ವಾರಾಂತ್ಯದಲ್ಲಿ ಬೀಚ್ಗೆ ಹೋಗಬೇಕು. ಮಗುವಿಗೆ ಆಡಲಿಕ್ಕೊಂದು ಗಾಳಿ ತುಂಬುವ ಚೆಂಡು, ಮರಳ ಮನೆ ಕಟ್ಟಲು ಪ್ಲಾಸ್ಟಿಕ್ ಗುದ್ದಲಿ, ಬಕೆಟ್ಟು.. ಮರೆಯದೆ ಹಚ್ಚಬೇಕಾದ ಸನ್ಸ್ಕ್ರೀನ್ ಲೋಷನ್ನು…. ಅಂಗಡಿಗೆ ಒಯ್ಯಲು ಮನಸ್ಸಲ್ಲೇ ಪಟ್ಟಿ ಮಾಡುತ್ತಾ, ಕೈಕಾಲು ವ್ಯಾಕ್ಸ್ ಮಾಡಿಸುತ್ತಾ ಕುಳಿತವಳಿಗೆ, ‘ಬ್ರಜಿಲಿಯನ್ ವ್ಯಾಕ್ಸ್ ಕರ್ಲೂ?’ ಎಂದು ಪಾರ್ಲರಿನ ಆಂಟಿ ಪಲುಕಿದ್ದೇ ತಡ ಮೈ ಪೂರಾ ಒಮ್ಮೆ ‘ಝುಂ’ ಎಂದು ನಡುಗಿ…….
…….ನಿನ್ನ ನೆನಪಾಯ್ತು.
‘ನೈನಂ ಛಿದ್ರಂತಿ ಶಸ್ತ್ರಾಣಿ
ನೈನಂ ದಹತಿ ಪಾವಕಃ’… ಅಂದೆಯಂತೆ ನೀನು?
ಇಲ್ಲೆಲ್ಲ ನೀನು ಹಾಗಂದಿದ್ದೇ ಮಾತು! ಅದನ್ನ ನಿನಗೆ ಹೇಳಿಕೊಟ್ಟವಳೇ ನಾನು ಎಂದು ನೀನು ಹೇಳಿರಲೇ ಇಲ್ಲ. ಪ್ರೀತಿಯಲ್ಲಿ, ವಿರಹದಲ್ಲಿ ನಾವಿಬ್ಬರೇ ಕಂಡುಕೊಂಡ ಸತ್ಯ ಅದು ಎಂದು ಇಲ್ಲಿಯವರೆಗೂ ನಾನಂದುಕೊಂಡಿದ್ದೆ. ಹೋಗಲಿ ಬಿಡು, ಮಾತು ಕದ್ದಿದ್ದಕ್ಕೆ ನನಗೇನೂ ಬೇಸರವಿಲ್ಲ. ಕದಿಯುವುದು ನಿನ್ನ ಚಾಳಿ, ಯಾವತ್ತೂ. ಬಿಟ್ಟು ಹೋಗಿದ್ದಕ್ಕೂ ನಿನ್ನ ಮೇಲೆ ಸಿಟ್ಟಿಲ್ಲ. ಸಿಟ್ಟು ಬಂದಿದ್ದು, ಕೊಳಲನ್ನು ಪೂರ್ತಿ ಮರೆತು ನೀನು ಬರೀ ಶಂಖವನ್ನು ಹಿಡಿದು ನಿಂತಾಗಲೇ. ಹಾಗೆ ನಿಂತಾಗಲೇ ಇಂಥದ್ದೆಲ್ಲ ಉಪದೇಶ ನೀಡಲು ಸಾಧ್ಯ…. ‘ಯುದ್ಧ ಬೇಡ’ ಎಂದು ಕಂಗಾಲಾಗಿ ಕುಳಿತವನಿಗೆ, ನಿನ್ನನ್ನೇ ಗಂಧ ಮಾಡಿ ಪೂಸಿಕೊಂಡು ಕುಳಿತ ನನಗೂ ಒಮ್ಮೊಮ್ಮೆ ಅನುಮಾನ! ನೀನು ಮಾತ್ರ ಇದೇ ಪರಮ ಸತ್ಯವೆಂಬಂತೆ ಹೇಳಿದೆಯಂತೆ!
‘ನೈನಂ ಛಿದ್ರಂತಿ ಶಸ್ತ್ರಾಣಿ’….?
ಹೌದಾ…?
ಹೋಗಲಿ ಬಿಡು, ಯುದ್ಧ ಮುಗಿಯಿತಲ್ಲ, ಇನ್ನಾದರೂ ಒಮ್ಮೆ ಕೊಳಲನೆತ್ತಿಕೊ. ಮರೆತ ರಾಗಗಳ ನೆನಪಿಸಲು ಅಲ್ಲೇ ಸಿಗಬಹುದು ನಿನಗೆ ಯಾರಾದರೂ.
…………..
ಬೆಚ್ಚನೆ ವ್ಯಾಕ್ಸ್ ಬಟ್ಟಲನ್ನು ಕೈಯಲ್ಲಿ ಹಿಡಿದು ಆಂಟಿ ಆಗ್ರಹಿಸುತ್ತಿದ್ದಾಳೆ, ‘ಏಕ್ ಬಾರ್ ಕರ್ದೋನಾ ಬೇಟಾ, ಇಟ್ ವೋಂಟ್ ಹರ್ಟ್ ಮಚ್’.
ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವೀಧರೆ. ಊರು ಮೈಸೂರು. ಈಗ ಇರುವುದು ಅಮೇರಿಕಾದ ನ್ಯೂಜರ್ಸಿಯಲ್ಲಿ. ‘ನಿಶುಮನೆ’ ಇವರ ಬ್ಲಾಗ್. ‘ದೂರ ಸಾಗರ’ ಇವರು ಕೆಂಡಸಂಪಿಗೆಗೆ ಬರೆಯುತ್ತಿದ್ದ ಅಂಕಣಗಳ ಮಾಲಿಕೆ.