ನಾನಿದ್ದಲ್ಲಿಂದ ಅಲ್ಲಿಗೆ ಹೋಗಲು 10 ನಿಮಿಷ ಬೇಕಿತ್ತು. ಅಲ್ಲಿಗೇ ಹೊರಟೆ. ‘ಮನೆಯಲ್ಲಿ ಎಲ್ಲರೂ ಕೂಡಿ ತಿನ್ನುವುದು ಒಳ್ಳೆಯದು’ ಎಂದು ಒಳತೋಟಿ ಹೇಳುತ್ತಿತ್ತು. ಆದರೆ ನಾನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹೋಗಿ ಒಂದು ಕಡೆ ಹುಲ್ಲುಹಾಸಿನ ಮೇಲೆ ಕುಳಿತು ಸ್ವಲ್ಪ ತಿನ್ನುವುದರೊಳಗಾಗಿ ಗಾರ್ಡ್ ಬಂದು ‘ಎಂಟು ಗಂಟೆ ಆಗಿದೆ’ ಎಂದು ಸೀಟಿ ಹೊಡೆದು ಎಚ್ಚರಿಸಿ ಹೊರಗೆ ಹೋಗಲು ಸೂಚಿಸಿದ. ಗಡಿಬಿಡಿಯಿಂದ ಎದ್ದು ಮನೆಯ ಹಾದಿ ಹಿಡಿದೆ. ಮಾಡಿದ ತಪ್ಪಿಗೆ ನಾಚಿಕೆ ಅನಿಸಿ ಬಾಯಿ ಕಹಿ ಆಗತೊಡಗಿತು.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 61ನೇ ಕಂತು ನಿಮ್ಮ ಓದಿಗೆ.
ಏಳನೆಯ ಇಯತ್ತೆಯ ಪರೀಕ್ಷೆ ಹತ್ತಿರ ಬರುವ ಸಮಯದಲ್ಲಿ ವಿಜಾಪುರದ ಹುಡುಗರು ಹೆಚ್ಚಾಗಿ ಗೋಲಗುಂಬಜ, ಬಾರಾಕಮಾನ, ಗಗನಮಹಲ, ಇಬ್ರಾಹಿಂ ರೋಜಾ ಮುಂತಾದ ಕಡೆಗಳಲ್ಲಿ ಓದಲು ಹೋಗುವುದು ವಾಡಿಕೆಯಾಗಿತ್ತು. ಅದಾಗಲೆ ಬೇಸಗೆ ಪ್ರಾರಂಭವಾದ ಕಾರಣ ಧಗೆಯನ್ನು ತಡೆಯಲಿಕ್ಕೆ ಆಗುತ್ತಿದ್ದಿಲ್ಲ. ಫ್ಯಾನ್ ಇರದ ಮತ್ತು ಫತ್ರೆ (ತಗಡು) ಹಾಕಿದ ಚಾವಣಿಯ ಮನೆಗಳಲ್ಲಿ ಹಾಗೂ ಹಳ್ಳಿಯಿಂದ ಬಂದ ವಿದ್ಯಾರ್ಥಿಗಳ ಪುಟ್ಟ ಕೋಣೆಗಳಲ್ಲಿ ಓದಲು ಆಗುತ್ತಿರಲಿಲ್ಲ. ಆಗ ಈ ಐತಿಹಾಸಿಕ ಕಟ್ಟಡಗಳ ಮತ್ತು ಅವುಗಳ ಸುತ್ತ ಇರುವ ಉದ್ಯಾನದಲ್ಲಿನ ಮರಗಳ ನೆರಳೇ, ಬಡ ಮತ್ತು ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಓದುವ ತಾಣವಾಗಿತ್ತು.
ಹಾಗೆ ಓದಲು ಹೋಗುವಾಗ ಬೇರೆ ಬೇರೆ ಶಾಲೆಯ ವಿದ್ಯಾರ್ಥಿಗಳ ಪರಿಚಯವಾಗುತ್ತಿತ್ತು. ಇಂಥ ಸಂದರ್ಭದಲ್ಲಿ ಬಾಬು ಗಚ್ಚಿನಕಟ್ಟಿ, ಅವರ ಅಕ್ಕನ ಮಗ ಸಿದ್ದು ಗೊರನಾಳ ಮತ್ತು ಆನಂದ ಕುಲಕರ್ಣಿ ಮುಂತಾದವರ ಪರಿಚಯವಾಯಿತು. ಇವರೆಲ್ಲ ಗೋಡಬೋಲೆ ಮಾಳಾ ಓಣಿಯ 2ನೇ ನಂಬರ್ ಶಾಲೆಯವರಾಗಿದ್ದರು. ಬಾಬು ಇವರೆಲ್ಲರಲ್ಲಿ ಹೆಚ್ಚು ಜಾಣ ವಿದ್ಯಾರ್ಥಿ ಎಂದು ಗುರುತಿಸಲಾಗಿತ್ತು. ನಾವೆಲ್ಲ ಗೆಳೆಯರಾದೆವು.
ಪರೀಕ್ಷೆ ಮುಗಿದ ಮೇಲೆ ರಜೆಯಲ್ಲಿ ಇವರೊಳಗಿನ ಬಾಬು ಗಚ್ಚಿನಕಟ್ಟಿ ಮಾತ್ರ ನನ್ನ ಜೊತೆ ಬಿಸ್ಕಿಟ್ ಕಾರ್ಖಾನೆಯಲ್ಲಿ ಕೆಲಸ ಮಾಡಿದ ನೆನಪು. ಯಾವುದೋ ಹಬ್ಬದ ಸಂದರ್ಭದಲ್ಲಿ ಕಾರ್ಖಾನೆ ಮಾಲೀಕರು, ಪಾವ ಕಿಲೊ ಸ್ಟೀಟ್ಸ್ ಪಾಕೆಟ್ ಮತ್ತು 5 ರೂಪಾಯಿ ಕಾಣಿಕೆಯಾಗಿ ಕೊಟ್ಟರು. ನನಗೋ ಸ್ಟೀಟ್ಸ್ ಎಂದರೆ ಪಂಚಪ್ರಾಣ. ತಿನ್ನುವ ತವಕ ಹೆಚ್ಚಿತು. ರಾತ್ರಿ 7 ಗಂಟೆಯಾಗಿತ್ತು. ಎಲ್ಲಿ ಕುಳಿತು ತಿನ್ನುವುದು ಎಂಬ ಯೋಚನೆ ಬಂತು. ಗಗನಮಹಲ ಗಾರ್ಡನ್‌ಗೆ ಹೋಗುವುದು ಒಳ್ಳೆಯದು ಎನಿಸಿತು. ನಾನಿದ್ದಲ್ಲಿಂದ ಅಲ್ಲಿಗೆ ಹೋಗಲು 10 ನಿಮಿಷ ಬೇಕಿತ್ತು. ಅಲ್ಲಿಗೇ ಹೊರಟೆ. ‘ಮನೆಯಲ್ಲಿ ಎಲ್ಲರೂ ಕೂಡಿ ತಿನ್ನುವುದು ಒಳ್ಳೆಯದು’ ಎಂದು ಒಳತೋಟಿ ಹೇಳುತ್ತಿತ್ತು. ಆದರೆ ನಾನು ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ಹೋಗಿ ಒಂದು ಕಡೆ ಹುಲ್ಲುಹಾಸಿನ ಮೇಲೆ ಕುಳಿತು ಸ್ವಲ್ಪ ತಿನ್ನುವುದರೊಳಗಾಗಿ ಗಾರ್ಡ್ ಬಂದು ‘ಎಂಟು ಗಂಟೆ ಆಗಿದೆ’ ಎಂದು ಸೀಟಿ ಹೊಡೆದು ಎಚ್ಚರಿಸಿ ಹೊರಗೆ ಹೋಗಲು ಸೂಚಿಸಿದ. ಗಡಿಬಿಡಿಯಿಂದ ಎದ್ದು ಮನೆಯ ಹಾದಿ ಹಿಡಿದೆ. ಮಾಡಿದ ತಪ್ಪಿಗೆ ನಾಚಿಕೆ ಅನಿಸಿ ಬಾಯಿ ಕಹಿ ಆಗತೊಡಗಿತು. ತಾಯಿಗೆ ಸ್ಟೀಟ್ಸ್‌ಗಿಂತಲೂ ಆ 5 ರೂಪಾಯಿ, 5 ಸೊಲಗಿ ಜೋಳದಷ್ಟು ದೊಡ್ಡದಾಗಿ ಕಾಣತೊಡಗಿತು!
ಬಿಸ್ಕಿಟ್ ಕಾರ್ಖಾನೆಯಲ್ಲಿ 40 ದಿನ ದುಡಿದದ್ದಕ್ಕೆ 40 ರೂಪಾಯಿ ಕೂಲಿ ಬಂದಿತು. ಏಳು ರೂಪಾಯಿಗೆ ಒಂದು ರೀಮ್ (ಡಬಲ್ ಎ ತ್ರೀ ಸೈಜಿನ 480 ಹಾಳೆಗಳು) ಪೇಪರ್ ಬರುತ್ತಿತ್ತು. ಅಷ್ಟೊಂದು ಪೇಪರ್‌ನಲ್ಲಿ ವರ್ಷಕ್ಕೆ ಆಗುವಷ್ಟು ನೋಟುಬುಕ್‌ಗಳನ್ನು ರೆಡಿ ಮಾಡಿಕೊಂಡೆ. ಸೇಂದಿಗಿಡದ ಗರಿಗಳಿಂದ ಮಾಡಿದ ಚಾಪೆಯ ಮೇಲೆ ಹಾಸಿಕೊಳ್ಳಲು ಒಂದು ಜಮಖಾನೆ ಕೊಂಡೆ. ಮೊದಲ ಬಾರಿಗೆ ಒಂದು ಜೋಡು ಚಪ್ಪಲಿ ಹೊಲೆಯಲು ಹಾಕಿದೆ. ನನ್ನ ಗೆಳೆಯ ಬಾಬು ಹೊಸಮನಿ ಚಪ್ಪಲಿ ತಯಾರಿಸಿ ಕೊಟ್ಟ. ಆತ ಚಪ್ಪಲಿ ತಯಾರಕರ ಚಪ್ಪರದಲ್ಲಿ ಚಪ್ಪಲಿ ಹೊಲಿಯುವ ಕಾಯಕ ಮಾಡುತ್ತಿದ್ದ. ಎಂಟು ರೂಪಾಯಿಗೆ ಗಟ್ಟಿಮುಟ್ಟಾದ ಚಪ್ಪಲಿ ತಯಾರಾದವು. ಆತನ ಪ್ರೀತಿಯೂ ಸೇರಿದ್ದರಿಂದ ಅವು ಚೂಪಾಗಿ ಬಹಳ ಆಕರ್ಷಕವಾಗಿದ್ದವು.
ಸಾಯಂಕಾಲ ಅವನ ಕೆಲಸ ಮುಗಿದ ಮೇಲೆ ನಾವಿಬ್ಬರೂ ವಾರಕ್ಕೆ ಕನಿಷ್ಠ ಒಂದು ಸಲ ಯಾವುದಾದರೂ ಗಾರ್ಡನ್ ಕಡೆಗೆ ಹೋಗುತ್ತಿದ್ದೆವು. ಒಂದೊಂದು ಸಲ ದೂರದ ಗೋಲಗುಂಬಜ್ ಗಾರ್ಡನ್‌ವರೆಗೆ ಹೋಗುತ್ತಿದ್ದುದುಂಟು.
ಆದಿಲಶಾಹಿ ರಾಜರುಗಳು ಉದ್ಯಾನಪ್ರಿಯರಾಗಿದ್ದರು. ಅವರು ಕಟ್ಟಿಸಿದ ಎಲ್ಲ ಇಮಾರತುಗಳ ಸುತ್ತ ಉದ್ಯಾನ ಬೆಳೆಸುತ್ತಿದ್ದರು. ಪ್ರತಿಯೊಂದು ಇಮಾರತಿನ ಮುಂದೆ ಪುಷ್ಕರಣಿ ಕಟ್ಟಿಸಿ ಕಾರಂಜಿಯ ವ್ಯವಸ್ಥೆ ಮಾಡುತ್ತಿದ್ದರು. ಬೇಗಂ ತಾಲಾಬ್ ಮುಂತಾದ ಕಡೆಗಳಿಂದ ಆ ಪುಷ್ಕರಣಿಗಳಿಗೆ ನೀರು ಸರಬರಾಜು ವ್ಯವಸ್ಥೆ ಇತ್ತು. ವಿಜಾಪುರ ನಗರದ ವಿವಿಧ ಕಡೆಗಳಲ್ಲಿ ಎತ್ತರದ ನೀರಿನ ಗಂಜ್ ಕಟ್ಟಿಸಿ ಅಲ್ಲಿಗೂ ನೀರಿನ ಪೂರೈಕೆಯ ವ್ಯವಸ್ಥೆ ಮಾಡಲಾಗಿತ್ತು. ರೋಮ್ ನಗರವೊಂದನ್ನು ಬಿಟ್ಟರೆ ಹೀಗೆ ನಗರ ನೀರು ಪೂರೈಕೆ ವ್ಯವಸ್ಥೆ ಜಗತ್ತಿನ ಯಾವ ಭಾಗದಲ್ಲೂ ಇರಲಿಲ್ಲ ಎಂದು ಐತಿಹಾಸಿಕ ದಾಖಲೆಗಳು ಸೂಚಿಸುತ್ತವೆ. ವಿಜಾಪುರದ ಬಗೀಚೆಗಳು ದೆಹಲಿಯ ಮೊಘಲ್ ಉದ್ಯಾನವನಗಳಿಗಿಂತ ಹಳೆಯವು. 1489ರಲ್ಲಿ ವಿಜಾಪುರದಲ್ಲಿ ಆದಿಲಶಾಹಿ ರಾಜಮನೆತನದ ಆಳ್ವಿಕೆಯನ್ನು ಯೂಸುಫ್ ಆದಿಲಖಾನ್ ಆರಂಭಿಸಿದಮೇಲೆ ತನ್ನ ದರ್ಬಾರಿನ ಎಲ್ಲ ಉನ್ನತ ಅಧಿಕಾರಿಗಳ ಮನೆಗಳ ಮುಂದೆ ಉದ್ಯಾನವನದ ವ್ಯವಸ್ಥೆ ಮಾಡಿದ್ದ. ಹೀಗಾಗಿ ಆ ಕಾಲದಲ್ಲಿ ನೀರಿನ ವ್ಯವಸ್ಥೆಯೊಂದಿಗೆ ವಿಜಾಪುರ ನಿಜವಾದ ಉದ್ಯಾನ ನಗರಿಯಾಗಿತ್ತು. 1686ರಲ್ಲಿ ಔರಂಗಜೇಬನ ದಾಳಿಯಿಂದಾಗಿ ಆದಿಲಶಾಹಿ ಆಡಳಿತ ಅಂತ್ಯಗೊಂಡಿತು. ಆಗ ದೊರೆಯಾಗಿದ್ದ ಸಿಕಂದರ ಆದಿಲಶಾಹಿಯನ್ನು ಗಗನಮಹಲದಲ್ಲಿ ಬಂಧಿಸಿ, ಬಂಗಾರದ ಬೇಡಿ ತೊಡಿಸಿ ಕರೆದೊಯ್ಯಲಾಯಿತು. ಆ ಸಂದರ್ಭದಲ್ಲಿ ಆತ 18 ವರ್ಷದ ಯುವಕ.
ನಾನು ಮತ್ತು ಬಾಬು ಹೊಸಮನಿ ಕೂಡಿ ಗಾರ್ಡನ್ ಮತ್ತಿತರ ಸ್ಥಳಗಳಲ್ಲಿ ಸುತ್ತಾಡಿದ ನಂತರ, ಅವನ ಮನೆಗೆ ಹೋಗುವಾಗ ಬಜಾರಲ್ಲಿ ಹಸಿ ಉಳ್ಳೆಗಡ್ಡಿ, ಮೆಂತೆಪಲ್ಲೆ, ಗಜ್ಜರಿ, ಮೂಲಂಗಿ, ಮುಳಗಾಯಿ (ಬದನೆ) ಖರೀದಿ ಮಾಡಿಕೊಂಡು ಹೋಗುತ್ತಿದ್ದೆವು. ಬಾಬೂನ ತಾಯಿ ಅವುಗಳನ್ನು ತೊಳೆದು ಕತ್ತರಿಸಿ ಪಾತ್ರೆಯಲ್ಲಿಟ್ಟ ನಂತರ ಬಿಸಿ ಬಿಸಿ ರೊಟ್ಟಿ ತಯಾರಿಸಿಕೊಡುತ್ತಿದ್ದಳು. ಖಾರಬ್ಯಾಳಿ ಜೊತೆ ರೊಟ್ಟಿ ಕಲಿಸಿ ಊಟಮಾಡುವಾಗ, ನಾವು ತಂದ ಕಾಯಿಪಲ್ಲೆಗಳು ಹಸಿಹಸಿಯಾಗಿಯೆ ತಿನ್ನಲು ಸಿದ್ಧವಾಗಿರುತ್ತಿದ್ದವು. (ನಾನು ಬಹಳ ವರ್ಷಗಳ ನಂತರ ಬೆಂಗಳೂರು ಸೇರಿದಾಗ, ‘ಹಸಿಬದನೆಯನ್ನೂ ತಿನ್ನುತ್ತೀರಾ’ ಎಂದು ಒಬ್ಬ ಸಹೋದ್ಯೋಗಿ ಕೇಳಿದ್ದ.)
ಹಾಗೆ ಗೆಳೆಯರೊಡನೆ ತಿನ್ನುವ ಮಜವೇ ಬೇರೆ. ಅಂಥ ಪ್ರಸಂಗದಲ್ಲಿ ಹೆಚ್ಚಿಗೆ ಊಟ ಹೋಗುವುದು. ಗೆಳೆಯರ ಜೊತೆ ಊಟ ಮಾಡುವ ತೀವ್ರತೆ ಹೆಚ್ಚಾದಾಗ, ಜೊತೆಯಲ್ಲಿ ಊಟ ಮಾಡುವುದಕ್ಕೆ ಗೆಳೆಯರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಯಾರೂ ಸಿಗದಿದ್ದಾಗ ಅಥವಾ ‘ಊಟ ಆಗಿದೆ’ ಎಂದು ಅವರು ಹೇಳುವುದನ್ನು ಕೇಳಿದಾಗ ನಿರಾಶೆಯಿಂದ ಮನೆಗೆ ಬಂದು ಒಬ್ಬನೇ ಊಟ ಮಾಡುತ್ತಿದ್ದೆ.
ಬಾಬು ಹೊಸಮನಿ ಮನೆಯಿಂದ ನಮ್ಮ ನಾವಿಗಲ್ಲಿ ಮನೆ ಅರ್ಧ ಕಿಲೊ ಮೀಟರ್‌ನಷ್ಟು ದೂರದಲ್ಲಿತ್ತು. ಊಟ ಮುಗಿಯುವುದರೊಳಗಾಗಿ 9 ಗಂಟೆಯಾಗುತ್ತಿತ್ತು. ಅಷ್ಟೊಂದು ತಿಂದ ಕಾರಣಕ್ಕೆ ರಾತ್ರಿಯಾಗಿದ್ದಕ್ಕೆ ನಿದ್ದೆ ಬರುತ್ತಿತ್ತು. ಬಾಬು, ನನ್ನ ಮನೆಯವರೆಗೆ ಬಿಡಲು ಬರುತ್ತಿದ್ದ. ನಾನು ಆತನ ಹೆಗಲ ಮೇಲೆ ತಲೆಯಿಟ್ಟು ಕುಡಿದವರ ಹಾಗೆ ಅರೆಬರೆ ನಿದ್ದೆ ಮಾಡುತ್ತ ಹೆಜ್ಜೆ ಹಾಕುತ್ತಿದ್ದೆ. ಮನೆ ಬಂದ ನಂತರ ಆತ ಚಾಪೆಯ ಮೇಲೆ ಮಲಗಿಸಿ ವಾಪಸಾಗುತ್ತಿದ್ದ.
ಬಾಬು ಹೊಸಮನಿಯ ಮನೆ ಮುಂದೆ ಮುಸ್ಲಿಮರ ಒಂದು ಹಳೆ ಶೈಲಿಯ ಮನೆ ಇತ್ತು. ದೊಡ್ಡದಾದ ಆ ಮನೆ ಗಟ್ಟಿಮುಟ್ಟಾಗಿತ್ತು. ಮಧ್ಯವಯಸ್ಸಿನ ಧಾಡಸಿ ಅಣ್ಣ ತಮ್ಮಂದಿರು ಹೆಂಡಿರು ಮಕ್ಕಳ ಜೊತೆ ವಾಸವಾಗಿದ್ದರು. ಹೊಡೆದಾಟಕ್ಕೆ ಸದಾ ಸಿದ್ಧರಾಗಿರುವಂಥ ಹಾವಭಾವವನ್ನು ಅವರು ಹೊಂದಿದವರಾಗಿದ್ದರು. ಮೊಹರಂ ವೇಳೆ ಒಬ್ಬ ಸಹೋದರ ಹುಲಿವೇಷ ಹಾಕುತ್ತಿದ್ದ. ಚಿಗರೆಯ ಕೋಡುಗಳಿಂದ ತಯಾರಿಸಿದ ಆಯುಧಗಳನ್ನು ಎರಡೂ ಕೈಯಲ್ಲಿ ಹಿಡಿದು ಕುಣಿಯುವ ಗತ್ತು ಆಕರ್ಷಕವಾಗಿತ್ತು. ಹಲಗೆಯ ಬಡಿತಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತ ಭೀಕರ ಮುಖಮಾಡಿ ಕುಣಿಯುತ್ತಿದ್ದ. ಅದು ಮದ್ಯ ನಿಷೇಧದ ಕಾಲ. ಆಗ ಈ ಮನೆಯವರು ಕಳ್ಳಭಟ್ಟಿ ವ್ಯವಹಾರ ಮಾಡುತ್ತಿದ್ದರು ಎಂದು ಜನ ಗುಸುಗುಸು ಮಾತನಾಡುತ್ತಿದ್ದರು.
ಹಾಗೆ ಗೆಳೆಯರೊಡನೆ ತಿನ್ನುವ ಮಜವೇ ಬೇರೆ. ಅಂಥ ಪ್ರಸಂಗದಲ್ಲಿ ಹೆಚ್ಚಿಗೆ ಊಟ ಹೋಗುವುದು. ಗೆಳೆಯರ ಜೊತೆ ಊಟ ಮಾಡುವ ತೀವ್ರತೆ ಹೆಚ್ಚಾದಾಗ, ಜೊತೆಯಲ್ಲಿ ಊಟ ಮಾಡುವುದಕ್ಕೆ ಗೆಳೆಯರನ್ನು ಹುಡುಕಿಕೊಂಡು ಹೋಗುತ್ತಿದ್ದೆ. ಯಾರೂ ಸಿಗದಿದ್ದಾಗ ಅಥವಾ ‘ಊಟ ಆಗಿದೆ’ ಎಂದು ಅವರು ಹೇಳುವುದನ್ನು ಕೇಳಿದಾಗ ನಿರಾಶೆಯಿಂದ ಮನೆಗೆ ಬಂದು ಒಬ್ಬನೇ ಊಟ ಮಾಡುತ್ತಿದ್ದೆ.
ಏಳನೆಯ ಇಯತ್ತೆ ರಿಜಲ್ಟ್ ಬಂದಮೇಲೆ ಗಚ್ಚಿನಕಟ್ಟಿ ಬಾಬು ಮುಂತಾದ ಗೆಳೆಯರು ಪಿ.ಡಿ.ಜೆ. ಹೈಸ್ಕೂಲ್‌ಗೆ ಹೋದರು. ನಾನು 1910ರಲ್ಲಿ ಪ್ರಾರಂಭವಾದ ಬಿ.ಎಲ್.ಡಿ.ಇ. ಸಂಸ್ಥೆಯ ಶ್ರೀ ಸಿದ್ಧೇಶ್ವರ (ಎಸ್.ಎಸ್.) ಹೈಸ್ಕೂಲ್‌ಗೆ ಹೋದೆ. ಆದರೆ ಪದೆ ಪದೆ ಈ ಗೆಳೆಯರಿಗಾಗಿ ಪಿಡಿಜೆ ಹೈಸ್ಕೂಲ್ ಕಡೆ ಹೋಗುತ್ತಿದ್ದೆ. ಪಿಡಿಜೆ ಹೈಸ್ಕೂಲ್‌ನಲ್ಲಿ ಎಸ್.ಎಸ್. ಕುಲಕರ್ಣಿ ಸರ್ ಬಿಡುವಿನ ವೇಳೆಯಲ್ಲಿ ಭಗವದ್ಗೀತೆ ಹೇಳಿಕೊಡುತ್ತಿದ್ದರು. ಎಸ್.ಎಸ್. ಹೈಸ್ಕೂಲಿನಿಂದ ಆ ಹೈಸ್ಕೂಲು ದೂರವಿದ್ದರೂ ಅದು ಹೇಗೆ ಹೋಗಿ ಅವರ ಭಗವದ್ಗೀತೆ ಪಾಠ ಕೇಳುತ್ತಿದ್ದೆನೊ ನೆನಪಾಗುತ್ತಿಲ್ಲ. ಜ್ಞಾನಯೋಗದ ಚತುರ್ಥ ಅಧ್ಯಾಯವನ್ನು ಸಂಪೂರ್ಣವಾಗಿ ಲಯಬದ್ಧವಾಗಿ ಹೇಳುತ್ತಿದ್ದೆ. “ನ ಹಿ ಜ್ಞಾನೇನ ಸದೃಶಂ, ಪವಿತ್ರಮಿಹ ವಿದ್ಯತೇ” ಎಂಬ ಸಾಲು ನನಗೆ ಅಚ್ಚುಮೆಚ್ಚಿನದಾಗಿತ್ತು.
ಪಿಡಿಜೆ ಹೈಸ್ಕೂಲ್ ಸಮೀಪದ ಹವೇಲಿಗಲ್ಲಿಯಲ್ಲಿ ಉಡಾಳ ಮುಸ್ಲಿಂ ಹುಡುಗರ ತಂಡವೊಂದಿತ್ತು. ಆ ತಂಡದ ನಾಯಕನಾಗಿದ್ದ ಯುವಕ ಹಿಂದಿ ಸಿನೇಮಾದ ಹೀರೋ ಹಾಗೆ ಇದ್ದ. ಹವೇಲಿಗಲ್ಲಿ ದಾಟಿ ಪಿಡಿಜೆ ಹೈಸ್ಕೂಲಿಗೆ ಹೋಗುವ ಒಬ್ಬ ಸುಂದರ ಬ್ರಾಹ್ಮಣ ಕನ್ಯೆ, ಬಾಬು ಹೊಸಮನಿಯ ಮನೆ ಸಮೀಪದ ಚಾಳದಲ್ಲಿದ್ದಳು. ಆ ಚಾಳ ಒಂದು ಭವ್ಯ ಬಂಗಲೆಯ ಹಾಗೆ ಇತ್ತು. ಒಂದು ದಿನ ಹವೇಲಿಗಲ್ಲಿ ದಾಟಿ ಪಿಡಿಜೆ ಹೈಸ್ಕೂಲ್ ಕಡೆಗೆ ಹೋಗುವಾಗ, ಆ ಹುಡುಗಿ ಆ ಉಡಾಳ ಹುಡುಗರ ನಾಯಕನ ಜೊತೆ ಅನ್ಯೋನ್ಯವಾಗಿ ನಿಂತಿದ್ದನ್ನು ನೋಡಿದೆ!
ನಾನು ಕಲಿತ ಎಸ್.ಎಸ್. ಹೈಸ್ಕೂಲಿನ ಬಗ್ಗೆ ನನಗೆ ಬಹಳ ಹೆಮ್ಮೆ ಇದೆ. ವಚನ ಸಂಪಾದನಾ ಪಿತಾಮಹ ಫ.ಗು. ಹಳಕಟ್ಟಿ, ರಾವಸಾಹೇಬ ಸಿದ್ರಾಮಪ್ಪ ಲಕ್ಷ್ಮೇಶ್ವರ ಮುಂತಾದ ಮಹಾನುಭಾವರು ತನುಮನಧನದೊಂದಿಗೆ ಶ್ರಮವಹಿಸಿ ಪೂರ್ಣಗೊಳಿಸಿದ ಎಸ್.ಎಸ್. ಹೈಸ್ಕೂಲ್ ಕಟ್ಟಡ ಭವ್ಯವಾಗಿದ್ದು ನಯನಮನೋಹರವಾಗಿದೆ. ಆ ಕಾಲದಲ್ಲೇ ಆರು ಎಕರೆ ಜಾಗದಲ್ಲಿ ಸಕಲ ಸೌಲಭ್ಯಗಳಿಂದ ಕೂಡಿದ್ದ ಹೈಸ್ಕೂಲ್ ಅದು. ಬಿ.ಎಲ್.ಡಿ.ಇ. ಶಿಕ್ಷಣ ಸಂಸ್ಥೆಗಾಗಿ ಅಡತಿ ಅಂಗಡಿ ಮಾಲೀಕರು ರೈತರಿಂದ ಹಣಸಂಗ್ರಹಿಸಿದ್ದು ಕೂಡ ಈ ಕಟ್ಟಡ ಕಟ್ಟಲು ಸಹಾಯಕವಾಗಿದೆ. ಹೀಗಾಗಿ ಇದು ಮುಖ್ಯವಾಗಿ ಹಳ್ಳಿಗಾಡಿನಿಂದ ಬರುವ ವಿದ್ಯಾರ್ಥಿಗಳ ಮತ್ತು ನಗರದ ಬಡ ಮನೆತನಗಳ ವಿದ್ಯಾರ್ಥಿಗಳ ಹೈಸ್ಕೂಲ್ ಆಗಿ ಬೆಳೆಯಿತು. ಈ ಹೈಸ್ಕೂಲ್ ಫೀ ಕೂಡ ಕಡಿಮೆ ಇತ್ತು. ನಾನು ಎಂಟನೇ ಇಯತ್ತೆಯ ‘ಡಿ’ ಕ್ಲಾಸಿನ ವಿದ್ಯಾರ್ಥಿಯಾಗಿ ಪ್ರವೇಶ ಪಡೆದೆ.
ಈ ಹೈಸ್ಕೂಲು ಹಳ್ಳಿಗರ ಮಕ್ಕಳಿಗೆ ವರದಾನವಾಯಿತು. ಹಳ್ಳಿಯ ಮಕ್ಕಳು ಶಿಕ್ಷಣ ಪಡೆಯುವಲ್ಲಿ ಕೆಎಸ್‍ಆರ್‍ಟಿಸಿ ಬಸ್‌ಗಳ ಪಾತ್ರವೂ ಮಹತ್ವದ್ದಾಗಿದೆ. ವಿಜಾಪುರದ ಬಸ್‌ಸ್ಟ್ಯಾಂಡ್ ಮೂಲೆಯಲ್ಲಿ ಊಟದ ಡಬ್ಬಿಗಳನ್ನು ಸಂಗ್ರಹಿಸುವ ಒಂದು ಚಿಕ್ಕ ಷೆಡ್ ಇತ್ತು. ಅದರ ಉಸ್ತುವಾರಿಗಾಗಿ ಖಾಸಗಿಯವರು ಇರುತ್ತಿದ್ದರು. ಹಳ್ಳಿಯ ವಿದ್ಯಾರ್ಥಿಗಳಿಗಾಗಿ ಈ ವ್ಯವಸ್ಥೆಯನ್ನು ಮಾಡಲಾಗಿತ್ತು. ಎಲ್ಲ ಹಳ್ಳಿಗಳಿಂದ ಸಾರಿಗೆ ಸಂಸ್ಥೆಯ ಕೆಂಪು ಬಸ್ ಬರುತ್ತಿದ್ದವು. ವಿಜಾಪುರಕ್ಕೆ ಕಲಿಯಲು ಕಲಿಸಿದ ಮಕ್ಕಳ ಪಾಲಕರು ತಗಡಿನ ಡಬ್ಬಿಗಳಲ್ಲಿ ಬುತ್ತಿ ಕಳಿಸುತ್ತಿದ್ದರು. ಆ ಡಬ್ಬದ ಮೇಲೆ ವಿದ್ಯಾರ್ಥಿಯ ಹೆಸರು ಮತ್ತು ಆತನ ಹಳ್ಳಿಯ ಹೆಸರು ಇರುತ್ತಿತ್ತು. ಎಲ್ಲ ಕಡೆಗಳಿಂದ ಬರುವ ಬಸ್‌ಗಳಲ್ಲಿನ ಡಬ್ಬಿಗಳನ್ನು ಉಸ್ತುವಾರಿ ಮಾಡುವವರು ಸಂಗ್ರಹಿಸಿ ಷೆಡ್‌ಗೆ ತರುತ್ತಿದ್ದರು. ವಿದ್ಯಾರ್ಥಿಗಳು ಮಧ್ಯಾಹ್ನದ ಊಟದ ಸಮಯದಲ್ಲಿ ಬಸ್‌ಸ್ಟ್ಯಾಂಡ್‌ಗೆ ಹೋಗಿ ತಮ್ಮ ಡಬ್ಬಿಯನ್ನು ತಂದು ಊಟ ಮಾಡುತ್ತಿದ್ದರು. ಷೆಡ್‌ನಲ್ಲಿ ಒಂದೊಂದು ಹಳ್ಳಿಯಿಂದ ಬರುವ ಡಬ್ಬಿಗಳನ್ನು ಒತ್ತಟ್ಟಿಗೆ ಇಡುತ್ತಿದ್ದರು. ವಿದ್ಯಾರ್ಥಿಗಳು ಬಂದ ಕೂಡಲೆ ಅವರಿಗೆ ಸಂಬಂಧಿಸಿದ ಡಬ್ಬಿಗಳನ್ನು ಕೊಡುತ್ತಿದ್ದರು.
ಪ್ರತಿದಿನದ ಈ ಕಾರ್ಯಕ್ಕಾಗಿ ಪ್ರತಿ ವಿದ್ಯಾರ್ಥಿ ತಿಂಗಳಿಗೆ ಬಹಳವೆಂದರೆ 3 ರೂಪಾಯಿ ಕೊಡುತ್ತಿದ್ದ ನೆನಪು. ಮಕ್ಕಳ ಡಬ್ಬಿಗಳನ್ನು ತರುವ ಬಸ್ ಚಾಲಕರು, ಕಂಡಕ್ಟರ್‌ಗಳು, ಡಬ್ಬಿಗಳನ್ನು ಸಂಗ್ರಹಿಸುವವರು ಮತ್ತು ಶಿಕ್ಷಣಕ್ಕೆ ಆಸರೆಯಾದ ಅನೇಕ ಮಹಾಪುರುಷರು ಮುಂತಾದವರನ್ನು ಈ ವಿದ್ಯಾರ್ಥಿಗಳು ಮುಂದೆ ಹೆಚ್ಚಿನ ವಿದ್ಯೆ ಕಲಿತು ವಿವಿಧ ನೌಕರಿ ಮಾಡುತ್ತ ಭವಿಷ್ಯ ರೂಪಿಸಿಕೊಂಡ ನಂತರ ನೆನಪಿಸಿಕೊಂಡಿರಬಹುದೆ? ಈ ಡಬ್ಬಿ ತರಿಸುವ ವಿದ್ಯಾರ್ಥಿಗಳಲ್ಲಿ ಖಂಡಿತವಾಗಿಯೂ ಶೇಕಡಾ 90 ರಷ್ಟು ವಿದ್ಯಾರ್ಥಿಗಳು ಎಸ್.ಎಸ್. ಹೈಸ್ಕೂಲಿನವರೇ ಆಗಿದ್ದರು!
ನಾನು ಎಂದೂ ಕ್ಲಾಸಿಗೆ ತಡಮಾಡಿ ಹೋಗುತ್ತಿರಲಿಲ್ಲ. ಚೆನ್ನಾಗಿ ಓದುವ ಹಂಬಲವಿತ್ತು. ಇನ್ನೊಂದು ಮುಖ್ಯ ಕಾರಣವೆಂದರೆ, ‘ಮೇ ಆಯ್ ಕಮಿನ್ ಸರ್’ ಎಂದು ಹೇಳಲು ಬರುತ್ತಿರಲಿಲ್ಲ. ನಮ್ಮ ಇಂಗ್ಲಿಷ್ ಟೀಚರ್ ‘ಇವನ ಹಾಗೆ ಶಿಸ್ತು ಪಾಲಿಸಬೇಕು’ ಎಂದು ನನ್ನನ್ನು ತೋರಿಸಿ ಹೇಳುತ್ತಿದ್ದರು. ಅಂತೂ ‘ಮೇ ಆಯ್ ಕಮಿನ್ ಸರ್’ ಎಂದು ಹೇಳುವುದನ್ನು ಬಾಯಿಪಾಠ ಮಾಡಿದೆ. ಇನ್ನು ಅದನ್ನು ಪ್ರಯೋಗಿಸುವುದಕ್ಕಾಗಿ ಒಂದು ದಿನ ಉದ್ದೇಶಪೂರ್ವಕವಾಗಿಯೆ ತಡಮಾಡಿ ಹೋಗಿ ‘ಮೇ ಆಯ್ ಕಮಿನ್ ಸರ್’ ಎಂದೆ. ‘ಏಕೆ ತಡ’ ಎಂದು ಟೀಚರ್ ಕೇಳಿದರು. ‘ನನಗೀಗ ಹೇಳಲು ಬರುತ್ತದೆ ಸರ್’ ಎಂದೆ ವಿದ್ಯಾರ್ಥಿಗಳ ಸಮೇತ ಅವರೂ ನಕ್ಕರು.
(ಚಿತ್ರಗಳು: ಸುನೀಲಕುಮಾರ ಸುಧಾಕರ)
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.