ನವ್ಯ ಮತ್ತು ನವೋದಯವನ್ನು ಹದವಾಗಿ ಬೆರೆಸಿದ ಪಾಕದಂತಹ ಸಾಹಿತ್ಯ ಸೃಷ್ಟಿಸಿದ ಚೆನ್ನವೀರ ಕಣವಿಯವರದು ಕರುಳಿನ ಪ್ರೀತಿಗೆ ಓಗೊಡುವ ಸ್ವಭಾವ. ಮೃದುಮನಸ್ಸಿನವರು ಎಂದು ಹೇಳಿದರೂ, ಅಗತ್ಯವೆನಿಸಿದಾಗ ಹೋರಾಟದ ಹಾದಿಯನ್ನು ಹಿಡಿದವರು. ಸಂಪ್ರದಾಯವನ್ನು ಮುರಿದವರು. ಆರೋಗ್ಯಪೂರ್ಣ ಸಂಘಟನೆಗೆ ಒತ್ತಾಸೆಯಾಗಿ ನಿಂತವರು. ಸಂಬಂಧಗಳನ್ನು ಪೋಷಿಸುತ್ತ, ಮಾನವಪ್ರೀತಿಗೆ ಮಾನ್ಯತೆ ನೀಡಿ ಜೀವನ ನಡೆಸಿದವರು. ಕಾವ್ಯವು ಅವರಿಗೆ ಒಲಿದು ಬಂದ ಪ್ರಕಾರ.ಇತರ ಪ್ರಕಾರಗಳಲ್ಲಿ ಅವರು ಬರೆದರೂ, ಕಾವ್ಯವೇ ಅವರ ಸಾಹಿತ್ಯದ ಸ್ಥಾಯೀ ಭಾವ. ಅವರ ಹೃದಯದ ಸ್ಥಾಯೀ ಭಾವ ಕೂಡ. ಅಗಲಿದ ಕವಿ ಚೆನ್ನವೀರ ಕಣವಿಯವರ ಕುರಿತು ರಾಘವೇಂದ್ರ ಪಾಟೀಲರು ಬರೆದ ಬರಹ ಇಲ್ಲಿದೆ.

 

ಕವಿ ಚೆನ್ನವೀರ ಕಣವಿಯವರು ತೀರಿ ಹೋದರು ಎಂದು ಕೇಳಿ ಬಹಳ ದುಃಖವಾಯಿತು. ‘ವಿಶ್ವಭಾರತಿಗೆ ಕನ್ನಡದಾರತಿ’ ಎಂಬ ಪರಿಕಲ್ಪನೆಯನ್ನು ಸೃಷ್ಟಿಸಿದ ಕವಿ ಕನ್ನಡವನ್ನು ಅದಮ್ಯವಾಗಿ ಪ್ರೀತಿಸಿದವರು. ಮೃದು ಹೃದಯದ ಕವಿಯೆಂದೇ ಗುರುತಿಸಿಕೊಂಡವರು. ಆದರೆ ಅಗತ್ಯವಿದ್ದಾಗ ಸಂಪ್ರದಾಯಗಳನ್ನು ಮುರಿಯಲು ಹಿಂದೆ ಮುಂದೆ ನೋಡಿದವರಲ್ಲ. ನನಗೆ ಅವರು ಬಹಳ ಕಾಲದಿಂದ ಪರಿಚಯವಿದ್ದರೂ, ನಿವೃತ್ತಿಯ ಬಳಿಕ ಅವರ ನೆರೆಮನೆಯವನಾಗುವ ಅವಕಾಶ ಲಭಿಸಿತು.

ನಾನು ಬಹಳ ದೀರ್ಘ ಕಾಲ ಮಲ್ಲಾಡಿ ಹಳ್ಳಿಯಲ್ಲಿ ವೃತ್ತಿಯಲ್ಲಿದ್ದೆ. ನಿವೃತ್ತನಾದ ಬಳಿಕ  ಧಾರವಾಡಕ್ಕೆ ಬಂದೆ. ಕಣವಿಯವರ ಮನೆಯ ಹಿಂದೆಯೇ ಒಂದು ಸೈಟ್ ತಕೊಂಡು ಮನೆ ಕಟ್ಟಿಸಿದೆ. ಅಲ್ಲಿ ಹೋದಾಗಲೆಲ್ಲ, ‘ಯಾವಾಗ ಬರ್ತೀರಿ? ಬೇಗನೇ ಬನ್ನಿ. ನೀವು ಬಂದರೆ ನನಗೆ ಸ್ವಲ್ಪ ವಿಶ್ರಾಂತಿ ಸಿಗುತ್ತದೆ’ ಎನ್ನುತ್ತಿದ್ದರು.

ಧಾರವಾಡದಲ್ಲಿ ನೆಲೆಸಿದ ಮೇಲೆ, ಸಾಹಿತ್ಯದ ಅನೇಕ ಕಾರ್ಯಕ್ರಮಗಳಿಗೆ ನಾವಿಬ್ಬರೂ ಒಟ್ಟಿಗೇ ನನ್ನ ಕಾರಿನಲ್ಲಿ ಹೋಗುತ್ತಿದ್ದೆವು. ಆವಾಗೆಲ್ಲ ಸಾಹಿತ್ಯ, ಸಾಮಾಜಿಕ, ವೈಯಕ್ತಿಕ ಚರ್ಚೆಗಳು ಸಾಗುತ್ತಿದ್ದವು. ನಾನು ‘ಗೈರ ಸಮಜೂತಿ’ ಎಂಬ ಕಾದಂಬರಿಯೊಂದನ್ನು ಬರೆದಿದ್ದೆ. ಅದು ಬಹಳ ಸಣ್ಣ ಅಕ್ಷರಗಳಲ್ಲಿ ಇದ್ದುದರಿಂದ ಅವರು ಓದಿರಲಿಕ್ಕಿಲ್ಲ ಎಂದು ಭಾವಿಸಿದ್ದೆ. ಆದರೆ ಒಮ್ಮೆ ಆ ಪುಸ್ತಕದ ಕುರಿತು ಮಾತು ಬಂದಾಗ, ‘ನಾನು ಓದೀನೋ ನಿನ್ ಕಾದಂಬರಿ. ಚಲೋ ಅದ’ ಎಂದು ಹೇಳಿದರು.

ಅವರು ಭಾಷಣಗಳಿಗೆ ಹೋಗುವಾಗ ಸಣ್ಣ ಸಣ್ಣ ಚೀಟಿಗಳಲ್ಲಿ ಟಿಪ್ಪಣಿ ಮಾಡಿಕೊಂಡು, ಬಹಳ ಶಿಸ್ತಿನಿಂದ ಮಾತನಾಡುತ್ತಿದ್ದರು. ಅವರ ಈ ಪೂರ್ವ ತಯಾರಿಯ ಶೈಲಿಯನ್ನು ಶ್ಲಾಘಿಸಿದಾಗ, ಅವರು ಮರಳಿ, ಏನೂ ಚೀಟಿಗಳಿಲ್ಲದೆ ಮಾತನಾಡುವ ನನ್ನ ಶೈಲಿಯನ್ನೇ ಶ್ಲಾಘಿಸಿದ್ದುಂಟು. ಮೃದು ಹೃದಯಿ, ಇನ್ನೊಬ್ಬರ ಒಳಿತನ್ನೇ ಹುಡುಕಿ ಹೇಳುವ ವ್ಯಕ್ತಿತ್ವ ಅವರದು. ಅವರ ಕಾವ್ಯವು ಹೇಗೋ, ಅವರ ಮಾತುಗಳು ಮತ್ತು ನಡವಳಿಕೆಯೂ ಹಾಗೆಯೇ.

ಅವರು ಹುಟ್ಟಿದ್ದು, ಗದಗ ಜಿಲ್ಲೆಯ ಹೊಂಬಳ ಗ್ರಾಮದಲ್ಲಿ. ತಂದೆ ಸಕ್ಕರೆಪ್ಪ ಮತ್ತು ತಾಯಿ ಪಾರ್ವತವ್ವ. ಅವರ ಮಾಧ್ಯಮಿಕ ಶಿಕ್ಷಣಕ್ಕೆಂದು ಧಾರವಾಡಕ್ಕೆ ಬಂದವರು, ಧಾರವಾಡವೇ ಅವರ ಕಾರ್ಯಕ್ಷೇತ್ರವಾಯಿತು. ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. ಪದವಿ ಪಡೆದರು. ಧಾರವಾಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ಕಾರ್ಯದರ್ಶಿಯಾಗಿ ನಿರ್ದೇಶಕರಾಗಿ ಕೆಲಸ ಮಾಡಿದರು.  ಪತ್ನಿ ಶಾಂತಾದೇವಿ ಕೂಡ ಕನ್ನಡ ಸಾಹಿತ್ಯದ ಕುರಿತು ಒಲವುಳ್ಳವರಾಗಿದ್ದರು. ಪ್ರಖ್ಯಾತ ಕತೆಗಾರ್ತಿ.  ಮನೆಗೆ ಹೋದಾಗ ಅಕ್ಕರೆಯಿಂದ ಬಡಿಸುತ್ತಿದ್ದರು.

ನವ್ಯ ಮತ್ತು ನವೋದಯ, ಎರಡರ ಆರೋಗ್ಯ ಪೂರ್ಣವಾದ ಬೆರಕೆ ಅವರ ಬರಹಗಳಲ್ಲಿ ಕಾಣಿಸುತ್ತಿತ್ತು. ಅವರನ್ನು ಸಮನ್ವಯ ಕವಿ ಎಂದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಆದ್ದರಿಂದ ‘ಬೆರಕೆ ಅಥವಾ ಮಿಶ್ರಣ’ ಎಂಬ ಪದವನ್ನು ಹೇಳಬಹುದೇನೋ. ಹಾಗೆ ನೋಡಿದರೆ ಸಮನ್ವಯ ಎಂಬ ಪದ ಆರೋಗ್ಯಪೂರ್ಣವಾಗಿದ್ದು, ಸೂಕ್ತವಾಗುತ್ತದೆ ಎಂದು ನನಗೂ ಅನಿಸುತ್ತದೆ. ಒಟ್ಟಾರೆಯಾಗಿ, ಅವರು  ನವ್ಯದ ಆಧುನಿಕತೆ, ನವೋದಯದ ಮಾನವಪ್ರೀತಿಯನ್ನು ಚೆನ್ನಾಗಿ ಬೆರೆಸಿಕೊಂಡು ಅತ್ಯಂತ ಹೃದ್ಯವಾದ ಕವಿತೆ ಬರೆದರು.

ಅವರ ಆರಂಭದ ಕವಿತೆಗಳಲ್ಲಿ ಗೇಯತೆಯೇ ಹೆಚ್ಚು ಎದ್ದು ಕಾಣುತ್ತಿದ್ದವು. ಆದರೆ ನಂತರದ ಕವಿತೆಗಳು ಗೇಯತೆಯ ಚೌಕಟ್ಟನ್ನು ಉಲ್ಲಂಘಿಸಿ, ಆಂತರಿಕ ಲಯವನ್ನಿಟ್ಟುಕೊಂಡು ರಚನೆಯಾದವು ಎಂದು ಅನಿಸುತ್ತದೆ. ಅವರ ಕವಿತೆ ಓದುವುದೆಂದರೆ ಅದು ಉಲ್ಲಾಸದ ಕ್ರಿಯೆ.  ಆಗ ನವ್ಯ ಪ್ರಕಾರದಲ್ಲಿ ಕಂಡು ಬರುತ್ತಿದ್ದ ನಿರಾಶಾಭಾವ, ಏಕಾಕಿತನದ ನೋವು, ಕಾಮ, ವ್ಯಂಗ್ಯ ಮುಂತಾದವುಗಳನ್ನು ಕಣವಿಯವರು ಹೆಚ್ಚಾಗಿ ಹಚ್ಚಿಕೊಳ್ಳದೇ, ತಮ್ಮದೇ ಕಾವ್ಯದಾರಿಯನ್ನು ಕಂಡುಕೊಂಡರು. ಆರಂಭಿಕ ಕವನಗಳಲ್ಲಿ ನಿಸರ್ಗ ಪ್ರೀತಿ, ಅನುಭಾವಿಕ ನೆಲೆಗಳು ಗೋಚರಿಸಿದರೆ, ಮಣ್ಣಿನ ಮೆರವಣಿಗೆ, ನೆಲಮುಗಿಲು, ಶಿಶುಕಂಡ ಕನಸು ಕವನ ಸಂಕಲನ ಪ್ರಕಟವಾಗುವ ಹೊತ್ತಿಗೆ ಕೊಂಚ ವಿಡಂಬನೆಯ ಹಾದಿ ಹಿಡಿದರು. ಗೋಪಾಲ ಕೃಷ್ಣ ಅಡಿಗರ ಪ್ರಭಾವದಲ್ಲಿ ಕಳೆದು ಹೋಗದೇ ತಮ್ಮದೇ ಶೈಲಿಯೊಂದನ್ನು ಹೆಣೆದುಕೊಂಡರು ಎನ್ನಬಹುದು. ಕಣವಿಯವರಿಗೆ ಇಷ್ಟವಾದ ಮತ್ತೊಂದು ಪ್ರಕಾರವೆಂದರೆ ಸಾನೆಟ್ಟುಗಳು. ಈ ಕಾವ್ಯಶೈಲಿಯು ತನಗೆ ಆಪ್ತವೆಂದು ಅವರೇ ಆಗಾಗ ಹೇಳಿಕೊಂಡಿದ್ದುಂಟು. ನೂರಕ್ಕೂ ಹೆಚ್ಚು ಸಾನೆಟ್ಟುಗಳನ್ನು ಬರೆದು ಸುನೀತಗಳ ಸಾಮ್ರಾಟ ಎಂದು ಕರೆಸಿಕೊಂಡರು. ಅಲ್ಲಿ ಕಣವಿಯವರ ಸುಂದರ ಅಂತರಂಗವು ಪ್ರತಿಫಲಿಸುತ್ತಿತ್ತು.

‘ವಿಶ್ವಭಾರತಿಗೆ ಕನ್ನಡದಾರತಿ’ ಎಂಬ ಪರಿಕಲ್ಪನೆಯನ್ನು ಸೃಷ್ಟಿಸಿದ ಕವಿ ಕನ್ನಡವನ್ನು ಅದಮ್ಯವಾಗಿ ಪ್ರೀತಿಸಿದವರು. ಮೃದು ಹೃದಯದ ಕವಿಯೆಂದೇ ಗುರುತಿಸಿಕೊಂಡವರು. ಆದರೆ ಅಗತ್ಯವಿದ್ದಾಗ ಸಂಪ್ರದಾಯಗಳನ್ನು ಮುರಿಯಲು ಹಿಂದೆ ಮುಂದೆ ನೋಡಿದವರಲ್ಲ.

ಕಾವ್ಯಾಕ್ಷಿ, ಭಾವಜೀವಿ, ಆಕಾಶಬುಟ್ಟಿ, ಮಧುಚಂದ್ರ, ಮಣ್ಣಿನ ಮೆರವಣಿಗೆ, ದಾರಿ ದೀಪ, ನೆಲ ಮುಗಿಲು, ಎರಡು ದಡ, ನಗರದಲ್ಲಿ ನೆರಳು, ಜೀವಧ್ವನಿ, ಕಾರ್ತೀಕದ ಮೋಡ, ಜೀನಿಯಾ ಮುಂತಾದವು ಅವರ ಕವನ ಸಂಕಲನಗಳಾದರೆ, ವಿಮರ್ಶಾ ಕ್ಷೇತ್ರದಲ್ಲಿಯೂ ಅವರು ಕೆಲಸ ಮಾಡಿದ್ದಾರೆ.

ಸಾಹಿತ್ಯಚಿಂತನ, ಕಾವ್ಯಾನುಸಂಧಾನ, ಸಮಾಹಿತ, ಮಧುರಚೆನ್ನ, ಸಮತೋಲನ ಮುಂತಾದ ಕೃತಿಗಳು ಬಂದಿವೆ. ಮಕ್ಕಳ ಕವಿತೆ, ಸಂಪಾದನೆ, ಹೀಗೆ ವಿವಿಧ ಪ್ರಕಾರಗಳಲ್ಲಿ ಅವರು ಬರೆದರು.  ಆದರೆ ಕವಿಯಾಗಿಯೇ ಮೆರೆದರು ಎನ್ನಬಹುದು. ಯಾಕೆಂದರೆ ಅವರಿಗೆ ಕರುಳುಪ್ರೀತಿ ಕಡೆಗೆ ಒಲವು ಹೆಚ್ಚು.

ಜಿ.ಎಸ್.ಶಿವರುದ್ರಪ್ಪ ಅವರು ವೈಚಾರಿಕತೆಗೆ ಒತ್ತುಕೊಟ್ಟರೆ, ಕಣವಿಯವರು ಕರುಳಿನ ಅರಿವಿನ ಕಡೆಗೆ ಹೆಚ್ಚು ಒಲಿದವರು. ಬಹುಶಃ ಜಿಎಸ್‍ ಎಸ್‍ ಬೆಂಗಳೂರಿನಲ್ಲಿದ್ದುದು ಅದಕ್ಕೆ ಕಾರಣವೇನೋ. ಕಣವಿಯವರು ತಮಗೆ ಕ್ಷೇಮಭಾವ ಕೊಡುವ ಧಾರವಾಡದಲ್ಲಿದ್ದು, ಅಲ್ಲಿನ ಅಕ್ಕರೆಯ ವಾತಾವರಣವನ್ನೇ ಇಷ್ಟಪಟ್ಟರು. ಅಂತಹುದೇ ಬರಹಗಳನ್ನು ಬರೆದರು.

80ರ ದಶಕದಿಂದ ಅವರ ಒಡನಾಡಿಯಾಗಿದ್ದರೂ, ನಾನೂ ಅವರು ಕೂಡಿ ಕೆಲಸ ಮಾಡಿದ್ದು, ಧಾರವಾಡ ಸಾಹಿತ್ಯ ಸಂಭ್ರಮದ ಸಂದರ್ಭದಲ್ಲಿ. ಜೈಪುರ ಸಾಹಿತ್ಯ ಸಂಭ್ರಮವನ್ನು ನೋಡಿಕೊಂಡು ಬಂದ ಮೇಲೆ ಗಿರಡ್ಡಿ ಗೋವಿಂದರಾಜು  ಮತ್ತು ಅವರ ಸ್ನೇಹಿತರು, ಅಂತಹುದೇ ಕಾರ್ಯಕ್ರಮ ಧಾರವಾಡದಲ್ಲಿ ನಡೆಯಬೇಕು ಎಂದು ಆಶಿಸಿದರು. ಅದರ ಪ್ರಕಾರ, ಧಾರವಾಡ ಸಾಹಿತ್ಯ ಸಂಭ್ರಮ ಟ್ರಸ್ಟ್ ರಚಿಸಿ, ಕಾರ್ಯನಿರತರಾಗಿ ಕೆಲಸ ಶುರು ಮಾಡಿದಾಗ, ಅದರಲ್ಲಿ ಕಣವಿಯವರು ಸಮರ್ಥವಾಗಿ ಕೈ ಜೋಡಿಸಿದ್ದರು. ಕಣವಿ, ಎಂ.ಎಂ. ಕಲ್ಬುರ್ಗಿ, ಗಿರಡ್ಡಿ ಗೋವಿಂದರಾಜು ಅವರ ನೇತೃತ್ವದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ವಿವಾದಗಳು ಎದ್ದಾಗ, ಕಣವಿಯವರು ಬಹಳ ತಾಳ್ಮೆಯಿಂದ ವರ್ತಿಸಿದರು. ಇತರರಿಗೂ ಶಾಂತವಾಗಿ ಇರುವಂತೆ ಅನುನಯಿಸಿ ಮಾತನಾಡುತ್ತಿದ್ದರು.  ಆದರೆ ಕೊನೆಗೆ ಅವರ ಮನೆಗೇ ಪೊಲೀಸ್ ಭದ್ರತೆ ಕೊಡಬೇಕಾದ ಸಂದರ್ಭ ಎದುರಾದುದನ್ನು ಕಂಡರೆ, ನನಗೆ ಅದೊಂದು ವಿಪರ್ಯಾಸವೆನಿಸುತ್ತದೆ.

ನಾಡಿನ ತುಂಬ ನೂರು ಜಗದ್ಗುರು
ಇರುವುದ ಜಗವೊಂದೇ
ಕಾಡಿನ ತುಂಬ ಬಣ್ಣದ ಹೂಗಳು
ವಾಸನೆ ಕೆಲವೊಂದೇ;
ಬತ್ತಿಹೋದ ಕೆರೆಯಲ್ಲಿ ಬಂಗಲೆಗಳು ಎದ್ದಿವೆ
 ಜಲದೇವತೆಗೆ ಎಷ್ಟೊಂದು ಗೋರಿಗಳು…

ಎಂದು ಅವರು ಬರೆದ ಸಾಲುಗಳು ಅವರು ಎಷ್ಟೊಂದು ಸಮಾಜಮುಖಿಯಾಗಿ ಯೋಚಿಸುತ್ತಿದ್ದರು ಎನ್ನುವುದನ್ನು ಹೇಳುತ್ತವೆ. ಅಂತಹ ಕವಿಯನ್ನು ಅರಸಿಕೊಂಡು ಪಂಪಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ನಾಡೋಜ ಬಿರುದು ಮುಂತಾಗಿ ಅನೇಕ ಪುರಸ್ಕಾರಗಳು ಬಂದಿವೆ. ನಡೆ ನುಡಿಯನ್ನು ಏಕರೂಪವಾಗಿರಿಸಿಕೊಂಡು ಬದುಕಿದ ಅವರು ಹೊರಟು ಹೋಗಿದ್ದಾರೆ.