ ಪ್ರಸಂಗಕರ್ತನಾಗಲು ಬಯಸುವ ಪ್ರತಿಯೊಬ್ಬನೂ ಶೆಟ್ಟರು ಕೊಟ್ಟ ಲಕ್ಷಣಗಳಿಗೆ ಅನುಗುಣವಾಗಿ ಪದ್ಯವನ್ನು ರಚಿಸುವುದರ ಮೂಲಕ ಪ್ರಸಂಗ ಸಾಹಿತ್ಯ ವಿಭಾಗಕ್ಕೆ ಅಗತ್ಯವಾದ ಶಿಸ್ತನ್ನು ಒದಗಿಸಬೇಕಾಗಿದೆ. ಯಕ್ಷಗಾನ ತರಬೇತಿ ಕೇಂದ್ರಗಳು ಛಂದಸ್ಸಿನ ಪ್ರಾಥಮಿಕ ಜ್ಞಾನವನ್ನಾದರೂ ವಿದ್ಯಾರ್ಥಿಗಳಿಗೆ ಕೊಡಿಸಲು ಇನ್ನಾದರೂ ಮುಂದಾಗಬೇಕಿದೆ. ಯಕ್ಷಗಾನ ಪ್ರಸಂಗ ಪದ್ಯಗಳ ಸ್ವರೂಪದ ಕುರಿತು ಇರುವ ಗೊಂದಲವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಅದನ್ನು ಮುದ್ರಿಸುವ ಪ್ರಕಾಶಕರು ಪರಿಷ್ಕೃತ ಮುದ್ರಣದಲ್ಲಿ ನಾರಾಯಣ ಶೆಟ್ಟರು ಕೊಟ್ಟ ಹೆಸರನ್ನೇ ಆಯಾ ಬಂಧಗಳಿಗೆ ಕೊಡುವುದು ಕೂಡ ಅಗತ್ಯ. ‘ಛಂದೋಬುದಿ’ಯಲ್ಲಿ ಚರ್ಚಿತವಾದ ಕ್ಲಿಷ್ಟವಾದ ಅಂಶಗಳನ್ನು ಸರಳವಾಗಿ ವಿಷದೀಕರಿಸುವ ಗ್ರಂಥಗಳ ರಚನೆಯೂ ಆಗಬೇಕಾಗಿದೆ.
ಇತ್ತೀಚೆಗೆ ಟೀ.ವಿ.ಗಳಲ್ಲಿ ಕಲಾವಿದರುಗಳು ಯಕ್ಷಗಾನದ ಶಾಸ್ತ್ರೀಯತೆಯಂತಹ ಗಂಭೀರವಾದ ಅಕಾಡೆಮಿಕ್ ವಿಷಯದ ಮೇಲೆ ಮಾತನಾಡುತ್ತಾ ಅಥವಾ ಅಪ್ಪಣೆ ಕೊಡಿಸತ್ತಾ ‘ಯಕ್ಷಗಾನವನ್ನು ಶಾಸ್ತ್ರೀಯ ಎಂದು ಸರ್ಕಾರ ಘೋಷಿಸಬೇಕಾಗಿದೆ’, ‘ಯಕ್ಷಗಾನದ ಯಾವುದೇ ವಿಷಯದ ಕುರಿತು ಈವರೆಗೆ ಇದಮಿತ್ಥಂ ಆಗಿ ಹೇಳಿದವರಿದ್ದಾರೆಯೇ?’, ‘ಯಕ್ಷಗಾನದಲ್ಲಿ ಕರ್ಕಿ ಮಟ್ಟು, ಸಭಾಹಿತ ಮಟ್ಟು.. ತಿಟ್ಟು ಹೀಗೆ ಇರುವಾಗ ಯಾವುದನ್ನು ಮಾಡಿದರೆ ಸರಿ ಯಾವುದನ್ನು ಮಾಡಿದರೆ ತಪ್ಪು ಅಂತ ‘ಇದಮಿತ್ಥಂ’ ಅಂತ ಯಾರು ಹೇಳುವವರು?’ ಎಂದೆಲ್ಲ ಮಾತನಾಡಿದ್ದನ್ನು ಕೇಳಿದಾಗ ಅಯ್ಯೋಪಾಪ ಅನಿಸುವುದರ ಜೊತೆ ಜೊತೆಗೆ ನೆನಪಾದದ್ದು ಡಾ.ಎನ್.ನಾರಾಯಣ ಶೆಟ್ಟರ ಸಾಧನೆ. ಕೆಲವರಿಗೆ ಪಾಮರ ಪ್ರೇಕ್ಷಕರನ್ನು ರಂಜಿಸಲು ರಂಗಸ್ಥಳದಲ್ಲಿ ಏನೆಲ್ಲವನ್ನೂ ಮಾಡಿ ಎಷ್ಟೆಲ್ಲಾ ಪಡೆದರೂ ತೃಪ್ತಿಯಿಲ್ಲ. ಯಕ್ಷಗಾನದ ಅಂಗೋಪಾಂಗಗಳ ಕುರಿತು ಕೂಡ ತಮ್ಮ ಅನುಮಾನಗಳನ್ನು ಸಿದ್ಧಾಂತದ ರೂಪದಲ್ಲಿ ಹರಿಯಬಿಟ್ಟು ಯಕ್ಷಗಾನದಲ್ಲಿ ಇದೆಯೆಂದರೆ ಯಾರಾದರೂ ನಂಬಬಹುದಾದ ಸೈದ್ಧಾಂತಿಕ ಗೊಂದಲಗಳನ್ನೇ ಅತಿಶಯೀಕರಿಸಿ ತಮ್ಮ ಅಯಕ್ಷಗಾನೀಯ ಅವಾಂತರಗಳನ್ನು ಕೂಡ ಪರೋಕ್ಷವಾಗಿ ಸಮರ್ಥಿಸಿಕೊಂಡು ತಾವು ಮಾಡುವುದು ಸರಿಯೆಂದು ಕೂಡ ನಿರ್ಭಿಡೆಯಿಂದ ಮಾಡುತ್ತಲೇ ಕಲಾವಿದರ ಆಪದ್ಭಾಂಧವನಾಗಿ ಹೊರಹೊಮ್ಮುವ ಉತ್ಸಾಹ. ಅಂತಹವುಗಳೇ ಮಾನ ಮರ್ಯಾದೆಯನ್ನು ಪಡೆಯುತ್ತಾ ಅಕಾಡೆಮಿಯಂತಹ ಅಕಾಡೆಮಿಕ್ ಸಂಸ್ಥೆಗಳ ಮೌನ ಸಮ್ಮತಿಯನ್ನೂ ಪಡೆಯುತ್ತಿರುವ ಇಂದಿನ ದಿನಗಳಲ್ಲಿ ಯಕ್ಷಗಾನದ ಮಟ್ಟುಗಳ ಕುರಿತು ವೈವಿಧ್ಯಮಯವಾದ ಛಂದಸ್ಸುಗಳ ಕುರಿತು ತಲಸ್ಪರ್ಷಿ ಸಂಶೋಧನೆಯನ್ನು ಜೀವಮಾನವೀಡೀ ಕೈಗೊಂಡ ನಾರಾಯಣ ಶೆಟ್ಟರ ನಿರ್ಗಮನ ಯಕ್ಷಗಾನವನ್ನು ಯಕ್ಷಗಾನವಾಗಿಯೇ ಪ್ರೀತಿಸುವವರಿಗೆ ಒಂದು ಆಘಾತ.
ದಿವಂಗತ ಡಾ.ಎನ್.ನಾರಾಯಣ ಶೆಟ್ಟರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ. ನಾರಾಯಣ ಶೆಟ್ಟರ ವಿದ್ವತ್ ಪರಂಪರೆ ಮುಂದುವರಿಯಲಿ; ಹಾಗೂ ಸಂಶೋಧಕರ ಕಾಣ್ಕೆಯನ್ನು ಪ್ರಯೋಗದಲ್ಲಿ ಅಳವಡಿಸಿಕೊಳ್ಳುವ ಸಂಯಮ ಮತ್ತು ನಿಷ್ಠೆ ನಮ್ಮಲ್ಲಿ ಜಾಗೃತವಾಗಲಿ ಎಂದು ಹಾರೈಸೋಣ.
ಕಡತೋಕಾ ಗೋಪಾಲಕೃಷ್ಣ ಭಾಗವತ. ಉ.ಕ. ಜಿಲ್ಲಾ ಹಳದೀಪುರದ ವಾಸಿ. ಯಕ್ಷಮೀಸಲಾದ ಯಕ್ಷರರಂಗ ಎಂಬ ಮಾಸಪತ್ರಿಕೆಯನ್ನು ನಡೆಸಿಕೊಂಡು ಬರುತ್ತಿರುವ ನ್ಯಾಯವಾದಿ ಮತ್ತು ಹವ್ಯಾಸಿ ಭಾಗವತ.