ಶ್ರೀಮಂತ ರಾಷ್ಟ್ರವಾದ ಅಮೇರಿಕದಲ್ಲಿ, ವಿಶ್ವಾಸದಲ್ಲೇ ಅತಿ ಹೆಚ್ಚಿನ ಕರೋನ ಸೋಂಕು (೮ ಮಿಲಿಯನ್) ಕಾಣಿಸಿಕೊಂಡಿರುವುದು ಆಶ್ಚರ್ಯಕರವಾದ ಸಂಗತಿ. ಅಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ಎರಡು ಲಕ್ಷಜನ ಕರೋನ ಖಾಯಿಲೆಯಿಂದ ಸತ್ತಿದ್ದಾರೆ ಎನ್ನುವ ವಿಚಾರವನ್ನು ನಂಬುವುದು ಕಷ್ಟ. ಅಲ್ಲಿಯ ಜನ ನಾಯಕ ಟ್ರಂಪ್ ಈ ಖಾಯಿಲೆಯನ್ನು ‘ಸಣ್ಣ ಫ್ಲೂ’ ಎಂದು ಅಲ್ಲಗೆಳೆದು ವೈದ್ಯಕೀಯ ಸಲಹೆಗಳನ್ನು ನಿರ್ಲಕ್ಷಿಸಿ ಮಾಸ್ಕ್ ಧರಿಸುವುದನ್ನು ರಾಜಕೀಯಗೊಳಿಸಿ ಕೊನೆಗೆ ಕಳೆದ ವಾರ ತಾನೇ ಈ ಖಾಯಿಲೆಗೆ ಒಳಗಾದ. ತನ್ನ ಸೋಂಕನ್ನು ಶ್ವೇತ ಭವನದಲ್ಲಿ ಇತರರಿಗೂ ಹರಡಿದ ಎಂದು ಶಂಕಿಸಲಾಗಿದೆ.
ಡಾ. ಜಿ.ಎಸ್. ಶಿವಪ್ರಸಾದ್ ಬರೆದ ಲೇಖನ
ಇಂಗ್ಲೀಷಿನಲ್ಲಿ ಲಾಕ್ ಅಪ್ ಮತ್ತು ಲಾಕ್ ಡೌನ್ ಎಂಬ ಪದಗಳು ಮೇಲ್ನೋಟಕ್ಕೆ ತದ್ವಿರುದ್ಧವಾಗಿ ಕಂಡರೂ ಅದರ ಅರ್ಥ ಒಂದೇ ಎಂಬುದು ಸ್ವಾರಸ್ಯಕರವಾದ ಸಂಗತಿ. ಇಡೀ ಪ್ರಪಂಚವನ್ನೇ ಲಾಕ್ ಡೌನ್ ಮಾಡಿಸಿ ನಮ್ಮನ್ನೆಲ್ಲಾ ಗುತ್ತಿಗೆ ಹಿಡಿದಿರುವ ಕರೋನ ವೈರಸ್ಸು ನಮಗೆ ಹಲವಾರು ಕಥೆ ವ್ಯಥೆಗಳನ್ನು ನೀಡಿದೆ. ಈ ಲಾಕ್ ಡೌನ್ ಸಮಯದಲ್ಲಿ ಕಳೆದುಕೊಂಡದ್ದೆಷ್ಟೋ ಹಾಗೆ ಪಡೆದುಕೊಂಡದ್ದೆಷ್ಟೋ. ನಿರಾಸೆ, ನಿರುದ್ಯೋಗ, ಹಸಿವು, ಅಗಲಿಕೆ, ಸಾವು ಮತ್ತು ನೋವುಗಳ ಕಥೆಗಳೆಷ್ಟೋ ವ್ಯಥೆಗಳೆಷ್ಟೋ.
ಋಷಿ ಮೂಲ ಮತ್ತು ನದಿ ಮೂಲ ಹುಡುಕುಬಾರದು ಎಂಬ ನಂಬಿಕೆಯ ವಿಚಾರ ನಮಗೆ ತಿಳಿದಿದೆ, ಆದರೆ ಕರೋನ ಮೂಲ ಹುಡುಕುವುದು ಅನಿವಾರ್ಯವಾಗಿದೆ. ನಮ್ಮ ಪರಿಸರದಲ್ಲಿ ಮನುಷ್ಯ ಮತ್ತು ಪ್ರಾಣಿಗಳು ನಿಸರ್ಗದ ನೆಲ, ಜಲ, ಮತ್ತು ಇತರ ಸಂಪನ್ಮೂಲಗಳನ್ನು ಹಂಚಿಕೊಳ್ಳುತ್ತಾ ಒಂದು ಸಮತೋಲನದಲ್ಲಿರುವಾಗ ಮನುಷ್ಯ ತನ್ನ ದುರಾಸೆಗಳಿಂದ ಪ್ರಾಣಿಗಳಿಗೆ ಸಲ್ಲಬೇಕಾದ ಕಾಡು ಮೇಡುಗಳನ್ನು ಧ್ವಂಸ ಮಾಡುತ್ತಾ ನಮ್ಮ ಮತ್ತು ಪ್ರಾಣಿಗಳ ಅಂತರ ಸಂಪರ್ಕದಲ್ಲಿ ನಡೆದ ಕೆಲವು ಅನಾಹುತಗಳಲ್ಲಿ ಕರೋನವೆಂಬ ವೈರಾಣು ಪ್ರಾಣಿಗಳಿಂದ ಮನುಷ್ಯನನ್ನು ತಲುಪಲು ಸಾಧ್ಯವಾಗಿದೆ.
ತೀವ್ರಗತಿಯಲ್ಲಿ ಸಾಗುತ್ತಿದ್ದ ನಮ್ಮ ಬೇಕು, ಬೇಕುಗಳಿಗೆ ಬ್ರೇಕು ಹಾಕಿದ ಕರೋನ ನಮಗೆ ಹಲವಾರು ಪಾಠಗಳನ್ನು ಕಲಿಸಿದೆ. ಬದುಕೆಂಬುದು ಒಂದು ಸ್ಪರ್ಧೆಯೆಂದು ಪರಿಗಣಿಸಿ ನಿರಂತರವಾಗಿ ಪುರುಸೊತ್ತಿಲ್ಲದೆ ಓಡುತ್ತಿದ್ದ ನಮ್ಮನ್ನು ಕರೋನ ಹಿಡಿದಿಟ್ಟು ನಮ್ಮ ವೈಯುಕ್ತಿಕ ಬೇಡಿಕೆಗಳು ಮತ್ತು ಕೈಗಾರಿಕಾ ಉತ್ಪನ್ನಗಳು ಕಡಿಮೆಯಾಗಿವೆ. ಇದರ ಪರಿಣಾಮವಾಗಿ ನಮ್ಮ ಪರಿಸರ ಮಾಲಿನ್ಯ ಸುಧಾರಿಸಿ ತನಗೆ ತಾನೇ ತೆರೆದುಕೊಂಡ ಶುಭ್ರ ನದಿಗಳು ಸ್ವಚ್ಛ ನಗರಗಳು ನಮಗೆ ಹಲವಾರು ಸೂಚನೆಗಳನ್ನು ನೀಡಿವೆ. ನಮ್ಮ ಪರಿಸರದ ಬಗೆಗಿನ ನಿರ್ಲಕ್ಷ್ಯಗಳಿಗೆ ಕನ್ನಡಿ ಹಿಡಿದಂತಿದೆ. ಈ ಒಂದು ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯದ ಬಗ್ಗೆ ನಾವೆಲ್ಲರೂ ದೀರ್ಘವಾಗಿ ಆಲೋಚಿಸಬೇಕಾಗಿದೆ. “There is enough to meet everyone’s need but not the greed“ ಎಂದು ಗಾಂಧೀಜಿಯವರು ಹೇಳಿದ ಮಾತು ಇಂದು ಬಹಳ ಪ್ರಸ್ತುತವಾಗಿದೆ.
ಕರೋನ ಇಷ್ಟು ವ್ಯಾಪಕವಾಗಿ ಹರಡಲು ನಮ್ಮ ಸ್ವಾರ್ಥವೇ ಕಾರಣ. ಮಾರ್ಚ್ ತಿಂಗಳ ಮೊದಲನೇ ವಾರದಲ್ಲಿ ನಾನು ನೆಲೆಸಿರುವ ಇಂಗ್ಲೆಂಡ್ ಲಾಕ್ ಡೌನ್ ಆಗಬೇಕಿದ್ದು ನಮ್ಮ ವೈಯುಕ್ತಿಕ ಸ್ವಾತಂತ್ರ, ಕ್ರೀಡೆ, ಮೋಜು, ಮನೋರಂಜನೆ ಮತ್ತು ಪ್ರವಾಸ ಇವುಗಳ ನೆಪದಲ್ಲಿ ಅಮೂಲ್ಯವಾದ ಅವಕಾಶವನ್ನು ಕಳೆದುಕೊಂಡು ಗಳಿಸಿದ್ದೇನು? ಎಂಬುದನ್ನು ಸುಮಾರು ೪೩ ಸಾವಿರ ಸಾವು ಮತ್ತು ಲಕ್ಷಾಂತರ ಜನ ನಿರುದ್ಯೋಗ ಪಡೆದ ಹಿನ್ನೆಲೆಯಲ್ಲಿ ಪ್ರಶ್ನಿಸಬೇಕಾಗಿದೆ.
ಇಂಗ್ಲೆಂಡಿನಲ್ಲಿ ಮತ್ತು ಯೂರೋಪಿನ ಇಟಲಿ ಸ್ಪೇನ್ ಮುಂತಾದ ದೇಶಗಳಲ್ಲಿ ಕರೋನ ಹರಡುವಿಕೆಯನ್ನು ಈ ವರ್ಷದ ಜುಲೈ ತಿಂಗಳಲ್ಲಿ ಹತೋಟಿಗೆ ತಂದಿದ್ದು ಎಲ್ಲರಿಗೂ ನೆಮ್ಮದಿಯ ವಿಚಾರವಾಗಿತ್ತು. ಸರ್ಕಾರ ಹಿಂದೆ ಹೇರಿದ್ದ ಹಲವಾರು ನಿರ್ಬಂಧನೆಗಳನ್ನು ಸಡಿಲಗೊಳಿಸಿತು. ಬೇಸಿಗೆ ಸಮಯದಲ್ಲಿ ಎಲ್ಲರು ಮತ್ತೆ ಪ್ರವಾಸ, ಪಿಕ್ನಿಕ್ ಗಳನ್ನು ಮತ್ತೆ ಶುರುಮಾಡಿಕೊಂಡರು. ಮನೆಯಿಂದಷ್ಟೇ ಕೆಲಸ ಮಾಡುತ್ತಿದ್ದವರು ಮತ್ತೆ ಕಛೇರಿ, ಫ್ಯಾಕ್ಟರಿಗಳಿಗೆ ಮರಳಿದರು.
ಸೆಪ್ಟೆಂಬರ್ ಹೊತ್ತಿಗೆ ಶಾಲೆಗಳು ಮತ್ತು ವಿಶ್ವ ವಿದ್ಯಾಲಯಗಳು ತೆರೆದುಕೊಂಡವು. ಇಂಗ್ಲೆಂಡಿನ ಯೂನಿವರ್ಸಿಟಿಗಳ ಸಂಸ್ಕೃತಿಯಲ್ಲಿ ಹೊಸದಾಗಿ ಸೇರಿದ ವಿದ್ಯಾರ್ಥಿಗಳು ಸಾಮೂಹಿಕವಾಗಿ ಸೇರಿಕೊಂಡು, ಹೊಸಮುಖಗಳನ್ನು ಪರಿಚಯಿಸಿಕೊಂಡು ಒಟ್ಟಿಗೆ ಕುಡಿದು, ತಿಂದು, ನಲಿದು, ಬೀದಿಗಳಲ್ಲಿ ಹಾಸ್ಟೇಲ್ ಮತ್ತು ಪಬ್ಬುಗಳಲ್ಲಿ ಮೋಜಿನ ಪಾರ್ಟಿ ಆಚರಿಸುವುದು ಸಾಮಾನ್ಯ. ಆರು ತಿಂಗಳಿಗೂ ಹೆಚ್ಚಿನ ಸಮಯ ಮನೆಯಲ್ಲಿ ಕುಳಿತು ಬೋರಾಗಿದ್ದ ಯುವ ಜನತೆಗೆ ಈ ಬಿಡುಗಡೆಯ ಅವಕಾಶ ದೊರೆಕಿದ್ದು ಕರೋನ ಪಿಡುಗನ್ನು ಲೆಕ್ಕಿಸಿದೆ ಎಲ್ಲರು ಎಲ್ಲರೊಡನೆ ಬೆರೆತು ೧೮ ರಿಂದ ೩೦ ವಯಸ್ಸಿನ ಯುವಜನತೆಯಲ್ಲಿ ಕರೋನ ಅಧಿಕವಾಗಿ ಕಾಣಿಸಿಕೊಂಡಿದೆ. ಹೋಟೆಲ್ ಮತ್ತು ಪಬ್ ಗಳು ಕಳೆದ ಆರು ತಿಂಗಳ ನಷ್ಟವನ್ನು ತುಂಬಿಸಿಕೊಳ್ಳಲು ಮತ್ತೆ ತಮ್ಮ ಬಾಗಿಲುಗಳನ್ನು ತೆರೆದಿವೆ. ಕರೋನ ಪಿಡುಗು ಹತೋಟಿಯಲ್ಲಿದೆ ಎಂಬ ವಿಶ್ವಾಸ ಜನಸಾಮಾನ್ಯರನ್ನು ಹುರಿದುಂಬಿಸಿದ್ದು ಎಲ್ಲರೂ ತಮ್ಮ ಕಟ್ಟುನಿಟ್ಟುಗಳನ್ನು ಗಾಳಿಗೆ ತೂರಿದ್ದಾರೆ. ಇದರ ಎಲ್ಲ ಪರಿಣಾಮದಿಂದ ಹತೋಟಿಯಲ್ಲಿದ್ದ ಕರೋನ ಈಗ ಮತ್ತೆ ತಲೆಯೆತ್ತಿದೆ. ಬ್ರಿಟನ್ನಿನ ಸರ್ಕಾರವು ನರಳುತ್ತಿರುವ ಹೋಟೆಲ್ ಉದ್ಯಮಕ್ಕೆ ಪರಿಹಾರವನ್ನು ಮತ್ತು ತಾತ್ಕಾಲಿಕ “ಈಟ್ ಔಟ್ ಟು ಹೆಲ್ಪ್ ಔಟ್” ಯೋಜನೆಯನ್ನು ಜಾರಿಗೆತಂದಿತು.
ತೀವ್ರಗತಿಯಲ್ಲಿ ಸಾಗುತ್ತಿದ್ದ ನಮ್ಮ ಬೇಕು, ಬೇಕುಗಳಿಗೆ ಬ್ರೇಕು ಹಾಕಿದ ಕರೋನ ನಮಗೆ ಹಲವಾರು ಪಾಠಗಳನ್ನು ಕಲಿಸಿದೆ. ಬದುಕೆಂಬುದು ಒಂದು ಸ್ಪರ್ಧೆಯೆಂದು ಪರಿಗಣಿಸಿ ನಿರಂತರವಾಗಿ ಪುರುಸೊತ್ತಿಲ್ಲದೆ ಓಡುತ್ತಿದ್ದ ನಮ್ಮನ್ನು ಕರೋನ ಹಿಡಿದಿಟ್ಟು ನಮ್ಮ ವೈಯುಕ್ತಿಕ ಬೇಡಿಕೆಗಳು ಮತ್ತು ಕೈಗಾರಿಕಾ ಉತ್ಪನ್ನಗಳು ಕಡಿಮೆಯಾಗಿವೆ.
ಬ್ರಿಟನ್ನಿನ ಸಂಸ್ಕೃತಿಯಲ್ಲಿ ಶತಮಾನಗಳಿಂದ ಮನೆಯವರು, ಬಂಧು ಬಳಗದವರೊಂದಿಗೆ ಮತ್ತು ಗೆಳೆಯರೊಂದಿಗೆ ಪಬ್ಬಿಗೆ ಹೋಗಿ ಪಬ್ಬಿನಲ್ಲಿ ಇರುವ ಸಂಕುಚಿತ ಸ್ಥಳಾವಕಾಶದಲ್ಲಿ ಒಬ್ಬರಿಗೊಬ್ಬರು ತೀರಾ ಹತ್ತಿರದಲ್ಲಿ ನಿಂತು ಲಾಗರ್ ಕುಡಿಯುವುದು ಸಾಮಾಜಿಕ ಪದ್ಧತಿ. ಕರೋನ ಸೋಂಕು ಹೆಚ್ಚಾಗಲು ಈ ರೀತಿಯ ಸಾಮಾಜಿಕ ವರ್ತನೆ ಬಹಳ ಅನೂಕೂಲಕರವಾದದ್ದು. ಪಬ್ಬುಗಳನ್ನು ಈ ಕರೋನ ಸಂದರ್ಭದಲ್ಲಿ ಮತ್ತೆ ಮುಚ್ಚುವುದರ ಬಗ್ಗೆ ಜನ ಸಾಮಾನ್ಯರಿಗಾಗಲಿ ಅಥವಾ ಸರ್ಕಾರಕ್ಕಾಗಲಿ ಆಸಕ್ತಿಯಿಲ್ಲ ಮತ್ತು ಅದು ಸಮ್ಮತವಾಗುವ ವಿಚಾರವಲ್ಲ. ಮೊನ್ನೆ ಲಿವರ್ಪೂಲ್ ನಗರದಲ್ಲಿ ಈ ಕ್ರಮ ಜಾರಿಗೆ ತಂದಾಗ ಬಹಳಷ್ಟು ಜನರು ಅಸಮಾಧಾನವನ್ನು ವ್ಯಕ್ತಪಡಿಸಿದರು. ನಮ್ಮ ಭಾರತೀಯ ಸಂಸ್ಕೃತಿಯ ದೃಷ್ಟಿಯಲ್ಲಿ ಈ ವಿಚಾರವನ್ನು ನೋಡುವವರಿಗೆ ಆಂಗ್ಲರ ಈ ಸಾಮಾಜಿಕ ವರ್ತನೆ ವಿಚಿತ್ರವೆನಿಸಬಹುದು. ಹಾಗೆಯೇ ಈ ವಿಚಾರ ಈ ಜನರಿಗೆ ಏಕೆ ತಿಳಿಯುವುದಿಲ್ಲ ಎನ್ನುವ ಭಾವನೆ ನಮಗೆ ಸಹಜವಾಗಿ ಮೂಡಬಹುದು. ಪಾಶ್ಚಿಮಾತ್ಯರಿಗೆ ತಮ್ಮ ಪಬ್ಬುಗಳು, ಪ್ರವಾಸಗಳು, ಸೋಷಿಯಲ್ ಕೂಟಗಳು ಬಹಳ ಮುಖ್ಯವಾದ ವಿಚಾರ ಮತ್ತು ಅದಕ್ಕೆ ಹೆಚ್ಚಿನ ಆದ್ಯತೆ ಕೊಡುತ್ತಾರೆ. ಶ್ರೀಮಂತ ಮತ್ತು ಸುಶೀಕ್ಷಿತ ಪಾಶ್ಚಿಮಾತ್ಯ ದೇಶಗಳಲ್ಲಿ ಕರೋನ ಪಿಡುಗನ್ನು ಹತೋಟಿಯಲ್ಲಿ ಇಡಲು ಸರ್ಕಾರ ಮತ್ತು ಆರೋಗ್ಯ ವ್ಯವಸ್ಥೆ ಹೆಣಗುತ್ತಿರುವುದಕ್ಕೆ ಬಹುಶಃ ಇಲ್ಲಿಯ ಮುಕ್ತ ಜೀವನ ಶೈಲಿ ಕಾರಣವಾಗಿರಬಹುದು.
ಪಾಶ್ಚಿಮಾತ್ಯ ಸಮಾಜದಲ್ಲಿ ಜನರಿಗೆ ತಮ್ಮ ಬಳಿ ಉತ್ತಮವಾದ ಆರೋಗ್ಯ ವ್ಯವಸ್ಥೆ, ವೈದ್ಯಕೀಯ ಪರಿಣತಿ ಮತ್ತು ಉಪಕರಣಗಳಿರುವುದರ ಬಗ್ಗೆ ಅತಿಯಾದ ಆತ್ಮವಿಶ್ವಾಸವಿದ್ದು ತಾವು ಜಗತ್ತಿನ ಎಲ್ಲ ರೋಗಗಳನ್ನು ನಿಭಾಯಿಸಿ ಗೆಲ್ಲುವ ಸಾಮರ್ಥ್ಯ ಉಳ್ಳವರು ಎಂಬ ನಂಬಿಕೆಗಳನ್ನು ಕರೋನ ಸುಳ್ಳಾಗಿಸಿದೆ.
ಶ್ರೀಮಂತ ರಾಷ್ಟ್ರವಾದ ಅಮೇರಿಕದಲ್ಲಿ, ವಿಶ್ವಾಸದಲ್ಲೇ ಅತಿ ಹೆಚ್ಚಿನ ಕರೋನ ಸೋಂಕು (೮ ಮಿಲಿಯನ್) ಕಾಣಿಸಿಕೊಂಡಿರುವುದು ಆಶ್ಚರ್ಯಕರವಾದ ಸಂಗತಿ. ಅಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ಎರಡು ಲಕ್ಷಜನ ಕರೋನ ಖಾಯಿಲೆಯಿಂದ ಸತ್ತಿದ್ದಾರೆ ಎನ್ನುವ ವಿಚಾರವನ್ನು ನಂಬುವುದು ಕಷ್ಟ. ಅಲ್ಲಿಯ ಜನ ನಾಯಕ ಟ್ರಂಪ್ ಈ ಖಾಯಿಲೆಯನ್ನು ‘ಸಣ್ಣ ಫ್ಲೂ’ ಎಂದು ಅಲ್ಲಗೆಳೆದು ವೈದ್ಯಕೀಯ ಸಲಹೆಗಳನ್ನು ನಿರ್ಲಕ್ಷಿಸಿ ಮಾಸ್ಕ್ ಧರಿಸುವುದನ್ನು ರಾಜಕೀಯಗೊಳಿಸಿ ಕೊನೆಗೆ ಕಳೆದ ವಾರ ತಾನೇ ಈ ಖಾಯಿಲೆಗೆ ಒಳಗಾದ. ತನ್ನ ಸೋಂಕನ್ನು ಶ್ವೇತ ಭವನದಲ್ಲಿ ಇತರರಿಗೂ ಹರಡಿದ ಎಂದು ಶಂಕಿಸಲಾಗಿದೆ. ಉತ್ತಮವಾದ ವೈದ್ಯಕೀಯ ಚಿಕಿತ್ಸೆಯಿಂದ ಗುಣಮುಖನಾಗಿ ಅದರ ಬಗ್ಗೆ ಜವಾಬ್ದಾರಿಯಿಂದ ವರ್ತಿಸದೆ ಅದನ್ನು ವೈಯುಕ್ತಿಕ ಗೆಲುವು ಮಾಡಿಕೊಂಡು ಖಾಯಿಲೆಯ ತೀವ್ರತೆಯ ಬಗ್ಗೆ ಸುಳ್ಳು ಆಶ್ವಾಸನೆಗಳನ್ನು ನೀಡುತ್ತಿದ್ದಾನೆ. ಜನ ನಾಯಕನ ಈ ವರ್ತನೆಯಿಂದಾಗಿ ಅವನ ಅನುಯಾಯಿಗಳು ಕಿಕ್ಕಿರಿದ ಸಭೆಗಳಲ್ಲಿ ಮಾಸ್ಕ್ ಧರಿಸದೇ, ಸೋಷಿಯಲ್ ಡಿಸ್ಟನ್ಸಿಂಗ್ (ವ್ಯಕ್ತಿ ಮಧ್ಯದ ಅಂತರ) ಗಮನಿಸದೆ ಅಮೇರಿಕಾದಲ್ಲಿ ಸೋಂಕು ದಿನೇ ದಿನೇ ಹೆಚ್ಚಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಅಮೇರಿಕಾದಲ್ಲಿ ನಡೆಯುತ್ತಿರುವ ನವೆಂಬರ್ ಚುನಾವಣೆಯ ಫಲಿತಾಂಶವನ್ನು ಕರೋನ ಪಿಡುಗು ತಕ್ಕ ಮಟ್ಟಿಗೆ ನಿರ್ಧರಿಸಬಹುದು ಎಂದು ಪತ್ರಕರ್ತರು ಮತ್ತು ರಾಜಕಾರಣಿಗಳು ಊಹಿಸಿದ್ದಾರೆ. ಕೆಲವು ತಿಂಗಳ ಹಿಂದೆ ನ್ಯೂಯಾರ್ಕ್ ನಗರದಲ್ಲಿ ಮಧ್ಯಮ ವರ್ಗದ ನಿವಾಸಿಗಳು ಫುಡ್ ಬ್ಯಾಂಕ್ ಗಳಲ್ಲಿ ಹಸಿವೆಯಿಂದ ಕ್ಯೂ ನಿಂತಿದ್ದು ಮತ್ತು ಮೇಲೆ ಪ್ರಸ್ತಾಪಿಸಿದ ಕರೋನ ಪಿಡುಗಿನ ಅಂಕಿ ಅಂಶಗಳ ಹಿನ್ನೆಲೆಯಲ್ಲಿ ‘Let’s Make America Great Again’ ಎಂದು ಹೇಳುವ ಅಧ್ಯಕ್ಷರ ಮಾತುಗಳ ಬಗ್ಗೆ ಆಲೋಚಿಸಬೇಕಾಗಿದೆ.
ಇನ್ನು ಕರೋನ ಪಿಡುಗಿನ ಸಂದರ್ಭದಲ್ಲಿ ನಾವು ಪಡೆದುಕೊಂಡಿದ್ದೇನು? ಎಂಬುದರ ಬಗ್ಗೆ ಚಿಂತಿಸೋಣ; ಯಾಂತ್ರಿಕವಾದ ನಮ್ಮ ಬದುಕಿನಲ್ಲಿ ಕರೋನದಿಂದಾಗಿ ಒದಗಿದ ಪುರುಸೊತ್ತಿನಿಂದ ನಮ್ಮ ಕೆಲವು ಓದು ಬರಹ ಮತ್ತು ಇತರ ಹವ್ಯಾಸಗಳಲ್ಲಿ ತೊಡಗಲು ಸಾಧ್ಯವಾಗಿದೆ. ಈ ಹವ್ಯಾಸಕ್ಕೆ ಪೂರಕವಾಗಿ ವಾಟ್ಸಾಪಿನಲ್ಲಿ (WhatsApp) ಈಗ ಮುಕ್ತವಾಗಿ ದೊರೆತಿರುವ ಈ-ಪುಸ್ತಕಗಳು ಚಾಲನೆಯಲ್ಲಿವೆ. ವಾಟ್ಸಾಪಿನಲ್ಲಿ ಜನಸಾಮಾನ್ಯರು ತಮ್ಮ ಅಡುಗೆ ಮಾಡುವ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. ಇನ್ನು ಕೆಲವರು ಕೆಲವು ಸುದ್ದಿ ಸಮಾಚಾರಗಳನ್ನು ತಮ್ಮ ಅನೂಕೂಲಕ್ಕೆ ಬೇಕಾದ ರೀತಿಯಲ್ಲಿ ತಿರುಚಿ ತಮ್ಮ ಅಭಿಪ್ರಾಯಗಳನ್ನು ಎಲ್ಲರ ಮೇಲೆ ಹೇರಿದ್ದಾರೆ! ಫೇಸ್ ಬುಕ್ಕಿನಲ್ಲಿ ನಕ್ಕವರು, ನಲಿದವರು, ಹಾಡಿದವರು, ಕವನ ಓದಿದವರು ಕಾಣಿಸಿಕೊಳ್ಳುತ್ತಾರೆ. ಸಾವು, ನೋವು ಮತ್ತು ಸಂಕಟಗಳ ನಡುವೆ ಅನಿವಾರ್ಯ ಒತ್ತಡಗಳಿಂದ ದೈಹಿಕವಾಗಿ ದೂರವಿದ್ದರೂ ಮಾನಸಿಕವಾಗಿ ಹತ್ತಿರವಾಗಿರಲು ಪ್ರಯತ್ನಿಸಿದ್ದಾರೆ.
ಜನ ಸಾಮಾನ್ಯರಿಗೆ ಸುಲಭವಾಗಿ ನಿಲುಕದ ಕೆಲವು ಹೆಸರಾಂತ ಗಾಯಕರು, ಸಿನಿಮಾ ನಟರು ಹಾಗೂ ವಾಗ್ಮಿಗಳು ಜೂಮ್ ಮೀಟಿಂಗುಗಳ ಮೂಲಕ ಈ ಕಷ್ಟದ ಸಮಯದಲ್ಲಿ ತಮ್ಮದೊಂದು ಅಳಿಲುಸೇವೆ ಇರಲಿ, ತಮಗೂ ಸಾಮಾಜಿಕ ಜವಾಬ್ದಾರಿಗಳಿವೆ ಎನ್ನುತ್ತಾ ಯಾವ ನಿರೀಕ್ಷೆಗಳಿಲ್ಲದೆ ಮುಕ್ತವಾಗಿ ಮನೋರಂಜನೆ ನೀಡಿದ್ದಾರೆ.
ನಮ್ಮ ಆದ್ಯತೆಗಳನ್ನು ಪರಿಶೀಲಿಸಿ ಅದಕ್ಕೆ ತಕ್ಕ ಹೊಂದಾಣಿಕೆ ಮಾಡಿಕೊಂಡು ಹೇಗೆ ಬದುಕಬಹುದು ಎಂಬದರ ಅರಿವು ನಮಗೆ ಉಂಟಾಗಿದೆ. ಹಿಂದೆ ನಮಗೆ ಯಾವುದು ಅಗತ್ಯ ಹಾಗೂ ಅನಿವಾರ್ಯವೆಂದು ನಂಬಿದ್ದೆವೊ ಅದನ್ನು ಕೈಬಿಟ್ಟು ಬದುಕಲು ಸಾಧ್ಯ ಎಂಬುದನ್ನು ಕಂಡುಕೊಂಡಿದ್ದೇವೆ. ತಂತ್ರಜ್ಞಾವನ್ನು ಈ ಸಂದರ್ಭದಲ್ಲಿ ಸಂಪರ್ಕ, ವಿಚಾರ ವಿನಿಮಯ ಇತ್ಯಾದಿಗಳಿಗೆ ಯಶಸ್ವಿಯಾಗಿ ಬಳೆಸಿಕೊಂಡಿದ್ದೇವೆ. ವರ್ಚುಯಲ್ ವೇದಿಕೆಗಳನ್ನು ನಿರ್ಮಿಸಿ ಅಮೇರಿಕಾದಿಂದ ಹಿಡಿದು ಆಸ್ಟ್ರೇಲಿಯಾವರೆಗೆ ಏಕಕಾಲದಲ್ಲಿ ನೂರಾರು ಜನರು ಭಾಗವಹಿಸಬಹುದಾದಂತ ವಿಚಾರ ಗೋಷ್ಠಿಯನ್ನು ಏರ್ಪಡಿಸಲು ಸಾಧ್ಯವಾಗಿದೆ. ವೈದ್ಯರು ತಮ್ಮ ರೋಗಿಗಳ ಕ್ಷೇಮವನ್ನು ದೂರವಾಣಿ ಹಾಗು ವಿಡಿಯೋಗಳ ಮೂಲಕ ವಿಚಾರಿಸಿ ಸಲಹೆಗಳನ್ನು ಕೊಡಬಹುದಾಗಿದೆ. ಹೀಗೆ ನಮ್ಮ ನಮ್ಮ ಕಾರ್ಯಕ್ಷೇತ್ರಗಳಲ್ಲಿ ಕ್ರಿಯಾಶೀಲಾ ನೂತನ ಕಾರ್ಯ ವಿಧಾನಗಳನ್ನು ಕಂಡುಕೊಂಡಿದ್ದೇವೆ. ಕರೋನ ವೈರಾಣು ಮತ್ತು ಖಾಯಿಲೆಯ ಚಿಕಿತ್ಸೆಯ ಬಗ್ಗೆ, ರೋಗ ನಿರೋಧಕ ಲಸಿಕೆಯ ಬಗ್ಗೆ ಸಂಶೋಧನೆ ಭರದಲ್ಲಿ ಸಾಗಿದೆ.
ಕರೋನ ಪಿಡುಗಿನಲ್ಲಿ ಉಂಟಾಗಿರುವ ಕಷ್ಟ ನಷ್ಟಗಳನ್ನು ಹಾಗೂ ಇಡೀ ಸಂದರ್ಭವನ್ನು ಹಿಂದಿನ ಮಹಾ ಯುದ್ಧಕ್ಕೆ ಹೋಲಿಸಲಾಗಿದೆ. ಆಗ ಮನುಷ್ಯ ಮನುಷ್ಯನಿಗೇ ಶತ್ರುವಾಗಿದ್ದ. ಆದರೆ ಈಗ ನಮ್ಮ ಮುಂದೆ ಇರುವ ಶತ್ರು ಮನುಷ್ಯನಾಗದೇ ಕಣ್ಣಿಗೆ ಕಾಣದ ಮತ್ತು ಜಾತಿ, ಧರ್ಮ, ಗಡಿಗಳನ್ನು ಲೆಕ್ಕಿಸದ ವೈರಾಣು! ಇದರ ನೆಪದಲ್ಲಿಯಾದರೂ ಮನುಜಕುಲ ಒಟ್ಟಿಗೆ ಸೇರಿರುವುದು ಒಂದು ನೆಮ್ಮದಿಯ ವಿಚಾರ.
ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವಾ ಸಂಸ್ಥೆಯ ಮುಂಚೂಣಿಯಲ್ಲಿ ನಿಂತು ತಮ್ಮ ಜೀವ ಭಯವನ್ನು ತೊರೆದು ಉತ್ಕೃಷ್ಟ ಸೇವೆಯನ್ನು ನಿರಂತರವಾಗಿ ನೀಡಿದ ವೈದ್ಯರು, ದಾದಿಯರು ಮತ್ತು ಇತರ ಸಿಬ್ಬಂದಿಗಳು ಎಲ್ಲರ ಮೆಚ್ಚುಗೆಗಳನ್ನು ಗಳಿಸಿದ್ದಾರೆ. ಇವರಿಗೆ ನಮ್ಮ ಪ್ರಶಂಸೆಗಳನ್ನು ವ್ಯಕ್ತಪಡಿಸುತ್ತ ಬದುಕಿನ ನಶ್ವರತೆಯ ಬಗ್ಗೆ ಚಿಂತಿಸಿದ್ದೇವೆ. ಆರೋಗ್ಯ ಸೇವೆಗೆ ಬೇಕಾದ ಧನಸಹಾಯದ ಮೂಲಕ ನಮ್ಮ ದಾನ ಶೀಲತೆಯನ್ನು ದಾಖಲಿಸಿ ನಮ್ಮ ಹೃದಯ ವೈಶಾಲ್ಯವನ್ನು ವಿಸ್ತರಿಸಿದ್ದೇವೆ. ಹಾಗೆ ಈ ಸಂದರ್ಭದಲ್ಲಿ ತನ್ನ ಶಕ್ತಿಗನುಸಾರವಾಗಿ ಶ್ರಮವಹಿಸಿ ೩೨ ಮಿಲಿಯನ್ ಪೌಂಡ್ಸ್ ನಿಧಿಯನ್ನು ಸಂಗ್ರಹಿಸಲು ಕಾರಣರಾದ ಶತಾಯುಷಿ ಸರ್ ಕ್ಯಾಪ್ಟನ್ ಟಾಮ್ ಮೂರ್ ತರಹದ ಆದರ್ಶ ಪ್ರಾಯರನ್ನು ಕಂಡಿದ್ದೇವೆ.
ಈ ಕರೋನ ಪಿಡುಗನ್ನು ನಿಭಾಯಿಸಲು ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಪ್ರತಿಯೊಬ್ಬರಿಗೂ ತಮ್ಮದೇ ಆದ ವೈಯುಕ್ತಿಕ ಜವಾಬ್ದಾರಿಗಳಿವೆ ಎಂಬುದನ್ನು ಅರಿತುಕೊಳ್ಳಬೇಕು. ಕರೋನವೆಂಬ ಪಿಡುಗು ಯಾವುದೇ ಒಂದು ದೇಶ ಪ್ರಾಂತ್ಯಕ್ಕೆ ಸೀಮಿತವಾಗಿಲ್ಲ. ಅದು ವಿಶ್ವವ್ಯಾಪ್ತಿಯಾದ ಪಿಡುಗು. ದೇಶ ದೇಶಗಳು ತಮ್ಮ ತಮ್ಮ ಹಿತಾಸಕ್ತಿಗಳನ್ನು ನೋಡಿಕೊಳ್ಳುವುದರ ಜೊತೆಗೆ ಒಂದು ಸಾರ್ವತ್ರಿಕ ನಿಲುವು ತೆಗೆದುಕೊಂಡು ನಾವು ವಿಶ್ವಮಾನವರೆಂಬ ಪ್ರಜ್ಞೆಯಲ್ಲಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಎಂದಿಗಿಂತ ಇಂದು ಗ್ಲೋಬಲ್ ಸಹಕಾರ ಮತ್ತು ಪರಿಹಾರ ಅತ್ಯಗತ್ಯ.
ಡಾ. ಜಿ.ಎಸ್. ಶಿವಪ್ರಸಾದ್ ವೃತ್ತಿಯಲ್ಲಿ ವೈದ್ಯರು. ಇಂಗ್ಲೆಂಡ್ ನ ಶೆಫ್ಪೀಲ್ಡ್ ನಲ್ಲಿ ನೆಲೆಸಿದ್ದಾರೆ. ಇವರ ಒಂದು ಕವನ ಸಂಕಲನ ಹಾಗೂ ಪ್ರವಾಸ ಕಥನ ಪ್ರಕಟವಾಗಿವೆ.