ಬ್ರೆಸನ್‍ ನ ಚಿತ್ರದಲ್ಲಿ ನಕಲಿ ನೋಟು ಕೈಯಿಂದ ಕೈಗೆ ಬದಲಾಗುವ ಕ್ರಮವನ್ನು ನಿರೂಪಿಸುತ್ತಾನೆ. ಮೊದಲು ಅದು ಅನುಕೂಲಸ್ಥ ಯುವಕನ ದುರಾಸೆಯ ಕಾರಣದಿಂದ ಅವನ ಬಳಿಯಿದ್ದು ನಂತರ ಅಂಗಡಿಯವನಿಂದ ಮುಂದುವರೆದು ಕೊನೆಗೆ ಆಯಿಲ್ ಕಂಪನಿಯ ಕೆಲಸಗಾರನಿಗೆ ಸೇರುತ್ತದೆ. ಆ ನೋಟಿನ ಕಾರಣ ಅವನು ಅರೆಸ್ಟ್ ಆಗಿ ಹೆಂಡತಿ, ಮಗುವಿನ ಅವನ ಸಂಸಾರ ದುರವಸ್ಥೆಗೆ ಒಳಗಾಗುತ್ತದೆ. ಈ ಆಘಾತ ಅವನನ್ನು ವ್ಯಗ್ರನನ್ನಾಗಿ ಪರಿವರ್ತಿಸಿ ಕೊಲೆಗಾರನಾಗುವಂತೆ ಮಾಡುತ್ತದೆ.
ಎ. ಎನ್.‌ ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್ʼನ ಆರನೆಯ ಕಂತು

 

ಸಾಮಾನ್ಯರಿಗೆ ಚಿತ್ರನಿರ್ಮಾಣದ ವೆಚ್ಚ ಸರಿತೂಗಿಸುವುದು ಕಷ್ಟವೆನ್ನುವುದು ತಿಳಿದದ್ದೆ. ಆದರೆ ತೊಂಭತ್ತರ ದಶಕದಲ್ಲಿ ಅಮೆರಿಕದ ಲಿಂಕ್ಲೇಟರ್, ಸ್ಪೀಕ್ ಲೀ, ಕ್ವಿಂಟಿನ್ ಟರಾಂಟಿನೋ ಮುಂತಾದ ಪ್ರತಿಭಾವಂತರಿಗೆ ದಿಕ್ಸೂಚಿಯಾದದ್ದು ರಿಕ್ ಶ್ಮಿತ್‍ ನ ಸೆಕೆಂಡ್ ಹ್ಯಾಂಡ್ ಕಾರಿನ ಬೆಲೆಯಲ್ಲಿ ಸಿನಿಮಾ ಮಾಡುವುದು ಹೇಗೆ ಎನ್ನುವ ಅರ್ಥದ ಪುಸ್ತಕ. ಚಿತ್ರ ನಿರ್ಮಾಣಕ್ಕೆ ಕಡಿತ ಮಾಡುವ ಪರ್ಯಾಯ ಮಾರ್ಗಗಳ ಸೂಚನೆಗಳಿದ್ದ ಅದರ ಪ್ರಭಾವಕ್ಕೆ ಒಳಗಾದವರಲ್ಲಿ ರಿಚರ್ಡ್ ಲಿಂಕ್ಲೇಟರ್ ಕೂಡ ಒಬ್ಬ.

ಅಮೆರಿಕದಲ್ಲಿ ಇಂಡಿಪೆಂಡೆಂಟ್ ಫಿಲ್ಮ್ ನಿರ್ಮಾಣ ಯುಗ ಎನ್ನುವುದು ಪ್ರಾರಂಭವಾದದ್ದು ಆಗಲೇ. ಆದರೆ ಈ ಚಿತ್ರ ನಿರ್ಮಾಣ ಪಂಥ 1943ರ ಇಟಲಿಯ ಮೂಲದ ನಿಯೋ ರಿಯಲಿಸಂ ರೀತಿಗಿಂತ ಸ್ವಲ್ಪ ಭಿನ್ನ ಸ್ವರೂಪದ್ದು. ನಿಯೋ ರಿಯಲಿಸಂನಲ್ಲಿ ಕಾರ್ಮಿಕ ವರ್ಗ, ಕೆಳ ಮಧ್ಯಮದವರು ಬದುಕು ನಿರ್ವಹಿಸುವುದಕ್ಕೆ ಎದುರಾಗುವ ಸಂಕಷ್ಟ, ಚಿತ್ರೀಕರಣಕ್ಕೆ ಸ್ಟುಡಿಯೋ ಬದಲು ಹೊರಾಂಗಣ ಹಾಗೂ ಸೆಟ್ ಹಾಗೂ ವೃತ್ತಿ ನಿರತ ನಟವರ್ಗದ ಬದಲು ಹವ್ಯಾಸಿ ನಟವರ್ಗ ಪ್ರಧಾನ. ಇಂಡಿಪೆಂಡೆಂಟ್ ಚಿತ್ರ ನಿರ್ಮಾಣ ಮಾರ್ಗದಲ್ಲಿ ಸಿನಿಮಾದಲ್ಲಿನ ಕಥನದ ವಸ್ತು, ಶೈಲಿ ಮತ್ತು ನಿರ್ದೇಶಕನ ಪರಿಕಲ್ಪನೆಯಲ್ಲಿ ವೈಯಕ್ತಿಕತೆ ಮುಖ್ಯವಾಗಿರುತ್ತದೆ. ಈ ಮಾರ್ಗದಲ್ಲಿ ಚಿತ್ರ ನಿರ್ಮಿಸಿದವರಲ್ಲಿ ಕ್ವಿಂಟಿನ್ ಟರಂಟಿನೋ, ಸ್ಟಿವನ್ ಸೊಬರ್‍ಬರ್ಗ್, ಸ್ಪಿಕ್ ಲೀ ಮುಂತಾದವರಿದ್ದಾರೆ. ಇವೇ ದಿಕ್ಸೂಚಿಗಳನ್ನು ಸ್ವೀಕರಿಸಿಯೂ ರಿಚರ್ಡ್ ಲಿಂಕ್ಲೇಟರ್ ತನ್ನದೇ ಹೊಸ ರೀತಿಯನ್ನು ಕಂಡುಕೊಂಡ.

ಪುಡಿಗೆಲಸಗಳ ಜೊತೆ ಚಿತ್ರ ನಿರ್ಮಾಣದ ಬಗ್ಗೆ ಪಾಠ ಮಾಡುತ್ತ ಹೆಗಲಿಗೆ ಸೂಪರ್ 8 ಕ್ಯಾಮೆರಾ ತಗಲುಹಾಕಿಕೊಂಡು ತಿರುಗುತ್ತಿದ್ದ ರಿಚರ್ಡ್ ಲಿಂಕ್ಲೇಟರ್‍ ನಲ್ಲಿ ಇಂಡಿಪೆಂಡೆಂಟ್ ಚಿತ್ರ ನಿರ್ಮಾಣದ ಸಂಗತಿಯಿಂದ ಹುಟ್ಟಿದ್ದು ಸ್ವಂತ ಚಿತ್ರ ನಿರ್ಮಿಸುವ ಉಮೇದು. ಹೀಗಾಗಿ ಚಿತ್ರ ನಿರ್ಮಾಣದಲ್ಲಿ ತನ್ನದೇ ಆದ ವಿಶಿಷ್ಟ ಪರಿಕಲ್ಪನೆಯ ದಾರಿಯನ್ನು ಸೃಷ್ಟಿಸಿಕೊಂಡ. ಅದು ಸಾಮಾಜಿಕ, ಆರ್ಥಿಕ ಮುಂತಾದ ಕ್ಷೇತ್ರಗಳಲ್ಲಿರುವ ವ್ಯಕ್ತಿಗಳು ಆಲಸ್ಯದ ಸಂದರ್ಭದಲ್ಲಿ ನಡೆದುಕೊಳ್ಳುವ ಮತ್ತು ವರ್ತಿಸುವ ರೀತಿಗಳನ್ನು ತೆರೆದಿಡುವಂಥಾದ್ದು. ಈ ಪ್ರಕ್ರಿಯೆಯಲ್ಲಿಯೇ ಅವರ ಒಟ್ಟಾರೆ ವ್ಯಕ್ತಿತ್ವಕ್ಕೆ ಅಂಟಿಕೊಂಡ ಇತರ ಧೋರಣೆಗಳನ್ನು ಬಿಚ್ಚಿಡುತ್ತಾನೆ. ಈ ಪ್ರಕ್ರಿಯೆಗಾಗಿ ಅವನ ಚಿತ್ರಗಳಲ್ಲಿ ಪಾತ್ರಗಳ ವಯೋಮಾನ, ಆರ್ಥಿಕ ನೆಲೆಗಟ್ಟು, ಸಾಮಾಜಿಕ ಭದ್ರತೆ ಪ್ರಮುಖವಾಗುತ್ತವೆ.

ಲಿಂಕ್ಲೇಟರ್ ಮೊದಲಿಗೆ ಸ್ವಾನುಭವದ ಚಿತ್ರವನ್ನು ನಿರ್ಮಿಸಿದ. ಫಿಲ್ಮ್ ಫೆಸ್ಟಿವಲ್‍ ನ ಮಾನ್ಯತೆ ಗಳಿಸಿದ್ದು `ಸ್ಲೇಕರ್’(1991). ಎಪ್ಪತ್ತರ ದಶಕದಲ್ಲಿ `ಟ್ಯಾಕ್ಸಿ ಡ್ರೈವರ್’, `ದ ಡಿಪಾರ್‌ ಟೆಡ್’ `ಆಫ್ಟರ್ ಅವರ್ಸ್’ ಮುಂತಾದ ಚಿತ್ರಗಳ ಅಮೆರಿಕದ ಮಾರ್ಟಿನ್ ಸ್ಕೋರ್ಸ್, `ಮಿರರ್’, `ಸ್ಟಾಕರ್’ನಂಥ ಚಿತ್ರಗಳ ರಷ್ಯಾದ ಆಂಡ್ರೆ ತಾರ್‌ಕೋ ವಸ್ಕಿ ಮತ್ತಿತರ ಪ್ರತಿಭಾವಂತ ನಿರ್ದೇಶಕರು ಸಿದ್ಧಪಡಿಸಿದ ನಿರೂಪಣಾ ವಿಧಾನವನ್ನೇ ಹೋಲುವ ಚಿತ್ರಗಳನ್ನು ನಿರ್ಮಿಸಿದ್ದಕ್ಕಿಂತ ತೀರ ಭಿನ್ನವಾಗಿ ಚಿತ್ರ ನಿರೂಪಣೆಯನ್ನು ಪರಿಕಲ್ಪಿಸಿದ. ಈ ಪ್ರಕ್ರಿಯೆಯಲ್ಲಿಯೇ ನಿರ್ಮಿತವಾದದ್ದು ಯಾವುದೇ ನಿಶ್ಚಿತ ಪ್ಲಾಟ್ ಇಲ್ಲದೆ ನಿರುದ್ದೇಶವಾಗಿ ಭೇಟಿಯಾಗುವ ಆಲಸಿಗಳು ಎನ್ನಬಹುದಾದ ವ್ಯಕ್ತಿಗಳ ಜೀವನದಲ್ಲಿ ದಿನವೊಂದರಲ್ಲಿ ಜರುಗುವ ವಿವಿಧ ಬಗೆಯ ಎಂಟು-ಹತ್ತು ನಿಮಿಷಗಳ ಕಿರು ಪ್ರಸಂಗಗಳನ್ನು ಒಳಗೊಂಡ ಚಿತ್ರ ʻಸ್ಲೇಕರ್ʼ. ಈ ಚಿತ್ರ ರಾಬರ್ಟ್ ಬ್ರೆಸನ್ ಲಿಯೋ ಟಾಲ್‍ಸ್ಟಾಯ್‍ ನ ‘ದ ಫೋರ್ಜ್‌ಡ್ ಕೂಪನ್ʼ ನೀಳ್ಗತೆಯನ್ನು ಆಧರಿಸಿ ನಿರ್ಮಿಸಿದ `ಲಾ ಆರ್ಜೆಂಟ್’ ಚಿತ್ರವನ್ನು ಸಾಕಷ್ಟು ಹೋಲುತ್ತದೆ. ಲಿಂಕ್ಲೇಟರ್ ಕೂಡ ತನ್ನ ಚಿತ್ರದ ಮೇಲೆ ಬ್ರೆಸೆನ್ ಚಿತ್ರದ ನೆರಳು ಇರುವುದನ್ನು ಒಪ್ಪಿಕೊಳ್ಳುತ್ತಾನೆ.

ಬ್ರೆಸನ್‍ ನ ಚಿತ್ರದಲ್ಲಿ ನಕಲಿ ನೋಟು ಕೈಯಿಂದ ಕೈಗೆ ಬದಲಾಗುವ ಕ್ರಮವನ್ನು ನಿರೂಪಿಸುತ್ತಾನೆ. ಮೊದಲು ಅದು ಅನುಕೂಲಸ್ಥ ಯುವಕನ ದುರಾಸೆಯ ಕಾರಣದಿಂದ ಅವನ ಬಳಿಯಿದ್ದು ನಂತರ ಅಂಗಡಿಯವನಿಂದ ಮುಂದುವರೆದು ಕೊನೆಗೆ ಆಯಿಲ್ ಕಂಪನಿಯ ಕೆಲಸಗಾರನಿಗೆ ಸೇರುತ್ತದೆ. ಆ ನೋಟಿನ ಕಾರಣ ಅವನು ಅರೆಸ್ಟ್ ಆಗಿ ಹೆಂಡತಿ, ಮಗುವಿನ ಅವನ ಸಂಸಾರ ದುರವಸ್ಥೆಗೆ ಒಳಗಾಗುತ್ತದೆ. ಈ ಆಘಾತ ಅವನನ್ನು ವ್ಯಗ್ರನನ್ನಾಗಿ ಪರಿವರ್ತಿಸಿ ಕೊಲೆಗಾರನಾಗುವಂತೆ ಮಾಡುತ್ತದೆ. ಇದರ ನಿರೂಪಣೆಯಲ್ಲಿ ಬ್ರೆಸೆನ್ ನಕಲಿ ನೋಟಿನ ಮೇಲೆ ಒತ್ತು ಕೊಟ್ಟು ಅದು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಿ ಕೊನೆಯಲ್ಲಿ ಏನೂ ಅರಿಯದ ಸಾಮಾನ್ಯನೊಬ್ಬ ಅದರಲ್ಲಿ ಸಿಲುಕುವುದನ್ನು ಹೇಳುತ್ತಾನೆ. ಲಿಂಕಲೇಟರ್ ಟೆಕ್ಸಾಸ್‍ ನ ಆಸ್ಟಿನ್‍ ನಲ್ಲಿ ತನ್ನ ಅನುಭವವನ್ನು ಆಧರಿಸಿ ನಿರ್ಮಿಸಿದ ಚಿತ್ರದಲ್ಲಿ ಯಾವುದೇ ನಿಶ್ಚಿತ ಪ್ಲಾಟ್ ಇಲ್ಲ. ನಿರುದ್ದೇಶವಾಗಿ ಭೇಟಿಯಾಗುವ ಆಲಸಿಗಳು ಎನ್ನಬಹುದಾದ ವ್ಯಕ್ತಿಗಳ ಜೀವನದಲ್ಲಿ ದಿನವೊಂದರಲ್ಲಿ ಜರುಗುವ ವಿವಿಧ ಬಗೆಯ ಎಂಟು-ಹತ್ತು ನಿಮಿಷಗಳ ಕಿರು ಪ್ರಸಂಗಗಳನ್ನು ಚಿತ್ರ ಒಳಗೊಂಡಿದೆ. ಈ ವ್ಯಕ್ತಿಗಳಲ್ಲಿ ಜಿಪ್ಸಿಯಂತಿರುವನೊಬ್ಬ, ಹುಚ್ಚುಚ್ಚಾಗಿ ಕೂದಲು ಬಿಟ್ಟವನೊಬ್ಬ, ಗಡ್ಡ ಬಿಟ್ಟವನೊಬ್ಬ ಹೀಗೆ ಇನ್ನೂ ಕೆಲವರು.

ಚಿತ್ರದಲ್ಲಿ ನಕಲಿ ನೋಟು ವ್ಯಕ್ತಿಗಳಿಂದ ವ್ಯಕ್ತಿಗೆ ಬದಲಾಗುತ್ತದೆ. ಆದರೆ ಲಿಂಕ್ಲೇಟರ್‍ ಗೆ ನೋಟಿನ ಬದಲು ವ್ಯಕ್ತಿಗಳು ಮತ್ತು ಅವರ ಸಂಭಾಷಣೆಗಳು ಮುಖ್ಯ. ವ್ಯಕ್ತಿಗಳ ಮಾತಿನ ಮೂಲಕ ಅವರ ತಾತ್ವಿಕ ನಿಲುವುಗಳನ್ನು ಬಿಂಬಿಸುತ್ತಾನೆ. ಬ್ರೆಸೆನ್‍ ಗೆ ನೋಟು ಹಾಗೂ ವ್ಯಕ್ತಿಗಳ ಮಾನಸಿಕ ಸ್ಥಿತ್ಯಂತರ ಉಂಟಾಗುವ ವರ್ತನೆಗಳನ್ನು ಗುರುತಿಸುವುದರ ಕಡೆ ಗಮನ. ಚಿತ್ರದ ಪರಿಕಲ್ಪನೆಯಲ್ಲಿ ಈ ವ್ಯತ್ಯಾಸ ಕಾಪಾಡಿಕೊಂಡು ಆಲಸಿಗರ ಚಿತ್ತ ಚಲನೆಗಳನ್ನು ಪರಿಶೋಧಿಸುವ ದಿಕ್ಕಿನಲ್ಲಿ ಪ್ರಥಮನಾಗುತ್ತಾನೆ ಲಿಂಕ್ಲೇಟರ್ ಮತ್ತು ಹಲವು ಬಗೆಯ ರೂಪಗಳನ್ನು ಅವನ ಇತರ ಚಿತ್ರಗಳಲ್ಲಿಯೂ ಕಾಣಬಹುದು. ಈ ಪ್ರಮುಖ ವ್ಯತ್ಯಾಸದಿಂದಾಗಿ ಸಮಕಾಲೀನರಿಗಿಂತ ತಾನು ಭಿನ್ನ ಎಂದು ಸಾಬೀತು ಪಡಿಸಿ ವಿಮರ್ಶಕರ ಹಾಗೂ ಸಿನಿಮಾಸಕ್ತರ ಗಮನ ಸೆಳೆದುಕೊಳ್ಳುವುದರಲ್ಲಿ ಸಫಲನಾದ.

(ರಿಚರ್ಡ್ ಲಿಂಕ್ಲೇಟರ್)

ಅವನು ಆಲಸಿಗಳ ಹಗಲುಗನಸುಗಳನ್ನು ಮಾನ್ಯಮಾಡುತ್ತಾನೆ. ಅವುಗಳಿಗೆ ಸೃಷ್ಟ್ಯಾತ್ಮಕ ಶಕ್ತಿಯ ಸಾಧ್ಯತೆ ಇದೆ ಎನ್ನುತ್ತಾನೆ. ನಿರೂಪಣೆ ಕುರಿತಂತೆ ಅವನ ಹೊಸ ಅನ್ವೇಷಣೆ ಅನೇಕ ಇಂಡಿಪೆಂಡೆಂಟ್ ಚಿತ್ರ ನಿರ್ದೇಶಕರಿಗಿಂತ ಪ್ರತ್ಯೇಕ ಸ್ಥಾನ ಪಡೆಯುವುದರಲ್ಲಿ ಸಫಲನಾದ. ಅವನ ಚಿತ್ರಗಳಲ್ಲಿ ಪಾತ್ರಗಳು ತಮ್ಮ ಜೀವನದ ಬಗ್ಗೆ ಅಂತರಂಗವನ್ನು ತೆರೆದಿಡುವುದರ ಮೂಲಕ ವಿವಿಧ ವಿಷಯಗಳನ್ನು ಕುರಿತು ತಮ್ಮ ಧೋರಣೆ ಮತ್ತು ನಿಲುವುಗಳನ್ನು ವ್ಯಕ್ತಪಡಿಸುತ್ತಾರೆ. ಸಂಭಾಷಣೆಗಳು ತೀಕ್ಷ್ಣವಾಗಿದ್ದು ತಾತ್ವಿಕ ಅಂಶಗಳ ಲೇಪವಿರುವುದು ಚಿತ್ರದ ವಿಶೇಷತೆ. ಇವು ಪರಸ್ಪರ ಪ್ರಭಾವ ಉಂಟುಮಾಡುವಂಥವು ಕೂಡ.

ಅವನ ತ್ರಿವಳಿ ಚಿತ್ರಗಳಲ್ಲಿ `ಬಿಫೋರ್ ಸನ್ ರೈಸ್’(1995) ಮೊದಲನೆಯದು ಮತ್ತು ಅವನ ಮನೋಧರ್ಮಕ್ಕೆ ತೀರ ಹತ್ತಿರವೆನಿಸುವ ಚಿತ್ರ. `ಬಿಫೋರ್ ಸನ್ ಸೆಟ್’, `ಬಿಫೋರ್ ಮಿಡ್‍ನೈಟ್’ ಉಳಿದೆರಡು ಚಿತ್ರಗಳು. ಈ ಚಿತ್ರದಲ್ಲಿ ಎರಿಕ್ ರೋಮರ್‍ ನ 1969 ರ `ಮೈ ನೈಟ್ ಅಟ್ ಮಾಡ್ಸ್’ ಚಿತ್ರದ ಅಂಶಗಳಿರುವುದು ಸ್ಪಷ್ಟವಾಗಿ ಕಾಣುತ್ತದೆ. ಆ ಚಿತ್ರದಲ್ಲಿ ಭೇಟಿಯಾಗುವ ಇಬ್ಬರು ವ್ಯಕ್ತಿಗಳು ಜೆಸ್ಸಿ (ಈಥನ್ ಹಾಕ್) ಮತ್ತು ಸಿಲೀನ್ (ಜ್ಯೂಲಿ ಡೆಲ್ಪಿ) ಹರೆಯದ ಸಾಮಾನ್ಯ ವ್ಯಕ್ತಿಗಳು. ಮಾತನಾಡುತ್ತ ಸಾಕಷ್ಟು ಪರಿಚಿತರಾಗಿ ಪ್ರಯಾಣದ ಮಧ್ಯೆ ವಿಯನ್ನಾದಲ್ಲಿ ರೈಲಿನಿಂದ ಇಳಿಯುತ್ತಾರೆ. ಹೊಟೆಲ್‍ ನಲ್ಲಿ ರೂಮ್ ಮಾಡುವುದಕ್ಕೂ ಆಗದ ಸ್ಥಿತಿಯಲ್ಲಿರುವ ಅವರು ಇಡೀ ರಾತ್ರಿ ಕ್ಯಾಜುಯಲ್ ಎನಿಸುವಂತೆ ಮಾತನಾಡುತ್ತ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ಕ್ರಮದಲ್ಲಿ ತಮ್ಮನ್ನೂ ಸೇರಿಸಿಕೊಂಡು ಪ್ರೇಮ, ಮನುಷ್ಯನ ಮೂಲ ಸ್ವಭಾವ, ವರ್ತನೆ ಇವುಗಳ ಬಗ್ಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳುತ್ತಾರೆ. ವಿವಿಧ ವಿಷಯಗಳ ಬಗ್ಗೆ ನಿರ್ಭಿಡೆಯಿಂದ ತಮ್ಮ ಅಭಿಪ್ರಾಯ ಹಾಗೂ ಧೋರಣೆಗಳನ್ನು ವ್ಯಕ್ತಪಡಿಸುತ್ತಾರೆ. ಪ್ರಾಮಾಣಿಕವಾಗಿ ಹೀಗೆ ಮಾಡುವ ಅವರ ಮಾನಸಿಕ ನೆಲೆಯಲ್ಲಿ ಸಾಮಾನ್ಯವಾಗಿ ಮನುಷ್ಯ ಅಪರಿಚಿತರ ಜೊತೆ ಹೆಚ್ಚು ಪರಸ್ಪರ ಆತ್ಮೀಯರಾಗುತ್ತಾರೆ ಎನ್ನುವ ಮನುಷ್ಯನ ಮೂಲಭೂತ ಗುಣವೂ ಸೇರಿಕೊಂಡಿದೆ ಎಂದು ತೋರುತ್ತದೆ. ಆದರೆ ಈ ಅಂಶವನ್ನು ಪಾತ್ರಗಳು ಪ್ರಕಟಗೊಳಿಸುವ ರೀತಿ ಗಮನ ಸೆಳೆಯುವಂಥಾದ್ದು. ಲಿಂಕ್ಲೇಟರ್ ತನ್ನ ಆಶಯವನ್ನು ಪೂರೈಸಿಕೊಳ್ಳುವುದು ತನ್ನದೇ ಶೈಲಿಯಲ್ಲಿ, ಕುತೂಹಲ ಮತ್ತು ಪಾತ್ರಗಳ ಅಂತರಂಗವನ್ನು ಒಳಗೊಳ್ಳುವ ವಿಧಾನದಿಂದ. ಇದನ್ನು ಅವನು ಶಾಟ್ ಕಾಂಪೊಸಿಷನ್ ಮಾಡುವ ಪ್ರಾಥಮಿಕ ಮಟ್ಟದಿಂದ ಮುಂದುವರೆದು ಪಾತ್ರಗಳ ಆಂಗಿಕ ಹಾಗೂ ಮುಖಚಹರೆಯಲ್ಲಿ ಉಂಟಾಗುವ ಸೂಕ್ಷ್ಮ ಬದಲಾವಣೆಯ ಮೂಲಕ ಸಾಧಿಸುತ್ತಾನೆ.

ನಿಯೋ ರಿಯಲಿಸಂನಲ್ಲಿ ಕಾರ್ಮಿಕ ವರ್ಗ, ಕೆಳ ಮಧ್ಯಮದವರು ಬದುಕು ನಿರ್ವಹಿಸುವುದಕ್ಕೆ ಎದುರಾಗುವ ಸಂಕಷ್ಟ, ಚಿತ್ರೀಕರಣಕ್ಕೆ ಸ್ಟುಡಿಯೋ ಬದಲು ಹೊರಾಂಗಣ ಹಾಗೂ ಸೆಟ್ ಹಾಗೂ ವೃತ್ತಿ ನಿರತ ನಟವರ್ಗದ ಬದಲು ಹವ್ಯಾಸಿ ನಟವರ್ಗ ಪ್ರಧಾನ.

`ಬಿಫೋರ್ ಸನ್‍ರೈಸ್’ ನಿರ್ಮಿಸಿ ಒಂಭತ್ತು ವರ್ಷಗಳ ನಂತರ 2೦೦4ರಲ್ಲಿ ತ್ರಿವಳಿಯ ಎರಡನೆ ಭಾಗ `ಬಿಫೋರ್ ಸನ್‍ಸಟ್’ ನಿರ್ಮಿಸಿದ್ದಾನೆ. ಇದರಲ್ಲಿನ ವಿಶೇಷ ತೀರ ಅಪರೂಪ ಎನ್ನುವಂಥಾದ್ದು. ಚಿತ್ರದಲ್ಲಿನ ಪಾತ್ರಧಾರಿಗಳಾದ ಜ್ಯೂಲಿ ಡೆಲ್ಪಿ ಈಥನ್ ಹಾಕ್ ಚಿತ್ರಕಥೆ ಬರೆಯುವುದರಲ್ಲಿ ಲಿಂಕ್ಲೇಟರ್ ಜೊತೆ ಪಾಲ್ಗೊಂಡಿದ್ದಾರೆ.

ತಾನು ಸೆಲೀನ್ ಜೊತೆಗೂಡಿ ಕಳೆದ ದಿನದ ಅನುಭವವನ್ನು ಬರೆದ ಪುಸ್ತಕ ಪ್ಯಾರಿಸ್‍ ನಲ್ಲಿ ನಡೆಯುವ ಬಿಡುಗಡೆಯ ಸಂದರ್ಭದಲ್ಲಿ ಜೆಸ್ಸಿ (ಈಗವನು ಜೆಸ್ಸಿ ವ್ಯಾಲೇಸ್) ಪುನಃ ಸೆಲೀನ್‍ ಳನ್ನು ಭೇಟಿಯಾಗುತ್ತಾನೆ. ಪರಸ್ಪರ ಗುರುತಿಸಿದ ನಂತರ ಇಬ್ಬರಲ್ಲೂ ನಿಯಂತ್ರಿತ ಸಂತೋಷ ಕಾಣುತ್ತದೆ. ದಶಕದ ಅವಧಿಯ ಪರಿಣಾಮ ಇಬ್ಬರ ಮುಖಚಹರೆಯಲ್ಲಿ ಗೋಚರಿಸುತ್ತದೆ. ಮೊದಲ ಸಲದ ಭೇಟಿಯಲ್ಲಿ ಮಾತು ಮತ್ತು ಆಲೋಚನೆಗಳು ಸ್ವಂತಿಕೆಯನ್ನು ಬಿಟ್ಟುಕೊಡದೆ ಉಮೇದು, ಉತ್ಸಾಹದಿಂದ ಪರಸ್ಪರ ಹಂಚಿಕೊಳ್ಳುವ ಪ್ರಾಮಾಣಿಕತೆಯ ತುರ್ತಿನಲ್ಲಿ ಕಾಣಿಸಿಕೊಳ್ಳುತ್ತವೆ. ಆಂಗಿಕ ಭಂಗಿಗಳಲ್ಲಿ ಚುರುಕು, ಮಾತುಗಳಲ್ಲಿ ಪೈಪೋಟಿ, ಹೇಳಿದ್ದನ್ನು ಬೇರೆ ಪದಗಳಲ್ಲಿ ವಿವರಿಸುವ ಆತುರತೆ, ಭವಿಷ್ಯದ ಬಗ್ಗೆ ಆಶಾಭಾವನೆ, ಕಂಡದ್ದರಲ್ಲಿ-ಆಡಿದ್ದರಲ್ಲಿ ದಿಢೀರತೆ ಪಾಲ್ಗೊಳ್ಳುವ ವೇಗ, ಪ್ರೇಮಿಗಳೆಂದು ವ್ಯಕ್ತವಾಗುವ ಭರಾಟೆ ಮತ್ತು ಒಟ್ಟಾರೆ ಹುಡುಗುತನದ ಮನೋನೆಲೆ ಇವೆಲ್ಲ ಒಂಭತ್ತು ವರ್ಷದ ತರುವಾಯ ಕಡಿಮೆಯಾಗಿ ಎಲ್ಲಕ್ಕೂ ಪ್ರಬುದ್ಧತೆಯ ಲೇಪ ಹೊಂದಿರುವುದು ಎದ್ದು ಕಾಣುತ್ತದೆ.

ಸರಿದು ಹೋದ ಕಾಲ ಅವರ ಧೋರಣೆ, ಆಲೋಚನೆಗಳಲ್ಲಿಯೂ ಬದಲಾವಣೆ ಉಂಟುಮಾಡಿರುವುದು ಕ್ರಮೇಣ ವ್ಯಕ್ತವಾಗುತ್ತ ಹೋಗುತ್ತದೆ. ಈಗ ಇಬ್ಬರ ಮುಖದಲ್ಲೂ ಮೊದಲಿನ ಚಮಕ್ ಈಗಿಲ್ಲ. ಕಣ್ಣುಗಳ ಹೊಳಪಲ್ಲಿ ಮತ್ತು ಮಾತಿನ ತೀವ್ರತೆಯ ಮಟ್ಟ ಸಾಕಷ್ಟು ಕುಂಠಿತಗೊಂಡಿರುತ್ತದೆ. ಅವನು ಹಿಂತಿರುಗುವ ಮುಂಚೆ ದೊರಕಿದ ಸಮಯ ಕಳೆಯಲು ಹೊರಡುತ್ತಾರೆ. ಅಂದಿನಂತೆಯೇ ಎಲ್ಲೆಂದರಲ್ಲಿ ಮಾತನಾಡುತ್ತ ಸುತ್ತಾಡುತ್ತಾರೆ. ಆರು ತಿಂಗಳಾದ ಮೇಲೆ ಮತ್ತೆ ವಿಯನ್ನಾದಲ್ಲಿ ಇಬ್ಬರೂ ಭೇಟಿಯಾಗಬೇಕಾಗಿದ್ದರೂ ತನ್ನ ಅಜ್ಜಿಯ ಸಾವಿನಿಂದ ಸಾಧ್ಯವಾಗದ್ದನ್ನು ತಿಳಿಸಿ ಅವನು ಹೋಗಿದ್ದನೇ ಎಂದು ತಿಳಿಯುವ ತವಕದಲ್ಲಿರುತ್ತಾಳೆ. ಅವಳಿಗೆ ಸಮಾಧಾನವಾಗಲೆಂದು ತನಗೂ ಹೋಗಲು ಸಾಧ್ಯವಾಗಲಿಲ್ಲ ಎಂದು ಸುಳ್ಳು ಹೇಳುತ್ತಾನೆ. ಆದರೆ ನಿಜ ಸಂಗತಿ ತಿಳಿದ ಬಳಿಕ ಅವನು ಸಂತೈಸುತ್ತಾನೆ. ಅನಂತರ ಮೂರು ವರ್ಷ ಅವಳು ನ್ಯೂಯಾರ್ಕಿನಲ್ಲೇ ಇದ್ದರೂ ಅವನ ಫೋನ್, ವಿಳಾಸ ಇತ್ಯಾದಿ ಏನೂ ಇರದೆ ಸಾಧ್ಯವಾಗಲಿಲ್ಲವೆಂದು ಹಲಬುತ್ತಾಳೆ. ಈಗವಳು ಪರಿಸರ ಕುರಿತ ಕಂಪನಿಯಲ್ಲಿ ಕೆಲಸಮಾಡುತ್ತಿದ್ದು ಪ್ರಪಂಚದಲ್ಲಿ ಆ ಬಗ್ಗೆ ಜಾಗೃತಿ ಮೂಡಿಸುವುದರಲ್ಲಿ ತೊಡಗಿರುತ್ತಾಳೆ. ಹೀಗಾಗಿ ಅವಳ ಜ್ಞಾನ ಬೆಳೆದಿರುತ್ತದೆ. ಜೊತೆಗೆ ಹಾಡುಗಳನ್ನು ಬರೆಯುತ್ತೇನೆಂದು ಹೇಳುತ್ತಾಳೆ.

ಸುಮಾರು ಒಂದು ದಶಕದ ಅವಧಿಯಲ್ಲಿ ಇಬ್ಬರ ವಸ್ತುಸ್ಥಿತಿಯೂ ಬದಲಾಗಿರುವ ಕಾರಣ ಮತ್ತು ಹರೆಯವನ್ನು ದಾಟಿರುವುದರಿಂದ ಮಾತುಗಳಲ್ಲಿ ಪ್ರಬುದ್ಧತೆ ಇರುತ್ತದೆ. ತನ್ನ ಸಂಸಾರ ಕುರಿತು ತಾನೀಗ ಮಕ್ಕಳ ನರ್ಸರಿ ಇಟ್ಟುಕೊಂಡು ಹೆಂಡತಿಯಾದವಳ ಜೊತೆ ಇದ್ದೇನೆ ಎನ್ನುತ್ತಾನೆ. ಅವಳು ಉದ್ಯೋಗಸ್ಥೆಯಾಗಿರುತ್ತಾಳೆ. ಅವರು ಸ್ವಂತಕ್ಕೆ ಸಂಬಂಧಿಸಿದ್ದನ್ನು ಬಿಟ್ಟು ಆಡುವ ವಿಷಯದ ವಿಸ್ತಾರ ಸಾಕಷ್ಟಿರುತ್ತದೆ. ಅವಳು ಆಫ್ರಿಕನ್ನರ ಮುಗ್ಧತೆ, ಉದಾರತೆ, ಅಮೆರಿಕ ಹಾಗೂ ಫ್ರಾನ್ಸ್‌ ಗಳಲ್ಲಿರುವ ಜೀವನ ಶೈಲಿಯಲ್ಲಿನ ವ್ಯತ್ಯಾಸ, ಸದಾ ಪಿಸ್ತೂಲು ಹಿಡಿದು ಕೊಲ್ಲುವುದು ಅಥವ ರಕ್ಷಿಸಿಕೊಳ್ಳುವುದರಲ್ಲಿ ನಿರತರಾದ ಅಮೆರಿಕನ್ನರು ಮುಂತಾದವುಗಳನ್ನು ಹಂಚಿಕೊಳ್ಳುತ್ತಾರೆ. ಮಾತುಗಳಿಗೆ ಗಂಭೀರತೆಯ ಚೌಕಟ್ಟು ಬಂದಿದ್ದರೂ ಪರಸ್ಪರ ವಿರುದ್ಧ ಧೋರಣೆ ಈಗಲೂ ಮುಂದುವರೆಯುತ್ತದೆ. ಅಂದುಕೊಂಡಂತೆ ತಾವು ಮತ್ತೆ ಭೇಟಿಯಾಗಲು ಸಾಧ್ಯವಾಗಿದ್ದರೆ ಜೀವನವೇ ಬೇರೆಯಾಗುತ್ತಿತ್ತೆಂದು ಮತ್ತು ಮದುವೆಯ ನಂತರವೂ ಆ ದಿನದ ನೆನಪಲ್ಲೇ ಇರುವುದಾಗಿ ಹೇಳಿ ಅವಳಿಗೆ ಮಾತಿಲ್ಲದಂತೆ ಮಾಡುತ್ತಾನೆ. ಕೊಂಚ ಅವಳು ಭಾವಪರವಶಳಾದರೂ ಅವಕಾಶ ದೊರೆತಾಗ ಹಿಂದಿನ ಭೇಟಿಯಲ್ಲಿ ಪ್ರೇಮಾವೇಶದಿಂದ ಮುತ್ತಿಟ್ಟು ಸಂಭ್ರಮಿಸಿದಂತೆ ಮಾಡಲಾಗದೆ ಅವನನ್ನು ಮುಟ್ಟಲು ಹಿಂಜರಿದು ಕೈ ದೂರ ಮಾಡುತ್ತಾಳೆ.

ಪುಸ್ತಕ ಕುರಿತ ಪ್ರೆಸ್ ಮೀಟ್ ನಂತರ ಎಲ್ಲಿದ್ದರೂ ಬಂದೇ ಬರುತ್ತೀಯ ಎಂದು ಗೊತ್ತಿತ್ತಲ್ಲದೆ ಅದಕ್ಕಾಗಿಯೇ ಅಲ್ಲಿ ಏರ್ಪಡಿಸಿದ್ದು ಎಂದು ತಿಳಿಸಿ ಅವಳನ್ನು ಅಚ್ಚರಿಗೊಳಿಸುತ್ತಾನೆ. ಆ ಪುಸ್ತಕವನ್ನು ಓದಿ ಅದರೊಳಗಿನ ಪ್ರೇಮದ ಭಾವನೆಗಳಿಗೆ ಅವಳು ಕರಗಿ ಹೋಗಿರುತ್ತಾಳೆ. ಮಾತನಾಡುತ್ತ ಅವಳ ಮನೆಯನ್ನು ತಲುಪಿದಾಗ ಒಂದಾದರೂ ಹಾಡು ಹಾಡಲು ಒತ್ತಾಯಿಸುತ್ತಾನೆ. ಅವನು ಪುಸ್ತಕದಲ್ಲಿ ಅವಳ ಬಗ್ಗೆ ಉಂಟಾದ ಪ್ರೇಮವನ್ನು ನಿವೇದಿಸಿಕೊಂಡಿದ್ದರೆ ಅವಳು ಹಾಡಿನ ರೂಪದಲ್ಲಿ ಅದನ್ನೇ ಪ್ರತಿಫಲಿಸುತ್ತಾಳೆ.

`ಬಿಫೋರ್ ಮಿಡ್‍ನೈಟ್ʼ (2013) ಟ್ರೈಯಾಲಜಿಯಲ್ಲಿ ಕೊನೆಯ ಚಿತ್ರ. `ಬಿಫೋರ್ ಸನ್‍ಸೆಟ್’ ಚಿತ್ರ ನಿರ್ಮಾಣವಾಗಿ ಒಂಭತ್ತು ವರ್ಷಗಳ ನಂತರದ ಚಿತ್ರ. ಹದಿನೆಂಟು ವರ್ಷದ ಅವಧಿಯಲ್ಲಿ ಆ ಮುಖ್ಯ ನಟ-ನಟಿಯರನ್ನೇ ಬಳಸಿಕೊಂಡು ಟ್ರೈಯಾಲಜಿಯ ಚಿತ್ರ ನಿರ್ಮಿಸಿರುವುದು ವಿಶೇಷವೇನೋ ಸರಿಯೆ. ಇದನ್ನೇ ಮುಂದುವರಿಸಿ 2022ರಲ್ಲಿ ಇನ್ನೊಂದು ಚಿತ್ರ ನಿರ್ಮಿಸಿದರೂ ಆಶ್ಚರ್ಯವಿಲ್ಲ.


ಲಿಂಕ್ಲೇಟರ್ ನಿರೂಪಣೆಯಲ್ಲಿ ಸಾಂಪ್ರದಾಯಿಕ ಸಿನಿಮಾ ಭಾಷೆಯನ್ನು ಬಳಸುವುದು ಕಡಿಮೆ. ದೃಶ್ಯದಲ್ಲಿ ವಾತಾವರಣ ಮತ್ತು ಪಾತ್ರಗಳ ಚಲನೆಗಳು ವಿಶೇಷ ಕೊಡುಗೆ ನೀಡುವುದಿಲ್ಲ. ಆದರೆ ಇಂಡಿಪೆಂಡೆಂಟ್ ಚಿತ್ರದ ಮಾರ್ಗದಲ್ಲಿಯೇ ಮುಂದುವರೆದ ಕ್ವಿಂಟಿನ್ ಟರೆಂಟೆನೋ, ಸೋಬರ್‍ಬರ್ಗ್ ಮುಂತಾದವರು ಅಮೆರಿಕದ ಮುಖ್ಯಧಾರೆಯ ವಿಸ್ತೃತ ರೂಪ ಎನ್ನುವ ಬಗೆಯಲ್ಲಿ ಚಿತ್ರಗಳನ್ನು ನಿರ್ಮಿಸಿದ್ದಾರೆ. ಇದೇನಿದ್ದರೂ ತನ್ನದೇ ಛಾಪು ಮೂಡಿಸಿರುವ ರಿಚರ್ಡ್ ಲಿಂಕ್ಲೇಟರ್ ಚಿತ್ರಗಳನ್ನು ಸಿನಿಮಾ ಕ್ಷೇತ್ರ ಉತ್ಸಾಹದಿಂದ ನಿರೀಕ್ಷಿಸುತ್ತದೆ ಎನ್ನಬಹುದು.