ಕನ್ನಡದ ತರತರದ ಕವಿತೆಗಳನ್ನು ಪ್ರತಿನಿತ್ಯ ನಿಮ್ಮ ಕಣ್ಣೆದುರಿಗೆ ತರುವುದು ನಮ್ಮ ಆಶಯ. ಪಂಥ, ಪ್ರಾಕಾರಗಳ ಹಂಗಿಲ್ಲದೆ ಚೆಂದವಿರುವ ಕವಿತೆಯೊಂದು ಪ್ರತಿನಿತ್ಯ ನಿಮ್ಮ ಬಳಿ ಬರಲಿದೆ. ಕನ್ನಡದ ಕವಿತೆಗಳ ಜೊತೆಗೆ ಇತರ ಭಾಷೆಗಳಿಂದ ಅನುವಾದಗೊಳ್ಳುವ ಕವಿತೆಗಳೂ ಇಲ್ಲಿರುತ್ತವೆ. ಕೆಂಡಸಂಪಿಗೆ ಪರದೆಯ ಎಡ ತುದಿಯಲ್ಲಿ ದಿನದ ಕವಿತೆ ವಿಭಾಗದಲ್ಲಿ ನೀವು ಈ ಕವಿತೆಗಳನ್ನು ಓದಬಹುದು. ಕವಿಗಳು, ಅನುವಾದಕರು ತಮ್ಮ ಕವಿತೆಯನ್ನು ಇ-ಮೇಲ್ ಮೂಲಕ editor@kendasampige ಈ ವಿಳಾಸಕ್ಕೆ ಕಳುಹಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಹಾಗೂ ಸಣ್ಣ ಪರಿಚಯವೂ ಇರಲಿ. ದಿನಕ್ಕೊಂದು ಕವಿತೆಯ ಈ ದಿನ ವಿಕಾಸ ನೇಗಿಲೋಣಿ ಬರೆದ ಕವಿತೆ ಇಲ್ಲಿದೆ
ನನ್ನ ರಾತ್ರಿ ಎಲ್ಲರ ರಾತ್ರಿಗಳ…
ನನ್ನ ರಾತ್ರಿ ಎಲ್ಲರ ರಾತ್ರಿಗಳ ಥರ-
ಅಲ್ಲ.
ದೂರದಲ್ಲಿ ನಾಯಿಯೊಂದು ಬೊಗಳುತ್ತದೆ.
ಸೈರನ್ ಹನ್ನೆರಡಕ್ಕೆ
ಡ್ಯೂಟಿ ಮಾಡುತ್ತದೆ.
ಯಾರೋ ಬೈಕ್ ಜೋರಾಗಿ ಓಡಿಸಿಕೊಂಡು
ಈ ಜಗತ್ತಿನಿಂದ ದೂರ ಹೋಗುವ
ಗಡಿಬಿಡಿಯಲ್ಲಿದ್ದಂತಿದ್ದಾರೆ.
ಜಗಳಗಳು ನಿದ್ರಿಸುತ್ತವೆ.
ಪ್ರೀತಿಗಳು ಕೈಲಿ ಕೈ ಬೆಸೆದುಕೊಂಡು
ವಿರಮಿಸಿವೆ.
ಬೀದಿ ಕೊನೆಯಲ್ಲಿ ಹಚ್ಚಿದ ಟೈರ್ ನ ಬೆಂಕಿ
ಈಗ ತಾನೇ ಆರುತ್ತಿದೆ.
ಬೂದಿಯಲ್ಲಿ ಕೆಂಡದ ಕಾವು
ಕಾಣೆಯಾಗುವ ಹಂತದಲ್ಲಿದೆ.
ಅಮ್ಮನ ಕಾಲ್ಗಳ ಬಿರುಕು
ನೋಯುತ್ತಿಲ್ಲ
ಅಥವಾ ನೋವು ಅವಳ ನಿದ್ದೆಯ
ಮಧ್ಯೆ ಗೊತ್ತಾಗದಂತಿದೆ.
ನನ್ನ ರಾತ್ರಿ ಎಲ್ಲರ ರಾತ್ರಿಗಳ ಥರ-
ಅಲ್ಲ.
ತೂಕಡಿಸುತ್ತಾ
ರಾತ್ರಿ ಪಾಳಿ ನಡೆದಿದೆ,
ಕಳ್ಳನಿಗೂ ಬೇಡ ಬೇಡ ಎಂದರೂ
ನಿದ್ದೆ ಹತ್ತಿದೆ.
ಕತ್ತರಿಗಳು, ಔಷಧಗಳು, ಆಸ್ಪತ್ರೆಯ
ಪ್ರಾಣ, ಪಕ್ಷಿಗಳು
ಡಾಕ್ಟರ್ ಸ್ಟೆತೋಸ್ಕೋಪು, ಬಿಳಿ ಬಟ್ಟೆ,
ಮಗುವಿನ ಉಚ್ಚೆ, ಹೇಲುಗಳ
ಬಟ್ಟೆ,
ರಾತ್ರಿ ಎಲ್ಲಾ ನೋವು ಕೊಟ್ಟು
ಶಾಂತವಾಗಿರುವ ಬಸುರಿ ಹೊಟ್ಟೆ,
ಎಲ್ಲಾ ಸದ್ದುಗಳೂ ಪ್ರಜ್ಞೆಗಳಾಚೆ,
ನಿದ್ದೆಯ ಆಚೀಚೆ.
ನನ್ನ ರಾತ್ರಿ, ಎಲ್ಲರ ರಾತ್ರಿಗಳ ಥರ-
ಅಲ್ಲ.
ಏನಾಯಿತು ಹಸಿವು,
ಯಾಕಾಯಿತು ಜಗಳ,
ಯಾವ ವೀಣೆಯಿಂದೆದ್ದ ಸ್ವರ,
ಸಾರು ನೀರಾ, ಬೇಕಾ ಖಾರಾ,
ಎಷ್ಟು ದಿನದಿಂದಿದೆ ಜ್ವರ,
ನಾಯಿಗೆ ಅನ್ನ ಹಾಕುವುದ ಮರೆತಿರಾ,
ಹಗಲೆಲ್ಲಾ ಕೊಂದಿತೇ ಬೆನ್ನು ನೋವು,
ರಾತ್ರಿ ಪೂರಾ ಸತ್ತಿತೇ ಕಾಮ ಕಾವು,
ಸುಳ್ಳು, ಪಾಪಪ್ರಜ್ಞೆ,
ಸೂಕ್ಷ್ಮ ಸಂವೇದನೆ, ವೇದನೆ,
ಬುದ್ಧಿಜೀವಿಗಳು, ದೇಶಭ್ರಷ್ಠತೆ, ಕೋಮು ಗಲಬೆ,
ರಾಜಕೀಯ ಪ್ರಜ್ಞೆ, ಯುವ ಜಾಗೃತಿ, ಮತದಾನದ ಹಕ್ಕು ಮತ್ತು ಕರ್ತವ್ಯ,
ಮಹಿಳಾ ಮೀಸಲಾತಿ, ಸಮಾನತೆ, ಸ-
ಮಾನ-
-ತೆಗೆ
ಹಗೆ, ಹೊಗೆ, ಅನಿಷ್ಠ, ಇಷ್ಟ, ಕಷ್ಟ….
ಶ್ ರಾತ್ರಿಯಾಯಿತು, ಮಲಗು.
ನನ್ನ ರಾತ್ರಿ. ಎಲ್ಲರ ರಾತ್ರಿ. ಥರ-
ಅಲ್ಲ.
ಕವಿ, ಪತ್ರಕರ್ತ ಮತ್ತು ಸಿನಿಮಾ ವಿಮರ್ಶಕ. ಊರು ಉಡುಪಿ. ಇರುವುದು ಬೆಂಗಳೂರು.