ಜೈನಧರ್ಮದ ಪಾರಮ್ಯವನ್ನು ಸಾರುವ ಕೃತಿಗಳು ಕಳ್ಳತನವನ್ನು ಪಾಪವೆಂದು ಹೇಳುತ್ತವೆ. ಈ ಹಿನ್ನೆಲೆಯನ್ನು ಗಮನಿಸುತ್ತಾ ಗಂಟಿಚೋರ್ ಸಮುದಾಯದ ಜತೆ ಇದನ್ನು ತಳಕುಹಾಕಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ. ಜಿನಧರ್ಮ ಕಳ್ಳತನವನ್ನು ‘ಪಾಪ’ ಎನ್ನುವುದಕ್ಕೆ ಪೂರಕವಾಗಿ ಎಂಬಂತೆ ಗಂಟಿಚೋರ್ ಸಮುದಾಯದಲ್ಲಿ ‘ಪಾಪನೋರು’ ಎನ್ನುವ ಬೆಡಗೊಂದು ಇರುವುದನ್ನು ಗಮನಿಸಬಹುದು. ಈ ಬೆಡಗು ತಮ್ಮನ್ನು ‘ಪಾಪದವರು’ ಅಥವಾ ಜಿನಧರ್ಮದ ಪ್ರಕಾರ ‘ಪಾಪ ಕಾರ್ಯದಲ್ಲಿ’ ತೊಡಗಿದವರು ಎನ್ನುವುದರ ಸಾಂಕೇತಿಕವಾಗಿ ಬಂದಿರಬಹುದೇ ಎಂಬ ವಿಶ್ಲೇಷಣೆಯನ್ನು ಮಾಡಿದ್ದಾರೆ ಡಾ.ಅರುಣ್ ಜೋಳದ ಕೂಡ್ಲಿಗಿ.
ಗಂಟಿಚೋರರ ಕಥನ ಸರಣಿಯ ಮತ್ತೊಂದು ಕಂತು ಇಲ್ಲಿದೆ.
ಹಿಂದಿನ ಸರಣಿಯಲ್ಲಿ ಪ್ರೊ.ಕೆ.ವಿ. ನಾರಾಯಣ ಅವರ ಮಾತುಗಳನ್ನು ಉಲ್ಲೇಖಿಸಿದಂತೆ, ಗಂಟಿಚೋರ್ ಪದ ಪ್ರಾಕೃತ ಮೂಲದ್ದಿರಬಹುದೇ ಎನ್ನುವ ಸಂಶಯದ ಎಳೆ ಹಿಡಿದು ಹೊರಟರೆ ಹತ್ತನೆ ಶತಮಾನದ ವಡ್ಡಾರಾಧನೆಯ ಕತೆಯಲ್ಲಿ ಬರುವ ವಿದ್ಯುತ್ ಚೋರನೆಂಬ ರಿಸಿಯ ಕತೆಯ ಹಿನ್ನೆಲೆಯಲ್ಲಿ ಒಂದಷ್ಟು ಸುಳಿವುಗಳು ಸಿಗುತ್ತವೆ. ಪ್ರಾಚೀನ ಕನ್ನಡ ಸಾಹಿತ್ಯ ಪರಂಪರೆಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಗಂಟಿಚೋರರ ಮೂಲವನ್ನು ಉತ್ತರಭಾರತದ ಕಣ್ಣೋಟದಿಂದ ಸ್ವಲ್ಪ ಆಚೆ ಸರಿಸಿ ಈ ನೆಲದ ಮೂಲನಿವಾಸಿಗಳಿರಬಹುದೇ ಎನ್ನುವ ಆಲೋಚನೆಗೆ ಇಂಬು ಸಿಗುತ್ತದೆ. ಹಾಗಾದಲ್ಲಿ ಗಂಟಿಚೋರರ ಚರಿತ್ರೆ ಕರ್ನಾಟಕದ ಭೌಗೋಳಿಕ ವ್ಯಾಪ್ತಿಯ ವಡ್ಡಾರಾಧನೆಯ ಹತ್ತನೇ ಶತಮಾನಕ್ಕೆ ಲಗತ್ತಾಗುತ್ತದೆ. ವಡ್ಡಾರಾಧನೆಯಲ್ಲಿ ವಿದ್ಯುತ್ ಚೋರನೆಂಬ ರಿಸಿಯ ಕಥೆಯಲ್ಲಿ ಚೋರ ಪದ ಬಳಕೆಯಾಗಿದೆ. ಅದು ಮುಂದೆ ‘ನಯಸೇನ’ನಲ್ಲಿ ಮುಂದುವರಿಯುತ್ತದೆ.
ಶಿವಕೋಟ್ಯಾಚಾರ್ಯನ ವಡ್ಡಾರಾಧನೆಯ ವಿದ್ಯುತ್ ಚೋರನೆಂಬ ರಿಸಿಯ ಕತೆಯ ಸಂಕ್ಷಿಪ್ತ ಕತೆ ನೋಡೋಣ. ಇಲ್ಲಿ ವಿದ್ಯುತ್ ನಂತೆ ವೇಗದ ಚಾಕಚಕ್ಯತೆಯ ಕಸುಬುದಾರಿ ಕಳ್ಳನನ್ನು ಈ ಕತೆ ಪರಿಚಯಿಸುತ್ತದೆ. ವಡ್ಡಾರಾಧನೆಯ ಹದಿಮೂರನೆಯ ಕತೆ ಇದು. ಜಂಬೂದ್ವೀಪದ ಭರತ ಕ್ಷೇತ್ರದಲ್ಲಿ ವಿದೇಹ ಎಂಬುವಂತಹ ರಾಜ್ಯದಲ್ಲಿ ಮಿಥಿಲೆ ಎನ್ನುವ ಪಟ್ಟಣವಿದೆ. ಅರಸ ವಾಮರಥ, ಆತನ ಪತ್ನಿ ಬಂಧುಮತಿ. ತಳವಾರಿಕೆ ಮಾಡಿಕೊಂಡಿರುವವನು ಯಮದಂಡ. ಇಲ್ಲಿಯೇ ವಾಸವಾಗಿರುವ ಜೃಂಭಿನಿ, ಸ್ತಂಭಿನಿ, ಮೋಹಿನಿ, ತಾಳೋದ್ಘಾಟಿನಿ, ವಿದ್ಯಾಮಂತ್ರ, ಚೂರ್ಣ, ಯೋಗ, ಘಟಿಕಾಂಜನ ಮುಂತಾದ ತಷ್ಕರ ಶಾಸ್ತ್ರದಲ್ಲಿ ನೈಪುಣ್ಯತೆ ಇರುವ ಪರಿಣಿತ ನಗರದ ಶ್ರೀಮಂತರ ಆಭರಣ ವಡವೆಗಳನ್ನು ಕದ್ದು ಊರ ಹೊರ ವಲಯದಲ್ಲಿರುವ ಸಣ್ಣ ಬೆಟ್ಟದಲ್ಲಿರುವ ಗುಹೆಯಲ್ಲಿ ಅಡಗಿಸಿ ಇಡುತ್ತಿದ್ದ. ಘಟಿಕಾಂಜನವನ್ನು ಹಗಲು ತನ್ನ ಕಣ್ಣುಗಳಿಗೆ ಲೇಪಿಸಿಕೊಂಡ ನಂತರ ಒಬ್ಬ ಕುರೂಪಿಯಾಗಿ, ಕುಷ್ಟರೋಗಿಯಾಗಿ, ತೊನ್ನಿನವನಾಗಿ ಬದಲಾಗುತ್ತಿದ್ದನು. ಈ ರೂಪದಲ್ಲಿ ಮನೆ ಮನೆಗೆ ಹೋಗಿ ಭಿಕ್ಷೆ ಬೇಡುತ್ತಿದ್ದ. ಊರ ಹೊರಗಿನ ಪಾಳು ದೇಗುಲದಲ್ಲಿ ವಾಸಿಸುತ್ತಿದ್ದ. ರಾತ್ರಿ ಭವ್ಯತೆಯ ಉಡುಪು ಧರಿಸಿ ವೇಶ್ಯೆಯರ ಬಳಿ ಕಾಲ ಕಳೆಯುತ್ತಿದ್ದ. ರಾಮ ವಾಮರಥನಲ್ಲಿ ಪರಂಪರೆಯಿಂದ ಬಂದ ಮಹತ್ವದ `ಸರ್ವರುಜಾಪಹಾರಿಣಿ’ ಹಾರವಿದೆ. ಇದು ಸರ್ಪಕಾವಲಿನಲ್ಲಿರುವ ಏಳನೆಯ ಮಹಡಿಯ ಪೆಟ್ಟಿಗೆಯಲ್ಲಿ ಈ ಹಾರವನ್ನು ಇಡಲಾಗಿತ್ತು. ಒಮ್ಮೆ ವಿದ್ಯುತ್ ಚೋರ ಈ ಹಾರವನ್ನು ಕದಿಯುತ್ತಾನೆ. ಈ ಹಾರದ ಕಳ್ಳನನ್ನು ಹಿಡಿಯಲು ತಳವಾರ ಯಮದಂಡನನ್ನು ನೇಮಿಸಲಾಗುತ್ತದೆ. ಯಮದಂಡನಿಗೂ ಗೊತ್ತಿರುವ ಘಟಿಕಾಂಜನ ವಿದ್ಯೆಯ ಬಲದಿಂದ ಈತನೇ ಕಳ್ಳನೆಂದು ಗುರುತಿಸುತ್ತಾನೆ. ಕಳವು ಮಾಡಿದ್ದನ್ನೆಲ್ಲ ಮರಳಿ ಪಡೆದು ಶಿಕ್ಷೆಗೆ ಗುರಿ ಮಾಡಲಾಗುತ್ತದೆ.
‘ವಡ್ಡಾರಾಧನಕಾರ ನಿರೂಪಿಸಿರುವ ಅರವತ್ತನಾಲ್ಕು ವಿದ್ಯೆಗಳಲ್ಲಿ ಕಳ್ಳತನವೂ ಒಂದು. ಇದನ್ನು ಅನೇಕ ಸಂದರ್ಭಗಳಲ್ಲಿ ಕೇವಲ ಕಳ್ಳರಲ್ಲದೆ ಅರಸರು, ಮಂತ್ರಿಗಳು ಮತ್ತು ಅಧಿಕಾರಿಗಳೂ ಕೂಡ ಕಲಿಯುತ್ತಿದ್ದರು. ‘ವಿದ್ಯುಚ್ಚೋರನೆಂಬ ರಿಸಿಯ ಕಥೆ’ಯಲ್ಲಿ ವಿದ್ಯುಚ್ಚೋರನೆಂಬ ಅರಸನು ಕಳ್ಳನ ವೇಷದಲ್ಲಿ “ಜೃಂಭಿನಿ ಸ್ತಂಭಿನಿ ಮೋಹಿನಿ ತಾಳೋದ್ಘಾಟಿನಿ ವಿದ್ಯಾಮಂತ್ರ ಚರಾರ್ಣಯೋಗ ಘುಟಿಕಾಂಜನ” ವಿದ್ಯೆಗಳನ್ನು ಬಲ್ಲವನು ಎಂಬುದಾಗಿ ಹೇಳಿದೆ. ಇಡೀ ಕಥೆಯು ಸಂಪತ್ತು, ಆಸೆ, ಲೋಲುಪತೆ ಮತ್ತು ಕಳ್ಳತನ ಇವುಗಳ ನಡುವೆ ಸ್ಪರ್ಧೆಯಂತೆ ನಿರೂಪಣೆಗೊಂಡಿದೆ. ಈ ಎಲ್ಲದರ ನಡುವೆ ಈ ಕಥೆಯು ಕಳ್ಳತನವನ್ನು ನಿಷಿದ್ಧ ಎಂದು ಹೇಳುತ್ತಲೇ ಅದನ್ನು ಒಂದು ರೋಚಕವಾದ ಕ್ರಿಯೆಯಂತೆ ಲವಲವಿಕೆಯಿಂದ ಚಿತ್ರಿಸಿದೆ. ಇದರ ಜೊತೆಗೆ ಜೈನಧರ್ಮ ಸಂಪತ್ತು ಮತ್ತು ರಾಜಪ್ರಭುತ್ವ ಇವುಗಳ ನಡುವೆ ಇರುವ ಮೈತ್ರಿಯನ್ನು ಕುರಿತಾಗಿ ಮಾರ್ಮಿಕವಾಗಿ ಚಿತ್ರಿಸಿದೆ. ಶಿವಕೋಟ್ಯಾಚಾರ್ಯನ ನಂತರದಲ್ಲಿ ನಯಸೇನನ ಧರ್ಮಾಮೃತದಲ್ಲಿ ಹೆಚ್ಚು ಉಲ್ಲೇಖಗಳು ಸಿಗುತ್ತವೆ.
ಕಳ್ಳತನವನ್ನು ನಯಸೇನನು ನಿರೂಪಿಸಿರುವ ಕ್ರಮವನ್ನು ಒಂದು ಕಂದಪದ್ಯದ ಮೂಲಕ ನೋಡಬಹುದು.
ಪುಸಿವರಂ ಕೊಲ್ವವರಂ
ಬೆಸನಿಗಳಂ ಕಳ್ಳರಪ್ಪರಂ ಕಂಡೊಡೆ ಸಂ
ಕಿಸುವರ್ ಪುರುಷರ್ ಪಾಪಂ
ವಸುಮತಿಯೊಳ್ಕಷ್ಟಮೆಂದು ಸಾರುವ ತೆರದಿಂ||
ಇಲ್ಲಿ ಕಳ್ಳರನ್ನು, ಸುಳ್ಳು ಹೇಳುವವರು ಮತ್ತು ಕೊಲೆ ಮಾಡುವವರ ಜೊತೆಗೆ ಸಮೀಕರಿಸಲಾಗಿದೆ. ಈ ಮೂರೂ ಕೆಲಸಗಳು ಸಮಾನವಾದ ಅಪರಾಧಗಳು ಎಂದು ಗ್ರಹಿಸಲಾಗಿದೆ. ಸಾಮಾನ್ಯವಾಗಿ ಈ ಮೂರೂ ಕೆಲಸಗಳು ಸಂಭವಿಸುವುದು ಸಂಪತ್ತಿನ ಕಾರಣಕ್ಕಾಗಿ. ಸಂಪತ್ತು ಎಲ್ಲಿ ಅಸಮಾನವಾಗಿ ಹಂಚಿಕೆಯಾಗಿರುತ್ತದೆಯೋ ಅಲ್ಲಿ ಸಂಘರ್ಷಗಳು ಜರುಗುತ್ತವೆ. ಜೈನತತ್ವಗಳನ್ನು ಆವರಿಸಿರುವ ಈ ಪಠ್ಯಗಳಲ್ಲಿ ಒಂದು ಕಡೆ ಇಡೀ ರಾಜ್ಯದ ಸಂಪತ್ತಿಗೆ ವಾರಸುದಾರರಾದ ರಾಜರು ಮತ್ತು ವಣಿಕರಿದ್ದರೆ, ಮತ್ತೊಂದು ಕಡೆ ಅದೇ ಸಂಪತ್ತನ್ನು ಉತ್ಪಾದಿಸುವ ಮತ್ತು ಅದರಿಂದ ವಂಚಿತರಾದ ಸಾಮಾನ್ಯ ಜನರಿದ್ದಾರೆ (ಕುಮಾರಸ್ವಾಮಿ ಬಿ.ಈ: 2016:90).
ಈ ಉಲ್ಲೇಖವನ್ನು ಗಮನಿಸಿದರೆ ಜೈನಧರ್ಮದ ಪಾರಮ್ಯವನ್ನು ಸಾರುವ ಕೃತಿಗಳು ಕಳ್ಳತನವನ್ನು ಪಾಪವೆಂದು ಹೇಳುತ್ತವೆ. ಈ ಹಿನ್ನೆಲೆಯನ್ನು ಗಮನಿಸುತ್ತಾ ಗಂಟಿಚೋರ್ ಸಮುದಾಯದ ಜತೆ ಇದನ್ನು ತಳಕುಹಾಕಿದರೆ ಕೆಲವು ಸಂಗತಿಗಳು ಹೊಳೆಯುತ್ತವೆ. ಜಿನಧರ್ಮ ಕಳ್ಳತನವನ್ನು ‘ಪಾಪ’ ಎನ್ನುವುದಕ್ಕೆ ಪೂರಕವಾಗಿ ಎಂಬಂತೆ ಗಂಟಿಚೋರ್ ಸಮುದಾಯದಲ್ಲಿ ‘ಪಾಪನೋರು’ ಎನ್ನುವ ಬೆಡಗೊಂದು ಇರುವುದನ್ನು ಗಮನಿಸಬಹುದು. ಈ ಬೆಡಗು ತಮ್ಮನ್ನು ‘ಪಾಪದವರು’ ಅಥವಾ ಜಿನಧರ್ಮದ ಪ್ರಕಾರ ‘ಪಾಪ ಕಾರ್ಯದಲ್ಲಿ’ ತೊಡಗಿದವರು ಎನ್ನುವುದರ ಸಾಂಕೇತಿಕವಾಗಿ ಬಂದಿರಬಹುದೇ ಎನ್ನುವ ಅನುಮಾನವೊಂದು ಹುಟ್ಟುತ್ತದೆ. ಇದನ್ನು ಖಚಿತವಾಗಿ ಹೇಳಲಾಗದಿದ್ದರೂ ಈ ಹಿನ್ನೆಲೆ ಇರಬಹುದಾದ ಸಾಧ್ಯತೆಯನ್ನು ಪೂರ್ಣ ಅಲ್ಲಗಳೆಯುವಂತಿಲ್ಲ. ಸದ್ಯಕ್ಕೆ ಈ ಬೆಡಗು ಗಂಟಿಚೋರರಲ್ಲಿ ಹೆಚ್ಚಾಗಿ ಬಳಕೆಯಲ್ಲಿಲ್ಲ.
ಗಂಟಿಚೋರರಲ್ಲಿ `ಪಾತ್ರೋಟ್’ ಎನ್ನುವ ಒಂದು ವರ್ಗವಿದೆ. ಮರಾಠಿ ಭಾಷೆಯ ಹಿನ್ನೆಲೆಯಲ್ಲಿ ಇವರೆಲ್ಲಾ ಕಲ್ಲಿನ ಕೆಲಸ ಮಾಡುವವರು. ಒಂದರ್ಥದಲ್ಲಿ ಕಲ್ಲೊಡ್ಡರು. ವಡಾರಿಗಳು. ಉತ್ತರ ಕರ್ನಾಟಕದ ಗಂಟಿಚೋರರಲ್ಲಿ ಪಾತ್ರೋಟ್ಸ್ ಎಂದರೆ ಪಾತ್ರ ಮಾಡುವವರೆಂತಲೂ ಅರ್ಥವಿದೆ. ಇವರೆಲ್ಲಾ ಪಾರಿಜಾತ ಸಣ್ಣಾಟ ದೊಡ್ಡಾಟದ ಕಲಾವಿದರು. ಗಂಟಿಚೋರ್ ಸಮುದಾಯದ ಹಿರಿಯರ ಅಭಿಪ್ರಾಯದಲ್ಲಿ ಹಿಂದೆ ಊರುಗಳಲ್ಲಿ ಪಾತ್ರ ಮಾಡುತ್ತಾ ಊರವರೆಲ್ಲರನ್ನು ಆಕರ್ಷಿಸಿ ಹಿಂದಿನಿಂದ ಕಳ್ಳತನ ಮಾಡುತ್ತಿದ್ದರಂತೆ. ಹೀಗಾಗಿ ಗಂಟಿಚೋರರ ತುಡುಗಿನಲ್ಲಿ ಪಾತ್ರಧಾರಿ ತುಡುಗು ಎನ್ನುವ ವಿಧವಿದೆ. ಇದು ಗಂಟಿಚೋರರೇ ಪಾತ್ರ ಹಾಕಿ ನಾಟಕ ಮಾಡಿ, ಊರ ಜನರನ್ನು ಒಂದೆಡೆ ಸೇರಿಸಿ ಮೈ ಮರೆಯುವಂತೆ ರಂಜಿಸುವುದು. ಇದೇ ಸಂದರ್ಭದಲ್ಲಿ ಅವರದೇ ಇತರೆ ಸದಸ್ಯರು ಮೊದಲೆ ಗೊತ್ತು ಮಾಡಿಕೊಂಡಿದ್ದ ಶ್ರೀಮಂತರ ಮನೆಗಳನ್ನು ಕಳವು ಮಾಡುವುದು. ಅಂದರೆ ತುಡುಗು ಮಾಡಲು ಪಾತ್ರ ಹಾಕುವ ವೇಷದ ಕಲೆಯೂ ಇವರಿಗೆ ತಿಳಿದಿತ್ತು. ಅಂದರೆ ಇವರು ಕಳ್ಳತನಕ್ಕೆ `ಪಾತ್ರ’ ವನ್ನು ಒಂದು ತಂತ್ರವನ್ನಾಗಿ ಬಳಸುತ್ತಿದ್ದರು ಎನ್ನುವುದು ತಿಳಿಯುತ್ತದೆ. ಈ ಹಿನ್ನೆಲೆಯಲ್ಲಿ ಪಾತ್ರವನ್ನು ಹಾಕಿ ಕಳವು ಮಾಡುತ್ತಿದ್ದ ವಿದ್ಯತ್ ಚೋರನು, ಗಂಟಿಚೋರರು ಹೋಲುವಂತಹ ಸಮುದಾಯವೊಂದರ ಪ್ರತಿನಿಧಿ ಇರಬಹುದೇ? ಎನ್ನುವ ಸಂಶಯ ಬರುತ್ತದೆ.
ರಾಮ ವಾಮರಥನಲ್ಲಿ ಪರಂಪರೆಯಿಂದ ಬಂದ ಮಹತ್ವದ `ಸರ್ವರುಜಾಪಹಾರಿಣಿ’ ಹಾರವಿದೆ. ಇದು ಸರ್ಪಕಾವಲಿನಲ್ಲಿ ಏಳನೆಯ ಮಹಡಿಯ ಪೆಟ್ಟಿಗೆಯಲ್ಲಿ ಈ ಹಾರವನ್ನು ಇಡಲಾಗಿತ್ತು. ಒಮ್ಮೆ ವಿದ್ಯುತ್ ಚೋರ ಈ ಹಾರವನ್ನು ಕದಿಯುತ್ತಾನೆ. ಈ ಹಾರದ ಕಳ್ಳನನ್ನು ಹಿಡಿಯಲು ತಳವಾರ ಯಮದಂಡನನ್ನು ನೇಮಿಸಲಾಗುತ್ತದೆ.
ಈ ಸಂಗತಿಯನ್ನು ಮತ್ತೊಂದು ನೆಲೆಯಿಂದ ಪರಿಶೀಲಿಸೋಣ, ‘ಕಳ್ಳತನ’ ಎನ್ನುವುದು ಜೈನಧರ್ಮದ ಪ್ರಕಾರ ‘ಪಾಪದ ಕೆಲಸ’. ಜೈನಧರ್ಮಶಾಸ್ತ್ರದ ಪಂಚಾಣುವ್ರತಗಳಾದ ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಇವುಗಳಲ್ಲಿ ಮೂರನೆಯ ಅಣುವ್ರತವಾದ ಅಸ್ತೇಯವು ಕಳ್ಳತನಕ್ಕೆ ಸಂಬಂಧಿಸಿದುದು. ಈ ಕಾರಣದಿಂದ ಭಾರತೀಯ ಜೈನ ಕಥಾಪರಂಪರೆಯಲ್ಲಿ ಕಳ್ಳತನದ ಪಾತ್ರಗಳು ಸಾಮಾನ್ಯವಾಗಿವೆ. ಇಲ್ಲಿ ಜೈನ ಕಥನಗಳು ಮೋಕ್ಷಕ್ಕೆ ದಾರಿಗಳನ್ನು ಸೂಚಿಸುವಾಗಲೂ `ಕಳ್ಳತನ’ದ ಪಾಪ ಮಾಡದಿರುವುದೂ ಒಂದೆಂಬಂತೆ ವಿವರಣೆಯಿದೆ. ವೈರುಧ್ಯವೆಂದರೆ ಜೈನ ಅರಸರು, ವ್ಯಾಪಾರಿಗಳು ಮಾಡುವ ಅಗತ್ಯಕ್ಕಿಂತ ಹೆಚ್ಚಿನ ಸಂಪತ್ತಿನ ಸಂಗ್ರಹವು ಪಾಪವಾಗದೆ ಹೀಗೆ ಹೆಚ್ಚುವರಿ ಸಂಪತ್ತನ್ನು ಇಲ್ಲದ ಕಾರಣಕ್ಕೆ ಕಳ್ಳತನ ಮಾಡುವುದು ಪಾಪವಾಗುವ ಪರಿಯನ್ನು ನೋಡಿದರೆ ಈ ಜೈನ ಪಠ್ಯಗಳ ವೈರುಧ್ಯಗಳನ್ನು ಅರ್ಥ ಮಾಡಿಕೊಳ್ಳಬಹುದಾಗಿದೆ.
ಇದನ್ನು ಮತ್ತೊಂದು ನೆಲೆಯಿಂದ ಪರಿಶೀಲಿಸುವುದಾದರೆ, ಸದ್ಯಕ್ಕೆ ಗಂಟಿಚೋರ್ ಸಮುದಾಯದ ನೆಲೆಗಳಿರುವುದು ಮುಂಬೈ ಕರ್ನಾಟಕ ಅಂದರೆ ಕೊಪ್ಪಳದಿಂದ ಆರಂಭವಾಗಿ ಬಿಜಾಪುರ ಬೆಳಗಾವಿವರೆಗೆ ವ್ಯಾಪಿಸಿ ಮಹಾರಾಷ್ಟ್ರದಲ್ಲಿ ಮುಂದುವರಿಯುತ್ತದೆ. ಈ ಭಾಗ ಸಾಮಾನ್ಯವಾಗಿ ಕರ್ನಾಟಕದ ಮೂಲ ಜೈನರ ನೆಲೆಗಳೂ ಆಗಿದ್ದವು. ಜೈನರು ಅರಸೊತ್ತಿಗೆಯ ಭಾಗವಾಗಿದ್ದಂತೆ, ವಣಿಕ(ವ್ಯಾಪಾರಿ) ಸಮುದಾಯವೂ ಆಗಿತ್ತು. ಈ ಎರಡೂ ನೆಲೆಗಳು ಸಂಪತ್ತನ್ನು ಸಂಗ್ರಹಿಸುವ ನೆಲೆಯೇ ಆಗಿವೆ. ಅಂದರೆ ಸಂಪತ್ತು ಸಂಗ್ರಹವಾಗುವೆಡೆ ಸಾಮಾಜಿಕ ಅಸಮಾನತೆಯ ಅಂತರ ಹೆಚ್ಚಾಗಿ ಇಂತಹ ಕೂಡಿಟ್ಟ ಸಂಪತ್ತನ್ನು ದೋಚುವ ಪ್ರತಿಶಕ್ತಿಗಳೂ ಹುಟ್ಟುವುದು ಸಹಜ. ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಜೈನರೂ, ಗಂಟಿಚೋರರೂ ನೆಲೆಸಿದ ಭೌಗೋಳಿಕ ಪ್ರದೇಶಗಳು ಒಂದೇ ಆಗಿರುವುದು ಕುತೂಹಲಕಾರಿಯಾಗಿದೆ. ಅಂತೆಯೇ ಶಿವಕೋಟ್ಯಾಚಾರ್ಯ ಮತ್ತು ನಯಸೇನ ಕೂಡ ಈ ಭಾಗದ ಭೌಗೋಳಿಕ ವ್ಯಾಪ್ತಿಯಲ್ಲಿ ನೆಲೆಸಿ ಕೃತಿ ರಚಿಸಿರುವುದು ಕೂಡ ಗಮನಾರ್ಹ ಸಂಗತಿಯಾಗಿದೆ.
ಜೈನರಲ್ಲಿ ಮೂಲತಃ ಇದ್ದ ಬಣಜಿಗ ಶ್ರೇಷ್ಠಿ ಎಂಬ ವ್ಯಾಪಾರಿ ಕುಲದವರು ಮತಾಂತರಗೊಂಡು ಬಣಜಿಗ ಲಿಂಗಾಯತರಾದರು. ಆದ್ದರಿಂದ ಇವರನ್ನು ‘ಶೀಲವಂತರು’ ಎಂದು ಕೂಡಾ ಕರೆಯಲಾಗಿದೆ. ‘ಜೈನ ಕೆಟ್ಟು ಬಣಜಿಗನಾದ’ ಎಂಬ ಗಾದೆ ಕೂಡ ಇದೆ. ಉತ್ತರ ಕರ್ನಾಟಕದಲ್ಲಿ ಚತುರ್ಥ ಮತ್ತು ಪಂಚಮಗಳ ನಡುವಿನ ಭೇದ ಹೆಚ್ಚು ಕಂಡುಬರುತ್ತದೆ. ಅಂತೆಯೇ `ಚತುರ್ಥ ದಿಗಂಬರ ಜೈನರು’ ತಮ್ಮನ್ನು ‘ವೀರ ದಿಗಂಬರ ಜೈನ ಕ್ಷತ್ರಿಯ ಚತುರ್ಥ’ ಎಂದು ಕರೆದುಕೊಳ್ಳುತ್ತಾರೆ. ನದಿ ದಂಡೆಯ ಫಲವತ್ತಾದ ಭೂಮಿಯಲ್ಲಿ ಒಕ್ಕಲುತನವನ್ನೇ ಮುಖ್ಯ ಆದಾಯದ ಮೂಲ ಮಾಡಿಕೊಂಡ ಇವರು ಬೆಳಗಾವಿ, ಬಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹಾಗೂ ಮಹಾರಾಷ್ಟ್ರದ ಸಾಂಗ್ಲಿ, ಕೊಲ್ಲಾಪುರ, ಸೊಲ್ಲಾಪುರ ಜಿಲ್ಲೆಗಳಲ್ಲಿ ಅಧಿಕ ಸಂಖ್ಯೆಯಲ್ಲಿ ಇದ್ದಾರೆ. ಹೀಗೆ ಗಂಟಿಚೋರರು ನೆಲೆಸಿದ್ದ ಮೂಲ ನೆಲೆಗಳಲ್ಲೆಲ್ಲಾ ಬಣಜಿಗ ಲಿಂಗಾಯತರೂ, ಚತುರ್ಥ ದಿಗಂಬರ ಜೈನರೂ ಹೆಚ್ಚಿರುವುದನ್ನು ಕಾಣಬಹುದು.
ಇದನ್ನು ಸೂಕ್ಷ್ಮವಾಗಿ ಗಮನಿಸಿದರೆ ಗಂಟಿಚೋರರ ‘ಪಾಪನೋರು’ ಎಂಬ ಬೆಡಗಿನವರೆ ಈ ಜೈನಕೃತಿಗಳ ಉಲ್ಲೇಖಗಳಿಗೆ ಪ್ರೇರಣೆಯಾಗಿರಬಹುದೇ ಎನ್ನುವ ಸಂಶಯವನ್ನು ವ್ಯಕ್ತಪಡಿಸಲು ಸಾಧ್ಯವಿದೆ. ಇದು ನಿಜವಾದಲ್ಲಿ ಈ ಬೆಡಗಿನವರೇ ಗಂಟಿಚೋರ್ ಸಮುದಾಯದ ಮೂಲದವರು ಇರಬಹುದು, ನಂತರದ ಬೆಳವಣಿಗೆಗಳಲ್ಲಿ ಬೇರೆ ಬೇರೆ ಕಡೆಯವರು ವಲಸೆ ಬಂದಿರುವ ಸಾಧ್ಯತೆ ಇದೆ. ಹೀಗಾಗಿ ಒಟ್ಟಾರೆ ಗಂಟಿಚೋರರನ್ನು ಮೂಲತಃ ವಲಸೆ ಬಂದವರೆಂದು ಹೇಳುವುದು ಕಷ್ಟ.
ಈ ಸಮುದಾಯದ ಬಗ್ಗೆ ಶಿಶುನಾಳ ಶರೀಫರು ತಮ್ಮ ‘ಬಿದ್ದೀಯಬೇ ಮುದುಕಿ ಬಿದ್ದೀಯಬೇ’ ಎಂಬ ತತ್ವ ಪದದಲ್ಲಿ ‘ಬುಟ್ಟಿಯಲಿ ಪತ್ತಲಿಟ್ಟಿ/ಅದನು ಉಟ್ಟ ಹೊತ್ತೊಳು ಜೋಕಿ;/ಕೆಟ್ಟಗಂಟಿ ಚೌಡೇರು ಬಂದು/ಉಟ್ಟುದ್ದನ್ನೆ ಕದ್ದಾರ ಜೋಕಿ/ಬುದ್ದಿಗೇಡಿ ಮುದುಕಿ ನೀ ಬಿದ್ದೀಯಬೆ’ ಎಂದಿದ್ದಾರೆ. ಈ ಪದ ‘ಕೆಟ್ಟ ಗಂಟಿ ಚೌಡೇರು’ ಬಗ್ಗೆ ಶರೀಫರು ಮುದುಕಿಯನ್ನು ಎಚ್ಚರಿಸುವ ಧಾಟಿಯಲ್ಲಿದೆ. ಇದೀಗ ಶಿಗ್ಗಾಂವ ಸಮೀಪದ ಶಿಶುವಿನಾಳ ಭಾಗದ ಬಾಲೆಹೊಸೂರು ಗ್ರಾಮದಲ್ಲಿ ಗಂಟಿಚೋರ್ ಸಮುದಾಯದ 200 ಕುಟುಂಬಗಳಿದ್ದು 711ರಷ್ಟು ಜನಸಂಖ್ಯೆ ಇದೆ. ಶರೀಫರು ಉಲ್ಲೇಖಿಸುವ ಹುಲುಗೂರು(ಹುಲುಗುರ ಸಂತಿ) ಕೂಡ ಈ ಊರಿನ ಸಮೀಪವಿದೆ. ಹಾಗಾಗಿ ಶರೀಫರು ಉಲ್ಲೇಖಿಸುವ ‘ಗಂಟಿ ಚೌಡೇರು’ ಬಾಲೆಹೊಸೂರಿನ ಗಂಟಿಚೋರ್ ಸಮುದಾಯವಾಗಿದೆ.
ಶಿಶುನಾಳ ಶರೀಫರು ಬಳಸಿದ ‘ಗಂಟಿ ಚೌಡೇರು’ ಎನ್ನುವ ಪದ ‘ಚೌಡಿ’ ಎಂಬ ಶಕ್ತಿದೇವತೆಯ ಹೆಸರೇ? ಎನ್ನುವ ಪ್ರಶ್ನೆಯೊಂದು ಹುಟ್ಟಿಕೊಳ್ಳುತ್ತದೆ. ಈ ಸಮುದಾಯ ಶಕ್ತಿ ಆರಾಧಕರೂ ಆಗಿರುವುದರಿಂದ ಶಕ್ತಿದೇವತೆಯ ಸಂಕೇತವಾಗಿ ಬಳಸಿದ್ದಾರೆಯೇ ಅಥವಾ ಚೋರ, ಚೋರೇರು, ಚೌರೇರು ಬಳಕೆಯೇ ಮುಂದೆ ಚೌಡೇರು ಎಂದು ಜನಬಳಕೆಗೆ ಬಂದ ಪದವನ್ನೇ ತೆಗೆದುಕೊಂಡಿದ್ದಾರೆಯೇ ಎನ್ನುವುದನ್ನು ಯೋಚಿಸಬೇಕಾಗಿದೆ.
(ಚಿತ್ರಗಳು: ಲೇಖಕರ ಸಂಗ್ರಹದಿಂದ)
ಅರಣ್ ಜೋಳದಕೂಡ್ಲಿಗಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲೂಕಿನ ಜೋಳದಕೂಡ್ಲಿಗಿಯವರು. ಜಾನಪದ ಎಂ.ಎ ಮತ್ತು ಕನ್ನಡ ಸಾಹಿತ್ಯದಲ್ಲಿ ಎಂ.ಎ ಸ್ನಾತಕೋತ್ತರ ಪದವಿಗಳನ್ನು ಕನ್ನಡ ವಿಶ್ವವಿದ್ಯಾಲಯದಲ್ಲಿ ಪಡೆದರು. ಅಲ್ಲಿಯೇ ಪಿಎಚ್.ಡಿ ಪದವಿ ಪಡೆದು, ಪ್ರಸ್ತುತ ಪೋಸ್ಟ್ ಡಾಕ್ಟರಲ್ ಉನ್ನತ ಸಂಶೋಧನೆಯಲ್ಲಿ ಮುಗಿಸಿದ್ದಾರೆ.ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಲ್ಲಿ ಅತಿಥಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದಾರೆ. ಪ್ರಕಟಿತ ಕೃತಿಗಳು: ನೆರಳು ಮಾತನಾಡುವ ಹೊತ್ತು (ಕವಿತೆ, 2004) ಸಂಡೂರು ಭೂಹೋರಾಟ ( ಸಂಶೋಧನೆ, 2008) ಅವ್ವನ ಅಂಗನವಾಡಿ ( ಕವನಸಂಕಲನ, 2010), ಕನ್ನಡ ಜಾನಪದ ತಾತ್ವಿಕ ನೆಲೆಗಳು ( ಪಿಎಚ್.ಡಿ ಸಂಶೋಧನೆ, 2012), ಜಾನಪದ ಮುಖಾಮುಖಿ (ಸಂಶೋಧನೆ, 2013), ಜಾನಪದ ವರ್ತಮಾನ (ಸಂಶೋಧನೆ, 2013), ಕನಸೊಡೆದೆದ್ದೆ ( ವಿಮರ್ಶೆ, 2013) ಗಂಟಿಚೋರ್ ಸಮುದಾಯ (ಸಂಶೋಧನೆ, 2016) ತತ್ವಪದ ಪ್ರವೇಶಿಕೆ (ಪ್ರೊ.ರಹಮತ್ ತರೀಕೆರೆ ಅವರ ಜತೆ ಸಹ ಸಂಪಾದಕ, 2017) ಓದು ಒಕ್ಕಾಲು ( ಸಾಹಿತ್ಯ ವಿಮರ್ಶೆ, 2020) ಕೊರೋನಾ ಜಾನಪದ (ನವಜಾನಪದ ಕುರಿತ ಸಂಶೋಧನ ಲೇಖನಗಳ ಸಂಕಲನ, 2020) ನಡುವೆ ಸುಳಿವ ಹೆಣ್ಣು ( ಮಂಜಮ್ಮ ಜೋಗತಿ ಅವರ ಆತ್ಮಕಥನದ ನಿರೂಪಣೆ, 2020)