ಸ್ಮಾರ್ಟ್ ಬೋರ್ಡ್ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಶೈಕ್ಷಣಿಕ ಬರಹ ನಿಮ್ಮ ಓದಿಗೆ
ಶಾಲೆಗೆ ಬಹುಶಃ ಎರಡು ಮೂರು ತಿಂಗಳಾಗಿತ್ತು ಸ್ಮಾರ್ಟ್ ಬೋರ್ಡ್ ಬಂದು. ́ಸರಕಾರಿ ಶಾಲೆಗಳಿಗೆ ಅದೂ ಹೈದರಾಬಾದ ಕರ್ನಾಟಕ ಭಾಗದ ಸರಕಾರಿ ಶಾಲೆಗಳಿಗೆ ಈ ಸೌಲಭ್ಯ ಸಿಗುತ್ತಿರುವುದು ಪುಣ್ಯವೇ ಸರಿ…ʼ ಎಂದು ಬೆಂಗಳೂರು, ಮೈಸೂರು ಭಾಗದಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದ ಸ್ನೇಹಿತರು ಹೇಳುತಿದ್ದರು. ಸ್ಮಾರ್ಟ್ ಬೋರ್ಡ್ ಎನ್ನುತ್ತಿದ್ದಂತೆಯೇ ಗಣಿತ ಶಿಕ್ಷಕರಾದ ರಮೇಶ್ ಅವರ ಕಣ್ಣುಗಳು ಹೊಳೆಯುತ್ತಿದ್ದವು. ಅವರ ಕಣ್ಣುಗಳನ್ನು ನೋಡಿ ಮುಂದಿನವರು ಊಹಿಸಬಹುದಿತ್ತು. ಅವರೆಷ್ಟು ಸ್ಮಾರ್ಟ್‌ಬೋರ್ಡ್‌ನಿಂದ ಖುಷಿಯಾಗಿರುವರೆಂದು.
ಸ್ಮಾರ್ಟ್ ಬೋರ್ಡ್ ಬರುವುದಕ್ಕಿಂತ ಮುಂಚೆ ತರಗತಿ ಮುಗಿಸಿದಾಗ ರಮೇಶ ಅವರ ಅವತಾರ ಮೆಚ್ಚಿ ವಾಹ್ ಶಿಕ್ಷಕರೆಂದರೆ ಹೀಗಿರಬೇಕು ಎನ್ನುವಂತಿದ್ದರು, ಸುಣ್ಣದಿಂದ ಮುಳುಗಿದ ಅವರ ಕೈಗಳು, ಬಣ್ಣ ಬದಲಾಯಿಸಿಕೊಂಡು ಬಿಳಿ ಬಟ್ಟೆಯಂತಿದ್ದ ಅವರ ಪ್ಯಾಂಟ್, ಅಂಗಿ ಅಲ್ಲಲ್ಲಿ ಕೈ ತಗುಲಿ ಮುಖಕ್ಕೂ ಹತ್ತಿದ್ದ ಸೀಮೆ ಸುಣ್ಣದ ಬಿಳಿ ಯಾರೇ ನೋಡಿದರೂ ಇವರು ಗಣಿತ ಶಿಕ್ಷಕರೆಂದು ಗುರುತಿಸಬಹುದಾದ ಮಾದರಿ ರೂಪ.
ಒಮ್ಮೊಮ್ಮೆ ಮಕ್ಕಳು ಸರಿಯಾಗಿ ಪ್ರತಿಸ್ಪಂದಿಸದಿದ್ದಾಗ ಬೇಸರದಿಂದ ಕೈಯಲ್ಲಿದ್ದ ಚಾಕ್ ಪೀಸ್, ಡಸ್ಟರ್, ಪುಸ್ತಕಗಳನ್ನು ಜೋರಾಗಿ ಟೇಬಲ್ ಮೇಲೆ ಎಸೆದು ʼಈ ಗಣಿತ ಮೇಸ್ಟ್ರಾಗೋಕ ಹೋದ ಜನ್ಮದಾಗ ನಾ ಏನ್ ಪಾಪ ಮಾಡಿನೋ ಏನೋ.. ಓದಾಕರಾನೂ ಸತ್ಕೋಂತನಾ ಓದ್ತೀವಿ, ಮಾಸ್ತರ ಆಗಿಂದೇನು ಸಾಯ್ತೀವಿ.. ಎತ್ತಗೋ ಪಾಸಾದ್ರೆ ಸಾಕು ಅಂತ ಪಾಸಿಂಗ್ ಪ್ಯಾಕೇಜ್ ಹೇಳೋಕ್ ಹೋದ್ರ ಹುಡುಗ್ರು ಇದು ನಮಿಗೆ ಸಂಬಂಧಾನೇ ಇಲ್ಲ ಅನ್ನೋ ಹಂಗದಾವು. ಕೊನೀಗೆ ಎಸ್.ಎಲ್.ಸಿ ರಿಸಲ್ಟ್ ಬಂತೂ ಅಂದ್ರ ಈ ನಮ್ಮ ಗಣಿತದ್ ಮಂದಿ ಕೊನೀಗಿಂದ್ ಫಸ್ಟ ನಾವಾ ಅಂತಾವು ಥೂ… ಇವ್ನೌವ್ನʼ ಎಂದು ವಟಗುಟ್ಟುತ್ತಾ ಹುಸ್ ಎಂದು ತಮಗಾಗಿಯೇ ಕಾಯ್ದಿರಿಸಿದ ಕುರ್ಚಿಯ ಮೇಲೆ ಕುಳಿತು ತಲೆ ಮೇಲೆ ಕೈ ಹೊತ್ತುಕೊಳ್ಳುತ್ತಿದ್ದರು. ತಿಂಗಳಲ್ಲಿ ಎರಡು ಮೂರು ಬಾರಿ ಈ ಮಾತುಗಳನ್ನು ಕೇಳುತ್ತಿದ್ದ ಹಿಂದಿ ಶಿಕ್ಷಕರಾದ ಕಳಕಪ್ಪ ಇಂಗ್ಲೀಷ್ ಶಿಕ್ಷಕರಾದ ಶ್ರೀರಾಮನವರಂತೂ ಹಿಂದೆಯೇ ತಿರುಗೇಟು ಕೊಡುತ್ತಿದ್ದರು. ‘ರಮೇಶ ಸರ್ ಈ ಮಾತು ವಾಪಾಸ್ ತಗೊಳ್ರಿ ಒಂಬತ್ತನೇ ತರಗತಿಗೆ ಈ ಸಾಲಿಗೆ ಬಂದಾಗ ಭಾಳ ಹುಡುಗ್ರಿಗೆ ಅ ಆ ಇ ಈ… abcd ಹೇಳಿಕೊಟ್ಟೇ ಕಲಸ್ತೀವಿ. ನೀವು ಎಲ್ಲಾ ನೋಡಿನೂ ಹಿಂಗಂತಿರಲ್ಲ ಇದು ಸರೀನಾ ʼ ಎನ್ನುತ್ತಿದ್ದರು.
ಹೀಗೆಯೇ ಒಮ್ಮೆ ರಮೇಶ ರಜೆ ಮೇಲಿದ್ದಾಗ ಹತ್ತನೇ ತರಗತಿ ಮಕ್ಕಳಲ್ಲಿ ಕನ್ನಡ ಸರಿಯಾಗಿ ಬಾರದ ಅಲ್ಪ ಸಂಖ್ಯಾತ ಸಮುದಾಯದ ಆಲಿಯಾ ತನ್ನ ಸ್ನೇಹಿತೆಯರೊಂದಿಗೆ ಒಳ ಬಂದಳು. ಕಳಕಪ್ಪನವರು ‘ಏ ಆಲಿಯಾ ಗಣಿತ ಪಿರಿಡ್ ನಾ ತಗೊಂತೀನಿ ನಡಿ.. ನಿಮ್ಮ ಗಣಿತ್ ಸರ್‌ದು ಎಲ್ಲಾ ಸಿಲಬಸ್ ಮುಗದಂಗ್ ಐತಿ, ಅದಕ್ ರಜಾ ಹಾಕ್ಯಾರ. ಅವರ್ ಪಿರಿಡ್ ತೊಗೊನೊದಲ್ಸ ಎಕ್ಸಟ್ರಾ ಪಿರಿಡ್‌ನೂ ತೊಗೊಂತಾರ. ಗಣಿತೇನು ಈ ವರ್ಷ ಎಲ್ರೂ ನೂರಕ್ಕ ನೂರಾʼ .. ‘ಏ ಬಿಡ್ರಿ ಸರ್ ಪಾಸಾದ್ರ ಸಾಕಾಗ್ಯಾದʼ ಎನ್ನುತ್ತಾ ಮತ್ತೆ ಮುಗ್ಧತೆಯಿಂದ ಕೇಳಿದಳು ‘ಸಾರ್ ರಮೇಶ್ ಸರ್ ಡಾಕ್ಟ್ರೂ ಓದಿದರಾ.ʼ ಎಂದಳು. ಕಳಕಪ್ಪನವರಿಗೆ ಅವಳ ಪ್ರಶ್ನೆ ಅಪೂರ್ಣವಾಗಿ ಅರ್ಥವಾಗಿರಬೇಕು. ‘ಇಲ್ಲವ್ವಾ ಅವರಿನ್ನೂ ಪಿ,ಎಚ್.ಡಿ ಮಾಡಿಲ್ಲ.ʼ ಅಂದರು. ಮುಂದೆ ಪ್ರಶ್ನೆ ಮಾಡುವ ಮನಸ್ಸಿಲ್ಲದ ಅವಳು ಬಂದ ದಾರಿಗೆ ಸುಂಕವಿಲ್ಲದಂತೆ ಕ್ಲಾಸಿನೊಳಕ್ಕೆ ಹೋದಳು. ಈ ಪ್ರಶ್ನೆಯ ಬಗ್ಗೆ ಕಳಕಪ್ಪನವರು ವಿಜ್ಞಾನ ಶಿಕ್ಷಕಿಯರಾದ ಶಿಲ್ಪಾ ಮೇಡಂ ಹತ್ತಿರ ಕೇಳಿದಾಗ ‘ಹೌದು ಸರ್ ನನಗೂ ಈ ಪ್ರಶ್ನೆ ಕೇಳಿದಳು ನಾನೂ ಅದನ್ನೇ ಹೇಳಿದೆʼ ಎಂದರು.
ಹೀಗೆಯೇ ಮರು ದಿನ ಮಧ್ಯಾಹ್ನ ಊಟ ಮಾಡಿ ಹರಟೆ ಹೊಡೆಯುತ್ತಾ ಎಲ್ಲರೂ ಕುಳಿತಿದ್ದರು. ಪ್ರಶ್ನೆ ಮತ್ತೊಮ್ಮೆ ಹರಿದು ಬಂತು. ರಮೇಶ್‌ರವರಿಗೆ ಆಶ್ಚರ್ಯ, ಕುತೂಹಲ ಎರಡೂ ಉಂಟಾಯಿತು. ‘ಆಲಿಯಾ ಹೀಗೇಕೆ ಕೇಳಿರಬಹುದುʼ ತಲೆ ಕೆರೆದುಕೊಳ್ಳುತ್ತಾ ಅಲ್ಲಿಯೇ ಹೋಗುತ್ತಿದ್ದ ಹತ್ತನೇ ತರಗತಿ ವಿದ್ಯಾರ್ಥಿನಿ ರತ್ನಾಳನ್ನು ಕರೆದು ಆಲಿಯಾಳನ್ನು ಕಳುಹಿಸುವಂತೆ ತಿಳಿಸಿದರು. ಆಲಿಯಾ ಬರುವುದೊಂದೇ ‘ಆಲಿಯಾ ರಮೇಶ್ ರವರು ನಿನ್ನೆ ಹಿಂದಿ ಸರ್‌ಗೂ ವಿಜ್ಞಾನ ಮೇಡಂಗೂ ನಾನು ಡಾಕ್ಟ್ರ ಓದ್ಯಾರೇನು ಅಂತ ಕೇಳ್ದಂತೇ ಹೌದಾʼ ಎಂದರು. ಅವಳು ಹೌದೆನ್ನುವಂತೆ ತಲೆ ಆಡಿಸಿದಳು. ‘ಹಂಗ್ಯಾಕ ಹೇಳ್ದಿʼ ಎಂದು ಕೇಳಿದ್ದೇ… ‘ಇಲ್ಲ ಸರ್ ನಿಮ್ಮ ಅಕ್ಷರಗಳು ನನಗೆ ಅರ್ಥನೇ ಆಗ್ವಲ್ವು, ಡಾಕ್ಟ್ರು ಹಂಗೇ ಬರೀತಾರಂತೆ ಅದ್ಕೇ ಕೇಳಿದೆʼ ರಮೇಶರಿಗೆ ಒಮ್ಮೆಲೇ ಶಾಕ್ ಹೊಡೆದಂತಾಗಿ ‘ನನ್ನ ಅಕ್ಷರಗಳು ಅರ್ಥ ಆಗೋಲ್ವಾ.. ʼ ‘ನೀವು ಜೋರಾಗಿ ಬರೀಬೇಕಾದ್ರೆ ಕನ್ನಡ ಅಕ್ಷರಗಳು ಒಂದಕ್ಕೊಂಡು ಅಂಟಿಕೊಂಡು ಬಿಡ್ತಾವ್ ಸರ್ ಇಂಗ್ಲೀಷ್ನಂಗ ಅದ್ಕೆ ನಂಗೆ ಅರ್ಥ ಆಗಲ್ಲʼ.
ವಿಜ್ಞಾನ ಗಣಿತಕ್ಕಿಂತ ಕಷ್ಟ ಈಗೀಗ ಸರ…
ಬರೆಹ ಚೆಂದವಿದೆ
ಧನ್ಯವಾದಗಳು ಸರ್ ತಮ್ಮ ಪ್ರತಿಕ್ರಿಯೆಗೆ