ಚಿಕ್ಕಂದಿನಿಂದ ಅಮ್ಮ ತರೀಕೆರೆಯ ಸಾರ್ವಜನಿಕ ಗ್ರಂಥಾಲಯದಿಂದ ತಂದು ಕೊಡುತ್ತಿದ್ದ ಮಕ್ಕಳ ಪುಸ್ತಕಗಳನ್ನು, ಮನೆಗೆ ತರಿಸುತ್ತಿದ್ದ ಚಂಪಕ, ಬಾಲಮಂಗಳ ಮಾಸಿಕಗಳು, ಪ್ರಜಾವಾಣಿ ಮತ್ತು ಮಯೂರದಲ್ಲಿ ಬರುತ್ತಿದ್ದ ಮಕ್ಕಳ ಕತೆಗಳು, ಪುಟ್ಟಿ ರಾಮನ್ ಮುಂತಾದ ಕಾರ್ಟೂನ್‌ಗಳನ್ನು ನಾನು ನನ್ನ ಅಕ್ಕ ಪೈಪೋಟಿಯಲ್ಲಿ ಓದುತ್ತಿದ್ದೆವು, ಅದೇ ಪೈಪೋಟಿ ಮುಂದುವರೆದು ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಹೊಸ ಪುಸ್ತಕಗಳನ್ನು ಮೊದಲು ಓದಲು ಜಗಳವಾಡುತ್ತಿದ್ದೆವು. ಬಾಲ್ಯದಲ್ಲೇ ಕುವೆಂಪು, ಕಾರಂತ, ಪೂಚಂತೇ, ಎಂ.ಕೆ ಇಂದಿರಾ, ತ್ರಿವೇಣಿ ಮುಂತಾದ ದೊಡ್ಡ ಲೇಖಕರ ಪುಸ್ತಕಗಳನ್ನು ಓದಲಾರಂಭಿಸಿದ್ದೆವು.
ಈ ಸಲದ ಕೇಂದ್ರ ಸಾಹಿತ್ಯ ಅಕಾಡೆಮಿ ‘ಯುವ ಪುರಸ್ಕಾರ’ ಶ್ರುತಿ ಬಿ.ಆರ್. ಅವರಿಗೆ ಲಭಿಸಿದ್ದು, ಸಾಹಿತ್ಯ ಲೋಕಕ್ಕೆ ಕಾಲಿಟ್ಟ ದಿನಗಳನ್ನು ಕೆಂಡಸಂಪಿಗೆಯೊಟ್ಟಿಗೆ ಮೆಲುಕು ಹಾಕಿದ್ದಾರೆ. 

ಚಿಕ್ಕಂದಿನಿಂದ ಅಮ್ಮ ತರೀಕೆರೆಯ ಸಾರ್ವಜನಿಕ ಗ್ರಂಥಾಲಯದಿಂದ ತಂದು ಕೊಡುತ್ತಿದ್ದ ಮಕ್ಕಳ ಪುಸ್ತಕಗಳನ್ನು, ಮನೆಗೆ ತರಿಸುತ್ತಿದ್ದ ಚಂಪಕ, ಬಾಲಮಂಗಳ ಮಾಸಿಕಗಳು, ಪ್ರಜಾವಾಣಿ ಮತ್ತು ಮಯೂರದಲ್ಲಿ ಬರುತ್ತಿದ್ದ ಮಕ್ಕಳ ಕತೆಗಳು, ಪುಟ್ಟಿ ರಾಮನ್ ಮುಂತಾದ ಕಾರ್ಟೂನ್‌ಗಳನ್ನು ನಾನು ನನ್ನ ಅಕ್ಕ ಪೈಪೋಟಿಯಲ್ಲಿ ಓದುತ್ತಿದ್ದೆವು, ಅದೇ ಪೈಪೋಟಿ ಮುಂದುವರೆದು ಸುಧಾದಲ್ಲಿ ಬರುತ್ತಿದ್ದ ಧಾರಾವಾಹಿಗಳು ಮತ್ತು ಹೊಸ ಪುಸ್ತಕಗಳನ್ನು ಮೊದಲು ಓದಲು ಜಗಳವಾಡುತ್ತಿದ್ದೆವು. ಬಾಲ್ಯದಲ್ಲೇ ಕುವೆಂಪು, ಕಾರಂತ, ಪೂಚಂತೇ, ಎಂ.ಕೆ ಇಂದಿರಾ, ತ್ರಿವೇಣಿ ಮುಂತಾದ ದೊಡ್ಡ ಲೇಖಕರ ಪುಸ್ತಕಗಳನ್ನು ಓದಲಾರಂಭಿಸಿದ್ದೆವು.

ನಾನು ಮೊದ ಮೊದಲು ಬರೆದದ್ದು ಶಿಶುಪ್ರಾಸಗಳು 4-5 ನೇ ತರಗತಿಯಲ್ಲಿದ್ದಾಗ, ನಂತರ ಸಣ್ಣ ಸಣ್ಣ ಕತೆಗಳು, ಪದ್ಯಗಳನ್ನು ಬರೆಯುತ್ತಿದ್ದೆ. ಅವು ನನ್ನೂರು ತರೀಕೆರೆಯ ಸ್ಥಳೀಯ ಪತ್ರಿಕೆಯಾಗಿದ್ದ ತರೀಕೆರೆ ವಾಣಿಯಲ್ಲಿ ಆಗಾಗ ಪ್ರಕಟವಾಗುತ್ತಿದ್ದವು. ಐದನೇ ಕ್ಲಾಸಿನಲ್ಲಿದ್ದಾಗ ಒಂದು ಮನೆಯಂಗಳದ ಕವಿಗೋಷ್ಟಿಯಲ್ಲಿ ಪುಟ್ಟ ಪುಟ್ಟ ಪದ್ಯಗಳನ್ನು ಓದಿದ್ದು ಇನ್ನೂ ನೆನಪಿದೆ. ಎಂಟು ಒಂಬತ್ತನೇ ತರಗತಿಯಲ್ಲಿದ್ದಾಗ ಭದ್ರಾವತಿ ಆಕಾಶವಾಣಿಯಿಂದ ‘ಹಾರೋ ಹನುಮ’ ಎಂಬ ಧಾರಾವಾಹಿ ಪ್ರಸಾರವಾಗುತ್ತಿತ್ತು, ಅದರ ಕಂತುಗಳನ್ನು ಬರೆಯುವ ಅವಕಾಶ ಮಕ್ಕಳಿಗಿತ್ತು, ಅದರ ಎರಡು ಕಂತುಗಳಲ್ಲಿ ನನಗೆ ಬಹುಮಾನ ಬಂದಿತ್ತು. ಆಗ ಆಕಾಶವಾಣಿಯಿಂದ ಬಹುಮಾನವಾಗಿ ಕೊಟ್ಟಿದ್ದ ಹಲವಾರು ಪುಸ್ತಕಗಳು ಈಗಲೂ ನನ್ನ ಬಳಿ ಇವೆ.

ಹೀಗೆ ಓದು ಬರಹ ಸಾಗುತ್ತಿದ್ದಂತೆ ಮೊದಲು ಸಣ್ಣ ಕತೆ ಬರೆಯುತ್ತಿದ್ದ ನಾನು, ಕವಿತೆಯನ್ನೂ ಬರೆಯಲಾರಂಭಿಸಿದೆ. ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ ಓದುವಾಗ ಕಾಲೇಜಿನ ವಾರ್ಷಿಕ ಸಂಚಿಕೆಯಲ್ಲಿ ನನ್ನ ಕತೆ ಕವಿತೆಗಳು ಪ್ರಕಟವಾಗುವ ಕಾಲಕ್ಕೆ, ಆಗಾಗ ಮಯೂರದಲ್ಲೂ ಒಂದೊಂದು ಕವಿತೆ ಪ್ರಕಟವಾಗುತ್ತಿತ್ತು. ಪತ್ರಿಕೆಯ ಯುವ ಪುರವಣಿಗಳಿಗೆ ಲೇಖನ ಬರೆಯುತ್ತಿದ್ದೆ. 2008ರಲ್ಲಿ ಪ್ರಜಾವಾಣಿಯ ದೀಪಾವಳಿ ವಿಶೇಷಾಂಕದ ವಿದ್ಯಾರ್ಥಿ ವಿಭಾಗದಲ್ಲಿ ಕವಿತೆಗೆ ಬಹುಮಾನ ಸಿಕ್ಕಿತ್ತು. ಅದಕ್ಕೆ ದೊರೆತ ತೀರ್ಪುಗಾರರ ಟಿಪ್ಪಣಿ ಮತ್ತು ಕಾಲೇಜಿನ ಇಂಗ್ಲೀಷ್ ಮತ್ತು ಕನ್ನಡ ವಿಭಾಗಗಳಿಂದ ಸಿಕ್ಕ ಮೆಚ್ಚುಗೆ ಇನ್ನಷ್ಟು ಬರೆಯಲು ಉತ್ತೇಜನ ನೀಡಿತು.

ಹೀಗೆ ಓದು ಬರಹದ ಪಯಣದಲ್ಲಿ ಎಷ್ಟೊಂದು ಜನ ಸ್ನೇಹಿತರಾದರು. ನಾನು ಪಿಯುಸಿ ಯಲ್ಲಿದ್ದಾಗ ಗೊರೂರು ರಾಮಸ್ವಾಮಿ ಅಯ್ಯಂಗಾರರ ನಮ್ಮ ಊರಿನ ರಸಿಕರು ಪುಸ್ತಕದ ಬಗ್ಗೆ ಪ್ರಜಾವಾಣಿಯಲ್ಲಿ ಬರುತ್ತಿದ್ದ ಪುಸ್ತಕ ಸರಸ್ವತಿ ಅಂಕಣಕ್ಕೆ ಬರೆದಾಗ ಅದನ್ನು ನೋಡಿ ಮೆಚ್ಚಿ ಕಾಲೇಜಿನ ವಿಳಾಸಕ್ಕೆ ಒಂದಷ್ಟು ಪುಸ್ತಕಗಳನ್ನು ಕಳುಹಿಸಿದ್ದ ಹಿರಿಯರಾದ ಕೃಷ್ಣಮೂರ್ತಿ ಅಂಕಲ್ ಅಂದಿನಿಂದ ಇಂದಿನವರೆಗೂ ನನ್ನ ಹುಟ್ಟುಹಬ್ಬಕ್ಕೆ ತಪ್ಪದೇ ಪುಸ್ತಕಗಳನ್ನು ಕಳುಹಿಸುತ್ತಾರೆ. ನನ್ನ ಗ್ರಂಥ ಭಂಡಾರ ಅವರು ಕೊಡಿಸಿದ ಪುಸ್ತಕಗಳಿಂದ ಶ್ರೀಮಂತವಾಗಿದೆ.

ಮೈಸೂರಿನ ಮಾನಸಗಂಗೋತ್ರಿಯಲ್ಲಿ ಓದುವಾಗ ಆ ವಾತಾವರಣವೂ ಇನ್ನಷ್ಟು ಬರೆಸಿತ್ತು. ಕಾರ್ಯಕ್ರಮಗಳ ನಿರೂಪಣೆಯಲ್ಲಿ ಅಪಾರ ಮೆಚ್ಚುಗೆ ಪಡೆಯುತ್ತಿದ್ದದ್ದು ಪದ ಸಂಪತ್ತು ಹೆಚ್ಚಿದ್ದು ನನ್ನ ಓದು ಬರಹಗಳಿಂದಲೇ. ಮೈಸೂರಿನಲ್ಲಿದ್ದಾಗ ಕವನ ಸಂಕಲನ ಪ್ರಕಟಿಸುವುದರ ಬಗ್ಗೆ ನಾನು ಯೋಚಿಸಿಯೂ ಇರಲಿಲ್ಲ. ಬೆಂಗಳೂರಿಗೆ ಬಂದ ನಂತರ ಸಿಕ್ಕ ಗೆಳೆಯರ ಬಳಗ ಎಡೆಯೂರು ಪಲ್ಲವಿ, ದಾದಾಪೀರ್ ಜೈಮನ್, ಮಂಜು ನಾಯಕ್ ಚೆಳ್ಳೂರು, ಮಹಾಂತೇಶ್ ದೊಡ್ಡಮನಿ, ಶಿವಪ್ರಸಾದ್ ಪಟ್ಟಣಗೆರೆ ಇವರೆಲ್ಲರ ಉತ್ತೇಜನದಿಂದ ಜೀರೋ ಬ್ಯಾಲೆನ್ಸ್ ಕವನ ಸಂಕಲನ ಪ್ರಕಟವಾಯಿತು.

ಜೀರೋ ಬ್ಯಾಲೆನ್ಸ್ ಸಂಕಲನಕ್ಕೆ “ಶಿವಮೊಗ್ಗ ಕರ್ನಾಟಕ ಸಂಘದ ಜಿ.ಎಸ್.ಶಿವರುದ್ರಪ್ಪ ಪ್ರಶಸ್ತಿ, ಕ.ಸಾ.ಪ ದ ಡಿ.ಸಿ. ಅನಂತಸ್ವಾಮಿ ದತ್ತಿ ಪ್ರಶಸ್ತಿ, ಸೇಡಂನ ಅಮ್ಮ ಪ್ರಶಸ್ತಿ, ಡೊಂಗರಗಾವದ ಅವ್ವ ಪ್ರಶಸ್ತಿಗಳು ದೊರೆತಿದ್ದವು. ಈಗ ಈ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಸಂದಿರುವುದು ನನಗಿಂತಲೂ ನನ್ನ ಕುಟುಂಬ ಮತ್ತು ಸ್ನೇಹಿತರಿಗೆ ಸಂಭ್ರಮ ತಂದಿದೆ. ಅವರ ಸಂಭ್ರಮ ಕಂಡು ನನಗೂ ಸಂತಸ. ಈ ವರ್ಷ ಕಥಾ ಸಂಕಲನ ಪ್ರಕಟಿಸುವ ಸಿದ್ಧತೆಯಲ್ಲಿದ್ದೇನೆ. ಇನ್ನೂ ಎಷ್ಟೊಂದು ಪುಸ್ತಕಗಳು ಓದಲು ಸಾಲು ಸಾಲಾಗಿ ಕಾಯುತ್ತಿವೆ….