ಛತ್ರಪತಿ ಶಿವಾಜಿ ರೈಲ್ವೇಸ್ಟೇಷನ್ನಿನಲ್ಲಿ ಇಡೀ ಮುಂಬೈ ನಗರಿಯೇ ತನ್ನ ಹ್ರಸ್ವ ಸ್ವರೂಪದಲ್ಲಿ ಕವುಚಿಕೊಂಡಂತಿತ್ತು. ಎಡಕ್ಕೆ ದೂರದ ರಾಜ್ಯಗಳಿಂದ ಬಂದ ರೈಲುಗಳು. ಬಲಕ್ಕೆ ಲೋಕಲ್‌ನವು. ಅವುಗಳಿಂದ ಇಳಿಯುತ್ತಿದ್ದ ಸಾವಿರ ಸಾವಿರ ಸಂಖ್ಯೆಯ ಜನಸಮೂಹದ ರಣಕೋಲಾಹಲ ಸ್ಟೇಷನ್ನಿನ ಎತ್ತರದ ಛಾವಣಿಗೆ ತಾಕಿ ಸೆಲೆಯೊಡೆದು ಮತ್ತೆ ನೆಲಕ್ಕೆ ಬಡಿಯುವಂತಿತ್ತು. ಈ ಬಡಿತದಿಂದ ಅಲ್ಲಿದ್ದ ಜನಸಮೂಹವೆಲ್ಲ ತತ್ತರಿಸಿ ಎತ್ತೆತ್ತಲೋ ದಾರಿಕಾಣದೆ ಪರದಾಡುವಂತಿತ್ತು. ಬೆಂಗಳೂರಿನ ಉದ್ಯಾನ್ ಎಕ್ಸ್‌ಪ್ರೆಸ್ ರಾತ್ರಿ ಎಂಟು ಘಂಟೆಗೆ ಮುಂಬೈ ತಲುಪಬೇಕಿದ್ದುದು, ಹತ್ತುವರೆಗೆ ಶಿವಾಜಿ ನಿಲ್ದಾಣ ಮುಟ್ಟಿತ್ತು. ಅಲ್ಲೇ ಹತ್ತುವರೆಗೆ ಅಹಮದಾಬಾದ್ ಎಕ್ಸ್‌ಪ್ರೆಸ್ ಹಿಡಿಯಬೇಕಿದ್ದ ನನಗೆ ದಾದರಿನಲ್ಲಿಯೇ ಅದು ಎದುರಾದದ್ದನ್ನು ಕಂಡು ಬೇಸರವಾಯಿತೊ, ನಗುಬಂದಿತೊ ಅರ್ಥವಾಗಲಿಲ್ಲ. ನನ್ನ ಇಷ್ಟು ವರ್ಷಗಳ ಬದುಕಿನ ಪ್ರಯಾಣದಲ್ಲಿ ಆಗಿಹೋಗಿದ್ದ ಇಂಥ ನೂರಾರು ಅನುಭವಗಳಲ್ಲಿ ಇದೂ ಒಂದಾಗಿದ್ದುದರಿಂದ ನಿರುದ್ವಿಗ್ನ ಮನಸ್ಸಿನಿಂದಲೇ, ನಾನು ಹತ್ತಬೇಕಿದ್ದ ರೈಲುಗಾಡಿ ಎದುರಿಗೇ ತಪ್ಪಿಹೋದದ್ದನ್ನು ನೋಡಿದೆ. ಹನ್ನೊಂದು ಘಂಟೆಗೆ ಛತ್ರಪತಿ ಶಿವಾಜಿ ನಿಲ್ದಾಣದಲ್ಲಿ ಇಳಿದು ಅಲ್ಲಿ ಸೃಷ್ಟಿಯಾಗಿದ್ದ ಅಸಾಧ್ಯ ಗದ್ದಲದಿಂದ ಪಾರಾಗುವುದು ಹೇಗೆ ಎಂಬುದೇ ಹೊಳೆಯಲಿಲ್ಲ. ಅಷ್ಟುದೂರ ಸಾವಿರಾರು ಜನಸಮೂಹವನ್ನು ಹೊತ್ತುತಂದ ಉದ್ಯಾನ್ ನಿಶ್ಚಲವಾಗಿತ್ತು. ರೈಲೊಳಗೆ ಸುಸ್ತುಹೊಡೆದು ಕೂತಿದ್ದವರು, ಇದ್ದಕ್ಕಿದಂತೆಯೇ ಕೂಲಿಯವರೊಂದಿಗೆ ಗಂಟಲು ಹರಿದುಕೊಳ್ಳುತ್ತ ತಂತಮ್ಮ ಸಾಮಾನು ಸರಂಜಾಮು, ಬಂಧುಬಳಗದವರನ್ನು ಕಲೆಹಾಕುತ್ತಿದ್ದರು.
ಬಲ ಹೆಗಲಿನಲ್ಲಿ ಒಂದೇ ಬ್ಯಾಗಿನೊಡನೆ ಇದ್ದ ನಾನು ಅಲ್ಲೇ ಸಿಕ್ಕ ಟೀಸಿಯನ್ನು ಮುಂದಿನ ಪ್ರಯಾಣ ಕುರಿತು ವಿಚಾರಿಸಿದೆ. ಆತ ಹೇಳಿದ್ದೆಂದರೆ, ಮತ್ತೆ ಅಹಮದಾಬಾದಿಗೆ ಹೋಗುವ ಗಾಡಿ ಇರುವುದು ಬೆಳಗಿನ ಐದು ಘಂಟೆಗೆ. ಬೆಂಗಳೂರಿಂದ ಮಾಡಿಸಿಕೊಂಡು ಬಂದಿರುವ ಟಿಕೇಟ್‌ಗೆ ರಿಸರ್ವೇಷನ್ ಸೀಟು ಸಿಗುವುದಿಲ್ಲ. ಆದರೆ ಜನರಲ್ ಕಂಪಾರ್ಟ್‌ಮೆಂಟಿನಲ್ಲಿ ಸೀಟು ಹಿಡಿದು ಹೋಗಬಹುದು. ಟಿಕೇಟು ತೆಗೆದುಕೊಳ್ಳಬೇಕಾಗಿಲ್ಲ ಎಂದ. ದೂರದ ದೊಡ್ಡ ಗಡಿಯಾರವೊಂದರಲ್ಲಿ ಗಂಟೆ ಹನ್ನೊಂದಾಗಿತ್ತು. ಇನ್ನೂ ಆರು ಘಂಟೆ ಕಳೆಯುವುದೆಲ್ಲಿ ಎಂದು ಸ್ಟೇಷನ್ನಿನಿಂದ ಈಚೆಬಂದೆ. ಹೆಬ್ಬಾಗಿಲಿನಿಂದಲೇ ಎರಡೂ ಬದಿಯಲ್ಲಿ ಸಾಲು ಸಾಲು ವ್ಯಾಪಾರದವರು. ಕಿತ್ತ ಸೂಟ್‌ಕೇಸ್‌ಗಳ ರಿಪೇರಿಯವರು. ಚಪ್ಪಲಿ ಅಂಗಡಿಗಳು. ಕಪ್ಪುಕನ್ನಡಕ, ವಾಚ್‌ಗಳನ್ನು ಮೈಮೇಲೆಲ್ಲಾ ತಗುಲಿಸಿಕೊಂಡು ಹೋಗಿಬರುವವರ ಕಿವಿಗೆ ಗುಟ್ಟಾಗಿ ವಿದೇಶಿಮಾಲು ಎನ್ನುತ್ತಿದ್ದರು. ಎಲ್ಲಿಗಾದರೂ ಸರಿ, ಸಾಮಾನು ಸಹಿತ ಎತ್ತಿಹಾಕಿಕೊಂಡು ಹೋಗಿಬಿಡುತ್ತೇವೆ ಎಂಬಂತಿದ್ದ ಟ್ಯಾಕ್ಸಿ, ರಿಕ್ಷಾಡ್ರೈವರ್‌ಗಳ ಗದ್ದಲ, ಅರಚಾಟ. ಕಣ್ಣಾಡಿಸಿದ ಕಡೆಯೆಲ್ಲ ಗನ್ ಹಿಡಿದ ಕೈಗಳ ರಕ್ತ ಮೆತ್ತಿದ ಮುಖಗಳ, ಕೆಳಗೆಬಿದ್ದು ಅಳುತ್ತಿದ್ದ ಅರೆಬೆತ್ತಲೆ ಸುಂದರಿಯರ, ಬೆಂಕಿಹೊಗೆ ಉಗುಳುವ ಕಟ್ಟಡಗಳ ಹಿನ್ನೆಲೆಯ ಬಣ್ಣಬಣ್ಣದ ಸಿನಿಮಾ ವಾಲ್ ಪೋಸ್ಟರುಗಳು. ಅಲ್ಲಿಂದಾಚೆಗೆ ಸ್ಟೇಷನ್ನಿನ ಎತ್ತರಕ್ಕೆ ಸೆಡ್ಡು ಹೊಡೆದುನಿಂತ ಪುರಾತನ ಕಟ್ಟಡಗಳು. ಅದರ ಸಂದುಗೊಂದುಗಳಲ್ಲಿ ಗುರುಗುರು ಗಟುರು ಹಾಕುತ್ತ ಕೂರಲು, ಹಾರಲು ನೆಲೆಯಿಲ್ಲದಂತೆ ಪರದಾಡುತ್ತಿದ್ದ ಅಸಂಖ್ಯಾತ ಪಾರಿವಾಳಗಳ ಸಮೂಹ. ಆ ಕಟ್ಟಡಗಳ ಒಳಗೆ ಜೀವ ಸವೆಸುವ ಜನ ಸಮೂಹ ಎಂಥದ್ದು ಎನಿಸಿ ಇಲ್ಲೆಲ್ಲಿಯೂ, ಯಾವ ಕಿರುಸಂದಿಯಲ್ಲಿಯೂ ರಾತ್ರಿ ಕಳೆಯಲು ಒಂದಿಂಚು ಜಾಗವೂ ಸಿಗುವುದಿಲ್ಲವೆನಿಸಿತು. ಮತ್ತೆ ಸ್ಟೇಷನ್ನಿನ ಒಳಕ್ಕೆ ಬಂದೆ.
ಮುಂಬೈ ನಗರಿಯಲ್ಲಿ ಹಗಲು ರಾತ್ರಿಯೆಲ್ಲ ಒಂದೇ ಎಂಬಂತಿದ್ದರೂ, ಹನ್ನೆರಡು ಘಂಟೆ ದಾಟುತ್ತಿದ್ದಂತೆ ಅಲ್ಪಸ್ವಲ್ಪ ಜನಸಂದಣಿ, ಅದೂ ಸ್ಟೇಷನ್ನಿನ ಒಳಗೆ ಕಡಿಮೆಯಾಗುತ್ತಿರಲಾಗಿ, ಪೋರ್ಟರುಗಳು ಅಲ್ಲೆಲ್ಲ ಪ್ರಯಾಣಿಕರು ಕೂರುವ ಬೆಂಚುಗಳ ಮೇಲೆ ಟವೆಲ್ ಹಾಸಿ, ತಲೆಗೆ ಬಲಗೈ ಇಟ್ಟು ನಿದ್ದೆಗೆ ಸಲ್ಲುತ್ತಿದ್ದರು. ಅಷ್ಟುಹೊತ್ತು ರಾತ್ರಿ ಕಳೆಯುವುದು ಎಲ್ಲಿ ಎಂದುಕೊಳ್ಳುತ್ತಿದ್ದ ನಾನೂ ಒಂದು ಬೆಂಚು ಹುಡುಕುವುದು ಸೂಕ್ತವೆನಿಸಿತು. ಪ್ಲಾಟ್‌ಫಾರ್ಮಿನ ಮೇಲೆ ಎಷ್ಟುದೂರ ನಡೆದರೂ ಎಲ್ಲವೂ ಭರ್ತಿಯಾಗಿದ್ದವು. ಬೆಂಚು ಸಿಗದ ಪೋರ್ಟರುಗಳು ನೆಲದ ಮೇಲೆಯೇ ಮೈಹಾಸಿಕೊಂಡಿದ್ದರು. ಒಬ್ಬ ಪೋರ್ಟರು ನನ್ನ ಹತ್ತಿರಬಂದು, ನಾನು ನಿದ್ದೆಗಾಗಿ ಜಾಗ ಹುಡುಕುತ್ತಿರುವವನೆಂದು ಖಾತ್ರಿಮಾಡಿಕೊಂಡ. ನನ್ನ ಪೂರ್ವಾಪರಗಳನ್ನೇನೂ ಕೇಳದೆ ಒಂದು ರಾತ್ರಿಗೆ ಮಲಗಲು ಬೇಕಾದರೆ ಜಾಗಸಿಗುತ್ತದೆ, ಕೊಡಿಸುತ್ತೇನೆ ಬನ್ನಿ ಎಂದ. ಬಹುಶಃ ಸ್ಟೇಷನ್ನಿನ ಯಾವುದಾದರೂ ಬೆಂಚು ಖಾಲಿಯಿದ್ದರೆ, ಇನ್ನು ಮೂರ್‍ನಾಲ್ಕು ಘಂಟೆಗೆ ಯಾಕೆ ಮಲಗಲು ಜಾಗ ಎಂದುಬಿಡುತ್ತಿದ್ದೆನೋ ಏನೋ. ಎಲ್ಲ ಬೆಂಚುಗಳಲ್ಲೂ ಕೂಲಿಯವರೇ ಮೈಚೆಲ್ಲಿಕೊಂಡಿದ್ದರಿಂದ, ಆತನನ್ನು ನಂಬಿ ಆಯ್ತು ಸ್ವಲ್ಪ ಸುಲಭದರದಲ್ಲಿ ಆದರೆ ಅನುಕೂಲ ಎಂದು ಅವನ ಹಿಂದೆ ನಡೆದೆ. ಹಿಂದಿ, ಮರಾಠಿ, ಉರ್ದು ಜೊತೆಗೆ ಕನ್ನಡವೂ ಬರುತ್ತದೆಂದು ಆತ ಅರೆಬರೆ ಕನ್ನಡದಲ್ಲಿ ಮಾತಾಡಿಸಿದ.
ನೋಡಿ ಹೇಗೂ ನಿಮ್ಮಂಥವರು ಒಂದು ರಾತ್ರಿ ಕಳೆಯುವ ತುರ್ತಿನಲ್ಲಿರುತ್ತಾರೆ ಅಂತ ಇಲ್ಲಿ ಸ್ಟೇಷನ್‌ಬಳಿಯ ಹೋಟೆಲ್‌ನವರು ಒಂದು ರಾತ್ರಿಗೆ ಮೂರು ನಾಲ್ಕುನೂರು ಕೀಳುತ್ತಾರೆ. ಹೇಗೆ ಸುಲಿಗೆ ಮಾಡುತ್ತಾರೆ ನೋಡಿ. ಬಡವರು ಬದುಕುವುದೇ ಕಷ್ಟ. ನಾವು ದಾರಿ ತಪ್ಪಿ ಈ ಮುಂಬೈ ಮಾಯಾಂಗನೆಯ ಸೆರಗಿನಲ್ಲಿ ಸಿಕ್ಕಿಹಾಕಿಕೊಂಡಿದ್ದೇವೆ. ಹಳ್ಳಿಬಿಟ್ಟು ಬಂದ ನಮ್ಮಂಥಾ ಅವಿದ್ಯಾವಂತರು ಈ ರಾಕ್ಷಸ ಸಿಟಿಯ ಹೊಟ್ಟೆ ಸೇರಿಕೊಂಡು ಕಾಲಹಾಕುವುದು ಹೇಗೆ ಎಂದು ಆತ ಮುಂಬೈನ ವಿದ್ಯಮಾನಗಳನ್ನು ಮಾತನಾಡುವ ಹೊತ್ತಿಗೆ ಮತ್ತೆ ನಾನು ಸ್ಟೇಷನ್ನಿನ ಹೊರಗೆ ಒಂದು ರಿಕ್ಷಾದ ಬಳಿ ಬಂದಿದ್ದೆ. ಪೋರ್ಟರು ರಿಕ್ಷಾದವನೊಂದಿಗೆ ಮರಾಠಿಯಲ್ಲಿ ಮಾತಾಡಿದ. ಅವನು ನನ್ನನ್ನು ಪ್ರೀತಿಯಿಂದ ನೋಡಿ, ಒಂದು ಜಾಗ ತೋರಿಸುತ್ತೇನೆ. ಬೆಳಿಗ್ಗೆ ರೈಲು ಬರುವ ಹೊತ್ತಿಗೆ ನೀವು ಅಲ್ಲಿಂದ ಇಲ್ಲಿಗೆ ನಡೆದುಕೊಂಡಾದರೂ ಬಂದುಬಿಡಬಹುದು. ಬಾಡಿಗೆಯೂ ಕಡಿಮೆಯೆ. ನೀವು ಒಂದಿಷ್ಟು ನಿದ್ದೆಮಾಡಿದಂತಾಗುತ್ತದೆ ಎಂದು ನನ್ನ ಹಿತಚಿಂತನೆ ಮಾಡುವವನಂತೆ ಮಾತಾಡಿದ. ಪೋರ್ಟರ್, ನೀವು ಅಷ್ಟು ಮಾಡುವುದು ಒಳ್ಳೆಯದು. ಬೇಕಾದರೆ ಈಗಲೇ ಹೇಳಿದ್ದರೆ, ಈ ರಿಕ್ಷಾಭಯ್ಯ ಬೆಳಿಗ್ಗೆ ನೀವಿರುವಲ್ಲಿಗೇ ಬಂದು ವಾಪಸು ಪಿಕಪ್ ಮಾಡುತ್ತಾನೆ ಎಂತಲೂ ಹೇಳಿದ. ನನಗೆ ಅವರ ಮಾತುಕತೆ ಸ್ವಲ್ಪ ಸಮಾಧಾನ ತಂದಿತು. ದಿಕ್ಕೆಟ್ಟ ಪ್ರದೇಶದಲ್ಲಿ ಒಂದೆರಡು ಒಳ್ಳೆಯ ಮಾತಾಡುವವರು, ದಾರಿತೋರಿಸುವವರು ಸಿಕ್ಕಿದರಲ್ಲಾ ಎಂದು! ಈ ಸಮಾಧಾನದಲ್ಲಿ ಪೋರ್ಟರಿಗೆ ಹತ್ತು ರೂ ಕೊಟ್ಟೆ. ತಲೆಯ ಮೇಲೆ ಸಾಮಾನು ಹೊರದೆಯೇ ಹತ್ತು ರೂ ಸಿಕ್ಕಿದ್ದಕ್ಕೆ ಪೋರ್ಟರ್ ಒಂದು ಸಂತೋಷದ ನಮಸ್ಕಾರ ಹೇಳಿ ಮುಖದ ತುಂಬನಕ್ಕು ತಕ್ಷಣವೇ ಜಾಗ ಖಾಲಿಮಾಡಿದ.
ರಿಕ್ಷಾದವನು ಮೀಟರು ಹಾಕದೇ ಇಲ್ಲೇ ಹತ್ತಿರ, ಮಿನಿಮಮ್‌ಕೊಟ್ಟರೆ ಸಾಕು ಎಂದು ಗಾಡಿ ಸ್ಟಾರ್ಟ್ ಮಾಡಿದ. ಸುಮಾರು ಮೂರು ಕಿಲೋಮೀಟರು ಬಂದಿರಬೇಕು. ಅಲ್ಲೊಂದು ಕಟ್ಟುತ್ತಿದ್ದ ಕಟ್ಟಡ. ಆದರೆ ಅದರ ಕಾಮಾಗಾರಿ ನಿಂತು ಎಷ್ಟೋ ವರ್ಷಗಳಾದಂತೆ ಕಾಣುತ್ತಿತ್ತು. ಕೆಳಗೆ ಅಲೆಮಾರಿ ಸಮೂಹಗಳೋ ಅಥವಾ ಮುಂಬಯಿಯಲ್ಲಿ ಕೂಲಿಗೆಂದು ಬಂದು ನಿಲ್ಲಲು ನೆಲೆ ಇಲ್ಲದವರೋ ವಾಸಮಾಡಿಕೊಂಡಿದ್ದರು. ದಿನನಿತ್ಯ ಕಲ್ಲು ಗುಂಡಿನ ಬೆಂಕಿ ಒಲೆಯಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದುದರಿಂದ ಕಟ್ಟಡದ ಬಹುಭಾಗ ಮಸಿಯಿಂದ ಆವೃತ್ತವಾಗಿತ್ತು. ಬರಿ ಇಟ್ಟಿಗೆಯಲ್ಲಿದ್ದ ಕಟ್ಟಡದ ಸಿಮೆಂಟಿನ ಪ್ಲಾಸ್ಟರೆಲ್ಲ ಕಿತ್ತುಬಿದ್ದಿತ್ತು. ಅಲ್ಲಿದ್ದವರು ತಂತಮ್ಮ ಸಂಸಾರವನ್ನು ಬೇರ್ಪಡಿಸಿಕೊಳ್ಳಲು ಅಂಚು ಸೇರಿಸಿ ಹೊಲೆದ ಪ್ಲಾಸ್ಟಿಕ್ ಷೀಟುಗಳನ್ನು ಕಟ್ಟಿಕೊಂಡಿದ್ದರು. ನಾನು ಈ ಪೂರ್ಣವಾಗದ ಪುರಾತನ ಕಟ್ಟಡ ಸೇರುವ ಹೊತ್ತಿಗೆ ಹನ್ನೆರಡು ಘಂಟೆ ಸಮೀಪಿಸುತ್ತಿತ್ತು. ರಿಕ್ಷಾದವನು ನೀವು ಬೆಳಗಿನವರೆಗೆ ಇಲ್ಲಿ ಇರಬಹುದು ಎಂದ. ನಾನು ದಿಗ್ಭ್ರಮೆಗೊಂಡೆ. ಬೆಳಗಿನವರೆಗಲ್ಲ, ಇನ್ನೊಂದೆರಡು ಘಳಿಗೆಯಾದರೂ ಉಳಿಯುವುದು ಸಾಧ್ಯವೆ ಎನಿಸಿತು. ಹಾಗೆನೋಡಿಕೊಂಡರೆ ನನ್ನ ಬಳಿ ಹೆಗಲ ಬ್ಯಾಗೊಂದು ಬಿಟ್ಟರೆ ಏನೂ ಇರಲಿಲ್ಲ. ಆದರೆ ತಂತಮ್ಮ ಪ್ಲಾಸ್ಟಿಕ್ ಗೂಡಿನಲ್ಲಿ ಮಕ್ಕಳೊಡನೆ ಹೇಗೋ ಜಾಗಮಾಡಿಕೊಂಡು ರಾತ್ರಿಕಳೆಯುತ್ತಿರುವ ಇವರ ಮಧ್ಯೆ ನಾನೆಲ್ಲಿ ಮಲಗುವುದು ಎಂಬ ಆತಂಕದಲ್ಲಿ ರಿಕ್ಷಾದವನನ್ನು ಕೇಳಿದೆ. ಅರೆ ಭಾಯ್‌ಸಾಬ್ ನೀವು ಇರಬೇಕಾದುದು ಕೆಳಗಲ್ಲ, ನೋಡಿ ಅಲ್ಲಿ ಮೇಲೆ ಒಂದು ಚಿಕ್ಕ ಕ್ಯಾಂಡಲ್ ಉರಿಯುತ್ತಿದೆಯಲ್ಲ ಅಲ್ಲಿ ಮೇಟಿ ಮಲಗಿರುತ್ತಾನೆ. ಅವನನ್ನು ಎಬ್ಬಿಸಿ, ನಿಮಗೆ ಮಲಗಲು ಮೇಲೆ ಫಸ್ಟ್‌ಕ್ಲಾಸ್ ಜಾಗಮಾಡಿಕೊಡುತ್ತಾನೆ. ಹೇಗೂ ಸೆಖೆ. ಮೇಲೆ ನೀವೊಂದಷ್ಟು ಹೊತ್ತು ಆರಾಮ ಮಲಗಿ. ಬೇಗ ಎದ್ದರೆ ಇಲ್ಲಿಂದಲೇ ನೇರ ಶಿವಾಜಿಸ್ಟೇಷನ್‌ಗೆ ನಡೆದುಕೊಂಡು ಬರಬಹುದು. ಇಲ್ಲಾ ಒಂದಿಷ್ಟು ನಿದ್ದೆಹೆಚ್ಚಾಗಿ ಮಾಡಿ ತಡವಾಗಿ ಎದ್ದಿರೆಂದರೆ ಒಂದು ರಿಕ್ಷಾ ಮಾಡಿ ರೈಲು ಹಿಡಿಯಬಹುದು ಎಂದು ತುಂಬ ಆತ್ಮೀಯವಾಗಿ ಮಾತಾಡಿದ.
ಅನಾನುಕೂಲವಿದ್ದರೆ ಇದೇ ರಿಕ್ಷಾದಲ್ಲಿ ಸ್ಟೇಷನ್ ತಲುಪಿಬಿಡೋಣವೆಂದು ಮಹಡಿಯ ದಾರಿಯ ಕಡೆ ಒಂದೆರಡು ಹೆಜ್ಜೆ ಹಾಕಿದೆ. ರಿಕ್ಷಾದವನು ಸಾಬ್ ನನಗೂ ಹೆಂಡಿರುಮಕ್ಕಳಿದ್ದಾರೆ. ಈಗಾಗಲೇ ಹನ್ನೆರಡು ಹೊಡೆಯುತ್ತಿದೆ. ಮನೆ ಸೇರಬೇಕು. ಹೊಟ್ಟೆಪಾಡು ದೊಡ್ಡದಾಗಿ ನಮಗೆ ಹಗಲು ರಾತ್ರಿ ಒಂದೇ ಆಗಿಬಿಟ್ಟಿದೆ. ನನ್ನ ರಿಕ್ಷಾ ಚಾರ್ಜು ಕೊಟ್ಟುಬಿಡಿ. ನೀವು ನಿಮ್ಮ ಮೊಕ್ಕಾಮು ನೋಡಿಕೊಂಡು ವಾಪಸು ಬರುವವರೆಗೆ ನನಗೆ ನಿಲ್ಲಲು ಪುರುಸೊತ್ತಿಲ್ಲ. ಕಾಸುಬಿಸಾಡಿದರೆ ಹೆಂಡಿರ ಮಕ್ಕಳ ಮುಖ ನೋಡಲು ಸಹಾಯವಾಗುತ್ತದೆ ಎಂದ. ರಿಕ್ಷಾದವನು ಈ ಮಾತುಗಳನ್ನಾಡುವಾಗ ಪ್ರಯೋಗಿಸುತ್ತಿದ್ದ ಪದಗಳಲ್ಲಿದ್ದ ವಿನಯ ಆತನ ಧ್ವನಿಯಲ್ಲಿ ಇರಲಿಲ್ಲವೆಂದು ನನಗೆ ಸ್ಪಷ್ಟವಾಗಿ ಗೋಚರವಾಯಿತು. ಆದರೂ ಅವನು ದಿನರಾತ್ರಿಯೆಲ್ಲ ರಸ್ತೆಯಲ್ಲಿ ಹೊತ್ತುಕಳೆದೋ, ಮನೆಸೇರದೆಯೋ, ಇಲ್ಲಾ ಹಸಿದೋ ಧ್ವನಿ ಕೊಂಚ ರೂಕ್ಷ ಸ್ವರೂಪಕ್ಕೆ ತಿರುಗುತ್ತಿರಬಹುದೆಂದು ಭಾವಿಸಿ ಇಪ್ಪತ್ತರ ನೋಟು ತೆಗೆದು ಆತನ ಕೈಯ್ಯಲ್ಲಿರಿಸಲು ಹೋದೆ. ಅಷ್ಟು ಹೊತ್ತಿಗಾಗಲೇ ನಾನು ಅಂಥ ಸ್ಥಿತಿವಂತನಲ್ಲವೆಂಬುದನ್ನು ನನ್ನ ಜೇಬುಗಳ ತಪಾಸಣೆಯಲ್ಲೇ ಗ್ರಹಿಸಿದ. ಇಷ್ಟು ಹೊತ್ತಿನಲ್ಲಿ ಇಂಥವರನ್ನು ಕಟ್ಟಿಕೊಂಡು ತಿರುಗಿದರೆ ಈ ಮುಂಬೈಯಲ್ಲಿ ಬಾಯಿಗೆ ಬಚ್ಚಲು ನೀರೇ ಗತಿ ಎಂದು ನನ್ನ ಕೈಯ್ಯ ನೋಟಿಗೆ ದೃಷ್ಟಿಯನ್ನೇ ಕೊಡದೆ ಇನ್ನೆತ್ತಲೋ ತಿರುಗಿ ‘ನೀವೇ ಇಟ್ಕಳಿ. ಬೆಳಗಿನ ಎರಡು ಪೀಸು ಬ್ರೆಡ್ಡಿಗೆ ಬರುತ್ತದೆ’ ಎಂದ. ನಾನು ಮಾತಿಲ್ಲದೆ ಇನ್ನೆಷ್ಟು ಕೊಡಬೇಕು ಎನ್ನುವಂತೆ ನೋಡಿದೆ. ಇಷ್ಟುಹೊತ್ತಿನಲ್ಲಿ ಕರೆದುಕೊಂಡು ಬಂದದ್ದಕ್ಕೆ ಡಬಲ್‌ಚಾರ್ಜು.
ಚಾರ್ಜು ಇಪ್ಪತೈದು. ಎರಡರಷ್ಟು ಅಂದರೆ ಐವತ್ತು. ಮಲಗುವ ಜಾಗತೋರಿಸಿದ್ದಕ್ಕೆ ಭಕ್ಷೀಸು ಇಪ್ಪತ್ತೈದು. ಹತ್ತುರೂಪಾಯಿ ಬೇಡ. ಅರುವತ್ತೈದಾದರೂ ಕೊಡಿ. ಸ್ವಲ್ಪ ಬೇಗ ಕೊಟ್ಟರೆ ದೊಡ್ಡ ಸಹಾಯವಾಗುತ್ತದೆ. ನಾನು ಅಷ್ಟುಹೊತ್ತಿನಿಂದ ನಿಮಗೆ ಹೇಳಿದ್ದನ್ನೇ ಹೇಳುತ್ತಿದ್ದೇನೆ. ಕೊಟ್ಟುಬಿಟ್ಟು ಮಹಡಿಗೆ ಹೋಗಿ ನಿದ್ದೆಮಾಡಿ, ನಿಮಗೂ ಟೈಮಿಲ್ಲ ಎಂದ ರಿಕ್ಷಾದವನು ವಾಕ್ಯದಿಂದ ವಾಕ್ಯಕ್ಕೆ ಧ್ವನಿಯಲ್ಲಿ ಗಡಸಾಗುತ್ತಿದ್ದ. ಐವತ್ತು ಕೊಟ್ಟರೆ ಆಗಬಹುದೇ ಎಂದೆ. ಅವನು ವ್ಯಂಗ್ಯವಾಗಿ ನಕ್ಕು ಮುಂಬೈಗೆ ಬಂದದ್ದು ಯಾಕೆ? ರಸ್ತೆ ಬದಿ ವ್ಯಾಪಾರ ಮಾಡುವುದಕ್ಕಾ ಎಂದು ಏಕವಚನಕ್ಕೆ ತಿರುಗಿ, ನಿನ್ನ ಪುರಾಣ ನನಗೆ ಬೇಡ. ಮುಂಬೈಗೆ ದಿನ ಬೆಳಗಾದರೆ ರಸ್ತೆಬದಿ ವ್ಯಾಪಾರ, ಬೂಟ್‌ಪಾಲೀಷು, ಹಜಾಮತಿ ಅಂತ ಸಾವಿರಾರು ಜನ ಬರುತ್ತಾರೆ. ನನಗೆ ಗೊತ್ತು, ಅದರಲ್ಲಿ ನೀನು ಒಬ್ಬ. ಸದ್ಯ ನನ್ನ ಕಾಸು ತೆಗೆ ಎಂದ ಖಡಾಖಂಡಿತವಾಗಿ. ನಾನು ಐವತ್ತರ ಮೇಲೆ ಇನ್ನು ಹತ್ತರ ನೋಟು ಸೇರಿಸಿದೆ. ಐದು ರೂ ಕಡಿಮೆ ಮಾಡಿದ್ದಕ್ಕೋ ಆತುರಕ್ಕೋ ನನ್ನ ಕೈಯ್ಯ ದುಡ್ಡುಕಸಿದು ವಾಪಸಾದ. ರಿಕ್ಷಾ ಸ್ಟಾರ್ಟ್ ಮಾಡಿಕೊಂಡು ಒಂದೇಸಮ ರಸ್ತೆಯಲ್ಲಿ ಬಿರುಸಾಗಿ ಓಡಿಸಿ ಮಾಯವಾದ.
ನಾನು ಮಹಡಿ ಹತ್ತುವುದೋ, ಬಂದ ದಾರಿಯಲ್ಲಿ ವಾಪಸು ನಡೆದು ಸ್ಟೇಷನ್ ಸೇರುವುದೋ ಎಂದುಕೊಳ್ಳುವಲ್ಲಿ, ಒಂದು ಘಂಟೆಯಾದರೂ ಈ ಹಂತದ ಕೆಳಗಿನ ಸಂದಿಯಲ್ಲಿ ಮಲಗಬಹುದೇ ಎನಿಸಿತ್ತು. ನಿದ್ದೆಯ ಭಾರ ನನ್ನ ದೇಹವನ್ನು ಅಷ್ಟು ಅವುಕುತ್ತಿತ್ತು. ಇಷ್ಟರಲ್ಲಿ ಮಹಡಿಯ ಮೇಲಿಂದ ಒಬ್ಬ ವ್ಯಕ್ತಿ ನನ್ನ ಕಡೆ ಇಣುಕಿ ನೋಡಿ ಮೇಲಕ್ಕೆ ಕರೆದ. ಹೋಗಬೇಕೋ ಬೇಡವೋ ಎಂದುಕೊಳ್ಳುತ್ತಿರುವಲ್ಲಿ ಆತನೇ ಕೆಳಗೆ ಬಂದು ಮೇಲೆ ಬರುವಂತೆ ಒತ್ತಾಯಿಸಿದ. ಮೇಲೇರಿಹೋದೆ. ಅಲ್ಲಿ ಇನ್ನಿಬ್ಬರು ಸಣ್ಣ ಕ್ಯಾಂಡಲು ಹಚ್ಚಿಕೊಂಡು ಇಸ್ಪೀಟಿನಲ್ಲಿ ತೊಡಗಿದ್ದರು. ರಿಕ್ಷಾದವನು ನಿಮಗೆ ಇಲ್ಲಿ ಮಲಗಲು ಜಾಗ ತೋರಿಸುತ್ತೇನೆಂದು ಕರೆದುಕೊಂಡು ಬಂದನಲ್ಲವೆ? ಆ ಬದ್ಮಾಷ್‌ಗಳನ್ನೆಲ್ಲ ನೀವು ನಂಬಿ ಬರಬಾರದಿತ್ತು. ಸ್ಟೇಷನ್ನಿನಿಂದ ಅಡ್ಡದಾರಿಯಲ್ಲಿ ಬಂದರೆ ಇದು ಬರಿ ನಡಿಗೆಯ ದಾರಿ. ರಿಕ್ಷಾ ಹತ್ತಿದರೆ ಮೂರ್‍ನಾಲ್ಕು ಕಿಲೋಮೀಟರು. ಯಾರಾದರೂ ಸರಿಯಾದ ಪೋರ್ಟರಾಗಿದ್ದರೆ ನಿಮಗೆ ನಡಿಗೆಯ ದಾರಿ ತೋರಿಸುತ್ತಿದ್ದ. ಅವನ್ಯಾವನೋ ಅಡಕಸಬಿ ಪೋರ್ಟರು ನಿಮ್ಮ ದಾರಿತಪ್ಪಿಸಿ ರಿಕ್ಷಾ ಹತ್ತಿಸಿರಬೇಕು. ಆವೋ ಸಾಬ್, ಕೊಂಚ ನಿಧಾನಕ್ಕೆ ಮೇಲೆ ಬನ್ನಿ, ಆತುರಬೇಡ. ನಿಮಗೆ ಇದು ಹೊಸಜಾಗ. ಬೇಕಾದರೆ ನಿಲ್ಲಿ, ಕ್ಯಾಂಡಲು ತರುತ್ತೇನೆ ಎಂದೆಲ್ಲ ಹೇಳಿದ. ಆದರೆ ಬೀದಿಯ ಲೈಟಿನ ಬೆಳಕು ಹಂತಗಳಮೇಲೆ ಎರಡನೆಯ ಮಹಡಿಯಲ್ಲಿ ನಿಚ್ಚಳವಾಗಿ ಬಿದ್ದಿತ್ತು. ಏಕೆಂದರೆ ಇಡಿ ಕಟ್ಟಡದಲ್ಲಿ ಗೋಡೆಗಳಿಲ್ಲದೆ ಕಂಭಗಳು ಮತ್ತು ತಾರಸಿಮಾತ್ರವಿತ್ತು. ಇಸ್ಪೀಟಿನಲ್ಲಿ ತಲ್ಲೀನರಾದವರು ನನ್ನ ಕಡೆ ತಿರುಗಿಯೂ ನೋಡಲಿಲ್ಲ. ಕೈಯ್ಯಲ್ಲಿ ಕ್ಯಾಂಡಲ್ ಹಿಡಿದುಕೊಂಡವನು, ಬನ್ನಿ ನೀವು ಮಲಗುವ ಜಾಗ ತೋರಿಸುತ್ತೇನೆ ಎಂದ. ನಾನು ಚಾಪೆಯಾದರೂ ಸರಿ ಒಂದು ಘಳಿಗೆ ತಲೆಕೊಟ್ಟರೆ ಸಾಕು ಎಂದು ಅವನನ್ನು ಹಿಂಬಾಲಿಸಿದೆ. ಅಲ್ಲಿಯೂ ಪ್ಲಾಸ್ಟಿಕ್ ಹಾಳೆಗಳಲ್ಲಿ ಮಾಡಿದ ಕಂಪಾರ್ಟ್‌ಮೆಂಟ್ ಜಾಗಗಳು. ಒಂದೊಂದರಲ್ಲಿ ಕಿತ್ತುಹೋದ, ಕಮಟು ಹಿಡಿದ ಹಾಸಿಗೆ. ಅಂಥದ್ದೇ ದಿಂಬು. ಅದರ ಪಕ್ಕ ಒಂದು ಕ್ಯಾಂಡಲು, ಬೆಂಕಿಪೆಟ್ಟಿಗೆ. ನಿದ್ರೆಯ ಅನುಕೂಲ ತೋರಿಸಿದನಂತರ ನಿಮ್ಮ ಬೆಳಗಿನ ಬಹಿರ್ದೆಸೆಗೆ ಒಂದು ಬಕೀಟು ನೀರು ಕೊಡುವ ವ್ಯವಸ್ಥೆ ಇದೆ. ಈಗಲೇ ನೀವು ಬಹುದೂರ ಪ್ರಯಾಣದವರಾಗಿದ್ದರೆ ಮುಖಮಾರ್ಜನ, ಬಹಿರ್ದೆಸೆ ಮುಗಿಸಿ ಮಲಗಬಹುದು. ಬೆಳಗ್ಗೆ ಎಂಟು ಘಂಟೆಯವರೆಗೆ ಇಲ್ಲಿರಲು ಅವಕಾಶ. ಆಮೇಲೆ ಖಾಲಿಮಾಡಬೇಕು. ಮತ್ತೆ ರಾತ್ರಿಪಾಳಿ ಕೆಲಸ ಮಾಡಿದವರು ಇಲ್ಲಿ ರೆಸ್ಟಿಗೆ ಬರುತ್ತಾರೆ ಎಂದ.
ನಾನು ಕೆಳಗೆ ಇಳಿಯುವ ಉದ್ದೇಶದಲ್ಲಿದ್ದೆ. ಅವನು ಬನ್ನಿ, ಬನ್ನಿ ನಿಮ್ಮ ಮುಖಮಾರ್ಜನಕ್ಕೆ ನೀರಿನ ವ್ಯವಸ್ಥೆ ಮಾಡುವೆ. ನೋಡಿದರೆ ಬಹಳದೂರದಿಂದ ಪ್ರಯಾಣ ಮಾಡಿ ಬಳಲಿದವರಂತೆ ಕಾಣುತ್ತೀರಿ ಎಂದ. ಅವನ ಕರುಣೆಗೆ ಪಾತ್ರನಾಗುವ ಅಗತ್ಯವೇ ಇಲ್ಲ ಎಂದುಕೊಂಡು ಅವನೊಂದಿಗೆ ಹಂತ ಇಳಿದೆ. ಚರಂಡಿಯ ಮೇಲೆ ಹಾಸಿದ್ದ ಚಪ್ಪಡಿಗಳ ಮೇಲೆ ಕರೆತಂದ. ಅಲ್ಲೂ ಸುತ್ತ ತೆಂಗಿನ ಮಟ್ಟಾಳೆಮರೆ ಇತ್ತು. ಎರಡು ಚಪ್ಪಡಿಗಳ ಮಧ್ಯೆಬಿಟ್ಟಿದ್ದ ಸಂದಿ ತೋರಿಸಿ ನೋಡಿ ಅದೇ ಮಲಮೂತ್ರದ ಜಾಗ. ಅಲ್ಲೇ ಒಂದು ಬಕೀಟು ನೀರಿದೆ. ಎಲ್ಲ ಅದರಲ್ಲೇ ಮುಗಿಸಬೇಕು. ಎಕ್ಸ್‌ಟ್ರಾ ಬಕೇಟ್ ನೀರು ಇಲ್ಲಾಂತಲ್ಲ. ಅದಕ್ಕೂ ಚಾರ್ಜು. ನಿಮ್ಮ ಜೇಬಿನ ಅನುಕೂಲ ಹೇಗೆ ನೋಡಿಕೊಳ್ಳಿ. ಹನ್ನೆರಡು ಹೊಡೆಯುತ್ತಿದೆ. ಇನ್ನು ನೀವು ಮಲಗುವುದು ವಾಸಿ ಎಂತಲೂ ನನ್ನನ್ನು ಪುಸಲಾಯಿಸಿದ. ಅಹಮದಾಬಾದ್ ಎಕ್ಸ್‌ಪ್ರೆಸ್‌ಗೆ ಹೋಗಬೇಕು ಎಂದೆ. ಅವನು ಓಹ್ ಅದು ಮುಂಬಯಿಯಿಂದ ಬರೋಡಾಮಾರ್ಗ ಹೋಗುವ ಗಾಡಿ. ಐದು ಘಂಟೆಗೆ ಇದೆ. ಹಾಗಾದರೆ ನೀವು ರೆಸ್ಟ್ ತೆಗೆದುಕೊಳ್ಳುವುದೇ ಸೈ, ನಡೆಯಿರಿ ಎಂದ. ನಾನು ಬಹಿರ್ದೆಸೆಯ ಜಾಗದಿಂದ ಮತ್ತೆ ಮೇಲೆ ಹತ್ತುವ ಬದಲು ಒಂದು ಘಳಿಗೆ ಅಲ್ಲೇ ನಿಂತೆ. ಅವನ ಮನಸ್ಸಿಗೆ ಏನು ಬಂತೋ. ಅತ್ತಿತ್ತ ನೋಡಿ ಮೆಲುದನಿಯಲ್ಲಿ ನೋಡಿ ನಿಮಗೆ ಹೆಂಗಸರು ಬೇಕಾದರೂ ಸಿಕ್ಕುತ್ತಾರೆ. ಸಿನಿಮಾ ನಟಿಯರಲ್ಲ ಎಂದು ನಕ್ಕು, ಇಲ್ಲೇ ಇರುವ ಕೂಲಿ ಹೆಂಗಸರು. ಬಿಡಿ, ಸಿನಿಮಾ ನಟಿಯರೇನು ಮಹಾ, ಒಣಚಕ್ಕುಲಿಗಳು. ಹಲ್ಲು ಕಿರಿಯುವುದು, ಕೈಕಾಲು ಕುಣಿಸುವುದೊಂದು ಬಿಟ್ಟರೆ ಅವರ ಮೈಯ್ಯಲ್ಲಿ ಇನ್ನೇನು ಸಿಗುತ್ತದೆ ಹೇಳಿ. ಕೂಲಿ ಹೆಂಗಸರೆಂದರೆ ಹೇಗನ್ನುತ್ತೀರಿ. ನಾನು ಹೇಳಬೇಕಾದದ್ದಿಲ್ಲ. ನೀವೇ ನೋಡಿ ಹೇಳಿ, ರೆಡಿ ಇದ್ದಾರೆ. ನಿಮ್ಮ ಕಾಸು ನೋಡಿಕೊಳ್ಳಿ ಎಂದ. ನಾನು ಹಾಸಿಗೆ ಬಾಡಿಗೆ ಎಷ್ಟು ಎಂದೆ. ಅವನು ಖಾಲಿಹಾಸಿಗೆಗೆ ನೂರು. ಹಾಸಿಗೆ ಭರ್ತಿಇರಬೇಕು ಎಂದರೆ ನಾಲ್ಕುನೂರು. ಅದು ಹೆಂಗಸಿನ ರೇಟು ಮಾತ್ರ. ಹಾಸಿಗೆ ಫ್ರೀ ಎಂದ.
ರಾತ್ರಿ ಹತ್ತರವರೆಗೆ ಮುಂಬಯಿಯ ಸೆಖೆಗೆ ಬೆವರು ಸುರಿಯುತ್ತಲೇ ಇತ್ತು. ಹನ್ನೆರಡರ ಮೇಲೆ ಸಮುದ್ರದ ತಂಗಾಳಿ ಬೀಸಿಬರುತ್ತಿತ್ತು. ಮೈ ತಣ್ಣಗಾಗಬೇಕಾದ ಸಂದರ್ಭದಲ್ಲಿಯೂ ಬೆವರಿದೆ. ಬೆವರಿದ ಮೇಲೆ ಮೈಯ್ಯಲ್ಲಿ ಕೊಂಚ ನಡುಕವೂ ಉಂಟಾಯಿತು. ಭಯದಿಂದಲೊ, ಹಸಿವಿನಿಂದಲೊ, ಆಯಾಸದಿಂದಲೋ, ಆಗಲೇ ಹುಟ್ಟಿದ ಹೆಣ್ಣಿನ ವಿಚಾರದಿಂದಲೊ ಗೊತ್ತಾಗಲಿಲ್ಲ. ಮಹಡಿ ಹತ್ತುವ ಯಾವ ಉತ್ಸಾಹವು ಇರಲಿಲ್ಲ. ನನ್ನ ಪಾಡಿಗೆ ನಾನು ರಸ್ತೆಗೆ ಇಳಿದೆ. ಬಾಡಿಗೆದಾರನಿಗೆ ನಾನು ಅಲ್ಲಿ ರಾತ್ರಿ ಕಳೆಯುವ ನಿರುತ್ಸಾಹ ಅರ್ಥವಾಗಿ ಹೋಯಿತು. ‘ಗರೀಬೋಂಕಾ ಕುತ್ತೆ… ಸುಮ್ಮನೆ ನನ್ನ ಟೈಮ್ ವೇಸ್ಟ್‌ಮಾಡಿಸಿದ…’ ಎಂದು ನನ್ನ ಕಡೆಗೆ ಜೋರಾಗಿ ಅರಚಿದ. ನಾನು ದೇಹದಲ್ಲಿ ಇದ್ದಬದ್ದ ಶಕ್ತಿಯನ್ನೆಲ್ಲ ಕೂಡಿಸಿಕೊಂಡು ಸ್ಟೇಷನ್ನಿನವರೆಗೆ ನಡೆದೆ. ರಸ್ತೆಯಲ್ಲಿ ವಿರಳ ಜನಸಂಚಾರವಿತ್ತು. ಕೇಳಿಕೊಂಡು ಮೂರು ಕಿಲೋಮೀಟರು ಕ್ರಮಿಸಿದೆ. ಮತ್ತೆ ಸ್ಟೇಷನ್ ಒಳಭಾಗದಲ್ಲಿ ನಡೆದಾಗ ಅಲ್ಲಿದ್ದ ದೊಡ್ಡಗಡಿಯಾರದಲ್ಲಿ ಸಮಯ ರಾತ್ರಿ ಎರಡು ದಾಟುತ್ತಿತ್ತು. ಎಷ್ಟೋಜನ ಬೆಂಚು ಸಿಕ್ಕದವರು ಫ್ಲಾಟ್‌ಫಾರಂ ಮೇಲೆ ಮಲಗಿದ್ದರು. ಹೆಗಲಬ್ಯಾಗಿನಿಂದ ಪಂಚೆತೆಗೆದು ಹಾಸಿ, ತಲೆಗೆ ಅದೇ ಬ್ಯಾಗು ಕೊಟ್ಟೆ. ಮಲಗುವಲ್ಲಿ ಕೊಂಚ ಆತಂಕವಿತ್ತು. ನನಗಾಗಿದ್ದ ಆಯಾಸದಿಂದ ಬೆಳಗಿನ ಐದುಘಂಟೆಗೆ ಮುನ್ನ ಎಚ್ಚರವಾಗದೇ ರಾತ್ರಿಯ ರೈಲಿನಂತೆ ಬೆಳಗಿನದೂ ತಪ್ಪಿದರೆ ಹೇಗೆ ಎನಿಸಿತು. ಒಮ್ಮೆ ಎಚ್ಚರವಾದರೂ ಸರಿ, ಎದ್ದು ಕೂತು ರೈಲಿಗೆ ಕಾಯುವುದೇ ಸೈ ಎಂದುಕೊಂಡೇ ಮಲಗಿದೆ. ಕ್ಷಣಮಾತ್ರದಲ್ಲಿ ಗಾಢನಿದ್ರೆಗೆ ಬಿದ್ದೆನಾದರೂ ಎಚ್ಚರವಾದದ್ದು ಬೆಳಗಿನ ನಾಲ್ಕುಘಂಟೆಗೆ!
ಮುಂಬೈನ ಲೋಕಲ್ ಟ್ರೈನ್ ನಾನು ಮಲಗಿದ್ದ ಫ್ಲಾಟ್‌ಫಾರ್ಮಗೆ ಬಂದು ನಿಂತುಬಿಟ್ಟಿತು. ಇಳಿದ ಜನಸಮೂಹವೆಲ್ಲ ಇವನ್ಯಾವನೋ ಗತಿಗೆಟ್ಟ ತಿರುಪೆಯವ ಪವಡಿಸಿಬಿಟ್ಟಿದ್ದಾನಲ್ಲ ಎಂದುಕೊಂಡು ನನ್ನ ಅಡ್ಡವಾದ ದೇಹವನ್ನು ಹೊಸ್ತಿಲಂತೆ ದಾಟುವಲ್ಲಿ, ಒಬ್ಬನ ಬೂಟು ನನ್ನ ತಲೆಗೆ ತಾಗಿತ್ತು. ಆಗಲೇ ಎಚ್ಚರವಾದದ್ದು. ಅಸಂಖ್ಯಾತ ಕಾಲುಗಳು ನನ್ನ ದೇಹದ ಮೇಲೆ ಸಮುದ್ರದ ಅಲೆಯಂತೆ ಹಾಯುತ್ತಿವೆ. ಎದ್ದರೆ ಕಷ್ಟ ಎಂದು ಹಾಗೆಯೇ ಜನಸಮೂಹ ಹಾಯುವವರೆಗೆ ಮೈಯ್ಯನ್ನೆಲ್ಲ ಮುದುರಿಕೊಂಡೆ. ನನ್ನ ಹಾಯುತ್ತಿದ್ದವರಲ್ಲಿ ಕೆಲವರು ಆತುರಾತುರದಲ್ಲಿ ಇನ್ನೊಂದು ರೈಲು, ಇಲ್ಲಾ ಸ್ಟೇಷನ್ನಿನಾಚೆಯ ಬಸ್ಸು ಹಿಡಿಯಲು ಓಡುತ್ತಿದ್ದರು. ಮತ್ತೆ ಕೆಲವರ ಗುಂಪು ಯಾವ್ಯಾವುದೋ ಮರಾಠಿ, ಸಂಸ್ಕೃತ ಭಜನೆ ಹೇಳಿಕೊಂಡು ನಿಧಾನಗತಿಯಲ್ಲಿ ನನ್ನನ್ನು ದಾಟುತ್ತಿದ್ದರು. ಅವರಲ್ಲಿ ಹೆಂಗಸರು, ಪ್ರಾಯಸ್ಥರು ಹುಡುಗರೂ ಇದ್ದರು. ಹಾಗೆ ಜನವೆಲ್ಲ ಖಾಲಿಯಾದ ಮೇಲೆ ಒಂದು ನಿಟ್ಟುಸಿರಿನೊಡನೆ ಎದ್ದು ದೂರದ ಗಡಿಯಾರ ನೋಡಿದೆ. ರೈಲು ಬರುವುದಕ್ಕೆ ಇನ್ನೂ ಅರ್ಧಘಂಟೆಯಾದರೂ ಇತ್ತು. ಆತುರವೆನ್ನಿಸಲಿಲ್ಲ. ಅಲ್ಲೇ ನಿಂತರೈಲಿಗೆ ನುಗ್ಗಿ ಮುಖಮಾರ್ಜನ ಮುಗಿಸಿ, ಅಹಮದಾಬಾದ್ ಎಕ್ಸಪ್ರೆಸ್ ಯಾವ ಕಡೆ ಬಂದು ನಿಲ್ಲುವುದೆಂದು ಹುಡುಕಿದೆ. ಯಾರನ್ನಾದರೂ ಕೇಳುವುದೆನಿಸಿತು. ತಲೆ ಕೆದರಿದ, ಅಸ್ತವ್ಯಸ್ತ ವಸ್ತ್ರದ ಒಬ್ಬ ಹುಡುಗ ಕಂಡ. ಆತ ನನ್ನ ಹಣೆಬರೆಹವನ್ನೆಲ್ಲ ಓದಿಬಿಟ್ಟವನಂತೆ ಬಯ್ಯಾ ಹತ್ತು ರೂಪಾಯ್ ಕೊಡಿ. ಜನರಲ್ ಕಂಪಾರ್ಟ್‌ಮೆಂಟ್‌ನಲ್ಲಿ ಸೀಟು ಹಿಡಿದುಕೊಡುತ್ತೇನೆ ಎಂದು ಕೊಳೆ ಹಿಡಿದ ಷರ್ಟು ಎತ್ತಿ ಹೊಟ್ಟೆಬಡಿದು ಕೈ ಒಡ್ಡಿದ.
ಇವತ್ತು ಸೋಮವಾರ ಖಂಡಿತಾ ಸೀಟು ಸಿಕ್ಕುವುದಿಲ್ಲ… ಎಂದು ಅಲ್ಲಿದ್ದವರಿಗೆಲ್ಲ ಆತಂಕ ಹುಟ್ಟಿಸಿದ. ಆ ಹುಡುಗ ಹಾಗೆಯೇ ಹೇಳಿದ್ದರೆ ಅಲ್ಲಿದ್ದವರು ನಾವೇ ಸೀಟು ಮಾಡಿಕೊಳ್ಳುತ್ತೇವೆ ಎಂದುಬಿಡುತ್ತಿದ್ದರೋ ಏನೋ? ಆದರೆ ಷರ್ಟು ತೆಗೆದು ಹೊಟ್ಟೆ ಬಡಿದು, ನಿಮಗೂ ಪ್ರಯಾಣಕ್ಕೆ ಆರಾಮ, ನನಗೂ ಒಂದೊತ್ತು ಊಟ, ಎಂದದ್ದಕ್ಕೆ ಎಲ್ಲರೂ ಹತ್ತತ್ತು ರೂಪಾಯಿ ಕೊಟ್ಟರು. ನಾನು ಒಂದು ನೋಟು ಕೈಗಿಟ್ಟೆ. ನಿಮ್ಮ ನಿಮ್ಮ ಕರ್ಚಿಗೆ ಕೊಡಿ ಎಂದ. ಅಷ್ಟುಹೊತ್ತಿಗೆ ಹಿಂದು ಮುಂದಾಗಿ ಸದ್ದಿಲ್ಲದೆ ಫ್ಲಾಟ್‌ಫಾರ್ಮ್‌ಗೆ ಗಾಡಿಬರುವಲ್ಲಿ ಹುಡುಗ ಇಂಥ ಕಡೆಯೇ ಜನರಲ್ ಬೋಗಿ ಬರುತ್ತದೆ ಬನ್ನಿ, ಬನ್ನಿ. ನಾನು ನಿಮ್ಮ ಕರ್ಚಿಯ ಇಟ್ಟಕಡೆ ಬೇಗ ಜಾಗ ಹಿಡಿದುಕೊಳ್ಳಿ ಎಂದ. ಎಲ್ಲ ಪ್ರಯಾಣಿಕರು ಹುಡುಗ ಬಾರಿ ಚಾಲಾಕಿ ಇರುವನೆಂದು ಹೊಗಳಿದರು. ರೈಲು ನಿಲ್ಲಲು ಮೂರ್‍ನಾಲ್ಕು ನಿಮಿಷವಿದೆಯೆನ್ನುವಲ್ಲಿಯೇ ಚಲನೆಯಲ್ಲಿದ್ದ ಒಂದು ಬೋಗಿಹತ್ತಿ ಅತ್ತ ಕಡೆಯ ಬಾಗಿಲಿಳಿದು ಹುಡುಗ ಪರಾರಿಯಾದ. ಕಾಸುಕೊಟ್ಟವರೆಲ್ಲ ಎಲಾ ಹರಾಮ್‌ಖೋರ, ಇಷ್ಟುಬೇಗ ಎಂಥ ಮೋಡಿ ಹಾಕಿಬಿಟ್ಟ ಆತನನ್ನು ಹಿಡಿಯಿರಿ, ಹಿಡಿಯಿರಿ ಎಂದು ಕೂಗಿಕೊಂಡರು. ಆದರೆ ಅವನನ್ನು ಹಿಂಬಾಲಿಸಿ ಹಿಡಿಯಲು ಯಾರೂ ಸಿದ್ಧರಿರಲಿಲ್ಲ. ಯಾವುದಕ್ಕೂ ಯಾರಿಗೂ ಟೈಮೂ ಇರಲಿಲ್ಲ. ಒಂದು ಸಮಾಧಾನದ ಸಂಗತಿಯೆಂದರೆ ಇದ್ದಬದ್ದ ಪ್ರಯಾಣಿಕರಿಗೆಲ್ಲ ಎಲ್ಲೆಂದರಲ್ಲಿ ಸೀಟು ಸಿಕ್ಕಿದ್ದರಿಂದ ಹುಡುಗನ ಕೈಚಳಕವನ್ನು ಎಲ್ಲರೂ ಅಷ್ಟೇ ಬೇಗ ಮರೆತುಬಿಟ್ಟರು.
ಬೋಗಿ ಖಾಲಿ ಇದ್ದರೂ ಪ್ರಯಾಣಿಕರ ಆತಂಕ, ಸೀಟು ಹಿಡಿಯುವುದರಲ್ಲಿ ಆತುರ ಇದ್ಯಾವುದೂ ಕಡಿಮೆಯಿರಲಿಲ್ಲ. ನಾನು ಒಂದು ಕಿಟಕಿಯ ಮೂಲೆಗೆ ಕೂತೆ. ನಾನಾ ಭಾಷೆಯ ಜನ ತಂತಮ್ಮ ಸರಂಜಾಮಿನೊಡನೆ ರೈಲು ಹೊರಡುವವರೆಗೂ ಒಳಗೆ ನುಗ್ಗುವ ಪರದಾಟ ನಡೆಯುತ್ತಲೇ ಇತ್ತು. ನನ್ನ ಎದುರು ಸೀಟಿನಲ್ಲಿ ಗಂಡ ಹೆಂಡತಿ ಸುಮಾರು ಹತ್ತನ್ನೆರಡು ವರ್ಷದ ಮಗ, ಐದು ವರ್ಷ ದಾಟಿರಬಹುದಾದ ಹೆಣ್ಣುಮಗು ನೆಲೆಯಾಗಿದ್ದರು. ಈ ಸಂಸಾರವನ್ನು ಕಳುಹಿಸಲು ಬಂದ ಸ್ನೇಹಿತರು ‘ಬರುತ್ತೇವೆಕಣೋ ಮಿತ್ರಾ. ರೈಲು ನಿಂತ ಕಡೆಯಲ್ಲೆಲ್ಲ ಇಳಿದು ಸ್ಟೇಷನ್ ನೋಡಲು ಹೋಗಿಬಿಡಬೇಡವೋ! ಅಮ್ಮಾ ಬರಲಾ. ಅಹಮದಾಬಾದ್ ತಲುಪಿದ್ದಕ್ಕೆ ಒಂದು ಕಾಲ್ ಮಾಡಿ. ಸದ್ಯ ಕೂರಲು ಜಾಗ ಸಿಕ್ಕಿತಲ್ಲ’ ಎಂದು ಮಕ್ಕಳ, ಸ್ನೇಹಿತನ ಕೈಕುಲುಕಿ, ಹೆಂಗಸಿಗೆ ನಮಸ್ಕರಿಸಿ ಕೈಯ್ಯಾಡಿಸುತ್ತ ಹೊರಟರು. ರೈಲು ಹೊರಡುವುದು ಇನ್ನು ಒಂದೆರಡು ನಿಮಿಷವಿತ್ತು. ಪತಿಯು ಹೆಂಡತಿಯ ಕಡೆಗೆ ಎಲ್ಲ ಸಾಮಾನು ಇದೆಯಲ್ಲ. ಒಂದು ಸರ್ತಿ ಎಲ್ಲ ನೋಡಿಕೊಂಡುಬಿಡು. ಈಗ ನಾನು ಇಳಿದುಹೋಗಿ ಮಕ್ಕಳಿಗೆ ಏನಾದರೂ ತರುತ್ತೇನೆ ಎಂದು ಎದ್ದರು. ಅವರನ್ನು ತಡೆದು ಆಕೆ, ತಿಂಡಿಗೆ ಇನ್ನೂ ಹೊತ್ತಿದೆ. ಮುಂದಿನ ಯಾವುದಾದರೂ ಸ್ಟೇಷನ್ನಿನಲ್ಲಿ ನೋಡಿದರಾಯ್ತು. ರೈಲು ಹೊರಡುವ ಟೈಮಾಗಿದೆ. ನೀವು ಸುಮ್ಮನೆ ಕೂರಿ ಎಂದರು. ಅಯ್ಯೋ ಈ ರೈಲು ಬರೋಡಾ ಮುಟ್ಟುವುದು ಮಧ್ಯಾಹ್ನ ಒಂದು ಘಂಟೆಗೆ. ಮಧ್ಯ ಬರಿ ಹಳ್ಳಿಪಳ್ಳಿಗಳು. ಸರಿಯಾಗಿ ತಿಂಡಿಗಿಂಡಿ ಸಿಕ್ಕುವುದಿಲ್ಲ. ಇಡ್ಲಿ ಸಾಕು, ತಂದುಬಿಡ್ತೇನೆ… ಎಂದು ಅವರು ಏಳುವ ಹೊತ್ತಿಗೆ ರೈಲು ಹೊರಡುವ ಸೂಚನೆಯಾಯಿತು. ಹೆಂಡತಿ ಒಂದ್ನಿಮಿಷ ಕೂರಿ. ಸುಧಾರಿಸಿಕೊಳ್ಳಿ ಎಂತಲೇ ಹೇಳಿದರು. ಹೆಂಡತಿ ಹೀಗೆಂದ ಮಾತಿನಲ್ಲಿ ಗಂಡನ ಪ್ರಕೃತಿ ನೋಡಿದರೆ ಕೂತಲ್ಲಿಕೂರದ, ನಿಂತಲ್ಲಿನಿಲ್ಲದ, ಚಡಪಡಿಕೆಯ ವ್ಯಕ್ತಿಯಂತೆ, ಮಾತಿನಲ್ಲಿ ಹೆಚ್ಚು ಆಸಕ್ತಿ ಇರುವವರಂತೆ ಕಂಡರು. ಹೆಂಡತಿ ಮಾತ್ರ ಗಂಡನಿಗೆ ವಿರುದ್ಧ ದಿಕ್ಕಿನ, ನಿರಾಳ ಮನಸ್ಸಿನವರಾಗಿದ್ದರು.
ಯೌವನದ ಚಂಚಲ ಭಾವಗಳೆಲ್ಲ ಕಳೆದು ತಾಯ್ತನದ ದಿವ್ಯನಿರ್ಲಿಪ್ತತೆ ಆಕೆಯ ಮುಖದಲ್ಲಿ ನೆಲೆಸಿತ್ತು. ಪ್ರಯಾಣಕ್ಕೆ ಸಿದ್ಧಗೊಂಡು ಬಂದಿಲ್ಲದಂತಿದ್ದ ಆ ಹೆಣ್ಣುಮಗಳು ಚಂದ್ರಗಾವಿ ಬಣ್ಣದ ಸೀರೆ, ಬಿಳಿಯ ರವಿಕೆಯಲ್ಲಿದ್ದರು. ಶಿಸ್ತಾಗಿ ತಲೆಬಾಚಿ ಜಡೆಹಾಕಿಕೊಂಡಿರಲಿಲ್ಲ. ಕೂದಲು ವಿರಳವಾಗಿ ಚದುರಿ ಅದೇ ಅವರ ಮುಖಕ್ಕೆ ಒಂದು ಬಗೆಯ ಶೋಭೆಯನ್ನು ಒದಗಿಸಿತ್ತು. ಈ ತಾಯಿಯನ್ನು ಅಪ್ಪಿಕೊಂಡಿದ್ದ ಹೆಣ್ಣುಮಗು ಅರೆನಿದ್ದೆ, ಅರೆ ಎಚ್ಚರದಲ್ಲಿತ್ತು. ಹುಡುಗ ಅಪ್ಪಅಮ್ಮನ ಮಧ್ಯದಲ್ಲಿದ್ದು ಬೆಳಗಿನ ಗದ್ದಲವನ್ನು ಕುತೂಹಲಕಣ್ಣುಗಳಿಂದ ವೀಕ್ಷಿಸುತ್ತಿದ್ದ. ಅವರಾಡುತ್ತಿದ್ದ ಮಾತುಗಳಿಂದ ಅವರು ಕೆಲಸ ಮಾಡುತ್ತಿದ್ದ ಮುಂಬಯಿಯ ಶಾಖೆಯಿಂದ ಅಹಮದಾಬಾದ್ ಬ್ಯಾಂಕ್‌ಶಾಖೆಗೆ ವರ್ಗಾವಣೆಗೊಂಡಿದ್ದದ್ದು ತಿಳಿಯಿತು. ಎದ್ದು ಹೋಗಲು ಅವಕಾಶವಾಗದೆ, ಗಂಡಹೆಂಡತಿಯರ ಮಾತುಕತೆ ಒಂದು ಹಂತಕ್ಕೆ ಬಂದು ಅದೂ ಮುಗಿದು, ಪತಿ ನನ್ನಕಡೆ ನೋಡಿ ಹಾಗೆಯೇ ನನ್ನ ಬ್ಯಾಗಿನ ಮೇಲಿದ್ದ ಕನ್ನಡ ಅಕ್ಷರಗಳನ್ನು ಗುರುತಿಸಿ, ಓಹೋ ನೀವು ಕನ್ನಡದವರಾ ಎಂದು ಸಂತೋಷ ವ್ಯಕ್ತಪಡಿಸಿದರು. ಯಾವ್ಯಾವುದೋ ಸಂದರ್ಭಗಳಲ್ಲಿ ಊರು, ಕೇರಿ, ಭಾಷೆ ಎಂಬುದು ಮನಸ್ಸಿಗೆ ಸಂತೋಷವನ್ನು ತರುತ್ತದೆಂದರು. ಅದಾಗಲೇ ಸ್ನೇಹಿತರಾಗಿಬಿಟ್ಟ ಅವರು, ನಾನೇನೋ ಹುಟ್ಟಿ ಬೆಳೆದದ್ದೆಲ್ಲ ಬೆಂಗಳೂರು, ಇವಳು ಮೈಸೂರಿನವಳು. ಮದುವೆಯಾದ ಮೇಲೆ ಬೆಂಗಳೂರಲ್ಲಿಯೇ ಏಳೆಂಟು ವರ್ಷಕಾಲ ಇದ್ದೆ. ಆಮೇಲೆ ಮುಂಬಯಿ. ಈಗ ಇಲ್ಲಿಂದಲೂ ಬಿಡುಗಡೆಯಾಗಿದೆ. ಅಹಮದಾಬಾದ್ ಕಡೆ ಹೊರಟಿದ್ದೇವೆ. ಅಲ್ಲಿಯ ನೀರಿನ ಋಣ ಎಷ್ಟುದಿನವೋ ಗೊತ್ತಿಲ್ಲ. ಪ್ರಯಾಣ ಎಂಬುದು, ಇದ್ದದ್ದೇತಾನೇ ಎಂದರು. ಹಾಗೆಯೇ ನೀವು ಯಾವ ಕಡೆಯವರೋ ಎಂದರು. ನಾನು ಮೈಸೂರು ಸುತ್ತಿನವನೇ, ಆದರೆ ಪಟ್ಟಣದಲ್ಲಿ ಹುಟ್ಟಿ ಬೆಳೆದವನಲ್ಲ. ದಕ್ಷಿಣ ಕರ್ನಾಟಕದ ಕಡೆ ಮಾದೇಶ್ವರನಬೆಟ್ಟ, ಬಿಳಿಗಿರಿರಂಗನಬೆಟ್ಟ ಸಾಲು ಇದೆಯಲ್ಲ ಆ ಅರಣ್ಯಸುತ್ತಿನವನು. ಒಂದಿಷ್ಟು ಓದಲೆಂದು ಮೈಸೂರು ಸೇರಿದ್ದೆ ಎಂದೆ. ಹಾಗಾದರೆ ನೀವು ಕಾಡಿನ ಪ್ರಕೃತಿಯ ಮಧ್ಯೆ ಬೆಳೆದವರು ಎನ್ನಿ ಎಂದು ನಕ್ಕ ಸ್ನೇಹಿತರು ನನ್ನ ಕಡೆಗೆ ಹೆಚ್ಚು ಸ್ನೇಹ ತೋರಿಸುವ ಭಾವನೆ ತಳೆದರು. ಇನ್ನೂ ಪ್ರಯಾಣ ಬಹುದೂರವೇ ಇದ್ದಿತು. ಅವರು ಮಾತುಕತೆಯಲ್ಲಿ ಆಸಕ್ತಿಯಿದ್ದವರಾದ್ದರಿಂದ, ಅದಲ್ಲದೆ ನಾವು ಒಂದೇ ಪ್ರದೇಶದವರೆನಿಸಿಬಿಟ್ಟಿದ್ದರಿಂದ ಅವರಲ್ಲಿ ಉತ್ಸಾಹವೂ, ಸಂತೋಷವೂ ಹೆಚ್ಚಿದಂತಿತ್ತು. ಈ ಬಗೆಯ ಸಂತೋಷದ ನಂತರ ಸ್ನೇಹಿತರು ‘ನಿಮ್ಮ ಉದ್ಯೋಗ’ ಎಂದರು. ಒಂದು ತಾಲ್ಲೋಕು ಮಟ್ಟದ ಕಾಲೇಜಿನಲ್ಲಿ ಸುಮಾರು ಇಪ್ಪತ್ತು ವರ್ಷಗಳಿಂದ ಅಧ್ಯಾಪಕನಾಗಿದ್ದೇನೆ ಎಂದೆ. ಅದಕ್ಕೆ ಅವರು ನೀವು ಏನೇ ಹೇಳಿ ಕರ್ನಾಟಕದ ಮುಂದೆ ಇನ್ಯಾವ ನಾಡು ಎಂದು ಪ್ರಾದೇಶಿಕ ಅಭಿಮಾನವನ್ನು ಪ್ರಕಟಿಸಿದರು. ಹಾಗೆಯೇ ಊರುಕೇರಿಯ ಕಡೆ ನಿಮ್ಮ ತಂದೆ ತಾಯಿ ಅಣ್ಣತಮ್ಮಂದಿರು ಎಲ್ಲ ಇದ್ದಾರೆಯೆ, ಹೋಗಿ ಬರುವುದುಂಟೆ ಎಂದು ಕೇಳಿದರು. ಇಷ್ಟು ಹೊತ್ತಿಗೆ ರೈಲು ಒಂದು ಪುಟ್ಟನಿಲ್ದಾಣ ತಲುಪಿ ನಿಂತು, ಮುಂದೆ ಹಾಯುತ್ತಿತ್ತು.
ನಾನು, ಊರುಕೇರಿ, ತಂದೆತಾಯಿ ಮಾತ್ರ ಬರಿಯ ನೆನಪು ಎನ್ನಿ. ಅದರಿಂದಲೇ ನೋಡಿ ದೇವರಿಗೆ ಬಿಟ್ಟ ಬಸವಣ್ಣನಂತೆ ನೆನಪಿಗೆ ಬಂದ ಕಡೆ ತಿರುಗುತ್ತಿರುತ್ತೇನೆ ಎಂದು ಸಣ್ಣದಾಗಿ ನಕ್ಕೆ. ಸ್ನೇಹಿತರು ಹಾಗಾದರೆ ನೀವು ಪುಣ್ಯವಂತರಪ್ಪಾ ಎಂದು ಮೆಲ್ಲಗೆ ನನ್ನ ತೊಡೆಬಡಿದು ನಕ್ಕು ಪತ್ನಿಯ ಕಡೆ ನೋಡಿದರು. ನಂತರ ನಿಮ್ಮ ತಂದೆತಾಯಿಗಳ ವಿಚಾರ ಬರಿಯ ನೆನಪು ಅನ್ನುವುದಾದರೆ ನಿಮ್ಮ ವಿದ್ಯಾಭ್ಯಾಸ ಸ್ವಲ್ಪ ಕಷ್ಟದ್ದೇ ಆಗಿರಬೇಕು. ನಾನಂದುಕೊಂಡ ಹಾಗೆ ಸುಂದರ ಪ್ರಕೃತಿಯ ನಡುವೆ ನೀವು ಆಟವಾಡಿಕೊಂಡು ಬೆಳೆದುಬಂದವರಲ್ಲ ಎಂದರು. ನಾನು ಕೊಂಚ ತಡೆದು, ನಿಮ್ಮ ಅಭಿಪ್ರಾಯ ಸರಿ. ನಾನು ಅಕಸ್ಮಾತ್ತಾಗಿ ಓದಿದವನು. ಯಾವ ಘಳಿಗೆಯಲ್ಲಿ ಬೇಕಾದರೂ ನನ್ನ ಓದಿಗೆ ಬೇರಾರು ಅಲ್ಲ, ನಾನೇ ಕಲ್ಲು ಹಾಕಿಕೊಳ್ಳಬಹುದಾಗಿತ್ತು ಎಂದೆ. ಅಷ್ಟುಹೊತ್ತಿಗೆ ಅವರ ಮಗ ನಮ್ಮ ಮಾತುಕತೆಯಲ್ಲಿ ಆಸಕ್ತಿಯಿಲ್ಲದವನಾಗಿ ಎದ್ದು ಬೋಗಿಯಲ್ಲಿ ತಿರುಗಾಡುವ ಹವಣಿಕೆ ಮಾಡಿದ. ತಾಯಿ ಆತಂಕದ ಮುಖಮಾಡಿ ಎದ್ದುಹೋಗಿ ಅವನ ಕೈಹಿಡಿದು ವಾಪಸು ಕರೆತರಲಾಗದೆ ತೊಡೆಯ ಆಶ್ರಯ ಪಡೆದಿದ್ದ ಮಗಳನ್ನು ಭದ್ರವಾಗಿ ಅವುಚಿಕೊಂಡರು. ಇದನ್ನು ಗ್ರಹಿಸಿದ ಸ್ನೇಹಿತರು ಎದ್ದು ಹೋಗಿ ಅಲ್ಲೆಲ್ಲೋ ಬಾಗಿಲಹತ್ತಿರ ಹೋಗಲು ಸಿದ್ಧನಿದ್ದ ಮಗನನ್ನು ಒಂದು ಸಣ್ಣಪೆಟ್ಟು ಕೊಟ್ಟು ಎಳೆದುಕೊಂಡು ಬಂದರು. ಈ ಹಲಾಲ್‌ಖೋರ ಹೇಳಿದ ಮಾತನ್ನೇ ಕೇಳುವುದಿಲ್ಲ ನೋಡಿ. ನಾವು ಏನು ಹೇಳಿದರೂ, ಅದಕ್ಕೆ ವಿರುದ್ಧ ಮಾಡುವುದರಲ್ಲೇ ಇವನಿಗೆ ಸಂತೋಷ. ಓಡುವ ರೈಲಿನ ಬಾಗಿಲಲ್ಲಿ ಹೋಗಿ ಎಲ್ಲಿಯಾದರೂ ನಿಲ್ಲುವುದುಂಟೆ, ಎಂದು ಮಗನ ಬಗ್ಗೆ ದೂರಿದರು.
ಸ್ನೇಹಿತರು ಹಾಗೆ ಹೇಳುತ್ತಿದ್ದಂತೆಯೇ ನನಗೆ ಅನ್ನಿಸಿದ್ದೆಂದರೆ ನಾನು ಓದುವ ಕಾಲಕ್ಕೆ ಯಾವ ಘಟ್ಟದಲ್ಲಿಯಾದರೂ ನನ್ನ ವಿದ್ಯಾಭ್ಯಾಸದ ಮೇಲೆ ಏಕೆ ನನ್ನ ತಲೆಯ ಮೇಲೂ ಕಲ್ಲು ಹಾಕಿಕೊಳ್ಳಬಹುದಿತ್ತು. ಎಲ್ಲ ಹುಡುಗರಂತೆ ನಾನೂ ನನ್ನ ತಂದೆತಾಯಿಗಳ ಮಾತನ್ನು ಕೇಳುವವನಾಗಿರಲಿಲ್ಲ. ನನ್ನ ಯೌವನದ್ದೇನು ಬಾಲ್ಯಕಾಲದ ಆಸೆಗಳನ್ನು ಪೂರೈಸುವಷ್ಟು ಶಕ್ತಿ ತಂದೆ ತಾಯಿಗಳಿಗಿರಲಿಲ್ಲ. ತಾಯಿ ಹೂವುಕಟ್ಟಿ ಮಾರುತ್ತಿದ್ದರು. ತಂದೆಯದು ಯಾವ ಸಂಪಾದನೆ ಎಂದು ನಿಖರವಾಗಿ ಹೇಳುವಂತಿರಲಿಲ್ಲ. ಯಾಕೆಂದರೆ ತಂದೆ ಊರ ಹೊಲಗದ್ದೆಗಳನ್ನೆಲ್ಲ ಸುತ್ತಿ ಹೂವುಸೊಪ್ಪು ಕೊಯ್ದುತಂದು ತಾಯಿಯ ಮುಂದೆ ಒಂದಷ್ಟು ಹಾಕುವುದು. ಮಿಕ್ಕದ್ದನ್ನು ಊರೊಳಗಿನ ಎರಡು ಮೂರು ಗುಡಿಯ ಪೂಜಾರಿಗಳು ಪೂಜಿಸುತ್ತಿದ್ದ ದೇವರಿಗೆಂದು ಒಯ್ದುಕೊಡುತ್ತಿದ್ದರು. ಹಬ್ಬಹರಿದಿನಗಳಲ್ಲಿ ದೇವರ ಮೆರವಣಿಗೆ ಹೊತ್ತು ಗೋವಿಂದನನ್ನಿಕ್ಕುವುದು. ಪಕ್ಷ ವಾರಗಳಲ್ಲಿ ಗುಡಿಯ ಮುಂದೆ ಭಜನೆಯ ಮೇಳ ಸೇರಿಕೊಂಡು ದಮಡಿ ಬಡಿದು ಹಾಡುವುದು. ಆಮೇಲೆ ಪೂಜಾರಿಗಳು ಕೊಟ್ಟ ಪಾತ್ರೆಯ ಚರುಪನ್ನು ಭಕ್ತರಿಗೆ ಹಂಚುವುದು. ಇದಲ್ಲದೆ ಊರಲ್ಲಿ ಹೆಣಬಿದ್ದರೆ ಅವರ ಮನೆಯ ಮುಂದೆ ಕೂತು ಎಲ್ಲರಿಗೂ ಸಮಾಧಾನ ಹೇಳುವುದು, ಹೆಣವನ್ನೂ ಹೊರುವುದು ಇಂಥ ಸಾಮಾಜಿಕ ಕೈಂಕರ್‍ಯಗಳಲ್ಲಿ ತೊಡಗಿರುತ್ತಿದ್ದರು. ಈ ಯಾವ ಕಸುಬೂ ತಂದೆಯವರಿಗೆ ಮೂರು ಕಾಸಿನ ಸಂಪಾದನೆಯನ್ನು ತರುತ್ತಿರಲಿಲ್ಲ. ತಾಯಿಯವರಿದ್ದು ನಿಮಗೆ ಯಾಕೆ ಇಂಥ ಬೀದಿಯ ಮೇಲಿನ ಬದುಕು.
ನಾನು ಕಟ್ಟಿಕೊಟ್ಟ ಹೂವನ್ನಾದರೂ ಮಾರಿದರೆ ಆಗದೇ ಎನ್ನುತ್ತಿದ್ದರು. ಅದಕ್ಕೆ ತಂದೆಯವರು, ಎಲೆ ಮೂರು ಕಾಸಿನ ಹೆಂಗಸೇ ನಾನು ಹೋಗದಿದ್ದರೆ ಊರೊಳಗೆ ಯಾವ ಕೆಲಸ ತಾನೇ ಸುಸೂತ್ರವಾಗಿ ನಡೆಯುತ್ತದೆ. ಜನ ನನ್ನನ್ನು ಬಿಡುವುದುಂಟೆ ಎಂದು ತನ್ನ ಪುರುಷತ್ವದ ದೊಡ್ಡಸ್ತಿಕೆಯನ್ನು ತೋರುತ್ತಿದ್ದರು.ಆದರೆ ಬಡವನೆಂಬ ಕಾರಣಕ್ಕಾಗಿ ಊರಜನ ತಂದೆಯನ್ನು ದೇವರ ಭಕ್ತನೆಂದೂ, ಬೀದಿಯ ಭಂಟನೆಂದೂ ಕರೆದು ತಾತ್ಸಾರವನ್ನೇ ತೋರುತ್ತಿದ್ದರು. ಕೇರಿಯ ಜನರ ಈ ತಾತ್ಸಾರ ಗೊತ್ತಿದ್ದ ತಂದೆಯವರು ಆಗಾಗ ಮನೆಯಲ್ಲಿ ಅದನ್ನು ಸಿಟ್ಟಾಗಿ ಪರಿವರ್ತಿಸುತ್ತಿದ್ದರು. ನನಗೆ ಕೊಂಚ ಬುದ್ಧಿಬರುತ್ತಿದ್ದಂತೆಯೇ ತಂದೆತಾಯಿಗಳು ನಿಷ್ಪ್ರಯೋಜಕರು. ನನ್ನ ವಾರಿಗೆಯ ಗೆಣೆಕಾರರೇ ಒಳ್ಳೆಯವರು ಎಂದುಕೊಂಡು ಊರುಕೇರಿ, ಹಳ್ಳಕೊಳ್ಳ, ಗುಡ್ಡಗವಾರದೆಡೆಯೆಲ್ಲ ತಿರುಗತೊಡಗಿದೆ. ಎಷ್ಟು ತಿರುಗಿದರೂ ದಣಿವೆಂಬುದೇ ಇರುತ್ತಿರಲಿಲ್ಲ. ಆದರೆ ಯಾವಾಗಲೋ ಒಮ್ಮೆ ಮನೆ ಸೇರುವಲ್ಲಿ ತಾಯಿ ತಾನು ಕಟ್ಟಿರುವ ಹೂವನ್ನು ಬೀದಿಯ ಮೇಲೆ ಮಾರಿಕೊಂಡು ಬಾ ಕಂದ ನಿನಗೂ ಒಂದು ಕಾಸು ಕೊಡುತ್ತೇನೆ ಎಂದು ಅಂಗಲಾಚುತ್ತಿದ್ದರು. ನಾನು ಬೀದಿ ತಿರುಗುವವನಾದರೂ ಹೂ ಮಾರುವ ಕೆಲಸ ಬಹಳ ಶ್ರಮದಾಯಕವಾದುದು ಎಂದು ತಿಳಿಯುತ್ತಿದ್ದೆ. ಯಾಕೆಂದರೆ ಒಮ್ಮೆ ಅವ್ವಕೊಟ್ಟ ಹೂವು ಮಾರಿ, ಬಂದ ಕಾಸನ್ನೆಲ್ಲ ಜೇಬಿಗೆ ಹಾಕಿ, ಎರಡು ಮೂರು ದಿನ ಮನೆಯನ್ನೇ ಸೇರದೆ ಅಂಗಡಿಯಲ್ಲೇ ತಿಂದು ಕೇರಿಯ ಜಗಲಿಗಳಲ್ಲೇ ಕಾಲಹಾಕಿದೆ. ವಿಚಿತ್ರವೆಂದರೆ ಎಲ್ಲ ಕಾಲಕ್ಕೂ ಒಂದು ಸಂಗತಿ ಪ್ರಿಯವಾಗುವುದು ಸ್ವಲ್ಪ ಕಾಲಮಾತ್ರ.
ಹಾಗಾಗಿ ಮನೆಯ ಕಡೆ ಮುಖಹಾಕುವ ಇಷ್ಟವಾಯಿತು. ಅಷ್ಟು ಹೊತ್ತಿಗೆ ಅವ್ವ ಅಪ್ಪನಿಗೆ ನನ್ನ ಮೇಲೆ ದೂರು ಹೇಳಿದ್ದರು ಎಂದು ಕಾಣಿಸುತ್ತದೆ. ನಾನು ಅವ್ವನ ಒಂದು ದಿನದ ಸಂಪಾದನೆಯನ್ನು, ಎರಡುಹೊತ್ತಿನ ಅನ್ನವನ್ನೂ ತಪ್ಪಿಸಿದ್ದೆ. ಯಾವ ಸಂಪಾದನೆಯೂ ಅಷ್ಟಾಗಿ ಇಲ್ಲದೆ ತಿರುಗುತ್ತಿದ್ದ ಅಪ್ಪನಿಗೆ ಇಷ್ಟೇ ಸಾಕಾಗಿತ್ತು. ತುಂಬ ಅಸಹಾಯಕತೆಯಿಂದ ಯಾವಾಗಲೂ ಬಳಲುತ್ತಿದ್ದ ಅಪ್ಪನಿಗೆ ತನ್ನ ಪುರುಷತ್ವ ತೋರಿಸಲು ಇದೊಂದು ಸದವಕಾಶ ಸಿಕ್ಕಿದಂತಾಯಿತು. ಮೂರನೆಯ ದಿನ ನಾನು ಮೆಲ್ಲಗೆ ಮನೆಯ ಒಳಗೆ ನುಸುಳಿ ಅಲ್ಲಿ ನನ್ನ ಅಸ್ತಿತ್ವವನ್ನು ಸ್ಥಾಪಿಸಲು ಪ್ರಯತ್ನಿಸಿದೆ. ನನ್ನ ಕಂಡದ್ದೇ ಎದ್ದು ಬಂದ ಅಪ್ಪ ಹೆಕ್ಕತ್ತು, ಬೆನ್ನಿನ ಕಡೆ ಎರಡೆರಡೇಟು ಬಲವಾಗಿಯೇ ಬಾರಿಸಿದ. ನಾನು ಆಯತಪ್ಪಿ ಬಿದ್ದೆ. ಏಟುಬಿದ್ದಾಗ ಹೊಸ್ತಿಲು ದಾಟಿ ಮನೆಯ ಒಳಗಿದ್ದೆ. ಆಯತಪ್ಪಿ ಬಿದ್ದಾಗ ಹೊಸ್ತಿಲ ಈಚೆಗಾದೆ. ಹೊಸ್ತಿಲಿಂದ ಕೆಳಕ್ಕೆ ನಾಲ್ಕೈದು ಹಂತಗಳಿದ್ದವು. ಮೂರ್‍ನಾಲ್ಕು ಉರುಳು ಉರುಳಿ ಬೀದಿ ಪಾಲಾಗಿದ್ದೆ. ಆ ಹೊತ್ತಿನಿಂದ ತಂದೆಯೇ ನನಗೆ ಪ್ರಥಮ ಶತ್ರುವಾದರು. ಪ್ರಪಂಚದಲ್ಲಿ ಎಲ್ಲ ತಂದೆತಾಯಿಗಳೂ ಒಳ್ಳೆಯವರೆಂದೂ ನನ್ನ ತಂದೆತಾಯಿಗಳು ಮಾತ್ರ ಕೆಟ್ಟವರೆಂದೂ ತಿಳಿದೆ. ಆದರೆ ತಾಯಿಗೆ ನನಗೆ ಬಿದ್ದ ಏಟಿನಿಂದ ಬಹಳ ದುಃಖವಾಗಿ ಬೀದಿಯಲ್ಲಿ ಬಿದ್ದ ನನ್ನನ್ನು ಎತ್ತಿಕೊಳ್ಳಲು ಬಂದರು. ರಕ್ಷಿಸಲು ಬಂದ ತಾಯಿಯನ್ನು ಎರಡನೆಯ ಶತ್ರುವಾಗಿಯೂ, ಅದರಲ್ಲೂ ಇಷ್ಟೆಲ್ಲ ದುರಂತಕ್ಕೆ ಈ ಹೆಂಗಸೇ ಮೂಲಕಾರಣವೆಂದು ದೃಢಪಡಿಸಿಕೊಂಡೆ. ಹೀಗೆ ಹೂವು ಮಾರಿದ ಕಾಸು ತಿಂದು ಹಾಕಿದ ಮೇಲೆಯೂ ತಾಯಿ ನನಗೆ ಬೀದಿಯ ಮೇಲೆ ಹೂ ಮಾರಿಕೊಂಡು ಬರಲು ಹೇಳುತ್ತಿದ್ದರು.
ನೀನು ಕೊಡುವ ಜುಜುಬಿ ಮೂರುಕಾಸಿಗೆ ನಿನ್ನ ಕೆಲಸವನ್ನ ಯಾವ ಭಿಕಾರಿ ಮಾಡುತ್ತಾನೆ ಹೋಗು, ನಿನ್ನ ಗಂಡನ ಕೈಲೇ ಮಾಡಿಸಿಕೋ ಎನ್ನುತ್ತಿದ್ದೆ. ಅದಕ್ಕೆ ತಾಯಿ ನೋಡು ನಿನಗೆ ಮೂರು ಕಾಸಿಗಿಂತ ಜಾಸ್ತಿ ಕೊಡುತ್ತೇನೆ. ಮಾರಿದ್ದನ್ನೆಲ್ಲ ತಿಂದುಹಾಕದೆ ತಂದುಕೊಡು ಎನ್ನುತ್ತಿದರ. ಅವರಿಗೆ ಸಂಸಾರ ನಿರ್ವಹಣೆ ಬಹುದೊಡ್ಡ ಜವಾಬ್ದಾರಿಯಾಗಿತ್ತು. ತಾಯಿಗೆ ನಾನು ಕೈಕೊಟ್ಟು ಆಕೆಗೆ ತೊಂದರೆಯಾದರೆ ಸಂತೋಷಪಡುವುದೇ ನನ್ನ ಗುರಿಯಾಗಿತ್ತು. ತಂದೆಗೋ ದೊಡ್ಡಸ್ತಿಕೆಯ ಮಾತೇ ಮುಖ್ಯವಾಗಿತ್ತು. ಯಾವಾಗಲೂ ಮಾನ ಮರ್‍ಯಾದೆ ಗೌರವಗಳ ಬಗ್ಗೆ ಮಾತನಾಡುತ್ತಿದ್ದರು. ಅದು ನನ್ನಿಂದಲೇ ಬಹುತೇಕ ಹಾಳಾಗುತ್ತಿದೆಯೆಂದು ಎಲ್ಲದಕ್ಕೂ ಮೂಲವಾದ ಅವ್ವನನ್ನು ಕಟ್ಟಿಕೊಂಡು ತನ್ನ ಕತ್ತಿಗೆ ಉರುಲಾಗದಿದ್ದರೆ, ಇಷ್ಟರಲ್ಲಿ ಈ ಊರೆಂಬ ಸ್ಮಶಾನದಲ್ಲಿ ಇರುತ್ತಲೇ ಇರಲಿಲ್ಲವೆಂದು ಯಾವಾಗಲೂ ಹೇಳುತ್ತಿದ್ದರು. ತಾಯಿಗೆ ಮಾತ್ರ ತನ್ನ ಮನೆ, ತನ್ನ ಕಾಯಕ, ಗಂಡನೂ ನಾನು ಹೊತ್ತಿಗೊತ್ತಿಗೆ ಮನೆ ಸೇರುವುದು ಬಹಳ ಇಷ್ಟವಿದ್ದ ಸಂಗತಿಯಾಗಿತ್ತು.
ನಾನು ಇನ್ನಷ್ಟು ಬೆಳೆದ ನಂತರ ತಂದೆಯಂತೆಯೇ ನನಗೂ ಊರುಕೇರಿ ಸುತರಾಂ ಇಷ್ಟವಾಗದೇಹೋಯಿತು. ಊರುಬಿಟ್ಟು ನಡೆದುಬಿಟ್ಟರೆ ತಾಯಿಯನ್ನು ನಿರಂತರ ದುಃಖದಲ್ಲಿ ಕೆಡವಿಬಿಡಬಹುದೆಂತಲೂ ನನಗೆ ಅನ್ನಿಸುತ್ತಿತ್ತು. ಹಾಗೆ ಒಂದು ದಿನ ಊರ ತುದಿಯ ಹಳ್ಳದಲ್ಲಿ ಆಟವಾಡುತ್ತಿದ್ದೆ. ಹತ್ತುಹನ್ನೆರಡು ವಯಸ್ಸು ಇರಬಹುದು. ಮಹದೇಶ್ವರನ ಬೆಟ್ಟಕ್ಕೆ ಹೋಗುತ್ತಿದ್ದ ಪರಿಸೆಯ ನಡುವೆ ಇದ್ದ ಒಬ್ಬ ಕಟ್ಟುಮಸ್ತಾದ ಕಪ್ಪು ಆಳು ತನ್ನ ತಲೆಯ ಮೇಲೆ ನಾಲ್ಕು ಮೂಟೆಗಳನ್ನು ಹೊತ್ತುಕೊಂಡಿದ್ದ. ಅವನು ನೀರಿನಲ್ಲಿ ನಿಂತು ಆಟವಾಡುತ್ತಿದ್ದ ನನ್ನ ಕರೆದು, ಲೇ ತಮ್ಮಾ ಈ ಅಂಗಡಿ ಸಾಮಾನು ಹೊತ್ತುಕೊಂಡು ಬೆಟ್ಟದವರೆಗೆ ಬರುವುದಾದರೆ, ನಿನಗೆ ಮಿಠಾಯಿ, ಕಜ್ಜಾಯ ಕೊಡುತ್ತೇನೆಂದ. ತಾಯಿ ಎಂದೂ ಮಾಡಿಕೊಡದ ಆ ಪದಾರ್ಥಗಳ ಹೆಸರು ಕೇಳಿ ಅತ್ಯಂತ ಸಂತೋಷಚಿತ್ತನಾಗಿ ಜೊತೆಗೆ ಅದು ನನಗೆ ಅಷ್ಟು ಸುಲಭವಾಗಿ ದಕ್ಕುತ್ತದೆಂದು ತಿಳಿದು ಆತನ ಸಹಾಯಕ್ಕೆ ಸಿದ್ಧನಾದೆ. ಆತ ನನ್ನ ತಲೆಗೆ ರವಾನಿಸಿದ ಸಾಮಾನು ಸರಂಜಾಮು ಸ್ವಲ್ಪ ಭಾರವಾಗಿದ್ದಿತು. ಅದು ವಿಠಾಯಿ ಅಂಗಡಿ ಇಡುವಲ್ಲಿ ಹಾಸುವಚಾಪೆ, ನೆಡುವ ಮೂರ್‍ನಾಲ್ಕು ಕಂಭ, ಮೇಲಿನ ಗುಡಾರ, ಹಗ್ಗ ಇದರ ಕಂತೆಯಾಗಿತ್ತು. ಅಂಗಡಿ ಹಾಸಿನ ಕಂತೆ ನಾನು ಹೊತ್ತು, ಸಿಹಿಯಮೂಟೆಗಳನ್ನು ಅವನು ಹೊತ್ತಿದ್ದ. ಬಲವಾಗಿದ್ದ ನನ್ನ ಕೈಕಾಲುಗಳಿಗೆ ಅವುಗಳನ್ನು ಹೊತ್ತುಕೊಂಡು ಮೂವತ್ತು ಮೈಲುದೂರದ ಜಾತ್ರೆಗೆ ಮಿಠಾಯಿ, ಕಜ್ಜಾಯದ ವಾಸನೆಯ ಹಿಂದೆ ನಡೆಯುವುದು ನನಗೇನೂ ಕಷ್ಟವಾಗಲಿಲ್ಲ. ಕಷ್ಟಬಂದದ್ದು ಎಲ್ಲಿ ಎಂದರೆ ಬೆಟ್ಟದಲ್ಲಿ. ನಾನು ಮೂಟೆ ಇಳಿಸಿದವನೇ ಸಿಹಿ ತಿನ್ನುವ ತೀವ್ರ ಬಯಕೆಯಿಂದ ‘ತತ್ತಣ್ಣ ಕಜ್ಜಾಯನ’ ಎಂದೆ. ಅವನು ‘ಲೇಯ್ ಅಡಕಸಬಿ ನನಮಗನೇ ರವಸ್ಟು ತಾಳು ಚಾಪೆ ಹಾಸಿ ಅಂಗ್ಡಿ ಮಡಗ್ತೀನಿ. ಮದ್ಲು ಗಿರಾಕಿ ಬರ್‍ಬೇಕು. ಬೋಣಿ ಆಗಬೇಕು ಆಮೇಲೇನಿದ್ರು ನಿಂಗೆ ಕಜ್ಜಾಯ’ ಎಂದ. ನಾನು ಕೇಳಲಿಲ್ಲ. ಅವನು ಜಾತ್ರೆಯಿಂದ ಜಾತ್ರೆಗೆ ಮೂಟೆಹೊತ್ತು ತಿರುಗಿ ಬೆಳೆದ ಬಲಿಷ್ಠ ದೇಹದವನಾಗಿದ್ದ. ಅವನ ಮುಂದೆ ನನ್ನ ಆಟವೇನೂ ನಡೆಯುವುದಿಲ್ಲವೆಂದು ಗೊತ್ತಿದ್ದರೂ ಜಗಳಹೂಡಿದೆ.
ನಾಲ್ಕೈದು ಏಟು, ಬಲವಾದ ಒದೆ ಕೊಟ್ಟು ನನ್ನನ್ನು ಅವನ ಕಣ್ಣಳತೆಯಿಂದಲೇ ಓಡಿಸಿಬಿಟ್ಟ. ವಾಪಸು ಊರಿಗೆ ಬರುವುದಕ್ಕೆ ನಾನು ಕ್ರಮಿಸಿದ ದಾರಿ ಅರಣ್ಯಮಾರ್ಗವಾಗಿತ್ತು. ಬೆಟ್ಟಕ್ಕೆ ಬಂದ ಭಕ್ತರು ಮೂರುದಿನವಿಲ್ಲದೆ ವಾಪಸು ಹೊರಡುವುದಿಲ್ಲವೆನಿಸಿತು. ಹಾಗೆ ಮೂರ್‍ನಾಲ್ಕು ದಿನ ಬೆಟ್ಟದಲ್ಲಿ ಒಬ್ಬನೇ ತಿರುಗಿ ಪರಿಸೆಯೊಂದಿಗೆ ವಾಪಸು ಊರು ಸೇರುವಲ್ಲಿ ತಾಯಿ ನನ್ನನ್ನು ಸೀರೆಯ ಸೆರಗಿನಲ್ಲಿ ಅವುಚಿಕೊಂಡು ‘ಇನ್ನು ಯಾವತ್ತು ನನ್ನ ಕಣ್ಣಳತೆ ಬುಟ್ಟು ಹೋಗಬ್ಯಾಡ ಕಂದ’ ಎಂದಳು. ನನಗೆ ಆಗ ಆ ಮಾತು ಅಷ್ಟೇನು ಪ್ರಿಯವಾಗಿ ಕೇಳಿಸಲಿಲ್ಲ. ಆದರೆ ಆ ಮಧ್ಯೆ ಶಾಲೆಯ ಜವಾನ ನಾನು ಸಿಕ್ಕಿದಾಗಲೆಲ್ಲ ಜುಟ್ಟು ಹಿಡಿದು ಶಾಲೆಗೆ ಎಳೆದುಕೊಂಡು ಹೋಗುತ್ತಿದ್ದ. ಅಲ್ಲಿಯ ಉಪಾಧ್ಯಾಯರಾದರೋ ಇನ್ನೂ ಭಯದ ಸಂಗತಿಯಾಗಿದ್ದರು. ತಂದೆತಾಯಿಗಳ ಎದುರಿನ ಭಯವೇ ಬೇರೆ. ಮೇಷ್ಟ್ರ ಭಯದ ಸ್ವರೂಪವೇ ಬೇರೆಯಾಗಿದ್ದುದರಿಂದ ನಾನು ಅರೆಬರೆ ವಿದ್ಯಾಭ್ಯಾಸ ಮಾಡುವವನಾದೆ.
ಈ ಮಧ್ಯೆ ವಯಸ್ಸಾಗಿದ್ದ ತಂದೆ ತೀರಿಕೊಂಡರು. ತೀರಿಕೊಳ್ಳುವ ಮುನ್ನ ಅವರಿಗೆ ತಿರುಪತಿಗೆ ಹೋಗಬೇಕೆಂಬ ಆಸೆಯಿತ್ತು. ಸಾಧ್ಯವಾದರೆ ಅಲ್ಲೇ ತಮ್ಮ ಪ್ರಾಣಹೋಗಬೇಕೆಂದುಕೊಂಡಿದ್ದರು. ಅದಕ್ಕಾಗಿ ಕೈಯ್ಯಲ್ಲಿ ಅಕ್ಕಿ ತುಂಬಿದ ತಟ್ಟೆ, ಅದರ ಮೇಲೆ ನಾಮ ಬಳಿದ ಹುಂಡಿಗೆ ಬಟ್ಟಲು ಮಡಗಿ, ನನ್ನ ಕೈಯ್ಯಲ್ಲಿ ಜಾಗಟೆ ಹೊಡೆಸಿ, ಗೋವಿಂದನನ್ನು ಇಕ್ಕಿಸುತ್ತ ಊರೆಲ್ಲ ತಿರುಗಿದರು. ಆದರೆ ತಿರುಪತಿಗೆ ಹೋಗುವಷ್ಟು ದಾನದ ಕಾಸು ಸಂಗ್ರಹವಾಗಲಿಲ್ಲ. ಊರೆಲ್ಲ ತಿರುಗಿ ಸಿಕ್ಕಿದ ಏಳೆಂಟು ರೂಪಾಯಿಗೆ ಅಲ್ಲೇ ಬಿಳಿಗಿರಿರಂಗನ ಬೆಟ್ಟಕ್ಕೆ ಹೋಗಿ ನಾಲ್ಕೈದು ದಿನವಿದ್ದು ಬಂದು ತಿರುಪತಿಗೆ ಹೋಗಿ ಬಂದುದಾಗಿ ಹೇಳಿದರು. ಆದರೆ ಕುಲದೈವಕ್ಕೆ ಹೋಗಲಾಗದೆ ತನಗೆ ಮೋಕ್ಷವಿಲ್ಲ. ಸ್ವರ್ಗದ ಬಾಗಿಲು ತೆರೆಯುವುದಿಲ್ಲ. ಕೊಂಚ ಮೊದಲೇ ಆಗಿದ್ದರೆ ಡೆದೇಹೋಗಿಬರುತ್ತಿದ್ದೆ. ಆದರೆ ದಾರಿಯಲ್ಲಿ ಹೊಟ್ಟೆಯ ಖರ್ಚಿಗಾದರೂ ಕಾಸುಬೇಕಲ್ಲ… ಎಂಬ ಚಿಂತೆಯಲ್ಲೇ ತೀರಿಕೊಂಡರು. ತಂದೆಯವರು ತೀರಿಕೊಂಡನಂತರ ತಾಯಿಯವರೂ ಬದುಕಿನ ಆಸೆಕಳೆದುಕೊಂಡು ನನ್ನ ಮೇಲಿನ ಯಾವ ಭರವಸೆಯೂ ಇಲ್ಲದೆ, ಒಂಟಿತನ ತಡೆಯಲಾರದೆ ಒಂದುದಿನ ಜೀವ ತೊರೆದರು. ಊರವರೆಲ್ಲ ಅದನ್ನು ಸುಖದ ಸಾವು ಎಂದರು. ಬಹುಶಃ ಸಾವಿನಲ್ಲಿಯೇ ತಾಯಿಯವರಿಗೆ ನೆಮ್ಮದಿ ಸಿಕ್ಕಿರಬೇಕು. ನೆನಪಿಗೆಬಂದ ಇಷ್ಟೆಲ್ಲ ಸಂಗತಿಗಳನ್ನು ಎದುರು ಕುಳಿತ ಸ್ನೇಹಿತರಿಗೆ ಹೇಳಲಾರದವನಾಗಿದ್ದೆ.
ಬೆಳಗಿನ ಒಂಭತ್ತು ಘಂಟೆಯಾಗಿ ರೈಲು ಯಾವುದೋ ಒಂದು ಸ್ಟೇಷನ್ನಿನಲ್ಲಿ ಬೆಳಗಿನ ಉಪಹಾರಕ್ಕೆ ನಿಲ್ಲಿಸಿದ್ದು ಮುಂದೆ ಹೊರಟಿತ್ತು. ಸ್ನೇಹಿತರಾದರೋ ಸ್ವಲ್ಪಹೊತ್ತಿನ ಹಿಂದೆ ಪ್ರಸ್ತಾಪಿಸಿದ್ದ ವಿದ್ಯಾಭ್ಯಾಸದ ವಿಚಾರವನ್ನೇ ನೆನಪಿಸಿಕೊಂಡು, ನಮ್ಮ ನಿಮ್ಮ ಕಾಲದ ವಿದ್ಯಾಭ್ಯಾಸದ ಕಥೆಯೇ ಬೇರೆ ಅನ್ನಿ. ನಮಗೆ ನಮ್ಮ ತಂದೆತಾಯಿಗಳು ಎಂದರೆ ಎಷ್ಟು ಭಯಗೌರವ ಇತ್ತು. ಅದೆಷ್ಟು ಕಷ್ಟಪಟ್ಟು ಮನೆಯಲ್ಲಿ ಕೂತು ವಿದ್ಯಾಭ್ಯಾಸ ಮಾಡುತ್ತಿದ್ದೆವು ಎಂದರು. ನಾನು ಮತ್ತೆ ಸಣ್ಣದಾಗಿ ನಕ್ಕು ನನ್ನ ವಿದ್ಯಾಭ್ಯಾಸದ ಸಂಗತಿಗಳ ಹೇಳಲಾಗದ ವಿವರಗಳೇ ಎನ್ನಿ. ಸತ್ಯ ಹೇಳುವುದು ಯಾವಾಗಲೂ ಕಡುಕಷ್ಟ. ಮರ್‍ಯಾದೆಯ ಎದುರು ಸತ್ಯ ಲೆಕ್ಕಕ್ಕೆ ಬರದ ಸಂಗತಿ ಎಂದೆ. ಸ್ನೇಹಿತರು ನೀವು ಒಗಟಿನಂತೆ ಮಾತನಾಡುತ್ತಿದ್ದೀರಿ ಎಂದರು. ಮತ್ತೆ ನಾನೇನೋ ನನ್ನ ಪೂರ್ಣವಿದ್ಯಾಭ್ಯಾಸ ಬೆಂಗಳೂರು ಸಿಟಿಯಲ್ಲೇ ಮಾಡಿದೆ. ನೀವು ಓದಿದ್ದು ಮೈಸೂರಲ್ಲಾ ಎಂದು ಕೇಳಿದರು.
ನಾನು, ನೀವು ಬೆಂಗಳೂರಲ್ಲೇ ಓದಿದವರಾದ್ದರಿಂದ ನಿಮಗೆ ನಮ್ಮಷ್ಟು ಸಮಸ್ಯೆ ಹುಟ್ಟಿಕೊಳ್ಳಲಿಲ್ಲ ಎಂದೆ. ಸ್ನೇಹಿತರು ಹೌದು ನೀವು ಹೇಳುವುದು ಸರಿ. ಹಳ್ಳಿಯಿಂದ ಪಟ್ಟಣಕ್ಕೆ ವಿದ್ಯಾಭ್ಯಾಸಕ್ಕೇಂತ ಬರುವವರು ಆರಂಭಕ್ಕೆ ಬಹಳ ಧೈರ್‍ಯವಹಿಸಬೇಕಾಗುತ್ತೆ. ಸಮಸ್ಯೆಗಳೂ ಕೂಡ ನಾನಾ ಥರದವಿರುತ್ತವಲ್ಲ. ಅವುಗಳನ್ನು ಹಳ್ಳಿಯ ಹುಡುಗರು ನಿಭಾಯಿಸಿಬಿಟ್ಟರೆ, ಪಟ್ಟಣದವರ ಮನಸ್ಸಿಗಿಂತ ತಿಳಿವಳಿಕೆಗಿಂತ ಅವರದು ವ್ಯಾಪಕವಾಗಿ ಬಿಡುತ್ತದೆ ಎಂದರು. ನಾನು ನೀವು ಹೇಳುವ ಮಾತು ಹಳ್ಳಿಯಿಂದ ಬಂದು ಓದಿನ ಸಾಹಸ ಕೈಗೊಳ್ಳುವ ವಿದ್ಯಾರ್ಥಿಗಳಿಗೆ ಚೆನ್ನಾಗಿಯೇ ಅನ್ವಯಿಸುತ್ತದೆ. ಆದರೆ ನನ್ನಂಥವರಿಗಲ್ಲ. ನನ್ನ ವಿದ್ಯಾಭ್ಯಾಸ ನನಗೆ ಅಂಥ ಲಾಭವನ್ನೇನು ತರಲಿಲ್ಲವೆನ್ನಿ. ಉದ್ಯೋಗವೊಂದನ್ನು ಬಿಟ್ಟು ಎಂದೆ. ಸ್ನೇಹಿತರು ಓ ನಮ್ಮಂಥವರ ವಿದ್ಯಾಭ್ಯಾಸದ ಪರಮ ಗಂತವ್ಯವೇ ಉದ್ಯೋಗದ ಬೇಟೆಯಲ್ಲವೆ ಎಂದು ಜೋರಾಗಿ ನಕ್ಕರು. ಹಾಗಾದರೆ ನಿಮ್ಮ ಪಟ್ಟಣದ ವಿದ್ಯಾಭ್ಯಾಸ ಅಷ್ಟು ಆರಾಮದಾಯಕವಾಗಿರಲಿಲ್ಲವೆನ್ನಿ ಎಂದು ಕೇಳಿ ನನ್ನ ವಿದ್ಯಾಭ್ಯಾಸ ಕ್ರಮ ಕುರಿತು ಏನಾದರೂ ಹೇಳಬಹುದೇ ಎಂದು ನಿರೀಕ್ಷಿಸಿದರು. ನಾನೂ ಸಹ ನನ್ನ ಉನ್ನತ ವಿದ್ಯಾಭ್ಯಾಸ ಆರಾಮದಾಯಕವಾಗಿದ್ದುದರಿಂದಲೇ ಆ ಸಂದರ್ಭಕ್ಕೆ ಏನೂ ಕಲಿಯಲಾಗಲಿಲ್ಲ ಎಂದೆ. ಅವರು ಮತ್ತೆ ನೀವು ಒಗಟಿನ ಮಾತಿಗೇ ಹೊರಟಿರಿ ಎಂದರು. ನನ್ನ ತೀರ ವೈಯ್ಯಕ್ತಿಕ ಸಂಗತಿಗಳನ್ನು ಕೆಣಕುವುದು ಬೇಡವೆಂದೋ ಏನೋ ಒಂದಷ್ಟು ಹೊತ್ತು ಸುಮ್ಮನಾದರು. ಆ ಸಮಯದಲ್ಲಿ ಅವರು ಯಾವುದೋ ಕಾರಣಕ್ಕೆ ಅಸಮಾಧಾನಗೊಂಡ ಮಗನನ್ನು ಸುಮ್ಮನಿರಿಸುವುದರ ಕಡೆಗೆ ಹೊರಳಿದರು. ನಂತರ ನಿಮಗೆ ಮಕ್ಕಳ ಜವಾಬ್ದಾರಿಯ ಅನುಭವ ಇರಲಾರದು ನೋಡಿ. ಅದಕ್ಕೆ ನಿಮ್ಮನ್ನ ನಾನು ಪುಣ್ಯವಂತರು ಎಂದದ್ದು ಎಂದು ತಿರುಗಿ ನಕ್ಕರು. ಅವರ ನಗುವಿನಲ್ಲಿ ನನಗೂ ಆ ಅನುಭವ ಇದ್ದರೆ ಒಳ್ಳೆಯದಿತ್ತು. ಹಾಗಾಗದಿರುವುದು ಒಂದು ರೀತಿ ನಷ್ಟವೇಸರಿ ಎನ್ನುವ ಭಾವನೆಯೂ ಇದ್ದಂತಿತ್ತು.
…ವಿದ್ಯಾಭ್ಯಾಸಕ್ಕೆಂದು ಹಳ್ಳಿಬಿಡುವಾಗ ನಾನು ತುಂಬ ಸಂತೋಷದಲ್ಲೇ ಇದ್ದೆ. ನನ್ನ ತಾಯಿ ತುಂಬ ದುಃಖದಲ್ಲಿದ್ದರು. ನಾನು ಮಗನಿಗೆ ಅನ್ನಮಾಡಿಹಾಕುವುದಿಲ್ಲವಲ್ಲ, ಪಟ್ಟಣದಲ್ಲಿ ಊಟದ ವ್ಯಾಪ್ತಿ ಹೇಗೋ ಏನೋ ಎಂಬ ಘನಚಿಂತೆಯಲ್ಲಿ ಆಕೆ ಅತ್ತಿದ್ದರು. ನಾನು ಸಂತೋಷದಲ್ಲೇ ಊರುಬಿಟ್ಟೆ. ಮೈಸೂರು ಸೇರುವಲ್ಲಿ ನನಗೆ ಅನ್ನಿಸಿದ್ದೆಂದರೆ ನಮ್ಮ ಊರಿನ ಬೀದಿಗಳಿಗಿಂತಲೂ ಇಲ್ಲಿಯ ಬೀದಿಗಳು ಸುಂದವಾಗಿಯೂ, ಜನನಿಬಿಡವಾಗಿಯೂ ಎಲ್ಲಕ್ಕಿಂತ ಹೆಚ್ಚಾಗಿ ಜನ ನನ್ನ ಹಳ್ಳಿಯವರಂತಿರದೆ ಎಲ್ಲ ರೀತಿಯಲ್ಲಿ ಸುಸಂಸ್ಕೃತರೂ ನಾಗರೀಕರೂ ಆಗಿರುತ್ತಾರೆಂದು ಭಾವಿಸಿದೆ. ಹಾಗಾಗಿ ನನ್ನ ತಂದೆತಾಯಂದಿರಿಗೆ ಎಂದೂ ತೋರಿಸದ ಒಂದು ಬಗೆಯ ಗೌರವವನ್ನು ಇಲ್ಲಿ ಕಂಡಕಂಡವರಿಗೆಲ್ಲ ತೋರಿಸಲು ಆರಂಭಿಸಿದೆ. ಕಾಲೇಜಿನಲ್ಲಿ ನನ್ನ ವಿದ್ಯಾಭ್ಯಾಸ ಅಷ್ಟಕಷ್ಟೆ. ವಿದ್ಯಾಭ್ಯಾಸ ಎಂದರೆ ಒಂದೆಡೆ ಕೂರಬೇಕು. ಕೂರುವುದಕ್ಕಿಂತ ಮನಸ್ಸನ್ನು ನಿಗ್ರಹಿಸಬೇಕು. ಇವೆರಡೂ ಯೌವನಕ್ಕೆ ಕಷ್ಟದ ಮಾತು. ಯೌವನದಲ್ಲಿ ಹೆಣ್ಣುಮಕ್ಕಳ ಸ್ನೇಹ ಸಂಪಾದನೆ, ಗೃಹಸ್ಥರಾಗುವಲ್ಲಿ ಹಣಸಂಪಾದನೆಯಾದರೆ ತಾನೆ ಸುತ್ತಮುತ್ತಲಿದ್ದವರಿಂದ ಗೌರವ ಸಿಕ್ಕುವುದು. ಹಾಗಾಗಿ ಯೌವನಕ್ಕೆ ಕಾಲಿಟ್ಟವರು ನಿರಂತರವಾಗಿ ಹೆಣ್ಣುಮಕ್ಕಳ ಬಗೆಗೂ, ಗೃಹಸ್ಥಾಶ್ರಮಕ್ಕೆ ಕಾಲಿಟ್ಟವರು ಹೇಗೆಲ್ಲ ಹಣ ಸಂಪಾದಿಸುತ್ತಾರೆಂಬ ಸಂಗತಿ ಕುರಿತು ಮಾತನಾಡುವುದು ಸಹಜ. ಹೀಗಾಗಿ ನಾನು ನನ್ನ ವಿದ್ಯಾಭ್ಯಾಸ ಕಾಲದಲ್ಲಿ ಓದುತ್ತೇನೆ ಎನ್ನುವುದಕ್ಕಿಂತ ಹೆಚ್ಚು ಸುಂದರನಾಗಲು ಪ್ರಯತ್ನಿಸಿದೆ. ಹಾಗೆ ನನ್ನ ದೈಹಿಕ ಅಲಂಕಾರಕ್ಕೆ ಬೇಕಾದ ಸಾಧನಸಲಕರಣೆಗಳಿಗೆ ಹಣ ದೊರೆಯುವಂತಿರಲಿಲ್ಲ. ಪುಸ್ತಕ, ಪೆನ್ನು ಸಂಪಾದಿಸುವುದಕ್ಕಿಂತ ಅಲಂಕಾರ ಸಾಧನಗಳನ್ನು ಸಂಪಾದಿಸಲು ಓದಿನ ನಂತರ ನಾನು ಅಲ್ಲಿ ಇಲ್ಲಿ ಸಣ್ಣಪುಟ್ಟ ಕೆಲಸ ಮಾಡಿದೆ. ಆದರೆ ಈ ಕಳಪೆ ದುಡಿಮೆ ಸಂಗತಿ ಯಾರಿಗೂ ಗೊತ್ತಾಗಬಾರದೆಂದು ಸಂಪಾದನೆಯ ಮೂಲವನ್ನು ಗುಟ್ಟಾಗಿರಿಸಿದೆ.
ಜೇಬಿನಿಂದ ದುಡ್ಡು ತೆಗೆಯುವಾಗ, ಇದು ನನ್ನ ಅಪ್ಪಅಮ್ಮ ಊರಿಂದ ಕಳುಹಿಸಿದ್ದು ಎಂತಲೇ ಸುಳ್ಳುಸುಳ್ಳು ಬೀಗುತ್ತಿದ್ದೆ. ಸ್ನೇಹಿತರೊಡನೆ ನಿರಂತರವಾಗಿ ಹೆಣ್ಣುಮಕ್ಕಳನ್ನು ಕುರಿತಾದ ಚರ್ಚೆಯಲ್ಲಿ ಭಾಗವಹಿಸುತ್ತಿದ್ದೆ. ಸಹಪಾಠಿಗಳು ತಾವು ಎಲ್ಲ ಹೆಣ್ಣುಮಕ್ಕಳಿಗೂ ಹೇಗೆಲ್ಲ ಪ್ರಿಯ ಎಂಬುದರ ಪರಾಕುಗಳಲ್ಲಿ ತೊಡಗಿರುತ್ತಿದ್ದರು. ವಾಸ್ತವವಾಗಿ ಒಬ್ಬ ವಿದ್ಯಾರ್ಥಿ ಇನ್ನೊಬ್ಬ ವಿದ್ಯಾರ್ಥಿನಿಗೆ ಪ್ರಿಯನಾದನೆಂದರೆ ಮಿಕ್ಕಂತೆ ಎಲ್ಲರೂ ಅವರಿಂದ ದೂರವಾಗಿ, ಅವರಿಬ್ಬರೇ ಪ್ರತ್ಯೇಕವಾಗಿಬಿಡುತ್ತಿದ್ದರು. ನನಗೂ ಆ ಬಗೆಯ ಒಂದು ಅವಕಾಶ ನನ್ನ ಓದಿನ ಕೊನೆಕೊನೆಯಲ್ಲಿ ದೊರಕಿತು. ನಾನೂ ಎಲ್ಲ ಹೆಣ್ಣುಮಕ್ಕಳ ಮುಂದೆ ಬುದ್ಧಿವಂತನೆಂದೂ, ಸಾಹಸಿಯೆಂದೂ ಎಲ್ಲಕ್ಕಿಂತ ಮಿಗಿಲಾಗಿ ಸಜ್ಜನನೆಂದೂ, ಬಡವನಲ್ಲವೆಂದೂ ತೋರಿಸಿಕೊಳ್ಳುತ್ತಿದ್ದೆ. ನನಗೆ ಪರಿಚಯವಾದ ಹೆಣ್ಣುಮಗಳಿಗೇನೂ ಈ ಬಗೆಯ ಭ್ರಮೆ ಹುಚ್ಚಾಟಗಳಿರಲಿಲ್ಲ. ಹೆಚ್ಚು ವಾಸ್ತವವಾದಿಯಾಗಿದ್ದಳು. ಸಾಮಾನ್ಯವಾಗಿ ಪ್ರವಾಸಕಾಲದಲ್ಲಿ ಹೆಣ್ಣು, ಗಂಡುಮಕ್ಕಳು ಹತ್ತಿರಹತ್ತಿರ ಬರುವುದುಂಟು. ಹಳೆಯಬೀಡಿನ ಹೊಯ್ಸಳೇಶ್ವರ ದೇವಾಲಯದಲ್ಲಿ ನಾನು ತಲೆಯೆತ್ತಿ ಗುಡಿಯ ಮೇಲುಭಾಗದ ಮದನಿಕಾ ವಿಗ್ರಹವನ್ನು ನೋಡುತ್ತಿದ್ದೆ. ಹಿಂದಕ್ಕೆ ಕಟ್ಟಿಕೊಂಡಿದ್ದ ಕೈಗಳಲ್ಲಿ ಒಂದು ಕಿತ್ತಲೆ ಹಣ್ಣು ಹಿಡಿದಿದ್ದೆ. ಅದನ್ನು ಯಾರೋ ಕಸಿದುಕೊಂಡಂತಾಯಿತು. ತಿರುಗಿನೋಡಿದೆ. ನನ್ನ ಸಹಪಾಠಿ ವಿದ್ಯಾರ್ಥಿನಿ. ನನಗಾದ ಸಂತೋಷ ಅವರ್ಣನೀಯ. ಎಷ್ಟೋ ಹೊತ್ತಿನ ಮೇಲೆ ಆಕೆ ಅದನ್ನು ಗೆಳತಿಯರೊಡನೆ ತಿಂದು ಮುಗಿಸಿರಬಹುದೆಂದು ತಿಳಿದಿದ್ದೆ. ಮರುದಿನ ಬೆಳಿಗ್ಗೆ ಉಡುಪಿ ಬಳಿ ಮಲ್ಪೆಯ ಸಮುದ್ರತೀರದಲ್ಲಿ ಅದೇ ಹಣ್ಣಿನ ಅರ್ಧಭಾಗವನ್ನು ನನಗೆ ತಂದುಕೊಟ್ಟು ಉಳಿದರ್ಧವನ್ನು ತಾನಿಟ್ಟುಕೊಂಡು ಮೊದಲು ನೀನು ತಿನ್ನು ಎಂದಳು.
ಪ್ರವಾಸದಿಂದ ಬಂದನಂತರ ಪರೀಕ್ಷೆಗಳು ಮುಕ್ತಾಯವಾದರೂ ನಮ್ಮ ಮಾತುಕತೆಗಳು ಮುಗಿದಂತೆ ಕಾಣಲಿಲ್ಲ. ಹಾಗೆ ನಾನು ಅವಳೊಡನೆ ಮಾತುಕತೆಯಾಡುವಾಗಲೆಲ್ಲ ಅವಳ ಸಾನ್ನಿಧ್ಯದ ಸಂತೋಷವನ್ನು ಕಾಣುತ್ತಿದ್ದೆ. ಆ ಸಂದರ್ಭಗಳಲ್ಲಂತೂ ನಾನು ಹುಟ್ಟಿದ್ದು ಒಬ್ಬ ತಂದೆಗೆ, ನನ್ನ ಹೊಟ್ಟೆಗೆ ಅನ್ನ ಹುಟ್ಟಿಸಲು ನಿರಂತರ ಹೋರಾಡಿದ ಒಬ್ಬ ತಾಯಿಗೆ ಎಂಬುದು ನೆನಪಿಗೇ ಬರುತ್ತಿರಲಿಲ್ಲ. ಅಷ್ಟು ಹೊತ್ತಿಗಾಗಲೇ ನನ್ನ ತಂದೆತಾಯಿಗಳೂ ತೀರಿಕೊಂಡು ಏಳೆಂಟು ವರ್ಷ ಆಗಿಯೇಹೋಗಿತ್ತು. ನಾನೂ ನನ್ನ ಸಹಪಾಠಿ ಹೆಣ್ಣುಮಗಳೂ ಭೇಟಿಯಾಗುವುದಕ್ಕೆ ತುಂಬ ಸಹಾಯವಾಗುತ್ತಿದ್ದದು ನಮ್ಮ ಒಂಟಿತನಗಳಷ್ಟೆ. ಆಕೆಗೂ ಮನೆಯಲ್ಲಿದ್ದ ಕಟ್ಟುಪಾಡುಗಳಿಂದ ಒಂದಿಷ್ಟು ಹೊತ್ತು ಹೊರಬರಬೇಕಿತ್ತು. ನನಗೂ ನನ್ನ ಅರೆಬರೆವಿದ್ಯೆ ಮುಗಿದು ಉದ್ಯೋಗದ ಬೇಟೆ ಆರಂಭಮಾಡಿದ್ದೆ. ನನ್ನಂಥವರಿಗೆ ಉದ್ಯೋಗ ಸಿಗುವುದೂ ಕೂಡ ಸುಲಭದ ಮಾತಾಗಿರಲಿಲ್ಲ. ಹೀಗಾಗಿ ನನ್ನ ಸ್ನೇಹಿತೆ ಮದುವೆಯ ಸುದ್ದಿ ತೆಗೆದುಬಿಟ್ಟರೆ ಏನು ಮಾಡುವುದು ಎಂಬ ಅಳುಕೂ ಆರಂಭವಾಯಿತು. ಅವಳ ಸಾನ್ನಿಧ್ಯ ಮತ್ತು ನನ್ನ ದೈಹಿಕ ಬಯಕೆಗಳು ತೀವ್ರವಾಗಿದ್ದವೇ ಹೊರತು ಆಕೆಯನ್ನು ವಿವಾಹವಾಗುವ ತುರ್ತೇನೂ ನನಗೆ ಇರಲಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಿದ್ದೇನೆಂದು ಹೇಳಿ ಲಗ್ನದ ಪ್ರಸ್ತಾಪ ತೆಗೆದುಬಿಟ್ಟರೆ ಇವಳನ್ನು ಕಟ್ಟಿಕೊಂಡು ಬದುಕುವ ಮಾರ್ಗವೇನು ಎಂಬ ಚಿಂತೆ ನನಗೆ ಹತ್ತಿಕೊಂಡಿತ್ತಾದರೂ ಅವಳ ನನ್ನ ಭೇಟಿಗಳಿಗೇನೂ ಭಂಗವಿರಲಿಲ್ಲ. ಆದರೆ ಹೆಣ್ಣುಮಕ್ಕಳ ಲೆಕ್ಕಾಚಾರಗಳು ವಿವಾಹಪೂರ್ವಕ್ಕಿಂತಲೂ ಆನಂತರದ್ದೇ ಆಗಿರುತ್ತವೆ. ಅವರು ವಿವಾಹಪೂರ್ವದ ದೈಹಿಕ ಆಕರ್ಷಣೆಗಿಂತ ವಿವಾಹನಂತರದ ಮಕ್ಕಳ ಬಗ್ಗೆ ಯೋಚಿಸುತ್ತಾರೆ. ನನ್ನ ಸಹಪಾಠಿಯ ಮುಂದೆ ನಾನು ಬಡವನಲ್ಲ ಎಂದು ಎಷ್ಟೇ ಬಡಿವಾರ ಹೊಡೆದರೂ, ನನ್ನನ್ನು ಕಟ್ಟಿಕೊಂಡು ನೀನು ಬದುಕುವ ಮಾರ್ಗ ಹೇಗೆ ಎಂದೇ ನಿರ್ಲಿಪ್ತಳಾಗಿ ನುಡಿದು ಪ್ರೇಮಸಂಬಂಧದ ಸಂಗತಿಗಳನ್ನು ಬಿಟ್ಟು ಲೋಕಾಭಿರಾಮದ ಮಾತುಕತೆಗಳನ್ನೇ ಆಡುತ್ತಿದ್ದಳು. ನನಗಾದರೋ, ಅವಳನ್ನು ಲಗ್ನವಾಗಿ ಬದುಕಿಸುವ ಭರವಸೆಯೇ ಇಲ್ಲದಿದ್ದರೂ, ಪ್ರೇಮ ಸಂಬಂಧದ ವಿಚಾರಗಳೇ ನಮ್ಮ ನಡುವೆ ವಿನಿಮಯವಾಗಬೇಕೆಂಬ ಬಯಕೆಯುಂಟಾಗುತ್ತಿತ್ತು.
ಇಂಥ ತಾಕಲಾಟದ ಭೇಟಿಗಳ ನಡುವೆ ಅವಳ ಮದುವೆ ನಿಶ್ಚಯವಾಗಿಯೇಬಿಟ್ಟಿತು. ಹಾಗೆ ನನ್ನ ಬಳಿ ಅವಳು ಮದುವೆ ವಿಷಯ ಮಾತನಾಡುವಾಗ, ನಮ್ಮ ಸ್ನೇಹ ಇನ್ನು ಸಾಕು. ನೀನು ಎಲ್ಲಾದರೂ ಒಂದು ಉದ್ಯೋಗ ಹುಡುಕಿಕೋ. ಸುಮ್ಮನೆ ದಿನ ಕಳೆಯಬೇಡ. ಪ್ರೀತಿ ಮತ್ತು ವಿವಾಹ ಎನ್ನುವುದು ಭ್ರಮೆ. ಅದು ಜೀವನದಲ್ಲಿ ದೊಡ್ಡಸಂಗತಿಯಲ್ಲ. ಮದುವೆ ಮಕ್ಕಳನ್ನು ಪಡೆಯಲು ಪರವಾನಗಿಯಷ್ಟೆ. ಮಕ್ಕಳನ್ನು ಪಡೆದ ಮೇಲೆ ಮಾಡಿದ ತಪ್ಪಿಗಾಗಿ ಇನ್ನಿಲ್ಲದ ಸಮಸ್ಯೆಗಳನ್ನು ತಲೆಯ ಮೇಲೆ ಹೊತ್ತು ತೊಳಲಾಡಿ ಬದುಕಿನ ದಾರಿ ಸವೆಸುವುದಷ್ಟೆ. ಒಂದಷ್ಟುದಿನ ಬೇಜಾರಾಗುತ್ತದೆ. ಮನಸ್ಸು ಗಟ್ಟಿಮಾಡಿಕೊ. ಮದುವೆಗೆ ಸಾಧ್ಯವಾದರೆ ಬಾ. ಬದುಕಿನ ದಾರಿಗಳು ಕೂಡಿ ಒಮ್ಮೊಮ್ಮೆ ಗೆಳೆಯರ ದರ್ಶನ ಮಾಡಿಸುತ್ತವೆ. ಭೇಟಿಮಾಡುವಾ, ಎಂದಳು. ನನ್ನ ಸಹಪಾಠಿಯೊಡನೆ ಮಾತನಾಡುವಾಗೆಲ್ಲ ಆಕೆ ಪ್ರಬುದ್ಧಳು ಎನ್ನಿಸುತ್ತಲೇ ಇತ್ತು. ಪ್ರಬುದ್ಧತೆಗೆ ತಕ್ಕ ತಾಯ್ತನವೂ ಇದ್ದಿತು. ನನ್ನ ಊಟ, ವಸತಿ, ಕ್ಷೇಮಸಮಾಚಾರಗಳು ಆಕೆಯ ದಿನನಿತ್ಯ ಮಾತುಕತೆಯ ಮುಖ್ಯ ಸಂಗತಿಯಾಗಿತ್ತೇ ಹೊರತು ನನ್ನ ಯೌವನ ಸಂಬಂಧಿಯಾದ ತೆವಲುಗಳ ಬಗ್ಗೆ ಸ್ಪಂದಿಸುವ ಕುತೂಹಲ ಆಕೆಗೆ ಎಂದೂ ಇರಲಿಲ್ಲ. ಇದರಿಂದ ನಾನು ಅವಳ ಹೆಜ್ಜೆಯನ್ನೇ ಅನುಸರಿಸಿದಂತಾಗಿ ನನ್ನ ಆ ಸಂದರ್ಭದ ತಾತ್ಕಾಲಿಕ ಮೋಹದ ಈಡೇರಿಕೆಗಳನ್ನು ಕಳೆದುಕೊಳ್ಳುವಂತಾದೆ. ಅವಳ ಮದುವೆಯ ಹೊತ್ತಿಗೆ, ಅವಳಿಂದ ನಾನಾಗಲಿ, ನನ್ನಿಂದ ಅವಳಾಗಲಿ ದೂರವಾಗುವುದು ಸುಲಭವಾಯಿತು. ಅವಳ ಹಾರೈಕೆಯಿಂದಲೋ ಏನೋ ಗ್ರಾಮಾಂತರ ಪ್ರದೇಶಗಳೂ ಬುಡಕಟ್ಟು ಸಮೂಹಗಳೂ ಇದ್ದ ಒಂದು ತಾಲ್ಲೂಕುಭಾಗದ ವಿದ್ಯಾಲಯದಲ್ಲಿ ನನಗೊಂದು ಅಧ್ಯಾಪಕ ವೃತ್ತಿ ದಕ್ಕಿತು. ನಾನು ನಿಜವಾಗಿ ವಿದ್ಯಾರ್ಥಿಯಾದದ್ದು ಆಗಲೇ. ಓದಿದ್ದು ಮನಸ್ಸಿಗೂ, ಹೃದಯಕ್ಕೂ ಮುಟ್ಟಿದ್ದೂ ಆಗಲೆ! ಆಗ ತೀರಿಕೊಂಡ ನನ್ನ ತಂದೆತಾಯಿ ಮತ್ತು ಬಾಲ್ಯಕಾಲದ ನೆನಪು ಆರಂಭವಾಗತೊಡಗಿತು. ಆ ನೆನಪುಗಳನ್ನು ತಗ್ಗಿಸಿಕೊಳ್ಳಲಿಕ್ಕಾಗಿ, ಒಂದು ಬಗೆಯ ಅಪರಾಧಿ ಭಾವವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಅರಣ್ಯಸರಹದ್ದಿನ ನಡುವೆ ಕುತೂಹಲದ ಬದುಕು ನಿರ್ಹಿಸುವ ಹಾಡಿಗೆ ಹೋಗುವುದು, ಗ್ರಾಮಸಂಚಾರ, ದೇಶಸಂಚಾರ ಆರಂಭಿಸಿದೆ. ಇವಿಷ್ಟನ್ನೂ ನನ್ನೆದುರಿನ ಸ್ನೇಹಿತರಿಗೆ ಹೇಳಬೇಕೆಂದುಕೊಂಡೆನಾದರೂ ಹೇಳಲಾಗದೆ ಸುಮ್ಮನಾದೆ.
ಬೆಳಗಿನ ಐದು ಘಂಟೆಗೆ ತೊಡಗಿದ ನಮ್ಮ ಪ್ರಯಾಣ ಇದೀಗ ಯಾವುದೋ ನಿಲ್ದಾಣದಲ್ಲಿ ನಿಲ್ಲುವಾಗ್ಗೆ ಮಧ್ಯಾಹ್ನ ಕಳೆದು ಸಂಜೆಯಾಗುತ್ತಿತ್ತು. ಸ್ನೇಹಿತರು ಹಾಗಾದರೆ ನೀವು ಈಗ ನಿಮ್ಮ ಸಮಯ ಕಳೆಯುವುದು ಸಂಚಾರದಲ್ಲೇ ಎನ್ನಿ ಎಂದರು. ತದನಂತರ ನನ್ನ ಉತ್ತರದಲ್ಲಿ ಆಸಕ್ತಿ ಇಲ್ಲದವರಂತೆ ಹೊರಗೆನೋಡಿ ಇದೇನೂ ಸಿಟಿಗಿಟಿ ಅಲ್ಲ. ಬರಿಯ ಕ್ರಾಸಿಂಗ್‌ಗಾಗಿ ಮಾಡಿದ ಸ್ಟೇಷನ್ ಇರಬೇಕು. ಇನ್ನೊಂದೆರಡು ಘಂಟೆಯಲ್ಲಿ ಅಹಮದಾಬಾದ್ ತಲುಪಬಹುದು ಎಂದು ನನ್ನತ್ತ, ಹೊಸದಾಗಿ ಬಾಡಿಗೆ ಮನೆಯೊಂದನ್ನು ನೋಡಿ ಮುಂಬಯಿ ಮನೆಯ ಸಾಮಾನು ಸರಂಜಾಮನ್ನೆಲ್ಲ ಜೋಡಿಸಿ, ಪಕ್ಕದ ಮನೆಯವರಿಗೆ ಬೀಗದ ಕೈ ಕೊಟ್ಟುಬಂದಿದ್ದೇನೆ. ಈಗ ಹೋಗಿ ಎಲ್ಲಿಯಾದರೂ ಹೋಟೆಲ್‌ನಲ್ಲಿ ಊಟ ಮಾಡೋಣ. ನೀವು ನಮ್ಮಲ್ಲೇ ಒಂದು ರಾತ್ರಿ ತಂಗಿದ್ದು ನಿಮ್ಮ ಮುಂದಿನ ಪ್ರಯಾಣ ಕೈಗೊಳ್ಳಬಹುದು ಎಂದರು. ಅವರ ಸ್ನೇಹದ ಮಾತುಗಳಿಗಾಗಿ ನಾನು ಕೃತಜ್ಞತೆ ಸೂಚಿಸಿದೆ. ಬೋಗಿ ಇಳಿದು ಈಚೆ ಬಂದೆ. ಪಶ್ಚಿಮದಲ್ಲಿ ಸೂರ್‍ಯಮುಳುಗುತ್ತಿದ್ದ. ರೈಲು ನಿಂತಿದ್ದ ಪ್ರದೇಶವೆಲ್ಲ ತಕ್ಕಮಟ್ಟಿಗೆ ಅರೆ ಅರಣ್ಯ ಭಾಗವಾಗಿತ್ತು. ಕೇವಲ ಹಕ್ಕಿಪಕ್ಷಿಗಳ ಕಲರವವೇ ಹೊರತು ರೈಲುನಿಲ್ದಾಣದಲ್ಲಿರಬಹುದಾದ ಯಾವ ಗದ್ದಲವೂ ಕೇಳಲಿಲ್ಲ. ಪ್ರಯಾಣಿಕರು ಇಳಿದು ಹತ್ತುವ ತಾಣವೂ ಅದಾಗಿರಲಿಲ್ಲ. ಸ್ನೇಹಿತರು ಹೇಳಿದಂತೆ ಅದು ಕೇವಲ ಎರಡು ರೈಲುಗಳ ಕ್ರಾಸಿಂಗ್ ನಿಲ್ದಾಣವಾಗಿತ್ತಷ್ಟೆ. ಒಟ್ಟು ವಾತಾವರಣ ಅರಳಿದ ಹೂವಿನಷ್ಟು ಸುಂದರವಾಗಿ ಕಾಣುತ್ತಿತ್ತು. ನಾನು ಕುಡಿಯುವ ನೀರಿನ ಕಡೆ ಹೊರಟು ನಲ್ಲಿಯ ಮೂತಿಗೆ ಬಾಯಿಕೊಟ್ಟೆ. ನೀರು ಕುಡಿದಾಗುವ ಹೊತ್ತಿಗೆ ನನ್ನ ಹೆಸರು ಹಿಡಿದು ಕರೆದ ಮಹಿಳೆಯ ಕಡೆ ನೋಡಿದೆ. ನನಗೇನೂ ಆಶ್ಚರ್ಯವಾಗಲಿಲ್ಲ.
ಸ್ನೇಹಿತರ ಪತ್ನಿ. ಅಪೂರ್ವ ಮಂದಹಾಸವನ್ನು ಬೀರುತ್ತ ‘ನಿನ್ನನ್ನು ನೋಡಿ ಅದೆಷ್ಟು ದಿನಗಳಾಗಿ ಹೋದವು’ ಎಂದರು. ನಾನು ‘ನಿಮ್ಮ ಮನೆಯವರು ಅಷ್ಟೊಂದು ಮಾತನಾಡಿದರು, ನೀವು ಮಾತ್ರ…’ ಎಂದೆ. ‘ಮಾತನಾಡುವುದಕ್ಕೇನಿದೆ’ ಎಂದರು. ಮೈಸೂರಿನಲ್ಲಿ ಭೇಟಿಯಾಗುತ್ತಿದ್ದ ದಿನಗಳಲ್ಲೆಲ್ಲ ನನ್ನ ಊಟ ತಿಂಡಿಯ ಬಗ್ಗೆ ವಿಚಾರಿಸುತ್ತಿದ್ದಂತೆ ಈ ಹೊತ್ತು ಕೂಡ ‘ನೋಡು ನೀನು ಬೆಳಿಗ್ಗೆಯಿಂದ ಏನು ತಿನ್ನಲಿಲ್ಲ’ ಎಂದರು. ನಾನು ನಿನ್ನೆಯೇ ಕೊಂಡಿದ್ದ ಬ್ರೆಡ್‌ಪ್ಯಾಕನ್ನು ಬ್ಯಾಗಿನಿಂದ ತೆಗೆದು ತೋರಿಸಿ ‘ತಿನ್ನಬೇಕು’ ಎಂದೆ. ‘ನೀನು ಹಸಿವನ್ನು ಗೆದ್ದುಬಿಟ್ಟಿರುವೆಯೊ ಹೇಗೆ’ ಎಂದು ಮುಖದ ಮಂದಹಾಸವನ್ನು ಮುಂದುವರೆಸಲು ಪ್ರಯತ್ನಿಸಿದರು. ಆದರೂ ಅವರ ಕಣ್ಣಲ್ಲಿ ಒಂದೆರಡು ಹನಿ ಉಕ್ಕಿಯೇಬಿಟ್ಟಿತು. ಅಷ್ಟರಲ್ಲಿ ನಲ್ಲಿಗೆ ಹಿಡಿದಿದ್ದ ನೀರಿನ ಬಾಟಲಿ ತುಂಬಿಬಂದು ಚೆಲ್ಲುತ್ತಿತ್ತು. ಹೊರತೆಗೆದು ಮೂತಿಗೆ ಮುಚ್ಚಳ ಭದ್ರಪಡಿಸಿ ‘ಬಾ, ಅಹಮದಾಬಾದಿಗೆ ಹೋಗೋಣ. ನಿನಗೆ ನಾನೇ ಅಡುಗೆ ಮಾಡಿಹಾಕುತ್ತೀನಿ’ ಎಂದರು. ‘ನೀವು ನಡೆಯಿರಿ’ ಎಂದೆ. ಆಕೆ ನಲ್ಲಿಯ ನೀರಿನಲ್ಲಿ ಮುಖತೊಳೆದುಕೊಂಡು ಮುಂದೆ ನಡೆದು ಬೋಗಿ ಸೇರುವಲ್ಲಿ ರೈಲು ಮುಂದೆಹಾಯಿತು. ದೂರದಲ್ಲಿ ಮುದುಕರೊಬ್ಬರು ಹಸಿರು ಬಾವುಟ ತೋರಿಸುತ್ತಿದ್ದವರು ಅದನ್ನು ಮಡಚಿ ಕೋಲಿಗೆ ಮುದುರಿಕೊಂಡು ಇತ್ತ ಬಂದರು. ನಲ್ಲಿಯ ಬಳಿ ನಿಂತು ಹೋಗುತ್ತಿದ್ದ ರೈಲನ್ನೇ ನೋಡುತ್ತಿದ್ದ ನನ್ನ ಕಂಡು ಆಶ್ಚರ್ಯಗೊಂಡರು. ಬಾಯ್ ಇದ್ಯಾಕೆ ಇಲ್ಲೇ ನಿಂತಿರಿ. ರೈಲು ಹತ್ತುವುದಿಲ್ಲವೇ? ಇಷ್ಟು ವರ್ಷಕ್ಕೆ ನೀವು ಮಾತ್ರ ಇಲ್ಲಿ ಇಳಿದು ಗಾಡಿಹತ್ತದೇ ನಿಂತು ಬಿಟ್ಟಿವರು, ಪರಮಾಶ್ಚರ್ಯ ಎಂದರು.
ಅಜ್ಜನ ಪ್ರಶ್ನೆಗೆ ನನ್ನಲ್ಲಿ ಉತ್ತರವೇ ಇರಲಿಲ್ಲ. ಸುಮ್ಮನೇ ನಿಂತೆ. ತಿರುಗಿ ಅಜ್ಜನೇ ನೀವು ಎಲ್ಲಿಗೆ ಹೊರಟವರು. ನಾನು ಹಾಗೆ ಕೇಳಬಾರದು ಆದರೂ ಕೇಳುತ್ತಿದ್ದೇನೆ, ಕ್ಷಮಿಸಿ ಎಂದರು. ಸಬರ್ಮತಿ ಆಶ್ರಮಕ್ಕೆ ಹೋಗಬೇಕಾಗಿತ್ತು ಎಂದೆ. ಅಜ್ಜ ಹಾಗೆ ಹೇಳಿ ಮತ್ತೆ ಎಂದು, ಸಾಮಾನ್ಯವಾಗಿ ಎಲ್ಲರೂ ಅಹಮದಾಬಾದ್ ತಲುಪಿ ಅಲ್ಲಿಂದ ಗಾಂಧಿ ಆಶ್ರಮದ ಕಡೆ ಯಾವುದಾದರೂ ಗಾಡಿ ಹಿಡಿಯವುದುಂಟು. ಅಲ್ಲಿಂದೇನೂ ದೊಡ್ಡಪ್ರಯಾಣವಲ್ಲ ಎನ್ನಿ. ಇಲ್ಲಿಂದಲೂ ಒಂದು ಮೋಟರು ರಸ್ತೆ ಇದೆ. ಆದರೆ ಯಾರೂ ಇಲ್ಲಿ ಇಳಿದು ಹೋಗುವುದಿಲ್ಲ. ಅಷ್ಟಾಗಿ ವಾಹನ ಸೌಕರ್‍ಯವೂ ಇಲ್ಲ ಎಂದರು. ಆ ನಿಲ್ದಾಣದಲ್ಲಿದ್ದ ಸ್ಟೇಷನ್ ಕಟ್ಟಡ ಬಹಳ ಹಳೆಯದಾಗಿದ್ದು ಚಿಕ್ಕದಾಗಿತ್ತು. ಆದರೆ ಆ ಕಟ್ಟಡ ಮತ್ತು ರೈಲ್ವೆ ಹಳಿಯೇ ಅಲ್ಲದೆ ಸುತ್ತಣ ಪ್ರದೇಶವನ್ನೆಲ್ಲ ಚಾಚಿಕೊಂಡಂತೆ ಒಂದು ಭಾರಿ ಅರಳಿಮರ ಬೆಳೆದು ಬೀಸುವ ಗಾಳಿಗೆ ನಿರಂತರ ಸಂತಸ ಸೂಸುವಂತಿತ್ತು. ಹಸಿರು ಬಾವುಟದ ಅಜ್ಜ ಹಾಗಾದರೆ ಬನ್ನಿ, ನನ್ನ ಜಾಗದಲ್ಲಿ ಸ್ವಲ್ಪಹೊತ್ತು ವಿರಾಮದಿಂದ ಇದ್ದುಹೋಗಿ. ಇಲ್ಲಿಂದ ನೀವು ಈ ರಾತ್ರಿ ಆಶ್ರಮದ ದಾರಿ ಹಿಡಿಯಲಾಗದು ಎಂದರು. ಪುಟ್ಟ ಸ್ಟೇಷನ್ನಿನ ಹಿಂಭಾಗದಲ್ಲಿ ಸಮೃದ್ಧವಾಗಿ ಬೆಳೆದ ರಾಗಿ, ಜೋಳ, ಅದರ ಸುತ್ತ ತೆಂಗು ಬಾಳೆ. ಅಲ್ಲೊಂದುಕಡೆ ನಾಲ್ಕು ಕಂಭನೆಟ್ಟು ಮೇಲೆ ಇಡಲಾಗಿದ್ದ ತೆಂಗಿನ ಮಟ್ಟಾಳೆಯ ಅಟ್ಟಣೆ. ತೋಟದ ಹಿಂಭಾಗದಲ್ಲಿ ಚೆನ್ನಾಗಿ ಗುಡಿಸಿ ಸಾರಿಸಿದ ಅಂಗಳ. ಅದರ ಮಧ್ಯೆ ನಡುವಿನೆತ್ತರದ ಮಣ್ಣಿನ ಗೋಡೆಯ ಮೇಲೆ ಏರಿಸಿದ ಅದೇ ತೆಂಗಿನಮಟ್ಟಾಳೆ ಗುಡಿಸಿಲು. ಮಟ್ಟಾಳೆಯ ಮೇಲೆ ಅಂಚಿಹುಲ್ಲು ಹೊದಿಸಲಾಗಿತ್ತು. ಬೇಸಿಗೆಯಲ್ಲಿ ತಂಪೂ, ಚಳಿಗಾಲದಲ್ಲಿ ಬೆಚ್ಚಗೂ ಇರುವಂತೆ ಆ ಗುಡಿಸಲು ಇತ್ತು. ಗುಡಿಸಿಲ ಮುಂದೆ ರಂಗೋಲಿ. ಆಶ್ಚರ್‍ಯದ ಸಂಗತಿಯೆಂದರೆ ಗುಡಿಸಿಲಿಗೆ ಬಾಗಿಲು ಇರಲಿಲ್ಲ. ಆ ಗುಡಿಸಿಲ ನಿರ್ಮಾಣದಲ್ಲಿ ಅಜ್ಜ ಒಂದು ಸಂಗತಿ ಹೇಳಿದರು.
ಕುದುರೆಯ ಮೇಲೆ ಬಂದವರು ಪುಟ್ಟ ಸ್ಟೇಷನ್ ಕಟ್ಟಿದ ನಂತರ ಅಜ್ಜನ ವಾಸಕ್ಕೆ ಒಂದು ತಾರಸಿ ಮನೆ ಕಟ್ಟಿಕೊಡುತ್ತೇವೆಂದರಂತೆ. ಆದರೆ ಅಜ್ಜನಿಗೆ ಆ ರಾತ್ರಿಯೇ ತಾನು ಒಂದು ತಾರಸಿ ಮನೆಯಲ್ಲಿ ಮಲಗಿದ್ದು, ಮುಖಕ್ಕೆ ಕಪ್ಪುಮುಸುಕು ಹಾಕಿಕೊಂಡವರಾರೋ ಬಂದು ಮನೆಯ ಬುಡಕ್ಕೆ ಬೆಂಕಿ ಇಟ್ಟು ಆಮೇಲೆ ನಿಧಾನವಾಗಿ ತಾರಸಿಯೂ ಕುಸಿದುಬಿದ್ದಂತೆ ಕನಸಾಯಿತೆಂದು ಮನೆಕಟ್ಟಲು ಒಪ್ಪದೆ ತಾವೇ ಈ ಗುಡಿಸಲು ಕಟ್ಟಿಕೊಂಡದ್ದನ್ನು ಹೇಳಿದರು. ಗುಡಿಸಿಲ ಪಕ್ಕದ ಪಾರಿಜಾತ ಮರದ ನೆರಳಿನಲ್ಲಿ ಹಸುವೊಂದು ತನ್ನಕರುವನ್ನು ಪ್ರೀತಿತುಂಬಿ ನೆಕ್ಕುತ್ತಿತ್ತು.
ಅಜ್ಜ ನನ್ನನ್ನು ಗುಡಿಸಿಲ ಒಳಕ್ಕೆ ಕರೆದುಕೊಂಡುಹೋಗುವ ಮುನ್ನ ತಾವು ಅಲ್ಲಿ ರಾಗಿ, ಜೋಳ ಮತ್ತಿತರ ಹಸಿರಿನ ಸಮೃದ್ಧಿಯ ಹಿನ್ನೆಲೆಯನ್ನು ವಿವರಿಸಿದರು. ಈ ಜನವಸತಿ ಇಲ್ಲದ ಸ್ಟೇಷನ್ನಿಗೆ ಯಾರು ಬರುತ್ತಾರೆ ಹೇಳಿ. ಸ್ಟೇಷನ್ ಮಾಸ್ಟರ್ ಕೆಲಸಕ್ಕೆಂದು ಬಂದವರು ಯಾರೂ ಉಳಿಯುತ್ತಿರಲಿಲ್ಲ. ಇಲ್ಲಿಯ ಕೆಲಸವೆಂದರೆ ಹಗಲು ರಾತ್ರಿ ಹೋಗಿ ಬರುವ ರೈಲಿಗೆ ಬಾವುಟ ತೋರಿಸುವುದು ಅಷ್ಟೆ. ಅಗೋ ನೋಡಿ ಇಲ್ಲಿಂದ ಮೂರ್‍ನಾಲ್ಕು ಕೂಗಳತೆ ದೂರದಲ್ಲಿ ಹತ್ತಾರು ಗುಡಿಸಲು ಸಮೂಹ ಇದೆ ನೋಡಿ. ಅದು ನಾನು ಹುಟ್ಟಿ ಬೆಳೆದ ಸ್ಥಳ. ನಾವು ದನ ಕುರಿ ಮೇಕೆ ಸಾಕಿ ಅರಣ್ಯದಿಂದ ಅರಣ್ಯಕ್ಕೆ ಅಲೆದವರು. ನನ್ನ ತಂದೆ ಹೇಳುತ್ತಿದ್ದ, ನಾವು ಇದೇ ಗೂರ್ಜರ ನಾಡಿನಿಂದಾಚೆಯ ವಿಂದ್ಯಾಚಲದ ಅರಣ್ಯದಲ್ಲಿ ಇದ್ದವರಂತೆ. ಮೇವು ನೀರಿಗಾಗಿ ದಾರಿಮಾಡಿಕೊಂಡು ಬಂದು ಇಲ್ಲಿ ನೆಲೆಸಿದ್ದಂತೆ. ನಾವು ವಾಸಮಾಡಿಕೊಂಡಿರುವ ಹಟ್ಟಿಯ ಬಳಿ ಒಂದು ತೊರೆ ಹರಿಯುತ್ತಿದೆ. ಭೂಮಿ ನಮಗೆ ತಾಯಿ. ನೀರು ತೀರ್ಥ. ಸೂರ್‍ಯಚಂದ್ರರು ಕುಲದೇವತೆಗಳು ಎನ್ನಿ. ಎಷ್ಟೋ ವರ್ಷಗಳ ಹಿಂದೆ ಒಮ್ಮೆ ಈ ಸ್ಟೇಷನ್ ಕಡೆಯಿಂದ ಯಾರೋ ಒಬ್ಬರು ಕುದುರೆಯ ಮೇಲೆ ಬಂದವರು ನನ್ನ ಕರೆದು ಈ ಕೆಲಸ ಮಾಡು, ತಿಂಗಳಕೂಲಿ ಎಂದರು. ನಾನು ಒಪ್ಪಿಕೊಂಡೆ. ಇಲ್ಲಿ ಒಬ್ಬನೇ ಏನು ಮಾಡಲಿ ಹೇಳಿ? ರಾಗಿ, ಜೋಳದ ಪೈರು ನೆಡುತ್ತೇನೆ. ಬಾಳೆ ಹಾಕುತ್ತೇನೆ. ರಾತ್ರಿ ಆ ಎತ್ತರದ ಅಟ್ಟಣೆಯಲ್ಲಿ ನಿದ್ದೆ. ಹಗಲು ಈ ಗುಡಿಸಲಲ್ಲಿ ನನ್ನ ಆಡುಗೆ ಬೇಯಿಸುತ್ತೇನೆ. ಹೆಂಡತಿ ಹಟ್ಟಿಯಲ್ಲಿದೆ. ಬೆಳಗೋ, ಸಾಯಂಕಾಲವೋ ಬರುವುದುಂಟು. ಈ ಅಂಗಳ ಗುಡಿಸಲ ಸ್ವಚ್ಛತೆ, ರಂಗೋಲೆ ಎಲ್ಲ ಅವಳದೇ. ಇಷ್ಟೆಲ್ಲ ಹೇಳುವಾಗ್ಗೆ ಅಜ್ಜ ನನ್ನ ಊರು ಕೇರಿ ಹೆಸರು ಏನೊಂದನ್ನೂ ವಿಚಾರಿಸಲಿಲ್ಲ.
ಗುಡಿಸಲ ಒಳಗೆ ಬಂದಾಗ ನನಗೊಂದು ಆಶ್ಚರ್‍ಯ ಕಾದಿತ್ತು. ಒಂದು ಮೂಲೆಯಲ್ಲಿ ಬಿದಿರಬುಟ್ಟಿಯಿದ್ದು ಅದರ ಸಂದಿಯಿಂದ ಹತ್ತು ರೂನ ಒಂದು ನೋಟು ಕಾಣಿಸುತ್ತಿತ್ತು. ಅಜ್ಜ ಆ ನೋಟನ್ನು ಈಚೆಗೆಳೆದು ಮತ್ತೆ ಬುಟ್ಟಿಯೊಳಕ್ಕೆ ಹಾಕಿ ಅದರ ಬಾಯಿಗೆ ಬಿದಿರ ತಟ್ಟೆ ಮುಚ್ಚಿದರು. ನಾನು ಅವರ ಮುಖ ನೋಡಿದೆ. ಅವರು ಅಷ್ಟೇ ನಿರ್ಲಿಪ್ತರಾಗಿ, ಕುದುರೆ ಮೇಲೆ ಬಂದವರು ಅದೇನೋ ತಿಂಗಳ ಕೂಲಿ ಎಂದರಲ್ಲ. ಅದನ್ನು ಅವರು ಎಷ್ಟೋ ವರ್ಷಗಳಿಂದ ತಪ್ಪದೇ ಕೊಡುತ್ತಿದ್ದಾರೆ. ಅದೆಷ್ಟು ಕಾಸು ಎಂದು ನನಗೆ ಗೊತ್ತಾಗದು. ಕೊಟ್ಟದ್ದನ್ನೆಲ್ಲ ಈ ಗುಡಿಸಲ ಮೂಲೆಯ ಬುಟ್ಟಿಗೆ ಹಾಕಿದ್ದೇನೆ. ಈ ಕಾಡಿನಲ್ಲಿ ಅದನ್ನು ಏನು ಮಾಡಬೇಕು ಎಂದು ಗೊತ್ತಾಗುತ್ತಿಲ್ಲ. ಆದರೆ ಅವರು ಹೇಳಿದ ಉದ್ಯೋಗವನ್ನು ಮಾತ್ರ ಸೂರ್‍ಯಚಂದ್ರರು ಹುಟ್ಟುವಂತೆ, ಕೋಳಿಕೂಗುವಂತೆ, ಪಕ್ಷಿಗಳು ಗೂಡಿಂದ ಏಳುವಂತೆ ತಪ್ಪದೇ ಮಾಡಿಕೊಂಡು ಬಂದಿದ್ದೇನೆಂದರು. ಮತ್ತೆ ವರ್ಷಕ್ಕೆರಡು ಜೊತೆ ಈ ಬಿಳಿಯ ಬಟ್ಟೆ ಕೊಟ್ಟು ಇದನ್ನು ಹಾಕಿಕೊಂಡೆ ಬಾವುಟ ತೋರಿಸಬೇಕೆಂದು ರೈಲಿನವರು ಹೇಳುತ್ತಾರೆ. ನಮ್ಮ ಹಟ್ಟಿಯವರಾದರೋ ನನ್ನ ವೇಷನೋಡಿ ನಗುತ್ತಾರೆ ಎಂದರು.
ಅಜ್ಜ, ಮಾತಿನ ನಂತರ ನಿಮಗೆ ನಡಿಗೆಯ ಅಭ್ಯಾಸವುಂಟೆ ಎಂದರು. ನಾನು ಇದೆ ಎಂದೆ. ಮಾತಿಲ್ಲದೆ ಅಜ್ಜ ಒಂದು ಕಾಲು ಹಾದಿ ಹಿಡಿದರು. ನಾನು ಅವರನ್ನು ಅನುಸರಿಸಿದೆ. ದಾರಿಯಲ್ಲಿ ಹೆಚ್ಚು ಮಾತನಾಡಲಿಲ್ಲ. ಕೈಯ್ಯ ಬ್ಯಾಟರಿ ತೋರಿಸಿ, ಇದು ನೋಡಿ ಸರ್ಕಾರದವರೇ ಕೊಟ್ಟದ್ದು. ನನ್ನ ಕೂಲಿ ಕೊಡಲು ಬರುವವರು ಪ್ರತಿ ತಿಂಗಳೂ ಇದರ ಸೆಲ್ಲು ತಂದುಕೊಡುತ್ತಾರೆ. ನನ್ನ ರಾತ್ರಿ ಓಡಾಟಕ್ಕೆ ಇದು ಅನುಕೂಲ ಎಂದರು. ತೊರೆ ದಾಟಿ ಒಂದು ಕೂಗಳತೆದೂರ ನಡೆಯುವ ಹೊತ್ತಿಗೆ ಅವರ ಹಟ್ಟಿ ಸಿಕ್ಕಿತು. ಅದು ಐವತ್ತು ಗುಡಿಸಲು ಸಮೂಹವಾಗಿತ್ತು. ಬೆಳದಿಂಗಳ ದಿನಗಳು ಹತ್ತಿರವಾಗಿದ್ದರಿಂದ ಹೆಣ್ಣುಮಕ್ಕಳೆಲ್ಲ ಹಟ್ಟಿಯ ಮೂಲೆಯನ್ನು ಸಾರಿಸಿಗುಡಿಸಿ, ರಂಗೋಲೆಯಿಟ್ಟು, ದೀವಿಗೆ ಹಚ್ಚಿ ಚಂದಮಾಮನನ್ನು ತಮ್ಮೆಡೆಗೆ ಆಹ್ವಾನಿಸುತ್ತಿದ್ದರು. ಹಟ್ಟಿಯ ಪುಟ್ಟಮಕ್ಕಳೆಲ್ಲ ಅಪರಿಮಿತ ಆನಂದದಲ್ಲಿ ಸಾರಿಸಿದ ಅಂಗಳದಲ್ಲಿ ಚೆಲ್ಲಾಡಿಕೊಂಡು ಕುಣಿಯುತ್ತಿದ್ದವು. ವಯಸ್ಸಾದ ಗಂಡಸರ ಒಂದು ಗುಂಪು ಹೆಗಲ ಮೇಲಿನ ಕಂಬಳಿಯಲ್ಲಿ ಮುದುರಿಕೂತು ಎಂದೋ ಆಗಿಹೋಗಿದ್ದ ತಮ್ಮ ಹಟ್ಟಿಯ ವೀರನ ಕಥೆಯನ್ನು ತದೇಕಚಿತ್ತದಿಂದ ಆಲಿಸುತ್ತಿದ್ದರು. ಆಕಾಶದಿಂದ ಹಾಲಿನಂತೆ ಹರಿಯುತ್ತಿದ್ದ ಬೆಳದಿಂಗಳಿಗೂ, ಅರಣ್ಯದ ಮೌನಕ್ಕೂ ಮಧುರ ಧ್ವನಿ ಕೊಡುವಂತೆ ಒಬ್ಬ ಹಿರಿಯ ಮಾರುದ್ದದ ಬಿದಿರ ಕೊಳಲನ್ನು ಊದುತ್ತಿದ್ದ. ಅವನೆದುರು ಕೂತವನು ಹಟ್ಟಿಯ ವೀರನ ಕತೆ ಹಾಡುತ್ತಿದ್ದ. ನನಗೆ ಅಲ್ಪಸ್ವಲ್ಪ ತಿಳಿದುಬಂದಂತೆ ಎಷ್ಟೋ ವರ್ಷಗಳ ಹಿಂದೆ ಕತ್ತಿಹಿಡಿದು ರಥವೇರಿ, ಕುದುರೆ, ಆನೆ, ಕಾಲಾಳುಸೈನ್ಯ ಈ ಅರಣ್ಯಮಾರ್ಗ ಹೋಗುವಲ್ಲಿ ಲೂಟಿ ಮತ್ತು ಹೆಣ್ಣುಮಕ್ಕಳನ್ನು ಬೆತ್ತಲೆ ಮಾಡುವುದಾಗಿ ಇತ್ತ ಸಿಪಾಯಿಗಳು ಬಂದರಂತೆ. ಇದ್ದಬದ್ದ ಹುಡುಗರನ್ನು ಕಟ್ಟಿಕೊಂಡು ಕಿರೀಟ ತೊಟ್ಟವರೆದರು ಹೋರಾಡಿ ಹಟ್ಟಿ ಉಳಿಸಿದವನ ಕಥೆಯನ್ನು ಕಣ್ಣಮುಂದೆ ಆ ಘಟನೆ ನಡೆಯುತ್ತಿದೆಯೇನೋ ಎಂಬಂತೆ ಕೇಳುತ್ತಿದ್ದರು. ಆ ವೀರನ ಹೆಸರನ್ನೇ ಇಂದಿಗೂ ತಮ್ಮ ಮಕ್ಕಳಿಗೆ ಇಟ್ಟು ಕರೆಯುವುದಾಗಿ ಅಜ್ಜ ಹೇಳಿದರು.
ಅಜ್ಜ ತಮ್ಮ ಗುಡಿಸಲ ಪುಟ್ಟ ಜಗಲಿಯ ಮೇಲೆ ಅಂಚಿಕಡ್ಡಿಯ ಚಾಪೆ ಹಾಕಿ ನನ್ನ ಕೂರಲು ಹೇಳಿದರು. ಸುಮಾರು ಎಪ್ಪತ್ತು ಮುಟ್ಟಿದ್ದ ಹೆಂಡತಿಯನ್ನು ಕರೆದು ಹೆಣ್ಣೆ ಇಲ್ಲಿ ನೋಡು, ನಮ್ಮ ಕುಲಸ್ಥರು ಬಂದಿದ್ದಾರೆ. ನನ್ನ ಅಡಿಗೆಯ ರುಚಿ ತೋರಬಾರದು ಎಂದು ನಿನ್ನಲ್ಲಿಗೆ ಕರೆದುಕೊಂಡು ಬಂದೆ ಎಂದರು. ಅಜ್ಜಿ ಗಂಡನನ್ನು ಕೇಳಿದ್ದೆಂದರೆ ದಣಿದ ಕುಲಸ್ಥರನ್ನು ಇಷ್ಟು ತಡಮಾಡಿ ಕರೆದುಕೊಂಡು ಬರುವುದೇ ಎಂದು ಆಕ್ಷೇಪಿಸಿದರು. ಅದಕ್ಕೆ ಅಜ್ಜ ಎಲೆಹೆಂಗಸೆ ಅವರು ರೈಲು ಇಳಿದದ್ದು ಹೊತ್ತು ಮುಳುಗುವಾಗ. ಬರುತ್ತಲೇ ಇತ್ತ ಕರೆದುಕೊಂಡು ಬಂದೆ, ತಡಮಾಡಲಿಲ್ಲ. ನೀನೇನೂ ನನಗೆ ಬುದ್ಧಿ ಹೇಳಿ ಕುಲಸ್ಥರನ್ನು ಕಾಯಿಸಿಬಿಟ್ಟೆ, ಹಸಿವಾಗುವಂತೆ ಮಾಡಿದೆ ಎಂದು ದೂರಬೇಡ ಎಂದರು. ಆದರೂ ಸಮಾಧಾನಗೊಳ್ಳದ ಅಜ್ಜಿ ಪಾಪ ಕುಲಸ್ಥರು ಎಲ್ಲಿಂದ ಬಂದರೋ. ರೈಲು ಗಾಡಿ ಜೋರಂತೆ, ಎಲ್ಲಿಯೂ ನಿಲ್ಲುವುದಿಲ್ಲವಂತೆ, ಪ್ರಯಾಣ ಭಯವಂತೆ. ನಾವು ಕಾಡೊಳಗೆ ಪಯಣದಲ್ಲಿರುವಾಗ್ಗೆ ಆರಾಮದಲ್ಲಿ ನಡೆದು ಮರದ ಕೆಳಗೆ ಬುತ್ತಿ ಉಂಡು ನಿದ್ದೆ ಮಾಡಿ ತಿರುಗಿ ಮುಂದಿನ ಹಾದಿ ನಡೆಯುತ್ತೇವಲ್ಲ, ಹಾಗಲ್ಲವಂತೆ! ರೈಲಿನ ಜೋರಿಗೆ ಮೈಯೆಲ್ಲ ನಡುಗಿ ಸಾಕಾಗುವುದಂತೆ ಎಂದು ಗಂಡ ರೈಲನ್ನು ಕುರಿತು ಹೇಳಿರುವುದನ್ನೆಲ್ಲ ತಮ್ಮದೇ ಪರಿಭಾಷೆಯಲ್ಲಿ ಹೇಳುತ್ತ ಇಕೋ ಮಗ ಇನ್ನಷ್ಟು ಆಮ್ರ, ಇನ್ನಷ್ಟು ಅನ್ನ ಹಾಕಿಸಿಕೊ ಎನ್ನುತ್ತಿದ್ದರು. ಆಡಿನಹಾಲು, ಹಸುವಿನಹಾಲು ಎಲ್ಲವೂ ಉಂಟು ಎಂದು ಹೆಚ್ಚೆಚ್ಚು ಪದಾರ್ಥ ಬಡಿಸಿದರು. ಆ ರಾತ್ರಿ ಹೆಂಗಸರು ಬೆಳದಿಂಗಳು ಚೆಲ್ಲಿದ ಅಂಗಳದಲ್ಲಿ ನೀಡಿದ ಪದಾರ್ಥವು ನನಗೆ ದಿವ್ಯವೆನಿಸಿತು. ನಾವು ಸ್ಟೇಷನ್ನಿಗೆ ವಾಪಸು ಬಂದಾಗ ಅಲ್ಲಿದ್ದ ಹಳೆಯ ಗಡಿಯಾರ ಹತ್ತು ಘಂಟೆ ತೋರಿಸುತ್ತಿತ್ತು. ಅಜ್ಜ ನಾನು ಕೆಲಸವಿಲ್ಲದವನು. ಹಾಗಾಗಿ ಆಯಾಸವಿಲ್ಲ. ನೀವು ದಣಿದು ಬಂದವರು. ಈ ಜಾಗ ನಿಮಗೆ ಕೊಂಚ ಒಂಟಿತನದ್ದು ಅನ್ನಿಸಬಹುದು. ಮೇಲು ಅಟ್ಟಣಿಯಲ್ಲಿ ನಾನು ಮಲಗುತ್ತೇನೆ. ರಾತ್ರಿ ಬರುವ ರೈಲಿಗೆ ಬಾವುಟ ಹಿಡಿಯಬೇಕಲ್ಲ, ನೀವು ಗುಡಿಸಲೊಳಗೆ ಆರಾಮವಾಗಿ ಮಲಗಿ ಎಂದರು.
ಬೆಳಗ್ಗೆ ನಾನು ಏಳುವ ಮೊದಲೇ ಅಜ್ಜ ಎದ್ದಿದ್ದರು. ಒಲೆಹಚ್ಚಿ ಏನೋ ಮಾಡುತ್ತಿದ್ದರು. ಅವರಿಗಾಗಿ ಬೆಳಗಿನ ಉಪಾಹಾರವಿರಬೇಕೆಂದುಕೊಂಡೆ. ನಾನು ತೊರೆಯವರೆಗೆ ನಡೆದು ಎರಡು ಮೂರುದಿನದ ಮೈಯ್ಯಕೊಳೆಯನ್ನೆಲ್ಲ ತೊಳೆದುಕೊಂಡು ಬಂದೆ. ಮೈತೊಳೆದುಕೊಂಡ ಜಾಗ ತೊರೆಯೆಂದರೆ ತೊರೆಯೇನಾಗಿರಲಿಲ್ಲ. ಅಲ್ಲಿದ್ದ ಕಲ್ಲುಬಂಡೆಗಳಸಮೂಹದಿಂದ ಎಲ್ಲಿಂದಲೋ ಎಂಬಂತೆ ನೀರು ಚಿಮ್ಮಿ ಮುಂದೆ ಹರಿಯುತ್ತಿತ್ತು. ನಾನು ಬರುವ ಹೊತ್ತಿಗೆ, ಕಟ್ಟಿದ ಆಲದೆಲೆಯಲ್ಲಿ ರೊಟ್ಟಿ ಹುಣಿಸೆಚಟ್ನಿ ಇಟ್ಟುಕೊಟ್ಟರು. ಮೇಲೆ ಮೊಸರನ್ನೂ ಬಿಟ್ಟರು. ಮೂಡಲಲ್ಲಿ ಹೊತ್ತು ಒಂದೆರಡು ಮಾರು ಏರಿತ್ತಷ್ಟೆ. ಹಕ್ಕಿಪಕ್ಷಿಗಳು ಇನ್ನೂ ಬೆಳಗಿನ ಪ್ರಯಾಣದಲ್ಲಿದ್ದವು. ನಾನು ಅಜ್ಜನಿಗೆ ಹೊರಡುತ್ತೇನೆ ಎಂದೆ. ಅಜ್ಜ ಸ್ಟೇಷನ್ ಮತ್ತು ರೈಲು ಹಳಿಯನ್ನು ದಾಟಿಸಿ ಅಲ್ಲಿಂದಾಚೆಯಿದ್ದ ರಸ್ತೆಗೆ ಕರೆತಂದರು. ಇದೇ ನೋಡಿ ಮಹಾತ್ಮರ ಆಶ್ರಮಕ್ಕೆ ದಾರಿ. ನಾನು ರಾತ್ರಿಯೇ ಗಮನಿಸಿದೆ. ನಿಮಗೆ ನಡೆಯುವುದೆಂದರೆ ಬಲು ಇಷ್ಟವೆಂದು ಕಾಣುತ್ತದೆ. ಅದು ಕೊಡುವ ಸಂತೋಷವೇ ಬೇರೆ. ಇಕೊಳ್ಳಿ ಇದು ನಿಮ್ಮ ದಾರಿಗಿರಲಿ ಎಂದು ಅದೇ ಆಲದೆಲೆಯಲ್ಲಿ ಕಟ್ಟಿದ್ದ ರೊಟ್ಟಿಯ ಪೊಟ್ಟಣ ಕೊಟ್ಟರು. ನಾನು ಮಾತಿಲ್ಲದೆ ಅದನ್ನು ತೆಗೆದು ಬ್ಯಾಗಿನಲ್ಲಿರಿಸಿದೆ. ಅದು ಆಗತಾನೇ ಮಾಡಿದ್ದರಿಂದ ಇನ್ನೂ ಬೆಚ್ಚಗಿತ್ತು. ಹಿರಿಯರ ಮುಖಭಾವವಂತೂ ಇನ್ನೂ ಆಪ್ಯಾಯಮಾನವಾಗಿತ್ತು. ನಾನು ಸ್ವಲ್ಪದೂರ ನಡೆದೆ. ತಿರುಗಿ ನೋಡಿದೆ. ಅಜ್ಜ ಕೈಯೆತ್ತಿ ನನ್ನ ಕಡೆ ಬೀಸಿದರು. ನನ್ನ ತಂದೆತಾಯಿ ಮತ್ತು ಸಹಪಾಠಿಯ ಏಕರೂಪದಂತೆ ಕಂಡರು. ಅವರು ಬೀಸುತ್ತಿದ್ದ ಕೈ, ಜಗತ್ತಿನ ಸಕಲ ಚರಾಚರಗಳನ್ನು ರಕ್ಷಿಸುವ ಯಾವುದೋ ಕಾಣದ ಚೈತನ್ಯದ ಕೈಯ್ಯಂತೆ ಗೋಚರವಾಯಿತು. ಎರಡೂ ಕೈಯೆತ್ತಿ ಅವರತ್ತ ಮುಗಿದೆ. ಅವರು ಕೈ ಇಳಿಸಿದರು. ತಿರುಗಿ ನಡೆದೆ. ಅರಣ್ಯದ ನಡುವೆ ಬೆಳೆದುಕೊಂಡಿದ್ದ ದಾರಿ ದಿಗಂತವ್ಯಾಪಿಯಾಗಿ ಅನಂತವಾಗಿದ್ದು, ನಾನು ಇಡುವ ಹೆಜ್ಜೆ ಮಾತ್ರ ಲೆಕ್ಕಹಾಕಬಹುದಾದುದು ಎಂಬಂತೆ ಕಣ್ಣು ಹಾಯುವವರಗೆ ಚಾಚಿಕೊಂಡಿತ್ತು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ