ಆಗ ನಮ್ಮೂರಿನಲ್ಲಿ ಕ್ಷೌರದ ಅಂಗಡಿ ಇರಲಿಲ್ಲ. ಕ್ಷೌರಿಕರಿದ್ದರು. ಕ್ಷೌರ ಮಾಡಿಸಿಕೊಳ್ಳಬೇಕಾದವರು ಒಂದೋ ಕ್ಷೌರಿಕರ ‘ಕೊಟ್ಟಿಗೆ’ಗೆ ಹೋಗಬೇಕಾಗಿತ್ತು, ಇಲ್ಲವೇ ಅವರಿಗೆ ಹೇಳಿಕಳಿಸಬೇಕಾಗಿತ್ತು. ಹಳ್ಳಿಗಳಲ್ಲಿ ಕ್ಷೌರಿಕರಿಗೆ ಪಾರಂಪರ್ಯವಾಗಿ ನಿಗದಿಯಾದ ಗಡಿಗಳಿದ್ದುವು; ಆ ಗಡಿಯೊಳಗೇ ಅವರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದುದು. ಅವರು ಕೇವಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದವರೂ ಅಲ್ಲ; ಅವರಿಗೆ ಅಲ್ಪ ಸ್ವಲ್ಪ ಹೊಲ ಮನೆಗಳೂ ಇದ್ದುವು. ಕ್ಷೌರಿಕರು ಹೆಚ್ಚಾಗಿ ಹಳ್ಳಿಯಲ್ಲಿ ತಮ್ಮ ಸಲಕರಣೆ ಚೀಲಗಳನ್ನು ಕಂಕುಳಲ್ಲಿರಿಸಿಕೊಂಡು ರೌಂಡ್ ಸುತ್ತುತ್ತಿದ್ದರು. ಅವರು ಮನೆಯತ್ತ ಬಂದಾಗಲೇ ಜನ ಕೂದಲು ತೆಗೆಸಿಕೊಳ್ಳುತ್ತಿದ್ದುದು. ಮಕ್ಕಳಂತೂ ಹೀಗೆಯೇ. ಅಂಗಳದಾಚೆ ಯಾವುದಾದರೊಂದು ಮರದ ಕೆಳಗೆ ಕುಕ್ಕರಗಾಲಿನಲ್ಲಿ ಕುಳಿತುಕೊಂಡು ಕ್ಷೌರಿಕನಿಗೆ ತಲೆ ಒಪ್ಪಿಸಿ ಕೊಡುವುದು ಪದ್ಧತಿ.
ಕವಿ ಕೆ. ವಿ. ತಿರುಮಲೇಶ್ ಬರೆದ ಲೇಖನ

 

ತಲೆಗೂದಲು ಕತ್ತರಿಸುವ ‘ಕತ್ತರಿ’ ಬಹುಶಃ ಒಂದು ಬಹು ಪ್ರಾಚೀನ ಉಪಕರಣ. ಯಾರು ಅದನ್ನು ಆವಿಷ್ಕರಿಸಿದರು, ಎಲ್ಲಿಂದ ಶುರುವಾಯಿತು, ಅದಕ್ಕೂ ಮೊದಲು ಮಾನವರು ಕೂದಲು ತೆಗೆಯುತ್ತಿದ್ದರೇ ಇಲ್ಲವೇ, ತೆಗೆಯುತ್ತಿದ್ದರೆ ಹೇಗೆ ತೆಗೆಯುತ್ತಿದ್ದರು ಎನ್ನುವುದೆಲ್ಲ ನಿಖರವಾಗಿ ಯಾರಿಗೂ ಗೊತ್ತಿಲ್ಲ. ಪುರಾತನ ರೋಮನರಲ್ಲಿ ಅದು ಬಳಕೆಯಲ್ಲಿತ್ತು ಎನ್ನುತ್ತಾರೆ. ಬಹುಶಃ ದಾಡಿ ಹೆರೆಯುವ ಬಾಳು ಸಹಾ ಅವರಲ್ಲಿ ಇದ್ದಿರಬೇಕು. ಎಲ್ಲವೂ ನಮ್ಮಲ್ಲಿತ್ತು ಎನ್ನುವ ಭಾರತದಲ್ಲಿ? ಪುರಾತನ ಋಷಿ ಮುನಿಗಳ ಬಗೆಗಿನ ನಮ್ಮ ಕಲ್ಪನೆಯಲ್ಲಿ ಕೆ. ವಿ.ಅವರು ಕೂದಲು ತೆಗೆಯುತ್ತಲೇ ಇರಲಿಲ್ಲ – ಕಾರಣ? ಕ್ಷೌರಿಕರು ಅವರಿದ್ದ ಕಾಡುಗಳಿಗೆ ಬರುತ್ತಿರಲಿಲ್ಲ! ಆದರೆ ರಾಮ, ಕೃಷ್ಣ, ಬಲರಾಮ, ಅರ್ಜುನ ಮುಂತಾದವರ ಕುರಿತಾದ ನಮ್ಮ ಕಲ್ಪನೆ ‘ಕ್ಲೀನ್ ಶೇವನ್’ ಮತ್ತು ಭುಜದವರೆಗೆ ತಲೆಗೂದಲು ಕತ್ತರಿಸಿದಂಥದು.

(ಝೆವೂಸ್)

ಗ್ರೀಕರ ದೇವರ ದೇವ ಝೆವೂಸ್ ಗಡ್ಡ ಮೀಸೆ ಸಮೇತ ಚಿತ್ರಿಸಲ್ಪಟ್ಟರೆ, ಹಿಂದೂ ತ್ರಿಮೂರ್ತಿಗಳಲ್ಲಿ ವಿಷ್ಣು ಮತ್ತು ಶಿವ ‘ಕ್ಲೀನ್ ಶೇವನ್’, ಬ್ರಹ್ಮನಿಗೆ ಮಾತ್ರ ಗಡ್ಡ ಮೀಸೆ. ಯುವ ಇಮೇಜ್ ಇರುವವರು ಕ್ಲೀನ್ ಶೇವನ್, ವಡ್ಡಾರಾಧನೆಯ (ವೃದ್ಧ) ಇಮೇಜಿನವರು ಪೊದೆ ಗಡ್ಡದವರು. ಯಕ್ಷಗಾನ ವೇಷಗಳೂ ಹಾಗೆಯೇ: ಭೀಷ್ಮ ಬಿಳಿ ಗಡ್ಡಧಾರಿ. ವ್ಯಕ್ತಿ ಘನತೆಗೂ ಕೂದಲು (ಗಡ್ಡ ಸೇರಿದಂತೆ) ಬೆಳೆಸುವುದಕ್ಕೂ ಸಂಬಂಧವಿರಬಹುದೇ? ಗ್ರೀಸಿನಲ್ಲಿರುವ ಸಾಕ್ರೆಟಿಸ್ ಪ್ರತಿಮೆಗಳು ಗಡ್ಡ ಬೆಳೆಸಿದ ಸಾಕ್ರೆಟಿಸನ್ನೇ ತೋರಿಸುವುದು. ‘ಕ್ಲೀನ್ ಶೇವನ್’ ಸಾಕ್ರೆಟಿಸನ್ನ ಊಹಿಸುವುದಕ್ಕೂ ನಮಗೆ ಸಾಧ್ಯವಿಲ್ಲ. ಪುರಾತನ ಮತ್ತು ಮಧ್ಯಕಾಲೀನ ಅನೇಕ ಗ್ರೀಕ್ ಮತ್ತು ರೋಮನ್ ತತ್ವಜ್ಞಾನಿಗಳು ಗಡ್ಡ ಬಿಟ್ಟವರೇ.

ಆದರೆ ಪುರಾತನ ಕಾಲದ ರೋಮನ್ ಪುರುಷರು ಕ್ಲೀನ್ ಶೇವನ್ ಆಗಿದ್ದರು, ಆದ್ದರಿಂದ ರೋಮನರಲ್ಲಿ ಕ್ಷೌರಿಕರು ಇದ್ದಿರಲೇ ಬೇಕು. ರೋಮಿನಲ್ಲಿದ್ದ ಜೀತದವರು ದಾಡಿ ಬಿಡುವುದು ಕಡ್ಡಾಯವಾಗಿತ್ತು. ಬಹುಶಃ ಗುರುತಿಗೆ. ಈಗ ಇಂಗ್ಲಿಷ್ ಭಾಷೆಯಲ್ಲಿ ಇರುವ ‘ಬಾರ್ಬರ್’ ಎನ್ನುವ ಪದ ಲ್ಯಾಟಿನ್ ಮೂಲದ್ದು; ಲ್ಯಾಟಿನ್ನಲ್ಲಿ ‘ಬಾರ್ಬ’ ಎಂದರೆ ಗಡ್ಡ (ದಾಡಿ). ಹಿಂದಿನ ಕಾಲದಲ್ಲಿ ಕ್ಷೌರಿಕರು ಸಣ್ಣ ಮಟ್ಟಿನ ‘ಶಸ್ತ್ರ ಚಿಕಿತ್ಸಕರು’ ಕೂಡ ಆಗಿದ್ದರೆಂದು ಕಾಣುತ್ತದೆ, ಬಹುಶಃ ಅವರಿಗೆ ಹರಿತವಾದ ಹತ್ಯಾರಗಳ ಬಳಕೆಯಿದ್ದ ಕಾರಣ!

‘ಸಿಸೇರಿಯನ್ ಪ್ರಸವ’ (ಸಿ-ಸೆಕ್ಷನ್) ಎಂಬ ಹೆರಿಗೆಯೊಂದಿದೆಯಷ್ಟೆ -ಶಿಶುವನ್ನು ತಾಯಿಯ ಗರ್ಭದಿಂದ, ತಾಯಿಗೆ ಅಪಾಯವಾಗದಂತೆ, ಕೊರೆದು ತೆಗೆಯುವುದು. ಇಲ್ಲಿ ‘ಸಿಸೇರಿಯನ್’ ಪದ ‘ಸಿಸರ್ಸ್’ (ಕತ್ತರಿ) ಎಂಬ ಪದದಿಂದ ಬಂದುದು ಎಂದು ಕೆಲವರು ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಆದರೆ ಇವೆರಡಕ್ಕೆ ನೇರವಾದ ಸಂಬಂಧವಿಲ್ಲ, ಆದರೆ ಬಳಸು ಸಂಬಂಧವಿದೆ: ‘ಸಿಸರ್ಸ್’ನ ವ್ಯುತ್ಪತ್ತಿಯಲ್ಲಿ ‘ಕತ್ತರಿಸು’ ಎಂಬುದಕ್ಕೆ ಲ್ಯಾಟಿನ್ ನಲ್ಲಿನ ಧಾತು ಇದೆ; ಆದರೆ ‘ಸಿಸೇರಿಯನ್ ಪ್ರಸವ’ದಲ್ಲಿನ ‘ಸಿಸೇರಿಯನ್’ ಪದ ರೋಮನ್ ಸಾಮ್ರಾಟ ಜೂಲಿಯಸ್ ಸೀಸರ್ ನ ಹೆಸರಿನಿಂದ ಬಂದುದು; ಆತನ ಜನನ ಇಂಥ ಶಸ್ತ್ರ ಚಿಕಿತ್ಸೆಯಿಂದ ಆಯಿತು ಎಂಬ ದಂತಕತೆಯಿದೆ. ಸ್ವಾರಸ್ಯವೆಂದರೆ ‘ಸೀಸರ್’ ಕೂಡ ಲ್ಯಾಟಿನ್ ಮೂಲದಲ್ಲಿ ‘ರೋಮ / ಕೂದಲು’ ಎಂಬ ಅರ್ಥ ಕೊಡುವಂಥದು; ಆದ್ದರಿಂದ ‘ಸೀಸರ್’ ಎಂದರೆ ಧಾರಾಳ ರೋಮ ಇರುವವನು ಎಂದು ಅರ್ಥ. ಅಂಥವನಿಗೆ ಕತ್ತರಿಯ ಅಗತ್ಯ ಇದ್ದೇ ಇದೆ! ಹೀಗೆ ‘ಸಿಸರ್ಸ್’ ಮತ್ತು ‘ಸಿಸೇರಿಯನ್’ ಪದಗಳು ಮೂಲದಲ್ಲಿ ಕತ್ತರಿ ಪ್ರಯೋಗಕ್ಕೆ ಸಂಬಂಧ ಪಟ್ಟ ವಿಷಯಗಳೇ!

ಇನ್ನು ಆಧುನಿಕ ಕಾಲಕ್ಕೆ ಬಂದರೆ ಚಾರ್ಲ್ಸ್ ಡಾರ್ವಿನ್, ಕಾರ್ಲ್ ಮಾರ್ಕ್ಸ್, ಲಿಯೋ ಟಾಲ್ ಸ್ಟಾಯ್, ಬರ್ನಾರ್ಡ್ ಶಾ, ವಾಲ್ಟ್ ವ್ಹಿಟ್ಮನ್, ರವೀಂದ್ರನಾಥ ಠಾಕೂರ್, ಪೆರಿಯಾರ್ ರಾಮಸ್ವಾಮಿ, ನಮ್ಮ ಜಿ.ವಿ. ಅಯ್ಯರ್ ಕೂಡ ಈ ಹುಲುಸು ಗಡ್ಡದ ವರ್ಗಕ್ಕೆ ಸೇರಿದವರೇ. ಮಹಾತ್ಮಾ ಗಾಂಧಿ ಗಡ್ಡ ಬೆಳೆಸಬೇಕಿತ್ತು, ಆದರೆ ಬೆಳೆಸಲಿಲ್ಲ. ಮೀಸೆ ಮಾತ್ರ ಇಟ್ಟುಕೊಂಡಿದ್ದರು. ಅವರ ಅನುಯಾಯಿಗಳು ಕೆಲವರು ಹುಲುಸು ಗಡ್ಡ ಬೆಳೆಸಿದ್ದಾರೆ. ಗಾಂಧೀಜಿ ತಮ್ಮ ಗಡ್ಡವನ್ನು ದಿನ ನಿತ್ಯ ತಾವೇ ಹೆರೆದುಕೊಳ್ಳುತ್ತಿದ್ದರೋ ಅಥವಾ ಕ್ಷೌರಿಕರಿಂದ ಮಾಡಿಸಿಕೊಳ್ಳುತ್ತಿದ್ದರೋ ತಿಳಿಯದು. ಇದರ ಪ್ರಸ್ತಾಪ ನಾನೆಲ್ಲೂ ಕಂಡಿಲ್ಲ. ಗಡ್ಡದ ಗಾಂಧಿಯ ಫೋಟೋವನ್ನೂ ನೋಡಿಲ್ಲ. ಇನ್ನು ಫ್ಯಾಶನಬಲ್ (ತರಾವಳಿಯಾಗಿ ಟ್ರಿಮ್ ಮಾಡಿದ) ಗಡ್ಡಧಾರಿಗಳು ಅನೇಕ ಮಂದಿ ಇದ್ದಾರೆ –ಏಬ್ರಹಾಂ ಲಿಂಕನ್, ಫ್ರಾಯ್ಡ್, ಲೆನಿನ್, ಬುಲ್ಗನಿನ್, ಚೆ ಗವೇರಾ ಮುಂತಾಗಿ. ಇದು ಪ್ರತ್ಯೇಕ ಸಂಗತಿ.

(ಚಾರ್ಲ್ಸ್ ಡಾರ್ವಿನ್)

ಈ ಹುಲುಸು ಗಡ್ಡಕ್ಕೆ ಇರುವ ಹಿರಿತನ, ಒಳ್ಳೆಯತನ, ಗೌರವ, ಧಾರ್ಮಿಕತೆ, ಜ್ಞಾನೀಯತೆ, ಸನ್ಯಾಸತ್ವ, ತ್ಯಾಗ ಭಾವ, ನಿಸ್ವಾರ್ಥತೆ, ಕ್ರಾಂತಿಕಾರೀ ಗುಣ ಇತ್ಯಾದಿ ಸಾಮಾಜಿಕ ಮೌಲ್ಯಗಳ ಕಾಲ್ಪನಿಕ ಸಂಬಂಧವನ್ನು ದುರುಪಯೋಗ ಪಡಿಸಿಕೊಂಡು ಅನಾಚಾರ (ಬಲಾತ್ಕಾರ, ಕೊಲೆ, ಹಾದರ, ಭ್ರಷ್ಟಾಚಾರ ಇತ್ಯಾದಿ) ಎಸಗುವ ಕಪಟಿ ಗಡ್ಡಧಾರಿಗಳೂ ಇದ್ದಾರೆ ಎನ್ನುವುದು ಮುಖ್ಯ. ಆದರೆ ಈ ಮಾರ್ಕ್ಸ್, ಟಾಲ್ ಸ್ಟಾಯ್ ಮುಂತಾದವರು ನಿಜವಾಗಿಯೂ ಯಾಕೆ ಗಡ್ಡ ಬಿಟ್ಟರು? ಕ್ರಾಂತಿಗೆ, ಅವರು ಸಾಧಿಸಿಕೊಂಡು ಬಂದ ಐಡಿಯಾಲಜಿಗೆ ಅದು ಅಗತ್ಯವಿತ್ತೆ? ಇಲ್ಲವೇ, ಸುಮ್ಮಗೆ ಯಾಕೆ ತೆಗೆಯುವ ಕೆಲಸ, ಐ ಡೋಂಟ್ ಕೇರ್ ಎಂಬ ಮನೋಭಾವದಿಂದಲೇ, ಅಥವಾ ಅದು ಮುಖಕ್ಕೊಂದು ಶೋಭೆ ತರುತ್ತದೆ ಎಂಬ ಧೋರಣೆಯಿಂದಲೇ?

ಕೆಲವು ಧರ್ಮಗಳಲ್ಲಿ ಗಡ್ಡಕ್ಕೊಂದು ‘ಅರ್ಥ’ವಿರಬಹುದು – ಉದಾ: ಯೆಹೂದಿ, ಇಸ್ಲಾಂ, ಪಾರ್ಸಿ, ಸಿಖ್ ಮುಂತಾದ ಧರ್ಮಗಳಲ್ಲಿ (ಬಹುಶಃ ಹಿಂದೂಯಿಸಂನಲ್ಲಿ ಕೂಡ). ಆದರೆ ಮಾರ್ಕ್ಸ್, ಪೆರಿಯಾರ್ ಮುಂತಾದವರಿಗೆ ಯಾವ ಧಾರ್ಮಿಕತೆಯೂ ಇರಲಿಲ್ಲ; ಅವರು ಎಲ್ಲಾ ರೀತಿಯ ಧಾರ್ಮಿಕತೆಗೂ ವಿರುದ್ಧವಾಗಿದ್ದರು. ಆದರೆ ಈ ಉದ್ದದ ಗಡ್ಡವಿದೆಯಲ್ಲ, ಅದು ಕ್ರಾಂತಿಕಾರರನ್ನೂ ಧಾರ್ಮಿಕರನ್ನೂ ನೋಟದಲ್ಲಾದರೂ ಒಟ್ಟು ಸೇರಿಸಿರುವುದು ವಿಚಿತ್ರ. ಇದೆಲ್ಲ ಅವರವರ ವೈಯಕ್ತಿಕ ವಿಷಯ ಅನ್ನಬಹುದು; ಆದರೆ ಸಾರ್ವಜನಿಕ ಕ್ಷೇತ್ರವನ್ನು ಪ್ರಭಾವಿಸುವ ಯಾವುದೂ ಕೇವಲ ವೈಯಕ್ತಿಕವಲ್ಲ. ಪ್ರತಿಯೊಂದೂ ಅರ್ಥಪೂರ್ಣವೇ. Nothing is empty of meaning!

ನನಗಿಂತ 20 ವರ್ಷದಷ್ಟು ಹಿರಿಯರಾಗಿದ್ದ ನನ್ನ ಅಣ್ಣನಿಗೆ ನನಗರಿವಾದಾಗ ತಲೆಯಲ್ಲಿ ಜುಟ್ಟಿತ್ತು. ಅದು ತಲೆಯ ಮುಂಬದಿಯ ಕೂದಲನ್ನು ಕತ್ತರಿಸಿ ತೆಗೆಸಿ, ಶಿಖಾ ಸ್ಥಾನದಲ್ಲಿ ಇರಿಸಿಕೊಂಡ ಒಂದು ತುಂಬು ಹಿಡಿಯಷ್ಟು ಮೊತ್ತದ ತಲೆಗೂದಲು. ಅದಕ್ಕೇ ಜುಟ್ಟು ಹಾಕಿಕೊಳ್ಳುತ್ತಿದ್ದ. ಆಗಿನ ಕಾಲದ ಆ ಕಡೆಯ ಬ್ರಾಹ್ಮಣ ಯುವಕರ ತಲೆಗೂದಲ ಶೈಲಿ ಅದಾಗಿತ್ತು ಎಂದು ಕಾಣುತ್ತದೆ. ಆದರೆ ಇಂಥ ಜುಟ್ಟನ್ನು ತೆಗೆಯುವ ಕ್ರಾಂತಿಕಾರಕ ಬೆಳವಣಿಗೆಯೊಂದು ಆಗಲೇ ಸುರುವಾಗಿತ್ತು ಕೂಡ. ಅದನ್ನು ಕತ್ತರಿಸಿದವರು ಕೆಲವರು, ಕತ್ತರಿಸುವುದನ್ನು ವಿರೋಧಿಸುತ್ತಿದ್ದವರು ಇನ್ನು ಕೆಲವರು. ಒಂದು ದಿನ ಅಣ್ಣ ತನ್ನ ಜುಟ್ಟನ್ನು ತೆಗೆಸಿಯೇಬಿಟ್ಟ.

ಇದರಿಂದ ಅತ್ಯಂತ ಬೇಸರಕ್ಕೊಳಗಾದವಳೆಂದರೆ ನಮ್ಮ ತಾಯಿ. ಗೋವಿನ ಹಾಡಿನ ಗೊಲ್ಲನೇ ತನ್ನ ‘ಚದುರ ಶಿಖೆ’ಯನ್ನು ಕತ್ತರಿಸಿಬಿಸಾಕಿದಂತೆ ಅನಿಸಿರಬೇಕು ಆಕೆಗೆ. ಯಾಕೆಂದರೆ ಈ ಶಿಖೆ ಕೆಲವೊಂದು ಮೌಲ್ಯಗಳ ಸಂಕೇತವಾಗಿತ್ತು. ‘ಚದುರ’ ಎಂಬ ಪದಕ್ಕೆ ‘ಸೊಗಸಾದ’ ಎಂಬ ಅರ್ಥವೂ ಇದೆ. ಆದರೆ ಅಣ್ಣನಿಗೆ ಜುಟ್ಟಿನ ಸೊಗಸು ಬೇಕಿರಲಿಲ್ಲ. ಅದೊಂದು ಹಳೆತನದ ಭಾರವಾಗಿತ್ತು. ಅವನಿಗೆ ಈಗಾಲೇ ಮದುವೆಯಾಗಿ ಮಕ್ಕಳಿದ್ದು ಆತ ಮನೆಯ ಆಡಳಿತವನ್ನು ಕೈಗೆತ್ತಿಕೊಂಡಿದ್ದ. ಹೀಗೆ ಜುಟ್ಟು ತೆಗೆಸಿ ಆ ಮಟ್ಟಿಗೆ ಅಣ್ಣ ಆಧುನಿಕನಾಗಿ ಕಾಣಿಸತೊಡಗಿದನೆಂದೇ ಹೇಳಬೇಕು. ಆ ಮೇಲೆ ಊರಿನಿಂದ ಕ್ರಮೇಣ ಜುಟ್ಟು ಮಾಯವಾಗುತ್ತ ಹೋಯಿತು. ಅದನ್ನು ಇಟ್ಟುಕೊಳ್ಳುವುದು ಹಳಬರ ಲಕ್ಷಣವಾಯಿತು. ಮುಂದೆ ನಾನು ನವ್ಯ ಸಾಹಿತ್ಯಕ್ಕೆ ಹೊರಳಿದುದಕ್ಕಿಂತ ಕಡಿಮೆಯ ಉಲ್ಲಂಘನೆ ಇದಾಗಿರಲಿಲ್ಲ.

ಆಗ ನಮ್ಮೂರಿನಲ್ಲಿ ಕ್ಷೌರದ ಅಂಗಡಿ ಇರಲಿಲ್ಲ. ಕ್ಷೌರಿಕರಿದ್ದರು. ಕ್ಷೌರ ಮಾಡಿಸಿಕೊಳ್ಳಬೇಕಾದವರು ಒಂದೋ ಕ್ಷೌರಿಕರ ‘ಕೊಟ್ಟಿಗೆ’ಗೆ ಹೋಗಬೇಕಾಗಿತ್ತು, ಇಲ್ಲವೇ ಅವರಿಗೆ ಹೇಳಿಕಳಿಸಬೇಕಾಗಿತ್ತು. ಹಳ್ಳಿಗಳಲ್ಲಿ ಕ್ಷೌರಿಕರಿಗೆ ಪಾರಂಪರ್ಯವಾಗಿ ನಿಗದಿಯಾದ ಗಡಿಗಳಿದ್ದುವು; ಆ ಗಡಿಯೊಳಗೇ ಅವರು ತಂತಮ್ಮ ಕಾರ್ಯ ನಿರ್ವಹಿಸುತ್ತಿದ್ದುದು. ಅವರು ಕೇವಲ ವೃತ್ತಿಯಿಂದಲೇ ಜೀವನ ಸಾಗಿಸುತ್ತಿದ್ದವರೂ ಅಲ್ಲ; ಅವರಿಗೆ ಅಲ್ಪ ಸ್ವಲ್ಪ ಹೊಲ ಮನೆಗಳೂ ಇದ್ದುವು. ಕ್ಷೌರಿಕರು ಹೆಚ್ಚಾಗಿ ಹಳ್ಳಿಯಲ್ಲಿ ತಮ್ಮ ಸಲಕರಣೆ ಚೀಲಗಳನ್ನು ಕಂಕುಳಲ್ಲಿರಿಸಿಕೊಂಡು ರೌಂಡ್ ಸುತ್ತುತ್ತಿದ್ದರು. ಅವರು ಮನೆಯತ್ತ ಬಂದಾಗಲೇ ಜನ ಕೂದಲು ತೆಗೆಸಿಕೊಳ್ಳುತ್ತಿದ್ದುದು. ಮಕ್ಕಳಂತೂ ಹೀಗೆಯೇ. ಕೂತುಕೊಳ್ಳಲು ಕುರ್ಚಿ ಗಿರ್ಚಿ ಇರಲಿಲ್ಲ. ಅಂಗಳದಾಚೆ ಯಾವುದಾದರೊಂದು ಮರದ ಕೆಳಗೆ ಕುಕ್ಕರಗಾಲಿನಲ್ಲಿ ಕುಳಿತುಕೊಂಡು ಕ್ಷೌರಿಕನಿಗೆ ತಲೆ ಒಪ್ಪಿಸಿ ಕೊಡುವುದು ಪದ್ಧತಿ.

ಕ್ಷೌರಿಕರಿಗೆ ಗಿರಾಕಿಗಳ ಕುರಿತು ಸಾಮಾನ್ಯವಾಗಿ, ಮತ್ತು ಮಕ್ಕಳ ಕುರಿತು ಪ್ರತ್ಯೇಕವಾಗಿ, ಒಂದು ತಕರಾರೆಂದರೆ ಅವರು ತಾವು ಬಯಸಿದ ತರ ತಲೆಯನ್ನು ತಿರುಗಿಸುವುದಿಲ್ಲ ಎಂದು. ಮಕ್ಕಳತಲೆಯನ್ನು ಬೊಂಡದಂತೆ ತಿರುಗಿಸುತ್ತಾರೆ, ಮತ್ತು ಒಡಲನ್ನು ತಮ್ಮ ಕಾಲುಗಳ ಮಧ್ಯೆ ಇಕ್ಕುಳದಂತೆ ಹಿಡಿದಿಟ್ಟುಕೊಳ್ಳುತ್ತಾರೆ. ಆ ಮೇಲೆ ತಲೆಯನ್ನು ಒತ್ತಿ ತಗ್ಗಿಸುವುದು, ಎಡಕ್ಕೆ ತಿರುಚುವುದು, ಬಲಕ್ಕೆ ತಿರುಗಿಸುವುದು ಇತ್ಯಾದಿ ವ್ಯಾಯಾಮಗಳು ನಡೆಯುತ್ತಲೇ ಇರುತ್ತದೆ. ಈ ಮಧ್ಯೆ ತಲೆಗೆ ನೀರು ಸಿಂಪಡಿಕೆ (ಕೈಯಿಂದ), ಕೂದಲನ್ನು ಕೊಳಕು ಬಾಚಣಿಗೆಯಿಂದ ಎತ್ತಿ ಹಿಡಿದು ಬಡ್ಡು ಕತ್ತರಿಯಿಂದ ಕಚಕಚನೆ ಕತ್ತರಿಸಿ ಹಾಕುವುದು, ಆಗಾಗ ಕತ್ತರಿಯನ್ನೆತ್ತಿದಾಗ, ಅದಕ್ಕೆ ಸಿಕ್ಕಿದ ಕೂದಲು ಬುಡದಿಂದಲೇ ಕಿತ್ತು ಬಂದು ನಮ್ಮ ಪ್ರಾಣ ಹೋದಷ್ಟು ಹಿಂಸೆಯಾಗುವುದು – ಈ ಕ್ರಿಯೆಗಳು ಸಾಗುತ್ತವೆ.

ಕತ್ತರಿಸಿದ ಕೂದಲು ದೊಪೆ ದೊಪೆಯಾಗಿ ನಮ್ಮ ಕಣ್ಣಿಗೆ, ಮೂಗಿಗೆ, ಹೆಗಲಿಗೆ ಬೀಳುತ್ತಲೂ ಕಿರಿಕಿರಿ ಉಂಟುಮಾಡುತ್ತಲೂ ಇರುತ್ತವೆ. ಆದರೆ ನಾವು ತಲೆ ಮೈ ಅಲುಗಿಸುವಂತಿಲ್ಲ, ಏನೂ ಹೇಳುವಂತಿಲ್ಲ. ಅದೊಂದು ಅಸಿಧಾರಾವ್ರತ. ಅಂಬು – ಕ್ಷೌರಿಕನ ಹೆಸರು ಹಾಗಿರಲಿ – ನಮ್ಮ ಜತೆ ಮಾತಾಡುವುದಿಲ್ಲ, ನಾವು ಅವನ ಜತೆಯೂ ಮಾತಾಡುವುದಿಲ್ಲ. ಹೇಳುವುದೇನಿದೆಯೋ ಅದನ್ನು ಹಿರಿಯರು ಹೇಳಿದ್ದಾರೆ: ಮಂಡೆ ಮಾಡಿಬಿಡು, ಎಂದು. ಬಾಳಿನ ಸೇವೆ ಚಿಕ್ಕ ಮಕ್ಕಳಿಗೆ ನಿಷಿದ್ಧ. ಆದ್ದರಿಂದ ಅಂಬು ಬಳಸುವುದು ಕತ್ತರಿಯನ್ನು ಮಾತ್ರ. ದೊಡ್ಡವರಿಗಾದರೆ ಅವನು ಕತ್ತರಿ ಪ್ರಯೋಗ ಆದ ನಂತರ ಕುತ್ತಿಗೆಯ ಹಿಂಭಾಗ, ಕಿವಿಯ ಬಳಿ, ಕದಪಿನ ಮೇಲ್ಭಾಗ ಮೊದಲಾದ ಕಡೆ ಬಾಳಿನಿಂದ ಕರಕರನೆ ಕೆರೆಸಿ ನಯ ಮಾಡುತ್ತಾನೆ. ನಮಗೆ ಬಾಳು ಮುಟ್ಟಿಸಬಾರದು. ‘ಮಂಡೆ ಮಾಡಿಬಿಡು’ ಎಂದರೆ ಆದಷ್ಟೂ ಬುಡದಿಂದ ಕತ್ತರಿಸು ಎಂದು ಅರ್ಥ. ಒಮ್ಮೆ ಕತ್ತರಿಸಿದ ಮೇಲೆ ಮತ್ತೆರಡು ತಿಂಗಳಿಗೆ ಕತ್ತರಿಸುವ ಅಗತ್ಯ ಬರಬಾರದು. ಅಲ್ಲದೆ ಈ ಮಂಡೆಕತ್ತರಿಸುವಿಕೆಯಿಂದ ಹೇನು ಬರುವುದಿಲ್ಲ, ತಲೆ ಹುಣ್ಣೂ ಮೂಡುವುದಿಲ್ಲ. ಆದರೆ ನಮಗೆ ಮಾತ್ರ ಈ ತರ ಬೋಳಿಸಿಕೊಳ್ಳುವುದು ಇಷ್ಟವಿಲ್ಲ. ‘ಕ್ರಾಪ್’ ಎಂಬ ಶಹರದ ಮಕ್ಕಳ ಶೈಲಿಯನ್ನು ನಾವು ಕಂಡಿದ್ದೇವೆ. ಅದು ಸ್ವಲ್ಪ ಪರಿಷ್ಕೃತ ಶೈಲಿ. ಹಳ್ಳಿಯ ಹೈದರಾದ ನಾವು ಅದಕ್ಕೆ ಯೋಗ್ಯರಲ್ಲ!

ಆದರೆ ಈ ಮಾರ್ಕ್ಸ್, ಟಾಲ್ ಸ್ಟಾಯ್ ಮುಂತಾದವರು ನಿಜವಾಗಿಯೂ ಯಾಕೆ ಗಡ್ಡ ಬಿಟ್ಟರು? ಕ್ರಾಂತಿಗೆ, ಅವರು ಸಾಧಿಸಿಕೊಂಡು ಬಂದ ಐಡಿಯಾಲಜಿಗೆ ಅದು ಅಗತ್ಯವಿತ್ತೆ? ಇಲ್ಲವೇ, ಸುಮ್ಮಗೆ ಯಾಕೆ ತೆಗೆಯುವ ಕೆಲಸ, ಐ ಡೋಂಟ್ ಕೇರ್ ಎಂಬ ಮನೋಭಾವದಿಂದಲೇ, ಅಥವಾ ಅದು ಮುಖಕ್ಕೊಂದು ಶೋಭೆ ತರುತ್ತದೆ ಎಂಬ ಧೋರಣೆಯಿಂದಲೇ?

(ಚಿತ್ರ: ಶ್ರೀನಿವಾಸ್ ಎಣ್ಣಿ)

ಕನ್ನಡದ ಹಳ್ಳಿ ಹುಡುಗರ ಹೇರ್ ಕಟ್ ಶೈಲಿ ‘ಮಂಡೆ’ಯಾದರೆ, ಅದೇ ಕಾಲದ ಮಲೆಯಾಳಿ ಹುಡುಗರದು ಹುಲ್ಲು ಛಾವಣಿಯ ಶೈಲಿಯಾಗಿತ್ತು. ಎಂದರೆ ಅದು ಮಣ್ಣಿನ ಮನೆಗೆ ಹುಲ್ಲು ಹೊದೆಸಿದಂತೆ ಕಾಣಿಸುತ್ತಿತ್ತು! ಈಚಿನ ಕಾಲದ ಅಂತಾರಾಷ್ಟ್ರೀಯ ಕ್ರಿಕೆಟಿಗರ ಹಾಗೂ ಇನ್ನಿತರ ಶೋ ಬಿಝ್ ಜನರ ತಲೆಗೂದಲ ಶೈಲಿಯಲ್ಲಿ ನಾನಿದನ್ನು ಕಂಡು ಬೆರಗಾಗಿದ್ದೇನೆ. ಪರವಾಯಿಲ್ಲ, ಹಳೆ ಶೈಲಿಗಳು ಮತ್ತೆ ಮರುಕಳಿಸುತ್ತಿವೆ, ಯಾವುದೂ ಸಂಪೂರ್ಣ ನಷ್ಟವಾಗುವುದಿಲ್ಲ ಎನಿಸಿದೆ. ಈಗ ಈ ಆಧುನಿಕೋತ್ತರ (‘ಪೋಸ್ಟ್ ಮಾಡರ್ನ್) ಯುಗದಲ್ಲಿ ಗಂಡಸರು ಜುಟ್ಟು ಬಿಡುತ್ತಿರುವುದನ್ನೂ ಹೆಂಗಸರು ‘ಬಿಟ್ಟ ಮಂಡೆಯಲಿ’ರುವುದನ್ನೂ ಗಮನಿಸಿ. ‘ಹೌ ಕ್ಯೂಟ್’ ಅಲ್ಲವೇ, ಅದರಲ್ಲೂ ಗಂಡಸರ ಪೋನಿ ಟೇಲ್ (‘ಕುದುರೆ ಬಾಲ’)! ಇಲ್ಲಿ ನಾನು ಹಳೆಗಾಲದ ಹೆಂಗಸರ ತಲೆಗೂದಲ ಕುರಿತು ಹೇಳಲು ಬಯಸುವುದಿಲ್ಲ. ಅದೊಂದು ಭಾರೀ ದೊಡ್ಡ ಇತಿಹಾಸ -ಹುಡುಗಿಯರ ಸಡಗರದ ಎರಡು ಜಡೆ, ಯುವತಿಯರ ಬೈತಲೆ, ವಾರೆ ಬೈತಲೆಗಳಿಂದ ಹಿಡಿದು ವಿಧವೆಯರ ದಾರುಣ ಕೇಶ ಮುಂಡನದವರೆಗೆ. ಅಲ್ಲೂ ಎಷ್ಟೊಂದು ಬದಲಾವಣೆಗಳಾಗಿವೆ! ವಿಧವಾ ಕೇಶ ಮುಂಡನ ಕೊನೆಗೊಂಡಿದೆ. ನೂತನ್ ಕಟ್, ಬಾಬ್ ಕಟ್, ಟ್ರಿಮ್ಮಿಂಗ್ ಬಂದಿವೆ. ಪಾರ್ಸಿಸ್ ಕಂಬಾಟ್ಟಾಳ ಬೋಳು ಮಂಡೆ ಅನುಸರಿಸುವ ಯುವತಿಯರೂ ಇದ್ದಾರೆ. ನಿಮ್ಮ ಬಟ್ಟೆ ಬರೆ, ಪಾದರಕ್ಷೆ, ಪರ್ಫ್ಯೂಮುಗಳಂತೆ ನಿಮ್ಮ ಆಯ್ಕೆಯ ಕೇಶ ವಿನ್ಯಾಸ ಕೂಡ ನಿಮ್ಮ ಸಿಗ್ನೇಚರ್ ಆಗುತ್ತದೆ.

ಕ್ಷೌರದ ಜತೆ ಕಟುವಾದ ‘ಮೈಲಿಗೆ’ ಎಂಬ ಆಚರಣೆ ಮೇಲ್ವರ್ಗದ ಜನರಲ್ಲಿ, ಅದರಲ್ಲೂ ಬ್ರಾಹ್ಮಣರಲ್ಲಿ, ತಳಕು ಹಾಕಿಕೊಂಡಿತ್ತು. ಕ್ಷೌರ ಮಾಡಿಸಿಕೊಂಡ ವ್ಯಕ್ತಿ ಪೂರ್ಣ ಸ್ನಾನ ಮಾಡಿಕೊಂಡಲ್ಲದೆ ಇತರರನ್ನು ಮುಟ್ಟುವ ಹಾಗಿರಲಿಲ್ಲ, ಹಾಗೂ ‘ದೇವರೊಳ’ (ದೇವರ ಕೋಣೆ) ಮತ್ತು ಅಡುಗೆ ಕೋಣೆಗಳನ್ನು ಪ್ರವೇಶ ಮಾಡುವಂತಿರಲಿಲ್ಲ. ಈಗಿನ ಕಾಲದಲ್ಲಿ ಇದೆಲ್ಲ ಕಡಿಮೆಯಾಗಿದೆ, ಹೊರಟೇ ಹೋಗಿದೆ ಎನ್ನಬಹುದು, ಆದರೆ ಆಗಿನ ಕಾಲದಲ್ಲಿ ಹೆಚ್ಚು ಕಠಿಣವಾಗಿದ್ದುವು, ಬದಲಾವಣೆ ನಾಗರಿಕತೆಯ ಸ್ವಭಾವ.

ನಾನು ಪ್ರೌಢ ಶಾಲಾ ವಿದ್ಯಾರ್ಥಿಯಾಗಿದ್ದಾಗ, ಶಾಲೆಯಿಂದ ಫರ್ಲಾಂಗು ದೂರ ಒಂದು ಸೆಲೂನು ಇತ್ತು. ಅದನ್ನು ಸುಬ್ಬ ಎಂಬ ಕ್ಷೌರಿಕನೊಬ್ಬ ನಡೆಸುತ್ತಿದ್ದ. ಅವನ ಹೆಸರು ಅಲ್ಲಿ ಎಲ್ಲರಿಗೂ ಗೊತ್ತಿತ್ತು. ಈ ಸೆಲೂನ್ ಎಂಬ ಪದ ನಮಗೆ ಬ್ರಿಟಿಷ್ ವಸಾಹತುಶಾಹಿಯಿಂದ ಬಂದುದು, ಕ್ಷೌರದ ಅಂಗಡಿ ಎನ್ನುವ ಸೀಮಿತ ಅರ್ಥದಲ್ಲಿ. ಇಂಗ್ಲಿಷ್ ನಲ್ಲಿ ಸೆಲೂನಿಗೆ ಕಲಾವಿದರ ಕೂಟ, ಬಳಗ, ಅವರು ಸೇರುವ ಪ್ರತ್ಯೇಕ ಸ್ಥಳ ಇತ್ಯಾದಿ ಅರ್ಥವೂ ಇದೆ, ಇತ್ತು. ನಮ್ಮ ದೇಶದಲ್ಲಿ ಸೆಲೂನಿಗೆ ಈ ಅರ್ಥ ಬರದೆ ‘ಬಾರ್ಬರ್ ಶಾಪ್’ ಕೂದಲು ಕತ್ತರಿಸುವ ಸ್ಥಳ ಎಂಬ ಅರ್ಥ ಮಾತ್ರವೇ ಬಂತು. ಯಾಕೋ ಗೊತ್ತಿಲ್ಲ. ಬಹುಶಃ ಸಮಾನ ಮನಸ್ಕರ ಕೂಟ ನಮ್ಮ ಸಂಸ್ಕೃತಿಯಲ್ಲಿ ಅಪರೂಪವಾಗಿದ್ದ ಕಾರಣವೋ ಏನೋ. ಅಂತೂ ನಮ್ಮ ಶಾಲೆಯ ಬಳಿ ಒಂದು ಸೆಲೂನು ಇತ್ತು.

ಹಳ್ಳಿಯ ಮಕ್ಕಳಾದ ನಮಗೆ ಇದುವೇ ಆಧುನಿಕ ಹೇರ್ ಕಟ್ಟಿಂಗ್ ಸ್ಥಳವಾಗಿತ್ತು. ಹಾಗೂ ನನ್ನಂಥ ಹಳ್ಳಿ ಹೈದಗಳು ಅಲ್ಲಿಗೆ ಹೋಗಲು ಹೆದರುತ್ತಿದ್ದರು. ಕಾಲ ಸರಿದಂತೆ ನನ್ನ ಸ್ವಾತಂತ್ರ್ಯಾಪೇಕ್ಷೆ ಹೆಚ್ಚಾಗುತ್ತ ಹೋಗುತ್ತಿತ್ತು. ಹಾಗೂ ಒಂದು ರಜಾದಿನ ನಾನು ಕ್ಷೌರಕ್ಕೆಂದು ಸುಬ್ಬನ ಸೆಲೂನಿಗೆ ಕಾಲಿರಿಸಿಯೇ ಬಿಟ್ಟೆ.

ಸುಬ್ಬನ ಸೆಲೂನು ಒಂದೇ ಕೋಣೆಯ ಮಣ್ಣಿನ ಗೋಡೆಯ ಹುಲ್ಲು ಛಾವಣಿಯ ಚಿಕ್ಕ ಕುಟೀರವಾಗಿತ್ತು. ಒಂದು ಬಾಗಿಲು, ಒಂದೋ ಎರಡೋ ಕಿಟಿಕಿ. ಒಳಗೆ ಸಾಕಷ್ಟು ಬೆಳಕಿತ್ತು. ಕ್ಷೌರ ಮಾಡಿಸಿಕೊಳ್ಳುವವ ಕುಳಿತುಕೊಳ್ಳಲು ಒಂದು ಎತ್ತರದ ಕುರ್ಚಿ, ಸರದಿಗೆ ಕಾಯುವವರ ಅನುಕೂಲಕ್ಕಾಗಿ ಒಂದು ಬೆಂಚು. ಇನ್ನು ಎದುರು ಗೋಡೆಗೆ ಅಂಟಿಸಿಕೊಂಡು ಒಂದು ನೀಳವಾದ ಮೇಜಿನ ಹಲಗೆ –ಅದರಲ್ಲಿ ಕ್ಷೌರದ ಸಲಕರಣೆಗಳು, ಬಾಚಣಿಗೆ, ಕತ್ತರಿ, ಕ್ಲಿಪ್ಪರ್, ಬಾಳು, ಸೋಪು, ಬ್ರಶ್ಸು, ಪೌಡರ್ ಡಬ್ಬಿ, ನೀರಿನ ಕುಪ್ಪಿ ಇತ್ಯಾದಿ. ಅಲ್ಲೇ ಗಿರಾಕಿಗೆ ಮುಖ ಕಾಣುವಂತೆ ಗೋಡೆಗೆ ಬಡಿದ ಒಂದು ಅಗಲವಾದ ಕನ್ನಡಿ. ಗೋಡೆಗನ್ನಡಿಯ ಪಕ್ಕದಲ್ಲಿ ಒಂದು ಸುಂದರ ಸ್ತ್ರೀಯ ವರ್ಣಚಿತ್ರದ ಪ್ರಿಂಟ್. ಆ ಕಾಲಕ್ಕೆ ಇಂಥ ಪ್ರಿಂಟುಗಳೆಲ್ಲ ಹೊಸತು, ಇವುಗಳನ್ನು ಯಾರು ಎಲ್ಲಿ ಹೇಗೆ ಮುದ್ರಿಸುತ್ತಿದ್ದರೋ, ಸುಬ್ಬ ಅದನ್ನು ಎಲ್ಲಿಂದ ಸಂಪಾದಿಸಿಕೊಂಡನೋ ತಿಳಿಯದು. ಗಂಡಸರ ಕ್ಷೌರದ ಅಂಗಡಿಯಲ್ಲಿ ಈ ಸ್ತ್ರೀಯ ಚಿತ್ರ ಯಾಕೆ ಎಂದು ಕೇಳುವ ಅಗತ್ಯವಿಲ್ಲ. ಅದಲ್ಲದೆ ಇದ್ದರೆ ಇನ್ನು ಯಾವ ಚಿತ್ರ ಹಾಕುತ್ತೀರಿ? ನಂತರದ ವರ್ಷಗಳಲ್ಲಿ ಇತರ ಸೆಲೂನುಗಳಲ್ಲಿ ಇನ್ನಷ್ಟು ಚಂದದ ಇಂಥ ಚಿತ್ರಗಳನ್ನು ನಾನು ಕಂಡಿದ್ದೇನೆ. ಅವು ಅಲಂಕಾರಕ್ಕೆ ಇರುತ್ತವೆ, ಯಾರೂ ಮಾತಾಡುವ ವಿಷಯವಲ್ಲ. ಇಂಥ ಅನೇಕ ವಿಚಿತ್ರಗಳನ್ನು ನಾನು ಸುಬ್ಬನ ಸೆಲೂನಿನಲ್ಲಿ ನೋಡಿದೆ. ನೆಲದ ಒಂದು ಮೂಲೆಯಲ್ಲಿ ಗುಡಿಸಿ ಕೂಡಿ ಹಾಕಿದ ತಲೆಗೂದಲನ್ನೂ ನಾನು ಗಮನಿಸಿದೆ.

ನಾನು ಭೇಟಿಯಾದ ಕಾಲದಲ್ಲಿ ಸುಬ್ಬ ಸುಮಾರು ಮೂವತ್ತು ವರ್ಷದ ಒಬ್ಬ ಆಜಾನುಬಾಹು ವ್ಯಕ್ತಿ. ಎಲುಬು ನೆಗೆದ ಗಟ್ಟಿಮುಟ್ಟಾದ ಒಡಲು. ಮುಖದಲ್ಲಿ ನಗುವಿಲ್ಲ, ಎಷ್ಟು ಬೇಕೋ ಅಷ್ಟೇ ಮಾತು, ಸ್ವಭಾವತಃ ಮೌನಿ. ಮುಂಡು, ಅರ್ಧ ತೋಳಿನ ಅಂಗಿ. ನನ್ನ ಸರದಿ ಬಂದಾಗ, ಖಾಲಿಯಾದ ಕಸುಬಿನ ಕುರ್ಚಿಮೇಲೆ ಕೂಡಲು ಹೇಳಿ, ‘ಏನು?’ ಎಂಬಂತೆ ಹುಬ್ಬೇರಿಸಿದ. ನನ್ನನ್ನು ನೋಡಿಯೇ ಹಳ್ಳಿ ಹೈದ ಎಂದು ಅವನು ಅಂದುಕೊಂಡಿರಬೇಕು. ‘ಕ್ರಾಪು’ ಎನ್ನುವ ಪದ ನನ್ನ ಬಾಯಿಗೆ ಇಕ್ಕುಳ ಹಾಕಿದರೂ ಬರಲೊಲ್ಲದು, ಆದರೂ ಹೇಳಿಯೇ ಬಿಟ್ಟೆ! ಒಂದು ರೀತಿಯಲ್ಲಿ ಇದು ನನಗೆ, ಅಣ್ಣ ಜುಟ್ಟು ಕತ್ತರಿಸಲು ಹೇಳಿದಷ್ಟೇ ನಿರ್ಣಾಯಕ ಗಳಿಗೆಯಾಗಿತ್ತು. ಸಿಮೋಲ್ಲಂಘನೆ! ಸ್ವಾತಂತ್ರ್ಯ ಘೋಷಣೆ!

ಸುಬ್ಬನ ಚಟುವಟಿಕೆಯನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಿದ್ದೆ. ಅವನು ನನ್ನ ಹೆಗಲ ಮೇಲೊಂದು ಬಿಳಿ ಬಟ್ಟೆಯನ್ನು ಹೊದೆಸಿದ –ರೋಮ ನನ್ನ ಮೈ ಮೇಲೆ ಬೀಳದಿರಲಿ ಎಂದು. ಇದೇನೂ ನನಗೆ ಪ್ರತ್ಯೇಕ ರಿಯಾಯಿತಿಯಲ್ಲ; ನೂರಾರು ಜನರಿಗೆ ಹೊದೆಸಿದ ಬಟ್ಟೆ ಅದು. ಯಾವಾಗಲಾದರೊಮ್ಮೆ ತೊಳೆದುಹಾಕಿರುತ್ತದೆ ಎನಿಸುತ್ತದೆ. ಅವನ ಬಳಿ ಒಂದು ವಿಚಿತ್ರವಾದ ನೀರಿನ ಕುಪ್ಪಿಯಿತ್ತು. ಅದಕ್ಕೆ ಬಿರಡೆಯ ಮೂಲಕ ನಳಿಗೆಯೊಂದನ್ನು ಇಳಿಸಿತ್ತು. ಈ ನಳಿಗೆ ಕುಪ್ಪಿಯ ಹೊರಗಡೆ ತನಗೆ ತಾನೇ ಒಂದು ಸುತ್ತು ಹಾಕಿಕೊಂಡಿತ್ತು. ಇದನ್ನು ಮೇಲೆ ಕೆಳಗೆ ಮಾಡುತ್ತಿದ್ದರೆ ಅದರೊಳಗೆ ಗಾಳಿಯೊತ್ತಡ ನಿರ್ಮಾಣವಾಗಿ ನೀರು ಕಾರಂಜಿಯಂತೆ ಸಿಂಪಡಿಸುತ್ತಿತ್ತು. ಅದು ಗಿರಾಕಿಗಳ ತಲೆಗೂದಲನ್ನು ಒದ್ದೆ ಮಾಡುವುದಕ್ಕಿರುವ ಯಂತ್ರ. ಅಂಥದನ್ನು ನಾನಿದುವರೆಗೆ ಕಂಡಿರಲಿಲ್ಲ. ಎಲಾ ಎನಿಸಿತು. ಅದಕ್ಕೆ ‘ಹೇರ್ ಸ್ಪ್ರೇ’ ಎನ್ನುತ್ತಾರೆ ಎನ್ನುವುದು ನನಗೆ ಬಹಳ ವರ್ಷಗಳ ನಂತರ ಗೊತ್ತಾಯಿತು. ಅದರಿಂದ ನೀರು ತಲೆಗೆ ರಾಚಿದಾಗ ಸ್ವಲ್ಪ ಕಚಗುಳಿ ಇಟ್ಟಂತಾಯಿತು, ಜತೆಗೆ ಸಂತೋಷವೂ ಆಯಿತು. ಆಮೇಲೆ ಬೆರಳುಗಳಿಂದ ಒಮ್ಮೆ ಕೂದಲನ್ನು ಬಾಚಿದಂತೆ ಮಾಡಿ, ಮೊದಲು ಹಳ್ಳಿಯ ಕ್ಷೌರಿಕನಂತೆಯೇ ಬಾಚಣಿಗೆಯಿಂದ ಕೂದಲನ್ನು ಎತ್ತಿ ಕೊಟ್ಟು ಕತ್ತರಿಯಿಂದ ಕಚಕಚ ಕತ್ತರಿಸಿಹಾಕಿದ. ಇದರಲ್ಲೇನೂ ವಿಶೇಷವಿರಲಿಲ್ಲ; ಆದರೆ ನಾನು ಸುಖವಾಗಿ ಕುರ್ಚಿಯಲ್ಲಿ ಕುಳಿತು ತಲೆ ಕೊಡುವುದು ಸಾಧ್ಯವಾಯಿತಲ್ಲ, ಅದು ದೊಡ್ಡದು. ವಿಶೇಷ ಸುರುವಾದ್ದು ಎರಡನೆ ಮತ್ತು ಮೂರನೆ ರೌಂಡುಗಳಲ್ಲಿ. ಸುಬ್ಬನ ಬಳಿ ಒಂದು ಜಗತ್ಕತ್ತರಿ ಇತ್ತು. ಅದರ ಹೆಸರೂ ನನಗೆ ಹಲವು ವರ್ಷಗಳ ನಂತರ ಗೊತ್ತಾದ್ದು: ಹೇರ್ ಕ್ಲಿಪ್ಪರ್ ಅಥವಾ ಹೇರ್ ಟ್ರಿಮ್ಮರ್. ಅದರ ಕೈಗಳು ಕತ್ತರಿಯ ಕೈಗಳಂತೆಯೇ ಕೆಲಸ ಮಾಡುತ್ತಿದ್ದು ಬಾಯಲ್ಲಿ ಮಾತ್ರ ಎರಡು ಸಾಲುಗಳ ಹರಿತವಾದ ಹಲ್ಲುಗಳಿದ್ದುವು. ಕೈಗಳನ್ನು ಅದುಮುತ್ತಿದ್ದಂತೆ ಅವು ಒಂದರ ಮೇಲೊಂದು ಸರಿದು ಮಧ್ಯದಲ್ಲಿ ಕೂದಲನ್ನು ಕತ್ತರಿಸಿಹಾಕುತ್ತಿದ್ದುವು.

ಇದರ ಆವಿಷ್ಕಾರವೂ ಒಂದು ಅದ್ಭುತವೇ. ಈ ಹಲ್ಲುಗಳು ತಲೆ ಮೇಲೆ ಕರ್ ಕರನೆ ಓಡಾಡಿದಾಗ ಒಂದು ಸುಖಾನುಭವ ಉಂಟಾಗುತ್ತಿತ್ತು. ನಂತರದ ಕಾಲದಲ್ಲಿ ನನಗೆ ಕೆಲವೊಮ್ಮೆ ನಿದ್ದೆ ತೂಗಿದ್ದೂ ಇದೆ. ಈಗ ನಾನು ಎದುರಿನ ಕನ್ನಡಿಯಲ್ಲಿ ನನ್ನ ಮುಖ ಕದ್ದು ನೋಡುತ್ತಲೂ ಇದ್ದೆ. ಪರವಾಯಿಲ್ಲ, ಇದು ‘ಮೊಟ್ಟೆತ್ತಲೆ’ ಅಲ್ಲ, ನಾನು ಬಯಸಿದ ಕ್ರಾಪೇ ಎನಿಸುತ್ತಿತ್ತು. ನನ್ನ ವ್ಯಕ್ತಿತ್ವ ಬದಲಾಗುತ್ತ ಇತ್ತು. ಮೂರನೆ ರೌಂಡಿನಲ್ಲಿ ಸುಬ್ಬ ಹರಿತವಾದ ಬಾಳಿನ ಪ್ರಯೋಗ ಮಾಡತೊಡಗಿದ. ಗೋಡೆಯಲ್ಲಿ ತೂಗು ಹಾಕಿದ ಚರ್ಮದ ಪಟ್ಟಿಯಲ್ಲಿ ಅದನ್ನು ನನಗಾಗಿ ಹರಿತಗೊಳಿಸಿದ. ಬಾಳಿನ ಪ್ರಯೋಗ ಬೇಕೇ ಬೇಡವೇ ಎಂದು ಅವನು ನನ್ನನ್ನು ಕೇಳಲೇ ಇಲ್ಲ. ಅವನ ಸೆಲೂನಿಗೆ ಬಂದ ಮೇಲೆ ಅವನೇ ಅಧಿಕಾರಿ. ನನ್ನ ಕುತ್ತಿಗೆಯ ಹಿಂಭಾಗ, ಕಿವಿಗಳ ಬದಿಗಳಲ್ಲಿ ಉಳಿದಿದ್ದ ಕೂದಲುಗಳನ್ನು ಬುಡ ಸಹಿತ ಕೆರೆದು ತೆಗೆದ. ಆ ಮೇಲೆ ನೋವು ಶಮನಕ್ಕೆಂದು ಅಲ್ಲೆಲ್ಲ ಪೌಡರ್ ಚಿಮುಕಿಸಿದ. ಈ ವಿಷಯದಲ್ಲಿ ಎಂಥ ಧಾರಾಳಿಯಾಗಿದ್ದ ಅವನು. ಕನ್ನಡಿಯೊಳಗೆ ನನ್ನದು ಮಂಗನ ಮುಸುಡಿನಂತೆ ಕಾಣಿಸಿತು. ನಾನಿದುವರೆಗೆ ಪೌಡರ್ ಬಳಸಿದವನೇ ಅಲ್ಲ. ಸುಬ್ಬ ಹೇಳಿದಷ್ಟು ದುಡ್ಡು ಕೊಟ್ಟು (ಎಷ್ಟೆಂದು ನೆನಪಿಲ್ಲ) ಹೊರಗಿನ ವಾಸ್ತವ ಪ್ರಪಂಚಕ್ಕೆ ಹೊಸ ಮನುಷ್ಯನಾಗಿ ಕಾಲಿರಿಸಿದೆ.

ಹೊಸ ಮನುಷ್ಯನಾಗಿ? ಮನುಷ್ಯ ಹೊಸತಾಗುವುದು ಬುದ್ಧಿಯ ಬೆಳವಣಿಗೆಯಿಂದಲ್ಲದೆ ಬಾಹ್ಯ ಬದಲಾವಣೆಯಿಂದ ಅಲ್ಲವಲ್ಲ ಎಂದು ಕೇಳಬಹುದು. ಆದರೆ ಮೈ ಮನಸ್ಸಿನ ಸುಳಿಯಲ್ಲಿ ಬಿದ್ದವನು ಮನುಷ್ಯ.
******
ನಾನು ಹೇಳುತ್ತಿರುವ ಈ ಇಡೀ ಕ್ಷೇತ್ರದಲ್ಲಿ ಕಳೆದ ಏಕದೇಶ ಮುಕ್ಕಾಲು ಶತಮಾನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಿವೆ. ಈ ಬದಲಾವಣೆಗಳಿಂದ ಒಳ್ಳೆಯದೇ ಆಗಿದೆ. ಉದಾಹರಣೆಗೆ, ಕ್ಷೌರದ ಸಣ್ಣ ದೊಡ್ಡ ಸಲಕರಣೆಗಳು ವಿದ್ಯುದೀಕರಣಗೊಂಡಿರುವ ಕಾರಣ ಕ್ಷೌರಿಕರ ದೈಹಿಕ ತ್ರಾಸ ಕಡಿಮೆಯಾಗಿದೆ. ಇದಕ್ಕೆ ಮೊದಲು ಅವರು ಪಡುತ್ತಿದ್ದ ಬವಣೆಯನ್ನು ಸ್ವಲ್ಪ ಕಲ್ಪಿಸಿ (ಎಂಪತಿಯಿಂದ) ನೋಡಿ: ದಿನವಿಡೀ ದುಡಿಯುವ ಆ ತೋಳುಗಳು, ಬೆರಳುಗಳು ಸಂಜೆಗೆ ಏನಾಗಬೇಡ? ತೋಳು ಮತ್ತು ಬೆರಳು ನೋವು ಮಾತ್ರವಲ್ಲ, ಕಾಲಕ್ರಮೇಣ ಕುತ್ತಿಗೆ ನೋವು, ಹೆಗಲು ನೋವು, ಬೆನ್ನು ನೋವು ಕಟ್ಟಿಟ್ಟ ಬುತ್ತಿ. ಈ ದೃಷ್ಟಿಯಿಂದ ನೋಡಿದರೆ, ಈಗಿನ ಸ್ವಯಂಚಾಲಿತ ಸಲಕರಣೆಗಳು ಕ್ಷೌರಿಕರಿಗೊಂದು ವರದಾನವಲ್ಲವೇ? ಇನ್ನು ಕ್ಷೌರವೆನ್ನುವುದು ‘ಹೇರ್ ಕಟ್ಟಿಂಗ್’ ಆಗಿ ಉಳಿದಿಲ್ಲ, ‘ಹೇರ್ ಡ್ರೆಸ್ಸಿಂಗ್’ (ಕೇಶ ಪ್ರಸಾಧನ) ಎಂಬ ಕಲೆಯಾಗಿ ಮಾರ್ಪಟ್ಟಿದೆ. ಸೋಂಕು ತಗಲದಂತೆ ಹೆಚ್ಚು ಕಾಳಜಿ, ಶುಚಿತ್ವದ ಮೇಲೆ ಒತ್ತು, ಹೊಸ ಸೌಂದರ್ಯಪ್ರಜ್ಞೆ, ಕ್ಷೌರಿಕರ ಆತ್ಮಗೌರವ, ಈ ಕ್ಷೇತ್ರಕ್ಕೆ ಸ್ತ್ರೀಯರ ಪ್ರವೇಶ, ಕೇಶವಿನ್ಯಾಸದಲ್ಲಿ ಕಂಡುಬರುವ ಮುಕ್ತಛಂದ-ಇವೆಲ್ಲ ಈಗ ಉಂಟಾಗಿರುವ ಸ್ವಾಗತಾರ್ಹ ಬೆಳವಣಿಗೆಗಳು. ಅದೇ ರೀತಿ ಮಡಿಮೈಲಿಗೆ ಎನ್ನುವುದು ಶುಚಿತ್ವಕ್ಕೆ ದಾರಿಮಾಡಿಕೊಟ್ಟಿದೆ.

ಮನುಷ್ಯಲೋಕದ ಯಾವುದೇ ಒಂದು ವಿಷಯವನ್ನು ತೆಗೆದುಕೊಂಡರೂ, ಅದು ಒಂದೇ ಆಗಿರುವುದಿಲ್ಲ, ಇತರ ಹಲವು ಸಂಗತಿಗಳ ಜತೆ ಸಂಬಂಧಿತವಾಗಿರುತ್ತದೆ, ಒಂದನ್ನು ಕರೆದರೆ ಇನ್ನೆಷ್ಟೊ ಬರುತ್ತವೆ, ಪ್ರತಿಯೊಂದಕ್ಕೂ ಇತಿಹಾಸವಿರುತ್ತದೆ, ಎಷ್ಟು ಇತಿಹಾಸ ಕೆದಕಿದರೂ ಬಾಕಿ ಇತಿಹಾಸ ಇರುತ್ತದೆ -ನಾವು ಬರೆಯುವ, ಓದುವ ಸಾಹಿತ್ಯ ಎಲ್ಲೋ ಒಂದು ಕಣವನ್ನು (ಕ್ಷಣವನ್ನು) ಮಾತ್ರ ಮುಟ್ಟುತ್ತದೆ. ಮುಟ್ಟುವುದಕ್ಕೆ ಇನ್ನಷ್ಟು ಇರುತ್ತವೆ, ಯಾರೂ ಎಲ್ಲವನ್ನೂ ಮುಟ್ಟಲಾರರು. ಮುಟ್ಟಬೇಕೆನ್ನುವಷ್ಟರಲ್ಲೇ ನಮ್ಮ ವೇಳೆ ಮುಗಿದಿರುತ್ತದೆ. ಕೆಲವು ಸಲ ಬೇರೆಯವರು ಮುಂದುವರಿಸುತ್ತಾರೆ. ಕೆಲವು ಸಲ ಮುಂದಿಲ್ಲದ ದಾರಿಯಂತೆ ನಮ್ಮ ನೋಟ ಅಲ್ಲಿಗೇ ನಿಲ್ಲುತ್ತದೆ. ಅದು ವ್ಯಾನಿಶಿಂಗ್ ಪಾಂಯ್ಟ್-
Cul-de-sac!