ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚುಹಚ್ಚಿದವರು ವೈದೇಹಿ. ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ. ಇವರೊಳಗೆ ಸ್ಪೋಟಕ್ಕೆ ಕಾದಿದ್ದ ಇಂಥಾ ಕಾವು ಇತ್ತಾ? ಎಂದು ನಿಬ್ಬೆರಗಾಗುವಂತೆ ಮಾಡಿದವರು ಅವರು.ಹೆಂಗಸರ ಮೂಕಸಂಕಟಗಳ ಲೋಕದ ಪರದೆ ಸರಿಸಿಬಿಟ್ಟವರು.
ಡಾ. ಗೀತಾ ವಸಂತ ಬರೆದ ವೈದೇಹಿ ಬರಹಗಳ ಆತ್ಮೀಯ ರಸಗ್ರಹಣ.
ಮೊನ್ನೆ ಮಣಿಪಾಲವನ್ನು ಹಾಯ್ದು ಬರುವಾಗ ಥಟ್ಟನೆ ವೈದೇಹಿ ನೆನಪಾದರು.ಮುಸ್ಸಂಜೆಯ ಬಣ್ಣಗಳಲ್ಲಿ ತೊಯ್ದು ಹೈವೇಯಿಂದ ಒಳಸರಿದು ಅವರ ಮನೆ ‘ಇರುವಂತಿಗೆ’ಯ ಮುಂದೆ ನಿಂತಾಗ ದೀಪಗಳು ಹೊತ್ತಿಕೊಂಡವು. ಹೆಣ್ಣಿನ ಒಳಜಗತ್ತನ್ನು ಕನ್ನಡ ಕಥಾಲೋಕದ ಜಗುಲಿಗೆ ತಂದು ನಿಲ್ಲಿಸಿದ ವೈದೇಹಿ ನಮ್ಮನ್ನು ಹೊಸಿಲೊಳಗೆ ಬರಮಾಡಿಕೊಂಡರು. ಮೆತ್ತಗಿನ ಕಾಟನ್ ಸೀರೆಯುಟ್ಟ ಪುಟ್ಟಜೀವ. ಚುರುಕು ಕಣ್ಣಲ್ಲಿ ಚೂಪು ನೋಟ. ಅಷ್ಟೇ ಖಚಿತ ಮಾತು. ಒಳಗೆ ಅಂತರಗಂಗೆಯಂಥ ಝುಳು ಝುಳು ಪ್ರೀತಿ. ಮಕ್ಕಳು, ಮನೆ, ವೃತ್ತಿ, ಬರವಣಿಗೆ ಹೀಗೆ ಎಲ್ಲ ಲೌಕಿಕ ಉಪದ್ವ್ಯಾಪಗಳ ಬಗ್ಗೆ ವಿಚಾರಿಸಿಕೊಂಡು, ಬೇಡಬೇಡವೆಂದರೂ ಸಿಹಿ ಅವಲಕ್ಕಿ ಮೊಸರು ತಿನಿಸಿ ಅಮ್ಮನ ವಾತ್ಸಲ್ಯವನ್ನು ನೆನಪಿಸಿದರು.
ಹದಿಹರೆಯದ ದಿನಗಳಲ್ಲಿ ಓದಿನ ಕಿಚ್ಚುಹಚ್ಚಿದವರು ವೈದೇಹಿ. ಹಾಗೆ ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ. ಇವರೊಳಗೆ ಸ್ಪೋಟಕ್ಕೆ ಕಾದಿದ್ದ ಇಂಥಾ ಕಾವು ಇತ್ತಾ? ಎಂದು ನಿಬ್ಬೆರಗಾಗುವಂತೆ ಮಾಡಿದ ವೈದೇಹಿ, ಹೆಂಗಸರ ಮೂಕಸಂಕಟಗಳ ಲೋಕದ ಪರದೆ ಸರಿಸಿಬಿಟ್ಟರು. ಸದ್ದಿಲ್ಲದ ಚೀತ್ಕಾರವನ್ನು ಹೀಗೂ ಕೇಳಬಹುದೆಂದು ತಿಳಿಸಿದರು. ಇವೆಲ್ಲ ಕಟ್ಟಿದ ಕತೆಗಳ ಲೋಕವಲ್ಲ; ಕಾಣುವ ಲೋಕದ ಕತೆಗಳಿವು. ಆ ಪಾತ್ರಗಳ ಭುಸುಗಡುವಿಕೆ, ನಿಟ್ಟುಸಿರು, ಒಳಗೊಳಗೇ ನುಂಗಿಕೊಂಡ ಬಿಕ್ಕುಗಳು ಎಲ್ಲವೂ ಕೇಳಿಸುವಂತೆ ಅವರು ಸಂವೇದನೆಯನ್ನೇ ಸೂಕ್ಷ್ಮಗೊಳಿಸಿದರು.
ಕತೆಗಳನ್ನು ತಣ್ಣಗೆ ಕತೆಯಾಗಿ ಕೇಳುವುದಕ್ಕೂ ಅವುಗಳೊಡನೆ ಧಗಧಗಿಸುತ್ತ ಹೋಗುವುದಕ್ಕೂ ವ್ಯತ್ಯಾಸವಿದೆ. ಸೀತೆ, ಸಾವಿತ್ರಿ, ಅಹಲ್ಯೆ, ದ್ರೌಪದಿ, ಮಂಡೋದರಿ.. ಹೀಗೆ ಎಷ್ಟೋ ಪಾತ್ರಗಳನ್ನು ನಮ್ಮ ಕಾಲ-ದೇಶಗಳಿಂದ ಹೊರಗಿಟ್ಟು ನೋಡುತ್ತ ಬಂದ ನಮಗೆ ಅವರನ್ನು ನಮ್ಮ ಸುತ್ತಮುತ್ತಲೇ ಕಾಣುವ ಬಗೆಯನ್ನು ಈ ವೈದೇಹಿ ಕಲಿಸಿದರು. ನಮ್ಮ ಕಾಲಬುಡದಲ್ಲೇ ಚೆಲ್ಲಿಬಿದ್ದ ‘ಸ್ತ್ರೀಸಮಯ’ವನ್ನು ಆರಿಸಿಕೊಂಡು ಪೋಣಿಸುವ ಸೂತ್ರಗಳನ್ನು ಮುಂದಿಟ್ಟರು. ನಾನು ಚಿಕ್ಕವಳಿದ್ದಾಗ ತುಂಬು ಹೊಟ್ಟೆಯನ್ನು ಹೊತ್ತುಕೊಂಡು ಬೇಡಬೇಡವೆಂದರೂ ಕೆಲಸಕ್ಕೆ ಬರುತ್ತಿದ್ದಳು ಸೀತೆ. ಅವಳ ಗರ್ಭಕ್ಕೆ ಕಾರಣನಾದ ಗಂಡನೆಂಬವ ಅಲ್ಲೆಲ್ಲೋ ಉಂಡಾಡಿ ತಿರುಗಿಕೊಂಡಿದ್ದ. ಇವಳಿಗೋ ಮಳೆಗಾಲದಲ್ಲೇ ಹುಟ್ಟುವ ತನ್ನ ಮಗುವಿಗೆ ಬಿಸಿನೀರು, ಬೆಚ್ಚನೆಸೂರು, ಎಣ್ಣೆ ಬೆಣ್ಣೆಗಳ ಹೊಂಚುವುದು ಹೇಗೆಂಬ ಚಿಂತೆ. ಇಷ್ಟೆಲ್ಲ ದಿನ ತುಂಬಿದ ಮೇಲೆ ವಜ್ಜೆ ಕೆಲಸ ಮಾಡಬೇಡವೆಂದರೆ ಕಣ್ಣೀರು. ಮರಿಹಾಕಲು ಜಾಗ ಹುಡುಕುವ, ಹೆತ್ತಮೇಲೆ ಅವುಗಳನ್ನು ರಕ್ಷಿಸಲು ಗುರ್ರೆನ್ನುವ ತಾಯ್ತನದ ಪಡಿಪಾಟಲು ನಾಯಿ, ಬೆಕ್ಕುಗಳನ್ನೂ ಬಿಟ್ಟಿದ್ದಲ್ಲ!
ಅಡಿಕೆ ಸುಲಿಯಲು ಬರುವ ಶಕುಂತಲೆಯದುಇನ್ನೊಂದು ಗೋಳು. ಗಂಡ ಬಿಟ್ಟವಳೆಂಬ ತಾತ್ಸರ ಕೊಂಕುನುಡಿ ಅವಳಿಗೆ ಮೀಸಲು. ಯಾರೂ ಯಜಮಾನರಿಲ್ಲದ ಕಾರಣ ಅವಳಮೇಲೆ ಯಾರು ಬೇಕಾದರೂ ಕಣ್ಣು ಹಾಕಬಹುದೆಂಬ ಕಳ್ಳ ಆಸೆ ಪುರುಷೋತ್ತಮರಲ್ಲಿ. ಮದುವೆಗೆ ಕಾದುಕಾದು ಮುಖದಲ್ಲಿ ನೆರಿಗೆ ಮೂಡಿದ ಲೀಲಾವತಿ, ಪದ್ಮಾವತಿಯರ ಗುಳಿಬಿದ್ದ ಮಂಕುಕಣ್ಣಲ್ಲಿ ಅಭಾವ ವೈರಾಗ್ಯ. ತಲೆಬೋಳಿಸಿಕೊಂಡು ಜಪಮಣಿ ತಿರುಗಿಸುವ ಅಜ್ಜಿಯರಂತೂ ಪತಿವ್ರತೆಯರ ಕತೆಗಳನ್ನು ಉತ್ಕಟವಾಗಿ ಉಣಿಸುತ್ತಿದ್ದರು. ಅವರ ಸೋತ ಬೆರಳುಗಳಲ್ಲಿ ಕಣ್ಣಹಿಂದಿನ ನೆರಳುಗಳಲ್ಲಿ ಏನಿರಬಹುದು? ಮುಸ್ಸಂಜೆಯಾದೊಡನೆ ಹೊಸಿಲ ಬಳಿ ದೀಪಹಚ್ಚುವ ಸದ್ಗೃಹಿಣಿಯರ ಮುಖದ ಹಿಂದೆ ಯಾಕೆ ಅಷ್ಟೊಂದುಕ ತ್ತಲು? ಇವರೆಲ್ಲರ ಪ್ರಜ್ಞೆಯ ಸುಪ್ತ ತಳವನ್ನು ಕೆದಕಿದರೆ ಏನಿರಬಹುದು? ಕತ್ತಲ ಸೀಳಿಬಂದ ಚೀತ್ಕಾರ ಬೆಳಕಿನಲ್ಲಿ ಬೂದಿಮುಚ್ಚಿದ ಕೆಂಡದಂತೆ ಎಲ್ಲಿ ಅಡಗಿರುತ್ತದೆ? ಹೀಗೆ ಎಷ್ಟೆಲ್ಲ ಪ್ರಶ್ನೆಗಳ ಜ್ವಾಲೆ ಹೊತ್ತಿಕೊಳ್ಳುವಂತೆ ಮಾಡಿದ್ದವು ವೈದೇಹಿ ಕತೆಗಳು.
ಅವರು ಒಂದಷ್ಟು ಪಾತ್ರಗಳನ್ನು ಎದೆಯಲ್ಲಿ ಊರಿಬಿಟ್ಟರು. ಅವುಗಳ ಒಡಲ ಉರಿ ಒಳಗೊಳಗೇ ಸದಾ ಉರಿಯುತ್ತ ಪ್ರಖರ ಸಂವೇದನೆಯೊಂದನ್ನು ರೂಪಿಸಿದ್ದು ಸುಳ್ಳಲ್ಲ ಆ ಪಾತ್ರಗಳಾದರೂ ಎಂಥವು? ಅಕ್ಕು, ಅಮ್ಮಚ್ಚಿ, ಸಿರಿ, ಸೌಗಂಧಿ, ಕಮಲಾವತಿ, ಸುಬ್ಬಕ್ಕ ಇಂಥವೇ. ಇವರೊಳಗೆ ಸ್ಪೋಟಕ್ಕೆ ಕಾದಿದ್ದ ಇಂಥಾ ಕಾವು ಇತ್ತಾ?
ಚಿಕ್ಕವಳಿದ್ದಾಗ ಅಪ್ಪ ಹೇಳುತ್ತಿದ್ದ ದುಷ್ಯಂತ ಶಕುಂತಲೆಯರ ಕತೆ ನನಗೆ ತುಂಬ ಇಷ್ಟವಾಗಿತ್ತು. ಆ ಉತ್ಕಟ ಪ್ರೇಮ, ಆ ಅಪರಿಮಿತ ದುಃಖ… ಇವುಗಳ ಎರಡು ತುದಿಯ ನಡುವೆ ದುಂಬಿ, ಶಾಪ, ಉಂಗುರ ನುಂಗಿದ ಮೀನು, ಮುದ್ರೆಯುಂಗುರ ನೋಡಿ ಮರುಕಳಿಸುವ ನೆನೆಪು, ಇಂತಹ ಎಷ್ಟೆಲ್ಲ ರೋಮಾಂಚಕ ತಿರುವುಗಳು! ಕೊನೆಯಲ್ಲಿ ಸಿಂಹದ ಜೊತೆ ಆಡುವ ಭರತ. ಅವನಿಂದಲೇ ಭಾರತ ಎಂಬ ಹೆಸರು ಬಂತಂತೆ!.. ಪುರುಷ ಸಿಂಹದ ಕಲ್ಪನೆಯೊಂದಿಗೆ ಕತೆಗೆ ಶುಭಂ. ವೈದೇಹಿಯವರ ಒಂದು ಕತೆಯಿದೆ. ‘ಶಕುಂತಲೆಯೊಂದಿಗೆ ಒಂದು ಅಪರಾಹ್ನ’ ಅಂತ. ಅದರಲ್ಲಿ ದುಷ್ಯಂತನೆಂಬ ಪಳಗಿದ ಪ್ರಣಯಿಯ ನಿಪುಣತೆ ಬೇರೆಯೇ ಥರ ಕಾಣುತ್ತದೆ! ದುಷ್ಯಂತ, ಶಕುಂತಲೆಯರನ್ನು ಅವರು ಹೀಗೆ, ಹೀಗೆಂದು ಲೋಕಕ್ಕೆ ಕಾಣಿಸುವ ಕವಿಯಿದ್ದಾನಲ್ಲ! ಅವನು ಇನ್ನೂ ನಿಪುಣ! ದುಷ್ಯಂತನ ಮರೆವಿಗೆ ಶಾಪದ ನೆಪವೊಡ್ಡಿ ಅವನನ್ನು ಪುರುವಂಶದ ಸತ್ಯಸಂಧನಾಗಿಯೇ ಉಳಿಸಿಬಿಡುತ್ತಾನೆ. “ಕಲ್ಪನೆಯ ಕುದುರೆಗೆ ಎಂದೂ ಲಂಗು ಲಗಾಮಿಲ್ಲ. ಕವಿ ಶಾಪ ಗೀಪ ಇತ್ಯಾದಿಗಳನ್ನೆಲ್ಲ ಅಡ್ಡ ಇಟ್ಟು ಪುರುಷರ ಲಂಪಟತ್ವವನ್ನು ಮುಚ್ಚಿಡಲು ಹವಣಿಸಿದ. ಎಲ್ಲ ಜಾಣಮರೆವಿನ ಮಲ್ಲರನ್ನು ತನ್ನ ತೆಕ್ಕೆಯೊಳಗೆ ಸುರಕ್ಷಿತವಾಗಿರಿಸುವ ಪುರುಷಕಟ್ಟಿದ ವಿಸ್ಮರಣೆಯ ಕತೆ ರುಚಿಸಲೇಬೇಕು. ಕಾವ್ಯಮೀಯುವುದೇ ತನಗೆ ಬೇಕಾದ ಸುಖೋಷ್ಣ ಕಲ್ಪನೆಯಲ್ಲಿ” ಎಂಬ ಕತೆಗಾರ್ತಿಯ ವ್ಯಂಗ್ಯಕಾವ್ಯ – ಪುರಾಣಗಳ ಹಿಂದಿನ ಸಾಂಸ್ಕೃತಿಕ ರಾಜಕಾರಣವನ್ನು ಬಯಲು ಮಾಡುತ್ತದೆ. ಲಿಂಗರಾಜಕಾರಣದತ್ತ ಕೈತೋರುತ್ತದೆ.
ಪ್ರಕೃತಿ-ಪುರುಷರ ಮಿಲನ ಎಷ್ಟು ಉತ್ಕಟವೋ ಚಂದವೋ ಅಷ್ಟೇ ಸಂಘರ್ಷಮಯ. ತಾದಾತ್ಮ್ಯ ಹಾಗೂ ಸಂಘರ್ಷದ ನೆರಳು ಬೆಳಕಿನ ಆಟ ಅಲ್ಲುಂಟು. ಏಕೆಂದರೆ ಅದೊಂದು ಪ್ರಾಕೃತಿಕ ಪ್ರೇರಣೆಯಾಗಿಯಷ್ಟೇ ಉಳಿಯದೆ ಅಲ್ಲೊಂದು ಅಧಿಕಾರ ಸಂಬಂಧ ಅರಿವಿಲ್ಲದಂತೆ ಸ್ಥಾಪನೆಯಾಗಿಬಿಡುತ್ತದೆ. ಪ್ರೇಮದಲ್ಲಿ ತನ್ನನ್ನೇ ತಾನು ಕಳೆದುಕೊಳ್ಳುವ ಪ್ರಕೃತಿ ಹೆಣ್ಣಾದರೆ ಅದನ್ನು ಗೆದ್ದನೆಂದು ಸಂಭ್ರಮಿಸುವಾತ ಪುರುಷ. ಒಂದೊಂದು ಗೆಲುವಿನ ಮದವೂ ಅವನನ್ನು ದಂಡಯಾತ್ರೆಗೆ ಪ್ರೇರೇಪಿಸುತ್ತದೆ. ಸಾಮ್ರಾಜ್ಯ ವಿಸ್ತರಿಸುತ್ತ, ಅಂತಃ ಪುರಗಳನ್ನು ಗೆಲ್ಲುತ್ತ ನಡೆಯುವ ವ್ಯವಹಾರಸ್ಥ ಆತ. ‘ಕುಲಪ್ರತಿಷ್ಠೆಗೆ ಕಾರಣಳಾಗುವ ಈ ಶಕುಂತಲೆ ಮತ್ತು ಸಮುದ್ರವೇ ಒಡ್ಯಾಣವಾಗಿರುವ ವಸುಂಧರೆ ಇವರನ್ನು ಬಿಟ್ಟರೆ ಎನಗೆ ಪ್ರಿಯಕರವಾದದ್ದಿಲ್ಲ’ಎಂದು ಪ್ರೇಮದ ಅಮಲಿನಲ್ಲಿ ಹೇಳಬಲ್ಲ ಈತ, ಅಲ್ಲಿಂದ ಹೊರನಡೆದಾಗ ಜಾಣಮರೆವಿನ ದೋಣಿಯಲ್ಲಿ ಜಾರಿಕೊಳ್ಳಬಲ್ಲ ಜಾರ! ಮರ, ಗಿಡ, ಬಳ್ಳಿಗಳ ಜೊತೆ ಸಂಭಾಷಿಸಬಲ್ಲ ಶುದ್ಧ ಪ್ರಕೃತಿಯೇ ಆದ ಶಕುಂತಲೆ ವಿರಹ, ನೋವು ಅವಮಾನಗಳಲ್ಲಿ ಉರಿಯುತ್ತ ಕೊನೆಯಲ್ಲಿ ಸುಟ್ಟ ಮಣ್ಣಿನ ಮಡಕೆಯಂತೆ ಗಟ್ಟಿಯಾಗಿ ಬಿಡುತ್ತಾಳೆ. “ಕಹಿ ನುಂಗಬೇಕು, ನೋವು ಕಳೆಯಬೇಕು, ಮನಸ್ಸನ್ನು ಪ್ರಶಾಂತವಾಗಿ ಇಟ್ಟುಕೊಳ್ಳಬೇಕು, ಒಂದೇ ನೆಗೆತಕ್ಕೆಲ್ಲ ತೀಕ್ಷ್ಣತಮಗಳನ್ನ ಅಂಗುಲಂಗುಲ ನಡೆದು ತೀರಿಸಿಯೇ” ಶಕುಂತಲೆಯ ಈ ಮಾತು ಅಂದು ವೈದೇಹಿಯವರ ಮಾತುಗಳಲ್ಲೂ ಪ್ರತಿಫಲಿಸುತ್ತಿತ್ತು.
ಸಾಹಿತ್ಯ ರಾಜಕಾರಣದೆಡೆಗೆ ಮಾತು ಹೊರಳಿದಾಗ ಅವರೆಂದದ್ದು ಹೀಗೆ “ಬರವಣಿಗೆಯೆಂಬುದು ಅತ್ಯಂತಿಕವಾಗಿ ನಮ್ಮನ್ನು ಎಲ್ಲ ಚೌಕಟ್ಟುಗಳಿಂದ ಬಿಡುಗಡೆಗೊಳಿಸುವ ಮಾರ್ಗ ಅಲ್ಲವಾ?”. “ಹೌದು. ಆದರೆ ಧರ್ಮ, ಜಾತಿ, ಲಿಂಗಗಳ ಚೌಕಟ್ಟಿನೊಳಗೆ ಬರಹಗಾರರನ್ನು ಎಳೆತಂದು ಅಳೆಯುವ ಇಂದಿನ ಸಂದರ್ಭವನ್ನು ದಾಟುವುದು ಹೇಗೆ? ಇವೆಲ್ಲವುಗಳ ಆಚೆ ಇರುವ ಸ್ತ್ರೀತ್ವದ ಅಂತಃಶಕ್ತಿಯ ಧಾರೆಗಳನ್ನು ಹುಡುಕಿಕೊಳ್ಳುವುದು ಹೇಗೆ? ಅವುಗಳನ್ನು ಬೆಸೆಯುವುದು ಹೇಗೆ?” ಕೊನೆಯಿಲ್ಲದ ಪ್ರಶ್ನೆಗಳಿದ್ದವು, ಆದರೆ ಉತ್ತರವೆಂಬುದು ಸಿದ್ಧಸೂತ್ರವಲ್ಲವಲ್ಲ! ಅಂಗುಲಂಗುಲ ನಡೆಯುತ್ತಲೇ ಉತ್ತರಗಳು ಸಿಗುತ್ತವೆ ಅಲ್ಲವಾ? “ನೋವು, ಅವಮಾನ, ಸಂದೇಹ, ಸಂಕಟಗಳನ್ನು ಅನುಭವಿಸಿಯೇ ಅದನ್ನು ದಾಟಬೇಕು. ಅನುಭವಗಳನ್ನೇ ನಿರಾಕರಿಸಿ ದಡಸೇರುವುದು ಸಾಧ್ಯವಾ?” ಇದು ಪಕ್ಪಗೊಂಡ ಜೀವವೊಂದು ಮಾತ್ರ ನುಡಿಯಬಲ್ಲ ನುಡಿ.
ಶಕುಂತಲೆ ಶುದ್ಧ ಪ್ರಕೃತಿಯಾದರೆ, ದುಷ್ಯಂತ ವ್ಯವಸ್ಥೆಯಾಗಿ ಕಾಣತೊಡಗಿದ. ವ್ಯವಸ್ಥೆಯ ಅಧಿಕಾರದ ಭಾಷೆಗೆ ಸಂಯಮದ ಪಾಠ ಕಲಿಸುವವರು ಯಾರು? ಸಂಯಮದಿಂದ ಕಾಣುವುದನ್ನು, ಆಲಿಸುವುದನ್ನು ಮರೆತುಹೋದರೆ, ಅರಿವು ಮೂಡುವುದಾದರೂ ಹೇಗೆ? “ಪೂರ್ವಗ್ರಹಗಳಿಲ್ಲದೆ ನಾವು ಕಂಡ ಸತ್ಯವನ್ನು ನಿರ್ಭಯವಾಗಿ ಹೇಳಬೇಕು, ಬರೆಯಬೇಕು ಏನೆಲ್ಲವ ದಾಟುತ್ತದಾಟುತ್ತ ಗಟ್ಟಿಗೊಳ್ಳುವ ಅಂಥ ಸ್ಥಿತಿಯೊಂದು ಎಲ್ಲರಿಗೂ ಬರುತ್ತದೆ” ಅನ್ನುತ್ತ ಮಾತು ನಿಲ್ಲಿಸಿದರು ವೈದೇಹಿ. ನುಡಿಗೂ ಬೆಳಕಿರುತ್ತದೆ ಎಂಬ ಅಲ್ಲಮನ ಮಾತನ್ನು ನೆನಪಿಸಿಕೊಳ್ಳುತ್ತ ಉಡಿಯೊಳಗೆ ನುಡಿಗಳನ್ನು ತುಂಬಿಕೊಂಡು ಹೊಸಿಲು ದಾಟಿದೆವು. ಗೇಟಿನವರೆಗೂ ಬಂದು ಅವರು ಬೀಳ್ಕೊಟ್ಟರು ಮತ್ತೆ ಮುಂದಿನ ಪಯಣಕ್ಕಾಗಿ ಹೈವೇ ಸೇರಿದೆವಾದರೂ ವೈದೇಹಿಯವರ ಕಾಲುದಾರಿಯ ಕಥನಗಳು ಕಾಡತೊಡಗಿದವು.
ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ.
ಬರಹ ತುಂಬಾ ಆಪ್ತ ಭಾವದಿಂದ ಕೂಡಿದೆ ಮೇಡಂ… ಮತ್ತಷ್ಟು ಇರಬೇಕಿತ್ತು ಎನಿಸುವಷ್ಟು ಓದಿಸಿಕೊಂಡು ಹೋಗುತ್ತದೆ… ಧನ್ಯವಾದಗಳು