ಈ ಕಳೆದೊಂದು ದಶಕದ ಕಡೆಗೆ ಹಿಂತಿರುಗಿ ನೋಡಿದಾಗ. ನಾನೊಬ್ಬ ಅಲೆಮಾರಿಯೇ ಆಗಿಬಿಟ್ಟಿದ್ದೆನೆಂದು ಕಾಣುತ್ತದೆ. 1963ರಲ್ಲಿ, ನೀಲ್ ಮೆಕ್ ಕೇ ಮತ್ತು ಬ್ಯೂನೋಸ್ ಏರಿಸ್ ನ ಬ್ರಿಟಿಷ್ ಕೌನ್ಸಲ್ ಕಾರಣ, ನನಗೆ ಇಂಗ್ಲೆಂಡ್ ಮತ್ತು ಸ್ಕಾಟ್ಳೆಂಡನ್ನು ಭೇಟಿ ಮಾಡುವುದು ಸಾಧ್ಯವಾಯಿತು. ಅಲ್ಲಿಯೂ ಪುನಃ ನನ್ನ ಅಮ್ಮನ ಜೊತೆಯಲ್ಲಿ, ನನ್ನ ತೀರ್ಥಾಟನೆ ಮುಂದುವರಿಯಿತು: ಲಂಡನಿಗೆ, ಅಷ್ಟೊಂದು ಸಾಹಿತ್ಯಿಕ ಸ್ಮೃತಿಗಳು ತುಂಬಿ ತುಳುಕುವ ಸ್ಥಳ ಅದು; ಲಿಚ್ ಫೀಲ್ಡ್ ಮತ್ತು ಡಾಕ್ಟರ್ ಜಾನ್ಸನ್ ನಲ್ಲಿಗೆ; ಮ್ಯಾಂಚೆಸ್ಟರ್ ಮತ್ತು ಡಿ ಕ್ವಿನ್ಸಿಯಲ್ಲಿಗೆ.
ಕೆ.ವಿ. ತಿರುಮಲೇಶ್ ಅನುವಾದಿಸಿದ ಜಾರ್ಜ್ ಲೂಯಿಸ್ ಬೋರ್ಹೆಸ್ ನ ಆತ್ಮಕಥಾ ರೂಪದ ಪ್ರಬಂಧದ ಕೊನೆಯ ಕಂತು
ನಿಬಿಡ ವರ್ಷಗಳು
ಪ್ರಸಿದ್ಧಿ, ಅಂಧತ್ವದ ಹಾಗೆ, ಕ್ರಮಕ್ರಮೇಣ ನನಗೆ ಬರತೊಡಗಿತು. ನಾನದನ್ನು ಎಂದೂ ನಿರೀಕ್ಷಿಸಿರಲಿಲ್ಲ, ಎಂದೂ ಅದನ್ನು ಹುಡುಕಿ ಹೋಗಿರಲಿಲ್ಲ. ನೆಸ್ಟರ್ ಇಬಾರಾ ಮತ್ತು ರೋಜರ್ ಕೈಲೋಯ್ಸ್, 1950ರಲ್ಲಿ ನನ್ನನ್ನು ಧೈರ್ಯದಿಂದ ಫ್ರೆಂಚಿಗೆ ಭಾಷಾಂತರಿಸಿದವರು, ನನ್ನ ಮೊದಲ ಹಿತಚಿಂತಕರಾಗಿದ್ದರು. 1961ರಲ್ಲಿ ಸ್ಯಾಮ್ಯುವೆಲ್ ಬೆಕೆಟ್ ನೊಂದಿಗೆ ನಾನು ಫೋರ್ಮೆಂಟರ್ ಬಹುಮಾನವನ್ನು ಹಂಚಿಕೊಳ್ಳುವುದಕ್ಕೆ ಈ ಇಬ್ಬರ ಮುಂಚೂಣಿಯ ಕೆಲಸವೇ ದಾರಿ ಮಾಡಿಕೊಟ್ಟಿತು ಎನ್ನುವುದು ನನ್ನ ಅನುಮಾನ, ಯಾಕೆಂದರೆ ನಾನು ಫ್ರೆಂಚಿಗೆ ಭಾಷಾಂತರಗೊಳ್ಳುವವರೆಗೆ ಅದೃಶ್ಯವಾಗಿಯೆ ಇದ್ದೆ – ವಿದೇಶದಲ್ಲಿ ಮಾತ್ರವಲ್ಲ, ಸ್ವದೇಶವಾದ ಬ್ಯೂನೋಸ್ ಏರಿಸ್ ನಲ್ಲಿ ಕೂಡ. ಆ ಬಹುಮಾನದ ಫಲವಾಗಿ, ರಾತ್ರಿ ಬೆಳಗಾಗುವುದರ ಒಳಗೆ ಪಾಶ್ಚಾತ್ಯ ಜಗತ್ತಿನಲ್ಲಿ ನನ್ನ ಪುಸ್ತಕಗಳು ಅಣಬೆಗಳಂತೆ ಹುಟ್ಟಿಕೊಂಡುವು.
ಇದೇ ವರ್ಷ ಎಡ್ವರ್ಡ್ ಲಾರೋಕ್ ಟಿಂಕರ್ ನ ಆಶ್ರಯದಲ್ಲಿ ನನಗೆ ಟೆಕ್ಸಾಸ್ ಯುನಿವರ್ಸಿಟಿಯಿಂದ ಸಂದರ್ಶಕ ಪ್ರಾಧ್ಯಾಪಕನಾಗಿ ಆಮಂತ್ರಣ ದೊರಕಿತು. ಅದು ಅಮೇರಿಕದೊಂದಿಗಿನ ನನ್ನ ಪ್ರಥಮ ದೈಹಿಕ ಸಂಪರ್ಕವಾಗಿತ್ತು. ಒಂದರ್ಥದಲ್ಲಿ, ನನ್ನ ಓದಿನಿಂದಾಗಿ, ನಾನಲ್ಲಿ ಯಾವತ್ತೂ ಇದ್ದೆ ಎನ್ನಬಹುದು, ಆದರೂ ಆಸ್ಟಿನ್ ನ ಕ್ಯಾಂಪಸ್ ನಲ್ಲಿ ದುಡಿಯುತ್ತಿದ್ದ ಚರಂಡಿ ಕೆಲಸಗಾರರು ಇಂಗ್ಲಿಷ್ ಮಾತಾಡುವುದನ್ನು ಆಲಿಸಿದಾಗ ಅದೆಷ್ಟು ವಿಲಕ್ಷಣವೆನಿಸಿತು! ಯಾಕೆಂದರೆ ಇಂಗ್ಲಿಷ್ ಆ ವರ್ಗದವರಿಗೆ ನಿರಾಕರಿಸಲ್ಪಟ್ಟ ಭಾಷೆ ಎಂದು ನಾನು ಅದುವರೆಗೆ ಯಾವತ್ತೂ ಅಂದುಕೊಂಡಿದ್ದೆ. ಅಮೇರಿಕ ನನ್ನ ಮನಸ್ಸಿನಲ್ಲಿ ಅದೆಂಥಾ ದೈತ್ಯ ಆಯಾಮಗಳನ್ನು ತೆಗೆದುಕೊಂಡಿತ್ತೆಂದರೆ, ಅಲ್ಲಿ ಕಳೆಗಳು, ಕೆಸರು, ಕೆಂಪು ನೀರ ಹೊಂಡಗಳು, ರಾಡಿ ದಾರಿಗಳು, ನೊಣಗಳು, ಅಲೆಮಾರಿ ನಾಯಿಗಳೇ ಮುಂತಾದ ಸಾಮಾನ್ಯ ಸಂಗತಿಗಳನ್ನು ಕಂಡು ನನಗೆ ನಿಜಕ್ಕೂ ಆಶ್ಚರ್ಯವಾಯಿತು. ಕೆಲವೊಮ್ಮೆ ನಮಗೆ – ನನ್ನ ತಾಯಿಯೂ ನನ್ನ ಜೊತೆ ಬಂದಿದ್ದಳು — ಮನೆಯ ನೆನಪಾದರೂ, ನನಗೆ ಗೊತ್ತಿದೆ ಹೇಗೆ ಅಮ್ಮ ಮತ್ತು ನಾನು ಟೆಕ್ಸಾಸನ್ನ ಕ್ರಮೇಣ ಪ್ರೀತಿಸಲು ಕಲಿತೆವು ಎನ್ನುವುದು. ಅಮ್ಮ, ಯಾವತ್ತೂ ಫುಟ್ ಬಾಲನ್ನು ದ್ವೇಷಿಸಿದವಳು, ನೆರೆಯ ‘ಬೇರ್ಸ್’ನ್ನ ನಮ್ಮ ‘ಲಾಂಗ್ ಹಾರ್ನ್ಸ್’ ಸೋಲಿಸಿದಾಗ, ನಮ್ಮ ಜಯಕ್ಕೆ ಸಂತೋಷ ಪಟ್ಟಳು ಕೂಡ.
ಯುನಿವರ್ಸಿಟಿಯಲ್ಲಿ ನಾನು ಅರ್ಜೆಂಟೈನ್ ಸಾಹಿತ್ಯದ ಮೇಲೆ ಕೊಡುತ್ತಿದ್ದ ಕ್ಲಾಸು ಮುಗಿದ ಮೇಲೆ ನಾನು ಡಾ. ರುಡೋಲ್ಫ್ ವಿಲ್ಲಾರ್ಡ್ ಅವರು ಸ್ಯಾಕ್ಸನ್ ಕವಿತೆಯ ಮೇಲೆ ಕೊಡುತ್ತಿದ್ದ ಕ್ಲಾಸಿನಲ್ಲಿ ಒಬ್ಬ ವಿದ್ಯಾರ್ಥಿಯಾಗಿ ಕುಳಿತುಕೊಳ್ಳುತ್ತಿದ್ದೆ. ನನ್ನ ದಿನಗಳು ಹೀಗೆ ಭರ್ತಿಯಾಗಿ ಬಿಡುತ್ತಿದ್ದುವು. ಅಮೇರಿಕನ್ ವಿದ್ಯಾರ್ಥಿಗಳು, ಸಾಮಾನ್ಯ ಅರ್ಜೆಂಟೈನ್ ವಿದ್ಯಾರ್ಥಿಗಳಿಗಿಂತ ಭಿನ್ನವಾಗಿ, ಗ್ರೇಡುಗಳಿಗಿಂತಲು ತಮ್ಮ ವಿಷಯಗಳಲ್ಲಿ ಹೆಚ್ಚು ಆಸಕ್ತರಾಗಿದ್ದಂತೆ ನನಗೆ ಕಂಡು ಬಂತು. ನಾನು ಜನರಿಗೆ ಅಸ್ಕಸುಬಿ ಮತ್ತು ಲುಗೋನೆಸ್ ನಲ್ಲಿ ಆಸಕ್ತಿ ಹುಟ್ಟಿಸಲು ಯತ್ನಿಸಿದೆ, ಆದರೆ ಅವರು ಪ್ರತಿರೋಧಿಸಿದರು, ನನ್ನದೇ ಒಟ್ಟಾರೆ ಕೃತಿ ಮೊತ್ತದ ಕುರಿತು ಹಟದಿಂದ ಪ್ರಶ್ನೆ ಮಾಡಿದರು. ನಾನು ಸಾಧ್ಯವಿದ್ದಷ್ಟೂ ಸಮಯವನ್ನು ರೇಮನ್ ಮಾರ್ಟಿನೆಝ್ ಲೋಪೆಝ್ ನೊಂದಿಗೆ ಕಳೆಯಲು ಸುರುಮಾಡಿದೆ; ಒಬ್ಬ ಭಾಷಾಶಾಸ್ತ್ರಜ್ಞನಾಗಿ ಆತ ನನ್ನಂತೆಯೇ ವ್ಯುತ್ಪತ್ತಿ ಶಾಸ್ತ್ರದಲ್ಲಿ ಆಸಕ್ತನಾಗಿದ್ದ. ಅವನು ನನಗೆ ಹಲವು ಸಂಗತಿಗಳನ್ನು ಕಲಿಸಿದ. ಸ್ಟೇಟ್ಸ್ ನಲ್ಲಿ ನಾವಿದ್ದ ಆರು ತಿಂಗಳಲ್ಲಿ ಅಮ್ಮ ಮತ್ತು ನಾನು ಉದ್ದಗಲಕ್ಕೂ ಸಾಕಷ್ಟು ಪ್ರವಾಸ ಮಾಡಿದೆವು. ತೀರದಿಂದ ತೀರದ ತನಕ ನಾನು ಯುನಿವರ್ಸಿಟಿಗಳಲ್ಲಿ ಉಪನ್ಯಾಸಗಳನ್ನು ನೀಡಿದೆ. ನ್ಯೂ ಮೆಕ್ಸಿಕೊ, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂ ಯೋರ್ಕ್, ನ್ಯೂ ಇಂಗ್ಲೆಂಡ್, ವಾಶಿಂಗ್ಟನ್ ಗಳನ್ನು ನೋಡಿದೆ. ನಾನು ಭೇಟಿ ಮಾಡಿದ ದೇಶಗಳಲ್ಲಿ ಅಮೇರಿಕ ಅತ್ಯಂತ ಸ್ನೇಹಪರವೂ, ಅತ್ಯಂತ ಕ್ಷಮಾಶೀಲವೂ, ಮತ್ತು ಅತ್ಯಂತ ಉದಾರಿಯೂ ಆದ ದೇಶವೆಂದು ನನಗೆ ಕಂಡಿತು.
ನಾವು, ದಕ್ಷಿಣ ಅಮೇರಿಕನ್ನರು ಅನುಕೂಲತೆಯ ನೆಲೆಯಲ್ಲಿ ಚಿಂತನೆ ಮಾಡುವ ಪ್ರವೃತ್ತಿಯವರು, ಆದರೆ ಯುನೈಟೆಡ್ ಸ್ಟೇಟ್ಸಿನ ಜನರು ನೈತಿಕ ನೆಲೆಯಲ್ಲಿ ಚಿಂತಿಸುತ್ತಾರೆ. ಇದನ್ನು – ಹವ್ಯಾಸಿ ಪ್ರೊಟೆಸ್ಟಾಂಟನಾಗಿದ್ದ ನಾನು ಎಲ್ಲಕ್ಕಿಂತ ಹೆಚ್ಚಾಗಿ ಮೆಚ್ಚಿದೆ. ಅದು ನನಗೆ ಸಹಾಯ ಮಾಡಿತು ಕೂಡ, ಗಗನಚುಂಬಿ ಕಟ್ಟಡಗಳನ್ನು, ಕಾಗದದ ಚೀಲಗಳನ್ನು, ಪ್ಲಾಸ್ಟಿಕ್ಕುಗಳನ್ನು, ಮತ್ತು ತಾಂತ್ರಿಕ ಉಪಕರಣಗಳ ಅಮಂಗಲ ಜಂಗಲನ್ನು ಕಡೆಗಣಿಸುವುದಕ್ಕೆ.
ನನ್ನ ದ್ವಿತೀಯ ಅಮೇರಿಕನ್ ಪ್ರಯಾಣ 1967ರಲ್ಲಿ ಒದಗಿ ಬಂತು. ಈ ವೇಳೆ ನಾನು ಹಾರ್ವರ್ಡ್ ನಲ್ಲಿ ಚಾರ್ಲ್ಸ್ ನಾರ್ಟನ್ ಪೋಯೆಟ್ರಿ ಚೇರನ್ನು ವಹಿಸಿದ್ದೆ, ಮತ್ತು ಒಳಿತು ಬಯಸುವ ಶ್ರಾವಕರಿಗೆ ‘ದಿಸ್ ಕ್ರಾಫ್ಟ್ ಆಫ್ ವರ್ಸ್’ ಬಗ್ಗೆ ಉಪನ್ಯಾಸ ನೀಡಿದೆ. ಕೇಂಬ್ರಿಜ್ ನಲ್ಲಿ ನಾನು ಏಳು ತಿಂಗಳು ಕಳೆದೆ, ಅರ್ಜೆಂಟೈನ್ ಲೇಖಕರ ಬಗ್ಗೆ ಒಂದು ಕೋರ್ಸು ಕೊಡುತ್ತಲೂ, ಮತ್ತು ನ್ಯೂ ಇಂಗ್ಲೆಂಡ್ ನಲ್ಲಿ ಎಲ್ಲಾ ಕಡೆ ಸಂಚರಿಸುತ್ತಲೂ; ಅಮೇರಿಕನ್ ಅಂತ ಏನಿದೆಯೋ, ಪಶ್ಚಿಮದ (ದ ವೆಸ್ಟ್) ಸಹಿತ, ಎಲ್ಲವನ್ನೂ ಇಲ್ಲಿ ಸೃಷ್ಟಿಸಿದ ಹಾಗೆ ತೋರುತ್ತಿತ್ತು. ನಾನು ಹಲವಾರು ಸಾಹಿತ್ಯಿಕ ತೀರ್ಥಯಾತ್ರೆಗಳನ್ನು ಕೈಗೊಂಡೆ — ಸಾಲೆಮ್ ನಲ್ಲಿನ ಹಾಥೋರ್ನ್ ನ ಭೇಟಿ ಸ್ಥಳಗಳು, ಕಾಂಕಾರ್ಡ್ ನಲ್ಲಿ ಎಮರ್ಸನ್ ನ ಸ್ಥಳ, ನ್ಯೂ ಬೆಡ್ಫೋರ್ಡ್ ನಲ್ಲಿ ಮೆಲ್ವಿಲ್ನ ಸ್ಥಳ, ಆಮ್ಹರ್ಸ್ಟ್ ನಲ್ಲಿ ಎಮಿಲಿ ಡಿಕಿನ್ಸನ್ ಳ ಸ್ಥಳ, ನಾನು ವಾಸಿಸುತ್ತಿದ್ದ ಜಾಗದ ಹತ್ತಿರವೇ ಇದ್ದ ಲಾಂಗ್ಫೆಲೋನ ಸ್ಥಳ. ಕೇಂಬ್ರಿಜ್ ನಲ್ಲಿ ಮಿತ್ರರು ಹೆಚ್ಚುತ್ತಿದ್ದ ಹಾಗೆ ತೋರುತ್ತಿತ್ತು: ಜಾರ್ಜ್ ಗಿಲೆನ್, ಜಾನ್ ಮರ್ಕಿಸನ್, ಜುವಾನ್ ಮರಿಚಲ್, ರೈಮುಂಡೋ ಲಿಡಾ, ಹೆಕ್ಟರ್ ಇಂಗ್ರಾವೋ, ಮತ್ತು ಒಬ್ಬ ಪರ್ಶಿಯನ್ ಭೌತವಿಜ್ಞಾನಿ – ಫರೀದ್ ಹಶ್ಫರ್ – ಇವನು ಗೋಲಾಕಾರದ ಕಾಲದ ಕುರಿತು ಸಿದ್ಧಾಂತವೊಂದನ್ನು ಹೊಸೆಯುವುದರಲ್ಲಿ ನಿರತನಾಗಿದ್ದ, ನನಗದು ಅರ್ಥವಾಗುವುದಿಲ್ಲ, ಆದರೆ ಒಂದು ದಿನ ಕೃತಿಚೌರ್ಯ ಮಾಡುವ ಆಸೆಯಿದೆ.
ರಾಬರ್ಟ್ ಫಿಟ್ಝೆರಾಲ್ಡ್, ಜಾನ್ ಅಪ್ಡೈಕ್, ಮತ್ತು ಈಗಿಲ್ಲದ ಡಡ್ಲಿ ಫಿಟ್ಸ್ ರಂಥಥ ಲೇಖಕರನ್ನೂ ನಾನು ಭೇಟಿಯಾದೆ. ಉಪಖಂಡದ ಹೊಸ ಜಾಗಗಳನ್ನು ನೋಡುವ ಅವಕಾಶಗಳನ್ನು ಬಳಸಿಕೊಂಡೆ: ನನ್ನ ತಾಯ್ನಾಡಿನ ಪಂಪಾ ನನಗಾಗಿ ಕಾಯುತ್ತಿದ್ದ ಅಯೋವಾ; ಕಾರ್ಲ್ ಸ್ಯಾಂಡ್ಬರ್ಗನ್ನ ನೆನಪಿಸುತ್ತಿದ್ದ ಶಿಕಾಗೋ; ಮಿಸ್ಸೂರಿ, ಮೇರಿಲ್ಯಾಂಡ್, ವರ್ಜೀನಿಯಾ. ನನ್ನ ವಾಸದ ಕೊನೆಯಲ್ಲಿ ನ್ಯೂ ಯಾರ್ಕ್ನ YMHA ಯ ಕವಿತಾ ಕೇಂದ್ರದಲ್ಲಿ ನನ್ನ ಕವಿತೆಗಳ ವಾಚನ ಇಟ್ಟುಕೊಂಡಿದ್ದರು ಎನ್ನುವುದು ನನಗೊಂದು ದೊಡ್ಡ ಗೌರವ ಎನಿಸಿತು. ಕವಿತೆಗಳನ್ನು ನನ್ನ ಹಲವು ಅನುವಾದಕರು ವಾಚಿಸಿದರು, ಹಾಗೂ ಸಭೆಯಲ್ಲಿ ಹಲವಾರು ಕವಿಗಳೂ ಉಪಸ್ಥಿತರಿದ್ದರು. ಯುನೈಟೆಡ್ ಸ್ಟೇಟ್ಸ್ ಗೆ ನನ್ನ ಮೂರನೆ ಪ್ರವಾಸಕ್ಕೆ ಕಾರಣ ಯುನಿವರ್ಸಿಟಿ ಆಫ್ ಒಕ್ಲಹೋಮಾದ ನನ್ನ ಇಬ್ಬರು ಹಿತೈಷಿಗಳಾದ ಲೊವೆಲ್ ಡನ್ಹಮ್ ಮತ್ತು ಐವರ್ ಐವಾಸ್ಕ್; ಅವರು ನನ್ನನ್ನು ಅಲ್ಲಿ ಉಪನ್ಯಾಸಕ್ಕೆ ಕರೆದರಲ್ಲದೆ ಅದರ ಮೇಲೆ ಟಿಪ್ಪಣಿ ನೀಡುವುದಕ್ಕೆ, ಮತ್ತು ಅದನ್ನು ಶ್ರೀಮಂತಗೊಳಿಸುವುದಕ್ಕೆ ವಿದ್ವಾಂಸರ ಒಂದು ಸಮೂಹವನ್ನು ಕಲೆಹಾಕಿದರು. ಐವಾಸ್ಕ್ ನನಗೊಂದು ಮೀನಿನ ರೂಪದ ಫಿನ್ನಿಶ್ ಖಡ್ಗವನ್ನು ಉಡುಗೊರೆಯಾಗಿ ಇತ್ತರು – ನನ್ನ ಬಾಲ್ಯಕಾಲದ ಹಳೆ ಪಾಲೆರ್ಮೋ ಪರಂಪರೆಗೆ ಅದು ಸ್ವಲ್ಪ ವಿದೇಶಿಯೇ ಆಗಿತ್ತು.
ಈ ಕಳೆದೊಂದು ದಶಕದ ಕಡೆಗೆ ಹಿಂತಿರುಗಿ ನೋಡಿದಾಗ. ನಾನೊಬ್ಬ ಅಲೆಮಾರಿಯೇ ಆಗಿಬಿಟ್ಟಿದ್ದೆನೆಂದು ಕಾಣುತ್ತದೆ. 1963ರಲ್ಲಿ, ನೀಲ್ ಮೆಕ್ ಕೇ ಮತ್ತು ಬ್ಯೂನೋಸ್ ಏರಿಸ್ ನ ಬ್ರಿಟಿಷ್ ಕೌನ್ಸಲ್ ಕಾರಣ, ನನಗೆ ಇಂಗ್ಲೆಂಡ್ ಮತ್ತು ಸ್ಕಾಟ್ಳೆಂಡನ್ನು ಭೇಟಿ ಮಾಡುವುದು ಸಾಧ್ಯವಾಯಿತು. ಅಲ್ಲಿಯೂ ಪುನಃ ನನ್ನ ಅಮ್ಮನ ಜೊತೆಯಲ್ಲಿ, ನನ್ನ ತೀರ್ಥಾಟನೆ ಮುಂದುವರಿಯಿತು: ಲಂಡನಿಗೆ, ಅಷ್ಟೊಂದು ಸಾಹಿತ್ಯಿಕ ಸ್ಮೃತಿಗಳು ತುಂಬಿ ತುಳುಕುವ ಸ್ಥಳ ಅದು; ಲಿಚ್ ಫೀಲ್ಡ್ ಮತ್ತು ಡಾಕ್ಟರ್ ಜಾನ್ಸನ್ ನಲ್ಲಿಗೆ; ಮ್ಯಾಂಚೆಸ್ಟರ್ ಮತ್ತು ಡಿ ಕ್ವಿನ್ಸಿಯಲ್ಲಿಗೆ; ರಯ್ ಮತ್ತು ಹೆನ್ರಿ ಜೇಮ್ಸ್ ನಲ್ಲಿಗೆ; ಲೇಕ್ ಪ್ರದೇಶಕ್ಕೆ; ಎಡಿನ್ಬರೊಗೆ. ಹ್ಯಾನ್ಲಿಯಲ್ಲಿ ನಾನು ನನ್ನ ಅಜ್ಜಿಯ ಜನ್ಮಸ್ಥಳಕ್ಕೆ ಭೇಟಿ ನೀಡಿದೆ — ಪಂಚ ಪಟ್ಟಣಗಳಲ್ಲಿ ಒಂದು ಅದು – ಅರ್ನಾಲ್ಡ್ ಬೆನೆಟ್ ನ ಪ್ರದೇಶ. ಸ್ಕಾಟ್ಳೆಂಡ್ ಮತ್ತು ಯೋರ್ಕ್ಶಯರ್ ಇಡೀ ಜಗತ್ತಿನಲ್ಲೇ ಅತ್ಯಂತ ಸುಂದರ ತಾಣಗಳಲ್ಲಿ ಸೇರಿದವೆಂದು ನನ್ನ ಲೆಕ್ಕ. ಸ್ಕಾಟಿಶ್ ಬೆಟ್ಟಗಳಲ್ಲಿ ಮತ್ತು ಕಣಿವೆಗಳಲ್ಲಿ ಎಲ್ಲೋ ಒಂದು ಕಡೆ ನನಗೊಂದು ವಿಲಕ್ಷಣ ಒಂಟಿತನ ಮತ್ತು ಶೂನ್ಯತನ, ನಾನು ಈ ಮೊದಲು ನೋಡಿದಂಥದು, ಮರುಕಳಿಸಿದ ಹಾಗೆ ಭಾಸವಾಯಿತು; ಈ ಭಾವನೆಯನ್ನು ಪಟಗೋನಿಯಾದ ದೂರ ದೂರದ ಹಾಳು ಪಾಳುಗಳಷ್ಟು ಹಿಂದಕ್ಕೆ ಒಯ್ಯಲು ನನಗೆ ಸ್ವಲ್ಪ ಸಮಯವೇ ಬೇಕಾಯಿತು.
ನಾನು ಸಾಧ್ಯವಿದ್ದಷ್ಟೂ ಸಮಯವನ್ನು ರೇಮನ್ ಮಾರ್ಟಿನೆಝ್ ಲೋಪೆಝ್ ನೊಂದಿಗೆ ಕಳೆಯಲು ಸುರುಮಾಡಿದೆ; ಒಬ್ಬ ಭಾಷಾಶಾಸ್ತ್ರಜ್ಞನಾಗಿ ಆತ ನನ್ನಂತೆಯೇ ವ್ಯುತ್ಪತ್ತಿ ಶಾಸ್ತ್ರದಲ್ಲಿ ಆಸಕ್ತನಾಗಿದ್ದ.
ಕೆಲವು ವರ್ಷಗಳ ನಂತರ ನಾನು ಇನ್ನೊಂದು ಯುರೋಪಿಯನ್ ಪ್ರವಾಸ ಕೈಗೊಂಡೆ, ಈ ಸಲ ಮರಿಯಾ ಎಸ್ತರ್ ವಜ್ಸ್ಕೆಝ್ ಳ ಜೊತೆಯಲ್ಲಿ. ಇಂಗ್ಲೆಂಡಿನಲ್ಲಿ ನಾವು ಹರ್ಬರ್ಟ್ ರೀಡ್ (ಈಗಿಲ್ಲ) ಅವರ ಕುರುಚಲು ಹೊರವಲಯದ ಚಲೋದಾದ, ಅಲೆದಾಡುವಂತಿರುವ ಮನೆಯಲ್ಲಿ ನೆಲಸಿದೆವು. ಅವರು ನಮ್ಮನ್ನು ಯೋರ್ಕ್ ಮಿನಿಸ್ಟರ್ ಗೆ ಕರೆದುಕೊಂಡು ಹೋಗಿ ಅಲ್ಲಿನ ವಸ್ತುಸಂಗ್ರಹಾಲಯದ ವೈಕಿಂಗ್ ಕೋಣೆಯಲ್ಲಿ ಕೆಲವು ಪುರಾತನ ಡೇನಿಶ್ ಕರವಾಳಗಳನ್ನು ತೋರಿಸಿದರು. ಆಮೇಲೆ ನಾನು ಅಲ್ಲಿನ ಒಂದು ಕರವಾಳವನ್ನು ಉದ್ದೇಶಿಸಿ ಸುನೀತವೊಂದನ್ನು ಬರೆದೆ. ದೇಹಾಂತವಾಗುವ ನಿಕಟದಲ್ಲೇ ಸರ್ ಹರ್ಬಟ್ ರೀಡ್ ಆ ಕವಿತೆಯ ನನ್ನ ಮೂಲ ಶೀರ್ಷಿಕೆಯನ್ನು ತಿದ್ದಿ ಉತ್ತಮಗೊಳಿಸಿದರು, ‘ಟು ಎ ಸ್ವೋರ್ಡ್ ಇನ್ ಯೋರ್ಕ್’ನ ಬದಲು ‘ಟು ಎ ಸ್ವೋರ್ಡ್ ಇನ್ ಯೋರ್ಕ್ ಮಿನಿಸ್ಟರ್’ ಎಂಬುದಾಗಿ. ನಂತರ ನಾವು ಸ್ಟಾಕ್ ಹೋಮ್ ಗೆ ಹೋದೆವು, ನನ್ನ ಸ್ವೀಡಿಶ್ ಪ್ರಕಾಶಕ ಬೋನಿಯೆರ್, ಮತ್ತು ಅರ್ಜೆಂಟೈನ್ ರಾಯಭಾರಿಯಿಂದ ಆಮಂತ್ರಿತರಾಗಿ. ಸ್ಟಾಕ್ ಹೋಮ್ ಮತ್ತು ಕೋಪೆನ್ ಹೇಗನ್ ನಾನು ಕಂಡ ನಗರಗಳಲ್ಲೆಲ್ಲಾ ಅತ್ಯಂತ ಅವಿಸ್ಮರಣೀಯವೆಂದು ನಾನು ತಿಳಿದಿದ್ದೇನೆ, ಸ್ಯಾನ್ ಫ್ರಾನ್ಸಿಸ್ಕೋ, ನ್ಯೂ ಯೋರ್ಕ್, ಎಡಿನ್ಬರೋ, ಸಾಂಟಿಯಾಗೋ ದ ಕೊಂಪೋಸ್ಟೆಲಾ, ಮತ್ತು ಜಿನೇವಾಗಳಂತೆ.
1969ರ ಆರಂಭದಲ್ಲೆ, ಇಸ್ರೇಲಿ ಸರಕಾರದಿಂದ ಆಮಂತ್ರಿತನಾಗಿ, ನಾನು ಟೆಲ್ ಅವೀವ್ ಮತ್ತು ಜೆರುಸಲೇಮ್ ನಲ್ಲಿ ಹತ್ತು ರೋಮಾಂಚಕ ದಿನಗಳನ್ನು ಕಳೆದೆ. ವಾಪಸಾದಾಗ, ಎಲ್ಲಾ ರಾಷ್ಟ್ರಗಳಲ್ಲಿ ಅತ್ಯಂತ ಹಳೆಯ ಮತ್ತು ಅತ್ಯಂತ ತರುಣ ರಾಷ್ಟ್ರದಲ್ಲಿ ಇದ್ದು ಬಂದಂಥ ಮತ್ತು ಬಹು ಜೀವಂತ ಹಾಗೂ ಜಾಗೃತ ದೇಶದಿಂದ ಅರೆನಿದ್ದೆಯ ಲೋಕದ ಮೂಲೆಯೊಂದಕ್ಕೆ ಮರಳಿದ ಭಾವವೊಂದನ್ನು ನಾನು ನನ್ನ ಜೊತೆಯಲ್ಲಿ ತಂದೆ. ನನ್ನ ಜಿನೇವಾ ದಿನಗಳಿಂದ ನಾನು ಯಾವತ್ತೂ ಯೆಹೂದಿ ಸಂಸ್ಕೃತಿಯಲ್ಲಿ ಆಸಕ್ತನಾಗಿದ್ದ ಕಾರಣ, ಅದನ್ನು ನಮ್ಮ ತಥಾಕಥಿತ ಪಾಶ್ಚಾತ್ಯ ಸಂಸ್ಕೃತಿಯ ಭಾಗವಾಗಿ ಪರಿಗಣಿಸುತ್ತ, ಮತ್ತು ಕೆಲ ವರ್ಷ ಹಿಂದಿನ ಅರಬ್-ಇಸ್ರೇಲಿ ಯುದ್ಧದಲ್ಲಿ ನಾನು ಒಡನೆಯೆ ಪಕ್ಷ ವಹಿಸಿರುವುದು ನನ್ನ ಗಮನಕ್ಕೆ ಬಂತು. ಯುದ್ಧದ ಪರಿಣಾಮ ಇನ್ನೂ ಅನಿಶ್ಚಿತ ಇರುವಾಗಲೇ ನಾನು ಯುದ್ಧದ ಬಗ್ಗೆ ಕವಿತೆಯೊಂದನ್ನು ಬರೆದೆ. ವಾರದ ನಂತರ ನಾನು ಗೆಲುವಿನ ಬಗ್ಗೆ ಇನ್ನೊಂದನ್ನು ಬರೆದೆ. ನನ್ನ ಭೇಟಿಯ ಸಮಯದಲ್ಲಿ ಇಸ್ರೇಲ್ ಇನ್ನೂ ಒಂದು ಸಶಸ್ತ್ರ ಪಾಳಯವಾಗಿತ್ತು. ಅಲ್ಲಿ, ಗೆಲೀಲಿಯ ತೀರಗಳಲ್ಲಿ, ನಾನು ಶೇಕ್ಸ್ಪಿಯರ್ ನ ಈ ಸಾಲುಗಳನ್ನು ನೆನಪಿಗೆ ತರುತ್ತಲೇ ಇದ್ದೆ:
ಯಾವ ಪವಿತ್ರ ನೆಲದಲ್ಲಿ ನಡೆದುವೊ ಆ ಪಾವನ ಪಾದಗಳು, ಅವು
ಹದಿನಾಲ್ಕು ನೂರು ವರ್ಷಗಳ ಮೊದಲು ಮೊಳೆ ಹೊಡೆಯಲ್ಪಟ್ಟುವು,
ನಮ್ಮ ಅನುಕೂಲಕ್ಕಾಗಿ, ಕ್ರೂರ ಶಿಲುಬೆಯ ಮೇಲೆ.
(ಹೆನ್ರಿ ದ ಫೋರ್ತ್, ಪಾರ್ಟ್ ಒನ್, ಏಕ್ಟ್ ಒನ್, ಸೀನ್ ಒನ್)
ಈಗ ನನಗೆ ವಯಸ್ಸಾದರೂ, ನಾನಿನ್ನೂ ಕತೆಯಾಗಿಸದೆ ಬಿಟ್ಟ ಹಲವಾರು ಕತೆಗಳ ಕುರಿತು ಯೋಚಿಸುವುದಿದೆ, ಅದೇ ರೀತಿ ನಾನು ಮತ್ತೆ ಆಗಿಸಬಯಸುವ ಕತೆಗಳ ಕುರಿತು ಕೂಡ. ನಾನಿನ್ನೂ ಮೋರ್ಮೊನ್ ಯೂಟಾವನ್ನು ನೋಡಲು ಬಯಸುತ್ತೇನೆ; ನಾನು ಬಾಲಕನಾಗಿದ್ದಾಗ ನನಗದನ್ನು ಮೊದಲು ಪರಿಚಯ ಮಾಡಿಸಿದುದು ಮಾರ್ಕ್ ಟ್ವೇನಿನ ‘ರಫಿಂಗ್ ಇಟ್’ ಮತ್ತು ಶೆರ್ಲಕ್ ಹೋಮ್ಸ್ ಗಾಥೆಯ ಮೊದಲ ಕತೆಯಾದ ‘ಎ ಸ್ಟಡಿ ಇನ್ ಸ್ಕಾರ್ಲೆಟ್.’ ತೀರ್ಥಯಾತ್ರೆಯ ನನ್ನ ಇನ್ನೊಂದು ಕನಸು ಐಸ್ಲ್ಯಾಂಡಿಗೆ ಭೇಟಿ ಕೊಡುವುದು, ಮತ್ತು ಇನ್ನೂ ಒಂದು ಟೆಕ್ಸಾಸ್ ಗೆ ಮತ್ತು ಸ್ಕಾಟ್ಲ್ಯಾಂಡಿಗೆ ಪುನಃ ಮರಳುವುದು.
ಎಪ್ಪತ್ತೊಂದರ ವಯಸ್ಸಿನಲ್ಲಿ, ನಾನಿನ್ನೂ ಸಾಕಷ್ಟು ಕೆಲಸ ಹಚ್ಚಿಕೊಂಡಿದ್ದೇನೆ ಮತ್ತು ಯೋಜನೆಗಳಿಂದ ತುಂಬಿ ತುಳುಕುತ್ತಿದ್ದೇನೆ. ಕಳೆದ ವರ್ಷ ನಾನೊಂದು ಕವನ ಸಂಕಲನ ತಂದೆ, ‘ಎಲೋಜಿಯೋ ದ ಲಾ ಸೋಂಬ್ರಾ’ (‘ಕತ್ತಲ ಪ್ರಶಂಸೆಯಲ್ಲಿ’). ಅದು 1960ರ ಲಾಗಾಯ್ತು ನನ್ನ ಮೊದಲ ಪೂರ್ತಿ ಹೊಸತಾದ ಸಂಪುಟ, ಅಲ್ಲದೆ ಇವು 1929ರಿಂದ ಪುಸ್ತಕ ಮಾಡಬೇಕೆನ್ನುವ ಯೋಜನೆಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆದ ಮೊದಲ ಕವಿತೆಗಳು. ಈ ಕೃತಿಯಲ್ಲಿ ನನ್ನ ಮುಖ್ಯ ಕಾಳಜಿ, ಅದರ ಹೆಚ್ಚಿನ ಕವಿತೆಗಳ ಮೂಲಕ ಹರಿದುಬಂದಂತೆ, ಒಂದು ನೈತಿಕ ಗುಣಕ್ಕೆ ಸಂಬಂಧಿಸಿ ಇತ್ತು, ನನ್ನ ಧಾರ್ಮಿಕ ಇಲ್ಲವೇ ಧರ್ಮ-ವಿರೋಧಿ ಒಲವಿನ ಹೊರತಾಗಿ.
ಈ ಶೀರ್ಷಿಕೆಯಲ್ಲಿನ ‘ಕತ್ತಲು’ ಅಂಧತ್ವ ಮತ್ತು ಮರಣ ಎರಡನ್ನೂ ಪ್ರತಿನಿಧಿಸುತ್ತದೆ. ‘ಎಲೋಜಿಯೋ’ವನ್ನು ಮುಗಿಸಲು ನಾನು ಪ್ರತಿ ಮುಂಜಾನೆ ಕೆಲಸ ಮಾಡಿದೆ, ನ್ಯಾಶನಲ್ ಲೈಬ್ರರಿಯಲ್ಲಿ ಉಕ್ತಲೇಖನ ನೀಡುತ್ತ. ಇದನ್ನು ಕೊನೆಗೊಳಿಸುವ ಹೊತ್ತಿಗೆ ನಾನೊಂದು ಹಿತಕರವಾದ ದಿನಚರಿಯನ್ನು ರೂಪಿಸಿಕೊಂಡಿದ್ದೆ – ಎಷ್ಟು ಹಿತಕರವಾದ ಎಂದರೆ, ನಾನದನ್ನು ಇನ್ನೂ ಮುಂದುವರಿಸಿದೆ, ಮತ್ತು ಕತೆಗಳನ್ನೂ ಬರೆಯಲು ಸುರುಮಾಡಿದೆ. 1953ರಿಂದ ನನ್ನ ಮೊದಲ ಕತೆಗಳಾದ ಇವನ್ನು ನಾನು ಈ ವರ್ಷ ಪ್ರಕಟಿಸಿದೆ. ಸಂಕಲನದ ಹೆಸರು ‘ಎಲ್ ಇನ್ಫೋರ್ಮೆ ದ ಬ್ರೋಡಿ’ (‘ಡಾಕ್ಟರ್ ಬ್ರೋಡೀಸ್ ರಿಪೋರ್ಟ್’). ಸರಳ ಕಥಾನಿರೂಪಣೆಯಲ್ಲಿ ಇದೊಂದು ಸಾಧಾರಣ ಪ್ರಯೋಗಗಳ ಸರಣಿ, ಮತ್ತು ಇದು ನಾನು ಕಳೆದ ಐದು ವರ್ಷಗಳಿಂದ ಹೇಳುತ್ತ ಬಂದಿರುವ ಪುಸ್ತಕ.
ಈಚೆಗೆ ‘ಲೋಸ್ ಒತ್ರೋಸ್’ (‘ಇತರರು’) ಎಂಬ ಹೆಸರಿನ ಫಿಲ್ಮ್ ಸ್ಕ್ರಿಪ್ಟೊಂದನ್ನು ತಯಾರಿಸಿದೆ. ಅದರ ಕಥಾವಸ್ತು ನನ್ನದೇ, ಬರಹರೂಪವನ್ನು ಸಿದ್ಧಪಡಿಸಿದ್ದು ಅಡೋಲ್ಫೋ ಬಿಯೋಯ್ ಕಾಸರೆಸ್ ಮತ್ತು ಇನ್ನೊಬ್ಬ ಹ್ಯೂಗೋ ಸಾಂಟಿಯಾಗೋ ಎಂಬ ಒಬ್ಬ ಯುವ ಅರ್ಜೆಂಟೈನ್ ನಿರ್ದೇಶಕನ ಜೊತೆಯಲ್ಲಿ. ನನ್ನ ಅಪರಾಹ್ನಗಳೀಗ ಸಾಮಾನ್ಯವಾಗಿ ನನ್ನ ಬಯಕೆಯ ಒಂದು ದೀರ್ಘಗಾಮಿ ಯೋಜನೆಗೆ ಮೀಸಲಾಗಿವೆ: ಕಳೆದ ಸರಿ ಸುಮಾರು ಮೂರು ವರ್ಷಗಳಿಂದ ನನ್ನ ಅನುವಾದಕ ನನ್ನ ಪಕ್ಕದಲ್ಲೇ ಇರುವ ಅದೃಷ್ಟ ನನಗೆ ಲಭಿಸಿದೆ, ಮತ್ತು ಜೊತೆಯಲ್ಲಿ ನಾವು ನನ್ನ ಬರಹಗಳ ಹತ್ತು ಹನ್ನೆರಡು ಸಂಪುಟಗಳನ್ನು ಇಂಗ್ಲಿಷ್ ನಲ್ಲಿ ತರಬೇಕೆಂದಿದ್ದೇವೆ; ಖುದ್ದು ಕೈಕಾರ್ಯ ಮಾಡುವುದಕ್ಕೆ ನಾನು ಅನರ್ಹನಾದ ಭಾಷೆ ಅದು, ನನಗದರ ಜನ್ಮಾಧಿಕಾರವಿರುತ್ತಿದ್ದರೆ ಎಂದು ನಾನು ಆಗಾಗ ಬಯಸುವ ಭಾಷೆ.
ನಾನೀಗ ಒಂದು ಹೊಸ ಪುಸ್ತಕ ಬರೆಯಲು ಉದ್ದೇಶಿಸುತ್ತೇನೆ, ವೈಯಕ್ತಿಕವಾದ ಒಂದು ಪ್ರಬಂಧ ಮಾಲೆ, ವಿದ್ವತ್ಪೂರ್ಣ ಅಲ್ಲ – ಇನ್ನು ಡಾಂಟೆ, ಅರಿಯೋಸ್ಟೋ, ಮತ್ತು ಮಧ್ಯಕಾಲೀನ ಔತ್ತರೇಯ ವಿಷಯಗಳ ಬಗ್ಗೆ. ಅನೌಪಚಾರಿಕ, ಅನುಕ್ತ, ಅಭಿಪ್ರಾಯಗಳನ್ನು, ಹುಚ್ಚಾಟಿಕೆಗಳನ್ನು, ಮತ್ತು ವಿಚಾರ ಲಹರಿಗಳನ್ನು ಮತ್ತು ಖಾಸಗಿ ಪಾಷಂಡತನಗಳನ್ನು ಒಂದು ಪುಸ್ತಕವಾಗಿ ದಾಖಲಿಸುವ ಯೋಜನೆಯೂ ಇದೆ. ಅದಾದ ಮೇಲೆ, ಯಾರಿಗೆ ಗೊತ್ತು? ನನ್ನಲ್ಲಿ ಇನ್ನೂ ನಾನು ಹೇಳಬಯಸುವ ಹಲವು ಕತೆಗಳಿವೆ, ನಾನು ಕೇಳಿದ್ದು, ಕಲ್ಪಿಸಿದ್ದು. ಸದ್ಯಕ್ಕೆ ನಾನೊಂದು ‘ದ ಕಾಂಗ್ರೆಸ್’ ಎಂಬ ನೀಳ್ಗತೆಯನ್ನು ಬರೆಯುತ್ತಿದ್ದೇನೆ. ಅದರ ಕಾಫ್ಕಿಯನ್ ಶೀರ್ಷಿಕೆಯ ಹೊರತಾಗಿಯೂ, ಅದು ಚೆಸ್ಟರ್ಟನ್ ರೀತಿಯಲ್ಲಿ ಹೊರ ಬರಲಿ ಎಂದು ನಾನು ಆಶಿಸುತ್ತೇನೆ. ಹಿನ್ನೆಲೆ ಅರ್ಜೆಂಟೈನ್ ಮತ್ತು ಉರುಗ್ವೇಯನ್. ಇಪ್ಪತ್ತು ವರ್ಷ ಕಾಲ ನಾನಿದರ ಕಚ್ಚಾ ಕಥಾ ವಸ್ತುವನ್ನು ಹೇಳಿ ಹೇಳಿ ನನ್ನ ಗೆಳೆಯರನ್ನು ಬೋರ್ ಮಾಡಿದ್ದೇನೆ. ಅಂತಿಮವಾಗಿ ನನಗೆ ಅರಿವಾಯಿತು ಇನ್ನು ವಿಸ್ತರಣೆ ಅಗತ್ಯವಿಲ್ಲ ಎಂದು. ನನ್ನಲ್ಲಿ ಇನ್ನೊಂದು ಯೋಜನೆಯೂ ಇದೆ, ಇದಕ್ಕಿಂತಲೂ ಹೆಚ್ಚು ಕಾಲ ನೆನೆಗುದಿಗೆ ಬಿದ್ದುದು – ನನ್ನ ತಂದೆಯ ಕಾದಂಬರಿ ‘ಕೌಡೆಲ್ಲೋ’ವನ್ನು ಪುನಃ ಓದುವುದು, ಪ್ರಾಯಶಃ ಮತ್ತೆ ಬರೆಯುವುದು – ಹಾಗೆ ಮಾಡಲು ಅವರು ನನ್ನನ್ನು ಬಹಳ ವರ್ಷಗಳ ಹಿಂದೆ ಕೇಳಿದ್ದರು. ನಾವು ಹಲವು ಸಮಸ್ಯೆಗಳನ್ನು ಚರ್ಚಿಸುವ ತನಕ ತಲುಪಿದ್ದೆವು. ಈ ಕಾರ್ಯವನ್ನು ನಾನೊಂದು ಮುಂದುವರಿದ ಸಂವಾದದಂತೆ, ಹಾಗೂ ನಿಜವಾದ ಸಹಭಾಗಿತ್ವದಂತೆ ಪರಿಗಣಿಸುತ್ತೇನೆ.
ಜನ ನನಗೆ ಅಕಾರಣವಾಗಿ ಒಳ್ಳೆಯವರಾಗಿದ್ದಾರೆ. ನನಗೆ ವಿರೋಧಿಗಳಿಲ್ಲ, ಮತ್ತು ಕೆಲವು ಮಂದಿ ಹಾಗೆ ನಟಿಸಿದ್ದರೆ, ಅವರು ನನಗೆ ನೋಯಿಸಲಾರದಷ್ಟು ಸದ್ಗುಣಿಗಳು. ನನ್ನ ವಿರುದ್ಧದ ಲೇಖನಗಳನ್ನು ಎಂದಾದರೂ ಓದಿದಾಗ, ಆ ಭಾವನೆಯನ್ನು ನಾನು ಅವರೊಂದಿಗೆ ಹಂಚಿಕೊಳ್ಳುವುದು ಮಾತ್ರವಲ್ಲ, ಆ ಕೆಲಸವನ್ನು ನಾನೇ ಅವರಿಗಿಂತ ಎಷ್ಟೋ ಚೆನ್ನಾಗಿ ಮಾಡಬಲ್ಲೆ ಎನಿಸುತ್ತದೆ. ಬಹುಶಃ ನಾನು ನನ್ನ ಸಂಭಾವ್ಯ ವಿರೋಧಿಗಳಿಗೆ ಸಲಹೆ ನೀಡಬೇಕು, ನಿಮ್ಮ ತಕರಾರುಗಳನ್ನು ನನಗೆ ಪೂರ್ವಭಾವಿಯಾಗಿ ಕೊಡಿ, ಅವು ನನ್ನ ಎಲ್ಲಾ ಸಹಾಯ ಮತ್ತು ಬೆಂಬಲವನ್ನು ಪಡೆಯುತ್ತವೆ ಎಂಬ ಆಶ್ವಾಸನೆ ನೀಡುತ್ತೇನೆ. ನಾನು ರಹಸ್ಯವಾಗಿ ಆಶಿಸಿದ್ದೇನೆ ಕೂಡ, ಗುಪ್ತನಾಮದಲ್ಲಿ, ನನ್ನ ವಿರುದ್ಧ ಒಂದು ನಿರ್ದಾಕ್ಷಿಣ್ಯ ಟೀಕಾ ಪ್ರಹಾರವನ್ನು ಮಾಡುವುದಕ್ಕೆ. ಆಹ್, ನನ್ನಲ್ಲಿ ನಾನು ಕಾಪಿಟ್ಟುಕೊಂಡಿರುವ ಮೆರುಗು ಹಾಕದ ಸತ್ಯಗಳೇ!
ನನ್ನ ವಯಸ್ಸಿನಲ್ಲಿ ಒಬ್ಬ ಮನುಷ್ಯ ತನ್ನ ಮಿತಿಗಳನ್ನು ಅರಿತಿರಬೇಕು, ಮತ್ತು ಈ ಜ್ಞಾನ ಸಂತೋಷಕ್ಕೆ ದಾರಿ ಮಾಡೀತು. ನಾನು ಯುವಕನಾಗಿದ್ದಾಗ ಅಂದುಕೊಂಡಿದ್ದೆ, ಸಾಹಿತ್ಯವೆಂದರೆ ಅದೊಂದು ಕೌಶಲ್ಯಪೂರ್ಣವೂ ಆಶ್ಚರ್ಯಕರವೂ ಆದ ವ್ಯತ್ಯಯನಗಳ (‘ವೇರಿಯೇಶನ್ಸ್’) ಆಟ ಎಂಬುದಾಗಿ; ಈಗ ನಾನು ನನ್ನದೇ ಧ್ವನಿಯನ್ನು ಕಂಡಿರುತ್ತ, ನನಗನಿಸುತ್ತದೆ, ತೇಪೆ ಹಚ್ಚುವುದರಿಂದ ಮತ್ತು ಕೈಹಾಕುವುದರಿಂದ ಕರಡುಗಳನ್ನು ದೊಡ್ಡ ಪ್ರಮಾಣದಲ್ಲಿ ಚೆನ್ನಾಗಿಸುವುದಾಗಲಿ, ದೊಡ್ಡ ಪ್ರಮಾಣದಲ್ಲಿ ಹಾಳುಗೆಡಹುವುದಾಗಲಿ ಸಾಧ್ಯವಿಲ್ಲ. ಇದು ಈ ಶತಮಾನದ ಮುಖ್ಯ ಸಾಹಿತ್ಯಿಕ ಒಲವುಗಳಲ್ಲಿ ಒಂದರ ವಿರುದ್ಧದ – ಎಂದರೆ ‘ಅತಿ ಬರವಣಿಗೆಯ ಜಂಭ’ದ ವಿರುದ್ಧದ (‘ದ ವ್ಯಾನಿಟಿ ಆಫ್ ಓವರ್ರೈಟಿಂಗ್’) ಪಾಪ ಎನ್ನುವುದರಲ್ಲಿ ಸಂಶಯವಿಲ್ಲ – ಇದೇ ಜಾಯ್ಸ್ ನಂಥ ಮನುಷ್ಯನನ್ನು ‘ವರ್ಕ್ ಇನ್ ಪ್ರೋಗ್ರೆಸ್’ ಎಂಬ ಆಡಂಬರದ ಹೆಸರುಳ್ಳ ಅತಿ ವ್ಯಯದ ಖಂಡ ಲೇಖನಗಳತ್ತ ಒಯ್ದಿತು. ನನ್ನ ಅತ್ಯುತ್ತಮ ಕಾರ್ಯ ಮುಗಿಯಿತು ಎಂದು ನನ್ನ ಭಾವನೆ. ಇದು ನನಗೊಂದು ತರದ ನಿರಾಳ ತೃಪ್ತಿ ಮತ್ತು ಆರಾಮವನ್ನು ನೀಡುತ್ತದೆ. ಹಾಗಿದ್ದರೂ ನಾನು ನನ್ನನ್ನು ಬರೆದು ಮುಗಿಸಿದ್ದೇನೆಂದು ಅನಿಸುವುದಿಲ್ಲ.
ಒಂದರ್ಥದಲ್ಲಿ ಯುವತ್ವ ಎನ್ನುವುದು ನಾನು ಯುವಕನಾಗಿದ್ದಾಗ ಇದ್ದುದಕ್ಕಿಂತಲೂ ಹೆಚ್ಚು ಹತ್ತಿರ ಇರುವಂತೆ ನನಗನಿಸುತ್ತದೆ. ಸಂತೋಷವೆನ್ನುವುದು ತಲುಪಲು ಅಸಾಧ್ಯ ಎಂದು ನಾನೀಗ ಅಂದುಕೊಳ್ಳುವುದಿಲ್ಲ; ಒಮ್ಮೆ, ಬಹಳ ಹಿಂದೆ, ಹಾಗೆ ಅಂದುಕೊಂಡಿದ್ದೆ. ನನಗೀಗ ಗೊತ್ತಿದೆ ಅದು ಯಾವ ಕ್ಷಣದಲ್ಲಾದರೂ ಆಗಬಹುದು, ಆದರೆ ಅದನ್ನೆಂದೂ ಹುಡುಕಿ ಹೋಗಬಾರದು. ಇನ್ನು ಸೋಲು ಅಥವಾ ಕೀರ್ತಿ ಬಗ್ಗೆ ಹೇಳುವುದಾದರೆ, ಅವು ತೀರಾ ಅಪ್ರಸ್ತುತ, ನಾನವುಗಳ ಕುರಿತು ತಲೆ ಕೆಡಿಸಿಕೊಳ್ಳುವುದಿಲ್ಲ. ನನಗೀಗ ಬೇಕಾದುದು ಶಾಂತಿ, ಯೋಚನೆಯ ಆನಂದ, ಮತ್ತು ಗೆಳೆತನ, ಮತ್ತು ಅದು ಅತಿ ಮಹತ್ವಾಕಾಂಕ್ಷೆಯಾಗಿದ್ದರೂ, ಪ್ರೀತಿಸುವ ಮತ್ತು ಪ್ರೀತಿಸಲ್ಪಡುವ ಒಂದು ಭಾವನೆ.
ಹೈದರಾಬಾದಿನಲ್ಲಿ ನೆಲೆಸಿರುವ ಕನ್ನಡದ ಹಿರಿಯ ಕವಿ, ಲೇಖಕ ಮತ್ತು ಭಾಷಾಶಾಸ್ತ್ರಜ್ಞರು, ಮೂಲತಃ ಕಾಸರಗೋಡಿನ ಬಳಿಯ ಕಾರಡ್ಕದವರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿಯನ್ನು ಹೊಂದಿ, ನಂತರ ಯೆಮನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿ, ಈಗ ಹೈದರಾಬಾದಿನಲ್ಲಿ ತಮ್ಮ ನಿವೃತ್ತಿ ಜೀವನವನ್ನು ಕಳೆಯುತ್ತಿದ್ದಾರೆ. ನಾಟಕ, ಕವನ, ಕಥೆ, ಕಾದಂಬರಿಗಳನ್ನು ರಚಿಸಿರುವ ಅವರು ಭಾಷಾವಿಜ್ಞಾನ ಕ್ಷೇತ್ರದಲ್ಲಿ ಮೌಲಿಕ ಕೃತಿಗಳನ್ನು ಪ್ರಕಟಿಸಿರುವ ವಿದ್ವಾಂಸರು. ವಿಮರ್ಶಕರು.