ಅವರಿಗೆ ಸ್ವಂತ ಕಾರು ಇರಲಿಲ್ಲ. ಅವರ ಮಕ್ಕಳು ಸರ್ಕಾರಿ ಕಾರಿನಲ್ಲಿ ಎಂದೂ ಶಾಲೆಗೆ ಹೋಗಲಿಲ್ಲ. ನಾನು ಸೇರಿದ ಒಂದು ವರ್ಷದಲ್ಲಿ ಅವರು ಒಂದು ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರು ಕೊಂಡರು. ಆಗ ಅವರ ಮನೆಮಂದಿಯೆಲ್ಲ ಸಂಭ್ರಮಪಟ್ಟಿದ್ದು ಇಂದಿಗೂ ನೆನಪಿದೆ. ಅನೇಕ ವರ್ಷಗಳಿಂದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಅವರು ಮೊದಲ ಬಾರಿಗೆ ಕೊಂಡದ್ದು ಒಂದು ಹಳೆಯ ಕಾರನ್ನು! ಮುಂದೆ ಪ್ರಕಾಶ ನಗರದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಬ್ಯಾಂಕೊಂದರಲ್ಲಿ 80 ಸಾವಿರ ರೂಪಾಯಿ ಸಾಲ ಮಾಡಿದ್ದು ಮತ್ತು ಈ ಹಳೆ ಕಾರನ್ನು ಮಾರಿ ಮನೆಗೆ ಹಾಕಿದ್ದು ನೆನಪಾಗುತ್ತಿದೆ..
ರಂಜಾನ್ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 71ನೇ ಕಂತು ನಿಮ್ಮ ಓದಿಗೆ
“ಮಡಕೆಯ ಮಾಡುವರೆ ಮಣ್ಣೇ ಮೊದಲು” ಎಂದು ಬಸವಣ್ಣನವರು ಹೇಳಿದ್ದಾರೆ. ಜಾತ್ಯಾತೀತ ಮನೋಭಾವ, ಸರ್ವಧರ್ಮ ಸಮಭಾವ ಪ್ರಜ್ಞೆ, ಸಮಾಜವಾದ, ಸಮತಾವಾದ ಮುಂತಾದ ಆದರ್ಶಗಳಿಗೆ ಪ್ರಜಾಪ್ರಭುತ್ವವೇ ಮೂಲವಾಗಿರುತ್ತದೆ. ನಾವು ಪ್ರಜಾಪ್ರಭುತ್ವವಾದಿಗಳಾಗದೆ ಯಾವುದೇ ವಿಶ್ವಮಾನ್ಯವಾದ ಆದರ್ಶವನ್ನು ಸಾಧಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವವು ಮಾನವನ ವಿಕಾಸಕ್ಕೆ ಸಹಾಯಕವಾಗುವ ವೈರುಧ್ಯಗಳನ್ನು ಸ್ವಾಗತಿಸಿದರೆ, ಅನ್ಯಾಯಕ್ಕೆ ಕಾರಣವಾಗುವ ವೈರುಧ್ಯಗಳನ್ನು ವಿರೋಧಿಸುತ್ತದೆ. ಭಿನ್ನಾಭಿಪ್ರಾಯಗಳನ್ನು ಎದುರಿಸುವಲ್ಲಿ ಸಹನೆಯ ಮನಸ್ಸನ್ನು ಸೃಷ್ಟಿಸುತ್ತದೆ. ಅದು ವೈವಿಧ್ಯವನ್ನು ಉಳಿಸಿಕೊಳ್ಳುತ್ತದೆ ಮತ್ತು ಏಕತೆಯನ್ನು ಬಯಸುತ್ತದೆ. ಮಾನವ ಘನತೆಯನ್ನು ಎತ್ತಿ ಹಿಡಿಯುವುದು ಮತ್ತು ಸಕಲ ಜೀವಾತ್ಮರಿಗೆ ಲೇಸನೇ ಬಯಸುವುದು ಪ್ರಜಾಪ್ರಭುತ್ವದ ಗುಣಧರ್ಮವಾಗಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಸಮಾಜ ಮತ್ತು ಪ್ರಭುತ್ವ ಬೆಳೆದು ಬಂದ ಬಗೆಯನ್ನು ನೋಡಿದರೆ ಮನದೊಳಗೆ ವಿಷಾದದ ಛಾಯೆ ಮೂಡದೆ ಇರದು. ನಮ್ಮ ಜಡರೂಢಿಯ ಸಂಪ್ರದಾಯಗಳು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿವೆ. ಜಾತಿಗಳು ಪ್ರಜಾಪ್ರಭುತ್ವದ ಆಶಯಗಳಿಗೆ ಸವಾಲು ಎಸೆಯುತ್ತವೆ. ನಮ್ಮ ಜಾತಿಗಳು ನಮ್ಮ ಹುಟ್ಟಿನಿಂದ ನಿರ್ಧಾರವಾಗುತ್ತವೆ. ಹಿಂದೂ ಧರ್ಮದ ಪರಿಧಿಯೊಳಗೆ ಜನರು ತಮ್ಮನ್ನು ಈ ಜಾತಿ ಉಪಜಾತಿಗಳಿಂದ ಬೇರ್ಪಡಿಸಲು ಸಾಧ್ಯವಿಲ್ಲ. ನಮ್ಮ ಸಾಮಾಜಿಕ ಸ್ಥಾನಮಾನ ಮತ್ತು ಭವಿಷ್ಯವನ್ನು ನಿರ್ಧರಿಸುವಲ್ಲಿ ಈ ಜಾತಿಗಳು ಇಂದಿಗೂ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಿವೆ. ಅಸ್ಪೃಶ್ಯತಾ ಪ್ರಜ್ಞೆಯಂತೂ ಇನ್ನೂ ವಿಕಾರವಾಗಿದೆ. ಜಾತಿ ವ್ಯವಸ್ಥೆಯಲ್ಲಿ ಮಾತ್ರ ಈ ಅಸ್ಪೃಶ್ಯತೆ ಕಂಡುಬರುತ್ತದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಕರಿಯರಿಗೆ ಶಾಪವಾಗಿರುವ ವರ್ಣಭೇದ ನೀತಿಯಲ್ಲಿ ಕೂಡ ಅಸ್ಪೃಶ್ಯತೆ ಇಲ್ಲ! ಜಾತಿ ಮತ್ತು ಅಸ್ಪೃಶ್ಯತೆ ಭಾರತೀಯರ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಬೆಳವಣಿಗೆಯನ್ನೇ ಕುಂಠಿತಗೊಳಿಸಿವೆ.
ಇಂಥ ಸಮಾಜದಲ್ಲಿ ತಮ್ಮ ನೈತಿಕ ಶಕ್ತಿ, ಶಿಸ್ತು, ಸಂಯಮ, ಪ್ರಾಮಾಣಿಕತೆ, ಆತ್ಮ ವಿಶ್ವಾಸ ಮತ್ತು ಒಳ್ಳೆಯದನ್ನು ಮಾಡಬೇಕೆಂಬ ಬಯಕೆಯೊಂದಿಗೆ ಕಷ್ಟದ ದಾರಿಗಳನ್ನು ಸವೆಸಿ ಆದರ್ಶಪ್ರಾಯರಾಗಿ ನಿಂತವರು ಕೆ.ಎಚ್. ರಂಗನಾಥ ಅವರು. ಅವರಿಗೆ ಎಲ್ಲರೂ ಪ್ರೀತಿ ಗೌರವಗಳೊಂದಿಗೆ ‘ರಂಗನಾಥ ಸಾಹೇಬರು’ ಎಂದೇ ಕರೆಯುತ್ತಿದ್ದರು.
ಸಚಿವರಾಗಿದ್ದ ರಂಗನಾಥರನ್ನು ನಾನು ಮೊದಲು ಕಂಡಿದ್ದು 1975ರಲ್ಲಿ. ಹೊಸಪೇಟೆಯ ತುಂಗಭದ್ರಾ ಅಣೆಕಟ್ಟಿನ ವೈಕುಂಠ ಅತಿಥಿ ಗೃಹದಲ್ಲಿ. ಹೊಸಪೇಟೆಯಲ್ಲಿ ನಡೆದ ಕೆ.ಪಿ.ಸಿ.ಸಿ ಸಮಾವೇಶವೊಂದರಲ್ಲಿ ಭಾಗವಹಿಸಲು ಅವರು ಬಂದಿದ್ದರು. ಆಗ ಧಾರವಾಡದಲ್ಲಿ ಎಂ.ಎ. ವಿದ್ಯಾರ್ಥಿಯಾಗಿದ್ದ ನನ್ನನ್ನು ಮಹಾದೇವ ಹೊರಟ್ಟಿಯವರು ತಮ್ಮ ಇತರ ಗೆಳೆಯರ ಜೊತೆ ಹೊಸಪೇಟೆಗೆ ಕರೆದುಕೊಂಡು ಹೋಗಿದ್ದರು.
ಸಂಘಟನೆಯಲ್ಲಿ ನಿರತರಾಗಿರುತ್ತಿದ್ದ ಮಹಾದೇವ ಹೊರಟ್ಟಿ, ಜುಲ್ಫಿಕರ್ ಅಲಿ ಭುಟ್ಟೋ ಹಾಗೆ ಕಾಣುತ್ತಿದ್ದ ಬಿ.ಎ. ಮೊಹಿದೀನ್, ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದು ಜನಪ್ರಿಯರಾಗಿದ್ದ ರಮೇಶ್ ಕುಮಾರ್, ವೀರಣ್ಣ ಮತ್ತಿಕಟ್ಟಿ (ಕಟಗಿ), ಸುಳ್ಳದಮಠ, ಅಶೋಕ ಪಟ್ಟಣ, ಪ್ರಭಾಕರ, ಸೂರಿ ಮುಂತಾದವರಿಂದ ಕೂಡಿದ ಯುವವೃಂದ ಭಾರಿ ಸಂಖ್ಯೆಯಲ್ಲಿ ಅವರನ್ನು ಸುತ್ತುವರಿದಿರುತ್ತಿತ್ತು. ಇದಕ್ಕೂ ಹಿಂದೆ ಅವರು ಕೆ.ಪಿ.ಸಿ.ಸಿ. ಅಧ್ಯಕ್ಷರಾಗಿದ್ದಾಗ 1973ರ ವೇಳೆಗೆ ತಮ್ಮ ಆದರ್ಶಗಳಿಂದಾಗಿ ರಾಜ್ಯಾದ್ಯಂತ ಕಾಂಗ್ರೆಸ್ ಯುವಕರು ಮತ್ತು ಜನಸಮುದಾಯದ ಮಧ್ಯೆ ಎಷ್ಟೊಂದು ಜನಪ್ರಿಯರಾಗಿದ್ದರೆಂದರೆ ‘ಮುಂದಿನ ಮುಖ್ಯಮಂತ್ರಿ ಅವರೇ’ ಎಂದು ಜನ ಮಾತನಾಡುತ್ತಿದ್ದರು.
ತುರ್ತು ಪರಿಸ್ಥಿತಿಯ ದಿನಗಳಲ್ಲಿ ಅವರು ಸಹಕಾರ ಸಚಿವರಾಗಿದ್ದರು. ಸಹಕಾರ ಕ್ಷೇತ್ರವನ್ನು ಬಡವರ ಕ್ಷೇತ್ರವಾಗಿಸುವುದು ಅವರ ಮಹತ್ವಾಕಾಂಕ್ಷೆಯಾಗಿತ್ತು. ಸಮಾಜವಾದದ ಕನಸುಗಳನ್ನು ಇಂಥ ಪ್ರಯತ್ನಗಳ ಮೂಲಕ ನನಸಾಗಿಸಬೇಕೆಂಬುದು ಅವರ ಆಶಯವಾಗಿತ್ತು. ಚಿಲಿಯ ಅಧ್ಯಕ್ಷ ಅಲೆಂಡೆ ಅವರನ್ನು ಅಮೆರಿಕದ ಸಿಐಎ ಸಹಾಯದೊಂದಿಗೆ ಚಿಲಿಯ ಪ್ರತಿಗಾಮಿ ಶಕ್ತಿಗಳು ಕೊಲೆ ಮಾಡಿದ್ದವು. ಈ ಹಿನ್ನೆಲೆಯಲ್ಲಿ ಆ ತುರ್ತು ಪರಿಸ್ಥಿತಿ ಸಂದರ್ಭದಲ್ಲೇ ಹುಬ್ಬಳ್ಳಿಯ ಏ.ಕೆ. ಇಂಡಸ್ಟ್ರೀಸ್‌ನಲ್ಲಿ ಫ್ಯಾಸಿಸ್ಟ್ ವಿರೋಧಿ ಸಮ್ಮೇಳನವನ್ನು ಕಾಂಗ್ರೆಸ್ ನಾಯಕತ್ವದಲ್ಲಿ ಏರ್ಪಡಿಸಲಾಗಿತ್ತು. ರಂಗನಾಥ ಸಾಹೇಬರು ಮತ್ತು ಬಿ. ಸುಬ್ಬಯ್ಯಶೆಟ್ಟಿ ಅವರು ಈ ಸಂದರ್ಭದಲ್ಲಿ ಹೆಚ್ಚು ಪರಿಚಿತರಾದರು.
ನಾನು ಎಂ.ಎ. ಮುಗಿದ ಮೇಲೆ ಲೈಬ್ರರಿ ಸೈನ್ಸ್ ಪದವಿಗಾಗಿ ಅಭ್ಯಾಸ ಮುಂದುವರಿಸಿದೆ. ಆದರೆ ರಂಗಾನಾಥ ಸಾಹೇಬರು ಬೆಂಗಳೂರಿಗೆ ಕರೆಸಿಕೊಂಡು ನೌಕರಿ ಕೊಟ್ಟರು. 1976ನೇ ಆಗಸ್ಟ್ 16ರಂದು ಕರ್ನಾಟಕ ರಾಜ್ಯ ಕೃಷಿ ಮಾರಾಟ ಮಂಡಳಿಯ ಕೃಷಿಪೇಟೆ ಮಾಸಪತ್ರಿಕೆಯ ಉಪ ಸಂಪಾದಕನಾಗಿ ಸೇರಿದೆ. ಹೀಗಿದ್ದರು ನಮ್ಮ ಕೆ.ಎಚ್. ರಂಗನಾಥ ಸಾಹೇಬರು! (ಆರು ವರ್ಷಗಳ ಸೇವೆಯ ನಂತರ ಹೆಚ್ಚಿನ ಸಂಬಳದ ಈ ನೌಕರಿ ಬಿಟ್ಟು ಪ್ರಜಾವಾಣಿ ಸೇರಿದೆ! ನನ್ನ ಲೇಖನಿಯಿಂದ ಸಮಾಜಕ್ಕೆ ಹೆಚ್ಚಿನ ಸೇವೆ ಮಾಡಬಹುದು ಎಂಬ ಒಂದೇ ಭ್ರಮೆ ಈ ನಿರ್ಧಾರದ ಹಿಂದೆ ಇತ್ತು.)
ನನಗೆ ಬೆಂಗಳೂರು ಹೊಸದಾಗಿತ್ತು. ಸಾಹೇಬರ ನಿವಾಸವಾಗಿದ್ದ ಕ್ರೆಸೆಂಟ್ ಹೌಸ್‌ನ ಔಟ್ ಹೌಸ್‌ನಲ್ಲಿ ಉಳಿಯುವ ವ್ಯವಸ್ಥೆಯಾಗಿತ್ತು. ಸಾಹೇಬರು ಖರ್ಚಿಗೆ ನೂರು ರೂಪಾಯಿ ಕೊಟ್ಟರು. ಹೊಸ ಜೀವನ ಪ್ರಾರಂಭವಾಯಿತು. ಔಟ್ ಹೌಸ್ ತುಂಬ ಚೆನ್ನಾಗಿತ್ತು. ಮುಂದೆ ಅದು ವಿಜಾಪುರ ಮತ್ತು ಧಾರವಾಡದ ಗೆಳೆಯರಿಗೆ ಆಶ್ರಯ ತಾಣವಾಯಿತು. ನಾನಂತೂ ಕ್ರೆಸೆಂಟ್ ಹೌಸ್‌ನ ಭಾಗವಾಗಿಬಿಟ್ಟೆ.
ಆ ದಿನಗಳಲ್ಲಿ ಅನೇಕ ಯುವಕರು ಮತ್ತು ನಾಯಕರ ಪರಿಚಯವಾಯಿತು. ಆಗ ಎಡಪಂಥೀಯ ವಿಚಾರಧಾರೆಯವರನ್ನು ಕಂಡರೆ ಕಾಂಗ್ರೆಸ್‌ನವರು ಅಭಿಮಾನ ಪಡುತ್ತಿದ್ದರು. ಕಾಂಗ್ರೆಸ್‌ನಲ್ಲಿ ಆಗ ನಾಯಕ ಸ್ಥಾನಕ್ಕೆ ಏರುತ್ತಿದ್ದ ಸಂಜಯ ಗಾಂಧಿಗೆ ಎಡಪಂಥೀಯ ವಿಚಾರಧಾರೆಯ ಬಗ್ಗೆ ಗೌರವವಿದ್ದಿದ್ದರೆ ಭಾರತದ ಇತಿಹಾಸದ ಗತಿಯೇ ಬೇರೆಯಾಗುತ್ತಿತ್ತು.
ರಂಗನಾಥರು ಗಾಂಧಿಬಜಾರ್‌ನಲ್ಲಿ ಸೆಂಟರ್ ಫಾರ್ ಸೋಶಲಿಸ್ಟ್ ಸ್ಟಡೀಸ್ (ಸಿ.ಎಸ್.ಎಸ್.) ಎಂಬ ಸಮಾಜವಾದಿ ಕೇಂದ್ರವನ್ನು ಸ್ಥಾಪಿಸಿ ಯುವಜನರಿಗೆ ಸಮಾಜವಾದದ ಬಗ್ಗೆ ಹೆಚ್ಚಿನ ಅರಿವು ಮೂಡಿಸಲು ಯತ್ನಿಸಿದರು. ಅವರು ಸಿ.ಎಸ್.ಎಸ್. ಅಧ್ಯಕ್ಷರಾಗಿದ್ದರು. ಸಚಿವರಾಗಿದ್ದ ಬಿ. ಸುಬ್ಬಯ್ಯಶೆಟ್ಟಿ ಅವರು ಉಪಾಧ್ಯಕ್ಷರಾಗಿದ್ದರು. ಸೀತಾರಾಮರೆಡ್ಡಿ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನನ್ನನ್ನು ಕಾರ್ಯದರ್ಶಿಯನ್ನಾಗಿ ಮಾಡಲಾಯಿತು.
ಪ್ರಜಾಪ್ರಭುತ್ವ, ಸಮಾಜವಾದ, ಸಮತಾವಾದ, ಫ್ಯಾಸಿಸಂ, ಭೂ ಸುಧಾರಣೆ, ಮತೀಯವಾದ ಮತ್ತು ಸಂವಿಧಾನ ಕುರಿತು ವಿಚಾರ ಸಂಕಿರಣಗಳಾಗುತ್ತಿದ್ದವು. ಸ್ವರ್ಣಸಿಂಗ್‌ರಂಥ ರಾಷ್ಟ್ರೀಯ ನಾಯಕರೂ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದುಂಟು. ಪ್ರತಿಯೊಂದು ವಸ್ತುಗಳ ಸದುಪಯೋಗವಾಗಬೇಕು. ಯಾವುದೂ ಸರಳತೆಯನ್ನು ಮೀರಬಾರದು. ಮಿತವ್ಯಯಿಯಾಗಿರಬೇಕು. ಇದ್ದುದರಲ್ಲೇ ಸ್ವಾಭಿಮಾನದಿಂದ ಬದುಕುವ ಛಲ ಇರಬೇಕು. ಪ್ರತಿಯೊಂದರ ಬಗ್ಗೆ ತಿಳಿದುಕೊಳ್ಳುವ ಮನಸ್ಸಿರಬೇಕು. ಓದುವುದರಲ್ಲಿ ಆನಂದಪಡಬೇಕು. ಆಳವಾದ ಚಿಂತನೆಗಳೊಂದಿಗೆ ಸ್ಪಷ್ಟವಾದ ವಿಚಾರಗಳನ್ನು ವ್ಯಕ್ತಪಡಿಸಬೇಕು. ಬಡವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಸಹಾಯ ಮಾಡಿದ್ದನ್ನು ಪ್ರದರ್ಶಿಸಬಾರದು. ಉಪಕಾರ ಸ್ಮರಣೆಯ ಮನಸ್ಸಿರಬೇಕು. ಮನುಷ್ಯರನ್ನು ಗುಣದಿಂದ ಅಳೆಯಬೇಕು. ಕಡಿಮೆ ಮಾತನಾಡಿ ಹೆಚ್ಚು ಕೆಲಸ ಮಾಡಬೇಕು. ಹಪಾಹಪಿ ಮಾಡಬಾರದು. ಕಟ್ಟುನಿಟ್ಟಿನ ಬದುಕಿನಲ್ಲಿ ತೃಪ್ತಿ ಕಾಣಬೇಕು… ಮುಂತಾದವು ಅವರ ಚಿಂತನೆಯ ಮೌಲ್ಯಗಳಾಗಿವೆ. ಮುದ್ದೆ ಸಾರು ಅವರ ಪ್ರಿಯವಾದ ಆಹಾರವಾಗಿತ್ತು. ಬಹಳ ಸಲ ಅವರ ಜೊತೆ ಊಟ ಮಾಡಿದ್ದುಂಟು.
ಅವರಿಗೆ ಸ್ವಂತ ಕಾರು ಇರಲಿಲ್ಲ. ಅವರ ಮಕ್ಕಳು ಸರ್ಕಾರಿ ಕಾರಿನಲ್ಲಿ ಎಂದೂ ಶಾಲೆಗೆ ಹೋಗಲಿಲ್ಲ. ನಾನು ಸೇರಿದ ಒಂದು ವರ್ಷದಲ್ಲಿ ಅವರು ಒಂದು ಸೆಕೆಂಡ್ ಹ್ಯಾಂಡ್ ಅಂಬಾಸಿಡರ್ ಕಾರು ಕೊಂಡರು. ಆಗ ಅವರ ಮನೆಮಂದಿಯೆಲ್ಲ ಸಂಭ್ರಮಪಟ್ಟಿದ್ದು ಇಂದಿಗೂ ನೆನಪಿದೆ. ಅನೇಕ ವರ್ಷಗಳಿಂದ ಕ್ಯಾಬಿನೆಟ್ ದರ್ಜೆಯ ಸಚಿವರಾಗಿದ್ದ ಅವರು ಮೊದಲ ಬಾರಿಗೆ ಕೊಂಡದ್ದು ಒಂದು ಹಳೆಯ ಕಾರನ್ನು! ಮುಂದೆ ಪ್ರಕಾಶ ನಗರದಲ್ಲಿ ಮನೆ ಕಟ್ಟುವ ಸಂದರ್ಭದಲ್ಲಿ ಬ್ಯಾಂಕೊಂದರಲ್ಲಿ 80 ಸಾವಿರ ರೂಪಾಯಿ ಸಾಲ ಮಾಡಿದ್ದು ಮತ್ತು ಈ ಹಳೆ ಕಾರನ್ನು ಮಾರಿ ಮನೆಗೆ ಹಾಕಿದ್ದು ನೆನಪಾಗುತ್ತಿದೆ.
ಅಧಿಕಾರ ಶಾಶ್ವತ ಎಂದು ಅವರು ಎಂದೂ ಭಾವಿಸಿರಲಿಲ್ಲ. ಒಮ್ಮೆ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಹೋಗುವಾಗ ‘ಅಧಿಕಾರವೆಂಬುದು ನಾಯಿ ತಲೆಯ ಮೇಲಿನ ಬುತ್ತಿ ಇದ್ದಂತೆ. ತಲೆ ಜಾಡಿಸಿದರೆ ಬುತ್ತಿ ಕೆಳಗೆ’ ಎಂದಿದ್ದರು. ಕಾರು ಮಂಡ್ಯ ದಾಟುವಾಗ ಒಂದು ಘಟನೆ ನಡೆಯಿತು. ಮಂಡ್ಯದ ಜನ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ, ಯಾವುದೋ ಬೇಡಿಕೆ ಇಟ್ಟು ಚಳವಳಿ ನಡೆಸಿದ್ದರು. ಸರ್ಕಾರಿ ಕಾರು ಎಂದ ಕೂಡಲೆ ಅವರು ಇನ್ನೂ ಉದ್ವೇಗಕ್ಕೊಳಗಾಗಿ ಘೋಷಣೆ ಕೂಗುತ್ತ ಕಾರಿನ ಬಳಿ ಮುತ್ತಿಗೆ ಹಾಕುವವರ ಹಾಗೆ ಬಂದರು. ಇದು ನನಗೆ ಹೊಸ ಅನುಭವವಾಗಿತ್ತು. ಚಾಲಕ ಅನ್ವರ್ ಗಂಭೀರವಾಗಿ ಕುಳಿತಿದ್ದರು. ಸಾಹೇಬರು ಕಾರಿನ ಗಾಜನ್ನು ಇಳಿಸಿದರು. ಜನ ಕೈ ಮುಗಿದರು. ಸಾಹೇಬರೂ ಕೈ ಮುಗಿದರು. ಕಾರು ಹೊರಟಿತು. ‘ಸ್ವಾಮಿ ರಂಗನಾಥರಿಗೆ ಜಯವಾಗಲಿ’ ಎಂದು ಗುಂಪು ಜಯಕಾರ ಹಾಕಿತು. ಒಬ್ಬ ವ್ಯಕ್ತಿ ಅಂತಃಶಕ್ತಿಯಿಂದ ಯಾವ ಎತ್ತರಕ್ಕೆ ಏರಬಲ್ಲ ಎಂಬುದು ನನ್ನ ಅರಿವಿಗೆ ಬಂದಿತು.
ಮೈಸೂರಿನ ವೈದ್ಯಕೀಯ ಕಾಲೇಜಿನಲ್ಲಿ ಸಮಾರಂಭವಿತ್ತು. ‘ಜಲದರ್ಶಿನಿ’ಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆಯಾಗಿತ್ತು. ನಾನು ಮೊದಲ ಸಲ ಮೈಸೂರಿಗೆ ಬಂದಿದ್ದೆ. ಸಮಾರಂಭ, ಊಟ ಮುಗಿದರೂ ಜನ ಅವರ ಭೇಟಿಗೆ ಬರುತ್ತಲೇ ಇದ್ದರು. ಹೀಗಾಗಿ ಅವರನ್ನು ಭೇಟಿಯಾಗಲಿಕ್ಕಾಗಲಿಲ್ಲ. ರಾತ್ರಿ 11 ಗಂಟೆಗೆ ನನ್ನ ಕೋಣೆಯಲ್ಲಿ ಮಲಗುವ ಸಿದ್ಧತೆಯಲ್ಲಿದ್ದೆ. ಸಾಹೇಬರು ಕರೆ ಕಳುಹಿಸಿದರು. ಅಷ್ಟು ಹೊತ್ತಿಗೆ ಅವರ ಕೋಣೆ ಶಾಂತವಾಗಿತ್ತು. ಅವರ ಜೊತೆಗೆ ಬಾಯಿಗೆ ಬಂದದ್ದನ್ನೆಲ್ಲ ಮಾತನಾಡುವ ಹಾಗಿಲ್ಲವಾದ್ದರಿಂದ ಕೇಳಿದ್ದಕ್ಕೆ ಉತ್ತರಿಸುತ್ತ ನಿಂತಿದ್ದೆ. ಸಾಹಿತ್ಯದ ವಿಷಯ ಬಂದಿತು. ಪಂಪನ ‘ಮನುಷ್ಯ ಜಾತಿ ತಾನೊಂದೆ ವಲಂ’, ‘ಕುಲಂ ಕುಲಮಲ್ತು, ಛಲಂ ಕುಲಂ, ಬಲಂ ಕುಲಂ, ಅಭಿಮಾನಮೊಂದೆ ಕುಲಂ’.. .. ಹೀಗೆ ಏನೇನೋ ಗಳಪಿದೆ. ಖುಷಿಯಾಗಿ ನಕ್ಕರು.
ಅವರಿಗೆ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ. ಓದುವುದು ಅವರಿಗೆ ಬಹಳ ಪ್ರಿಯವಾದ ಅಭ್ಯಾಸವಾಗಿತ್ತು. ಹಚ್ಚ ಹಸುರಾದ ಪ್ರಶಾಂತ ಸ್ಥಳವೊಂದರ ಹೆಬ್ಬಂಡೆ ಮೇಲಿನ ಪುಟ್ಟ ಮನೆಯಲ್ಲಿ ಪುಸ್ತಕಗಳ ಜೊತೆ ಇರುವುದು ಅವರ ಮಹದಾಶೆಯಾಗಿತ್ತು. ಕೆ.ವಿ. ಅಯ್ಯರ್ ಅವರ ‘ಶಾಂತಲಾ’ ಮತ್ತು ನಿರಂಜನರ ‘ಚಿರಸ್ಮರಣೆ’ ಅವರ ಪ್ರಿಯವಾದ ಪುಸ್ತಕಗಳ ಸಾಲಿಗೆ ಸೇರಿದ್ದವು. (ಅವರ ಕೊನೆಯ ವರ್ಷಗಳಲ್ಲಿ ಒಂದು ದಿನ ‘ಉಚಲ್ಯಾ’ ಒಯ್ದು ಕೊಟ್ಟಿದ್ದೆ. ಮತ್ತೊಮ್ಮೆ ಭೇಟಿಯಾದಾಗ ಆ ಜನಾಂಗದ ಹೃದಯಸ್ಪರ್ಶಿ ಬದುಕಿನ ಬಗ್ಗೆ ಬಹಳ ನೊಂದುಕೊಂಡಿದ್ದರು.)
ಕೆಸೆಂಟ್ ಹೌಸ್‌ನಲ್ಲಿದ್ದಾಗ ನನ್ನ ‘ಸಾಹಿತ್ಯ ಮತ್ತು ಸಮಾಜ’ ಕೃತಿಯನ್ನು ಅವರಿಗೆ ಕೊಟ್ಟಿದ್ದೆ. ಒಂದು ದಿನ, ರಾತ್ರಿ ಗನ್ ಮ್ಯಾನ್ ಬಂದು ‘ಸಾಹೇಬರು ಕರೆಯುತ್ತಿದ್ದಾರೆ’ ಎಂದು ಹೇಳಿದ. ಇಷ್ಟೊತ್ತಿಗೆ ಏಕೆ ಕರೆಯುತ್ತಿದ್ದಾರೆ ಎಂದು ನಾನು ಅಳಕುತ್ತಲೇ ಹೋದೆ. ಅವರು ‘ಸಾಹಿತ್ಯ ಮತ್ತು ಸಮಾಜ’ ಓದುತ್ತಿದ್ದರು. ‘ಮಹಿಳೆಯಿಂದಾಗಿ ಕೃಷಿ ಪ್ರಾರಂಭವಾಯಿತು. ಅದೇ ನಾಗರೀಕತೆಗೆ ಮೂಲವಾಯಿತು.’ ಎಂದು ಬರೆದದ್ದರ ಬಗ್ಗೆ ಪ್ರಶ್ನಿಸಿದರು. ಅದು ಅವರಿಗೆ ಸಂತಸವನ್ನುಂಟು ಮಾಡಿತ್ತು.
ಭೂ ಸುಧಾರಣೆ ಮೂಲಕ ಬಡವರಿಗೆ ಭೂಮಿ ಸಿಗುವಂತೆ ಮಾಡುವುದು, ಬಡವರಿಗೆ ನಿವೇಶನ ಹಂಚುವುದು, ಸಹಕಾರಿ ಕ್ಷೇತ್ರದಲ್ಲಿ ಸುಧಾರಣೆ ತರುವುದು, ಪ್ರಾಥಮಿಕ ಶಾಲೆಯಿಂದ ಹಿಡಿದು ವಿಶ್ವವಿದ್ಯಾಲಯದವರೆಗೆ ಶಿಕ್ಷಣದಲ್ಲಿ ಸುಧಾರಣೆ ತರುವುದು ಮುಂತಾದವು ಅವರ ಯೋಜನೆಗಳಾಗಿದ್ದವು. ಭೂ ಸುಧಾರಣೆ ಎಂದ ಕೂಡಲೆ ದೇವರಾಜ ಅರಸು, ರಂಗನಾಥ ಮತ್ತು ಬಿ. ಸುಬ್ಬಯ್ಯಶೆಟ್ಟಿ ಅವರ ಹೆಸರುಗಳು ನೆನಪಾಗುತ್ತವೆ. ಆದರೆ ಒಂದು ಭಾಷಣದಲ್ಲಿ ರಂಗನಾಥರು ‘ಬಸವಣ್ಣನವರ ಪ್ರಭಾವದಿಂದಾಗಿ ಭೂ ಸುಧಾರಣೆಗೆ ಪ್ರಯತ್ನಿಸಿದವರಲಿ ಬಿ.ಡಿ. ಜತ್ತಿ ಅವರು ಮೊದಲಿಗರು’ ಎಂದು ಹೇಳಿದ್ದು ನನಗಿನ್ನೂ ನೆನಪಿದೆ.
ಅವರಿಗೆ ಸಾಹಿತ್ಯದ ಬಗ್ಗೆ ವಿಶೇಷ ಆಸಕ್ತಿ. ಓದುವುದು ಅವರಿಗೆ ಬಹಳ ಪ್ರಿಯವಾದ ಅಭ್ಯಾಸವಾಗಿತ್ತು. ಹಚ್ಚ ಹಸುರಾದ ಪ್ರಶಾಂತ ಸ್ಥಳವೊಂದರ ಹೆಬ್ಬಂಡೆ ಮೇಲಿನ ಪುಟ್ಟ ಮನೆಯಲ್ಲಿ ಪುಸ್ತಕಗಳ ಜೊತೆ ಇರುವುದು ಅವರ ಮಹದಾಶೆಯಾಗಿತ್ತು. ಕೆ.ವಿ. ಅಯ್ಯರ್ ಅವರ ‘ಶಾಂತಲಾ’ ಮತ್ತು ನಿರಂಜನರ ‘ಚಿರಸ್ಮರಣೆ’ ಅವರ ಪ್ರಿಯವಾದ ಪುಸ್ತಕಗಳ ಸಾಲಿಗೆ ಸೇರಿದ್ದವು.
ಮಕ್ಕಳ ಬಗ್ಗೆ ಅವರಿಗೆ ವಿಶೇಷ ಪ್ರೀತಿ. ಮಕ್ಕಳ ಜೊತೆ ಹೆಚ್ಚಿನ ಸಮಯ ಕಳೆಯಲಿಕ್ಕಾಗುತ್ತಿಲ್ಲ ಎಂಬ ಬೇಸರ ಅವರಿಗಿತ್ತು. ಎಡೆಬಿಡದ ಕೆಲಸ ಕಾರ್ಯಗಳ ಮಧ್ಯೆಯೂ ಅವರು ಮಕ್ಕಳ ಭೇಟಿಗಾಗಿ ಸಮಯ ಹೊಂದಿಸಿಕೊಳ್ಳಲು ಯತ್ನಿಸುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ಮಕ್ಕಳನ್ನು ಕರೆಸಿ ಮಾತನಾಡಿಸುತ್ತಿದ್ದರು. ಮಕ್ಕಳು ಪ್ರತಿಯೊಂದು ವಸ್ತುವಿನ ಬಗ್ಗೆ ಕಾಳಜಿ ವಹಿಸಬೇಕು ಎಂದು ಅವರು ಬಯಸುತ್ತಿದ್ದರು. ಯಾವುದೇ ಕೋಣೆಯಲಿ ನಿರುಪಯುಕ್ತವಾಗಿ ದೀಪ ಉರಿಯಬಾರದು ಎಂದು ಮಕ್ಕಳಿಗೆ ಹೇಳುತ್ತಿದ್ದರು. ಪರೀಕ್ಷೆಗಳು ಮುಗಿದ ಬಳಿಕ ಒಂದುದಿನ ಎಲ್ಲ ಮಕ್ಕಳನ್ನು ಕರೆದು ಅವರು ಬಳಸಿದ ನೋಟ್ ಬುಕ್‌ಗಳನ್ನು ತರಲು ಹೇಳುತ್ತಿದ್ದರು. ನೆಲದ ಮೇಲೆ ಕುಳಿತು, ಪ್ರತಿ ಮಗುವಿನ ಎಲ್ಲ ಬಳಸಿದ ನೋಟ್ ಬುಕ್‌ಗಳಲ್ಲಿ ಬಳಸದೆ ಉಳಿದ ಹಾಳೆಗಳನ್ನು ತೆಗೆದು ಜೋಡಿಸಿ ತಾವೆ ಹೊಲಿದು ಕಚ್ಚಾ ನೋಟ್ ಬುಕ್‌ಗಳನ್ನು ತಯಾರಿಸಿಕೊಡುತ್ತಿದ್ದರು. ಮಕ್ಕಳು ಅಪ್ಪಾಜಿಯ ಕಾಣಿಕೆಯನ್ನು ಸಂತಸದಿಂದ ಸ್ವೀಕರಿಸುತ್ತಿದ್ದರು.
ಮನೆಗೆ ಎಲ್ಲ ಪತ್ರಿಕೆಗಳು ಬರುತ್ತಿದ್ದವು. ಹಳೆ ಪತ್ರಿಕೆಗಳನ್ನು ಒಂದು ಮೂಲೆಯಲ್ಲಿ ರಾಶಿ ಹಾಕಬೇಕಿತ್ತು. ಒಂದು ತಿಂಗಳ ನಂತರ ಆ ರದ್ದಿ ಪೇಪರ್ ರಾಶಿಯನ್ನು ಒಯ್ಯಲು ಯಾರಾದರೊಬ್ಬರು ಸಂಬಂಧಪಟ್ಟ ಇಲಾಖೆಯವರಿಗೆ ತಿಳಿಸಬೇಕಿತ್ತು. ಇಂಥವು ಕೂಡ ಅವರಿಗೆ ಸಣ್ಣ ಸಂಗತಿಗಳಲ್ಲ. ಅವರ ಕಾನೂನು ಪಾಲನೆಗೆ ಒಂದು ಸೂಕ್ಷ್ಮ ನಿದರ್ಶನವಿದು.
ಒಂದು ದಿನ ರಾತ್ರಿ 7.30ರ ಸಮಯ; ಸಾಹೇಬರ ಜೊತೆ ಯಾರೋ ಮಾತನಾಡುತ್ತ ಕುಳಿತಿದ್ದರು. ಅಡುಗೆ ಮನೆಯಲ್ಲಿ ಅಡುಗೆ ಭಟ್ಟ ಮಾಧವ ಮತ್ತು ಅಮ್ಮನವರ ಜೊತೆ ಅದು ಇದು ಮಾತನಾಡುತ್ತ ನಿಂತಿದ್ದೆ. ಗನ್‌ಮ್ಯಾನ್ ಬಂದು ‘ಸಾಹೇಬರು ಐದು ಕಪ್ ಚಹಾ ಕಳಿಸಲು ಹೇಳಿದ್ದಾರೆ’ ಎಂದ. ಮಾಧವ ಗಾಬರಿಯಾದ. ಸಕ್ಕರೆ ಮುಗಿದಿದ್ದರ ಬಗ್ಗೆ ಆತ ಮೊದಲೇ ಹೇಳುವುದನ್ನು ಮರೆತಿದ್ದ. ಆ ಸಂದರ್ಭದಲ್ಲಿ ಅಮ್ಮನ ಬಳಿ ಹಣ ಇರಲಿಲ್ಲ. ನನ್ನ ಬಳಿಯೂ ಇರಲಿಲ್ಲ. ಆದರೆ ನಾನು ಹಾಗೆ ಹೇಳಲಿಲ್ಲ. ಮಾಧವ ಚಹಾಕ್ಕೆ ಇಡು ಎಂದು ಹೇಳಿದವನೇ ಓಡಿದೆ. ಹತ್ತೇ ನಿಮಿಷದಲ್ಲಿ ಅರ್ಧ ಕೆ.ಜಿ. ಸಕ್ಕರೆ ತಂದೆ. ರದ್ದಿ ಪೇಪರ್ ರಾಶಿಯಲ್ಲಿನ ಒಂದಿಷ್ಟು ಪೇಪರ್ ತೆಗೆದುಕೊಂಡು ಹಿಂದಿನ ಕಂಪೌಂಡ್ ಹಾರಿ, ದಿನಸಿ ಅಂಗಡಿಗೆ ಹೋಗಿ, ಅದನ್ನು ಮಾರಿ ಸಕ್ಕರೆ ತಂದಿದ್ದೆ. ರಾತ್ರಿ ಬಹಳ ಹೊತ್ತಿನವರೆಗೆ ನಿದ್ರೆ ಬರಲಿಲ್ಲ.
ಅವರು ಕ್ಷಣ ಕ್ಷಣಕ್ಕೆ ರೇಗಿದರೂ ಅವರ ಅಂತಃಕರಣವನ್ನು ಬಲ್ಲ ಅಭಿಮಾನಿಗಳು ಅವರನ್ನು ಎಂದೂ ತಪ್ಪಾಗಿ ತಿಳಿದುಕೊಳ್ಳಲಿಲ್ಲ. ನನ್ನ ಮಾತು, ಮೌನ ಮತ್ತು ಕಮ್ಯೂನಿಸ್ಟ್ ಧೋರಣೆ ಅವರಿಗೆ ಕೆಲವೊಂದು ಸಲ ವಿಚಿತ್ರ ಎನಿಸುತ್ತಿದ್ದವು. ಒಂದು ದಿನ ಸಾಗರದ ಕಡೆಯವರೊಬ್ಬರು ಗಣಪತಿಯ ಸುಂದರ ಮೂರ್ತಿಯನ್ನು ತಂದುಕೊಟ್ಟರು. ನಾನು ಆ ಕಾಷ್ಠಶಿಲ್ಪವನ್ನು ಮೆಚ್ಚಿದೆ. ಕಮ್ಯೂನಿಸ್ಟರಿಗೆ ದೇವರ ಮೂರ್ತಿ ಇಷ್ಟವಾಗುವುದೇ? ಎಂದು ಕೇಳಿದರು. ನಾನು ಮೆಚ್ಚಿದ್ದು ಶಿಲ್ಪಿಯ ಪ್ರತಿಭೆಯನ್ನು ಹಾಗೂ ಮಾನವಲೋಕ ಮತ್ತು ಪ್ರಾಣಿ ಜಗತ್ತನ್ನು ಒಂದಾಗಿ ಕಾಣುವ ಅದ್ಭುತ ಕಲ್ಪನೆಯನ್ನು ಎಂದೆ.
ತುರ್ತು ಪರಿಸ್ಥಿತಿಯ ನಂತರ ಚುನಾವಣೆ ಘೋಷಣೆಯಾದ ಮೇಲೆ, ಅವರಿಗೆ ಶ್ರೀಮಂತ ಅನುಯಾಯಿಯೊಬ್ಬರು ಬರಿ ಸಹಿ ಮಾಡಿದ್ದ ಚೆಕ್ ಕಳುಹಿಸಿದ್ದರು. ತಮ್ಮ ಚುನಾವಣೆಗೆ ಎಷ್ಟು ಹಣ ಬೇಕೋ ಅಷ್ಟು ಬರೆದುಕೊಳ್ಳಿ ಎಂದು ಚೆಕ್ ಜೊತೆ ಕಳುಹಿಸಿದ ಪತ್ರದಲ್ಲಿ ಮನವಿ ಮಾಡಿದ್ದರು. ಸಾಹೇಬರು ಆ ಚೆಕ್ ನೋಡಿ ನಕ್ಕರು. ಪತ್ರ ತೆಗೆದುಕೊಂಡರು. ಚೆಕ್ ಹರಿದು ಕಸದಬುಟ್ಟಿಗೆ ಹಾಕಲು ಹೇಳಿದರು!
ಪ್ರಾಥಮಿಕ ಶಾಲೆಯ ಪಠ್ಯಪುಸ್ತಕಗಳಿಗೆ ಸಂಬಂಧಿಸಿದ ಸಭೆಯಲ್ಲಿ ಭಾಗವಹಿಸುವುದಕ್ಕಾಗಿ ನನ್ನ ವಿದ್ಯಾಗುರು ಪ್ರೊ. ಎ.ಎಸ್. ಹಿಪ್ಪರಗಿ ಅವರು ವಿಜಾಪುರದಿಂದ ಬೆಂಗಳೂರಿಗೆ ಬಂದಿದ್ದರು. ಅವರಿಗೆ ರಂಗನಾಥರ ಬಗ್ಗೆ ಬಹಳ ಗೌರವ. ಅವರನ್ನು ವಿಧಾನ ಸೌಧದಲ್ಲಿನ ಸಾಹೇಬರ ಚೇಂಬರ್‌ಗೆ ಕರೆದುಕೊಂಡು ಹೋದೆ. ಸಾಹೇಬರು ಹೋಗುವ ಗಡಿಬಿಡಿಯಲ್ಲಿದ್ದರು. ಪರಿಚಯ ಮಾಡಿಸಿದೆ. ಚೆನ್ನಾಗಿ ಮಾತನಾಡಿಸದ ಅವರು ನನ್ನಿಂದ ಏನಾಗಬೇಕು ಎಂದು ಕೇಳಿದರು. ಏನೂ ಆಗಬೇಕಿಲ್ಲ, ನಿಮ್ಮನ್ನು ನೋಡಬೇಕಿತ್ತು ಅಷ್ಟೇ ಎಂದು ಹಿಪ್ಪರಗಿ ಸರ್ ಹೇಳಿದರು. ನಾನು ಸರ್ ವಿದ್ವತ್ತಿನ ಬಗ್ಗೆ ಸಾಹೇಬರಿಗೆ ಸೂಚ್ಯವಾಗಿ ಹೇಳಿದೆ. ಅವರು ಬಹಳ ಸಂತಸ ಪಟ್ಟರು. ಸ್ವಲ್ಪ ಹೊತ್ತು ಕನ್ನಡ ವ್ಯಾಕರಣ, ಶಬ್ದ ಪ್ರಯೋಗ ಮತ್ತು ವಾಕ್ಯ ರಚನೆ ಕುರಿತು ಚರ್ಚಿಸಿದರು. ಮಕ್ಕಳ ವಯೋಮಿತಿಗೆ ತಕ್ಕಂತೆ ಯಾವ ರೀತಿ ಪಾಠಗಳು ಇರಬೇಕು. ಅವುಗಳ ಭಾಷಾ ಚೌಕಟ್ಟು ಮತ್ತು ವಿಷಯ ಹೇಗಿರಬೇಕು ಎಂಬುದರ ಕುರಿತು ಮಾತನಾಡಿದರು. ಈ ಭೇಟಿಯ ಸಂದರ್ಭದಲ್ಲಿ ಅವರು ತುಂಬ ಸಂತಸದಿಂದಿದ್ದರು.
ಅವರು ತತ್ತ್ವಗಳನ್ನು ನಂಬಿ ರಾಜಕೀಯದಲ್ಲಿ ಇದ್ದವರು ಹೊರತಾಗಿ ಭವಿಷ್ಯಗಾರರನ್ನು ನಂಬಿ ಇದ್ದವರಲ್ಲ. ಅವರು ಎಂದೂ ಮಾಟ ಮಂತ್ರಗಳಿಗೆ ಶರಣಾದವರಲ್ಲ. ಭವಿಷ್ಯ ಕೇಳಿದವರಲ್ಲ. ದೇಶದಲ್ಲಿ ಗಾಂಧೀಜಿ, ಅಂಬೇಡ್ಕರ್ ಮತ್ತು ನೆಹರೂ ಅಂಥವರು ಮಾತ್ರ ಇಂಥ ದೃಢವಾದ ಮನಸ್ಥಿತಿಯನ್ನು ಹೊಂದಿದವರಾಗಿದ್ದರು.
ಎಷ್ಟೋ ಸಲ ನನಗೆ ಅನಿಸುತ್ತದೆ; ಇಂಥವರೂ ರಾಜಕೀಯದಲ್ಲಿ ಇರಲು ಸಾಧ್ಯವೆ ಎಂದು. ಅದೂ ಇಷ್ಟೊಂದು ದಶಕಗಳ ವರೆಗೆ! ಜಗತ್ತು ಒಳ್ಳೆಯದಕ್ಕೆ ಒಂದು ಕ್ಷಣವಾದರೂ ತಲೆಬಾಗುವವರೆಗೆ ಇಂಥವರು ಇದ್ದೇ ಇರುತ್ತಾರೆ. ಬದುಕಿನಲ್ಲಿ ಆಶಾಕಿರಣಗಳು ಸೃಷ್ಟಿಯಾಗುತ್ತಲೇ ಇರುತ್ತವೆ.
ಕನ್ನಡದ ಹಿರಿಯ ಲೇಖಕರು ಮತ್ತು ಪತ್ರಕರ್ತರು. ಬಂಡಾಯ ಕಾವ್ಯದ ಮುಂಚೂಣಿಯಲ್ಲಿದ್ದವರು. ವಿಜಾಪುರ ಮೂಲದ ಇವರು ಧಾರವಾಡ ನಿವಾಸಿಗಳು. ಕಾವ್ಯ ಬಂತು ಬೀದಿಗೆ (ಕಾವ್ಯ -೧೯೭೮), ಹೊಕ್ಕಳಲ್ಲಿ ಹೂವಿದೆ (ಕಾವ್ಯ), ಸಾಹಿತ್ಯ ಮತ್ತು ಸಮಾಜ, ಅಮೃತ ಮತ್ತು ವಿಷ, ನೆಲ್ಸನ್ ಮಂಡೇಲಾ, ಮೂರ್ತ ಮತ್ತು ಅಮೂರ್ತ, ಸೌಹಾರ್ದ ಸೌರಭ, ಅಹಿಂದ ಏಕೆ? ಬಸವಣ್ಣನವರ ದೇವರು, ವಚನ ಬೆಳಕು, ಬಸವ ಧರ್ಮದ ವಿಶ್ವಸಂದೇಶ, ಬಸವಪ್ರಜ್ಞೆ, ನಡೆ ನುಡಿ ಸಿದ್ಧಾಂತ, ಲಿಂಗವ ಪೂಜಿಸಿ ಫಲವೇನಯ್ಯಾ, ಜಾತಿ ವ್ಯವಸ್ಥೆಗೆ ಸವಾಲಾದ ಶರಣರು, ಶರಣರ ಸಮಗ್ರ ಕ್ರಾಂತಿ, ಬಸವಣ್ಣ ಮತ್ತು ಅಂಬೇಡ್ಕರ್, ಬಸವಣ್ಣ ಏಕೆ ಬೇಕು?, ಲಿಂಗವಂತ ಧರ್ಮದಲ್ಲಿ ಏನುಂಟು ಏನಿಲ್ಲ?, ದಾಸೋಹ ಜ್ಞಾನಿ ನುಲಿಯ ಚಂದಯ್ಯ (ಸಂಶೋಧನೆ) ಮುಂತಾದವು ಅವರ ಪ್ರಕಟಿತ ಕೃತಿಗಳಾಗಿವೆ. ಕರ್ನಾಟಕ ಸರ್ಕಾರದ ರಾಷ್ಟ್ರೀಯ ಬಸವ ಪುರಸ್ಕಾರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಗೌರವ ಪ್ರಶಸ್ತಿ ಮುಂತಾದ ೫೨ ಪ್ರಶಸ್ತಿಗಳಿಗೆ ಭಾಜನರಾದ ರಂಜಾನ್ ದರ್ಗಾ ಅವರು ಬಂಡಾಯ ಸಾಹಿತ್ಯ ಪರಂಪರೆಯ ಶಕ್ತಿಶಾಲಿ ಕವಿಗಳಲ್ಲಿ ಒಬ್ಬರು. ಅಮೆರಿಕಾ, ನೆದರ್‌ಲ್ಯಾಂಡ್ಸ್, ಲೆಬನಾನ್, ಕೆನಡಾ, ಫ್ರಾನ್ಸ್, ಆಸ್ಟ್ರೇಲಿಯಾ ಸೇರಿದಂತೆ ಇನ್ನೂ ಹಲವು ದೇಶಗಳಲ್ಲಿ ಶರಣ ಸಂಸ್ಕೃತಿ, ಶಾಂತಿ ಮತ್ತು ಮಾನವ ಏಕತೆ ಕುರಿತು ಉಪನ್ಯಾಸ ನೀಡಿದ್ದಾರೆ.
ಜಗತ್ತು ಒಳ್ಳೆಯದಕ್ಕೆ ಒಂದು ಕ್ಷಣವಾದರೂ ತಲೆಬಾಗುವವರೆಗೆ ಇಂಥವರು ಇದ್ದೇ ಇರುತ್ತಾರೆ. ಬದುಕಿನಲ್ಲಿ ಆಶಾಕಿರಣಗಳು ಸೃಷ್ಟಿಯಾಗುತ್ತಲೇ ಇರುತ್ತವೆ.
Well written. Nice to know about Sri KHR leading a simple life even when a politician!