ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ. ರೌದ್ರವಾಗಿ ತೋರುವ ಶಕ್ತಿದೇವತೆಗಳಲ್ಲಿ ಮಾತೃತ್ವದ ತಂಪನ್ನು ಕಾಣುವ, ರಕ್ತಸಿಕ್ತ ಆಚರಣೆಗಳಲ್ಲಿ ಸ್ತ್ರೀ ದೇಹಮೂಲದ ಅನುಭವಗಳನ್ನು ಕಾಣಿಸುವ ಮೂಲಕ ಕವಿತೆಗಳು ಸಾಂಸ್ಕೃತಿಕ ಆಯಾಮವೊಂದನ್ನು ಕಟ್ಟುತ್ತಿವೆ.
ಹೆಚ್.ಆರ್. ಸುಜಾತಾ ಅವರ “ಕಾಡುಜೇಡ ಹಾಗೂ ಬಾತುಕೋಳಿ ಹೂ” ಕವನ ಸಂಕಲನದ ಕುರಿತು ಡಾ. ಗೀತಾ ವಸಂತ ಅವರ ಬರಹ
ಇರುವೆಯ ಸಾಲಲ್ಲಿ ಮೆಲ್ಲಗೆ ಸಾಗುತ್ತಾ ಇಡಿಯ ಬ್ರಹ್ಮಾಂಡವನ್ನೇ ತೂಗಿನೋಡುವ ಮಹತ್ವಾಕಾಂಕ್ಷೆಯ ಕವಯತ್ರಿ ಎಚ್.ಆರ್.ಸುಜಾತಾ. ಅವರ ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಎಂಬ ಸಂಕಲನದ ಕವಿತೆಗಳು ಪರಿಸರಕೇಂದ್ರದ ಮೂಲಕ ಮಾಡಿಸುವ ವಿಶ್ವದರ್ಶನ ವಿಶಿಷ್ಟವಾದದ್ದು. ಅನುದಿನದ ದಂದುಗದಲ್ಲಿ ಮನುಷ್ಯನ ಪ್ರಜ್ಞಾಕೇಂದ್ರವೇ ವಿಹ್ವಲಗೊಂಡಿರುವಾಗ, ತಮ್ಮತಣ್ಣಗಿನ ದನಿಯಲ್ಲಿ, ಜೀವದ ಸೊಲ್ಲುಗಳನ್ನು ಆಯ್ದು ನೇಯುವ ತಾದಾತ್ಮ್ಯದಿಂದಾಗಿ ಇಲ್ಲಿನ ಕವಿತೆಗಳು ಆವರಿಸಿಕೊಳ್ಳುತ್ತ ಹೋಗುತ್ತವೆ.
ಬೆನ್ನುಡಿಯಲ್ಲಿ ಕೆ.ವೈ.ನಾರಾಯಣಸ್ವಾಮಿ ಅವರು ನುಡಿದಂತೆ ‘ಚಿತ್ತ ಹುತ್ತಗಟ್ಟಿ ಧ್ಯಾನಿಸುವ…. ಮೈತ್ರಿ ಸಂಹಿತೆಯನ್ನು ಹುಡುಕುತ್ತಿರುವ’ ಕವಿತೆಗಳು ಇವು. ಮನುಷ್ಯನ ಪ್ರಜ್ಞೆ ಹಾಗೂ ಪರಿಸರದ ಮೈತ್ರಿ ಇದು. ಹಸಿ ನೆಲದ ಉಸಿರನ್ನು ತನ್ನದಾಗಿಸಿಕೊಂಡು ಹಾಡುವ ವನಗಾಯಕಿಯ ಕಸುವು ಈ ಸಂಕಲನದಲ್ಲಿ ಕಾಣುತ್ತದೆ. ‘ಬೆಟ್ಟ ಬಾಗುತ್ತದೆ ಮರಗಿಡದ ತಲೆಯಲ್ಲಿ… ಬೆಟ್ಟ ಮಾತಾಡುತ್ತದೆ ಹಕ್ಕಿಕೊರಳಲ್ಲಿ….’ ಇದು ಸುಜಾತಾರ ಉಕ್ತಿ ಕ್ರಮ. ಪರಿಸರದ ಸಂವೇದನೆಯಲ್ಲಿ ಅವರ ಭಾವ ಹಾಗೂ ಭಾಷೆಗಳು ಆಕಾರ ಪಡೆಯುತ್ತ ಸಾವಯವ ಸಂಬಂಧವನ್ನು ಏರ್ಪಡಿಸಿಕೊಳ್ಳುತ್ತಾ ಹೋಗುತ್ತವೆ. ಇಲ್ಲಿ ‘ಗಿಡಗಂಟಿಗಳ ಕೊರಳೊಳಗಿಂದ ಹಕ್ಕಿಗಳ ಹಾಡು’ ಎಂಬ ಬೇಂದ್ರೆಯವರ ದರ್ಶನ ಅನುರಣಿಸುತ್ತದೆ. ನಾನು ಬೇರೆ ವಿಶ್ವ ಬೇರೆ ಎಂಬ ಭಾವವಳಿದ ಅನನ್ಯ ದರ್ಶನವಿದು. ಕುವೆಂಪು ಕಾವ್ಯ ಕೂಡ ಸಕಲ ಚರಾಚರಗಳಿಂದ ಕೂಡಿದ ಜೀವಜಗತ್ತನ್ನು ಪರಿಭಾವಿಸಿದ ರೀತಿ ಇದೇ ಆಗಿದೆ.
ಜೀವಜಗತ್ತನ್ನು ನೋಡುವ ವಿಸ್ಮಯದ ಕಣ್ಣೊಂದು ಇಲ್ಲಿನ ಕವಿತೆಗಳಲ್ಲಿದೆ. ಮರದಿಂದ ಮರಕ್ಕೆ ಡೇರೆ ಕಟ್ಟುವ ಕಾಡುಜೇಡ ತನ್ನ ಅನೂಹ್ಯ ನೇಯ್ಗೆಯಲ್ಲಿ ಕಾಲದ ಯಾವುದೋ ಹುಟ್ಟುಗಳನ್ನು ಹುದುಗಿಸಿಕೊಂಡಿರುತ್ತದೆ. ಜೇಡರ ಬಲೆಗೆ ಆತುಕೊಂಡು ಹಬ್ಬಿದ ಬಳ್ಳಿಯೊಂದು ಬಾತುಕೋಳಿಯಂಥಾ ಹೂವನ್ನು ಅರಳಿಸಲಿಕ್ಕಿದೆ. ಬಳ್ಳಿಯ ಕಣ್ಣ ಕೊಳದಲ್ಲಿ ಅರಳುವ ಈ ಹೂವು ಕೀಟ ಹಿಡಿವಕಲೆಯನ್ನು ಮೈಗೊಂಡಿದೆ! ಅದಕ್ಕಾಗಿಯೇ ಬಲೆ ಈ ಬಳ್ಳಿಯನ್ನು ತನ್ನೊಳಗೆ ಬಿಟ್ಟುಕೊಂಡಿದೆ!
ಕಾಲದ ಯಾವುದೋ ಬಿಂದುವಿನಲ್ಲಿ ಘಟಿಸುವ ಈ ಎಲ್ಲಾ ಘಟನೆಗಳಿಗೆ ಸಂಬಂಧದ ಸೂತ್ರ ಜೋಡಿಸುವ ಪ್ರಕೃತಿಯ ನಿಗೂಢತೆ ‘ಕಾಡುಜೇಡ ಹಾಗೂ ಬಾತುಕೋಳಿ ಹೂ’ ಕವಿತೆಯಲ್ಲಿ ರೂಪಕವಾಗಿದೆ. ಇಂಥ ಸೂಕ್ಷ್ಮ ನೋಟದ ಕ್ರಮ, ಸಮರ್ಥರೂಪಕ ಶಕ್ತಿ ಹಾಗೂ ಕಾವ್ಯ ಭಾಷೆಯ ಅಂತರಂಗ ಅರಿತು ಬಳಸುವ ಹದದಿಂದಾಗಿ ಎಚ್.ಆರ್.ಸುಜಾತ ಅವರ ಕವಿತೆಗಳು ಈ ಕಾಲದ ಅಬ್ಬರದ ದನಿಗಳ ಮಧ್ಯ ಅನನ್ಯವಾಗಿ ನಿಲ್ಲುತ್ತವೆ.
ಕನ್ನಡಕಾವ್ಯ ಪರಂಪರೆಯಲ್ಲಿ ಪುರುಷ ಲೋಕದೃಷ್ಟಿಯು ಪ್ರಧಾನವಾಗಿ ತನ್ನ ಯಾಜಮಾನ್ಯವನ್ನು ಸ್ಥಾಪಿಸಿರುವುದು ವಾಸ್ತವ. ಅಂಥ ಡಾಳಾಗಿ ಕಾಣುವ ಪರಂಪರೆಯೊಳಗೆ ಸುಪ್ತವಾಗಿ ಮಾತೃ ಸಂವೇದನೆಯ ಧಾರೆಯು ಅಂತರಗಂಗೆಯಂತೆ ಹರಿದಿದೆ. ಸುಜಾತಾರ ಕಾವ್ಯದ ನಂಟು ಈ ಧಾರೆಯಜೊತೆ ಬೆಸೆದಿದೆ. ವಾದ ಸಿದ್ಧಾಂತಗಳ ಹಠಮಾರಿತನಕ್ಕೆ ತನ್ನನ್ನು ತೆತ್ತುಕೊಳ್ಳದೇ ಹೆಣ್ತನದ ದೇಸಿ ನೆಲೆಗಳಲ್ಲಿ ಸಂಚರಿಸಿರುವ ಕಾವ್ಯತಾಜಾ ಕಸುವಿನಿಂದ ಕಂಗೊಳಿಸುತ್ತಿದೆ. ಗ್ರಾಮ್ಯ ಸೊಗಡಿನ ಜಾನಪದ ಸಂವೇದನೆಯೊಂದು ದಕ್ಕಿರುವುದು ಇಲ್ಲಿನ ಕೆಲವು ಕವಿತೆಗಳ ಶಕ್ತಿಯಾಗಿದೆ.
ಕಡಲುಪ್ಪು ನೀರತಂದು
ಮಣ್ಣ ಮಡಕೆಯಲಿಟ್ಟು
ಗಂಜಿ ಕಾಯಿಸುತ್ತಾರೆ
ಕಣ್ಣಲ್ಲಿಉಕ್ಕಿಸುರಿವಂತೆ
ಹೆಣ್ಣುಗಳು
ಸೂರ್ಯನುರಿಯ ಮೇಲೆ (ಮಳೆಹನಿ ಹಾಡು)
ಮಣ್ಣ ಮಡಕೆ, ಕಡಲಿನ ಉಪ್ಪು , ವ್ಯೂಮದ ಸೂರ್ಯ ಇಡೀ ಬ್ರಂಹ್ಮಾಂಡವನ್ನೇ ಬೆಸೆದು ಗಂಜಿ ಕಾಯಿಸುವ ಹೆಣ್ಣು…. ಪಂಚಭೂತಗಳ ನಡುವೆ ಅವುಗಳ ಭಾಗವಾಗಿಯೇ ತನ್ನನ್ನು ಅರಿಯುವ ಹೆಣ್ಣುನೋಟವೊಂದು ವಿಶ್ವವನ್ನು ಭಾವಿಸುವ ಪರಿ ಅಚ್ಚರಿ ಮೂಡಿಸುತ್ತದೆ. ಹಿತ್ತಲ ಹಾಡು ಎಂಬ ಕವಿತೆಯಂತೂ ಹರಿಹರನ ಪುಷ್ಪ ರಗಳೆಯ ಉತ್ಕಟತೆಯನ್ನು ನೆನಪಿಸುತ್ತದೆ. ಹಸಿ ಮಣ್ಣು, ಮಿಂಚು, ಕಾಮನಬಿಲ್ಲು, ಹೂವು, ಜೇನು, ಗಂಧ, ಬಯಲು, ಗಾಳಿ, ದಟ್ಟ ಕಾನನ ಎಲ್ಲವನ್ನೂ ಹೆಣ್ಣೊಬ್ಬಳು ತನ್ನ ಸಂವೇದನೆಯ ಭಾವವಾಗಿ ಕಾಣುವುದು ಇಲ್ಲಿನ ಸ್ಥಾಯಿಭಾವವಾಗಿ ಕಾಣುತ್ತದೆ.
ಹೆಣ್ಣು ಹೆಣ್ಣಾಗಿ ಅರಳುವುದು
ಹರಿವಾಗುವುದು ಹಸಿರಾಗುವುದು
ತನ್ನತಾನೇ ಮರೆವಂತೆ ಮೈ ತುಂಬಿಕೊಳ್ಳುವುದು
ದುಂಡಗಿನ ವಿಶ್ವವೇ ತಾನಾಗುವುದು (ಜೋಡಿ ಮೊಲೆಗಳು)
ಜೀವಜಗತ್ತನ್ನು ನೋಡುವ ವಿಸ್ಮಯದ ಕಣ್ಣೊಂದು ಇಲ್ಲಿನ ಕವಿತೆಗಳಲ್ಲಿದೆ. ಮರದಿಂದ ಮರಕ್ಕೆ ಡೇರೆ ಕಟ್ಟುವ ಕಾಡುಜೇಡ ತನ್ನ ಅನೂಹ್ಯ ನೇಯ್ಗೆಯಲ್ಲಿ ಕಾಲದ ಯಾವುದೋ ಹುಟ್ಟುಗಳನ್ನು ಹುದುಗಿಸಿಕೊಂಡಿರುತ್ತದೆ. ಜೇಡರ ಬಲೆಗೆ ಆತುಕೊಂಡು ಹಬ್ಬಿದ ಬಳ್ಳಿಯೊಂದು ಬಾತುಕೋಳಿಯಂಥಾ ಹೂವನ್ನು ಅರಳಿಸಲಿಕ್ಕಿದೆ.
ಹೆಣ್ತನದ ವಿಕಾಸವನ್ನು ವಿಶ್ವದ ವಿಕಾಸದ ಭಾಗವಾಗಿ ಗುರುತಿಸುವ ನೋಟವೊಂದು ಇಲ್ಲಿನ ಕವಿತೆಗಳಿಗೆ ಸಿದ್ಧಿಸಿದೆ. ಈ ನೋಟದ ಮುಂದೆ ಇತಿಹಾಸ, ಪುರಾಣ ಕಾವ್ಯಗಳಲ್ಲಿ ಗಂಡು ಹೆಣ್ಣಿನ ಕುರಿತು ಕಟ್ಟಿದ ಪರಿಕಲ್ಪನೆಗಳೆಲ್ಲಾ ಬಿದ್ದುಹೋಗುತ್ತವೆ. ಅಂಥ ಬಯಲೊಂದನ್ನುಇಲ್ಲಿನ ಕವಿತೆಗಳು ಕಾಣಿಸುತ್ತಿವೆ. ಶಾಕ್ತ ಸ್ತ್ರೀ ಪರಂಪರೆಯ ಆದಿಮ ಸಂವೇದನೆಯನ್ನು ಸಾಂದ್ರವಾಗಿ ಚಿತ್ರಿಸುವ ಬಗೆಯಿಂದಾಗಿ ಊರ ಹಬ್ಬ, ಉರಿಮಾರಿ ಕವಿತೆಗಳು ಗಮನಾರ್ಹವಾಗಿ ಕಾಣುತ್ತವೆ. ರೌದ್ರವಾಗಿ ತೋರುವ ಶಕ್ತಿದೇವತೆಗಳಲ್ಲಿ ಮಾತೃತ್ವದ ತಂಪನ್ನು ಕಾಣುವ, ರಕ್ತಸಿಕ್ತ ಆಚರಣೆಗಳಲ್ಲಿ ಸ್ತ್ರೀ ದೇಹಮೂಲದ ಅನುಭವಗಳನ್ನು ಕಾಣಿಸುವ ಮೂಲಕ ಕವಿತೆಗಳು ಸಾಂಸ್ಕೃತಿಕ ಆಯಾಮವೊಂದನ್ನು ಕಟ್ಟುತ್ತಿವೆ.
ಹಣೆಮೇಲೆ ಉರಿವ ಸೂರ್ಯ
ಎದೆಯೊಳಗೆ ಮುಚ್ಚಿಟ್ಟಚಂದ್ರ
ಕೈಯೊಳು ಸದ್ದನರೆಯುವ
ಮಾಯದಾ ಕೋಲಿನ ಠೇಂಕಾರ (ಉರಿಮಾರಿ)
‘ಹಣೆಮೇಲೆ ಉರಿವ ಸೂರ್ಯ, ಎದೆಯೊಳಗೆ ಮುಚ್ಚಿಟ್ಟ ಚಂದ್ರ’ ನನ್ನು ಒಡಲುಗೊಂಡ ಉರಿಮಾರಿ ಹೊಟ್ಟೆಹೊರೆಯಲು ಅಸಿಟ್ಟು, ಉಪ್ಪು, ಮೆಣಸಿನಕಾಯಿ, ಕಾಸು ಕರಿಮಣಿ ಪಡಿಯನ್ನು ಪಡೆಯುವ ಮಾರಿ ಹೊತ್ತು ಊರೂರು ತಿರುಗುವ ಲೌಕಿಕದ ಹೆಣ್ಣಾಗಿ ಕಾಣಿಸುತ್ತಾಳೆ. ಕಾಲನಿಗೇ ಗೆಜ್ಜೆಸರ ಬಿಗಿದಂತೆ ಆವೇಶದಲ್ಲಿ ನಡೆವ ಇವಳು, ಆ ಉನ್ಮಾದದ ತಳದಲ್ಲಿ ಗಂಡ- ಮಕ್ಕಳ ಹೊಟ್ಟೆಹೊರೆವ ಬಡತಾಯಿ. ಲೌಕಿಕ ಅಲೌಕಿಕವನ್ನು ಬೆರೆಸುವ ಈ ಕವಿತೆ ಹೆಣ್ಣಿನ ಹಲವು ರೂಪಗಳ ಹಿಂದಿರುವ ಜೀವಮಿಡಿತದ ಸದ್ದನ್ನು ಕೇಳಿಸುತ್ತದೆ. ಹಾಗೆ ನೋಡಿದರೆ ಕಾವ್ಯವೆಂಬುದೇ ದೈನಿಕದ ಪಲಕುಗಳಲ್ಲಿ ಥಟ್ಟನೆ ಮಿಂಚುವ ದಿವ್ಯತೆಯನ್ನು ಕಂಡು ಅದನ್ನು ಹಿಡಿಯಲು ಜಿಗಿವ ಮಾಂತ್ರಿಕ ಕ್ಷಣ. ಅಂಥ ಪ್ರಯತ್ನ ಇಲ್ಲಿನ ಕವಿತೆಗಳಲ್ಲಿದೆ.
ಒಕ್ಕಣ್ಣ ಸೂರ್ಯ
ಒಂಟಿಯಾದ!
ಕಂದನ ಬಾಯಲ್ಲಿ
ಹಿಗ್ಗಿನ ಬುಗ್ಗೆಯಾಗಿ ಬೀಗುವ
ಚಂದಿರನ ಬೆಳದಿಂಗಳ ಕಂಡು
ಬೆಪ್ಪಾದ (ಉರಿಮಾರಿ)
ಹೆಂಗಳೆಯರು ಉಟ್ಟುಬಿಟ್ಟ ಸೀರೆಯ ದಾನಪಡೆದು ತಣ್ಣಗೆ ನಡೆದ ಉರಿಮಾರಿಯ ಕಣ್ಣಲ್ಲಿ ಉರಿವ ಉಜ್ವಲ ಬೆಳಕು ಕವಿತೆಯಲ್ಲಿ ಹರಡಿಕೊಳ್ಳುತ್ತದೆ. ಕಂದನ ಬಾಯಲ್ಲಿ ಅವಳೆದೆಯ ಚಂದಿರ ಹಾಲಾಗಿ ಇಳಿಯುವುದು ಮಾತೃ ಸಂವೇದನೆಯ ಕಾಲಾತೀತ ಬೆಸುಗೆಯಾಗಿ ಕಾಣಿಸುತ್ತದೆ. ಒಟ್ಟಾರೆಯಾಗಿ ‘ಕಾಡುಜೇಡ….’ ಸಂಕಲನದ ಕವಿತೆಗಳು ತಮ್ಮ ಸಂವೇದನೆಯ ವಿಸ್ತಾರ, ಪರಿಸರದೊಂದಿಗಿನ ತಾದಾತ್ಮ್ಯ ಸ್ತ್ರೀ ಮೂಲ ಅರಿವನ್ನು ದಾಟಿಸುವ ಭಾಷಾಭಿವ್ಯಕ್ತಿಯಿಂದಾಗಿ ಗಟ್ಟಿಯಾಗಿ ಉಳಿಯಬಲ್ಲವು.
ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ. ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ‘ಪರಿಮಳದ ಬೀಜ’ ಕವನಸಂಕಲನ.