ನಮ್ಮ ಶಿಕ್ಷಕರು ಕೊಡುತ್ತಿದ್ದ ಆ ಶಿಕ್ಷೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಈ ಕಾರಣದಿಂದಲೇ ನಾನು ನನ್ನ ವಿದ್ಯಾರ್ಥಿಗಳನ್ನು ದಂಡಿಸಲಾರೆ. ಹಾಗಾಗಿ ತಮ್ಮ ಮನೋಗತವನ್ನು ವಿದ್ಯಾರ್ಥಿಗಳು ನಿರ್ಭಯದಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರಯೋಗ, ಯೋಜನೆ, ಚಟುವಟಿಕೆ, ಕಲಿಕಾ ಬೋಧನಾ ಪ್ರಕ್ರಿಯೆ, ಕ್ರೀಡೆ ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇಂತಹ ಅವಕಾಶ ದೊರೆಯುವುದು ಮುಕ್ತವಾದ, ಭಯವಿಲ್ಲದ ವಾತಾವರಣ ಇದ್ದಾಗ ಮಾತ್ರ. ಆ ಸತ್ಯ ಕಂಡುಕೊಂಡ ನಾನು ನನ್ನ ವೃತ್ತಿ ಬದುಕಿನಲ್ಲಿ ತರಗತಿಯಲ್ಲಿ ಭಯ ಮುಕ್ತ ವಾತಾವರಣ ಸೃಷ್ಟಿಸಲು ಪ್ರಯತ್ನಿಸುವೆ.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗೆ

ಆ ದಿನ ಪೋಷಕರ ಸಭೆ ನಡೆದಿತ್ತು. ಪೋಷಕರು “ಟೀಚರ್, ನೀವು ತುಂಬಾ ಚೆನ್ನಾಗಿ ಪಾಠ ಮಾಡುತ್ತೀರಿ. ನಮಗೆ ಆ ವಿಷಯದ ಬಗ್ಗೆ ಖುಷಿ ಇದೆ. ಆದರೆ ಮಕ್ಕಳನ್ನು ನೀವು ತುಂಬಾ ವಹಿಸಿಕೊಳ್ಳುತ್ತೀರಿ, ಅವರನ್ನು ತಲೆ ಮೇಲೆ ಕೂಡಿಸಿಕೊಂಡು ಮೆರೆಸುತ್ತೀರಿ. ಸರಿಯಾಗಿ ನಾಲ್ಕು ಬಿಗಿಯಲ್ಲ. ಕೊನೆ ಪಕ್ಷ ನಾಲ್ಕು ಮಾತು ಬೈಯ್ಯುವುದಾದರೂ ಮಾಡ್ತೀರಾ? ಅದು ಇಲ್ಲ” ಎಂದರು. ನನಗೆ ಈ ಮಾತನ್ನು ಹೊಗಳಿಕೆ ಎಂದು ಭಾವಿಸಬೇಕೊ ಅಥವಾ ತೆಗಳಿಕೆ ಎಂದು ಯೋಚಿಸಬೇಕೋ ತಿಳಿಯಲಿಲ್ಲ. ಈ ಮಾತು ನನಗೆ ಹೊಸದು ಅನ್ನಿಸಲಿಲ್ಲ. ಪ್ರತಿ ಶಾಲೆಯಲ್ಲೂ ಪೋಷಕರಿಂದ ಇದೆ ಡೈಲಾಗ್ ಕೇಳುತ್ತಿರುತ್ತೇನೆ. ಹಾಗಂತ ನಾನು ಅವರ ಮಾತಿಗೆ ಪ್ರೇರಣೆಗೊಂಡು ವಿದ್ಯಾರ್ಥಿಗಳಿಗೆ ಹೊಡೆಯಲು ಶುರು ಮಾಡುವುದಿಲ್ಲ. ಮಕ್ಕಳನ್ನು ಯಾಕೆ ಶಿಕ್ಷಿಸಬೇಕು? ಸರಿಯಾದ ಕಾರಣ ಕೊಡಿ ಎಂದೆನು. ಆಗ ತಾಯೊಬ್ಬರು ಹೇಳಿದರು “ನನ್ನ ಮಗ ಸಂಜೆ ಆದರೆ ಸಾಕು ಆಟ ಆಡಲು ಹೋಗುತ್ತಾನೆ” ಎಂದರು. ಮತ್ತೊಬ್ಬರು “ನನ್ನ ಮಗ ಭಾನುವಾರ ಸೂರ್ಯ ನೆತ್ತಿ ಸುಟ್ಟರೂ ಮೇಲೆ ಏಳೋದಿಲ್ಲ ಭಯ ಇಟ್ಟಿಲ್ಲ ನೀವು” ಅಂದರು. ಮಗದೊಬ್ಬ ತಾಯಿ “ನನ್ನ ಮಗಳು ಈ ಓಣಿಯ ಕೆಲವು ಮಕ್ಕಳನ್ನು ಸೇರಿಸಿಕೊಂಡು ಅಂಗಡಿ ಆಟ ಆಡುತ್ತಾಳೆ, ಅಷ್ಟೇ ಅಲ್ಲ ಗಂಡು ಬೀರಿ ರೀತಿ ಊರನ್ನು ಸುತ್ತುತ್ತಾಳೆ” ಅಂತ ತನ್ನದೇ ಮಗಳ ಗುಣಗಾನ ಮಾಡಿದರು. ನೀವಾದರೂ ಬೈದು ಮನೆಯೊಳಗೇ ಇರಲು ಬುದ್ಧಿ ಹೇಳಿ ಅಂದರು.

ಹೀಗೆ ಟಿವಿಯಲ್ಲಿ ಪ್ರಸಾರವಾಗುವ ಧಾರಾವಾಹಿ ರೀತಿ ಕಂತುಗಳಲ್ಲಿ ಬರುತ್ತಿದ್ದ ಕಂಪ್ಲೇಂಟ್ ಕೇಳಿ ನಾನೇ ಅವಾಕ್ಕಾದೆ. ಇದೇನಪ್ಪ ಈ ಪೋಷಕರು ಯಾರದೋ ಮಕ್ಕಳಲ್ಲ; ತಮ್ಮದೇ ಮಕ್ಕಳ ಮೇಲೆ ಹನುಮಂತನ ಬಾಲದಷ್ಟು ಉದ್ದುದ್ದ ದೂರು ಹೇಳುತ್ತಾರಲ್ಲ ಎಂದು ತುಸು ಬೇಸರವಾಯಿತು. ನಾನಾಗ ನೋಡಿ ಪೋಷಕರೇ, “ಮಕ್ಕಳಿಗೆ ಕೇವಲ ಪಾಠ ಅಷ್ಟೇ ಮುಖ್ಯವಲ್ಲ. ಅದರ ಜೊತೆಗೆ ಆಟ, ಮನೋರಂಜನೆ, ಸಂಗೀತ, ನೃತ್ಯ, ಚಿತ್ರಕಲೆಗಳು ಅಷ್ಟೇ ಮುಖ್ಯ. ಪರ್ಸಂಟೇಜ್ ಗುಂಗಿನಲ್ಲಿ ಮಕ್ಕಳನ್ನು ಕ್ರೀಡಾಂಗಣದಿಂದ ಹೊರಗಿಡುವುದು ತಪ್ಪು. ಮಕ್ಕಳ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ಪೂರಕವಾಗಿರುತ್ತವೆ. ಹಾಗಾಗಿ ಅವುಗಳಲ್ಲಿ ತೊಡಗುವ ನಿಮ್ಮ ಮಕ್ಕಳನ್ನು ಕಂಡು ನೀವು ಖುಷಿ ಪಡಬೇಕು. ಅದೊಂದು ಕಲೆ ಎಲ್ಲರಿಗೂ ಸಿದ್ಧಿಸುವಂಥದ್ದಲ್ಲ. ನಿಮ್ಮ ಮಕ್ಕಳಷ್ಟು ಚಂದವಾಗಿ ಚಿತ್ರ ಬಿಡಿಸಿದರೆ, ಕಾಗದದಿಂದ ಹೂವಿನ ಮಾಲೆ ತಯಾರಿಸಿದರೆ ನನಗಂತೂ ಸಂಭ್ರಮವೋ ಸಂಭ್ರಮ. ನೀವ್ಯಾಕೆ ಇತರ ಬೇಸರಪಟ್ಟುಕೊಳ್ಳುತ್ತೀರಿ” ಎಂದೆ. ಅವರನ್ನು ಪುಸ್ತಕದ ಹುಳುಗಳಾಗಿ ಮಾಡಬೇಡಿ ಎಂದು ವಿನಂತಿಸಿದೆ. ನನ್ನ ಮಾತು ಸರಿ ಎನಿಸಿತೋ ಏನೋ ಅಥವಾ ಟೀಚರ್ ತಲೆ ತಿಂತಾರೆ ಅಂತಲೋ ಮುಂದೆ ಇಂತಹ ದೂರುಗಳು ಕಡಿಮೆಯಾದವು.

ಸರ್ಕಾರ ಶಿಕ್ಷೆ ರಹಿತ ಶಿಕ್ಷಣ ಜಾರಿ ಮಾಡಿದ್ದು ಶಿಕ್ಷಣಕ್ಕೆ ಆದ್ಯತೆ ನೀಡುತ್ತಿದೆ. ಇದರ ಕುರಿತು ಪೋಷಕರಿಗೆ ಅರಿವು ಮೂಡಿಸಲು ನಿರ್ಧರಿಸಿ ಪೋಷಕರ ಸಭೆಯೊಳಗೆ ಇದನ್ನೆಲ್ಲ ಮನವರಿಕೆ ಮಾಡಿಕೊಡಲು ನಿರ್ಧರಿಸಿದೆ. ಅದಕ್ಕಾಗಿ ನಾನೊಂದಿಷ್ಟು ಮಾಹಿತಿಗಳನ್ನು ಕಲೆಹಾಕಿದೆ. ಶಿಕ್ಷೆಗೆ ಹೆದರಿ ಮನೆ ತ್ಯಜಿಸಿ ಓಡಿ ಹೋದ ಮಕ್ಕಳು, ಹೋಂವರ್ಕ್ ಮಾಡಿಲ್ಲ ಟೀಚರ್ ಹೊಡಿತಾರೆ ಅಂತ ಆತ್ಮಹತ್ಯೆ ಮಾಡಿಕೊಂಡ ಮಕ್ಕಳು, ಪೇರೆಂಟ್ ಮೀಟಿಂಗ್‌ನಲ್ಲಿ ಶಿಕ್ಷಕರು ಪೋಷಕರಿಗೆ ದೂರು ಹೇಳುತ್ತಾರೆ ಆಗ ತಂದೆ ತಾಯಿಗಳು ಹೊಡಿತಾರೆ ಅನ್ನುವ ಭಯದಿಂದಲೋ, ಖಿನ್ನತೆಗೆ ಒಳಗಾದ ಮಕ್ಕಳು, ಶಾಲೆ ಬಿಟ್ಟು ಹೋಗಿ ಬಾಲಕಾರ್ಮಿಕರಾದ ಮಕ್ಕಳುಗಳ ಮಾಹಿತಿಯನ್ನು ಪತ್ರಿಕೆಗಳಲ್ಲಿ ಸಂಗ್ರಹಿಸಿ ಇಟ್ಟುಕೊಂಡೆ. ಆ ಊರಿನ ಹಿರಿಯ ಜೀವಗಳನ್ನು ಭೇಟಿ ಮಾಡಿ ಅವರು ಶಾಲೆ ತೊರೆದು ಅವಿದ್ಯಾವಂತರಾಗಲು ಕಾರಣಗಳನ್ನು ಕಲೆಹಾಕಿದೆ. ಈಗಾಗಿದ್ದರೇ ಪ್ರಾಜೆಕ್ಟ್ ಪಿ.ಪಿ.ಟಿ ಬಳಸಿ ವಿಡಿಯೋಗಳು ಮತ್ತು ಆಡಿಯೋಗಳ ಮೂಲಕ ದೃಶ್ಯ ಕಾವ್ಯ ರೂಪದಲ್ಲಿ ಮಕ್ಕಳಿಗೆ ಮನವರಿಕೆ ಮಾಡಿಸಿಬಿಡಬಹುದಿತ್ತು. ಆದರೂ ಇವನ್ನೆಲ್ಲಾ ಬಳಸಿಕೊಂಡು ತಿಳುವಳಿಕೆ ನೀಡಲು ತಯಾರಾಗಿಬಿಟ್ಟೆ.

ನಾನು ನಿಗದಿಪಡಿಸಿಕೊಂಡ ದಿನ ಬಂದಾಯ್ತು. ಪೋಷಕರೆಲ್ಲ ಮುಖ್ಯ ಶಿಕ್ಷಕರ ಕೊಠಡಿ ಸೇರಿದ್ದರು. ಶಾಲೆ ಮುಗಿಸಿ ಮಕ್ಕಳನ್ನು ಮನೆಗಳಿಗೆ ಕಳುಹಿಸಲಾಯಿತು. ನಂತರ ಪೋಷಕರ ಸಭೆ ಶುರುಮಾಡಿದೆ. “ನೋಡಿ ಪೋಷಕ ಬಂಧುಗಳೇ, ಈ ದಿನ ಶಿಕ್ಷಣದಲ್ಲಿ ಶಿಕ್ಷೆ ಬೇಕೆ? ಬೇಡವೇ? ಅನ್ನುವ ವಿಚಾರವನ್ನು ಚರ್ಚಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ. ನಿಮ್ಮ ನಿಮ್ಮ ಅಭಿಪ್ರಾಯಗಳನ್ನು ನೀವು ಮಂಡಿಸಬಹುದು ಎಂದೆನು. ಆಗ ಕೆಲವು ಪೋಷಕರು “ನಾವೆಲ್ಲಾ ಓದುವಾಗ ನಮ್ಮ ಮೇಷ್ಟ್ರುಗಳು ಎಷ್ಟು ಭಯ ಇಟ್ಟಿದ್ದರು. ಅವರು ಜೋರಾಗಿ ಹೆಸರು ಕೂಗಿದರೆ ಸಾಕು ಚಡ್ಡಿಯಲ್ಲಿ ಒದ್ದೆ ಮಾಡಿಕೊಳ್ಳುತ್ತಿದ್ದೆವು. ಅವರು ಮನೆಯ ಬಳಿ ಬರುತ್ತಾರೆಂದರೆ ಕದ್ದು ಎಲ್ಲೋ ಓಡಿ ಹೋಗಿರುತ್ತಿದ್ದೆವು. ಇಲ್ಲಸಲ್ಲದ ನೆಪ ಹೇಳಿ ಶಾಲೆಗೆ ಚಕ್ಕರ್ ಹಾಕುತ್ತಿದ್ದೆವು ಅಷ್ಟು ಭಯ ಇಟ್ಟಿದ್ದರು. ಆದರೇ ನಿಮ್ಮ ಮಕ್ಕಳು ನಿಮ್ಮ ತೊಡೆ ಮೇಲೆ ಕುಳಿತುಕೊಳ್ಳುತ್ತಾರೆ. ನಿಮ್ಮನ್ನು ಸುತ್ತಲೂ ನೊಣಗಳ ತರ ಮುತ್ತುಕೊಳ್ಳುತ್ತಾರೆ. ಮಿಸ್ ಗೆ ಹೇಳುತ್ತೀನಿ ಎಂದರೆ ಹೇಳೋಗಿ ನಮ್ಮ ಮಿಸ್ ತುಂಬಾ ಒಳ್ಳೆಯವರು, ನನಗೇನು ಹೊಡೆಯಲ್ಲಾ ಅನ್ನುತ್ತಾರೆ” ಎಂದರು.

ಮತ್ತೊಬ್ಬರು ಎದ್ದುನಿಂತು “ಮಿಸ್ ನೀವು ಮಾಡೋದು ಸರಿಯಿದೆ. ಮಕ್ಕಳನ್ನು ಹೊಡೆಯಬಾರದು. ಅವರನ್ನು ಪ್ರೀತಿಯಿಂದ ತಿದ್ದಬೇಕು. ನಾನು ನಮ್ಮ ಅಣ್ಣ ಒಟ್ಟಿಗೆ ಶಾಲೆಗೆ ಹೋಗುತ್ತಿದ್ದೆವು. ನಮ್ಮ ಮೇಷ್ಟ್ರು ದನಕ್ಕೆ ಬಡಿಯುವಂತೆ ಬಡಿತಿದ್ರು. ನಮ್ಮ ಅಣ್ಣ ಗಟ್ಟಿ ಇದ್ದ. ಹೇಗೋ ಆ ಒಡೆತ ಸಹಿಸಿಕೊಳ್ಳುತ್ತಿದ್ದ. ನಾನು ಸಣಕಲ ಪೈಲ್ವಾನ. ಅವರ ಪೆಟ್ಟಿಗೆ ತಡೆಯುತ್ತಿರಲಿಲ್ಲ. ಜೀವವೇ ಹೋದಂತೆ ಆಗುತಿತ್ತು. ಅದಕ್ಕೆ ನಾನು ಮನೆಯಿಂದ ಶಾಲೆಗೆ ಹೋಗುತ್ತೇನೆಂದು ಬಂದು ಶಾಲೆಗೆ ಹೋಗದೆ ಬೇರೆ ಕಡೆ ಬೇಲಿಯ ಮರೆಯಲ್ಲಿ, ಮರದ ಮೇಲೆ ಕದ್ದು ಕೂತು ಸಂಜೆ ಮನೆಗೆ ಹೋಗುತ್ತಿದ್ದೆ. ಆದರೂ ಶಾಲೆಯಲ್ಲಿ ತಪ್ಪಿಸಿಕೊಂಡ ಪೆಟ್ಟು ಮನೆಯಲ್ಲಿ ಅಪ್ಪನಿಂದ ಸಿಗುತ್ತಿತ್ತು. ನಾನು ಹೆಬ್ಬೆಟ್ಟು ಒತ್ತುವಾಗೆಲ್ಲ ಬೈಕೋತೀನಿ ಆ ಮೇಷ್ಟ್ರು ನೆಟ್ಟಗೆ ಇದ್ದು ತಾಳ್ಮೆಯಿಂದ ಪಾಠ ಹೇಳಿಕೊಟ್ಟಿದ್ದರೆ, ನಿಮ್ಮ ಥರ ಪ್ರೀತಿಯಿಂದ ಹೇಳಿ ಕೊಟ್ಟಿದ್ದರೆ ನಾನು ಇವತ್ತು ಜನರ ಮುಂದೆ ಹೆಬ್ಬಟ್ಟು ರಾಜಣ್ಣ ಅನಿಸಿಕೊಳ್ಳುವಂತಿರಲಿಲ್ಲ” ಎಂದು ತುಂಬಾ ನೋವಿನಿಂದ ಭಾವುಕರಾಗಿ ಮಾತನಾಡಿದರು. ಇಡೀ ಸಭೆಯೇ ಮೌನಕ್ಕೆ ಜಾರಿತು.

ಹೀಗೆ ಒಬ್ಬರ ನಂತರ ಮತ್ತೊಬ್ಬರಂತೆ ತಮ್ಮ ವಾದ ಪ್ರತಿವಾದಗಳನ್ನು ಮಂಡಿಸಿದರು. ನಾನು ಸಂಗ್ರಹಿಸಿದ್ದ ಪೇಪರ್ ಕಟಿಂಗ್‌ಗಳನ್ನು ಓದಿಸಿದೆ. ಅದೇ ಊರಿನ ಜನರ ಅನುಭವಗಳನ್ನು ಹಂಚಿಕೊಂಡೆ. ಅಂತಿಮವಾಗಿ ಎಲ್ಲರೂ ಶಿಕ್ಷಣಕ್ಕೆ ಶಿಕ್ಷೆಯೊಂದೆ ದಾರಿಯಲ್ಲ ಎಂಬ ತೀರ್ಮಾನಕ್ಕೆ ಬಂದರು. ಟೀಚರ್ ಹೊಡೆತಕ್ಕೆ ಹೆದರಿ ನಮ್ಮ ಮಕ್ಕಳು ಪ್ರಾಣಕ್ಕೆ ಏನಾದರೂ ಸಂಚಕಾರ ತಂದುಕೊಂಡರೆ ಏನು ಗತಿ ಅಥವಾ ಮನೆ ಬಿಟ್ಟು ಓಡಿ ಹೋದರೆ ಮುಂದೆ ನಮ್ಮ ಕಥೆ ಏನಾಗುತ್ತೆ ಎಂದು ತಮ್ಮ ತಮ್ಮಲ್ಲಿ ಚರ್ಚಿಸುತ್ತಾ ನನ್ನ ನಡೆಯನು ಬೆಂಬಲಿಸಿದರು. ಅವರ ಮನಸ್ಸು ತಿಳಿಯಾದುದನ್ನು ಕಂಡು ನಾನು ಮಾತು ಮುಂದುವರಿಸಿದೆ.

ಕಬ್ಬಿಣ ಕಾದಾಗಲೇ ತಟ್ಟಬೇಕು. ನಮಗೆ ಬೇಕಾದ ಆಕೃತಿ ನೀಡಬೇಕು. ನೋಡಿ ಇಂದಿನ ಮಕ್ಕಳ ಮನಸ್ಥಿತಿ ತುಂಬಾ ಸೂಕ್ಷ್ಮವಾಗಿದೆ. ಬೇರೆಯವರ ಮುಂದೆ ದಂಡಿಸುವುದನ್ನು, ಬೈಯ್ಯುವುದನ್ನು ಅವಮಾನ ಎಂದು ಭಾವಿಸಿ ಪ್ರಾಣ ಕಳೆದುಕೊಳ್ಳುವ ಹಂತಕ್ಕೆ ತಲುಪುತ್ತಾರೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ನಾವು ಮಕ್ಕಳನ್ನು ಪ್ರೀತಿ ಸ್ನೇಹ ಕಾಳಜಿಯಿಂದ ತಿದ್ದಬೇಕು. ಅವರು ತಪ್ಪು ಮಾಡಿದಾಗ ಸೂಕ್ತವಾದ ಮಾರ್ಗದರ್ಶನ ನೀಡಿ ಸರಿದಾರಿಯಲ್ಲಿ ನಡೆಸಬೇಕು. ಈಗಿನ ಮಕ್ಕಳು ಜಾಣರಿದ್ದಾರೆ. ಅವರಿಗೆ ಬೈದು ಹೊಡೆದು ಬುದ್ಧಿ ಹೇಳುವ ಅಗತ್ಯವಿಲ್ಲ. ತಿಳಿ ಹೇಳಿದರು ಸಾಕು ಅದರ ಸಾಧಕ ಭಾದಕಗಳನ್ನು ಅರಿತು ನಡೆಯುತ್ತಾರೆ ಎಂದಾಗ ಎಲ್ಲರೂ ಚಪ್ಪಾಳೆ ತಟ್ಟಿದ್ದು ನೋಡಿ ತುಸು ಸಮಾಧಾನ ಆಯಿತು. ನೋಡಿ ಪೋಷಕರೇ, ಶಿಕ್ಷಣ ಇಲಾಖೆಯು ಶಿಕ್ಷೆಯ ಅನುಕೂಲ ಅನಾನುಕೂಲಗಳನ್ನು ಕುರಿತು ಚಿಂತಿಸಿ, ಚರ್ಚಿಸಿ ಈ ನಿರ್ಣಯಕ್ಕೆ ಬಂದಿರುತ್ತಾರೆ. ಮಕ್ಕಳ ಮಾನಸಿಕ ಹಾಗೂ ದೈಹಿಕ ವಲಯಗಳಿಗೆ ನೀಡುವ ದುಷ್ಪರಿಣಾಮಗಳನ್ನು ತಡೆಯಲು, ಮಕ್ಕಳ ಹಾಜರಾತಿ ಸಂಖ್ಯೆಯನ್ನು ಹಿಮ್ಮಡಿಗೊಳಿಸಲು, ಶಾಲಾ ಶಿಕ್ಷಣದಲ್ಲಿ ಗುಣಾತ್ಮಕತೆಯನ್ನ ತರಲು ಶಾಲಾ ಶಿಕ್ಷಣದಲ್ಲಿ ಶಿಕ್ಷೆ ನೀಡುವುದು ಅಪರಾಧ ಎಂದು ಕಾನೂನು ಮಾಡಿದೆ. ಶಾಲೆಗಳಲ್ಲಿ ಚಾರ್ಚು, ಮ್ಯಾಪ್ ತೋರಿಸಲು, ಬೋರ್ಡಿನ ಮೇಲ್ಭಾಗದಲ್ಲಿ ಇರುವುದನ್ನು ಓದಲು ಕೂಡ ಕಡ್ಡಿ ಬಳಸುವಂತಿಲ್ಲ. ಮಕ್ಕಳಿಗೆ ಕಾನೂನು ಹೊಡೆಯದಂತೆ ಮಾತ್ರವಲ್ಲ ಬೈಯ್ಯುವುದು, ಮಕ್ಕಳನ್ನು ಗುರಾಯಿಸಿ ನೋಡುವುದನ್ನು ನಿಷೇಧಿಸಿದೆ. ಇವೆಲ್ಲ ಸುಖಾ ಸುಮ್ಮನೆ ಹುಟ್ಟಿದ ಕಾನೂನುಗಳಲ್ಲ. ತಜ್ಞರ ಅನುಭವ, ವರದಿ, ಮಾಹಿತಿ ಸಂಗ್ರಹಣೆ, ಕ್ಷೇತ್ರ ಭೇಟಿ, ಮಕ್ಕಳ ಅನುಭವಗಳು, ಪೋಷಕರ ಅಹವಾಲುಗಳನ್ನು ಆಧರಿಸಿ ಇಂತಹ ನಿಯಮಗಳನ್ನು ರೂಪಿಸಲಾಗಿದೆ.

ಶಿಕ್ಷಕರು ಹೊಡೆಯುವಾಗ ಮಕ್ಕಳ ಕಣ್ಣಿಗೆ ತಾಕಿ ದೃಷ್ಟಿ ಹೀನರಾಗಿರುವುದು, ತಪ್ಪು ಮಾಡಿದವರಿಗೆ ಕೊಡುವ ಪೆಟ್ಟು ಆಕಸ್ಮಿಕವಾಗಿ ಮತ್ತೊಬ್ಬ ವಿದ್ಯಾರ್ಥಿಯನ್ನು ಘಾಸಿಗೊಳಿಸಿರುವುದು ಇವೆಲ್ಲಾ ಶಿಕ್ಷೆ ರಹಿತ ಶಿಕ್ಷಣವನ್ನು ಬೆಂಬಲಿಸುತ್ತವೆ ಎಂದು ವಿವರಿಸಿದಾಗ ಅಷ್ಟೇ ಅಲ್ಲ ಮಿಸ್ “ನಮ್ಮ ಕಾಲದಲ್ಲಿ ಕುರ್ಚಿ ಕೂಡಿಸುತ್ತಿದ್ದರು. ಬಸ್ಕಿ ಹೊಡೆಸುತ್ತಿದ್ದರು. ಪ್ರಾಣ ಬಗ್ಗಿಸುತ್ತಿದ್ದರು. ಕಿವಿ ಹಿಂಡುವುದು, ಸೋಮಾರಿ ಪೇಟೆ ತೊಡಿಸಿ ಎಲ್ಲಾ ತರಗತಿಗಳಲ್ಲಿ ಮೆರವಣಿಗೆ ಮಾಡಿಸುತ್ತಿದ್ದರು” ಮುಂತಾದ ತಾವು ಅನುಭವಿಸಿದ ಶಿಕ್ಷೆಯ ಸ್ವರೂಪವನ್ನು ಮೆಲುಕು ಹಾಕಿದರು.

ನಮ್ಮ ಶಿಕ್ಷಕರು ಕೊಡುತ್ತಿದ್ದ ಆ ಶಿಕ್ಷೆ ನೆನಪಿಸಿಕೊಂಡರೆ ಈಗಲೂ ಭಯವಾಗುತ್ತದೆ. ಈ ಕಾರಣದಿಂದಲೇ ನಾನು ನನ್ನ ವಿದ್ಯಾರ್ಥಿಗಳನ್ನು ದಂಡಿಸಲಾರೆ. ಹಾಗಾಗಿ ತಮ್ಮ ಮನೋಗತವನ್ನು ವಿದ್ಯಾರ್ಥಿಗಳು ನಿರ್ಭಯದಿಂದ ನನ್ನೊಂದಿಗೆ ಹಂಚಿಕೊಳ್ಳುತ್ತಾರೆ. ಪ್ರಯೋಗ, ಯೋಜನೆ, ಚಟುವಟಿಕೆ, ಕಲಿಕಾ ಬೋಧನಾ ಪ್ರಕ್ರಿಯೆ, ಕ್ರೀಡೆ ಎಲ್ಲದರಲ್ಲೂ ಸಕ್ರಿಯವಾಗಿ ಪಾಲ್ಗೊಳ್ಳುತ್ತಾರೆ. ಇಂತಹ ಅವಕಾಶ ದೊರೆಯುವುದು ಮುಕ್ತವಾದ, ಭಯವಿಲ್ಲದ ವಾತಾವರಣ ಇದ್ದಾಗ ಮಾತ್ರ. ಆ ಸತ್ಯ ಕಂಡುಕೊಂಡ ನಾನು ನನ್ನ ವೃತ್ತಿ ಬದುಕಿನಲ್ಲಿ ತರಗತಿಯಲ್ಲಿ ಭಯ ಮುಕ್ತ ವಾತಾವರಣ ಸೃಷ್ಟಿಸಲು ಪ್ರಯತ್ನಿಸುವೆ.

ನಿಜಕ್ಕೂ ಇದು ನನ್ನ ಅದೃಷ್ಟ. ನನ್ನ ವಿದ್ಯಾರ್ಥಿಗಳು ಸಿಕ್ಕಾಗ ಹೇಳುವ ಮೊದಲು ಮಾತು “ಮಿಸ್ ನೀವು ತುಂಬಾ ಒಳ್ಳೆಯವರು. ನನ್ನನ್ನು ಒಮ್ಮೆಯೂ ಹೊಡೆದಿಲ್ಲ, ಬೈದಿಲ್ಲ. ನಾವು ಏನೇ ಕಿರಿಕಿರಿ ಮಾಡಿದರು ಅದೆಲ್ಲವನ್ನು ನಗುನಗುತ ತಿದ್ದುತ್ತಿದ್ದಿರಿ. ನಿಮಗೆ ಅಷ್ಟೊಂದು ತಾಳ್ಮೆ ಇದೆ ಮಿಸ್. ಟೀಚರ್ ಅನ್ನುವ ಶಬ್ದ ಕಿವಿಗೆ ಬಿದ್ದಾಗೆಲ್ಲ ನೀವೆ ಕಣ್ಣು ಮುಂದೆ ಬರುತ್ತೀರಿ ಎನ್ನುವಾಗ ಹೃದಯ ತುಂಬಿ ಬರುತ್ತದೆ. ಶಿಕ್ಷೆ ಬೇಕೇ ಬೇಡವಾ ಎನ್ನುವ ಜಿಜ್ಞಾಸೆ ಹೊರತಾಗಿ ನಾನು ಶಿಕ್ಷೆ ರಹಿತ ಶಿಕ್ಷಣವನ್ನು ಬೆಂಬಲಿಸುವೆ.