ಖಂಜೀರ ಪೂರ್ಣಪ್ರಮಾಣದಲ್ಲಿ ಯಕ್ಷಗಾನ ಹಿಮ್ಮೇಳದ ಭಾಗವಾಗಿತ್ತು. ಭಾಗವತರ ಹಿಂದೆ ಒತ್ತು ಮದ್ದಳೆಗಾರರೋ ಅಥವಾ ಅಲ್ಪ ಸ್ವಲ್ಪ ತಾಳ ಜ್ಞಾನ ಇದ್ದವರು, ಖಂಜೀರವನ್ನು ನಿಂತು ನುಡಿಸುತ್ತಿದ್ದರು. ಹಿರಿಯ ಬಲಿಪ ನಾರಾಯಣ ಭಾಗವತರು ಮೇಳ ತಿರುಗಾಟದಲ್ಲಿ ಖಂಜೀರದ ನುಡಿಸುವಿಕೆಯೊಂದಿಗೆ ಭಾಗವತಿಕೆಯನ್ನು ಮಾಡಿದ್ದರು. ಖಂಜೀರದ ಬಳಕೆ ಕಾಲಕ್ರಮೇಣ ನಿಂತಿತು. ಕೆಲವಾರು ಸಲ ಖಂಜೀರ ಹಾಳಾಗಿ ಹೋದರೆ ಮತ್ತೆ ಸರಿಪಡಿಸದಿರುವುದೇ ಅದರ ಲುಪ್ತವಾಗುವಿಕೆಗೆ ಕಾರಣವಾಯ್ತು. ಹೊಸ ವಾದ್ಯಗಳು ಹಿಮ್ಮೇಳವನ್ನು ಸೇರಿಕೊಂಡ ಬಗ್ಗೆ
‘ಬಲಿಪ ಮಾರ್ಗ’ ಸರಣಿಯಲ್ಲಿ ಕೃಷ್ಣ ಪ್ರಕಾಶ್ ಉಳಿತ್ತಾಯ ಬರೆದಿದ್ದಾರೆ.
ರಂಗಸ್ಥಳದಲ್ಲಿ ಭಾಗವತ ಮತ್ತು ಮದ್ದಳೆವಾದಕರು ಅಕ್ಕಪಕ್ಕ ಕುಳಿತುಕೊಂಡು ನುಡಿಸುವದು ತೆಂಕುತಿಟ್ಟು ಯಕ್ಷಗಾನದ ಈಗಿನ ರಂಗಸ್ಥಳದ ಚಿತ್ರಣ. ಪ್ರಾಚೀನದಲ್ಲಿ ಅಂದರೆ ಸರಿಸುಮಾರು ನೂರು ವರುಷಗಳ ಕೆಳಗೆ ಈ ರೀತಿಯ ವ್ಯವಸ್ಥೆ ಇರಲಿಲ್ಲ. ಭಾಗವತ ಮತ್ತು ಮದ್ದಳೆಗಾರ ಚೆಂಡೆಯವನ ಜತೆಗೆ ನಿಂತೇ ಪದ ಹೇಳಬೇಕಿತ್ತು. ಭಾಗವತರು ಕುಳಿತು ಪದ್ಯ ಹೇಳಲು ಆರಂಭವಾದದ್ದೇ ಹಿರಿಯ ಬಲಿಪ ನಾರಾಯಣ ಭಾಗವತರ (ಅಜ್ಜ ಬಲಿಪರ) ಕಾಲದಿಂದ ಎಂದು ಕಿರಿಯ ಬಲಿಪ ನಾರಾಯಣ ಭಾಗವತರಿಗೆ ದಿವಂಗತ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರು ಹೇಳಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರ ಕಿರಿಯ ಸಮಕಾಲೀನರಾದ ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವರತೂ ಕೂಡ ತಮ್ಮ ಮೇಳದ ತಿರುಗಾಟದಲ್ಲಿ ಎರಡು ವರುಷಗಳ ಕಾಲ ನಿಂತೇ ಭಾಗವತಿಕೆ ಮಾಡಿದ್ದವರು. ಈ ಬದಲಾವಣೆ ನಡೆದದ್ದು ಯಾವ ವರುಷ ಎಂಬ ಮಾಹಿತಿ ಲಭ್ಯವಿಲ್ಲ. ಅಜ್ಜ ಬಲಿಪರಿಗೆ ಅನಾರೋಗ್ಯದ ಸಮಸ್ಯೆ ಇದ್ದಾಗ ಭಾಗವತಿಕೆ ಮಾಡಲು ಕರೆ ಬಂತು. ಆಗವರ, ‘ಕುಳಿತುಕೊಂಡು ಭಾಗವತಿಕೆ ಮಾಡಲು ವ್ಯವಸ್ಥೆ ಮಾಡುವುದಾದರೆ ಬರುವೆ’ ಎಂದು ಸಂಘಟಕರಿಗೆ ತಿಳಿಸಿದಾಗ ಅದಕ್ಕೆ ಅನುಕೂಲವನ್ನು ರಂಗಸ್ಥಳದಲ್ಲಿ ಮಾಡಿದರಂತೆ. ಹೀಗೆ ಮಾಡಿದ ವ್ಯವಸ್ಥೆ ಮುಂದಿನ ದಿನಗಳಲ್ಲಿ ತೆಂಕುತಿಟ್ಟು ಯಕ್ಷಗಾನ ಸಂದರ್ಭಕ್ಕೆ ಶಾಶ್ವತವಾಗಿ ನೆಲೆನಿಂತಿತಂತು. ತೆಂಕುತಿಟ್ಟು ಯಕ್ಷಗಾನದ ಭಾಗವತ ಮತ್ತು ಮದ್ದಳೆವಾದಕರಿಗೆ ಕುಳಿತುಕೊಳ್ಳುವ ವ್ಯವಸ್ಥೆ ಒದಗಿಬಂತು.
“ನಿಮ್ಮ ಅಜ್ಜನಿಂದಾಗಿ ನಮಗೆ ತುಂಬ ಉಪಕಾರವಾಯ್ತು. ಇಲ್ಲದಿದ್ದರೆ ಬೆಳಗಿನವರೆಗೆ ನಿಂತು ಪದ ಹೇಳುವುತು ತುಂಬಾ ದಣಿವಿನ ಕೆಲಸವಾಗುತ್ತಿತ್ತು” ಎಂದು ಪುತ್ತಿಗೆಯವರು ದೊಡ್ಡ ಬಲಿಪರ ಬಳಿ ಆಗಾಗ ಹೇಳುತ್ತಿದ್ದುದುಂಟು. ಈ ಒಂದು ಬದಲಾವಣೆಯಿಂದ ತೆಂಕುತಿಟ್ಟು ಯಕ್ಷಗಾನ ರಂಗಸ್ಥಳದ ಸ್ವರೂಪದಲ್ಲಿ ಮಹತ್ತರವಾದ ದೃಗ್ಗೋಚರ ಬದಲಾವಣೆಗಳಾದವು. ಇಡೀ ರಾತ್ರಿಯಲ್ಲಿ ಒಬ್ಬನೇ ಭಾಗವತ ಹಾಡಬೇಕಾದುದರಿಂದ ಸಹಜವಾಗಿ ಉಂಟಾಗುವ ದೈಹಿಕ ಶ್ರಮ, ಸುಸ್ತು ಇವೆಲ್ಲದರ ಪರಿಣಾಮ ಕಲಾಪ್ರಸ್ತುತಿಯ ಮೇಲೆ ಆಗುತ್ತಿತ್ತು. ದಣಿವು ಮನುಷ್ಯ ಸಹಜ ತಾನೇ. ಕುಳಿತುಕೊಳ್ಳುವ ಈ ಅನುಕೂಲದಿಂದಾಗಿ ಭಾಗವತ ಮತ್ತು ಮದ್ದಳೆವಾದಕ ಸಾವಧಾನದಿಂದ ಭಾವಪೂರ್ಣವಾಗಿ ಹಾಡಲು ಸಾಧ್ಯವಾಯಿತು.
ಹಿಂದಿನ ಕಾಲದಲ್ಲಿ ಮದ್ದಳೆ ನುಡಿಸುವವರು ಸೊಂಟಕ್ಕೆ ಮದ್ದಳೆಯನ್ನು ಬಿಗಿದು ನಿಂತು ನುಡಿಸುತ್ತಿದ್ದರು. ಅಜ್ಜ ಬಲಿಪ ನಾರಾಯಣ ಭಾಗವತರಿಂದಾಗಿ ಉಂಟಾದ ಈ ಸುಧಾರಣೆಯಿಂದ ನಿಂತು ಮದ್ದಳೆ ನುಡಿಸುವ ಈ ಕ್ರಮವೂ ದೂರವಾಗಿ ಮದ್ದಳೆವಾದಕರೂ ಕುಳಿತುಕೊಳ್ಳುವ ವ್ಯವಸ್ಥೆ ಬಂತು. ಕಥಕಳಿ ರಂಗ ಕಲೆಯಲ್ಲಿ ಸೊಂಟಕ್ಕೆ ಮದ್ದಳೆಯನ್ನು ಬಿಗಿದು ನುಡಿಸುವ ಕ್ರಮವನ್ನು ನಾವು ಈಗಲೂ ಕಾಣಬಹುದು. ಇತರ ಭಾರತೀಯ ರಂಗ ಸಂಪ್ರದಾಯದಲ್ಲೂ ಹಿಮ್ಮೇಳವು ನಿಂತೇ ಇರುವದು ರೂಢಿ. ಭಾಗವತನೊಂದಿಗೆ ಮದ್ದಳೆಯ ಸಾಂಗತ್ಯ ಸತಾಳ(ತಾಳ ಸಹಿತ) ಮತ್ತು ವಿತಾಳ(ತಾಳ ರಹಿತ) ಹಾಡಿಕೆಯ ಸಂದರ್ಭದಲ್ಲಿ ಅಗತ್ಯವೇ ಇದ್ದು ಮದ್ದಳೆ ರಹಿತ ಭಾಗವತಿಕೆ ಇಲ್ಲವೇ ಇಲ್ಲವಾದುದರಿಂದ ಚೆಂಡೆ ನುಡಿಸುವವನಿಗಿಂತಲೂ ಮದ್ದಳೆನುಡಿಸುವವನಿಗೆ ಕುಳಿತುಕೊಳ್ಳುವ ವ್ಯವಸ್ಥೆ ಬಂದದ್ದಿರಬಹುದು. ಕುಳಿತು ಹಾಡಲಾರಂಭಿಸಿದಂದಿನಿಂದ ಹಾಡಿಕೆಯಲ್ಲಿನ ನಯ-ನಾಜೂಕುತನ ಸೇರಿಕೊಂಡಿರಬಹುದು. ದೈಹಿಕ ಶ್ರಮಕ್ಕೆ ನಿಲುಗಡೆ ಸಿಕ್ಕಾಗ ಕಲಾಭಿವ್ಯಕ್ತಿಯಲ್ಲಿ ಉನ್ನತಿಯ ಮಾರ್ಗಕಾಣಿಸಿದೆ. ಹಾಗಾಗಿ ಈ ಸುಧಾರಣೆ ಕಲಾಭಿವ್ಯಕ್ತಿಯ ದೃಷ್ಟಿಯಿಂದ ಒಳ್ಳೆಯದೇ ಹೌದು. ಪ್ರೇಕ್ಷಕನಾಗಿ ರಂಗವನ್ನು ನೋಡುವಾಗಲೂ ಶಿಸ್ತನ್ನು ಕಾಣಬಹುದು. ಹಾಗಾಗಿ ಈ ರೂಪಾಂತರ ಮಹತ್ವದ್ದು.
ಆಗಿನ ಕಾಲಘಟ್ಟದಲ್ಲಿ ಆಟ ಮುಗಿದ ಕೂಡಲೇ ಮತ್ತಿನ ಬಿಡಾರ ಅಥವಾ ಮುಂದಿನ ಆಟ ನಡೆಯುವ ಜಾಗಕ್ಕೆ ಮೈಲುಗಟ್ಟಲೆ (ಸರಾಸರಿ ಹತ್ತರಿಂದ ಹದಿನೈದು ಮೈಲು) ನಡೆಯಬೇಕಿತ್ತು. ರಿಯಾದ ಆಹಾರವೂ ನಿದ್ದೆಯೂ ಇಲ್ಲದೆ ಮತ್ತೆ ರಾತ್ರಿಯಿಂದ ಬೆಳಗಿನ ಜಾವದವರೆಗೂ ನಿಂತು ಪದ ಹೇಳುವ ಸಂಪ್ರದಾಯ ಶ್ರಮದಾಯಕವಾಗಿತ್ತು.
ತೆಂಕುತಿಟ್ಟು ಹಿಮ್ಮೇಳದಲ್ಲಿ ಚೆಂಡೆಯನ್ನು ಈಗಲೂ ನಿಂತೇ ನುಡಿಸುವದು ರೂಢಿಯಲ್ಲಿದೆ. ನಿಂತು ಚೆಂಡೆ ಎಡಭುಜಕ್ಕೇರಿಸಿದಾಗ ಎಡಗಾಲಿನ ಮಣಿಗಂಟಿಗಿಂತ ತುಸು ಮೇಲೆ ಅಥವಾ ಕೈಗಳಲ್ಲಿ ಚೆಂಡೆಯ ಕೆಳಭಾಗದ ಅಟ್ಟೆಯು ಬಲಮಗ್ಗುಲಿಗೆ ಬಾಗಿ ನಿಂತಾಗ ಚೆಂಡೆಯ ಕೋಲನ್ನು ಹಿಡಿದ ಕೈಗಳಿಗೆ ಅನಾಯಾಸ ಸ್ವಚ್ಛಂದ ಚಲನೆಗೆ ಅವಕಾಶಸಿಗುವುದು. ಈಗಲೂ ಚೆಂಡೆ ನುಡಿಸುವಾಗ ಚೆಂಡೆವಾದಕರು ನಿಂತು ನುಡಿಸಬಯಸುತ್ತಾರೆ. ಚೆಂಡೆಯ ಅವಶ್ಯಕತೆ ರಂಗಸ್ಥಳದಲ್ಲಿ ಇರುತ್ತಿದ್ದುದು ಪ್ರಯಾಣದ ದೃಶ್ಯ, ಯುದ್ಧ, ಏರು ಪದ್ಯಗಳಂಥ ಸಂದರ್ಭದಲ್ಲಿ ಮಾತ್ರ. ಹೀಗಾಗಿ ಪ್ರಸಂಗದ ಮಧ್ಯದಲ್ಲಿ ಚೆಂಡೆಯವರಿಗೆ ವಿಶ್ರಾಂತಿ ದೊರಕುತ್ತಿತ್ತು. ಆದರೆ ತಾಳಮದ್ದಳೆಯ ಸಂದರ್ಭ (ವೇಷ, ನೃತ್ಯ, ನೃತ್ತ ಇಲ್ಲದ ಕೇವಲ ಅರ್ಥಗಾರಿಕೆ ಅಥವಾ ಮಾತುಗಾರಿಕೆ ಮಾತ್ರವಿರುವ ಯಕ್ಷಗಾನದ ಮತ್ತೊಂದು ರೂಪ) ಚೆಂಡೆಯನ್ನು ವಾದಕರು ತಮ್ಮ ಕಾಲಿಗೆ ಆನಿಸಿ ನೆಲದ ಮೇಲೆ ಕುಳಿತು ನುಡಿಸುವ ಕ್ರಮ ಇದೆ. ಕಿರಿಯ ಬಲಿಪರು ತಮ್ಮ ಮೇಳದ ವ್ಯವಸಾಯ ಮಾಡುವಾಗ ಕುಳಿತೇ ಭಾಗವತಿಕೆ ಮಾಡುವ ಕ್ರಮ ಸ್ಥಾಪಿತವಾಗಿತ್ತು. ಈಗಲೂ ಪೂರ್ವರಂಗದ ಸಂದರ್ಭ ದೇವರ ಕಿರೀಟ ರಂಗಸ್ಥಳಕ್ಕೆ ತರುವಾಗ ಭಾಗವತ ಮದ್ದಳೆವಾದಕ ನಿಂತು “ಗಜಮುಖದವಗೆ ಗಣಪಗೆ..” ಪದ್ಯಹೇಳುವುದು ವಾಡಿಕೆ.
ತೆಂಕು ತಿಟ್ಟು ಯಕ್ಷಗಾನದ ಹಿಮ್ಮೇಳದ ಭಾಗವಾಗಿ ಖಂಜೀರವನ್ನು ಬಳಸುವಿಕೆ.
ಕರ್ಣಾಟಕ ಶಾಸ್ತ್ರಿಯ ಸಂಗೀತದ ಅವನದ್ಧವಾದ್ಯದಲ್ಲಿ ಖಂಜೀರವು ಮುಖ್ಯವಾದವು. ಇದು ಸಂಗೀತ ಪ್ರಪಂಚದಲ್ಲಿ ಅವಿಭಾಜ್ಯ ಅಂಗವಾಗಿದೆ. ಅದು ಕೊಡುವ ಧಿಂಕಾರ, ಗುಮ್ಕಿಗಳು ಮೃದಂಗದ ನುಡಿತಕ್ಕೆ ಪೂರಕವಾಗಿ ನಾದಗುಂಫನವನ್ನು ಪುಷ್ಠಿಗೊಳಿಸುತ್ತಿದೆ. ಇದು ಯಕ್ಷಗಾನದ ಅಂಗವಾಗಿತ್ತು ಎಂಬುದು ಹೊಸ ವಿಷಯ. ಅನೇಕ ಸಾಧ್ಯತೆಯನ್ನು ಈ ಕಾಲದಲ್ಲಿ ಹುಟ್ಟುಹಾಕಬಹುದಾದಂಥ ಸಂಗತಿಯನ್ನು ಗರ್ಭದಲ್ಲಿರಿಸಿಕೊಂಡದ್ದು. ಕಿರಿಯ ಬಲಿಪ ನಾರಾಯಣ ಭಾಗವತರು ಈ ವಿಚಾರವನ್ನು ತಮ್ಮ ಹಳೆಯ ನೆನಪಿನೊಡನೆ ಹೇಳುತ್ತಾರೆ.
ಹಿಂದೆ ಯಕ್ಷಗಾನದಲ್ಲಿ ಖಂಜೀರವನ್ನು ಬಳಸುತ್ತಿದ್ದರು. ಚೆಂಡೆ ಮದ್ದಳೆ ಪೆಟ್ಟಿಗೆಯ ಜತೆಗೇ ಖಂಜೀರವು ಇರುತ್ತಿತ್ತು. ಖಂಜೀರವನ್ನು ಮದ್ದಳೆಯ ಜತೆಗೆ ನುಡಿಸುವ ಕ್ರಮ ಇತ್ತು. ಆದರೆ ಚೆಂಡೆಯ ಜತೆಗೆ ನುಡಿಸುವ ಕ್ರಮ ಇರಲಿಲ್ಲ. ಅಂದರೆ ಪದ್ಯಕ್ಕೆ ಬರಿಯ ಮದ್ದಲೆ ಮಾತ್ರವೇ ಇದ್ದಾಗ ಅಂದರೆ ನಿಧಾನ ಪದ್ಯಗಳನ್ನು ಹಾಡುವಾಗ ಮದ್ದಳೆಗೆ ಪೂರಕವಾಗಿ ಖಂಜೀರವನ್ನು ನುಡಿಸುವ ಕ್ರಮ ಇತ್ತು. ಇದು ಮದ್ದಳೆಗೆ ಅದರ ಎಡ ಭಾಗದ ನಾದಕ್ಕೆ ಪುಷ್ಠಿಕೊಡುತ್ತಿತ್ತು. ಮದ್ದಳೆಯ ಹಿಂಭಾಗದಲ್ಲಿ ನಿಂತುಕೊಂಡು ನುಡಿಸುತ್ತಿದ್ದರು. ಬಲಿಪ ನಾರಾಯಣ ಭಾಗವತರೂ ಖಂಜೀರದ ನುಡಿತಕ್ಕೆ ಭಾಗವತಿಕೆ ಮಾಡಿದ್ದಾರೆ. ಅಜ್ಜ ಬಲಿಪ ನಾರಾಯಣ ಭಾಗವತರೂ ಮತ್ತು ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರು ಮೇಳದ ವ್ಯವಸಾಯದಲ್ಲಿ ಖಂಜೀರದ ನಾದದ ಜತೆಗೆ ಭಾಗವತಿಕೆಯನ್ನು ಮಾಡಿದ್ದರು.
ಖಂಜೀರ ಪೂರ್ಣಪ್ರಮಾಣದಲ್ಲಿ ಹಿಮ್ಮೇಳದ ಭಾಗವಾಗಿತ್ತು. ಭಾಗವತರು ಹಿಂದೆ ಒತ್ತು ಮದ್ದಳೆಗಾರರೋ ಅಥವಾ ಅಲ್ಪ ಸ್ವಲ್ಪ ತಾಳ ಜ್ಞಾನ ಇದ್ದವರು, ಅಂದರೆ ವೇಷದವರೂ ಆದೀತು, ಖಂಜೀರವನ್ನು ನಿಂತು ನುಡಿಸುತ್ತಿದ್ದರು. ಬಲಿಪ ನಾರಾಯಣ ಭಾಗವತರ ಮೇಳ ತಿರುಗಾಟದಲ್ಲಿ ಖಂಜೀರದ ನುಡಿಸುವಿಕೆಯೊಂದಿಗೆ ಭಾಗವತಿಕೆಯನ್ನು ಮಾಡಿದ್ದರು. ಆದರೆ ಖಂಜೀರದ ಬಳಕೆ ಕಾಲಕ್ರಮೇಣ ನಿಂತಿತು. ಕೆಲವಾರು ಸಲ ಖಂಜೀರ ಹಾಳಾಗಿ ಹೋದರೆ ಮತ್ತೆ ಸರಿಪಡಿಸದಿರುವುದೇ ಅದರ ಲುಪ್ತವಾಗುವಿಕೆಗೆ ಕಾರಣವಾಯ್ತು.
ಹಿಂದೆ ಯಕ್ಷಗಾನದಲ್ಲಿ ಖಂಜೀರವನ್ನು ಬಳಸುತ್ತಿದ್ದರು. ಚೆಂಡೆ ಮದ್ದಳೆ ಪೆಟ್ಟಿಗೆಯ ಜತೆಗೇ ಖಂಜೀರವು ಇರುತ್ತಿತ್ತು. ಖಂಜೀರವನ್ನು ಮದ್ದಳೆಯ ಜತೆಗೆ ನುಡಿಸುವ ಕ್ರಮ ಇತ್ತು. ಆದರೆ ಚೆಂಡೆಯ ಜತೆಗೆ ನುಡಿಸುವ ಕ್ರಮ ಇರಲಿಲ್ಲ.
ಇದು ಮಹತ್ವದ ವಿಷಯ. ಖಂಜೀರವನ್ನು ಮತ್ತೆ ಹಿಮ್ಮೇಳದ ಭಾಗವನ್ನಾಗಿ ಮಾಡಿದರೂ ಅದು ಒಟ್ಟು ತೆಂಕುತಿಟ್ಟು ಹಿಮ್ಮೇಳದ ನಾದಕ್ಕೆ ಪೂರಕವಾಗಿ ಶ್ರೀಮಂತ ಧ್ವನಿಯನ್ನು ಒದಗಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಚೆಂಡೆ, ಚಕ್ರತಾಳ ಮತ್ತು ಖಂಜೀರವನ್ನು ನಿಂತೇ ನುಡಿಸುತ್ತಿದ್ದರು.
ಯಕ್ಷಗಾನಕ್ಕೆ ಈಗ ಖಂಜೀರವನ್ನು ತಂದರೂ ಅದು ಹಿಮ್ಮೇಳಕ್ಕೆ ಪೂರಕವಾಗಿ ಬಳಸಲ್ಪಡಬಹುದಾಗಿದೆ. ಅದರ ಸಾಧ್ಯತೆ ಮತ್ತಷ್ಟೂ ದೊರಕಬಹುದಾದದ್ದು ಈಗಿನ ಯಕ್ಷಗಾಯನ ಕಾರ್ಯಕ್ರಮದಲ್ಲಿ. ಅವು ದಿಟವಾಗಿ ಚೆಂಡೆ ಮದ್ದಳೆ ಮತ್ತು ಚಕ್ರತಾಳದೊಡನೆ ಬೆರೆತು ರಂಗ ಸೌಖ್ಯವನ್ನು ಒದಗಿಸಬಲ್ಲುದಾದ ಸಾಮರ್ಥ್ಯವನ್ನು ಪಡೆದಿದೆ. ಚಕ್ರತಾಳವನ್ನು ಸಂಗೀತಗಾರನೇ ನುಡಿಸುತ್ತಿದ್ದ. ಆತನಿಗೆ ರಂಗಜ್ಞಾನ ಬರುತ್ತಿದ್ದುದು ಚಕ್ರತಾಳ ನುಡಿಸುವ ಜತೆಗೆ ಭಾಗವತರು ಆಟ ಆಡಿಸುವುದನ್ನು ನೋಡಿಯೇ. ಆಗೆಲ್ಲ ರಂಗ ಶಿಕ್ಷಣವು ಅತ್ಯಂತ ಅನೌಪಚಾರಿಕವಾಗಿ ನಡೆಯುತ್ತಿತ್ತು. ನೃತ್ಯಾಭ್ಯಾಸವನ್ನು ನದಿ ಬದಿಯಲ್ಲಿ ಬಟ್ಟೆ ಒಗೆದು ಒಣಗಿಸಲು ಹಾಕುವಾಗ ಒಂದೆರಡು ಘಂಟೆಯಕಾಲ ಹಿರಿಯ ಕಲಾವಿದರು ಕಿರಿಯರಿಗೆ ಅಭ್ಯಾಸ ಮಾಡಿಸುತ್ತಿದ್ದರು. ಚೆಂಡೆ ಮದ್ದಳೆಯ ನುಡಿಸಾಣಿಕೆಯ ಅಭ್ಯಾಸವೂ ಹೀಗೆಯೇ ನಡೆಯುತ್ತಿದುದು.
ಶ್ರುತಿ ಮತ್ತು ಮದ್ದಳೆಯ ಆಕಾರ
ಅಜ್ಜ ಬಲಿಪರು ಭಾಗವತಿಕೆ ಮಾಡುತ್ತಿದ್ದ ಸಂದರ್ಭದಲ್ಲಿ ಬಳಸುತ್ತಿದ್ದ ಶ್ರುತಿ ಸಾಮಾನ್ಯವಾಗಿ ಬಿಳಿ ನಾಲ್ಕು. ಸಂಗೀತಗಾರ (ಪೂರ್ವರಂಗದ ಹಾಡುಗಾರ) ಬಿಳಿ ಮೂರು ಶ್ರುತಿ ಬಳಸುತ್ತಿದ್ದರು. ಬಿಳಿ ನಾಲ್ಕು ಅಂದರೆ ಈಗಿನ ಇಲೆಕ್ಟ್ರೋನಿಕ್ ಶ್ರುತಿ ಪೆಟ್ಟಿಗೆಯ ಎಫ್. ಬಿಳಿ ಮೂರು ಅಂದರೆ ‘ಇ’. ಸಂಗೀತಗಾರ ಕಪ್ಪು ಎರಡು ಶ್ರುತಿ ಬಳಸಿದರೆ ಭಾಗವತರು ಅದರ ಮೇಲಿನ ಶ್ರುತಿಯಾದ ಬಿಳಿ ಮೂರು; ಸಂಗೀತಗಾರ ಬಿಳಿ ಮೂರನ್ನು ಬಳಸಿದರೆ ಭಾಗವತ ಬಿಳಿ ನಾಲ್ಕನ್ನು ಬಳಸಿ ಹಾಡುತ್ತಿದ್ದುದು ಹಿಂದೆ ಇದ್ದ ಕ್ರಮ. ಹಿರಿಯ ಬಲಿಪ ನಾರಾಯಣ ಭಾಗವತರು (ಅಜ್ಜ) ಸಾಮಾನ್ಯವಾಗಿ ಬಿಳಿ ನಾಲ್ಕರ ಶ್ರುತಿಯನ್ನೇ ಬಳಸುತ್ತಿದ್ದರು. ಅದಕ್ಕಿಂತ ಮೇಲಿನ ಶ್ರುತಿಯಲ್ಲಿ ಹಾಡಲು ಸಾಮರ್ಥ್ಯ ಇದ್ದರೂ ಬಳಸುತ್ತಿರಲಿಲ್ಲ. ಹಾಗೆಂದು ಆಗ ಸಾಮಾನ್ಯವಾಗಿರುತ್ತಿದ್ದ ಜೋಡಾಟದ ಸಂದರ್ಭ ಕಪ್ಪು ನಾಲ್ಕರ ಶ್ರುತಿಯಲ್ಲೂ ಹಾಡುತ್ತಾ ಇದ್ದುದು ಇದೆ. ಆದರೆ ಅದಕ್ಕೆ ಅಷ್ಟು ಉತ್ತೇಜನ ಕೊಡುತ್ತಾ ಇರಲಿಲ್ಲ. ಯಾರಾದರು ಕಪ್ಪು ಮೂರರ ಶ್ರುತಿ ಇಟ್ಟರೆ ಅದನ್ನು ಇಳಿಸಲಿಕೆ ಹೇಳುತ್ತಿದ್ದರು. ಚೆಂಡೆ ಬೇಡ ಬರೇ ಮದ್ದಳೆ ಸಾಕು ಎಂದು ಹೇಳುತ್ತಿದ್ದರು.
ಮದ್ದಳೆಯ ಗಾತ್ರವೂ ದೊಡ್ಡದೇ ಇರುತ್ತಿತ್ತು. ಈಗಿನದ್ದು ಆಗಿನದಕ್ಕೆ ಹೋಲಿಸಿದರೆ ಚಿಕ್ಕದೇ. ಅದರ ಗಾತ್ರಕ್ಕೆ ಅನುಗುಣವಾಗಿ ಅದರ ನಾದತರಂಗಿತತೆಯೂ ಹೆಚ್ಚೇ ಇತ್ತು. ಈಗಣದ ಮದ್ದಳೆಗಿಂತ ಗಾತ್ರದಲ್ಲಿ ದೊಡ್ಡದಿತ್ತು.
ಶ್ರುತಿ-ಹಾರ್ಮೋನಿಯಂ-ಶ್ರುತಿಪೆಟ್ಟಿಗೆ-ಸೋರೆ ಬುರುಡೆ ಇತ್ಯಾದಿ..
ಹಿಂದೆ ಭಾಗವತರು ಹಿಮ್ಮೇಳದವರು ಶ್ರುತಿಗೆ ಆಲಂಬನವಾಗಿರುತ್ತಿದುದು ಸೋರೆ ಬುರುಡೆ/ಪುಂಗಿ, ಶ್ರುತಿಪೆಟ್ಟಿಗೆ ಮತ್ತೆ ಹಾರ್ಮೋನಿಯಂ. ತದನಂತರ ಬಂದದ್ದು ಇಲೆಕ್ಟ್ರಾನಿಕ್ ಶ್ರುತಿಪೆಟ್ಟಿಗೆ. ಬಲಿಪ ನಾರಾಯಣ ಭಾಗವತರಿಗೆ ಇವು ನಾಲ್ಕರಲ್ಲೂ ಭಾಗವತಿಕೆ ಮಾಡಿ ಅನುಭವವಿತ್ತು. ಹಾರ್ಮೋನಿಯಂ ಬಳಕೆ ಅಪರೂಪವಾಗಿರುತ್ತಿತ್ತು. ಶ್ರೀಮಂತರ ಮನೆಗಳಲ್ಲಿ ಅದರಲ್ಲೂ ಸಂಗೀತ ವಾತಾವರಣದ ಮನೆಗಳಲ್ಲಿ ಮಾತ್ರವೇ ಹಾರ್ಮೋನಿಯಂ ಇರುತ್ತಿತ್ತು. ಉದಾಹರಣೆಗೆ ಕೂಡ್ಲು ಸುಬ್ರಾಯ ಶಾನುಭಾಗರ ಮನೆ ಇತ್ಯಾದಿ. ಹೀಗೆ ಇರುತ್ತಿದ್ದ ಹಾರ್ಮೋನಿಯಂಗಳಲ್ಲಿ ಒಂದನ್ನು ಮೇಳಕ್ಕೆ ಕೊಡುತ್ತಿದ್ದರು. ಇತರ ಮೇಳಗಳಲ್ಲಿ ಹಾರ್ಮೋನಿಯಂ ಇರಲಿಲ್ಲ, ಶ್ರುತಿ ಪೆಟ್ಟಿಗೆ ಮಾತ್ರವೇ ಇರುತ್ತಿತ್ತು. ಶ್ರುತಿ ಪೆಟ್ಟಿಗೆ ಗಾತ್ರದಲ್ಲೂ ಸಣ್ಣದು. ಮತ್ತು ಶ್ರುತಿ ಪೆಟ್ಟಿಗೆಯಲ್ಲಿ ಕೆಲವೇ ಶ್ರುತಿ-ಮನೆಗಳು ಇರುತ್ತಿತ್ತಂತೆ. ಇದಕ್ಕೇ ಚೆಂಡೆ ಮದ್ದಳೆ ಶ್ರುತಿ ಮಾಡಿ ಹಾಡುವ ಕ್ರಮ ಇತ್ತು. ಬಲಿಪ ನಾರಾಯಣ ಭಾಗವತರಿಗೆ ಸೋರೆಬುರುಡೆ ಅಥವಾ ಪುಂಗಿಯ ಶ್ರುತಿಯೇ ಆಧಾರವಾಗಿರುತ್ತಿತ್ತು. ಬಲಿಪ ನಾರಾಯಣ ಭಾಗವತರು ಪುಂಗಿ ನಾದಕ್ಕೆ ಭಾಗವತಿಕೆ ಮಾಡಿದ್ದಿಲ್ಲ. ಆದರೆ ಬಿಡುವಿನ ವೇಳೆಯಲ್ಲಿ ಆ ರೀತಿ ಹಾಡಿ ಅದರ ಅನುಭವವಿದೆ. ಆದರೆ, ಪುತ್ತಿಗೆ ರಾಮಕೃಷ್ಣ ಜೋಯಿಸ ಭಾಗವತರು ಒಂದೆರಡು ವರುಷಗಳ ಮೇಳದ ತಿರುಗಾಟವನ್ನು ಪುಂಗಿಯ ಶ್ರುತಿಗೆ ಭಾಗವತಿಕೆ ಮಾಡಿದ್ದಾರೆ.
ಪುಂಗಿಯನ್ನು ಹಿಡಿಯಲೂ ಒಂದು ಕ್ರಮವಿದೆ. ಬಲಿಪ ನಾರಾಯಣ ಭಾಗವತರಿಗೆ ಪುತ್ತಿಗೆ ರಾಮಕೃಷ್ಣ ಜೋಯಿಸರು ಹೇಳುವಂತೆ ಪುಂಗಿಯ ತುದಿಯ ಅಂಚು ಭಾಗವತರ ಬಲ ಬೆನ್ನಿನ ಅಂಚಿಗೆ ತಾಗುತ್ತಿರಬೇಕಿತ್ತಂತೆ. ಭಾಗವತರು ಪದ್ಯ ಆರಂಭಗೊಳಿಸುವ ಸೂಚನೆಗೆ ಜಾಗಟೆಯ ಕೊಲಿಂದ ಪುಂಗಿಯ ತುದಿಗೆ ಮೆಲ್ಲನೆ ತಾಡಿಸಬೇಕು. ಇದು ಪುಂಗಿಯೂದುವವನಿಗೆ ಸೂಚನೆ. ಹೀಗೆ ಪುಂಗಿಯನ್ನು ಹಿಡಿಯದಿದ್ದರೆ ಪುಂಗಿಯೂದುವವ ನಿದ್ದೆ ಮಾಡಿಬಿಡುತ್ತಿದ್ದ. ಪುಂಗಿಯವನ ನಿದ್ದೆಯನ್ನು ಹೋಗಲಾಡಿಸಲು ಈ ರೀತಿಯ ಉಪಾಯ ಮಾಡುತ್ತಿದ್ದರು. ಹೀಗೆ ಭಾಗವತರ ಬೆನ್ನಿನ ಅಂಚಿಗೆ ಪುಂಗಿಯ ತುದಿ ಸಿಗದಿದ್ದರೆ ಪುಂಗಿಯೂದುವವನಿಗೆ ಪದ ಆರಂಭದ ಸೂಚನೆ ಆತನಿಗೆ ಸಿಗುತ್ತಿರಲಿಲ್ಲ. ಪುಂಗಿಯ ರಂಧ್ರಗಳಿಗೆ ಮೇಣವನ್ನು ಗೊತ್ತಾಗದ ರೀತಿಯಲ್ಲಿ ಬಳಿಯುವುದರ ಮೂಲಕ ಶ್ರುತಿಯನ್ನು ಹೆಚ್ಚು ಕಡಿಮೆ ಮಾಡುತ್ತಿದ್ದ ಕ್ರಮವಿತ್ತು. ಮುಂದೆ ಪುಂಗಿಯ ಉಪಯೋಗ ಲುಪ್ತವಾಗಿ ಶ್ರುತಿಪೆಟ್ಟಿಗೆ ಬಂದು; ಅದೂ ಹೋಗಿ, ಈಗ ಇಲೆಕ್ಟ್ರೋನಿಕ್ ಶ್ರುತಿಪೆಟ್ಟಿಗೆ ಬಂದಿದೆ. ಈಗ ಅದೂ ಹೋಗುವ ಸೂಚನೆ ಕಂಡು ಬರುತ್ತಿದೆ. ಅದರ ಜಾಗವನ್ನು ಮೊಬೈಲ್ ಆಪ್ ತುಂಬತೊಡಗಿದೆ.
ಮಂಗಳೂರಿನ ಪೆರ್ಮಂಕಿಯವರಾದ ಕೃಷ್ಣಪ್ರಕಾಶ ಉಳಿತ್ತಾಯ ಉದ್ಯೋಗ ಕರ್ಣಾಟಕ ಬ್ಯಾಂಕ್ ಪ್ರಬಂಧಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ‘ಅಗರಿ ಮಾರ್ಗ’ ಮತ್ತು ‘ಸುಘಾತ’ ಅವರ ಪ್ರಕಟಿತ ಕೃತಿಗಳು. ಯಕ್ಷಗಾನ ಹಿಮ್ಮೇಳ ಚೆಂಡೆ ಮದ್ದಳೆ, ಯಕ್ಷಗಾನ ನಾಟ್ಯಾಭ್ಯಾಸ, ಮತ್ತು ಮೃದಂಗವಾದನದಲ್ಲಿ ಆಸಕ್ತಿ ಹೊಂದಿದ್ದಾರೆ.