”ಗ್ರೀಕರ ಸಾಂಪ್ರದಾಯಿಕ ಥಿಯೇಟರ್ ಮತ್ತು ತನ್ನ ಕಾಲದ ನಾಟಕಗಳನ್ನು ಧಿಕ್ಕರಿಸಿ ಬ್ರೆಕ್ಟ್ ಎಪಿಕ್ ಥಿಯೇಟರನ್ನು ಪರಿಕಲ್ಪಿಸಿದ. ಸುಮ್ಮನೆ ಅಲ್ಲಾಡದೆ ಕುಳಿತು ನಾಟಕದ ಭಾವಾವೇಶದ ಏರಿಳಿತಗಳೊಂದಿಗೆ ಒಂದಾಗುವ ಪ್ರೇಕ್ಷಕರು ಬ್ರೆಕ್ಟ್ ಗೆ ಬೇಡ. ಪ್ರೇಕ್ಷಕರು ಹೀಗೆ ಒಪ್ಪಿಕೊಳ್ಳುವುದನ್ನು ಬ್ರೆಕ್ಟ್ ವಿಷವೆಂದು ಪರಿಗಣಿಸುತ್ತಾನೆ. ಅದಕ್ಕೆಂದೇ ಅವನು ತನ್ನ ವಿಧಾನದ ಮೂಲಕ ಪ್ರೇಕ್ಷಕರ ವಿಮರ್ಶಾ ದೃಷ್ಟಿಯ ಮೊನಚನ್ನು ಕಾಪಾಡುವುದಷ್ಟೇ ಅಲ್ಲದೆ ಮತ್ತಷ್ಟು ಉದ್ದೀಪನಗೊಳಿಸುತ್ತಾನೆ.”
ವಿಶ್ವ ರಂಗಭೂಮಿ ದಿನಾಚರಣೆಯ ಸಂದರ್ಭದಲ್ಲಿ ಎ.ಎನ್.ಪ್ರಸನ್ನ ಬರಹ.

 

ಬ್ರೆಕ್ಟ್ ಜರ್ಮನಿಯಲ್ಲಿ ನಾಟಕ ರಚನೆ, ಪ್ರಯೋಗಗಳಿಗೆ ಕಾಯಕಲ್ಪ ಮಾಡಿದ ಹುಟ್ಟಿದರೂ ಭೌಗೋಳಿಕ ಸೀಮೆಗಳನ್ನು ದಾಟಿದ ಮೇಧಾವಿ. ನಾಟಕಕಾರನಾಗಿ, ನಿರ್ದೇಶಕನಾಗಿ ಪ್ರಖ್ಯಾತನಾದ ಬ್ರೆಕ್ಟ್ ನಲ್ಲಿ ಪ್ರವೃತ್ತವಾಗಿರುವುದು ಕವಿಯ ಕ್ರಿಯಾಶೀಲತೆ. ಇದಕ್ಕಾಗಿಯೇ ಅವನ ನಾಟಕಗಳಲ್ಲಿ ಕಾವ್ಯಾಂಶಗಳು ಹಾಗೂ ಪದ್ಯಗಳಲ್ಲಿ ನಾಟಕಾಂಶಗಳು ನಮಗೆದುರಾಗುತ್ತವೆ. ಅವನು ಕೃತಿಯಲ್ಲಿಳಿಸಿದ ಎಪಿಕ್ ಥಿಯೇಟರ್ ಕಲ್ಪನೆ ಎಪಿಕ್ ಪದಕ್ಕಿರುವ ಸಾಂಪ್ರದಾಯಿಕ ಅರ್ಥದಲ್ಲಲ್ಲ. ಆ ಪದವನ್ನು ಬ್ರೆಕ್ಟ್ ವಿಶೇಷಾರ್ಥದಲ್ಲಿ ಬಳಸುತ್ತಾನೆ. ನಟನೊಬ್ಬ ಅಭಿವ್ಯಕ್ತಿಸುವ ರೀತಿಯನ್ನು ಕುರಿತಂತೆ ಅದನ್ನು ಉಪಯೋಗಿಸುತ್ತಾನೆ. ಅವನಿಗೆ ನಟನ ನಡವಳಿಕೆ ಯಾವುದಾದರೊಂದು ನಿರ್ದಿಷ್ಟ ಅಂಶದ ಕಡೆ ತೋರು ಬೆರಳಾಗಿರಬೇಕೆಂಬ ದೃಷ್ಟಿಯಿದೆ.

ಬ್ರೆಕ್ಟ್ ನ ನಾಟಕಗಳಲ್ಲಿ ಈ ಎಪಿಕ್ ರೀತಿಯ ನಟನೆ ಸಾಕಷ್ಟು ಪ್ರಾಮುಖ್ಯ ಹೊಂದಿದ್ದರೂ ಅವನ ಒಟ್ಟಾರೆ ವಿಧಾನದಲ್ಲಿ ಅದೊಂದು ಭಾಗ ಮಾತ್ರ. ಎಪಿಕ್ ನಟನೆ ರಂಗದ ಮೇಲೆ ಪಡಿಮೂಡಿಸುವ ವಾಕ್ಯಗಳು, ಹಾಡೊಂದರ ಉಪಯೋಗ, ಸಂಗೀತ, ನೃತ್ಯ ಸಂಯೋಜನೆ, ದೃಶ್ಯವೊಂದರ ರಚನೆ ಇವೆಲ್ಲ ಒಟ್ಟುಗೂಡಿ ನಾಟಕದ ಘಟನೆಗಳನ್ನು ಅದರ ಸಾಮಾನ್ಯಾರ್ಥದಿಂದ ದೂರ (alienate) ಮಾಡುತ್ತವೆ. ಅಲ್ಲದೆ ಘಟನೆಗಳು ಹೊಸದೆಂಬ, ಸೋಜಿಗವೆಂಬ ಲೇಪ ಪಡೆಯುತ್ತವೆ. ಆಗಷ್ಟೆ ಜರುಗುತ್ತಿರುವ ನೈಜ ಘಟನೆಗಳನ್ನು ನೋಡುತ್ತಿಲ್ಲವೆಂದು ಪ್ರೇಕ್ಷಕರಿಗೆ ಬ್ರೆಕ್ಟ್ ಮನವರಿಕೆ ಮಾಡಿ ಕೊಡುತ್ತಾನೆ. ಜೊತೆಗೆ ಗೊತ್ತಾದ ಕಾಲ ಮತ್ತು ಸ್ಥಳಗಳಲ್ಲಿ ಈ ಹಿಂದೆ ನಡೆದಂಥವುಗಳನ್ನು ವೀಕ್ಷಿಸುತ್ತಿದ್ದೇವೆಂಬ ತಿಳಿವು ಮೂಡಿಸುತ್ತಾನೆ.

ನಾಟಕ ಕಲಾಪೂರ್ಣವಾಗಿರುವುದರಿಂದ ಹಿಂದೆಂದೋ ನಡೆದ ಘಟನೆಗಳು ಕೇವಲ ನಿರೂಪಣೆಯಾಗಿ ಉಳಿಯುವುದಿಲ್ಲ. ರಂಗದ ಮೇಲಿನ ಕ್ರಿಯೆ ಆಗ ಆ ಸಮಯದಲ್ಲಿ ಜರುಗುವುದರಿಂದ ಕಳೆದ ಘಟನೆಗಳು ಹೊಸ ಅರ್ಥದಲ್ಲಿ ನವೀನ ಚೌಕಟ್ಟಿನಲ್ಲಿ ಪ್ರತಿಯೊಂದನ್ನೂ ‘ದೂರವಿಟ್ಟು’ನೋಡುವಂತೆ ಪ್ರೇಕ್ಷಕರನ್ನು ಒತ್ತಾಯಿಸುತ್ತಾನೆ. ಕೇವಲ ಭ್ರಾಮಕ ವಾತಾವರಣವನ್ನು ಸೃಷ್ಟಿಸಲು ಪ್ರಯತ್ನಿಸುವ ವಾಸ್ತವ ರಂಗಭೂಮಿಯ ಉದ್ದೇಶಗಳಿಂದ ಹೊರತಾಗಿ ಪ್ರೇಕ್ಷಕರು ನಾಟಕಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸುವುದು ಇಡೀ ನಾಟಕದ ಪ್ರಮುಖ ಉದ್ದೇಶವಾಗುತ್ತದೆ. ಈ ಪ್ರತಿಕ್ರಿಯೆ ನಾಟಕದಿಂದೊದಗುವ ಮನರಂಜನೆಯ ಅನುಭವವನ್ನು ಸಂಪೂರ್ಣವಾಗಿ ಇಲ್ಲವಾಗಿಸುತ್ತದೆ ಎಂದಲ್ಲ-ಅದಕ್ಕೆ ತದ್ವಿರುದ್ಧವಾಗಿ ಇಡೀ ನಾಟಕದ ಸೊಗಸನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ.

ಗ್ರೀಕರ ಸಾಂಪ್ರದಾಯಿಕ ಥಿಯೇಟರ್ ಮತ್ತು ತನ್ನ ಕಾಲದ ನಾಟಕಗಳನ್ನು ಧಿಕ್ಕರಿಸಿ ಬ್ರೆಕ್ಟ್ ಎಪಿಕ್ ಥಿಯೇಟರನ್ನು ಪರಿಕಲ್ಪಿಸಿದ. ಸುಮ್ಮನೆ ಅಲ್ಲಾಡದೆ ಕುಳಿತು ನಾಟಕದ ಭಾವಾವೇಶದ ಏರಿಳಿತಗಳೊಂದಿಗೆ ಒಂದಾಗುವ ಪ್ರೇಕ್ಷಕರು ಬ್ರೆಕ್ಟ್ ಗೆ ಬೇಡ. ಪ್ರೇಕ್ಷಕರು ಹೀಗೆ ಒಪ್ಪಿಕೊಳ್ಳುವುದನ್ನು ಬ್ರೆಕ್ಟ್ ವಿಷವೆಂದು ಪರಿಗಣಿಸುತ್ತಾನೆ. ಅದಕ್ಕೆಂದೇ ಅವನು ತನ್ನ ವಿಧಾನದ ಮೂಲಕ ಪ್ರೇಕ್ಷಕರ ವಿಮರ್ಶಾ ದೃಷ್ಟಿಯ ಮೊನಚನ್ನು ಕಾಪಾಡುವುದಷ್ಟೇ ಅಲ್ಲದೆ ಮತ್ತಷ್ಟು ಉದ್ದೀಪನಗೊಳಿಸುತ್ತಾನೆ. ಈ ವಿಧಾನದಲ್ಲಿ ಎಪಿಕ್ ಥಿಯೇಟರ್ ಮತ್ತು ಮಾರ್ಕ್ಸ್ ನ ಸಿದ್ಧಾಂತಗಳು ಒಂದರೊಡನೊಂದು ಮಿಳಿತಗೊಂಡು ಪ್ರೇಕ್ಷಕನನ್ನು ತಟ್ಟುತ್ತವೆ. ಪ್ರಪಂಚವನ್ನು ಬದಲಾಯಿಸಲು ಸಾಧ್ಯ ಮತ್ತು ಅದಕ್ಕೆ ಜಾಗೃತ ರಾಜಕೀಯ ಪ್ರಜ್ಞೆ ಅವಶ್ಯಕ ಎಂದು ತಿಳಿಸುತ್ತಾನೆ ಬ್ರೆಕ್ಟ್. ರಾಜಕೀಯ ನಿಲುವಿಗೆ ಅವನು ಸೂಚಿಸುವುದು ಮಾರ್ಕ್ಸಿಸ್ಟ್ ಸಿದ್ಧಾಂತವನ್ನು.

ಬ್ರೆಕ್ಟ್ ನ ನಾಟಕ ಕಲ್ಪನೆಗಳಿಗೆ ಪಿರಾಂಡೆಲೋ, ಕ್ಲಾಡಿಯರ್ ಮತ್ತು ಜರ್ಮನ್ ಎಕ್ಸ್ಪ್ರೆಷನಿಸ್ಟರ ಪ್ರಯೋಗಗಳು ಸಾಕಷ್ಟು ಮೂಲ ಸಾಮಗ್ರಿ ಒದಗಿಸಿವೆ. ಅಲ್ಲದೆ ಬ್ರೆಕ್ಟ್ ನಲ್ಲಿ ಕಂಡು ಬರುವ ಹಾಸ್ಯದ ಅಂಶಗಳು ಕಾರ್ಲ್ ಮೆಂಟನ್ ಮತ್ತು ರಾಜಕೀಯ ಪರಿಕರಗಳ ಅಳವಡಿಕೆಯಲ್ಲಿ ಪಿಸ್ಕಾಟರ್ ನನ್ನು ನೆನಪಿಗೆ ತರುತ್ತವೆ. ಬ್ರೆಕ್ಟ್, ಮಾರ್ಕ್ಸ್ ಸಿದ್ಧಾಂತಕ್ಕೆ ಬದ್ಧನಾಗುವ ಮುಂಚೆಯೇ ಎಪಿಕ್ ಥಿಯೇಟರಿನ ಕಲ್ಪನೆಗನುಸಾರವಾದ ನಾಟಕಗಳನ್ನು ರಚಿಸಿದ. ಬ್ರೆಕ್ಟ್ ನ ಎಪಿಕ್ ಥಿಯೇಟರ್ ವಿಧಾನವನ್ನು ಅನುಸರಿಸಿ ವೈಲ್ಡರ್, ಮ್ಯಾಕ್ಸ್ ಫಿಶ್, ಡುರಮೆಟ್ ಮುಂತಾದವರು ನಾಟಕಗಳನ್ನು ರಚಿಸಿರುವುದನ್ನು ಕಾಣಬಹುದು. ಎಪಿಕ್ ಥಿಯೇಟರ್, ಸುಸಂಬದ್ಧ ನಾಟಕ, ವಾಸ್ತವಿಕ ನಾಟಕ ಮುಂತಾದ ಯಾವ ವಿಧಾನವೇ ಆದರೂ ಅವು ತಮ್ಮಷ್ಟಕ್ಕೆ ತಾವು ಶ್ರೇಷ್ಠವೆನಿಸುವುದಿಲ್ಲ. ನಾಟಕಕಾರನೊಬ್ಬ ತಾನು ಆರಿಸಿಕೊಂಡ ವಿಧಾನದ ಮೂಲಕ ಮನುಷ್ಯನ ಅಂತರಾಳದ ಪದರುಗಳನ್ನು, ಅವರ ಆಸೆ-ನಿರಾಸೆ, ದುರಂತ-ಬೀಭತ್ಸಗಳನ್ನು ಮತ್ತು ಇವುಗಳಿಗಿರುವ ಕಾರಣಗಳನ್ನು ವಿಶ್ಲೇಷಿಸಿ ಸಮರ್ಥವಾಗಿ ಅಭಿವ್ಯಕ್ತಿಸಿದರೆ ಶ್ರೇಷ್ಠವೆನಿಸುತ್ತವೆ.

ಬ್ರೆಕ್ಟ್ ನ ನಾಟಕ ಸಿದ್ಧಾಂತ ವಾಸ್ತವಿಕವನ್ನು ಪ್ರತಿರೂಪಿಸುವ ರಂಗ ಪರಿಕರಗಳನ್ನು ಒಳಗೊಂಡ ಪ್ರಯೋಗಗಳಿಂದ ಮುಕ್ತಗೊಳಿಸಿ ಇತರ ಕಲಾ ಪ್ರಕಾರಗಳಾದ ಸಂಗೀತ, ನೃತ್ಯ ಮುಂತಾದುವನ್ನು ನಾಟಕದ ಪರಿಧಿಯೊಳಗೆ ಪ್ರವೇಶಿಸುವಂತೆ ಮಾಡಿದೆ.

ಬ್ರೆಕ್ಟ್ ನ Ball, Drums of the night ಮುಂತಾದ ಮೊದಲ ನಾಟಕಗಳು ಪ್ರತಿಭಟನೆ ಮತ್ತು ಪ್ರಚೋದನೆ ಉಂಟು ಮಾಡುವ ಪ್ರಯತ್ನಗಳಂತೆ ತೋರುತ್ತವೆ. ಬ್ರೆಕ್ಟ್ ಸಮರ್ಥ ನಾಟಕಕಾರನಾಗಿ ಬೆಳೆದ ಮೇಲೆ ಬರೆದವುಗಳಲ್ಲಿ ಅವನ ಮೊದಲ ನಾಟಕಗಳ ಎಳೆಗಳನ್ನು ಗುರುತಿಸಬಹುದು. ಬ್ರೆಕ್ಟ್ ಸ್ವೀಕರಿಸಿದ ಮಾರ್ಕ್ಸ್ ಸಿದ್ಧಾಂತ ಅವನ ನಾಟಕ ರಚನಾ ಪ್ರತಿಭೆಗೆ ಪೂರಕವಾಗಿರುವುದಲ್ಲದೆ ಕುಂಠಿತಗೊಳಿಸುವುದಿಲ್ಲ. Three PennyOpera ಮತ್ತು The Rise and Fall of the Mahagomy ನಾಟಕಗಳನ್ನು ಬ್ರೆಕ್ಟ್ ರಚಿಸಿದ್ದು ಸಾಂಪ್ರದಾಯಿಕ ಅಪೇರಾಗಳ ವಿರುದ್ಧ ಬಂಡೆದ್ದು. ಎಪಿಕ್ ಥಿಯೇಟರಿನ ಪ್ರಾಥಮಿಕ ಹೆಜ್ಜೆಗಳಿಂದ ನಶಿಸುತ್ತಿರುವ ಬೂಜ್ರ್ವಾ ಸಮಾಜವನ್ನು ಇವುಗಳಲ್ಲಿ ಚಿತ್ರಿಸಿದ್ದಾನೆ. ಬೋಧನಾತ್ಮಕ ಪರಿಹಾರವನ್ನು ಸುಶ್ರಾವ್ಯವಾದ ಹಾಡುಗಳ ಮೂಲಕ ವ್ಯಕ್ತಪಡಿಸುತ್ತಾನೆ. ಇಷ್ಟಾದರೂ Three Penny Opera ದ ಯಶಸ್ಸಿಗೆ ಬ್ರೆಕ್ಟ್ ಗಿಂತಲೂ ಸಂಗೀತ ನಿರ್ದೇಶಕ ವಿಲ್ ಕಾರಣ ಎಂದು ಹೇಳಲಾಗಿದೆ.

ಎಪಿಕ್ ಥಿಯೇಟರ್ ನ ಮತ್ತು ಸಾಂಪ್ರದಾಯಿಕ ಅಥವಾ ಬ್ರೆಕ್ಟ್ ಹೇಳುವಂತೆ ಅರಿಸ್ಟಾಟಲಿಯನ್ ಥಿಯೇಟರಿಗೂ ಇರುವ ವ್ಯತ್ಯಾಸಗಳನ್ನು ಗಮನಿಸಬೇಕು. ಎಪಿಕ್ ಥಿಯೇಟರಿನ ಲಕ್ಷಣಗಳು ಇವು:

1) ಎಪಿಕ್ ಥಿಯೇಟರ್ ಮೂಲತಃ ನಿರೂಪಣಾ ರೀತಿಯದು.
2) ಘಟನೆಗಳನ್ನು ಗಮನಿಸುವಂತೆ ಮಾಡಿ ಪ್ರೇಕ್ಷಕರನ್ನು ಕ್ರಿಯಾಶೀಲರಾಗುವ ನಿರ್ಧಾರದ ಕಡೆ ಕೊಂಡೊಯ್ಯುತ್ತದೆ.
3) ಪ್ರೇಕ್ಷಕರನ್ನು ಜಾಗೃತವಾಗಿರಿಸಿ ಇಡೀ ಪ್ರಪಂಚದ ಬಗ್ಗೆ ಉದ್ದೇಶಿತ ದೃಷ್ಟಿಕೋನ ಬೆಳೆಯುವಂತೆ ಮಾಡುತ್ತದೆ.
4) ಚರ್ಚೆ ಇತ್ಯಾದಿಗಳಿಂದ ಪ್ರೇಕ್ಷಕರಿಗೆ ಹೆಚ್ಚಿನ ತಿಳಿವಳಿಕೆ ಮೂಡುವಂತೆ ಮಾಡುತ್ತದೆ.
5) ಮನುಷ್ಯನ ಸಾಮಾಜಿಕ ಅವಸ್ಥೆ-ಸ್ಥಿತಿಗಳ ಶೋಧನೆ ನಡೆಯುತ್ತದೆ.
6) ನಾಟಕದ ಕ್ರಿಯೆಯಲ್ಲಿ ಕುತೂಹಲ ಕಾಪಾಡಿಕೊಳ್ಳುತ್ತದೆ.
7) ಪ್ರತಿ ದೃಶ್ಯಗಳೂ ಪ್ರತ್ಯೇಕವಾಗಿರುತ್ತವೆ.
8) ಪ್ರೇಕ್ಷಕರ ಬುದ್ಧಿಯ ಮೇಲೆ ಹೆಚ್ಚಿನ ಒತ್ತು ಬೀಳುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ ಅರಿಸ್ಟಾಟಲಿಯನ್ ಥಿಯೇಟರಿನ ಮೂಲ ಗುಣಗಳನ್ನು ಹೀಗೆ ಪಟ್ಟಿ ಮಾಡಬಹುದು :

1) ರಂಗದ ಮೇಲೆ ನಡೆಯುವ ಕ್ರಿಯೆಗಳಲ್ಲಿ ಪ್ರೇಕ್ಷಕ ತಾದಾತ್ಮ್ಯ ಹೊಂದುವಂತೆ ಮಾಡಿ ಅವನ ಕ್ರಿಯಾತ್ಮಕ ಪ್ರಜ್ಞೆಯನ್ನು ಮೊಟಕು ಮಾಡುತ್ತದೆ.
2) ಪ್ರೇಕ್ಷಕನ ಭಾವನಾ ಸ್ತರಗಳನ್ನು ತಟ್ಟಿ ನಟರ ಭಾವಾವೇಶದಲ್ಲಿ ಭಾಗಿಯಾಗುವಂತೆ ಮಾಡುತ್ತದೆ.
3) ಮನುಷ್ಯನನ್ನು ಹಿಗ್ಗಿ ಕುಗ್ಗುವ ಭಾವನೆಗಳ ಮೊತ್ತವೆಂದು ಪರಿಗಣಿಸುತ್ತದೆ.
4) ಪ್ರೇಕ್ಷಕರಿಗೆ ನಾಟಕದ ಮುಕ್ತಾಯದ ಬಗ್ಗೆ ಮಾತ್ರ ಹೆಚ್ಚಿನ ಕುತೂಹಲವಿರುವಂತೆ ಮಾಡುತ್ತದೆ.
5) ಬುದ್ಧಿಗಮ್ಯವಾದ ಚರ್ಚೆಗೆ ಅವಕಾಶ ಕಡಿಮೆ.
6) ಭಾವನೆಗಳ ಸಂಘರ್ಷವೇ ಪ್ರಧಾನವಾಗುತ್ತದೆ.

ಬ್ರೆಕ್ಟ್ ಗೆ ಎಲ್ಲ ಬಗೆಯ ಸುಳ್ಳು, ಅಂಧಾಭಿಮಾನ, ಬೂಟಾಟಿಕೆ, ಕಪಟ, ಪ್ರತಿಷ್ಠೆ, ಅಹಂಕಾರಗಳ ಬಗ್ಗೆ ತೀವ್ರ ದ್ವೇಷವಿದೆ. ಅವನ ನಾಟಕಗಳಲ್ಲೆಲ್ಲ ಅದು ನಿಚ್ಚಳವಾಗಿ ಕಾಣುತ್ತದೆ. ಸುಳ್ಳಿಗೆ ಯಾವಾಗಲೂ ಸಂಪನ್ಮೂಲ ಹೆಚ್ಚು. ಒಳ್ಳೆಯ ಬಟ್ಟೆಬರೆಯಲ್ಲಿ, ಸುಂದರ ಮಾತುಗಳಲ್ಲಿ, ಜಾಣತನದ ಮೆರುಗಿನಲ್ಲಿ ಹೊರಬಂದು ಭಾವನೆಗಳ ಉಬ್ಬರವೆಬ್ಬಿಸಿ ವಿವೇಚನೆಯ ಆಯ ತಪ್ಪುವಂತೆ ಮಾಡುತ್ತದೆ. ಆದರೆ ಕಟ್ಟಾ ಸತ್ಯಕ್ಕೆ ಕಟ್ಟು ಬಿದ್ದ ಬ್ರೆಕ್ಟ್ ಮಾತಿನ ಅಲಂಕಾರವಿಲ್ಲದೆ ಸಾಮಾಜಿಕ ವಂಚನೆ ಮತ್ತು ಹಸಿ ಸುಳ್ಳುಗಳ ತಳವನ್ನು ಬುಡಮೇಲು ಮಾಡುತ್ತಾನೆ. ಸಾರ್ವತ್ರಿಕ, ವರ್ಗರಹಿತ ಸಮಾಜ ಮುಂತಾದವುಗಳಿಗೆ ಸಂಬಂಧಿಸಿದಂತೆ The Round heads and the Peak heads ಮುಂತಾದ ನಾಟಕಗಳ ಮೂಲಕ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಾನೆ. ಬ್ರೆಕ್ಟ್ ನ ಈ ನಾಟಕ ಶೇಕ್ಸ್ಪಿಯರ್ ನ Measure for Measure ನಾಟಕದ ವಸ್ತುವನ್ನು ಒಳಗೊಂಡಿದೆ. ಶೇಕ್ಸ್ಪಿಯರ್ ಪ್ರೇಮ, ಗೌರವ, ನ್ಯಾಯ ಮುಂತಾದ ಅಂಶಗಳನ್ನು ಬಳಸುವುದಲ್ಲದೆ ಅವುಗಳನ್ನು ಮಹತ್ವಕ್ಕೇರಿಸುತ್ತಾನೆ. ಆದರೆ ಈ ಅಂಶಗಳನ್ನು ವಿಡಂಬನೆಗೆ ಗುರಿಪಡಿಸುವ ಬ್ರೆಕ್ಟ್, ಬೂಜ್ರ್ವಾ ಸಮಾಜದಲ್ಲಿ ಸಾರ್ವತ್ರಿಕ ಮೌಲ್ಯಗಳಿಗೆ ವರ್ಗಭೇದಗಳಿಂದ ಮುಕ್ತವಾದ ಬೆಲೆ ಇದೆಯೆಂದು ಒಪ್ಪುವುದಿಲ್ಲ. ಪ್ರೇಮ, ಗೌರವ, ನ್ಯಾಯಗಳು ಬೂಜ್ರ್ವಾ ಸಮಾಜದಲ್ಲಿ ವ್ಯಾಪಾರದ ವಸ್ತುಗಳಾಗಿವೆ ಎಂದು ಬ್ರೆಕ್ಟ್ ನ ಅಭಿಪ್ರಾಯ. ವಿಡಂಬನೆ ಮಾಡುವುದರ ಮೂಲಕ ಸಾಮಾಜಿಕ ವಾಸ್ತವ್ಯದ ಬಗ್ಗೆ ಜನರಲ್ಲಿ ವಿಶ್ಲೇಷಣಾದೃಷ್ಟಿ ಬೆಳೆಯಲೆಂದು ಅವನು ಉದ್ದೇಶಿಸುತ್ತಾನೆ. ಶೇಕ್ಸ್ಪಿಯರ್, ಗಯಟೆ, ಶಿಲ್ಲರ್ ಮುಂತಾದವರ ನಾಟಕಗಳ ವಸ್ತುವನ್ನು ವಿಡಂಬನೆಗೆ ಗುರಿಪಡಿಸಿ ಅವರ ಗೌರವಕ್ಕೆ ಕುಂದು ತರಬೇಕೆಂಬ ಗುರಿ ಬ್ರೆಕ್ಟ್ ಗಿಲ್ಲ. ಅವರ ಬಗ್ಗೆ ಗೌರವವಿರುವುದಾಗಿ ಅವನೇ ಹೇಳಿಕೊಂಡಿದ್ದಾನೆ. ಸ್ಕೂಲು, ಕಾಲೇಜುಗಳಲ್ಲಿ ಇವುಗಳನ್ನೋದಿದ ಜನಕ್ಕೆ ಈ ವಿಡಂಬನೆಗಳ ಮುಖಾಂತರ ಬೂಜ್ರ್ವಾ ಸಮಾಜದ ನೀತಿ ಮತ್ತು ತತ್ವಗಳನ್ನು ಪರೀಕ್ಷಿಸುವಂತೆ ಮಾಡುತ್ತಾನೆ.


ಡಿಕನ್ಸ್, ಸ್ವಿಫ್ಟ್, ಟಾಲ್ಸ್ಟಾಯ್, ವಾಲ್ಟೈರ್, ಬಾಲ್ಜಾಕ್ ಮುಂತಾದವರೆಲ್ಲ ವಾಸ್ತವವಾದಿಗಳೆಂದು ಒಪ್ಪಿಕೊಳ್ಳುವ ಬ್ರೆಕ್ಟ್ ಅವರಿಂದ ದೊರೆತ ಸಾಹಿತ್ಯಕ ಅನುಭವವನ್ನು ಕುರಿತು ಹೀಗೆ ಹೇಳುತ್ತಾನೆ : ವಾಸ್ತವತೆ ಅಸಂಭಾವ್ಯವೆಂದು ಸಾಮಾನ್ಯವಾಗಿ ತೋರುವ ಪಾತ್ರಗಳು ಮತ್ತು ಸಂದರ್ಭಗಳ ಸೃಷ್ಟಿಯನ್ನೂ ಒಳಗೊಳ್ಳುತ್ತದೆ. ಲೇಖಕನಿಗೆ ಅದ್ಭುತರಮ್ಯ(Fantasy) ಮತ್ತು ಸೃಷ್ಟಿಗಳೆರಡೂ ನ್ಯಾಯವಾದ ಅಂಶಗಳೇ. ಆದರೆ ವಾಸ್ತವತೆಯನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅಭಿವ್ಯಕ್ತಿಸಿರಬೇಕು. ಗಾರ್ಕಿ, ಮಾಯಕೋವಸ್ಕಿ ಮುಂತಾದವರೂ ಹೀಗೆಯೇ ಅಭಿಪ್ರಾಯಪಡುತ್ತಾರೆ.

ಬ್ರೆಕ್ಟ್ ಎಪಿಕ್ ಥಿಯೇಟರನ್ನು ವೈಜ್ಞಾನಿಕ ಯುಗದ ಥಿಯೇಟರ್ ಎಂದೂ ಕರೆಯುತ್ತಾನೆ. ಅವನು ವಿಜ್ಞಾನ ಎನ್ನುವುದು ಸಮಾಜ ವಿಜ್ಞಾನ ಎಂಬ ಅರ್ಥದಲ್ಲಿ ವಿಜ್ಞಾನ ಮತ್ತು ಕಲೆಗಳೆರಡರ ಉದ್ದೇಶವೂ ಒಂದೇ. ನಮ್ಮ ಬಾಳು ಸಹನೀಯವಾಗಲು ಅವು ಶ್ರಮಿಸಬೇಕೆಂದು ಬ್ರೆಕ್ಟ್ ಅಭಿಪ್ರಾಯಪಡುತ್ತಾನೆ. ಬ್ರೆಕ್ಟ್ ನ ನಾಟಕಗಳಲ್ಲಿನ ಧೋರಣೆಯನ್ನು ಹೀಗೆ ಗುರುತಿಸಬಹುದು. ಮನುಷ್ಯ ತಾನಿರುವ ಸ್ಥಿತಿಗೆ ಯಾವುದೇ ಪೂರ್ವ ನಿಶ್ಚಯ ಅಂದರೆ ವಿಧಿ ಕಾರಣವಲ್ಲ ಮತ್ತು ಪ್ರತಿಯೊಂದೂ ತನ್ನನ್ನೇ ಅವಲಂಬಿಸಿದೆ ಎಂದು ಮನದಟ್ಟು ಮಾಡಿಕೊಳ್ಳಬೇಕು. ಇದರಿಂದ ನ್ಯಾಯಬಾಹಿರವಾಗಿ ವಿಜೃಂಭಿಸುವ ವಿವಿಧ ಬಗೆಯ ಶೋಷಣೆ ನಿರಂತರವಾಗಿರಬೇಕಿಲ್ಲವೆಂಬ ಅರಿವು ಮೂಡುವುದಲ್ಲದೆ ಸಾಮಾಜಿಕ ಕ್ರಿಯೆಗೆ ಕಾರಣವಾಗುತ್ತದೆ. ಇಂತಹ ಸಾಮಾಜಿಕ ವಾಸ್ತವ್ಯದ ಪ್ರಜ್ಞೆಯಿಂದ ಮನುಷ್ಯ ಮತ್ತು ಸಮಾಜಗಳೆರಡನ್ನೂ ಬದಲಾಗುತ್ತಿರುವ ಪ್ರಪಂಚದಲ್ಲಿ ಮರು ಸೃಷ್ಟಿಸಲು ಸಾಧ್ಯ ಎನ್ನುತ್ತಾನೆ.

*****
ಬ್ರೆಕ್ಟನ `ಗೆಲಿಲಿಯೋ’ ನಾಟಕ ಮೂರು ರೂಪಗಳಲ್ಲಿದೆ. ಇವುಗಳ ವ್ಯತ್ಯಾಸವಿರುವುದು ನಾಟಕದ ಅಂತ್ಯದಲ್ಲಿ; ಗೆಲಿಲಿಯೋ ವಿಚಾರಣೆಯಲ್ಲಿ ತಪ್ಪೊಪ್ಪಿಕೊಂಡದ್ದಕ್ಕೆ ಸಂಬಂಧಿಸಿದಂತೆ ಮತ್ತು ಹೊಸ ಯುಗ ಪ್ರಾರಂಭದ ಪ್ರಶ್ನೆಗೆ ಉತ್ತರವನ್ನು ಕುರಿತಂತೆ. 1947ರ ಮುಂಚಿನ ರೂಪದಲ್ಲಿ ಗೆಲಿಲಿಯೋ “I insist that this is a new age. If it Looks Like blood-stained old hag, then that’s what new age looks like. The burst of light takes place in the deepest darkness”ಎನ್ನುವ ಮಾತುಗಳಲ್ಲಿ ಕೊನೆಯ ವಾಕ್ಯವನ್ನು ಕೈಬಿಡಲಾಗಿದೆ. ಇದಲ್ಲದೆ ಗೆಲಿಲಿಯೋ ಮೇಲೆ ವಿಧಿಸಲಾದ ತೀರ್ಪು ಮತ್ತಷ್ಟು ಕಠಿಣವಾಗಿದೆ.

ಬ್ರೆಕ್ಟ್, ಮಾರ್ಕ್ಸ್ ಸಿದ್ಧಾಂತಕ್ಕೆ ಬದ್ಧನಾಗುವ ಮುಂಚೆಯೇ ಎಪಿಕ್ ಥಿಯೇಟರಿನ ಕಲ್ಪನೆಗನುಸಾರವಾದ ನಾಟಕಗಳನ್ನು ರಚಿಸಿದ. ಬ್ರೆಕ್ಟ್ ನ ಎಪಿಕ್ ಥಿಯೇಟರ್ ವಿಧಾನವನ್ನು ಅನುಸರಿಸಿ ವೈಲ್ಡರ್, ಮ್ಯಾಕ್ಸ್ ಫಿಶ್, ಡುರಮೆಟ್ ಮುಂತಾದವರು ನಾಟಕಗಳನ್ನು ರಚಿಸಿರುವುದನ್ನು ಕಾಣಬಹುದು.

ವಿಜ್ಞಾನವನ್ನು ವ್ಯಸನದ ರೀತಿ ಪರಿಭಾವಿಸುವ ಗೆಲಿಲಿಯೋ ಎರಡು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಒಂದು, ಸಾಧಿಸಬೇಕಾದ ಕಾರ್ಯ ಮತ್ತು ಈ ಕಾರ್ಯದ ಫಲ ಹಾಗೂ ಸೇವೆಯನ್ನು ಪಡೆಯಬೇಕಾದ ಸಮಾಜ. ಈ ಎರಡು ಅಗತ್ಯಗಳು ಒಂದನ್ನೊಂದು ಹೊಂದಾಣಿಕೆ ಮಾಡಿಕೊಳ್ಳುತ್ತವೆಯೇ ಅಥವಾ ಇಲ್ಲವೆ ಎನ್ನುವುದು ಮುಖ್ಯ ಪ್ರಶ್ನೆ. ವಿಚಾರಣೆಯಾದ ಮೇಲೆ ತೀರ್ಪು ಕೊಡುವ ಮುನ್ನ ಗೆಲಿಲಿಯೋ ಹೇಳುತ್ತಾನೆ “…ವಿಜ್ಞಾನಿಯಾಗಿ ನನಗೆ ವಿಶೇಷ ಅವಕಾಶ ಸಿಕ್ಕಿತ್ತು. ನನ್ನ ಕಾಲದಲ್ಲಿ ಖಗೋಳ ಶಾಸ್ತ್ರವನ್ನು ಕುರಿತು ಮಾರ್ಕೆಟ್ಟುಗಳಲ್ಲಿ ಮಾತಾಡುವಂತಾಯಿತು. ಅಂತಹ ಸಮಯದಲ್ಲಿ ಯಾವನಾದರೊಬ್ಬ ವಿರೋಧ ವ್ಯಕ್ತಪಡಿಸಿದ್ದರೆ ಅದರ ಪ್ರಭಾವ ತುಂಬ ಪರಿಣಾಮಕಾರಿಯಾಗಿರುತ್ತಿತ್ತು. ಕೊನೆಯ ಪಕ್ಷ ನಾನು ವಿರೋಧಿಸಿದ್ದರೆ! ವಿಜ್ಞಾನಿಗಳಿಗೆ ಸಮಾಜ ಕಲ್ಯಾಣಕ್ಕಾಗಿಯೇ ವಿಜ್ಞಾನವನ್ನು ಉಪಯೋಗಿಸಬೇಕೆಂಬ ನೀತಿ ಸಂಹಿತೆ ರೂಪುಗೊಂಡಿದ್ದರೆ! ಆದರೀಗ ಅವರು ಸುಲಭಕ್ಕೆ ಬಾಡಿಗೆಗೆ ಸಿಗುವ ಕುಬ್ಜರಾಗಿದ್ದಾರೆ.”

ಬ್ರೆಕ್ಟ್ ಪರಿಭಾವಿಸುವುದು ಗೆಲಿಲಿಯೋವನ್ನು ಐತಿಹಾಸಿಕ ವ್ಯಕ್ತಿಯಾಗಲ್ಲ-ಒಂದು ಸ್ಥಿತಿಯಾಗಿ. ಬ್ರೆಕ್ಟ್ ನ ಇತರ ನಾಟಕಗಳಲ್ಲಿ ಮಾರ್ಕ್ಸಿಸ್ಟ್ ಲೇಪವಿರುವಷ್ಟು ಈ ನಾಟಕದಲ್ಲಿ ಕಾಣುವುದಿಲ್ಲ. ಗೆಲಿಲಿಯೋನ ಆತ್ಮೀಯ ಉತ್ಸಾಹಭರಿತ ಜೀವನದ ಚಿತ್ರಣವಿದೆ. ಅವನ ವೈಯಕ್ತಿಕ ಬಾಹ್ಯ ಲಕ್ಷಣಗಳು ಸಮಾಜದ ವಿಶಿಷ್ಟ ವ್ಯಕ್ತಿಯಾಗಿಸಿ ನಾಟಕ ಕೇವಲ ಆಧುನಿಕ ವಿಜ್ಞಾನವನ್ನು ಕುರಿತ ನಾಟಕ ಮಾತ್ರ ಎಂದು ಹೇಳದಂತೆ ಮಾಡಿದೆ. ವಿಚಾರಣೆಯ ಒತ್ತಡಕ್ಕೆ ಸಿಕ್ಕು ಗೆಲಿಲಿಯೋ ತಪ್ಪೊಪ್ಪಿಕೊಂಡರೂ ನ್ಯಾಯಸಮ್ಮತವಾದ ಯುಕ್ತಿಯಿಂದ ಅಧಿಕಾರವನ್ನು ಶಿಥಿಲಗೊಳ್ಳುವಂತೆ ಮಾಡುತ್ತಾನೆ.

ನಾಟಕದ ಮೊದಲ ದೃಶ್ಯದಲ್ಲಿಯೇ “…ಸಾವಿರಾರು ವರ್ಷಗಳಿಂದ ನಂಬಿಕೆ ಇದ್ದ ಕಡೆ ಈಗ ಅನುಮಾನ ಬಂದಿದೆ. ಗೌರವಿಸುತ್ತಿದ್ದ ಅನೇಕ ಅಂಶಗಳ ಪರೀಕ್ಷೆಯಾಗುತ್ತಿದೆ; ಅನುಮಾನಿಸದೇ ಇದ್ದದ್ದನ್ನು ಈಗ ಅನುಮಾನಿಸಲಾಗುತ್ತಿದೆ” ಎಂಬ ಮಾತುಗಳು ಬರುತ್ತವೆ. ಇವು ಭವಿಷ್ಯದ ಬಗ್ಗೆ ಕಾಳಜಿ ಹಾಗೂ ಜವಾಬ್ದಾರಿಯನ್ನು ಸೂಚಿಸುವುದಲ್ಲದೆ ಇದನ್ನುನಾಟಕದ ಪ್ರಮುಖಾಂಶವೆಂದು ಪರಿಗಣಿಸಬಹುದು. ಅನಂತರ ಗೆಲಿಲಿಯೋ ಹೊಸಯುಗದ ಬಗ್ಗೆ ಪ್ರಶ್ನೆ ಎತ್ತಿಕೊಂಡಾಗ ಬ್ರೆಕ್ಟ್ ಹೊಸ ರೀತಿಯ ಮಾನವ ಜೀವನ ಮತ್ತು ಇದನ್ನು ಕೈಗೂಡಿಸಿಕೊಳ್ಳಲು ಸಂಪ್ರದಾಯದ ಪ್ರತಿರೋಧದೆದುರು ಹೋರಾಡಬೇಕೆನ್ನುವುದನ್ನು ಧ್ವನಿಸುತ್ತಾನೆ. ಗೆಲಿಲಿಯೋ ವಿಚಾರಣೆಯನ್ನು ಧಿಕ್ಕರಿಸಿ ತಾನು ಕಂಡ ಸತ್ಯವನ್ನು ಎತ್ತಿ ಹಿಡಿದಿದ್ದರೆ ಸೂಕ್ತ ಪ್ರತಿಕ್ರಿಯೆ ವ್ಯಕ್ತಪಡಿಸಿದಂತಾಗುತ್ತಿತ್ತೆಂದೂ ಎನ್ನಿಸುವುದೂ ಅಸಹಜವೇನಲ್ಲ. ಆದರೆ ಹೀಗೆ ಮಾಡುವುದು ಮತ್ತೊಂದು ಪ್ರಮುಖಾಂಶವನ್ನು ಅವಲಂಬಿಸುತ್ತದೆ. ಸಾಮಾಜಿಕ ನಡವಳಿಕೆಯಲ್ಲಿ ಹೊಸ ದೃಷ್ಟಿಕೋನ ಉದ್ಭವಿಸಿದೆಯೇ ಎನ್ನುವ ಅಂಶ. ಹಾಗಿದ್ದಲ್ಲಿ ಗೆಲಿಲಿಯೋ ವಿಚಾರಣೆಯನ್ನು ಧಿಕ್ಕರಿಸಿ ಹುತಾತ್ಮನಾಗಬಹುದಿತ್ತು. ಹಾಗಿರದೆ ಸಮೂಹ ಪ್ರಜ್ಞೆಯಲ್ಲಿ ಹೊಸ ಸತ್ಯಗಳ ಬೇರಿಳಿಸದಿದ್ದುದರಿಂದ ವಿಚಾರಣೆಯೆದುರು ಒಪ್ಪಿಕೊಂಡದ್ದು ಮತ್ತು ಅನಂತರ ಕಂಡುಕೊಂಡ ಯುಕ್ತಿ ವಿಜ್ಞಾನದ ಮುನ್ನಡೆಯ ದೃಷ್ಟಿಯಿಂದ ತೀರ ಯುಕ್ತವೆನಿಸುತ್ತದೆ.

ಇಲ್ಲಿನ ಪ್ರಮುಖ ಪ್ರಶ್ನೆ ಸತ್ಯವಲ್ಲ-ಐತಿಹಾಸಿಕ ಪ್ರಕ್ರಿಯೆಯಲ್ಲಿ ಅದರ ಸ್ಥಾನವೇನು, ಎನ್ನುವುದು. ಭೂಮಿಯನ್ನು ವಿಶ್ವದ ಕೇಂದ್ರವಾಗಿಸಿ ಅದರ ಸುತ್ತ ಸೂರ್ಯ ಮತ್ತಿತರ ಗ್ರಹಗಳು ಸುತ್ತುವುದನ್ನು ಸಾಂಪ್ರದಾಯಿಕವಾಗಿ ಒಪ್ಪಿಕೊಂಡಿರುವುದು ಮತ್ತು ದೇವರಿರುವ ಕಲ್ಪನೆ ಹಾಗೂ ಅದರ ಅಗತ್ಯದ ಬಗ್ಗೆ ನಾಟಕದುದ್ದಕ್ಕೂ ಚರ್ಚೆಯಾಗುತ್ತದೆ. ಬಾರ್ಬೆರಿಸಿ, “… ದೇವರಿರದಿದ್ದರೆ ಅವನನ್ನು ಸೃಷ್ಟಿಸಬೇಕಾಗುತ್ತದೆ…” ಎಂದು ಗೆಲಿಲಿಯೋನೊಂದಿಗೆ ವಾದಿಸುತ್ತ ಹೇಳುತ್ತಾನೆ. ಗೆಲಿಲಿಯೋನ ಸಂಶೋಧನೆಗಳನ್ನು ನಂಬುವ ಚಿಕ್ಕ ಪಾದ್ರಿ ಕೂಡ ತಮ್ಮ ಮೇಲೆ ದೈವದ ರಕ್ಷಣಾದೃಷ್ಟಿ ಇದೆಯೆಂದು ಎಲ್ಲ ಬಗೆಯ ಸಂಕಷ್ಟಗಳನ್ನು ಸಹಿಸಿಕೊಳ್ಳುತ್ತಿರುವ ಜನರಿಗೆ ಅತ್ಯಂತ ಪ್ರಬಲವಾದ ಆಘಾತವಾಗುವುದೆಂದು ವಾದಿಸುತ್ತಾನೆ. ಲುಡೊವಿಕೆಯ ಗೆಲಿಲಿಯೋನ ಮಗಳು ವರ್ಜಿನೀಯಾಳೊಂದಿಗೆ ಮದುವೆಯಾಗಬೇಕಿದ್ದವನು. ಅವನು ಕೂಡ ಕೊನೆಗೆ ಅದಕ್ಕೊಪ್ಪದೆ ತೊರೆದು ಹೋಗುತ್ತಾನೆ. ಲುಡೊವಿಕೊ ಆಸ್ತಿವಂತ. ಅದನ್ನುಳಿಸಿ ಬೆಳೆಸಲು ತಗ್ಗಿ ನಡೆಯುವ ರೈತರು ಅವನಿಗೆ ಬೇಕು. ಚರ್ಚಿಗೆ ವಿರೋಧವಾದ ಗೆಲಿಲಿಯೋನ ಅಭಿಪ್ರಾಯಗಳನ್ನು ಮಾನ್ಯ ಮಾಡಿದರೆ ರೈತರ ಒಲವಿಂದ ದೂರವಾಗುವ ಪ್ರಸಂಗ ಬರಬಹುದೆಂದು ಭಾವಿಸುತ್ತಾನೆ. ಗೆಲಿಲಿಯೋ ತನ್ನ ಪರವಾಗಿ ಫೆಡರಾಜನಿ, ವೆನ್ನಿ ಇವರುಗಳ ಬೆಂಬಲವನ್ನು ಪಡೆದಿರುತ್ತಾನೆ. ಇವರಿಬ್ಬರೂ ಗೆಲಿಲಿಯೋಗೆ ಸಹಾಯ ಮಾಡಲು ಮುಂದೆ ಬರುತ್ತಾರೆ. ಗೆಲಿಲಿಯೋನ ಕಾಲದಲ್ಲಿದ್ದ ಚರ್ಚ್ ನ ಪ್ರಾಬಲ್ಯಕ್ಕೆ ನಾಟಕದಲ್ಲಿ ಸಾಕಷ್ಟು ಪುರಾವೆ ದೊರಕುತ್ತದೆ. ಹೊಸ ಯುಗದ ಹರಿಕಾರನಾಗುವ ಅವಕಾಶ ಹೊಂದಿದ ಗೆಲಿಲಿಯೋನ ತೀವ್ರ ನಿರೀಕ್ಷೆ, ವೈಜ್ಞಾನಿಕ ಸಾಧನೆಯಲ್ಲಿ ಗೆಲುವು ಕಂಡ ಉತ್ಸಾಹ, ಆಳಕ್ಕಿಳಿಯುತ್ತಿರುವ ಹತಾಶೆ, ಆತ್ಮೀಯರೆದುರು ನಡೆದುಕೊಳ್ಳುವ ರೀತಿ ಇವುಗಳಿಂದ ಇಡೀ ನಾಟಕ ಸಮರ್ಥ ಸಂವಹನಶಕ್ತಿ ಪಡೆಯುತ್ತದೆ. ಅಲ್ಲದೆ ಗೆಲಿಲಿಯೋ ವಿಚಾರಣೆಯೆದುರು ತೆಗೆದುಕೊಂಡ ನಿರ್ಧಾರ ತೀರ ಸರಿಯಾದದ್ದು ಎನ್ನಿಸುತ್ತದೆ.

ಇದನ್ನು ಗಮನಿಸಿದಾಗ ಮತ್ತೊಂದು ದುರಂತ ಅಥವಾ ವಿಲಕ್ಷಣ ಸತ್ಯ ಕಾಣುತ್ತದೆ. ಹೀರೋನನ್ನು ಪಡೆದ ಪ್ರಪಂಚ ಅಸಂತುಷ್ಟವಾಗಿರುತ್ತದೆ ಮತ್ತು ಹೀರೋನ ಅಗತ್ಯವಿರುವ ಪ್ರಪಂಚ ಕೂಡ ಅಷ್ಟೇ ಅಸಂತುಷ್ಟವಾಗಿರುತ್ತದೆ. ಇದರಿಂದಾಗಿಯೇ ತನ್ನ ವಿದ್ಯಾರ್ಥಿಗಳು ಬಯಸಿದಂತೆ ಗೆಲಿಲಿಯೋ ತನ್ನ ಕಾಲದಲ್ಲಿಯೇ ಹೀರೋ ಆಗುವುದಿಲ್ಲ. ಇದಕ್ಕೆ ಹೊಸಯುಗಕ್ಕೆ ಅಣಿಯಾಗಬೇಕಾದ ಜಗತ್ತಿನ ಸಿದ್ಧತೆಯಲ್ಲಿ ಕೊರತೆ ಕಾಣುತ್ತದೆ. ತನಗಿರುವ ಸಾಮರ್ಥ್ಯದ ಬಗ್ಗೆ ಅದಕ್ಕೆ ಅರಿವಿಲ್ಲ. ಎಲ್ಲ ಅಧಿಕಾರ ಕೇಂದ್ರೀಕೃತವಾದ ಚರ್ಚ್ ಈ ಕೊರತೆಯ ಲಾಭ ಪಡೆಯುತ್ತದೆ. ಅರಿಸ್ಟಾಟಲಿನ ಖಗೋಳ ಸಿದ್ಧಾಂತಗಳನ್ನು ವಿರೋಧಿಸಿದರೆ ಪರೋಕ್ಷವಾಗಿ ಚರ್ಚಿನ ಪ್ರಭುತ್ವವನ್ನು ವಿರೋಧಿಸಿದಂತಾಗುತ್ತದೆ. ಜನಸಮುದಾಯದ ಮೇಲಿನ ಒಟ್ಟಾರೆ ಹಿಡಿತ ಕಳೆದುಕೊಳ್ಳಲು ಇಷ್ಟಪಡದ ಚರ್ಚ್ ಗೆಲಿಲಿಯೋನ ಮೇಲೆ ಕ್ರಮ ತೆಗೆದುಕೊಳ್ಳುತ್ತದೆ. ಧಾರ್ಮಿಕ ಶೋಷಣೆಯ ಭಯಂಕರ ಚಿತ್ರ ನಮ್ಮೆದುರಿಡುತ್ತಾನೆ ಬ್ರೆಕ್ಟ್. ಅವನ ಇತರ ಪ್ರಮುಖ ನಾಟಕಗಳಲ್ಲಿ ಅಷ್ಟು ಪ್ರಖರವಾಗಿರದ ಮಾನವ ಜನಾಂಗದ ಶಕ್ತಿ-ಸಾಧ್ಯತೆಗಳ ಮತ್ತು ಇತಿಹಾಸದ ಸಂಬಂಧದೊಂದಿಗಿರುವ ಅಗತ್ಯಗಳನ್ನು ಗೆಲಿಲಿಯೋ ಅತ್ಯಂತ ಸಮರ್ಥವಾಗಿ ಅಭಿವ್ಯಕ್ತಿಸುತ್ತದೆ.

ಗೆಲಿಲಿಯೋ ವಿಜ್ಞಾನದ ಮೂಲಕ ಜೀವನದ ಸಾರ್ಥಕತೆ ಪಡೆದವನು. ಅವನ ವೈಯಕ್ತಿಕ ದುರಂತ ವಿಜ್ಞಾನದ ಉಳಿವಿಗಾಗಿ. ಅವನ ಐತಿಹಾಸಿಕ ಪ್ರಯೋಗ ಮತ್ತು ಸಿದ್ಧಿಗಳು ನಂತರದ ಜಗತ್ತಿಗೆ ಲಭ್ಯವಾದಂಥವುಗಳು. ಆದರೆ ಅವನ ವಿಜ್ಞಾನ ಸಿದ್ಧಿಗೆ ದುರಂತವಿಲ್ಲ.

ದ್ವಂದ್ವ ವ್ಯಕ್ತಿತ್ವವನ್ನು ವಸ್ತುವಾಗುಳ್ಳ ಬ್ರೆಕ್ಟ್ ನ ಎರಡು ಪ್ರಮುಖ ನಾಟಕಗಳಲ್ಲಿ The Good Woman of Setzuan ಒಂದು. ಮತ್ತೊಂದು Puntila and his man matti. ವ್ಯಕ್ತಿತ್ವಗಳ ದ್ವಂದ್ವವಿರುವುದು ವಿಚಾರ ಮತ್ತು ಸಹಜ ಗುಣಗಳ ಮಧ್ಯೆ. ಸ್ವತಃ ಬ್ರಕ್ಟ್ ನೇ ಈ ಎರಡು ವಲಯಗಳಲ್ಲೂ ಇದ್ದನೆಂದು ಮಾರ್ಟಿನ್ ಎಸ್ಲಿನ್ ಹೇಳುತ್ತಾನೆ. ಈ ಮೂಲ ಎಳೆಯಿಂದಲೇ ದ್ವಂದ್ವ ವ್ಯಕ್ತಿತ್ವದ ಸಮಸ್ಯೆಗಳು, ಅದರಿಂದ ಉಂಟಾಗುವ ದುರಂತಗಳನ್ನು ಅಭ್ಯಸಿಸಬಹುದು.

ಶೆನ್ ಟೆ ಸತ್ಯವಂತೆ ಹಾಗೂ ಒಳ್ಳೆಯವಳು. ಅವಳು ಕ್ರಿಯಾಶೀಲಳಾಗುವುದು ಈ ಸಹಜ ಗುಣದ ನೆಲೆಯಿಂದ. ಆದರೆ ತಂಬಾಕಿನ ಅಂಗಡಿ ಪ್ರಾರಂಭಿಸಿದ ಮೇಲೆ ದುರಾಸೆಯ, ಸೋಮಾರಿಗಳ ನೆರೆಯವರಿಂದ ರಕ್ಷಿಸಿಕೊಳ್ಳಲು ಶುಯಿಟಾ ಎಂಬ ಗಂಡಸಿನ ವೇಷದ ವ್ಯಕ್ತಿತ್ವವನ್ನು ಪರಿಕಲ್ಪಿಸಿಕೊಳ್ಳುತ್ತಾಳೆ. ತನ್ನ ಒಳ್ಳೆಯತನದಿಂದ ದುರುಪಯೋಗ ಪಡೆಯುತ್ತಿದ್ದವರನ್ನು ಕೆಲಸಕ್ಕೆ ಹಚ್ಚುತ್ತಾಳೆ. ಆದರೆ ಅವರೆಲ್ಲರಿಗೆ ತಮ್ಮಿಷ್ಟದಂತೆ ನಡೆಯುವ ಶೆನ್ ಟೆ ಬೇಕೆ ವಿನಃ ನಿಷ್ಠುರವಾಗಿ ನಡೆಸಿಕೊಳ್ಳುವ ಶುಯಿಟಾ ಬೇಕಿಲ್ಲ. ಒಳ್ಳೆಯತನವಿದ್ದರೂ ಪರಿಸ್ಥಿತಿಗಳ ಒತ್ತಡದಲ್ಲಿ ಅದನ್ನು ಮುಂದುವರಿಸಿಕೊಂಡು ಹೋಗುವುದು ಅಸಾಧ್ಯವೆಂದು ಬ್ರೆಕ್ಟ್ ನಾಟಕದ ಪ್ರಾರಂಭದಲ್ಲಿಯೇ ಸೂಚಿಸುತ್ತಾನೆ.

ಇದಕ್ಕಿಂತ ಮುಂಚೆಯೇ ದೇವರುಗಳಿಗೂ ಕೂಡ ಒಳ್ಳೆಯವರು ಅದನ್ನು ಉಳಿಸಿಕೊಳ್ಳುವುದರ ಬಗ್ಗೆ ಸಂದೇಹ ಬರುವುದನ್ನು ಬ್ರೆಕ್ಟ್ ಪೀಠಿಕೆಯಲ್ಲಿಯೇ ತಿಳಿಸುತ್ತಾನೆ. ಶೆನ್ ಟೆಯ ರೂಪದಲ್ಲಿ ಇತರರು ಕಷ್ಟಪಡುವುದನ್ನು ಅವಳಿಗೆ ನೋಡಲಾಗುವುದಿಲ್ಲ. ತನ್ನಲ್ಲಿರುವ ವಸ್ತುಗಳನ್ನು ಹಂಚಿಬಿಡುತ್ತಾಳೆ. ಅಲ್ಲದೆ ಅವರು ತನ್ನನ್ನು ಶೋಷಿಸಲು ಅವಕಾಶ ಮಾಡಿಕೊಳ್ಳುತ್ತಾಳೆ. ಒಳ್ಳೆಯತನ ಮನುಷ್ಯನ ಸಹಜ ಸ್ವಭಾವ. ದುಷ್ಟ, ಸಂಕುಚಿತ ಮನೋಭಾವ ಇತ್ಯಾದಿಗಳನ್ನು ಶ್ರಮಪಟ್ಟು ಪಡೆಯಬೇಕಾಗುತ್ತದೆ ಎನ್ನುತ್ತಾನೆ, ಬ್ರೆಕ್ಟ್. ವ್ಯವಹಾರ ಚತುರತೆಯಿಂದ ಶುಯಿಟಾ ಶೆನ್ ಟೆಯನ್ನು ಒಳ್ಳೆಯತನದಲ್ಲಿ ತೊಡಗಲು ಸಾಧ್ಯವಾಗುವಂತೆ ರಕ್ಷಿಸಬೇಕಾಗುತ್ತದೆ. ಶೆನ್ ಟೆಯನ್ನು ಸಂಕಷ್ಟಗಳಿಗೆ ಗುರಿ ಮಾಡುವ ಸುತ್ತಲಿನ ವಾತಾವರಣಕ್ಕೆ ಹೊಂದಿಕೊಂಡು ನಿಭಾಯಿಸಬೇಕಾಗುತ್ತದೆ. ಶೆನ್ ಟೆಯಾಗಿ ಜೀವನ ಸಂತೋಷ ಪಡೆದು ಜೀವನಾಧಾರ ಕಳೆದುಕೊಂಡರೆ ಶುಯಿಟಾ ಆಗಿ ಜೀವನಾಧಾರ ಪಡೆದು ಜೀವನವನ್ನು ವಿರೂಪಗೊಳಿಸಿಕೊಳ್ಳುತ್ತಾಳೆ.

ಮನುಷ್ಯನಲ್ಲಿ ಒಳ್ಳೆಯತನ ಸಹಜವಾದದ್ದು, ನಿಜ. ಆದರೆ ಅವನು ಬದುಕಿರಬೇಕಾದದ್ದು ಅಗತ್ಯ. ಇದಕ್ಕೆ ಸಾಮಾಜಿಕ ಪ್ರತಿಕೂಲಗಳು ಹಲವಾರು. ಇದರಿಂದ ಸಹಜವಾಗಿ ತೀವ್ರಾಪೇಕ್ಷೆ ಮತ್ತು ವಸ್ತುಸ್ಥಿತಿಗಳ ಸಂಘರ್ಷವುಂಟಾಗುತ್ತದೆ. ಶುಯಿಟಾನ ರೂಪದಲ್ಲಿ ಶೆನ್ ಟೆಯನ್ನು ರಕ್ಷಿಸದಿದ್ದರೆ ಶೆನ್ ಟೆ ಕ್ರಮೇಣ ಎಲ್ಲವನ್ನೂ ಕಳೆದುಕೊಂಡು ನಂತರವೂ ಒಳ್ಳೆಯವಳಾಗಿರಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೆ ಶುಯಿಟಾನ ಕ್ರೂರ, ನಿಷ್ಠುರ ನಡವಳಿಕೆಯಿಂದ ಶೆನ್ ಟೆಯ ಒಳ್ಳೆಯತನಕ್ಕೆ ಹೆಚ್ಚು ಬೆಲೆ ಬರುತ್ತದೆ. ಒಳ್ಳೆಯತನ ಅರ್ಥವಾಗಬೇಕಾದರೆ ಅದನ್ನು ಬಿಟ್ಟುಕೊಟ್ಟು ನೋಡುವುದರಿಂದ. ಆದ್ದರಿಂದ ಮನುಷ್ಯ ತನ್ನ ಸಹಜ ರೀತಿಯಲ್ಲಿ ಇರಲಾಗದಾಗುವುದೇ ದೊಡ್ಡ ದುರಂತ.

ಶೆನ್ ಟೆಯ ರೂಪದಲ್ಲಿ ಅವಳು ಪ್ರೇಮಿ ಯಾಂಗ್ ಸನ್ ಘೇ ಸಂಬಂಧಿಸಿದಂತೆ ಮಧುರವಾದ ಭಾವನೆ ಮತ್ತು ಅಭಿಲಾಷೆಗಳಿಂದ ಬಂಧಿಸಲ್ಪಡುತ್ತಾಳೆ. ಆದರೆ ಶುಯಿಟಾ ರೂಪದಲ್ಲಿ ಅವನು ಪ್ರೇಮಕ್ಕೆ ಅರ್ಹನಲ್ಲವೆಂದು ತಿಳಿಯುತ್ತಾಳೆ. ಯಾಂಗ್ ಸನ್ ಶೆನ್ ಟೆಯಿಂದ ದೊರಕುವ ಆರ್ಥಿಕ ಲಾಭಕ್ಕಾಗಿ ಹೆಚ್ಚು ತಹತಹಿಸುತ್ತಾನೆ. ಅವನ ಪಾಲಿಗೆ ಪ್ರೇಮ, ಲಾಭಗಳಿಸುವ ವಸ್ತುವಾಗುತ್ತದೆ. ತಾಯಿಯಾಗಲಿರುವ ಶೆನ್ ಟೆ ತನ್ನ ಮಗು ಮಾನವನ ಉದ್ಧಾರದ ಹುರಿಯಾಳಾಗಬೇಕೆಂದು ಯೋಚಿಸುತ್ತಾಳೆ. ಆದರೆ ತಿನ್ನಲು ಕಸದ ತೊಟ್ಟಿಯಲ್ಲಿ ಹುಡುಕುವ ಮಗುವೊಂದನ್ನು ಕಂಡು ತನ್ನ ಮಗು ಇಂತಹ ಬಡತನಕ್ಕೆ ಸಿಲುಕಬಾರದೆಂದು ಅಪೇಕ್ಷಿಸುತ್ತಾಳೆ. ತನ್ನ ಮಗುವಿಗಾಗಿ ಕ್ರೂರ ಸಮಾಜದೆದುರು ಹೆಚ್ಚಿನ ನಿರ್ಧಾರದಿಂದ ಶುಯಿಟಾನಾಗಿ ಪರಿವರ್ತಿತವಾಗುತ್ತಾಳೆ. ಆದರೆ ತನ್ನ ಶುಯಿಟಾ ರೂಪದ ಬಗ್ಗೆ ಶೆನ್ ಟೆಗೆ ನಾಚಿಕೆಯಿದೆ. ತನ್ನ ಮಗ ಶುಯಿಟಾನನ್ನು ತಿಳಿಯಬಾರದೆಂದು ಬಯಸುತ್ತಾಳೆ.

ನಾಟಕದ ಕೊನೆಯಲ್ಲಿ ದೇವರುಗಳು ಶೆನ್ ಟೆ ಮತ್ತು ಶುಯಿಟಾ ಒಂದೇ ವ್ಯಕ್ತಿಯೆಂದು ತಿಳಿದ ಮೇಲೆ ಶುಯಿಟಾ ಮಾಡಿದನೆಂದು ಹೇಳಲಾದ ಅಪರಾಧದಿಂದ ಮುಕ್ತಗೊಳಿಸುತ್ತಾರೆ. ದ್ವಂದ್ವದಿಂದ ಕೂಡಿದ್ದರೂ ಶೆನ್ ಟೆಯ ಒಳ್ಳೆಯತನವನ್ನು ಎತ್ತಿ ಹಿಡಿಯುತ್ತಾರೆ. ಇದು ಅರ್ಥಹೀನವೆನ್ನಿಸಿ ದೇವರುಗಳು ಕಾಮಿಕ್ ಆಗಿ ಕಾಣುತ್ತಾರೆ. ಏಕೆಂದರೆ ಒಳ್ಳೆಯವಳಾಗಿರು ಎಂದು ಅವರು ಅಪ್ಪಣೆ ಮಾಡಿ ಹೋದ ಮೇಲೂ ದ್ವಂದ್ವ ಹಾಗೆಯೇ ಉಳಿಯುವುದು ಅಗತ್ಯ ಮತ್ತು ಅನಿವಾರ್ಯವಾಗುತ್ತದೆ ಎನ್ನುವುದು ಸ್ಪಷ್ಟ ಸಂಗತಿ. ಸೋಲು ಮತ್ತು ಆತ್ಮವಂಚನೆಗಳ ದ್ವಂದ್ವ ನಿರಂತರವಾಗಿರಬೇಕಾಗಿರುವುದರಿಂದ ದೇವರ ಅಪ್ಪಣೆಯೂ ಅವರ ಅಪೇಕ್ಷೆ ಮಾತ್ರ ಎನ್ನಿಸುತ್ತದೆ. ದೇವರ ಅಪ್ಪಣೆಯ ನಂತರ ಶೆನ್ ಟೆ ಮೋಡಗಳ ಮೇಲೆ ತೇಲಿಹೋಗುವ ಅವರ ಕಡೆ ಆರ್ತಳಾಗಿ ಕೈಯೆತ್ತುತ್ತಾಳೆ. ಅವರ ಅಪ್ಪಣೆಯನ್ನು ಕಾರ್ಯರೂಪಕ್ಕೆ ತರುವ ಬಗೆ ಹೇಗೆಂದು ತಿಳಿಯದಾಗುತ್ತಾಳೆ. ಇದರಿಂದ ಆತ್ಮವಂಚನೆಗೆ ಗುರಿಪಡಿಸಿಕೊಳ್ಳಲೇಬೇಕಾಗುವ ಶೆನ್ ಟೆ ದುರಂತ ವ್ಯಕ್ತಿಯಾಗುತ್ತಾಳೆ. ದೇವರುಗಳು ಕೂಡ ಒಳ್ಳೆಯತನ ಮತ್ತು ಅದು ಉಳಿದುಕೊಳ್ಳಲು ದುಷ್ಟ, ನಿಷ್ಠುರ ಮಾರ್ಗವನ್ನು ಅನುಸರಿಸಬೇಕಾದ ಅನಿವಾರ್ಯವನ್ನು ಗಮನಿಸುವುದಿಲ್ಲ.

ಬ್ರೆಕ್ಟ್ ಗೆ ಎಲ್ಲ ಬಗೆಯ ಸುಳ್ಳು, ಅಂಧಾಭಿಮಾನ, ಬೂಟಾಟಿಕೆ, ಕಪಟ, ಪ್ರತಿಷ್ಠೆ, ಅಹಂಕಾರಗಳ ಬಗ್ಗೆ ತೀವ್ರ ದ್ವೇಷವಿದೆ. ಅವನ ನಾಟಕಗಳಲ್ಲೆಲ್ಲ ಅದು ನಿಚ್ಚಳವಾಗಿ ಕಾಣುತ್ತದೆ. ಸುಳ್ಳಿಗೆ ಯಾವಾಗಲೂ ಸಂಪನ್ಮೂಲ ಹೆಚ್ಚು. ಒಳ್ಳೆಯ ಬಟ್ಟೆಬರೆಯಲ್ಲಿ, ಸುಂದರ ಮಾತುಗಳಲ್ಲಿ, ಜಾಣತನದ ಮೆರುಗಿನಲ್ಲಿ ಹೊರಬಂದು ಭಾವನೆಗಳ ಉಬ್ಬರವೆಬ್ಬಿಸಿ ವಿವೇಚನೆಯ ಆಯ ತಪ್ಪುವಂತೆ ಮಾಡುತ್ತದೆ.

ಮ್ಯಾಕ್ಬೆತ್, ಈಡಿಪಸ್ ಅಥವಾ ಇತರ ದುರಂತ ನಾಯಕರಂತೆ ದುರಂತ ಘಟನೆಯನ್ನು ಬ್ರೆಕ್ಟ್ ಮುಂದಿಡುವುದಿಲ್ಲ. ದುರಂತ ಸಮಸ್ಯೆ ಹಾಗೂ ವಾತಾವರಣವನ್ನು ಚಿತ್ರಿಸುತ್ತಾನೆ. ಇವುಗಳಿಂದ ಪ್ರೇಕ್ಷಕರ ಆತ್ಮ ನಿರೀಕ್ಷಣೆಗೆ ಅವಕಾಶ ಮಾಡಿ ಕೊಡುತ್ತಾನೆ. ಗೆಲಿಲಿಯೋ ನಾಟಕದಲ್ಲಿ ಹೊಸ ಯುಗ, ಹೊಸ ಸಮಾಜ, ನವೀನ ದೃಷ್ಟಿ ಮುಂತಾದ ಅಗತ್ಯಗಳನ್ನು ಬ್ರೆಕ್ಟ್ ಪ್ರತಿಪಾದಿಸುತ್ತಾನೆ. ಸಮಾಜ ಬದಲಾಗಬೇಕೆಂದೂ ಅದಕ್ಕೆ ಸಿದ್ಧವಾಗಬೇಕೆಂದೂ ಅಪೇಕ್ಷಿಸುತ್ತಾನೆ. The Good Woman of Setzuan ನಾಟಕದಲ್ಲಿ ಇರುವ ಸಾಮಾಜಿಕ ವಾತಾವರಣಕ್ಕೆ ಹೊಂದಿಕೊಳ್ಳುವುದನ್ನು-ಅದು ದುರಂತವಾದರೂ ಸರಿಯೆ-ಅನಿವಾರ್ಯವೆಂದು ಅಭಿಪ್ರಾಯಪಡುತ್ತಾನೆ. ಮಾರ್ಕ್ಸಿಸ್ಟ್ ಸಿದ್ಧಾಂತವನ್ನು ಒಪ್ಪಿಕೊಂಡ ಬ್ರೆಕ್ಟ್ ಸಮಾಜವನ್ನು ಪರಿವರ್ತಿಸುವುದರಲ್ಲಿ ಅದೂ ದುರಂತಕ್ಕೀಡಾಗುವುದನ್ನು The Measures Taken ನಾಟಕದಲ್ಲಿ ಚಿತ್ರಿಸಿದ್ದಾನೆ. ಕಮ್ಯುನಿಷ್ಟರ ಉದ್ದೇಶಗಳೂ ಶೆನ್ ಟೆಯ ಹಾಗೆಯೇ-ಒಳ್ಳೆಯತನ, ಮಾನವತೆ, ಹೃದಯ ವೈಶಾಲ್ಯ, ಸಮಾನ ದೃಷ್ಟಿ ಇತ್ಯಾದಿಗಳು. ಆದರೆ ಕಮ್ಯುನಿಷ್ಟರು ತಮ್ಮ ಉದ್ದೇಶ ಪೂರೈಕೆಗಾಗಿ, ಈ ನಾಟಕದಲ್ಲಿ, ತಮ್ಮತನವನ್ನು ಮರೆಮಾಚಿ ಮುಖವಾಡಗಳನ್ನು ಹಾಕಿಕೊಂಡು ಹಿಂಸೆಗಾಗಿ ಹಾತೊರೆಯುವ, ಕ್ರೂರ, ಹೃದಯಹೀನ ವ್ಯಕ್ತಿಗಳಾಗಿ ಶುಯಿಟಾನಂತೆ ತೋರ್ಪಡಿಸಿ ಕೊಳ್ಳಬೇಕಾಗುತ್ತದೆ.

The Good Woman of Setzuan ನಂತೆ ಇಲ್ಲಿಯೂ ಸಾಮಾಜಿಕ ಸಂದರ್ಭದೊಂದಿಗೆ ಸಂಘರ್ಷವೇರ್ಪಡುತ್ತದೆ. ಕಮ್ಯುನಿಷ್ಟರು ಹಾಕಿಕೊಳ್ಳುವ ಮುಖವಾಡ ಇದನ್ನು ಸಂಕೇತಿಸುತ್ತದೆ. ಈ ನಾಟಕದಲ್ಲಿ ಇಂತಹ ದ್ವಂದ್ವವನ್ನೊಪ್ಪದ ಯುವ ಕಾಮ್ರೇಡನನ್ನು ಅವನ ಒಪ್ಪಿಗೆಯ ಮೇರೆಗೆ ಕೊಂದು ಹಾಕುತ್ತಾರೆ. ಆ ಕಾಮ್ರೇಡ್ ಸಾಯುವ ಮುಂಚೆ ಮುಖವಾಡವನ್ನು ತೆಗೆದುಹಾಕುತ್ತಾನೆ. ದುರಂತವನ್ನು, ದಾರುಣ ವಾತಾವರಣವನ್ನೂ ತೊಡೆದು ಹಾಕಲು ಇಷ್ಟಪಡುವ ಅವನು ದುರಂತಕ್ಕೀಡಾಗುತ್ತಾನೆ. ಬ್ರೆಕ್ಟ್ ನ ಇತರ ಪ್ರಮುಖ ನಾಟಕಗಳಾದ Mother Courage ಮತ್ತು ªÀÄvÀÄÛPuntila and his man Matti ಯಲ್ಲಿಯೂ ರೋಗಗ್ರಸ್ತ ಸಮಾಜದೆದುರು ಮನುಷ್ಯನ ಮೂಲಭೂತ ಒಳ್ಳೆಯ ಗುಣ ದುರಂತವಾಗುವುದನ್ನು ಚಿತ್ರಿಸುತ್ತಾನೆ.

The Caucasian chalk circle ಕಡೆಗೆ ಗಮನ ಹರಿಸಿದಾಗ ಈ ನಾಟಕದಲ್ಲಿ ಮೂಲ ಘಟನೆಯೊಂದಿಗೆ ಕಮ್ಯುನಿಸಂನ ತೆಳು ಅಳವಡಿಕೆಯನ್ನು ಕಾಣುತ್ತೇವೆ. ಗ್ರುಷಾ ಎಂಬ ಹುಡುಗಿ ಸಾಂದರ್ಭಿಕ ಒತ್ತಡದಿಂದ ಸಂಕಷ್ಟಗಳ ವಿರುದ್ಧ ಶ್ರಮಿಸುತ್ತ ಅನಾಥ ಮಗುವೊಂದನ್ನು ಕಾಪಾಡಲು ಹೋರಾಡುತ್ತಾಳೆ. ನಾಟಕದ ಕೊನೆಯಲ್ಲಿ ಆ ಮಗುವನ್ನು ಹೆತ್ತ ತಾಯಿ ಮತ್ತೆ ಮಗುವನ್ನು ಪಡೆಯಲು ವಿವಾದವೆತ್ತಿದಾಗ ವಿಲಕ್ಷಣ ನ್ಯಾಯಮೂರ್ತಿ ಅಜ್ಡಾಕ್ ತಾಯ್ತತನ ಮೂಲಗುಣವುಳ್ಳ ಗ್ರುಷಾಳಿಗೇ ಮಗು ದಕ್ಕುವಂತೆ ತೀರ್ಪು ಕೊಡುತ್ತಾನೆ. ನಾಟಕದ ಪೂರ್ವ ಪೀಠಿಕೆಯಲ್ಲಿ ಸಮಾಜದ ಕ್ರೂರ, ಒಳ್ಳೆಯ ಅಧಿಕಾರಸ್ಥರು ಮತ್ತು ಒಳ್ಳೆಯ ಸ್ವಭಾವದ ರೈತರನ್ನು ಬ್ರೆಕ್ಟ್ ಸ್ಥೂಲವಾಗಿ ಪರಿಚಯಿಸಿದ್ದಾನೆ.

ಗ್ರುಷಾ ತೀರ ಸಾಂಪ್ರದಾಯಿಕ ರೀತಿಯಲ್ಲಿ ಚಿತ್ರಿಸಲ್ಪಡದೆ. ಅವಳೊಬ್ಬ ಹೃದಯವಂತಳೂ ಹಾಗೂ ಚಾಣಾಕ್ಷಳಾಗಿರುವುದನ್ನು ಕಾಣುತ್ತೇವೆ. ತನ್ನನ್ನು ಬೆನ್ನಟ್ಟಿದ ಸೈನಿಕರನ್ನು ಮಣ್ಣು ಮುಕ್ಕಿಸಲು ಸೂಕ್ತ ಸಮಯ ಪ್ರಜ್ಞೆ ಮತ್ತು ವಿಚಲಿತಗೊಳ್ಳದ ನೈತಿಕ ನಿಲುವನ್ನು ತೋರ್ಪಡಿಸುತ್ತಾಳೆ. ಸಾಮಾಜಿಕ ಕಟ್ಟಳೆಯಲ್ಲಿ ಮಗುವಿಗೊಬ್ಬ ತಂದೆ ಎನಿಸಿಕೊಳ್ಳುವಂತಹ ವ್ಯಕ್ತಿ ಇರುವ ಅಗತ್ಯವನ್ನು ತಿಳಿದು ಸಾಯುವ ಸ್ಥಿತಿಯಲ್ಲಿರುವ ಒಬ್ಬಾತನನ್ನು ಮದುವೆಯಾಗುತ್ತಾಳೆ. ಆದರೆ ಯುದ್ಧ ಮುಗಿದದ್ದನ್ನು ತಿಳಿದ ಆ ವ್ಯಕ್ತಿ ಚೇತರಿಸಿಕೊಳ್ಳುತ್ತಾನೆ. ಅನಂತರವೂ ಯಾವ ಬಗೆಯ ಆತ್ಮಾನುಕಂಪವೂ ಇಲ್ಲದೆ ಗಂಡನಿಗೆ ಸಲ್ಲಬೇಕಾದ ಗೌರವವನ್ನು ಕೊಡುತ್ತಾಳೆ, ಗ್ರುಷಾ. ತನ್ನ ಪ್ರೇಮಿ ಸೈಮನ್ ಹಿಂತಿರುಗಿದಾಗ ತನ್ನ ಚಾರಿತ್ರ್ಯವನ್ನು ಅನುಮಾನಿಸಲು ಅವಕಾಶ ಕೊಡುತ್ತಾಳೆಯೇ ಹೊರತು ಮಗುವನ್ನು ಶತ್ರುಗಳಿಗೆ ಒಪ್ಪಿಸುವ ಹೀನ ಸ್ಥಿತಿಗೆ ತಲುಪುವುದಿಲ್ಲ.

ಗ್ರುಷಾ ಆಡುವ ಮಾತುಗಳು ಅನೇಕ ಗಾದೆ ಮತ್ತು ಪ್ರಾದೇಶಿಕ ವಿಶಿಷ್ಟತೆಯಿಂದ ಕೂಡಿವೆ. ಮಗುವನ್ನು ಮಲಗಿಸಲು ಹಾಡುವ ಜೋಗುಳ ಜರ್ಮನ್ ಜಾನಪದ ರೂಪದಲ್ಲಿದ್ದೂ ಆಧುನಿಕತೆಯನ್ನು ಉಳಿಸಿಕೊಂಡಿದೆ. ಈ ರೀತಿ ಭಾಷೆಯನ್ನು ಬಳಸುವುದರಿಂದ ಬ್ರೆಕ್ಟ್ ಗ್ರುಷಾಳನ್ನು ಕಲಾರೂಪವಾಗಿ ಸೃಷ್ಟಿಸಿ ಅವಳ ವಾಸ್ತವ ಸ್ಥಿತಿಯಿಂದಾಚೆ ನಾವು ನಿರುಕಿಸುವಂತೆ ಮಾಡುತ್ತಾನಲ್ಲದೆ ಒಂದು ರೀತಿಯಲ್ಲಿ ನಮ್ಮನ್ನೇ ನಾವು ಮರುಸೃಷ್ಟಿಸಿಕೊಳ್ಳುವಂತಾಗುತ್ತದೆ. ಇದಕ್ಕೆ ಗ್ರುಷಾ ಮತ್ತು ಸೈಮನ್ ನದಿಯೊಂದರ ಆಚೆ-ಈಚೆ ದಡದಲ್ಲಿ ನಿಂತು ಸಂಭಾಷಿಸುವ ಸಂದರ್ಭ ಉತ್ತಮ ಉದಾಹರಣೆ.

ರೈತರಿಗೆ ಸಹಜವಾದ ಗಾದೆಗಳ ಮುಖಾಂತರ ಮಾತಾಡುವ ಅವರು ಒಂದು ರೀತಿಯಲ್ಲಿ ವೈಯಕ್ತಿಕ ಅನ್ವಯದಿಂದ ಹೊರತಾದಂತೆ ಕಾಣುತ್ತದೆ. ಆದರೆ ಮತ್ತೊಂದು ಆಯಾಮದಲ್ಲಿ ಅವರಿಬ್ಬರ ಸಂಬಂಧದ ತೀವ್ರತೆಯನ್ನು ಅರಿವು ಮಾಡಿಕೊಡುತ್ತದೆ. ಇಬ್ಬರೂ ಭಾವನೆಗಳ ಔನ್ನತ್ಯದಲ್ಲಿ ಮಾತನಾಡದೆ ಸುಮ್ಮನೆ ನಿಲ್ಲುತ್ತಾರೆ. ಇದರಿಂದಾಗಿ ನಿರೂಪಕನಿಗೆ ಅವರು ಯೋಚಿಸಿದ್ದನ್ನೂ ಮತ್ತು ಹೇಳಲಾಗದಿದ್ದುದನ್ನೂ ಪ್ರೇಕ್ಷಕರಿಗೆ ತಿಳಿಸಬೇಕಾಗುತ್ತದೆ.

ದಂಗೆಯಾದ ನಂತರ ನಿರೂಪಕ ಇಡೀ ಪ್ರಸಂಗದ ನಿರೂಪಣೆ ಕೊಡುತ್ತಾನೆ. ನಿರೂಪಣೆಯ ನಿರ್ಭಾವ ಇಡೀ ಪ್ರಸಂಗದ ತೀವ್ರತೆಯನ್ನು ಹೆಚ್ಚಿಸಿದೆ. ನಾಟಕದಲ್ಲಿ ಶೈಲಿ ಆಗಿಂದಾಗ್ಗೆ ಗದ್ಯದಿಂದ ಪದ್ಯಕ್ಕೆ ತಿರುಗುತ್ತದೆ. ಇದು ಉಂಟು ಮಾಡುವ ಒಟ್ಟಾರೆ ಕಲಾವಂತಿಕೆಯನ್ನು ಸೈಮನ್ ನನ್ನು ಮೊದಲ ಬಾರಿಗೆ ಬೀಳ್ಕೊಟ್ಟ ಮೇಲೆ ಗ್ರುಷಾಳ ಲಯಗಾರಿಕೆಯ ಮಾತುಗಳಲ್ಲಿ ಕಾಣಬಹುದು. ಇಂತಹ ಸುಲಲಿತ ಭಾಷೆಯಿಂದ ಅಜ್ಡಾಕ್ ನ ಮೊದಲ ಭಾಷಣದಲ್ಲಿ ಗಡುಸಿನಿಂದ ಕೂಡಿದ ಭಾಷೆಯನ್ನು ಕಾಣುತ್ತೇವೆ. ಈ ಮಾತುಗಳು ಹಾಸ್ಯ, ಒರಟುತನ ಮತ್ತು ಸಿನಿಸಿಸಂನಿಂದ ಕೂಡಿದ್ದರೂ ಅದರ ಹಿಂದೆ ಅನುಕಂಪದ ಛಾಯೆ ಇರುವುದನ್ನು ಗಮನಿಸಬೇಕಾಗುತ್ತದೆ.

ನ್ಯಾಯಮೂರ್ತಿ ಅಜ್ಡಾಕ್ ಭ್ರಷ್ಟ ಹಾಗೂ ಕಾನೂನಿನ ಬಗ್ಗೆ ತಿರಸ್ಕಾರವಿರುವ ವ್ಯಕ್ತಿ. ಅಜ್ಡಾಕನ ಜೀವನ ಗ್ರುಷಾಳಂತೆ ಸಮಾಜದ ನೈತಿಕ ಸ್ತರಗಳನ್ನು ಮೀರಿ ರೂಪುಗೊಂಡದ್ದಲ್ಲ-ಅವುಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡದ್ದು. ವಿದೂಷಕನಂತೆ ವಿಲಕ್ಷಣ ಮತ್ತು ಊಹಿಸಲಾಗದ ರೀತಿಯಲ್ಲಿ ವರ್ತಿಸುವ ಅವನ ಪ್ರಖರ ನ್ಯಾಯ ದೃಷ್ಟಿ ಮಾತ್ರ ಸಮತೋಲದಲ್ಲಿದೆ. ಅವನು ಲಂಚ ತೆಗೆದುಕೊಳ್ಳುತ್ತಾನೆ. ಲಂಚದ ಹಣ ನ್ಯಾಯ ಕೇಳುವವರ ಹುಸಿತನಕ್ಕೆ ಪ್ರಮಾಣ ರೂಪದಲ್ಲಿ ಇರುವುದೆಂದು ಅವನು ಬಲ್ಲ. ಬಡವರಿಗೆ ನ್ಯಾಯ ವಿಮುಖವಾಗಿದೆ ಎಂದು ನಂಬಿದ ಅಜ್ಡಾಕ್ ಅವರಿಗದನ್ನು ದೊರಕಿಸಿಕೊಡಲು ವಿಲಕ್ಷಣವೆನ್ನಿಸುವಂಥ ತೀರ್ಪುಗಳನ್ನು ಕೊಡುತ್ತಾನೆ. ಅವನು ಕೇಸುಗಳನ್ನು ಹಠಾತ್ ಪ್ರವೃತ್ತಿಯಿಂದ ನಿರ್ವಹಿಸುತ್ತಾನೆ. ಹೀಗಾಗಿ ಅಜ್ಡಾಕ್ ದೂಷಿಸುವವನಂತೆ, ವಿಶಾಲ ಹೃದಯಿಯಂತೆ, ಬುದ್ಧಿವಂತನಂತೆ, ಸಾತ್ವಿಕನಂತೆ, ಅವಿವೇಕಿಯಂತೆ, ಭ್ರಷ್ಟನಂತೆ ಇತ್ಯಾದಿ ಮಿಶ್ರಣಗಳ ವ್ಯಕ್ತಿಯಂತೆ, ಕಾಣುತ್ತಾನೆ. ಇವೆಲ್ಲ ಕಾರಣಗಳಿಂದ ಅಜ್ಡಾಕ್ ನಮ್ಮ ವಿವೇಚನೆಗೆ ಕುಮ್ಮಕ್ಕು ಕೊಡುತ್ತಾನೆ. ಅವನು ವ್ಯಕ್ತಿಯ ವಿಶೇಷ ಗುಣಗಳನ್ನು ತಿರಸ್ಕರಿಸುತ್ತಾನೆ; ಪಶ್ಚಾತ್ತಾಪಗಳನ್ನು ಅಣಕಿಸುತ್ತಾನೆ; ಧೈರ್ಯವನ್ನು ಲೇವಡಿ ಮಾಡುತ್ತಾನೆ. ಈ ಎಲ್ಲ ವೈಪರೀತ್ಯಗಳ ಮೂಲಕವೂ ಅವನು ಪ್ರೇಕ್ಷಕರ ಮೆಚ್ಚುಗೆ ಗಳಿಸುತ್ತಾನೆ.

ಸ್ಥಾನ ಕಳೆದುಕೊಂಡು ಡ್ಯೂಕ್ ನನ್ನು ಉಳಿಸಿ ಮತ್ತೆ ನ್ಯಾಯಮೂರ್ತಿಯ ಸ್ಥಾನಕ್ಕೆ ಬಂದ ಅಜ್ಡಾಕ್ ಕೊನೆಯ ದೃಶ್ಯದಲ್ಲಿ ಮಗುವಿನ ನಿಜವಾದ ತಾಯಿ ಯಾರೆಂದು ತೀರ್ಪು ಕೊಡಬೇಕಾಗುತ್ತದೆ. ಇಲ್ಲೂ ಕೂಡ ಅಜ್ಡಾಕ್ ಲಂಚ ತೆಗೆದುಕೊಳ್ಳುವುದರಿಂದ ಪ್ರಾರಂಭಿಸುತ್ತಾ ಮತ್ತು ಲಂಚ ಕೊಡದ ಗ್ರುಷಾಳನ್ನು ಹೀಯಾಳಿಸುತ್ತಾನೆ. ನ್ಯಾಯಮೂರ್ತಿ ಬಗ್ಗೆ ತನಗೆ ಎಳ್ಳಷ್ಟೂ ಗೌರವವಿಲ್ಲವೆಂದು ಗ್ರುಷಾ ಪ್ರತಿಭಟಿಸುತ್ತಾಳೆ. ಇದರಿಂದ ಅಜ್ಡಾಕನ ಮುಕ್ತ ಪ್ರಜ್ಞೆಯನ್ನು ನೇರವಾಗಿ ಚುಚ್ಚುತ್ತಾಳೆ. Chalk circle ಪ್ರಕರಣದಲ್ಲಿ ಮಗುವನ್ನು ನೋಯಿಸಲು ಇಷ್ಟಪಡದೆ ಗ್ರುಷಾ ಸೋಲುತ್ತಾಳೆ. ತಾಯ್ತನದ ಭಾವನೆಯನ್ನು ಪ್ರದರ್ಶಿಸಿ ಅಜ್ಡಾಕ್ ನಿಂದ ತನ್ನ ಪರವಾಗಿ ತೀರ್ಪು ಗಳಿಸುತ್ತಾಳೆ. ಇದರಿಂದ ಕೇವಲ ಅಹಿತಕರ ಪ್ರಕರಣದಲ್ಲಿ ಭಾವುಕತನಕ್ಕೆ (S Sentimentality) ಜಯ ದೊರಕಿತೆಂಬ ಅರ್ಥ ಬರುವುದಿಲ್ಲ. ಒಳ್ಳೆಯ ಗುಣವನ್ನು ಗೌರವಿಸದ ಅಜ್ಡಾಕ್ ಮನುಷ್ಯನ ಮೂಲ ಪ್ರವೃತ್ತಿಯಾದ ಒಳ್ಳೆಯತನಕ್ಕೆ ಅವನಿಗರಿವಿಲ್ಲದೆಯೇ ಮಣಿಯಬೇಕಾಗುತ್ತದೆ. ಒಳ್ಳೆಯತನವನ್ನು ವಿರೋಧಿಸುತ್ತಲೇ ಒಳ್ಳೆಯತನಕ್ಕೆ ಬೆಲೆಕೊಟ್ಟು ಅಜ್ಡಾಕ್ ನ್ಯಾಯದ ಬೆಲೆ ಹೆಚ್ಚಿಸಿ ಶ್ರೇಷ್ಠನೆನಿಸುತ್ತಾನೆ. ಪ್ರಕೃತಿಯಂತೆ ಮಾನವನ ನಡವಳಿಕೆಯೂ ಸಂದಿಗ್ಧಪೂರ್ಣ. ನಿರೂಪಕ ಹೇಳುವಂತೆ ಅಜ್ಡಾಕ್ ನ್ಯಾಯಮೂರ್ತಿಯಾಗಿ ಕಳೆದ ದಿನಗಳು ನ್ಯಾಯದ golden age ಎನ್ನುವುದು ಅನ್ವರ್ಥವಾಗಿದೆ. ಮಾನವತೆಯ ನೆಲೆಯನ್ನು ಉತ್ತಮ ಹಂತಕ್ಕೇರಿಸುವುದರ ಮೂಲಕ ಮುಕ್ತಾಯವಾಗುವ ಬ್ರೆಕ್ಟ್ ನ ಈ ನಾಟಕ ಅವನ ಇತರ ಪ್ರಮುಖ ನಾಟಕಗಳಂತೆ ಪ್ರೇಕ್ಷಕರನ್ನು ಆತ್ಮ ನಿರೀಕ್ಷಣೆಗೆ ಒಡ್ಡುತ್ತದೆ.