ಊರಿನ ಜನರಿಗೆಲ್ಲ ಸರಕಾರ ಉಚಿತವಾಗಿ ಕೊಡೋ ಎಲ್ಲಾ ಸವಲತ್ತುಗಳು ತಲುಪೋ ತರ ಮಾಡಿದ್ರು. ಯಾವ್ಯಾವ್ದು ಫ್ರೀಯಾಗಿ ಸಿಕ್ತೈತೆ ಅಂತ ಅಧಿಕಾರಿಗಳ ತಾವ್ಕೆ ಹೋಗಿ ತಿಳ್ಕಂಬರಾರು. ಅದ್ರ ಬಗ್ಗೆ ಓದ್ಕಣಾರು. ಕಾನೂನು ತಿಳ್ಕಂಬಾದ್ರಾಗೆ ಸೈ ಅನ್ನುಸ್ಕೊಂಡಿದ್ರು. ಎಲ್ಲಾ ಓದ್ಕಂಡು ಮುಂದ್ಕೆ ಹೋಗೋರು. ಅಧಿಕಾರಿಗುಳ ಪ್ರೀತಿ, ವಿಶ್ವಾಸ ಗಳಿಸಾಕೆ ಅವುರ್ಗೆ ಊಟ, ತಿಂಡಿ ಕೊಡ್ಸೋದು, ಹೊಲದಾಗೆ ಬೆಳೆದ ಫಸಲು, ತರಕಾರಿ, ಕಾಯಿ, ಎಳನೀರು ಉಡುಗೊರೆ ಕೊಡೋರು. ಜನುರ್ಗೆ ಬಿತ್ತನೆ ಬೀಜ, ಗೊಬ್ಬರ, ಬೇಸಾಯಕ್ಕೆ ಬೇಕಾಗಿರೋ ಸಲಕರಣೆ ಎಲ್ಲಾ ಪುಗ್ಸಟ್ಟೆ ಸಿಕ್ಕೋ ಅಂಗೆ ಮಾಡ್ತಿದ್ರು.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯ ಬರಹ ಇಲ್ಲಿದೆ

ಜಮೀನಿನಾಗೆ ಬಾವಿಗೆ ಮೋಟ್ರು ಕುಂಡ್ರಿಸೋ ಇಚಾರಕ್ಕೆ ಕೋರ್ಟನಾಗೆ ಕೇಸು ಹಾಕ್ಸುದ್ರಲ್ಲ‌ ಅಪ್ಪ, ಅದುಕ್ಕೆ ದೊಡ್ಡ ಮನುಸ್ಯರ ತಾವ ದ್ವೇಸಾ ಕಟ್ಕಾ ಬೇಕಾಯ್ತು.‌ ಮನೆ‌ ಮ್ಯಾಗೆ ಕಲ್ಲೆಸೆಯೋದೂ ಅದೂ ಇದೂ ಮಾಡಾಕೆ ಸುರು ಹಚ್ಕಂಡ್ರು. ನಮ್‌ ತಾತ ಊರೇ ಬಿಟ್ಟು ಹೋಗಾಣಾ ಅಂತ ಅನ್ ಕಂಡ್ರು. ನಮ್ಮಪ್ಪ ದುಷ್ಟರಿಗೆ ಎದುರ್ಕಂಡು ಊರು ಬಿಟ್ಟು ಹೋಗಾದು ಎಂತಾ ಅವ್ಮಾನ ಅಂತ ನೊಂದ್ಕಂಡು, ಕೆಲ್ಸ ಬಿಟ್ಟು ವಾಪಸ್ ಹೊಂಟು ಬಂದು ಊರ್ನಾಗೆ ಬೇಸಾಯಕ್ಕೆ ನಿಂತ್ರು.‌

ಅಂಗೇ ಯೋಚ್ನೆ ಮಾಡೀರು. ನಮ್ದು ‌ಅಲ್ಪಸಂಖ್ಯಾತ್ರ ಸಮುದಾಯವಾಗಿತ್ತು.‌ ಊರೆಲ್ಲಾ ಲೆಕ್ಕ ಹಾಕೀರೂ ಹತ್ತು ಮನೆಗ್ಳ ಮ್ಯಾಗಿರಲಿಲ್ಲ.‌ ಆವಾಗ ಒಟ್ಟು ಮನೆಗ್ಳು ಅಂದಾಜು ಇನ್ನೂರೈವತ್ತು ಮುನ್ನೂರು ಇತ್ತೇನೋಪ್ಪಾ. ಅದ್ಕೇಯಾ ಬಹುಸಂಖ್ಯಾತರಾದ ಪಟೇಲ್ರು ಆಡಿದ್ದೇ ಆಟ ಆಗಿತ್ತು.‌ ಅವ್ರ ಮಾತೆ ಊರ್ನಾಗೆ ವೇದವಾಕ್ಯವಾಗಿತ್ತು.

ಇಡೀ ಊರ್ನೇ ಬೆರಳ ಮ್ಯಾಗಿಟ್ಕೊಂಡು ಕುಣಿಸೋರು. ಅಕ್ಷರ ಕಲೀದೋರೆ ಸ್ಯಾನೆ ಜನವಿದ್ರು. ಅಪ್ಪಂಗೆ ಅನ್ನುಸ್ತು‌ ಇವರನ್ನು ಎದುರ್ಸಿ ಗಟ್ಟಿಯಾಗಿ ನಿಲ್ಬೇಕಾರೆ,‌ ರಾಜಕೀಯದಾಗೆ ಬೆಳೀಬೇಕು. ನಮ್ ಕುಲದೋರು ರಾಜಕೀಯದಾಗೆ ಸ್ಯಾನೆ ಕಡಿಮೆ. ಎಂಗಾನಾ ಮಾಡಿ ರಾಜಕೀಯಕ್ಕೆ ಬರಲೇಬೇಕೂಂತ ಹಠಕ್ಕೆ ಬಿದ್ದರು. ಅದೇನೂ ಸಣ್ಣ ಮಕ್ಕಳ ಆಟವೇ? ಬಲಾಢ್ಯರನ್ನು ಎದುರಿಸ್ಬೇಕಿತ್ತು. ವಸಿ ಟೇಮು ತಕಂಡು ಯೋಸ್ನೆ ಮಾಡೀರು. ಊರ್ನಾಗೆ ಹಿಂದುಳಿದ ವರ್ಗದ ಜನಗೋಳು(ಮಾದಿಗರು, ನಾಯಕರು, ಉಪ್ಪಾರ್ರು ಇತ್ಯಾದಿ) ಬೇಜಾನ್ ಅವ್ರೆ. ಪಾಪ ಅವುರ್ನ ಯೋಳೋರು ಕ್ಯೋಳೋರು ಇಲ್ದೆ, ಅಕ್ಷರ ಜ್ಞಾನ ಇಲ್ದೆ ಮೂಲೆ ಗುಂಪಾಗವ್ರೆ. ಎಂಗಾನಾ‌ ಮಾಡಿ ಅವುರ್ನ ಮ್ಯಾಕೆ ತಂದು, ಜೊತಿಗಾಕ್ಕೊಂಡು ನಾವೂ ಬೆಳುದ್ರೆ, ಊರೂ ಉದ್ದಾರ ಆಗ್ತೈತೆ, ಅವ್ರೂ ಉದ್ದಾರ ಆಗ್ತಾರೆ ಅಂಬ್ತ ಯೋಸ್ನೆ ಬಂದಿದ್ದೆ ತಡ, ಸುರು ಅಚ್ಕಂಡ್ರು. ಅಪ್ಪುಂಗೂ ಸಣ್ ವಯ್ಸು. ಅಂಗೇ ಹಿಂದುಳಿದ ಜನ್ರ ಹುಡುಗ್ರನ್ನ ಸೇರ್ಸಿ ಗುಂಪು ಕಟ್ಕೊಂಡು ನಿಧಾನುಕ್ಕೆ ಒನ್ನೊಂದೇ ಹೆಜ್ಜೆ ಇಡ್ತಾ ಬಂದ್ರು. ಗೊತ್ತಾಗದಂಗೆ ಅಂಗೇ ಮುಂದು ಮುಂದುಕ್ಕೆ ಹೋಗ್ತಾ ಹೋಗ್ತಾ, ವಯಸ್ಸೂ ಆಗ್ತಾ ಆಗ್ತಾ, ರಾಜಕೀಯಾನಾ ಊರ ಉದ್ಧಾರಕ್ಕೆ ಉಪ್ಯೋಗ ಮಾಡ್ಕಳಾ ಮನ್ಸೂ ಬೆಳೀತು. ಅಂಗೇ ಅಪ್ಪಾನೂ ಬೆಳೀತಾ, ಊರೂ ಬೆಳೀತಾ ಬಂತು.

1962 ರಾಗೆ ಕೆಲ್ಸ ಬಿಟ್ಟು ಊರ್ ಸೇರ್ಕಂಡ್ರು. ಒಂದೊರ್ಸ ಎಲ್ಲಾ ಹುಡುಗುರ್ನ ಗುಡ್ಡೆ ಹಾಕ್ಕಂಡು ಧೈರ್ಯ ತುಂಬ್ತಾ, ನಿಧಾನುಕ್ಕೆ ಪ್ಲಾನು ಮಾಡುದ್ರು. ಈಟೊತ್ತಿಗಾಗಲೆ ದುಡಿದಿದ್ದರಾಗೆ ಶೇಕಡಾ 70 ಭಾಗ ರಾಜಕೀಯಕ್ಕೇ ಖರ್ಚಾಗ್ತಿತ್ತು.

ಸೊಸೈಟಿಗೆ ಪ್ರವೇಶ

ಸರ್ವೀಸ್ ಕೋ ಆಪರೇಟಿವ್ ಸೊಸೈಟಿ (S C S) ಮೂಲಕ ಊರಿಗೆಲ್ಲ ಅಕ್ಕಿ ಸಕ್ಕರೆ ಕೊಡ್ತಿದ್ರು. ಇಲ್ಲಿ ಅವ್ರಿಗೆ ಬೇಕಾದವ್ರಿಗೆ ಸಿಗ್ತಿತ್ತು. ಬಡವರು ಬಗ್ಗರು ಬಾಯಿ ಬಡಕೋಬೇಕಿತ್ತು. ಸಂಘ – ಸಂಸ್ಥೆಗಳ್ನ ಕೈಗೆ ತಕಳ್ದೆ ಇದು ಸುಧಾರಿಸಲ್ಲ ಅಂತ ತೀರ್ಮಾನ ತಕಂಡ್ರು. ಮೊದುಲ್ನೆ ಹೆಜ್ಜೆ ಮುಂದುಕ್ಕೆ ಇಕ್ಕಿದ್ರು. ಜೊತ್ಯಾಗಿರೋ ಹಿಂದುಳಿದ ವರ್ಗದ ಯುವಕರ ಜೊತೆ ಮಾತಾಡ್ಕಂಡು, ಸೊಸೈಟೀನಾಗೆ ಶೇರು ತಕಳಾಣ ಅಂತ ಯೋಳಿದ್ರು. ಆಗ್ಗೆ ಶೇರು ತಕಾ ಬೇಕಾದ್ರೆ ಇಪ್ಪತೈದು ಪೈಸಾ ಕೊಡಬೇಕಿತ್ತು. 100 ಶೇರು ತಕಂಡ್ರೆ ಎಂಗೆ ಅಂಬ್ತ ಎಲ್ಲಾ ಹುಡುಗ್ರ ಹೆಸ್ರಾಗೂ ತಕಂಡ್ರು. ಅವುರ್ ತಾವ ದುಡ್ಡೆಲ್ಲಿ ಇರ್ತೈತೆ? ಅಪ್ಪನೆ ಅವ್ರ ದುಡ್ನೂ ಕಟ್ಟಿ ಶೇರು ತಕಂಡ್ರು. ಪ್ರತಿ ವರುಷವೂ ಸೊಸೈಟೀದು ವಾರ್ಷಿಕ ಸಭೆ ನಡೀತಿತ್ತು. ‌ಆಗೆಲ್ಲ ಚುನಾವಣೆ ಇರಲಿಲ್ಲ‌. ಅವರ ಇಷ್ಟಾನುಸಾರ ನಡೆಸ್ತಿದ್ರು. ಅವರವರೇ ಅರ್ಜಿ ಹಾಕ್ಕೊಂಡು, ಚುನಾವಣೆ ಇಲ್ದೆ ಸ್ವಯಂ ಘೋಷಣೆ ‌ಮಾಡ್ಕ್ಯಂಡು ಮುಗುಸ್ತಿದ್ರು. ಮೊದುಲ್ನೆ ಕಿತ ಅಪ್ಪ ಎಲೆಕ್ಷನ್ ಆಗ್ಲೇ ಬೇಕೂಂತ ಒತ್ತಾಯ ಮಾಡಿದ್ರು. 9 ಜನ್ರು ಕೈಲಿ ಅರ್ಜಿ ಹಾಕ್ಸಿದ್ರು. ನಮಗೆ ಎಲೆಕ್ಷನ್ ಬೇಕೇ ಬೇಕೂಂತ ಅಧಿಕಾರಿಗಳ್ಗೆ ಕೇಳಿದ್ರು. ಅವ್ರೂ ಒಪ್ಪಿ, ಬಂದೋಬಸ್ತಿಗೆ ಇರಲಿ ಅಂಬ್ತ ಪೋಲೀಸ್ನೋರ್ನೂ ಕರೆಸಿದರು. ಅಲ್ಲಿ ನೋಡುದ್ರೆ ಅಪ್ಪ 100 ಶೇರು ಹಾಕ್ಸಿದ್ರಲ್ಲ, ಎದಿರಿನೋರು ಎಲೆಕ್ಷನ್‌ಗೆ ನಿಂತ್ರೂ ಗೆಲ್ಲಕಾಗ್ತಿರಲಿಲ್ಲ. ಅವ್ರು ಹೆದುರ್ಕೊಂಡು ಹಿಂದೆ ಸರುದ್ರು. ಮೊದುಲ್ನೆ ದಪವೇ ಎಲೆಕ್ಷನ್ ಇಲ್ದೆ, ಅಪ್ಪ ಅವಿರೋಧವಾಗಿ ಆಯ್ಕೆ ಆದ್ರು. ರಾಜಕೀಯದಾಗೆ ದೌರ್ಜನ್ಯದ ಎದ್ರು ಮೊದುಲ್ನೆ ಗೆಲುವು ದಕ್ಕಿಸಿಕೊಂಡ್ರು. ತೀರಾ ಹಿಂದುಳಿದ ಸಾಮಾನ್ಯ ಜನರ ಗುಂಪು ಕಟ್ಟಿಕೊಂಡು ಅವುರ್ಗೂ ಅಧಿಕಾರ ಸಿಕ್ಕೋ ಅಂಗೆ ಮಾಡಿದ್ದು ದೊಡ್ಡ ಹೆಜ್ಜೇನೆ ಆಗಿತ್ತು. ಜನುಗುಳ್ಗೂ ವಸಿ ಧೈರ್ಯ, ನಂಬಿಕೆ ಬಂದ್ವು. ಐದೊರ್ಸ ಅಧ್ಯಕ್ಷರಾಗಿದ್ರು. ಸಾಮಾನ್ಯವಾಗಿ ಪಂಚಾಯ್ತಿ ಕೇಂದ್ರದಾಗೆ ಈ ಸೊಸೈಟಿ ಇರ್ತಿತ್ತು. ಆದ್ರೆ ನಮ್ಮೂರ್ನಾಗೆ ಇರಾ ಬದ್ಲಿ ಇದು ಕಂಸಾನಳ್ಳೀಲಿತ್ತು. ಅಲ್ಲಿಂದ ನಮ್ಮೂರ್ಗೆ ಇದುನ್ನ‌ ಕಾನೂನುಬದ್ಧವಾಗಿ ಬದ್ಲಾಯಿಸಿದ್ದು, ಅಪ್ಪ ಮಾಡಿದ ಮೊದಲ್ನೇ ಕೆಲಸ. ಆಮ್ಯಾಕೆ ಸರ್ಕಾರದೋರು S C S ಅನ್ನ ವ್ಯವಸಾಯ ಸೇವಾ ಸಹಕಾರ ನಿಯಮಿತ ಸಂಘವಾಗಿ ಬದ್ಲಾಯಿಸಿದ್ರು. ಹಳ್ಳಿಗಳ ಉದ್ಧಾರ, ಬೇಸಾಯ ಮಾಡೋರ್ಗೆ ಸಾಯಾ ಮಾಡಾಕೆ ಅಂತ ಹಿಂಗೆ ಮಾಡೀರು. V S S N ‌ಅಂತ ಆಯ್ತು. ಇಲ್ಲೀ ಸೈತ ಅಪ್ಪ 10 ವರ್ಷ ಅಧ್ಯಕ್ಷರಾಗಿದ್ದರು. ಇಲ್ಲಿ ರೈತರಿಗೆ ಸಾಲ ಕೊಡ್ತಿದ್ರು. ಗೊಬ್ಬರ ಕೊಡ್ತಿದ್ರು. ‌ಜಿಲ್ಲಾ ಬ್ಯಾಂಕಿನಿಂದ V S S N ಗೆ ದುಡ್ಡು ಕೊಡೋರು. ಕಷ್ಟ ಇರಾ ರೈತರು ಸಾಲಕ್ಕೆ ಅರ್ಜಿ ಹಾಕ್ಕಣಾರು. ಅದುನ್ನ ಪರಿಶೀಲನೆ ಮಾಡಿ ಸಾಲ ಮಂಜೂರು ಮಾಡ್ತಿದ್ರು. ಸ್ಯಾನೆ ಜನ ರೈತರಿಗೆ ಸಾಲ ಕೊಡಾಕೆ, ಫ್ರೀ ಸಿಕ್ಕಾವೆಲ್ಲಾ ಹಂಚಾಕೆ ಯಾವಾಗ್ಲೂ ಓಡಾಡ್ತಿದ್ರು.

ಊರಿನ ಜನರಿಗೆಲ್ಲ ಸರಕಾರ ಉಚಿತವಾಗಿ ಕೊಡೋ ಎಲ್ಲಾ ಸವಲತ್ತುಗಳು ತಲುಪೋ ತರ ಮಾಡಿದ್ರು. ಯಾವ್ಯಾವ್ದು ಫ್ರೀಯಾಗಿ ಸಿಕ್ತೈತೆ ಅಂತ ಅಧಿಕಾರಿಗಳ ತಾವ್ಕೆ ಹೋಗಿ ತಿಳ್ಕಂಬರಾರು. ಅದ್ರ ಬಗ್ಗೆ ಓದ್ಕಣಾರು. ಕಾನೂನು ತಿಳ್ಕಂಬಾದ್ರಾಗೆ ಸೈ ಅನ್ನುಸ್ಕೊಂಡಿದ್ರು. ಎಲ್ಲಾ ಓದ್ಕಂಡು ಮುಂದ್ಕೆ ಹೋಗೋರು. ಅಧಿಕಾರಿಗುಳ ಪ್ರೀತಿ, ವಿಶ್ವಾಸ ಗಳಿಸಾಕೆ ಅವುರ್ಗೆ ಊಟ, ತಿಂಡಿ ಕೊಡ್ಸೋದು, ಹೊಲದಾಗೆ ಬೆಳೆದ ಫಸಲು, ತರಕಾರಿ, ಕಾಯಿ, ಎಳನೀರು ಉಡುಗೊರೆ ಕೊಡೋರು. ಜನುರ್ಗೆ ಬಿತ್ತನೆ ಬೀಜ, ಗೊಬ್ಬರ, ಬೇಸಾಯಕ್ಕೆ ಬೇಕಾಗಿರೋ ಸಲಕರಣೆ ಎಲ್ಲಾ ಪುಗ್ಸಟ್ಟೆ ಸಿಕ್ಕೋ ಅಂಗೆ ಮಾಡ್ತಿದ್ರು. ಅಪ್ಪ ಧಾರಾಳತನ ತೋರಿದ್ಕೆ ಅಧಿಕಾರಿಗ್ಳೂ ಧಾರಾಳವಾಗಿ ಸಾಯಾ ಮಾಡ್ತಿದ್ರು. ಇಲ್ಲಿಂದಾಚ್ಗೆ ಊರಾಗೆ ಎರ್ಡು ಗುಂಪಾಯ್ತು. ಒನ್ನೊಂದೆ ಎಲೆಕ್ಷನ್ನಾಗೆ ನಿಂತ್ಕಂತಾ ಬಂದ್ರು.

ಪಂಚಾಯ್ತೀನಾಗೆ ಹೆಜ್ಜೆ ಮಡಗಿದ್ದು

ಅಷ್ಟರಾಗೆ ಪಂಚಾಯ್ತಿ ಎಲೆಕ್ಷನ್ನು ಬಂತು. ಅದೂವರ್ಗೆ ಯಾರ್ಗೂ ಅರ್ಜಿ ಹಾಕಾ ದಮ್ಮು ಸತ ಇರ್ಲಿಲ್ಲ. ಇತಿಹಾಸದಲ್ಲೇ ಪಸ್ಟು ಅರ್ಜಿ ಹಾಕಿದ್ದು, ಅವುರ್ಗೆ ಕಣ್ಣು ಕೆಂಪಗಾತು. ಊರಿಂದ ಬಹಿಷ್ಕಾರ ಆಕ್ತೀವಿ ಅಂತ ಜೊತ್ಯಾಗಿರೋರ್ನ ಹೆದುರ್ಸಿದ್ರು. ಹುಡುಗ್ರ ಪಡೆ ಜೊತೆಗಿದ್ದುದ್ಕೆ ಜಗ್ಗಲಿಲ್ಲ, ಬಗ್ಗಲಿಲ್ಲ. ಕೊನೇಗೆ ಬರೇ ಇಬ್ಬರು ಗೆದ್ರು. ಅಪ್ಪ ಮೆಂಬರ್ ಆಗಿ ಪಂಚಾಯತಿ ಮೆಟ್ಟಿಲು ಹತ್ತಿದ್ರು. ಅವರು ಸ್ಯಾನೆ ಜನ ಇದ್ರಲ್ಲ, ಆಗಾಗ ಅವ್ಮಾನ ಮಾಡಾಕೆ ನೋಡ್ತಿದ್ರು. ಯಾವುದ್ಕೂ ತಲೆ ಕೆಡಿಸ್ಕಣದೆ, ಜನುರ ವಿಶ್ವಾಸ ತಕಳಾ ಕೆಲಸ ಮಾಡ್ತಾ ಬಂದ್ರು. ಇದು ಐದೊರ್ಸ ಇಂಗೆ ಸಾಗ್ತು. ಇದ್ರ ಮಧ್ಯ V S S N ಅಧ್ಯಕ್ಷರಾಗಿದ್ರಲ್ಲ, ಜನುರ್ಗೆ ಸಾಯಾ ಮಾಡಾದು ಮುಂದೊರ್ಸಿದ್ರು.‌ ಅವುರ್ನ ಹತ್ತಿರ ತಕಂತಿದ್ರು.

ಹಾಲು ಉತ್ಪಾದಕರ ಸಹಕಾರ ಸಂಘ

ಹಾಲು ಉತ್ಪಾದಕರ ಆಂದೋಲನ ಸುರು ಆತು. ಇಡೀ ಜಿಲ್ಲೆನಾಗೆ ಹಾಲು ಉತ್ಪಾದಕರ ಸಹಕಾರ ಸಂಘಗಳು ಸುರು ಆದ್ವು. ಜಿಲ್ಲಾ ಕೇಂದ್ರ ತುಮಕೂರಿನಾಗೆ ಕೇಂದ್ರ ಸಂಘ ಇತ್ತು. ಅಲ್ಲಿ ಹಾಲು ಶೇಖರಣಾ ಕೇಂದ್ರ ಸಹಕಾರಿ ಪದ್ಧತೀನಾಗೆ ಆರಂಭ ಆಯ್ತು. ಪಂಚಾಯ್ತಿ ಕೇಂದ್ರಗಳಾಗೆ ಹಾಲು ಶೇಖರಣೆ ಮಾಡ್ತಿದ್ರು. ಇಡೀ ಜಿಲ್ಲೇನಾಗೆ ಸಂಘಗಳ್ನ ಸುರು ಮಾಡಿದ್ರು. ಹಾಲ್ನ ಲಾರೀಗಳಾಗೆ ಇಲ್ಲಿಂದ ತುಮಕೂರಿಗೆ ಕಳಿಸೋರು. ಚಿಕ್ಕಮಾಲೂರಾಗೂ ಸುರು ಮಾಡಿದ್ರು. ಅಪ್ಪ ಅದ್ರ ಅಧ್ಯಕ್ಷರಾಗೂ ಆಯ್ಕೆ ಆದ್ರು. ಒಟ್ಟು ಇಲ್ಲೂ ಹತ್ತು ವರ್ಷ ಅಧ್ಯಕ್ಷರಾಗಿ ಕೆಲಸ ಮಾಡಿದ್ರು.

ಹಾಲಿನ ಡೈರಿ

ಹಾಲಿನ ಡೈರೀನಾಗೆ ಒಬ್ಬ ಟೆಸ್ಟರ್ ಇರ್ತಿದ್ದ. ಇವುನ ಕೆಲಸ ಹಾಲು ತಕಂಡು ಮೊದ್ಲು ಅದ್ರ ಗುಣಮಟ್ಟ ಪರೀಕ್ಷೆ ಮಾಡಾದು. ಅದ್ಕೊಂದು ಮೆಸಿನ್ ಇರ್ತಿತ್ತು. ಎಷ್ಟು ಪರ್ಸೆಂಟು ಶುದ್ಧ ಐತೆ ಅಂತ ತಿಳೀತಿತ್ತು. ಸ್ಯಾನೆ ನೀರು ಸೇರ್ಸಿದ್ರೆ ವಾಪಸ್ ಕಳಿಸ್ತಿದ್ರು. ಆವಾಗ ಇನ್ನೊಂದು ಕಿತ ಮೋಸ ಮಾಡ್ತಿರಲಿಲ್ಲ. ಒಬ್ಬ ಜವಾನ ಇರ್ತಿದ್ದ. ಅವ್ನು ಹಾಲಿನ ಕ್ಯಾನು ತುಂಬಿದ್ ಮ್ಯಾಗೆ ಎಳ್ದು ಪಕ್ಕ ಇಕ್ಕಿ ಮುಚ್ಚೋದು. ಬ್ಯಾರೆ ಕೊಡೋದು, ಲಾರೀನಾಗೆ ತುಂಬ್ಸೋದು ಮಾಡ್ತಿದ್ದ. ಒಬ್ಬ ಸೆಕೆಟ್ರಿ ಇರತಿದ್ದ. ಲೆಕ್ಕ ಪಕ್ಕ ಬರ್ಕಣಾದು ಅವುನ್ ಕೆಲ್ಸ. ಇದ್ರ ಮ್ಯಾಗೆ ಕಮಿಟಿ ಇರತಿತ್ತು. ಮೂರು ಜನುಕ್ಕೆ ಕೆಲಸ ಸಿಕ್ತು. ಜನ್ರಿಗೆ ಹಾಲಿಗೆ ಒಳ್ಳೆ ರೈಟೂ ಸಿಗ್ತಿತ್ತು.

ಟಿ ವಿ ಬಂತಪ್ಪೋ ಟಿ ವಿ

ಅಲ್ಲೀಗಂಟ ಊರಾಗೆ ಒಂದೈದಾರು ರೇಡಿಯೋ ಇದ್ವೇನೋಪ್ಪ. ಹೊಸ್ದಾಗಿ ಟಿ ವಿ ಬಂದಿತ್ತಾ? ನಮ್ಮೂರ್ನಾಗೆ ಆದಿನಾರಾಯಣ ಸೆಟ್ರ ಮನ್ಯಾಗೆ ಮೊದ್ಲು ಟಿ ವಿ ಬಂತು. ಜನ‌ ಬೆರಗಾಗಿ ನೋಡ್ತಾ ಕುಂತಕಂತಿದ್ರು. ಅವ್ರ ಮನ್ಯಾಗೆ ಜನ ಜಾತ್ರೆ ಸೇರ್ತಿತ್ತು. ಅಪ್ಪ ಹಾಲಿನ ಡೈರೀನಾಗೆ ಅಧ್ಯಕ್ಷರಾಗಿದ್ರಲ್ಲ. ಸಂಘಕ್ಕೆ ವಸಿ ಲಾಭ ಬಂದಿತ್ತು. ಅದ್ಕೆ ಡೈರೀನಾಗೆ ಟಿ ವಿ ತರಾಣಾ ಅಂತ ಯೋಚ್ನೆ ಮಾಡಿದ್ರು. ಒಂದು ಟಿ ವಿ ತಕಾ ಬಂದು ಡೈರೀ ಹಾಲ್ನಾಗೆ ಮಡಗಿದ್ರು. ಜನಾ ಸಂಜೀ ಕಡೆ ಹಾಲಾಕಾಕೆ ಬರೋರು. ಅಲ್ಲೇ ಕುಂತು ಟಿ ವಿ ನೋಡ್ಕಂತಾ ಇರೋರು. 8 ಗಂಟೆ ತಕ ನೋಡ್ಕಂಡು ಖುಶಿಯಾಗಿ ಹೋಗೋರು. ಇಲ್ಲಿ ಇನ್ನೊಂದು ಇಚಾರ ಯೋಳ್ಳಿಕ್ಕೇ ಬೇಕು, ನಮ್ಮನ್ಯಾಗೆ ಟಿ ವಿ ಇರಲಿಲ್ಲ. ಬಂದಿದ್ದ ಕಾಸೆಲ್ಲ ಅಪ್ಪ ರಾಜಕೀಯಕ್ಕೆ ಸುರಿಯೋರು. ಡೈರೀನಾಗೆ ಟಿ ವಿ ತಂದ್ರೆ ಏಸೊಂದು ಜನ ಖುಷಿಯಾಗಿ ನೋಡ್ತಾರೆ, ನಮ್ಮನ್ಯಾಗೆ ತಂದ್ರೆ ಏನ್ ಪ್ರಯೋಜ್ನ ಅಂತ ಬಾಯಿ ಮುಚ್ಚಿಸೋರು. ಸಂಘದ ದುಡ್ಡು ಸಂಘಕ್ಕೆ. ಸ್ವಂತ ದುಡ್ಡೂ ಬೇಕಾದ್ರೆ ಸಂಘಕ್ಕೆ ಖರ್ಚು ಮಾಡ್ಬೋದು ಅನ್ನಾ ಮನುಸ ನಮ್ಮಪ್ಪ. ನಾವೂ ಟಿ ವಿ ನೋಡಾಕೆ ಆದಿನಾರಾಯಣಪ್ಪನ ಮನೇಗೆ ಹೋಗ್ಬೇಕಿತ್ತು.

ಪಂಚಾಯ್ತಿ ಅಧ್ಯಕ್ಷರಾಗಿದ್ದು

ಐದು ವರ್ಸ ಮುಗೀತು. ಅಪ್ಪ‌ ಮತ್ತೆ ಇನ್ನೊಬ್ರು ಇಬ್ರೇ ಮೆಂಬ್ರಾಗಿದ್ರಲ್ಲ. ಈಟೊತ್ಗಾಗ್ಲೇ ಬ್ಯಾರೆ ಬ್ಯಾರೆ ಕಡೆ ಅಧ್ಯಕ್ಷರಾಗಿ ಜನ್ರ ಪರ ಕೆಲ್ಸ ಮಾಡಿ, ನಮ್ಮ ಶಂಕ್ರಣ್ಣ ಅಂತ ಪ್ರೀತಿಯಿಂದ ಕರೆಸ್ಕೊಂತಿದ್ರು. ಪಂಚಾಯ್ತಿ ಚುನಾವಣೆ ನಡೀತು. ಈ ಸರ್ತಿ 13 ಸ್ಥಾನದಾಗೆ 12 ರಾಗೆ ಇವುರ ಟೀಮು ಗೆದ್ದು ಜಯಭೇರಿ ಹೊಡುದ್ರು. ಪಟೇಲ್ರು ಒಬ್ರೆ ಗೆದ್ರು. ಅಪ್ಪ ಈ ದಪ ಅವಿರೋಧವಾಗಿ ಅಧ್ಯಕ್ಷರಾದ್ರು. ಅಪ್ಪ ಐದೊರ್ಸ ಅಧ್ಯಕ್ಷರಾದಾಗ ‌ಮಾಡಿದ್ ಕೆಲ್ಸಗಳು ಬೇಜಾನ್ ಅವೆ. ಮುಂದ್ಲ ಕಿತ ಈ ಕತೆಗಳ್ನ ಯೋಳ್ತೀನಿ. ಈಗ ಬರೇ ಯಾವ್ಯಾವ ಸಂಘ ಸಂಸ್ಥೆಗಳಾಗೆ ಹೆಜ್ಜೆ ಇಕ್ಕುದ್ರು ಅಂತ ಮಾತ್ರ ಯೋಳ್ತೀನಿ.

ಡಿ ಸಿ ಸಿ ಬ್ಯಾಂಕು

ಇದುವರ್ಗೂ ಊರಾಗ್ಳ ಸಂಘ ಸಂಸ್ಥೆಗಳ ಕತೆ ಆಯ್ತು.‌ ಅಲ್ಲಿಂದ ವಸಿ ಆಚಿಕ್ ಬಂದು ತಾಲೂಕು ಮಟ್ಟದಾಗೂ ಹೆಸ್ರು ತಕಂಡ್ರು. ಅಲ್ಲೂ ಎಲೆಕ್ಷನ್ ನ್ನಾಗೆ ನಿಂತು ಗೆದ್ಕಂಡ್ರು.

ಪಿ ಎಲ್ ಡಿ (ಪ್ರೈಮರಿ ಲ್ಯಾಂಡ್ ಡೆವೆಲಪ್ಮೆಂಟ್) ಬ್ಯಾಂಕು ತಾಲೂಕು ಮಟ್ಟದಾಗೆ ಇತ್ತು. ಅಲ್ಲಿ ನಿರ್ದೇಶಕರಾಗಿ ಒಂದು ಅವಧೀಗೆ ಕೆಲಸ ಮಾಡಿದ್ರು. ಇಲ್ಲೂ ಐದೊರ್ಸ ಇದ್ರು ಅಪ್ಪ. ಇಲ್ಲಿಗೆ ಬಂದ ಮ್ಯಾಕೆ ತಾಲೂಕಿನ ಜನ ಎಲ್ಲಾ ಪರಿಚಯ ಆಗ್ತಾ ಹೋದ್ರು.‌ ಒಳ್ಳೆ ಮನುಷ ಅಂತ ಅನ್ನುಸ್ಕೊಂಡಿದ್ರು. ಅಂಗಾಗಿ ಇದಾಗಿ ಒಂದು ವರ್ಸುಕ್ಕೇ ಮಧುಗಿರಿ ತಾಲೂಕು ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷರಾದ್ರು.

ಇದ್ರ ಸಂದೀನಾಗೆ ಜಿಲ್ಲಾ‌ ಮಟ್ಟಕ್ಕೂ ಹೆಜ್ಜೆ ಇಕ್ಕೇ ಬಿಟ್ರು. ಜಿಲ್ಲಾ ಸಹಕಾರಿ ಬ್ಯಾಂಕಿಗೆ (ಡಿ ಸಿ ಸಿ ಬ್ಯಾಂಕು) ತಾಲೂಕು ಹಾಲು ಉತ್ಪಾದಕರ ಸಂಘದಿಂದ ಆಯ್ಕೆಯಾಗಿ ನಿರ್ದೇಶಕರಾದರು. ಇದ್ರ ಹಿಂದೂ ಒಂದು ಕಥೆ ಐತಿ. ಮೊದುಲ್ನೆ ಕಿತ ಅಲ್ಲಿ ಸ್ಯಾನೆ ಪೈಪೋಟಿ ಇರಲಿಲ್ಲ. ಎಂಗೋ ಅತ್ಲಾಗಿ ಆಗೋಯ್ತು.

ಅದೇನಪ್ಪಾಂದ್ರೆ ಹಾಲು ಉತ್ಪಾದಕರ ಸಹಕಾರ ಸಂಘಗಳಿಂದ ಒಬ್ಬರು ಡಿ ಸಿ ಸಿ ಬ್ಯಾಂಕಿಗೆ ಹೋಗ್ಬೋದಿತ್ತು. ಇಡೀ ಜಿಲ್ಲೇನಲ್ಲಿ ಎಲ್ಲಿಂದ ಅರ್ಜಿ ಹಾಕ್ತಾರೋ ಆ ಸಂಘದಾಗೆ ಅವ್ರು ಅಧ್ಯಕ್ಷರಾಗಿರ್ಬೇಕಿತ್ತು. ಹತ್ತು ತಾಲೂಕುಗಳ ಸೊಸೈಟಿ ಅಧ್ಯಕ್ಷರು ವೋಟಾಕಬೇಕಿತ್ತು. ಒಟ್ಟು 164 ವೋಟು ಇತ್ತು. ಅದ್ರಾಗೆ 11 ಜನ ಎಲೆಕ್ಷನ್ ಗೆ ನಿಂತಿದ್ರು. ಎಲ್ರೂ ಬಹುಸಂಖ್ಯಾತ ಸಮುದಾಯದೋರೆ. ಎಲ್ರೂ ಹೇಮಾಹೇಮಿಗಳೆ.(ಘಟಾನುಘಟಿಗಳು) ಆಗ ಏನಾಯ್ತು ಅಂದ್ರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕೃಷ್ಣರಾಯರು ನಮ್ಮ‌ ಕ್ಷೇತ್ರದ ಎಂ ಪಿ ನೂ ಆಗಿದ್ರು. ಅವ್ರು ಗೌರಿಬಿದನೂರು ತಾಲ್ಲೂಕಿನ ನಕ್ಕಲಳ್ಳಿಯವರು. ಅವ್ರಿಗೋಸ್ಕರ ಅಪ್ಪ ಸಿಕ್ಕಾಪಟ್ಟೆ ಓಡಾಡಿ ಮಧುಗಿರಿ ತಾಲೂಕಿನಾಗೆ ವೋಟು ಹಾಕ್ಸಿದ್ರು‌ ಅಂತ ಅವುರ್ಗೆ ಬೋ ಪ್ರೀತಿ. ಅವ್ರು ಅಪ್ಪಂಗೆ ಅಲ್ಲಪ್ಪ ಅಲ್ಪ ಸಂಖ್ಯಾತರ ಕ್ಯಾಂಡಿಡೇಟ್ ಆಗಿ ನೀನು ನಿಂತ್ರೆ ವೋಟೇ ಬೀಳಲ್ಲ, ನೀನು ಸುಮ್ಕೆ ನನ್ ಮಾತು ಕೇಳು, ನಾನು ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ಕೊಡಿಸ್ತೀನಿ. ಆವಾಗ ಗೆಲ್ಲಾಕೆ ಸಲೀಸು ಅಂತ ಹೇಳಿ, ನಮ್ಮ ಶಿಷ್ಯ, ಟಿಕೇಟ್ ಕೊಡಲೇಬೇಕೂಂತ ತುಮಕೂರಿನ ಎಂ ಪಿ ಅವರಿಗೆ ಹೇಳಿ ಕೊಡಿಸಿದ್ರು. ಇಂಗಾಗಿ ಸಲೀಸಾಗಿ 116 ವೋಟು ಬಿದ್ವು. ಅಲ್ಲಿಂದ ಜಿಲ್ಲಾ ರಾಜಕೀಯಕ್ಕೂ ಹೆಜ್ಜೆ ಇಕ್ಕಿದ್ದಾಯ್ತು.

ಎರಡನೇ ಕಿತ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದಿಂದ ಸ್ಯಾನೆ ಪೈಪೋಟಿ ಆಯ್ತು. ಈ ಕಿತ ಇನ್ನೊಂದು ಉಪಾಯ ಮಾಡಿದ್ರು. V S S N ನ ಕೋಟಾ ಅಡೀನಾಗೆ ನಿಂತ್ಕಂಡ್ರು. ಇಲ್ಲಿ ಒಂದು ಐನಾತಿ ಪಾಯಿಂಟ್ ಇತ್ತು. ಯಾವ ಸಂಘಗಳು 75 ಶೇಕಡಾ ಸಾಲ ತೀರಿಸಿರ್ತವೋ ಅಂದ್ರೆ ಸುಸ್ತಿ ಇರಾದಿಲ್ವೊ ಅವುಕ್ಕೆ ಮಾತ್ರ ಜಿಲ್ಲಾ ಬ್ಯಾಂಕಿನ ಪ್ರತಿನಿಧಿಯಾಗಿ ಆಯ್ಕೆ ಆಗೋ ಅವಕಾಶ ಇತ್ತೋ. ಪಾಪ ಆಗ್ಗೆ ಬಡ್ಡಿ ಸಿಕ್ಕಪಟ್ಟೆ ಇತ್ತೋ. ಶೇಕಡಾ 10 ಇದ್ದಾಗ ಯಾವ ರೈತರು ತೀರುಸ್ತಾರೆ. ಆಗ ಮಧುಗಿರಿ ತಾಲೂಕ್ನಾಗೆ ಏಸೊಂದು ಸಂಘಗಳು ಏನೋ ಇದ್ವು. ಆದ್ರೆ 75% ಸಾಲ ಮರುಪಾವತಿ ಆಗಿರಲಿಲ್ಲ. ನಮ್ಮಪ್ಪ ಏನು ಮಾಡೀರು, ನಮ್ನೂರ್ನಾಗೆ ರೈತರ ಸಾಲ ಪೂರಾ ತಾವೇ ಕಟ್ಟಿದ್ರು. ಅಂಗಾಗಿ ಅರ್ಹತೆ ಇದ್ದಿದ್ದು ಇದೊಂದ್ಕೇಯಾ. ಅವಿರೋಧವಾಗಿ ಆಯ್ಕೆ ಆದ್ರು. ರೈತ್ರು ಆಮ್ಯಾಕೆ ಸಾಲ ತೀರಿಸ್ತೀವಿ ಅಂದಿದ್ರು. ಸುಮಾರು ಜನ ಕೊಟ್ರು. ಕೆಲುವ್ರು ಕೊಡಾಕಾಗ್ಲಿಲ್ಲ. ಅವುರ ಕಷ್ಟ ನೋಡಲಾರ್ದೆ ಬ್ಯಾಡ ಬುಡಿ ಅಂತ ಸುಮ್ಕಾದ್ರು. ಇಂಗೇ ಸಾಲ ಸೋಲ ಮಾಡ್ಕಂಡು ಬೇಸಾಯದಾಗೆ ಬಂದಿದ್ದೆಲ್ಲ ಸುರಿಯೋರು.

ಇದ್ರ ಮಧ್ಯದಾಗೆ ಒಂದೊರ್ಸ ಟಿ ಎ ಪಿ ಸಿ ಎಂ ಎಸ್ ನಾಗೆ ಅಧ್ಯಕ್ಷರಾಗಿದ್ರು. (ತಾಲೂಕು ಅಗ್ರಿಕಲ್ಚರಲ್ ಪ್ರೊಡ್ಯೂಸ್ ಕೊ ಆಪರೇಟಿವ್ ಮಾರ್ಕೆಟಿಂಗ್ ಸೊಸೈಟಿ ಲಿಮಿಟೆಡ್) ಒಟ್ನಾಗೆ ರೈತರಿಗೆ, ಜನರುಗೆ ಎಲ್ಲಿಂದ ಕೆಲಸ ಆಗ್ತೈತೋ ಅಲ್ಲೆಲ್ಲ ಕೆಲ್ಸ ಮಾಡ್ತಿದ್ರು. ಈ ಟಿ ಎ ಪಿ ಸಿ ಎಂ ಎಸ್ ಐತಲ್ಲ, ಅದುಕ್ಕೆ ಡೈರೆಕ್ಟರ್ ಆಗಿದ್ದು ಎಂಗಪ್ಪಾ ಅಂದ್ರೆ ಆಯಾ ಕ್ಷೇತ್ರದ ಡಿ ಸಿ ಸಿ ಬ್ಯಾಂಕ್ ಡೈರೆಕ್ಟರ್ ಆದವರು ಅಲ್ಲಿನ ಟಿ ಎ ಪಿ ಸಿ ಎಂ ಎಸ್ ಗೆ ಸೀದಾ ಡೈರೆಕ್ಟ್ರು. ಯಾಕೇಂದ್ರೆ ಡಿ ಸಿ ಸಿ ಇಂದ್ಲೆ ಇಲ್ಲಿಗೆ ಸಾಲ ಕೊಡ್ತಿದ್ದುದ್ದು. ಅಂಗಾಗಿ ಅಲ್ಲಿಂದ ಪ್ರತಿನಿಧಿಯಾಗಿ ಇಲ್ಲಿ ಇರ್ತಿದ್ರು. ಆದ್ರೂ ಇವುರ್ಗೂ ಸುತ ಅಲ್ಲಿನ ಡೈರೆಕ್ಟರ್‌ಗಳಿಗೆ ಇರಾ ಎಲ್ಲಾ ಪವರ್ರೂ ಇರ್ತಿತ್ತು.‌ ಅಂಗಾಗಿ ಅಪ್ಪ ಅಲ್ಲಿ ಒಂದೊರ್ಸ ಅಧ್ಯಕ್ಷರಾದ್ರು. ಡಿ ಸಿ ಸಿ ಬ್ಯಾಂಕಿನಾಗೆ ಇರಾಗಂಟ ಅಂದ್ರೆ ಹದಿನೈದು ವರ್ಷ ನಿರ್ದೇಶಕರಾಗಿದ್ರು. ಇಲ್ಲಿ ರೈತರಿಗೆ ಗೊಬ್ಬರ ವಿತರಿಸೋರು.

ಮೂರನೇ ದಪ ಡಿ ಸಿ ಸಿ ಬ್ಯಾಂಕಿಗೆ V S S N ನಿಂದಾಲೇ ನಿಂತ್ರು. ಈ ಕಿತ ಒಂದು ಆರು ಸಂಘಗಳಿಗೆ ವೋಟು ಮಾಡೊ ಅರ್ಹತೆ ಸಿಕ್ಕಿತ್ತು. ಇಬ್ಬರು ನಿಂತ್ರು. ನಾಕು ವೋಟು ಸಿಕ್ತು. ಗೆದ್ರು. ಈ ಕಿತ ಕೆ. ಎನ್. ರಾಜಣ್ಣೋರು ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷರಾಗಿದ್ರು.‌ ನಮ್ಮಪ್ಪ ಎರಡೂವರೆ ವರ್ಷ ಉಪಾಧ್ಯಕ್ಷರಾಗಿ ಕೆಲಸ ಮಾಡಿದ್ರು.

ಆಗಿನ್ ಕಾಲ್ದಾಗೆ ಇವು ರಾಜಕೀಯವಾಗಿ ಬೆಳಿಯಾಕೆ ಇದ್ದಿದ್ದ ಮೆಟ್ಟಿಲುಗಳು. ಅಂಗೇ ಜನುರ್ಗೆ ಸಾಯಾ ಮಾಡಾಕೆ, ಊರುಗಳ ಅಭಿವೃದ್ಧಿಗೆ ಇದ್ದಿದ್ದ ಆಯುಧಗೋಳೂ ಇವೆ. ಅಪ್ಪ ರಾಜಕೀಯಕ್ಕೆ ಬಂದಿದ್ದ ಉದ್ದೇಶ ಒಂದು ಸ್ವಂತ ವ್ಯಕ್ತಿತ್ವ ರೂಪಿಸ್ಕೊಣಾಕಾದ್ರೂ ನಿಧಾನುಕ್ಕೆ ಜನ್ರಿಗಾಗೀನೇ ರಾಜಕೀಯ ಮಾಡಾಕೆ ಸುರು ಆಯ್ತು. ಊರುದ್ಧಾರವೇ ಗೀಳಾಗಿ ತಕ್ಕಂಡು ಮುಂದ್ಕೋದ್ರು.