ನಿಮಗೆ ಏನೋ ಆಗುತ್ತದೆ. ಅದನ್ನು ಬರೆಯುವುದಕ್ಕೆ ಶುರು ಮಾಡುತೀರಿ. ಘಟನೆಯನ್ನು ಬಹಳ ನಾಟಕೀಯ ಮಾಡಬಹುದು ಅಥವ ಅದು ಏನೂ ಅಲ್ಲ ಅನ್ನುವ ಹಾಗೆ ಬರೆಯಬಹುದು; ಬಹಳ ಮುಖ್ಯವಾದ ಭಾಗವನ್ನು ಮರೆತು ಘಟನೆಯ ಅಮುಖ್ಯ ವಿವರಗಳನ್ನು ಉತ್ಪ್ರೇಕ್ಷೆ ಮಾಡುತ್ತ ಹೋಗಬಹುದು. ಏನೇ ಆಗಲಿ, ಆಗಿದ್ದನ್ನು ನೀವು ಅಂದುಕೊಂಡ ಹಾಗೆ ಬರೆಯುವುದಕ್ಕೆ ಆಗುವುದಿಲ್ಲ. ಇವತ್ತು ಮಧ್ಯಾಹ್ನ ಆಗಿದ್ದನ್ನು ಬರೆಯಬೇಕು. ಅಮ್ಮನಿಗೆ ಹೇಳಲಾರೆ. ಸದ್ಯಕ್ಕಂತೂ ಹೇಳಲಾರೆ. ನಾನು ಮನೆಗೆ ಬಂದಾಗ ಅವಳು ನನ್ನ ರೂಮಿನಲ್ಲಿದ್ದಳು. ಬಟ್ಟೆ ರಾಶಿ ನೋಡಿ ಸಿಡಿಮಿಡಿ ಅನ್ನುತಿದ್ದಳು. ನನಗೆ ಏನೋ ಆಗಿದೆ ಅಂತ ಕೂಡ ಅವಳಿಗೆ ಅನ್ನಿಸಲಿಲ್ಲ.
ಪ್ರೊಫೆಸರ್ ಓ.ಎಲ್. ನಾಗಭೂಷಣ ಸ್ವಾಮಿಯವರು ಅನುವಾದಿಸಿದ ಸಿಲ್ವಿಯಾ ಪ್ಲಾತ್ ದಿನಚರಿ ಬರಹಗಳ ಎರಡನೆಯ ಕಂತು.
ಬದುಕನ್ನು ಸೇಬಿನ ಹಣ್ಣಿನ ಹಾಗೆ ಕಚ್ಚಿದ್ದಾಯಿತು.
ಅಥವಾ ಮೀನಿನ ಹಾಗೆ ಆಡಿ ಸಂತೋಷವಾಗಿದ್ದಾಯಿತು.
ಬೆರಳಿನಲ್ಲಿ ಆಕಾಶದ ನೀಲಿಯನ್ನು ಮುಟ್ಟಿದ್ದಾಯಿತು.
ಇನ್ನು ಕಾಯಬೇಕು ಯಾತಕ್ಕೆ?
ದೇವದೇವತೆಗಳ ಮಬ್ಬು ಪ್ರಭೆ ಕಂಡೀತೆಂದಲ್ಲ
ಸುಸ್ಪಷ್ಟ ಬೆಳಗಿನಲ್ಲಿ, ಕೆಂಪಿಟ್ಟಿಗೆಗೋಡೆ ಮನೆಗಳ ಮುಂದೆ
‘ಯುದ್ಧಾ ಯುದ್ಧಾ’ ಎಂದು ಕೂಗುತ್ತ ಹೋಗುವ ಪೇಪರು ಹುಡುಗರನ್ನ ಕಾಯಬೇಕು. ಲೂಯಿ ಮ್ಯಾಕ್ನೀಸ್ Aubade ಪದ್ಯ.
“ಬದುಕನ್ನು ಟ್ರಾಜಿಡಿ ಎಂದು ಗ್ರಹಿಸಿದಾಗ ಮಾತ್ರ ಬದುಕು ಆರಂಭವಾಗುತ್ತದೆ…” ಡಬ್ಲ್ಯು. ಬಿ. ಯೇಟ್ಸ್.
“ಭವಿಷ್ಯವೆಲ್ಲ ಭೂತಕಾಲಕ್ಕೆ ಧುಮ್ಮಿಕ್ಕುವ ಈ ಕ್ಷಣವನ್ನು ಭದ್ರವಾಗಿ ಹಿಡಿದುಕೋ…” ಜೇಮ್ಸ್ ಜಾಯ್ಸ್.
ಜುಲೈ 1950
1. ಮತ್ತೆಂದೂ ಸಂತೋಷವಾಗಿರಲಾರೆನೇನೋ. ಇವತ್ತು ರಾತ್ರಿ ತೃಪ್ತಳಾಗಿದ್ದೇನೆ. ಖಾಲಿ ಮನೆ, ಇಡೀ ದಿನ ಬಿಸಿಲಲ್ಲಿ ಸ್ಟ್ರಾ ಬೆರಿ ಗಿಡ ನೆಟ್ಟು ಆಗಿರುವ ದಣಿವು, ಒಂದು ಲೋಟ ತಣ್ಣನೆ ಹಾಲು, ಐಸ್ ಕ್ರೀಮಿನಲ್ಲಿ ಅದ್ದಿದ ಬ್ಲೂ ಬೆರಿ ಹಣ್ಣು. ಪುಸ್ತಕ ಇಲ್ಲದೆ, ಕಾಲೇಜು ಇಲ್ಲದೆ ಜನ ಹೇಗಿರುತ್ತಾರೆ ಅನ್ನುವುದು ಈಗ ತಿಳಿಯುತ್ತಿದೆ. ದಣಿವು. ಮಲಗಲೇಬೇಕು. ನಾಳೆ ಮತ್ತೆ ಎದ್ದು ಇನ್ನಷ್ಟು ಗಿಡ ನೆಡಬೇಕು. ಹೀಗೇ ನೆಲಕ್ಕೆ ಹತ್ತಿರವಾಗಿ ಬದುಕುತ್ತಾ… ಇಂಥ ಹೊತ್ತಿನಲ್ಲಿ ಇನ್ನೂ ಏನೋ ಬೇಕು ಎಂದು ಬಯಸಿದರೆ ನಾನು ಪೆದ್ದಿ.
2. ಖಾಲಿ ರೂಮಿನ ನೆಲದ ಮೇಲೆ ಬಿದ್ದಿರುವ ನೀಲ ಬೆಳಕು. ಬೀದಿ ದೀಪದ್ದಲ್ಲ, ಚಂದ್ರನದ್ದು. ಇಂಥ ರಾತ್ರಿಯಲ್ಲಿ ಸ್ವಚ್ಛ, ಸ್ವಸ್ಥ ಯುವತಿ, ಕನ್ಯೆಯಾಗಿರುವುದಕ್ಕಿಂತ ಆಶ್ಚರ್ಯಕರವಾದದ್ದು ಏನಿದೆ?… (ಅತ್ಯಾಚಾರಕ್ಕೆ ಗುರಿಯಾಗುವುದು)
3. ಇವತ್ತಿನ ರಾತ್ರಿ ಭಯಂಕರ. ಏನೇನೆಲ್ಲ ಸೇರಿಕೊಂಡು ಹೀಗಾಗಿದೆ. ಗುಡ್ ಬೈ ಮೈ ಫ್ಯಾನ್ಸಿ ನಾಟಕ, ಅದರ ನಾಯಕಿಯ ಹಾಗೇ ನಾನೂ ಯುದ್ಧಭೂಮಿಯ ವರದಿಗಾರ್ತಿಯಾಗಬೇಕೆಂಬ ಹರೆಯದ ಬಯಕೆ, ನನ್ನನ್ನು ಮೆಚ್ಚಿಕೊಳ್ಳುವ ನಾನು ಅವನನ್ನು ಅರ್ಥಮಾಡಿಕೊಂಡಿರುವಷ್ಟೇ ನನ್ನನ್ನೂ ಅರ್ಥಮಾಡಿಕೊಂಡಿರುವ ಹುಡುಗನನ್ನು ಪ್ರೀತಿಸಬೇಕು ಅನ್ನುವ ಆಸೆ, ಎಲ್ಲವೂ ಸೇರಿಕೊಂಡಿವೆ. ಆಮೇಲೆ, ಜಾಕ್. ಒಳ್ಳೆಯವನಾಗಿ ಕಾಣಿಸಿಕೊಳ್ಳುವುದಕ್ಕೆ ಪ್ರಯತ್ನಪಡುತಿದ್ದದ್ದು, ಅದು ಗೊತ್ತಾಯಿತು ಅನ್ನುವುದು ಅವನಿಗೆ ತಿಳಿದು ನೋವು ಪಟ್ಟಿದ್ದು… ಆಮೇಲೆ ಡಾನ್ಸು ಮಾಡುವುದಕ್ಕೆ ಅನುಕೂಲವಾದ ರೆಕಾರ್ಡು, ಲೂಯಿ ಆರ್ಮ್ ಸ್ಟ್ರಾಂಗ್ ಹೇಳಿದ ಗಾರು ದನಿಯ ಹಾಡು…
4. ಇವತ್ತು ಆಗಸ್ಟ್ 1. ಧಗೆ, ಮಳೆ ಬಂದೀತು. ಬಂತು. ಪದ್ಯ ಬರೆಯಬೇಕು ಅನ್ನುವ ಪ್ರಲೋಭನೆ. ಆದರೆ ನನಗೆ ಬಂದ ತಿರಸ್ಕಾರ ಪತ್ರದ ಒಕ್ಕಣೆ ನೆನಪಿಗೆ ಬಂದಿತು: ಜೋರು ಮಳೆ ಬಂದಾದ ಮೇಲೆ ದೇಶದ ಮೂಲೆ ಮೂಲೆಗಳಿಂದ ಮಳೆಯನ್ನು ಕುರಿತ ಕವಿತೆಗಳ ಮಳೆ ಸುರಿಯುತ್ತದೆ’ ಎಂದು ಬರೆದಿದ್ದರು.
5. ನನಗೆ ಜನರನ್ನು ಕಂಡರ ಪ್ರೀತಿ. ಸ್ಟಾಂಪು ಸಂಗ್ರಹಿಸುವವರು ಸ್ಟಾಂಪುಗಳನ್ನು ಪ್ರೀತಿಸುವ ಹಾಗೆ ನಾನು ಜನರನ್ನ ಪ್ರೀತಿಸುತ್ತೇನೆ ಅನಿಸುತ್ತದೆ. ಪ್ರತಿಯೊಂದೂ ಘಟನೆ, ಪ್ರತಿಯೊಂದೂ ಕಥೆ, ಪ್ರತಿಯೊಂದೂ ಮಾತಿನ ತುಣುಕು ನನ್ನ ಮಟ್ಟಿಗೆ ಕಚ್ಚಾ ಸಾಮಗ್ರಿ. ನನ್ನ ಪ್ರೀತಿ ಪೂರ್ತಿ ವೈಯಕ್ತಿವಲ್ಲ, ಪೂರ್ತಿ ವೈಯಕ್ತಿಕತೆಯನ್ನು ಕಳಕೊಂಡದ್ದೂ ಅಲ್ಲ. ನಾನು ‘ಎಲ್ಲರೂ’ ಆಗಬೇಕು ಅನ್ನುವ ಆಸೆ—ಕುಂಟ, ಸಾಯುತ್ತಿರುವ ಮನುಷ್ಯ, ಸೂಳೆ-ನಾನು ಇವೆಲ್ಲವೂ ಆಗಿ ಮತ್ತೆ ನನ್ನತನಕ್ಕೆ ವಾಪಸ್ಸು ಬಂದು ನಾನು ಯಾರು ಯಾರೋ ಆಗಿದ್ದೆನಲ್ಲ ಆವಾಗ ನನಗೆ ಅನಿಸಿದ್ದು, ನನಗೆ ಬಂದ ಯೋಚನೆ ಎಲ್ಲವನ್ನೂ ಬರೆಯಬೇಕು. ಆದರೆ ನಾನು ಎಲ್ಲವನ್ನೂ ಬಲ್ಲ ಸರ್ವಜ್ಞಳಲ್ಲ. ನನ್ನ ಬದುಕನ್ನು ಬದುಕಬೇಕು. ನನಗೆ ಇರುವುದು ಈ ನನ್ನ ಬದುಕು ಮಾತ್ರ. ನಮ್ಮ ಬದುಕನ್ನು ನಾವೇ ಎಲ್ಲ ಹೊತ್ತಿನಲ್ಲೂ ವಸ್ತುನಿಷ್ಠವಾಗಿ ಗಮನಿಸುವುದಕ್ಕೆ ಸಾಧ್ಯವಿಲ್ಲ.
6. ನನ್ನ ಮಟ್ಟಿಗೆ ವರ್ತಮಾನವೇ ಶಾಶ್ವತ. ಶಾಶ್ವತವು ಸದಾ ಬದಲಾಗುತ್ತ, ಹರಿಯುತ್ತ, ಕರಗುತ್ತ ಇರುತ್ತದೆ. ಬದುಕು ಎಂದರೆ ಈ ಕ್ಷಣ. ಕ್ಷಣ ಕಳೆಯಿತೆಂದರೆ ಸಾವು. ಆದರೆ ಪ್ರತಿ ಹೊಸ ಕ್ಷಣದಲ್ಲೂ ಬದುಕನ್ನು ಹೊಸದಾಗಿ ಶುರುಮಾಡಲು ಸಾಧ್ಯವಿಲ್ಲ. ಸತ್ತು ಹೋದದ್ದನ್ನು ಆಧಾರವಾಗಿಟ್ಟುಕೊಂಡು ತೀರ್ಮಾನ ಮಾಡಬೇಕು. ಇದೊಂದು ಹುದುಲು, ಇದೊಂದು ಹತಾಶೆ. ಯಾವುದೋ ಕತೆ, ಯಾವುದೋ ಚಿತ್ರ ಸಂವೇದನೆಯನ್ನು ಒಂದಷ್ಟು ಹೊಸತು ಮಾಡೀತು. ಆದರೆ, ಅದು ಸಾಲದು, ಸಾಲದು. ಸದ್ಯದ ವರ್ತಮಾನವನ್ನು ಬಿಟ್ಟರೆ ನಿಜವಾದದ್ದು ಬೇರೇನೂ ಇಲ್ಲ. ಅಗೋ ಆಗಲೇ ಶತಮಾನಗಳ ಭಾರ ನನ್ನ ಉಸಿರು ಕಟ್ಟಿಸುತ್ತಿದೆ. ನಾನು ಈಗ ಬದುಕುತ್ತಿರುವ ಹಾಗೆ ನೂರು ವರ್ಷದ ಹಿಂದೆ ಇನ್ನು ಯಾರೋ ಹುಡುಗಿ ಇದ್ದಳು. ಅವಳು ಸತ್ತಿದ್ದಾಳೆ. ನಾನು ಇದ್ದೇನೆ, ನಾನು ವರ್ತಮಾನ, ನಾನು ಈ ಕ್ಷಣ. ನಾನೂ ಹೋಗುತ್ತೇನೆ ಅನ್ನುವುದು ಗೊತ್ತು. ಉನ್ನತವಾದ ಉದಾತ್ತವಾದ ಗಳಿಗೆ, ಸುಡುವ ಮಿಂಚಿನ ಹೊಳಹು, ಬರುತ್ತವೆ, ಹಾಗೇ ಹೋಗುತ್ತವೆ. ಕೊನೆ ಇರದ ಹುದುಲು. ಸಾಯುವುದು ನನಗಿಷ್ಟವಿಲ್ಲ.
ಪ್ರತಿಯೊಂದೂ ಘಟನೆ, ಪ್ರತಿಯೊಂದೂ ಕಥೆ, ಪ್ರತಿಯೊಂದೂ ಮಾತಿನ ತುಣುಕು ನನ್ನ ಮಟ್ಟಿಗೆ ಕಚ್ಚಾ ಸಾಮಗ್ರಿ. ನನ್ನ ಪ್ರೀತಿ ಪೂರ್ತಿ ವೈಯಕ್ತಿವಲ್ಲ, ಪೂರ್ತಿ ವೈಯಕ್ತಿಕತೆಯನ್ನು ಕಳಕೊಂಡದ್ದೂ ಅಲ್ಲ. ನಾನು ‘ಎಲ್ಲರೂ’ ಆಗಬೇಕು ಅನ್ನುವ ಆಸೆ—ಕುಂಟ, ಸಾಯುತ್ತಿರುವ ಮನುಷ್ಯ, ಸೂಳೆ-ನಾನು ಇವೆಲ್ಲವೂ ಆಗಿ ಮತ್ತೆ ನನ್ನತನಕ್ಕೆ ವಾಪಸ್ಸು ಬಂದು ನಾನು ಯಾರು ಯಾರೋ ಆಗಿದ್ದೆನಲ್ಲ ಆವಾಗ ನನಗೆ ಅನಿಸಿದ್ದು, ನನಗೆ ಬಂದ ಯೋಚನೆ ಎಲ್ಲವನ್ನೂ ಬರೆಯಬೇಕು.
7. ಕೆಲವು ವಿಷಯಗಳ ಬಗ್ಗೆ ಬರೆಯುವುದು ಕಷ್ಟ. ನಿಮಗೆ ಏನೋ ಆಗುತ್ತದೆ. ಅದನ್ನು ಬರೆಯುವುದಕ್ಕೆ ಶುರು ಮಾಡುತೀರಿ. ಘಟನೆಯನ್ನು ಬಹಳ ನಾಟಕೀಯ ಮಾಡಬಹುದು ಅಥವ ಅದು ಏನೂ ಅಲ್ಲ ಅನ್ನುವ ಹಾಗೆ ಬರೆಯಬಹುದು; ಬಹಳ ಮುಖ್ಯವಾದ ಭಾಗವನ್ನು ಮರೆತು ಘಟನೆಯ ಅಮುಖ್ಯ ವಿವರಗಳನ್ನು ಉತ್ಪ್ರೇಕ್ಷೆ ಮಾಡುತ್ತ ಹೋಗಬಹುದು. ಏನೇ ಆಗಲಿ, ಆಗಿದ್ದನ್ನು ನೀವು ಅಂದುಕೊಂಡ ಹಾಗೆ ಬರೆಯುವುದಕ್ಕೆ ಆಗುವುದಿಲ್ಲ. ಇವತ್ತು ಮಧ್ಯಾಹ್ನ ಆಗಿದ್ದನ್ನು ಬರೆಯಬೇಕು. ಅಮ್ಮನಿಗೆ ಹೇಳಲಾರೆ. ಸದ್ಯಕ್ಕಂತೂ ಹೇಳಲಾರೆ. ನಾನು ಮನೆಗೆ ಬಂದಾಗ ಅವಳು ನನ್ನ ರೂಮಿನಲ್ಲಿದ್ದಳು. ಬಟ್ಟೆ ರಾಶಿ ನೋಡಿ ಸಿಡಿಮಿಡಿ ಅನ್ನುತಿದ್ದಳು. ನನಗೆ ಏನೋ ಆಗಿದೆ ಅಂತ ಕೂಡ ಅವಳಿಗೆ ಅನ್ನಿಸಲಿಲ್ಲ. ಸುಮ್ಮನೆ ಬೈಯುತ್ತ, ವಟವಟಾ ಅನ್ನುತಿದ್ದಳು. ಅವಳ ಮಾತು ತಡೆದು ನನಗಾಗಿದ್ದು ಹೇಳಲು ಆಗಲಿಲ್ಲ. ಬರೆದದ್ದು ಹೇಗೆ ಬೇಕಾದರೂ ಬರಲಿ, ಬರೆಯಲೇಬೇಕು ಅದನ್ನ ನಾನು.
ಮಧ್ಯಾಹ್ನವೆಲ್ಲ ಮಳೆ ಬಂದಿತ್ತು, ತೋಟದಲ್ಲಿ. ನಾನು ನೆನೆದು ಥಂಡಿ ಅನಿಸುತಿತ್ತು. ತಲೆಗೆ ಪ್ರಿಂಟ್ ಗಳಿರುವ ಸಿಲ್ಕಿನ ಕರ್ಚೀಫು, ನನ್ನ ಸ್ವೆಟ್ ಶರ್ಟಿನ ಮೇಲೆ ಸ್ಕೀ ಜಾಕೆಟ್ಟು. ಮಧ್ಯಾಹ್ನವೆಲ್ಲ ಹುರಳಿ ಕಾಯಿ ಕಿತ್ತಿದ್ದೆ. ಮೂರು ದೊಡ್ಡ ಬುಟ್ಟಿಯಷ್ಟು. ಐದು ಗಂಟೆಯಾಗಿತ್ತಲ್ಲ, ಜನ ಹೊರಡುತಿದ್ದರು. ನಾನು ಕಾರುಗಳ ಪಕ್ಕದಲ್ಲಿ ನಿಂತು ಮನೆಗೆ ಹೊರಡಲು ಕಾಯುತಿದ್ದೆ. ಕ್ಯಾತಿ ಆಗ ತಾನೇ ಬಂದಳು. ಬೈಕು ಹತ್ತುತ್ತ ‘ಇಗೋ, ಇಲೋ ಬಂದ,’ ಅಂದಳು.
ನೋಡಿದೆ. ಹೌದು, ಬರತಾ ಇದ್ದ. ಹಳೆಯ ಕಾಖಿ ಶರ್ಟು ತೊಟ್ಟು, ನಮಗೆಲ್ಲ ಚೆನ್ನಾಗಿ ಪರಿಚಯವಾಗಿದ್ದ ಬಿಳಿಯ ಕರ್ಚೀಫು ತಲೆಗೆ ಕಟ್ಟಿಕೊಂಡು ಬರತಾ ಇದ್ದ. ನಾವು ಸ್ಟ್ರಾಬೆರಿ ಹೊಲದಲ್ಲಿ ಒಟ್ಟಿಗೆ ಕೆಲಸಮಾಡಿದಾಗಿನಿಂದ ಅವನು ಕಂಡರೆ ಮಾತಾಡಿಸುವಷ್ಟು ಪರಿಚಯ ಬೆಳೆದಿತ್ತು. ಅವನು ಪೆನ್ನಿನಲ್ಲಿ ಬಿಡಿಸಿದ್ದ ತೋಟದ ಸ್ಕೆಚ್ಚು ಕೊಟ್ಟಿದ್ದ. ಬಹಳ ದೃಢವಾದ ಗೆರೆಗಳಲ್ಲಿ ತೋಟದ ವಿವರಗಳನ್ನು ಬರೆದಿದ್ದ. ಈಗ ಒಬ್ಬ ಹುಡುಗನ ಸ್ಕೆಚ್ಚು ಬಿಡಿಸುವುದರಲ್ಲಿ ತೊಡಗಿದ್ದ.
ಅದಕ್ಕೇ ನಾನು, ‘ಜಾನ್ನ ಚಿತ್ರ ಬಿಡಿಸಿ ಆಯಿತಾ?’ ಎಂದು ಕೂಗಿ ಕೇಳಿದೆ.
‘ಆಂ? ಹ್ಞೂಂ, ಹ್ಞೂಂ,’ ಅನ್ನುತ್ತ ನಕ್ಕ. ‘ಬಂದು ನೋಡು, ಕೊನೇ ಚಾನ್ಸು,’ ಅಂದ. ಚಿತ್ರ ಮುಗಿಸಿದ ತಕ್ಷಣ ನನಗೆ ತೋರಿಸುತ್ತೇನೆ ಅಂತ ಮಾತುಕೊಟ್ಟಿದ್ದ. ನಾನು ಓಡಿ, ಅವನ ಜೊತೆ ಹೆಜ್ಜೆ ಹಾಕುತ್ತ, ಉಗ್ರಾಣದತ್ತ ನಡೆದೆ. ಅವನು ವಾಸ ಇರುವುದು ಅಲ್ಲೇ.
ದಾರಿಯಲ್ಲಿ ಮೇರಿ ಕಾಫಿ ಸಿಕ್ಕಳು. ಯಾಕೋ ನನ್ನನ್ನ ವಿಚಿತ್ರವಾಗಿ ನೋಡಿದಳು. ಯಾಕೋ ಅವಳ ಕಣ್ಣಲ್ಲಿ ಕಣ್ಣಿಟ್ಟು ನೋಡಲು ಆಗಲಿಲ್ಲ ನನಗೆ.
‘ಹಲೋ ಮೇರಿ,’ ಅಂದ ಇಲೋ.
‘ಹಲ್ಲೋ, ಇಲೋ,’ ಅಂದಳು ಮೇರಿ, ವಿಚಿತ್ರವಾದ, ಸಪ್ಪೆ ದನಿಯಲ್ಲಿ.
ಜಿನ್ನಿ, ಸಾಲಿ, ಮತ್ತೆ ಇನ್ನೂ ಒಂದಷ್ಟು ಹುಡುಗರು ಟ್ರಾಕ್ಟರ್ ಶೆಡ್ಡಿನಲ್ಲಿದ್ದರು. ನಾವು ಅವರನ್ನ ದಾಟಿ ಹೋಗುತಿದ್ದ ಹಾಗೆ ಹೋ ಎಂದು ಕಿರುಚಿದರು. ‘ಓಹೋ, ಸಿಲ್ವಿಯಾ’ ಅಂತ ರಾಗವಾಗಿ ಹೇಳಿದರು. ನನ್ನ ಕೆನ್ನೆ ಬಿಸಿಯಾಗಿ ಉರಿದವು.
‘ನನ್ನ ಯಾಕೆ ಅಣಕಿಸತಾರೆ?’ ಅಂದರೆ. ಇಲೋ ಸುಮ್ಮನೆ ನಕ್ಕ. ಜೋರಾಗಿ ನಡೆಯುತಿದ್ದ.
‘ಇನ್ನು ಸ್ವಲ್ಪ ಹೊತ್ತಿಗೆ ಮನೆಗೆ ಹೋಗತೇವೆ,’ ಬಚ್ಚಲು ಮನೆಯಿಂದ ಮಿಲ್ಟನ್ ಕೂಗಿದ.
ಹ್ಞೂಂ ಅನ್ನುವ ಹಾಗೆ ತಲೆ ಹಾಕಿ ನಾನು ನೆಲ ನೋಡಿಕೊಂಡು ಹೆಜ್ಜೆ ಹಾಕುತ್ತಲೇ ಇದ್ದೆ. ಆಮೇಲೆ ಉಗ್ರಾಣ ಬಂತು. ದೊಡ್ಡ ಜಾಗ. ಛಾವಣಿ ಅತಿ ಎತ್ತರದಲ್ಲಿತ್ತು. ಕುದುರೆಗಳ, ವದ್ದೆ ಹುಲ್ಲಿನ ವಾಸನೆ ತುಂಬಿತ್ತು. ಒಳಗೆ ಬೆಳಕು ಕಡಿಮೆ. ಲಾಯದ ಇನ್ನೊಂದು ಬದಿಯಲ್ಲಿ ಯಾರನ್ನೋ ನೋಡಿದೆ ಅನ್ನಿಸಿತು. ಗ್ಯಾರಂಟಿ ಇರಲಿಲ್ಲ. ಇಲೋ ಒಂದೂ ಮಾತಾಡದೆ ಇಕ್ಕಟ್ಟಾದ ಮೆಟ್ಟಿಲು ಹತ್ತುವುದಕ್ಕೆ ಶುರುಮಾಡಿದ. ಮರದ ಮೆಟ್ಟಿಲು.
‘ಅಲ್ಲಿದೆಯಾ ನಿನ್ನ ರೂಮು? ಇಷ್ಟೊಂದು ಮೆಟ್ಟಿಲು?’
ಅವನು ಸುಮ್ಮನೆ ಹತ್ತುತಲೇ ಇದ್ದ. ನಾನೂ ಹಿಂದೇನೇ ಹೋದೆ. ಮೇಲಕ್ಕೆ ಹೋದಮೇಲೆ ಹಿಂಜರಿದೆ. ಬಾಗಿಲು ತೆಗೆಯುತ್ತ ‘ಬಾ, ಒಳಕ್ಕೆ ಬಾ,’ ಅಂದ. ಚಿತ್ರ ಅಲ್ಲಿತ್ತು, ಅವನ ರೂಮಿನಲ್ಲಿ. ಹೊಸ್ತಿಲು ದಾಟಿ ಒಳಕ್ಕೆ ಹೋದೆ. ಪುಟ್ಟ ರೂಮು, ಎರಡು ಕಿಟಕಿ, ಟೇಬಲ್ಲಿನ ತುಂಬ ಚಿತ್ರಗಳು, ಮಂಚ, ಅದರ ಮೇಲೆ ಕಪ್ಪು ಕಂಬಳಿ. ಮೇಜಿನ ಮೇಲೆ ಕಿತ್ತಳೆ ಹಣ್ಣು, ಹಾಲು ಜೋಡಿಸಿಟ್ಟಿತ್ತು. ರೇಡಿಯೋ ಇತ್ತು.
‘ಇಗೋ’ ಅನ್ನುತ್ತ ಜಾನ್ನ ಮುಖದ ಪೆನ್ಸಿಲ್ ಸ್ಕೆಚ್ಚು ತೋರಿಸಿದ.
‘ಇದನ್ನ ಹೇಗೆ ಬರೀತೀಯ? ಪೆನ್ಸಿಲ್ ಲೆಡ್ಡಿನ ಬದಿಯಿಂದಲಾ?’ ಆಗ ಅದು ಮುಖ್ಯ ಅನಿಸಿರಲಿಲ್ಲ. ಇಲೋ ಹೇಗೆ ಬಾಗಿಲು ಮುಚ್ಚಿದ, ರೇಡಿಯೋ ಜೋರಾಗಿ ಹಾಕಿದ ಅನ್ನುವುದು ಈಗ ನೆನಪಿದೆ. ಪೆನ್ಸಿಲು ನನಗೆ ತೋರಿಸುತ್ತ ಜೋರಾಗಿ ಮಾತಾಡಿದ. ‘ನೋಡಿಲ್ಲಿ, ಯಾವ ಸೈಜಿನ ಲೆಡ್ಡು ಬೇಕಾದರೂ ಬರುತ್ತೆ,’ ಅಂದ. ಅವನು ತೀರ ಹತ್ತಿರ ಇದ್ದಾನೆ ಅನ್ನುವ ಅರಿವು ನನಗೆ ಚೆನ್ನಾಗಿಯೇ ಇತ್ತು. ಅವನ ನೀಲಿ ಕಣ್ಣು ಧೈರ್ಯವಾಗಿ ನನ್ನನ್ನೇ ನೋಡುತಿದ್ದವು. ಕಣ್ಣಲ್ಲಿ ಒಂದಿಷ್ಟು ನಗು ಇತ್ತು.
‘ನಿಜವಾಗಲೂ ನಾನು ಹೋಗಬೇಕು. ಅವರೆಲ್ಲ ಕಾಯತಾ ಇರತಾರೆ. ಚಿತ್ರ ಚೆನ್ನಾಗಿದೆ,’ ಅಂದೆ.
ನಗುತ್ತಾ ಅವನು ನನಗೂ ಬಾಗಿಲಿಗೂ ನಡುವೆ ಇದ್ದ. ಚಲನೆ. ಅವನ ಕೈ ನನ್ನ ತೋಳನ್ನು ತಬ್ಬಿತು. ಅವನ ಬಾಯಿ ತಟ್ಟನೆ ನನ್ನ ಬಾಯಮೇಲಿತ್ತು. ಬಲವಾಗಿ, ಒತ್ತುತಿತ್ತು. ಅವನ ನಾಲಗೆ ನನ್ನ ತುಟಿಗಳ ಮಧ್ಯೆ ತೂರಿತ್ತು. ಅವನ ತೋಳು ಕಬ್ಬಿಣದ ಹಾಗಿದ್ದವು.
ಜಿನ್ನಿ, ಸಾಲಿ, ಮತ್ತೆ ಇನ್ನೂ ಒಂದಷ್ಟು ಹುಡುಗರು ಟ್ರಾಕ್ಟರ್ ಶೆಡ್ಡಿನಲ್ಲಿದ್ದರು. ನಾವು ಅವರನ್ನ ದಾಟಿ ಹೋಗುತಿದ್ದ ಹಾಗೆ ಹೋ ಎಂದು ಕಿರುಚಿದರು. ‘ಓಹೋ, ಸಿಲ್ವಿಯಾ’ ಅಂತ ರಾಗವಾಗಿ ಹೇಳಿದರು. ನನ್ನ ಕೆನ್ನೆ ಬಿಸಿಯಾಗಿ ಉರಿದವು.
‘ಇಲೋ, ಇಲೋ!’ ಚೀರಿದೆನೋ, ಪಿಸುಗುಟ್ಟಿದೆನೋ ಗೊತ್ತಾಗಲಿಲ್ಲ. ಬಿಡಿಸಿಕೊಳ್ಳಲು ಪ್ರಯತ್ನಪಡುತ್ತ, ನನ್ನ ಕೈ ಮನಸೋ ಇಚ್ಛೆ ಗುದ್ದುತ್ತ, ಅವನ ಶಕ್ತಿಯ ವಿರುದ್ಧ ವ್ಯರ್ಥವಾಗಿ ಹೆಣಗಿದೆ. ಕೊನೆಗೆ ನನ್ನ ಬಿಟ್ಟ, ಹಿಂದೆ ಸರಿದು ನಿಂತ. ನನ್ನ ಬಾಯನ್ನು ಕೈಯಿಂದ ಮುಚ್ಚಿಕೊಂಡೆ. ಅವನು ಕೊಟ್ಟ ಬಾಯೆಲ್ಲ ಬಿಸಿಯಾಗಿತ್ತು, ತುಟಿ ಗಾಯವಾಗಿತ್ತು. ವಿಲಕ್ಷಣವಾಗಿ ನನ್ನ ನೋಡಿದ. ಅವನಿಗೆ ತಮಾಷೆ ಅನಿಸಿತ್ತು, ಆಶ್ಚರ್ಯವಾಗಿತ್ತು. ನಾನು ಅಳುತಿದ್ದೆ, ಹೆದರಿದ್ದೆ. ಆ ಥರ ಯಾರೂ ಮುತ್ತಿಟ್ಟಿರಲಿಲ್ಲ. ಹಂಬಲಿಸುತ್ತ, ಕಂಪಿಸುತ್ತ, ನಾನೇ ಕರೆಂಟಾಗಿ ನಿಂತಿದ್ದೆ.
‘ಯಾಕೆ, ಯಾಕೆ,’ ಅನ್ನುತ್ತ ಸಹಾನುಭೂತಿಯ, ಇದೇನೂ ವಿಶೇಷವಲ್ಲ ಅನ್ನುವಂಥ ಸದ್ದು ಮಾಡಿದ. ‘ನೀರು ತರುತ್ತೇನೆ,’ ಅಂದ.
ನೀರು ಕುಡಿದೆ. ಬಾಗಿಲು ತೆರೆದ. ಕುರುಡಳ ಹಾಗೆ ಮಹಡಿ ಮೆಟ್ಟಿಲಿಳಿದೆ. ಮೇಬೆಲ್, ರಾಬರ್ಟ್ ರನ್ನು, ಕರಿಯ ಹುಡುಗರನ್ನು ದಾಟಿ ಹೋದೆ. ಮಕ್ಕಳ ದನಿಯಲ್ಲಿ ಅವರೆಲ್ಲ ನನ್ನ ಹೆಸರು ಕೂಗಿದರು. ಅವರಮ್ಮ ಮೇರಿ ಲೌ ಅಲ್ಲೆ ನಿಂತಿದ್ದಳು, ಮೌನವಾಗಿ ಕಪ್ಪು ಅಸ್ತಿತ್ವದ ಹಾಗೆ.
ಹೊರಗೆ ಬಂದೆ. ಟ್ರಕ್ಕೊಂದು ಹೋಗುತಿತ್ತು. ಉಗ್ರಾಣದ ಹಿಂದಿನಿಂದ ಬಂದಿತ್ತು. ಅದರಲ್ಲಿ ಬೆರ್ನಿ ಇದ್ದ. ಕುಳ್ಳ, ಭಯಂಕರ ಮಾಂಸಖಂಡಗಳವನು, ಬಚ್ಚಲುಮನೆಯಲ್ಲಿದ್ದವನು. ಅವನ ಕಣ್ಣು ದುಷ್ಟ ಸಂತೋಷದಲ್ಲಿ ಹೊಳೆದವು. ನಾನು ಅವನ ಟ್ರಕ್ಕು ನಿಲ್ಲಿಸಲು ಆಗದ ಹಾಗೆ ಸ್ಪೀಡಾಗಿ ಹೊರಟು ಹೋದ. ಉಗ್ರಾಣದಲ್ಲಿದ್ದನಾ? ಇಲೋ ಬಾಗಿಲು ಮುಚ್ಚಿದ್ದು, ನಾನು ಹೊರಗೆ ಬಂದಿದ್ದು ನೋಡಿದನಾ? ನೋಡಿರಬೇಕು ಅನಿಸುತ್ತದೆ. ಕಾರಿನ ಹತ್ತಿರ ಹೋದೆ. ‘ಯಾಕೆ ಅಳತಾ ಇದ್ದೀಯಾ?’ ಬೆರ್ನಿ ಕೂಗಿ ಕೇಳಿದ. ನಾನು ಅಳತಾ ಇರಲಿಲ್ಲ. ಕೆನ್ನಿ ಮತ್ತೆ ಫ್ರೆಡ್ಡಿ ಟ್ರಾಕ್ಟರಿನಲ್ಲಿ ಬಂದರು. ಮನೆಗೆ ಹೋಗುತಿದ್ದ ಹುಡುಗರ ಗುಂಪು ಕಣ್ಣಲ್ಲಿ ಎಲ್ಲೋ ಬೆಳಕಿನ ಹೊಳಪು ಇಟ್ಟುಕೊಂಡು ನೋಡಿದರು. ‘ಮುತ್ತು ಕೊಟ್ಟನಾ?’ ಅವರಲೊಬ್ಬ ಕೇಳಿದ. ನನಗೆ ಗೊತ್ತು ಅನ್ನುವ ನಗು ಇತ್ತು ಅವನ ಮುಖದ ಮೇಲೆ.
ಹೊಟ್ಟೆ ತೊಳಸಿತು. ಯಾರಾದರೂ ಮಾತಾಡಿಸಿದರೂ ಮಾತಾಡಲು ಆಗುತ್ತಿರಲಿಲ್ಲ. ನನ್ನ ದನಿ ಗಂಟಲಲ್ಲಿ ದಪ್ಪಗೆ ಜೂಲುಜೂಲಾಗಿ ಸಿಕ್ಕಿಬಿದ್ದಿತ್ತು.
ಕೆನ್ನಿ ಮತ್ತು ಫ್ರೆಡ್ಡಿ ಹಳೆಯ ಕಾರು ಸ್ಟಾರ್ಟ್ ಮಾಡುವುದನ್ನು ನೋಡುವುದಕ್ಕೆ ಮಿ. ಟಾಂಪ್ಕಿನ್ಸ್ ಶೆಡ್ಡಿನಿಂದ ಬಂದ. ಎಲ್ಲಾರೂ ಒಳ್ಳೆಯವರು. ಆದರೆ ಎಲ್ಲರಿಗೂ ಗೊತ್ತಿತ್ತು. ಎಲ್ಲಾರಿಗೂ ಗೊತ್ತಿರಲೇಬೇಕು… ನಾನು ಅಲ್ಲೇ ನಿಂತಿದ್ದೆ. ಕೈ ಕಟ್ಟಿಕೊಂಡು, ಗರ್ರ್… ಸದ್ದು ಮಾಡುವ ಎಂಜಿನ್ನು ನೋಡುತ್ತ, ಎಲ್ಲಾ ಸರಿಯಾಗಿದೆ, ನನಗೇನೂ ಆಗಿಲ್ಲ ಅನ್ನುವ ಹಾಗೆ ನಗುತ್ತಾ ನಿಂತಿದ್ದೆ.
ಮನೆಗೆ ಹೋಗುತ್ತ ಮಿಲ್ಟನ್ ಹಿಂದುಗಡೆಯ ಮಡಿಸುವ ಸೀಟಿನಲ್ಲಿ ಕೂತ. ಡೇವಿಡ್ ಡ್ರೈವ್ ಮಾಡುತಿದ್ದ. ಆಂಡಿ ಮುಂದಿನ ಸೀಟಿನಲ್ಲಿದ್ದ. ನನ್ನನ್ನು ನೋಡುವಾಗ ಎಲ್ಲಾರ ಕಣ್ಣಲ್ಲೂ ಬೆಳಕು ಡಾನ್ಸ್ ಮಾಡುತಿತ್ತು.
‘ವಾಶ್ ರೂಮಿನಲ್ಲಿದ್ದ ಎಲ್ಲಾರೂ ನೀನು ಉಗ್ರಾಣಕ್ಕೆ ಹೋಗುವುದು ನೋಡಿದರು, ಜೋಕು ಮಾಡುವುದು ಕೇಳಿದರು,’ ಅಂದ. ದನಿಯಲ್ಲಿ ಬಿಗುವಿತ್ತು.
ಚಿತ್ರದ ಬಗ್ಗೆ ಕೇಳಿದ ಮಿಲ್ಟನ್. ನಾವು ಕಲೆ, ಚಿತ್ರಗಳ ಬಗ್ಗೆ ಸ್ವಲ್ಪ ಮಾತಾಡಿದೆವು. ಎಲ್ಲಾರೂ ಎಷ್ಟು ಒಳ್ಳೆಯವರು. ನಾನು ಸ್ವಲ್ಪದರಲ್ಲಿ ತಪ್ಪಿಸಿಕೊಂಡೆ ಅನ್ನುವ ಸಮಾಧಾನ ಅವರೆಲ್ಲರಿಗೂ ಆಗಿರಬೇಕು. ನಾನು ಅಳುತೇನೆ ಅಂತ ನಿರೀಕ್ಷಿಸಿರಬಹುದು ಅವರೆಲ್ಲ. ಅವರಿಗೆ ಗೊತ್ತಿತ್ತು, ಖಂಡಿತ ಗೊತ್ತಿತ್ತು. ಮನೆಗೆ ಅಂತೂ ಬಂದೆ. ನಾಳೆ ಆ ದರಿದ್ರ ತೋಟಕ್ಕೆ ಮತ್ತೆ ಹೋಗಬೇಕು. ದೇವರೇ, ಇದೆಲ್ಲಾ ನನ್ನ ಕನಸಾಗಿರಲಿ. ಆದದ್ದೆಲ್ಲ ಕನಸೇ ಅಂತ ಬಲುಮಟ್ಟಿಗೆ ನಂಬಿಕೊಂಡಿದ್ದೆ.
ನಾಳೆ ಎಲ್ಲಾರ ನಾಲಗೆಯ ಮೇಲೂ ನನ್ನ ಹೆಸರು ಇರತ್ತೆ. ನಾನು ಜಾಣೆಯಾಗಬೇಕು, ಅಥವಾ ಹುಚ್ಚಿಯಾಗಬೇಕು. ಹೆದರಿಕೆ ಆಗುತಿದೆ. ಅವನು ನನಗೆ ಮುತ್ತಿಡದೆ ಇದ್ದಿದ್ದರೆ. ಇಟ್ಟಿದ್ದ. ಹಾಗಾದರೆ, ಮುತ್ತಿಡಲಿಲ್ಲ ಅಂತ ಸುಳ್ಳು ಹೇಳಬೇಕು. ಅವರಿಗೆಲ್ಲ ಗೊತ್ತಿದೆ. ಎಲ್ಲಾರಿಗೂ ಗೊತ್ತಿದೆ. ಇಷ್ಟು ಜನರಿಗೆ ಎದುರಾಗಿ ನಾನೊಬ್ಬಳು…?
8. ಇವತ್ತು ಬೆಳಗ್ಗೆ ಎಡಗಡೆಯ ನನ್ನೆರಡು ವಿಸ್ಡಂ ಟೀತ್ ಕೀಳಿಸಿಕೊಂಡೆ. ಒಂಬತ್ತು ಗಂಟೆಗೆ ದಂತವೈದ್ಯರ ಆಫೀಸಿಗೆ ಹೋದೆ. ಆಗಲಿದೆ ಏನೋ ಅನಾಹುತ ಎಂದು ನಿರೀಕ್ಷಿಸುತ್ತಾ, ಹಿಂಸೆಯ ಉಪಕರಣ ಏನೇನಿವೆ ಎಂದು ಕಳ್ಳನೋಟ ಸುತ್ತಲೂ ಹರಿಸುತ್ತಾ ಕುರ್ಚಿಯ ಮೇಲೆ ಕೂತೆ. ಅಂಥದೇನೂ ಕಾಣಲಿಲ್ಲ.
ಡಾಕ್ಟರು ನನ್ನ ಕೊರಳಿನ ಸುತ್ತ ಬಿಬ್ ಕಟ್ಟಿದರು. ನನ್ನ ಬಾಯಲ್ಲಿ ಸೇಬಿನ ತುಂಡು ಇಡುತ್ತಾರೊ ಎಂದು ಕಾದಿದ್ದೆ. ಇಲ್ಲ. ‘ಗ್ಯಾಸೋ, ನೊವಾಕ್ಸಿನೋ?’ ಎಂದು ಕೇಳಿದರು ಅಷ್ಟೆ. (ಹಹ್ಹಹ್ಹಾ! ಗ್ಯಾಸ್? ನೊವಾಕ್ಸಿನ್? ಸ್ಟಾಕಿನಲ್ಲಿ ಏನಿದೆಯೋ ನೋಡತೇವೆ ಮೇಡಂ. ಹಚ್ಚಿಕೊಂಡು ಸಾಯುವುದಕ್ಕೆ ಬೆಂಕಿಯೋ, ಮುಳುಗಿ ಸಾಯುವುದಕ್ಕೆ ನೀರೋ? ಬುಲೆಟ್ಟೋ, ನೇಣಿನ ಕುಣಿಕೆಯೋ? ಗ್ರಾಹಕರ ಸಂತೋಷವೇ ನಮ್ಮ ಧ್ಯೇಯ.) ನರ್ಸು ಕಳ್ಳಹೆಜ್ಜೆ ಇಟ್ಟುಕೊಂಡು ನನ್ನ ಬೆನ್ನ ಹಿಂದೆ ಬಂದಳು. ಬಾದಾಮಿ ಆಕಾರದ ರಬ್ಬರ್ ಮುಚ್ಚಳ ನನ್ನ ಮೂಗಿನ ಮೇಲೆ ಇರಿಸಿದಳು. ಅದರ ನಳಿಕೆಗಳು ‘ಚೆನ್ನಾಗಿದೆ’ ಅನ್ನಿಸುವ ಹಾಗೆ ನನ್ನ ಕೆನ್ನೆಗೆ ಒತ್ತಿಕೊಳ್ಳುತಿದ್ದವು. ‘ಆರಾಮವಾಗಿ ಉಸಿರಾಡಿ’. ಗ್ಯಾಸು ನನ್ನೊಳಕ್ಕೆ ಹೋಗುತಿತ್ತು. ವಿಚಿತ್ರವಾದ ಸಿಹಿ ರುಚಿ ಇತ್ತು. ವಿರೋಧಿಸದೆ ಇರಲು ಪ್ರಯತ್ನಪಡುತಿದ್ದೆ. ಡಾಕ್ಟರು ನನ್ನ ಬಾಯೊಳಕ್ಕೆ ಏನೋ ಇರಿಸಿದರು. ಗ್ಯಾಸು ಹೆಚ್ಚು ಹೆಚ್ಚಾಗಿ ಬರುತಿತ್ತು. ದೀಪವನ್ನು ದಿಟ್ಟಿಸುತಿದ್ದೆ. ಕಂಪಿಸಿತು, ನಡುಗಿ ಚಿಕ್ಕ ಚಿಕ್ಕ ಚೂರುಗಳಾಯಿತು. ಬೆಳಕಿನ ಮಿರುಗುವ ತುಣುಕುಗಳು ಲಯಬದ್ಧವಾಗಿ ನನ್ನೆದುರು ಕಮಾನಿನ ಕಾರದಲ್ಲಿ ತುಯ್ದಾಡುತಿತ್ತು—ಮೊದಲು ನಿಧಾನವಾಗಿ, ಆಮೇಲೆ ಜೋರು ಜೋರಾಗಿ.
ಉಸಿರಾಡಲು ಈಗ ಹೆಣಗಬೇಕಾಗಿರಲಿಲ್ಲ. ನನ್ನ ಪುಪ್ಪುಸವನ್ನು ಏನೋ ಒತ್ತುತಿತ್ತು. ಉಸಿರು ಬಿಟ್ಟಾಗ ದಮ್ಮು ಹತ್ತಿದ ಹಾಗೆ ಸುಂಯ್ ಸದ್ದಾಗುತಿತ್ತು. ಮುಖದ ಮೇಲೆ ನಗುವಿತ್ತು. ಇಷ್ಟು ಸರಳ, ಯಾರೂ ನನಗೆ ಹೇಳಿರಲಿಲ್ಲ. ಬರೆಯಬೇಕು ಇದನ್ನ, ಇದು ಹೇಗಿದೆ ಎಂದು ವಿವರಿಸಬೇಕು, ಎಚ್ಚರತಪ್ಪುವ ಮೊದಲೇ. ನನ್ನ ಬಲಗೈ ಬೆಳಕಿನ ಕಮಾನಿನ ತುದಿ—ಅನ್ನಿಸಿತು. ನನ್ನ ಕೈ ಇನ್ನೇನು ಮುಟ್ಟಬೇಕು ಕಮಾನನ್ನು ಅನ್ನುವಷ್ಟರಲ್ಲಿ ಅದು ಇನ್ನೊಂದು ದಿಕ್ಕಿಗೆ ತಟ್ಟನೆ ಬಾಗುತಿತ್ತು. ಜಾಣರು. ಗುಟ್ಟು ತಾವೇ ಇಟ್ಟುಕೊಂಡಿದಾರೆ. ಗೊತ್ತಾಗಿದ್ದನ್ನು ಬರೆಯುವುದಕ್ಕೂ ಬಿಡಲ್ಲ. ಕಡಲುಗಳ್ಳರ ಹಡಗಿನಲ್ಲಿದ್ದೆ. ಕ್ಯಾಪ್ಟನ್ನ ಮುಖ ಸ್ಟೀರಿಂಗಿನ ಹಿಂದೆ ಇತ್ತು. ರೊಂಯ್ಯನೆ ತಿರುತಿರುಗಿಸುತಿದ್ದ. ಕಪ್ಪು, ಹಸಿರು ಎಲೆಗಳ ಕಂಬ. ‘ಸರಿ, ನಿಧಾನವಾಗಿ, ನಿಧಾನ, ನಿಧಾನ’ ಅನ್ನುತಿದ್ದ. ವೆನೀಶಿಯನ್ ಬ್ಲೈಂಡುಗಳ ಹಿಂದಿನಿಂದ ರೂಮಿನೊಳಕ್ಕೆ ಬಿಸಿಲು ನುಗ್ಗಿತು. ಜೋರಾಗಿ ಉಸಿರಾಡಿದೆ. ಪುಪ್ಪುಸದ ತುಂಬ ಗಾಳಿ ಎಳೆದು ತುಂಬಿಕೊಂಡೆ. ನನ್ನ ಕಾಲು, ಪಾದ, ಕೈ ಕಾಣುತಿದ್ದವು. ಅಗೋ ಅಲ್ಲಿದೇನೆ. ಮತ್ತೆ ನನ್ನ ದೇಹದೊಳಕ್ಕೆ ಸೇರಿಕೊಳ್ಳಲು ಕಷ್ಟಪಟ್ಟೆ. ಪಾದಗಳು ಇನ್ನೂ ಎಷ್ಟು ದೂರ. ನನ್ನ ಕೈ ಎತ್ತಿ ತಲೆ ಮುಟ್ಟಿಕೊಂಡೆ. ಕೈ ನಡುಗುತಿತ್ತು. ಎಲ್ಲಾ ಮುಗಿಯಿತು… ಮತ್ತೆ ಮುಂದಿನ ಶನಿವಾರ.
ಹೆಸರಾಂತ ವಿಮರ್ಶಕರು, ಭಾಷಾಂತರಕಾರರು ಹಾಗೂ ಇಂಗ್ಲಿಷ್ ಪ್ರಾಧ್ಯಾಪಕರು. ಇದೀಗ ಮೈಸೂರಿನಲ್ಲಿ ನೆಲೆಸಿದ್ದಾರೆ.