ಕನ್ನಡದ ಊರು ಕೇರಿಯ ಕವಿ ಸಿದ್ದಲಿಂಗಯ್ಯ ತೀರಿಹೋಗಿದ್ದಾರೆ. ತಾನೊಬ್ಬ ಖ್ಯಾತ ಕವಿ ಎಂಬ ಯಾವ ಹಮ್ಮೂ ಇಲ್ಲದೆ ಸಹಜವಾಗಿ ಜೋಕುಗಳನ್ನು ಹಾರಿಸುತ್ತಾ ಬದುಕಿದ್ದ ಸಿದ್ದಲಿಂಗಯ್ಯ ಅಧಿಕಾರಗಳನ್ನು ಅನುಭವಿಸಿದಷ್ಟೇ ಸಹಜವಾಗಿ ಸರಳತೆಯನ್ನೂ ರೂಡಿಸಿಕೊಂಡಿದ್ದರು. ಬೆಂಗಳೂರಿನ ದಲಿತ ಕೇರಿಯೊಂದರ ಸ್ಮಶಾನದ ಕಲ್ಲುಗಳನ್ನೇ ತನ್ನ ಕಾವ್ಯಕೃಷಿಯ ಸೋಪಾನಗಳಂತೆ ಬಳಸಿಕೊಳ್ಳಬಲ್ಲ ಹುಟ್ಟಾ ಸೃಜನಶೀಲತೆಯ ಜೊತೆಜೊತೆಗೇ ಸಿಟ್ಟನ್ನು, ಪ್ರತಿಭಟನೆಯನ್ನು ಉರಿವ ಬೆಂಕಿಯ ಹಾಗೆ ಕಾವ್ಯದಲ್ಲಿ ಚೆಲ್ಲಬಲ್ಲ ಸಹಜ ಸಿಟ್ಟೂ ಅವರ ಕಾವ್ಯದಲ್ಲಿತ್ತು.
ಸಿದ್ದಲಿಂಗಯ್ಯನವರ ಚೂರು ಚೂರು ಆತ್ಮವೃತ್ತಾಂತಗಳ ಕೆಲವು ತುಣುಕುಗಳು ಅವರ ನೆನಪಿಗಾಗಿ ಇಲ್ಲಿವೆ
‘ಹೊಲೆಮಾದಿಗರ ಹಾಡುʼ ಪ್ರಕಟವಾದ ನಂತರ ನನ್ನ ಹೆಸರು ಸಾಹಿತ್ಯ ವಲಯದಲ್ಲಿ ಕೇಳಿಬರತೊಡಗಿತು. ಚಂದ್ರಶೇಖರ ಪಾಟೀಲರು ಸಂಕ್ರಮಣ ಪತ್ರಿಕೆಯಲ್ಲಿ ನನ್ನ ಬಗ್ಗೆ ಬರೆಯುತ್ತ ‘ಹೊಲೆಮಾದಿಗರ ಹಾಡಿನ ಕವಿʼ ಎಂದು ಪ್ರೀತಿಯಿಂದ ಕರೆದರು. ಮೈಸೂರಿನ ‘ಒಡನಾಡಿʼ ಪತ್ರಿಕೆಯಲ್ಲಿ ಎಚ್.ಎಂ. ಚನ್ನಯ್ಯನವರು ಒಳ್ಳೆಯ ಮಾತುಗಳನ್ನು ಬರೆದರು. ಪ್ರಜಾವಾಣಿ ಪತ್ರಿಕೆಯಲ್ಲಿ ನನ್ನ ಕವಿತೆಗಳನ್ನು ಬೆಂಕಿ ಉಗುಳುವ ಕಾವ್ಯ ಎಂದು ದೇಶ ಕುಲಕರ್ಣಿ ಬರೆದರು. ಒಂದೇ ವಾರದಲ್ಲಿ ಒಂದು ಸಾವಿರ ಪ್ರತಿ ಖರ್ಚಾದವು. ನನಗೆ ಕವಿ ಎಂಬ ಹೆಸರು ಬಂತು. ಕಾಳೇಗೌಡ ನಾಗವಾರರು ಸಂಭಾವನೆಯೆಂದು ದೊಡ್ಡ ಮೊತ್ತದ ಹಣ ನೀಡಿದರು. ಇದರಿಂದ ಆಗಿನ್ನೂ ವಿದ್ಯಾರ್ಥಿಯಾಗಿದ್ದ ನನ್ನ ಆರ್ಥಿಕ ಸಮಸ್ಯೆಗಳು ನಿವಾರಣೆ ಆದವು.
ಹಣ ಮತ್ತು ಹೆಸರು ಎರಡೂ ಬಂದವೆಂದು ನಾನು ಹಿಗ್ಗಿದೆ. ಹಲವಾರು ಪತ್ರಿಕೆಗಳಲ್ಲಿ, ಸಾಹಿತ್ಯದ ಮಾಸಿಕಗಳಲ್ಲಿ ನನ್ನ ಕವಿತೆಯ ಬಗ್ಗೆ ಲೇಖನ ಬಂದವು. ಶೂದ್ರ ಪತ್ರಿಕೆಯಂತೂ ನನಗೆ ಎಲ್ಲಿಲ್ಲದ ಪ್ರೋತ್ಸಾಹ ನೀಡಿತು. ಕರ್ನಾಟಕ ವಿಶ್ವವಿದ್ಯಾಲಯದ ‘ವಿದ್ಯಾರ್ಥಿ ಭಾರತಿʼ ಪತ್ರಿಕೆಯಲ್ಲಿ ಮಿತ್ರ ಕರೀಗೌಡ ಬೀಚನಹಳ್ಳಿಯವರು ಮಾಡಿದ ನನ್ನ ದೀರ್ಘ ಸಂದರ್ಶನ ಪ್ರಕಟವಾಯಿತು. ಯಾವುದೋ ಪತ್ರಿಕೆಯಲ್ಲಿ ನನ್ನ ವಿಚಾರ ಚಿತ್ರಸಮೇತ ಪ್ರಕಟವಾಗಿದ್ದ ಸಂಗತಿ ಮನಸ್ಸಿನಲ್ಲಿ ಇನ್ನೂ ಹಸಿರಾಗಿತ್ತು. ಆಗ ಒಂದು ಪ್ರಸಂಗ ನಡೆಯಿತು.
ಕಲಾಸಿಪಾಳ್ಯಂ ಬಸ್ ನಿಲ್ದಾಣದ ಬಳಿ ಇರುವ ಒಂದು ಹೋಟೆಲಿಗೆ ನಾನು ಆಗಾಗ ಊಟಕ್ಕೆ ಹೋಗುತ್ತಿದ್ದೆ. ಮುದ್ದೆ ಮತ್ತು ಕೋಳಿಮಾಂಸ ಅಲ್ಲಿಯ ವಿಶೇಷ. ರಾಗಿ ಮುದ್ದೆ ಬಹಳ ಚಿಕ್ಕದಾಗಿದ್ದರೂ ಕೋಳಿಮಾಂಸ ಬಹಳ ರುಚಿಕರವಾಗಿರುತ್ತಿತ್ತು. ಮೂರು ನಾಲ್ಕು ಮುದ್ದೆ ಬಾರಿಸಿ ಎರಡು ಪ್ಲೇಟ್ ಮಾಂಸ ಹೊಡೆಯುವುದು ನನ್ನ ಪದ್ಧತಿ. ಆ ದಿನ ಊಟಕ್ಕೆ ಹೋದಾಗ ನಾನು ಪ್ರಸಿದ್ಧ ಕವಿ ಎಂಬ ಭಾವನೆ ನನ್ನ ಮನಸ್ಸಿನಲ್ಲಿ ಇನ್ನೂ ಮೂಡಿತ್ತು. ಪತ್ರಿಕೆಗಳಲ್ಲಿ ನನ್ನ ಫೋಟೋ ಮತ್ತು ವಿಚಾರಗಳು ಬಂದದ್ದು ಇನ್ನೂ ಮನಸ್ಸಿನಿಂದ ಮಾಸಿರಲಿಲ್ಲ. ನಾನು ಪ್ರಸಿದ್ಧ ವ್ಯಕ್ತಿಯ ಧೋರಣೆಯಿಂದಲೇ ಹೋಟೆಲನ್ನು ಪ್ರವೇಶಿಸಿದೆ.
ಊಟ ಮಾಡುತ್ತಿರುವಾಗ ನನ್ನ ಎದುರಿಗೆ ಕೂತ ವ್ಯಕ್ತಿ ನನ್ನನ್ನೇ ನೋಡುತ್ತಿರುವುದನ್ನು ಗಮನಿಸಿದೆ. ಆತ ನನ್ನ ಕಡೆ ಪದೇಪದೇ ನೋಡಿ ಏನನ್ನೋ ಖಾತ್ರಿಮಾಡಿಕೊಳ್ಳುತ್ತಿರುವಂತೆ ಕಾಣಿಸಿತು. ಪ್ರಾರಂಭದಲ್ಲಿ ಇದರಿಂದ ನನಗೆ ಕೊಂಚ ಕಸಿವಿಸಿಯಾದರೂ ಖ್ಯಾತಿಯ ಭಾವನೆ ಇನ್ನೂ ಮನಸ್ಸಿನಲ್ಲಿ ಉಳಿದಿದ್ದರಿಂದ ಒಳಗೊಳಗೇ ಸಂತೋಷವಾಗತೊಡಗಿತು. ಪತ್ರಿಕೆಗಳಲ್ಲಿ ನನ್ನ ಫೋಟೋ ಮತ್ತು ಪರಿಚಯ ಬಂದದ್ದು ಒಳ್ಳೆಯದೋ, ಕೆಟ್ಟದ್ದೋ ಎಂಬ ಗೊಂದಲವೂ ಆಯಿತು. ಎದುರಿಗೆ ಕುಳಿತ ವ್ಯಕ್ತಿ ನನ್ನ ಬಗ್ಗೆ ಯಾವ ಪತ್ರಿಕೆಯಲ್ಲಿ ಓದಿರಬಹುದು, ಯಾವ ಪತ್ರಿಕೆಯಲ್ಲಿ ನನ್ನ ಫೋಟೋ ನೋಡಿರಬಹುದು ಎಂಬ ವಿಚಾರ ಕಾಡತೊಡಗಿತು. ಇವರು ಕವಿ ಸಿದ್ದಲಿಂಗಯ್ಯ ಹೌದೋ, ಅಲ್ಲವೋ ಎಂಬ ಅನುಮಾನದಿಂದ ಈತ ಹೀಗೆ ನೋಡುತ್ತಿದ್ದಾನೆ ಅನ್ನಿಸಿತು. ಪ್ರಸಿದ್ಧಿಯು ವ್ಯಕ್ತಿಯ ಖಾಸಗೀ ಬದುಕನ್ನು ಹೇಗೆ ಕಸಿದುಕೊಳ್ಳುತ್ತದೆ ಎಂಬ ಅನುಭವ ನನಗಾಗತೊಡಗಿತು. ನಾನು ಮದ್ಯವನ್ನು ತೆಗೆದುಕೊಳ್ಳುತ್ತಿದ್ದರೆ ಈ ಅಭಿಮಾನಿ ಎಷ್ಟು ನೊಂದುಕೊಳ್ಳುತ್ತಿದ್ದನೋ. ಸದ್ಯ ಹಾಗೆ ಆಗಲಿಲ್ಲ ಎಂದು ಸಮಾಧಾನ ಪಟ್ಟುಕೊಂಡೆ.
ಎದುರಿಗಿನ ವ್ಯಕ್ತಿ ನನ್ನನ್ನು ನೋಡುವುದು ಹೆಚ್ಚಾಯಿತು. ಇದರಿಂದ ನನ್ನ ಸಂತೋಷವೂ ಹೆಚ್ಚಾಯಿತು. ಆದರೆ ನಾನು ತೋರಿಸಿಕೊಳ್ಳಲಿಲ್ಲ. ಈತ ನನ್ನನ್ನು ಎಲ್ಲಿ ನೋಡಿರಬಹುದು ಎಂಬ ಪ್ರಶ್ನೆ ತೀವ್ರವಾಗಿ, ನಾನು ಕುತೂಹಲ ತಡೆಯಲಾರದೆ ಆತನನ್ನು ಕೇಳಿಯೇಬಿಟ್ಟೆ. “ತಾವು ನನ್ನನ್ನ ಎಲ್ಲಿ ನೋಡಿದ್ದೀರಿ? ನನ್ನ ಬಗ್ಗೆ ಗೊತ್ತಾ?” ಎಂದೆ. ಆತನಿಗೆ ಆಶ್ಚರ್ಯವೇನೂ ಆಗಲಿಲ್ಲ. ಸಹಜ ಕುತೂಹಲದಿಂದ ನನ್ನನ್ನೇ “ನೀನು ನಮ್ಮ ಹಾಸ್ಟೆಲಿಗೆ ತರಕಾರಿ ಸಪ್ಲೈ ಮಾಡ್ತೀಯಾ ಅಲ್ಲವಾ” ಎಂದು ಪ್ರಶ್ನಿಸಿದ. ನಾನು ತಬ್ಬಿಬ್ಬಾದೆ. ಹೌದು ಅಥವಾ ಇಲ್ಲ ಎನ್ನಲು ಗೊತ್ತಾಗದೆ ತಡವರಿಸಿದೆ. ಆತನನ್ನು ನಾನು ಪ್ರಶ್ನಿಸದಿದ್ದರೆ ಚೆನ್ನಾಗಿರುತ್ತಿತ್ತು ಎನ್ನಿಸಿತು.
ಭಾಗ್ಯವಂಚಿತ
1976ರಲ್ಲಿ ಶಿವಮೊಗ್ಗದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಕವಿತೆ ಓದಲು ನನ್ನನ್ನು ಆಹ್ವಾನಿಸಿದರು. ಅಲ್ಲಿಯವರೆಗೂ ನಾನು ಯಾವುದೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿರಲಿಲ್ಲ. ಆದರೆ, ಒಮ್ಮೆ ನಾನು ಹೋಗಲೇಬೇಕು ಎಂದುಕೊಂಡು ಸಾಹಿತ್ಯ ಸಮ್ಮೇಳನಕ್ಕೆ ಅನಿವಾರ್ಯವಾಗಿ ಹೋಗಿರಲಿಲ್ಲ. ಅದಕ್ಕೆ ಕಾರಣವಾದದ್ದು ಒಂದು ಘಟನೆ, ಅದು ಹೀಗಿದೆ.
ಈತ ನನ್ನನ್ನು ಎಲ್ಲಿ ನೋಡಿರಬಹುದು ಎಂಬ ಪ್ರಶ್ನೆ ತೀವ್ರವಾಗಿ, ನಾನು ಕುತೂಹಲ ತಡೆಯಲಾರದೆ ಆತನನ್ನು ಕೇಳಿಯೇಬಿಟ್ಟೆ. “ತಾವು ನನ್ನನ್ನ ಎಲ್ಲಿ ನೋಡಿದ್ದೀರಿ? ನನ್ನ ಬಗ್ಗೆ ಗೊತ್ತಾ?” ಎಂದೆ. ಆತನಿಗೆ ಆಶ್ಚರ್ಯವೇನೂ ಆಗಲಿಲ್ಲ. ಸಹಜ ಕುತೂಹಲದಿಂದ ನನ್ನನ್ನೇ “ನೀನು ನಮ್ಮ ಹಾಸ್ಟೆಲಿಗೆ ತರಕಾರಿ ಸಪ್ಲೈ ಮಾಡ್ತೀಯಾ ಅಲ್ಲವಾ” ಎಂದು ಪ್ರಶ್ನಿಸಿದ.
1970ರಲ್ಲಿ ಬೆಂಗಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆದಾಗ ನಾನು ವಿದ್ಯಾರ್ಥಿ. ದೇಜಗೌ ಸಮ್ಮೇಳನಾಧ್ಯಕ್ಷರು. ಸಮ್ಮೇಳನದ ಅಂಗವಾಗಿ ನಡೆದ ಅಂತರಭಾರತಿ ಗೋಷ್ಠಿಗೆ ರಾಷ್ಟ್ರಕವಿ ಕುವೆಂಪು ಅಧ್ಯಕ್ಷರು. ಈ ವಿಚಾರವನ್ನು ಪತ್ರಿಕೆಗಳಲ್ಲಿ ಓದಿ ನನಗೆ ಬಹಳ ಸಂತೋಷವಾಯಿತು. ಕುವೆಂಪು ಅವರನ್ನು ಕಣ್ಣಾರೆ ನೋಡುವ ಅವಕಾಶ ಸಿಕ್ಕಿತೆಂದು ಸಂಭ್ರಮಗೊಂಡೆ. ನಾಳೆ ಬೆಂಗಳೂರಿಗೆ ಕುವೆಂಪು ಬರುತ್ತಾರೆ. ಅವರನ್ನು ನೋಡಿಯೇ ತೀರಬೇಕೆಂದು ಹಿಂದಿನ ದಿನ ಪುಳಕದಲ್ಲಿದ್ದೆ. ಆದರೆ ಅಂದು ರಾತ್ರಿ ಹಾಸ್ಟೆಲಿನ ನನ್ನ ಕೊಠಡಿಯಲ್ಲಿ ಒಬ್ಬ ಸಹಪಾಠಿಗೂ ನನಗೂ ಜಗಳವಾಯಿತು. ಜಗಳಕ್ಕೆ ಕಾರಣ ಅಂಥ ದೊಡ್ಡದೇನಲ್ಲ. ಆದರೂ ದುರದೃಷ್ಟವಶಾತ್ ಜಗಳವಾಯಿತು.
ಆತ ತನ್ನ ಟ್ರಂಕ್ ಅನ್ನು ಸ್ವಲ್ಪ ಪಕ್ಕಕ್ಕೆ ತಳ್ಳತೊಡಗಿದ. ಅವನ ಟ್ರಂಕು ನನ್ನ ಚಾಪೆಯ ಪಕ್ಕದಲ್ಲಿ ಇದ್ದುದರಿಂದ ನನ್ನ ಚಾಪೆ ನಡುವೆ ಉಬ್ಬತೊಡಗಿತು. ಇದರಿಂದ ನನ್ನ ಚಾಪೆಯ ಸ್ಥಳ ಚಿಕ್ಕದಾಗತೊಡಗಿತು. ನಾನು ಆತನಿಗೆ ಇದು ಸರಿಯಲ್ಲವೆಂದು ಹೇಳಿದರೂ ಅವನು ನನ್ನ ಮಾತುಗಳನ್ನು ಲೆಕ್ಕಿಸಲಿಲ್ಲ. ಈ ಅತಿಕ್ರಮಣವನ್ನು ನನಗೆ ಸಹಿಸಲಾಗಲಿಲ್ಲ. ನನಗೂ ಆತನಿಗೂ ಜಗಳ ಶುರುವಾಯಿತು. ಈ ದೈಹಿಕ ಹೊಡೆದಾಟದಲ್ಲಿ ಮೊದಮೊದಲು ಅವನ ಕೈ ಮೇಲಾಯಿತು. ನನಗೆ ಆತನಿಗೆ ಹಿಗ್ಗಾಮುಗ್ಗಾ ಹೊಡೆತ ಬೀಳತೊಡಗಿತು. ಹಳ್ಳಿಯಿಂದ ಬಂದಿದ್ದ ಆತ ಗಟ್ಟಿಯಾದ ಮುಷ್ಟಿಯಿಂದ ದೇಹದ ನಾನಾ ಭಾಗಕ್ಕೆ ಪಳಗಿದ ಬಾಕ್ಸರ್ ನಂತೆ ಗುದ್ದತೊಡಗಿದನು. ಆತ ಇಷ್ಟೊಂದು ಶಕ್ತಿಶಾಲಿಯೆಂದು ನನಗೆ ಗೊತ್ತಿರಲಿಲ್ಲ. ಗೊತ್ತಿದ್ದರೆ ನಾನು ಅವನ ತಂಟೆಗೆ ಹೋಗುತ್ತಿರಲಿಲ್ಲ. ಈ ದಿನ ನನ್ನ ಕಥೆ ಮುಗಿಯಿತೆಂದು ಅನ್ನಿಸಿತು. ಪ್ರಾಣವೇ ಹೋದಮೇಲೆ ರಾಷ್ಟ್ರಕವಿ ಕುವೆಂಪು ಅವರನ್ನು ನೋಡುವುದೆಲ್ಲಿ ಬಂತು ಎಂದು ಮನಸ್ಸು ಸ್ವಾನುಕಂಪದಿಂದ ಮರುಗಿತು. ಸಹಪಾಠಿಯ ಹೊಡೆತ ಮಾರಣಾಂತಿಕವಾಗತೊಡಗಿತು. ನಾನು ಮಾಧ್ಯಮಿಕ ಶಾಲೆಯಲ್ಲಿದ್ದಾಗ ಹಾಸ್ಟೆಲ್ ನಲ್ಲಿ ಇಂಥದೇ ಪ್ರಸಂಗವನ್ನು ಎದುರಿಸಿದ್ದೆ. ಇದ್ದಕ್ಕಿದ್ದಂತೆ ನನಗೆ ಡಿಚ್ಚಿಯ ನೆನಪಾಗಿ ಹನುಮಂತನಾದೆ.
ನನಗೆ ಹಿಗ್ಗಾ ಮುಗ್ಗಾ ಬಾರಿಸುತ್ತಿದ್ದ ಸಹಪಾಠಿ ಎತ್ತರದ ಆಳು. ನಾನು ಅವನ ಕೊರಳಪಟ್ಟಿ ಹಿಡಿದು ಮೇಲಕ್ಕೆ ನೆಗೆದೆ. ಅವನ ಮೂಗಿಗೆ ಡಿಚ್ಚಿ ಹೊಡೆಯುವುದು ನನ್ನ ಗುರಿಯಾಗಿತ್ತು. ನಾನು ಹೀಗೆ ಜಂಪ್ ಮಾಡಿದ್ದನ್ನು ನೋಡಿದ ಅವನು ನನ್ನ ಹೊಸ ವರಸೆಗೆ ಹೆದರಿ ಗಾಬರಿಯಾದ. ಭಯದಿಂದ ಬಾಯಿತೆರೆದ. ನನ್ನ ಹಣೆ ಅವನ ಮೂಗಿಗೆ ಗುರಿಯಿಟ್ಟು ಡಿಚ್ಚಿ ಹೊಡೆಯಿತು. ಅವನು ಭಯದಿಂದ ಬಾಯಿ ತೆರೆದಿದ್ದರಿಂದ ನನ್ನ ಹಣೆ ಅವನ ಮೂಗಿನ ಬದಲು ಅವನ ಉಬ್ಬು ಹಲ್ಲಿಗೆ ಹೊಡೆಯಿತು. ಗುರಿತಪ್ಪಿ ಅನಾಹುತವಾಗಿತ್ತು. ನನ್ನ ಹಣೆಯಿಂದ ಬುಳ ಬುಳನೆ ರಕ್ತ ಸುರಿಯತೊಡಗಿತು. ಹಣೆಯಲ್ಲಿ ಬಲವಾದ ತೂತಾಗಿತ್ತು. ಆದರೂ ಸಹಪಾಠಿಯ ಹಲ್ಲು ಗಟ್ಟಿಯಾಗಿಯೇ ಇತ್ತು. ಮನರಂಜನೆ ಪಡೆಯುತ್ತಿದ್ದ ಗೆಳೆಯರು ಗಾಬರಿಯಾಗಿ ಹಣೆಗೆ ಅಂಗೈ ಹಿಡಿದು ರಕ್ತ ನಿಲ್ಲಿಸಲು ಯತ್ನಿಸಿದರು. ಇದ್ದಿಲನ್ನು ಪುಡಿ ಮಾಡಿ ಹಣೆಗೆ ಮೆತ್ತಿ ಬಟ್ಟೆ ಕಟ್ಟಿದರು. ಈ ಬಟ್ಟೆಯ ಬ್ಯಾಂಡೇಜು ಮೈಸೂರು ಪೇಟಕ್ಕಿಂತ ದೊಡ್ಡದಾಗಿ ಕಾಣುತ್ತಿತ್ತು. ನಾನು ಸುಸ್ತಾಗಿ ನೋವಿನಿಂದ ಮಲಗಿದೆ. ಕುವೆಂಪು ಅವರನ್ನು ನೋಡುವ ಕನಸು ಕನಸಾಗಿಯೇ ಉಳಿಯಿತು. ನಾನು ಭಾಗ್ಯವಂಚಿತನಾದೆ.
ಜನಸಾಗರದಲ್ಲೊಂದು ಹನಿ
ದೊಡ್ಡ ಬಳ್ಳಾಪುರದಲ್ಲಿ ದಲಿತರ ಸಮಾವೇಶವೊಂದು ನಡೆಯಿತು. ಎಂದಿನಂತೆ ನಾನೂ ಒಬ್ಬ ಭಾಷಣಕಾರ. ಸಭೆ ನಡೆಯಲಿದ್ದ ಪುರಭವನಕ್ಕೆ 2 ಕಿಲೋಮೀಟರ್ ದೂರ ಮೆರವಣಿಗೆಯಲ್ಲಿ ಹೋಗಬೇಕಾಗಿತ್ತು. ನಾನು ಮೆರವಣಿಗೆ ಪ್ರಾರಂಭವಾಗುವ ಸ್ಥಳ ತಲುಪಿದೆ. ಕೆಲವು ಕಾರ್ಯಕರ್ತರು ಬಿಸಿಲಿನಲ್ಲಿ ನಾನು ಮೆರವಣಿಗೆಯಲ್ಲಿ ಬರುವುದು ಬೇಡವೆಂದೂ ಪುರಭವನಕ್ಕೆ ನೇರ ಹೋಗಬೇಕೆಂದೂ ಹೇಳಿದರು. ನಾನು ಒಪ್ಪಲಿಲ್ಲ. ಮೆರವಣಿಗೆಯಲ್ಲಿ ಬರುವುದಾಗಿ ಹೇಳಿದೆ. ನನ್ನ ಹಠ ನೋಡಿದ ಕಾರ್ಯಕರ್ತರು ಮುಖ್ಯ ಅತಿಥಿಯಾದ್ದರಿಂದ ಮೆರವಣಿಗೆಯ ಮುಂಚೂಣಿಯಲ್ಲಿ ಇರಬೇಕು ಎಂದು ಹೇಳಿದರು. ನಾನು ಅದಕ್ಕೂ ಒಪ್ಪಲಿಲ್ಲ. ಎಲ್ಲರ ಜೊತೆ ಆದಷ್ಟು ಹಿಂದೆ ನನ್ನಿಷ್ಟ ಬಂದಂತೆ ಬರುವುದಾಗಿ ಹೇಳಿದೆ. ನನ್ನ ಧೋರಣೆ ಕೆಲವರಿಗೆ ಇಷ್ಟವಾಗಿ ನಿಮಗೆ ಇಷ್ಟಬಂದಂತೆ ಬನ್ನಿ ಎಂದು ನನ್ನ ಪಾಡಿಗೆ ನನ್ನನ್ನು ಬಿಟ್ಟರು. ಮೂರು ಸಾಲುಗಳಲ್ಲಿ ಬರುತ್ತಿದ್ದ ಸಹಸ್ರಾರು ಜನರ ನಡುವೆ ಸೇರಿಕೊಂಡು ಮೆರವಣಿಗೆಯಲ್ಲಿ ಸಾಗುತ್ತಿದ್ದೆ. ಗಂಡಸರು, ಹೆಂಗಸರು, ಹುಡುಗರು ಉತ್ಸಾಹದಿಂದ ಮುನ್ನಡೆಯುತ್ತಿದ್ದರು. ಘೋಷಣೆಗಳು ಮುಗಿಲು ಮುಟ್ಟುತ್ತಿದ್ದವು. ‘ಎಲ್ಲಾ ಜಾತಿಯ ಬಡವರು ದಲಿತರು’ ಎಂಬ ನನಗೆ ಪ್ರಿಯವಾದ ಘೋಷಣೆ ಅಲ್ಲಿ ಹೆಚ್ಚಾಗಿ ಕೇಳಿ ಬರುತ್ತಿತ್ತು.
ಜನ ಹಾಡುತ್ತಿದ್ದ ನನ್ನ ಹಾಡುಗಳು ಇವು ನಾನು ಬರೆದ ಹಾಡುಗಳೇ ಎಂಬ ಭಾವನೆಯನ್ನು ನನ್ನಲ್ಲಿ ಹುಟ್ಟು ಹಾಕಿದವು. ನಾನು ಜನ ಸಾಗರದ ಒಂದು ಹನಿಯಾಗಿ ಮುಂದೆ ಮುಂದೆ ಸಾಗುತ್ತಿದ್ದೆ. ನನ್ನ ಪಕ್ಕದ ಸಾಲಿನಲ್ಲಿ ಪುಟ್ಟ ಮಗುವನ್ನು ಕಂಕುಳಲ್ಲಿ ಇರಿಸಿಕೊಂಡು ಮಹಿಳೆಯೊಬ್ಬರು ಘೋಷಣೆ ಕೂಗುತ್ತ ಸಾಗುತ್ತಿದ್ದಳು. ಆ ಮಗುವಿಗೆ ಒಂದು ವರ್ಷ ಆಗಿರಬಹುದು. ಆ ಸೋದರಿಯ ಉತ್ಸಾಹ ಮೆಚ್ಚುವಂತಿತ್ತು. ಮನೆಯಲ್ಲಿ ಮಗುವನ್ನು ನೋಡಿಕೊಳ್ಳಲು ಯಾರೂ ಇಲ್ಲದೇ ಇದ್ದುದರಿಂದ ಮಗುವನ್ನು ಮೆರವಣಿಗೆಯಲ್ಲಿ ಆಕೆ ಒಯ್ಯುತ್ತಿರಬಹುದು ಎಂದು ನಾನು ಯೋಚಿಸಿದೆ. ಹುಟ್ಟಿದ ಒಂದು ವರ್ಷಕ್ಕೇ ಹೋರಾಟದ ಮಾರ್ಗಕ್ಕೆ ಬಂದ ಮಗು ಪುಣ್ಯಶಾಲಿ ಎನಿಸಿತು. ನಾನು ಮಗುವನ್ನು ಗಮನಿಸಿದ್ದನ್ನು ಆ ಸೋದರಿ ನೋಡಿದಳು. ಮಗು ಎತ್ತಿಕೊಂಡು ಆಕೆಗೆ ಕೈ ನೋವು ಬಂದಿತ್ತೆಂದು ಕಾಣುತ್ತದೆ. ‘ಈ ಮಗುವನ್ನು ಕೊಂಚ ಎತ್ತಿಕೊಳ್ಳಣ್ಣ’ ಎಂದು ಆ ಪುಟ್ಟ ಕಂದನನ್ನು ನನಗೆ ವರ್ಗಾಯಿಸಿದಳು. ನಾನು ಮಗುವನ್ನು ಎತ್ತಿಕೊಂಡು ಸಾಲಿನಲ್ಲಿ ಸಾಗದೆ. ಆ ಸೋದರಿಗೆ ನಿರಾಳವೆನಿಸಿತು. ಇನ್ನೂ ಹೆಚ್ಚು ಗಟ್ಟಿಯಾಗಿ ಘೋಷಣೆ ಕೂಗುತ್ತ ಆಕೆ ಮುನ್ನಡೆದಳು.
ಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
ದಲಿತ ಚಳುವಳಿಗೆ ತಮ್ಮ ಬರಹಗಳ ಮೂಲಕ ಶಕ್ತಿಯನ್ನು, ಹೊಸ ಆಯಾಮವನ್ನು ಕೊಟ್ಟದ್ದೆ ಸಿದ್ಧಲಿಂಗಯ್ಯ ನವರು.