ಅವರ ದೇಶದ ಮೇಲಿನ ಪ್ರೀತಿ ಅವರಲ್ಲಿ ಆಳವಾಗಿ ಬೇರೂರಿತ್ತಾದರೂ, ಅದು ಡಾಂಭಿಕತೆಯ ಪ್ರೀತಿ ಅಥವಾ ವಾಗಾಡಂಬರವಾಗಿರಲಿಲ್ಲ; ಬದಲಿಗೆ ಶಾಂತತೆಯಿಂದ ಕೂಡಿತ್ತು ಹಾಗೂ ವೈಯಕ್ತಿಕವಾಗಿತ್ತು. ಅವರ ಲೇಬರ್ ಕ್ಯಾಂಪಿನ ನಂತರದ ಕವಿತೆಗಳಲ್ಲಿ ಮೂಲಭೂತ ಮಾನವ ಸ್ಥಿತಿ ಮತ್ತದರ ಅಮಿತ ಕಷ್ಟಗಳು ಪ್ರಧಾನ ವಿಷಯಗಳಾಗಿವೆ. ಪ್ರಕೃತಿವಸ್ತುಗಳಿಂದ ತುಂಬಿದ ಸಾಂಕೇತಿಕತೆಯನ್ನು ತೋರಿಸುತ್ತಾ ಅವರು ತನ್ನ ಪ್ರೀತಿಯ ಪರಿಸರವನ್ನು, ದೇಶ, ಮತ್ತು ಅದರ ಜನರನ್ನು ಮೀರಿ ನಿಂತು ಸಾರ್ವತ್ರಿಕ ಕವಿಯಾಗುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿಯಲ್ಲಿ ಲಾಟ್ವಿಯಾದ ದೇಶದ ಕವಿ ನಟ್ಸ್ ಸ್ಕ್ಯೂಜೆನಿಯೆಕ್ಸ್ (Knuts Skujenieks) ಅವರ ಬದುಕು ಮತ್ತು ಬರಹದ ಕುರಿತ ಬರಹ ನಿಮ್ಮ ಓದಿಗೆ
ಸೋವಿಯತ್ ಆಡಳಿತದ ಲಾಟ್ವಿಯಾದಲ್ಲಿ ಕವಿಯಾಗುವುದರ ಅರ್ಥವನ್ನು ವೈಯಕ್ತಿಕವಾಗಿ ಮತ್ತು ನೋವಿನೊಂದಿಗೆ ಅನುಭವಿಸಿದ ಕವಿಯಾಗಿದ್ದರು ನಟ್ಸ್ ಸ್ಕ್ಯೂಜೆನಿಯೆಕ್ಸ್ (Knuts Skujenieks) . 1936-ರಲ್ಲಿ ರಿಗಾ ನಗರದಲ್ಲಿ ಜನಿಸಿದ ಹಾಗೂ ಕಳೆದ ವರ್ಷ (2022) ಜುಲೈನಲ್ಲಿ ನಿಧನರಾದ ನಟ್ಸ್ ಸ್ಕ್ಯೂಜೆನಿಯೆಕ್ಸ್, ಲ್ಯಾಟ್ವಿಯಾ ದೇಶದ ಆಧುನಿಕ ಸಾಹಿತ್ಯದ ಅತಿ ಮುಖ್ಯ ಕವಿ, ಹೆಸರಾಂತ ಅನುವಾದಕ ಹಾಗೂ ಸಾಹಿತ್ಯ ವಿಮರ್ಶಕರಾಗಿದ್ದರು. ಅವರು ಲಾಟ್ವಿಯಾ ವಿಶ್ವವಿದ್ಯಾನಿಲಯದಲ್ಲಿ ಲ್ಯಾಟ್ವಿಯನ್ ಭಾಷೆಯ ಅಧ್ಯಯನದಲ್ಲಿ ಪದವಿ ಪಡೆದು, 1961 ರಲ್ಲಿ ಮಾಸ್ಕೋದ ಮ್ಯಾಕ್ಸಿಮ್ ಗಾರ್ಕಿ ಲಿಟರರಿ ಇನ್ಸ್ಟಿಟ್ಯೂಟ್-ನಲ್ಲಿ ತಮ್ಮ ವ್ಯಾಸಂಗ ಮುಗಿಸಿದರು. ಇನ್ನೂ ಯುವ ಕವಿಯಾಗಿದ್ದಾಗ, 1962 ರಲ್ಲಿ ಸ್ಕ್ಯೂಜೆನಿಯೆಕ್ಸ್-ರನ್ನು “ಸೋವಿಯತ್-ವಿರೋಧಿ ಪ್ರಚಾರ”-ದ ಸುಳ್ಳು ಆರೋಪದ ಮೇಲೆ ಅವರನ್ನು ಬಂಧಿಸಲಾಯಿತು ಹಾಗೂ ಮೊರ್ಡೋವಿಯಾದ “ಫೋರ್ಸ್ಡ್ ಲೇಬರ್ ಕ್ಯಾಂಪ್”-ನಲ್ಲಿ (Forced Labour Camp) ಏಳು ವರ್ಷಗಳ ಶಿಕ್ಷೆ ವಿಧಿಸಲಾಯಿತು. ಸೆರೆವಾಸದ ಸಮಯದಲ್ಲಿ ಸ್ಕ್ಯೂಜೆನಿಯೆಕ್ಸ್ ಅವರು ಕವನ ಬರೆಯುವುದನ್ನು ಬಿಡದೆ, ಸುಮಾರು 1000 ಕವನಗಳನ್ನು ಬರೆದರು. ಆದರೆ, ಅವರ “ನಾನ್ ಗ್ರಾಟಾ” ಸ್ಥಿತಿಯಿಂದಾಗಿ ಬಿಡುಗಡೆಯ ನಂತರವೂ ಅವರ ಕವನ ಸಂಕಲನವನ್ನು ಪ್ರಕಟಿಸಲಾಗಲಿಲ್ಲ. ಕೊನೆಗೂ, ಅವರ ಮೊದಲ ಕವನ ಸಂಕಲನ, “Lyrics and Voices” (ಲಿರಿಕ್ಸ್ ಎಂಡ್ ವಾಯ್ಸಸ್), 1978-ರಲ್ಲಿ, ಅವರ 42ನೆಯ ವಯಸ್ಸಿನಲ್ಲಿ ಪ್ರಕಟಿಸಲು ಸಾಧ್ಯವಾಯಿತು.
ಮೊರ್ಡೋವಿಯಾದ ಲೇಬರ್ ಕ್ಯಾಂಪಿಗೆ ಸೆರೆಯಾಗಿ ಹೋಗುವ ಮುಂಚೆಯೇ ಕವಿತೆಹಳನ್ನು ಬರೆಯುತ್ತಿದ್ದ ಸ್ಕ್ಯೂಜೆನಿಯೆಕ್ಸ್-ರು, ಅಲ್ಲಿ ಹೋದಾಗ ಬರೆಯಲು ದೈಹಿಕ ಮತ್ತು ಮಾನಸಿಕ ಶಕ್ತಿ ಸಾಕಷ್ಟು ಇರುವುದೇ ತನ್ನಲ್ಲಿ, ಬರೆದ ಯಾವುದನ್ನಾದರೂ ಉಳಿಸಿಕೊಳ್ಳಲು ಸಾಧ್ಯವಾಗುತ್ತದೆಯೇ, ಅಥವಾ ಲೇಬರ್ ಕ್ಯಾಂಪಿನ ಒಡನಾಡಿಗಳ ಹೊರತು ತನ್ನ ಕವಿತೆಗಳು ಇತರ ಓದುಗರನ್ನು ಪಡೆಯಬಹುದು ಎಂದು ಅವರಿಗೆ ತಿಳಿದಿರಲಿಲ್ಲ. ಹೀಗಿದ್ದೂ, ಲೇಬರ್ ಕ್ಯಾಂಪಿನಲ್ಲಿ ಕವನ ಬರೆಯುವುದು ಸ್ಕ್ಯೂಜೆನಿಯೆಕ್ಸ್-ರಿಗೆ ಒಂದು “ಜೀವನ ತತ್ವ”ದಂತಾಗುತ್ತದೆ, ಅಸ್ತಿತ್ವದ ಪ್ರಶ್ನೆಯಾಗುತ್ತದೆ, ಬದುಕುಳಿಯುವ ಸಾಧನವಾಗುತ್ತದೆ, ಅವರ ಮತ್ತು ಅವರ ಸಹ-ಕೈದಿಗಳ ಬದುಕುಳಿಯುವ ಸಾಧನವಾಗುತ್ತದೆ. ಈ ಕಾವ್ಯ-ಕಾರ್ಯದಲ್ಲಿ ಸ್ಕ್ಯೂಜೆನಿಯೆಕ್ಸ್-ರು ತಮ್ಮ ಸಹ-ಕೈದಿಗಳಿಂದ ಸಾಮಾಜಿಕ ಬೆಂಬಲ ಪಡೆದರು. ಅದೇ ಸಮಯದಲ್ಲಿ, ಅವರು ತನ್ನ ದೇಶದ ಜನರ ಕಡೆಗೆ ತನಗೊಂದು ಸಾಮಾಜಿಕ ಜವಾಬ್ದಾರಿ ಇದೆಯೆಂದು ಅರಿಯಲು ಪ್ರಾರಂಭಿಸಿದರು. “ಲೇಬರ್ ಕ್ಯಾಂಪ್-ನಲ್ಲಿದ್ದಾಗ ನನಗರಿವಾದ್ದದ್ದೇನೆಂದರೆ ಒಂದು ಕವಿತೆಗೆ ಖಚಿತವಾದ ಒಬ್ಬ ಓದುಗನ ಅವಶ್ಯವಿದೆಯೆಂದು, ಯಾರನ್ನು ಸಂಬೋಧಿಸುತ್ತಿದ್ದೇನೆಂಬ ಸ್ಪಷ್ಟವಾದ ಅರಿವಿರಬೇಕು.” ಲೇಬರ್ ಕ್ಯಾಂಪಿನ ಜೀವನವು ಸ್ಕ್ಯೂಜೆನಿಯೆಕ್ಸ್-ನ್ನು ಮೂರ್ತವಾಗಿ ಬರೆಯಲು, ಭಾವನೆಗಳನ್ನು ನಿಖರವಾಗಿ ವ್ಯಕ್ತಪಡಿಸಲು ಕಲಿಸಿತು. ಲೇಬರ್ ಕ್ಯಾಂಪಿನಿಂದ ಹಿಂದಿರುಗಿದ ಇಪ್ಪತ್ತು ವರ್ಷಗಳ ನಂತರ, ಸ್ಕ್ಯೂಜೆನಿಯೆಕ್ಸ್ ಹೇಳಿದರು: “ಲೇಬರ್ ಕ್ಯಾಂಪಿನ ಜೀವನವು ನನ್ನನ್ನು ಕವಿಯನ್ನಾಗಿ ಮಾಡಿಸಿತು; ಗುಲಾಗ್-ಗೆ ನಾನು ಕೃತಜ್ಞನಾಗಿದ್ದೇನೆ.”
ಒಂದು ವಿಪರ್ಯಾಸವೆಂದರೆ, ಇದೇ ಮೊರ್ಡೋವಿಯಾದ ಲೇಬರ್ ಕ್ಯಾಂಪಿನಲ್ಲಿ ಸ್ಕ್ಯೂಜೆನಿಯೆಕ್ಸ್ ಅವರು ಸೃಜನಶೀಲತೆಯ ಸ್ವಾತಂತ್ರ್ಯದ ಅರ್ಥವನ್ನು ಕಂಡುಕೊಂಡರು. ಅಲ್ಲಿನ ಆರಂಭದ ದಿನಗಳಲ್ಲಿ ತನ್ನ ಪತ್ನಿಗೆ ಬರೆದ ಒಂದು ಪತ್ರದಲ್ಲಿ ಅವರು ಹೀಗಂದಿದ್ದಾರೆ: “ನನ್ನ ಇಲ್ಲಿನ ಜೀವನದ ಒಂದು ಪ್ರಯೋಜನವೆಂದರೆ ಇಲ್ಲಿ ನನಗೆ ಕವನ ಬರೆಯುವುದಕ್ಕೆ ಹೆಚ್ಚಿನ ಸ್ವಾತಂತ್ರ್ಯವಿದೆ. ಇದು ವಿರೋಧಾಭಾಸವೆಂದು ತೋರುತ್ತದೆ, ಆದರೆ ಇದು ನಿಜ. ಯಾವುದೇ ಸಾಹಿತ್ಯಿಕ ನಿಯಮಗಳು, ಸಾಹಿತ್ಯ ಗುಂಪುಗಳು, ಚರ್ಚೆಗಳು, ಅನುಮೋದನೆ ಅಥವಾ ಅಸಮ್ಮತಿಗಳಂತಹ ಅಡಚಣೆಗಳಿಲ್ಲ. ಒಂದು ನ್ಯೂನತೆಯೆಂದರೆ ಇಲ್ಲಿ ನನ್ನ ವೀಕ್ಷಣೆಗೆ ಮಿತಿಯಿದೆ, ಆದರೆ ಅದರದ್ದೇ ಪ್ರಯೋಜನಗಳಿವೆ – ಅದು ಕಲ್ಪನೆಯನ್ನು ಅಭಿವೃದ್ಧಿಪಡಿಸುತ್ತದೆ.”
ಅವರು ಲೇಬರ್ ಕ್ಯಾಂಪಿನಲ್ಲಿದ್ದಾಗ ಬರೆದ ‘ದಿ ಬಟನ್’-ಎಂಬ (The Button) [ಇಲ್ಲಿ ಅನುವಾದಿಸಿರುವ ಮೊದಲ ಕವನ] ಕವನ ಸೆರೆವಾಸದಲ್ಲಿ ಭರವಸೆ ಮತ್ತು ಪ್ರೀತಿಯ ಪ್ರತೀಕವಾಗಿ ಯೂರೋಪ್ ಹಾಗೂ ಅಮೇರಿಕ ದೇಶಗಳಲ್ಲಿ ಪ್ರಸಿದ್ಧವಾಗುತ್ತದೆ. ಮೂವ್ವತ್ತಮೂರು ಭಾಷೆಗಳಿಗೆ ಅನುವಾದವಾಗಿರುವ ಈ ಪ್ರಸಿದ್ಧ ಕವನದ ಬಗ್ಗೆ ಅವರು ಹೀಗೆನ್ನುತ್ತಾರೆ: “ಮಾಸ್ಕೋ ನಗರದಿಂದ ಸುಮಾರು 500 ಕಿಲೊಮೀಟರ್ ದೂರವಿರುವ ಮೊರ್ಡೋವಿಯಾದಲ್ಲಿದ್ದ ಸೋವಿಯತ್ ‘ಕಾನ್ಸನ್‌ಟ್ರೇಶನ್’ ಕ್ಯಾಂಪಿನಲ್ಲಿ ಸೆರೆಯಲ್ಲಿದ್ದಾಗ ಈ ಕವನವನ್ನು 1964-ನಲ್ಲಿ ಬರೆದೆ. 1990-ರಲ್ಲಿ ಲ್ಯಾಟ್ವಿಯಾ ದೇಶ ತನ್ನ ಸ್ವಾತಂತ್ರ್ಯವನ್ನು ಪುನರ್-ಘೋಷಿಸಿ ಮತ್ತೆ ಸ್ವತಂತ್ರವಾದಾಗ ಈ ಕವನದ ಪ್ರಕಟಣೆ ಸಾಧ್ಯವಾಯಿತು. ಈ ಕವನವನ್ನು ನನ್ನ ಹೆಂಡತಿಗೆ ಅರ್ಪಿಸಿದ್ದೆ. ಆದರೆ ವರುಷಗಳ ನಂತರ ನಾನು ಈ ಕವನವನ್ನು ಸ್ಟಾಕ್‌ಹೋಮ್, ಪ್ಯಾರಿಸ್, ಕ್ರಾಕೋವ್, ಮತ್ತಿತರ ನಗರಗಳಲ್ಲಿ ಓದಿದಾಗ, ಕಾವ್ಯಪ್ರಿಯರ ಪ್ರತಿಕ್ರಿಯೆಗಳ ಕೇಳಿ ಈ ಕವನ ನಮ್ಮಿಬರಿಗೆ ಮಾತ್ರ ಸೇರಿದ್ದಲ್ಲ ಅಂತನಿಸಿತು. ನನಗೆ ‘ಬಟನ್ ವರ್ಷಗಳು’ ಹಳೆಯ ಇತಿಹಾಸವಾಗಿಬಿಟ್ಟಿದೆ, ಆದರೆ ಹತ್ತಿರದ, ದೂರದ ದೇಶಗಳಲ್ಲಿ ಜನರು ಈಗಲೂ ತಮ್ಮ ನಂಬಿಕೆಗಳಿಗಾಗಿ ನೋವು ಅನುಭವಿಸುತ್ತಿದ್ದಾರೆ. ನಾನು ಈ ಕವನ ಸೇರಿರುವ ಈ ಚಿಕ್ಕ ಪುಸ್ತಕವನ್ನು ಪ್ರಪಂಚದಾದ್ಯಂತ ಸೆರೆಯಾಗಿರುವ ರಾಜಕೀಯ ಕೈದಿಗಳಿಗೆ ಮತ್ತವರ ಕುಟುಂಬದವರಿಗೆ ಅರ್ಪಿಸುತ್ತೇನೆ.”
ಅನೇಕ ಲ್ಯಾಟ್ವಿಯನ್ ಕವಿಗಳಂತೆ, ಸ್ಕ್ಯೂಜೆನಿಯೆಕ್ಸ್ ಅವರು ತನ್ನ ಕಾವ್ಯ-ರೂಪಕಗಳನ್ನು ಪ್ರಕೃತಿಯಲ್ಲಿ ಕಂಡರು; ತನ್ನ ಆಂತರಿಕ ಜೀವನವನ್ನು ಬಾಹ್ಯೀಕರಿಸುವುದಕ್ಕಾಗಿ ತನ್ನ ಭಾವನೆಗಳಿಂದ ತುಂಬಿದ ಮನಸ್ಸಿನಲ್ಲಿರುವ ಭೂದೃಶ್ಯಗಳನ್ನು ಸೃಷ್ಟಿಸಲು ಪ್ರಕೃತಿಯಿಂದ “ಎರವಲು” ಪಡೆಯುತ್ತಾರೆ. ಪ್ರತಿ ಕವಿತೆಯಲ್ಲೂ ಪ್ರಕೃತಿಯೊಂದಿಗೆ ಹೆಣೆದುಕೊಂಡಿರುವ ಕವಿಯ ಇರುವಿಕೆಯನ್ನು ಓದುಗರು ಇಂತಹ ಸಾಲುಗಳಲ್ಲಿ ಅನುಭವಿಸುತ್ತಾರೆ – “ನಮ್ಮ ಹಣೆಯ ಮೂಲಕ ನದಿ ಹರಿಯುತ್ತದೆ,” “ಮರದ ರಕ್ತವು ನನ್ನ ರಕ್ತನಾಳಗಳಲ್ಲಿದೆ”, “ನನ್ನ ಕಣತಲೆಗಳು ಸೇಬಿನ ಮರಗಳಂತೆ ಅರಳುತ್ತವೆ.” ಗದ್ಯ-ಕಾವ್ಯ ಹಾಗೂ ಮುಕ್ತಕಾವ್ಯಗಳ ಜತೆ ಪ್ರಯೋಗಗಳನ್ನು ಮಾಡಿದರೂ, ಅವರು ಛಂದೋಬದ್ಧ ಮತ್ತು ಪ್ರಾಸಬದ್ಧ ಕಾವ್ಯಕ್ಕೆ ಆದ್ಯತೆ ನೀಡಿದರು. ಅವರು ಲ್ಯಾಟ್ವಿಯನ್ ಜಾನಪದ ಶೈಲಿಯನ್ನು ಸಹ ಪರಿಣಾಮಕಾರಿಯಾಗಿ ಬಳಸಿದರು.
ಮೊರ್ಡೋವಿಯಾದ ಲೇಬರ್ ಕ್ಯಾಂಪಿನಿಂದ ಬಿಡುಗಡೆಯಾದ ಮೇಲೆ, ಸ್ಕ್ಯೂಜೆನಿಯೆಕ್ಸ್ ಲ್ಯಾಟ್ವಿಯಾಕ್ಕೆ ಮರಳಿದ ನಂತರ ಕಾವ್ಯಾನುವಾದತ್ತವೂ ಗಮನಹರಿಸಿದರು. ಲೇಬರ್ ಕ್ಯಾಂಪಿನಲ್ಲಿದ್ದಾಗ ಸ್ಕ್ಯೂಜೆನಿಯೆಕ್ಸ್ರು ಅವರು ತನ್ನ ಸಹ ಕೈದಿಗಳಿಂದ ಹಲವಾರು ಭಾಷೆಗಳನ್ನು ಕಲಿತರು. ಇದರ ಪರಿಣಾಮವಾಗಿ, ಅವರು ಸ್ವೀಡಿಷ್, ಓಲ್ಡ್ ಐಸ್ಲ್ಯಾಂಡಿಕ್, ಸ್ಪ್ಯಾನಿಷ್, ರಷ್ಯನ್ ಮತ್ತು ಗ್ರೀಕ್ ಭಾಷೆಗಳಿಂದ ಜಾನಪದ ಗೀತೆಗಳನ್ನು ಲ್ಯಾಟ್ವಿಯನ್ ಭಾಷೆಗೆ ಅನುವಾದಿಸಿದರು. ಫ್ರೆಡೆರಿಕೊ ಗಾರ್ಸಿಯಾ ಲೋರ್ಕಾ, ಯಾನಿಸ್ ರಿಟ್ಸೊಸ್, ಗೇಬ್ರಿಯೆಲಾ ಮಿಸ್ಟ್ರಾಲ್, ದೇಸಾಂಕಾ ಮ್ಯಾಕ್ಸಿಮೊವಿಚ್ ಮತ್ತು ಇಂಗರ್ ಕ್ರಿಸ್ಟೇನ್ಸನ್-ರು ಸೇರಿದಂತೆ ಹಲವಾರು ಕವಿಗಳ ಕವನಗಳನ್ನು ಇವರು ಲ್ಯಾಟ್ವಿಯನ್ ಭಾಷೆಗೆ ಅನುವಾದಿಸಿದ್ದಾರೆ. ಕ್ರೊಯೇಷಿಯನ್ ಭಾಷೆಯಿಂದ ಅವರು ಅನುವಾದಿಸಿದ ಲೇಖಕರಲ್ಲಿ ಮಿರೋಸ್ಲಾವ್ ಕ್ರ್ಲೆಜಾ, ವೆಸ್ನಾ ಪರುನ್ ಮತ್ತು ಜ್ವಾನೆ ಕ್ರಂಜಾ ಕೂಡ ಸೇರಿದ್ದಾರೆ. ಇದಲ್ಲದೆ ಅವರು ರಷ್ಯನ್, ಸ್ಪ್ಯಾನಿಷ್, ಪೋಲಿಷ್ ಮತ್ತು ಸ್ಲೋವಾಕ್ ಭಾಷೆಗಳಿಂದ ಇಪ್ಪತ್ತು ನಾಟಕಗಳನ್ನು ಅನುವಾದಿಸಿದ್ದಾರೆ. ಅವರು ಉಕ್ರೇನಿಯನ್, ಸ್ಲೋವೇನ್, ಸ್ಪ್ಯಾನಿಷ್, ಸರ್ಬಿಯನ್, ಮೆಸಿಡೋನಿಯನ್, ಗ್ರೀಕ್, ಪೋಲಿಷ್, ಲಿಥುವೇನಿಯನ್, ಫಿನ್ನಿಶ್, ಸ್ವೀಡಿಷ್, ಡ್ಯಾನಿಶ್, ಜೆಕ್ ಮತ್ತು ಹಲವಾರು ಇತರ ಭಾಷೆಗಳಿಂದ ಅನುವಾದಿಸಿದ್ದಾರೆ.
ಈ ಕಾವ್ಯ-ಕಾರ್ಯದಲ್ಲಿ ಸ್ಕ್ಯೂಜೆನಿಯೆಕ್ಸ್-ರು ತಮ್ಮ ಸಹ-ಕೈದಿಗಳಿಂದ ಸಾಮಾಜಿಕ ಬೆಂಬಲ ಪಡೆದರು. ಅದೇ ಸಮಯದಲ್ಲಿ, ಅವರು ತನ್ನ ದೇಶದ ಜನರ ಕಡೆಗೆ ತನಗೊಂದು ಸಾಮಾಜಿಕ ಜವಾಬ್ದಾರಿ ಇದೆಯೆಂದು ಅರಿಯಲು ಪ್ರಾರಂಭಿಸಿದರು. “ಲೇಬರ್ ಕ್ಯಾಂಪ್-ನಲ್ಲಿದ್ದಾಗ ನನಗರಿವಾದ್ದದ್ದೇನೆಂದರೆ ಒಂದು ಕವಿತೆಗೆ ಖಚಿತವಾದ ಒಬ್ಬ ಓದುಗನ ಅವಶ್ಯವಿದೆಯೆಂದು, ಯಾರನ್ನು ಸಂಬೋಧಿಸುತ್ತಿದ್ದೇನೆಂಬ ಸ್ಪಷ್ಟವಾದ ಅರಿವಿರಬೇಕು.”
ಅವರ ದೇಶದ ಮೇಲಿನ ಪ್ರೀತಿ ಅವರಲ್ಲಿ ಆಳವಾಗಿ ಬೇರೂರಿತ್ತಾದರೂ, ಅದು ಡಾಂಭಿಕತೆಯ ಪ್ರೀತಿ ಅಥವಾ ವಾಗಾಡಂಬರವಾಗಿರಲಿಲ್ಲ; ಬದಲಿಗೆ ಶಾಂತತೆಯಿಂದ ಕೂಡಿತ್ತು ಹಾಗೂ ವೈಯಕ್ತಿಕವಾಗಿತ್ತು. ಅವರ ಲೇಬರ್ ಕ್ಯಾಂಪಿನ ನಂತರದ ಕವಿತೆಗಳಲ್ಲಿ ಮೂಲಭೂತ ಮಾನವ ಸ್ಥಿತಿ ಮತ್ತದರ ಅಮಿತ ಕಷ್ಟಗಳು ಪ್ರಧಾನ ವಿಷಯಗಳಾಗಿವೆ. ಪ್ರಕೃತಿವಸ್ತುಗಳಿಂದ ತುಂಬಿದ ಸಾಂಕೇತಿಕತೆಯನ್ನು ತೋರಿಸುತ್ತಾ ಅವರು ತನ್ನ ಪ್ರೀತಿಯ ಪರಿಸರವನ್ನು, ದೇಶ, ಮತ್ತು ಅದರ ಜನರನ್ನು ಮೀರಿ ನಿಂತು ಸಾರ್ವತ್ರಿಕ ಕವಿಯಾಗುತ್ತಾರೆ.
ಸೋವಿಯತ್ ಸಾಂಪ್ರದಾಯಿಕತೆಯ ಬೋಧನೆಗೆ ನಿಷ್ಕರುಣೆಯಿಂದ ಗುರಿಯಾದ ಆಗಿನ ಯುವ ಪೀಳಿಗೆಯ ಮಾದರಿಯಾದ ಸ್ಕ್ಯೂಜೆನಿಯೆಕ್ಸ್-ರು ಗಮನಾರ್ಹವಾದ ಮಾನವೀಯ ದೃಷ್ಟಿ, ವೈಯಕ್ತಿಕ ಸಮಗ್ರತೆ ಮತ್ತು ಅಷ್ಟೇ ಗಮನಾರ್ಹವಾದ ಕಾವ್ಯ ಸಂಸ್ಕೃತಿಯ ಘನ ಸಾಕ್ಷ್ಯವನ್ನು ನಮ್ಮಲ್ಲಿ ಬಿಟ್ಟು ಹೋಗಿದ್ದಾರೆ.
ನಾನು ಕನ್ನಡಕ್ಕೆ ಅನುವಾದಿಸಿರುವ ಇಲ್ಲಿರುವ ನಟ್ಸ್ ಸ್ಕ್ಯೂಜೆನಿಯೆಕ್ಸ್-ರ ಆರು ಕವನಗಳಲ್ಲಿ ಮೊದಲ ಕವನವನ್ನು ಇಯೆವಾ ಲೆಸಿನ್ಸ್ಕಾ (Ieva Lešinska) ಹಾಗೂ ಉಳಿದ ಐದು ಕವನಗಳನ್ನು ಬಿಟೈಟ್ ವಿಂಕ್ಲರ್ಸ್ ಅವರುಗಳು (Bitite Vinklers) ಮೂಲ ಲ್ಯಾಟ್ವಿಯನ್ ಭಾಷೆಯಿಂದ ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ.
1
ಒಂದು ಬಟನ್
ಚೆರಿ-ಮರವೊಂದು ತನ್ನ ಕೊನೆಯ
ಹಣ್ಣನ್ನು ಕಾಪಾಡಲು ಹೆಣಗುತ್ತಿದೆ –
ಅದು ನಾನೇ,
ನನ್ನ ಚಿಂದಿ ಅಂಗಿಯ ಕೊನೆಯ
ಬಟನ್ನಿನ ಮೇಲೆ ನಿಗಾ ಇಟ್ಟಿರುವಂವ.
ಭರವಸೆಗಳು, ನೆನಪಿನ ವಸ್ತುಗಳು
ಎಲ್ಲವೂ ಕೈಬಿಟ್ಟುಹೋದಾಗ,
ಬದುಕಿನ ಹೊರೆ ಹೊರಲಾರದ ಭಾರವಾದಾಗ,
ಆ ಬಟನ್ನು ಅಲ್ಲಿಯೇ ಇದೆಯೆಂದು ಖಾತ್ರಿ ಮಾಡಿಕೊಳ್ಳುವೆ,
ನೀನಲ್ಲಿ ಹೊಲೆದ ಬಟನ್ನು.
ವರುಷಗಳ, ಭಯಗಳ ನಂತರವೂ
ಹಿಮಗಳ, ಜಗಳಗಳ ನಂತರವೂ,
ಈ ತೂತು-ಭರಿತ ಬದುಕಿಗೆ ನಾ ಜೋಡಿಯಿರುವೆ
ನಿನ್ನ ಪ್ರೀತಿಯ ಅನಂತ ದಾರದ ಹೊಲಿಗೆಯಿಂದ.
ಹಗಲು ರಾತ್ರಿಗೆ ಶರಣಾಗಿದೆ.
ಬೆಳಕು ಹರಿವ ಒಂಟಿ ಕಿಟಕಿಯತ್ತ ನಾ ನೋಡುವೆ.
ಕಿಟಕಿಯಂತೂ ಅಲ್ಲ ಅದು: ನನ್ನೆದೆಯ ಮೇಲೆ ಅಗೋ,
ಧಗಧಗ ಉರಿಯುತ್ತಿದೆ,
ನೀ ಹೊಲೆದ ಬದುಕೊಂದು.
ಮೂಲ: The Button
2
ಏನನ್ನೂ ಹೇಳದಿರು
ಏನನ್ನೂ ಹೇಳದಿರು
ನಿನ್ನ ಮಾತನ್ನ ನಾ ಕೇಳುವೆ
ನನ್ನ ಕಿಟಕಿಯ ಬುಡದಲ್ಲಿ
ನಿನ್ನ ಮಾತುಗಳ ಬಿತ್ತುವೆ
ಹಸಿರು ಹುಲ್ಲಿನಲ್ಲಿ
ಅದರ ಮೇಲೆ
ಮಧ್ಯಾಹ್ನದ ವೇಳೆ ನಾಯಿಯೊಂದು ಮಲಗಲಿ
ಗುಬ್ಬಚ್ಚಿಗಳು ತಿರುಗಾಡಲಿ
ತಾಯಿಯೊಬ್ಬಳು ತನ್ನ ಮಗುವಿಗೆ ನಡೆಯಲು ಕಲಿಸಲಿ
ಮೂಲ: Don’t say a word
3
ಭೂಲೋಕದ ಅಂಚಿನಲಿ
ಸುಡುಗಾಯಗಳಿಗೆ ಅಂಜುವವರ ಜತೆ
ನನಗೆ ಯಾವ ಸಾಮ್ಯವೂ ಇಲ್ಲ
– ಅಪೊಲಿನೆಯರ್
ಇದೇ ಕೊನೆಯ ತಡೆಗಟ್ಟು, ಬೆಂಕಿಗೋಡೆ, ಕೆಂಪುಗೆರೆ.
ಇದರ ಆಚೆ-ಈಚೆಯಿಂದ,
ನಾವು ಇನ್ನೆಂದೂ ಕೈಕುಲುಕಲಾರೆವು
ಗೆಳೆಯರಾಗಿ, ರಾಜಕಾರಣಿಗಳಾಗಿ,
ಯಾ ಮದಿರಾಮಿತ್ರರಾಗಿ.
ಇದೇ ಕೊನೆಯ ದಿನ, ಅಂತಿಮ ತೀರ್ಪುವಾಕ್ಯ,
ಕೊನೆಯ ಅವಕಾಶ.
ಗಡಿಯಲ್ಲಿ ‘ನಾವು’ ಎಂಬ ಪದ
ಬೆಂಕಿಹತ್ತಿಕೊಂಡು ಉರಿದುಹೋಗುತ್ತೆ.
‘ನೀವು’ ಎಂಬ ಪದ ಬೆಂಕಿಯ ದಾಟಲಾಗದು.
‘ಅವರು’ ಮಾತ್ರ ಉಳಿಯುತ್ತೆ.
ಈದಿನ ರಾತ್ರಿ ನಮ್ಮ ವಿವೇಕ-ತುಂಬಿದ
ಸೂಟ್‌ಕೇಸುಗಳ ಮೇಲೆ ಕೂರೋಣ,
ಉಬ್ಬಿವೆ ನಮ್ಮ ಬೆನ್ನಚೀಲಗಳು ಗೌರವಭಾವನೆಗಳಿಂದ,
ಜೀವಮಾನ ಪೂರ್ತಿ ಸೇರಿಸಿಟ್ಟ
ಚಿಲ್ಲರೆಕಾಸುಗಳನ್ನ ಕೂತು ಎಣಿಸೋಣ
ಮುಂದಿನ ಪ್ರಯಾಣಕ್ಕೆ, ಯಾ ಹಿಂದಿರುಗುವುದಕ್ಕೆ.
ಬೆಳಗಾಗುವ ತನಕ ಕೂರೋಣ.
ಮೂಲ: At the edge of the world
4
ಬೀಜ ಕದ ತಟ್ಟುತಿದೆ
ಸೂರ್ಯನ ಮೂಗು-ಹೊಳ್ಳೆಗಳು ಅದರುತ್ತಿವೆ,
ಗೇಟುಗಳು, ಬೇಲಿಗಳು ಮಾಯವಾಗಿವೆ,
ಒಂದಿಷ್ಟು ಪಾರಿವಾಳಗಳು ಆಕಾಶದೆಡೆಗೆ ಚಿಮ್ಮುತ್ತವೆ,
ಬಹು ಬಿಗಿಯಾಗಿ ಎಳೆದಿರುವ ಬರ್ಚ್ ಮರದ ತೊಗಟೆ ಸಿಡಿಯುತ್ತದೆ,
ನದಿಯ ನೆತ್ತರಿನಲಿ ಮಂಜುಗಡ್ಡೆಗಳು ಕರಗುತ್ತವೆ,
ಹುಲ್ಲು ತನ್ನ ಸರದಿಗಾಗಿ ಕಾಯುತ್ತಿದೆ,
ದೂರದ ಹಂಡೆಗಳಲ್ಲಿ ಕುದಿಯುತ್ತಿವೆ
ಮೂಡಣ ಗಾಳಿ, ಪಡುವಣ ಗಾಳಿ,
ಆವಾಗಾವಾಗ ನಿನಗೆ ಕೇಳಿಸುತ್ತೆ,
ಭೂಮಿಯ ತನುವಿನಲಿ ನೀನು ಬಿತ್ತ ಬೀಜ
ಕದ ತಟ್ಟುವುದನ್ನ.
ಉಷ್ಣವಲಯದ ಸಾಣೆಗಲ್ಲುಗಳ ಮೇಲೆ
ಓರಿಯೋಲ್ ಪಕ್ಷಿಗಳು ತಮ್ಮ ನಾಲಗೆಗಳನ್ನು ಮಸೆಯುತ್ತವೆ,
ಹಿಂದಿರುಗಲು ತಯಾರಾಗುತ್ತವೆ.
ಉಸಿರು ಬಿಗಿ ಹಿಡಿದುಕೊಳ್ಳಿ
(ಬೀಜ ಕದ ತಟ್ಟುತ್ತಿದೆ)
ಶೀತಕಾಲದ ಉದ್ದಕ್ಕೂ
(ಬೀಜ ಕದ ತಟ್ಟುತ್ತಿದೆ)
ಇಷ್ಟು ನಿಶ್ಶಬ್ಧ ಹಿಂದೆಂದೂ ಇರಲಿಲ್ಲ
ಇಷ್ಟು ಆಳ ಹಿಂದೆಂದೂ ಇರಲಿಲ್ಲ
(ಬೀಜ ಕದ ತಟ್ಟುತ್ತಿದೆ)
ಇಷ್ಟು ವೇಗ ಹಿಂದೆಂದೂ ಇರಲಿಲ್ಲ
(ಬೀಜ ಕದ ತಟ್ಟುತ್ತಿದೆ)
ರೊಟ್ಟಿ ಹುಟ್ಟುತ್ತೆ
ಅಚಾನಕ್ಕಾಗಿ
ನಿನ್ನ ಗಮನಕ್ಕೂ ಬಾರದಷ್ಟು ಹಠಾತ್ತನೆ.
ಮೂಲ: The Seed is Knocking
5
ಕೇಳಿಸುತಿದೆ ನನಗೆ
ನಿಶ್ಶಬ್ಧ.
ನಿಶ್ಶಬ್ಧ.
ನಿಶ್ಶಬ್ಧ.
ಬಾಯಿ ಮುಚ್ಚಿಸಲಾಗಿದೆ.
ಹಕ್ಕುಗಳ ಕಿತ್ತುಕೊಳ್ಳಲಾಗಿದೆ.
ಕೇಳಿಸುತಿದೆ ನನಗೆ
ಹಳದಿ ಆಕಾಶದ ಎದುರು
ಕಿರುಚುತ್ತಿರುವ
ಕರಿ ಪೀತದಾರು ಮರಗಳು.
ಬೇರುಗಳು ದಂಗೆ ಏಳುತ್ತವೆ.
ಪೀತದಾರು ಮರಗಳು ಎದ್ದುನಿಂತು,
ಕಪ್ಪು ರೆಕ್ಕೆಗಳ ಮೇಲೆ ಹಾರಲು ಬಯಸುತ್ತವೆ.
ಕೇಳಿಸುತಿದೆ ನನಗೆ
ದುಃಖದಿಂದ ಪಿಸುಗುಟ್ಟುತ್ತಾ
ನೀಲಿ ಬೂದಿಯೊಳಗೆ ತೂರಿ ಅವಿತುಕೊಳ್ಳುವ ಸೂರ್ಯ.
ಕೇಳಿಸುತಿದೆ ನನಗೆ, ನನ್ನ ಎಡಗೈ
ಹಾಗೂ ಬಲಗೈ ಮಾತಾಡುವುದ.
ಎಡಗೈ ಏನು ಮಾಡುತ್ತಿದೆಯೆಂದು
ಬಲಗೈಯಿಗೆ ತಿಳಿದಿಲ್ಲ,
ಆಲಸ್ಯವ ಕಂಡು ರೇಗುತ್ತದೆ ಎಡಗೈ.
ಲೈಟ್‌ಬಲ್ಬ್ ಏನು ಹೇಳುತ್ತಿದೆಯೆಂದೂ ಕೇಳಿಸುತಿದೆ,
ದಿನಪತ್ರಿಕೆಗಳು ಏನು ಸುಳ್ಳಾಡುತ್ತಿವೆಯೆಂದೂ ಕೇಳಿಸುತಿದೆ,
ಆ ಸುಂದರ, ಪುಷ್ಪಿತ ಪದಗಳು
ಕುಡುಕನ ಉಸಿರಿನಂತೆ ನನ್ನ ಮುಖಕ್ಕೆ ಬಡಿಯುತ್ತದೆ.
ನಿಶ್ಶಬ್ಧ.
ನಿಶ್ಶಬ್ಧ.
ನಿಶ್ಶಬ್ಧ,
ಒಂದು ಕಾಣದ ಬಾವುಟದ ಹಾಗೆ ಬಿಸುತ್ತಿದೆ.
ಕೇಳಿಸುತಿದೆ ನನಗೆ ಈ ಹೊತ್ತಿನಲ್ಲಿ
ಎಷ್ಟು ಭಾವೋತ್ಕಟತೆಯಿಂದ
ಭೂಮಿಯ ತಿರುಳು
ಜೀವಿಸುತಿದೆಯೆಂದು.
ಮೂಲ: I hear
6
ಸುರುಳಿ ಮೆಟ್ಟಲುಗಳು
ಸದ್ದಿಲ್ಲದೆ ಹತ್ತು,
ಇನ್ನೊಂದು ಮೆಟ್ಟಿಲ ಸುರುಳಿ, ಅಷ್ಟೇ.
ಸದ್ದಿಲ್ಲದೆ ಹತ್ತು, ಶಾಂತವಾಗಿ ಉಸಿರಾಡು.
ಸದ್ದಿಲ್ಲದೆ ಹತ್ತು, ಕದಲದಿರು,
ಕದಲದಿರು.
ನಿನ್ನ ಕಂದೀಲು
ನಿನಗೆ ಕಾಣಿಸುವವರೆಗೂ
ಸದ್ದಿಲ್ಲದೆ ಹತ್ತು.
ಜೋರಾಗಿ ಉಸಿರಾಡುತ್ತಿದ್ದಿ,
ಕದಲದಿರು.
ಅದು ನಿನ್ನದೇ ಜ್ಯೋತಿ,
ನೆಲವಿಲ್ಲ ಆಕಾಶವಿಲ್ಲ ಅದಕ್ಕೆ.
ವೇಗ ಅತಿಯಾಯಿತು,
ಅನ್ಯಜಲಗಳ ಮೀನುಗಳು ನಿನ್ನೊಳು ಈಗಲೂ ಎಚ್ಚರವಾಗಿವೆ.
ಸದ್ದಿಲ್ಲದೆ ಹತ್ತು, ಮತ್ತೆ ಇನ್ನೊಮ್ಮೆ,
ಅದು ನಿನ್ನದೇ ನುಡಿಯಾಗಿರುತ್ತೆ,
ಹಿಂಪದವೂ,
ಮುಂಪದವೂ.
ಮತ್ತೆ,
ಸದ್ದಿಲ್ಲದೆ ಹತ್ತು,
ಇನ್ನೊಂದು ಮೆಟ್ಟಿಲ ಸುರುಳಿ, ಅಷ್ಟೇ,
ಅದು ನಿನ್ನದೇ ಆಕಾಶವಾಗಿರುತ್ತೆ, ಮಿನುಗುತ್ತಿರುತ್ತೆ.
ಮತ್ತೆ, ಇನ್ನೊಮ್ಮೆ,
ನಿನ್ನ ಆತ್ಮದ ಪ್ರತಿಬಿಂಬವಾಗಿರುತ್ತೆ.
ಸದ್ದಿಲ್ಲದೆ ಹತ್ತು,
ಬೆಳಕು ಆತ್ಮಗಳ ದಾಟಿ,
ಮೂರೇ ಮೂರು ಮೆಟ್ಟಿಲ ಸುರುಳಿಗಳಷ್ಟೇ,
ಆಮೇಲೆ, ವಿಷಯದ ಅರಿವಾಗುತ್ತೆ ನಿನಗೆ.
ಉಸಿರನ್ನು ಸ್ವಲ್ಪ ಹಿಡಕೊಳ್ಳಕ್ಕಾಗಲ್ವಾ?
ಪಯಣ ಈಗಷ್ಟೇ ಪ್ರಾರಂಭವಾಗಿದೆ.
ಮೂಲ: Stairs
ಜಯಶ್ರೀನಿವಾಸ ರಾವ್ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಗದ್ಯ-ಪದ್ಯಗಳ ಅನುವಾದಕರು. ‘ಚಂದ್ರಮುಖಿಯ ಘಾತವು’ (1900) ಕಾದಂಬರಿಯನ್ನು, ‘ಸ್ಟೀಲ್ ನಿಬ್ಸ್ ಆರ್ ಸ್ಪ್ರೌಟಿಂಗ್: ನ್ಯೂ ದಲಿತ್ ರೈಟಿಂಗ್ ಫ಼್ರಮ್ ಸೌತ್ ಇಂಡಿಯ’ ಸಂಕಲನದಲ್ಲಿ ಕವನಗಳು, ಕತೆಗಳು, ಹಾಗೂ ಪ್ರಬಂಧಗಳನ್ನು, ಹಾಗೂ ಕೇರೂರ ವಾಸುದೇವಾಚಾರ್ಯರ ಸ್ವರಚಿತ ‘ವಿಸ್ಮಯಜನಕವಾದ ಹಿಂಸೆಯ ಕ್ರಮವು’ ಎಂಬ ಶರ್ಲಾಕ್ ಹೋಮ್ಸ್ ಕತೆಯನ್ನು ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ. “ಸುರಿದಾವೋ ತಾರೆಗಳು: ಅನುವಾದಿತ ಪೋಲಿಷ್ ಕವನಗಳು” (ಪೋಲೀಷ್ ಕವಿತೆಗಳ ಕನ್ನಡಾನುವಾದಿತ ಸಂಕಲನ). ಇವರು ಇಂಗ್ಲಿಷಿಗೆ ಅನುವಾದ ಮಾಡಿದ ಶ್ರೀ ಕೆ. ವಿ. ತಿರುಮಲೇಶರ ಕವನಗಳು ಇಂಗ್ಲಿಷ್ ಸಾಹಿತ್ಯ ಪತ್ರಿಕೆಗಳಾದ ‘ಸೆಷುರೆ’ ಹಾಗೂ ‘ಮ್ಯೂಜ಼್ ಇಂಡಿಯ’ ದಲ್ಲಿ ಪ್ರಕಟವಾಗಿವೆ. ಹೈದರಾಬಾದಿನ CIEFLನಿಂದ (ಈಗ The EFL University) ‘Translation and Transformation: The Early Days of the Novel in Kannada’ ಶೀರ್ಷಿಕೆಯಡಿಯಲ್ಲಿ ನಡೆಸಿದ ಸಂಶೋಧನೆಗಾಗಿ 2003ರಲ್ಲಿ PhD ಪದವಿ ಪಡೆದಿದ್ದಾರೆ.