”ತನ್ನ ಲೇಖಕ ಬದುಕಿನುದ್ದ ಖಬ್ಬಾನಿಯವರ ಮೂಲ ಪ್ರೇರಣೆ ಹೆಣ್ಣೇ ಆದರೂ ಅವರ ಕಾವ್ಯದಲ್ಲಿ ಅರಬ್ ರಾಷ್ಟ್ರೀಯತೆ ಎದ್ದು ಕಾಣಿಸುತ್ತದೆ. ಅವರ ನಂತರದ ಕವಿತೆಗಳಲ್ಲಿ ಪರಮಾಧಿಕಾರದ ವಿರುದ್ಧದ ಪ್ರತಿರೋಧವಿದೆ. ರೊಮ್ಯಾಂಟಿಕ್ ಮತ್ತು ರಾಜಕೀಯದ ನೈರಾಶ್ಯವಿದೆ. ಸುಲ್ತಾನ್ ಎಂಬ ಒಂದು ಕವಿತೆಯಲ್ಲಿ ಅವರು ಬರೆಯುತ್ತಾರೆ, “ಓ ಸುಲ್ತಾನನೇ, ನನ್ನ ವಸ್ತ್ರಗಳೇನಾದರೂ ಹರಿದು ಹೋಗಿದ್ದರೆ ಅದಕ್ಕೆ ಕಾರಣ ಚೂಪುಗುರ ಪಂಜಗಳ ನಿನ್ನ ನಾಯಿಗಳೇ ಕಾರಣ” ಎಂದು”
ಆರ್.ವಿಜಯರಾಘವನ್ ಬರೆದ ಅರಬ್ ಕವಿಯೊಬ್ಬರ ಕಾವ್ಯ ಪರಿಚಯ
ನಿಸಾರ್ ತಾಫಿಕ್ ಖಬ್ಬಾನಿ ಸಿರಿಯಾ ದೇಶದ ರಾಜತಾಂತ್ರಿಕರು ಮತ್ತು ಕವಿ ಹಾಗೂ ಪ್ರಕಾಶಕರು. ೧೯೨೩ರ ಮಾರ್ಚ್ ೨೧ರಲ್ಲಿ ಹುಟ್ಟಿದ ಇವರು ೧೯೯೮ರ ಎಪ್ರಿಲ್ ೩೦ರಂದು ಹೃದಯಾಘಾತದಿಂದ ಮೃತಪಟ್ಟರು. ಅರಬ್ ನ್ಯಾಶನಿಲಿಸಂ ಅನ್ನು ತಮ್ಮ ಕಾವ್ಯದ ಮೂಲ ಸ್ರೋತವಾಗಿ ಇಟ್ಟುಕೊಂಡ ಕಬ್ಬಾನಿ ಅನ್ವೇಷಿಸಿದ ಇತರ ವಲಯಗಳು ಪ್ರೇಮ, ಕಾಮ, ಮತ್ತು ಧರ್ಮಗಳು. ಸಿರಿಯಾದ ರಾಷ್ಟ್ರಕವಿ ಎಂದು ಪರಿಗಣಿಸಲ್ಪಟ್ಟ ಖಬ್ಬಾನಿ ಅರಬ್ ಭಾಷೆಯ ಅತಿ ಆದರದ ಕವಿಗಳಲ್ಲಿ ಆದ್ಯರು.
ಖಬ್ಬಾನಿ ಹುಟ್ಟಿದ್ದು ಸಿರಿಯಾದ ಡಮಾಸ್ಕಸ್ನಲ್ಲಿ. ಅವರದು ವರ್ತಕರ ಕುಟುಂಬ. ಹಳೆಯ ಡಮಾಸ್ಕಸ್ ನಲ್ಲಿ ಬೆಳೆದ ಖಬ್ಬಾನಿ ೧೯೩೦ರಿಂದ ೪೧ರವರೆಗೆ ನ್ಯಾಶನಲ್ ಸೈಂಟಿಫಿಕ್ ಕಾಲೇಜು ಶಾಲೆಯಲ್ಲೂ, ಬಳಿಕ ಡಮಾಸ್ಕಸ್ ಯೂನಿವರ್ಸಿಟಿಯಲ್ಲೂ ಕಾನೂನು ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿ ದೆಸೆಯಲ್ಲಿಯೇ ಅವರು “ದ ಬ್ರೂನೆಟ್ ಟೋಲ್ಡ್ ಮಿ” ಎಂಬ ಕವನ ಸಂಕಲನವನ್ನು ಹೊರತಂದರು. ಅದರಲ್ಲಿನ ಕವಿತೆಗಳು ರೊಮ್ಯಾಂಟಿಕ್ ಆಗಿದ್ದವಲ್ಲದೆ ಸ್ತ್ರೀ ದೇಹವನ್ನು ಸಂಭ್ರಮಿಸಿದ್ದವು. ಅದು ಡಮಾಸ್ಕಸ್ ನ ಸಂಪ್ರದಾಯನಿಷ್ಠರಿಗೆ ನುಂಗಲಾಗದ ಅಪಥ್ಯವಾಯಿತು. ಖಬ್ಬಾನಿ ಆಗ ಸಿರಿಯಾದ ನ್ಯಾಷನಲಿಸ್ಟ್ ಲೀಡರ್ ಆಗಿದ್ದ ಅವರ ತಂದೆಯ ಮಿತ್ರ ಮುನೀರ್ ಅಲ್ ಅಜ್ನಾನಿ ಅವರಿಗೆ ಅದನ್ನು ಓದಲು ಕೊಟ್ಟರು. ಆ ಕವಿತೆಗಳನ್ನು ಮೆಚ್ಚಿದ ಮುನೀರ್ ಅದಕ್ಕೆ ಮುನ್ನುಡಿಯನ್ನು ಬರೆದರು.
ಕಾನೂನು ಪದವಿ ಮುಗಿಸಿದ ಖಬ್ಬಾನಿ, ಸಿರಿಯಾದ ವಿದೇಶಾಂಗ ಖಾತೆಯನ್ನು ಸೇರಿದರು. ಅವರು ೧೯೬೬ರಲ್ಲಿ ರಾಜೀನಾಮೆ ಕೊಡುವವರೆಗೂ ರಾಜತಾಂತ್ರಿಕರಾಗಿಯೇ ಮುಂದುವರಿದಿದ್ದರು. ಅಷ್ಟರೊಳಗೇ ಅವರು ಬೈರೂತಿನಲ್ಲಿ ಪ್ರಕಾಶನ ಸಂಸ್ಥೆಯೊಂದನ್ನು ಹುಟ್ಟುಹಾಕಿದ್ದರು. ಖಬ್ಬಾನಿ ಕವಿಯಾಗಿ ಬೆಳೆಯುವುದರ ಹಿಂದೆ ಒಂದು ಘಟನೆಯ ಪ್ರಭಾವವಿತ್ತು. ಅವರಿಗೆ ೧೫ ವರ್ಷ ವಯಸ್ಸಾಗಿದ್ದಾಗ ೨೫ ವರ್ಷ ವಯಸ್ಸಿನ ಅವರ ಸೋದರಿ ತಾನು ಮೆಚ್ಚದ ಓರ್ವನೊಡನೆ ವಿವಾಹವಾಗಲು ಒಪ್ಪದೆ ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೆ ಕಾರಣವಾದ ಅಂದಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಡಲು ಖಬ್ಬಾನಿ ನಿಶ್ಚಯಿಸಿಕೊಂಡರು. ಅವರ ಪ್ರಕಾರ ಅರಬ್ ವಿಶ್ವದಲ್ಲಿ ಪ್ರೇಮವೆನ್ನುವುದು ಬಂಧೀಖಾನೆ. ಇಲ್ಲಿ ಹೆಣ್ಣು ಗಂಡುಗಳ ಸಂಬಂಧಗಳು ಅನಾರೋಗ್ಯಕರವಾಗಿವೆ. ಅದರ ವಿಮೋಚನೆಯೇ ನನ್ನ ಗುರಿ ಎಂದು ಭಾವಿಸಿ ಹೋರಾಟಕ್ಕೆ ಸಿದ್ಧರಾದವರು ಅವರು. ಹಾಗಾಗೇ ಅವರ ಕಾಲದ ಲೇಖಕರಲ್ಲಿಯೇ ಖಬ್ಬಾನಿ ಸ್ತ್ರೀ ಪರವಾದ ಮತ್ತು ಪ್ರಗತಿಶೀಲ ಚಿಂತಕರೆಂದು ಹೆಸರಾದವರು.
ಖಬ್ಬಾನಿಯವರ ಕಾವ್ಯದ ಮೂಲಸ್ರೋತ ಡಮಾಸ್ಕಸ್ ನಗರ. ಇದರ ಅಭಿವ್ಯಕ್ತಿಯನ್ನು ಜಾಸ್ಮಿನ್ ಸೆಂಟ್ ಆಫ್ ಡಮಾಸ್ಕಸ್ ಕೃತಿಯಲ್ಲಿ ನೋಡಬಹುದು. ಆದರೆ ೧೯೬೭ರ ಆರು ದಿನಗಳ ಕದನ ಸಹ ಅವರ ಮೇಲೆ ಪ್ರಭಾವ ಬೀರಿತಲ್ಲದೆ ಅರಬ್ ಬದುಕಿನ ಕುರಿತಂತೆ ಅವರನ್ನು ಚಿಂತಿತರನ್ನಾಗಿಸಿತು. ಆ ಯುದ್ಧದ ಸೋಲು ಅವರ ಕಾವ್ಯಚಿಂತನೆಯನ್ನು ಕಾಮಪೂರಿತ ಪ್ರೇಮ ಕವಿತೆಗಳಿಂದ ನಿರಾಕರಣೆ ಮತ್ತು ಪ್ರತಿರೋಧದಂತಹ ರಾಜಕೀಯ ವಸ್ತುಗಳ ಕಡೆಗೆ ಹೊರಳಿಸಿತು. ಉದಾಹರಣೆಗೆ ಅವರ ‘ಮಾರ್ಜಿನಲ್ ನೋಟ್ಸ್ ಆನ್ ದ ಬುಕ್ ಆಫ್ ಡಿಫೀಟ್’ ಕವಿತೆಯನ್ನು ನೋಡಬಹುದು. ಇದು ಅರಬ್ ವಿಶ್ವವನ್ನು ಕೂರಂಬಿನಂತೆ ತಿವಿಯಿತು. ಎಡ ಮತ್ತು ಬಲಪಂಥೀಯರಿಬ್ಬರಿಗೂ ಅವರ ವಾದ ಅಪಥ್ಯವಾಯಿತು.
ಖಬ್ಬಾನಿಯವರ ತಂದೆ ತವ್ಫಿಕ್ ಖಬ್ಬಾನಿ ಸಿರಿಯನ್, ತಾಯಿ ಟರ್ಕಿಶ್ ಮೂಲದವರು. ಅವರದೊಂದು ಚಾಕೊಲೇಟ್ ಕಾರ್ಖಾನೆಯಿತ್ತು. ಫ್ರೆಂಚರ ಆಕ್ರಮಣವನ್ನು ಎದುರಿಸುತ್ತಿದ್ದ ಹೋರಾಟಗಾರರಿಗೆ ಆತ ನೆರವಾಗುತ್ತಿದ್ದ. ಅವನನ್ನು ಹಲವು ಬಾರಿ ಬಂಧಿಸಿ ಕಾರಾಗೃಹದಲ್ಲಿಡಲಾಗಿತ್ತು. ಅದರ ಪ್ರಭಾವ ಮಗನ ಮೇಲೆ ಉಂಟಾಗಿದ್ದರಿಂದಲೇ ಖಬ್ಬಾನಿಯೂ ಹೋರಾಟದ ಮನೋಭಾವದವರಾಗಿ ಬೆಳೆದದ್ದು.
ಖಬ್ಬಾನಿ ಎರಡು ಸಲ ಮದುವೆಯಾದರೂ ಅವರ ಸಾಂಸಾರಿಕ ಬದುಕು ಬಹಳ ಸುಖಮಯವಾಗಿ ಇರಲಿಲ್ಲ. ಮೊದಲ ಹೆಂಡತಿ ಹೋದ ಬಳಿಕ ಆಕೆಯಲ್ಲಿ ಜನಿಸಿದ ಮಗಳೂ ತನ್ನ ೨೨ ನೆಯ ವಯಸ್ಸಿನಲ್ಲಿ ಹೃದಯಾಘಾತದಿಂದ ಮರಣಹೊಂದಿದಳು. ಅವರ ಎರಡನೆಯ ಹೆಂಡತಿ, ಓರ್ವ ಶಾಲಾ ಶಿಕ್ಷಕಿ ಲೆಬನಾನಿನ ಸಿವಿಲ್ ಯುದ್ಧದ ಸಂದರ್ಭದಲ್ಲಿ ಇರಾಕಿ ಎಂಬಸಿ ಬಾಂಬ್ ಪ್ರಕರಣದಲ್ಲಿ ಸಾವನ್ನಪ್ಪಿದಳು. ಖಬ್ಬಾನಿ ಮತ್ತೆ ಮದುವೆಯಾಗಲಿಲ್ಲ.
ಅವರ ಸೋದರಿ ತಾನು ಮೆಚ್ಚದ ಓರ್ವನೊಡನೆ ವಿವಾಹವಾಗಲು ಒಪ್ಪದೆ ಆತ್ಮಹತ್ಯೆ ಮಾಡಿಕೊಂಡಳು. ಅದಕ್ಕೆ ಕಾರಣವಾದ ಅಂದಿನ ಸಾಮಾಜಿಕ ವ್ಯವಸ್ಥೆಯ ವಿರುದ್ಧ ಹೋರಾಡಲು ಖಬ್ಬಾನಿ ನಿಶ್ಚಯಿಸಿಕೊಂಡರು. ಅವರ ಪ್ರಕಾರ ಅರಬ್ ವಿಶ್ವದಲ್ಲಿ ಪ್ರೇಮವೆನ್ನುವುದು ಬಂಧೀಖಾನೆ. ಇಲ್ಲಿ ಹೆಣ್ಣು ಗಂಡುಗಳ ಸಂಬಂಧಗಳು ಅನಾರೋಗ್ಯಕರವಾಗಿವೆ. ಅದರ ವಿಮೋಚನೆಯೇ ನನ್ನ ಗುರಿ ಎಂದು ಭಾವಿಸಿ ಹೋರಾಟಕ್ಕೆ ಸಿದ್ಧರಾದವರು ಅವರು.
ಆ ಬಳಿಕ ಖಬ್ಬಾನಿ ಬೈರೂತ್ ತೊರೆದರು. ಜಿನೀವಾ ಮತ್ತು ಪ್ಯಾರಿಸ್ಗಳ ನಡುವೆ ಸಂಚರಿಸುತ್ತಾ ಕೊನೆಗೆ ಲಂಡನ್ ನಲ್ಲಿ ನೆಲೆಯೂರಿದರು. ಅಲ್ಲಿ ಅವರು ೧೫ ವರ್ಷ ಕಳೆದರು. ಅಲ್ಲಿಯೂ ಕಾವ್ಯ ರಚನೆ ಮುಂದುವರಿಸಿದ ಖಬ್ಬಾನಿ ‘ವೆನ್ ವಿಲ್ ದೆ ಅನೌನ್ಸ್ ದ ಡೆತ್ ಆಫ್ ಅರಬ್ಸ್’ ಮತ್ತು ‘ರನ್ನರ್ಸ್’ ನಂತಹ ಕವಿತೆಗಳನ್ನು ಬರೆದಿದ್ದು. ಲಂಡನ್ನಿನ ಆಸ್ಪತ್ರೆಯೊಂದರಲ್ಲಿ, ತಮ್ಮ ೭೫ನೇ ವಯಸ್ಸಿನಲ್ಲಿ ಖಬ್ಬಾನಿ ಹೃದಯಾಘಾತವಾಗಿ ತೀರಿಕೊಂಡರು. ಅವರ ಮೃತ್ಯುಪತ್ರದಂತೆ ಅವರನ್ನು ಅವರಿಗೆ ಮಲ್ಲಿಗೆಯಂಥ ಅಕ್ಷರ ಕೊಟ್ಟ, ಕರ್ತೃತ್ವ ಶಕ್ತಿಯನ್ನು ದಯಪಾಲಿಸಿದ, ಕಾವ್ಯ ರಚನೆಯ ಗುರುವಾದ ಅವರ ಪ್ರಿಯ ಡಮಾಸ್ಕಸ್ ನಲ್ಲಿ ಸಮಾಧಿ ಮಾಡಲಾಯಿತು.
ಖಬ್ಬಾನಿಯವರ ಕಾವ್ಯವನ್ನು ಇಪ್ಪತ್ತನಾಲ್ಕು ಸಂಕಲನಗಳಲ್ಲಿ ಸಂಕಲಿಸಲಾಗಿದೆ. ಅವರು ಅರಬ್ ಪತ್ರಿಕೆ ಅಲ್ ಹಯಾತ್ ಗೂ ನಿಯಮಿತವಾಗಿ ಬರೆಯುತ್ತಿದ್ದರು. ಅದರ ಜೊತೆಗೆ ಲೆಬನೀಸ್ ಮತ್ತು ಸಿರಿಯನ್ ಹಾಡುಗಾರರು ಅವರ ಸಾಹಿತ್ಯವನ್ನು ಹೆಚ್ಚು ಜನರಿಗೆ ತಲುಪಿಸಿದರು.
ತನ್ನ ಲೇಖಕ ಬದುಕಿನುದ್ದ ಖಬ್ಬಾನಿಯವರ ಮೂಲ ಪ್ರೇರಣೆ ಹೆಣ್ಣೇ ಆದರೂ ಅವರ ಕಾವ್ಯದಲ್ಲಿ ಅರಬ್ ರಾಷ್ಟ್ರೀಯತೆ ಎದ್ದು ಕಾಣಿಸುತ್ತದೆ. ಅವರ ನಂತರದ ಕವಿತೆಗಳಲ್ಲಿ ಪರಮಾಧಿಕಾರದ ವಿರುದ್ಧದ ಪ್ರತಿರೋಧವಿದೆ. ರೊಮ್ಯಾಂಟಿಕ್ ಮತ್ತು ರಾಜಕೀಯದ ನೈರಾಶ್ಯವಿದೆ. ಸುಲ್ತಾನ್ ಎಂಬ ಒಂದು ಕವಿತೆಯಲ್ಲಿ ಅವರು ಬರೆಯುತ್ತಾರೆ, “ಓ ಸುಲ್ತಾನನೇ, ನನ್ನ ವಸ್ತ್ರಗಳೇನಾದರೂ ಹರಿದು ಹೋಗಿದ್ದರೆ ಅದಕ್ಕೆ ಕಾರಣ ಚೂಪುಗುರ ಪಂಜಗಳ ನಿನ್ನ ನಾಯಿಗಳೇ ಕಾರಣ” ಎಂದು.
ಖಬ್ಬಾನಿಯವರ ಕೆಲವು ಕವಿತೆಗಳ ಅನುವಾದ ಇಲ್ಲಿದೆ:
ಬೇಸಗೆಯಲ್ಲಿ
ಬೇಸಗೆಯಲ್ಲಿ ನಾನು ತೀರದಲ್ಲಿ
ಕೈಕಾಲು ಚಾಚಿ ಮಲಗಿಬಿಡುತ್ತೇನೆ
ನಿನ್ನ ಕುರಿತು ಯೋಚಿಸುತ್ತಾ
ಈ ಸಮುದ್ರಕ್ಕೆ ನನಗೆ ನಿನ್ನ
ಕುರಿತು ಎಂಥ ಭಾವವುಂಟೆಂದು
ಹೇಳಿದ್ದಿದ್ದರೆ
ಅದು ತನ್ನ ದಂಡೆಯನ್ನ
ಪ್ರಾಯಶಃ ತೊರೆದುಬಿಡುತ್ತಿತ್ತು
ಅದರಲ್ಲಿನ ಚಿಪ್ಪುಗಳನ್ನು
ಮೀನುಗಳನ್ನು ತೊರೆದು
ಹಿಂಬಾಲಿಸಿಬಿಡುತ್ತಿತ್ತು ನನ್ನ
ಸಮುದ್ರ ಪ್ರವೇಶಿಸಿದ ಬಳಿಕ
ಕೊನೆಗೂ ಪ್ರೀತಿ ಅಂಕುರಿಸಿತು
ನಾವು ನೀರ ತೊಗಲಿನ ಮೇಲೆ
ಮೀನಂತೆ ಜಾರುತ್ತಾ ದೇವರ
ಸ್ವರ್ಗವನ್ನು ಪ್ರವೇಶಿಸಿದೆವು
ಸಾಗರದ ಅಮೂಲ್ಯ ಮುತ್ತುಗಳ ಕಂಡು
ಅಚ್ಚರಿಗೊಂಡೆವು; ಅಂತೂ ಪ್ರೀತಿ
ಅಂಕುರಿಸಿಬಿಟ್ಟಿತು, ನಮ್ಮ ಬಯಕೆಯ
ಸ್ವರೂಪದಲ್ಲಿ, ಯಾವುದೇ ಪ್ರಚೋದನೆಯಿಲ್ಲದೆ
ನಾನು ಕೊಟ್ಟೇ, ನೀನೂ ಕೊಟ್ಟೆ
ಅದರಲ್ಲಿ ನಾವಿಬ್ಬರೂ ಸಮತೂಕದಲ್ಲಿದ್ದೆವು
ಅದು ಎಷ್ಟು ಸಲೀಸಾಗಿ ಆಗಿಬಿಟ್ಟಿತು
ಎಂದರೆ ಮಲ್ಲಿಕಾ ಜಲದಲ್ಲಿ ಓಲೆ ಬರೆದಂತೆ
ನೆಲದೊಳಗಿಂದ ಚಿಲುಮೆಯೊಂದು
ಉಕ್ಕಿ ಹರಿದಂತೆ
ಜ್ಯೋತಿಷಿ
ಅವಳು ಕಂಗಳಲ್ಲಿ ಭೀತಿಯನ್ನು ಹೊತ್ತು
ತಲೆಕೆಳಗಾದ ಕಪ್ಪನ್ನೇ ದಿಟ್ಟಿಸುತ್ತಾ ಕುಳಿತಿದ್ದಳು
ಅವಳಂದಳು, ದುಃಖಿಸಬೇಡ ಕಂದಾ
ನೀನು ಪ್ರೀತಿಯಲ್ಲಿ ಬೀಳುವೆ ಎಂದು ವಿಧಿಲಿಖಿತವಿದೆ
ಕಂದಾ ಯಾವನು ಪ್ರೀತಿಸುವವರಿಗಾಗಿ ತನ್ನನ್ನೇ
ಒಡ್ಡಿಕೊಳ್ಳುವನೋ ಅವನು ಹುತಾತ್ಮ
ನಾನು ಬಹಳ ಕಾಲ ಜ್ಯೋತಿಷ್ಯವನ್ನು ಕಲಿತಿದ್ದೇನೆ
ಆದರೆ ನಿನ್ನ ಬಟ್ಟಲಿನಂತ ಬಟ್ಟಲನ್ನು ಓದಲೇ ಇಲ್ಲ
ನಿನಗಿರುವ ದುಃಖದಂತಹ ದುಃಖವನ್ನೆಂದೂ ಕಾಣಲಿಲ್ಲ
ಹಾಯಿಪಟವಿಲ್ಲದ ಹಾಯಿದೋಣಿಯ ಮೇಲೆ
ಪ್ರೀತಿಸಾಗರದ ಮೇಲೆ ತೇಲುವುದು ನಿನ್ನ ಹಣೆಬರಹದಲ್ಲಿದೆ
ನಿನ್ನ ಬದುಕೆಂದಿಗೂ ಅಶ್ರುಧಾರೆಯ ಗ್ರಂಥವಾಗಿರಲೆಂದು
ನೀರು-ಬೆಂಕಿಗಳ ನಡುವೆ ಬಂಧಿಯಾಗಿರಲೆಂದು ವಿಧಿಲಿಖಿತವಿದೆ.
ಈ ಎಲ್ಲ ಸಂಕಟಗಳ ನಡುವೆ, ಈ ವಿಷಾದದ ಹೊರತಾಗಿಯೂ
ಅದು ಹಗಲಿರುಳಿನಲ್ಲೂ ನಮ್ಮೊಡನಿದೆ. ಗಾಳಿಯ ಹೊರತಾಗಿ
ಕಾರುಗಾಲದ ಮಳೆಯ, ಚಂಡ ಮಾರುತದ ಹೊರತಾಗಿಯೂ
ಅದು ಒಲವು, ಕಂದಾ, ವಿಧಿಯೆಂಬುದೆಲ್ಲದರಲ್ಲೂ ಅದು ಶ್ರೇಷ್ಟ
ನಿನ್ನ ಬದುಕಿನಲ್ಲೊಂದು ಹೆಣ್ಣಿದೆ ಕಂದಾ
ಅವಳ ಕಂಗಳೆಷ್ಟು ಸುಂದರ
ಭಗವಂತನ ಕೃಪೆಯೆಂಥ ಕೃಪೆ
ಅವಳ ಬಾಯಿ, ಅವಳ ನಗೆಯ
ತುಂಬೆಲ್ಲ ಗುಲಾಬಿಗಳು, ಅತಿ ಮಧುರ ಗಾನಗಳು
ಅವಳ ಅಲೆಮಾರಿ, ಹುಚ್ಚು ಜೀವನಪ್ರೀತಿ
ವಿಶ್ವವನ್ನೇ ಸುತ್ತುತ್ತದೆ
ನಿನ್ನೊಲುಮೆಯ ಹೆಣ್ಣು ನಿನ್ನಿಡೀ ವಿಶ್ವವಾಗಿರಲಿ
ನಿನ್ನ ಆಗಸದಲ್ಲಿ ಮಳೆ ತುಂಬಿದೆ
ನಿನ್ನ ರಸ್ತೆಗೆ ತಡೆ ಬಿದ್ದಿದೆ, ಬಿದ್ದಿದೆ ಕಂದಾ
ನಿನ್ನ ಪ್ರಿಯತಮೆಯು ರಕ್ಷಣೆಯಿರುವೆಡೆಯಲ್ಲಿ
ನಿದ್ರಿಸುತ್ತಿದ್ದಾಳೆ. ಯಾರು ಅವಳ ಉದ್ಯಾನದ
ಗೋಡೆಯನು ಮುಟ್ಟುವನೋ, ಯಾರವಳ
ಕೋಣೆಯನು ತಲುಪುವನೋ, ಯಾರವಳ
ಬಳಿ ಪ್ರೇಮನಿವೇದನೆಯ ಮಾಡುವನೋ
ಯಾರವಳ ಎರಡು ಜಡೆಯನು ಒಂದು ಮಾಡುವನೋ
ಅವನು ಅವಳನ್ನು ಕಳೆದುಕೊಳುವ ಕಾರ್ಯವನ್ನೆಸಗುವನು
ಕಂದಾ ಕಳೆದುಕೊಳ್ಳುವನು
ನೀನವಳನ್ನೆಲ್ಲೆಡೆ ಹುಡುಕಾಡುವೆ, ಸಾಗರದ ಎಲ್ಲ ಅಲೆಗಳ
ಕೇಳುವೆ ನೀವು ಕಂಡಿರಾ ಅವಳನೆಂದು
ನೀನು ಸಾಗರದ ದಂಡೆಯನು ಕೇಳುವೆ
ಸಾಗರಗಳಲಿ ಸಂಚರಿಸುವೆ ಅವಳ ಹುಡುಕುತ್ತಾ
ನಿನ್ನ ದುಃಖಾಶ್ರುಗಳು ನದಿಯಂತೆ ಹರಿಯುವವು
ಬದುಕಿನ ಕೊನೆಗೆ ನಿನಗರಿವಾಗುವುದು
ನಿನ್ನ ಪ್ರಿಯತಮೆಗೆ ನೆಲವಿಲ್ಲ, ನೆಲೆಯಿಲ್ಲ,
ವಿಳಾಸವೆಂಬುದು ಇಲ್ಲ. ನೀನು ಹುಡುಕಲೆತ್ನಿಸುತ್ತಿದ್ದದ್ದು
ಒಂದು ಹೊಗೆಯ ಸೆಳಕು
ಎಷ್ಟು ಕಷ್ಟವಲ್ಲವೇ ಮಗೂ ನೆಲೆಯಿಲ್ಲದ ನೆಲೆಯಿಲ್ಲದ
ಹೆಣ್ಣೊಂದನ್ನು ಪ್ರೀತಿಸುವುದು
ಜೆರೂಸಲೇಂ
ನಾನು ಕಣ್ಣೀರು ಬತ್ತಿಹೋಗುವವರೆಗೂ ಅತ್ತೆ
ಮೊಂಬತ್ತಿಯ ಕುಡಿ ಮಿಣುಕು ಮಿಣುಕೆನ್ನುವವರೆಗೂ ಪ್ರಾರ್ಥಿಸಿದೆ
ನೆಲ ನೆರಿಗೆ ಬಿಡುವ ತನಕ ಮಂಡಿಯೂರಿ ಕುಳಿತೆ
ಮೊಹಮ್ಮದರ, ಕ್ರಿಸ್ತರ ವಿಚಾರಿಸಿದೆ
ಓ ಜೆರೂಸಲೇಂ, ಪ್ರವಾದಿಗಳ ಗಂಧಪರಿಮಳವು ನೀನು
ಭೂವ್ಯೋಮಗಳಿಗೆ ಹತ್ತಿರದ ಹಾದಿಯು ನೀನು
ಕಟ್ಟಳೆಗಳ ಆಶ್ರಯಧಾಮ, ಕಣ್ಣ ನೋಟವ ಕೆಳಗೆ ಜಾರಿಸಿದ
ಬೆರಳು ಸುಟ್ಟ ಮುದ್ದು ಕಂದ
ಪ್ರವಾದಿಯವರು ಕಳುಹಿಸಿದ ನೆರಳನೀವ ಓಯಸಿಸ್
ನಿನ್ನ ರಸ್ತೆಗಳು ಶೋಕಗಾನಗಳ ಹಾಡುವುವು
ನಿನ್ನ ಮಿನಾರುಗಳು ಶೋಕಿಸುತ್ತಿಹವು
ನೀನೋ ಏಸುವಿನ ಜನನದಲಿ ಶನಿವಾರದ ಬೆಳಗಿನಲಿ
ಗಂಟೆ ಬಾರಿಸುವ ಕಪ್ಪು ವಸ್ತ್ರ ಧರಿಸಿದ ಕನ್ನೆ
ಕ್ರಿಸ್ಮಸ್ ನ ಹಿಂದಿನ ಸಂಜೆ
ಮಕ್ಕಳಿಗೆ ಗೊಂಬೆಗಳ ತರುವವಳು
ಓ ಜೆರೂಸಲೇಂ, ಶೋಕದ ನಗರವೇ
ನಿನ್ನ ಕಣ್ಣಲ್ಲೊಂದು ಅಲೆಯುತ್ತಿರುವ
ದಪ್ಪ ಕಣ್ಣೀರ ಹನಿಯಿದೆ
ಯಾರು ತಡೆವರು ಅನ್ಯಾಕ್ರಮಣಗಳನ್ನು
ಧರ್ಮಗಳಲ್ಲಿ ಮುತ್ತಿನಂಥವಳು ನೀನು
ನೆತ್ತರು ಕರೆಗಟ್ಟಿದ ಗೋಡೆಗಳನ್ನು ತೊಳೆಯುವವರಾರು
ಬೈಬಲ್ಲನ್ನು ಕಾಯುವವರು ಯಾರು
ಕುರ್ ಆನ್ ಅನ್ನು ಸಂರಕ್ಷಿಸುವವರು ಯಾರು
ಕ್ರಿಸ್ತನನ್ನು ಉಳಿಸುವವರು ಯಾರು
ಮನುಷ್ಯರನ್ನು ಕಾಯುವವರು ಯಾರು
ಓ ಜೆರೂಸಲೇಂ, ನನ್ನೂರೇ
ಓ ಜೆರೂಸಲೇಂ, ನನ್ನೊಲವೇ
ನಾಳೆ ನಿಂಬೆಯ ಮರಗಳು ಹೂ ಬಿಡುವವು
ಆಲಿವ್ ಮರಗಳು ಸಂಭ್ರಮಿಸುವುವು
ನಿನ್ನ ಕಣ್ಣುಗಳು ಆನಂದನರ್ತನ ಮಾಡುವುವು
ವಲಸೆ ಹೋದ ಪಾರಿವಾಳಗಳು
ನಿನ್ನ ಪವಿತ್ರ ಸೂರುಗಳಿಗೆ ಮರಳುವವು
ನಿನ್ನ ಮಕ್ಕಳಾಡುವರು ಮತ್ತೆ
ತಂದೆ ಮಕ್ಕಳು ಒಂದಾಗುವರು ನಿನ್ನ
ಗುಲಾಬಿ ಬೆಟ್ಟಗಳ ಮೇಲೆ
ನನ್ನ ಊರೇ, ಶಾಂತಿ, ಆಲಿವ್ ಗಳ ನನ್ನೂರೇ
ಜೆರೂಸಲೇಂ.
ಮನುಷ್ಯ ಪ್ರೇಮದಲ್ಲಿ ಬಿದ್ದಾಗ
ಮನುಷ್ಯನೊಬ್ಬ ಪ್ರೇಮದಲ್ಲಿ ಬಿದ್ದಾಗ
ಅದೆಂತು ಅವನು ಹಳೆಯ ಸವೆದ ಪದಗಳನ್ನು
ಬಳಸಬಲ್ಲ? ಅವನನ್ನು ಪ್ರೀತಿಸುವ ಹೆಣ್ಣು
ವ್ಯಾಕರಣ, ಭಾಷಾಶಾಸ್ತ್ರಜ್ಞರ ಜೊತೆ ಮಲಗಬೇಕೇನು?
ನಾನು ಪ್ರೀತಿಸಿದ ಹುಡುಗಿಯ ಜೊತೆ
ನಾನು ಏನನ್ನೂ ಹೇಳಲಿಲ್ಲ
ಆದರೆ ಪ್ರೀತಿಗೆ ಸಂಬಂಧಿಸಿದ
ಎಲ್ಲ ವಿಶೇಷಣಗಳನ್ನೂ ಒಂದು
ಸೂಟ್ ಕೇಸಿಗೆ ತುಂಬಿಸಿದವನೇ
ಎಲ್ಲ ಭಾಷೆಗಳಿಂದ ದೂರ
ಓಡಿಹೋಗಿಬಿಟ್ಟೆ.
ಪ್ರೀತಿಯ ತುಲನೆ
ನಾನು ನಿನ್ನ ಇತರ ಪ್ರೇಮಿಗಳನ್ನು
ಹೋಲುವುದಿಲ್ಲ, ನನ್ನ ಹೆಣ್ಣೇ
ಆದರೆ ಅವರಲ್ಲೊಬ್ಬ ನಿನಗೆ ಮೋಡಗಳ ಕೊಟ್ಟರೆ
ನಾನು ಮಳೆಯನ್ನೇ ಕೊಡುತ್ತೇನೆ
ಅವನೇನಾದರೂ ಲಾಟೀನು ಕೊಟ್ಟರೆ
ನಾನು ಚಂದಿರನನ್ನೇ ಕೊಡುತ್ತೇನೆ.
ಅವನು ನಿನಗೆ ಕೊಂಬೆಯೊಂದನ್ನು ಕೊಟ್ಟನೆನ್ನು
ನಾನು ವನವನ್ನೇ ಕೊಟ್ಟೇನು
ಮತ್ತೊಬ್ಬ ನಿನಗೆ ಹಡಗು ಕೊಟ್ಟರೆ
ನಾ ನಿನಗೆ ಸಾಗರಯಾನವನ್ನೇ ಕೊಡುವೆ.
ನಾವು ಭಯೋತ್ಪಾದಕರೆಂಬ
ಆಪಾದನೆ ಹೊತ್ತವರು
ನಾವೇನಾದರೂ ನಮ್ಮ ಹರಿಹಂಚಿ ಹೋದ
ತುಂಡು ತುಂಡಾಗಿ ಕೊಳೆಯುತ್ತಿರುವ
ತನ್ನೆಲ್ಲ ನೈತಿಕತೆಯನ್ನು ಬಲಿಕೊಟ್ಟು
ಮರುಳಲ್ಲಿ ಬಿದ್ದ ಜಾಗಕ್ಕಾಗಿ ಹುಡುಕಾಡುತ್ತಿರುವ
ನಮ್ಮ ಉಳಿದ ತಾಯ್ನೆಲದ ಬಗ್ಗೆ
ಬರೆಯುವ ಧೈರ್ಯ ಮಾಡಿದ್ದೇ ಆದರೆ
ನಮ್ಮ ಮೇಲೆ ಭಯೋತ್ಪಾದಕರೆಂಬ ಅಪವಾದ
ಕವಿದುಬಿಡುತ್ತದೆ. ನಮ್ಮದೊಂದು ಈಗಾಗಲೇ
ಚಹರೆ ಕಳೆದುಹೋದ ಮುಖಹೀನ ರಾಷ್ಟ್ರ.
ತನ್ನ ಪುರಾತನ ಅತಿ ಶ್ರೇಷ್ಟ ಕಾವ್ಯಗಳಲ್ಲಿ
ಏನೊಂದೂ ಉಳಿಯದ
ಕೇವಲ ರೋದನವುಳಿದ, ಚರಮಗೀತೆಯುಳಿದ
ನಮ್ಮ ತಾಯ್ನೆಲದ ಬಗ್ಗೆ –
ತನ್ನ ಕ್ಷಿತಿಜಗಳಲ್ಲಿ ಹಲವು ಬಗೆಯ ಆದರ್ಶಗಳಲ್ಲಿ,
ಹಲವು ಬಗೆಯ ಐಡಿಯಾಲಜಿಗಳಲ್ಲಿ
ಹಲವು ಬಗೆಯ ಸ್ವಾತಂತ್ರ್ಯದ ಪೈಕಿ ಏನೂ ಉಳಿದಿಲ್ಲದ
ನಮ್ಮ ತಾಯ್ನೆಲದ ಬಗ್ಗೆ –
ನಮ್ಮನ್ನು ದಿನಪತ್ರಿಕೆಯನ್ನು ಕೊಳ್ಳಲೂ ಬಿಡದ
ಏನೊಂದನೂ ಕಿವಿಯಲ್ಲಿ ಕೇಳಲೂ ಬಿಡದ
ಯಾವ ಹಕ್ಕಿಗೂ ಎಂದಿಗೂ ಹಾಡಲು ಬಿಡದ
ಭಯದಿಂದ ಅಲ್ಲಿನ ಲೇಖಕರೆಲ್ಲರೂ ಕಾಣದ ಶಾಯಿ
ತುಂಬಿದ ಪೆನ್ನುಗಳಲ್ಲಿ ಬರೆಯುತ್ತಿರುವ ನಮ್ಮ ತಾಯ್ನೆಲದ ಬಗ್ಗೆ-
ಅದೇ ನಮ್ಮ ಕಾವ್ಯವನ್ನು ಹೋಲುವ ತಾಯ್ನೆಲ
ಸ್ವಲ್ಪ ಮೇಲಕ್ಕೇರಿಸಿದ, ಆಮದಾದ, ಜಾಳಾದ, ಗಡಿಗಳಿಲ್ಲದ
ವಿದೇಶೀ ನಾಲಗೆ, ಆತ್ಮ; ಜನರಿಂದ, ತಮ್ಮ ನೆಲದಿಂದ
ಬೇರ್ಪಟ್ಟ, ವಿಘಟನೆಗೊಂಡ ಆ ಜನರ ಮನೋವೇದನೆಯ
ಸಂಪೂರ್ಣ ಕಡೆಗಣಿಸಿದ ನನ್ನ ತಾಯ್ನೆಲದ ಬಗ್ಗೆ-
ಒಪ್ಪಂದದ ಮೇಜಿನ ಕಡೆಗೆ ತಿರುಗಿರುವ
ಶೂಗಳಿಲ್ಲದ, ಘನತೆಯಿಲ್ಲದ ನನ್ನ ತಾಯ್ನೆಲದ ಬಗ್ಗೆ –
ಆ ಶಕ್ತಿಶಾಲಿ ಪುರುಷರಿಲ್ಲದ
ಕೇವಲ ಹೆಂಗಸರೇ ತುಂಬಿದ
ನನ್ನ ತಾಯ್ನೆಲದ ಬಗ್ಗೆ – ನಾವು ಬರೆದರೆ
ನಾವು ಭಯೋತ್ಪಾದಕರಾಗಿಬಿಡುತ್ತೇವೆ
ನಮ್ಮ ಬಾಯಲ್ಲಿ ನಮ್ಮ ಮಾತಲ್ಲಿನ
ನಮ್ಮ ಕಂಗಳಲ್ಲಿ ಕಹಿವಿಷವಿದೆ
ಕಾಲಾನುಕಾಲಕ್ಕೂ ನಮಗೆ ಸಾಗಿಬಂದ
ಹೇರಿನ ಬಂಡಿಯ ನೊಗವ ಹೊತ್ತೆಳೆಯುವುದೇ
ಮುಂದುವರಿಯುವುದೇ….?
ನಮ್ಮ ರಾಷ್ಟ್ರದಲ್ಲಿ ಯಾರೂ ಉಳಿದಿಲ್ಲ,
ಅಂಥ ಹೆಸರುಳ್ಳ ಘನವಂತರಲ್ಲದವರೂ
ಯಾರೂ ಇಲ್ಲ ಬೇಡವೆನ್ನಲು ತಮ್ಮ ಮನೆಯ
ಬ್ರೆಡ್ಡು ಬೆಣ್ಣೆಯ ತೊರೆದ ಅವರ ಮುಖದ ಮೇಲೆ
ನಮ್ಮ ವರ್ಣರಂಜಿತ ಚರಿತ್ರೆ
ಸರ್ಕಸ್ ಆಗಿ ಬದಲಾಗುತ್ತಿದೆ
ನಮ್ಮಲ್ಲೀಗ ರಾಜನ ಅಂತಃಪುರ ಸೇರಿ ಕನ್ಯತ್ವ ಕಳೆದುಕೊಳ್ಳದ
ಒಂದಾದರೂ ಪ್ರಾಮಾಣಿಕ ಕವಿತೆಯಿಲ್ಲ
ಅಪಮಾನಕ್ಕೆ ಒಗ್ಗಿ ಹೋಗಿದ್ದೇವೆ ನಾವು
ಅದರಲ್ಲವನು ಸುಖಿಯಾದರೆ ಮನುಷ್ಯನಲ್ಲಿ ಉಳಿದಿದ್ದೇನು?
ನಾನು ಚರಿತ್ರೆಯ ಪುಸ್ತಕಗಳಲ್ಲಿ ಹುಡುಕುತ್ತೇನೆ
ನಮ್ಮನ್ನು ಕಗ್ಗತ್ತಲಿನಿಂದ ಪಾರುಮಾಡಿದ ಮಹಾತ್ಮರ ಕುರಿತು
ನಮ್ಮ ಹೆಂಗಸರನ್ನು ಬೆಂಕಿಯ ಕ್ರೌರ್ಯದಿಂದ ಕಾಪಾಡಲು
ಅದೇ ನಿನ್ನೆಯ ಮನುಷ್ಯರಿಗಾಗಿ ಹುಡುಕುತ್ತೇನೆ
ಕಾಣುವುದು ಎಲ್ಲವೂ ಭೀತ ಬೆಕ್ಕುಗಳು
ಅವು ತಮ್ಮಾತ್ಮಗಳಿಗೇ ಅಂಜುತ್ತಿವೆ
ಈ ಹೆಗ್ಗಣಗಳ ಅಧಿಕಾರದಡಿಯಲ್ಲಿ
ನಮಗೇನು ರಾಷ್ಟ್ರೀಯ ಅಂಧತ್ವ ಬಂದಿದೆಯೇ
ಬಣ್ಣಗುರುಡೇ?
ನಮ್ಮನ್ನು ಭಯೋತ್ಪಾದಕರೆಂದು ಆಪಾದಿಸಲಾಗಿದೆ
ಇಸ್ರೇಲಿನ ಹಿಂಸಾಚಾರದಲ್ಲಿ ಅಳಿಯಲು ನಾವು ಒಪ್ಪದಿದ್ದರೆ
ಅದು ನಮ್ಮನ್ನು ಒಗ್ಗಟ್ಟಾಗಲು ಬಿಡುತ್ತಿಲ್ಲ
ನಮ್ಮ ಚರಿತ್ರೆ, ನಮ್ಮ ಬೈಬಲ್, ನಮ್ಮ ಕುರ್ ಆನ್
ನಮ್ಮ ಪ್ರವಾದಿಗಳ ನೆಲ – ಎನ್ನುವುದು ನಾವು ಮಾಡಿದ ಪಾಪ
ಅಪರಾಧ ಎನ್ನುವುದಾದರೆ ಭಯೋತ್ಪಾದನೆ ಒಳ್ಳೆಯದೇ.
ಬಾರ್ಬೇರಿಯನ್ನರಿಂದಾಗಲಿ, ಮಂಗೋಲರಿಂದಾಗಲಿ,
ಜ್ಯೂಗಳಿಂದಾಗಲಿ ನಾವು ನಿರ್ವಂಶವಾಗಲು ಸಮ್ಮತಿಸದಿದ್ದರೆ
ನಾವು ನಡುನಡುವೆ ಮೌನತಾಳುವ ಅರಸನಿಂದ ಬೇರು ಕಿತ್ತ
ಗಾಜಿನಂಥ ಭದ್ರತಾ ಮಂಡಳಿಗೆ ಕಲ್ಲು ಹೊಡೆಯಲು ನಿರ್ಧರಿಸಿದರೆ
ನಾವು ಭಯೋತ್ಪಾದಕರೆಂದು ಆರೋಪಿಸಲಾಗುತ್ತದೆ
ಆ ವೇಶ್ಯೆಯನ್ನು ಕಾಪಾಡಲು ಹೋಗಲು ನಾವು
ತೋಳದ ಜೊತೆ ಮಾತುಕತೆಗೆ ಒಪ್ಪದಿದ್ದರೆ
ನಾವು ಭಯೋತ್ಪಾದಕರೆಂದು ಆರೋಪಿಸಲಾಗುತ್ತದೆ
ಅಮೆರಿಕವು ಮಾನವ ಸಂಸ್ಕೃತಿಯ ಜೊತೆ ಹೋರಾಡುತ್ತಿದೆ
ಅದಕ್ಕೆ ಸಂಸ್ಕೃತಿಯೆಂಬುದಿಲ್ಲ
ಹಾಗೆಯೇ ನಾಗರಿಕತೆಗಳ ಸಂಗಡವೂ ಅದರ ಸಂಘರ್ಷವಿದೆ
ಅದಕ್ಕೇ ನಾಗರಿಕತೆಯ ಅಗತ್ಯವಿದೆ
ಅದೊಂದು ಬೃಹತ್ ಕಟ್ಟಡ, ಗೋಡೆಗಳೇ ಇಲ್ಲ
ನಾವು ಗರ್ವಿಷ್ಟವೂ, ಬಲಶಾಲಿಯೂ, ಶ್ರೀಮಂತವೂ
ಆಗಿರುವ ಹೀಬ್ರೂನ ಪ್ರಮಾಣ ವಚನ ಕೈಕೊಂಡಿರುವ
ಅಮೆರಿಕದ ಪ್ರಸಕ್ತವನ್ನು ಸ್ವೀಕರಿಸದಿದ್ದರೆ
ನಾವು ಭಯೋತ್ಪಾದಕರೆಂದು ಆರೋಪಿಸಲಾಗುತ್ತದೆ
***
ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.