Advertisement
ಕ್ರಾಂತಿಯಲ್ಲೊಂದು ಪ್ರೀತಿ ಮಾರ್ಗ ತೋರಿಸಿದ ಫೈಜ್: ಮಹಾಂತೇಶ ಹೊದ್ಲೂರ ಬರೆದ ಲೇಖನ

ಕ್ರಾಂತಿಯಲ್ಲೊಂದು ಪ್ರೀತಿ ಮಾರ್ಗ ತೋರಿಸಿದ ಫೈಜ್: ಮಹಾಂತೇಶ ಹೊದ್ಲೂರ ಬರೆದ ಲೇಖನ

ಫೈಜ್ ಕ್ರಾಂತಿ ಮಾಡುತ್ತಾ, ಕ್ರಾಂತಿಯೊಳಗೆ ಪ್ರೀತಿಯನ್ನು ತೋರಿಸಿದವರು. ಕ್ರಾಂತಿಗೂ ಪ್ರೀತಿ ಪಾಠ ಹೇಳಿಕೊಟ್ಟವರು ನನ್ನ ಪ್ರೀತಿಯ ಫೈಜ್. ಅವರು ಜೈಲಿಗೆ ಹೋಗಿ, ಬಿಡುಗಡೆಗೊಂಡು, ಮತ್ತೆ ಜೈಲಿಂದ ಜೈಲಿಗೆ ಸ್ಥಳಾಂತರಗೊಂಡು, ಬಜಾರಿನ ಬೀದಿಯಲ್ಲಿ ಅವರನ್ನು ಮೆರವಣಿಗೆ ಮಾಡಿದರೂ ಸಹ ಅವನ ಮುಖದಲ್ಲಿ ಬುದ್ಧನ ನಗು ಕಾಣತ್ತಾ ಇತ್ತು. ಲೆನಿನ್ ಶಾಂತಿ ಪ್ರಶಸ್ತಿ ಬಂದಾಗಲೂ ‘ಇದು ನನಗಲ್ಲ, ನಾನು ಈ ಪ್ರಶಸ್ತಿಗೆ ಅರ್ಹನಲ್ಲ’ ಅಂತಲೇ ತಮ್ಮ ಭಾಷಣದಲ್ಲಿ ಹೇಳಿದ್ದರು ಈ ಉರ್ದು ಕವಿ. ಇಷ್ಟು ಸಾಕು ಅವರು ಕ್ರಾಂತಿಗೆ ಪ್ರೀತಿಯ ಪಾಠ ಹೇಳಿದ್ದು.
ಮಹಾಂತೇಶ ಹೊದ್ಲೂರ ಬರೆದ ಲೇಖನ

 

‘ನಾವು ಬೆವರನು ಸುರಿಸಿ ದುಡಿಯುವ ಜನ’ ಈ ಹಾಡು ಕೇಳಿದಾಗ ಇದು ನಮ್ಮ ಕನ್ನಡದ ದಲಿತ ಕವಿ ಡಾ. ಸಿದ್ಧಲಿಂಗಯ್ಯರವರೋ ಇಲ್ಲ ಅರವಿಂದ ಮಾಲಗತ್ತಿಯವರೊ ಬರದಿರಬಹುದು ಎಂದು ತಟ್ಟನೆ ಅನಿಸುತ್ತದೆ. ಆದರೆ ಈ ಕವನ ಬರೆದದ್ದು ಇವರಿಬ್ಬರೂ ಅಲ್ಲ, ಬದಲಿಗೆ ‘ಉರ್ದು ಕವಿ’ ಫೈಜ್ ಅಹ್ಮದ್ ಫೈಜ್. ಹೌದು ಈ ಕವಿತೆಯ ನಿಜವಾದ ರಚನೆಗಾರರು ಈ ಫೈಜ್.

ಯಾಕೋ ಈಗೀಗ ಈ ಉರ್ದು ಕವಿಗಳ ಮೇಲೆ ನನಗರ ಒಲವು ಹೆಚ್ಚಾಗಿದೆ ಅನಸ್ತಾ ಇದೆ. ಕಾರಣ ನನಗೆ ಆಗಾಗ ಕಾಡುತ್ತಿರುವ ಕವಿಗಳು ಇವರು, ರೂಮಿ, ಖೈಫಿ ಆಜ್ಮಿ, ಅಮೃತಾಪ್ರೀತಂ ಈಗ ಫೈಜ್. ಹೌದು ಬಾಗೇಶ್ರೀ ಯವರು ಫೈಜ್ ರವರ ನೂರೆಂಟು ಕವನಗಳನ್ನು ಒಂದೆಡೆ ಸೇರಿಸಿ ‘ಪ್ರೀತಿ ಮತ್ತು ಕ್ರಾಂತಿ’ ಎನ್ನುವ ಕೃತಿಯನ್ನು ಅನುವಾದಿಸಿದ್ದಾರೆ. ಈ ಕೃತಿಯಿಂದಲೇ ʼಫೈಜ್ʼ ನನಗೆ ಪರಿಚಯವಾಗಿದ್ದು.

ಫೈಜ್ ರವರ ಪದ್ಯಗಳನ್ನು ಓದುತ್ತಾ ಹೋದಂತೆ, ನಮಗೆ ಫೈಜ್ ಎಂತಹ ವ್ಯಕ್ತಿ ಮತ್ತು ಎಂತಹ ವ್ಯಕ್ತಿತ್ವ ಹೊಂದಿದ್ದರು ಎಂದು ತಿಳಿಯುತ್ತದೆ. ನಾವು ಸಾಮಾನ್ಯವಾಗಿ ರೂಮಿಯ ನಾಲ್ಕು ಸಾಲಿನ ಪದ್ಯವನ್ನು ಓದಿ ಥಟ್ಟನೆ ವ್ಹಾ… ಎಂತಹ ಕವಿತೆ ಇದು ಎಂದು, ಆಗಲೇ ಆ ಪದ್ಯದ ನಾಲ್ಕು ಮಾತು ಹೇಳಿಬಿಡಬಹುದು. ಆದರೆ ಫೈಜ್ ರವರ ಕವಿತೆಗಳು ಹಾಗಲ್ಲ. ಒಂದು ಪದ್ಯದ ಕುರಿತು ಹೇಳುವುದಿರಲಿ, ಅದನ್ನು ಆ ಕ್ಷಣ ಅರಗಿಸಿಕೊಳ್ಳಲು ಸಹ ಆಗುವುದಿಲ್ಲ. ಅಂತಹ ತರ್ಕದ ಪದ್ಯಗಳನ್ನು ಅವರಲ್ಲಿ ಕಾಣುತ್ತೇವೆ.

ಬಾಗೇಶ್ರೀ ರವರು ‘ಪ್ರೀತಿ ಮತ್ತು ಕ್ರಾಂತಿ’ಯನ್ನು ಇದು ಮೂಲ ಕನ್ನಡದ್ದೇ ಎನ್ನುವ ರೀತಿಯಲ್ಲಿ ಪದ್ಯಗಳನ್ನು ಅನುವಾದಿಸಿದ್ದಾರೆ. ಅವರು (ಬಾಗೇಶ್ರೀ) ಇಲ್ಲಿ ಕೆಲವು ಭಾಗಗಳಲ್ಲಿ ನಮಗೆ ಫೈಜ್ ರನ್ನು ಪರಿಚಯಿಸುತ್ತಾ ಹೋಗಿದ್ದಾರೆ.

ಫೈಜ್ ‌ಅವರ ಕವಿತೆಗಳ ಜೊತೆ ಅವರ ವೈಯಕ್ತಿಕ ಜೀವನವನ್ನು ಸಹ ನೋಡಬಹುದಾಗಿದೆ. ಕಾರಣ ಒಂದು ಅವರು ಉರ್ದು ಕವಿ, ಇನ್ನೊಂದು ಅವರು ಭಾರತೀಯರಾಗಿ ನಂತರ ದಿನಗಳಲ್ಲಿ ದೇಶ ವಿಭಜನೆಗೊಂಡ ಮೇಲೆ ಪಾಕಿಸ್ತಾನದಲ್ಲಿ ನೆಲೆ ನಿಂತದ್ದು.

ಫೈಜ್ ಕ್ರಾಂತಿ ಮಾಡುತ್ತಾ, ಕ್ರಾಂತಿಯೊಳಗೆ ಪ್ರೀತಿಯನ್ನು ತೋರಿಸಿದವರು. ಕ್ರಾಂತಿಗೂ ಪ್ರೀತಿ ಪಾಠ ಹೇಳಿಕೊಟ್ಟವರು ನನ್ನ ಪ್ರೀತಿಯ ಫೈಜ್. ಅವರು ಜೈಲಿಗೆ ಹೋಗಿ, ಬಿಡುಗಡೆಗೊಂಡು, ಮತ್ತೆ ಜೈಲಿಂದ ಜೈಲಿಗೆ ಸ್ಥಳಾಂತರಗೊಂಡು, ಬಜಾರಿನ ಬೀದಿಯಲ್ಲಿ ಅವರನ್ನು ಮೆರವಣಿಗೆ ಮಾಡಿದರೂ ಸಹ ಅವನ ಮುಖದಲ್ಲಿ ಬುದ್ಧನ ನಗು ಕಾಣತ್ತಾ ಇತ್ತು. ಲೆನಿನ್ ಶಾಂತಿ ಪ್ರಶಸ್ತಿ ಬಂದಾಗಲೂ ‘ಇದು ನನಗಲ್ಲ, ನಾನು ಈ ಪ್ರಶಸ್ತಿಗೆ ಅರ್ಹನಲ್ಲ’ ಅಂತಲೇ ತಮ್ಮ ಭಾಷಣದಲ್ಲಿ ಹೇಳಿದ್ದರು ಈ ಉರ್ದು ಕವಿ. ಇಷ್ಟು ಸಾಕು ಅವರು ಕ್ರಾಂತಿಗೆ ಪ್ರೀತಿಯ ಪಾಠ ಹೇಳಿದ್ದು.

‘ಪ್ರೀತಿ ಮತ್ತು ಕ್ರಾಂತಿ’ ಯಲ್ಲಿನ ಒಂದೊಂದು ಪದ್ಯಗಳನ್ನು ಓದುತ್ತಾ ಹೋದಂತೆ, ಪ್ರತಿಯೊಂದು ಪದ್ಯವು ಒಂದೊಂದು ಅರ್ಥಗಳನ್ನು ಒಳಗೊಂಡಿದೆ. ಪ್ರೀತಿ-ಕ್ರಾಂತಿ, ಪ್ರೇಮ-ಕಾಮ, ದೇಶ-ವೇಷ, ಮುಖ-ಮುಖವಾಡ, ರಾಜ್ಯ-ರಾಜಕೀಯ, ದೊರೆ-ಪ್ರಜೆ, ದೇವರು-ಮನುಷ್ಯರು, ಸೆರೆವಾಸ-‘ಸೆರೆ’ ಸಹವಾಸ ಹೀಗೆ ಹತ್ತು ಹಲವು ವಿಷಯಗಳ ಕುರಿತು ಫೈಜ್ ಸುಮ್ಮನೆ ಮಾತಾಡುತ್ತಾ ಹೋಗುತ್ತಾರೆ.

ಫೈಜ್ ರ ಕವಿತೆಗಳಲ್ಲಿ ಕೆಲವಷ್ಟು ಪದ್ಯಗಳು ಹಾಗೆ ಹಿಡಿದು ನಿಲ್ಲಿಸಿ ಬಿಡುತ್ತವೆ. ಮುಂದಿನ ಪದ್ಯಕ್ಕೆ, ಮುಂದಿನ ಪುಟ ತೆರೆಯದ ಹಾಗೆ ಕಾಡಿಸಲಾರಂಭಿಸುತ್ತವೆ. ನಿರೀಕ್ಷೆ, ಮುಸ್ಸಂಜೆ, ಮುಕ್ತಿ, ದೂರ ಇರು, ಕಂಡಿದ್ದೀರಾ, ರಕ್ತದ ಕಲೆ, ಈ ರಾತ್ರಿ, ಪಯಣದಾಚೆ, ಶರದಾಗಮನ, ಆಗ, ನೀನು‌ ಕೊಟ್ಟದ್ದು, ಕೊನೆಯ ಆಸೆ, ಹೀಗೆ ಹಲವು ಕವಿತೆಗಳು….

‘ನೀ ಬರುವ ಮುಂದು’ ಈ ಕವಿತೆ ನನಗೆ ಬಹಳ ಇಷ್ಟದ ಕವಿತೆ. ಕವಿ ತನ್ನ ಪ್ರೇಯಸಿಯ ಕುರಿತು ಹೀಗೆ ಹೇಳುತ್ತಾರೆ….

ನೀ ಬರುವ ಮುಂದು, ಇದ್ದದ್ದೆಲ್ಲ ಇದ್ದ ಹಾಗೆ ಇತ್ತು.
ನಿಲುಕಿದಷ್ಟು ಆಕಾಶ, ನಡೆದಷ್ಟು ದಾರಿ,
ಬಟ್ಟಲು ತುಂಬಿದಷ್ಟು ಶರಾಬು.
ಎಲ್ಲ ತನ್ನಂತೆ ತಾನು.

ಹೇ ಹುಡುಗಿ ನೀ ಬರುವ ಮುಂಚೆ ಈ ಆಕಾಶ, ನೆಲ ಮತ್ತು ಬಟ್ಟಿಲಿನ ತುಂಬ ಶರಾಬು ಎಲ್ಲ ಇದ್ದ ಹಾಗೆ ಇತ್ತು. ಇನ್ನೂ ನೀ ಹೋದ ಮೇಲೆ ಅದು ಮೊದಲು ಹೇಗಿತ್ತೋ ಈಗಲೂ ಸಹ ಹಾಗೆಯೇ ಇದೆ. ಏನೇನೂ ಬದಲಾವಣೆಯ ಗಾಳಿ ಬೀಸಿಲ್ಲ ಈ ಬದುಕಿನಲ್ಲಿ ಎಂದು ಕವಿ ತನ್ನ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ.

ʼಅವಳು ಇದ್ದಾಗ ಒಂಟಿತನ ಇರಲಿಲ್ಲ, ಆದರೆ ಈಗ ಒಂಟಿತನ ತನ್ನ ಗೆಳೆಯನಾಗಿದ್ದಾನೆ ʼಎಂದು, ಈ ಒಂಟಿತನ ಕವಿತೆಯಲ್ಲಿ ಹೇಳಿದ್ದಾರೆ. ಒಂಟಿತನ ಕ್ಷಣಹೊತ್ತು ನಿಲ್ಲಿಸಿ ಬಿಡುತ್ತದೆ. ಒಂಟಿಯಾಗಿ ಇರುವವರಿಗೆ ಗೊತ್ತು ಅದರ ಅನುಭವ.

ಸಂಜೆ ಮಾಗಿದ ಹಾಗೆ ಒಟ್ಟು ಕೂತು
ಹೆಂಡ ಹೀರುವ ಹಳೆಯ ಗೆಳೆಯನಂತೆ
ಇಂದಿದೆ ನನ್ನ ಜೋಡಿ ಒಬ್ಬಂಟಿತನ.

ಇಬ್ಬರೂ ಕಾದಿದ್ದೇವೆ
ಚಂದ್ರನುದಯಕ್ಕೆ

ಒಂದೊಂದು ಛಾಯೆಯಲೂ
ನಿನ್ನದೆ ಬಿಂಬ ಕಾಣುವ ಕೌತುಕ ಎದುರು ನೋಡುತ್ತಾ…

ಒಂಟಿತನವನ್ನು‌ ಕವಿ ಇಷ್ಟು ಚೆನ್ನಾಗಿ ಅನುಭವಿಸುತ್ತಿದ್ದಾರೆ ಎಂದರೆ, ಈ ಒಂಟಿತನ ಅವನ ಗೆಳೆಯನಾಗಿ ಬಿಟ್ಟಿದ್ದಾರೆ. ‘ಚಂದ್ರ’ ಬರುವುದನ್ನೆ ಕಾಯುತ್ತಿದ್ದಾನೆ. ಅವನ ಗೆಳೆಯ (ಒಂಟಿತನ)ನ ಜೊತೆ ಕುಂತು ‘ಹೆಂಡ’ ಕುಡಿಯುತ್ತಾನೆ. ಕವಿ‌ ಗೆಳೆಯನ ಜೊತೆ ಕುಡಿಯುತ್ತಾರೆ, ಮನ ಬಿಚ್ಚಿ ಮಾತಾಡುತ್ತಾರೆ.

ಫೈಜ್ ನನಗೆ ಯಾಕೆ ಆಪ್ತ ಎನ್ನಿಸುತ್ತಾರೆ ಎಂದರೆ, ಒಂದು ಕಡೆ ಹೇಳುತ್ತಾರೆ, ‘ಕಡಿಮೆ ಅಕ್ಷರದಲ್ಲಿ ಹೆಚ್ಚು ಹೇಳಬೇಕು’ ಅಂತ.

ಹನಿಹನಿಯಲ್ಲಿದೆ ಶತಶತಮಾನಗಳ ನೋವಿನ ಕತೆ
ಕಟ್ಟಿ ಮುಚ್ಚಿಟ್ಟ ಬೆಂಕಿ ಸುಟ್ಟಿದೆ ಬೀಗಮುದ್ರೆಯನ್ನೆ
(ದೂರ ಇರು)

ಹೇ ಹುಡುಗಿ ನೀ ಬರುವ ಮುಂಚೆ ಈ ಆಕಾಶ, ನೆಲ ಮತ್ತು ಬಟ್ಟಿಲಿನ ತುಂಬ ಶರಾಬು ಎಲ್ಲ ಇದ್ದ ಹಾಗೆ ಇತ್ತು. ಇನ್ನೂ ನೀ ಹೋದ ಮೇಲೆ ಅದು ಮೊದಲು ಹೇಗಿತ್ತೋ ಈಗಲೂ ಸಹ ಹಾಗೆಯೇ ಇದೆ.

ಇದು ಒಂದು ದೊಡ್ಡ ಪದ್ಯದ ಸಾಲು, ಆದರೆ ಈ ಎರಡು ಸಾಲು ಎಷ್ಟು ಅರ್ಥವನ್ನು ಒಳಗೊಂಡಿದೆ ಅಂದರೆ ಇದನ್ನು ಅರಿತವರಿಗೆ ಗೊತ್ತು.

ಟಿಪ್ಪಣಿಯೊಂದರಲ್ಲಿ ಬಾಗೇಶ್ರೀ ಯವರು ‘ರಕ್ತದ ಕಲೆ’ ದ ಹುಟ್ಟಿನ ಹಿಂದಿನ ಕಾರಣವನ್ನು ಹೀಗೆ ಕೊಡುತ್ತಾರೆ. ೧೯೬೭ರಲ್ಲಿ ‘ಅಯೂಬ್ ಖಾನ್’ ಸರಕಾರ ಮೋಸದ ಚುನಾವಣೆ ನಡೆಸಿ, ಗೆದ್ದ ಸಂದರ್ಭದಲ್ಲಿ ನಡೆದ ಪ್ರತಿಭಟನೆಯ ಮೇಲೆ ಸರ್ಕಾರ ನಡೆಸಿದ ಗೋಲಿಬಾರ್ ಸಂದರ್ಭದಲ್ಲಿ ಬರೆದ ಕವಿತೆ ಇದಾಗಿದೆ ಅಂತ ಹೇಳುತ್ತಾರೆ.

ಎಲ್ಲೂ ಇಲ್ಲ, ಎಲ್ಲೆಲ್ಲೂ ಇಲ್ಲ
ರಕ್ತದ ಕಲೆ.

ಎಂದು ಹೇಳುತ್ತಾ ಹೋಗುತ್ತಾರೆ ಕವಿ. ರಾಜನ ಚುನಾವಣೆಯಲ್ಲಿ ಮತ ಹಾಕಿಯೂ ಸಹ, ರಕ್ತ ಹರಿಸಬೇಕಾಗುತ್ತದೆ. ಕಾರಣ ಇದು ‘ನಮಗಾಗಿ ನಾವೇ ಬಯಸಿ ಪಡೆದ ಉಡುಗೊರೆ.’

ದೊರೆಗಾಗಿ ರಣರಂಗದಲಿ
ಹರಿದ ರಕ್ತ ಇದಲ್ಲ.
ದೊರೆಯಲಿಲ್ಲ ಇದಕೆ ಒಂದೂ
ಬಿರುದು ಬಾವಲಿ.

ಈ ಎಲ್ಲ ಪದ್ಯಗಳ ಜೊತೆ ಕೊನೆಯ ತೀರ್ಪು, ಕೊನೆಯ ಆಸೆ ಮತ್ತು ಇಂದಿನ ಕೊರೊನಾದ ಪ್ರತಿಬಿಂಬವಾಗಿ ‘ಮುನಿಯದಿರು ಮುಸ್ಸಂಜೆಯೇ’ ಎನ್ನುವ ಪದ್ಯ ನಿಲ್ಲುತ್ತದೆ.

ಗಾಯ ಮಾಗಿ ಕಲೆ ಅಳಿದರೂ
ಕಾಡುತಿಹ ಹಳೆಯ ನೆನಪ
ಹಸಿ ನೋವಿನ ಮೇಲೆ
ಹಚ್ಚಿ ಹಾಯೆನ್ನಿಸಲು
ಇರಬೇಕು ನಿನ್ನ ಜೋಳಿಗೆಯಲ್ಲಿ
ಒಂದಿಷ್ಟು ಮುಲಾಮು.

ದುಡಿದು ತಿನ್ನಲು ಹೋದ ಕೂಲಿ ಕಾರ್ಮಿಕರು, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಶಿಕ್ಷೆ ಅನುಭವಿಸಬೇಕಾಗಿದೆ. ದೂರದ ಚೀನಾ ದೇಶದ ಕೊರೊನಾ ಎನ್ನುವ ರೋಗ ಇಡೀ ವಿಶ್ವವನ್ನೇ ಒಂದು ಕ್ಷಣ ತಲ್ಲಣಕ್ಕೆ ನೂಕಿದೆ. ಈ ಅರಿಯದ ರೋಗದಿಂದ ತಾವುಗಳು ಬಲಿಯಾಗಬಾರದೆಂದು ಸಾವಿರಾರು ಕೀಲೋ ಮೀಟರ್ ನಡೆದುಕೊಂಡು ತಮ್ಮ ತಮ್ಮ ಊರು ಸೇರುತ್ತಿದ್ದಾರೆ ಜನ. ಊರು ಸೇರುವುಸಕ್ಕಿಂತ ದಾರಿ ಮಧ್ಯದಲ್ಲಿ ಸತ್ತವರೆ ಹೆಚ್ಚು. ಎಂದೋ ಬರೆದ ಫೈಜ್ ರ ಪದ್ಯ ಈ ಸಂದರ್ಭಕ್ಕೆ ಸಾಕ್ಷಿಯಂತಿದೆ.

ವಿರಹಿಗಳ ರಾತ್ರಿಯ ಜೊತೆಗಾರ ಚಂದ್ರಮನೆ,
ನಮ್ಮ ಮಾತಿಗೊಂದು ಮಾತ ಬೆರೆಸು.
(ಮುನಿಯದಿರು ಮುಸ್ಸಂಜೆಯೇ)

ದೂರದ ಊರಿಂದ ನಡೆದು‌ ಬರುತ್ತಿರುವ ಬಡ ಜನರು, ತಮ್ಮ ನೋವುಗಳನ್ನು ರಾತ್ರಿಯ ಚಂದ್ರನ ಜೊತೆಗೆ ತೋಡಿಕೊಳ್ಳುತ್ತಿದ್ದಾರೆಂದು ಕವಿ ಮೋಹಕವಾಗಿ ಹೇಳಿದ್ದಾರೆ.

ಇನ್ನೂ ಫೈಜ್ ರವರು ‘ಫಿಲಿಸ್ತೀನಿ ಮಗುವಿಗೆ ಜೋಗುಳ’ ಎನ್ನುವ ಪದ್ಯವನ್ನು ‘ಮೇರೆ ದಿಲ್ ಮೇರೆ ಮುಸಾಫಿರ್’ ಎನ್ನುವ ಕವನ ಸಂಕಲನದಲ್ಲಿಯ ಕವಿತೆ.

ಅಳಬೇಡ ಪುಟ್ಟ ಮರಿ
ಅಳಬೇಡ

ಎಂದು ಪ್ರಾರಂಭವಾಗುತ್ತದೆ ಈ ಪದ್ಯ.

ವರುಷ ವರುಷಗಳಿಂದ ಅತ್ತತ್ತು ಈಗಷ್ಟೇ
ಅಮ್ಮ ಕಣ್ಣ ಮುಚ್ಚಿ ಮಲಗಿಹಳು
ಅಳಬೇಡ ಪುಟ್ಟ ಮರಿ
ಅಳಬೇಡ

ಮೊನ್ನೆ ರೈಲ್ವೆ ಸ್ಟೇಷನ್ ನಲ್ಲಿ ಒಂದು ಮಗು ಸತ್ತ ತನ್ನ ತಾಯಿಯನ್ನು ಎಬ್ಬಿಸುತ್ತಿರುವ ದೃಶ್ಯವನ್ನು ಈ ಪದ್ಯ ಕಣ್ಣ ಮುಂದೆ ತರುತ್ತದೆ. ಎಷ್ಟು ಸೌಮ್ಯವೆನಿಸುತ್ತದೆ ನೋಡಿ. ಫೈಜ್ ಎನ್ನುವ ಈ ಕವಿ ಎಂದೋ ಬರೆದ ಕವಿತೆಗಳು ಪ್ರಸ್ತುತ ದಿನಮಾನಗಳಿಗೆ ಎಷ್ಟೊಂದು ಹೋಲಿಕೆಯಾಗುತ್ತದೆ. ಅವರಿಗೆ ಕನಸುಗಳೇನಾದ್ರೂ ಬಿದ್ದಿದ್ದವಾ? ಜಗತ್ತಿನಲ್ಲಿ ಮುಂದೆ ಸಂಭವಿಸುವ ಘಟನೆಗಳು ಅದ್ಹೇಗೆ ಅವರಿಗೆ ತಿಳಿದಿದ್ದು? ಅವರ ಪ್ರತಿಯೊಂದು ಕವಿತೆಗಳು ಪ್ರತಿಯೊಂದು ಘಟನೆಗಳಿಗೆ ಕನ್ನಡಿಯಂತೆ ಪ್ರತಿಬಿಂಬಿಸುತ್ತವೆ.

ನನಗಂತೂ ಈ ಉರ್ದು ಭಾಷೆಯ ಕವಿಗಳು ದಿನದಿಂದ ದಿನಕ್ಕೆ ಹತ್ತಿರವಾಗುತ್ತಾ ಹೊರಟ್ಟಿದ್ದಾರೆ. ಅದರಲ್ಲಿ ಈ ಫೈಜ್ ಸಹ ನನ್ನಲ್ಲಿ ಬಂದು ನೆಲೆ ನಿಂತಿದ್ದಾರೆ. ಫೈಜ್  ಅವರನ್ನು ನನಗೆ ಪರಿಚಯ ಮಾಡಿಸಿದ ಬಾಗೇಶ್ರೀ ಮೇಡಂ ಅವರಿಗೂ ಹಾಗೂ ಈ ಪುಸ್ತಕವನ್ನು ಪ್ರೀತಿಯಿಂದ ಓದಲೂ ಕೊಟ್ಟ ಅನಸೂಯಾ ಕಾಂಬಳೆ ಮೇಡಂ ರವರಿಗೂ ಅನಂತ ವಂದನೆಗಳು.

About The Author

ಮಹಾಂತೇಶ ಹೊದ್ಲೂರ

ಮಹಾಂತೇಶ ಹೊದ್ಲೂರ ಬಾಗಲಕೋಟೆಯವರು. ಪ್ರಸ್ತುತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಂ. ಎ. ದ್ವೀತಿಯ ವರ್ಷದ ವಿದ್ಯಾರ್ಥಿ. 'ಏನೆಂದು ಹೇಳಲಿ' (ಹನಿಗವನ ಸಂಕಲನ) ಹಾಗೂ 'ಮುಸ್ಸಂಜೆ ಪಯಣ' ಎನ್ನುವ (ಕವನ ಸಂಕಲನ) ಪ್ರಕಟಿತ ಕೃತಿಗಳು.

2 Comments

  1. Gurappa

    ಉತ್ತಮವಾದ ವಿಶ್ಲೇಷಣೆ ನಾವೂ ಓದಬೇಕೆಂದು ಅನಿಸುತ್ತಿದೆ.‌

    Reply
  2. Ramesh Vajrabandi

    Super

    Reply

Leave a comment

Your email address will not be published. Required fields are marked *


ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ