ಅಪ್ಪನ ನಿರ್ಧಾರ ಪಲ್ಲವಿಗೆ ಅಡ್ಡಕತ್ತರಿಯಲ್ಲಿ ಸಿಲುಕಿಸಿತು. ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಿದಂತಾಗಿದೆ, ಹೀಗಾಗುತ್ತದೆ ಅಂತ ಕನಸು ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ ನಾನು ಸರಿಯಾಗಿ ಓದಿ ಇಡೀ ಕ್ಲಾಸಿಗೇ ಫಸ್ಟ್ ಬರಬೇಕು ಮುಂದೆ ಕಾಲೇಜು ಸೇರಿ ದೊಡ್ಡ ಸಾಧನೆ ಮಾಡಬೇಕು ಅಂತ ಏನೇನೋ ಕನಸು ಕಂಡಿದ್ದೆ. ಆದರೆ ಅದೆಲ್ಲ ಮಂಜಿನಂತೆ ಕರಗಿ ಹೋಯಿತು ಅಂತ ಕಣ್ತುಂಬ ನೀರು ತಂದು ಯೋಚಿಸತೊಡಗಿದಳು.
ಶರಣಗೌಡ ಬಿ.ಪಾಟೀಲ ತಿಳಗೂಳ ಬರೆದ ಪ್ರಬಂಧ “ವಿಳಾಸ ತಪ್ಪಿದ ಪತ್ರ” ನಿಮ್ಮ ಓದಿಗೆ

ಅವತ್ತು ಬಸವರಾಜ ದೊಡ್ಡ ಆಲದ ಮರದ ಕೆಳಗೆ ನಾಲ್ಕು ಜನರ ಜೊತೆ ದೇಶಾವರಿ ಮಾತಾಡುತ್ತ ಕುಳಿತಿದ್ದ, ಪೋಸ್ಟಮನ್ ಪದ್ಮಣ್ಣ ಅವಸರವಾಗಿ ಬಂದು ನಿನಗೊಂದು ಪತ್ರ ಬಂದಿದೆ, ಇದು ಬಹುಶಃ ನಿಮ್ಮದೇ ಇರಬೇಕು ಅಂತ ಕೈಗಿಟ್ಟಾಗ “ನನಗ್ಯಾವ ಪತ್ರ ಬರ್ತಾದೆ? ನನಗೆ ಪತ್ರ ಬರೆಯುವ ಯಾವ ಬೀಗರು ನೆಂಟರು ಸಂಬಂಧಿಕರೂ ಇಲ್ಲ” ಅಂತ ಗಾಬರಿಯಿಂದ ಆ ಪತ್ರದ ಮೇಲೆ ಕಣ್ಣಾಡಿಸತೊಡಗಿದ.

ಪತ್ರ ಬಂದಿದ್ದು ನೋಡಿ “ಯಾಕೆ ಗಾಬರಿಯಾದೆ?” ಅಂತ ಪಕ್ಕದಲ್ಲಿ ಕುಳಿತ ಚನ್ನವೀರ ಕುತೂಹಲದಿಂದ ಪ್ರಶ್ನಿಸಿದ. ಪತ್ರ ಬಂದಿದ್ದು ಮುಖ್ಯವಲ್ಲ ಇಲ್ಲಿಯ ತನಕ ನನಗ್ಯಾವ ಪತ್ರವೂ ಬಂದಿಲ್ಲ. ಇದೇ ಮೊದಲ ಪತ್ರ, ಗಾಬರಿ ಪಡದೇ ಇನ್ನೇನು ಮಾಡಲಿ ಅಂತ ಹೇಳಿದ.

“ಈ ಪತ್ರ ಇವನ ಹೆಸರಿಗೆ ಬಂದುದ್ದಲ್ಲ. ಮಗಳು ಪಲ್ಲವಿ ಹೆಸರಿಗೆ ಬಂದಿದೆ. ಪಲ್ಲವಿ ಬಿ, ಅಂತ ಹೆಸರು ಬರಿದು ವಿಳಾಸ ಬರೆಯಲಾಗಿದೆ. ಅದಕ್ಕೆ ಇದು ಇವರದೇ ಇರಬಹುದು ಅಂತ ತಂದು ಕೊಟ್ಟೆ ಎಂದು ಪೋಸ್ಟ ಮ್ಯಾನ್ ಸಮಜಾಯಿಸಿ ನೀಡಿದಾಗ
“ಮನೆಯ ಯಜಮಾನ ಇವನೇ ಅಂದ್ಮೇಲೆ ಇವನ ಹೆಸರಿಗೆ ಬರಬೇಕಾಗಿತ್ತಲ್ಲ. ಮಗಳ ಹೆಸರಿಗೆ ಯಾಕೆ ಬಂದಿದೆ? ಅಂತ ಸೋಮರಾಯ ಕುತೂಹಲದಿಂದ ಪ್ರಶ್ನಿಸಿದ.

“ಬಹುಶಃ ಪಲ್ಲವಿ ಗೆಳತಿಯರು ಯಾರೋ ಈ ಪತ್ರ ಬರೆದಿರಬೇಕು. ಅದಕ್ಕೆ ಇವನ ಹೆಸರಿನ ಬದಲಾಗಿ ಅವಳ ಹೆಸರು ಬರೆದಿದ್ದಾರೆ” ಅಂತ ನಿಂಗಪ್ಪ ಸಮಜಾಯಿಶಿ ನೀಡಲು ಮುಂದಾದ.

ಪಲ್ಲವಿಗ್ಯಾರು ಪತ್ರ ಬರೀತಾರೆ? ಅವಳೇನು ಅಷ್ಟು ದೊಡ್ಡವಳಾ? ಇನ್ನೂ ಶಾಲೆಗೆ ಹೋಗುವ ಹುಡುಗಿ. ಬೇರೆ ಕಡೆ ಇವಳಿಗ್ಯಾರು ಗೆಳತಿಯರಿದ್ದಾರೆ ಮನೆ, ಶಾಲೆ, ಬಿಟ್ಟು ಬೇರೆ ಯಾರು ಪರಿಚಿತರಿಲ್ಲ. ಊರ ಬಿಟ್ಟು ಎಲ್ಲಿಗೂ ಹೋದೋಳಲ್ಲ ಅಂತ ವೀರಣ್ಣ ವಾಸ್ತವ ಹೇಳಿದಾಗ, ಆತನ ಮಾತಿಗೆ ಎಲ್ಲರೂ ಸಮ್ಮತಿಸಿ ತಲೆಯಾಡಿಸಿದರು. ಆದರೆ ಪತ್ರದ ವಿಷಯ ಮಾತ್ರ ಯಾರಿಗೂ ಗೊತ್ತಾಗದೆ ಪರಸ್ಪರ ಮುಖ ಒಬ್ಬರು ಪ್ರಶ್ನಾರ್ಥಕವಾಗಿ ನೋಡಿಕೊಂಡರು.

“ದಿನಾ ಯಾವ ಪತ್ರನೂ ಬರೋದಿಲ್ಲ. ಖಾಲೀ ಬ್ಯಾಗೇ ಬರ್ತಾದೆ. ಇವತ್ತು ಇದೊಂದಾದರು ಪತ್ರ ಬಂದಿದೆ” ಅಂತ ಪೋಸ್ಟ ಮ್ಯಾನ್ ನಿಟ್ಟುಸಿರು ಬಿಟ್ಟು ಹೇಳಿದಾಗ
“ಈಗಿನ ಜಮಾನಾದಾಗ ಯಾರು ಪತ್ರ ಬರೀತಾರೆ? ಮೊಬೈಲ ಬಂದ ಮ್ಯಾಲ ಪತ್ರದ ಕತೆ ಮುಗಿದೇ ಹೋಗಿದೆ, ಏನಾದರು ವಿಷಯ ತಿಳಿಸುವದಿದ್ದರೆ ಎಲ್ಲರೂ ಮೊಬೈಲ್ ಮೂಲಕವೇ ತಿಳಸ್ತಾರೆ” ಅಂತ ಚನ್ನವೀರ ವಾಸ್ತವ ಹೇಳಿ ಅಭಿಪ್ರಾಯ ವ್ಯಕ್ತಪಡಿಸಿದ.

“ಮೊದಲೆಲ್ಲ ನೂರಾರು ಪತ್ರಗಳು ಬ್ಯಾಗ ತುಂಬಿ ಬರುತ್ತಿದ್ದವು. ಅವೆಲ್ಲ ಪದ್ಮಣ್ಣ ಬೇರ್ಪಡಿಸಿ, ಊರ ತುಂಬಾ ತಿರುಗಾಡಿ ಎಲ್ಲರ ವಿಳಾಸ ಹುಡುಕಿ ಹಂಚತಿದ್ದ. ಈಗ ಪತ್ರಾನೂ ಬರೋದಿಲ್ಲ ಹಂಚೋದೂ ಇಲ್ಲ…” ಅಂತ ವೀರಣ್ಣ ಹಿಂದಿನದನ್ನು ನೆನಪಿಸಿದ.

ಸಧ್ಯ ನನಗಂತೂ ಕೆಲಸವೇ ಇಲ್ಲದಂತಾಗಿದೆ. ಮುಂಜಾನೆಯಿಂದ ಸಂಜೆ ತನಕ ಪೋಸ್ಟ ಆಫೀಸ್ ತೆರೆದುಕೊಂಡು ಸುಮ್ಮನೇ ಕೂಡತೀನಿ. ಬೇಸರ ಬರ್ತಿದೆ ಅಂತ ಪೋಸ್ಟ ಮ್ಯಾನ ಅಳಲು ತೋಡಿಕೊಂಡಾಗ
“ಏನು ಮಾಡೋದು ಕಾಲ ಬದಲಾಗಿದೆ, ಹಿಂದಿನ ಜಮಾನಾ ಇಂದಿಲ್ಲ, ಇಂದಿನ ಜಮಾನಾ ನಾಳೆ ಇರೋದಿಲ್ಲ. ದಿನ ಕಳೆದಂತೆ ಬದಲಾವಣೆ ಆಗ್ತಾನೇ ಇರ್ತಾದೆ. ಇನ್ನೂ ಏನೇನು ಬದಲಾವಣೆ ಬರ್ತಾವೋ ಏನೋ ಯಾರಿಗೆ ಗೊತ್ತು…” ಅಂತ ಸೋಮರಾಯ ಭವಿಷ್ಯದ ಬಗ್ಗೆ ಯೋಚಿಸತೊಡಗಿದ.

“ದಿಲ್ಲಿಯಿಂದ ಹಳ್ಳಿತನಕ ಎಲ್ಲಾ ಸುದ್ದಿ ಕಣ್ಣು ಮುಚ್ಚಿ ಕಣ್ಣು ತೆರಿಯುವದರಲ್ಲೇ ಗೊತ್ತಾಗಿ ಬಿಡ್ತಿವೆ. ಜಗತ್ತಿನಲ್ಲಿ ಏನು ನಡೆದರೂ ಕ್ಷಣ ಮಾತ್ರದಲ್ಲೇ ತಿಳೀತಾದೆ. ಇದೆಲ್ಲ ತಂತ್ರಜ್ಞಾನದ ಪ್ರಭಾವ. ಇಂಥ ಆಧುನಿಕ ಯುಗದಲ್ಲಿ ಪತ್ರ ಬರೆಯುವ ಆ ಹಳೆಯ ಪದ್ಧತಿ ಯಾರು ಅನುಸರಿಸ್ತಾರೆ, ಪತ್ರ ಬರೆದರೂ ಅವರಿಗೆ ಹೋಗಿ ಮುಟ್ಟಲು ಸುಮಾರು ದಿನಗಳೇ ಬೇಕು, ಸಧ್ಯ ಹೆಚ್ಚಿನ ಖರ್ಚಿಲ್ಲದೆ ಸಮಯ ವ್ಯರ್ಥವಿಲ್ಲದೇ ಮೊಬೈಲ್ ಮೂಲಕ ಎಲ್ಲಾ ವಿಷಯ ತಿಳಿಸಬಹುದು. ಎಲ್ಲರ ಮನೆಯಲ್ಲೂ ಮೂರು ನಾಲ್ಕು ಮೊಬೈಲುಗಳಿವೆ. ಯಾರೂ ಪತ್ರ ವ್ಯವಹಾರದ ಗೋಜಿಗೆ ಹೋಗೋದಿಲ್ಲ… ಅಂತ ವೀರಣ್ಣ ಮಾತು ಮುಂದುವರಿಸಿದ.

“ಎಲ್ಲರ ಬಳಿ ಮೊಬೈಲ್‌ ಇದ್ದರೂ ಬಸವರಾಜನ ಹತ್ತಿರ ಒಂದೂ ಮೊಬೈಲ್‌ ಇಲ್ಲವಲ್ಲ” ಅಂತ ಚನ್ನವೀರ ಹೇಳಿದಾಗ “ಇವನಿಗೆ ಮೊಬೈಲ್‌ ಅವಶ್ಯಕತೆಯೂ ಇಲ್ಲ. ಬೀಗರು ನೆಂಟರು ಸಂಬಂಧಿಕರಾದರು ಯಾರಿದ್ದಾರೆ? ಇವನು ಯಾರ ಜೊತೆ ಮಾತಾಡತಾನೆ? ಏನೋ ಅರ್ಜಂಟ್ ಇದ್ದರೆ ನಮ್ಮ ನಿಮ್ಮ ಮೊಬೈಲಿನಿಂದಲೇ ಮಾತಾಡ್ತಾನೆ” ಅಂತ ಸೋಮರಾಯ ಹೇಳಿದ.

“ಇವನಿಗೆ ಮಾತಾಡಲು ಪುರುಸೊತ್ತಾದರು ಎಲ್ಲಿ ಸಿಗ್ತಾದೆ? ಯಾವಾಗಲೂ ಕೆಲಸಾ ಅಂತಿರ್ತಾನೆ. ಬೆವರೊಸಿಕೊಳ್ಳಲು ಕೂಡ ಪುರುಸೊತ್ತು ಸಿಗೋದಿಲ್ಲ” ಅಂತ ವೀರಣ್ಣನೂ ಮಾತು ಸೇರಿಸಿದ.

ನಿನ್ನ ಮಾತು ನೂರಕ್ಕೆ ನೂರು ಸತ್ಯ ಅಂತ ಎಲ್ಲರೂ ಆತನ ಮಾತಿಗೆ ಸಮ್ಮತಿಸಿ ಧನಿಗೂಡಿಸಿದರು. ಬಸವರಾಜ ಮಾತ್ರ ಅವರ ಮಾತಿನ ಕಡೆ ಕಿವಿಗೊಡದೆ ಆ ಪತ್ರದ ಬಗ್ಗೆಯೇ ಯೋಚಿಸತೊಡಗಿದ.

“ಇದು ನನ್ನ ಮಗಳ ಹೆಸರಿಗೆ ಯಾಕೆ ಬಂದಿದೆ? ಅವಳಿನ್ನು ಹೈಸ್ಕೂಲ ಓದುವ ಹುಡುಗಿ. ಅವಳಿಗ್ಯಾರು ಪತ್ರ ಬರೀತಾರೆ? ಅದಲ್ಲದೆ ಇದು ಬೆಂಗಳೂರಿನಿಂದ ಬೇರೆ ಬಂದಿದೆ. ಬರೆದವರ ಹೆಸರು ಪ್ರತಾಪ ಅಂತ ಇದೆ, ಏನು ವಿಷಯ ಇರಬಹುದು? ಪ್ರತಾಪ ಯಾರು? ಅಂತಲೇ ಗೊತ್ತಿಲ್ಲ, ನನ್ನ ಮಗಳು ಮನೆ ಬಿಟ್ಟರೆ ಶಾಲೆ, ಶಾಲೆ ಬಿಟ್ಟರೆ ಮನೆ, ಅಂತ ಇರ್ತಾಳೆ ಹೊರಗಿನ ಪ್ರಪಂಚವೇ ಗೊತ್ತಿಲ್ಲ ಅಂತ ಶೂನ್ಯ ದಿಟ್ಟಿಸಿದ.

“ಸುಮ್ಮನೇ ಕುಳಿತಿಯಲ್ಲ ಮಾರಾಯ! ಏನಾದರು ಮಾತಾಡು ಹಿಂಗ ಕುಂತರ ನಮಗ ಹ್ಯಾಂಗ ಗೊತ್ತಾಗಬೇಕು” ಅಂತ ಚನ್ನವೀರ ಪ್ರಶ್ನಿಸಿದ. ಆತನ ಮಾತಿಗೆ ಬಸವರಾಜ ಉತ್ತರ ಕೊಡದೆ ನನಗೆ ಸ್ವಲ್ಪ ಅರ್ಜಂಟ ಕೆಲಸಾ ಇದೆ ಆಮ್ಯಾಲ ಬಂದು ಎಲ್ಲಾ ವಿಷಯ ಹೇಳ್ತೀನಿ ಅಂತ ಅಲ್ಲಿಂದ ಎದ್ದು ಸೀದಾ ಮನೆ ಕಡೆ ಹೆಜ್ಜೆಹಾಕಿದ. ದಾರಿಯುದ್ದಕ್ಕೂ ಆ ಪತ್ರದ ಯೋಚನೆಯೇ ಕಾಡಿತು. ಮನಸ್ಸಿಗೆ ಸಮಾಧಾನವೇ ಆಗಲಿಲ್ಲ, ಮುಖ ಸಪ್ಪಗೆ ಮಾಡಿ ಕಾಲು ಮಡಚಿಕೊಂಡು ಮನೆಯ ಪಡಸಾಲೆ ಗೋಡೆಗೆ ಬೆನ್ನು ಹಚ್ಚಿ ಶೂನ್ಯ ದಿಟ್ಟಿಸತೊಡಗಿದ.

“ಯಾಕೆ ಏನು ವಿಷಯ ಹೊರಗೆ ಹೋದವನು ಇಷ್ಟು ಜಲ್ದಿ ಮನೆಗೆ ಬಂದಿಯಲ್ಲ ಏನು ವಿಷಯ…” ಅಂತ ಹೆಂಡತಿ ಮನೆಗೆಲಸ ಬಿಟ್ಟು ಕುತೂಹಲದಿಂದ ಪ್ರಶ್ನಿಸಿದಳು. ಅವಳಿಗೂ ಯಾವ ಉತ್ತರ ಕೊಡದೇ ಕುಳಿತಾಗ “ಹೇಳಿದರೆ ತಾನೆ ಗೊತ್ತಾಗೋದು…” ಅಂತ ಪುನಃ ಒತ್ತಾಯಿಸಿದಳು. ಆಗ ಮೌನ ಮುರಿದು,
“ಪಲ್ಲವಿಗೆ ಯಾರೋ ಪತ್ರ ಬರೆದಿದ್ದಾರೆ ಯಾರು ಯಾಕೆ ಬರೆದರು ಅಂತ ಗೊತ್ತಾಗ್ತಿಲ್ಲ ಅಂತ ಮುಖ ಸಪ್ಪಗೆ ಮಾಡಿ ಆತಂಕದಿಂದಲೇ ಹೇಳಿದ.

“ಬೆಂಗಳೂರಿಂದ ಯಾರು ಪತ್ರ ಬರೀತಾರೆ? ಅಲ್ಲಿ ಯಾರು ಪರಿಚಯದವರಿದ್ದಾರೆ? ಏನೋ ವಿಳಾಸ ತಪ್ಪಿ ಪತ್ರ ಬಂದಿರಬೇಕು. ಅವಳದೇ ಅಂತ ಹ್ಯಾಂಗ ಹೇಳೋದು? ಸರಿಯಾಗಿ ನೋಡು, ಇಲ್ಲದಿದ್ದರೆ ಪದ್ಮಣ್ಣನಿಗೆ ವಾಪಸ್ ಕೊಟ್ಟರಾಯಿತು. ಯಾರದಿದೆಯೋ ಅವರಿಗೆ ಮುಟ್ಟಿಸ್ತಾನೆ” ಅಂತ ಸಲಹೆ ನೀಡಿದಳು.

ಮತ್ಯಾರದು ಇರ್ತಾದೆ? ಆತ ವಿಳಾಸ ನೋಡೇ ಕೊಟ್ಟಿದ್ದಾನೆ ಅಂತ ಹೇಳಿ ಜೇಬಿನಿಂದ ಆ ಪತ್ರ ಹೊರ ತೆಗೆದು ಅದರ ಅಂಚು ಹರಿದು ಒಂದೊಂದೇ ಅಕ್ಷರ ಓದತೊಡಗಿದ. ಅದೊಂದು ಪ್ರೇಮ ಪತ್ರವಾಗಿದ್ದು ಸ್ಪಷ್ಟವಾಗಿ ಗೊತ್ತಾಯಿತು. ಆಗ ಮತ್ತಷ್ಟು ಗಾಬರಿ ಆವರಿಸಿ ಮುಖ ಕೆಂಪಗೆ ಮಾಡಿ ಮಗಳ ಮೇಲೆ ಕೋಪ ತಾಪ ಹೊರಹಾಕಲು ಆರಂಭಿಸಿದ.

“ಪಲ್ಲವಿ ಶಾಲೆಯಿಂದ ಬರಲಿ ಬಂದ್ಮೇಲೆ ವಿಚಾರಿಸೋಣ” ಅವಸರ ಮಾಡಿ ಏನೇನೋ ಯೋಚನೆ ಮಾಡೋದು ಬೇಡ ನಮ್ಮ ಮಗಳು ಎಂಥವಳು ಅಂತ ಸರಿಯಾಗಿ ಗೊತ್ತು. ಅವಳ ಗುಣ ಸ್ವಭಾವದ ಬಗ್ಗೆ ಊರಲ್ಲಿ ಎಲ್ಲರು ತಾರೀಫ ಮಾಡ್ತಾರೆ, ಓದಿನಲ್ಲೂ ಮುಂದಿದ್ದಾಳೆ ಅಂತ ಶಿಕ್ಷಕರೂ ಹೇಳ್ತಾರೆ. ಮನೆ, ಶಾಲೆ, ಬಿಟ್ಟರೆ ಇವಳಿಗೆ ಬೇರೆ ಯಾವದೂ ಗೊತ್ತಿಲ್ಲ. ದೂರದ ಬೆಂಗಳೂರಿನಿಂದ ಪತ್ರ ಬಂದಿದೆ ಅಂದರೆ ಇದು ಖಂಡಿತ ಇವಳದಲ್ಲ ಅಂತ ಪರಿಪರಿಯಾಗಿ ಸಮಜಾಯಿಸಿ ನೀಡಿದಳು.

“ಯಾವದೂ ನಂಬೋಕೇ ಆಗ್ತಿಲ್ಲ, ಈಗಿನ ಜಮಾನಾದಾಗ ಈ ಪ್ರೀತಿ ಪ್ರೇಮ ಸಾಮಾನ್ಯವಾಗಿ ಬಿಟ್ಟಿದೆ ಏನೇನೋ ಅವಾಂತರ ಸೃಷ್ಟಿಯಾಗ್ತಿವೆ. ಯಾವದಕ್ಕೂ ನಾವು ಜಾಗೃತಿ ವಹಿಸಬೇಕು ಬಡತನ ಇದ್ದರೂ ಮಾನ ಮರ್ಯಾದೆ ಜೀವಕ್ಕಿಂತ ಹೆಚ್ಚಾಗಿ ಕಾಪಾಡಿಕೊಂಡು ಬಂದಿದ್ದೀವೆ ಅಂತ ಆತಂಕ ಹೊರ ಹಾಕಿದ.

ಸಾಯಂಕಾಲ ಐದು ಗಂಟೆ ಸುಮಾರಿಗೆ ಪಲ್ಲವಿ ಶಾಲೆಯಿಂದ ಮನೆಗೆ ಬಂದಳು. ಎಂದಿನಂತೆ ಕೈಕಾಲು ಮುಖ ತೊಳೆದು ಹೋಮ್‌ವರ್ಕ್‌ ಮಾಡುವಲ್ಲಿ ತಲ್ಲೀಣಳಾದಳು. ಆಗ ಬಸವರಾಜ ಮಗಳ ಮೇಲೆ ಕೋಪ ತಾಪ ಹೊರ ಹಾಕಲು ಶುರು ಮಾಡಿದ. ಅಪ್ಪನ ವರ್ತನೆ ಅವಳಿಗೆ ವಿಚಿತ್ರವಾಗಿ ಕಾಣಿಸಿತು.

“ಅಪ್ಪ ನನ್ನ ಮೇಲೆ ಯಾಕೆ ಸಿಟ್ಟಾಗಿದ್ದಾನೆ…” ಅಂತ ಯೋಚಿಸಿ ಅಮ್ಮನ ಹತ್ತಿರ ಹೋಗಿ ಆ ಕುರಿತು ಪ್ರಶ್ನಿಸಿದಳು. ಆಗ ಅವಳು ಪತ್ರದ ವಿಷಯ ಹೇಳಿದಾಗ ಪಲ್ಲವಿಗೆ ಆಕಾಶವೇ ತಲೆಯ ಮೇಲೆ ಬಿದ್ದಂತಾಯಿತು.

“ಪತ್ರದ ಬಗ್ಗೆ ನನಗೇನೂ ಗೊತ್ತಿಲ್ಲ ಪತ್ರ ಬರೆದವನ ಪರಿಚಯವೂ ಇಲ್ಲ” ಅಂತ ಅಳಲು ಶುರು ಮಾಡಿದಳು.
ನಿನ್ನ ಸ್ವಭಾವ ನಮಗೆ ಸರಿಯಾಗಿ ಗೊತ್ತು ನೀನೇನೂ ಮನಸ್ಸಿಗೆ ಹಚ್ಚಿಕೊಳ್ಳಬೇಡ. ಸತ್ಯ ಯಾವಾಗಲು ಗೆಲ್ಲುತ್ತದೆ

ಅಂತ ಅಮ್ಮ ಸಮಾಧಾನ ಮಾಡಲು ಮುಂದಾದಳಾದರೂ, ಈ ಅನಿರೀಕ್ಷಿತ ಆಘಾತಕ್ಕೆ ಪಲ್ಲವಿಯ ಕಣ್ಣೀರ ಧಾರೆ ಕಡಿಮೆಯಾಗಲಿಲ್ಲ.

ಬಸವರಾಜನ ಕೋಪ ಮರುದಿನವೂ ಹಾಗೇ ಮುಂದುವರೆಯಿತು. ಒಬ್ಬಳೇ ಮಗಳು ಅಂತ ಯಾವ ಕೊರತೆ ಆಗದಂತೆ ನೋಡಿಕೊಂಡೆ. ಸರಿಯಾಗಿ ಶಿಕ್ಷಣ ಕೊಡಿಸಬೇಕು ಅಂತ ನಿರ್ಧಾರ ಮಾಡಿದೆ. ಆದರೆ ಇವಳು ನಮಗೆ ಗೊತ್ತಿಲ್ಲದಂತೆ ಹೀಗೆ ಮಾಡಿದಳು ಅಂತ ಹೆಂಡತಿಯ ಮುಂದೆ ಸಂಕಟ ಹೊರ ಹಾಕಿದ.

ಅಪ್ಪನ ಆಪಾದನೆ ಪಲ್ಲವಿಗೆ ಅಘಾತ ನೀಡಿತು. ರಾತ್ರಿ ಊಟವೂ ಮಾಡದೇ “ನನಗ್ಯಾಕೆ ಈ ಪತ್ರ ಬಂದಿದೆ ಇದಕ್ಕೂ ನನಗೂ ಯಾವ ಸಂಬಂಧವೂ ಇಲ್ಲ..” ಅಂತ ಇಡೀ ರಾತ್ರಿ ನಿದ್ದೆ ಇಲ್ಲದೆ ಚಿಂತಿಸಿದಳು. ಮರುದಿನ ಕೂಡ ಇವಳ ಚಿಂತೆ ಹಾಗೇ ಮುಂದುವರೆಯಿತು.

“ಆ ಪತ್ರಕ್ಕೂ ನಿನಗೂ ಸಂಬಂಧ ಇಲ್ಲ ಅಂದ್ಮೇಲೆ ಯಾಕೆ ಚಿಂತೆ ಮಾಡ್ತಿ? ಆ ವಿಷಯ ಮರೆತು ಬಿಡು ಸಮಯ ಆಗ್ತಿದೆ. ಬೇಗ ತಯಾರಾಗಿ ಶಾಲೆಗೆ ಹೊರಡು ಅಂತ ಅಮ್ಮ ಸಲಹೆ ನೀಡಿದಳು….” ಆದರೆ ಪಲ್ಲವಿಗೆ ಹೋಗಲು ಮನಸ್ಸಾಗಲಿಲ್ಲ.

ಎರ್ಡ್ಮೂರು ದಿನ ಹಾಗೇ ಕಳೆದು ಹೋದವು. ಪಲ್ಲವಿ ಶಾಲೆಗೆ ಬರದೇ ಇರುವದು ಶಿಕ್ಷಕರಿಗು ಯೋಚನೆಯಾಯಿತು. ಪಲ್ಲವಿ ಯಾಕೆ ಬರ್ತಿಲ್ಲ ಒಂದಿನ ಕೂಡ ಶಾಲೆ ತಪ್ಪಿಸಿದವಳಲ್ಲ. ಪರೀಕ್ಷೆ ಬೇರೆ ಹತ್ತಿರ ಬರುತ್ತಿವೆ ಇಡೀ ಕ್ಲಾಸಿನಲ್ಲೇ ಬುದ್ಧಿವಂತೆ. ಇಂಥಹ ಹುಡುಗಿ ಹೇಳದೇ ಕೇಳದೇ ಶಾಲೆ ಬಿಟ್ಟರೆ ಹೇಗೆ? ಅಂತ ಪರಸ್ಪರ ಮಾತಾಡಿಕೊಂಡರು. ಇವಳ ಬಗ್ಗೆ ಸಹಪಾಠಿಗಳಿಗೂ ವಿಚಾರಿಸಿದರು. ಆದರೆ ಬರದಿರುವ ಕಾರಣ ಮಾತ್ರ ಗೊತ್ತಾಗಲಿಲ್ಲ. ನಾವೇ ಅವಳ ಮನೆಗೆ ಹೋಗಿ ವಿಚಾರಿಸಿಕೊಂಡು ಬರಬೇಕು ಅಂತ ಹಿರಿಯ ಶಿಕ್ಷಕರೊಬ್ಬರು ಸಲಹೆ ನೀಡಿದಾಗ ಉಳಿದ ಶಿಕ್ಷಕರು ಕೂಡ ತಲೆಯಾಡಿಸಿ ಸಮ್ಮತಿ ಸೂಚಿಸಿದರು.

ಮಗಳ ಮೇಲಿನ ಕೋಪ ಬಸವರಾಜನಿಗೆ ಕಡಿಮೆಯಾಗಲಿಲ್ಲ ವಿನಾಕಾರಣ ಮಗಳ ಮೇಲೆ ರೇಗತೊಡಗಿದ. ಗಂಡನ ಈ ವರ್ತನೆ ಸುಜಾತಾಳಿಗೆ ತಲೆನೋವಾಗಿ ಪರಿಣಮಿಸಿತು. ಎಷ್ಟೇ ಸಮಜಾಯಿಸಶಿ ನೀಡಿದರು ಆತ ಕೇಳುವ ಸ್ಥಿತಿಯಲ್ಲಿಲ್ಲ ಹೇಗೆ ಸಮಾಧಾನ ಪಡಿಸುವದು ಅಂತ ಅವಳು ಚಿಂತಿಸತೊಡಗಿದಳು.

ಅವತ್ತು ಶಿಕ್ಷಕರು ಮುದ್ದಾಮ ಇವರ ಮನೆಗೆ ಬಂದು
“ನಿಮ್ಮ ಮಗಳು ಓದಿನಲ್ಲಿ ಹುಶಾರಿದ್ದಾಳೆ. ಪರೀಕ್ಷೆ ಬೇರೆ ಹತ್ತಿರ ಬರ್ತಿವೆ ಇಂಥಹ ಸಮಯ ಶಾಲೆಗೆ ಬಿಡಿಸಿದರೆ ಹೇಗೆ? ನಾಳೆಯಿಂದ ತಪ್ಪದೇ ಶಾಲೆಗೆ ಕಳಿಸಿ” ಅಂತ ಕೇಳಿಕೊಂಡರು.

“ನಾನು ಇನ್ಮುಂದೆ ಪಲ್ಲವಿಗೆ ಶಾಲೆಗೆ ಕಳಿಸುವದಿಲ್ಲ. ಅವಳು ಕಲಿಯೋದು ಸಾಕು ಮನೆಗೆಲಸ ಮಾಡಿಕೊಂಡರೆ ಅಷ್ಟೇ ಸಾಕು ಶಾಲೆ ಕಲಿಸಿ ಮಾಡೋದಾದರು ಏನಿದೆ” ಅಂತ ಬಸವರಾಜ ಖಡಕ್ಕಾಗಿ ಹೇಳಿದ ಆತನ ಮಾತಿಗೆ ಶಿಕ್ಷಕರು

ಗಾಬರಿಗೊಂಡು ಇವನ ಮನವೊಲಿಸುವ ಪ್ರಯತ್ನ ಮಾಡಿದರು. ಆದರೆ ಇವನು ಮಾತ್ರ ತನ್ನ ಪಟ್ಟು ಸಡಿಲಿಸಲಿಲ್ಲ ಆಗ ಅವರೆಲ್ಲ ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ಸಾದರು.

ಅಪ್ಪನ ನಿರ್ಧಾರ ಪಲ್ಲವಿಗೆ ಅಡ್ಡಕತ್ತರಿಯಲ್ಲಿ ಸಿಲುಕಿಸಿತು. ತಾನು ಮಾಡದೇ ಇರುವ ತಪ್ಪಿಗೆ ಶಿಕ್ಷೆ ಅನುಭವಿಸಿದಂತಾಗಿದೆ, ಹೀಗಾಗುತ್ತದೆ ಅಂತ ಕನಸು ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ ನಾನು ಸರಿಯಾಗಿ ಓದಿ ಇಡೀ ಕ್ಲಾಸಿಗೇ ಫಸ್ಟ್ ಬರಬೇಕು ಮುಂದೆ ಕಾಲೇಜು ಸೇರಿ ದೊಡ್ಡ ಸಾಧನೆ ಮಾಡಬೇಕು ಅಂತ ಏನೇನೋ ಕನಸು ಕಂಡಿದ್ದೆ. ಆದರೆ ಅದೆಲ್ಲ ಮಂಜಿನಂತೆ ಕರಗಿ ಹೋಯಿತು ಅಂತ ಕಣ್ತುಂಬ ನೀರು ತಂದು ಯೋಚಿಸತೊಡಗಿದಳು.

ಅದೇ ಸಮಯ ಪೋಸ್ಟ ಮ್ಯಾನ ಅವಸರವಾಗಿ ಇವರ ಮನೆಗೆ ಬಂದ. ಆಗ ಆತನಿಗೆ ನೋಡಿ ಎಲ್ಲರಿಗೂ ಗಾಬರಿ ಆವರಿಸಿತು. ಆತನ ಕಡೆ ಪ್ರಶ್ನಾರ್ಥಕವಾಗಿ ನೋಡತೊಡಗಿದರು.

“ಯಾಕೆ ಮತ್ತೆ ಪತ್ರ ಬಂದಿದೆಯಾ?” ಅಂತ ಬಸವರಾಜ ತೀಕ್ಷ್ಣವಾಗಿ ಪ್ರಶ್ನಿಸಿದ.

ಇಲ್ಲ ಯಾವ ಪತ್ರವೂ ಬಂದಿಲ್ಲ ಮೊನ್ನೆ ಕೊಟ್ಟ ಪತ್ರದ ವಿಳಾಸ ಬದಲಾಗಿದೆ. ಅದು ನಿಮ್ಮ ಮಗಳಿಗೆ ಬಂದುದ್ದಲ್ಲ ದೊಡ್ಡ ಮನಿ ಬಸವಣ್ಣನ ಮಗಳು ಪಲ್ಲವಿಗೆ ಬಂದಿದ್ದು. ಅವಳಿಗೆ ಬೆಂಗಳೂರಿನ ಹುಡುಗನ ಜೊತೆ ನಿಶ್ಚಿತಾರ್ಥವಾಗಿದೆ. ಆ ಹುಡುಗನೇ ಈ ಪತ್ರ ಬರೆದಿದ್ದಾನೆ ಈ ವಿಷಯ ಅವರ ಮನೆ ಕಡೆ ಹೋದಾಗ ಗೊತ್ತಾಯಿತು. ಇಬ್ಬರ ಹೆಸರು ಒಂದೇ ಆಗಿದ್ದರಿಂದ ಹೀಗಾಗಿದೆ ಅಂತ ವಾಸ್ತವ ಹೇಳಿದ.

“ಈಗಲಾದರು ಸತ್ಯ ಗೊತ್ತಾಯಿತಲ್ಲ” ಅಂತ ಸುಜಾತಾ ಗಂಡನ ಮುಖ ನೋಡತೊಡಗಿದಳು. ಆಗ ಬಸವರಾಜನ ಕೋಪ ಏಕಾಏಕಿ ತಣ್ಣಗಾಗಿ ನಾನು ಮಗಳ ಮೇಲೆ ಕೋಪ ತಾಪ ಹೊರ ಹಾಕಿ ತಪ್ಪು ಮಾಡಿದೆ ಅಂತ ಮಗಳ ಮುಖ ಕರುಣಾಭಾವದಿಂದ ನೋಡತೊಡಗಿದ. ಪಲ್ಲವಿಯ ಕಣ್ಣಿಂದ ಆನಂದಬಾಷ್ಪ ಸುರಿಯುತಿದ್ದವು. !!