ಅದು ಸಂಜೆಯಲ್ಲಿ ಬಿರಿಯುವ ಹೂವು. ಬೆಳಗ್ಗೆವರೆಗೆ ಬಿಟ್ಟರೆ ಪೂರ್ತಿಯಾಗಿ ಅರಳುತ್ತದೆ. ಅರಳಿದ ಮೇಲೆ ಕಟ್ಟಿದರೆ ಹೂವಿನ ಎಸಳು ಉದುರುತ್ತದೆ. ಹಾಗಾಗಿ, ರಾತ್ರಿ ಹೊತ್ತಿನಲ್ಲಿ ದೀಪದ ಬೆಳಕಿನಲ್ಲಿ ಕಟ್ಟಬೇಕಿತ್ತು. ಹೀಗೆ ಕಟ್ಟಿದ ಮಾಲೆಯನ್ನು ಮಾರನೆಯ ಬೆಳಗ್ಗೆ ಮುಡಿಯಬೇಕು/ದೇವರಿಗೆ ಅರ್ಪಿಸಬೇಕು ಇಲ್ಲವೆ ಬಿಸಿಲಿನಲ್ಲಿ ಬತ್ತದ ಹುಲ್ಲಿನ ಮೇಲೆ ಒಣಗಿಸಿ ಅದನ್ನು ಕಾಪಿಡಬೇಕು. ಹೀಗೆ ಕಾಪಿಡುವ ಮಾಲೆ ಮೂರುತಿಂಗಳ ಕಾಲ ಕಪ್ಪಾಗದೆ ಇರುತ್ತದೆ. ಅದರ ಪರಿಮಳ ಕೂಡ ಅಳಿಯುವುದಿಲ್ಲ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಹತ್ತೊಂಭತ್ತನೆಯ ಕಂತು ನಿಮ್ಮ ಓದಿಗೆ
ಬೆಳ್ಳಂಬೆಳಗ್ಗೆ ಯಾರೋ ಗೊಣಗುತ್ತಿದ್ದರು. ‘ಬೆಳಗ್ಗೆ ನಾನು ಬಾಗ್ಲಿಗೆ ನೀರು ಹಾಕಕ್ಕೆ ಬರಷ್ಟರಲ್ಲಿ ಯಾರೋ ನಮ್ಮನೆ ಗಿಡದ ಹೂವುಗಳ್ನ ದಿನಾ ಕೊಯ್ದು ಬಿಡ್ತಾರೆʼ ಅಂತ. ʻಹೋಗ್ಲಿಬಿಡಿ. ದೇವ್ರಿಗೆ ಅಂತ ಕೊಯ್ಕೊಂಡು ಹೋಗ್ತಾರೆ. ಹೂವು ನಿಮ್ಮನೆ ಗಿಡದ್ದು ಅಂದ್ಮೇಲೆ ನಿಮಗೂ ತುಸು ಪುಣ್ಯ ಬರುತ್ತೆ ಬಿಡಿʼ ಅಂತ ಇನ್ಯಾರೋ ಅವರಿಗೆ ಸಮಾಧಾನದ ಮಾತುಗಳನ್ನು ಆಡುತ್ತಿದ್ದರು. ಆ ಮಾತನ್ನು ಕೇಳಿ ನನಗೆ ಹರಿಹರ ಕವಿಯ ಪುಷ್ಪ ರಗಳೆಯಲ್ಲಿ ವರ್ಣಿತವಾಗಿರುವ ‘ಏನವ್ವ ಸಂಪಿಗೆಯೆ ಶಿವನ ಸಿರಿಮುಡಿಗಿಂದು ನೀನೀವ ಪೊಸ ಕುಸುಮಮಂ ನೀಡು ನೀಡೆಂದು’ ಕೇಳುವ ಸಾಲುಗಳು ನೆನಪಾದವು. ದೇವರಿಗೆ ಅರ್ಪಿಸಲೆಂದು ಹೂ ಕೊಯ್ಯುವಾಗ ಗಿಡವನ್ನು ಬೇಡಿಕೊಳ್ಳುವ ಕವಿಯ ಪರಿಕಲ್ಪನೆ ಎಷ್ಟು ಸುಂದರವಾದುದು.
ನಗರ ಪ್ರದೇಶದ ಬಡಾವಣೆಗಳಲ್ಲಿ ವಾಸಿಸುವ ಬಹುತೇಕ ಜನರು ಬೆಳಗ್ಗೆ ತಮ್ಮ ಹೂಗಿಡಗಳಿಂದ ಹೂಕೊಯ್ದು ದೇವರ ಪೂಜೆ ಮಾಡಬೇಕು ಎಂದುಕೊಂಡರೂ ಅನೇಕ ಬಾರಿ ಅದು ಸಾಧ್ಯವಾಗುವುದಿಲ್ಲ. ನಿವೇಶನದ ಬಹುಪಾಲು ಜಾಗವನ್ನು ಮನೆ ಕಟ್ಟಲಿಕ್ಕೆ ಬಳಸಿದ ಮೇಲೆ ಹೂಗಿಡಗಳಿಗೆ ಉಳಿಯುವ ಸ್ಥಳ ಕಡಿಮೆ. ಏನೇ ಇರಲಿ, ಪೂಜೆಗೆ ದಿನವೂ ಹೂವು ಬೇಕೇ ಬೇಕು. ಪ್ರತಿದಿನವೂ ಹೂವನ್ನು ಕೊಳ್ಳುವುದು ಆರ್ಥಿಕವಾಗಿ ಹೊರೆಯೇ. ಪೂಜೆ ಎನ್ನುವ ಪದವೇ ಹೂವಿನಿಂದ ಮಾಡುವುದು ಎನ್ನುವ ಅರ್ಥವನ್ನು ಕೊಡುವಂಥದು. ಹೂವು ಸೌಂದರ್ಯಕ್ಕೆ, ಆರಾಧನೆಗೆ ಎರಡಕ್ಕೂ ಅಗತ್ಯವೇ. ಹೂವಿನೊಂದಿಗಿನ ಮನುಷ್ಯ ಬಾಂಧವ್ಯ ಬಹಳ ಪುರಾತನವಾದಷ್ಟೆ ಭಾವನಾತ್ಮಕವಾದದ್ದೂ ಹೌದು. ಇದು ಕೀಟಗಳನ್ನು ಆಕರ್ಷಿಸುವ ಗುಣವನ್ನೂ ಹೊಂದಿದೆ. ಕನ್ನಡದಲ್ಲಿ ಹೂವು, ಮಲರು ಎನ್ನುವ ಹೆಸರಿದ್ದರೆ ಸಂಸ್ಕೃತದಲ್ಲಿ ಕುಸುಮ, ಸುಮ, ಪುಷ್ಪ ಎನ್ನಲಾಗುತ್ತದೆ.
ದೇವರ ಪೂಜೆಗೆ ಮಾತ್ರವಲ್ಲ, ಎಷ್ಟೊಂದು ಸಾಮಾಜಿಕ ಕಾರ್ಯಕ್ರಮಗಳಲ್ಲಿಯೂ ಹೂವಿಗೆ ಪ್ರಾಧಾನ್ಯವಿದೆ. ಮಹಿಳೆಯರ ಮುಡಿಗೆ ಏರುವುದರೊಂದಿಗೆ ಹಲವರ ಕೊರಳನ್ನು ಅಲಂಕರಿಸಲು, ಸನ್ಮಾನಕ್ಕೆ, ಗೌರವಸೂಚಿಸಲು ಹೀಗೆ ಹೂವಿನ ಬಳಕೆ ವಿಶೇಷವಾದುದು. ನಾವು ಚಿಕ್ಕವರಿರುವಾಗಿನ ನೆನಪಾಗುತ್ತದೆ. ತುಸು ದೂರದ ಹಿತ್ತಿಲಿನಿಂದ ಮಾಗಿ ಮಲ್ಲಿಗೆ, ಸಂಪಿಗೆ ಹೂಗಳನ್ನು ಕೊಯ್ದು ತರುತ್ತಿದ್ದೆವು. ಮನೆಯ ಹಿತ್ತಿಲಿನಲ್ಲಿ ಬೇಕಷ್ಟು ಹೂವಿನ ಗಿಡಗಳಿದ್ದರೂ ಅಲ್ಲಿಲ್ಲದ ಹೂವನ್ನು ಬೇರೆಡೆಯಿಂದ ತರುವುದು ಒಂದು ತರಹ ಖುಶಿಕೊಡುತ್ತಿತ್ತು. ಹಳ್ಳಿಯ ಮನೆಯ ಅಂಗಳ, ಹಿತ್ತಿಲು ಅಂದರೆ ಹೂಗಿಡಗಳ ಆಗರವಾಗಿರುತ್ತಿದ್ದ ದಿನಗಳವು. ಈಗಲೂ ಕೆಲವರು ಹೂವಿನ ಗಿಡಗಳನ್ನು ಪೋಷಿಸಿ ಬೆಳೆಸುವ ಹವ್ಯಾಸವನ್ನು ಉಳಿಸಿಕೊಂಡಿದ್ದಾರೆ.
ಎಷ್ಟೊಂದು ಬಗೆಯ ಹೂಗಳು. ಮಲ್ಲಿಗೆ, ಶಾವಂತಿಗೆ, ಸಂಪಿಗೆ, ಮಂದಾರ, ಗುಲಾಬಿ, ದಾಸವಾಳ, ಕರವೀರ, ಪುನ್ನಾಗ, ಸುರಗಿ, ರಂಜಲ ಹೀಗೆ ಹೇಳುತ್ತ ಹೋದರೆ ಪಟ್ಟಿಯನ್ನು ಐವತ್ತರವರೆಗೂ ಬೆಳೆಸಬಹುದು. ಅಲ್ಲಿಯೂ ಕೂಡ ಒಳವಿವರಗಳಿವೆ. ಮಲ್ಲಿಗೆಯಲ್ಲಿ ಎಷ್ಟೊಂದು ಬಗೆಗಳು. ಮುತ್ತುಮಲ್ಲಿಗೆ, ಮಾಗಿಮಲ್ಲಿಗೆ, ನಿತ್ಯಮಲ್ಲಿಗೆ, ಕಸ್ತೂರಮಲ್ಲಿಗೆ, ಜಾಜಿಮಲ್ಲಿಗೆ, ಏಳುಸುತ್ತಿನ ಮಲ್ಲಿಗೆ, ಮೊಲ್ಲೆ ಹೀಗೆ. ಹಾಗೆಯೇ ಸಂಪಿಗೆ ಅಂದರೆ ಒಂದೇ ಬಗೆಯದಲ್ಲ… ಬಿಳಿಸಂಪಿಗೆ, ಕೆಂಡಸಂಪಿಗೆ, ನಾಗಸಂಪಿಗೆ, ಈಗ ಈ ಪಟ್ಟಿಗೆ ಚೈನಾಸಂಪಿಗೆಯೂ ಸೇರಿದೆ. ದಾಸವಾಳ ಇರಲಿ, ಶಾವಂತಿಗೆ ಆಗಲಿ ಅಥವಾ ಗುಲಾಬಿ ಹೂವೇ ಆಗಿರಲಿ ಇವೆಲ್ಲವೂ ಹಲವು ಬಣ್ಣಗಳಲ್ಲಿ, ವಿವಿಧ ವಿನ್ಯಾಸಗಳಲ್ಲಿ ನಮ್ಮ ಮನಸ್ಸನ್ನು ಸೆಳೆಯುವಂಥವು. ಹೂಗಳನ್ನು ಕೊಯ್ಯುವುದು, ಮಾಲೆ ಕಟ್ಟುವುದು, ದಂಡೆ ಮಡುವುದು (ನೇಯುವುದು)ನಮಗೆಲ್ಲ ಬಹಳ ಖುಶಿಕೊಡುತ್ತಿದ್ದ ಸಂಗತಿಯಾಗಿತ್ತು. ಯಾರು ಹೇಗೆ ಎಷ್ಟು ಚಂದವಾಗಿ ಹೂವನ್ನು ಕಟ್ಟುತ್ತಾರೆ ಎನ್ನುವುದರ ಮೇಲೆ ಜಾಣತನವನ್ನು ಅಳೆಯುವುದೂ ಇತ್ತು. ದಿನನಿತ್ಯದಲ್ಲಿ ಒತ್ತಾಗಿ ಮಾಲೆ ಕಟ್ಟದರೆ, ಚೌತಿ, ನವರಾತ್ರಿ ಮುಂತಾದ ವಿಶೇಷ ದಿನಗಳಲ್ಲಿ ಉದ್ದವಾದ ಮಾಲೆ ಕಟ್ಟಬೇಕಿತ್ತು. ಹಾಗಾಗಿ ಹೂಗಳನ್ನು ದೂರದೂರಾಗಿ ಹಾಕಿ ಮಾಲೆ ಮಾಡುತ್ತಿದ್ದೆವು. ನಾವು ಮುಡಿಯುವ ಮಾಲೆಯ ವಿನ್ಯಾಸವೇ ಭಿನ್ನವಾದುದು. ಚಿಕ್ಕವರಾದರೆ ಒತ್ತಾಗಿ ಹೂವಿನ ಮಾಲೆ ತಯಾರಿಸಿದರೆ, ದೊಡ್ಡವರು ಕೂದಲನ್ನು ಗಂಟುಹಾಕಿ ಹೂಮುಡಿಯುವುದಾದಲ್ಲಿ ಬಾಳೆನಾರಿನಿಂದ ಮೂರೆಳೆಯಲ್ಲಿ ನೇಯ್ದು ದಂಡೆ ಕಟ್ಟಿ ಮುಡಿಗೆ ಸುತ್ತುತ್ತಿದ್ದರು. ʻಯಾರೆ ಇಷ್ಟು ಚನಾಗಿ ದಂಡೆ ಕಟ್ಟಿದೋರು?ʼ ಅಂತ ಕೇಳುವುದಿತ್ತು. ದಂಡೆ ಕಟ್ಟಿದವರು ಭತಮ್ಮ ಮಕ್ಕಳೇ ಆಗಿದ್ದರೆ ಅಮ್ಮಂದಿರ ಮುಖ ಹರಿವಾಣ ಆಗುತ್ತಿತ್ತು.
ಹೊಸ ಹೊಸ ತರದ ಹೂಗಿಡಗಳನ್ನು ಎಲ್ಲೆಲ್ಲಿಂದಲೋ ತಂದು ಬೆಳೆಸುವುದು ಹಿಂದೆಲ್ಲ ಖಯಾಲಿಯಾಗಿತ್ತು. ವೈಶಾಖ ಮಾಸದಲ್ಲಿ ಒಂದೊಂದು ಮಳೆ ಬೀಳಲು ಪ್ರಾರಂಭವಾಯಿತೆಂದರೆ ನೆಂಟರಿಷ್ಟರ ಮನೆಗೋ, ಊರುಕೇರಿಯ ಯಾರದಾದರೂ ಮನೆಗೋ ಹೋಗಿ ಬರುವ ಹೆಂಗಳೆಯರ ಕೈಯಲ್ಲಿ ಮಲ್ಲಿಗೆ ಹಂಬು, ದಾಸವಾಳದ ಕಡ್ಡಿ, ಶಾವಂತಿಗೆ ಹಿಳ್ಳು, ಡೇರೆಯ ಗಡ್ಡೆ ಹೀಗೆ ಏನಾದರೂ ಒಂದೋ ಎರಡೋ ಇರುತ್ತಿದ್ದವು. ಪರಸ್ಪರ ಗಿಡಗಳ ವಿನಿಮಯ ಮಳೆಗಾಲದ ಶುರುವಿಗೆ ಇರುತ್ತಿತ್ತು. ಕೆಲವೊಮ್ಮೆ ಕೊಟ್ಟವರ ಮನೆಯಲ್ಲಿ ಅಳಿದುಹೋದರೆ ಇನ್ನೊಬ್ಬರ ಮನೆಯಲ್ಲಿ ಇದ್ದರೆ ಅದು ಮತ್ತೆ ಮನೆಯ ಅಂಗಳವನ್ನೋ ಹಿತ್ತಿಲನ್ನೋ ಅಲಂಕರಿಸುತಿತ್ತು. ʻನಿಮ್ಮನೆಲ್ಲಿ ಅಳದು ಹೋತ, ಅಡ್ಡಿಲ್ಲೆ ಯಮ್ಮನೆಲ್ಲಿ ಇದ್ದು ಕೊಡ್ತಿ ತಗʼ ಅಂತ ಹೆಚ್ಚಾಗಿ ಮಹಿಳೆಯರು ಹಿಳ್ಳನ್ನೋ, ಕಡ್ಡಿಯನ್ನೋ ಕೊಡುವುದಿತ್ತು. ಕೆಲವೊಮ್ಮೆ ಅವರಾಗಿಯೇ ʻಅತ್ಗೆ ಈ ಹೂವಿನ ಗಿಡನ ಅದೆಲ್ಲಿಂದಲೋ ತಂದಿ, ಯಮ್ಮನೆಲ್ಲಿ ಚೊಲೋ ಆಜು, ನೀನು ನೆಡುʼ ಎಂದು ಉದಾರವಾಗಿ ಕೊಡುವುದೂ ಇತ್ತು/ ಇದೆ. ಹಾಗಂತ ಎಲ್ಲರೂ ಉದಾರಿಗಳೇ ಅಂತಲ್ಲ. ʻಗಿಡ ಶಣ್ಣದು, ಬುಡ ಬರ್ಲಿ ದೊಡ್ಡದ್ಮೇಲೆ ಕೊಡ್ತಿʼ ಎನ್ನುವ ಸಬೂಬು ಹೇಳುವವರೂ ಇರುತ್ತಾರೆ.
ಹೂವಿನ ಬಗೆಗೆ ಎಷ್ಟೊಂದು ಆಕರ್ಷಣೆ ಎಂದರೆ ಪ್ರತಿದಿನವೂ ಗಿಡಗಳ ಬಳಿಯಲ್ಲಿ ಹೋಗಿ ಓಡಾಡಿ ಬರುವುದು ಹಲವರಿಗೆ ಸಮಾಧಾನ ತರುವ ಸಂಗತಿ. ಮಹಿಳೆಗೂ ಹೂವಿಗೂ ಒಂದುರೀತಿಯ ಅವಿನಾಭಾವ. ಅದಕ್ಕೇ ಇರಬಹುದು, ಯಾವುದೇ ಸಮಾರಂಭಗಳಿರಲಿ ಅಲ್ಲಿ ಹೂವಿನ ಬಳಕೆ ಇದ್ದೇ ಇರುತ್ತದೆ. ಹೆಣ್ಣುಮಕ್ಕಳು ಋತುಮತಿಯಾದಾಗ, ಮದುವೆಯ ಸಂದರ್ಭದಲ್ಲಿ, ಬಸುರಿಯ ಬಯಕೆ ಪೂರೈಸುವ ಸೀಮಂತದಲ್ಲಿ ಹೂಮುಡಿಸುವ ಕಾರ್ಯಕ್ರಮವಿರುತ್ತದೆ. ನಾನು ಚಿಕ್ಕವಳಿರುವಾಗ ಊರಿನಲ್ಲಿ ಹೂಮುಡಿಸುವ ಹಾಡನ್ನು ಕೇಳಿದ ನೆನಪಿದೆ. ಆ ಹಾಡಿನ ವಿಶೇಷತೆ ಎಂದರೆ ಒಗಟಿನ ರೂಪದಲ್ಲಿ ಇರುವ ನುಡಿಗಳು. ಆಯಾ ಹೂವಿನ ಗುಣಧರ್ಮವನ್ನು ಸೂಚಿಸುವ ಅದರ ವಿನ್ಯಾಸವು ಕೇಳುಗರಲ್ಲಿ ಒಂದು ಬಗೆಯ ವಿಸ್ಮಯವನ್ನು ಮೂಡಿಸುವಂತಿದ್ದವು.
ನೀರವೈರಿಯ ವರ್ಣದಿ ಕಾಲು ಜಾರಿಣಿಮಿತ್ರನಂದದಿ ತಲೆಯು
ಕಾರಿರುಳಿರವು ಭಾರಿ ಶೋಭಿತವು ಸೇರಿಯೆ ಸುರರೊಳಾನಂದವ
ಬೀರುವ ಪಾರಿಜಾತವನೆ ಮುಡಿಸಿರೆ
ಪಾರಿಜಾತದ ಕೆಂಪಾದ ತೊಟ್ಟು ನೀರವೈರಿಯ ಬಣ್ಣ ಅಂದರೆ ಬೆಂಕಿ, ಜಾರಿಣಿಮಿತ್ರ ಚಂದ್ರ, ಅದು ಅರಳುವುದು ರಾತ್ರಿಯಲ್ಲಿ ಹಾಗಾಗಿ ಕಾರಿರುಳಿರವು, ಜನಸಾಮಾನ್ಯರ ರಚನೆಗಳಲ್ಲಿಯೂ ಎಷ್ಟೊಂದು ಗೂಢಾರ್ಥಗಳು ಹೊಮ್ಮುತ್ತವೆ ಎನ್ನುವುದು ಇಂತಹ ರಚನೆಗಳಿಂದ ವೇದ್ಯವಾಗುತ್ತದೆ.
ಕಂಪನು ನೋಡಲು ಬಿರುಸಿಹುದು ಇಂಪನು ನೋಡಲು ಏರಿಹುದು
ಗುಂಪೆಸಳಿಹುದು ಸೊಂಪಿನೊಳಿಹುದು ಕಂಪಿನೊಳೀಶ ಸಂಪ್ರೀತಿಯಾಗಿರುವಂಥ
ಸಂಪಿಗೆಯ ಹೂವ ಮುಡಿಸಿರೆ
ಸಂಪಿಗೆ ಹೂವಿನ ಆಕಾರವನ್ನು ವರ್ಣಿಸುತ್ತ ಇದು ಈಶ್ವರನಿಗೆ ಪ್ರಿಯವಾದುದು ಎನ್ನುವ ವಿಷಯವನ್ನು ಇಲ್ಲಿ ಪ್ರಸ್ತಾಪಿಸಲಾಗಿದೆ.
ಸಿರಿ ಅರಸಗೆ ಅತಿಮೋದಕರ ಪರಿಕಿಸೆ ಜ್ವಾಲೆಯ ಆಕಾರ
ವರಸುಮ ತ್ಯಾಗ ಪರಿಮಳಮೋಘ ಹರುಷದಿ ಸಿರಿಯರಸನ
ಕರಕಾಯುಧ ಕಮಲದ ಹೂವ ಮುಡಿಸಿರೆ
ವಿಷ್ಣುವಿನ ಕೈ ಆಭರಣವೇ ಕಮಲದ ಹೂವು ಎನ್ನುವ ಪರಿಕಲ್ಪನೆ ಇಲ್ಲಿ ಬಂದಿದೆ. ಕಮಲದ ಹೂವಿಗೆ ಕನ್ನಡದಲ್ಲಿ ತಾವರೆ ಎನ್ನುವ ಹೆಸರು ಮಾತ್ರ ಇದೆ. ಆದರೆ ಸಂಸ್ಕೃತದಲ್ಲಿ ಈ ಹೂವಿಗೆ ಇರುವಷ್ಟು ಹೆಸರು ಮತ್ಯಾವ ಹೂವಿಗೂ ಇಲ್ಲ. ಪದ್ಮ, ಅಂಬುಜ, ವಾರಿಜ, ಸರೋಜ, ಪಂಕಜ, ನಳಿನ, ರಾಜೀವ, ಅರವಿಂದ ಮುಂತಾಗಿ ಹಲವು ಹೆಸರನ್ನು ಹೊಂದಿದೆ ಈ ಹೂವು. ಈ ಕೆಳಗಿನ ನುಡಿ ಮಲ್ಲಿಗೆ ಹೂವನ್ನು ಕಂಡರಿಸಿದ್ದು ಹೀಗೆ; ʻಚಕ್ರಾಕಾರದಿ ತೋರಿಹುದು ಹೊಕ್ಕುಳ ನೋಡಲು ಏರಿಹುದು ಸೊಕ್ಕಿನೊಳಿಹುದು ಚಿಕ್ಕೆಸಳಿಹುದುʼ ಎಂದು ವರ್ಣಿತವಾದ ಮಲ್ಲಿಗೆ ಹೂವು ಮುಕ್ಕಣ್ಣನಿಗೆ ಪ್ರಿಯವಂತೆ. ಹೂಮುಡಿಸುವ ಈ ಹಾಡಿನಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಹೂಗಳ ವರ್ಣನೆ ಇದೆ. ಪ್ರತಿಯೊಂದು ಹೂವಿನ ವಿನ್ಯಾಸವನ್ನು, ಗುಣಧರ್ಮವನ್ನು ವಿವರಿಸಲಾಗಿದೆ.
ನಾವು ಮುಡಿಯುವ ಮಾಲೆಯ ವಿನ್ಯಾಸವೇ ಭಿನ್ನವಾದುದು. ಚಿಕ್ಕವರಾದರೆ ಒತ್ತಾಗಿ ಹೂವಿನ ಮಾಲೆ ತಯಾರಿಸಿದರೆ, ದೊಡ್ಡವರು ಕೂದಲನ್ನು ಗಂಟುಹಾಕಿ ಹೂಮುಡಿಯುವುದಾದಲ್ಲಿ ಬಾಳೆನಾರಿನಿಂದ ಮೂರೆಳೆಯಲ್ಲಿ ನೇಯ್ದು ದಂಡೆ ಕಟ್ಟಿ ಮುಡಿಗೆ ಸುತ್ತುತ್ತಿದ್ದರು. ʻಯಾರೆ ಇಷ್ಟು ಚನಾಗಿ ದಂಡೆ ಕಟ್ಟಿದೋರು?ʼ ಅಂತ ಕೇಳುವುದಿತ್ತು. ದಂಡೆ ಕಟ್ಟಿದವರು ಭತಮ್ಮ ಮಕ್ಕಳೇ ಆಗಿದ್ದರೆ ಅಮ್ಮಂದಿರ ಮುಖ ಹರಿವಾಣ ಆಗುತ್ತಿತ್ತು.
ಹೂವುಗಳಲ್ಲಿ ಮಲ್ಲಿಗೆ ಹೂವಿಗೆ ವಿಶೇಷ ಸ್ಥಾನ. ಅದರ ಪರಿಮಳ ಎಂಥವರ ಮನಸ್ಸನ್ನೂ ಸೆಳೆಯುವ ಗುಣವನ್ನು ಹೊಂದಿರುವುದು ಇದಕ್ಕೆ ಕಾರಣವಿರಬಹುದು. ಅದರಲ್ಲಿಯೂ ಕಸ್ತೂರ ಮಲ್ಲಿಗೆ, ಸಂಜೆಮಲ್ಲಿಗೆ, ಮಾಗಿಮಲ್ಲಿಗೆ ಇವೆಲ್ಲವೂ ನಮ್ಮನ್ನು ಆಕರ್ಷಿಸುವ ಗುಣವನ್ನು ಹೊಂದಿರುವ ಹೂಗಳು. ಎಲ್ಲಕ್ಕು ಮಿಗಿಲು ಏಳುಸುತ್ತಿನ ಮಲ್ಲಿಗೆ. ಅದನ್ನು ಮಲ್ಲಿಗೆಗಳ ರಾಣಿ ಎನ್ನಬಹುದೇನೋ. ಏಳುಸುತ್ತಿನ ಮಲ್ಲಿಗೆ ಎನ್ನುತ್ತಲೇ ನೆನಪಾಗುವುದು ಹಿಂದೆ ಆಕಾಶವಾಣಿಯಲ್ಲಿ ಕೇಳುತ್ತಿದ್ದ ಕವಿ ಜಿ.ಎಸ್. ಶಿವರುದ್ರಪ್ಪನವರ ಏಳುಸುತ್ತಿನ ಮಲ್ಲಿಗೆ ಕುರಿತ ಗೀತೆ. ಎಂ.ಪ್ರಭಾಕರ ಅವರ ದನಿಯಲ್ಲಿ ಅದೆಷ್ಟು ಬಾರಿ ನಾವು ಕೇಳಿದ್ದೆವೋ? ʻನೋಡು ಇದೊ ಇಲ್ಲರಳಿ ನಗುತಿದೆ ಏಳುಸುತ್ತಿನ ಮಲ್ಲಿಗೆ/ ಇಷ್ಟು ಹಚ್ಚನೆ ಹಸುರು ಗಿಡದಿಂದೆಂತು ಅರಳಿದೆ ಬೆಳ್ಳಗೆʼ ಎನ್ನುವ ಕವಿಯ ಆಶ್ವರ್ಯ ಭಾವ. ಇಡಿಯಾಗಿ ಕವನದಲ್ಲಿ ಇದೇ ಭಾವ ಮುಂದುವರಿಯುತ್ತದೆ. ʻಎಂಥ ನವುರಿನ ಕುಶಲ ಕಲೆಯಿದು ತನಗೆ ತಾನೇ ಮೂಡಿದೆʼ ಎಂದು. ಕೆಲವು ನೆನಪುಗಳೇ ಹಾಗೆ ಮರೆಯಲಾರದವು. ನಮಗೆ ಪ್ರಾಥಮಿಕ ಶಾಲೆಯಲ್ಲಿ ಎಂ.ವಿ.ಸೀತಾರಾಮಯ್ಯನವರ ʻಹೂವಾಡಗಿತ್ತಿʼ ಎನ್ನುವ ಪದ್ಯವಿತ್ತು.
ಹೂವನು ಮಾರುತ ಹೂವಾಡಗಿತ್ತಿ ಹಾಡುತ ಬರುತಿಹಳು
ಘಮಘಮ ಹೂಗಳು ಬೇಕೇ ಎನ್ನುತ ಹಾಡುತ ಬರುತಿಹಳು
ಮಲ್ಲಿಗೆ, ಸಂಪಿಗೆ, ಇರುವಂತಿಗೆ, ಕಮಲ, ಅಚ್ಚ ಮಲ್ಲಿಗೆ, ತಾಳೆ, ಗುಲಾಬಿ, ಜಾಜಿ ಮುಂತಾದ ಬಗೆಬಗೆಯ ಹೂಗಳೊಂದಿಗೆ ಪಚ್ಚೆತೆನ, ಮರುಗಗಳನ್ನು ಸೇರಿಸಿ ಕಟ್ಟಿರುವ ಮಾಲೆಯನ್ನು ಮಾರಲು ಬರುತ್ತಿದ್ದಾಳೆ ಹೂವಾಡಗಿತ್ತಿ.
ಮನೆಯ ಅಂಗಳದಲ್ಲಿಯೋ ಹಿತ್ತಿಲಿನಲ್ಲಿಯೋ ಬೆಳೆಸುವ ಹೂಗಳದು ಒಂದು ಬಗೆ. ಇನ್ನೊಂದು ತಾನಾಗಿಯೇ ಹುಟ್ಟಿ ಬೆಳೆಯುವ ಹೂವುಗಳ ಸಂತತಿ. ಕಮಲ ಅಥವಾ ತಾವರೆಗೆ ಕೆರೆ, ಕೊಳಗಳು ಆಕರಗಳು. ಇನ್ನು ಕೆಲವು ಗಾತ್ರದಲ್ಲಿ ಚಿಕ್ಕ ಮರ ಅಥವಾ ಮರದ ಗಾತ್ರದಲ್ಲಿದ್ದು ಹೂವನ್ನು ಬಿಡುವಂಥವು. ರಂಜಲ (ಬಕುಲ) ಮತ್ತು ಸುರಗಿ ಈ ಜಾತಿಗೆ ಸೇರುವ ಹೂಗಳು. ಮಳೆಗಾಲದ ಶುರುವಿನಲ್ಲಿ ಆಗುವ ರಂಜಲ ಹೂವು ಉದುರಿ ಕೆಳಗೆ ಬಿದ್ದಾಗ ಅವುಗಳನ್ನು ಹೆಕ್ಕಿತಂದು ಮಾಲೆ ಮಾಡುತ್ತಿದ್ದೆವು. ಒಂದೊಂದೇ ಹೂವನ್ನು ಸೂಜಿಯಲ್ಲಿ ಪೋಣಿಸಿ ಮಾಲೆ ಮಾಡಬೇಕು. ಬೊಗಸೆ ಹೂವಿದ್ದರೆ ಸಾಕು ಮಾರುದ್ದದ ಮಾಲೆ ಮಾಡಲು. ಅದರ ಪರಿಮಳದಿಂದ ಗಿಡವನ್ನು ಗುರುತಿಸಬಹುದು. ಸುರಗಿ ಬೇಸಿಗೆಯಲ್ಲಿ ಅರಳುವ ಹೂವು. ದೊಡ್ಡಗಾತ್ರದ ಮರವಾದ್ದರಿಂದ ಹತ್ತಿ ಹೂವನ್ನು ಕೊಯ್ಯುವುದು ಕಷ್ಟವೇ. ಆದರೂ ಹೆಣ್ಣುಮಕ್ಕಳ ಆಸೆಗೆ ಭಂಗತಾರದೆ ಊರಿನಲ್ಲಿ ಗಂಡುಮಕ್ಕಳು ಹೂವನ್ನು ಕಿತ್ತು ತರುತ್ತಿದ್ದರು. ಅದು ಸಂಜೆಯಲ್ಲಿ ಬಿರಿಯುವ ಹೂವು. ಬೆಳಗ್ಗೆವರೆಗೆ ಬಿಟ್ಟರೆ ಪೂರ್ತಿಯಾಗಿ ಅರಳುತ್ತದೆ. ಅರಳಿದ ಮೇಲೆ ಕಟ್ಟಿದರೆ ಹೂವಿನ ಎಸಳು ಉದುರುತ್ತದೆ. ಹಾಗಾಗಿ, ರಾತ್ರಿ ಹೊತ್ತಿನಲ್ಲಿ ದೀಪದ ಬೆಳಕಿನಲ್ಲಿ ಕಟ್ಟಬೇಕಿತ್ತು. ಹೀಗೆ ಕಟ್ಟಿದ ಮಾಲೆಯನ್ನು ಮಾರನೆಯ ಬೆಳಗ್ಗೆ ಮುಡಿಯಬೇಕು/ದೇವರಿಗೆ ಅರ್ಪಿಸಬೇಕು ಇಲ್ಲವೆ ಬಿಸಿಲಿನಲ್ಲಿ ಬತ್ತದ ಹುಲ್ಲಿನ ಮೇಲೆ ಒಣಗಿಸಿ ಅದನ್ನು ಕಾಪಿಡಬೇಕು. ಹೀಗೆ ಕಾಪಿಡುವ ಮಾಲೆ ಮೂರುತಿಂಗಳ ಕಾಲ ಕಪ್ಪಾಗದೆ ಇರುತ್ತದೆ. ಅದರ ಪರಿಮಳ ಕೂಡ ಅಳಿಯುವುದಿಲ್ಲ. ಇತ್ತೀಚೆಗೆ ಎಲ್ಲೋ ಓದಿದ ನೆನಪು. ಹೀಗೆ ಒಣಗಿಸಿದ ಸುರಗಿ ಮಾಲೆಗೆ ಬೇಡಿಕೆ ಇದೆಯಂತೆ. ದುಬಾರಿಯಾದರೂ ಅದನ್ನು ಕೊಳ್ಳುವವರು ಈಗಲೂ ಇದ್ದಾರೆ ಅಂದಂತಾಯಿತು. ಸುರಗಿ ಅತ್ತರಕ್ಕೆ ಬಹಳ ಬೇಡಿಕೆ ಇದೆ.
ಇನ್ನೊಂದು ವಿಶೇಷ ಹೂವಿನ ಗಿಡವಿದೆ. ಅದು ಸುಮಾರು ಎಂಟುಹತ್ತು ಅಡಿ ಎತ್ತರಕ್ಕೆ ಬೆಳೆಯುತ್ತದೆ. ಗಿಡವೆಲ್ಲ ಮುಳ್ಳು. ನಮ್ಮೂರ ದೇವಸ್ಥಾನದ ಬಾಗಿಲಲ್ಲಿ ಆ ಗಿಡವಿತ್ತು. ಮೈಗೆ ಮುಳ್ಳು ತಾಗಿಸಿಕೊಂಡಾದರೂ ಹೂವನ್ನು ಕೊಯ್ಯುತ್ತಿದ್ದೆವು. ಅದರ ಪರಿಮಳ ಮತ್ತು ಹೂವಿನ ವಿನ್ಯಾಸ ವಿಭಿನ್ನವಾದವು. ಕಡ್ಡಿಯಂತಹ ತೊಟ್ಟು ಮತ್ತು ಗುಂಡಾಗಿರುವ ಚೆಂಡಿನಂತಹ ತಲೆ. ಮುಟ್ಟಿದರೆ ಮುನಿ ಹೂವಿನ ರೀತಿಯಲ್ಲಿ ಇರುವ ಹೂವು ಇದು. ಅದರ ವರ್ಣನೆ ಹೀಗಿದೆ;
ಕರವನು ನೋಡಲು ಸೆಳೆಯಕ್ಕು ಶಿರವನು ನೋಡಲು ಗುಡಿಯಕ್ಕು
ಪರಿಮಳವಕ್ಕು ಕರಡಿಯಂತಿಕ್ಕು ಹರುಷವ ರಸಿಕರಿಗೀಯುವ ಉರುತರ
ಮರದ ಜಾಜಿಯನೆ ಮುಡಿಸಿರೆ
ನಾವು ಇದನ್ನು ಕುಸುಮ ಜಾಜಿ, ಮುಳ್ಳು ಜಾಜಿ ಎಂದು ಕರೆಯುತ್ತೇವೆ. ಈಗ ಇದು ಎಲ್ಲಿಯೂ ಕಾಣಸಿಗುತ್ತಿಲ್ಲ. ಈ ಹೂವು ಅಂತಲ್ಲ, ಹಿಂದೆ ಇದ್ದ ಹಲವು ಹೂಗಳು ಈಗ ಅಷ್ಟಾಗಿ ಕಂಡುಬರುತ್ತಿಲ್ಲ. ನಂದಿಬಟ್ಟಲು ಜಾತಿಗೆ ಸೇರಿದ ಅನಂತಪುಷ್ಪ ಹೂವಿಗೆ ಹುಡುಕಾಡಿದ್ದೆ. ಯಾರೋ ತಮ್ಮ ಸ್ಟೇಟಸ್‌ನಲ್ಲಿ ಆ ಹೂವಿನ ಚಿತ್ರ ಹಾಕಿದ್ದರು. ವಿಚಾರಿಸಿದಾಗಿ ಬೆಂಗಳೂರಿನ ಯಾವುದೋ ಫಾರಂನಲ್ಲಿ ಸಿಕ್ಕಿತೆಂದು ಹೇಳಿದರು. ಮಾಗಿಮಲ್ಲಿಗೆ ಕೂಡ ಈಗ ಅಪರೂಪವೇ ಆಗಿದೆ. ಹೊಸ ಬಗೆಯ ಹೂಗಳು ಬರುತ್ತಿವೆ. ಹಳತು ತೆರೆಮರೆಗೆ ಸರಿಯುತ್ತಿವೆ.
ಡಾ. ಚಂದ್ರಮತಿ ಸೋಂದಾ ಅವರಿಗೆ ಸಾಹಿತ್ಯದಲ್ಲಿ ಆಸಕ್ತಿ. ‘ಮೈಸೂರು ಮಿತ್ರ’ದಲ್ಲಿ ಬರೆದ ಇವರ ಅಂಕಣಗಳು ಆರು ಸಂಕಲನಗಳಲ್ಲಿ ಪ್ರಕಟವಾಗಿವೆ. ಮಹಿಳಾಪರ ಚಿಂತನೆ ಅವರ ಆದ್ಯತೆ.