ಆತ ನಮ್ಮ ಶಾಲೆ ಬಿಟ್ಟ ಮೇಲೆ ನಿಗೂಢವಾಗಿ ಕಣ್ಮರೆಯಾದ. ನಮ್ಮ ಮನೆಯಲ್ಲಿ ಆಗ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಡತೆ ಇತ್ತು. ಆತ ಯಾವಾಗಲಾದರೂ ಖರ್ಚಿಗೆ ಬೇಕೆಂದರೆ ಒಂದಿಷ್ಟು ಚಿಲ್ಲರೆ ಪಡೆದುಕೊಳ್ಳುತ್ತಿದ್ದ. ನಮ್ಮದು ಕಿರಾಣಿ ಅಂಗಡಿ ಇದ್ದುದರಿಂದ ಅಪ್ಪನಿಗೆ ಗೊತ್ತಿಲ್ಲದೆ ಚಿಲ್ಲರೆ ಕಾಸನ್ನು ಎತ್ತಿಟ್ಟುಕೊಂಡು ಆತನಿಗೆ ಕೊಡುತ್ತಿದ್ದೆ. ಕೊನೆಯಬಾರಿಗೆ ಆತ ಊರನ್ನು ಬಿಡುವಾಗ ಐದು ರೂಪಾಯಿ ಪಡೆದುಕೊಂಡಿದ್ದ ಊರಿಗೆ ಹೋಗಬೇಕು ಎಂದು ಹೇಳಿ ಹೋಗಿದ್ದ. ಮತ್ತೆ ಆತ ವಾಪಸ್ಸು ಬರಲೆ ಇಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಕೊನೆಯ ಕಂತು ನಿಮ್ಮ ಓದಿಗೆ
ನಮ್ಮೂರು ನೂರು – ನೂರೈವತ್ತು ಮನೆಗಳಿರುವ ಒಂದು ಪುಟ್ಟ ಊರು. ಒಪ್ಪ ಒರಣವಾಗಿ ಕೇರಿಗಳಿದ್ದವು. ನಾಲ್ಕು ದಿಕ್ಕಿನಲ್ಲಿಯೂ ಮನೆಗಳಿದ್ದವು. ನಮ್ಮ ಮನೆ ಮಧ್ಯ ಭಾಗದಲ್ಲಿತ್ತು ನಮ್ಮ ಮನೆಗೆ ಹೊಂದಿಕೊಂಡಂತೆ ಸಣ್ಣ ಸಣ್ಣ ಕಲ್ಲುಗಳಿಂದ ನಿರ್ಮಿಸಿದ ನಾಲ್ಕೈದು ಎತ್ತರದ ತಡೆಗೋಡೆಯ ಅವಶೇಷಗಳು ಇದ್ದವು. ಇಂತಹವುಗಳ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ಜಾಸ್ತಿ. ಅದರ ಬಗ್ಗೆ ಮನೆಯಲ್ಲಿ ಕೇಳಿದಾಗ ಅದು ಕೋಟೆಯ ಬುರುಜುಗಳು ಎಂದು ಅಜ್ಜಿ ಹೇಳುತ್ತಿದ್ದಳು. ನಾನಾಗ ನಮ್ಮೂರಿಗೂ ಕೋಟೆ ಇತ್ತ ಎಂದು ಕೇಳುತ್ತಿದ್ದೆ. ನನಗೂ ಗೊತ್ತಿಲ್ಲ; ಆದರೆ ನನ್ನ ಬಾಲ್ಯದಲ್ಲಿ ಊರಿಗೆ ರಕ್ಷಣೆ ಗೋಡೆಯಂತೆ ಇತ್ತು. ಆದರೆ ಅದು ಬಿದ್ದಂತೆಲ್ಲ ಅಲ್ಲಿ ಬಹಳ ಹಿಂದೆಯೆ ಕಟ್ಟಡ ಕಟ್ಟಿಕೊಂಡು ವಾಸ ಮಾಡುವುದಕ್ಕೆ ಪ್ರಾರಂಭಿಸಿರಬೇಕು ಎಂದು ಅಜ್ಜಿ ಆಗಾಗ ಹೇಳುತ್ತಿದ್ದುದನ್ನು ಕೇಳಿದ್ದೆ. ನನಗೆ ಬುದ್ದಿ ಬರುವ ಕಾಲಕ್ಕೆ ಮೋಟು ಗೋಡೆಯಂತೆ ನಮ್ಮ ಮನೆಯ ಅನತಿ ದೂರದಲ್ಲಿ ಗೋಡೆ ಇದ್ದುದನ್ನು ನೋಡಿದ್ದೆ. ಅದರ ನೇರಕ್ಕೆ ನಮ್ಮ ಮನೆಯೂ ಇತ್ತು. ಆ ಗೋಡೆಗೆ ಹೊಂದಿಕೊಂಡಂತೆ ಬಾಗಿಲಿರುವ ಒಂದು ಪ್ರವೇಶದ್ವಾರ ಇತ್ತು. ಅದರ ಪಕ್ಕದಲ್ಲಿ ಒಂದಿಪ್ಪತ್ತು ಅಡಿಯಷ್ಟು ರಸ್ತೆ ಇತ್ತು ಅದರ ಪಕ್ಕದಲ್ಲೆ ಒಂದು ಹಳೆಯ ಕಟ್ಟಡ ಇತ್ತು. ಅದರಲ್ಲಿ ನಾಲ್ಕನೆ ತರಗತಿಯವರೆಗೂ ನನ್ನ ಓದು ನಡೆದಿದ್ದು ಅದರ ಪಕ್ಕದಲ್ಲಿ ಇರುವ ಜಾಗವನ್ನೆ ಊರಬಾಗಿಲು ಎಂದು ಕರೆಯುತ್ತಿದ್ದರು.
ಊರಿನಲ್ಲಿ ನಾಟಕ ಪ್ರದರ್ಶನ ಮಾಡುವಾಗ ಊರಿಗೆ ಸರ್ಕಸ್ ಕಂಪನಿಯವರು ಬಂದಾಗ ಅದರ ಮುಂದೆ ಪ್ರದರ್ಶನ ನಡೆಯುತ್ತಿತ್ತು. ಇನ್ನು ಕಾಲರಾ ಇನ್ನಿತರೆ ಸಾಂಕ್ರಾಮಿಕ ರೋಗಗಳು ಬಂದಾಗ ಚುಚ್ಚುಮದ್ದನ್ನು ಊರಬಾಗಿಲ ಪಕ್ಕದ ಕೊಠಡಿಯಲ್ಲಿ ವೈದ್ಯಕೀಯ ಚಿಕಿತ್ಸೆಗಳು ನಡೆಯುತ್ತಿದ್ದವು. ಅದರ ಮುಂಭಾಗದಲ್ಲಿ ಕರುಗಲ್ಲು (ಕ್ಷೇತ್ರಪಾಲಕ ಕಲ್ಲು) ಇತ್ತು ಅದು ಬಹಳ ವರ್ಷಗಳವರೆಗೂ ಇತ್ತು. ಈಗಲೂ ಇದೆ ಆದರೆ ಹೊಸದಾಗಿ ಹೂಳಲಾಗಿದೆ. ಸಾಮಾನ್ಯವಾಗಿ ಅದರ ಪಕ್ಕದ ದಾರಿಯನ್ನು ಕೋಟೆಹಿಂದ್ಲು ದಾರಿ ಎಂದೆ ಕರೆಯುತ್ತಿದ್ದುದು ವಾಡಿಕೆ. ಆ ದಾರಿಯ ನಂತರದ್ದೆ ಕೆರೆ. ನಿಜವಾಗಲೂ ನಮ್ಮೂರಿಗೆ ಕೋಟೆ ಇತ್ತ ಅಂದಾಗಲೆಲ್ಲಾ ಇತ್ತಂತೆ ಎಂದು ಅಜ್ಜಿ ಉತ್ತರಿಸುತ್ತಿದ್ದಳು. ಅದರ ಕುರುಹುಗಳು ಅಲ್ಲಲ್ಲಿ ಇದ್ದುದಂತೂ ನಿಜ. ಒಂದೊಂದು ಪ್ರದೇಶಕ್ಕೂ ಒಂದೊಂದು ಹೆಸರು. ಕೆರೆಯ ಮುಂಭಾಗದಲ್ಲಿ ‘ಕಳ್ಳಿಓಣಿ’ ಎಂದು ಕರೆಯುವ ಎರಡೂ ಬದಿಯಲ್ಲೂ ದಟ್ಟವಾಗಿ ಗಿಡಮರಗಳು ಬೆಳೆದ ಅಲ್ಲಲ್ಲಿ ಕಳ್ಳಿಗಿಡಗಳು ಇದ್ದ ಪ್ರದೇಶವದು ಅದು. ಅಂದಾಜು ನೂರು ಮೀಟರ್‌ನಷ್ಟು ಇರಬಹುದು. ಅದನ್ನು ಬಿಟ್ಟರೆ ಅದರ ಪಕ್ಕದಲ್ಲಿ ಹುಣಸೆ ಮರದ ಬಾವಿ ಎಂದು ಕರೆಯುತ್ತಿದ್ದ ಜಾಗವೊಂದಿತ್ತು. ಸಾಮಾನ್ಯವಾಗಿ ಚಿಕ್ಕ ಮಕ್ಕಳನ್ನು ಅಲ್ಲಿಗೆ ಕಳಿಸುತ್ತಿರಲಿಲ್ಲ. ಇನ್ನು ಕೋಟೆ ಹಿಂದಿನ ರಸ್ತೆಯಲ್ಲಿಯೂ ಓಡಾಡಬೇಕೆಂದರೆ ಹುಷಾರು ಎಂದು ಹೇಳುತ್ತಿದ್ದರು. ಏಕೆ ಎಂದು ಕೇಳಿದರೆ ಅದು ರಾವು ಓಡ್ಯಾಡೊ ಜಾಗ ಚಿಕ್ಕಮಕ್ಕಳು ಒಡ್ಯಾಡ್ಬಾರ್ದು ಎನ್ನುತ್ತಿದ್ದರು. ನನಗೆ ರಾವೆಂದರೆ ಏನಿರಬಹುದು ಎಂದು ಕೇಳಿದರೆ ಅದಕ್ಕೆ ರೂಪ ಇಲ್ಲ, ಅದು ಕೆಂಡದುಂಡೆ ಸುರುಳಿಯಾಗಿ ಉರುಳ್ಕಂಡು ಬರ್ತದೆ ಅನ್ನುತ್ತಿದ್ದರು. ಅದನ್ನು ನಾನ್ಯಾವತ್ತು ನೋಡಿಲ್ಲ. ಬರಿ ಅದರ ಬಗ್ಗೆ ಕತೆಗಳನ್ನಷ್ಟೆ ನನ್ನಜ್ಜಿ ಹೇಳುತ್ತಿದ್ದಳು. ನಾವು ಭಯಪಟ್ಟು ಅಂತಹ ಸ್ಥಳಗಳಲ್ಲಿ ಕತ್ತಲಲ್ಲಿ ನಡೆದಾಡಿದ್ದೆ ಕಡಿಮೆ.
ಸಾಮಾನ್ಯವಾಗಿ ಬಹಿರ್ದೆಸೆಗೆ ಆ ಕಡೆಗೆ ಹೋಗಬೇಕಾಗಿತ್ತು. ಅಂತಹ ಸಂದರ್ಭದಲ್ಲಿ ಹೊಟ್ಟೆ ಹಿಡಿದು ಮಲಗಿಕೊಂಡಿದ್ದು ಇದೆ. ಇಂತಹ ಕತೆಗಳು ಅಲ್ಲಿ ಓಡಾಡುವಾಗಲೆ ನೆನಪಾಗುತ್ತಿದ್ದದ್ದು ಕಾರಣವಾಗಿತ್ತು. ಹಿರಿಯರಲ್ಲಿದ್ದ ಮೂಢನಂಬಿಕೆಯೊ ಅಥವಾ ಚಿಕ್ಕಮಕ್ಕಳು ಎಲ್ಲೆಂದರಲ್ಲಿ ಓಡ್ಯಾಡಬಾರದೆಂಬ ಕಾರಣಕ್ಕೆ ಹಾಗೆ ಹೇಳುತ್ತಿದ್ದರೊ ತಿಳಿಯದು. ಬರುಬರುತ್ತಾ ನಮಗೂ ಬುದ್ದಿ ಬಂದಂತೆ ಸಲೀಸಾಗಿ ಓಡಾಡುತ್ತಿದ್ವಿ. ಆದರೂ ಮನದ ಮೂಲೆಯಲ್ಲೊಂದು ಭಯ ಕಾಡುತ್ತಲೆ ಇತ್ತು. ಈಗ ಬಿಡಿ ಅದನ್ನು ಒಳಗೊಂಡಂತೆ ಮನೆಗಳಾಗಿವೆ ಬೀದಿದೀಪಗಳು ಬಂದಿವೆ. ಅಲ್ಲಿದ್ದ ‘ರಾವು’ ಎಲ್ಲಿ ಓಡಿಹೋಯಿತು ತಿಳಿಯದು.
ಅನಿವಾರ್ಯವಾಗಿ ನಾನು ಕಳ್ಳಿಓಣಿಯಲ್ಲಿ ಓಡ್ಯಾಡಲೇಬೇಕಿತ್ತು. ಯಾಕೆಂದರೆ ನಮ್ಮ ಜಮೀನಿಗೆ ಹೋಗುವಾಗ ಅದನ್ನು ದಾಟಿಯೆ ಹೋಗಬೇಕಾಗಿತ್ತು. ಅದು ಚಿಕ್ಕಜಾಗವೆ ಆದರೂ ಅಲ್ಲಿಗೆ ಹೋದತಕ್ಷಣ ಯಾವುದೊ ಒಂದು ಭಯ ನನ್ನನ್ನು ಆವರಿಸಿಬಿಡುತ್ತಿತ್ತು. ಆ ಕಳ್ಳಿಓಣಿಯ ಒಂದು ಬದಿಯಲ್ಲಿ ಹಳೆಯ ಮಂಟಪವೊಂದಿತ್ತು. ಅದರ ಬಗ್ಗೆ ಅಜ್ಜಿಯನ್ನು ಕೇಳಿದರೆ ನನಗೂ ಗೊತ್ತಿಲ್ಲ ಎನ್ನುತ್ತಿದ್ದಳು. ಅಲ್ಲಿಗೆ ಹೋದತಕ್ಷಣ ನಾನು ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಓಡುತ್ತಿದ್ದೆ. ಅಮ್ಮನ ಜೊತೆಯಲ್ಲಿ ಹೋಗುವಾಗ ಸ್ವಲ್ಪ ಧೈರ್ಯವಿರುತ್ತಿತ್ತು. ಎಷ್ಟೋ ಸಾರಿ ಹೊಲದಲ್ಲಿ ಕೆಲಸ ಮಾಡುವಾಗ ಕೂಲಿಗಳಿಗೆ ಬುತ್ತಿ ತೆಗೆದುಕೊಂಡು ಹೋಗುವಾಗ ತಲೆಮೇಲಿನ ಬುತ್ತಿ ಬೀಳುವಂತೆ ಓಡಿದ್ದು ನೆನಪಿದೆ. ಒಮ್ಮೆ ಮಾತ್ರ ಯಾವುದೊ ಧ್ವನಿ ಕೇಳಿ ಹೆದರಿ ಒಂದೆರಡು ದಿನ ಜ್ವರ ಬಂದಿದ್ದು ಅದಕ್ಕೆ ಅಂತ್ರ ಕಟ್ಟಿಸಿದ್ದು ಒಂದೆರಡು ದಿನಗಳಲ್ಲಿ ಕಾಕತಾಳಿಯವೆಂತೆ ಜ್ವರ ಬಿಟ್ಟದ್ದು ನೆನಪಿದೆ. ಬುದ್ಧಿ ಬಂದಂತೆಲ್ಲಾ ಅದೆಲ್ಲ ಸುಳ್ಳು ಎಂಬ ಅರಿವು ಮೂಡಿದ ಮೇಲು ಅಲ್ಲಿ ಓಡಾಡುವಾಗ ಅದೆ ಕತೆಗಳು ನೆನಪಾಗುತ್ತವೆ. ಈಗ ಅಲ್ಲಿ ಒಂದು ಕಳ್ಳಿಗಿಡವೂ ಇಲ್ಲ. ಅದರ ಕಳ್ಳಿ ಕಳ್ಳಿಹಾಲನ್ನು ನೋವು ನಿವಾರಕವಾಗಿ ಅಜ್ಜಿ ಬಳಸುತ್ತಿದ್ದಳು. ಅದರ ಗೋಂದನ್ನು ನಾವು ಗಮ್ಮಾಗಿ ಬಳಸುತ್ತಿದ್ದೆವು.
ಆ ಕಳ್ಳಿಓಣಿಯ ಪಕ್ಕದಲ್ಲಿ ಒಂದು ಬಾವಿಯೂ ಇತ್ತು. ಆ ಬಾವಿ ಪ್ರತಿ ಮಳೆಗಾಲಕ್ಕೆ ಪೂರ್ತಿ ತುಂಬಿರುತ್ತಿತ್ತು. ಬೇಸಿಗೆಯಲ್ಲಿ ಅದು ಇಡಿ ಊರಿನ ಪಡ್ಡೆಹೈಕಳಿಗೆ ಸ್ವಿಮ್ಮಿಂಗ್ ಪೂಲಾಗಿರುತ್ತಿತ್ತು. ಪ್ರತಿಯೊಬ್ಬರು ಅದರಲ್ಲಿ ಈಜಾಡುತ್ತಿದ್ದರು. ಸಾಮಾನ್ಯವಾಗಿ ನನ್ನ ಓರಗೆಯ ಮಕ್ಕಳೆಲ್ಲಾ ಅಲ್ಲಿ ಈಜು ಕಲಿತವರೆ ಆಗಿದ್ದಾರೆ. ಬೇಸಿಗೆಯಲ್ಲಿ ಊರಿನ ಹುಡುಗರೆಲ್ಲ ನೀರಿನಲ್ಲಿ ಮುಳುಗುವುದೆ ಒಂದು ಕೆಲಸವಾಗಿತ್ತು.
ಇನ್ನು ಅದಕ್ಕೆ ಹೊಂದಿಕೊಂಡಂತೆ ಇದ್ದ ಹುಣಸೆ ಮರದ ಬಾವಿಯಲ್ಲಿ ಯಾರು ಈಜಾಡಿದ್ದೆ ನೆನಪಿಲ್ಲ ಅದು ಬಹಳ ಬೃಹದಾಕಾರದ ಬಾವಿ ಅದರಲ್ಲಿ ಇಳಿದು ಮೇಲೆ ನೋಡಿದರೆ ಜೀವ ಜಲ್ಲೆನ್ನುತ್ತಿತ್ತು. ನಾನಂತೂ ಅದರಲ್ಲಿ ಎಂದು ಇಳಿದ ನೆನಪೆ ಇಲ್ಲ. ಆ ಬಾವಿಯ ಮೇಲೆ ಪಕ್ಕದಲ್ಲಿಯೆ ಒಂದು ಬಾರೆ ಹಣ್ಣಿನ ಮರವಿತ್ತು. ಅದರ ಹಣ್ಣು ಬಹಳ ರುಚಿಕರವಾಗಿತ್ತು. ಅಲ್ಲಿಗೆ ಹೋಗುವಾಗಲೆಲ್ಲಾ ಸ್ನೇಹಿತರೊಂದಿಗಷ್ಟೆ ಹೋಗುತ್ತಿದ್ದೆ. ಈಗ ಆ ಮರವೆ ಕಣ್ಮರೆಯಾಗಿದೆ. ಅದನ್ನು ನೆನೆದಾಗಲೆಲ್ಲಾ ಬಾರೆ ಹಣ್ಣಿನ ರುಚಿಯೆ ನೆನಪಾಗುತ್ತದೆ.
ಎಂತಹ ಸಮೃದ್ಧ ಬಾಲ್ಯವಿತ್ತು ನಮಗೆ. ಬಾಲ್ಯದಿಂದಲೂ ನಾವೊಂದೈದು ಜನ ಗೆಳೆಯರು ಯಾವಾಗಲೂ ಜೊತೆಯಲ್ಲಿಯೆ ಇರುತ್ತಿದ್ದವು. ಅದರಲ್ಲಿ ಗೆಳೆಯನೊಬ್ಬ ಪ್ರತಿಭಾವಂತ, ಅಧ್ಭುತವಾಗಿ ನೃತ್ಯ ಮಾಡುತ್ತಿದ್ದ. ಶಾಲೆಯ ಕಾರ್ಯಕ್ರಮದಲ್ಲಿ ನೃತ್ಯ ಮಾಡಿ ಎಲ್ಲರ ಮನಸ್ಸನ್ನು ಗೆದ್ದಿದ್ದ. ವಿಪರ್ಯಾಸವೆಂದರೆ ಆತ ನಮ್ಮ ಶಾಲೆ ಬಿಟ್ಟ ಮೇಲೆ ನಿಗೂಢವಾಗಿ ಕಣ್ಮರೆಯಾದ. ನಮ್ಮ ಮನೆಯಲ್ಲಿ ಆಗ ಸ್ವಲ್ಪ ಮಟ್ಟಿಗೆ ಆರ್ಥಿಕವಾಗಿ ಸದೃಡತೆ ಇತ್ತು. ಆತ ಯಾವಾಗಲಾದರೂ ಖರ್ಚಿಗೆ ಬೇಕೆಂದರೆ ಒಂದಿಷ್ಟು ಚಿಲ್ಲರೆ ಪಡೆದುಕೊಳ್ಳುತ್ತಿದ್ದ. ನಮ್ಮದು ಕಿರಾಣಿ ಅಂಗಡಿ ಇದ್ದುದರಿಂದ ಅಪ್ಪನಿಗೆ ಗೊತ್ತಿಲ್ಲದೆ ಚಿಲ್ಲರೆ ಕಾಸನ್ನು ಎತ್ತಿಟ್ಟುಕೊಂಡು ಆತನಿಗೆ ಕೊಡುತ್ತಿದ್ದೆ. ಕೊನೆಯಬಾರಿಗೆ ಆತ ಊರನ್ನು ಬಿಡುವಾಗ ಐದು ರೂಪಾಯಿ ಪಡೆದುಕೊಂಡಿದ್ದ ಊರಿಗೆ ಹೋಗಬೇಕು ಎಂದು ಹೇಳಿ ಹೋಗಿದ್ದ. ಮತ್ತೆ ಆತ ವಾಪಸ್ಸು ಬರಲೆ ಇಲ್ಲ. ಇನ್ನೊಬ್ಬ ಗೆಳೆಯ ಆರನೆ ತರಗತಿಗೆ ಬಂದಿದ್ದ. ನನಗೆ ಬಹಳ ಹತ್ತಿರದ ಗೆಳೆಯನಾದ ಪರೀಕ್ಷೆಗಳಿದ್ದಾಗ ನಮ್ಮ ಮನೆಯ ಹಟ್ಟಿಅಂಗಳದಲ್ಲಿ ಕುಳಿತು ಓದುತ್ತಿದ್ದೆವು. ಒಮ್ಮೆ ಪರೀಕ್ಷೆಗೆಂದು ಇಡಿ ರಾತ್ರಿ ನಿದ್ದೆ ಮಾಡದೆ ಓದಿ ಪರೀಕ್ಷೆ ಬರೆದಿದ್ದೆವು. ಆತನು ಏಳನೆಯ ತರಗತಿ ಪಾಸಾಗಿ ಬೇರೆ ಊರಿಗೆ ಹೋದ ನಾವು ನಮ್ಮೂರಿಗೆ ಹತ್ತಿರವಾದ ಶಾಲೆಯೊಂದಕ್ಕೆ ಸೇರಿದೆವು. ಬಹಳ ವರ್ಷಗಳು ಆತನನ್ನು ಸಂದಿಸಲೇ ಇಲ್ಲ. ನಂತರ ಆತನನ್ನು ಭೇಟಿಯಾಗಿದ್ದು ಐದಾರು ವರ್ಷಗಳ ನಂತರ. ನಾನಾಗ ಪಿ ಯು ಸಿ ಗೆ ತುಮಕೂರಿಗೆ ಸೇರಿದ್ದೆ. ಅದು ಕಾಲೇಜು ಪ್ರಾರಂಭದ ದಿನಗಳಾದ್ದರಿಂದ ಹಾಸ್ಟೆಲ್ ಇನ್ನೂ ತೆರೆದಿರಲಿಲ್ಲ. ಊಟಕ್ಕೆಂದು ನಾನು ಊಟಕ್ಕೆ ಹೋಗಿದ್ದಾಗ ಆತನು ಅದೆ ಹೋಟೆಲ್‌ನಲ್ಲಿ ಊಟ ಮಾಡುತ್ತಿದ್ದ. ಆತ ದೈಹಿಕವಾಗಿ ಸಂಪೂರ್ಣವಾಗಿ ಬದಲಾಗಿದ್ದ. ನಾನು ಗುರುತಿಸೆನಾದರೂ ಆತನೊ ಅಲ್ಲವೊ ಎಂದೆ ಅನುಮಾನದಿಂದ ಊಟ ಮುಗಿಸಿ ಹೊರಬಂದಾಗ ಆತನೆ ಮಾತನಾಡಿಸಿದ. ನಾನೀಗ ಇಲ್ಲಿಯೆ ಓದುತ್ತಿದ್ದೇನೆ. ಪ್ರೈಮರಿ ಶಾಲೆ ಮುಗಿದ ಮೇಲೆ ನಾನು ನಿಮ್ಮೂರಿಗೆ ಬರುವುದಕ್ಕೆ ಆಗಲೆ ಇಲ್ಲ. ಹೀಗೆ ಏನೇನೊ ಹೇಳಿದ ನಾನು ರೂಂ ಮಾಡಿದ್ದೇನೆ ಎಂದು ಕರೆದುಕೊಂಡು ಹೋದ.
ಒಂದಷ್ಟು ಮಾತನಾಡಿದೆವು. ನಂತರ ಒಂದೆರಡು ಭೇಟಿಗಳಲ್ಲಿ ಆತ ರೂಂ ಬದಲಾಯಿಸಿದ. ನಾನು ಅನಿವಾರ್ಯವಾಗಿ ಪಿ ಯು ಸಿ ಅರ್ಧಕ್ಕೆ ಬಿಟ್ಟೆ. ನಂತರ ಭೇಟಿಯಾಗಲಿಲ್ಲ. ನಂತರ ಮೂರ್ನಾಲ್ಕು ವರ್ಷಗಳ ನಂತರ ಬಿ ಕಾಂ ಓದುವಾಗ ಭೇಟಿಯಾಗಿದ್ದು ಬಿಟ್ಟರೆ ನಂತರ ಭೇಟಿಯೆ ಇಲ್ಲ. ಒಗ್ಗೂಡಿ ಆಡಿದ ಬಾಲ್ಯ ಬೆಳೆ ಬೆಳೆಯುತ್ತಾ ಅವರವರ ಬದುಕು ಅವರದಾಗುತ್ತ ಸಾಗುತ್ತದೆ. ಕಳೆದು ಹೋದ ಮೇಲೂ ನೆನಪುಗಳು ಮಾತ್ರ ಉಳಿಯುತ್ತವೆ. ಇಂತಹ ಅನೇಕ ಸ್ನೇಹಿತರು ನನ್ನ ಬಾಲ್ಯದ ಬದುಕಿನಲ್ಲೊಂದು ಹೆಜ್ಜೆ ಮೂಡಿಸಿ ಹೋಗಿದ್ದಾರೆ. ಒಂದಿಬ್ಬರು ಆಗಾಗ ಸಿಗುತ್ತಾರೆ. ಎಲ್ಲರಿಗೂ ಅವರವರ ಬದುಕು ಇದೆ. ಕೂತು ಯೋಚಿಸಿದಾಗ ಎಷ್ಟೊಂದು ದಾರಿ ನಡೆದಿದ್ದೇವೆ ಅನಿಸುತ್ತದೆ. ಆದರೆ ಊರು ಮಾತ್ರ ಹಾಗೆಯೆ ಇದೆ. ಒಂದಿಷ್ಟು ಹೊಸ ಕಟ್ಟಡಗಳು ಹೊಸಪೀಳಿಗೆ ಆಧುನಿಕತೆಯ ಸೋಂಕಿಗೆ ಸಿಕ್ಕು ಬದಲಾಗಿದೆ ಅನಿಸಿದರೂ, ನೆನಪಿನ ಪುಟಗಳಲ್ಲಿ ಅಚ್ಚಳಿಯದೆ ಹಾಗೆ ಉಳಿದಿದೆ.
ಇಷ್ಟೊಂದು ನೆನಪುಗಳನ್ನು ಕೊಟ್ಟ ಊರಿಗೆ, ಗೆಳೆಯರಿಗೆ, ನಡೆದಾಡಿದ ಮಣ್ಣಿಗೆ, ವಿದ್ಯೆಕಲಿಸಿದ ಗುರುಗಳಿಗೆ, ಹಸಿವಿಗೆ ದುಃಖಕ್ಕೆ, ಅಪ್ಪನ ಹೊಡೆತಕ್ಕೆ, ಮರೆಯಲಾಗದ ಗೆಳೆಯರಿಗೆ, ಕಳೆದ ಬದುಕಿಗೆ ಪುಟ್ಟ ಥ್ಯಾಂಕ್ಸ್ ಹೇಳದಿದ್ದರೆ ಹೇಗೆ.. ಯಾಕೆಂದರೆ ಇನ್ನೂ ಬದುಕಿದೆ ನೆನಪೂ ಇದೆ ಸಾಗಬೇಕಾದ ದಾರಿಯೂ ಬಹಳಷ್ಟು ಇದೆ..