ಅಮ್ಮ ‘ಬೆಳಗಾರುತಿ ಬೆಳಗಾರತಿ ದತ್ತಾತ್ರೇಯನಿಗೆ’ ಎಂದು ಹಾಡುತ್ತಿದ್ದರೆ ಅದಕ್ಕೆಷ್ಟು ಅರ್ಥವಾಗಿತ್ತೋ… ಒಳಗೆ ಬರಲೊಲ್ಲೆ ಎಂಬಂತೆ ಹೊಸ್ತಿಲಿಗೆ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ಅದರ ಬಲಗಾಲನ್ನು ಎತ್ತಿ ಒಳಗೆ ಇಡಿಸಿದ್ದೆವು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಅದು ಮನೆಯೊಳಗೆ ಓಡಾಡುವಾಗ ಅದನ್ನು ಎಷ್ಟು ನೋಡಿದರೂ ಸಾಲದು. ನಾವು ಕರೆದರೂ ಹತ್ತಿರ ಬರದೇ ಕುರ್ಚಿಯ ಅಡಿಗೆ ಹೋಗಿ ಮಲಗುತ್ತಿತ್ತು. ಅದರ ಹಣೆಗೆ ಹಚ್ಚಿದ್ದ ಕುಂಕುಮ ಮಾತ್ರ ಅದು ಇನ್ನು ಮೇಲಿಂದ ನಮಗೇ ಸೇರಿದ್ದು ಎಂದು ನಿಖರವಾಗಿ ಹೇಳುತ್ತಿತ್ತು.
ತಮ್ಮ ಮುದ್ದು ನಾಯಿಯ ಕುರಿತು ಸಂಜೋತಾ ಪುರೋಹಿತ ಬರೆಯುವ ಹೊಸ ಸರಣಿ “ಕೂರಾಪುರಾಣ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ ನಿಮ್ಮ ಓದಿಗೆ
ಎಮ್ಮ ಮನೆಯಂಗಳಕ್ಕೆ ಬಂದಿಳಿದಿರುವ ಚಂದಿರ
ಅವತ್ತು ಜುಲೈ ೪, ಭಾನುವಾರದ ಮಧ್ಯಾಹ್ನ. ಅಮೇರಿಕಾ ದೇಶ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮದಲ್ಲಿತ್ತು. ರಜೆಯ ಮೋಜಿನಲ್ಲಿತ್ತು. ದೇಶಾಭಿಮಾನದ ಹಾಡುಗಳು ಕೇಳಿ ಬರುತ್ತಿದ್ದವು. ರಾತ್ರಿ ಪಟಾಕಿ ಸಿಡಿಸುವ ಕೆಲಸಕ್ಕೆ ಸರ್ವರೂ ಸನ್ನದ್ಧರಾಗುತ್ತಿದ್ದರು. ನಮ್ಮ ಮನೆಯಂಗಳಕ್ಕೆ ಅವತ್ತು ಚಂದಿರ ಅವತರಿಸಿದ್ದ. ಚಾರ್ಲಿಯ The Hymn Of Dharma ಹಾಡಿನಲ್ಲಿ ‘ಯಾವ ಮೋಡದ ಹನಿಯೋ’ ಎಂಬ ಸಾಲು ಬರುತ್ತದಲ್ಲ.. ಅದೇ ರೀತಿ ಯಾವುದೋ ಮೋಡದ ಹನಿ ನಮ್ಮ ಮನೆಯಂಗಳದಲ್ಲಿ ಟಪ್ಪನೇ ಉದುರಿತ್ತು.
ನಮ್ಮ ಮನೆಯಲ್ಲಿ ನಾಯಿ ಎಂದಾಕ್ಷಣ ಓಡಿ ಬರುವುದು ಸಮರ್ಥ. ನಾಯಿ ಎಂದರೆ ಓಡಿ ಹೋಗುವುದು ನಾನು! ಹೀಗೆ ತೆಂಕಣ ಬಡಗಣದ ಇಷ್ಟಕಷ್ಟಗಳನ್ನು ಹೊಂದಿರುವ ನಮ್ಮ ಮಧ್ಯದಲ್ಲಿ ಯಾವ ವಿಷಯವೂ ಒಮ್ಮೆಲೇ ಇತ್ಯರ್ಥವಾಗುವುದೇ ಇಲ್ಲ. (ಪ್ರವಾಸಕ್ಕೆ ಹೋಗುವುದೊಂದನ್ನು ಹೊರತುಪಡಿಸಿ!). ಅವರಿಗೆ ನಾಯಿ ಬೇಕು ಎಂದು ಬಹಳ ವರ್ಷಗಳಿಂದ ಆಸೆಯಿತ್ತು. ನಾನು ಮನೆಯಂಗಳದ ಗುಲಾಬಿ ಗಿಡ ಸಾಕು ಎಂದಿದ್ದೆ. ನಾಯಿಯನ್ನು ಪ್ರೀತಿಸುವುದಾಗಲೀ, ಹಚ್ಚಿಕೊಳ್ಳುವುದಾಗಲೀ ನನ್ನ ಕಲ್ಪನೆಗೂ ಮೀರಿದ ವಿಷಯವಾಗಿತ್ತು. ಹಿಂದೊಮ್ಮೆ ಕೆಲಸದಲ್ಲಿ ಜೊತೆಯಿದ್ದ ಸ್ನೇಹಿತೆ ತನ್ನ ನಾಯಿ ಸತ್ತು ಹೋದಾಗ ಅಳುವುದನ್ನು ಕಂಡು ನಾನು ಅವಳನ್ನು ವಿಚಿತ್ರವಾಗಿ ನೋಡಿದ್ದೆ. ಸಣ್ಣದೊಂದು ಪ್ರೀತಿಯ ಎಳೆಯೂ ನಾಯಿಯ ಮೇಲೆ ನನಗಿರದೇ ಇದ್ದ ಕಾರಣ ಅವಳ ನಾಯಿಪ್ರೇಮ ಆ ಸಮಯಕ್ಕೆ ನನಗೆ ಅರ್ಥವಾಗಿರಲೇ ಇಲ್ಲ. ನನ್ನ ಅತಿ ಭಯಂಕರ ಕನಸುಗಳಲ್ಲಿಯೂ ನಾನು ನಾಯಿಯನ್ನು ಹತ್ತಿರಕ್ಕೆ ಸೇರಿಸಿರಲಿಲ್ಲ. ಮುಂದೊಂದು ದಿನ ನಾನು ನಾಯಿಯ ಸಹವಾಸದಲ್ಲಿ ಬರಬಹುದೆಂಬ ಸಣ್ಣ ಅಂದಾಜು ಸಹ ನನಗಿರಲಿಲ್ಲ.
ಅಮೇರಿಕಾಕ್ಕೆ ಬಂದಾಗ ಇಲ್ಲಿ ನಾಯಿಗಳು ಹೆಚ್ಚಾಗಿ ಕಣ್ಣಿಗೆ ಬೀಳತೊಡಗಿದ್ದವು. ಹೋದಲ್ಲೆಲ್ಲ ನಾಯಿಗಳ ಜೊತೆ ಎನ್‌ಕೌಂಟರ್ ಆಗುತ್ತಿತ್ತು. ಇಲ್ಲಿ ಹಾಗೆಲ್ಲ ನಾಯಿಗಳನ್ನು ಕಂಡು ಹೆದರಿದರೆ, ದೂರ ಸರಿದರೆ, ನಿರ್ಲಕ್ಷ್ಯದಿಂದ ನೋಡಿದರೆ ಅವುಗಳ ಪಾಲಕರಿಗೆ ಸಿಟ್ಟು ಬರತ್ತದೆ. ಹಾಗಾಗಿ ರಸ್ತೆಯಲ್ಲಿ ಯಾವುದೇ ನಾಯಿ ಕಂಡರೂ ನಾನು ಎತ್ತಲೋ ನೋಡಿದವರಂತೆ ಮಾಡುತ್ತ ನನ್ನ ಭಯವನ್ನು ಒಳಗೆ ಹತ್ತಿಕ್ಕುತ್ತ ಅದರಿಂದ ದೂರ ಸರಿದು ಹೋಗುತ್ತಿದ್ದೆ. ಆದ್ದರಿಂದಲೇ ನಾಯಿಯನ್ನು ಸಾಕುವ ವಿಷಯ ನಮ್ಮ ಮನೆಯಲ್ಲಿ ಧ್ವನಿ ತಳೆಯುವ ಮುಂಚೆಯೇ ಅದರ ಸದ್ದಡಗಿ ಹೋಗಿ ಬಿಡುತ್ತಿತ್ತು. ಜೊತೆಗೆ ಯಾವ ಮೋಡದ ಹನಿಗೂ ನಮ್ಮ ಮೇಲೆ ಹನಿಯುವ ಮನಸ್ಸಾಗಿರಲಿಲ್ಲವೇನೋ..!
ಅವತ್ತು ನೆರೆಯವನೊಬ್ಬ ತನ್ನ ಮನೆಯಲ್ಲಿ ಹುಟ್ಟಿದ ಮರಿಗಳ ಫೋಟೊ ಹಾಕಿ ‘ನನಗೆ ನೋಡಿಕೊಳ್ಳಲಿಕ್ಕೆ ತೊಂದರೆ ಆಗುತ್ತದೆ, ಇಷ್ಟವಿದ್ದವರು ಬಂದು ತೆಗೆದುಕೊಂಡು ಹೋಗಿ’ ಎಂದು ಬರೆದಾಗ ಸಮರ್ಥ ತಕ್ಷಣ ನಿರ್ಧರಿಸಿ ಅದರಲ್ಲಿ ಒಂದನ್ನು ತರಲಿಕ್ಕೆ ಹೋಗಿದ್ದರು. ಎಷ್ಟು ಸಲ ಬೇಡ ಅನ್ನುವುದು, ಒಂದು ಸಲ ತಂದು ನೋಡಲಿ, ಅದನ್ನು ಸಾಕುವ ಕಷ್ಟ ಅರ್ಥವಾಗುತ್ತದೆ ಎಂದು ನಾನು ಇತ್ತ ಹೂಂ ಅನ್ನದೇ ಅತ್ತ ಊಹುಂ ಎನ್ನದೇ ಗಡಿರೇಖೆಯ ಮೇಲೆ ನಿಂತಿದ್ದೆ. ನಿಜ ಹೇಳ್ತೇನೆ, ಅದು ಮನೆಗೆ ಬರುವವರೆಗೂ ನನಗೆ ಅದರ ಮೇಲೆ ಒಂದಿನಿತೂ ಆಸಕ್ತಿ ಇರಲಿಲ್ಲ. ಪುಟಾಣಿ ನಾಯಿಗಳನ್ನು ದೂರದಿಂದಲೇ ನೋಡಿ ‘aww’ ಎಂದು, ನಾಲಿಗೆ ತೆಗೆದು ಹೆದರಿಸುವ ದೊಡ್ಡ ನಾಯಿಗಳನ್ನು ಕಂಡರೆ ಪಾತಾಳಕ್ಕೆ ಕುಸಿಯುತ್ತಿದ್ದ ನನಗೆ ಈ ನಾಯಿ ತರುವ ಯೋಜನೆ ಪ್ರಿಯವಾಗಿರಲಿಲ್ಲ.
ಅದು ಮನೆಗೆ ಬಂದ ಆ ಕ್ಷಣ ಇನ್ನೂ ಕಣ್ಣಲ್ಲಿ ಕಟ್ಟಿದಂತಿದೆ. ಕಾರಿನ ಹಿಂದಿನ ಸೀಟಿನಲ್ಲಿ ಮುದುರಿ ಕೂತಿದ್ದ ಆ ಮುದ್ದು ಕಂದನಿಗೆ ಆಗಿನ್ನೂ ಮೂರು ತಿಂಗಳು. ಬೆದರಿದ್ದ ಪುಟಾಣಿ ಚೂರು ಸೂಸು ಮಾಡಿಕೊಂಡು ಬಿಟ್ಟಿತ್ತು. ನಮ್ಮ ಮುಖಗಳನ್ನು ಪಿಳಿ ಪಿಳಿ ನೋಡುತ್ತ ಕಣ್ಣಲ್ಲಿ ದೈನ್ಯವನ್ನೇ ತುಂಬಿಕೊಂಡು, ಎಲ್ಲಿದ್ದೇನೆ ಎಂದು ತಿಳಿಯದೇ ಅತ್ತಿತ್ತ ನೋಡುತ್ತಿದ್ದ, ಎತ್ತಿಕೊಂಡರೆ ಎದೆ ತುಂಬುತ್ತಿದ್ದ ಆ ಮುದ್ದುಮರಿಯ ಮೇಲೆ love at first sight ಆಗಿತ್ತು. ಗಾಢ ಕಪ್ಪು ಬಣ್ಣದ ಮಿರಿ ಮಿರಿ ಹೊಳೆಯುವ ರೇಷ್ಮೆಯಂತಹ ಕೂದಲು. ಅದರ ಮೇಲೆ ಅಲ್ಲಲ್ಲಿ ಕುಂಚದಿಂದ ಮೆತ್ತಿದಂತಹ ಬಿಳಿಯ ಬಣ್ಣ. ಪಾದಗಳ ಮೇಲಿದ್ದ ಬಿಳಿಯ ಕೂದಲಿನಿಂದಾಗಿ ಶೂ ಹಾಕಿಕೊಂಡಿದೆ ಎನ್ನಿಸುತ್ತಿತ್ತು. ಗಂಟಲಿನ ಮೇಲಿದ್ದ ಬಿಳಿಯ ಕೂದಲು ಸ್ಕಾರ್ಫಿನಂತೆ. ಹಣೆಯ ಮಧ್ಯದಲ್ಲಿ ನಾಮದಂತೆ ಬಂದ ಉದ್ದನೆಯ ಬಿಳಿಯ ಪಟ್ಟಿ. ಅವನ ಕಣ್ಣುಗಳನ್ನು ನಾನು ವ್ಹಿಸ್ಕೀ ಐಸ್ ಎಂದೇ ಕರೆಯುತ್ತೇನೆ. ಆ ಕಣ್ಣುಗಳನ್ನು ನೋಡಿದರೆ ಸಾಕು ಎಂತಹವರಿಗೂ ಪ್ರೀತಿಯಾಗಿ ಬಿಡುತ್ತದೆ.
ಮುಂಬಾಗಿಲಿನಿಂದ ಅದಕ್ಕೆ ಆರತಿ ಮಾಡಿ ಒಳಗೆ ಕರೆದುಕೊಳ್ಳುವಾಗ ಎದುರಿಗೆ ಬೆಳಗುತ್ತಿದ್ದ ದೀಪವನ್ನೇ ನೋಡುವಾಗ ಅದರ ಕಣ್ಣುಗಳಲ್ಲಿ ನಮ್ಮ ಸಂತೋಷ ಮಿನುಗುತ್ತಿತ್ತು. ಅಮ್ಮ ‘ಬೆಳಗಾರುತಿ ಬೆಳಗಾರತಿ ದತ್ತಾತ್ರೇಯನಿಗೆ’ ಎಂದು ಹಾಡುತ್ತಿದ್ದರೆ ಅದಕ್ಕೆಷ್ಟು ಅರ್ಥವಾಗಿತ್ತೋ… ಒಳಗೆ ಬರಲೊಲ್ಲೆ ಎಂಬಂತೆ ಹೊಸ್ತಿಲಿಗೆ ಕಾಲುಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನಿಂತಿದ್ದ ಅದರ ಬಲಗಾಲನ್ನು ಎತ್ತಿ ಒಳಗೆ ಇಡಿಸಿದ್ದೆವು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಅದು ಮನೆಯೊಳಗೆ ಓಡಾಡುವಾಗ ಅದನ್ನು ಎಷ್ಟು ನೋಡಿದರೂ ಸಾಲದು. ನಾವು ಕರೆದರೂ ಹತ್ತಿರ ಬರದೇ ಕುರ್ಚಿಯ ಅಡಿಗೆ ಹೋಗಿ ಮಲಗುತ್ತಿತ್ತು. ಅದರ ಹಣೆಗೆ ಹಚ್ಚಿದ್ದ ಕುಂಕುಮ ಮಾತ್ರ ಅದು ಇನ್ನು ಮೇಲಿಂದ ನಮಗೇ ಸೇರಿದ್ದು ಎಂದು ನಿಖರವಾಗಿ ಹೇಳುತ್ತಿತ್ತು.
ಆ ದಿನವೆಲ್ಲ ಅದಕ್ಕೇನು ಊಟಕ್ಕೆ ಹಾಕಬೇಕು ಎಂಬುದೇ ಚರ್ಚೆ. ಅದರ ಹಳೆಯ ಒಡೆಯ ನಾಯಿಗಳಿಗೆ ಮೀಸಲಾದ ಆಹಾರವನ್ನು ಒಂದಿಷ್ಟು ಕಟ್ಟಿ ಕೊಟ್ಟಿದ್ದ. ಆದರೆ ಇದು ಅದನ್ನು ಮುಟ್ಟಲೇ ಇಲ್ಲ. ನಾಯಿಗಳ ಅದರಲ್ಲೂ ಅಮೇರಿಕಾದ ನಾಯಿಗಳ ಬಗ್ಗೆ ಹೆಚ್ಚು ತಿಳಿಯದ ನಾವು ಅನ್ನಕ್ಕೆ ಒಂಚೂರು ಮೊಸರು ಬೆರೆಸಿ ಹಾಕಿದಾಗ ಅದು ಒಂದಿನಿತು ಬಿಡದೇ ಲೊಚ ಲೊಚ ಎಂದು ನೆಕ್ಕಿ ತಿಂದಿತ್ತು. ಹೊಸ ರುಚಿ ಅಂತಲೋ ಏನೋ.. ಅದಾದ ಮೇಲೆ ನಾವು ನಾಯಿಗಳ ಬಗ್ಗೆ ಓದಿದ್ದು ಒಂದೇ ಎರಡೇ.. ಅದಕ್ಕೆ ಎಂತಹ ಊಟ ಹಾಕಬೇಕು, ಹಾಲು ಮೊಸರನ್ನು ಯಾಕೆ ಹಾಕಬಾರದು, ಚಪಾತಿ ಹಾಕಬಹುದೇ, ಸೇಬು ಹಣ್ಣು ಕೊಡಬಹುದೇ, ಅದು ಎಷ್ಟು ಹೊತ್ತು ಮಲಗುತ್ತದೆ, ಅದು ಖುಷಿಯಾದರೆ ನಮಗೆ ಹೇಗೆ ಗೊತ್ತಾಗುತ್ತದೆ, ಅದಕ್ಕೆ ಸ್ನಾನ ಮಾಡಿಸಬಹುದೇ.. ಇತ್ಯಾದಿ ಇತ್ಯಾದಿ. ಆ ಓದಿನ್ನೂ ಮುಗಿದಿಲ್ಲ. ಪ್ರತಿದಿನ ಹೊಸ ಅನುಭವವನ್ನು ನೀಡುತ್ತಿರುವುದರಿಂದ ನಿರಂತರವಾಗಿ ಜಾರಿಯಲ್ಲಿದೆ.
ಸ್ನಾನವಾಯಿತು. ಹೊಸ ಆಟಿಗೆ ಸಾಮಾನುಗಳನ್ನು ಕೊಂಡು ತರಲಾಯಿತು. ಅದಕ್ಕೆ ಕೂರಲು ಮಲಗಲು ಕ್ರೇಟ್ ಎಂದು ಕರೆಯುವ ಕಬ್ಬಿಣದ ಪಂಜರ ಹಾಲ್‌ನಲ್ಲಿ ತಂದಿರಿಸಲಾಯಿತು. ಅದು ಚೂರು ಮಿಸುಕಾಡಿದರೆ ಏನಾಯಿತೋ ಎಂದು ಕಾಳಜಿ. ಅದರ ಭಾಷೆಯನ್ನು ಅರಿಯುವ ಪ್ರಯತ್ನ ನಡೆಯುತ್ತಿತ್ತು. ಅಪರಿಚಿತ ಜಾಗವಾದ್ದರಿಂದ ಅದಕ್ಕೆ ಹಾಲ್ ಜಾಗವೇ ಹೊರಗಿನ ಅಂಗಣವೆನ್ನಿಸಿ ಅಲ್ಲೇ ಉಚ್ಚೆ ಹೊಯ್ಯುತ್ತಿತ್ತು. ಆಮೇಲೆ ಅದು ಅಲ್ಲಿಗೆ ಹೋದರೆ ಅದಕ್ಕೆ ಉಚ್ಚೆ ಬಂದಿದೆ ಎಂದು ತಿಳಿದುಕೊಂಡು ತಕ್ಷಣ ಹೊರಗೆಳೆದುಕೊಂಡು ಹೋಗಲು ಶುರು ಮಾಡಿದ್ದೆವು.
ಪುಟ್ಟ ಮರಿಯಾಗಿದ್ದರಿಂದ ಎಲ್ಲದಕ್ಕೂ ಹೆದರಿಕೊಳ್ಳುತ್ತಿತ್ತು. ಪಕ್ಕದ ಮನೆಯ ನಾಯಿ ಬೊಗಳಿದರೆ, ಕುಕ್ಕರ್ ಕೂಗಿದರೆ, ಯಾರಾದರೂ ಜೋರಾಗಿ ಮಾತನಾಡಿದರೆ, ಟಿವಿಯಲ್ಲಿ ಆಂಬ್ಯುಲೆನ್ಸ್ ವಾಹನದ ಸದ್ದು ಕೇಳಿದರೆ, ಮನೆಯ ಮುಂದೆ ಯಾವುದಾದರೂ ಗಾಡಿ ಬಂದು ನಿಂತರೆ.. ಎಲ್ಲದಕ್ಕೂ ಹೆದರಿಕೆ. ಎಷ್ಟೇ ಗಾಢ ನಿದ್ದೆಯಲ್ಲಿದ್ದರೂ ಎಚ್ಚರವಾಗಿ ಕಣ್ಣುಗಳನ್ನು ಅತ್ತಿತ್ತ ಸರಿಸುತ್ತ ಏನೋ ಜಾಸೂಸಿ ಮಾಡುವವರಂತೆ ನೋಡಲಿಕ್ಕೆ ಶುರು!
ಅವತ್ತು ಇಡೀ ದಿನ ಅವನ ಮೇಲೆಯೇ ಧ್ಯಾನ. ಮುದ್ದು ಉಕ್ಕಿ ಬರುತ್ತಿತ್ತಾದರೂ ನಾಯಿಗಳ ಮೇಲಿನ ಭಯವಿನ್ನೂ ಹೋಗಿರಲಿಲ್ಲ. ಅವನು ಹತ್ತಿರ ಬಂದರೆ ದೂರ ಓಡಿ ಹೋಗುತ್ತಿದ್ದೆ. ಆದರೆ ಈ ನಾಯಿಗಳಿವೆಯಲ್ಲ, ಭಾರಿ ಸ್ಮಾರ್ಟ್! ಅವುಗಳಿಗೆ ಗೊತ್ತು ಯಾರನ್ನು ಹೇಗೆ ಒಲಿಸಿಕೊಳ್ಳಬೇಕೆಂದು. ಯಾರನ್ನು ಯಾವ ತರಹ ಬುಟ್ಟಿಗೆ ಹಾಕಿಕೊಳ್ಳಬೇಕೆಂದು. ಈ ಕೂಸು ನೇರವಾಗಿ ಬಂದು ನನ್ನ ಮಡಿಲಲ್ಲಿ ಕೂತಾಗ ಹೇಗೆ ದೂರ ಓಡಲಿ ನಾನು? ಒಂದೇ ಪೆಟ್ಟಿಗೆ ಅವನು ನನ್ನನ್ನು ಒಲಿಸಿಕೊಳ್ಳಲಿಲ್ಲ. ಪ್ರೀತಿಯಾಗಿದ್ದು ನಿಧಾನವಾಗಿ. ಅವನೊಡನೆ ಸಮಯ ಕಳೆಯುತ್ತ, ಅವನ ಭಾಷೆಯನ್ನು ಅರ್ಥ ಮಾಡಿಕೊಳ್ಳುತ್ತ, ನಾಯಿಗಳ ಪ್ರಪಂಚದಲ್ಲಿ ನಾನು ಕಾಲಿಟ್ಟಾಗ ಪ್ರೀತಿ ಹೆಚ್ಚಾಗುತ್ತ ಹೋಯಿತು. ಈಗ ಆ ಪ್ರಪಂಚದಲ್ಲಿ ಬೇರೆ ಮನುಷ್ಯರೇ ಬೇಡ ಎನ್ನಿಸುತ್ತದೆ.
ಸಂಜೋತಾ ಪುರೋಹಿತ ಮೂಲತಃ ಧಾರವಾಡದವರು. ಸದ್ಯಕ್ಕೆ ಅಮೆರಿಕಾದ ಸ್ಯಾನ್ ಫ್ರಾನ್ಸಿಸ್ಕೋನಲ್ಲಿ ವಾಸವಾಗಿದ್ದಾರೆ. ಇಂಜಿನಿಯರ್ ಆಗಿರುವ ಇವರು ಕತೆಗಾರ್ತಿಯೂ ಹೌದು. ಇವರ ಪ್ರವಾಸದ ಅಂಕಣಗಳು ಪತ್ರಿಕೆಯಲ್ಲಿ ಪ್ರಕಟವಾಗುತ್ತಿವೆ. ‘ಸಂಜೀವಿನಿ’ ಇವರ ಪ್ರಕಟಿತ ಕಾದಂಬರಿ.
ನಾನು ನಾಯಿ ಪ್ರೇಮಿ,ಮುಂದುವರಿಯಲಿ👌