ಪಾತ್ರವೊಂದನ್ನು ಧರಿಸುವ ಕಲಾವಿದನಿಗೆ ಇರಬೇಕಾದ ಅರ್ಹತೆಗಳೇನು? ಆ ಪಾತ್ರ ಪುರಾಣ ಕಾಲದಲ್ಲಿದ್ದಷ್ಟೇ ಎತ್ತರ, ಗಾತ್ರ, ಬಣ್ಣ, ರೂಪಗಳು ಬೇಕೆ? ಖಂಡಿತ ಇಲ್ಲ. ಯಕ್ಷಗಾನದ ಮಟ್ಟಿಗೆ ಅಂತಹ ನಿರ್ಬಂಧಗಳೇನೂ ಇಲ್ಲ. ತೀರಾ ಕೃಶ ಶರೀರದ ಶಿವರಾಮ ಹೆಗಡೆಯವರ ದುಷ್ಟಬುದ್ಧಿ, ಕೌರವ ನೋಡಿದವರು ಈ ಮಾತನ್ನು ಅರ್ಥ ಮಾಡಿಕೊಳ್ಳಬಲ್ಲರು. ತೆಳ್ಳಗೆ, ಬೆಳ್ಳಗೆ ಇರುವ ಕೋಮಲ ಕಾಯದ ಹೆಣ್ಣುಮಕ್ಕಳು ಕಂಸನ ವೇಷಧರಿಸಿ ಪಾತ್ರ ಆವಾಹಿಸಿಕೊಂಡು ಅಭಿನಯಿಸಿದಾಗ ನೋಡುತ್ತಿದ್ದ ಪ್ರೇಕ್ಷಕರು ಒಂದುಸಲ ತಮ್ಮತಮ್ಮಲ್ಲೇ ಜಗಳವಾಡಿ ಬೆಟ್ಸ್ ಕಟ್ಟಿಕೊಂಡು ಚೌಕಿಗೆ ಬಂದು ಕಂಸನ ಮಾಡಿದ ಹುಡುಗನ ತೋರಿಸಿ ನೀವು ಹುಡುಗಿ ಅಂತ ಮೋಸ ಮಾಡುತ್ತಿರುವ ಹಾಗಿದೆ ಅಂತ ಗಲಾಟೆ ಎಬ್ಬಿಸಿದ್ದರು.
ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ
ಹಣೆಯ ಮಧ್ಯದಲ್ಲಿದ್ದ ಕೆಂಪು ಬಿಂದಿಯನ್ನು ತೆಗೆದು ಕನ್ನಡಿಗೆ ಹಚ್ಚಿಟ್ಟು ಚಕ್ಕಳ ಮಕ್ಕಳ ಹಾಕಿ ಕೂತದ್ದೆ ಬಣ್ಣದ ಮಂಜಣ್ಣ ಎಣ್ಣೆಯಲ್ಲಿ ಕಲಸಿದ ಬೇಸು ಹಚ್ಚತೊಡಗುತ್ತಾನೆ. ಕಣ್ಣು ಮುಚ್ಚಿ ಕೂತಿದ್ದರೂ ಕೊಬ್ಬರಿ ಎಣ್ಣೆಯ ವಾಸನೆ ಮೂಗಿಗೆ ಅಡರುತ್ತ ಇರುತ್ತದೆ. ಕೆಂಪು ಹುಡಿಯನ್ನು ಬೆರಳಿಂದ ಆ ಮಾಡು ಎಂದು ಹೇಳಿ ತುಟಿಗೆ ತೀಡುತ್ತಾನೆ. ಬ್ರಶ್ಶಿನ ಹಿಂಬದಿಯ ಚೂಪು ಭಾಗದಿಂದ ಕಾಡಿಗೆಯ ಹುಬ್ಬು ಎಳೆಯುತ್ತಾನೆ. ಕನ್ನಡಿಯಲ್ಲಿಣಿಕಿದರೆ ಪಾರ್ಲರಿನಲ್ಲಿ ಶೇಪು ಮಾಡಿಸಿದ ಕಾಮನ ಬಿಲ್ಲಿನಾಕಾರದ ಮೂಲ ಹುಬ್ಬಿನ ಮೇಲೆ ಮತ್ತೊಂದು ಹುಬ್ಬು ಹುಟ್ಟಿದೆ. ಕೃತಕ ಕೂದಲಿನ ಎಳೆ ತಿಕ್ಕಿ ಹುರಿಗೊಳಿಸಿ ತಯಾರಿಸಿಕೊಂಡಿದ್ದ ಜೋಡಿ ಮೀಸೆಗಳನ್ನು ಮೂಗಿನ ಕೆಳಗೆ ಇಟ್ಟು ಕೆನ್ನೆಗೆ ಒತ್ತಿ ನೋಡಿ, ಕತ್ತರಿ ಹೊರ ತೆಗೆದು ಒಂಚೂರು ತುದಿ ಕತ್ತರಿಸಿ ಆಕಾರ ಸರಿಪಡಿಸಿಕೊಂಡಾದ ಮೇಲೆ ಅಂಟಿನ ಬಾಟಲಿ ಹೊರ ತೆಗೆಯುತ್ತಾನೆ. ಮುಚ್ಚಳ ತೆಗೆದು ಕಟ್ಟಿಗೆ ಚೂರಿನಿಂದ ಮೂಗಿನ ಕೆಳಗೆ ಮೀಸೆಯಾಕಾರದಲ್ಲಿಯೇ ಅಂಟಿನಿಂದ ಚಿತ್ರ ಬಿಡಿಸುತ್ತಾನೆ. ಆಗ ಬರುತ್ತದೆ ಗಪ್ಪೆನ್ನುವ ಸ್ಪಿರಿಟಿನ ಘಾಟು ವಾಸನೆ. ಏನೇನು ಮಾಡಿ ತಡೆದುಕೊಂಡರೂ ತೀರಾ ಮೂಗೊಳಗೆ ನುಗ್ಗಿ ಬಿಡುತ್ತದೆಯಾದ್ದರಿಂದ ಆಂ ಊಂ ಎಂದು ನಮ್ಮ ಅಸಹನೆ ಪ್ರದರ್ಶನ ಆಗೇ ಬಿಡುತ್ತದೆ. ಬಾಯಿ ತುಂಬ ತುಂಬಿಕೊಂಡ ಕವಳದಿಂದಾಗಿ ಬರಿ ಮೂಗಿನಿಂದ ಕುಕುಕು ಸ್ವರ ಹೊರಡಿಸಿ ಸಂತೈಸಿದ ಮಂಜಣ್ಣ ರಂಗಸ್ಥಳದಲ್ಲಿ ಕಿತ್ತು ಬೀಳಬಾರದೆನ್ನುವ ತನ್ನ ಮುನ್ನೆಚ್ಚರಿಕಾ ಕ್ರಮದೊಂದಿಗೆ ಸಾಕಷ್ಟು ದಪ್ಪಗೆ ಅಂಟು ಬಳಿದು ಅದರ ಮೇಲೆ ಮೀಸೆ ಕೂರಿಸಿ ಮೇಲೊಂದು ವಲ್ಲಿಯನ್ನು ಬಿಗಿದು ಕಟ್ಟುತ್ತಾನೆ. ಅಂಗಿ, ಕಸೆಸೀರೆ, ಎದೆಹಾರ, ಭುಜಕೀರ್ತಿ ಒಂದೊಂದೇ ತೊಟ್ಟ ಹಾಗೆ ಭಾರ ಏರುತ್ತಲೇ ಹೋಗುತ್ತದೆ. ತಲೆ ಮೇಲೆ ಕಿರೀಟ ಇಟ್ಟು ಅಳತೆ ನೋಡುವಾಗ ಸ್ವಂತದ ಜಡೆಯನ್ನು ಸರಿಯಾಗಿ ಹಿಂದೆ ಹಾಕಿಕೊಂಡರಾಯಿತು. ಹುರಿ ಬಿಗಿದು ಕಟ್ಟಿ ಆಮೇಲೆ ಕರ್ಣಕುಂಡಲದ ಹುರಿ ಬಿಗಿಯುವಾಗ ಹುಷಾರಾಗಿ ಸ್ವಂತದ ಕಿವಿ ಎಳೆದುಕೊಳ್ಳಬೇಕು ಇಲ್ಲವಾದರೆ ಹುರಿ ಬಿಗಿತದಿಂದ ತಲೆ ನೋವು ಗ್ಯಾರಂಟಿ. ಪೂರ್ತಿ ವೇಷ ಸಿದ್ಧವಾದ ಮೇಲೆ ಕನ್ನಡಿ ಎದುರು ನಿಂತರೆ ಅರೆ ಇದು ಯಾರು, ನಾನಂತೂ ಅಲ್ಲ.
ಒಂದು ಸಾರಿ ಅಬ್ಬರ ಬಿಡ್ತಿಗೆ ಹೊಡೆಯುವ ಚಂಡೆ-ಮದ್ದಳೆಯ ಜೊತೆ ಭಾಗವತರ ಗಣಪತಿ ಪೂಜೆಗೆ ಕೈ ಮುಗಿದು ನಿಂತಾಗ ಸಾವಕಾಶವಾಗಿ ಮೈತುಂಬಿಕೊಳ್ಳುತ್ತದೆ ಆವತ್ತಿನ ವೇಷ. ರೋಮ ರೋಮದಲ್ಲಿಯೂ ಜುಮುಜುಮು ವಿದ್ಯುತ್ ನ ಹಾಗೆ ಪ್ರವಹಿಸುವ ಆವೇಷ. ಆಮೇಲೆ ರಂಗಸ್ಥಳದಲ್ಲಿ ಹೋಗಿ ಹಿಮ್ಮೇಳದವರು ಪ್ರಸಂಗ ಶುರು ಮಾಡುತ್ತಿದ್ದಂತೆಯೇ ಕಾವು ಹೆಚ್ಚಾಗುತ್ತದೆ. ಒಡ್ಡೋಲಗದವರು ತಾ.. ಧೇಂ.. ತಾ.. ಎಂದು ಹೋಗಿ ಒಬ್ಬಿಬ್ಬರು ಧೀಗಣ ಹಾಕಿ ಮಂಡಿ ಹೊಡೆದು ಪ್ರೇಕ್ಷಕರು ಜೋರಾಗಿ ಸಿಳ್ಳೆ, ಚಪ್ಪಾಳೆ ಹಾಕಿದ್ದೇ ಚೌಕಿಯಲ್ಲಿದ್ದವರಿಗೆಲ್ಲ ರೋಮಾಂಚನ. ಇನ್ನು ನಮ್ಮ ಪ್ರವೇಶ ಯಾವಾಗ ಅಂತ. ಆಗೇ ಹೋಯಿತು. ಈ ಪದ್ಯ ಮುಗಿದದ್ದೇ ನಾನು ಹೋಗಬೇಕು ಎನ್ನುವಾಗ ಕತ್ತಿ ಹಿಡಿದು ಪರದೆಯ ಹಿಂದೆ ನಿಂತಾಗ ಅದೆಷ್ಟು ಸಾವಿರದೈನೂರನೆ ಪ್ರಯೋಗವಾಗಿದ್ದರೂ ಒಂದು ಸಣ್ಣ ಕಂಪನ.
ವೇಷದಲ್ಲಿ ಬಗ್ಗಲಾಗದಿದ್ದಕ್ಕೆ ವೀರಮಂಡಿಯಲ್ಲಿ ಕೂತು ನೆಲ ಮುಟ್ಟಿ ನಮಸ್ಕರಿಸಿ ಬಲಗೈಲಿ ಪರದೆ ಸರಿಸಿ ಬಲಗಾಲು ಮುಂದಿಟ್ಟು ಕುಣಿಯುತ್ತ ಹೋದೊಡನೆ ಸಿಳ್ಳೆ ಚಪ್ಪಾಳೆಗಳೊಂದಿಗೆ ಸ್ವಾಗತಿಸುವ ಪ್ರೇಕ್ಷಕ ಸಮೂಹ ಎದುರಾದದ್ದೇ ಪೂರ್ತಿಯಾಗಿ ಕಚ್ಚಿಕೊಳ್ಳುತ್ತದೆ ವೇಷ ಮತ್ತದರ ಆವೇಶ. “ಅರ್ತಿಯಿಂದೋಲಗದೊಳೊಪ್ಪಿರೆ ವಿಭವದೊಳು….” ಅರ್ಧ ಚಂದ್ರಾಕೃತಿಯ ರಂಗಸ್ಥಳವನ್ನು ವಿಭವದೊಳು ಎಂಬುದಕ್ಕೆ ಅಭಿನಯಿಸುತ್ತ ಸುತ್ತು ಹಾಕುತ್ತಿದ್ದಂತೆ ಆ ಖಾಲಿ ರಂಗದಲ್ಲಿ ಸುತ್ತಲೂ ಮಂತ್ರಿಗಳು, ಪುರಜನರು, ಪಂಡಿತರು ಕುಳಿತಿರುವಂತೆ ಭಾಸವಾಗತೊಡಗುತ್ತದೆ. ಕುಳಿತ ಕಟ್ಟಿಗೆಯ ಮುರುಕು ಕಾಲಿನ ಬೆಂಚು ಮಣಿಮಯ ಸಿಂಹಾಸನದಂತೆ ಹೊಳೆಯತೊಡಗುತ್ತದೆ. ಪದ್ಯ ನಿಂತಕೂಡಲೆ ಮಾತು ಶುರು. ಅದಕ್ಕೆ ಯಕ್ಷಗಾನದವರು ಹೇಳುವುದು ‘ಅರ್ಥ’ ಯಾವುದರ ಅರ್ಥ? ಪದ್ಯದ ಅರ್ಥವಾ? ಅಲ್ಲ ಅದು ಪಾತ್ರದ ಅರ್ಥ, ಪಾತ್ರವನ್ನು ಹೊತ್ತು ನಿಂತ ಪಾತ್ರಧಾರಿ ಆ ಪಾತ್ರದ ಬಗ್ಗೆ ಕಂಡಿರುವ ಅರ್ಥ. ಅವನು ಧರಿಸಿದ ಪಾತ್ರದ ಸಮೇತ ಆ ಯುಗವನ್ನು ಆ ಜಗವನ್ನು ಹಿಂಪ್ರವೇಶ ಮಾಡಿ ಆ ಕಾಲದ ಆ ದಿನದ ಆ ಸನ್ನಿವೇಶವನ್ನು ತನ್ನ ಮನೊಭೂಮಿಕೆಯಲ್ಲಿ ಸೃಷ್ಟಿಸಿಕೊಂಡು ಅದನ್ನು ರಂಗದ ಮೇಲೆ ಪುನರ್ ಸೃಷ್ಟಿ ಮಾಡತೊಡಗುತ್ತಾನೆ. ನಿಧಾನಕ್ಕೆ ಕತೆ ಮುನ್ನಡೆದಂತೆ ಭಾವಾವೇಷದ ಸಂಗತಿಗಳು ಘಟಿಸಿದ ಹಾಗೆ ಅವನೇ ಪಾತ್ರವಾಗಿ ಬಿಡುತ್ತಾನೆ.
ರಾಜ್ಯ ಕಳೆದುಕೊಂಡ ಹರಿಶ್ಚಂದ್ರ ಕಣ್ತುಂಬಿಕೊಂಡು ಎದುರು ಬಂದರೆ ಅದೇ ರಂಗಸ್ಥಳವೀಗ ಸ್ಮಶಾನದಂತೆ ಕಾಣುತ್ತಿದೆ. ಪ್ರೇಕ್ಷಕರಿಗೆ ಅವನು ಹರಿದ ಕಂಬಳಿ ಹೊತ್ತು ನಿಂದಂತೆ ಕಾಣುತ್ತಿದ್ದಾನೆ. ಕರ್ಣನನ್ನು ಶಲ್ಯ ಬಿಟ್ಟು ಹೋಗಿ ಪರಾಭವಗೊಂಡಾಗ “ರುಧಿರತೋಯದಿ ಭೂಮಿ ಕೆಸರಾಯ್ತು ರಥ ಹೂಳಿತದರೊಳು” ಎನ್ನುವಾಗ ನಟನಿಗೆ ಹೆಜ್ಜೆ ಕಿತ್ತಿಡಲು ಕಷ್ಟವಾಗುತ್ತಿದೆ. ತನ್ನ ಸುತ್ತಲೂ ಕುರುಕ್ಷೇತ್ರದ ರಣಕಣದ ಕೆಸರು ತುಂಬಿ ತನ್ನ ಗಾಲಿ ಹೂತು ಹೋದ ಅನುಭವವಾಗುತ್ತಿದೆ. ಅವನಿಗಿಂತ ಹೆಚ್ಚಿನ ನೋವು ಪ್ರೇಕ್ಷಕನ ಕಣ್ಣಲ್ಲಿ. ಅವನಿಗೆ ಅಸಹಾಯಕ ಕರ್ಣನನ್ನು ಮೇಲೆತ್ತಿ ಸಹಾಯ ಮಾಡಲೇ ಎನ್ನುವಷ್ಟು ಕಸಿವಿಸಿ ತಳಮಳ. ನಟ ಸೃಷ್ಟಿಸುತ್ತ ಹೋದ ಪಾತ್ರವೀಗ ಪ್ರೇಕ್ಷಕನ ಕಣ್ಣು-ಕಿವಿಗಳ ಮೂಲಕ ಎದೆಗಿಳಿದು ಬೆಳೆಯುತ್ತಿದೆ. ನಟನ ಜೊತೆಜೊತೆಗೆ ಪ್ರೇಕ್ಷಕನೂ ಪಾತ್ರವಾಗಿದ್ದಾನೆ.
ಈಗ ಹೇಳಿ ಎಲ್ಲಿದ್ದಾನೆ ಕರ್ಣ? ಭಾವ ತುಂಬಿ ವಿದ್ರಾವಕವಾಗಿ ಹರಿಯುತ್ತಿರುವ ಭಾಗವತರ ಪದ್ಯದಲ್ಲಾ? ನೋವಿನಿಂದ ಮುಖ ಕಿವುಚಿ ಮಂಡಿಯಿಂದ ತೆವಳುತ್ತ ರಂಗದಲ್ಲಿರುವ ನಟನ ಅಭಿನಯದಲ್ಲಾ? ಅಥವಾ ಕುರ್ಚಿಯ ಮುಂತುದಿಯಲ್ಲಿ ಕೂತಲ್ಲೇ ಸ್ತಬ್ದ ಚಿತ್ರವಾಗಿ ತಮ್ಮ ತಮ್ಮ ಊರು-ಹುದ್ದೆ-ಬದುಕು ಎಲ್ಲವನ್ನು ಮರೆತು ಕಣ್ಣೀರು ಸುರಿಸುತ್ತಿರುವ ಪ್ರೇಕ್ಷಕನ ಎದೆಯಲ್ಲಾ? ಇದು ಯಕ್ಷಗಾನ- ಇದು ರಂಗಭೂಮಿ- ಇದು ನಟನೆಯ ಜಾದೂ.
ಹಾಗಾಗಿಯೇ ಯಕ್ಷಗಾನದಲ್ಲಿ ಅಭಿನಯಿಸುವುದಕ್ಕೆ ಪಾತ್ರವಹಿಸುವುದು ಅಂತ ಹೇಳುವುದಿಲ್ಲ. ಪಾತ್ರ ಹಾಕುವುದು ಅಂತಲೂ ಹೇಳುವುದಿಲ್ಲ. ಅದು ಪಾತ್ರ ಧರಿಸುವುದು. ಎಣ್ಣೆಗಮಟಿನ ಬೇಸು ಹಚ್ಚಿಕೊಳ್ಳುವಲ್ಲಿಂದ ಶುರುವಾಗಿ ಒಂದೊಂದೇ ಬಟ್ಟೆ-ಉಡುಪು-ಆಭರಣ-ಮೀಸೆ-ಕಿರೀಟ ಧರಿಸಿದಂತೆ ಆಗುತ್ತದೆಯಲ್ಲ ಅದು ರೂಪಾಂತರ. ಬಾಹ್ಯವಾಗಿ ಉಂಟಾಗುವ ರೂಪಾಂತರ ನಿಧಾನವಾಗಿ ಒಳಗೂ ಆಗುತ್ತಿರುತ್ತದೆ. ಹಿಮ್ಮೇಳದ ಪದ್ಯ-ಚಂಡೆ ಮದ್ದಲೆಗಳ ನಾದ ಉಂಟು ಮಾಡುವ ವಾತಾವರಣ ಅದಕ್ಕೊಂದು ಪೂರಕ ಚೌಕಟ್ಟನ್ನು ನಿರ್ಮಿಸುತ್ತ ಹೋಗುತ್ತದೆ. ಸುರುಳಿ ಸುರುಳಿಯಾಗಿ ಬಿಚ್ಚಿಕೊಳ್ಳುತ್ತ ಹೋಗುವ ಕತೆ ಇದೆಯಲ್ಲ ಅದೂ ಕೂಡ ಮುಖ್ಯ ಸೂತ್ರಧಾರ.
ಇವನು ರಾಜ, ಇವನು ರಾಕ್ಷಸ, ಇವನು ನೀಚ, ಇವನು ಅಸಹಾಯಕ ಹೀಗೆ ಪ್ರತಿ ಕತೆಯಲ್ಲೂ ಇರುವ ಪಾತ್ರಗಳ ಕುರಿತು ನಟನಿಗೂ ಮತ್ತು ಪ್ರೇಕ್ಷಕನಿಗೂ ಪೂರ್ವಭಾವಿಯಾದ ಜ್ಞಾನ ಇರುತ್ತದೆ. ಮತ್ತು ಅವರ ಭಾವಕೋಶದಲ್ಲಿ ಅವರು ಮೊದಾಲು ಮುಂಚೆ ಆ ಕತೆ ಕೇಳಿದಾಗಿನಿಂದಲೇ ಆ ಪಾತ್ರ ಅದಾಗಲೇ ಬಣ್ಣ ಹಚ್ಚಿಕೊಂಡು ಕೂತಿರುತ್ತದೆ. ಹೀಗೆ ಇವೆಲ್ಲವೂ ಪರಸ್ಪರ ಪೂರಕವಾಗುತ್ತ, ಒಂದನ್ನೊಂದು ಬೆಳೆಸುತ್ತ ಅಲ್ಲಿ ಆವತ್ತು ಆ ಪ್ರಸಂಗ ಜರುಗುತ್ತದೆ. ಹೌದು ಪ್ರಸಂಗ ಘಟಿಸುತ್ತದೆ. ಅಥವಾ ಸಂಭವಿಸುತ್ತದೆ. ನಾಟಕ, ನೃತ್ಯರೂಪಕಗಳಲ್ಲಿ ಅಭಿನಯಿಸುವವರು ಸಾವಿರಾರು ಸಲ ತಾಲೀಮು ನಡೆಸಿ ಇಂಚಿಂಚು ಹೆಜ್ಜೆ ಚಲನೆ ಅಭಿನಯಗಳನ್ನು ಇದು ಹೀಗೆ ಇದು ಇಷ್ಟೇ ಅಂತ ಸಿದ್ಧಪಡಿಸಿಕೊಂಡು ಮಾಡುವುದು ಪ್ರದರ್ಶನ. ಆದರೆ ಯಕ್ಷಗಾನದಲ್ಲಿ ಅದು ಪ್ರದರ್ಶನವಲ್ಲ. ಅದು ಪ್ರಸಂಗ. ಇದ್ದಿದ್ದನ್ನು ತೋರಿಸುವುದು ಪ್ರದರ್ಶನ. ಅಲ್ಲೇ ಆಗಲೇ ಮಾಡುತ್ತ ಮಾಡುತ್ತ ಏನೋ ಒಂದು ಅಂದುಕೊಂಡಿರದೇ ಇದ್ದ ರಸಾನುಭೂತಿ ಅಥವಾ ಭಾವೋತ್ಕರ್ಷ ಘಟಿಸುತ್ತದೆಯಲ್ಲ ಅದು ಸಂಭವಿಸುವ ಪ್ರಸಂಗ.
ಜಗತ್ತಿನ ರಂಗಭೂಮಿ ಕಲೆಗಳಲ್ಲಿ ಯಕ್ಷಗಾನದ ಅನನ್ಯತೆಯೆಂದರೆ ಪೂರ್ವನಿರ್ಬಂಧಿತವಾಗಿರದ ಅಭಿನಯ, ಪುನರಾವರ್ತನೆ ಮಾಡಬಹುದಾದ ಚಲನೆ ಹಾಗೂ ಆಶು ಸಂಭಾಷಣೆ. ಆಶುಮಾತಿನಿಂದ ಉಂಟಾಗುವ ಅನುಕೂಲಗಳು ಅಪಾರ. ಅದು ಪ್ರತಿ ಪ್ರಸಂಗವನ್ನೂ ಹಿಂದಿನದಕ್ಕಿಂತ ಭಿನ್ನವಾಗಿ ಮಾಡುತ್ತದೆಯಲ್ಲದೇ ಪ್ರೇಕ್ಷಕನಿಗೆ ಎಷ್ಟೇ ಸಲ ನೋಡಿದ, ಕೇಳಿದ ಕತೆಯಾದರೂ ಹೊಸ ಅನುಭವ ನೀಡುವುದರ ಮೂಲಕ ರೋಚಕಗೊಳಿಸುತ್ತದೆ.
ನೋವಿನಿಂದ ಮುಖ ಕಿವುಚಿ ಮಂಡಿಯಿಂದ ತೆವಳುತ್ತ ರಂಗದಲ್ಲಿರುವ ನಟನ ಅಭಿನಯದಲ್ಲಾ? ಅಥವಾ ಕುರ್ಚಿಯ ಮುಂತುದಿಯಲ್ಲಿ ಕೂತಲ್ಲೇ ಸ್ತಬ್ದ ಚಿತ್ರವಾಗಿ ತಮ್ಮ ತಮ್ಮ ಊರು-ಹುದ್ದೆ-ಬದುಕು ಎಲ್ಲವನ್ನು ಮರೆತು ಕಣ್ಣೀರು ಸುರಿಸುತ್ತಿರುವ ಪ್ರೇಕ್ಷಕನ ಎದೆಯಲ್ಲಾ? ಇದು ಯಕ್ಷಗಾನ- ಇದು ರಂಗಭೂಮಿ- ಇದು ನಟನೆಯ ಜಾದೂ.
ನಟ ತನ್ನ ಓದು, ಜ್ಞಾನ, ತಿಳುವಳಿಕೆ, ಜೀವನಾನುಭವ ಹಾಗೂ ತರ್ಕಬುದ್ಧಿಯಿಂದ ತಾನು ಧರಿಸಿದ ಪಾತ್ರವು ಆ ಸನ್ನಿವೇಶದಲ್ಲಿ ಯಾವ ರೀತಿ ವರ್ತಿಸುತ್ತಿತ್ತೆಂದು ಆ ಕ್ಷಣದಲ್ಲಿ ತನ್ನ ಕಲ್ಪನೆಯಲ್ಲಿಯೇ ಊಹಿಸುತ್ತ ಅದನ್ನೇ ಅಭಿನಯಿಸುತ್ತ ನಿರ್ವಹಿಸುತ್ತಾನೆ. ಆಶು ಸಂಭಾಷಣೆಯಲ್ಲಿರುವ ಇನ್ನೊಂದು ಲಾಭವೆಂದರೆ ಎದುರಿಗಿನ ಪಾತ್ರಧಾರಿಯ ಮಾತನ್ನು ಕೇಳಿದಾಗ ಹುಟ್ಟಿಕೊಳ್ಳುವ ಹೊಸ ಮಾತುಗಳು. ಒಂದು ಪಾತ್ರ ಹೇಳಿದ ಮಾತಿನ ಶಬ್ದ ಅಥವಾ ಧಾಟಿ, ಬಳಸಿದ ಗಾದೆ ಅಥವಾ ಅವನು ಬಳಸಿದ ತರ್ಕ ಯಾವುದೊ ಒಂದು ಎದುರಿಗಿನ ಪಾತ್ರಕ್ಕೆ ಹೊಸ ದಿಕ್ಕನ್ನು ಹೊಸ ಸಾಧ್ಯತೆಯನ್ನು ತೆರೆದು ಕೊಡುತ್ತದೆ. ಆಗ ಆತ ಸ್ಫೂರ್ತಿಗೊಂಡು ತನ್ನ ಸಂಭಾಷಣೆಯನ್ನು ಬೆಳೆಸುತ್ತಾನೆ. ಮತ್ತೆ ಇವನ ಮಾತಿನಿಂದ ಪ್ರೇರಣೆಗೊಂಡವನು ಮತ್ತಷ್ಟು ರೋಚಕತೆಯ ಮಾತನ್ನು ವಿಸ್ತರಿಸುತ್ತಾನೆ.
ಅಭಿನಯಕ್ಕೂ ಈ ಮಾತು ಅನ್ವಯವಾಗುತ್ತದೆ. ಒಬ್ಬ ಕಲಾವಿದನ ಕುಣಿತ ಅಭಿನಯಗಳು ಜನರಿಗೆ ಖುಷಿಯಾಗಿ ಸಿಳ್ಳೆ, ಚಪ್ಪಾಳೆಗಳ ಪ್ರತಿಕ್ರಿಯೆ ಹುಟ್ಟಿಸಿದರೆ ಆಗ ಎದುರಿಗಿರುವ ಪಾತ್ರಧಾರಿ ಕೂಡ ಹುರುಪುಗೊಂಡು ತನ್ನ ಚಾಕಚಕ್ಯತೆಯನ್ನು ಪ್ರಯೋಗಿಸುತ್ತಾನೆ. ಅದಕ್ಕಾಗಿ ಒಂದು ದಿನ ಹತ್ತು ನಿಮಿಷ ಅಭಿನಯಿಸಿದ ಒಂದು ದೃಶ್ಯ ಇನ್ನೊಂದು ದಿನ ಮೇಲಾಟದಿಂದಾಗಿ ಒಂದು ಗಂಟೆ ಪ್ರದರ್ಶಿತಗೊಳ್ಳಬಹುದು. ಅದಕ್ಕಾಗಿಯೇ ಪ್ರೇಕ್ಷಕರು ಪ್ರತಿ ಪ್ರದರ್ಶನದ ಮರು ದಿನ ಒಬ್ಬರನ್ನೊಬ್ಬರು ಕೇಳಿಕೊಳ್ಳುತ್ತಾರೆ “ನಿನ್ನೆ ಆಟ ಹ್ಯಾಗೆ ಆಯ್ತು?” ಅದು ಆಗುವುದು. ಅಂದರೆ ಹಿಮ್ಮೇಳ-ಮುಮ್ಮೇಳಗಳು ಪರಸ್ಪರ ಪ್ರೇರಣೆಯಾಗುತ್ತ ಅದಕ್ಕೆ ಪ್ರೇಕ್ಷಕನ ಪ್ರತಿಕ್ರಿಯೆಯು ಪೂರಕ ಪ್ರೋತ್ಸಾಹ ಕೊಟ್ಟಾಗ ಭಾವ-ರಸಗಳು ಉತ್ಕರ್ಷಗೊಳ್ಳುತ್ತ ನಿರ್ಮಾಣಗೊಳ್ಳುವುದು.
ಪಾತ್ರವೊಂದನ್ನು ಧರಿಸುವ ಕಲಾವಿದನಿಗೆ ಇರಬೇಕಾದ ಅರ್ಹತೆಗಳೇನು? ಆ ಪಾತ್ರ ಪುರಾಣ ಕಾಲದಲ್ಲಿದ್ದಷ್ಟೇ ಎತ್ತರ, ಗಾತ್ರ, ಬಣ್ಣ, ರೂಪಗಳು ಬೇಕೆ? ಖಂಡಿತ ಇಲ್ಲ. ಯಕ್ಷಗಾನದ ಮಟ್ಟಿಗೆ ಅಂತಹ ನಿರ್ಬಂಧಗಳೇನೂ ಇಲ್ಲ. ತೀರಾ ಕೃಶ ಶರೀರದ ಶಿವರಾಮ ಹೆಗಡೆಯವರ ದುಷ್ಟಬುದ್ಧಿ, ಕೌರವ ನೋಡಿದವರು ಈ ಮಾತನ್ನು ಅರ್ಥ ಮಾಡಿಕೊಳ್ಳಬಲ್ಲರು. ತೆಳ್ಳಗೆ, ಬೆಳ್ಳಗೆ ಇರುವ ಕೋಮಲ ಕಾಯದ ಹೆಣ್ಣುಮಕ್ಕಳು ಕಂಸನ ವೇಷಧರಿಸಿ ಪಾತ್ರ ಆವಾಹಿಸಿಕೊಂಡು ಅಭಿನಯಿಸಿದಾಗ ನೋಡುತ್ತಿದ್ದ ಪ್ರೇಕ್ಷಕರು ಒಂದುಸಲ ತಮ್ಮತಮ್ಮಲ್ಲೇ ಜಗಳವಾಡಿ ಬೆಟ್ಸ್ ಕಟ್ಟಿಕೊಂಡು ಚೌಕಿಗೆ ಬಂದು ಕಂಸನ ಮಾಡಿದ ಹುಡುಗನ ತೋರಿಸಿ ನೀವು ಹುಡುಗಿ ಅಂತ ಮೋಸ ಮಾಡುತ್ತಿರುವ ಹಾಗಿದೆ ಅಂತ ಗಲಾಟೆ ಎಬ್ಬಿಸಿದ್ದರು. ಯಕ್ಷಗಾನದ ವೇಷಗಳೇ ಹಾಗೆ ಲಿಂಗಾತೀತವಾಗಿ, ವಯಸ್ಸಾತೀತವಾಗಿ, ಶರೀರ ಆಕಾರಾತೀತವಾಗಿ ವಿಜೃಂಬಿಸುತ್ತವೆ. ಅದಕ್ಕೆ ಅಗತ್ಯವಿರುವುದು ಕಲಾವಿದ ಆ ಪಾತ್ರವನ್ನು ನಿಜವಾದ ಅರ್ಥದಲ್ಲಿ ಧರಿಸುವುದು.
ಹಾಗಾದರೆ ನಟ ಅಥವಾ ನಟಿ ಒಂದು ಪಾತ್ರವನ್ನು ಧರಿಸುವುದು ಅಥವಾ ಆವಾಹಿಸಿಕೊಳ್ಳುವುದು ಯಾವಾಗ? ಇದಕ್ಕೆ ಉತ್ತರ ಇದಮಿತ್ಥಂ ಅಂತ ಇಲ್ಲ. ಕೆಲವುಸಲ ಕೆಲವು ಪಾತ್ರಗಳನ್ನು ಅಭಿನಯಿಸುತ್ತ ಅಭಿನಯಿಸುತ್ತ ಅನೇಕ ಪ್ರದರ್ಶನಗಳ ನಂತರ ಒಂದು ದಿನ ಥಟ್ಟನೆ ಆ ಪಾತ್ರ ನಟನೊಳಗೆ ಇಳಿಯುತ್ತದೆ. ಕೆಲವು ಸಲ ಆ ಪಾತ್ರವನ್ನು ಬೇರೆಯವರ ಅಭಿನಯದಲ್ಲಿ ನೋಡಿ ಅಥವಾ ಓದಿ ನಮಗರಿವಿಲ್ಲದೇ ಅದು ನಮ್ಮೊಳಗೆ ಮೊದಲಿಂದ ಇದ್ದಿರುತ್ತದೆ. ಹಾಗೂ ನಾವು ಅಭಿನಯಿಸಲು ಶುರು ಮಾಡಿದ್ದೇ ತಡ ಸುಲಭವಾಗಿ ಒದಗಿ ಬರುತ್ತದೆ. ಏನೇ ಅಂದರೂ ಕಲಾವಿದ ಪಾತ್ರದೊಂದಿಗೆ ಅನುಸಂಧಾನ ಮಾಡಿಕೊಳ್ಳಲೇ ಬೇಕು. ಅದಿಲ್ಲವಾದರೆ ಅವನು ಸುಮ್ಮನೆ ಬಣ್ಣ ಹಚ್ಚಿಕೊಂಡು, ಮಾತು ಊರು ಹೊಡೆದು, ಪಾರ್ಟು ಮಾಡಿದಂತೆ ಆಗುತ್ತದೆ, ಹೊರತು ಅಲ್ಲಿ ಆ ಪಾತ್ರ ಜೀವ ತಾಳಲಾರದು.
ತಾನು ಮಾಡಲಿರುವ ಪಾತ್ರದ ಬಗ್ಗೆ ಕಲಾವಿದ ತನ್ನ ಮನದೊಳಗೆ ಯೋಚಿಸುತ್ತ ಅದರ ಹಿನ್ನೆಲೆ, ನಿಲುವು, ಧೋರಣೆ ಇತ್ಯಾದಿಯಾಗಿ ಆಳಕ್ಕಿಳಿಯುತ್ತ ಹೋದ ಹಾಗೆ ಯಾವುದೋ ಒಂದು ಕ್ಷಣ ಅದು ನಮ್ಮ ವ್ಯಕ್ತಿತ್ವದಲ್ಲಿ ಸೇರಿಕೊಳ್ಳುತ್ತದೆ. ನಿಧಾನವಾಗಿ ಅವನಿಗೆ ಆ ಪಾತ್ರದ ಪೂರ್ಣ ಪರಿಚಯವಾಗುತ್ತ ಪಾತ್ರ ಅವನದಾಗುತ್ತದೆ. ಹಾಗೂ ಕ್ರಮೇಣ ಪಾತ್ರವೇ ಅವನಾಗುತ್ತದೆ. ಅಥವಾ ಅವನೇ ಪಾತ್ರವಾಗುತ್ತಾನೆ. ಏನೇ ಆದರೂ ಮುಖ್ಯವಾಗಿ ಆಗಬೇಕಿರುವುದು ಪಾತ್ರದೊಂದಿಗೆ ಮಾನಸಿಕ ಮುಖಾಮುಖಿ. ಅನುಸಂಧಾನ.
ಬಹುಶಃ ಕತೆ ಅಥವಾ ಕಾದಂಬರಿಯ ಬರವಣಿಗೆಯಲ್ಲೂ ಹೀಗೆ ಆಗಿರುತ್ತದೆ. ಲೇಖಕ ಪಾತ್ರದೊಂದಿಗೆ ಅನುಸಂಧಾನ ಮಾಡಿಕೊಂಡಾಗ ಅದು ಅವನೊಳಗಿಳಿದು ಕೈ ಹಿಡಿದು ಬರೆಸಿದಂತಾಗುತ್ತದೆ. ತಾನೇ ಆ ಪಾತ್ರವಾಗಿ ಎಲ್ಲವನ್ನೂ ಅನುಭವಿಸುತ್ತ ಬರೆಯುತ್ತಾನೆ. ಪಾತ್ರಕ್ಕೆ ಗಾತ್ರ ಹೇಗೆ ಪ್ರಾಪ್ತಿಯಾಯ್ತು ಎಂದರೆ ಅದು ಕಲಾವಿದನ ಜ್ಞಾನ, ಓದು, ತಿಳುವಳಿಕೆ ಮತ್ತು ಅನುಭವಗಳ ಒಳಹೂರಣ ಹಾಗೂ ಪ್ರದರ್ಶನ ಸಮಯದಲ್ಲಿ ಹಿಮ್ಮೇಳ-ಸಹಕಲಾವಿದರು-ಪ್ರೇಕ್ಷಕ ಇವರೆಲ್ಲರ ಸಾಂಗತ್ಯದಲ್ಲಿ ತಯಾರಾಗುವ ಹೊರ ಆವರಣ ಇವುಗಳಿಂದ. ಒಂದು ಸಲ ನಟನೊಳಗೆ ಪಾತ್ರ ಇಳಿದ ಮೇಲೆ ಅದು ಹದಪಟ್ಟಿಗೆ ಅವನನ್ನು ಅಗಲುವುದಿಲ್ಲ. ಕೆಲವು ಸಲ ಪ್ರದರ್ಶನ ಮುಗಿದ ಮೇಲೂ ಪಾತ್ರದ ಗುಂಗು ಇಳಿಯುವುದಿಲ್ಲ. ತಿಕ್ಕಿ ಒರೆಸಿದರೂ ಚೂರು-ಪಾರು ಉಳಿಯುವ ಬಣ್ಣದ ಹಾಗೆ ಉಳಿದು ಬಿಡುತ್ತದೆ. ಮರುದಿನ ಚಾ ಕುಡಿವಾಗ ನಿದ್ದೆಗೆಟ್ಟ ಕಣ್ಣೊಳಗೆ ಕುಳಿತಿರುತ್ತದೆ. ಬಟ್ಟೆ ಒಗೆಯುವಾಗ ಬಕೆಟಿನ ಪಕ್ಕ, ಒಗ್ಗರಣೆ ಹಾಕುವಾಗ ಗ್ಯಾಸ ಒಲೆಯ ಪಕ್ಕ ಓಡಾಡುತ್ತಿರುತ್ತದೆ. ಇನ್ನೊಂದು ಪಾತ್ರವನ್ನು ನಾವು ಕರೆದು ಕೂರಿಸಿಕೊಂಡ ಮೇಲೆ ಎದ್ದು ಹೋಗುತ್ತವೆ.
ಕೆಲವು ಪಾತ್ರದ ಗುಣ-ಸ್ವಭಾವ ನಮಗೆ ಹಿಡಿಸಿದ್ದರೆ ಜೀವಕ್ಕೆ ಅಂಟಿಕೊಂಡು ಬಿಡುತ್ತವೆ. ಬಿಟ್ಟು ಹೋಗುವ ಪ್ರಶ್ನೆಯೇ ಇಲ್ಲ. ನಮ್ಮ ಪ್ರತಿ ಏಕಾಂತದಲ್ಲೂ ಪಕ್ಕ ಬಂದು ಕೂತು ಬಿಡುತ್ತವೆ. ಅನೇಕ ನಟರು ಒಂದೇ ಪಾತ್ರವನ್ನು ಮಾಡುತ್ತ ಮಾಡುತ್ತ ಅವರ ಗುಣ-ಸ್ವಭಾವಗಳೂ ಹಾಗೇ ಮಾರ್ಪಾಡುಗೊಂಡ ಅನೇಕ ಉದಾಹರಣೆಗಳಿವೆ. ಅದಕ್ಕಾಗಿಯೇ ರಂಗಭೂಮಿಯಲ್ಲಿ ಪಾತ್ರದ ಗಾತ್ರ ಇಷ್ಟೇ ಅಂತ ಹೇಳುವುದು ಕಷ್ಟ. ಕೆಲವೊಮ್ಮೆ ಅದು ನಟನ ಬಣ್ಣ-ಉಡುಪಿನಷ್ಟು, ಕೆಲವೊಮ್ಮೆ ನಟನ ಮೈಯಷ್ಟು, ಕೆಲವೊಮ್ಮೆ ಅವನ ಬದುಕಿನಷ್ಟು.
ಪ್ರಜ್ಞಾ ಮತ್ತಿಹಳ್ಳಿ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಧಾರವಾಡದಲ್ಲಿ ವಾಣಿಜ್ಯಶಾಸ್ತ್ರ ವಿಷಯದಲ್ಲಿ ಸಹ ಪ್ರಾಧ್ಯಾಪಕರು. ಸಾಹಿತ್ಯ ರಂಗಭೂಮಿ ಮತ್ತು ಯಕ್ಷಗಾನಗಳು ಇವರ ಆಸಕ್ತಿಯ ಕ್ಷೇತ್ರಗಳು. ಕವಿತೆ, ಕತೆ, ಪ್ರಬಂಧ. ನಾಟಕ, ಪ್ರವಾಸ ಕಥನ ಈ ಎಲ್ಲ ಪ್ರಕಾರಗಳೂ ಸೇರಿದಂತೆ ಎಂಟು ಪುಸ್ತಕಗಳು ಪ್ರಕಟಗೊಂಡಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿಯೂ ಒಳಗೊಂಡಂತೆ ಅನೇಕ ಕಡೆ ಇವರ ಬರಹಗಳು ಗುರುತಿಸಿಕೊಂಡಿವೆ.