“ಮೈಸೂರಿನಲ್ಲಿ ಓದುತ್ತಿದ್ದ ಕೈಲಾಸಂಗೆ ಆಗಾಗ್ಗೆ ಬೆಂಗಳೂರಿಗೆ ರೈಲು ಪ್ರಯಾಣ ಅಭ್ಯಾಸವಾಗಿತ್ತು. ರೈಲು ವಿಪರೀತ ನಿಧಾನವಾಗಿ, ಹೊಗೆಯನ್ನು ಧಾರಾಕಾರವಾಗಿ ಬಿಡುತ್ತಾ ಹೋಗುವ ಕಾಲವದು. ಇದರಿಂದ ಬೇಸತ್ತ ಕೈಲಾಸಂ, ಅವರು ದೊಡ್ಡವರಾದ ಮೇಲೆ, ಒಂದು ಸರ್ತಿ ಮೈಸೂರನ್ನು ಸೇರಿದ ಮೇಲೆ, ಹಾಫ್ ಟಿಕೆಟನ್ನ ಟಿ.ಸಿ.ಗೆ ಕೊಟ್ಟು ಮುಂದಕ್ಕೆ ಹೋದಾಗ, ಟಿ.ಸಿ., ‘ಇಲ್ಲಿ ಬನ್ರಿ! ನಾಚಿಕೆ ಆಗಲ್ವಾ ನಿಮಗೆ, ಇಷ್ಟು ದೊಡ್ಡವರಾಗಿ, ಹಾಫ್ ಟಿಕೆಟ್ ಕೊಡ್ತಿರಲ್ಲಾ..’ ಅಂದಾಗ, ‘ನಾನು ಹೊರಟಾಗ ಚಿಕ್ಕವನಾಗಿದ್ದೆ ಸಾರ್! ಅದಕ್ಕೆ ಹಾಫ್ ಟಿಕೆಟ್ ತೊಗೊಂಡೆ. ಮದ್ಯೆ ನಾನು ಬೆಳದಿದ್ದರೆ ನನ್ನ ತಪ್ಪೇನು ಸಾರ್!’ ಅಂತ ಪ್ರಶ್ನಿಸಿದ್ದರು”
ಹಿರಿಯ ಬರಹಗಾರ ಮತ್ತು ಬ್ಲಾಗರ್ ಇ. ಆರ್. ರಾಮಚಂದ್ರನ್ ಬರೆಯುವ ಟಿ.ಪಿ.ಕೈಲಾಸಂ ನೆನಪುಗಳ ಚಿತ್ರ.

 

ಸುಮಾರು ನಲವತ್ತರ, ಐವತ್ತರ ದಶಕದಲ್ಲಿ ಪೌರಾಣಿಕ ನಾಟಕಗಳು ಬಹಳ ಜನಪ್ರಿಯವಾಗಿದ್ದವು. ರಾಮಾಯಣ, ಮಹಾಭಾರತದಿಂದ ಆಯ್ದ ನಾಟಕಗಳು, ಸತ್ಯ ಹರಿಶ್ಚಂದ್ರ, ನಳ ದಮಯಂತಿ, ವಿಶ್ವಾಮಿತ್ರ-ವಶಿಷ್ಟ ಅವರುಗಳ ನಾಟಕಗಳೇ ಹೆಚ್ಚು. ಜನ ಸಾಮಾನ್ಯರು ನಾಟಕವೆಂದು ಹೋದರೆ ರಂಗವೇದಿಕೆಯಲ್ಲಿ ನೋಡಲು ಸಿಗುತ್ತಿದ್ದದ್ದು ವೇಶ ಭೂಷಣ ಧರಿಸಿ, ಕೈಲಿ ಗದೆಯನ್ನೋ, ಕತ್ತಿಯನ್ನೋ ಹಿಡಿದು ಮಾತು ಮಾತಿಗೆ ಯುದ್ಧ ಮತ್ತು ಋಷಿ ಮುನಿಗಳಿಂದ ಶಾಪವನ್ನು ಕೊಡುವ ಸ್ವೀಕರಿಸುವ ಕಾಲವಾಗಿತ್ತು. ಅಶರೀರವಾಣಿಗಳು ಕೂಡ ಆಗಾಗ್ಗೆ ಕೇಳಿಬರುತ್ತಿತ್ತು ಸ್ಟೇಜಿನ ಮೇಲೆ!

ಆಗ ಸಾಮಾಜಿಕ ನಾಟಕಗಳೇ ಇರಲಿಲ್ಲ. ನಾಟಕ ನೋಡಲು ಬಂದವರಿಗೆ, ತಮ್ಮದೇ ಹೆಸರಿಟ್ಟುಕೊಂಡು ಓಡಾಡುವ, ತಮ್ಮ ಹಾಗೇ ಮಾತನಾಡಿ, ಸ್ಕೂಲು ಕಾಲೇಜಿಗೆ ಹೋಗುವರನ್ನು ನೋಡಲು ಸಿಗುತ್ತಿರಲಿಲ್ಲ. ನಿಮ್ಮ ನಮ್ಮ ಮನೆಗಳಲ್ಲಿ ಕಿಟ್ಟಿ, ನಾಗತ್ತೆ, ಅಹೋಬ್ಲು, ಹುಸೇನ್ ಅಂತಹ ಹೆಸರಿಟ್ಟುಕೊಂಡು ಓಡಾಡುವವರ ಜೀವನ, ಅವರ ಆಸೆ, ದುರಾಸೆ, ನಿರಾಸೆಗಳನ್ನು ಕೇಳಲು, ಅರಿಯಲು ಅವಕಾಶವೇ ಇರಲಿಲ್ಲ. ಅವರ ಜೀವನದಲ್ಲಿ ಆಗು ಹೋಗುಗಳನ್ನು ಹಾಸ್ಯ, ವಿಡಂಬನೆ ದೃಷ್ಟಿಕೋನದಿಂದ ನೋಡಿ, ಅವರ ಪರಿಸ್ಥಿತಿಯನ್ನು ಎತ್ತಿ ತೋರಿಸುವ ಸಾಹಸವನ್ನು ಅಲ್ಲಿಯ ತನಕ ಯಾರೂ ಮಾಡಿರಲಿಲ್ಲ.

ಈ ಸಾಹಸವನ್ನು ಮೊದಲು ಮಾಡಿದವರು ಕೈಲಾಸಂ. ಇದರಲ್ಲಿ ಒಂದೆರೆಡು ಆಶ್ಚರ್ಯದ ಮಾತೆಂದರೆ, ಕೈಲಾಸಂಗೆ ಕನ್ನಡ ನಾಟಕ, ಪದ್ಯ, ಗದ್ಯ ಬರೆಯುವಷ್ಟು ಕನ್ನಡ ಬರುತ್ತಿರಲಿಲ್ಲ. ಕನ್ನಡದಲ್ಲಿ ಪಾಂಡಿತ್ಯವಂತೂ ಖಂಡಿತ ಇರಲಿಲ್ಲ. ಮತ್ತೊಂದು ಸಂಗತಿಯೆಂದರೆ, ಅವರು ಜಿಯಾಲಜಿಯಲ್ಲಿ ಭಾರತ ಮತ್ತು ಹೊರ ದೇಶದಲ್ಲಿ -ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಾಂಗ ಮಾಡಿ, ಚಿನ್ನದ ಪದಕವನ್ನು ಪಡೆದು ಜಿಯಾಲಜಿಯಲ್ಲಿ ಶ್ರೇಷ್ಠತೆಯನ್ನು ಪಡೆದಿದ್ದರು. ಇಂಥಹವರು ಸೈನ್ಸ್ ನಿಂದ ಆರ್ಟ್ಸ್ ಗೆ ಜಿಗಿದು ಅದರಲ್ಲೂ ಸಾಮಾಜಿಕ ಜೀವನದಲ್ಲಿ ನಾಟಕದ ಮೂಲಕ ಒಂದು ಬಿರುಗಾಳಿಯನ್ನು ಹಬ್ಬಿಸಿದರು ಅಂದರೆ ಅದರಲ್ಲಿ ಸಂದೇಹವೇಇಲ್ಲ. ಇದರ ಜೊತೆ ಯಾಕೆ ಹೀಗಾಯಿತು, ಯಾಕೆ ಅವರು ಜೀವನದ ಉದ್ದಕ್ಕೂ ಜಿಯಾಲಜಿ ಓದಿ, ಪರಿಣಿತರಾಗಿ ಅದರಲ್ಲಿ ಕೆಲಸವನ್ನು ಮಾಡಿ ಸಮಾಜಕ್ಕೆ ಸೇವೆಮಾಡಲಾಗಲಿಲ್ಲ ಅಂದರೆ ಅದೂ ಒಂದು ಸೋಜಿಗ ಸಂಗತಿಯೆಂದರೆ ಅದು ತಪ್ಪಾಗಲಾರದು. ಇದರ ಕಾರಣವನ್ನು ಮುಂದೆ ನೋಡೋಣ.

ತಂಜಾವೂರ್ ಪರಮಶಿವ ಐಯರ್ (ಟಿ.ಪಿ. ) ಕೈಲಾಸಂ ಜುಲೈ ೨೯ ರಂದು ೧೮೮೬ರಲ್ಲಿ ಬೆಂಗಳೂರಿನಲ್ಲಿ ಪರಮಶಿವ ಐಯರ್ ಮತ್ತು ಕಮಲಾಂಬ ದಂಪತಿಗೆ ಹುಟ್ಟಿದರು. ಪರಮಶಿವ ಐಯರ್ ಮೈಸೂರಿನಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿ ಕೆಲಸ ಮಾಡಿ, ಕ್ರಮೇಣ ಹುದ್ದೆಯಲ್ಲಿ ಮುಂದುವರಿದು, ಬೆಂಗಳೂರಿನಲ್ಲಿ ಹೈ ಕೋರ್ಟನಲ್ಲಿ ಚೀಫ್ ಜಸ್ಟಿಸ್ ಆಗಿದ್ದರು. ಚಾಮರಾಜಪೇಟೆಯಲ್ಲಿ ಅವರು ಸೊಗಸಾದ – ವೈಟ್ ಹೌಸ್ ಅನ್ನುವ ಹೆಸರಿನ ಬಂಗಲೆಯನ್ನು ಕಟ್ಟಿಕೊಂಡಿದ್ದರು. ಅಮೆರಿಕದ ರಾಷ್ಟ್ರಪತಿ ವಾಸಿಸುವ ಜಾಗ ವೈಟ್ ಹೌಸ್ ಜಗತ್ಪ್ರಸಿದ್ಧವಾದದ್ದು. ಮುಂದೆ ಕೈಲಾಸಂ ತಮ್ಮ ನಿವಾಸದ ಬಗ್ಗೆಯೂ ಹಾಸ್ಯಚಟಾಕೆಯನ್ನು ಹಾರಿಸುವವರು.

ಕೈಲಾಸಂನ ಪೂರ್ವಿಕರು ತಮಿಳುನಾಡಿನ ತಂಜಾವೂರಿನ ಹತ್ತಿರ ಇರುವ ಏಡೆಯಾತುಮಂಗಲಂ ಗ್ರಾಮದಿಂದ ಬಂದವರು. ಅಲ್ಲಿಂದ ನಾರಾಯಣ ಶಾಸ್ತ್ರಿ ಮತ್ತು ಇತರರು ಮೈಸೂರಿಗೆ ಸನ್ ೧೮೦೦ ರಲ್ಲಿ ವಲಸೆ ಬಂದರು. ನಾರಾಯಣಶಾಸ್ತ್ರಿ ನಾಲ್ವಡಿ ಕೃಷ್ಣರಾಜ ಒಡೆಯರ್ ಆಡಳಿತದಲ್ಲಿ ಕೆಲಸ ಆರಂಭಿಸಿ, ಕ್ರಮೇಣ ಅನುಭವದಿಂದ ಮೇಲಕ್ಕೆ ಬಂದರು. ಮೈಸೂರಿನ ಒಂದು ಪ್ರಮುಖ ರಸ್ತೆಗೆ ನಾರಾಯಣಶಾಸ್ತ್ರಿ ರಸ್ತೆ ಎಂದು ಕರೆಯುತ್ತಾರೆ. ನಾರಾಯಣ ಶಾಸ್ತ್ರಿಗಳಿಗೆ ಒಂದು ಹೆಣ್ಣು ಒಂದು ಗಂಡು ಮಗು. ಕಮಲಾಂಬ ಮತ್ತು ಸುಬ್ರಮಣ್ಯಮ್ ಐಯರ್ ಅವರ ಹೆಸರು. ಕಮಲಾಂಬ ಬೆಳೆದು ಪರಮಶಿವ ಐಯರ್ ಅವರನ್ನು ಮದುವೆ ಆದರು. ಅವರ ಮಕ್ಕಳಲ್ಲಿ ಮೊದಲನೇ ಮಗನೇ ಕೈಲಾಸಂ. ಸುಬ್ರಮಣ್ಯಮ್ ಮದುವೆ ಆಗಿ ಅವರ ಮೊದಲನೇ ಪುತ್ರ ರಾಮನಾಥ್. ರಾಮನಾಥ್ ನಮ್ಮ ತಂದೆ. ಹಾಗಾಗಿ ರಾಮನಾಥ್ ಮತ್ತು ಕೈಲಾಸಂ ಕಸಿನ್ ಸಹೋದರರು. ಕೈಲಾಸಂ ನನ್ನ ತಂದೆ ಸೋದರತ್ತೆಯ ಮಗ.

ನಾರಾಯಣ ಶಾಸ್ತ್ರಿ ರೋಡ್ ಅಂದನಲ್ಲಾ… ಒಂದು ಸಲ ಕೈಲಾಸಂ ಆ ರಸ್ತೆಯಲ್ಲಿ ಹೋಗುತ್ತಿದ್ದಾಗ, ಹಿಂದಿನಿಂದ ಸೈಕಲ್ ಮೇಲೆ ಬರುತ್ತಿದ್ದವನು, “ಏಯ್! ಯಾಕೋ ಬೀದಿ ಮದ್ಯ ನಡೀತಿದಿಯಾ..? ಬೀದಿ ನಿಮ್ಮಪ್ಪಂದಾ…?” ಅಂದಾಗ, ಕೈಲಾಸಂ ತಟ್ಟಂತ, “ನಮಪ್ಪಂದಲ್ಲಾ ಕಣೋ… ನಮ್ ತಾತಂದೋ ಈ ರಸ್ತೆ” ಅಂತ ಕೂಗು ಹಾಕಿದ್ರು!

ಕೈಲಾಸಂಗೆ ಕನ್ನಡ ನಾಟಕ, ಪದ್ಯ, ಗದ್ಯ ಬರೆಯುವಷ್ಟು ಕನ್ನಡ ಬರುತ್ತಿರಲಿಲ್ಲ. ಕನ್ನಡದಲ್ಲಿ ಪಾಂಡಿತ್ಯವಂತೂ ಖಂಡಿತ ಇರಲಿಲ್ಲ. ಮತ್ತೊಂದು ಸಂಗತಿಯೆಂದರೆ, ಅವರು ಜಿಯಾಲಜಿಯಲ್ಲಿ ಭಾರತ ಮತ್ತು ಹೊರ ದೇಶದಲ್ಲಿ -ಇಂಗ್ಲೆಂಡಿನಲ್ಲಿ ಉನ್ನತ ವ್ಯಾಸಾಂಗ ಮಾಡಿ, ಚಿನ್ನದ ಪದಕವನ್ನು ಪಡೆದು ಜಿಯಾಲಜಿಯಲ್ಲಿ ಶ್ರೇಷ್ಠತೆಯನ್ನು ಪಡೆದಿದ್ದರು. ಇಂಥಹವರು ಸೈನ್ಸ್ ನಿಂದ ಆರ್ಟ್ಸ್ ಗೆ ಜಿಗಿದು ಅದರಲ್ಲೂ ಸಾಮಾಜಿಕ ಜೀವನದಲ್ಲಿ ನಾಟಕದ ಮೂಲಕ ಒಂದು ಬಿರುಗಾಳಿಯನ್ನು ಹಬ್ಬಿಸಿದರು ಅಂದರೆ ಅದರಲ್ಲಿ ಸಂದೇಹವೇಇಲ್ಲ.

ಕೈಲಾಸಂ ಸೈಕಲ್ಲು

ಮೈಸೂರಿನಲ್ಲಿ ವ್ಯಾಸಾಂಗ ಮಾಡುತ್ತಿದ್ದ ಕೈಲಾಸಂ ಬಹಳ ಚುರುಕು ಮತ್ತು ತುಂಟ. ಓದುವದಕ್ಕಿಂತಲೂ ಆಟ, ಓಟಗಳಲ್ಲಿ ಆಸಕ್ತಿ ಹೆಚ್ಚು. ಹಾಗೆಂದು ಓದುವುದರಲ್ಲಿ ಎಂದೂ ಹಿಂದೆ ಬಿದ್ದಿಲ್ಲ. ಅವರು ಹೈಸ್ಕೂಲಿನಲ್ಲಿ ಐಚ್ಛಿಕವಾಗಿ ಸಂಸ್ಕೃತವನ್ನು ಆರಿಸಿಕೊಂಡಿದ್ದರು. ಒಂದು ಸರ್ತಿ ಲೇಟಾಗಿ ಸ್ಕೂಲಿಗೆ ಹೋಗಿ, ಅವಸರದಲ್ಲಿ ಕನ್ನಡ ಕ್ಲಾಸಿನೊಳಗೆ ನುಗ್ಗಿಬಿಟ್ರು. ಆವತ್ತು ಕನ್ನಡ ಮೇಷ್ಟ್ರು ಹುಡುಗರಿಗೆ ಸೋಮೇಶ್ವರದ ಯಾವುದಾದರೂ ಒಂದು ಪದ್ಯವನ್ನು ಗಟ್ಟು ಮಾಡಿಕೊಂಡು ಶಾಲೆಯಲ್ಲಿ ಹೇಳಿ ಅಂತ ಹೇಳಿದ್ದರು. ಯಾರೂ ಹೇಳದಿದ್ದರಿಂದ ಅವರ ಕೋಪ ನೆತ್ತಿಗೇರಿತ್ತು. ಎದುರಿಗೆ ನಿಂತ ಕೈಲಾಸಂನನ್ನು ನೋಡಿ, ‘ನೀನಾದರೂ ಬೊಗಳು’ ಎಂದು ಘರ್ಜಿಸಿದರು. ‘ನನಗೆ ಬರಲ್ಲ ಸಾರ್!’ ‘ಎಷ್ಟು ಬರುತ್ತೋ ಅದನ್ನೇ ಹೇಳು’. ‘ಅರ್ಧ ಬರುತ್ತೆ ಸಾರ್’, ‘ಅದನ್ನೇ ಬೊಗಳು!’ ಕೈಲಾಸಂ, ಪ್ರತಿ ಪದ್ಯದಲ್ಲೂ ಕೊನೆಗೆ ಬರುವ ಪಂಕ್ತಿ ‘ಹರಾ ಹರಾ ಶ್ರೀ ಚೆನ್ನ ಸೋಮೇಶ್ವರ’ ಎಂದು ಹೇಳಿದರು. ಕ್ಲಾಸಿಗೆ ಕ್ಲಾಸೇ ಘೊಳ್ ಎಂದು ನಕ್ಕಿತು. ಉಕ್ಕುವ ಕೋಪದಲ್ಲೂ ಮೇಷ್ಟ್ರಿಗೆ ನಗೆ ತಡೆಯಲಾಗಲಿಲ್ಲ.

ಇನ್ನೊಂದು ಸಲ, ಕೈಲಾಸಂರವರ ಸಂಸ್ಕೃತದ ಕ್ಲಾಸಿಗೆ ಇನ್ಸ್ಪೆಕ್ಟರ್ ಬರುವರಿದ್ದರು. ಇನ್ಸ್ಪೆಕ್ಟರ್ ಅಂದರೆ ಯಾವ ಮೇಷ್ಟ್ರಿಗೆ ಹೆದರಿಕೆ ಇರಲ್ಲ? ಎಲ್ಲಿ ಕೇಳಿದ ಪ್ರಶ್ನೆಗೆ ಹುಡುಗರು ಸರಿಯಾಗಿ ಉತ್ತರಿಸದೆ ಹೋದರೆ ಮುಖಭಂಗವಾಗುವುದೋ ಎಂದು ಕಾಡುತ್ತಿರುತ್ತೆ. ಅದಕ್ಕೆ ಅವರು ಕ್ಲಾಸಿನಲ್ಲಿ ಬುದ್ಧಿವಂತ ಮತ್ತು ಕುಡುಮಿ ಅಂಥವರನ್ನು ಪ್ರಶ್ನೆ ಕೇಳುವುದಕ್ಕೆ ಆರಿಸಿ ಇಟ್ಟುಕೊಂಡಿದ್ದರು. ಹಾಗೇ ಫಟಿಂಗನಾದ ಕೈಲಾಸಂಗೆ ಬಾಲ ಬಿಚ್ಚಕೂಡದೆಂದು ತಾಕೀತು ಮಾಡಿದ್ದರು. ಇನ್ಸ್ಪೆಕ್ಟರ್ ಗೆ ಹುಡುಗರೆಲ್ಲಾ ನಮಸ್ಕಾರ ಮಾಡಿದ ಮೇಲೇ ಮೇಷ್ಟ್ರು ಒಬ್ಬ ಹುಡುಗನನ್ನ ಪ್ರಶ್ನೆ ಕೇಳುವ ಮೊದಲೇ ಕೈಲಾಸಂ, ಕಿರು ಬೆಟ್ಟು ತೋರಿಸಿ, ಎದ್ದು ನಿಂತು ಕೊಂಡರು. ‘ಯೆಸ್!’ ಅಂತ ಇನ್ಸ್ಪೆಕ್ಟರ್ ಕೈಲಾಸಂನ ಸಂಭೋದಿಸಿದಾಗ, ಮೇಸ್ಟ್ರಿಗೆ ಜಂಘಾಬಲವೇ ಉಡುಗಿ ಹೋಯ್ತು. ಎದ್ದು ನಿಂತ ಕೈಲಾಸಂ, ಕಿರುಬೆರಳನ್ನು ಎತ್ತಿ ತೋರಿಸಿ, ‘ಇನ್ಸ್ಪೆಕ್ಟರ್ ಆಚಾರ್ಯ! ಮೂತ್ರ ವಿಸರ್ಜನಾರ್ಥಾಯ ಬಹಿರ್ದೇಶಂ ಗಚ್ಛಾಮಿ’ ( ನನಗೆ ಮೂತ್ರಕ್ಕೆ ಹೊರಗಡೆ ಹೋಗಬೇಕು) ಎಂದರು. ಅಚ್ಚ ಸಂಸ್ಕೃತದಲ್ಲಿ ಮೂತ್ರಕ್ಕೆ ಹೋಗಬೇಕೆಂದು ಕೇಳಿದ, ಅದನ್ನು ಕಲಿಸಿದ ಮೇಷ್ಟ್ರನ್ನು ಪ್ರಶಂಸಿಸಿದ ಇನ್ಸ್ಪೆಕ್ಟರ್, ಇದನ್ನೇ ಸಂಸ್ಕೃತದಲ್ಲಿ ಕೇಳುವ ಕ್ಲಾಸಿನ ಹುಡುಗರಿಗೆ ಬೇರೆ ಏನು ಕೇಳುವುದು ಎಂದು, ಕ್ಲಾಸನ್ನು ಹೊಗಳಿ ಇನ್ಸ್ಪೆಕ್ಟರ್ ಹೊರಟು ಹೋದರು. ಕ್ಲಾಸಿಗೆ ಕ್ಲಾಸನ್ನೇ ಉಳಿಸಿದ ಕೈಲಾಸಂ ಅಂದು ಕ್ಲಾಸಿಗೆ ಹೀರೊ ಮತ್ತು ಮೇಷ್ಟ್ರಿಗೆ ಪ್ರಿಯನಾದ.

ಕೈಲಾಸಂ ಮಹಾರಾಜ ಕಾಲೇಜಿನಲ್ಲಿ ಓದುತ್ತಿದ್ದಾಗ, ಅವರ ಟೈಮ್ ಟೇಬಲ್ ಬೆಳಿಗ್ಗೆ ವ್ಯಾಯಾಮ, ಸಂಜೆ ಫುಟ್ಬಾಲ್; ಟೈಮ್ ಸಿಕ್ಕಿದಾಗ ಅದರ ಮಧ್ಯವೇ ಓದು. ಅವರನ್ನು ಬಹಳ ಜನ ಜಾಸ್ತಿ ಫೀಲ್ಡಿನಲ್ಲೇ ನೊಡುತ್ತಿದ್ದರು. ಬೆಳಗ್ಗೆ ಅವರು ಹಾಸ್ಟೆಲ್ಲಿನ ರೂಮಿಗೆ ಬರುವ ಹೊತ್ತಿಗೆ ಅವರ ರೂಮ್ ಮೇಟ್ ಜೋರಾಗಿ ಓದುತ್ತಿದ್ದನು. ಅವನು ಯ್ರಾಂಕ್ ವಿದ್ಯಾರ್ಥಿ. ಪರೀಕ್ಷೆಯ ಸಮಯದಲ್ಲೂ ಹೀಗೇ ನಡೆಯುತ್ತಿತ್ತು. ಪರೀಕ್ಷೆಯಲ್ಲಿ ಕೈಲಾಸಂಗೆ ಅವನಿಗಿಂತ ಜಾಸ್ತಿ ಮಾರ್ಕ್ಸ್ ಬಂತು. ಅವನು ಕಂಪ್ಲೇಂಟ್ ಮಾಡಿದ್ದಕ್ಕೆ ಇಬ್ಬರ ಉತ್ತರ ಪತ್ರಿಕೆಯನ್ನೂ ಚೆಕ್ ಮಾಡಿದಾಗ, ಕೈಲಾಸಂ ಅವನಿಗಿಂತ ಚೆನ್ನಾಗಿ ಮಾಡಿದ್ದರು! ಕೈಲಾಸಂ ಹೀಗೆ ವಿವರಣೆ ಕೊಟ್ಟರು . ‘ನಾನು ಬರುವ ವೇಳೆಗೆ ಅವನು ಗಟ್ಟಿಯಾಗಿ ಓದುತ್ತಿದ್ದ. ನನಗೋಸ್ಕರವಾಗಿಯೇ ಜೋರಾಗಿ ಓದುತ್ತಿದ್ದಾನೋಂತ ನಾನು ಮಲಗಿದಾಗಲೂ ಶ್ರಧ್ಧೆಯಿಂದ ಗಮನವಿಟ್ಟು ಅವನು ಓದುವುದನ್ನು ಕೇಳುತ್ತಿದ್ದೆ. ಅವನಿಗೆ ನಿಜವಾಗಿಯೂ ನಾನು ಥ್ಯಾಂಕ್ಸ್ ಹೇಳಬೇಕು!’ ಎಂದರು.

ಮೈಸೂರಿನಲ್ಲಿ ಓದುತ್ತಿದ್ದ ಕೈಲಾಸಂಗೆ ಆಗಾಗ್ಗೆ ಬೆಂಗಳೂರಿಗೆ ರೈಲು ಪ್ರಯಾಣ ಅಭ್ಯಾಸವಾಗಿತ್ತು. ರೈಲು ವಿಪರೀತ ನಿಧಾನವಾಗಿ, ಹೊಗೆಯನ್ನು ಧಾರಾಕಾರವಾಗಿ ಬಿಡುತ್ತಾ ಹೋಗುವ ಕಾಲವದು. ಇದರಿಂದ ಬೇಸತ್ತ ಕೈಲಾಸಂ, ಅವರು ದೊಡ್ಡವರಾದ ಮೇಲೆ, ಒಂದು ಸರ್ತಿ ಮೈಸೂರನ್ನು ಸೇರಿದ ಮೇಲೆ, ಹಾಫ್ ಟಿಕೆಟನ್ನ ಟಿ.ಸಿ.ಗೆ ಕೊಟ್ಟು ಮುಂದಕ್ಕೆ ಹೋದಾಗ, ಟಿ.ಸಿ., ‘ಇಲ್ಲಿ ಬನ್ರಿ! ನಾಚಿಕೆ ಆಗಲ್ವಾ ನಿಮಗೆ, ಇಷ್ಟು ದೊಡ್ಡವರಾಗಿ, ಹಾಫ್ ಟಿಕೆಟ್ ಕೊಡ್ತಿರಲ್ಲಾ..’ ಅಂದಾಗ, ‘ನಾನು ಹೊರಟಾಗ ಚಿಕ್ಕವನಾಗಿದ್ದೆ ಸಾರ್! ಅದಕ್ಕೆ ಹಾಫ್ ಟಿಕೆಟ್ ತೊಗೊಂಡೆ. ಮದ್ಯೆ ನಾನು ಬೆಳದಿದ್ದರೆ ನನ್ನ ತಪ್ಪೇನು ಸಾರ್!’ ಅಂತ ಪ್ರಶ್ನಿಸಿದ್ದರು.

ಇನ್ನೊಂದು ಸಲ ಅವರು ಮೈಸೂರಿಗೆ ಪ್ರಯಾಣ ಮಾಡುತ್ತಿದ್ದಾಗ, ರೈಲು ಡಬ್ಬಿಯ ಕಿಟಕಿಯಿಂದ, ಬೀಜದ ಕಾಳುಗಳನ್ನು ಹೊರಗಡೆ ಬಿಸಾಕುತ್ತಿದ್ದರು. ಸ್ವಲ್ಪ ಹೊತ್ತು ನೋಡಿ ಸಹ ಪ್ರಯಾಣಿಕರು ಯಾಕೆ ಹೀಗೆ ಎಸೆಯುತ್ತಿದ್ದೀರಿ ಎಂದು ಕೇಳಿದಾಗ, ಕೈಲಾಸಂ, ನಾನು ವಾಪಸ್ಸು ಬರುವಾಗ ಹೊಟ್ಟೆ ಹಸಿದರೆ, ಈ ಬೀಜಗಳಿಂದ ಬರುವ ಹಣ್ಣುಗಳು ತಿನ್ನಬಹುದು ಅಂತ ಬೀಜಗಳನ್ನು ಎಸೆಯುತ್ತಿದ್ದೇನೆ, ಅಂದರು! ತೀಕ್ಷ್ಣ ಬುದ್ಧಿ, ತುಂಬಿ ತುಳುಕುವ ಹಾಸ್ಯ ಪ್ರಜ್ಞೆ ಇವರನ್ನು ಎಲ್ಲಾ ಸಂದರ್ಭದಲ್ಲೂ ಬೇರೆ ದೃಷ್ಟಿಕೋನದಲ್ಲಿ ನೋಡುವ ಕಲೆ ಇವರಲ್ಲಿತ್ತು.

ಒಂದು ಸಲ ಹೋಟೆಲ್ ನಲ್ಲಿ ತೆಳ್ಳಗಿರುವ ಸಾದಾ ದೋಸೆ ತಿನ್ನುತ್ತಿದ್ದಾಗ;

ಕೈಲಾಸಂ, (ಮಾಲಿಕರಿಗೆ); ಆರಿಸ್ರಿ! ಬೇಗ ಫ್ಯಾನ್ ಆರಿಸ್ರಿ!
ಮಾಲಿಕ : ಯಾಕ್ಸಾರ್? ಗಾಳಿಗೆ ಆರೋಗುತ್ತೇಂತನಾ?’
ಕೈಲಾಸಂ: ಇಲ್ರೀ! ಗಾಳಿಗೆ ಎಲ್ಲಿ ಹಾರೋಗುತ್ತೇಂತ ಫ್ಯಾನ್ ಆರ್ಸಕ್ಕೆ ಹೇಳ್ದೆ!

ಇನ್ಸ್ಪೆಕ್ಟರ್ ಗೆ ಹುಡುಗರೆಲ್ಲಾ ನಮಸ್ಕಾರ ಮಾಡಿದ ಮೇಲೇ ಮೇಷ್ಟ್ರು ಒಬ್ಬ ಹುಡುಗನನ್ನ ಪ್ರಶ್ನೆ ಕೇಳುವ ಮೊದಲೇ ಕೈಲಾಸಂ, ಕಿರು ಬೆಟ್ಟು ತೋರಿಸಿ, ಎದ್ದು ನಿಂತು ಕೊಂಡರು. ‘ಯೆಸ್!’ ಅಂತ ಇನ್ಸ್ಪೆಕ್ಟರ್ ಕೈಲಾಸಂನ ಸಂಭೋದಿಸಿದಾಗ, ಮೇಸ್ಟ್ರಿಗೆ ಜಂಘಾಬಲವೇ ಉಡುಗಿ ಹೋಯ್ತು. ಎದ್ದು ನಿಂತ ಕೈಲಾಸಂ, ಕಿರುಬೆರಳನ್ನು ಎತ್ತಿ ತೋರಿಸಿ, ‘ಇನ್ಸ್ಪೆಕ್ಟರ್ ಆಚಾರ್ಯ! ಮೂತ್ರ ವಿಸರ್ಜನಾರ್ಥಾಯ ಬಹಿರ್ದೇಶಂ ಗಚ್ಛಾಮಿ’ ( ನನಗೆ ಮೂತ್ರಕ್ಕೆ ಹೊರಗಡೆ ಹೋಗಬೇಕು) ಎಂದರು. 

ಆಗಿನ ಕಾಲದಲ್ಲೇ ಕೈಲಾಸಂ ಇದನ್ನು ಬರೆದಿದ್ದರು.
ಕೈಲಾಸಂ: ( ಒಂದು ಬೋರ್ಡನ್ನು ನೋಡುತ್ತಲೇ ) ‘ಇದೇನಿದು, ನಗ್ಬೇಕೋ ಅಳ್ಬೇಕೋ ತಿಳೀತಿಲ್ವೇ! ಈ ಕಾಲದಲ್ಲಿ ಎಲ್ರೂ ‘ಬ್ರಾಮಿನ್ಸ್ ಬೇಡ್ರಿ.. ಬ್ರಾಮಿನ್ಸ್ ಬೇಡ್ರಿ’ ಅಂತ ಬಡ್ಕೋತಿರಬೇಕಾದ್ರೆ, ಈ ಬ್ರೆಡ್ ಅಂಗಡಿಯೋವ್ನು, ‘ಬ್ರಾಮಿನ್ಸ್ ಬೇಕರಿ’ ಅಂತ ಬೋಲ್ಡಾಗಿ ಬೋರ್ಡೇ ಹಾಕಿದ್ದಾರೆ ನೋಡಿ! ಏನಾಶ್ಚರ್ಯ, ಏನೆದೆಗಾರ್ಕೆ ಅಂತೀನಿ!’

ಕೈಲಾಸಂ ಅವರಿಗೆ ಪ್ರಾಸ ಬಲು ಪ್ರಿಯ. ಅವರ ಬಾಯಿಂದ ಪ್ರಾಸ ಹಾಗೇ ಉದುರುತಿತ್ತು.

‘ಬೆದರ್ಕೊಂಡು ಬಿದ್ದಿರೋದಕ್ಕೆ ಬದಲಾಗಿ ಬ್ರೇವಾಗಿ ಬೆಂಕೀಲ್ ಬೀಳೋದ್ ಮೇಲು’
‘ಬೀದೀಲೇನಾದ್ರೂ ಬಿಡ್ಗಾಸು ಬಿದ್ದಿದೇಂತ ಬಗ್ನೋಡ್ತಾ ಬರ್ತಿದೀಯೇನೋ ಬಕವೇ’
‘ನನ್ ಕಟ್ಹಾಕ್ಕೋಳ್ಳೊ ಕಾಲೇಜ್ನ ಕಟ್ಟೋಕೆ ಕಲ್ಲಿನ್ನೂ ಕೈಗ್ಸಿಕ್ಕಿಲ್ಲ ಕಂಟ್ಟ್ರಾಕ್ಟರ್ ಗೆ ’

ಕೈಲಾಸಂ ಅವರಿಗೆ ಇಂಗ್ಲಿಷ್ ನಲ್ಲಿಯೂ ಚೆನ್ನಾಗಿ ಪಾಂಡಿತ್ಯವಿತ್ತು. ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿ, ಮದ್ರಾಸಿನಲ್ಲಿ ಹಿಂದೂ ಹೈಸ್ಕೂಲ್ ಸೇರಿದರು. ಅಲ್ಲಿ ಸಿಲ್ವರ್ ಟಂಗ್ ಎಂದು ಇಂಗ್ಲಿಷ್ ಪಾಂಡಿತ್ಯದಲ್ಲಿ ಪ್ರಸಿದ್ಧರಾದ ರೈಟ್ ಆನರಬಲ್ ಶ್ರೀನಿವಾಸ ಶಾಸ್ಟ್ರಿಗಳು ಅಲ್ಲಿ ಮುಖ್ಯೋಪಾದ್ಯರಾಗಿದ್ದರು. ಅವರ ಪ್ರಭಾವ ಕೈಲಾಸಂ ಮೇಲೆ ಬಹಳ ಬೀರಿತ್ತು. ಹೀಗಾಗಿ ಮುಂದೆ ಅವರು ಇಂಗ್ಲಿಷಿನಲ್ಲಿ ಕೂಡ ಚೆನ್ನಾಗಿ ಬರೆಯಲು ಕಾರಣವಾಗಿತ್ತು.

ಮುಂದೆ ಕೈಲಾಸಂ ಮದರಾಸಿನಲ್ಲಿಯೇ ಪ್ರೆಸಿಡೆಂಸಿ ಕಾಲೇಜಿನಲ್ಲಿ ಎಫ್.ಎ. ಮತ್ತು ಬಿ.ಎ. ಪರೀಕ್ಷೆಯಲ್ಲಿ ಮೊದಲನೆ rankನಲ್ಲಿ ತೇರ್ಗಡೆಯಾದರು. ಅವರು ಜಿಯಾಲಜಿಯಲ್ಲಿ ಚೆನ್ನಾಗಿ ಓದಿದ್ದರಿಂದ, ಅವರ ತಂದೆ ಕೈಲಾಸಂ ಅವರನ್ನು ಅದರಲ್ಲಿಯೇ ವಿಶೇಷತೆ ಪಡೆಯಲು ಅವರನ್ನು ಇಂಗ್ಲೆಂಡಿಗೆ ೧೯೦೯ರಲ್ಲಿ ಕಳಿಸಿದರು. ಕೈಲಾಸಂರ ಉನ್ನತ ವ್ಯಾಸಾಂಗಕ್ಕೆ ಮೈಸೂರು ಮಹಾರಾಜರೂ ಸಹಾಯ ಮಾಡಿದರು ಎಂದು ಹೇಳಲಾಗುತ್ತೆ. ಆಗಿನ ಕಾಲದಲ್ಲಿ ಹೊರಗಡೆ ಮಕ್ಕಳನ್ನು ವಿದೇಶಕ್ಕೆ ಕಳಿಸುವ ಮೊದಲು ಮುಂಜಾಗ್ರತೆಯಿಂದ ಮದುವೆ ಮಾಡಿಯೇ ಕಳಿಸುತ್ತಿದ್ದರು. ಕೈಲಾಸಂಗೂ ವಿದೇಶಕ್ಕೆ ಹೋಗುವ ಮುಂಚೆ ಕಮಲ ಅನ್ನುವ ಹುಡುಗಿಯ ಜೊತೆ ಮದುವೆಮಾಡಿ ಕಳಿಸಿದರು. ಲಂಡನ್ ನಲ್ಲಿ ಕೈಲಾಸಂ ಜಿಯಾಲಜಿಯಲ್ಲಿ ಮುಂದೆ ಓದಿ ಉನ್ನತಶ್ರೇಣಿಯಲ್ಲಿ ತೇರ್ಗಡೆಯಾದರು. ಚಿನ್ನದ ಪದಕವನ್ನು ಸಂಪಾದಿಸಿ ಅವರು ಎಫ್. ಆರ್.ಎಸ್.ಎಮ್. (ಲಂಡನ್) ಎಫ್. ಆರ್.ಜಿ.ಎಸ್. ಡಿಗ್ರಿಗಳನ್ನು ಪಡೆದರು. ಆಗಿನ ಕಾಲದಲ್ಲಿ ಫೆಲೊ ಆಫ್. ರಾಯಲ್ ಸೊಸೈಟಿಯಿಂದ ಫೆಲೊಷಿಪ್ ಸಿಕ್ಕಿದವರು ಬಹಳ ಕಡಿಮೇನೆ.

ನಾರಾಯಣ ಶಾಸ್ತ್ರಿ ರೋಡ್

ಇಂಡಿಯಾದಲ್ಲಿದ್ದ ಹಾಗೇನೆ ಅವರ ಕಾಲವನ್ನು ಓದುವುದರಲ್ಲೇ ಕಳೆಯಲಿಲ್ಲ. ಅವರಿಗೆ ವಿವಿಧ ಕ್ಷೇತ್ರದಲ್ಲಿ ಆಸಕ್ತಿ ಇದ್ದುದರಿಂದ ಅವರಿಗೆ ಬಹಳ ಸ್ನೇಹಿತರಿದ್ದರು. ಫುಟ್ಬಾಲ್, ಬಾಡಿ ಬಿಲ್ಡಿಂಗ್, ವ್ಯಾಯಾಮ, ನಾಟಕ, ಸಂಗೀತ ಇವೆಲ್ಲವೂ ಅವರಿಗೆ ಪ್ರಿಯವಾದದು. ಇದೆಲ್ಲದರಲ್ಲೂ ಪರಿಣಿತಿ ಹೊಂದಿದ್ದರು. ಮಹಾರಾಜಕುಮಾರ ಎಡ್ವರ್ಡ ಇವರ ಜೊತೆಯಲ್ಲಿ ಫುಟ್ ಬಾಲ್ ಆಡುತ್ತಿದ್ದ. ಪ್ರೇಮಿಗಾಗಿ ಸಿಂಹಾಸನವನ್ನೇ ತೊರೆದ ವ್ಯಕ್ತಿ ಇತಿಹಾಸದಲ್ಲೇ ಮೊದಲ ವ್ಯಕ್ತಿ ಆಗಿರಬೇಕು ಎಡ್ವರ್ಡ! ಕೈಲಾಸಂ ಗೋಲಿಯಾಗಿದ್ದರು.

ಕೈಲಾಸಂ ಸಂಗೀತದಲ್ಲಿ ಎಷ್ಟು ಆಸಕ್ತಿ ಅದರಲ್ಲಿ ಎಷ್ಟು ಪಾಂಡಿತ್ಯವಿತ್ತೆಂದರೆ ಅವರು ಎಲ್ಲಾ ತರಹದ ವಾದ್ಯವನ್ನು ಲೀಲಾಜಾಲವಾಗಿ ನುಡಿಸಬಲ್ಲವರಾಗಿದ್ದರು. ಮುಂದೆ ಎಷ್ಟೋ ವರ್ಷಗಳದ ಮೇಲೆ, ಅವರು ಭಾರತಕ್ಕೆ ಬಂದ ಮೇಲೆ ನನ್ನ ತಾಯಿಗೆ ಹೀಗೆ ಅನುಭವ ಆಯಿತು.

ಸಾಧಾರಣವಾಗಿ ‘ವಧು ಪರೀಕ್ಷೆ’ ಸಾಮಾನ್ಯ. ಕಾರಣಾಂತರದಿಂದ ನಮ್ಮ ತಾಯಿ ಅನ್ನಪೂರ್ಣ ಗೆ ‘ವರಪರೀಕ್ಷೆ’ಗೆ ವರನ ಮನೆಗೆ ಹೋಗಬೇಕಾಗಿ ಬಂತು. ಯಾವ ಹುಡುಗಿಯೇ ಆಗಲಿ, ತನ್ನ ಮನೆಯಲ್ಲಿ ಹುಡುಗ ತನ್ನನ್ನು ನೋಡಲು ಬರುತ್ತಾನೆಂದರೆ, ಹೆತ್ತವರ ಮತ್ತು ತನ್ನ ಕುಟುಂಬದವರ ಜೊತೆ ಇದ್ದರೆ, ಮನಸ್ಸಿಗೆ ಅಷ್ಟು ದುಗುಡ, ಹೆದರಿಕೆ ಇರುವುದಿಲ್ಲ. ಹಾಗಾಗಿ ಬೇರೆ ಮನೆಯಲ್ಲಿ ಹೋಗಿ, ಅವರು ಹಾಡನ್ನು ಹೇಳು ಅಂದಾಗ, ಹುಡುಗಿ ಬಹಳ ಹೆದರಿತ್ತು. ಹುಡುಗನ ಅಣ್ಣನಾಗಿ ಕೈಲಿ ಹಾರ್ಮೋನಿಯಂ ಹಿಡಿದಿದ್ದ ಕೈಲಾಸಂ ಹುಡುಗಿಗೆ, ‘ನೀನು ಧೈರ್ಯವಾಗಿ ಹಾಡು! ತಪ್ಪಾದರೆ ಪರವಾಗಿಲ್ಲ. ನಾನು ರಾಗ, ತಾಳವನ್ನು ‘ಅಡ್ಜಸ್ಟ್’ ಮಾಡ್ತೀನಿ’ ಎಂದು ಹುಡುಗಿಗೆ ಹುರುದುಂಬಿಸಿದರು. ಹಾಡು ಸರಿಯಾಗಿ ಹಾಡಿ, ಎಲ್ಲಾ ಸಲೀಸಾಗಿ ಮದುವೆ ಆಗಿ ಬಹಳ ವರ್ಷಗಳಾದಮೇಲೂ ನನ್ನ ತಾಯಿ ಕೈಲಾಸಂರ ಆವತ್ತಿನ ಸಹಾಯವನ್ನು ಜ್ಞಾಪಿಸಿಕೊಳ್ಳುತ್ತಿದ್ದರು. ಇನ್ನೊಂದು ವಿಷಯ. ಅವರು ಹಾರ್ಮೋನಿಯಂಅನ್ನು ಎಲ್ಲರ ತರಹ ಇಟ್ಟುಕೊಂಡು ನುಡಿಸಿತ್ತಿರಲಿಲ್ಲವಂತೆ. ಕೀಲು ಮಣೆಯನ್ನು ಎದುರಿಗೆ ಬರುವ ಹಾಗಿಟ್ಟುಕೊಂಡು ನುಡಿಸುತ್ತಿದ್ದರಂತೆ. ಮದ್ಯೆ ಮದ್ಯೆ ಅದನ್ನು ಬದಲಾಯಿಸಿ ನುಡಿಸುತ್ತಿದ್ದರಂತೆ!

ಲಂಡನ್ ನಲ್ಲಿ ಅವರು ಒಂದು ಸಲ, ನೈಟ್ ಕ್ಲಬ್ಬಿನಲ್ಲಿದ್ದಾಗ ಅಲ್ಲಿ ಒಬ್ಬನು ಒಂದು ಹಾಡನ್ನು ಹಾಡಿ ಬೇರೆಯಾರಾದರೂ ಹಾಗೆ ಹಾಡಲು ದಮ್’ ಇದೆಯಾ ಎಂದು ಚಾಲೆಂಜ್’ ಹಾಕಿದ. ಆಗಿನ ಕಾಲದಲ್ಲಿ ನೈಟ್ ಕ್ಲಬ್ಬಿನಲ್ಲಿ ಇದು ಸರ್ವ ಸಾಮಾನ್ಯವಾಗಿತ್ತು. ನೈಟ್ ಕ್ಲಬ್ಬಿನಲ್ಲಿ ‘ವಾಡಿವಿಲ್’ – ಅಂದ್ರೆ ವಿವಿಧ ವಿನೋದಾವಳಿ ಕಾರ್ಯಕ್ರಮಗಳು ಬಹಳ ಜನ ಪ್ರಿಯವಾಗಿತ್ತು. ಅವನು ಹಾಡು ಹೀಗೆ ಹಾಡಿದ.

ಕಾ ಆಂ ಆಂ ಆಂ ಸ್ಟಾಂಟಿನೋಪಲ್
ಕಾಂಸ್ಟಾನ್ಟಿನೋಪಲ್…
ಸಿಓಎನ್ ಎಸ್ಟಿಎನ್ ಟಿಐಎನ್ ಓಪಿಎಲ್ ಇ

ಕಾ ಆಂ ಆಂ ಆಂ ಸ್ಟಾಂಟಿನೋಪಲ್
ಯೂಸ್ ಯುವರ್ ಪ್ಲಕ್ ಎಂಡ್ ಟ್ರೈ ಯುವರ್ ಲಕ್
ಎಂಡ್ ಸಿಂಗ್ ಎಲಾಂಗ್ ವಿಥ್ ಮಿ

ಕಾ ಆಂ ಆಂ ಆಂ ಸ್ಟಾಂಟಿನೋಪಲ್

ಯಾರೂ ಹೋಗದಿದ್ದಾಗ ಕೈಲಾಸಂ ಎದ್ದು ಹೋದರು.
ಅದೇ ರಾಗ, ತಾಳಬದ್ದವಾಗಿ ಪಿಯಾನೋಗೆ ಅನುಸರಿಸಿ ಕೈಲಾಸಂ ಹಾಡಿದರು.

ಕಾ ಆಂ ಆಂ ಆಂ ಸ್ಟಾಂಟಿನೋಪಲ್
ಕೋ ಓ ಓ ಓ ಳೀ ಕೆ ರಂಗಾ
ನಾನ್ ಕೋಳೀಕೆ ರಂಗಾ
‘ಕೋ’ನು ’ಳೀ’ನು ’ಕೆ’ನು ’ರ’ನು ಸೊನ್ನೆ ಗಾ
ನಂತಿಪ್ಪಾರಳ್ಳಿ ಬೋರನ್ ಅಣ್ಣನ್ ತಮ್ಮನ್ ದೊಡ್ಮಗಾ
ಕಕೋತ್ವ-ಳೀ, ಕಕೇತ್ವ -ರ, ಮತ್ಸೊನ್ನೆ- ಗಾ
ಇದ್ದನ ಆಡಾಕ್ ಬರ್ದೆ ಬಾಯ್ ಬುಡಾನು ಬೆಪ್ಪು ನನ್ಮಗಾ
ಕೋಳೀಕೆ ರಂಗಾ

ಚಪ್ಪಾಳೆ ಸುರಿಮಳೆ ಮಧ್ಯ ಪಿಯಾನೊ ಬಾರಿಸುವವನು ಕೈಲಾಸಂಗೆ ಇಪ್ಪತ್ತು ಗಿನಿ ಕೊಟ್ಟ. ಇನ್ನೊಮ್ಮೆ ಇನ್ನೊಬ್ಬ ತನ್ನ ತರಹ ಯಾರಾದ್ರೂ ಹಾಡ್ತೀರಾಂತ ಇನ್ನೊಬ್ಬ ಸವಾಲು ಹಾಕಿದ.

‘ಇಟ್ಸ್ ಎ ಲಾಂಗ್ ವೇ ಟು ಟಿಪ್ಪರೇರಿ….
ಲಾಂಗ್ ವೇ ಟು ಗೊ
ಮೈ ಬೆಸ್ಟ್ ವಿಷಸ್ ಈಸ್ ದೇರ್’

ಕೈಲಾಸಂ ಹಾಡತೊಡಗಿದರು:

ತಿಪ್ಪಾರಳ್ಳಿ ಬಲು ದೂರ
ನಡಿಯಾಕ್ ಬಲುದೂರ
ನಮ್ ತಿಪ್ಪಾರಳ್ಳಿ ಬಲು ದೂರ..

ತಿಪ್ಪಾರಳ್ಳಿ ಬಲು ದೂರ
ನನೆಂಡ್ರರೋತಾಕೆ ಬಲು ದೂರ
ಬೇಡವ್ವ ಬಳೇಪೇಟೆ
ಬೇಡವ್ವ ಬಲೇಪೇಟೆ
ನಮಸ್ಕಾರ ನಗರ್ತಪೇಟೆ
ನಂತಿಪ್ಪಾರಳ್ಳಿ ಬಲು ದೂರ
ಅದರ್ ಅವ್ಳೆ ನಂಬಸ್ವಿ

ಹೀಗೆ ಓದು, ಆಟ, ನಾಟಕ, ಸಂಗೀತ ಎಲ್ಲದರಲ್ಲೂ ಪರಿಣಿತರಾಗಿ ೧೯೧೫ರಲ್ಲಿ ಕೈಲಾಸಂ ಭಾರತಕ್ಕೆ ಹಿಂದುರಿಗಿದರು. ಜೊತೆಗೆ ಸಿಗರೆಟ್ ಮತ್ತು ಕುಡಿತ ಇವರಲ್ಲಿ ಊರ್ಜಿತವಾಗಿಬಿಟ್ಟಿತ್ತು.

(ಟಿ.ಪಿ. ಕೈಲಾಸಂ, ಇ. ಆರ್. ರಾಮಚಂದ್ರನ್ ಅವರ ತಂದೆ ದಿವಂಗತ ರಾಮನಾಥ ರವರ ಸೋದರ ಅತ್ತೆಯ ಮಗ)
(ಮುಂದುವರಿಯುವುದು)