ಭಾರತದ ಒಂದು ತಲೆಮಾರಿಗೆ ಗುಂಗು ಹಿಡಿಸಿದ ತತ್ವಜ್ಞಾನಿ, ರಾಜಕೀಯ ಗುರು ರಾಮಮನೋಹರ ಲೋಹಿಯಾ ಅವರಿಗೆ ನಾಳೆಗೆ ನೂರು ವರ್ಷ. ಅವರು ಹೇಳಿದ ಸಮಾಜವಾದ ಪಾಚಿಗಟ್ಟಿರುವ ಈ ಹೊತ್ತಲ್ಲಿ ಪೂರ್ಣಚಂದ್ರ ತೇಜಸ್ವಿಯವರ ಅಪರೂಪದ ಬರಹವೊಂದು ಇಲ್ಲಿದೆ. ತಮ್ಮ ‘ಅಬಚೂರಿನ ಪೋಸ್ಟಾಫೀಸು’ಕಥಾಸಂಕಲನ ಮತ್ತು ಸಮಗ್ರ ಕಥಾಸಂಕಲನ ಎರಡಕ್ಕೂ ಮುನ್ನುಡಿಯನ್ನಾಗಿ ತೇಜಸ್ವಿಯವರು ಈ ಬರಹವನ್ನು ಬಳಸಿಕೊಂಡಿದ್ದಾರೆ. ಲೋಹಿಯಾ ಯೋಚನೆಗಳಿಗೆ ತಮ್ಮನ್ನು ಒಡ್ಡಿಕೊಳ್ಳಲು ಕೆಂಡಸಂಪಿಗೆಯ ಯುವ ಓದುಗರಿಗೆ ಈ ಬರಹ ನೆಪವಾಗಬಲ್ಲದು ಎಂಬುದು ನಮ್ಮ ಸಣ್ಣದೊಂದು ಆಸೆ.
ಲೋಹಿಯಾರವರ ತತ್ವಚಿಂತನೆ, ಕುವೆಂಪುರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ -ಈ ಮೂರೇ ನನ್ನ ಈಚಿನ ಸಾಹಿತ್ಯ ರಚನೆಯ ಮೇಲೆ ಗಾಢ ಪರಿಣಾಮವನ್ನುಂಟು ಮಾಡಿರುವುವು. ಬಹುಶಃ ಮುಂಬರುವ ಕಲಾವಿದರಿಗೆ ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಚೈತನ್ಯಶಕ್ತಿಯಾಗಬಲ್ಲಂಥವು ಈ ಮೂರೇ.
ನನ್ನ ಜೀವನ ವಿಧಾನವನ್ನು, ಗ್ರಹಿಸುವ ಕ್ರಮವನ್ನು, ಆಲೋಚನೆಯನ್ನು, ಅಭಿವ್ಯಕ್ತಿ ವಿಧಾನವನ್ನು, ಒಟ್ಟಿನಲ್ಲಿ ಇಡೀ ಸಮಗ್ರ ವ್ಯಕ್ತಿತ್ವವನ್ನು ಸಂಪೂರ್ಣ ಬದಲಿಸಿದ್ದು ಲೋಹಿಯಾರವರ ತತ್ವ ಚಿಂತನೆ. ಸದ್ಯದ ಭಾರತೀಯ ಸಂದರ್ಭದಲ್ಲಿ ಲೋಹಿಯಾ ಒಬ್ಬರೇ `ಒರಿಜನಲ್’ ಎಂದು ಹೇಳಬಹುದಾದ ತತ್ವ ಮೀಮಾಂಸಕರು. ರಾಧಾಕೃಷ್ಣನ್, ಹಿರಿಯಣ್ಣಯ್ಯ ಇವರೆಲ್ಲಾ ವ್ಯಾಖ್ಯಾನಕಾರರೇ ಹೊರತು ತತ್ವ ಮೀಮಾಂಸಕರೆಂದು ಕರೆಯುವುದು ಕಷ್ಟ. ಲೋಹಿಯಾರವರ ಆಲೋಚನೆಗಳನ್ನು ವಿಶ್ವವಿದ್ಯಾಲಯದೊಳಕ್ಕೆ ಅವರ ಜೀವಿತ ಕಾಲದಲ್ಲಿ ಬರದಹಾಗೆ ನೋಡಿಕೊಂಡ ನಮ್ಮ ಬುದ್ಧಿಜೀವಿಗಳ ಸಮೂಹ ಒಂದು ದುಷ್ಟಕೂಟ. ನಮ್ಮ ಭಾರತದಲ್ಲಿ ಬೇರೂರಿರುವ ಗುಲಾಮಶಾಹಿ ಮತ್ತು ಜಾತೀಯತೆಯ ಸ್ವರೂಪವನ್ನಷ್ಟೆ ಇದು ಶ್ರುತ ಪಡಿಸುತ್ತದೆ. ಲೋಹಿಯಾರವರ ಆಲೋಚನೆಗಳಿಗೆ ಪ್ರತಿಸ್ಪಂದಿಸದ ಚೇತನ ಭಾರತದ ಯಾವುದಕ್ಕೂ ಸ್ಪಂದಿಸಲಾರದು. ಅಂತೆಯೇ ಹೊಸ ಸಾಹಿತ್ಯಕ್ಕೂ ಕೂಡ.
ಸುಮಾರು ಹತ್ತು ವರುಷಗಳ ತರುವಾಯ ನನ್ನ ಎರಡನೆ ಕಥಾಸಂಕಲನ ಹೊರಬರುತ್ತಿದೆ. ಕನ್ನಡ ಸಾಹಿತ್ಯದ ನವ್ಯ ಸಂಪ್ರದಾಯವನ್ನು ಸಂಪೂರ್ಣ ತೊರೆದು ಹೊಸ ದಿಕ್ಕಿನಲ್ಲೀಗ ನಾವು ಅನ್ವೇಷಿಸಬೇಕಾಗಿದೆ. ಇದಕ್ಕೆ ಕಾರಣ ಹೊಸ ಸಾಹಿತ್ಯ ಸೃಷ್ಟಿಸಬೇಕೆಂಬ ಹಂಬಲವಲ್ಲ ಅಥವಾ ಹೊಸ ಪಂಥ ಒಂದರ ಸೃಷ್ಟಿಕರ್ತನಾಗಬೇಕೆಂಬ ಆಕಾಂಕ್ಷೆಯೂ ಅಲ್ಲ. ಕಳೆದ ಹದಿನೈದು ಇಪ್ಪತ್ತು ವರ್ಷಗಳಲ್ಲಿ ನವ್ಯ ಸಾಹಿತಿಗಳು ಪ್ರಾಮಾಣಿಕತೆಯ ಹೆಸರಿನಲ್ಲಿ ಅಭ್ಯಸಿಸಿದ ಅಪ್ರಮಾಣಿಕತೆ, ವಿಮರ್ಶೆಯ ಹೆಸರಿನಲ್ಲಿ ನಡೆಸಿದ ಪುಢಾರಿ ರಾಜಕಾರಣ, ಅನುಭವ ಕ್ಷೇತ್ರವನ್ನೂ ಅಭಿವ್ಯಕ್ತಿ ಸಾಮರ್ಥ್ಯವನ್ನೂ ವಿಸ್ತರಿಸುವ ಹೆಸರಿನಲ್ಲಿ ಕುಗ್ಗಿಸಿದುದು ಇವೆಲ್ಲಾ ಈ ಮಾರ್ಗದ ಬರಹಗಾರರಿಗೆ ಹಿಡಿದ ಶನಿಗಳಾಗಿವೆ.
ನನ್ನ ಎಂಎ ವಿದ್ಯಾಭ್ಯಾಸದ ಅನಂತರ ನಾನು ಅನಿರೀಕ್ಷಿತವಾಗಿ ವ್ಯವಸಾಯಗಾರನಾಗಿ ಹಳ್ಳಿಗೆ ಹಿಂದಿರುಗಬೇಕಾಯ್ತು. ಹೊಸ ದಿಕ್ಕಿನಲ್ಲಿ ಅನ್ವೇಷಿಸಬೇಕಾಗಿದೆ ಎನ್ನಲು ಇವೂ ಹಲವಾರು ಕಾರಣಗಳಲ್ಲಿ ಒಂದೆಂದೇ ಹೇಳಬಹುದು. ವಿಶ್ವವಿದ್ಯಾಲಯದ ಪದವೀಧರನಾದ, ಬರಹಗಾರನಾದ ನಾನು ಹಳ್ಳಿಯಲ್ಲಿ ಒಂದು ಅತಿ ವಿಚಿತ್ರ ಸಂದರ್ಭದಲ್ಲಿ ಸಿಲುಕಿಕೊಂಡೆನು.
ನಮ್ಮ ವಿದ್ಯಾಭ್ಯಾಸದ ತಿರುಳು, ವಿದ್ಯಾಭ್ಯಾಸ ಕ್ರಮ, ಶಿಕ್ಷಣ ಮಾಧ್ಯಮ ಇವು ಭಾರತೀಯ ಪರಿಸ್ಥಿತಿಯಲ್ಲಿ ಎಂಥ ಅಸಂಬದ್ಧತೆಯ ಪರಮಾವಧಿಯಾಗಿದೆ ಎಂಬುದು ನನಗೆ ಅರಿವಾಯ್ತು. ಈ ನಿಗೂಢ, ಅಪರಿಚಿತ ಭಾರತದ ಬಗ್ಗೆ ನನ್ನ ಕಣ್ಣು ತೆರೆಸಿದ್ದು ಲೋಹಿಯಾ. ನಮ್ಮ ನವ್ಯ ಸಾಹಿತ್ಯ ಸಂಪ್ರದಾಯದ ಸಾಂಕೇತಿಕ ಮಾರ್ಗ, ಠಕ್ಕಿನ ಪ್ರೌಢ ವಿಮರ್ಶೆ ಇವೆಲ್ಲಾ ಈ ಅವ್ಯಕ್ತ ಭಾರತದ ಎದುರು ಅಸಂಬದ್ಧವಾಗಿಹೋದುವು. ಆದರೆ ಇದರೊಡನೆಯೇ ಲೋಹಿಯಾರವರ ಕಾಣ್ಕೆ, ತತ್ವ ಚಿಂತನೆಗಳು ಮತ್ತು ಹಳ್ಳಿಯ ಜೀವನದ ಹೊಸ ಪರಿಸ್ಥಿತಿಗಳು ನನಗೆ ಇನ್ನೊಂದು ಬಗೆಯ ಶ್ರದ್ಧೆಯನ್ನು ತಂದಿತ್ತವು. ಇಟ್ಯಾಲಿಯನ್ ಫ್ರೆಂಚ್ ಸಾಹಿತ್ಯಗಳಷ್ಟೇ ಒರಿಜನಲ್ಲಾದ ಜೀವನಾನುಭವ ಮತ್ತು ತಿಳುವಳಿಕೆಗಳಿಂದ ಅಚ್ಚ ಭಾರತೀಯ ಸಾಹಿತ್ಯ ಸೃಷ್ಟಿ ಸಾಧ್ಯ ಎಂದು. ನನ್ನ ಜೀವನ ಮತ್ತು ಅದರ ಅಂಗವಾದ ಸಾಹಿತ್ಯ ಸೃಷ್ಟಿ ಇವು ಇಂದಿನ ಭಾರತೀಯ ಸಂದರ್ಭದ ನಮ್ಮ ವ್ಯಕ್ತಿತ್ವದ ಅಸಂಬದ್ಧತೆಯ ವಿರುದ್ಧ ಹೋರಾಡುವ ಮತ್ತು ಹೊಸ ನಾಗರಿಕತೆಯೊಂದನ್ನು ನಿರ್ಮಿಸುವ ಆಂದೋಲನವೆಂದರೆ ಮಾತ್ರ ನಾವು ನವ್ಯರಿಂದ ಭಿನ್ನವೆಂದು ಭಾವಿಸಬೇಕು.
ಸರಳವಾಗಿ ನೇರವಾಗಿ ನೋಡುವ, ಕೇವಲ ದೃಷ್ಟಿಕೋನವಾಗಿ ಮಾತ್ರ ಸಾಹಿತಿ ಕಥೆಗಳಲ್ಲಿ ವ್ಯಕ್ತವಾಗುವ ಹೊಸದೊಂದು ಶಿಸ್ತನ್ನು ಬರವಣಿಗೆಯಲ್ಲಿ ನಾನು ಅಭ್ಯಾಸ ಮಾಡಬೇಕಾಯ್ತು. ಇದಕ್ಕೆ ನಮ್ಮ ಗ್ರಾಮಗಳಲ್ಲಿ ಕೇವಲ ವೀಕ್ಷಕನಾಗಿ ಮಾತ್ರವೆ ಇರಬೇಕಾಗಿ ಬಂದ ನನ್ನ ಜೀವನ ಸಂದರ್ಭವೂ ಒಂದು ಕಾರಣ. ಆದ್ದರಿಂದ ಕಲಾವಿದನ ಪ್ರಜ್ಞೆಯೊಳಗೇ ವಿಕಾಸವಾಗುವ ಅಥವಾ ಕಲಾವಿದ ಪ್ರಜ್ಞೆಯೇ ಕೇಂದ್ರವಾಗಿರುವ ಅಥವಾ ಸಾಹಿತಿಯೇ ನಾಯಕನಾದ, ಒಂದು ರೀತಿಯ ಆತ್ಮನಿಷ್ಠ ಬರಹಗಾರರಾದ ಯು.ಆರ್.ಅನಂತಮೂರ್ತಿ ಮತ್ತು `ಗತಿಸ್ಥಿತಿ’ಯ ಗಿರಿ ಒಂದು ಕೊನೆಯಾದರೆ ಈ ಕಥಾಸಂಕಲನದ ನಾನು ಇನ್ನೊಂದು ತುದಿ.
ನವ್ಯ ಸಾಹಿತ್ಯ ಸಂಪೂರ್ಣ ನಿಸ್ತೇಜಗೊಂಡಿದೆ. ಬದಲಾಗುತ್ತಿರುವ ಪರಿಸ್ಥಿತಿಗೆ ಪ್ರತಿಸ್ಪಂದಿಸಲು ಅದಕ್ಕೆ ಅಸಾಧ್ಯವಾಗಿದೆ. ಏಕೆಂದರೆ ಮೊದಲನೆಯದಾಗಿ ಯಾಂತ್ರಿಕವಾಗಿರುವ ಅದರ ಸಾಂಕೇತಿಕ ಸಿದ್ಧಶೈಲಿ ಮತ್ತು ತಂತ್ರಗಳು. ಎರಡನೆಯದಾಗಿ ಕೇವಲ ಉಪಾಧ್ಯಾಯರಿಂದಲೇ ತುಂಬಿರುವ ಅದರ ಸಾಹಿತಿ ವರ್ಗ. ಮೂರನೆಯದಾಗಿ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡಿರುವ ಅದರ ಕ್ರಾಂತಿಕಾರಕತನ.
ಈ ಮೂರು ಕಾರಣಗಳ ಬಗ್ಗೆ ನನ್ನ ಅನ್ನಿಸಿಕೆಗಳನ್ನು ಇಲ್ಲಿ ಸಂಕ್ಷೇಪವಾಗಿ ವಿವರಿಸಬಯಸುತ್ತೇನೆ. ನವ್ಯಮಾರ್ಗದ ಸಾಂಕೇತಿಕ ಶೈಲಿ ಮತ್ತು ತಂತ್ರಗಳು ಸಾಹಿತ್ಯದ ಅನೇಕ ಸಾಮಾಜಿಕ ಜವಾಬ್ದಾರಿಗಳ ಬಗ್ಗೆ ಸಾಹಿತಿಗಿರುವ ಅಜ್ಞಾನ ಇಲ್ಲವೇ ತಿರಸ್ಕಾರಗಳನ್ನು ತೋರಿಸುತ್ತವೆ. ನಮ್ಮ ರಾಷ್ಟ್ರೀಯ ಉತ್ಪಾದನೆಯ ಬಹುಪಾಲನ್ನು ಉಚ್ಚ ವರ್ಗ ಮತ್ತು ಜಾತಿಗಳೂ, ಮಿಕ್ಕಿದ್ದನ್ನು ಮಧ್ಯಂತರ ವರ್ಗ ಮತ್ತು ಜಾತಿಗಳೂ ತಿಂದುಹಾಕುತ್ತಿರುವುದರಿಂದ ಸಾಕ್ಷರತೆ ನಿರೀಕ್ಷಿತ ಗತಿಯಲ್ಲಿ ವೃದ್ಧಿಸಿಯೇ ಇಲ್ಲ. ಈ ಕಾರಣದಿಂದಲೇ ಭಾರತದ ಗ್ರಾಮಗಳಲ್ಲಿ ಕೇವಲ ಹೆಬ್ಬೆಟ್ಟೊತ್ತುವ ನಿರಕ್ಷರ ಕುಕ್ಷಿಗಳ ಸಮುದಾಯ ಒಂದನ್ನು ನಿರ್ಮಾಣ ಮಾಡುತ್ತಿದ್ದೇವೆ. ಸಾಹಿತ್ಯ ಸಂಸ್ಕೃತಿಗಳು ಕೇವಲ ಮೇಲು ಜಾತಿಯವರ ಸೊತ್ತಾಗಿಯೇ ಉಳಿಸುವ ಯತ್ನ ನಮ್ಮ ವಿದ್ಯಾಭ್ಯಾಸ ಯೋಜನೆಗಳು ಮತ್ತು ವಿದ್ಯಾಭ್ಯಾಸ ಕ್ರಮ ಇವೆಲ್ಲ. ಭಾಷೆ ಮತ್ತು ಸಾಹಿತ್ಯ ಇಂದು ಹೇಗೆ ಉಳ್ಳವರ ಸ್ವತ್ತಾಗತೊಡಗಿದೆಯೆಂದರೆ ಇನ್ನು ಭಾಷೆಯಲ್ಲಿ ಆಲೋಚನೆ ಮತ್ತು ಅಭಿವ್ಯಕ್ತಿ ಬಯಸುವುದೇ ಮೋಸಗಾರಿಕೆ ಎನ್ನುವಂತೆ ಭಾಸವಾಗತೊಡಗಿದೆ. ಅಂಥದರಲ್ಲಿ ಸಾಹಿತ್ಯದಲ್ಲೂ ಯಾಂತ್ರಿಕ ಸಾಂಕೇತಿಕತೆಯೊಂದನ್ನು ಸಂಪ್ರದಾಯ ಮಾಡಿಕೊಂಡು ಸಹೃದಯ ಸ್ತೋಮವನ್ನು ಆದಷ್ಟು ಸೀಮಿತಗೊಳಿಸುವುದೇ ಸಾಹಿತ್ಯ ರಚನೆಯ ಉದ್ದೇಶಗಳಲ್ಲಿ ಒಂದನ್ನಾಗಿ ಮಾಡಿಕೊಂಡರೆ ಅದು ರೋಗಗ್ರಸ್ತ ಸಮಾಜವೆಂದಷ್ಟೇ ಹೇಳಬಹುದು.
ಎರಡನೆಯದು ಸಾಹಿತ್ಯದಲ್ಲಿ ತುಂಬಿಕೊಂಡಿರುವ ಉಪಾಧ್ಯಾಯ ಸಮುದಾಯ. ಇಡಿಯ ಒಂದು ಭಾಷಾ ಸಮುದಾಯದ ಅಭಿವ್ಯಕ್ತಿಯಾಗಬೇಕಾದ ಸಾಹಿತ್ಯ ಕೇವಲ ಪಾಠ ಹೇಳುವವರ ಕುಲಕಸುಬಿನಂತಾದರೆ, ಅದು ಎಷ್ಟು ಸಹಜವಾಗೇ ಸಂಭವಿಸಿದ್ದರೂ ಆ ನಾಗರಿಕತೆ ರೋಗಗ್ರಸ್ತವಾದುದು. ಇದು ಉಪಾಧ್ಯಾಯರ ಮೇಲಿನ ತಿರಸ್ಕಾರವೇ ಆಗಲಿ ಅವಹೇಳನವೇ ಆಗಲಿ ಅಲ್ಲ. ನನಗೆ ಅಕ್ಷರ ವಿದ್ಯೆ ಕಲಿಸಿದ್ದು ಉಪಾಧ್ಯಾಯರೆಂಬುದನ್ನು ನಾನು ಮರೆಯಲಾರೆ. ಭಾರತೀಯ ಸಂದರ್ಭದಲ್ಲಿ ಒಬ್ಬನ ವೃತ್ತಿಯು ಕನ್ನಡ ಜಾನಪದದ ಒಟ್ಟು ಅನುಭವದ ವಿಸ್ತೀರ್ಣದಲ್ಲಿ ಎಷ್ಟನ್ನು ಒಳಗೊಳ್ಳಬಹುದೆಂಬ ಪ್ರಶ್ನೆ. ಭಾಷೆಯ ಉಪಯೋಗದಲ್ಲಿನ ಏಕತಾನ, ಅನುಭವ, ಶೈಲಿ ಮೊದಲಾದವುಗಳ ಪುನರಾವರ್ತನೆ, ಪಾಶ್ಚಿಮಾತ್ಯ ಸಾಹಿತ್ಯದಿಂದ ಕಳ್ಳಸಾಗಾಣಿಕೆ, ಪ್ರಕಾಶಕ, ವಿಮರ್ಶಕ, ಬರಹಗಾರರೊಡಗೂಡಿದ ವಂಚಕರ ಜಾಲಗಳು, ಇದಕ್ಕೆಲ್ಲಾ ಈ ಮೂರೂ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳ ವ್ಯಾಪ್ತಿಯೊಳಗಿರುವ, ವರ್ಗ, ಬಡ್ತಿ, ನೇಮಕ, ಪಠ್ಯಪುಸ್ತಕ ಇತ್ಯಾದಿಗಳ ಕೆಟ್ಟ ರಾಜಕಾರಣದಲ್ಲಿ ಮುಳುಗಿರುವ ಕೆಟ್ಟ ಉಪಾಧ್ಯಾಯಸಾಹಿತಿ ಸಮುದಾಯವೇ ಕಾರಣ.
ನಿಜವಾಗಿಯೂ ಗೌರವ ಭಾಜನರಾದ ಉಪಾಧ್ಯಾಯರನ್ನು ಟೀಕಿಸುವುದು ನನಗೆ ಇಷ್ಟವಿಲ್ಲ. ಆದರೆ ಈ ಜನ ವಿದ್ವತ್ ಗೋಷ್ಠಿಗಳಲ್ಲಿ, ವಿಮರ್ಶೆಯಲ್ಲಿ, ಚರ್ಚೆ ಸಮಾವೇಶಗಳಲ್ಲಿ ಅತಿ ನಾಜೂಕಿನ ವಾತಾವರಣ ಒಂದನ್ನು ಸೃಷ್ಟಿ ಮಾಡಿ ಕೇವಲ ಆತ್ಮಗೋಚರ ಮಾತ್ರವಾದ ಪಾರಿಭಾಷಿಕ ಪದಸಮುಚ್ಚಯಗಳನ್ನು ಸೃಷ್ಟಿಸಿ, ನೇರವಾದ ಸರಳವಾದ ಅನ್ಯ ಕ್ಷೇತ್ರದ ವ್ಯಕ್ತಿಗಳು ಸಾಹಿತ್ಯ ಕ್ಷೇತ್ರದ ಹತ್ತಿರ ಸುಳಿಯದೆ ಸಂಕೋಚದಿಂದ ಓಡಿಬಿಡುವಂತೆ ಅತಿ ಸಂಸ್ಕೃತಿಯ ಮೆಣಸಿನ ಹೊಗೆ ಹಾಕಿದ್ದಾರೆ.
ಮೂರನೆಯದು ಕೇವಲ ಸಾಹಿತ್ಯದ ಮಟ್ಟಿಗೇ ಸೀಮಿತಗೊಂಡ ಕ್ರಾಂತಿಕಾರಕತನ. ನವ್ಯ ಕಾವ್ಯದ ಸ್ಫೂರ್ತಿ ಮೂಲಗಳು ಆಂಗ್ಲ ಕಾವ್ಯದಿಂದ ಎರವಲು ತಂದ ಸಿದ್ಧಾಂತಗಳಿಂದ ಮಾತ್ರವೆಂದು ಹೇಳಬೇಕು. ಏಕೆಂದರೆ ಈ ವಿಚಾರ ಸರಣಿಗೆ ವಿಸ್ತೃತ ವ್ಯಾಪ್ತಿಯೇ ಕಾಣುತ್ತಿಲ್ಲ. ಕನ್ನಡದ ಹಲವು ಕ್ರಾಂತಿಗಳು ಇದೇರೀತಿ ಮುಗ್ಗರಿಸಿದುದಕ್ಕೆ ಮೂಲ ಕಾರಣ ಅವುಗಳ ಮುಂಚೂಣಿಯಲ್ಲಿ ಚುಕ್ಕಾಣಿ ಹಿಡಿದಿದ್ದವರು ಬ್ರಾಹ್ಮಣರು. ಆದ್ದರಿಂದಲೇ ಹಳೆ ಸಾಹಿತ್ಯಕ್ಕೂ ಹೊಸ ಸಾಹಿತ್ಯಕ್ಕೂ ಸಂಭವಿಸಿದ ಘರ್ಷಣೆ, ಹಳೆ ಸಂಪ್ರದಾಯ, ಆಚಾರ, ಪದ್ಧತಿ ಮುಂತಾದವುಗಳೆಲ್ಲದರ ವಿರುದ್ಧದ ಆಂದೋಲನವಾಗಲಿಲ್ಲ. ನವ್ಯ ಚಳವಳಿ ತಮಿಳುನಾಡಿನಲ್ಲಾದಂತೆ ಭಾಷೆ, ಜಾತಿಪದ್ಧತಿ, ತತ್ವಚಿಂತನೆ, ರಾಜಕೀಯ ಆಂದೋಲನ ಮೊದಲಾದ ಜೀವನದ ವಿಶಾಲ ವ್ಯಾಪ್ತಿಗೆ, ಎಲ್ಲ ಕ್ಷೇತ್ರಗಳಿಗೂ ವಿಸ್ತರಿಸಲೇ ಇಲ್ಲ. ನವ್ಯ ಮಾರ್ಗದ ಹಿರಿಯರೂ ಅಗ್ರಗಣ್ಯರೂ ಆದ ಕೆಲವರು ಸಾಹಿತ್ಯದಲ್ಲಿ ಕ್ರಾಂತಿಕಾರಿಗಳಾದರೂ ಜಾತಿಪದ್ಧತಿ, ವರ್ಣಾಶ್ರಮ ಧರ್ಮ ಮುಂತಾದವುಗಳನ್ನು ಪ್ರತಿಪಾದಿಸಿದರು. ಜನ ಬಳಕೆ ಆಡುಮಾತಿನಲ್ಲಿ ಕಾವ್ಯ ಬರೆಯಬೇಕೆಂದವರು ಶಿಕ್ಷಣ ಮಾಧ್ಯಮವನ್ನು ಮಾತ್ರ ಇಂಗ್ಲಿಷಿನಲ್ಲೇ ಉಳಿಸಬೇಕೆಂದು ಪ್ರತಿಪಾದಿಸಿದರು.
ನವ್ಯ ಕಾವ್ಯದ ಈಚಿನ ಉತ್ತಮ ಕವನಗಳೆಲ್ಲಾ ಧಾರ್ಮಿಕ ಅಥವಾ ರಿಲಿಜಿಯಸ್ ಆಗಿರುವುದೇ ಹೆಚ್ಚು. ಹಿಂದೂ ಧರ್ಮದ ಜಾತಿಪದ್ಧತಿ, ಸ್ತ್ರೀ ಅಸಮಾನತೆ, ಅಸ್ಪರ್ಶತೆ, ಸತಿಪದ್ಧತಿ ಇತ್ಯಾದಿಗಳ ಸನ್ನಿಧಿಯಲ್ಲಿ ಜನತಾ ದ್ರೋಹಿಯಾದವನೊಬ್ಬ ಮಾತ್ರ ರಿಲಿಜಿಯಸ್ ಆಗಲು ಸಾಧ್ಯ. ಕೊನೇ ಪಕ್ಷ ಆಂತರಿಕವಾಗಿ ಸಮಾನತೆಯನ್ನು ಬೋಧಿಸುವ ಧರ್ಮಗಳಲ್ಲಾದರು ಕವಿಯೊಬ್ಬ ಧಾರ್ಮಿಕ ಮತ್ತು ಸೆಕ್ಯೂಲರ್ ಎರಡೂ ಆಗಬಹುದೇನೋ! ಕನ್ನಡ ಸಾಹಿತ್ಯದ ಸದ್ಯದ ಪರಿಸ್ಥಿತಿಯಲ್ಲಿ ಅಂಥ ಸಾಧ್ಯತೆಗಳ ಸುಳಿವೇ ಕಾಣುತ್ತಿಲ್ಲ.
ಈ ಮೂರು ಕಾರಣಗಳಿಂದ ಈ ಸಾಹಿತ್ಯ ಸಂಪ್ರದಾಯ ಅವನತಿ ಹೊಂದಿದೆ. ಆದ್ದರಿಂದಲೇ ಈ ಮಾರ್ಗವನ್ನು ತ್ಯಜಿಸುವುದಷ್ಟೆ ಅಲ್ಲದೆ ಇದರ ಸ್ಫೂರ್ತಿ ಮೂಲಗಳು, ಅಭಿವ್ಯಕ್ತಿ ಪರಿಕರಗಳು, ಇದರ ಮೌಲ್ಯಗಳು ಎಲ್ಲವನ್ನೂ ತ್ಯಜಿಸಿ ರಾಜಕೀಯವಾಗಿ, ಸಾಮಾಜಿಕವಾಗಿ, ತಾತ್ವಿಕವಾಗಿ ಸಮಗ್ರವಾಗಿ ಬದಲಾವಣೆಯಾಗುವುದರಿಂದ ಮಾತ್ರವೇ ಹೊಸ ಸಾಹಿತ್ಯ ಬಂದೀತು. ಹೊಸ ಉಪಮಾನಗಳು, ಹೊಸ ಪದಪುಂಜಗಳು, ಹೊಸ ಅಚ್ಚು ಮಾಡುವ ಕ್ರಮ ಇವುಗಳಿಂದಲ್ಲ.
[ಲೇಖನಕೃಪೆ: ರಾಜೇಶ್ವರಿ ತೇಜಸ್ವಿ]
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ