ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು. ಮನೆಯಲ್ಲಿ ಬೆಳೆಯುತ್ತಿದ್ದ ತರಕಾರಿ, ಸೊಪ್ಪುಗಳಿರಲಿ, ಮನೆಯ ಸುತ್ತಮುತ್ತಲೂ ಸಿಗುತ್ತಿದ್ದ ಸೊಪ್ಪುಗಳಾಗಿರಲಿ ಅವುಗಳ ಸದುಪಯೋಗ ಹೇಗೆನ್ನುವುದು ಅವರಿಗೆ ತಿಳಿದಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ
ಇತ್ತೀಚೆಗಷ್ಟೆ ದೊಡ್ಡ ಮನೆಯನ್ನು ಕೊಂಡುಕೊಂಡಿದ್ದ ಅವರ ಮನೆಯ ಗೃಹಪ್ರವೇಶಕ್ಕೆ ಹೋಗಿ ಗಡದ್ದಾಗಿ ಊಟ ಹೊಡೆದು ಬಂದು ಆರುತಿಂಗಳು ಕಳೆದಿದ್ದುವೇನೋ? ಮನೆಯ ಸುತ್ತಲೂ ಒಂದಿಷ್ಟು ಜಾಗವಿದ್ದು ಗಿಡಗಳನ್ನು ಬೆಳೆಸಲು ಅನುಕೂಲಕರವಾಗಿದೆ ಎಂದು ಅಂದು ಮಾತನಾಡಿಕೊಂಡಿದ್ದೆವು. ಈಗ ಹೊಸ ಮನೆಯ ಅಂಗಳ ಹಸಿರಿನಿಂದ ಕಂಗೊಳಿಸುತ್ತಿತ್ತು. ಈ ಬಾರಿಯ ಅತ್ಯಂತ ಸೆಖೆಯಲ್ಲಿಯೂ ಅವರ ಮನೆಯಲ್ಲಿ ಅಷ್ಟೊಂದು ಸೆಖೆ ಎನಿಸುತ್ತಿರಲಿಲ್ಲ. ಒಂದಿಷ್ಟು ಹರಟೆಯ ನಂತರ ಊಟ ಮಾಡಿದೆವು. ಆವತ್ತಿನ ಅಡಿಗೆಗೆ ಆಕೆ ಬಳಸಿದ್ದುದೆಲ್ಲ ಅವರ ತೋಟದಲ್ಲಿ ಬೆಳೆದ ತರಕಾರಿಯೇ ಎನ್ನುವುದು ತಿಳಿಯಿತು. ಬದನೆಕಾಯಿ ವಾಂಗಿಬಾತ್, ಸೊಪ್ಪಿನ ಹುಳಿ, ಸೊಪ್ಪು-ಕಾಳುಗಳ ಪಲ್ಲೆ, ಮಜ್ಜಿಗೆಹುಲ್ಲಿನ ತಂಬುಳಿ ಹೀಗೆ ಎಲ್ಲವೂ ಮನೆಯ ತೋಟದಲ್ಲಿ ಬೆಳೆದುದರಿಂದ ತಯಾರಿಸಿದ ವ್ಯಂಜನಗಳೇ. ಸಾವಯವ ತರಕಾರಿಗಳು ಎನ್ನುತ್ತ ಸವಿದೆವು. ಎಲ್ಲವುದಕ್ಕೂ ರಾಸಾಯನಿಕಗಳನ್ನು ಸುರಿಯುತ್ತಿರುವ ಈ ದಿನಗಳಲ್ಲಿ ಇಂತಹ ಅವಕಾಶ ಸಿಗುವುದು ತೀರ ಅಪರೂಪವೇ. ಮನೆಯ ಸುತ್ತಲಿನ ಜಾಗದಲ್ಲಿ ಪೂಜೆಗೆ ಬೇಕಿರುವಷ್ಟು ಮಾತ್ರ ಹೂವಿನ ಗಿಡಗಳನ್ನು ಬೆಳೆಸಿದ್ದರು. ಮನೆಯ ಹಿಂಭಾಗದಲ್ಲಿ ಸುಮಾರು ಮೂವತ್ತಡಿ ಅಗಲ ಹದಿನೈದು ಅಡಿ ಉದ್ದವಿದ್ದ ಜಾಗವೆಲ್ಲ ಒಂದಿಷ್ಟು ಸೊಪ್ಪು, ತರಕಾರಿ ಗಿಡಗಳಿಂದ ನಳನಳಿಸುವುದನ್ನು ಕಂಡು ಸಂತೋಷವಾಯಿತು.
• ಆಯಾ ಋತುವಿಗೆ ಅನುಗುಣವಾಗಿ ತರಕಾರಿ ಗಿಡಗಳು ಸಿದ್ಧಗೊಳ್ಳುತ್ತಿದ್ದವು. ಬೀಜಗಳ ಸಂಗ್ರಹಣೆಯ ಕೆಲಸ ಮಹಿಳೆಯರದೇ ಆಗಿತ್ತು. ಮನೆಯ ಕೆಲಸಗಳ ಜೊತೆಗೆ ಇದೂ ಸೇರಿರುತ್ತಿತ್ತು. ಅಡುಗೆ ಮಾಡುವ ಹೊಣೆಯೂ ಅವರದೇ ಆಗಿದ್ದರಿಂದ ಆಯಾ ಕಾಲಕ್ಕನುಗುಣವಾಗಿ ಗಿಡ-ಬಳ್ಳಿಗಳು ತಯಾರಾಗುತ್ತಿದ್ದವು. ಮಳೆಗಾಲದ ಪ್ರಾರಂಭದಲ್ಲಿ ಸಂಗ್ರಹಿಸಿಟ್ಟಿದ್ದ ಬೀಜಗಳನ್ನು ಬಿತ್ತುವ ಕೆಲಸ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ʻಅಯ್ಯೋ ಎಲ್ಲಿಟ್ಟಿದ್ದಿ ಅಂತನೇ ನೆನಪಾಗ್ತಾ ಇಲ್ಲೆ. ಚೊಲೋ ಮೂರೆಲೆ ಬೆಂಡೆಬೀಜ ಆಗಿತ್ತುʼ ಅಂತಲೋ ʻಎಷ್ಟು ಚೊಲೋ ಜಾತಿ ಕರಡಿಗೆ ಬದನೆ ಆಗಿತ್ತು. ಬೀಜನೆಲ್ಲ ಇರುವೆ ನಿಂತು ಹಾಕಿದ್ದುʼ ಅಂತಲೋ ಹೇಳಿಕೊಂಡು ಸುಮ್ಮನಿರುವ ಜಾಯಮಾನ ಅವರದಾಗಿರಲಿಲ್ಲ. ಪಕ್ಕದ ಮನೆಯ ಅತ್ತಿಗೆ, ಕೆಳಗಿನ ಮನೆಯ ಅತ್ತೆ, ಮೇಲಿನ ಮನೆಯ ಅಕ್ಕ ಮುಂತಾದವರನ್ನು ಕೇಳಿ ಬೀಜವನ್ನು ತಂದು ಬಿತ್ತುತ್ತಿದ್ದರು. ದೀಪಾವಳಿ ಕಳೆದು ಮಳೆಗೆ ಬಿಡುಗಟ್ಟು ದೊರಕಿತೆಂದರೆ ಸೊಪ್ಪಿನ ಬೀಜಗಳನ್ನು ಹುಡುಕಿ ಮೊಳಕೆಕಟ್ಟಿ ಮೊಳಕೆಯೊಡೆಯುತ್ತಲೇ ಬಿತ್ತುತ್ತಿದ್ದರು. ಹೀಗೆ ಬಿತ್ತಿದ ಬೀಜಗಳನ್ನು ತಿನ್ನುವುದೆಂದರೆ ಇರುವೆಗೆ ಆಪ್ಯಾಯಮಾನ. ಅವುಗಳಿಗೆ ಆಹಾರವಾಗದಂತೆ ಪಾತಿಯ ಸುತ್ತಲೂ ಗೆಮಾಕ್ಷಿನ್ನಿನ ರಂಗೋಲಿ ಬರೆದರೂ ಒಮ್ಮೊಮ್ಮೆ ಬಿತ್ತಿದ ಬೀಜದ ಮೊಳಕೆಗಳು ಕಾಣೆಯಾಗುತ್ತಿದ್ದವು. ʻನಮ್ಮನೆಲ್ಲಿ ಬಿತ್ತರದ್ನೆಲ್ಲ ಇರುವೆ ತಿಂದುಬುಡ್ತುʼ ಅಂತ ಅಕ್ಕಪಕ್ಕದ ಮನೆಯಿಂದ ಸಸಿಗಳನ್ನು ತಂದು ಮತ್ತೆ ನೆಡುತ್ತಿದ್ದರು. ಇಲ್ಲವೆ ʻಮರಳಿ ಯತ್ನವ ಮಾಡುʼ ಎಂದು ವಿಕ್ರಮಾದಿತ್ಯನ ಹಾಗೆ ಮತ್ತೆ ಬೀಜಗಳನ್ನು ಬಿತ್ತುವ ಮೂಲಕ ಸಸಿಗಳನ್ನು ತಯಾರಿಸುತ್ತಿದ್ದರು. ಹೀಗೆ ಬೆಳೆಯುತ್ತಿದ್ದ ತರಕಾರಿಗಳು ಕೇವಲ ಮನೆಬಳಕೆಗೆ ಮಾತ್ರ ಎನ್ನುವಂತಿರಲಿಲ್ಲ. ನಾವು ಬೆಳೆದದ್ದನ್ನೆಲ್ಲ ನಾವೇ ತಿನ್ನಬೇಕು ಅಂತ ಯೋಚಿಸುತ್ತಿರಲಿಲ್ಲ. ನಾವು ಬೆಳೆದುದನ್ನು ದಿನವೂ ತಿಂದು ಬೇಸರವಾದರೆ, ಅಥವಾ ಮತ್ಯಾರದೋ ಮನೆಯಲ್ಲಿ ಸೊಪ್ಪೋ ತರಕಾರಿಯೋ ಇಲ್ಲವೆಂದಾದರೆ ನಮ್ಮನೆಯದು ಅಲ್ಲಿಗೆ ಹೋಗುತ್ತಿತ್ತು. ಅವರ ಮನೆಯಿಂದ ಬಂದಿರುವ ಸೊಪ್ಪೋ, ತರಕಾರಿಯೋ ನಮ್ಮನೆಯ ವ್ಯಂಜನದ ಭಾಗವಾಗುತ್ತಿತ್ತು.
• ʻಬೆಂಡೆಕಾಯಿ ತೊಂಡೆಕಾಯಿ ತೋಟದಲ್ಲಿದೆʼ ಎನ್ನುವ ಶಿಶುಗೀತೆಗಳನ್ನು ನಾವೆಲ್ಲ ಕೇಳಿದ್ದೇವೆ. ತೋಟ ಇರಲಿ, ಮನೆಯ ಅಂಗಳವೇ ಆಗಿರಲಿ ಗಿಡಗಳ ಅಗತ್ಯಗಳನ್ನು ಅರಿತು ಪೂರೈಸುವುದು ಸುಲಭದ ಮಾತಲ್ಲ. ಇದಕ್ಕೆಲ್ಲ ಬೇಕಿರುವುದು ಆಸಕ್ತಿ ಮತ್ತು ಶ್ರದ್ಧೆ. ಇವೆಲ್ಲ ಕೆಲಸ ಎಂದು ಭಾವಿಸದೆ ಜೀವನಕ್ರಮ ಎಂದು ತಿಳಿಯುತ್ತಿದ್ದ ದಿನಗಳವು. ಈಗ ಸುಮಾರು ಮೂವತ್ತೈದು ವರ್ಷಗಳ ಹಿಂದಿನ ಮಾತು. ಯಾರೊ ಮದುವೆಯಾಗುವ ಹುಡುಗಿಯ ಹತ್ತರ ಕೇಳಿದ್ದರು: ʻನಿಂಗೆ ಹಳ್ಳಿಲ್ಲಿರ ಹುಡುಗನೇ ಅಡ್ಡಿಲ್ಲೆ ಅಂತ ಹೇಳಿದ್ಯಡʼ ಅಂತ. ಅದಕ್ಕೆ ಆ ಹುಡುಗಿ ಹೇಳಿದ್ದಳು: ʻಹೌದು, ಯಂಗೆ ಆ ಪ್ಯಾಟೆ ಗೌಜು-ಗದ್ಲ ಎಲ್ಲ ಬ್ಯಾಡ. ಕೊಳ್ಳದೇ ಯಂತುದೂ ಸಿಕ್ತಿಲ್ಲೆ. ಮನೆ ಹತ್ರ ಒಂದು ತೊಂಡೆ ಬಳ್ಳಿ, ಅಥ್ವಾ ಸೀಮೆಸೌತೆ ಬಳ್ಳಿನೋ ಹಾಕ್ಯಂಡ್ರೆ ವರ್ಷ ಕಾಲಾವಧಿ ತರಕಾರಿ ಸಿಗ್ತು. ಎರಡೋ ಮೂರೋ ಬದ್ನೆಗಿಡ ಇದ್ರೆ ಬೇಕಷ್ಟು ತರಕಾರಿ ಆಗ್ತು. ಅಂಗಳ ಇದ್ರೆ ಸೊಪ್ನೂ ಬೆಳೆಯಲೆ ಆಗ್ತುʼ ಅಂತ. ತೀರ ಅಪರೂಪ ಆದ್ರೂ ಇತ್ತೀಚೆಗೆ ಹಳ್ಳಿ ಜೀವನವನ್ನು ಇಷ್ಟಪಟ್ಟು ಮದುವೆಯಾದ ಹುಡುಗಿಯನ್ನೂ ಕಂಡಿದ್ದೆ.
• ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು. ಮನೆಯಲ್ಲಿ ಬೆಳೆಯುತ್ತಿದ್ದ ತರಕಾರಿ, ಸೊಪ್ಪುಗಳಿರಲಿ, ಮನೆಯ ಸುತ್ತಮುತ್ತಲೂ ಸಿಗುತ್ತಿದ್ದ ಸೊಪ್ಪುಗಳಾಗಿರಲಿ ಅವುಗಳ ಸದುಪಯೋಗ ಹೇಗೆನ್ನುವುದು ಅವರಿಗೆ ತಿಳಿದಿತ್ತು. ತರಕಾರಿ ಮಾತ್ರವಲ್ಲ ಕೆಲವು ತರಕಾರಿ ಬೀಜಗಳ ಔಷಧೀಯ ಗುಣವನ್ನೂ ಅರಿತಿದ್ದರು. ಉರಿಮೂತ್ರ ಬಂದಿದೆ ಎಂದರೆ ಸಾಕು, ʻಅಷ್ಟೆನಾ ಅದ್ಕೆಲ್ಲ ಡಾಕ್ಟ್ರ ಹತ್ರ ಹೋಪದು ಬ್ಯಾಡ, ಮಗೆಬೀಜ ಆಗ್ಲಿ, ಸೌತೆಬೀಜನಾಗ್ಲಿ ಬೀಸಿ ಅದಕ್ಕೆ ಆಕಳಹಾಲು ಹಾಕಿ ಕುಡುದ್ರೆ ಗುಣವಾಗ್ತುʼ ಎನ್ನುವ ಸಲಹೆ ಬರುತ್ತಿತ್ತು. ಸಾಧ್ಯವಾದರೆ ಅವರೇ ಅದನ್ನು ಸಿದ್ಧಪಡಿಸಿ ಕೊಡುತ್ತಿದ್ದರು. ತುಸು ನೆಗಡಿ, ಗಂಟಲ ಕೆರೆತ ಅಂದರೆ ಸಾಂಬಾರು ಸೊಪ್ಪಿನ ಚಟ್ನಿ ತಯಾರಾಗುತ್ತಿತ್ತು. ಬಾಯಿಹುಣ್ಣು ಊಟಮಾಡೋದು ಕಷ್ಟ ಅಂದರೆ ಸಾಕು ʻಇರು, ನಾಳೆ ಬಸಳೆಸೊಪ್ಪಿನ ತಂಬುಳಿ ಮಾಡ್ತಿ, ಅದರಲ್ಲಿ ಊಟಮಾಡು ಗುಣವಾಗ್ತುʼ ಎನ್ನುತ್ತಿದ್ದರು ಅಮ್ಮ. ಹಾಗಾಗಿ, ಬಸಳೆ, ಒಂದೆಲಗ, ಕನ್ನೆಕುಡಿ, ಸಾಂಬಾರ್‌ಸೊಪ್ಪು ಇಂತಹ ಔಷಧೀಯ ಗುಣವನ್ನುಳ್ಳ ಸೊಪ್ಪಿನ ಗಿಡ-ಬಳ್ಳಿಗಳು ಮನೆಯ ಅಂಗಳದಲ್ಲಿ ಜಾಗ ಪಡೆಯುತ್ತಿದ್ದವು. ಬಸುರಿ, ಬಾಳಂತಿಯರಿಗೆ, ಚಿಕ್ಕಮಕ್ಕಳಿಗೆ, ಕಾಯಿಲೆಯವರಿಗೆ, ತೀರ ವಯಸ್ಸಾದವರಿಗೆ ಯಾವ ತರಕಾರಿ, ಸೊಪ್ಪುಗಳನ್ನು ಕೊಡಬೇಕು/ಕೊಡಬಾರದು ಎನ್ನುವ ಲೆಕ್ಕಾಚಾರವೂ ತಿಳಿದಿತ್ತು. ಮಗುವಿಗೆ ಸಾಕಾಗುವಷ್ಟು ಎದೆಹಾಲು ಸಿಗುತ್ತಿಲ್ಲ ಎಂದರೆ ಯಾವ ಸೊಪ್ಪಿನ ಅಡುಗೆಯಿಂದ ಅದು ಹೆಚ್ಚುತ್ತದೆ ಎನ್ನುವ ಸಂಗತಿಯೂ ಅವರಿಗೆ ಗೊತ್ತಿತ್ತು. ಇವೆಲ್ಲ ಅವರು ಎಲ್ಲಿಯೋ ಹೋಗಿ ಕಲಿತು ಬಂದವುಗಳಲ್ಲ. ಮನೆಯ ಹಿರಿಯರಿಂದ ಮತ್ತು ಬೇರೆಯವರಿಂದ ಕೇಳಿತಿಳಿದವು. ಪ್ರಾಯಶಃ ʻಊಟ ಬಲ್ಲವನಿಗೆ ರೋಗವಿಲ್ಲʼ ಎನ್ನುವ ಮಾತು ಹುಟ್ಟಿಕೊಂಡಿರುವುದು ಅದಕ್ಕಾಗಿಯೇ ಇರಬಹುದು.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.
ಅತೀ ಉತ್ತಮ ಮತ್ತು ಉಪಯುಕ್ತ ಮಾಹಿತಿ. ನಿಮ್ಮ ಬರವಣಿಗೆ ಹೀಗೇ ಮುಂದುವರಿಯಲಿ.