೨೦ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಶೈಕ್ಷಣಿಕ ವಲಯಗಳ ಕನ್ನಡದ ಅಭಿವೃದ್ಧಿ ಕೆಲಸಗಳಿಗೆ ಪೂರಕವಾಗಿ ಕೆಲಸ ನಿರ್ವಹಿಸಿದ ಪ್ರೊ. ಎಚ್.ಜೆ. ಲಕ್ಕಪ್ಪ ಗೌಡರು ಸೋಮವಾರ ಸಂಜೆ ನಮ್ಮನ್ನು ಅಗಲಿದ್ದಾರೆ. ಕನ್ನಡದ ಪರವಾಗಿ ಕಟಿಬದ್ಧರಾಗಿ ದುಡಿದ ಅವರು ಕಿರಿಯರಿಗೆ ಮಾರ್ಗದರ್ಶಕರಾಗಿದ್ದರು. ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದ ಅಧ್ಯಯನವು ಸಾಕಷ್ಟು ವಿಸ್ತೃತವೂ ಗಂಭೀರವೂ ಆಗಿರುವುದಕ್ಕೆ ಕಾರಣಕರ್ತರಾದವರಲ್ಲಿ ಲಕ್ಕಪ್ಪ ಗೌಡರಿಗೆ ಪ್ರಮುಖ ಸ್ಥಾನವಿದೆ. ಅವರ ಸಾಧನೆಯ ಹಾದಿಯನ್ನು ಮೆಲುಕು ಹಾಕಿದ್ದಾರೆ ವಿದ್ವಾಂಸ ಪ್ರೊ. ಪುರುಷೋತ್ತಮ ಬಿಳಿಮಲೆ.
ನಮ್ಮ ನಡುವಣ ಸಜ್ಜನ ವಿದ್ವಾಂಸರಲ್ಲಿ ಒಬ್ಬರಾಗಿದ್ದ ಪ್ರೊ. ಎಚ್ ಜೆ ಲಕ್ಕಪ್ಪ ಗೌಡರ ನಿರ್ಗಮನವು ಆಕಸ್ಮಿಕವೇನೂ ಆಗಿರಲಿಲ್ಲ. ೮೨ ವರ್ಷ ವಯಸ್ಸಿನ ( ಜನನ: ಮೇ ೮, ೧೯೩೯, ನಿಧನ: ಜುಲಾಯಿ ೨೬, ೨೦೨೧) ಅವರು ಕೆಲವು ಕಾಲದಿಂದ ಮನೆಯೊಳಗಡೆಗೇ ಇದ್ದರು. ಮಧುಮೇಹ ಅವರನ್ನು ಸಾಕಷ್ಟು ಕಾಡಿತ್ತು. ಯಾರನ್ನೂ ದ್ವೇಷಿಸದ, ಕಾರಣವಿಲ್ಲದೆ ಯಾರನ್ನಾದರೂ ಪ್ರೀತಿಸಬಲ್ಲ, ಸರಳತೆಯೇ ಮೈವೆತ್ತಂತಿದ್ದ ಅವರ ವ್ಯಕ್ತಿತ್ವ ಬಹಳ ವಿಶಿಷ್ಟವೂ ಅಪೂರ್ವವೂ ಆಗಿದ್ದುದರಿಂದ ಅವರು ತೀರಿಕೊಂಡಾಗ ಅವರನ್ನು ಹತ್ತಿರದಿಂದ ಬಲ್ಲವರು ಸಹಜವಾಗಿ ಕಣ್ಣೀರಿಟ್ಟರು.
ಲಕ್ಕಪ್ಪ ಗೌಡರು ನಡೆದುಬಂದ ಹಾದಿ ಬಹಳ ಸುದೀರ್ಘವಾದುದು. ಅವರು ಹುಟ್ಟಿದ್ದು ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಅಲಪನಾಯಕನ ಹಳ್ಳಿಯಲ್ಲಿ. ತಂದೆ ಜವರೇಗೌಡ, ತಾಯಿ ಕಾಳಮ್ಮ. ಪ್ರಾಥಮಿಕ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ ಅವರು ಬೆಟ್ಟದಪುರ ಪ್ರೌಢಶಾಲೆಯಲ್ಲಿ ಹೈಸ್ಕೂಲು ಮುಗಿಸಿ, ಕೊಣನೂರಿನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪೂರೈಸಿ, ಮೈಸೂರಿನ ಪ್ರತಿಷ್ಠಿತ ಮಹಾರಾಜ ಕಾಲೇಜಿನಿಂದ ಪದವಿಯನ್ನೂ, ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನೂ ಪಡಕೊಂಡರು. ಮುಂದೆ ‘ಶ್ರೀ ರಾಮಾಯಣ ದರ್ಶನಂ- ಒಂದು ವಿಮರ್ಶಾತ್ಮಕ ಅಧ್ಯಯನ’ ಎಂಬ ಹೆಸರಿನ ಮಹಾಪ್ರಬಂಧಕ್ಕೆ ಅವರು ಡಾಕ್ಟರೇಟ್ ಪದವಿಯನ್ನು ಪಡೆದುಕೊಂಡರು. ಕನ್ನಡವನ್ನು ನಿರರ್ಗಳವಾಗಿ ಮಾತಾಡುತ್ತಿದ್ದ ಅವರ ಪ್ರತಿಭೆಯನ್ನು ಅವರ ಸಹಪಾಠಿಗಳು ಮೆಚ್ಚುಗೆಯಿಂದ ಕೊಂಡಾಡುತ್ತಿದ್ದುದನ್ನು ನಾನೇ ಕೇಳಿದ್ದೇನೆ.
ಲಕ್ಕಪ್ಪ ಗೌಡರ ಔದ್ಯೋಗಿಕ ಹಾದಿಯೂ ಬಹಳ ವಿಸ್ತಾರವಾದುದು. ಹಾಸನದ ಹೊಳೆನರಸೀಪುರದಲ್ಲಿ ಪ್ರೌಢ ಶಾಲಾಶಿಕ್ಷಕರಾಗಿ ಪಾಠ ಮಾಡಿದ್ದ ಅವರು ಆನಂತರದ ದಿನಗಳಲ್ಲಿ ಮೈಸೂರಿನ ಶಾರದಾ ವಿಲಾಸ ಕಾಲೇಜು ಮತ್ತು ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದರು. ಮಾನಸಗಂಗ್ರೋತಿಯ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂಶೋಧನ ಸಹಾಯಕರಾಗಿ ದುಡಿದರು. ಆ ಕಾಲದಲ್ಲಿ ಮೈಸೂರು ವಿಶ್ವದ್ಯಾಲಯದ ಸ್ನಾತಕೋತ್ತರ ಕೇಂದ್ರ ಮಂಗಳೂರಿನ ಮಂಗಳಗಂಗೋತ್ರಿಯಲ್ಲಿದ್ದು, ಅಲ್ಲಿಯೂ ಕೆಲಕಾಲ ಕೆಲಸ ಮಾಡಿದರು.
ಕೇಂದ್ರ ಮತ್ತು ರಾಜ್ಯಕ್ಕೆ ಸಂಬಂಧಿಸಿದ ಅಧಿನಿಯಮಗಳನ್ನೂ ಕನ್ನಡಕ್ಕೆ ಭಾಷಾಂತರಿಸಲು ಕರ್ನಾಟಕ ಸರಕಾರವು ಭಾಷಾಂತರ ಇಲಾಖೆಯನ್ನು ಪ್ರಾರಂಭಿಸಿದಾಗ ಲಕ್ಕಪ್ಪಗೌಡರು ಆಯೋಗದ ಸದಸ್ಯರಾಗಿ ನೇಮಕಗೊಂಡು ಅಲ್ಲಿ ಏಳು ವರ್ಷಗಳ ಕಾಲ ಕಾರ್ಯನಿರ್ವಹಿಸಿದರು. ಅಲ್ಲಿಂದ ನಂತರ ಶಿವಮೊಗ್ಗದ ಬಿ.ಆರ್. ಪ್ರಾಜೆಕ್ಟ್‌ನ ಸ್ನಾತಕೋತ್ತರ ಕೇಂದ್ರ ಸೇರಿದ ಅವರು ಕುಲಸಚಿವರಾಗಿಯೂ, ಪ್ರಾಧ್ಯಾಪಕರಾಗಿಯೂ ಕೆಲಸ ಮಾಡಿ ಕೊನೆಯಲ್ಲಿ ಕನ್ನಡ ವಿಶ್ವದ್ಯಾಲಯದ ಕುಲಪತಿಗಳಾಗಿ ನಿವೃತ್ತಿ ಹೊಂದಿದರು. ೧೯೯೫ರಲ್ಲಿ ಅವರು ‘ಕರ್ನಾಟಕದ ಜಾನಪದ ಮತ್ತು ಯಕ್ಷಗಾನ ಆಕಾಡಮಿ’ಯ ಅಧ್ಯಕ್ಷರಾಗಿಯೂ ನೇಮಕಗೊಂಡರು. ೧೯೯೯ರಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಪದವಿ ಅವರಿಗೆ ಲಭಿಸಿತು.
ಹೋದಲ್ಲೆಲ್ಲಾ ಬಹಳ ಪ್ರಾಮಾಣಿಕವಾಗಿ ಕನ್ನಡ ಪರ ಕೆಲಸ ಮಾಡಿದ ಅವರಿಗೆ ಹೆಸರು ಮತ್ತು ಖ್ಯಾತಿ ತಂದುಕೊಟ್ಟದ್ದು ಅವರು ಶಿವಮೊಗ್ಗದಲ್ಲಿ ಕನ್ನಡ ಭಾರತಿಯ ಮೂಲಕ ಮಾಡಿದ ಕೆಲಸಗಳು. ಅಲ್ಲಿ ಲಕ್ಕಪ್ಪ ಗೌಡರ ನೇತೃತ್ವದಲ್ಲಿ ನಡೆದ ʼಶ್ರೀರಂಗರ ಸಾಹಿತ್ಯʼ, ʼಕರ್ನಾಟಕ ಜಾತ್ರೆಗಳುʼ, ʼಜಾನಪದ ಮತ್ತು ಪೂರಕ ಕ್ಷೇತ್ರಗಳುʼ, ಸಾಹಿತ್ಯ ಮತ್ತು ಸಮಾಜವಾದಿ ಒಲವುಗಳುʼ, ʼಕನ್ನಡ ಸಾಹಿತ್ಯ ಮತ್ತು ಸಮಕಾಲೀನತೆʼ, ʼಜಾನಪದ ಆಧುನಿಕ ಪ್ರವೃತ್ತಿಗಳುʼ, ʼಬಂಡಾಯಸಾಹಿತ್ಯ ಚಳುವಳಿಗಳುʼ ಮೊದಲಾದ ವಿಚಾರ ಸಂಕಿರಣಗಳು ಚಾರಿತ್ರಿಕವಾದುವುಗಳು.
ಅವರು ನಡೆಸುತ್ತಿದ್ದ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದ ಶಿವಮೊಗ್ಗ, ಚಿತ್ರದುರ್ಗ, ಮತ್ತು ಚಿಕ್ಕಮಗಳೂರು ಜಿಲ್ಲೆಯ ಅನೇಕ ಜನಪದ ಕಲಾವಿದರು ಮುಂದೆ ರಾಜ್ಯಮಟ್ಟದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಜಾನಪದ ಅಕಾಡೆಮಿಯ ಅಧ್ಯಕ್ಷರಾಗಿದ್ದ ಅವಧಿಯಲ್ಲಿ, ಪಾಶ್ಚಾತ್ಯ ಜಾನಪದ ಸಂಶೋಧಕರ ಪರಿಚಯ ಪುಸ್ತಕಗಳು, ಸರ್ವಜ್ಞ ಜಾನಪದ, ಕುಮಾರ ವ್ಯಾಸ ಜಾನಪದ, ಜಾನಪದ ಕೈಪಿಡಿ ಮೊದಲಾದ ಉಪಯುಕ್ತ ಪುಸ್ತಕಗಳನ್ನು ಪ್ರಕಟಿಸಿದರು.
ಲಕ್ಕಪ್ಪ ಗೌಡರು ಸುಮಾರು ೭೦ ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಆದರೆ ಕನ್ನಡ ವಿಮರ್ಶೆ ಯಾಕೋ ಅವುಗಳನ್ನು ಗಂಭೀರವಾಗಿ ಪರಿಗಣಿಸಿದಂತಿಲ್ಲ. ಕವಿತೆ, ನಾಟಕ, ಸಣ್ಣಕತೆ, ವಿಮರ್ಶೆ, ಜೀವನ ಚರಿತ್ರೆ ಮತ್ತು ಜಾನಪದ ಅವರ ಆಸಕ್ತಿಯ ಕ್ಷೇತ್ರಗಳು.
ವಸಂತಗೀತ, ಊರ ಮುಂದಿನ ಬಾವಿ, ಪದ್ದು-ಹದ್ದು, ಅಕ್ಷತೆ, ಕಿರುಗೆಜ್ಜೆ, ಸೂಜಿಸಂಪಿಗೆ ಮತ್ತು ವಚನ , ಹೊನ್ನಾರು ಮತ್ತು ಹುಲಿಯ ಹೆಜ್ಜೆ, ಸಿದ್ಧರಾಮ, ತಮಸ್ಸಿನಿಂದ ಜ್ಯೋತಿಗೆ, ಕಾಯಕ ಯೋಗಿ, ದಲಿತ ಸೂರ್ಯ, ಸಮತೆಯ ಶಿಲ್ಪಿ, ವಿಶ್ವಕವಿ ಕುವೆಂಪು , ಡಾಅಂಬೇಡ್ಕರ್, ಅಂತರಂಗ, ಸಂಗಮ, ಗೋಪುರದ ದೀಪಗಳು, ಅಂತರಾಳ, ಬಾಳದೇಗುಲದ ನೋಟಗಳು, ವಿಲೋಕನ, ಸಾಹಿತ್ಯ: ಬಹುಮುಖಿ ಚಿಂತನೆ, ಪುಸ್ತಕ ರೇಖೆಗಳು, ಕನಕ ಮುಖಗಳು, ಜಾನಪದ ಕಥಾವಳಿ, ಒಗಟುಗಳು, ಮಲೆನಾಡು ಜಾನಪದ, ವಿಶಿಷ್ಟ ಜಾನಪದ, ಡೊಳ್ಳು ಮೇಳ, ಮಲ್ಲಿಗೆ ಮೊಗ್ಗು ಸುರಿದಾವೆ, ಹೊಂಬಾಳೆ, ಇಲಿಯಡ್, ಒಡಿಸ್ಸಿ, ಕಾಯಕವೇ ಕೈಲಾಸ, ದೀನಬಂಧು, ಭೋಗ-ಯೋಗ, ಕಾಮನಬಿಲ್ಲು ನಾಗಸಂಪಿಗೆ, ಕುರುಬರು ಮತ್ತು ಉಣ್ಣೆ ನೇಕಾರರು, ಕನಕ ಕಿರಣ, ಜನಪ್ರಿಯ ಕನಕ ಸಂಪುಟ, ಸಹ್ಯಾದ್ರಿ ಸಿರಿ ಮೊದಲಾದುವು ಅವರ ಮುಖ್ಯ ಕೃತಿಗಳು. ಭಾವುಕತೆ ಮತ್ತು ವೈಚಾರಿಕತೆಯನ್ನು ಹದವಾಗಿ ಬೆರೆಸಿದ ಅವರ ಕನ್ನಡಕ್ಕೆ ಅದರದ್ದೇ ಆದ ಸೊಗಸಿದೆ. ಈ ಕುರಿತು ಅವರ ಅಭಿನಂದನ ಗ್ರಂಥ ʼಹೊನ್ನಾರುʼ ವಿನಲ್ಲಿ ಸಾಕಷ್ಟು ಮಾಹಿತಿಗಳಿವೆ.
ಕಾರಣವಿಲ್ಲದೆ ಯಾರನ್ನಾದರೂ ಪ್ರೀತಿಸಬಲ್ಲ, ಸರಳತೆಯೇ ಮೈವೆತ್ತಂತಿದ್ದ ಅವರ ವ್ಯಕ್ತಿತ್ವ ಬಹಳ ವಿಶಿಷ್ಟವೂ ಅಪೂರ್ವವೂ ಆಗಿದ್ದುದರಿಂದ ಅವರು ತೀರಿಕೊಂಡಾಗ ಅವರನ್ನು ಹತ್ತಿರದಿಂದ ಬಲ್ಲವರು ಸಹಜವಾಗಿ ಕಣ್ಣೀರಿಟ್ಟರು.
ಲಕ್ಕಪ್ಪ ಗೌಡರಂತವರ ಕೆಲಸಗಳನ್ನು ಅರ್ಥಮಾಡಿಕೊಳ್ಳುವುದಕ್ಕೂ, ಅವುಗಳಿಗೆ ಬೆಲೆ ಕಟ್ಟುವುದಕ್ಕೂ ಸ್ವಲ್ಪ ಸಿದ್ಧತೆ ಬೇಕು. ಅವರ ಕೆಲಸಗಳು ೨೦ನೇ ಶತಮಾನದ ಉತ್ತರಾರ್ಧದಲ್ಲಿ ನಡೆದ ಶೈಕ್ಷಣಿಕ ವಲಯಗಳ ಕನ್ನಡದ ಅಭಿವೃದ್ಧಿ ಕೆಲಸಗಳ ಜೊತೆಗೆ ಸಂಬಂಧ ಹೊಂದಿದೆ. ಮಾತ್ರವಲ್ಲ ೧೮ ಮತ್ತು ೧೯ನೇ ಶತಮಾನದಲ್ಲಿ ವಸಾಹತು ಶಕ್ತಿಗಳು ನಡೆಸಿದ ಕನ್ನಡ ಸಂಶೋಧನೆಗಳ ಹಿನ್ನೆಲೆಯನ್ನೂ ಹೊಂದಿದೆ.
1762ರಲ್ಲಿ ಭಾರತಕ್ಕೆ ಬಂದ ಬುಕ್ನನ್. 1783ರಲ್ಲಿ ಕರ್ನಾಟಕ ಪ್ರವೇಶಿಸಿದ ಲೆ.ಕ. ಮೆಕೆಂಜಿ, 1803ರಲ್ಲಿ ಲಾವಣಿಗಳನ್ನು ಸಂಗ್ರಹಿಸಿದ ಜಾನ್ ಲೇಡನ್, 1816ರಲ್ಲಿ ಕನ್ನಡ ಗಾದೆ, ಒಗಟು, ಮತ್ತು ನಂಬಿಕೆಗಳನ್ನು ಸಂಗ್ರಹಿಸಿದ ಅಬ್ಬೆ ದುಬಾಯಿ, 3,000 ಕನ್ನಡ ಗಾದೆಗಳಿರುವ ಬೃಹತ್ ಸಂಪುಟವನ್ನು 1847ರಲ್ಲಿ ಪ್ರಕಟಿಸಿದ ಮೋಗ್ಲಿಂಗ್, 1873 ರಲ್ಲಿಯೇ ಕನ್ನಡಕ್ಕೊಂದು ನಿಘಂಟು ನೀಡಿದ ಕಿಟೆಲ್, 1885 ರಲ್ಲಿ 17 ಐತಿಹಾಸಿಕ ಲಾವಣಿಗಳನ್ನು, ಸಂಗ್ರಹಿಸಿದ ಜೆ.ಎಫ್. ಫ್ಲೀಟ್, ಜನಪದ ಕತೆಗಳ ಕಡೆಗೆ 1881ರಲ್ಲಿಯೇ ಮುಖ ಮಾಡಿದ ಮೇರಿ ಫ್ರಿಯರೆ, ಮೊದಲಾದ ಪಾಶ್ಚಾತ್ಯ ವಿದ್ವಾಂಸರು ಮಾಡಿದ ಕೆಲಸಗಳು ಲಕ್ಕಪ್ಪ ಗೌಡರ ಕೆಲಸಗಳಿಗೆ ಪ್ರಬಲವಾದ ಹಿನ್ನೆಲೆಯೊಂದನ್ನು ಒದಗಿಸಿಕೊಟ್ಟಿತ್ತು.
ಪಾಶ್ಚಾತ್ಯರ ಆರಂಭಿಕ ಕೆಲಸಗಳನ್ನು 20ನೇ ಶತಮಾನದಲ್ಲಿ ಅರ್ಥಪೂರ್ಣವಾಗಿ ಮತ್ತು ವಿದ್ವತ್ ಪೂರ್ಣವಾಗಿ ಮುಂದುವರಿಸಿದವರಲ್ಲಿ ಕೆ ಬಿ ಪಾಠಕ್, ಪಿ ಬಿ ದೇಸಾಯಿ, ಕೆ ಜಿ ಕುಂದಣಗಾರ, ಟಿ ಎಸ್ ವೆಂಕಣಯ್ಯ, ಮಂಜೇಶ್ವರ ಗೋವಿಂದ ಪೈ, ಮುಳಿಯ ತಿಮ್ಮಪ್ಪಯ್ಯ, ಸೇಡಿಯಾಪು ಕೃಷ್ಣ ಭಟ್, ಡಿ ಎಲ್ ನರಸಿಂಹಾಚಾರ್, ಶಂಭಾ ಜೋಷಿ, ಮೊದಲಾದವರು ಮುಖ್ಯರು. ಈ ಹಿರಿಯ ವಿದ್ವಾಂಸರುಗಳ ನೇರ ಶಿಷ್ಯರಾಗಿಯೋ, ಪರೋಕ್ಷ ಶಿಷ್ಯರಾಗಿಯೋ ತರಬೇತು ಪಡೆದು, ಆನಂತರದ ಕಾಲ ಘಟ್ಟದ ಸಂಶೋಧನಾ ಕ್ಷೇತ್ರದಲ್ಲಿ ದುಡಿದ ವಿದ್ವಾಂಸರು ಸ್ವಾತಂತ್ರ್ಯೋತ್ತರ ಭಾರತದ ಶೈಕ್ಷಣಿಕ ಅಗತ್ಯಗಳಿಗನುಗುಣವಾಗಿ ಕನ್ನಡದ ಕೆಲಸಗಳನ್ನು ಪುನರ್ ರಚಿಸಿಕೊಂಡು, ಅದರ ಕ್ಷಿತಿಜಗಳನ್ನು ಗಮನಾರ್ಹವಾಗಿ ವಿಸ್ತರಿಸಿದರು. ಮುಖ್ಯವಾಗಿ ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಆ ಕಾಲಕ್ಕೆ ದೊರಕಿದ ಸಾಂಸ್ಥಿಕ ಬೆಂಬಲ ಮತ್ತು ಸಂಶೋಧನಾ ಸವಲತ್ತುಗಳನ್ನು ಉಪಯೋಗಿಸಿಕೊಳ್ಳುವಲ್ಲಿ ಈ ವಿದ್ವಾಂಸರು ಹಿಂದೆ ಬೀಳಲಿಲ್ಲ.
ಡಾ. ಚಿದಾನಂದಮೂರ್ತಿ, ಎಂ ಎಂ ಕಲಬುರ್ಗಿ, ಹಂಪನಾ ಮೊದಲಾದವರಿರುವ ವಿದ್ವಾಂಸರುಗಳ ಪಟ್ಟಿಯಲ್ಲಿ ಲಕ್ಕಪ್ಪ ಗೌಡರಿಗೆ ಪ್ರಮುಖ ಸ್ಥಾನವೊಂದಿದೆ. ಇವರೆಲ್ಲರೂ ತಾವೇ ಅತ್ಯುತ್ತಮವಾದ ಸಂಶೋಧನಾ ಕೃತಿಗಳನ್ನು ಬರೆದು ಪ್ರಕಟಿಸಿದ್ದಲ್ಲದೆ, ತಮ್ಮ ವಿದ್ಯಾರ್ಥಿಗಳೂ ಅಂಥ ಮಹತ್ವದ ಕೆಲಸಗಳನ್ನು ಮಾಡಲು ಪ್ರಚೋದನೆ ನೀಡಿದರು. ಸಾಹಿತ್ಯ, ಸಂಶೋಧನೆಯ ಜೊತೆಗೆ ಜಾನಪದವೂ ತನ್ನ ಆರಂಭಿಕ ಸಂಗ್ರಹದ ಕೆಲಸಗಳನ್ನು ದಾಟಿಕೊಂಡು ಕನ್ನಡ ಸಂಶೋಧನೆಯ ಮುಖ್ಯ ವಸ್ತುವಾಗಿ ಕಾಣಿಸಿಕೊಂಡಾಗ ಅದನ್ನು ಅತ್ಯಂತ ಜವಾಬ್ದಾರಿಯಿಂದ ನಿರ್ವಹಿಸಿದ ಕೆಲವೇ ಕೆಲವು ಪ್ರಮುಖರಲ್ಲಿ ಲಕ್ಕಪ್ಪ ಗೌಡರೂ ಒಬ್ಬರು.
ಬಿ ಎಸ್. ಗದ್ದಗೀಮಠ , ‘ಜಿ.ಶಂ.ಪರಮಶಿವಯ್ಯ, ಬಿ.ಎ.ವಿವೇಕ ರೈ ಮೊದಲಾದವರು ನಮಗೆ ಮುಖ್ಯವಾಗುವುದು ಈ ಕಾರಣಕ್ಕೆ. ಇವತ್ತು ಭಾರತದ ಇತರ ಪ್ರದೇಶಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದ ಅಧ್ಯಯನವು ಸಾಕಷ್ಟು ವಿಸ್ತೃತವೂ ಗಂಭೀರವೂ ಆಗಿರುವುದಕ್ಕೆ ಕಾರಣಕರ್ತರಾದವರಲ್ಲಿ ಲಕ್ಕಪ್ಪ ಗೌಡರಿಗೆ ಪ್ರಮುಖ ಸ್ಥಾನವಿದೆ.
ಜಾತಿ, ಕೋಮು, ಅತಿಯಾದ ಪ್ರಾದೇಶಿಕತೆ, ಅನೈತಿಕ ವ್ಯವಹಾರಗಳು, ಅಧಿಕಾರ ರಾಜಕಾರಣದ ಮೇಲಿನ ಮೋಹ, ಹುಸಿ ಬೌದ್ದಿಕತೆ ಮೊದಲಾದ ಕಾರಣಗಳಿಂದ ಕನ್ನಡವು ಹಿಂದೆ ಬೀಳುತ್ತಿರುವಾಗ ನಮಗೆ ಲಕ್ಕಪ್ಪ ಗೌಡರಂತವರು ಮತ್ತೆ ಮತ್ತೆ ನೆನಪಾಗುತ್ತಾರೆ.
ಸಮಕಾಲೀನ ಆಗುಹೋಗುಗಳಿಗೆ ಸಕಾರಣವಾಗಿ ಸ್ಪಂದಿಸುವ ಪ್ರೊ. ಪುರುಷೋತ್ತಮ ಬಿಳಿಮಲೆ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಪಂಜ ಎಂಬ ಊರಿನವರು. ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜು, ಮಂಗಳೂರು ವಿಶ್ವವಿದ್ಯಾಲಯ, ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೇವೆ ಸಲ್ಲಿಸಿದ್ದಾರೆ. 1994ರಿಂದ ದೆಹಲಿಯ ಅಮೆರಿಕನ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯನ್ ಸ್ಟಡೀಸ್ ನ ನಿರ್ದೇಶಕರಾಗಿ, 2015ರಿಂದ ದೆಹಲಿಯ ಜವಾಹರಲಾಲ ನೆಹರೂ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಪೀಠದಲ್ಲಿ ಪ್ರಾಧ್ಯಾಪಕರಾಗಿ, ಪ್ರಸ್ತುತ ನಿವೃತ್ತಿ ಹೊಂದಿದ್ದಾರೆ.
ಮೆಕೆಂಜಿ ಕೈಫಿಯತ್ತುಗಳು, ಲಿಂಗರಾಜನ ಹುಕುಂನಾಮೆ, ದಲಿತ ಜಗತ್ತು, ಬಂಡಾಯ ದಲಿತ ಸಾಹಿತ್ಯ, ಶಿಷ್ಟ ಪರಿಶಿಷ್ಟ, ಕರಾವಳಿ ಜಾನಪದ, ಕೂಡುಕಟ್ಟು, ಜನಸಂಸ್ಕೃತಿ, ಬಹುರೂಪ, ಮೆಲುದನಿ, ಕನ್ನಡ ಕಥನಗಳು, ವಲಸೆ, ಸಂಘರ್ಷ ಮತ್ತು ಸಮನ್ವಯ ಇವರ ಪ್ರಮುಖ ಕೃತಿಗಳು. ‘ಕಾಗೆ ಮುಟ್ಟಿದ ನೀರು’ ಅವರ ಆತ್ಮಕತೆ.
ಡಾ.ಲಕ್ಕಪ್ಪಗೌಡ ಅವರ ಜೀವನ ಪಥ – ಸಾಹಿತ್ಯ ಪಥ – ಆಡಳಿತ ಪಥ ಕುರಿತು ಪ್ರೊ.ಬಿಳಿಮಲೆ ಅವರು ಚನ್ನಾಗಿ ವಿವರಿಸಿದ್ದಾರೆ. ಕರ್ನಾಟಕದ ಜಾನಪದ, ವಿಮರ್ಶೆ ಕ್ಷೇತಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ವಿದ್ವಾಂಸರಲ್ಲಿ ಲಕ್ಕಪ್ಪಗೌಡರು ಪ್ರಮುಖರು. ಆದರೆ ಪ್ರೊ.ಬಿಳಿಮಲೆ ಅವರು ಹೇಳುವಂತೆ ಲಕ್ಕಪ್ಪಗೌಡ ಅವರ ಕೃತಿಗಳ ಬಗ್ಗೆ ಸಾಹಿತ್ಯ ಲೋಕ ಸರಿಯಾಗಿ ಗಮನಿಸಿಲ್ಲವೆಂಬುದು ಸತ್ಯಸಂಗತಿ. ಅದಕ್ಕೆ ಬಹಳಷ್ಟು ಕಾರಣಗಳಿರಬಹುದು. ಈಗಲಾದರೂ ಅವರ ಕೃತಿಗಳ ಬಗ್ಗೆ ವಿಚಾರ ವಿಮರ್ಶೆ ಮಾಡುವುದು ಅಗತ್ಯವಿದೆ ಎಂದು ಭಾವಿಸಿದ್ದೇನೆ.
ಇಂಥ ಅಗತ್ಯತೆಯ ಬಗ್ಗೆ ಡಾ.ಬಿಳಿಮಲೆ ಅವರು ಈ ಲೇಖನದ ಮೂಲಕ ಗಮನ ಸೆಳೆದಿರುವುದಕ್ಕೆ ಅಭಿನಂದನೆಗಳು
ಡಾ.ಎಫ್.ಟಿ.ಹಳ್ಳಿಕೇರಿ
ಪ್ರಾಧ್ಯಾಪಕ
ಹಸ್ತಪ್ರತಿಶಾಸ್ತ್ರ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ.
9448184022