ಚೆನ್ನೈನಲ್ಲಿ ತಮಿಳು ಬರದಿದ್ದರೆ ತುಂಬಾ ಕಷ್ಟ ಅಂತ ಗೊತ್ತಿತ್ತು. ಕಾರಿನಲ್ಲಿಯೇ ಅಲ್ಲಿಗೆ ಹೊಗಿದ್ದ ನಾವು ಅಲ್ಲೊಬ್ಬರಿಗೆ ಹೊಟೇಲ್‌ಗೆ ಹೇಗೆ ಹೋಗೋದು ಅಂತ ಮಾರ್ಗದರ್ಶನ ಕೇಳಿದ್ದಕ್ಕೆ ತಮಿಳಿನಲ್ಲೇ ವಿವರಣೆ ನೀಡಿದರು. ತಮಿಳು ಬರೋದಿಲ್ಲ ಅಂತ ಹೇಳುವಷ್ಟು ಮಾತ್ರ ತಮಿಳು ಕಲಿತಿದ್ದ ನಾನು ಹಾಗೆ ಹೇಳಿ ಅವರ ಬಳಿ ಹಿಗ್ಗಾಮುಗ್ಗ ಬೈಸಿಕೊಂಡೆ. ಚೆನ್ನೈಗೆ ಬಂದವರು ಯಾಕೆ ಬೇಗನೆ ತಮಿಳು ಕಲಿಯುತ್ತಾರೆ ಅಂತ ಆಗ ನನಗೆ ತಿಳಿಯಿತು! ಬೆಂಗಳೂರಿನಲ್ಲೂ ಕನ್ನಡ ಮಾತಾಡದ ನಮ್ಮ ಕನ್ನಡಿಗರಿಗೆ ಹೀಗೆಯೇ ಬೈಯಬೇಕು ಅಂತ ಅಂದುಕೊಂಡೆ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ನಾಲ್ಕನೆಯ ಬರಹ

ಅಮೆರಿಕೆಯ ವೀಸಾ ಅಂದರೆ ಅದೊಂದು ದೊಡ್ಡ ಕಿರಿಕಿರಿ. ಟೂರಿಸ್ಟ್ ವೀಸಾ ಒಪ್ಪಿಗೆಗೆ ಅಷ್ಟೇನೂ ತೊಂದರೆ ಕೊಡೋದಿಲ್ಲ ಅವರು. ಈ L1 ತರಹದ ವಿಸಾಗಳು ಬಹು ವರ್ಷಗಳು ಅಮೆರಿಕೆಯಲ್ಲಿಯೇ ಉಳಿಸಿಕೊಳ್ಳುವ ಕಾರಣ ಸಿಕ್ಕಾಪಟ್ಟೆ ಪ್ರಶ್ನೆಗಳನ್ನು ಕೇಳಿ, ಇವನು ಅಮೆರಿಕೆಗೆ ಹೋಗಲು ಸೂಕ್ತ ವ್ಯಕ್ತಿ ಹೌದೇ ಅಲ್ಲವೇ ಎಂಬುದನ್ನು ತುಂಬಾ ಕೂಲಂಕುಶವಾಗಿ ಪರೀಕ್ಷಿಸುತ್ತಾರೆ. ಅಮೆರಿಕೆಯಲ್ಲಿ ಪ್ರತಿಭೆಗಳ ಕೊರತೆ ಸಿಕ್ಕಾಪಟ್ಟೆ ಇದೆ. ಇಲ್ಲಿಂದ ಹೋಗುವ ನಾವು ಅಲ್ಲಿಯ ಎಷ್ಟೋ ಜನರಿಗಿಂತ ಪ್ರತಿಭಾವಂತರೆ ಆಗಿರುತ್ತೇವೆ. ಅದು ಅವರಿಗೂ ಗೊತ್ತು. ಆದರೂ ಸುಮ್ಮ ಸುಮ್ಮನೆ stamp ಹಾಕೋಕಾಗುತ್ತೆಯೇ? ಈ ಒಂದು ಜಟಿಲತೆಯ ಕಾರಣ ಎಷ್ಟೋ ಜನರು ವೀಸಾ ಸಂದರ್ಶನಕ್ಕೆ ಹೋಗುವಾಗ ತಮ್ಮ ಇಷ್ಟದೇವತೆಗಳಲ್ಲಿ ಹರಕೆ ಕೂಡ ಹೊರುತ್ತಾರೆ!

ಥಾಮಸ್ ಕೂಡ ಅಂತವರಲ್ಲಿ ಒಬ್ಬ. ಅಲ್ಲಿಗೆ ಹೋಗಲು ತುಂಬಾ ಉತ್ಸುಕನಾಗಿದ್ದ. ಅವನಿಗೆ ಭಾರತದಿಂದ ಹೊರಗೆ ಹೋದರೆ ಸಾಕಾಗಿತ್ತು ಅಂತ ಅವನ ಮಾತುಗಳಿಂದ ಅನಿಸುತ್ತಿತ್ತು! ನಾನು ಅಂತಹ ಎಷ್ಟೋ ಜನರನ್ನು ನೋಡಿದ್ದೆ. ಭಾರತದಲ್ಲಿ ಏನೂ ಸರಿ ಇಲ್ಲ ಅನ್ನುವಂತಹ ಮನಸ್ಥಿತಿ ಅವರದು. ಅಮೆರಿಕೆ ಒಂದು ಸ್ವರ್ಗ; ಅಲ್ಲಿ ತುಂಬಾ ಸುಖ ಇದೆ, ದುಡ್ಡು ಬಹಳ ಸಿಗುತ್ತದೆ, ಟ್ರಾಫಿಕ್ rules ಎಲ್ಲರೂ follow ಮಾಡುತ್ತಾರೆ, ಯಾರೂ ಗಲೀಜು ಮಾಡುವುದಿಲ್ಲ, ಅಲ್ಲಿನ ಜನರು ತುಂಬಾ ಸುರಕ್ಷಿತವಾಗಿದ್ದಾರೆ ಎಂಬ ಸುಖ ಸೌಲತ್ತುಗಳ ದೊಡ್ಡ ಪಟ್ಟಿಯೆ ಅವರ ಬಳಿ ಇರುತ್ತದೆ. ಆದರೆ ನನಗೆ ಬರಿ ಒಂದು ವರ್ಷಕ್ಕೆ ಮಾತ್ರ ಅಲ್ಲಿಗೆ ಹೋಗಿ ಬರಬೇಕಿತ್ತು. ಅಲ್ಲಿ ವಾಸ ಮಾಡಲು ಇಷ್ಟೊಂದು ಬಡಿದಾಡುತ್ತಾರಲ್ಲ, ಅಂಥದ್ದು ಅಲ್ಲಿ ಏನಿದೆ ಎಂದು ಪರೀಕ್ಷಿಸಲು ಒಂದು ವರ್ಷ ಸಾಕು ಅಂತ ಅನಿಸಿತ್ತು. ವೀಸಾ ಸಂದರ್ಶನದಲ್ಲಿ ನಾನು fail ಆದರೂ ಕೂಡ ನನಗೇನೂ ಅಷ್ಟು ಬೇಜಾರು ಆಗುವ ಸಾಧ್ಯತೆಗಳೆ ಇರಲಿಲ್ಲ. ನಾವು ಚೆನ್ನೈಗೆ ಒಂದು ಫ್ಯಾಮಿಲಿ ಟ್ರಿಪ್ ತರಹ ಹೋಗಿದ್ದೆವು.

ಚೆನ್ನೈನಲ್ಲಿ ತಮಿಳು ಬರದಿದ್ದರೆ ತುಂಬಾ ಕಷ್ಟ ಅಂತ ಗೊತ್ತಿತ್ತು. ಕಾರಿನಲ್ಲಿಯೇ ಅಲ್ಲಿಗೆ ಹೊಗಿದ್ದ ನಾವು ಅಲ್ಲೊಬ್ಬರಿಗೆ ಹೊಟೇಲ್‌ಗೆ ಹೇಗೆ ಹೋಗೋದು ಅಂತ ಮಾರ್ಗದರ್ಶನ ಕೇಳಿದ್ದಕ್ಕೆ ತಮಿಳಿನಲ್ಲೇ ವಿವರಣೆ ನೀಡಿದರು. ತಮಿಳು ಬರೋದಿಲ್ಲ ಅಂತ ಹೇಳುವಷ್ಟು ಮಾತ್ರ ತಮಿಳು ಕಲಿತಿದ್ದ ನಾನು ಹಾಗೆ ಹೇಳಿ ಅವರ ಬಳಿ ಹಿಗ್ಗಾಮುಗ್ಗ ಬೈಸಿಕೊಂಡೆ. ಚೆನ್ನೈಗೆ ಬಂದವರು ಯಾಕೆ ಬೇಗನೆ ತಮಿಳು ಕಲಿಯುತ್ತಾರೆ ಅಂತ ಆಗ ನನಗೆ ತಿಳಿಯಿತು! ಬೆಂಗಳೂರಿನಲ್ಲೂ ಕನ್ನಡ ಮಾತಾಡದ ನಮ್ಮ ಕನ್ನಡಿಗರಿಗೆ (ಬೇರೆಯವರಿಗೆ ಅಲ್ಲ!) ಹೀಗೆಯೇ ಬೈಯಬೇಕು ಅಂತ ಅಂದುಕೊಂಡೆ! ಆದರೆ ಹೊಟೇಲುಗಳಲ್ಲಿ ತುಂಬಾ ಬದಲಾವಣೆ ಕಂಡಿತು. ಅಲ್ಲಿನ ಎಷ್ಟೋ ಜನರಿಗೆ ಹಿಂದಿ ಬರುತ್ತಿತ್ತು. TV ನಲ್ಲೂ ಕೂಡ ಹಿಂದಿ ಚಾನೆಲ್‌ಗಳು ಲಭ್ಯ ಇದ್ದವು. ಇದೆಲ್ಲ ಉತ್ತರ ಭಾರತದ ಕೆಲಸಗಾರರು ಬಂದ ಪ್ರಭಾವ ಇರಬೇಕು ಅನಿಸಿತು. ತಮಿಳು ನಾಡಿನವರು ಹೆಚ್ಚು ಹೊರ ಭಾಷೆಗಳಿಗೆ ತೆರೆದುಕೊಳ್ಳಬೇಕು ಅನಿಸುತ್ತದೆ. ಕನ್ನಡಿಗರನ್ನು ನೋಡಿ ಕಲಿಯಬೇಕು ಅವರು. ಆದರೆ ನಮ್ಮವರಂತೆ ತಮ್ಮ ಭಾಷೆಯನ್ನು ಮರೆತು ಬೇರೆ ಭಾಷೆ ಕಲಿಯುವುದಲ್ಲ! ಅಂತೂ ಈ ಬದಲಾವಣೆಯ ಗಾಳಿ ಚೆನ್ನೈನ ಸೆಕೆಯಲ್ಲಿ ಕೂಡ ಹಾಯ್ ಅನಿಸಿದ್ದು ಹೌದು!

ಬೆಳಿಗ್ಗೆ ಎದ್ದವರೆ ಅಮೆರಿಕೆಯ ರಾಯಭಾರ ಕಚೇರಿಯ ಮುಂದಿನ ದೊಡ್ಡ ಸರದಿಯಲ್ಲಿ ನಿಂತೆವು. ಇಷ್ಟೆಲ್ಲಾ ಜನರು ಅಮೆರಿಕೆಗೆ ಹೋಗಲು ತುದಿಗಾಲಲ್ಲಿ ನಿಂತಿದ್ದಾರೆಯೇ? ಅಂತ ಅಚ್ಚರಿ ಆಯ್ತು. ಮಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಕೂಡ ಇಷ್ಟು ಜನ ಇರಲಾರರು ಅಂದುಕೊಂಡೆ. ಅಂತೂ ನಮ್ಮ ಪಾಳಿ ಬಂದಾಗ ಮಧ್ಯಾಹ್ನವಾಗಿತ್ತು. ಅಲ್ಲೊಂದು ಕಿಟಕಿಯ ಒಳಗೆ ಒಬ್ಬರು ಅಮೆರಿಕೆಯ ಹೆಣ್ಣುಮಗಳು ಕೂತಿದ್ದರು. ಅವರೇ ನಮ್ಮ ಸಂದರ್ಶನ ಮಾಡುವವರು. ಅಮೆರಿಕೆಯ ರಾಯಭಾರಿ ಕಚೇರಿಯಲ್ಲಿ ಮತ್ತಾರು ಇರಲು ಸಾಧ್ಯ! ಹಾಗೇನಿಲ್ಲ ಕೆಲವು ಸಲ ಭಾರತೀಯರು ಕೂಡ ಸಂದರ್ಶನ ಮಾಡಲು ಕೂತಿರುತ್ತಾರೆ. ನಾನು, ನನ್ನ ಹೆಂಡತಿ ಹಾಗೂ ಮಗಳು ಕಿಟಕಿಯ ಈಚೆ ನಿಂತು ಅವರಿಗೆ ಶುಭಾಶಯ ಹೇಳಿದೆವು. ಅವರು ಪ್ರತಿಯಾಗಿ ಶುಭಾಶಯ ಹೇಳಿ ಚೆಂದನೆಯ ಮುಗುಳ್ನಗು ಕೊಟ್ಟರು. ಅಮೆರಿಕನ್ನರ ನಗು ಯಾವಾಗಲೂ ನಿಜವಾದ ನಗುವೇ ಇರಬೇಕು ಅಂತಿಲ್ಲ! ಅವರ ವರ್ತನೆಗಳು ಎಷ್ಟೋ ಸಲ ತುಂಬಾ ನಾಟಕೀಯ ಅನಿಸುತ್ತವೆ.

ನಮ್ಮ passport ಗಳನ್ನು ಹಾಗೂ ಜೊತೆಗೆ ತಂದಿದ್ದ ಒಂದಿಷ್ಟು ದಾಖಲೆಗಳನ್ನು ಕೂಡ ಅವರಿಗೆ ನೀಡಿದೆ. ನಾನಂತೂ ನಿರ್ಲಿಪ್ತನಾಗಿದ್ದೇ. ಅವರು ಕೇಳಿದ್ದು ಒಂದೇ ಪ್ರಶ್ನೆ “ನಿಮ್ಮ ಮದುವೆಯಾಗಿ ಎಷ್ಟು ವರ್ಷ ಆಯ್ತು” ಅಂತ. ಬಹುಶಃ marriage certificate ಕೊಟ್ಟಿದ್ದಕ್ಕೆ ಅದರ ಬಗ್ಗೆ ಕೇಳಿದರಾ? ಗೊತ್ತಿಲ್ಲ! ನನ್ನ ಮಗಳಿಗೆ ಒಂದು ಚಾಕ್ಲೆಟ್ ಕೂಡ ಕೊಡ ಕೊಟ್ಟರು. ಸರಿ ನಿಮ್ಮ ಪಾಸ್ಪೋರ್ಟ್ ಆಮೇಲೆ ಪೋಸ್ಟ್ ಅಲ್ಲಿ ಬರುತ್ತೆ ಅಂತ ಮತ್ತೆ ಶುಭಾಶಯ ಹೇಳಿದರು. ನಮ್ಮ ವೀಸಾ stamping ಇಷ್ಟು ಸರಳವಾಗಿ ಮುಗಿದಿತ್ತು! ಒಂದು ವೇಳೆ ಅವರಿಗೆ ನಮ್ಮ ಮೇಲೆ ಸಂಶಯ ಬಂದು ಇವನು ತಮ್ಮ ದೇಶಕ್ಕೆ ಹೋಗಲು ಅಯೋಗ್ಯ ಅಂತ ನಿರ್ಧರಿಸಿದರೆ ನಮ್ಮ passport ಗಳನ್ನು ವಾಪಸ್ಸು ಕೊಟ್ಟು ಬಿಡುತ್ತಾರೆ. ಅದು ಈಗಾಗಲೇ business ವೀಸಾ ಮಾಡಿಸಿದ್ದ ನನಗೆ ಗೊತ್ತಿತ್ತು. ಒಂದು ದೊಡ್ಡ ಕೆಲಸ ಮುಗೀತು ಅಂತ ನಾನು, ಆಶಾ ನಿರಾಳವಾಗಿದ್ದೆವು. ಮಗಳು ಪರಿಧಿ ಇವೆಲ್ಲದರ ಪರಿವೆ ಇಲ್ಲದಂತೆ ತನ್ನಷ್ಟಕ್ಕೆ ತಾನು ಆಡಿಕೊಂಡಿದ್ದಳು. ಆಗ ಅವಳಿಗಿನ್ನೂ ಏಳು ವರ್ಷ.

ನನಗೆ ಬರಿ ಒಂದು ವರ್ಷಕ್ಕೆ ಮಾತ್ರ ಅಲ್ಲಿಗೆ ಹೋಗಿ ಬರಬೇಕಿತ್ತು. ಅಲ್ಲಿ ವಾಸ ಮಾಡಲು ಇಷ್ಟೊಂದು ಬಡಿದಾಡುತ್ತಾರಲ್ಲ, ಅಂಥದ್ದು ಅಲ್ಲಿ ಏನಿದೆ ಎಂದು ಪರೀಕ್ಷಿಸಲು ಒಂದು ವರ್ಷ ಸಾಕು ಅಂತ ಅನಿಸಿತ್ತು. ವೀಸಾ ಸಂದರ್ಶನದಲ್ಲಿ ನಾನು fail ಆದರೂ ಕೂಡ ನನಗೇನೂ ಅಷ್ಟು ಬೇಜಾರು ಆಗುವ ಸಾಧ್ಯತೆಗಳೆ ಇರಲಿಲ್ಲ. ನಾವು ಚೆನ್ನೈಗೆ ಒಂದು ಫ್ಯಾಮಿಲಿ ಟ್ರಿಪ್ ತರಹ ಹೋಗಿದ್ದೆವು.

ಎಲ್ಲ ಮುಗಿಸಿ ಹೊಟೇಲ್‌ಗೆ ವಾಪಸ್ಸು ಬಂದೆವು. ಅಷ್ಟೊತ್ತಿಗೆ ಹೊಟೇಲ್‌ನಲ್ಲೇ ಬಿಟ್ಟು ಹೋಗಿದ್ದ ಮೊಬೈಲ್‌ನಲ್ಲಿ ಥಾಮಸ್‌ನ ಮಿಸ್-ಕರೆಗಳು ಇದ್ದವು. ನನ್ನ ಫಲಿತಾಂಶದ ಬಗ್ಗೆ ವಿಚಿತ್ರ ಕುತೂಹಲ ಅವರಿಗೆ. ಅದಕ್ಕೆ ವಿಚಾರಿಸಲು ಇರಬೇಕು ಅಂತ ವಾಪಸ್ಸು ಕರೆ ಮಾಡಿದೆ. ನಾನು ಅಂದುಕೊಂಡ ಹಾಗೆಯೇ ನನ್ನ ವೀಸಾದ ಬಗ್ಗೆ ಕೇಳಿದರು. Stamp ಆಯ್ತು ಅಂತ ಹೇಳಿದೆ. ನಿಮ್ಮದೇನಾಯ್ತು ಅಂತ ಕೇಳಿದಾಗ, ತಮ್ಮದು ರಿಜೆಕ್ಟ್ ಆಯ್ತು ಅಂತ ಹೇಳಿದರು. ಇದು ವಿಚಿತ್ರ ಅನಿಸಿತು. ನಾವಿಬ್ಬರೂ ಮ್ಯಾನೇಜರ್ ದರ್ಜೆಯಲ್ಲಿಯೇ ಇದ್ದವರು. ಇಬ್ಬರದೂ ಒಂದೇ ತರದ visa ಆಗಿದ್ದರೂ ಅವರದೂ ರಿಜೆಕ್ಟ್ ಆಗಿತ್ತು. ನಾನು ಸುಮ್ಮನೆ ಅವಕಾಶ ಸಿಕ್ಕಿದೆ ಅಂತ ಹೋದವನು ಪಾಸ್ ಆಗಿದ್ದೆ!

ಮರುದಿನ ಬೆಂಗಳೂರಿಗೆ ವಾಪಸ್ಸಾಗುವಾಗ ದಾರಿಯಲ್ಲಿ ಕಂಚಿಪುರಂ ಸೀರೆ ತೆಗೆದುಕೊಳ್ಳೋಣ ಅಂತ ಹೋದೆವು. ಅಲ್ಲಿ ಕೂಡ ತಮಿಳು ಮಾತಾಡುವುದು ಹೇಗೆ ಅಂತ ಯೋಚಿಸುತ್ತಿದ್ದಾಗ ಅಲ್ಲಿನ ಎಲ್ಲರಿಗೂ ಕನ್ನಡ ಬರುತ್ತಿತ್ತು. ಕೇಳಿ ಖುಷಿಯಾಯಿತು. ಒಂದು ಸೀರೆ ತೆಗೆದುಕೊಳ್ಳೋಣ ಅಂತ ಹೋದ ನನ್ನ ಹೆಂಡತಿ ನಾಲ್ಕೈದು ಸೀರೆ ಖರೀದಿಸಿದಳು. ಅದಕ್ಕೆ ಅನಿಸುತ್ತೆ ಅಲ್ಲಿನವರು ಕನ್ನಡ ಕಲಿತಿದ್ದು!

*****

ವೀಸಾ ಸಂದರ್ಶನ ಆದಮೇಲೆ ಒಂದು ವಾರದಲ್ಲಿ stamp ಆದ ನಮ್ಮ passport ಗಳೆಲ್ಲ ನಮ್ಮ ಮನೆಗೆ ಬಂದು ತಲುಪಿದವು. ಅಲ್ಲಿಂದ ಅಮೆರಿಕೆಯಲ್ಲಿ ಪ್ರಾಜೆಕ್ಟ್ ಹುಡುಕುವ ಕೆಲಸ ಶುರುವಾಯ್ತು. ನಾನು ಅದಕ್ಕೂ ಬಹಳಷ್ಟು ಸಮಯ ತೆಗೆದುಕೊಂಡೆ. ನನಗೆ ನಾನು ಹೋಗುವ ಜಾಗ concrete ಜಂಗಲ್ ಆಗುವುದು ಬೇಡವಾಗಿತ್ತು. ಅಲ್ಲೊಂದು ಹಳ್ಳಿಯ ವಾತಾವರಣ ಇರುವ ಅಥವಾ ಚಿಕ್ಕದಾದ ಪಟ್ಟಣವನ್ನು ನಾನು ಹುಡುಕುತ್ತಿದ್ದೆ. ಹಾಗೆ ಹುಡುಕುವಾಗ ಸಿಕ್ಕಿದ್ದೆ ಓಮಾಹಾ ಎಂಬ ಊರು. ಅದು ಅಮೆರಿಕೆಯ ನೆಬ್ರಾಸ್ಕ ರಾಜ್ಯದಲ್ಲಿ ಇದೆ ಅಂತ ಗೊತ್ತಾಯ್ತು. ಗೂಗಲ್‌ನಲ್ಲಿ ನೋಡಿದಾಗ ಅಲ್ಲಿ ಒಂದಿಷ್ಟು ಹೊಲಗಳು ಇರುವ ದೃಶ್ಯ ಕಂಡುಬಂತು. ಒಂದು ಹಿಂದೂ ದೇವಸ್ಥಾನ ಇದೆಯಂತಲೂ ತಿಳಿಯಿತು. ಹೀಗಾಗಿ ನಮ್ಮವರು ಇದ್ದೇ ಇರುತ್ತಾರೆ ಅಂತ ಖಾತ್ರಿಯಾಯಿತು. ಸಂದರ್ಶನ ಆಗಿ ಅಲ್ಲಿನ ಪ್ರೊಜೆಕ್ಟ್ ಡೈರೆಕ್ಟರ್‌ನಿಂದ ಒಪ್ಪಿಗೆ ಸಿಕ್ಕಿತು. ನಾವು ಅಮೆರಿಕೆಗೆ ಪ್ರಯಾಣಿಸುವ ದಿನಾಂಕ ಗೊತ್ತಾಯ್ತು. ಅಲ್ಲಿಂದ ನಿಜವಾದ ಸಿದ್ಧತೆಗಳು ಶುರುವಾದವು. ಎಲ್ಲಕ್ಕಿಂತ ಮಿಗಿಲಾಗಿ ಮಾನಸಿಕ ಸಿದ್ಧತೆಗಳು ತುಂಬಾ ಮುಖ್ಯ. ಅದೂ ನಲವತ್ತರ ಬಳಿಕ ಒಂದು ಕಡೆ ಬೇರೂರಿದವನು ಎಲ್ಲವನ್ನೂ ಬುಡಸಮೇತ ಕಿತ್ತುಕೊಂಡು ಬೇರೆ ಹೊಸ ಜಾಗಕ್ಕೆ ಹೋಗಿ ಇರುವದು ಅಂದರೆ ಸುಲಭವಲ್ಲ. ಅಪ್ಪನಿಗೆ ವಯಸ್ಸಾಗಿತ್ತು. ಅವರನ್ನು ನನ್ನ ತಮ್ಮನ ಮನೆಯಲ್ಲಿ ಬಿಟ್ಟು ಹೋಗುತ್ತಿದ್ದೆವಾದರೂ ಮನದಲ್ಲಿ ಒಂದೇನೋ ಅಳುಕು.

ನನ್ನ ಮಾವ ಅತ್ತೆ ಕೂಡ ವಯಸ್ಸಾದವರೆ. ನಾವು ಅಲ್ಲಿಗೆ ಹೋದಾಗ ಅವರಲ್ಲಿ ಯಾರಿಗಾದರೂ ಏನಾದರೂ ಆದರೆ ಎಂಬ ಭಯ ಇದ್ದೇ ಇತ್ತು. ಎಲ್ಲ ಸ್ನೇಹಿತರಿಗೂ ತಿಳಿಸಿದೆವು. ಕೆಲವರು ಖುಷಿ ಪಟ್ಟರು. ಕೆಲವರು ಬೈದರು. ಕೆಲವರಂತೂ ನೀವು ವಾಪಸ್ಸು ಬರೋದಿಲ್ಲ ಬಿಡಿ. ಹೀಗೆ ತುಂಬಾ ಜನ ಹೇಳಿ ಹೋಗಿ ಅಲ್ಲೇ ಉಳಿದಿದ್ದಾರೆ ಅಂತ ಹೆದರಿಸಿದರು. ಒಬ್ಬ ಗೆಳೆಯನಂತೂ ಈ ವಯಸ್ಸಿನಲ್ಲಿ ನಿನಗ್ಯಾಕೆ ಬೇಕಿತ್ತು? ನಿನ್ನ ಜೀವನ ಅತಂತ್ರ ಆಗುತ್ತೆ ಅಂತಲೂ ಹೇಳಿಬಿಟ್ಟ! ನಮ್ಮ ಜನರದು ಇದೊಂದು ವಿಚಿತ್ರ ಸ್ವಭಾವ. ಬೇರೆಯವರ ವಿಷಯದಲ್ಲಿ ಅತಿಯಾಗಿ ಮೂಗು ತೂರಿಸುವುದು. ನಾನು ಯಾವುದಕ್ಕೂ ಹೆಚ್ಚು ವಾದಿಸಲು ಹೋಗಲಿಲ್ಲ. ಬೇರೆಯವರ ಅಭಿಪ್ರಾಯಗಳ ಬಗ್ಗೆ ಯೋಚಿಸಿ ನಮ್ಮ ಖುಷಿಗೆ ಭಂಗ ತಂದುಕೊಳ್ಳುವ ಮನಸ್ಸಿರಲಿಲ್ಲ. ನಾವು ತುಂಬಾ ಉತ್ಸಾಹದಿಂದಲೇ ಹೊರಟಿದ್ದೆವು. ನನ್ನ ಜೀವನದಲ್ಲಿ ಇದೊಂದು ಮಹತ್ವಪೂರ್ಣ ಘಟ್ಟವಾಗಿತ್ತು. Airport ನ ಒಳಗೆ ಹೋಗುವಾಗ ಬೇಗ ಬಂದುಬಿಡು ಅಂತ ಅಪ್ಪ ಹೇಳಿದಾಗ ಮಾತ್ರ ಕಣ್ಣಲ್ಲಿ ನೀರು ಬಂತು. “ಹೂಂ ಬರ್ತೀವಿ..” ಅಂತ ಹೇಳಿ ಹೊರಟೆ.

ಬೋರೊಬ್ಬರಿ 30 ಗಂಟೆಗಳ ಪ್ರಯಾಣವದು. ಬೆಂಗಳೂರಿಂದ ಅಬುದಾಬಿಗೆ ಒಂದು ವಿಮಾನ. ಅಲ್ಲಿಂದ ಚಿಕಾಗೋಗೆ ಮತ್ತೊಂದು ವಿಮಾನ. ಅದೇ ನಮ್ಮ ಪೋರ್ಟ್ ಆಫ್ ಎಂಟ್ರಿ ಆಗಿತ್ತು. ಅಲ್ಲಿಯೂ ಒಂದಿಷ್ಟು ಸೀಲುಗಳನ್ನು ಹಾಕಿದರು. ಅಲ್ಲಿ ಕೂಡ ಅವರಿಗೆ ನಮ್ಮ ಮೇಲೆ ಏನಾದರೂ ಸಂಶಯ ಬಂದರೆ ವಾಪಸ್ಸು ಕಳಿಸಬಹುದಂತೆ! ಒಟ್ಟಿನಲ್ಲಿ ಅಮೆರಿಕೆಯ ಪ್ರವಾಸ ಎಂದರೆ ಅದೊಂದು ದೊಡ್ಡ ಪ್ರಯಾಸ! ಚಿಕಾಗೋದಿಂದ ಓಮಾಹಾಕ್ಕೆ ಸ್ಥಳೀಯ flight ಇತ್ತು. ಅಂತಾರಾಷ್ಟ್ರೀಯ flight ಗಳಲ್ಲಿ ಊಟ ಉಪಾಹಾರ ಎಲ್ಲ ಕೊಡುತ್ತಾರೆ. ಆದರೆ ಈ ಸ್ಥಳೀಯ flght ಗಳಲ್ಲಿ ಶೇಂಗಾ ಮಾತ್ರ! ಅಂತೂ ಓಮಾಹಾಕ್ಕೆ ಬಂದಿಳಿದಾಗ ಸಂಜೆ ಆಗಿತ್ತು. ಜಿಟಿ ಜಿಟಿ ಮಳೆ, ಚುಮು ಚುಮು ಚಳಿ. ನಾವು ಹೋಗಿದ್ದು ಸೆಪ್ಟೆಂಬರ್‌ನಲ್ಲಿ. ಅಲ್ಲಿನ ಹೋಟೆಲ್‌ ಒಂದರಲ್ಲಿ ಈಗಾಗಲೇ ನಮ್ಮ ಕಂಪೆನಿ ಯವರು ನಮಗೊಂದು ರೂಂ ಬುಕ್ ಮಾಡಿದ್ದರು. ಅಲ್ಲಿ ಚೆಕ್ ಇನ್ ಮಾಡಿದೆವು. ಒಂದು ಸಿಮ್ ಕೂಡ ಕೊಟ್ಟಿದ್ದರು ಭಾರತಕ್ಕೆ ಕರೆ ಮಾಡುವ ಸೌಲಭ್ಯವೂ ಇತ್ತು. ಎಲ್ಲರಿಗೂ ಫೋನ್ ಮಾಡುತ್ತಾ ಕೂತೆವು. ಆಗ ಭಾರತದಲ್ಲಿ ಬೆಳಕು. ಹೀಗಾಗಿ ನಮಗೆ ನಿದ್ದೆ ಹೇಗೆ ಬರಬೇಕು?!

(ಮುಂದುವರಿಯುವುದು..)

ಕೈ ಜಾರಿದ ರೊಟ್ಟಿ… (ಹಿಂದಿನ ಕಂತು….)