ಮೇಲ್ನೋಟಕ್ಕೆ ಇದು ಪೌಲ್ ಮತ್ತು ಆತನ ಸ್ನೇಹಿತರ ಜೀವನದ ಕತೆ ಆದರೂ, ಅದರ ಜೊತೆಯಲ್ಲಿ ಯುದ್ಧವನ್ನು ಒಳಗಿನಿಂದ ಹೊರಗಿನಿಂದ ತೋರಿರುವ ರೀತಿ ಅನನ್ಯ. ಯುದ್ಧವೆಂದರೆ ಹಸಿವು. ನೆಲದ ಹಸಿವು. ಇದರ ಜೊತೆಯಲ್ಲಿ ದೇಹದ ಹಸಿವು ಹೆಣ್ಣಿನ ಹಸಿವು ಹೆಚ್ಚಾಗಿ ಯುದ್ಧದಲ್ಲೇ ಇದ್ದು ಬದುಕಿನ ಹಸಿವನ್ನು ಅದ್ಭುತವಾಗಿ ತೋರಿಸಿದ್ದಾರೆ, ಪ್ರತಿ ಸೈನಿಕನು ಕೊನೆ ಗಳಿಗೆಯಲ್ಲಿ ಬದುಕಲು ಒದ್ದಾಡುವ ಕ್ಷಣಗಳಿವೆ. ಸಾಯುತ್ತಿರುವನು ವೈರಿಯಾದರು ಮಾನವೀಯತೆ ನೆಲೆಯಲ್ಲಿ ನಿಂತು ಅವನನ್ನು ಬದುಕಿಸಲು ಒದ್ದಾಡುವ ಮಾನವೀಯ ದೃಶ್ಯಗಳಿವೆ.
‘ಆಲ್ ಕ್ವೈಯೆಟ್ ಆನ್ ದ ವೆಸ್ಟರ್ನ್ ಫ್ರಂಟ್’ ಸಿನಿಮಾದ ಕುರಿತು ಜಯರಾಮಾಚಾರಿ ಬರಹ
ಮೊದಲ ಮಹಾಯುದ್ಧದ ಸಮಯ ಜರ್ಮನಿಯ ವೆಸ್ಟರ್ನ್ ಫ್ರಂಟ್‌ನಲ್ಲಿ ಯುದ್ಧವೆಂದರೆ ಗಾಬರಿಯಾದ ಹೆನ್ರಿಕ್ ಯುದ್ಧದಲ್ಲೇ ಸಾಯುತ್ತಾನೆ, ಸತ್ತದ್ದು ಅವನೊಬ್ಬನೇ ಅಲ್ಲ, ಅಂಥವರು ಸಾವಿರ ಲಕ್ಷ ಮಂದಿ, ಸತ್ತ ಕೂಡಲೇ ಅವರನ್ನೆಲ್ಲ ಒಂದು ಕಡೆ ಗುಡ್ಡೆ ಹಾಕಿ ಅವರ ಸಮವಸ್ತ್ರ ಶೂ ಎಲ್ಲ ತೆಗೆದು ಅವರನ್ನು ಹೂಳುತ್ತಾರೆ, ಅವರ ಸಮವಸ್ತ್ರಗಳನ್ನ ಒಗೆದು ಒಣಗಿಸಿ ಹರಿದಿದ್ದರೆ ಹೊಲಿದು ಅದನ್ನ ಹೊಸದಾಗಿ ಸೇರುವ ಸೈನಿಕರಿಗೆ ಕೊಡುತ್ತಾರೆ. ಸತ್ತ ಹೆನ್ರಿಕ್‌ನ ಸಮವಸ್ತ್ರ ಧರಿಸುವುದು ಯುವಕ ಪೌಲ್. ಅವನು ಧರಿಸಿದ್ದು ಹೆನ್ರಿಕ್‌ನ ಸಮವಸ್ತ್ರ ಅಷ್ಟೇ ಅಲ್ಲ ಅವನ ಸಾವನ್ನು ಕೂಡ… ಅವನ ನೋವನ್ನು ಕೂಡ…
2022 ರಲ್ಲಿ ಬಿಡುಗಡೆಯಾಗಿ ಸುದ್ದಿ ಮಾಡುತ್ತಿರುವ ಅವಾರ್ಡುಗಳನ್ನು ಬಾಚಿರುವ ಆಸ್ಕರ್ ರೇಸಿನಲ್ಲಿ ಹೆಚ್ಚು ನಾಮಿನೇಷನ್ ಇರುವ ‘ಆಲ್ ಕ್ವೈಯೆಟ್ ಆನ್ ದ ವೆಸ್ಟರ್ನ್ ಫ್ರಂಟ್’ ಸಿನಿಮಾ ಶುರುವಾಗೋದೆ ಹೀಗೆ. ಇದೊಂದು ಯುದ್ಧ ವಿರೋಧಿ ನೆಲೆಯ ಸಿನಿಮಾ. ಹೇಗೆ ಇದನ್ನು ಯುದ್ಧ ವಿರೋಧಿ ಸಿನಿಮಾ ಎಂದು ಹೇಳಬಹುದು? ಈ ಸಿನಿಮಾ ನೋಡಿದ ಮೇಲೆ ಯುದ್ಧದ ಭೀಕರತೆ ಕಣ್ಣಿಗೆ ರಾಚಿ ತುಂಬಾ ದಿನಗಳವರೆಗೂ ಕಾಡುವುದೂ ನಿಜ. ಈ ಸಿನಿಮಾದ ಗೆಲುವು ಇರೋದೆ ಇಲ್ಲಿ, ಯುದ್ಧದ ವಿಜೃಂಭಣೆ ಮಾಡದೆ ಯುದ್ಧದ ಭೀಕರತೆಯನ್ನ ಯುದ್ಧದಲ್ಲಿದ್ದ ಸೈನಿಕರ ಜೀವನವನ್ನ ಅತ್ಯಂತ ಪರಿಣಾಮಕಾರಿಯಾಗಿ ದಾಟಿಸಿದೆ.
ನಾಯಕ ಪೌಲ್ ತನ್ನ ಮನೆಯವರಿಗೂ ತಿಳಿಸಿದೆ ತನ್ನ ಮೂವರು ಸ್ನೇಹಿತರ ಜೊತೆಗೆ ಯುದ್ಧದ ಕ್ಯಾಂಪ್‌ಗೆ ಸೇರುತ್ತಾನೆ, ಎಲ್ಲರೂ ಬಿಸಿರಕ್ತದ ಯುವಕರು, ಇನ್ನೇನು ಯುದ್ಧದಲ್ಲಿ ಗೆದ್ದು ಪ್ಯಾರೀಸ್ ವಶಪಡಿಸಿಕೊಳ್ಳುತ್ತೇವೆ ಎಂದು ಹಾಡುತ್ತಾ ಕುಣಿಯುತ್ತಾ ಯುದ್ಧಭೂಮಿಗೆ ತೆರಳುತ್ತಾರೆ, ಯುದ್ಧ ಭೂಮಿಗೆ ಮುಟ್ಟುವ ಮುನ್ನವೇ ಅವರಿಗೆ ಯುದ್ಧದ ಭೀಕರತೆ ಎದುರಾಗುತ್ತೆ, ಮೊದಲ ದಿನವೇ ಒಬ್ಬ ಸ್ನೇಹಿತ ಯುದ್ಧಭೂಮಿಯಲ್ಲಿ ಸತ್ತು ಹೋಗುತ್ತಾನೆ, ಪೌಲ್‌ಗೆ ವಾಸ್ತವ ಸ್ಥಿತಿ ಆಗ ಗೊತ್ತಾಗುತ್ತೆ. ಆದರೆ ಅಷ್ಟರಲ್ಲಾಗಲೇ ಅವರು ಈ ಯುದ್ಧ ಎಂಬ ಚದುರಂಗದ ಆಟದಲ್ಲಿ ದಾಳ ಆಗಿರುತ್ತಾರೆ, ಅವರ ಕೈಯಲ್ಲಿ ಅವರ ಬದುಕಿಲ್ಲ. ಆದರೆ ಬದುಕಲೇಬೇಕು ಯುದ್ಧ ಮಾಡಲೇಬೇಕು. ಇಂತ ದಿಕ್ಕೆಟ್ಟ ಸ್ಥಿತಿಯಲ್ಲಿ ಅವರಿಗೆ ಸಿಗೋದು ಆಗಲೇ ಯುದ್ಧಭೂಮಿಯಲ್ಲಿ ಇರುವ ಅನಕ್ಷರಸ್ಥ ಆದರೆ ಒಳ್ಳೆಯ ಯೋಧನಾಗಿರುವ ಕ್ಯಾಟ್ ಮತ್ತು ಅವನ ಸ್ನೇಹಿತ ಜೆದೆನ್.
ಯಾವಾಗಂದರೆ ಆವಾಗ ಎದ್ದು ಯುದ್ಧ ಮಾಡಬೇಕು, ಆಕ್ರಮಣ ಅತಿಕ್ರಮಣ ಇಲ್ಲದ ಸಮಯದಲ್ಲಿ ಸಮಯ ಕೊಲ್ಲಬೇಕು. ಇಂತಹ ಸಮಯದಲ್ಲೇ ಕ್ಯಾಟ್ ಅವರೆಲ್ಲರಿಗೂ ಹಿರಿಯ ಅಣ್ಣನಂತೆ ಆಗುವನು, ಆಕ್ರಮಣ ಇಲ್ಲದ ಸಮಯದಲ್ಲಿ ಕ್ಯಾಟ್ ಮತ್ತು ಪೌಲ್ ಅಲ್ಲೇ ಹತ್ತಿರದ ಊರಿನಲ್ಲಿನ ರೈತನ ಮನೆಗೆ ನುಗ್ಗಿ ಹೆಬ್ಬಾತು ಹಕ್ಕಿಯನ್ನು ಕದಿಯುವರು, ಆ ಮನೆಯ ಮುದುಕ ಮಾಲೀಕ ಅವರಿಗೆ ಗುಂಡಿಟ್ಟು ಕೊಲ್ಲಲು ಬರುತ್ತಾನೆ. ಅವರು ತಪ್ಪಿಸಿಕೊಂಡು ಓಡಿ ಹೋಗುವರು, ಕದ್ದ ಹಕ್ಕಿಯನ್ನ ಚೆನ್ನಾಗಿ ತಿಂದು ಹಾಡು ಹೇಳುತ್ತಾ ಕುಣಿಯುವರು, ‘ಮುಂದಿನ ಸಲ ಹಕ್ಕಿ ಕದ್ದರೆ ರೈತನ ಬಂದೂಕಿನ ಗುಂಡಿಗೆ ಆಹಾರವಾಗುತ್ತೇವೆ’ ಎಂದು ನಗುತ್ತಾ ನಗುತ್ತಾರೆ.
ಸಿನಿಮಾ ಮುಂದುವರಿದ ಹಾಗೆ ಯುದ್ಧಭೂಮಿಯಲ್ಲಿ ಪೌಲ್ ತನ್ನ ಕಣ್ಣಮುಂದೆಯೇ ಅವನ ಒಬ್ಬೊಬ್ಬರೇ ಗೆಳೆಯರನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ. ಒಬ್ಬ ಗೆಳೆಯನನ್ನು ಫ್ರಾನ್ಸ್‌ನನ್ನು ಸೇನೆ ಜೀವಂತ ಸುಡುತ್ತದೆ, ಇನ್ನೊಬ್ಬ ಗೆಳೆಯ ಕಳೆದುಹೋಗುತ್ತಾನೆ, ಜೆದೆನ್ ಕೂಡ ಯುದ್ಧದಲ್ಲಿ ಕಾಲು ಕಳೆದುಕೊಂಡು ತಾನೇ ಕತ್ತು ಕುಯ್ದುಕೊಂಡು ಸತ್ತುಹೋಗುತ್ತಾನೆ. ಕೊನೆಗೆ ಉಳಿಯುವುದು ಪೌಲ್ ಮತ್ತು ಕ್ಯಾಟ್.
ಅವರದು ಹೆಚ್ಚು ಕಮ್ಮಿ ಅಣ್ಣ-ತಮ್ಮನ ಸಂಬಂಧ, ಪೌಲ್ ಕುಸಿದಾಗಲೆಲ್ಲ ಕ್ಯಾಟ್ ಅವನಿಗೆ ಆಧಾರವಾಗುತ್ತಾನೆ, ಧೈರ್ಯ ತುಂಬುತ್ತಾನೆ, ಬದುಕಬೇಕು ಯುದ್ಧ ಮಾಡಬೇಕು ಯುದ್ಧ ಮುಗಿದ ಮೇಲೆ ತಮ್ಮ ದೇಶಕ್ಕೆ ಹೋಗಿ ಬದುಕಬೇಕು ಅಷ್ಟೇ ಅನ್ನುವನು, ಕ್ಯಾಟ್‌ಗೆ ಬರುವ ಪತ್ರ ಓದುವಾಗ ಅವನ ಮಗ ಅಮ್ಮನ ಖಾಯಿಲೆ ಬಂದು ಸತ್ತ ಸುದ್ದಿ ಕೂಡ ಗೊತ್ತಾಗುತ್ತದೆ.
ಸಿನಿಮಾದಲ್ಲಿ ಒಂದು ಕಡೆ ಯುದ್ಧ, ಯುದ್ಧ ಭೂಮಿ, ಸೈನಿಕರ ಜೀವನವನ್ನು ತೋರಿಸುತ್ತಾ ಇನ್ನೊಂದು ಕಡೆ ಯುದ್ಧವನ್ನು ನಿಲ್ಲಿಸಲು ಒದ್ದಾಡುವ ಅಧಿಕಾರಗಳ ಮಾತುಕತೆ, ಹಗ್ಗ ಜಗ್ಗಾಟ ಕೂಡ ತೋರಿಸುತ್ತಾರೆ, ಕೊನೆಗೂ ಕದಾನವಿರಾಮಕ್ಕೆ ಫ್ರಾನ್ಸ್ ಒಪ್ಪಿಗೆ ಕೊಡುತ್ತದೆ, ಹನ್ನೊಂದನೇ ತಿಂಗಳಿನ ಹನ್ನೊಂದನೇ ತಾರೀಖಿನ ಹನ್ನೊಂದು ಗಂಟೆಗೆ ಕದನವಿರಾಮ.
ಈ ಸುದ್ದಿ ತಿಳಿದು ಸೈನಿಕರೆಲ್ಲ ಖುಷಿಯಾಗುತ್ತಾರೆ, ಕ್ಯಾಟ್ ಕೊನೆಯ ಬಾರಿ ಹೆಬ್ಬಾತು ಕದಿಯಲು ಪೌಲ್‌ನನ್ನ ಕರೆದುಕೊಂಡು ಹೊರಡುವನು, ಹಾಗೆ ಹೊರಡುವಾಗ ಪೌಲ್ ಯುದ್ಧ ಮುಗಿದ ಮೇಲೆ ನಾವಿಬ್ಬರೂ ಏನಾದರೂ ವ್ಯಾಪಾರ ಮಾಡೋಣ ಅನ್ನುತ್ತಲೇ, ಕ್ಯಾಟ್, “ನಾನು ಅನಕ್ಷರಸ್ಥ ಶೂ ಮೇಕಿಂಗ್ ಬಿಟ್ಟು ಬೇರೇನೂ ಗೊತ್ತಿಲ್ಲ, ನೀನು ಯೂನಿವರ್ಸಿಟಿಗೆ ಸೇರಬೇಕು ಇಲ್ಲದಿದ್ದರೆ ನಾನೇ ನಿನ್ನ ಸಾಯಿಸುವೆ” ಎಂದು ಹೇಳಿ ನಕ್ಕು ರೈತನ ಮನೆಯ ಎದುರು ನಿಲ್ಲುತ್ತಾರೆ. ಯಾವತ್ತೂ ಕ್ಯಾಟ್ ಒಳಗೆ ಹೋಗಿ ಕದಿಯುವವನು. ಆವತ್ತು ಪೌಲ್‌ನನ್ನು ಕಳಿಸುತ್ತಾನೆ. ಪೌಲ್ ಹೆಬ್ಬಾತು ಕದಿಯುವಾಗ ರೈತನ ಚಿಕ್ಕ ಮಗ ನೋಡುತ್ತಾನೆ. ಅವನಿಂದ ರೈತನಿಂದ ಪೌಲ್ ಮತ್ತು ಕ್ಯಾಟ್ ತಪ್ಪಿಸಿಕೊಂಡು ಓಡಿ ಹೋಗುವರು. ಸ್ವಲ್ಪ ದೂರದಲ್ಲಿ ಸುಧಾರಿಸಿಕೊಳ್ಳುವರು, ಮೂತ್ರಕ್ಕೆಂದು ಹೋದ ಕ್ಯಾಟ್ ಎದುರು ರೈತನ ಚಿಕ್ಕ ಮಗ ಗನ್ ಹಿಡಿದು ನಿಲ್ಲುವನು.
ಸಿನಿಮಾ ಮುಂದುವರಿದ ಹಾಗೆ ಯುದ್ಧಭೂಮಿಯಲ್ಲಿ ಪೌಲ್ ತನ್ನ ಕಣ್ಣಮುಂದೆಯೇ ಅವನ ಒಬ್ಬೊಬ್ಬರೇ ಗೆಳೆಯರನ್ನು ಕಳೆದುಕೊಳ್ಳುತ್ತಾ ಹೋಗುತ್ತಾನೆ. ಒಬ್ಬ ಗೆಳೆಯನನ್ನು ಫ್ರಾನ್ಸ್‌ನನ್ನು ಸೇನೆ ಜೀವಂತ ಸುಡುತ್ತದೆ, ಇನ್ನೊಬ್ಬ ಗೆಳೆಯ ಕಳೆದುಹೋಗುತ್ತಾನೆ, ಜೆದೆನ್ ಕೂಡ ಯುದ್ಧದಲ್ಲಿ ಕಾಲು ಕಳೆದುಕೊಂಡು ತಾನೇ ಕತ್ತು ಕುಯ್ದುಕೊಂಡು ಸತ್ತುಹೋಗುತ್ತಾನೆ.
ಈ ಕಡೆ ಸುಧಾರಿಸಿಕೊಳ್ಳುತ್ತಿರುವ ಪೌಲ್‌ಗೆ ಗುಂಡಿನ ಸದ್ದು ಕೇಳಿ ಗಾಬರಿಯಾಗಿ ಎದ್ದು ಬಂದರೆ ಕ್ಯಾಟ್ ಹೊಟ್ಟೆಗೆ ಗುಂಡು ಬಿದ್ದು ರಕ್ತ ಸೋರುತ್ತಿರುತ್ತದೆ, ಪೌಲ್ ಅಲ್ಲಿಯೇ ಗುಂಡು ತೆಗೆಯಲು ಹೋದಾಗ ಕ್ಯಾಟ್ ಬೇಡ ಕ್ಯಾಂಪ್‌ಗೆ ಹೋಗೋಣ ಏನೂ ಆಗಿಲ್ಲ ಎನ್ನುತ್ತಾರೆ. ಕ್ಯಾಂಪ್ ತಲುಪುವಷ್ಟರಲ್ಲಿ ಕ್ಯಾಟ್ ಪ್ರಾಣ ಹಾರಿ ಹೋಗಿರುತ್ತದೆ.
ಕದನವಿರಾಮ ಘೋಷಿಸಿದ್ದರೂ ಕದನ ವಿರಾಮದ ಸಮಯಕ್ಕೆ ಇನ್ನೂ ಹದಿನೈದು ನಿಮಿಷ ಇದ್ದಾಗ ,ಯುದ್ಧದಾಹಿಯಾದ ಜರ್ಮನಿ ಪಡೆಯ ನಾಯಕ “ಇನ್ನೂ ಹದಿನೈದು ನಿಮಿಷ ಇದೆ, ನಾವು ಹೇಡಿಗಳಂತೆ ನಮ್ಮ ದೇಶಕ್ಕೆ ಹೋಗೋದು ಬೇಡ, ಹೋರಾಡಿ ಗೆದ್ದು ಹೋಗೋಣ” ಎಂದು ಮತ್ತೆ ಆಕ್ರಮಣಕ್ಕೆ ಬುಲಾವ್ ನೀಡುತ್ತಾನೆ. ಜರ್ಮನಿಯ ಪಡೆ ಆರಾಮಾಗಿದ್ದ ಫ್ರಾನ್ಸ್ ಪಡೆ ಕಡೆಗೆ ನುಗ್ಗುತ್ತವೆ, ಕದನವಿರಾಮಕ್ಕೆ ಇನ್ನೂ ಒಂದು ನಿಮಿಷ ಇದ್ದ ಹಾಗೆ ಪೌಲ್ ಸತ್ತು ಹೋಗುತ್ತಾನೆ, ಗಂಟೆ ಹನ್ನೊಂದು ಆಗುತ್ತದೆ, ಯುದ್ಧ ನಿಲ್ಲುತ್ತದೆ. ಅಲ್ಲಿಗೆ ಸಿನಿಮಾ ಕೂಡ ಮುಗಿಯುತ್ತದೆ.
ಈ ಸಿನಿಮಾ ಕಾದಂಬರಿ ಆಧಾರಿತ ಸಿನಿಮಾ, ಈ ಹಿಂದೆ ಕೂಡ ಇದೆ ಕೃತಿಯನ್ನ ಆಧರಿಸಿ ಒಂದು ಸಿನಿಮಾ ಹಾಗೂ ಒಂದು ವೆಬ್ ಸೀರೀಸ್ ಕೂಡ ಬಂದಿದೆ, ಈ ಸಿನಿಮಾದಲ್ಲಿ ಕೃತಿಯ ಆಶಯ ಜೊತೆಗೆ ಕೃತಿಯ ಹೊರಗೆ ನಿಂತು ಎಷ್ಟೋ ವಿಷಯಗಳನ್ನು ಹೇಳಿರುವುದು, ಅದರಲ್ಲಿ ಕದನ ವಿರಾಮ ಕೂಡ ಒಂದು.
ಮೇಲ್ನೋಟಕ್ಕೆ ಇದು ಪೌಲ್ ಮತ್ತು ಆತನ ಸ್ನೇಹಿತರ ಜೀವನದ ಕತೆ ಆದರೂ, ಅದರ ಜೊತೆಯಲ್ಲಿ ಯುದ್ಧವನ್ನು ಒಳಗಿನಿಂದ ಹೊರಗಿನಿಂದ ತೋರಿರುವ ರೀತಿ ಅನನ್ಯ. ಯುದ್ಧವೆಂದರೆ ಹಸಿವು. ನೆಲದ ಹಸಿವು. ಇದರ ಜೊತೆಯಲ್ಲಿ ದೇಹದ ಹಸಿವು ಹೆಣ್ಣಿನ ಹಸಿವು ಹೆಚ್ಚಾಗಿ ಯುದ್ಧದಲ್ಲೇ ಇದ್ದು ಬದುಕಿನ ಹಸಿವನ್ನು ಅದ್ಭುತವಾಗಿ ತೋರಿಸಿದ್ದಾರೆ, ಪ್ರತಿ ಸೈನಿಕನು ಕೊನೆ ಗಳಿಗೆಯಲ್ಲಿ ಬದುಕಲು ಒದ್ದಾಡುವ ಕ್ಷಣಗಳಿವೆ. ಸಾಯುತ್ತಿರುವನು ವೈರಿಯಾದರು ಮಾನವೀಯತೆ ನೆಲೆಯಲ್ಲಿ ನಿಂತು ಅವನನ್ನು ಬದುಕಿಸಲು ಒದ್ದಾಡುವ ಮಾನವೀಯ ದೃಶ್ಯಗಳಿವೆ.
ಒಂದು ದೃಶ್ಯದಲ್ಲಿ ಆರಾಮಾಗಿ ಸೈನಿಕರು ಯುದ್ಧವಿಲ್ಲದೆ ಯಾವುದೇ ಆಕ್ರಮಣ ಅತಿಕ್ರಮಣ ಇಲ್ಲದೆ ಕೂತು ಸಮಯ ಕೊಲ್ಲುತ್ತಿದ್ದಾರೆ. ದೂರದಲ್ಲಿ ಫ್ರಾನ್ಸ್‌ನ ಹುಡುಗಿಯರು, ಅದನ್ನು ನೋಡಿ ಪೌಲ್ ಸ್ನೇಹಿತ ಫ್ರಾಂಜ಼್ ಓಡಿ ಹೋಗುವನು, ರಾತ್ರಿ ಬರುವನು.. ಬಂದ ಕೂಡಲೇ ಪೌಲ್ ಹುಡುಗಿ ಬಗ್ಗೆ ಕೇಳಿದಾಗ ‘ಅವಳ ಮೈ ಬಣ್ಣ ಹಾಲಿಗಿಂತಲೂ ಹೊಳಪಿತ್ತು’ ಎಂದು ಹೇಳುತ್ತಾ ತಾನು ಅವಳ ನೆನಪಿಗೆ ಇಟ್ಟುಕೊಂಡು ಬಂದ ಅವಳ ಸ್ಕಾರ್ಫ್‌ಅನ್ನು ಪೌಲ್‌ಗೆ ತೋರಿಸುವನು. ಪೌಲ್ ಅದನ್ನು ಮೂಸಿ, ಅವನ ಅಕ್ಕ ಪಕ್ಕದವರು ಕೂಡ ಅದನ್ನು ಮೂಸಿ ಅವಳು ದಿನಕ್ಕೆ ಎರಡು ಬಾರಿ ಆದರೂ ಸ್ನಾನ ಮಾಡಿರಬೇಕು.. ಅದೆಷ್ಟು ಅದ್ಭುತವಾದ ಪರಿಮಳ ಎನ್ನುತ್ತಾರೆ. ಆ ಸ್ಕಾರ್ಫ್ ಕೊನೆಗೆ ಪೌಲ್ ಸತ್ತಾಗ ಅವನ ಕೊರಳಿನಲ್ಲಿ ಇರುತ್ತದೆ.
ಚಿತ್ರದ ಅವಧಿ 147 ನಿಮಿಷವಾದರೂ ಎಲ್ಲಿಯೂ ದೀರ್ಘ ಅನ್ನಿಸೋಲ್ಲ. ಹಿನ್ನೆಲೆ ಸಂಗೀತ ಮೊದಲ ದೃಶ್ಯದಿಂದಲೇ ಪರಿಣಾಮಕಾರಿಯಾಗಿದೆ, ಪ್ರತಿ ಫ್ರೇಮು ಚಿತ್ರವನ್ನ ಎದೆಯೊಳಗೆ ದಾಟಿಸುತ್ತದೆ. ಸಿನಿಮಾದ ಪ್ರತಿ ವಿಭಾಗವು ಇಷ್ಟು ಅಚ್ಚುಕಟ್ಟಾಗಿ ಹೊಂದಿಕೊಂಡಿರುವುದು ಸಿನಿಮಾ ಅಷ್ಟು ಕಾಡಲು ಕಾರಣ. ಯಾರೂ ಅಭಿನಯಿಸಿಲ್ಲ, ಬದಲಾಗಿ ಪಾತ್ರವೇ ಆಗಿಹೋಗಿರುವಷ್ಟು ಜೀವಿಸಿದ್ದಾರೆ.
ಈ ಸಿನಿಮಾವನ್ನ ಎರಡು ಸಲ ನೋಡಿದ ಮೇಲೆ ಬರೆಯಲು ಸಿಕ್ಕಿದ್ದು ಇಷ್ಟು, ಇನ್ನೂ ಏನೋ ಬರೆಯಲು ಹೋದರೆ ಮನಸ್ಸು ಭಾರ. ಈ ಸಿನಿಮಾವನ್ನು ಮಿಸ್ ಮಾಡಿಕೊಳ್ಳದೆ ನೋಡಲೇಬೇಕು. ಆಸ್ಕರ್ ರೇಸಿನಲ್ಲಿ ಇರುವ ಈ ಸಿನಿಮಾ ಅರ್ಹವಾದ ಎಲ್ಲ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಳ್ಳಲಿ.
ಜಯರಾಮಚಾರಿ ಮೂಲತಃ ಮೈಸೂರಿನವರು. ಬೆಳೆದದ್ದು ಬೆಂಗಳೂರು. ಸಧ್ಯ ನಮ್ಮ ಮೆಟ್ರೊದಲ್ಲಿ ಸ್ಟೇಷನ್ ಸೂಪರಿಡೆಂಟ್ ಆಗಿದ್ದಾರೆ. “ಕರಿಮುಗಿಲ ಕಾಡಿನಲಿ” (ಕಥಾ ಸಂಕಲನ), ನನ್ನವ್ವನ ಬಯೋಗ್ರಫಿ ಇವರ ಪ್ರಕಟಿತ ಕೃತಿಗಳು. ಓದು ಮತ್ತು ಸಿನಿಮಾ ಇವರ ಹವ್ಯಾಸವಾಗಿದ್ದು ಹಲವು ಕಿರುಚಿತ್ರಗಳನ್ನು ನಿರ್ದೇಶಿಸಿದ್ದಾರೆ