ಅಲ್ಲಾ ನಮ್ ಮೇಷ್ಟ್ರು ಹೇಳಿರೋ ಸಿನ್ಮಾ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು. ಮದ್ಲು ಇಲ್ಲಿಂದ ದೂರ ಹೋಗ್ದಿದ್ರೆ ಗುರ್ತಿರಾರು ಯಾರಾನಾ ನೋಡಿ ತಪ್ಪು ತಿಳ್ಕೊಂಡಾರು’ ಅಂತ ಮಕ ತಿರುಗುಸ್ಕೊಂಡು ಸ್ಯಾನೆ ಬೇಸ್ರದಿಂದ ಅಲ್ಲಿಂದ ಹೊರಟ್ವಿ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿಯಲ್ಲಿ ಮಕ್ಕಳು ಸಿನಿಮಾ ನೋಡಿದ ಪ್ರಸಂಗ ನಿಮ್ಮ ಓದಿಗೆ
ನಮ್ಮೂರು ಚಿಕ್ಮಾಲೂರಿನಲ್ಲಿ (ಚಿಕ್ಕಮಾಲೂರು)ಗೌರ್ಮೆಂಟು ಇಸ್ಕೂಲ್ ಇತ್ತು. ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಶಾಲೆ ಎಲ್ಲಾ ಇದ್ವು. ಅಂದರೆ ಒಂದನೇ ಕ್ಲಾಸಿಂದ ಹತ್ತನೇ ಕ್ಲಾಸಿನವರೆಗೆ ಇತ್ತು. ಸುತ್ತೂರುಗಳಲ್ಲಿ ಇಸ್ಕೂಲ್ ಇರಲಿಲ್ಲ. ಕೆಂಪಾಪುರ, ವೀರಾಪುರ, ಅಕ್ಕಳಾಪುರ, ತಿಗಳರಹಳ್ಳಿ, ವೆಂಕಟಾಪುರಗಳಿಂದ ಹೈಕಳು ಇಲ್ಲಿಗೇ ಬರ್ಬೇಕಿತ್ತು. ನಮ್ಮ ಜೊತೆ ಓದುತ್ತಿದ್ದ ವಾರಗೆಯ ಹುಡುಗ್ರಾಗೆ ಎಷ್ಟೋ ಜನ ಈ ಊರುಗಳಿಂದಾನೂ ಬರ್ತಿದ್ರು.
ಈಗೀಗ ಎಲ್ಲಾ ಊರುಗಳಾಗೂ ನಾಕನೇ ಕ್ಲಾಸಿನವರೆಗೆ ಶಾಲೆ ಬಂದೈತೆ. ಆಮೇಲೆ ಇಲ್ಲಿಗೇ ಬರಬೇಕು. ಕೆಲವು ಕಡೆ ಮಾಧ್ಯಮಿಕ ತರಗತೀನೂ ಬಂದೈತೆ. ಆದರೆ ಪ್ರೌಢಶಾಲೇಗೆ ಇಲ್ಲಿಗೇ ಬರ್ಬೇಕು. ಈಗಲೂ ಊರಲ್ಲಿ ಖಾಸಗಿ ಶಾಲೆ ಭರಾಟೆ ಇಲ್ಲ. ಸರ್ಕಾರಿ ಶಾಲೇನೆ ಸರ್ವಸ್ವ. ಅದೇ ಕೈಲಾಸ.
ಮಾಧ್ಯಮಿಕ ಶಾಲೆಯಲ್ಲಿನ ಸಂಗ್ತಿಗಳಂತೂ ಬಲು ಪಸಂದಾಗಿವೆ. ಒಂದು ನಾಕೈದು ಇಸ್ಯ ಯೋಳೋಕೇ ಬೇಕು. ನಮ್ಮ ಹೆಡ್ ಮೇಷ್ಟ್ರು ಮತ್ತೆ ಕನ್ನಡ ಮೇಡಮ್ಮು ಸುನಂದಮ್ಮ ಮಾತ್ರ ಊರಲ್ಲಿದ್ದಿದ್ದು. ಗಣಿತ- ವಿಜ್ಞಾನ ತಕಂತಿದ್ದ ಜೆ.ಸಿ. ಮೇಷ್ಟ್ರು, ಹಿಂದಿಗೆ ಬರ್ತಿದ್ದ ರಮಾಮಣಿ ಮೇಡಮ್ಮೂ, ಸಮಾಜ ಮತ್ತು ಇಂಗ್ಲಿಷ್ ಹೇಳ್ಕೊಡ್ತೀನಿ ಅಂತಿದ್ದ ಸಂಜೀವರಾಯಪ್ಪ ಮೇಷ್ಟ್ರು ಮಧುಗಿರೀಲಿ ಇದ್ದರು. ಅವರೆಲ್ಲ ರಿಲಯನ್ಸ್ ಬಸ್ಸಿಗೆ ಬರ್ತಿದ್ರು. ಅದು ಹತ್ತು ಗಂಟೆಗೆ ಸರಿಯಾಗಿ ಬರ್ತಿತ್ತು. ರಿಲಯನ್ಸ್ ಬತ್ತೂ ಅಂದ್ರೆ ದಡದಡನೆ ಇಸ್ಕೂಲ್ ಬ್ಯಾಗ್ ಹುಡ್ಕಿ ತಗ್ಲಾಕ್ಕೊಂಡು ಓಡ್ತಿದ್ವಿ. ಬಸ್ಸುಗ್ಳೆ ನಮ್ಮ ಗಡಿಯಾರ.
ಒಳ್ಳೆ ಕೆಲಸ ಯಾವ್ದೂಂತ ಯೋಚ್ನೆ
ಒಂದು ಪುಟಾಣಿ ನೋಟ್ ಬುಕ್ನಾಗೆ ಅವತ್ತವತ್ತಿನಲ್ಲಿ ನಾವ್ ಮಾಡಿದ್ದ ಒಳ್ಳೆ ಕೆಲ್ಸವ ದಿನಾಲೂ ಬರೀಬೇಕಿತ್ತು. ಇಲ್ದೇ ಹೋದ್ರೆ ನಮ್ಮ ಜೆ ಸಿ ಮೇಷ್ಟ್ರು ಬಯ್ತಿದ್ರು. ಈಗ್ನಿಂದ್ಲೆ ಒಳ್ಳೆ ಮನುಸ್ಯರಾಗ್ಬೇಕು ಅಂಬೋದು ಅವ್ರ ಮಾತು. ನಮ್ಗೋ ಒಳ್ಳೆ ಕೆಲ್ಸ ಅಂದ್ರೆ ಆ ಪಟ್ಟೀ ಒಳ್ಗೆ ಯಾವ್ ಯಾವ್ ಕೆಲ್ಸ ಸೇರ್ಕಂತಾವೆ ಅಂಬೋದೆ ತಲೆನೋವು. ನಮ್ಮಮ್ಮುಂಗೆ ಹೊಸ್ಲು ಸಾರಿಸ್ಕೊಟ್ಟೆ. ಸೀನೀರು ತಕಾಬಂದೆ. ಇವೇ ದೊಡ್ಡ ಕೆಲ್ಸಗಳು. ದಿನಾ ಅದುನ್ನೇ ಬರುದ್ರೆ ಯಗ್ಗಾಮುಗ್ಗಾ ಬೈತಾರೆ. ಸರಿ ಸುಳ್ಳು ಬರ್ಯೋಕೆ ಸುರು ಹಚ್ಕೊಂಡ್ವಿ. ರಸ್ತೆನಾಗೆ ಬರ್ತಿರೋ ಭಿಕ್ಸುಕಂಗೆ ತಿನ್ನಾಕೇಂತ ಕಾಸು ಕೊಟ್ಟೆ ಅಂತ ಬರ್ಯೋದು. ಅಲ್ಲ ನಮ್ಗೇ ಕಾಸಿಲ್ದೆ ಭಿಕ್ಸುಕುರ್ ತರ ಇದ್ವೋ. ಇನ್ನ ಅವುರ್ಗೆ ಕಾಸು ಎಲ್ಲಿಂದ ತರಾಣಾ! ಅದ್ಕೂ ಬಯ್ಸಿಕೊಂಡು ಅದುನ್ನ ಬಿಟ್ವಿ. ಕುಲ್ಡುಂಗೆ ರಸ್ತೆ ದಾಟಕೆ ಸಾಯಾ ಮಾಡ್ದೆ ಅಂತ ಬರ್ಯೋದು. ಅದ್ಯಾವನು ಕುಲ್ಡ, ಎಲ್ಲಿಂದ ಬಂದ ಅಂತ ಕೇಳೋರು? ಸುರು ಮಾಡೊ ಮದ್ಲು ನಮ್ ಮೇಷ್ಟ್ರೇಯಾ ಇದ್ನೆಲ್ಲಾ ಉದಾರ್ಣೆ(ಉದಾಹರಣೆ) ಕೊಟ್ಟಿದ್ದು. ಅವ್ರು ಮಧುಗಿರಿ ಪ್ಯಾಟೇನಾಗಿದ್ರಲ್ಲ, ಅಲ್ಲಿ ಭಿಕ್ಸುಕ, ಕುಲ್ಡ ಎಲ್ಲ ಇರ್ತಿದ್ರು. ಒಳ್ಳೆ ಕೆಲ್ಸ ಅಂತ ಒಂದು ವಾಕ್ಯ ಬರ್ಯೋ ಹೊತ್ಗೆ ಸುಸ್ತು. ಆಮೇಲೆ ಮೇಷ್ಟ್ರು ಬೋದು ಬುದ್ಧಿ ಹೇಳುದ್ರು. ಸುಳ್ಳು ಬರ್ಯೋದು ತಪ್ಪು. ಅದ್ರಾಗೂ ಒಳ್ಳೆ ಕೆಲ್ಸದ ಬಗ್ಗೆ ಬರೆಯೋವಾಗ ಸುಳ್ಳು ಹೇಳೋದು ದೊಡ್ಡ ತಪ್ಪು ಅಂತ ಯೋಳಿದ್ ಮೇಲೆ ಅದ್ಕೇಂತಾದ್ರೂ ನಮ್ಮಮ್ಮಂಗೋ, ಅಪ್ಪಂಗೋ, ಸ್ನೇಹಿತ್ರುಗೋ, ಕೆಲಸ್ದೋರ್ಗೋ ಏನಾರಾ ಸಹಾಯ ಮಾಡೋ ಕೆಲ್ಸಾ ಸುರು ಮಾಡ್ಕೊಂಡ್ವಿ. ಈ ಪಟ್ಟೀನಾಗೆ ನಮ್ಮಪ್ಪಂಗೆ ಬೆನ್ನು ತುಳಿಯೋದೂ ಒಂದು ಒಳ್ಳೆ ಕೆಲ್ಸ ಅಂತ ಸೇರ್ಕೊಂತಿತ್ತು!! ಹುವ್ವ ಕಿತ್ಕಬರಾದು, ದೇವ್ರ ಪಟಕ್ಕೆ ಹಾರ ಏರ್ಸಾದು (ಪೋಣಿಸೋದು) ಎಲ್ಲಾ ನುಸೀತಿತ್ತು(ನುಸುಳುತ್ತಿತ್ತು). ಕೊನೆಕೊನೆಗೆ ಕೆಲ್ಸ ಮಾಡಾಕೆ ಪೈಪೋಟಿ ಶುರುವಾತು. ಮದ್ಲೆಲ್ಲಾ ಕೆಲ್ಸ ಕದೀತಿದ್ವಿ, ಈಗ ಹುಡೀಕ್ಕೊಂಡು ಹುಡೀಕ್ಕೊಂಡು ಮಾಡೋಂಗಾದ್ವಿ. ಹೊಸ ಕೆಲ್ಸ ಕಂಡು ಹಿಡಿಯೋದೂ ನಮ್ಮ ಅಜೆಂಡಾ ಆಗ್ತಿತ್ತು. ಇಸ್ಕೂಲ್ನಾಗಿದ್ದ ಗಾಂಧಿ ತಾತ, ಚಾಚಾ ನೆಹರು ಪಟಗಳ ಮ್ಯಾಗೆ ಧೂಳು ಕೊಡವಿ ಅದ್ನೂ ಬರೀತಿದ್ವಿ. ಕೆಲ್ಸಗಳು ನಮ್ ಕೈಯಾಗೆ ಸಿಕ್ಕಿ ನಜ್ಜುಗುಜ್ಜಾಗ್ತಿದ್ವು.
ಸ ಭಾಷೆ, ಕ ಭಾಷೆ ಇದ್ಯಾವ್ದು ಹೊಸ ಭಾಷೆಗ್ಳು ಅಂತೀರಾ? ಕನ್ನಡವೇಯಾ. ನಮ್ ಕೈಯಾಗೆ ಸಿಕ್ಕಿ ಕೈಕಾಲು ಮುರ್ಕೊಂಡಿತ್ತು. ಇಡೀ ಕ್ಲಾಸ್ನಾಗೆ ಏಸೊಂದು ಹುಡುಗೀರು ಇರ್ತಿದ್ವಿ. ಅದ್ರಾಗೆ ನಾಕೈದು ಜನ ಒನೊಂದು ಗುಂಪು. ಒಬ್ಬರಿಗೊಬ್ಬರಿಗೆ ಗೊತ್ತಾಗ್ದಂಗೆ ವಿಸ್ಯ ಮುಟ್ಟಿಸಾಕೆ ಸ ಭಾಷೆ ಮೊದ್ಲು ಕಂಡು ಹಿಡಿದ್ವಿ. ಎಲ್ಲಾ ಪದಗೋಳ್ಗೂ ಮದ್ಲನೆ ಅಕ್ಸರ ಸ ಅಂತ ಸೇರಿಸೋದು. ಬಾರಿಸು ಅನ್ನಾಕೆ ಸಾರಿಸು, ಮಾತಾಡು ಅನ್ನಾಕೆ ಸಾತಾಡು ಅಂತ. ಇದು ಸಲೀಸಾಗಿತ್ತಲ್ಲ, ಎಲ್ರೂ ಕಲ್ತು ಬಿಟ್ರು. ಆಮ್ಯಾಕೆ ವಸಿ ತಲೆ ಉಪ್ಯೋಗ್ಸಿ (ಇತ್ತೂಂತ ಅನ್ ಕೊಂಡಿದ್ವಿ!) ಕ ಭಾಷೆ ಕಂಡು ಹಿಡಿದ್ವಿ. ತಕಳಿ ಇದು ಬೋ ಕಷ್ಟ ಇತ್ತು. ಒನ್ನೊಂದು ಅಕ್ಸರಕ್ಕೂ ಮೊದ್ಲು ಕ ಸೇರುಸ್ಬೇಕು. ಕಮಲಿ ಕಮಂಗಿ ತರ ಆಡ್ತಾಳೆ ಅಂತ ಹೇಳ್ಬೇಕು ಅಂದ್ರೆ ಕಕಕಮಕಲಿ ಕಕಕಮಂಕಗಿ ಕತಕರ ಕಆಕಡ್ತಾಕಳೆ. ಈಸೂದ್ದ ಯೋಳೋ ಅಷ್ಟರಾಗೆ ಎದ್ರುಗೆ ಕುಂತೋರು ಕಮಂಗಿಗಳಂಗೇ ಮಿಕಮಿಕ ನೋಡ್ತಿದ್ರು. ನಮ್ಗೋ ಬಲ್ ಖುಸಿ. ಅಮ್ಯಾಗೆ ಅವ್ರೂ ಕಲಿತ್ರು. ಅಷ್ಟರಲ್ಲಿ ನಾವೂ ಸ್ಯಾನೆ ಬೇಗ್ ಬೇಗ ಮಾತಾಡಾಕ್ ಕಲಿತ್ವಿ. ಆಮ್ಯಾಲೆ ದೊಡ್ಡ ಜಗ್ಳ, ಜಟಾಪಟಿ ಸುರುವಾಗಿ ಮೇಷ್ಟ್ರು ಕಿವೀಗ್ ಬಿದ್ದು, ಬಂದ್ ಮಾಡ್ಸುದ್ರು. ಕಲ್ತಿದ್ ಬಿಡೆ ಕಳ್ಮುಂಡೆ ಅಂದ್ರೆ ನಡುನೀರಾಗ್ ಬಿಟ್ಟು ಮಣ್ಣು ಹೊಯ್ಕೊಂಬ್ಲೆ ಅಂದಂಗೆ ಅಷ್ಟು ಕಷ್ಟ ಬಿದ್ದು ಕಲ್ತಿದ್ನ ಅಷ್ಟು ನಿಸೂರಾಗಿ ಬಿಡಾಕಾಯ್ತದೆ? ಆಮ್ಯಾಲೆ ಆಟಾಡಾಕೆ ಹೋದಾಗ ಅಲ್ಲಿನ್ ಗುಂಪುಗಳಾಗೆ ರಹಸ್ಯ ದಾಟ್ಸೋಕೆ ಬಳ್ಸಾಕೆ ಸುರು ಮಾಡಿದ್ವಿ.
ಮನೆಪಾಠವೂ ಹರಟೆಕಟ್ಟೆಯೂ
ನಾಕ್ನೇ ಕ್ಲಾಸಿನ್ ವರೆಗೆ ಎಂಗೋ ಚೆಂದಾಗಿತ್ತು. ಐದುಕ್ಕೆ ಇಂಗ್ಲೀಸ್ ಬಂತು. ಆರುಕ್ಕೆ ಹಿಂದಿ ಬತ್ತು. ಎಲ್ಡೂ ತಲ್ಯಾಗೆ ಕುಂತ್ಕಳ್ದೆ, ಹುಳಾ ಬಿಟ್ವು. ನಮ್ ಸಂಜೀವರಾಯಪ್ಪ ಮೇಷ್ಟ್ರು ಇಂಗ್ಲೀಸ್ ತಕಂತೀನಿ ಅಂತ ಬುರುಡೆ ಬಿಡ್ತಿದ್ರು. ಯೋನೂ ಕಲಿಸ್ಲಿಲ್ಲ. ಎಬಿಸಿಡಿ ಒಂದು ಬರ್ತಿತ್ತು. ನೇಮ್ ಅಂದ್ರೆ ಹೆಸ್ರು ಅಂತ ಗೊತ್ತಿತ್ತು. ಹತ್ತೋ ಹನ್ನೆಲ್ಡೋ ಪದುಗುಳ್ನ ಕಲಿಸಿದ್ದರು. ನಾವೂ ಮಕ್ಕಿಕಾಮಕ್ಕಿ. ಮೇಷ್ಟ್ರು ಬೋಲ್ಡ್ ಮ್ಯಾಗೆ ಬರ್ದಿದ್ದುನ್ನ ಅಂಗೇ ಬಟ್ಟಿ ಇಳ್ಸಾದು. ಉರು ಹೊಡ್ಯಾದು. ಹಿಂದಿನೂ ತಲೇಗೆ ಇಳೀತಿರ್ಲಿಲ್ಲ. ಜೆ ಸಿ ಮೇಷ್ಟ್ರು ಮಾತ್ರ ಗಣಿತ ವಿಜ್ಞಾನ ಚೆಂದಾಗಿ ಎದೆಯೊಳೀಕ್ಕೆ ಇಳ್ಸಿದ್ರು. ಕನ್ನಡ ರಸಬಾಳೆ. ಸಮಾಜ ನಾನೇ ಓದ್ಕಂತಿದ್ದೆ. ಏಳ್ನೇ ಕ್ಲಾಸ್ನಾಗೆ ಹೆಡ್ ಮೇಷ್ಟ್ರು ಇಂಗ್ಲೀಷ್ ತಕಂತಿದ್ರು. ಅವ್ರ ತಲೆಮ್ಯಾಗೆ ಇಸ್ಕೂಲೇ ಕುಂತಿತ್ತಲ್ಲ, ಬ್ಯಾರೆ ಕೆಲ್ಸದಾಗೆ ಕ್ಲಾಸಿಗ್ ಬರಾಕೆ ಟೇಮಿರ್ಲಿಲ್ಲ. ಅಂಗಾಗಿ ಐನಾತೀದು ಈ ಎಲ್ಡೂ ಭಾಷೆಗ್ಳು ಕೈಕೊಟ್ವು. ಅದು ಏನಾರಾ ಹಾಳಾಗೋಗ್ಲಿ ಈ ಮನೆಪಾಠ ಅಂದ್ರೆ ನಂಗೆ ಕೋಪ. ಆಡೋಕೆ ಸಮ್ಯ ಸಾಲಲ್ವಲ್ಲ ಅಂತ. ನಮ್ ಹೆಡ್ ಮೇಷ್ಟ್ರು ಸುಬ್ಬಣ್ಣ ಮೇಷ್ಟ್ರು ಮನೆಪಾಠುಕ್ಕೆ ಬರ್ಲೇ ಬೇಕೂಂತ ಬಲವಂತ ಮಾಡೋರು. ಅವ್ರು ಮಾತ್ರ ಮನ್ಯಾಗೆ ಇರ್ತಿರ್ಲಿಲ್ಲ. ನಾನು ಅವ್ರ ಮಕ್ಕಳ ಜೊತೆ ಮಾತುಕತೆ ಮುಗುಸ್ಕೊಂಡು ಬರೋದು. ಒಂದಕ್ಷರ ಕಲೀಲಿಲ್ಲ. ನಮ್ಮಪ್ಪ ದವ್ಸ ಧಾನ್ಯ ಕಾಯಿ ಸಮಸ್ತವೂ ಕಳುಸ್ತಿದ್ರು. ಅದ್ಕೇ ನಾನು ಹೋಗ್ಬೇಕಿತ್ತು. ಕೊನೀಗೆ ಏಳ್ನೆ ಕ್ಲಾಸ್ನಾಗೆ ನಾನು ಹೋಗಲ್ಲ ಅಂತ ಹಠ ಹಿಡ್ದೆ. ಹೈಸ್ಕೂಲ್ ಗೆ ಇಂಗ್ಲಿಷ್ ಹೇಳ್ಕೊಡಾಕೆ ಲಕ್ಷ್ಮೀನಾರಾಯಣ ಮೇಷ್ಟ್ರು ಇದ್ರು. ನಮಪ್ಪ ಅವ್ರ ಮನೆಗೆ ಕಳಿಸಿದ್ರು. ಅವ್ರ ಮಗ ದ್ವಾರಕಿ ಕ್ಲಾಸ್ನಾಗೆ ನನ್ನ ಎದುರಾಳಿ. ಸ್ಯಾನೆ ಪೈಪೋಟಿ ಇರ್ತಿತ್ತು. ಒಂದ್ ಕಿತ ನಾನು, ಒಂದು ಕಿತ ಅವ್ನು ಗೆಲ್ತಿದ್ವಿ. ನಾನು ಅವ್ರ ಮನೆಗೆ ಹೋಗಾಕೆ ಸುರು ಮಾಡಿದ್ ಮೇಲೆ ಸುಬ್ಬಣ್ಣ ಮೇಷ್ಟ್ರು ಮಗ ರಾಘೂನೂ ಬಂದ! ಗೌಡ್ರ ಮಗ ಪ್ರಸನ್ನ, ಕರಿಯಣ್ಣನ ಸಣ್ಣಮಗ( ಹೆಸ್ರು ನೆಪ್ಪಾಗ್ತಿಲ್ಲ) ಎಲ್ರೂ ಬಂದ್ರು. ಶಾಲೇಲಿ ಹೆಣ್ಣುಮಕ್ಕಳು ಗಂಡು ಹುಡುಗ್ರೀಗೆ ಹೆಸರಿನ್ ಜೊತೇಗೆ ಅಪ್ಪ ಅನ್ನೋದು. ಅವ್ರೂ ನಮ್ಮುನ್ನ ಅಮ್ಮ ಅನ್ನೋದು. ಪ್ರಸನ್ನಪ್ಪ, ರಾಘಪ್ಪ, ಸುಮಮ್ಮ, ಕಮಲಮ್ಮ ಹಿಂಗೆ. ಜಾಸ್ತಿ ಮಾತುಕತೆ ಇರ್ಲಿಲ್ಲ. ದೂರ್ದೂರಾನೆ ಇರ್ತಿದ್ವಿ. ಇಲ್ಲೀಗ್ ಬಂದ್ ಮೇಲೆ ಎಲ್ರೂ ಮಧ್ಯೆ ಒಳ್ಳೆ ಸ್ನೇಹ ಸುರುವಾತು. ಮೇಷ್ಟ್ರು ಪಾಠ ಮಾಡಿ ಒಂದಷ್ಟು ಮನೆಕೆಲ್ಸ ಕೊಟ್ಟು ಹೋದ್ರೆ ನಮ್ಮ ಹರಟೆ ಸುರುವಾಗ್ತಿತ್ತು.
ಏಳ್ನೇ ಕ್ಲಾಸ್ನಾಗೆ ಚಿಕ್ಕಪರೀಕ್ಷೇ ಮುಗೀತು. ನಮ್ ಸಂಜೀವರಾಯಪ್ಪ ಮೇಷ್ಟ್ರು ನಾವ್ ಬರೆದಿದ್ದ ಉತ್ತರ ಓದ್ತಾನೆ ಇರ್ಲಿಲ್ಲ. ಉತ್ತರ ಏಸುದ್ದ ಇದೆ ಅಂತ ನೋಡ್ಕಂಡು ನಂಬ್ರು ಕೊಡ್ತಿದ್ರು. ಪ್ರಸನ್ನ ಸೊಲ್ಪ ತೀಟೆ ಹುಡುಗ. ಯಾವಾಗ್ಲೂ ನಗ್ಸಾರ ಮಾಡ್ತಿದ್ದ. ಸಮಾಜಶಾಸ್ತ್ರ ಪರೀಕ್ಷೇಲಿ ಮೂರು ನಂಬರ್ ಪ್ರಶ್ನೇಗೆ ಪೂರ್ತಿ ಉತ್ತರ ಗೊತ್ತಿಲ್ದೆ ಸಿನಿಮಾ ಹಾಡು ಬರ್ದಿದ್ದ. ಅದುನ್ನ ನಮ್ಮತ್ರ ಹೇಳ್ಕೊಂಡಿದ್ದ. ನಾವೂ ನಕ್ಕೂ ನಕ್ಕೂ ಸುಸ್ತಾದ್ವಿ. ಯಾರೇ ಕೂಗಾಡಲಿ ಊರೇ ಹೋರಾಡಲಿ ಅಂತ ಸಂಪತ್ತಿಗೆ ಸವಾಲ್ ಚಿತ್ರದ ನಾಕು ಸಾಲು ಬರ್ದು, ಬಬ್ರುವಾಹನ ಚಿತ್ರದ್ದು ಯಾರು ತಿಳಿಯರು ನಿನ್ನ ಭುಜಬಲದ ಪರಾಕ್ರಮ ನಾಕು ಸಾಲು ಬರ್ದಿದ್ದ.
ಇಲ್ಲಿ ತಮಾಸಿ ಏನಾಯ್ತಪ್ಪ ಅಂದ್ರೆ ಆ ಮೇಷ್ಟ್ರು ಸ್ವಲ್ಪ ಸೋಂಬೇರಿ. ನಂಬರ್ ಕೊಟ್ಟ ಮ್ಯಾಕೆ ಎಣಿಸಾ ತಾಪತ್ರಯ ಬೇಸ್ರ ಅಂತ ಕೂಡ್ಸಿಕೊಡು ಅಂತ ನನ್ ಕರೀತಿದ್ರು. ಬ್ಯಾರೆ ಮೇಷ್ಟ್ರು ಮೇಡಮ್ಮುಗಳು, “ಯಜ್ಮಾನ ತನ್ನ ನಾಯೀಗ್ ಯೋಳೀರೆ ನಾಯಿ ತನ್ನ ಬಾಲುಕ್ಕೆ ಯೋಳ್ತಂತೆ ಅನ್ನಂಗೆ ಅಸಿಸ್ಟೆಂಟು ಬ್ಯಾರೆ’ ಅಂತ ಆಡ್ಕೊಣೋರು. ನಾನೂ ನೋಡ್ತೀನಿ ಪ್ರಸನ್ನನ್ ಪೇಪ್ರೂ ಬಂತು. ಸುಮ್ಕೆ ನಂಬ್ರು ಕೊಟ್ಟು ನನ್ ಕೈಯಾಗಿಟ್ರು. ನಂಗೆ ಗೊತ್ತಿತ್ತಲ್ಲ, ಹುಡುಕ್ಯಾಡಿ ಕಂಡುಹಿಡ್ದು ‘ಸಾ, ಏನ್ಸಾ ನೀವು ಇದ್ಕೂ ಎರ್ಡು ನಂಬರ್ ಕೊಟ್ಟಿದೀರಾ’ ಅಂತ ತೋರ್ಸಿದ್ರೆ, ನಗಾಡಿ, ಒಳ್ಳೆ ಹಾಡು ಬಿಡಮ್ಮ ಅನ್ನೋದೆ. ನಂಬ್ರೂ ತೆಗೀಲಿಲ್ಲ. ಪಕ್ಕದಾಗಿದ್ದ ಎಲ್ರೂ ನನ್ ತಾವ ಪೇಪ್ರು ಈಸ್ಕೊಂಡು ಓದಿ ಓದಿ ನಗಾಡಿದ್ರು.
ಶಾರದಾ ಪೂಜೆ
ಪ್ರತಿ ಶುಕ್ರವಾರ ಸಾಯಂಕಾಲ ಶಾರದಾ ಪೂಜೆ ಮಾಡ್ತಿದ್ರು. ಹಾಡು ಹೇಳಿಸ್ತಿದ್ರು, ಭಜನೆ ಮಾಡ್ತಿದ್ವಿ. ತೌಡು ಬಿಸ್ಕತ್ತು, ಪೆಪ್ಪರ್ಮೆಂಟು, ಸೀ ಕಡಲೆಹಿಟ್ಟು(ಪಪ್ಪಿಂಡಿ) ಏನಾದ್ರೂ ಕೊಡ್ತಿದ್ರು. ಏಳ್ನೇ ಕ್ಲಾಸ್ನಾಗೆ ಪಬ್ಲಿಕ್ ಪರೀಕ್ಷೆ ಅಂತ ಕೊನೇನಲ್ಲಿ ಜೋರಾಗಿ ಪೂಜೆ ಇಟ್ಕಂತಿದ್ರು. ಅದೇ ನಮ್ಮ ವಿದಾಯದ ಕಾರ್ಯಕ್ರಮವೂ ಆಗ್ತಿತ್ತು. ನಾಟಕ ಅದೂ ಇದೂ ಇರ್ತಿತ್ತು. ಐದು ಆರನೇ ಕ್ಲಾಸಿನವರೂ ಕೂಡಿ ಶಾರದಾ ದೇವಿಗೆ ಅಲಂಕಾರ ಮಾಡ್ತಿದ್ವಿ. ಅದಿಕ್ಕೆಲ್ಲಾ ಬೇಜಾನ್ ಹುವ್ವ ಬೇಕಾಗ್ತಿತ್ತು. ಒಂದ್ಸತಿ ನಾವು ಐದಾರು ಹುಡುಗೀರು ಬಲ್ ವಿಶೇಷವಾಗಿ ಅಲಂಕಾರ ಮಾಡ್ತೀವಿ, ತರಾವರಿ ಹುವ್ವ ಕಿತ್ಕೊಂಬರ್ತೀವಿ ಅಂತ ಮೇಷ್ಟ್ರುಗೆ ಯೋಳಿ ಬೆಳಗ್ಗೇನೆ ಸ್ಕೂಲ್ ಬಿಟ್ಟು ಹುವ್ವ ಹುಡೀಕ್ಕೊಂಡು ದಂಡಯಾತ್ರೆ ಹೊಂಟ್ವಿ. ಕಮಲಿ ಇದ್ದೋಳು ನಮ್ಮೂರ್ಗೋಗೋಣ ನಮ್ ತೋಟದಾಗೂ ಐತೆ ಅಂದ್ಲು. ನಮ್ ತೋಟ ಇಸ್ಕೂಲ್ ಹಿಂಭಾಗದಾಗೆ ಇತ್ತು. ಅದಿಕ್ಕೆ ಅಲ್ಲಿ ತರಾವರಿ ಹುವ್ವ ಇದ್ರೂ ಸುತ ಯಾರಿಗೂ ಬೇಕಿರ್ಲಿಲ್ಲ. ಒಂದು ಬಸ್ಸು ಹತ್ಕೊಂಡು ಪಕ್ಕದಾಗಿರೋ ವೆಂಕಟಾಪುರಕ್ಕೋದ್ವಿ. ಅವರ ಅಮ್ಮ ಪಾಪ ಮಕ್ಕಳು ಬಿಸಿಲಾಗೆ ಬಂದವೆ ಅಂತ ಬೇಲದಣ್ಣಿನ ಪಾನಕ ಕೊಟ್ರು. ತೋಟಕ್ಕೋಗಿ ಚಿಂತಾಮಣಿ, ಚೆಂಡೂವ, ಸ್ಯಾವಂತಿಗೆ, ಕನಕಾಂಬರ ಕಿತ್ತಿದ್ದಾಯ್ತು. ಕಿತ್ತಿದ್ದು ಅವರಮ್ಮ ಮತ್ತೆ ಯಾರ್ಯಾರೋ. ನಾವು ಅವರ ತೋಟದ ಮಗ್ಗುಲಲ್ಲಿ ಅಡ್ಡಾಡ್ಕೊಂಡು ಕಾರೆ ಹಣ್ಣು, ತೊಂಡೆಹಣ್ಣು, ನಾಯಿ ನೇರಳೆ ಕೀಳೋದ್ರಾಗೆ ಟೇಮಾಯ್ತು. ಸುಜಾತ ಅವರ ಮನೇಗೆ ಕರ್ಕೊಂಡು ಹೋದ್ಲು. ಅಲ್ಲಿ ಮಜ್ಜಿಗೆ ಸಮಾರಾಧ್ನೆ ಆಯ್ತು. ತಂಬಿಟ್ಟು ಕೊಟ್ರು. ಅವರಮ್ಮ ಏಳು ಸುತ್ತಿನ್ ಕಣಗಿಲೆ, ಶಂಕೂವ ಕೀಳೋ ಹೊತ್ಗೆ ಚೇಪೇಕಾಯಿ, ಕಾಶಿಹಣ್ಣು ಕಿತ್ತು ಚೀಲ ತುಂಬಿದ್ದಾಯ್ತು. ಅಂಗೂ ಇಂಗೂ ಮಧ್ಯಾನ ಆಯ್ತು. ಕಮಲಿ ಮನೇಲಿ ಊಟುಕ್ಕಿಕ್ಕಿದ್ರು. ಉಂಡು ಬಸ್ ಹತ್ಕೊಂಡು ವಾಪ್ಸು ಬಂದ್ವಿ. ಅಲ್ಲೀವರ್ಗೂ ಬೇರೆ ಹುಡುಗೀರು ಪಾಠ ಕೇಳ್ಕೊಂಡು ಕುಂತಿದ್ರು. ಟೇಮಾತು ಎಲ್ಲ ತಯಾರು ಮಾಡ್ಕೊಳಿ ಅಂತ ಮೇಷ್ಟ್ರು ಪಾಠ ಬಿಟ್ರು. ನಾವು ಬೇರೆ ಹುಡುಗೀರ್ಗೆ ಜೋರ್ ಮಾಡಿದ್ವಿ. ಬೆಳಗ್ನಿಂದ ಊರು ಅಲ್ಕೊಂಡು ಸುಸ್ತಾಗಿದ್ದೀವಿ. ನೀವು ಕುಂತು ಹುವ್ವ ಕಟ್ರಿ. ನಾವು ಅಲಂಕಾರ ಮಾಡಾಕೆ ಬರ್ತೀವಿ ಅಂತೇಳಿ ಮೆತ್ತಗೆ ಜಾಗ ಖಾಲಿ ಮಾಡಿದ್ವಿ. ಒಂದು ಮೂಲೇಲಿ ಕುಂತು ತಂದಿರೋ ಹಣ್ಣು- ಕಾಯಿ ಹಂಚ್ಕಂಡು ಸದ್ದಿಲ್ದಂಗೆ ತಿಂದಿದ್ದು ಯಾರ್ಗೂ ಗೊತ್ತೇ ಆಗ್ಲಿಲ್ಲ. ಅವತ್ತು ಅಲಂಕಾರ ಸ್ಯಾನೆ ಚೆಂದಾಗಿತ್ತು, ಪಾಪ ಈ ಹುಡುಗೀರು ಎಷ್ಟು ಕಷ್ಟ ಪಟ್ರು ಅಂತ ಎಲ್ರೂ ಹೊಗಳಿದ್ದೇ ಹೊಗಳಿದ್ದು. ನಾವು ಮಖ ಮಖ ನೋಡ್ಕೊಂಡು, ಮರೇಲಿ ಮುಸಿ ಮುಸಿ ನಕ್ಕಿದ್ದು ಮೊನ್ನೆ ನಡೆದಂಗೈತೆ.
ಜೆ ಸಿ ಮೇಷ್ಟ್ರು
ಜೆ ಸಿ ಮೇಷ್ಟ್ರು ಅಂದ್ರೆ ನಮಗೆಲ್ಲ ದೇವ್ರಿದ್ದಂಗೆ. ಇಸ್ಕೂಲ್ ಪಾಠ ಹೇಳೋದ್ರಾಗೂ ಸೈ. ಬದುಕಿನ್ ಪಾಠ ಕಲ್ಸೋದ್ರಾಗೂ ಸೈ. ವಿಜ್ಞಾನ ಪಾಠ ಮಾಡಾವಾಗ ಪ್ರಯೋಗ ಮಾಡಿ ತೋರುಸ್ತಿದ್ರು. ಬದುಕಿನಾಗೆ ಒಂದು ಗುರಿ ಅಂತ ಬಂದಿದ್ದು ಅವ್ರಿಂದ್ಲೇ. ನನ್ನ ನೋಡಿದ್ರೆ ಅವ್ರು ತುಂಬಾ ಆಸೆ ಮಾಡ್ತಿದ್ರು. ಪಾಪ ಸಾಧು ಹುಡುಗಿ!! ಅಪ್ಪ ದೊಡ್ಡ ಮನುಷ್ಯರು ಅಂತ ಚೂರೂ ದೊಡ್ಡಸ್ತಿಕೆ ಮಾಡಲ್ಲ. ವಿನಯವಂತೆ ಅಂತ ನಂಬಿದ್ರು. ನನ್ನ ಖೊಖೊ ತಂಡಕ್ಕೆ ನಾಯಕಿ ಮಾಡಿದ್ರು. ಒಂದ್ಸಲ ನನ್ನ ನೋಟ್ ಬುಕ್ ಕಳ್ದೋಗಿದ್ದುಕ್ಕೆ ಎಲ್ರುನ್ನೂ ತರಗತೀಯಿಂದ ಆಚೆ ನಿಲ್ಸಿದ್ರು. ಆಗ ಈ ಪ್ರಸನ್ನ ಇದ್ದೋನು ‘ನಂಗೆ ಗೊತ್ತಿರೋರು ಮಂತ್ರ ಹಾಕೋರು ಒಬ್ರವ್ರೆ, ಕದ್ದವ್ರು ಸುಮ್ಕೆ ತಂದ್ಕೊಟ್ರೆ ಸೈ. ಇಲ್ಲದಿದ್ರೆ ಎಲ್ಲಾರ್ ಮುಂದ್ಲು ಅವ್ಮಾನ ಆಗ್ತೈತೆ’ ಅಂತ ಹೆದುರ್ಸಿದ್ದ. ಪಾಪ ಕದ್ದೋರು ಹೆದ್ರಿ ಮಾರ್ನೇ ದಿನ ಕ್ಲಾಸ್ ರೂಮ್ನಾಗೆ ಬಿಸಾಕಿದ್ರು.
ಆವಾಗ ಒಂದು ಲೆಡ್ ಪೆನ್ನು ಹೊಸ್ದಾಗಿ ಬಂದಿತ್ತು. ಒಂದೇ ಪೆನ್ನಾಗೆ ನಾಕು ಬಣ್ಣ. ಹಸ್ರು, ಕೆಂಪು, ಕಪ್ಪು, ನೀಲಿ. ಮೇಷ್ಟ್ರು ತಾವ ಇತ್ತು. ನಮ್ಗೋ ನೋಡೋಕೆ ಖುಷಿ. ನಂಗೂ ಒಂದು ಪೆನ್ ತಂದುಕೊಟ್ಟಿದ್ರು. ಅದ್ರಾಗೆ ಬರೆಯೋದುಕ್ಕೆ ಎಷ್ಟು ಖುಷಿ. ಅದುಕ್ಕಿಂತ ಜಾಸ್ತಿ ಎಲ್ರುಗೂ ಅದುನ್ನ ತೋರ್ಸೋದ್ರಾಗೆ. ಅದು ಕೈಯಾಗಿದ್ರೆ ತಲೆ ಕುತ್ತಿಗೇ ಮ್ಯಾಲೇ ನಿಲ್ಲದೇ ಇರೋಷ್ಟು ಜಂಭ ಬೇರೆ.
ದೇವ್ರ ಸಿನಿಮಾ ನೋಡಿದ್ದು
ಇದಂತೂ ಮರೆಯೋಕೆ ಆಗಲ್ಲ. ಆಗ ನಮ್ಗೆ ಸಿನಿಮಾ ಅಪರೂಪದ್ದು. ಹೋಬಳಿ ಕೇಂದ್ರ ಕೊಡಿಗೇನಹಳ್ಳೀಲಿ ಟೆಂಟ್ ಇತ್ತು. ತಾಲೂಕು ಕೇಂದ್ರ ಮಧುಗಿರೀಲಿ ಥೇಟರ್ ಇತ್ತು. ರವಿಚಂದ್ರನ್ ಅವರ ಪ್ರೇಮಲೋಕ ಸಿನಿಮಾ ಬಂದಿತ್ತು. ಸಿನಿ ಲೋಕಕ್ಕೇ ಹೊಸ ವ್ಯಾಕರಣ ಕೊಟ್ಟಂತಹ ಸಿನಿಮಾ ಅದು. ಅದ್ರ ಬಗ್ಗೆ ಎಲ್ಲೆಲ್ಲೂ ಮಾತು. ನಮ್ಗೆ ಅದೆಲ್ಲ ಗೊತ್ತಿರ್ಲಿಲ್ಲ. ಇನ್ನೂ ಸಣ್ಣುಡುಗ್ರು. ನಮ್ ಮೇಷ್ಟ್ರು ಮೇಡಮ್ಮುಗಳು ಕುಂತು ಇದರ ಬಗ್ಗೆ ಮಾತಾಡ್ತಿದ್ರೆ ನಾವು ಕಣ್ಣೂ ಬಾಯಿ ಬಿಟ್ಕೊಂಡು ಕೇಳ್ತಿದ್ವಿ. ಅದೆಂತ ಸಿನಿಮಾ ಇರ್ಬೋದಪ್ಪ ಅಂತ ಸೋಜಿಗ ಅನ್ಸಿತ್ತು. ನೀವೆಲ್ಲ ನೋಡಲೇಬೇಕು ಅಂತ ಅವ್ರೂ ಹೇಳೇ ಹೇಳೀರು. ನಮ್ ಮನ್ಯಾಗೂ ಕೇಳ್ ನೋಡ್ದೆ. ಅಪ್ಪ ಅಮ್ಮ ಅಂತ ಆಸೆ ತೋರ್ಲಿಲ್ಲ. ಗೆಳತೀರ್ ಮನ್ಯಾಗೂ ಅಷ್ಟೆ. ಸುಮ್ಕಾದ್ವಿ. ಒಂದಿನ ಮೇಷ್ಟ್ರು ಹೇಳಿದ್ರು. ಇವತ್ತೇ ಕೊನೆದಿನ. ನಾಳೆಯಿಂದ ಬ್ಯಾರೆ ಸಿನ್ಮಾ ಬರುತ್ತೆ. ನಾನು ಹೇಳ್ದೆ ಅಂತ ಮನೇಲಿ ಹೇಳಿ ನೀವೆಲ್ಲ ಹೋಗಿ ಅಂತ, ಇಸ್ಕೂಲ್ ಬಿಟ್ಟು ಸಿನ್ಮಾ ನೋಡಾಕೆ ಕಳ್ಸಿದ್ರು. ಅದುವರ್ಗೆ ನಾವ್ಯಾರೂ ನಾವ್ ನಾವೇ ಸಿನಿಮಾಗೆ ಹೋಗಿರ್ಲಿಲ್ಲ. ಮೇಷ್ಟ್ರು ಹೇಳೌರೆ ನಾವು ಹೋಗ್ಲೇಬೇಕೂಂತ ಹೇಳಿ, ಕಾಸು ಈಸ್ಕೊಂಡು ಬಸ್ಸ್ಟಾಂಡಿಗೆ ಓಡಿ, ಬಸ್ಸು ಹತ್ತಿ ಅಂತೂ ಮಧುಗಿರಿ ತಲುಪಿದ್ ಮ್ಯಾಲೇನೆ ಉಸಿರು ಬಿಟ್ಟಿದ್ದು. ಸಿನಿಮಾ ಶುರು ಆಗಾಕೆ ಇನ್ನೂ ಟೇಮಿತ್ತು. ಮೊದಲು ರವಿ ಟಾಕೀಸ್ ಗೆ ಹೋಗಿದ್ದು. ಅಲ್ಲಿ ಪ್ರೇಮ ಲೋಕ ಸಿನಿಮಾದ್ದು ದೊಡ್ಡ ದೊಡ್ಡ ಪಟಗಳ್ನ ಹಾಕೌರೆ. ನಾವು ಅದುನ್ನು ನೋಡಿದ್ದೆ, ಮಕ ಮಕ ನೋಡ್ಕೊಂಡು ಗಾಬ್ರಿ ಬಿದ್ವಿ. ಅಲ್ಲಾ ನಮ್ ಮೇಷ್ಟ್ರು ಹೇಳಿರೋ ಸಿನ್ಮಾ ಇದೇನಾ ಅಂತ ಕಣ್ಣು ತಿಕ್ಕೊಂಡು ಇನ್ನೊಂದು ದಪ ನೋಡಿದ್ರೂ ಆ ಪಟಗ್ಳು ವಸೀನೂ ಬದಲಾಗ್ಲೇ ಇಲ್ಲ. ‘ಅಯ್ ಇದೇನಮ್ಮಿ ನಮ್ಮೇಷ್ಟ್ರು ಕುಲಗೆಟ್ಟೋಗವ್ರೆ. ಅಲ್ಲಾ ವಾಗಿ ವಾಗಿ ಇಂತ ಸಿನಿಮ್ವೇ ನಮ್ಮಂತ ಸಣ್ಣೈಕ್ಳುಗೆ ನೋಡಾಕ್ ಯೇಳಾದು. ತಗ್ ತಗಿ ಯಾರಾದ್ರೂ ಮರ್ವಾದಸ್ಥರು ನೋಡೋ ಸಿನಿಮ್ವೇ ಇದು. ಮದ್ಲು ಇಲ್ಲಿಂದ ದೂರ ಹೋಗ್ದಿದ್ರೆ ಗುರ್ತಿರಾರು ಯಾರಾನಾ ನೋಡಿ ತಪ್ಪು ತಿಳ್ಕೊಂಡಾರು’ ಅಂತ ಮಕ ತಿರುಗುಸ್ಕೊಂಡು ಸ್ಯಾನೆ ಬೇಸ್ರದಿಂದ ಅಲ್ಲಿಂದ ಹೊರಟ್ವಿ. ಮೊದುಲ್ನೇ ಕಿತ ನಾವ್ ನಾವೇ ಮನೇಲಿ ಗಲಾಟೆ ಮಾಡ್ಕೊಂಡು ಬಂದೀವಿ. ಸ್ವಲ್ಪ ದೂರದಲ್ಲಿ ಶಂಕರ ಥೇಟರ್ ಇತ್ತು. ಅಂಗೇ ಅಲ್ಲೂ ಒಂದ್ ಸತಿ ಕಣ್ಣಾಕಾನ ಅಂದು ಹೋದ್ವಾ? ನೋಡೀರೇ ದ್ಯಾವ್ರು ಸಿನ್ಮಾ. ಬೆಳ್ಳಿನಾಗ ಅಂತ ಮಕ್ಕಳ್ ಸಿನ್ಮಾ ಅದು. ಸುತ್ತೂರ ನಾಗಪ್ಪುಂದು ದೊಡ್ಡ ದೊಡ್ಡ ಪಟ ಹಾಕಿದ್ರಾ, ಭಕ್ತಿ ಅಂಬೋದು ಅಂಗೇ ಉಕ್ಕೋಗಿ ಕೈಮುಗಿದ್ವಿ. ಅಡ್ಡ ಬೀಳಾದು ಚೆಂದಾಕಿರಲ್ಲ ಅಂತ ಸುಮ್ಕಾದ್ವಿ. ಮೊದ್ಲು ಓಡೋಗಿ ಸರ್ತೀಲಿ ನಿಂತು ಟಿಕೀಟ್ ತಕಂಡು ಒಳೀಕ್ ಹೋಗಿ ಸಿನಿಮಾ ನೋಡಿ ಪಾವನ ಆದ್ವಿ. ಒಳ್ಳೆ ಸಿನ್ಮಾ ನೋಡಿದ್ ಖುಷೀಲಿ ಮನೇಗೆ ಬಂದು ಅಮ್ಮುಂಗೆ ಕತೆ ಯೋಳಿದ್ದೂ ಯೋಳಿದ್ದೆ.
ಮಾರ್ನೇ ದಿನ ಇಸ್ಕೂಲ್ಗೋದ್ವಾ. ಮೇಷ್ಟ್ರು ಕೇಳಿದ್ರು, ಸಿನಿಮಾ ನೋಡಿದ್ರಾ? ನಾನು ಅಡ್ಡಡ್ಡ ಉದ್ದುದ್ದ ತಲೆ ಆಡುಸ್ದೆ. ಅವುರ್ಗೆ ಅರ್ಥ ಆಗ್ಲಿಲ್ಲ. ಹೆಂಗಿತ್ತು ಅಂತ ಕೇಳಿದ್ರು. ನಾನೂ ಧೈರ್ಯ ಮಾಡಿ ಯೋಳೇಬಿಟ್ಟೆ. ‘ಯಾಕೋ ಅದುರ್ ಪಟ ನೋಡೀರೇ ಮಕ್ಕುಳ್ ನೋಡೋ ಸಿನ್ಮಾ ಅನ್ನುಸ್ಲಿಲ್ಲ ಸಾ. ಅದಿಕ್ಕೇ ದೇವುರ್ ಸಿನ್ಮಾ ಅಂತ ಬೆಳ್ಳಿನಾಗ ನೋಡಿದ್ವಿ. ಬೋ ಚೆಂದಾಕಿತ್ತು’ ಅಂತ ಒಂದೇ ಉಸಿರ್ನಾಗೆ ಯೋಳಿ ಬೈಗಿಯ್ತಾರೇನೋ ಅಂತ ನೋಡ್ದೆ. ಒಂದು ನಿಮಿಷ ಯೋನೂ ಯೋಳ್ಲಿಲ್ಲ. ಆಮೇಲೆ ಅಂಗೇ ನಗಾಡಿ, ‘ಒಳ್ಳೆ ಕೆಲ್ಸ ಮಾಡಿದ್ದೀರಿ. ಇಸ್ಕೂಲ್ ತಪ್ಸಿ ನಿಮ್ಮುನ್ನ ಕಳಿಸಿದ್ನಲ್ಲ ನಾನು ಬಲ್ ಬುದ್ದಿವಂತ’ ಅಂತ ಕುಶಾಲು(ತಮಾಷೆ) ಮಾಡಿದ್ರು. ಊಟಕ್ಕೆ ಬಿಟ್ಟಾಗ ನಮ್ಮುನ್ನ ತೋರ್ಸಿ ಬ್ಯಾರೆ ಮೇಷ್ಟ್ರು ಮೇಡಮ್ಮುಗಳ್ಗೆ ಅದೇನೋ ಯೋಳ್ಕೊಂಡು ನಗಾಡಿದ್ದೂ ನಗಾಡಿದ್ದೇ. ಅವ್ರೆಲ್ಲಾ ದೇವ್ರ ಸಿನ್ಮಾ ಹೆಂಗಿತ್ತು ಅಂತ ನಮ್ಮುನ್ನ ಕೇಳೋದು, ನಗೋದು. ನಮ್ಗೂ ನೋಡೀ ನೋಡೀ ಇವುರ್ಗೆಲ್ಲಾ ಮಳ್ಳು ಹಿಡೀತೋ ಏನೋ ಅಂತ ಅನ್ಮಾನ ಬಂದೋತು. ಒಂತರಾ ಅವ್ಮಾನ ಆದಂಗಾಗಿ ಎರ್ಡು ದಿನ ತಲೇ ತಪ್ಸಿ ಓಡಾಡ್ತಿದ್ವಿ. ಇವತ್ತೂ ಈ ವಿಸ್ಯ ನಡೆದಿದ್ ನೆನುಸ್ಕೊಂಡ್ರೆ ನಗು ಪಕ್ಕೆ ತಿವ್ಕೊಂಡು ಬರುತ್ತೆ.
ಇಸ್ಕೂಲು ಅನ್ನೋದು ನನ್ನ ಬಾಲ್ಯದಾಗೆ ಇಂತಾ ಎಷ್ಟೋ ರಸಪುರಿ ಮಾವಿನಹಣ್ಣಿನಂಗಿರೋ ಸಂಗ್ತಿಗಳ್ನ ಮಡಿಲಾಗೆ ಕಟ್ಟಿಕೊಂಡಿದೆ. ಘಮಕ್ಕೆ ಮೂಗರಳಿಸಿ, ಖುಷಿಲಿಂದ ಚೀಪುತ್ತಾ ಹೋದ್ರೆ ಬಲ್ ಮೋಜು.
ಸುಮಾ ಸತೀಶ್ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚಿಕ್ಕಮಾಲೂರು ಗ್ರಾಮದವರು. ಬರವಣಿಗೆಯ ಜೊತೆಗೆ ಸಾಹಿತ್ಯ ಸಂಘಟನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಕಿರುನಾಟಕಗಳ ರಚನೆ, ನಿರ್ದೇಶನ ಮತ್ತು ಅಭಿನಯ ಜೊತೆಗೆ ಏಕಪಾತ್ರಾಭಿನಯ ಇವರ ಹವ್ಯಾಸ. ಮಿರ್ಚಿ ಮಸಾಲೆ ಮತ್ತು ಇತರೆ ನಗೆ ನಾಟಕಗಳು , ಅವನಿ ( ಕವನ ಸಂಕಲನ), ವಚನ ಸಿರಿ (ಆಧುನಿಕ ವಚನಗಳು), ಹಾದಿಯಲ್ಲಿನ ಮುಳ್ಳುಗಳು ( ವೈಚಾರಿಕ ಲೇಖನ ಸಂಕಲನ), ಬಳಗ ಬಳ್ಳಿಯ ಸುತ್ತ (ಸಂ. ಕೃತಿ), ಶೂನ್ಯದಿಂದ ಸಿಂಹಾಸನದವರೆಗೆ ( ವ್ಯಕ್ತಿ ಚಿತ್ರಣ), ಭಾವಯಾನ ( ಸಂ. ಕೃತಿ), ಮನನ – ಮಂಥನ ( ವಿಮರ್ಶಾ ಬರೆಹಗಳು), ವಿಹಾರ (ಆಧುನಿಕ ವಚನಗಳು), ಕರ್ನಾಟಕದ ಅನನ್ಯ ಸಾಧಕಿಯರು ಭಾಗ 6 (ಡಾ. ಎಚ್. ಗಿರಿಜಮ್ಮನವರ ಬದುಕು – ಬರೆಹ) ಇವರ ಪ್ರಕಟಿತ ಕೃತಿಗಳು.